Tag: actor

  • ನಟನಿಗಾಗಿ ಪತಿಯನ್ನೇ ಕೊಂದ ಪತ್ನಿ

    ನಟನಿಗಾಗಿ ಪತಿಯನ್ನೇ ಕೊಂದ ಪತ್ನಿ

    ಬೆಂಗಳೂರು: ನಟನ ಜೊತೆಗಿನ ಅನೈತಿಕ ಸಂಬಂಧಕ್ಕಾಗಿ ಪತ್ನಿಯೊಬ್ಬಳು ಪತಿಯನ್ನೇ ಕೊಂದಿರೋ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

    36 ವರ್ಷದ ಸತೀಶ್ ಕೊಲೆಯಾದ ಪತಿ. ಮೂಲತಃ ತುಮಕೂರಿನವನಾದ ಸತೀಶ್ ಬೆಂಗಳೂರಲ್ಲಿ ಸೆಕ್ಯುರಿಟಿ ಸೂಪರ್ವೈಸರ್ ಆಗಿ ಕೆಲಸ ಮಾಡ್ತಿದ್ದರು. ಕಲ್ಪನಾ ಜೊತೆ ಮದುವೆಯಾಗಿ ಎರಡು ಮಕ್ಕಳೂ ಕೂಡ ಇವೆ. ಆದ್ರೆ ಚಿತ್ರನಟನೊಬ್ಬನ ಜೊತೆಗಿನ ಅಕ್ರಮ ಸಂಬಂಧಕ್ಕೆ ಪತ್ನಿ ಕಲ್ಪನಾ ತನ್ನ ಪತಿಗೆ ಪರಲೋಕದ ದಾರಿ ತೋರಿಸಿದ್ದಾಳೆ. ಯಶವಂತಪುರದ ಸುಬೇದಾರ್ ಪಾಳ್ಯದಲ್ಲಿ ಮೂರ್ನಾಕು ದಿನಗಳ ಹಿಂದೆ ಈ ಕೊಲೆ ನಡೆದಿದೆ.

    ಕಲ್ಪನಾ ಕುಂಬಳಕಾಯಿ ಸಾರು ಹಾಗೂ ಪಲ್ಯಕ್ಕೆ ನಿದ್ರೆ ಮಾತ್ರೆ ಹಾಕಿ ನಂತರ ಕಲ್ಲಿನಿಂದ ಪತಿ ಸತೀಶ್ ಮುಖವನ್ನು ಜಜ್ಜಿ ಕೊಲೆ ಮಾಡಿದ್ದಳು. ಪತ್ನಿ ಕಲ್ಪನಾಳನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದಾಗ ಪ್ರಕರಣ ಬಯಲಾಗಿದೆ. ನಟ ಕೂಡ ಮಾರುವೇಶಗಳಲ್ಲಿ ಈ ಹಿಂದೆ ಸಾಕಷ್ಟು ಪ್ರಕರಣಗಳಲ್ಲಿ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿದ್ದಾನೆ ಎಂದು ಹೇಳಲಾಗಿದೆ. ಇದೀಗ ಕಲ್ಪನಾ ಹಾಗೂ ನಟ ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ.

    ಈ ಬಗ್ಗೆ ಯಶವಂತಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಅಂದು ಬೇಡಿಕೆಯ ಆ್ಯಕ್ಟರ್ ಈಗ ಪೈಂಟರ್: ಇದು ಕಲಾವಿದನ ನೋವಿನ ಕಥೆ

