ಉಡುಪಿ: ನಟ ಪ್ರಕಾಶ್ ರೈಗೆ ಪ್ರಶಸ್ತಿ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ನಮ್ಮ ಸಮಿತಿಯಲ್ಲಿ ಯಾವುದೇ ಗೊಂದಲವಿಲ್ಲ. ನಟ ಪ್ರಕಾಶ್ ರೈಯವರೇ ಕಾರಂತರ ಹೆಸರಿನ ಗೌರವಕ್ಕೆ ಪಾತ್ರರಾಗಲಿದ್ದಾರೆ ಎಂದು ಕೋಟತಟ್ಟು ಗ್ರಾ.ಪಂ.ಅಧ್ಯಕ್ಷ ಪ್ರಮೋದ್ ಹಂದೆ ಹೇಳಿದ್ದಾರೆ.
ಕುಂದಾಪುರ ತಾಲೂಕಿನ ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿಗೆ ರೈ ಆಯ್ಕೆಯನ್ನು ವಿರೋಧ ಮಾಡೋದು ಸರಿಯಲ್ಲ. ಕೋಟತಟ್ಟು ಗ್ರಾ.ಪಂ. ಶಿವರಾಮ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ, ಶಿವರಾಮ ಕಾರಂತ ಟ್ರಸ್ಟ್ ಕೊಡುವ ಪ್ರಶಸ್ತಿ ಇದು. ಕಳೆದ 13 ವರ್ಷಗಳಿಂದ ಕೊಡುತ್ತಿರುವ ಪ್ರಶಸ್ತಿ ಈ ಬಾರಿ ನಟ ಪ್ರಕಾಶ್ ರೈಯನ್ನು ಆಯ್ಕೆ ಮಾಡಲಾಗಿದೆ ಎಂದು ಅವರು ಸ್ಪಷ್ಟನೆ ನೀಡಿದ್ರು.
ಪ್ರಕಾಶ್ ರೈ ಈ ಪ್ರಶಸ್ತಿಗೆ ನಿಜವಾಗಿಯೂ ಅರ್ಹರು. ಆದ್ರೆ ಸಾಮಾಜಿಕ ಜಾಲತಾಣಗಳಲ್ಲಿ ವಿರೋಧ ವ್ಯಕ್ತವಾಗುತ್ತಿದೆ. ವೈಯುಕ್ತಿಕ ಹೇಳಿಕೆಗೂ ಪ್ರಶಸ್ತಿಗೂ ಸಂಬಂಧವಿಲ್ಲ. ಅಕ್ಟೋಬರ್ 10ರಂದು ಸಂಜೆ 6 ಗಂಟೆಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಕಾರ್ಯಕ್ರಮ ನಿಗದಿಯಂತೆ ನಡೆಯಲಿದೆ. ಇದರಲ್ಲಿ ಯಾವುದೇ ಬದಲಾವಣೆ ಇಲ್ಲ ಅಂತ ಅವರು ಹೇಳಿದ್ರು.
ಪ್ರಶಸ್ತಿ ಆಯ್ಕೆಗೆ ಐದು ಮಂದಿ ಆಯ್ಕೆ ಮಂಡಳಿ ನೇಮಕ ಮಾಡಲಾಗಿತ್ತು. ಆಯ್ಕೆ ಮಂಡಳಿ ಪ್ರಕಾಶ್ ರೈ ಅವರನ್ನು ಆಯ್ಕೆ ಮಾಡಿದೆ. ಕಳೆದ 12 ವರ್ಷಗಳಲ್ಲಿ ಸಾಧಕರಿಗೆ ನೀಡುತ್ತಾ ಬಂದಂತೆಯೇ ಈ ಬಾರಿ ಪ್ರಕಾಶ್ ರೈ ಪ್ರಶಸ್ತಿ ಸ್ವೀಕರಿಸಲು ಬರುತ್ತಾರೆ. ಕಾರಂತರ ಹೆಸರಿಗೆ ಚ್ಯುತಿ ಬರಬಾರದು. ಪ್ರಶಸ್ತಿ ನೀಡಿಕೆ ವಿಚಾರದಲ್ಲಿ ರಾಜಕೀಯ ಬೇಡ ಅಂದ್ರು.
ಈ ಹಿಂದೆ ಕಾರಂತ ಪ್ರಶಸ್ತಿಗೆ ಪಾತ್ರರಾದವರು ಮಾಜಿ ಸಿಎಂ ವೀರಪ್ಪ ಮೊಯ್ಲಿ, ಪತ್ರಕರ್ತ ರವಿ ಬೆಳಗೆರೆ, ಸಾಹಿತಿ ಜಯಂತ್ ಕಾಯ್ಕಿಣಿ, ದಿ. ರಾಮಚಂದ್ರ ಚಿಟ್ಟಾಣಿ, ಡಾ. ಬಿ.ಎಮ್ ಹೆಗ್ಡೆ, ಸಾಲುಮರದ ತಿಮ್ಮಕ್ಕ, ಡಾ. ಎಂ ಮೋಹನ್ ಆಳ್ವ, ನಾಟಕಕಾರ ಸದಾನಂದ ಸುವರ್ಣ, ಬಿ. ಜಯಶ್ರೀ, ಗಿರೀಶ್ ಕಾಸರವಳ್ಳಿ, ಮಾಜಿ ಲೋಕಾಯುಕ್ತ ವೆಂಕಟಾಚಲಯ್ಯ, ಶಿಕ್ಷಣ ತಜ್ಞ ಕೆ.ಆರ್ ಹಂದೆ ಇವರುಗಳಿಗೆ ಕಾರಂತ ಹುಟ್ಟೂರ ಸನ್ಮಾನ ಲಭಿಸಿತ್ತು. ಈ ಬಾರಿ ನಟ ಪ್ರಕಾಶ್ ರೈ ಈ ಗೌರವಕ್ಕೆ ಪಾತ್ರರಾಗಲಿದ್ದಾರೆ.
ಧಾರವಾಡ: ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್‍ನಲ್ಲಿ ಅವಕಾಶ ಕೊಡಿ ಎಂದು ಜಿಲ್ಲೆಯ ಯುವಕನೊಬ್ಬ ಬೆಂಗಳೂರಿಗೆ ಸೈಕಲ್ ಪ್ರಯಾಣ ಬೆಳೆಸಿದ್ದಾನೆ.
ಹೌದು. ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಮುಡಲಗಿ ಪಟ್ಟಣದ ಮಂಜುನಾಥ ರೆಳೆಕರ ಭಾನುವಾರ ಸೈಕಲ್ ನಲ್ಲಿ ತನ್ನ ಪ್ರಯಾಣ ಆರಂಭ ಮಾಡಿದ್ದು, ಇಂದು ಧಾರವಾಡಕ್ಕೆ ಬಂದು ತಲುಪಿದ್ದಾರೆ.
ಮಂಜುನಾಥ ಬೆಂಗಳೂರಿಗೆ ಬಂದು ನಟ ಸುದೀಪ್ ಅವರನ್ನು ಭೇಟಿ ಮಾಡಿ ತನಗೂ ಬಿಗ್ ಬಾಸ್ ಸೀಸನ್ 5 ರಲ್ಲಿ ಭಾಗವಹಿಸಲು ಅವಕಾಶ ನೀಡಬೇಕು ಎಂದು ಮನವಿ ಮಾಡಿಕೊಳ್ಳಲಿದ್ದಾರೆ. ಹೀಗಾಗಿ 6 ದಿನಗಳಲ್ಲಿ ಬೆಂಗಳೂರಿಗೆ ತಲುಪುವ ಗುರಿಯನ್ನು ಹಾಕಿಕೊಂಡಿದ್ದಾರೆ.
ಮಿಮಿಕ್ರಿ ಆರ್ಟಿಸ್ಟ್ ಆಗಿರೋ ಮಂಜುನಾಥ್ ಅವರಿಗೆ ಬಿಗ್ ಬಾಸ್‍ನಲ್ಲಿ ಭಾಗವಹಿಸಲು ಅವಕಾಶ ಕೊರಲು ಹೊರಟಿದ್ದಕ್ಕೆ, ಹಲವು ಜನರು ಬೆಂಬಲ ವ್ಯಕ್ತ ಪಡಿಸಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ತನ್ನ ಸೈಕಲ್‍ಗೆ ಕನ್ನಡ ಧ್ವಜ ಕಟ್ಟಿಕೊಂಡು ಹೊರಟಿರುವ ಇವರು ಸೆಪ್ಟೆಂಬರ್ 30 ರಂದು ಬೆಂಗಳೂರಿನಲ್ಲಿ ನಟ ಸುದೀಪ್ ಅವರನ್ನು ಭೇಟಿಯಾಗಲು ಪ್ಲಾನ್ ಮಾಡಿದ್ದಾರೆ.
ಬೆಂಗಳೂರು: ಸ್ಯಾಂಡಲ್ ವುಡ್ ನಟ ಚೇತನ್ ಅವರು ತನಗೆ ಭದ್ರತೆ ಒದಗಿಸಬೇಕೆಂದು ಇದೀಗ ಪೊಲೀಸರಿಗೆ ಮನವಿ ಮಾಡಲು ಮುಂದಾಗಿದ್ದಾರೆ.
ವೀರಶೈವ ಲಿಂಗಾಯತ ಪ್ರತ್ಯೇಕತೆ ಹೋರಾಟದಲ್ಲಿ ಪಾಲ್ಗೊಂಡು ಭಾಷಣ ಮಾಡಿದ ಬಳಿಕ ತನ್ನ ಕುಮಾರ ಪಾರ್ಕ್ ಬಳಿಯ ಮನೆ ಸುತ್ತ ಅನಾಮಧೇಯ ವ್ಯಕ್ತಿಗಳು ಓಡಾಡುತ್ತಿರುವುದರಿಂದ ನನಗೆ ಜೀವಭಯವಿದೆ ಅಂದಿದ್ದಾರೆ.
ಅಲ್ಲದೇ ಸಾಮಾಜಿಕ ಜಾಲತಾಣಗಳಲ್ಲಿ ಕೂಡ ಬೆದರಿಕೆಗಳು ಬರುತ್ತಿವೆ. ಹೀಗಾಗಿ ನಟ ಬೆಂಗಳೂರು ಪೊಲೀಸ್ ಆಯುಕ್ತರು ಹಾಗೂ ಶೇಷಾದ್ರಿಪುರಂ ಠಾಣೆಗೆ ಮನವಿ ಮಾಡಲು ನಿರ್ಧರಿಸಿದ್ದಾರೆ.
ಇತ್ತೀಚೆಗೆ ನಗರದ ಬಸವ ಸಮಿತಿಯಲ್ಲಿ ನಡೆಯುತ್ತಿರುವ ಲಿಂಗಾಯತ ಧರ್ಮ- ಸ್ವತಂತ್ರ ಧರ್ಮ ನಿರ್ಣಾಯಕ ಸಭೆಯಲ್ಲಿ ಮಾತನಾಡಿದ ಚೇತನ್, ಹಿಂದೂ-ಮುಸ್ಲಿಂ-ಕ್ರಿಶ್ಚಿಯನ್ ಇವುಗಳು ಅಸಮಾನತೆ ಇರುವ ಧರ್ಮ. ವೀರಶೈವದಲ್ಲಿ ಲಿಂಗಬೇಧ, ದೇವಾಲಯದ ಆಚರಣೆ, ಜಾತಿ ಬೇಧ ಒಪ್ಪಿಕೊಂಡಿದ್ದಾರೆ. ಆದ್ರೇ ಇದು ಬಸವಣ್ಣ ಒಪ್ಪಲಿಲ್ಲ. ಲಿಂಗಾಯತ ವೀರಶೈವ ಧರ್ಮ ನಮಗೆ ಬೇಕಾಗಿಲ್ಲ. ನಮ್ಮ ಒಗ್ಗಟ್ಟು ಒಡೆಯಲು ಮುಂದಾಗಿದ್ದು ಹಿಂದೂ ಧರ್ಮ, ಸುತ್ತೂರು ಮಠ ಹಾಗೂ ಯಡಿಯೂರಪ್ಪ ಅಂತ ಹೇಳಿದ್ದರು.