    ಅಂದು ಬೇಡಿಕೆಯ ಆ್ಯಕ್ಟರ್ ಈಗ ಪೈಂಟರ್: ಇದು ಕಲಾವಿದನ ನೋವಿನ ಕಥೆ

    ಲಾಹೋರ್: ಪ್ರಸಿದ್ಧರಾಗಲು ಬಯಸುವ ಜನರಿಗೆ ಹಣ ಮಹತ್ತರ ಪ್ರೇರಣೆ ನೀಡುತ್ತದೆ ಎಂದರೆ ತಪ್ಪಾಗಲಾರದು. ಹಣ ಕಂಡರೆ ಹೆಣವೂ ಬಾಯಿಬಿಡುತ್ತದೆ ಎಂಬ ನಾಣ್ಣುಡಿಯೇ ಪ್ರಚಲಿತದಲ್ಲಿರುವುದು ಈ ಕಾರಣದಿಂದಲೇ. ಹಣ ಗಳಿಸಲು ಜನರು ಯಾವ ಹಾದಿಯಲ್ಲೂ ತುಳಿಯಲು ಹೇಸುವುದಿಲ್ಲ. ಕೆಲವರು ಇಂಥದ್ದೇ ಉದ್ಯೋಗ ಮಾಡಿಯೇ ಹಣ ಗಳಿಸುತ್ತೇನೆ ಎನ್ನುವ ಒಳ್ಳೆಯವರೂ ಇದ್ದಾರೆ. ಕೆಲವೊಮ್ಮೆ ದುರಾದೃಷ್ಟ ಕೈ ಹಿಡಿದಿದ್ದರೆ ಉನ್ನತ ಸ್ಥಾನದಲ್ಲಿದ್ದವರೂ ತಳಮಟ್ಟಕ್ಕೆ ತಲುಪುತ್ತಾರೆ ಎನ್ನುವುದಕ್ಕೆ ಈ ಪಾಕಿಸ್ತಾನಿ ನಟನ ಉದಾಹರಣೆ ಉತ್ತಮವಾಗಿದೆ.

    ಪ್ರಪಂಚದಾದ್ಯಂತ ಮನರಂಜನಾ ಉದ್ಯಮದಲ್ಲಿ ಮಿಂಚಿ ಸ್ಟಾರ್ ಗಿರಿಯನ್ನು ಪಡೆದುಕೊಂಡಿದ್ದ ಈ ನಟ ಅದನ್ನು ಪಡೆದುಕೊಂಡಿರುವಾಗಲೇ ಕಳೆದುಕೊಂಡ. ಈ ನಟನೇ ಶಾಹಿದ್ ನಸೀಬ್, ಕೆಲಸದ ಕೊರತೆಯಿಂದಾಗಿ ಪೈಂಟರ್ ವೃತ್ತಿಗೆ ಇಳಿದಿದ್ದಾರೆ.

    ಇತ್ತೀಚಿನ ಸಿನಿಮಾ ನಾಟಕ ವಿಸಿಲ್ ನಲ್ಲಿ ಖಳ ನಟನಾಗಿದ್ದ ಇವರು ಹಲವಾರು ದೂರದರ್ಶನ ಧಾರಾವಾಹಿಗಳಾದ ದುಲ್ಲಾರಿ, ಜಬ್ ಉಸೆ ಮೊಹಬ್ಬತ್ ಹುಯಿ ಮತ್ತು ಇಲ್ಟಾಜಾನಲ್ಲಿ ನಟಿಸಿದ್ದಾರೆ. ಆಗ ಅದೃಷ್ಟವಿತ್ತು ಈಗ ದುರಾದೃಷ್ಟ ಕೈ ಹಿಡಿದಿದ್ದರಿಂದ ಕಾರ್ಮಿಕನಾಗಿದ್ದಾರೆ.

    “ನಾನು ಎರಡು ನಾಟಕ ಧಾರವಾಹಿ ಮತ್ತು ಟೆಲಿಫಿಲ್ಮ್ ಗಳಲ್ಲಿ ಉತ್ತಮ ಪಾತ್ರವನ್ನು ಹೊಂದಿದ್ದೆನೆ. ಆದರೆ ಕಳೆದ ಹತ್ತು ವರ್ಷಗಳು ನನಗೆ ತುಂಬಾ ಕಠಿಣವಾದ ದಿನಗಳಾಗಿವೆ. ದಿ ವಿಸಿಲ್ ನನಗೆ ದೊಡ್ಡ ಅವಕಾಶವನ್ನು ಕೊಟ್ಟಿದೆ ಹಾಗೂ ಅವಕಾಶಗಳ ಬಾಗಿಲನ್ನು ತೆರೆಸಿದೆ. ಆದರೆ ಈಗ ದುರಾದೃಷ್ಟವಶಾತ್ ಯಾವ ಪಾತ್ರಗಳೂ ದೊರಕುತ್ತಿಲ್ಲ. ನಾನು ಹಣ ಗಳಿಸಲು ಪೈಂಟರ್ ಆಗಿದ್ದೇನೆ” ಎಂದು ಅವರು ಹೇಳಿದರು.

    ನಾನು ನಟನಾಗಲು ಆಶಿಸಿ ಹತ್ತು ವರ್ಷಗಳ ಹಿಂದೆ ನನ್ನ ಗ್ರಾಮವನ್ನು ಬಿಟ್ಟೆ. ಅಲ್ಲಿಂದೀಚೆಗೆ ನಾನು ಇಸ್ಲಾಮಾಬಾದ್, ಕರಾಚಿ, ಪೇಶಾವರ್‍ಗಳಲ್ಲಿ ಅಲೆದಾಡಿದ್ದೇನೆ ಈಗ ಲಾಹೋರ್‍ನಲ್ಲಿ ಕೆಲಸ ಹುಡುಕುತ್ತಿದ್ದೇನೆ. ಆದರೆ ಅದೃಷ್ಟ ನನ್ನ ಕಡೆಗಿಲ್ಲ” ಎಂದು ಶಾಹಿದ್ ಮುಂದುವರಿಸಿದರು. “ನಾನೀಗ ನನ್ನ ಗ್ರಾಮಕ್ಕೆ ಮರಳಲು ಸಾಧ್ಯವಿಲ್ಲ ಏಕೆಂದರೆ ಎಲ್ಲರೂ ನನ್ನ ವೈಫಲ್ಯವನ್ನು ನೋಡಿ ನಗುತ್ತಿದ್ದಾರೆ. ನನ್ನ ಜೊತೆ ಕೆಲಸ ಮಾಡುವವರೂ ಸಹ ‘ಶಾಹಿದ್ ರಂಗ್ವಾಲಾ’ ನಂತಹ ಹೆಸರುಗಳ ಮೂಲಕ ನನ್ನನ್ನು ಹಂಗಿಸುತ್ತಿದ್ದಾರೆ ಇದರಿಂದ ನನಗೆ ತುಂಬಾ ದುಖಃವಾಗಿದೆ” ಎಂದು ಬೇಸರ ಹಂಚಿದ್ದಾರೆ.

    ಅನೇಕ ನಿರ್ಮಾಪಕರು ಕೆಲಸಕ್ಕೆ ಬದಲಾಗಿ ತಮ್ಮ ಮನೆಗಳಲ್ಲಿ ಚಿತ್ರಿಸಲು ಬಳಸಿಕೊಂಡಿದ್ದಾರೆ. ಇಂದು ಮನರಂಜನಾ ಮಾಧ್ಯಮದಲ್ಲಿ ಯಾರೊಂದಿಗೂ ನಿಜವಾದ ಸಂಬಂಧ ಹೊಂದಲು ಸಾಧ್ಯವಿಲ್ಲ. ನಾನು ಕಳಪೆ ಕಲಾವಿದನಾಗಿದ್ದರಿಂದ ವಿಸಿಲ್ ನಿರ್ಮಾಪಕರು ಚಿತ್ರದ ಕ್ರೆಡಿಟ್‍ಗಳಲ್ಲಿ ನನ್ನ ಹೆಸರನ್ನು ಸೇರಿಸಿಲ್ಲ. ಆದರೆ ಇಡೀ ಸ್ಕ್ರಿಪ್ಟ್ ನ್ನು ನಾನು ಬರೆದಿದ್ದೇನೆ” ಎಂದು ಅವರು ನೋವು ಹಂಚಿಕೊಂಡರು.

    ಈಗ ದಿನವೂ ರಾತ್ರಿ ನಾನು ದುಖಿಃಸುತ್ತಿದ್ದೇನೆ. ನನ್ನ ಸಂಪಾದನೆ ಈಗ ಕೇವಲ 20 ಸಾವಿರ ರೂ.. ಇದರಲ್ಲಿಯೂ ಸ್ವಲ್ಪ ಹಣವನ್ನು ನಾನು ಉಳಿಸಲು ಪ್ರಯತ್ನಿಸುತಿದ್ದೇನೆ. ಈ ಹಣದಲ್ಲಿ ನನ್ನ ಹಾಡುಗಳನ್ನು ಬಿಡುಗಡೆ ಗೊಳಿಸುವದು ನನ್ನ ಉದ್ದೇಶ. ನಾನು ಕೆಲವು ಸಂಗೀತಗಾರರನ್ನು ಭೇಟಿಯಾಗಿದ್ದೇನೆ ಅವರು ಟ್ರಾಕ್ ಬಿಡುಗಡೆಗೊಳಿಸಲು 10 ಸಾವಿರ ರೂ. ಕೇಳುತ್ತಿದ್ದಾರೆ. ಇನ್ನು ಹೆಚ್ಚು ಹಣ ಗಳಿಸುವುದು ನನ್ನ ಉದ್ದೇಶ ಎಂದು ತಿಳಿಸಿದರು.