ಬಸವಣ್ಣನವರ ಹೆಸರನ್ನು ರಾಜಕೀಯ ಪಕ್ಷದವರು ದುರುಪಯೋಗ ಮಾಡಿಕೊಳ್ಳುತ್ತಾರೆ. ಬಿಜೆಪಿ ಕಾರ್ಯಕ್ರಮದಲ್ಲಿ ಸಿನಿಮಾ ರಂಗದವರೊಬ್ಬರು ಆಭಿನವ ಬಸವಣ್ಣ ಅಂತ ವರ್ಣಿಸಿದ್ರು. ಭ್ರಷ್ಟಾಚಾರದ ಆರೋಪ ಹೊತ್ತಿರುವ ಯಡಿಯೂರಪ್ಪ, ದಲಿತರ ಮನೆಯಲ್ಲಿ ತಿಂಡಿ ತಿನ್ನೋ ಡ್ರಾಮಾ ಮಾಡುವ ಯಡಿಯೂರಪ್ಪ ಆಧುನಿಕ ಕೊಂಡಿ ಮನುಷ್ಯ ಅಂತ ಆಕ್ರೋಶ ವ್ಯಕ್ತಪಡಿಸಿದ್ದರು.
ಚಾಮರಾಜನಗರ: ಇಂದು ಸ್ಯಾಂಡಲ್ ವುಡ್ ನಟ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರಿಗೆ 43ನೇ ಹುಟ್ಟುಹಬ್ಬದ ಸಂಭ್ರಮ. ಈ ಹಿನ್ನೆಲೆಯಲ್ಲಿ ಸುದೀಪ್ ಅಭಿನಮಾನಿಗಳು ಚಾಮರಾಜನಗರದಲ್ಲಿ ವಿಶೇಷವಾಗಿ ಹುಟ್ಟುಹಬ್ಬವನ್ನು ಆಚರಿಸಿದರು.
ಹೌದು. ನಗರದ ಈಶ್ವರಿ ಮ್ಯೂಸಿಕಲ್ ಅಕಾಡೆಮಿ ಅಂಡ್ ಸೋಷಿಯಲ್ ಟ್ರಸ್ಟ್ ವತಿಯಿಂದ 50 ಸಾಲು ಸಸಿಗಳನ್ನು ನೆಟ್ಟು, ಕೇಕ್ ಕತ್ತರಿಸಿ ಸಂಭ್ರಮಿಸಲಾಯಿತು.
ಪರಿಸರ ಸಂರಕ್ಷಣೆಯಲ್ಲಿ ತೊಡಗಿಕೊಂಡಿರುವ ಟ್ರಸ್ಟ್ ಅಧ್ಯಕ್ಷ ವೆಂಕಟೇಶ್, ನಟರ ಹಾಗೂ ಗಣ್ಯರ ಜನ್ಮದಿನದಂದು ಗಿಡಗಳನ್ನು ನೆಟ್ಟು ಪಾಲನೆ, ಪೋಷಣೆ ಮಾಡಿಕೊಂಡು ಬರುತ್ತಿದ್ದಾರೆ. ಅದ್ರಂತೆ ಸುದೀಪ್ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಇಂದು ಗಿಡ ನೆಟ್ಟು ಹುಟ್ಟು ಹಬ್ಬ ಆಚರಣೆ ಮಾಡಿದ್ರು.
ಬೆಂಗಳೂರು: ಸ್ಯಾಂಡಲ್ ವುಡ್ ರಿಯಲ್ ಸ್ಟಾರ್ ಉಪೇಂದ್ರ ಈ ಹಿಂದೆ ಸಾಕಷ್ಟು ಬಾರಿ ರಾಜಕೀಯಕ್ಕೆ ಬರೋ ಇಂಗಿತ ವ್ಯಕ್ತಪಡಿಸಿದ್ರು. ಅಲ್ಲದೇ ಕೆಲವೇ ದಿನಗಳ ಹಿಂದೆ ರಾಜಕೀಯ ಅಂದ್ರೆ ಏನು? ರಾಜಕೀಯ ಪ್ರಜಾಕೀಯ ಆಗ್ಬೇಕು ಅಂತಾ ಟ್ವೀಟ್ ಮಾಡಿದ್ರು. ಪಾಕ್, ಚೀನಾ ಜೊತೆ ಭಾರತದ ಗಡಿ ಗಲಾಟೆಗಳಾದಾಗಲೂ ಟ್ವೀಟ್ ಮಾಡಿ ರಾಜಕೀಯ ನಾಯಕರ ಗಮನ ಸೆಳೆದಿದ್ರು. ಅಣ್ಣಾ ಹಜಾರೆಯನ್ನು ಹೊಗಳಿದ್ರು. ಇದೆಲ್ಲಾ ನೋಡಿದ್ರೆ ಶೀಘ್ರದಲ್ಲೇ ಉಪೇಂದ್ರ ರಾಜಕೀಯಕ್ಕೆ ಬರೋದು ಫಿಕ್ಸ್ ಆದಂತಾಗಿದೆ.
ಇನ್ನು ರಾಜಕಾರಣಕ್ಕೆ ಎಂಟ್ರಿ ಕೊಡುವ ಬಗ್ಗೆ ಆಪ್ತರ ಜೊತೆ ಸಮಾಲೋಚನೆ ನಡೆಸಿರೋ ಉಪ್ಪಿ, ರಾಜಕೀಯ ಪ್ರವೇಶಿಸುವ ಬಗ್ಗೆ ಈಗಾಗಲೇ ಅಂತಿಮ ಸಿದ್ಧತೆ ನಡೆಸಿದ್ದಾರೆ. ಈ ವರ್ಷವೇ ರಾಜಕೀಯಕ್ಕೆ ಧುಮುಕುವ ಬಗ್ಗೆ ಉಪೇಂದ್ರ ಗಂಭೀರ ಚಿಂತನೆ ನಡೆಸಿದ್ದು, ಕೆಲವು ಪಕ್ಷ ಹಾಗೂ ಅಭಿಮಾನಿಗಳಿಂದ ರಾಜಕೀಯಕ್ಕೆ ಬರುವಂತೆ ಒತ್ತಾಯ ಕೇಳಿಬರುತ್ತಿದೆ.