    ಪೈಟಿಂಗ್ ಜೊತೆಗೆ ಶಾಹಿದ್ ಕೆಲವು ಖಾಸಗಿ ಕಾರ್ಯಕ್ರಮಗಳನ್ನು ಕೂಡ ನಿರ್ವಹಿಸುತ್ತಿದ್ದಾರೆ. “ನಾನು ದಿನಕ್ಕೆ ಒಂದು ಬಾರಿ ಮಾತ್ರ ತಿನ್ನುತ್ತೇನೆ. ಹೆಚ್ಚು ಹಣ ನೀಡುವ ಯಾವುದೇ ಕೆಲಸವನ್ನು ನಾನೀಗ ಮಾಡುತ್ತಿಲ್ಲ. ನನ್ನ ರಾತ್ರಿಗಳನ್ನು ನಾನು ರಸ್ತೆಗಳಲ್ಲಿ ಕಳೆಯುತ್ತಿದ್ದೇನೆ. ಈ ದಿನಗಳು ನನಗೆ ತುಂಬಾ ಕಠಿಣವಾಗಿವೆ ಆದರೆ ಲಾಲಿವುಡ್ ಮತ್ತು ಬಾಲಿವುಡ್ ನಲ್ಲಿ ಇಂತಹ ದಿನಗಳನ್ನು ಅನೇಕರು ಎದುರಿಸಿದ್ದಾರೆ ಎಂದು ನನಗೆ ಗೊತ್ತು” ಎಂದು ಹೇಳಿದರು.

     

  • ನಟ ಸಾಧು ಕೋಕಿಲ ಕಾರು ಚಾಲಕನ ಬಂಧನ

    ನಟ ಸಾಧು ಕೋಕಿಲ ಕಾರು ಚಾಲಕನ ಬಂಧನ

    ಬೆಂಗಳೂರು: ನಟ ಸಾಧುಕೋಕಿಲ ಅವರ ಕಾರು ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.

    ವಿಜಯ್ ಕುಮಾರ್ ಅಲಿಯಾಸ್ ಗಜ ಬಂಧಿತ ಆರೋಪಿ. ಈತ ಸಾಧು ಕೋಕಿಲ ಅವರ ಕಾರಿನಲ್ಲಿದ್ದ ಲ್ಯಾಪ್ ಟಾಪ್, 3 ಸಾವಿರ ವಿದೇಶಿ ಕರೆನ್ಸಿ ಹಾಗು ಮೊಬೈಲ್ ಕಳ್ಳತನ ಮಾಡಿದ್ದ. ಏಪ್ರಿಲ್ 24 ರಂದು ಕಳ್ಳತನ ನಡೆದಿತ್ತು. ಈ ಸಂಬಂಧ ಚಂದ್ರ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

    ಇದೀಗ ಇನ್ಸ್ ಪೆಕ್ಟರ್ ವಿರೇಂದ್ರ ಪ್ರಸಾದ್ ತಂಡದಿಂದ ಆರೋಪಿಯ ಬಂಧನವಾಗಿದೆ.

    ಇದನ್ನೂ ಓದಿ: ಲಂಡನ್ ಲಾಡ್ರ್ಸ್ ಮೈದಾನದಲ್ಲಿ ಕಿಚ್ಚನ ಕಲರವ – ಕಾರ್ಪೊರೇಟ್ ಕ್ರಿಕೆಟ್ ಡೇ ಟೂರ್ನಿಯಲ್ಲಿ ವಿಜಯಪತಾಕೆ

     

  • ಅಭಿಮಾನಿಗಳೇ ಕನ್‍ಫ್ಯೂಸ್ ಆಗ್ಬೇಡಿ, ಅಪಘಾತದಲ್ಲಿ ಮೃತಪಟ್ಟಿರುವುದು ರೇಖಾ ಕೃಷ್ಣಪ್ಪ ಅಲ್ಲ, ರೇಖಾ ಸಿಂಧು

    ಅಭಿಮಾನಿಗಳೇ ಕನ್‍ಫ್ಯೂಸ್ ಆಗ್ಬೇಡಿ, ಅಪಘಾತದಲ್ಲಿ ಮೃತಪಟ್ಟಿರುವುದು ರೇಖಾ ಕೃಷ್ಣಪ್ಪ ಅಲ್ಲ, ರೇಖಾ ಸಿಂಧು

    ಚೆನ್ನೈ: ಕಾರು ಅಪಘಾತದಲ್ಲಿ ನಟಿ ಹಾಗೂ ಮಾಡೆಲ್ ಆಗಿದ್ದ ರೇಖಾ ಸಿಂಧು ಸಾವನ್ನಪ್ಪಿದ್ದಾರೆ.

    ಚೆನ್ನೈ- ಬೆಂಗಳೂರು ರಾಷ್ಟ್ರಿಯ ಹೆದ್ದಾರಿಯಲ್ಲಿ ಈ ಅಪಘಾತ ಸಂಭವಿಸಿದೆ. ಘಟನೆಯಲ್ಲಿ 22 ವರ್ಷದ ರೇಖಾ ಸಿಂಧು ಸೇರಿದಂತೆ ಒಟ್ಟು ನಾಲ್ವರು ಸಾವನ್ನಪ್ಪಿದ್ದಾರೆ

    ರೇಖಾ ತನ್ನ ಸ್ನೇಹಿತರ ಜೊತೆಯಲ್ಲಿ ಚೆನ್ನೈನಿಂದ ಬೆಂಗಳೂರಿಗೆ ಬರುತ್ತಿದ್ದ ವೇಳೆ ಪೇರಣಂಬಟ್ ಬಳಿಯ ಸುಣ್ಣಂಪುಕುಟ್ಟೈ ಬಳಿ ಅಪಘಾತ ಸಂಭವಿಸಿದ್ದು, ಕಾರಿನಲ್ಲಿದ್ದ ಎಲ್ಲರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆಂದು ವರದಿಯಾಗಿದೆ.

    ಅಪಘಾತದಲ್ಲಿ ಮೃತಪಟ್ಟ ಇತರರನ್ನು ಅಭಿಷೇಕ್ ಕುಮಾರನ್(22), ಜಯಂಚಂದ್ರನ್(23) ಹಾಗೂ ರಕ್ಷಣ್(20) ಎಂದು ಗುರುತಿಸಲಾಗಿದೆ. ಮೃತರನ್ನು ತಿರುಪಟ್ಟೂರ್ ಸರ್ಕಾರಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದ್ದು, ಘಟನೆ ಬಗ್ಗೆ ಪೊಲಿಸರು ತನಿಖೆ ನಡೆಸುತ್ತಿದ್ದಾರೆ.

    ಬೆಂಗಳೂರಿನ ಬಾಣಸವಾಡಿ ನಿವಾಸಿಯಾಗಿದ್ದ ರೇಖಾ ಸಿಂಧು ಹಲವು ಜಾಹೀರಾತುಗಳಲ್ಲಿ ಹಾಗೂ ತಮಿಳು ಮತ್ತು ಕನ್ನಡ ಟಿವಿ ಕಾರ್ಯಕ್ರಮಗಳಲ್ಲಿ ಅಭಿನಯಿಸಿದ್ದರು.

    ಆದ್ರೆ ಕೆಲವರು ರೇಖಾ ಸಿಂಧು ಸಾವಿನ ಸುದ್ದಿ ಕೇಳಿ ಮತ್ತೊಬ್ಬ ನಟಿ ರೇಖಾ ಕೃಷ್ಣಪ್ಪ ಎಂದು ತಪ್ಪು ತಿಳಿದಿದ್ದರು. ಈ ಬಗ್ಗೆ ರೇಖಾ ಕೃಷ್ಣಪ್ಪ ವಿಡಿಯೋ ಮೂಲಕ ಸ್ಪಷ್ಟನೆ ನೀಡಿದ್ದು, ನಾನು ಚೆನ್ನಾಗಿದ್ದೇನೆ. ದೇವಸ್ಥಾನದಲ್ಲಿದ್ದೇನೆ. ರೇಖಾ ಸಿಂಧು ಎಂಬವರು ಸಾವನ್ನಪ್ಪಿದ್ದಾರೆ. ಆದ್ರೆ ಕೆಲವರು ಅದು ನಾನು ಎಂದು ತಪ್ಪು ತಿಳಿದಿದ್ದಾರೆ. ಬೆಳಗ್ಗಿನಿಂದ ತುಂಬಾ ಕರೆಗಳು ಬರ್ತಿವೆ. ನನಗೆ ಏನೂ ಆಗಿಲ್ಲ ಎಂದು ಹೇಳಿದ್ದಾರೆ.

    https://www.facebook.com/rekha.krishnappa.7/videos/1445445648847641/

  • ಖ್ಯಾತ ಬಾಲಿವುಡ್ ನಟ, ರಾಜಕಾರಣಿ ವಿನೋದ್ ಖನ್ನಾ ಇನ್ನಿಲ್ಲ

    ಖ್ಯಾತ ಬಾಲಿವುಡ್ ನಟ, ರಾಜಕಾರಣಿ ವಿನೋದ್ ಖನ್ನಾ ಇನ್ನಿಲ್ಲ

    ಮುಂಬೈ: ಖ್ಯಾತ ಬಾಲಿವುಡ್ ನಟ ಹಾಗೂ ರಾಜಕಾರಣಿ ವಿನೋದ್ ಖನ್ನಾ(70) ವಿಧಿವಶರಾಗಿದ್ದಾರೆ.