ಭ್ರಷ್ಟಚಾರ ರಹಿತ ರಾಷ್ಟ್ರ ನಿರ್ಮಾಣದ ರಾಜಕೀಯ ಆಂದೋಲನದಲ್ಲಿ ತೊಡಗಿಸಿಕೊಳ್ಳುವ ಇಂಗಿತ ಹೊಂದಿದ್ದ ಉಪೇಂದ್ರ, ಆಪ್ತರ ಜೊತೆ ಸಮಾಲೋಚಿಸಿ ರಾಜಕೀಯ ರಂಗ ಪ್ರವೇಶದ ಬಗ್ಗೆ ನಿರ್ಧರಿಸಲಿದ್ದಾರೆ ಎಂಬುವುದಾಗಿ ತಿಳಿದುಬಂದಿದೆ.
Say no to raajakarana, Rajakeeya,Rajaneethi. We want prajaakarana, prajaakeeya, prajaaneethi.
ಬೆಂಗಳೂರು: ಸ್ಯಾಂಡಲ್‍ವುಡ್ ನಟ ಕಿಚ್ಚ ಸುದೀಪ್ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.
ಪರಿಸರ ಕಾಳಜಿ ಕುರಿತು ಕನ್ನಡ ಚಿತ್ರರಂಗದ ಹೆಬ್ಬುಲಿ ಘರ್ಜಿಸಿದೆ. ಕೆರೆಗಳ ಸಂರಕ್ಷಣೆ ಕುರಿತು ಕಾಳಜಿವಹಿಸುವಂತೆ ಕಿಚ್ಚ ಸುದೀಪ್ ಮಂಗಳವಾರ ಸಂಜೆ ಗೂಗಲ್ ಪ್ಲಸ್ ನಲ್ಲಿ ಪತ್ರ ಬರೆದು ಮನವಿ ಮಾಡಿದ್ದಾರೆ.
`ನಾನೊಬ್ಬ ನಟನಾಗಿ ಹೇಳ್ತಿಲ್ಲ ನಾನೊಬ್ಬ ಸಾಮಾನ್ಯ ವ್ಯಕ್ತಿಯಾಗಿ ಹೇಳ್ತಿದ್ದೇನೆ ಅಂದಿರೋ ಕಿಚ್ಚ, ತಮ್ಮ ಪತ್ರದಲ್ಲಿ ಡಿನೋಟಿಫಿಕೇಶನ್ ವಿರುದ್ಧ ಕಿಡಿಕಾರಿದ್ದಾರೆ. ಇರುವ ಬೆರಳೆಣಿಕೆಯಷ್ಟು ಕೆರೆಗಳನ್ನ ಕಾಪಾಡಿ. ಡಿನೋಟಿಫಿಕೇಷನ್ ಭೂತದಿಂದ ಸಾವಿನ ಅಂಚಿಗೆ ತಲುಪಿರುವ ಬೆಂಗಳೂರಿನ ಕೆರೆಗಳನ್ನ ಪಾರು ಮಾಡಿ’ ಎಂದು ಪತ್ರದ ಮೂಲಕ ಮನವಿ ಮಾಡಿಕೊಂಡಿದ್ದಾರೆ.
`ಕೆರೆಗಳು ನಮ್ಮ ಜೀವನಾಡಿ ಅವುಗಳಿಗೆ ಜೀವ ತುಂಬುವುದೆಂದರೆ ಪ್ರಕೃತಿಗೆ ಜೀವತುಂಬಿದಂತೆ. ಇಲ್ಲಿರುವ ಪ್ರತಿ ಗಿಡ, ಮರ, ಪ್ರಾಣಿಗಳು ಮನುಷ್ಯರೂ ಪ್ರತಿಯೊಂದು ಪ್ರಕೃತಿಯ ಭಾಗವೇ. ಕೆರೆಗಳನ್ನ ಕೊಲ್ಲುವುದೆಂದರೆ ನಮ್ಮ ತಾಯಿ ಪ್ರಕೃತಿಯನ್ನ ಹತ್ಯೆಗೈದಂತೆ’ ಎಂದು ಕಿಚ್ಚ ತಮ್ಮದೇ ಆದ ಶೈಲಿಯಲ್ಲಿ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.
ಸುದೀಪ್ ಈ ಮೂಲಕ ತಾವೊಬ್ಬ ನಟ ಮಾತ್ರವಲ್ಲ ಸಾಮಾಜಿಕ ಕಳಕಳಿಯನ್ನೂ ಹೊಂದಿರೋದನ್ನ ಮತ್ತೊಮ್ಮೆ ಸಾಬೀತುಮಾಡಿದ್ದಾರೆ.
ಬೆಂಗಳೂರು: ನಟ ಹಾಗೂ ಬಿಜೆಪಿಯ ವಿಧಾನ ಪರಿಷತ್ ಮಾಜಿ ಸದಸ್ಯ ಜಗ್ಗೇಶ್ ಅವರು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರನ್ನು ಹೊಗಳಿ ಟ್ವೀಟ್ ಮಾಡಿರುವುದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ.