    ಕೆಲವು ವಾರಗಳ ಹಿಂದೆ ತೀವ್ರ ನಿರ್ಜಲೀಕರಣದ ಕಾರಣ ಖನ್ನಾ ಅವರನ್ನ ಗಿರ್‍ಗಾಂವ್‍ನ ಹೆಚ್‍ಎನ್ ರಿಲಯನ್ಸ್ ಫೌಂಡೇಷನ್ ಅಂಡ್ ರಿಸರ್ಚ್ ಸೆಂಟರ್‍ಗೆ ಕರೆದೊಯ್ಯಲಾಗಿತ್ತು. ಅವರಿಗೆ ಬ್ಲಾಡರ್ ಕ್ಯಾನ್ಸರ್‍ಗೆ ಚಿಕಿತ್ಸೆ ನೀಡಲಾಗ್ತಿದೆ ಎಂಬ ವದಂತಿಯೂ ಹಬ್ಬಿತ್ತು. ಇದಾದ ಕೆಲವು ದಿನಗಳ ಬಳಿಕ ವಿನೋದ್ ಖನ್ನಾ ಅವರ ಮಗ ರಾಹುಲ್ ಖನ್ನಾ ಸುದ್ದಿ ಸಂಸ್ಥೆಗೆ ಹೇಳಿಕೆ ನೀಡಿದ್ದು, ತೀವ್ರ ನಿರ್ಜಲೀಕರಣದಿಂದಾಗಿ ತಂದೆಯನ್ನು ಆಸ್ಪತ್ರೆಗೆ ದಾಖಲಿಸಿದ್ದೇವೆ. ವೈದ್ಯರು ಚಿಕಿತ್ಸೆ ನೀಡಿದ್ದು, ಶೀಘ್ರದಲ್ಲೇ ಡಿಸ್ಚಾರ್ಜ್ ಮಾಡಿಸಲಾಗುತ್ತದೆ ಎಂದು ಹೇಳಿದ್ದರು.

    1968ರಲ್ಲಿ ಮನ್ ಕಾ ಮೀತ್ ಚಿತ್ರದ ಮೂಲಕ ವಿನೋದ್ ಖನ್ನಾ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಈ ಚಿತ್ರದಲ್ಲಿ ಸುನಿಲ್ ದತ್ತ ಅವರಿಗೆ ಖಳನಾಯಕರಾಗಿ ಅಭಿನಯಿಸಿದ್ದರು. ನಂತರ ಹಲವಾರು ಚಿತ್ರಗಳಲ್ಲಿ ಖಳನಾಯಕ ಹಾಗು ಪೋಷಕ ಪಾತ್ರಗಳಲ್ಲಿ ಅಭಿನಯಿಸಿದ್ರು. ಹಮ್ ತುಮ್ ಔರ್ ವೋ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ರು. ಅಮರ್ ಅಕ್ಬರ್ ಆಂಟೋನಿ, ಪರ್ವರಿಷ್, ಹೇರಾ ಫೇರಿ, ಮುಖ್ದಾರ್ ಕಾ ಸಿಕಂದರ್ ಇನ್ನೂ ಮುಂತಾದ ಫೇಮಸ್ ಚಿತ್ರಗಳಲ್ಲಿ ಖನ್ನಾ ಅಭಿನಯಿಸಿದ್ದಾರೆ.

    ಇತ್ತೀಚೆಗೆ ಸಲ್ಮಾನ್ ಖಾನ್ ಅಭಿನಯದ ದಬಂಗ್ ಚಿತ್ರದಲ್ಲೂ ವಿನೋದ್ ಖನ್ನಾ ಕಾಣಿಸಿಕೊಂಡಿದ್ದರು. ಅವರು ಅಭಿನಯಿಸಿದ ಕೊನೆಯ ಚಿತ್ರ ಶಾರೂಖ್ ಖಾನ್ ಹಾಗೂ ಕಾಜೋಲ್ ಅಭಿನಯದ ದಿಲ್‍ವಾಲೆ.

    ನಟರಾಗಿ ಅಷ್ಟೇ ಅಲ್ಲದೆ ರಾಜಕಾರಣಿಯಾಗಿಯೂ ವಿನೋದ್ ಖನ್ನಾ ಗುರುತಿಸಿಕೊಂಡಿದ್ದರು. ಪಂಜಾಬ್‍ನ ಗುರುದಾಸ್‍ಪುರ ಕ್ಷೇತ್ರದಿಂದ ಬಿಜೆಪಿ ಸಂಸದರಾಗಿ ಆಯ್ಕೆಯಾಗಿದ್ದರು. ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಹಾಗೂ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವರಾಗಿದ್ರು.

  • ಮಂತ್ರಾಲಯದಲ್ಲಿ 54ನೇ ಹುಟ್ಟುಹಬ್ಬ ಆಚರಿಸಿಕೊಂಡ ನಟ ಜಗ್ಗೇಶ್

    ಮಂತ್ರಾಲಯದಲ್ಲಿ 54ನೇ ಹುಟ್ಟುಹಬ್ಬ ಆಚರಿಸಿಕೊಂಡ ನಟ ಜಗ್ಗೇಶ್

    ರಾಯಚೂರು: ನವರಸ ನಾಯಕನೆಂದೇ ಖ್ಯಾತರಾದ ನಟ ಜಗ್ಗೇಶ್ ಅವರಿಗೆ ಇಂದು 54 ಹುಟ್ಟು ಹಬ್ಬದ ಸಂಭ್ರಮ. ಈ ಹಿನ್ನೆಲೆಯಲ್ಲಿ ಜಗ್ಗೇಶ್ ಮಂತ್ರಾಲಯಕ್ಕೆ ಆಗಮಿಸಿ, ಶ್ರೀ ದೇವರ ದರ್ಶನ ಪಡೆದರು.

    ಕಳೆದ 4 ವರ್ಷಗಳಿಂದ ಹುಟ್ಟುಹಬ್ಬದಂದು ನಟ ಜಗ್ಗೇಶ್ ಮಂತ್ರಾಲಯಕ್ಕೆ ಆಗಮಿಸುತ್ತಿದ್ದಾರೆ. ಅಂತೆಯೇ ಈ ಬಾರಿಯೂ ಹುಟ್ಟುಹಬ್ಬದಂದು ಮಂತ್ರಾಲಯಕ್ಕೆ ಭೇಟಿ ನೀಡಿದ ಅವರು ರಾಯರ ದರ್ಶನ ಪಡೆದರು. ಮಾತ್ರವಲ್ಲದೇ ಮಠದ ಶ್ರೀ ಸುಬುಧೇಂದ್ರ ತೀರ್ಥರಿಂದ ಆಶೀರ್ವಚನ ಪಡೆದ್ರು.

    ನಟ ಜಗ್ಗೇಶ್ ಅವರು ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ಮಾಯಸಂದ್ರದಲ್ಲಿ 1963 ರ ಮಾರ್ಚ್ 17ರಂದು ಜನಿಸಿದ್ದಾರೆ. `ಇಬ್ಬನಿ ಕರಗಿತು’ ಇವರ ಮೊದಲನೆಯ ಚಿತ್ರ. `ಮಠ’ ನೂರನೆಯ ಚಿತ್ರವಾಗಿದ್ದು `ಮೇಕಪ್’ ಚಿತ್ರವನ್ನು ನಿರ್ಮಾಪಕರೂ ಆಗಿದ್ದಾರೆ. ತಮ್ಮ ಕೆಲವು ಚಿತ್ರಗಳಲ್ಲಿ ತಾವೇ ಹಾಡಿದ್ದಾರೆ.

    ಹಾಸ್ಯ ಪ್ರಧಾನ ಪಾತ್ರಗಳಿಗೆ ಹೆಸರಾಗಿರುವ ಜಗ್ಗೇಶ್ ಅವರು, ತಮ್ಮ ವಿಶಿಷ್ಟ ಹಾವಭಾವದಿಂದ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.