ವೆಂಕಯನಾಯ್ಡು ಅವರು ಇದೀಗ ಉಪರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದರು ಹಿನ್ನೆಲೆಯಲ್ಲಿ ಜಗ್ಗೇಶ್ ಈ ಟ್ವೀಟ್ ಮಾಡಿ ಅಭಿನಂದಿಸಿದ್ದರು. ತಮ್ಮ ಟ್ವೀಟ್ ನಲ್ಲಿ ಕರ್ನಾಟಕದಲ್ಲಿ ಅವರನ್ನು ಭಾಷಾಭಾವನೆಯಲ್ಲಿ ರಾಜ್ಯ ಸಭೆಗೆ ಆಕ್ಷೇಪಿಸಿದರು. ಆದರೆ ಇಂದು ಭಾರತಕ್ಕೆ ಉಪರಾಷ್ಟ್ರಪತಿ! ಬಾರದು ಬಪ್ಪುದು, ಬಪ್ಪುದು ತಪ್ಪದು ಇದೇ ದೇವರ ಲೀಲೆ ಅಂತ ಬರೆದುಕೊಂಡಿದ್ದರು.
ಇದೀಗ ಜಗ್ಗೇಶ್ ಅವರು ಪರೋಕ್ಷವಾಗಿ ಕನ್ನಡಿಗರಿಗೆ ಅಪಮಾನವಾಗುವ ರೀತಿ ಟ್ವೀಟ್ ಮಾಡಿದ್ದಾರೆ ಅಂತ ಸಾಮಾಜಿಕ ಜಾಲ ತಾಣದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಸದ್ಯ ವಿವಾದಾತ್ಮಕ ಟ್ವೀಟ್ ಗೆ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಜಗ್ಗೇಶ್ ಟ್ವೀಟ್ ಡಿಲೀಟ್ ಮಾಡಿದ್ದಾರೆ.
ಕನ್ನಡಿಗರ ವಿರೋಧ ಯಾಕೆ?: ರಾಜ್ಯಸಭೆಯ ಚುನಾವಣೆ ವೇಳೆ ಬಿಜೆಪಿ ಈ ಬಾರಿ ಮತ್ತೊಮ್ಮೆ ಕರ್ನಾಟಕದಿಂದ ವೆಂಕಯ್ಯ ನಾಯ್ಡು ಅವರನ್ನು ಕಳುಹಿಸಲು ಮುಂದಾಗಿತ್ತು. ಆದರೆ ಈ ಹಿಂದೆ ಎರಡೂ ಬಾರಿ ರಾಜ್ಯದಿಂದ ಆಯ್ಕೆ ಆಗಿದ್ದರೂ ರಾಜ್ಯಕ್ಕೆ ಏನು ಕೆಲಸ ಮಾಡಿಲ್ಲ ಎಂದು ಕನ್ನಡಿಗರು ಮತ್ತೊಮ್ಮೆ ಆರಿಸಿ ಕಳುಹಿಸುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿ `ವೆಂಕಯ್ಯ ಸಾಕಯ್ಯ’ ಅನ್ನೋ ಅಭಿಯಾನ ನಡೆಸಿದ್ದರು. ಈ ವೇಳೆ ಕನ್ನಡಪರ ಧ್ವನಿ ಎತ್ತದೆ, ಕನ್ನಡ ಪರ ಕೆಲಸ ಮಾಡದ ಬಗ್ಗೆ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದ್ದರು. ಆ ಸಂದರ್ಭದಲ್ಲಿ ವೆಂಕಯ್ಯ ನಾಯ್ಡುಗೆ ರಾಜ್ಯಸಭೆ ಟಿಕೆಟ್ ಗೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಕೊನೆಗೆ ರಾಜ್ಯದ ಜನರ ಅಭಿಪ್ರಾಯಕ್ಕೆ ಬಿಜೆಪಿ ಮಣಿದು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಟಿಕೆಟ್ ನೀಡಿದ್ದರೆ, ವೆಂಕಯ್ಯ ನಾಯ್ಡು ಅವರಿಗೆ ರಾಜಸ್ಥಾನದಲ್ಲಿ ಟಿಕೆಟ್ ನೀಡಿತ್ತು. ಈ ವಿಚಾರವನ್ನು ನೆನಪಿಸಿಕೊಂಡು ನಟ ಜಗ್ಗೇಶ್ ಈ ಟ್ವೀಟ್ ಮಾಡಿದ್ದರು.
ದೇಶದ 15ನೇ ಉಪರಾಷ್ಟ್ರಪತಿಯಾಗಿ ವೆಂಕಯ್ಯ ನಾಯ್ಡು ಆಯ್ಕೆ ಆಗಿದ್ದಾರೆ. ಶನಿವಾರ ನಡೆದ ಚುನಾವಣೆಯಲ್ಲಿ ಯುಪಿಎ ಅಭ್ಯರ್ಥಿ ಗೋಪಾಲಕೃಷ್ಣ ಗಾಂಧಿ ಅವರನ್ನು 272 ಮತಗಳ ಅಂತರದಿಂದ ಸೋಲಿಸುವ ಮೂಲಕ ಈ ಉಪರಾಷ್ಟ್ರಪತಿಯಾಗಿ ಆಯ್ಕೆ ಆಗಿದ್ದಾರೆ. ಒಟ್ಟು 785 ಮತದಾರರ ಪೈಕಿ ಬಿಜೆಪಿ ಇಬ್ಬರು ಸೇರಿ 14 ಮಂದಿ ಮತ ಹಾಕಿಲ್ಲ. ಶೇಕಡವಾರು ಲೆಕ್ಕದಲ್ಲಿ ನೋಡೋದಾದ್ರೆ 98.21ರಷ್ಟು ಮತದಾನ ಆಗಿತ್ತು. ಒಟ್ಟು ಮತಗಳ ಶೇ. 68 ರಷ್ಟು ಅಂದ್ರೆ 516 ಸಂಸದರು ಎನ್‍ಡಿಎ ಅಭ್ಯರ್ಥಿ ವೆಂಕಯ್ಯ ನಾಯ್ಡು ಪರ ಮತ ಚಲಾಯಿಸಿದ್ರೆ, ಶೇ. 32ರಷ್ಟು ಅಂದ್ರೆ 244 ಮಂದಿ ಸಂಸದರು ಯುಪಿಎ ಅಭ್ಯರ್ಥಿ ಗೋಪಾಲಕೃಷ್ಣ ಗಾಂಧಿ ಪರ ಮತ ಚಲಾಯಿಸಿದ್ದಾರೆ.
ಬೆಂಗಳೂರು: ಧಾರವಾಹಿ ಚಿತ್ರೀಕರಣದ ವೇಲೆ ನಟ ಭುವನ್ ಮತ್ತು ಬಿಗ್ ಬಾಸ್ ವಿನ್ನರ್ ಪ್ರಥಮ್ ಗಲಾಟೆ ಮಾಡಿಕೊಂಡು ಪೊಲೀಸ್ ಹಾಗೂ ಕೋರ್ಟ್ ಮೆಟ್ಟಿಲೇರಿದ ಬಳಿಕ ಇಂದು ನಟ ಸುದೀಪ್ ಮನೆಗೆ ತೆರಳಿದ್ದಾರೆ.
ಬೆಂಗಳೂರಿನ ಜೆಪಿ ನಗರದಲ್ಲಿರೋ ಸುದೀಪ್ ನಿವಾಸಕ್ಕೆ ಈ ಇಬ್ಬರು ಇಂದು ಬೇಳಗ್ಗೆ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಥಮ್, ಲಂಡನ್ ನಿಂದ ಚಿತ್ರೀಕರಣ ಮುಗಿಸಿ ಬೆಂಗಳೂರಿಗೆ ಬಂದಿದ್ದಾರೆ ಅಂತ ಗೊತ್ತಾಯ್ತು. ಹೀಗಾಗಿ ನಾನು ಅವರನ್ನು ಇಂದು ಮಾತನಾಡಿಸಿಕೋಮಡು ಹೋಗೋಣ ಅಂತ ಬಂದಿದ್ದೇನೆ. ಯಾಕಂದ್ರೆ ಸುದೀಪ್ ಸರ್ ಅವರು ಬಿಗ್ ಬಾಸ್ ಆದ ಬಳಿಕ ನನಗೆ ಮಾತನಾಡಲು ಸಿಗ್ತಾನೇ ಇಲ್ಲ. ಫುಲ್ ಬ್ಯುಸಿಯಾಗಿದ್ದಾರೆ. ಅಲ್ಲಿ ಇಲ್ಲಿ ಅಂತ ಶೂಟಿಂಗ್ ಗೆ ಹೋಗ್ತಾನೇ ಇರ್ತಾರೆ. ಅದೀಕೆ ಒಂದೂಚೂರು ಮಾತಾಡಿಸಿಕೊಂಡು ಹೋಗೋಣ ಅಂತ ಬಂದೆ ಅಂತ ಹೇಳಿದ್ದಾರೆ.
ನಿಮ್ಮಿಬ್ಬರ ಮಧ್ಯೆ ನಡೆದ ಗಲಾಟೆ ಸಂಬಂಧಿಸಿದಂತೆ ಸುದೀಪ್ ಮಾತುಕತೆಗೆ ಕರೆಸಿದ್ದಾರೆಂದು ತಿಳಿದುಬಂದಿದೆ. ಈ ವಿಚಾರವಾಗಿ ಮಾತನಾಡಿದ್ದಾರಾ ಎಂದು ಕೇಳಿದ್ದಕ್ಕೆ ನಿಮಗೆ ಮಾಹಿತಿ ಕೊಟ್ಟೋರು ಯಾರು ಅಂತಾ ಪ್ರಥಮ್ ಪ್ರಶ್ನಿಸಿದ್ದಾರೆ.
ಹಾಗಿದ್ರೆ ನೀವಿಬ್ಬರು ಇಂದು ನಟ ಸುದೀಪ್ ಅವರ ಮನೆಯಲ್ಲಿ ಸೇರಿದ್ರಿ. ಈ ವೇಳೆ ನಿಮ್ಮಿಬ್ಬರ ಬಗ್ಗೆ ಏನು ಮಾತುಕತೆ ನಡೆಯಿತು ಹಾಗೂ ಸುದೀಪ್ ಅವರು ಯಾವ ಅಭಿಪ್ರಾಯ ವ್ಯಕ್ತಪಡಿಸಿದ್ರು ಅಂತ ಮರು ಪ್ರಶ್ನಿಸಿದಾಗ, ಸುದೀಪ್ ಸರ್ ಹೇಳಿದ್ರು. ಶೋ ಚೆನ್ನಾಗಿ ಬರ್ತಾ ಇದೆ ಅಂತ ಕೇಳ್ಪಟ್ಟೆ. ಚೆನ್ನಾಗಿ ಮಾಡ್ತಾ ಇದ್ದೀರಿ ಅಂತಾ ಹೇಳಿದ್ರು. ಎಲ್ಲಾ ಒಳ್ಳೆದಾಗಲಿ. ಒಳ್ಳೆ ಸಿನಿಮಾಗಳನ್ನು ಆಯ್ಕೆ ಮಾಡಿ ಅಂತ ಒಂದಷ್ಟು ಮಾರ್ಗದರ್ಶನಗಳನ್ನು ನೀಡಿದ್ರು. ಇನ್ನೇನು ಹೆಚ್ಚು ಹೇಳಲ್ಲ. ಒಳ್ಳೆದು ಕೆಟ್ಟದ್ದನ್ನೆಲ್ಲಾ ಕಾಲ ನಿರ್ಣಯಿಸುತ್ತದೆ ಅಂತ ಹೇಳಿದ್ರು.