  • 40ನೇ ಹುಟ್ಟುಹಬ್ಬ ಆಚರಿಸಿಕೊಂಡ ಜಗ್ಗುದಾದ: ಅಭಿಮಾನಿಗಳಿಂದ ಹಾಡು ಗಿಫ್ಟ್

    40ನೇ ಹುಟ್ಟುಹಬ್ಬ ಆಚರಿಸಿಕೊಂಡ ಜಗ್ಗುದಾದ: ಅಭಿಮಾನಿಗಳಿಂದ ಹಾಡು ಗಿಫ್ಟ್

    ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಬಾಕ್ಸಾಫೀಸ್ ಸುಲ್ತಾನ್ ಅಂತಾನೇ ಖ್ಯಾತಿ ಹೊಂದಿರೋ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್‍ಗೆ ಇಂದು 40ನೇ ವರ್ಷದ ಹುಟ್ಟು ಹಬ್ಬದ ಸಂಭ್ರಮ. ಬೆಂಗಳೂರಿನ ರಾಜರಾಜೇಶ್ವರಿ ನಗರದ ತಮ್ಮ ನಿವಾಸದಲ್ಲಿ ಮಧ್ಯರಾತ್ರಿ ತಮ್ಮ ಅಭಿಮಾನಿಗಳ ಸಮುಖದಲ್ಲಿ ಕೇಕ್ ಕತ್ತಿರುಸುವ ಮೂಲಕ ತಮ್ಮ ಹುಟ್ಟು ಹಬ್ಬ ಆಚರಿಸಿಕೊಂಡರು.

    ತಡ ರಾತ್ರಿ 2 ಗಂಟೆಯತನಕ ನೆಚ್ಚಿನ ನಟನಿಗೆ ಶುಭಾಶಯ ಕೊರಲು ಕೇಕ್ ಹಿಡಿದು ಬಾರಿ ಸಂಖ್ಯೆಯಲ್ಲಿ ಅವರ ಅಭಿಮಾನಿಗಳು ಮನೆ ಹತ್ತಿರ ಧಾವಿಸಿ ಶುಭಾಶಯ ಕೋರಿದರು. ಅಲ್ಲದೇ ಪಟಾಕಿ ಸಿಡಿಸಿ ಸಂಭ್ರಮಿಸಿದರು. ತಡ ರಾತ್ರಿಯವರೆಗೂ ಅಭಿಮಾನಿಗಳು ಬಂದು ಶುಭಾಶಯ ಕೋರಿದ್ದೇ ನಾನು ಇಷ್ಟು ವರ್ಷ ಸಂಪಾದಿಸಿದ್ದು ಅಂತ ನಟ ದರ್ಶನ್ ಹೇಳಿದರು. ದರ್ಶನ್ ಮನೆಯ ಹತ್ತಿರ ಬರೀ ಬೆಂಗಳೂರಿನವರಷ್ಟೇ ಅಲ್ಲದೇ ಮೈಸೂರು ಶಿವಮೊಗ್ಗ ಯಾದಗಿರಿ ದಾವಣಗೆರೆ ಹಾಸನ ಜಿಲ್ಲೆಗಳಿಂದಲೂ ದರ್ಶನ್ಗೆ ಶುಭಾಶಯ ಕೊರಲು ಅವರ ಮನೆ ಹತ್ತಿರ ಬಂದಿದ್ದರು ಎನ್ನಲಾಗಿದೆ.

    ಹಾಡು ಉಡುಗೊರೆ: ಹುಟ್ಟುಹಬ್ಬದ ಸಂಭ್ರಮದಲ್ಲಿರೋ ಚಾಲೆಜಿಂಗ್ ಸ್ಟಾರ್ ದರ್ಶನ್ ಅವ್ರಿಗೆ ಹಾಡೊಂದು ಉಡುಗೊರೆಯಾಗಿ ನೀಡಿದ್ದಾರೆ. ಸಂಗೀತ ನಿರ್ದೇಶಕ ಸುಪ್ರೀತ್ ಗಾಂಧಾರ ಅಂಡ್ ಟೀಮ್ ಈ ಹಾಡು ರೆಡಿ ಮಾಡಿದ್ದಾರೆ. ಹಾಡಿಗೆ ಶ್ರೀರವಿ ಸಾಹಿತ್ಯ ಬರೆದಿದ್ದು, ಸಂಜೀತ್ ಹೆಗಡೆ ಕಂಠದಾನ ಮಾಡಿದ್ದಾರೆ. ದರ್ಶನ್ 40 ನೇ ಹುಟ್ಟುಹಬ್ಬದ ಸಂಭ್ರಮದಲ್ಲಿರೋ ಅಭಿಮಾನಿಗಳಿಗೆ ಈ ಹಾಡು ಮತ್ತಷ್ಟು ಕಿಕ್ ಕೊಡಲಿದೆ. ದರ್ಶನ್ ಅಭಿನಯಿಸಿರೋ ಬಹುತೇಕ ಸಿನಿಮಾದ ಟೈಟಲ್‍ಗಳನ್ನ ಹಾಡಿನಲ್ಲಿ ಬಳಸಲಾಗಿದ್ದು ಲಹರಿ ಮ್ಯೂಸಿಕ್ಸ್ ಸಂಸ್ಥೆ ಈ ಹಾಡನ್ನ ಮಾರುಕಟ್ಟೆಗೆ ತಂದಿದೆ.