ಪ್ರಥಮ್ ಅವರು ಭುವನ್ ಅವರನ್ನು ಕಚ್ಚಿದ್ದು ನಿಜನಾ ಸುಳ್ಳಾ ಎಂಬುವುದಕ್ಕೆ ಉತ್ತರಿಸಿದ ಪ್ರಥಮ್, ಯಾವುದೇ ಒಂದು ಪ್ರಕರಣ ಕೋರ್ಟ್ ಅಂಗಳದಲ್ಲಿರುವಾಗ ಅದರ ಬಗ್ಗೆ ಚರ್ಚೆ ಮಾಡೋದು ಸರಿಯಲ್ಲ. ಎಲ್ಲರೂ ನನ್ನ ಪ್ರಚಾರ ಪ್ರಿಯ ಅಂತ ಹೇಳ್ತಿದ್ದಾರೆ. ಆದ್ರೆ ನಾನು 3 ದಿನದಿಂದ ಯಾವ ಮಾಧ್ಯಮದ ಎದುರು ಬಂದಿಲ್ಲ. ನಾನಾಯ್ತು ನನ್ನ ಕೆಲಸವಾಯ್ತು ಅಂತ ನನ್ನಷ್ಟಕ್ಕೆ ನಾನಿದ್ದೀನಿ. ಇನ್ನು ಒಪ್ಪಿಕೊಂಡಿರೋ ಸಿನಿಮಾಗಳ ಕಡೆ ಗಮನಹರಿಸುತ್ತಿದ್ದೇನೆ ಅಂದ್ರು.
ಒಟ್ಟಿನಲ್ಲಿ ನಾನು ಮಾನಸಿಕವಾಗಿ ಗೌರವಿಸುವ ಒಬ್ಬ ಶಕ್ತಿ ಸುದೀಪ್ ಸರ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದೇನೆ. ಅಲ್ಲಿ ಭುವನ್ ಬಂದಿದ್ದರು. ಚೆನ್ನಾಗಿಯೇ ಮಾತಾಡಿದ್ವಿ ಅಂತ ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ಹೇಳಿದ್ದಾರೆ.
ಆದ್ರೆ ನಟ ಸುದೀಪ್ ಭೇಟಿ ಬಳಿಕ, ಇದರ ಬಗ್ಗೆ ಮಾತನಾಡಬಾರದೆಂದು ಹೇಳಿದ್ದಾರೆ. ನನ್ನ ಕಡೆಯಿಂದ ಏನು ಮಾತನಾಡಬೇಕಿತ್ತೋ ಅದನ್ನ ಮಾತಾಡಿದ್ದೀನಿ. ಇನ್ನು ಅವನಿಗೆ ಬಿಟ್ಟ ವಿಚಾರ. ಸುದೀಪ್ ಸರ್ ಅವರನ್ನು ಗೌರವಿಸುತ್ತೇನೆ. ಆದುದರಿಂದ ಅವರ ಮಾತಿಗೆ ಬೆಲೆ ಕೊಟ್ಟು ನಾನು ಈ ಬಗ್ಗೆ ಪ್ರತಿಕ್ರಿಯಿಸಲ್ಲ ಅಂತ ಭುವನ್ ಗಲಾಟೆ ಸಂಧಾನದ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.
ನಟ ಭುವನ್ ಮತ್ತು ಪ್ರಥಮ್ ಅವರನ್ನು ತಮ್ಮ ನಿವಾಸಕ್ಕೆ ಬರ ಹೇಳಿದ ಸುದೀಪ್, ಇಬ್ಬರ ಅಭಿಪ್ರಾಯವನ್ನು ಕೇಳಿದ್ದಾರೆ. ಬಳಿಕ ನಿಮಗಿಬ್ಬರಿಗೂ ಜನರು ಒಂದು ಸ್ಥಾನ ಕೊಟ್ಟಿದ್ದಾರೆ. ಅದನ್ನು ಉಳಿಸಿಕೊಳ್ಳೋ ಪ್ರಯತ್ನ ಮಾಡಿ ಅಂತ ಬುದ್ಧಿವಾದ ಹೇಳಿ ಕಳುಹಿಸಿದ್ದಾರೆ ಅಂತ ಮೂಲಗಳಿಂದ ತಿಳಿದುಬಂದಿದೆ.
ಕಳೆದ ಭಾನುವಾರ ಧಾರವಾಹಿ ಚಿತ್ರೀಕರಣವೊಂದರ ವೇಳೆ ನಟ ಭುವನ್ ಮತ್ತು ಪ್ರಥಮ್ ಗಲಾಟೆ ನಡೆದಿದ್ದು, ಗಲಾಟೆ ತಾರಕಕ್ಕೇರಿ ಪ್ರಥಮ್, ಭುವನ್ ತೊಡೆಗೆ ಕಚ್ಚಿ ಗಾಯಗೊಳಿಸಿದ್ದರು. ಪ್ರಕರಣಕ್ಕೆ ಕುರಿತಂತೆ ಭುವನ್ ತಲಘಟ್ಟ ಪೊಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದಾದ ಮರುದಿನವೇ ಪ್ರಥಮ್ ಕೂಡ ಭುವನ್ ವಿರುದ್ಧ ದೂರು ದಾಖಲಿಸಿದ್ದರು. ಸದ್ಯ ಈ ಇಬ್ಬರ ಕಿತ್ತಾಟ ಕೋರ್ಟ್ ಮೆಟ್ಟಿಲೇರಿದೆ.
ಬೆಂಗಳೂರು: ಬಾವುಟದ ವಿಷಯ ಎಳೆದು ತಂದು ಕನ್ನಡಿಗರಿಗೆ ಕೇಂದ್ರದ ಮೇಲೆ ಕೋಪತರಿಸಲು ರಾಜ್ಯಸರ್ಕಾರ ಮುಂದಾಗುತ್ತಿದೆ ಎಂದು ನಟ ಜಗ್ಗೇಶ್ ವಾಗ್ದಾಳಿ ನಡೆಸಿದ್ದಾರೆ.
ಕರ್ನಾಟಕ ರಾಜ್ಯಕ್ಕೆ ಪ್ರತ್ಯೇಕ ನಾಡ ಧ್ವಜ ರೂಪಿಸಲು ರಾಜ್ಯ ಸರ್ಕಾರ ಮುಂದಾಗುತ್ತಿರುವುದನ್ನು ವಿರೋಧಿಸಿ ನಟ ಜಗ್ಗೇಶ್ ಟ್ವಿಟ್ಟರ್ ನಲ್ಲಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಟ್ವೀಟ್ ಮಾಡಿರೋ ನವರಸ ನಾಯಕ, ಇದು ಚುನಾವಣೆ ಹತ್ತಿರವಿರಬೇಕಾದರೆ ನಡೆಯುವ ವ್ಯೂಹ. ತಮ್ಮ ಸರ್ಕಾರದ ಹುಳುಕು ಮುಚ್ಚಲು ಹಾಗೂ ಜನರ ಗಮನ ಬೇರೆಡೆ ಸೆಳೆಯಲು ಬಾವುಟದ ಭಾವನೆಯನ್ನು ಬಳಸುತ್ತಿದ್ದಾರೆ. ಇದು ಚಾಣಕ್ಯ ತಂತ್ರದ ರಾಜಕೀಯ ದಾಳ ಅಂತ ಕಿಡಿಕಾರಿದ್ದಾರೆ.
ಕನ್ನಡದ ಬಾವುಟ ವಿಷಯತಂದು ಕನ್ನಡಿಗರಿಗೆ ಕೇಂದ್ರದಮೇಲೆ ಕೋಪತರಿಸುವ ಹುನ್ನಾರ ಭಾಸವಾಗುತ್ತಿದೆ!ಅದುಚುನಾವಣೆ ಹತ್ತಿರ ಇರಬೇಕಾದರೆ ನಡೆಯುವವ್ಯೊಹ! #BSYBJP#Bjpkarnataka
ತಾಯಿಚಾಮುಂಡಿ ನಾಡದೇವತೆ ಅವಳ ಹಣೆಯ ಕೆಂಪುಕುಂಕುಮ ಗಧ್ಧದ ಮೇಲಿನ ಹರಿಶಿನ ತೆಗೆದು ಮಾಡಿದ್ದೆ ಕನ್ನಡದ ದ್ವಜ "ಹಳದಿಕೆಂಪು"ಹೆಮ್ಮೆಯ ಕನ್ನಡಿಗರ ಬಾವುಟ!ಸಿರಿಗನ್ನಡಂಗೆಲ್ಗೆ. https://t.co/qf3SEthwOz
ರಾಮನಗರ: ಸ್ಯಾಂಡಲ್‍ವುಡ್‍ನ `ಯುಗಪುರುಷ’ ಚಿತ್ರದ ನಟ ಅರ್ಜುನ್ ದೇವ್ ಮೇಲೆ ದುಷ್ಕರ್ಮಿಗಳು ಹಲ್ಲೆಗೆ ಯತ್ನಸಿರುವ ಘಟನೆ ಇಂದು ರಾಮನಗರದಲ್ಲಿ ನಡೆದಿದೆ.
ಜಮೀನು ವ್ಯಾಜ್ಯ ಪ್ರಕರಣವೊಂದರ ಸಂಬಂಧ ನ್ಯಾಯಾಲಯದ ವಿಚಾರಣೆಗೆ ಹಾಜರಾಗಲು ಹೊರಟಿದ್ದ ಸಂದರ್ಭದಲ್ಲಿ ನಟನ ಮೇಲೆ ಹಲ್ಲೆ ನಡೆಸಲು ಯತ್ನಿಸಿದ್ದಾರೆ.
ರಾಮನಗರ ತಾಲೂಕಿನ ಮಾಯಗಾನಹಳ್ಳಿ ಸಮೀಪ ಪಿತ್ರಾರ್ಜಿತ ಆಸ್ತಿ ವ್ಯಾಜ್ಯ ಸಂಬಂಧ ಇಂದು ನ್ಯಾಯಾಲದ ವಿಚಾರಣೆಗೆ ನಟ ಅರ್ಜುನ್ ದೇವ್ ಬೆಂಗಳೂರಿನಿಂದ ರಾಮನಗರ ಜಿಲ್ಲಾ ಸತ್ರ ನ್ಯಾಯಾಲಯಕ್ಕೆ ಹೊರಟಿದ್ರು. ಬೆಂಗಳೂರು-ಮೈಸೂರು ಹೆದ್ದಾರಿಯ ಎಸ್‍ಬಿಐ ಬ್ಯಾಂಕ್ ಪಕ್ಕದ ಕೋರ್ಟ್‍ನ ಮುಂಭಾಗದ ಗೇಟ್ ಸಮೀಪ ಕಾರು ನಿಲ್ಲಿಸುತ್ತಿದ್ದಂತೆ ಎರಡು ಬೈಕ್‍ಗಳಲ್ಲಿ ಬಂದ ನಾಲ್ವರು ದುಷ್ಕರ್ಮಿಗಳ ತಂಡ ರಾಡ್‍ನಿಂದ ಹಲ್ಲೆಗೆ ಮುಂದಾಗಿದ್ದಾರೆ.
ಕಾರಿನ ಮುಂಭಾಗದ ಗ್ಲಾಸ್‍ಗೆ ರಾಡ್‍ನಿಂದ ಹೊಡೆದಿದ್ದು ಗ್ಲಾಸ್ ಜಖಂಗೊಂಡಿದೆ. ಈ ವೇಳೆ ಸ್ಥಳದಲ್ಲಿದ್ದ ಸಾರ್ವಜನಿಕರು ದುಷ್ಕರ್ಮಿಗಳನ್ನು ಹಿಡಿಯಲು ಮುಂದಾದಾಗ ಸ್ಥಳದಿಂದ ಪರಾರಿಯಾಗಿದ್ದಾರೆ. ಮತ್ತೋರ್ವ ದುಷ್ಕರ್ಮಿ ಲಾಂಗ್ ಹಿಡಿದಿದ್ದ ಎನ್ನಲಾಗ್ತಿದೆ.
ಘಟನೆ ಸಂಬಂಧ ರಾಮನಗರದ ಐಜೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ನಟ ಅರ್ಜುನ್ ದೇವ್ ಅವರ ವಿಚಾರಣೆ ಮಾಡ್ತಿದ್ದಾರೆ.