Tag: actor

  • ನಿರ್ದೇಶಕ, ನಟ ಸತ್ಯ ನಿಧನಕ್ಕೆ ಕಂಬನಿ ಮಿಡಿದ ಚಾಲೆಂಜಿಂಗ್ ಸ್ಟಾರ್ ದರ್ಶನ್

    ನಿರ್ದೇಶಕ, ನಟ ಸತ್ಯ ನಿಧನಕ್ಕೆ ಕಂಬನಿ ಮಿಡಿದ ಚಾಲೆಂಜಿಂಗ್ ಸ್ಟಾರ್ ದರ್ಶನ್

    ಬೆಂಗಳೂರು: ನಿರ್ದೇಶಕ, ನಟ ಪಿ.ಎನ್ ಸತ್ಯ ನಿಧನಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಂಬನಿ ಮಿಡಿದಿದ್ದಾರೆ.

    ಕಳೆದ ಒಂದು ವರ್ಷದಿಂದ ಕ್ಯಾನ್ಸರ್‍ನಿಂದ ಬಳಲುತ್ತಿದ್ದ ಸತ್ಯ ಚಿಕಿತ್ಸೆ ಫಲಿಸದೆ ನಾಗರಬಾವಿಯ ಖಾಸಗಿ ಆಸ್ಪತ್ರೆಯಲ್ಲಿ ಶನಿವಾರ ಸಂಜೆ ಸುಮಾರು 7.30ಕ್ಕೆ ವಿಧಿವಶರಾಗಿದ್ದಾರೆ. ಇದನ್ನೂ ಓದಿ: ಮೆಜೆಸ್ಟಿಕ್ ಸಿನಿಮಾ ನಿರ್ದೇಶಕ ಪಿ.ಎನ್.ಸತ್ಯ ವಿಧಿವಶ

    ಸದ್ಯ ಬಸವೇಶ್ವರನಗರದ ಸೋದರಿ ಮನೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಇಂದು ಸಂಜೆ ಅಂತ್ಯಕ್ರಿಯೆ ನಡೆಯುವ ಸಾಧ್ಯತೆ ಇದೆ. ದರ್ಶನ್‍ಗೆ ನಾಯಕ ನಟ ಇಮೇಜ್ ತಂದು ಕೊಟ್ಟಿದ್ದೇ ಈ ಸತ್ಯ.

    ಈ ಬಗ್ಗೆ ದರ್ಶನ್ ಕಂಬನಿ ಮಿಡಿದಿದ್ದು, “ನನ್ನ ಆಪ್ತ ಸ್ನೇಹಿತರಲ್ಲೊಬ್ಬರು, ನನ್ನ `ಮೆಜೆಸ್ಟಿಕ್’ ಚಿತ್ರದ ನಿರ್ದೇಶಕರು ಪಿ.ಎನ್ ಸತ್ಯ ಇಂದು ನಮ್ಮಿಂದ ದೈಹಿಕವಾಗಿ ದೂರವಾಗಿದ್ದಾರೆ. ಈ ನಷ್ಟವನ್ನು ಸಹಿಸಿಕೊಳ್ಳುವ ಶಕ್ತಿ ದೇವರು ಅವರ ಕುಟುಂಬಕ್ಕೆ ನೀಡಲಿ. ಸತ್ಯ ಅವರ ಆತ್ಮಕ್ಕೆ ಶಾಂತಿ ಸಿಗಲಿ” ಎಂದು ಟ್ವೀಟ್ ಮಾಡಿದ್ದಾರೆ.

    ಮೆಜೆಸ್ಟಿಕ್, ಡಾನ್, ದಾಸ, ಶಾಸ್ತ್ರೀ, ಗೂಳಿ ಸೇರಿದಂತೆ 16 ಚಿತ್ರಗಳನ್ನ ನಿರ್ದೇಶಿಸಿದ್ದ ಸತ್ಯ ಅವರ ಕೊನೆಯ ಚಿತ್ರ ಮರಿ ಟೈಗರ್ ಆಗಿತ್ತು.

  • ಮೋದಿಯನ್ನು ಸ್ವಾಗತ ಮಾಡಲು ಪುನೀತ್‍ಗೆ ಸಹಾಯ ಮಾಡಿದ್ರು ಸ್ಯಾಂಡಲ್‍ವುಡ್ ನಟ!

    ಮೋದಿಯನ್ನು ಸ್ವಾಗತ ಮಾಡಲು ಪುನೀತ್‍ಗೆ ಸಹಾಯ ಮಾಡಿದ್ರು ಸ್ಯಾಂಡಲ್‍ವುಡ್ ನಟ!

    ಬೆಂಗಳೂರು: ವಿಧಾನಸಭೆ ಚುನಾವಣಾ ಪ್ರಚಾರಕ್ಕೆ ಗುರುವಾರ ನಗರದ ಹೆಚ್‍ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರನ್ನು ನಟ ಪುನೀತ್ ರಾಜ್‍ಕುಮಾರ್ ದಂಪತಿ ಸ್ವಾಗತಿಸಿದರು.

    ನರೇಂದ್ರ ಮೋದಿ ಅವರನ್ನು ಸ್ವಾಗತಿಸಲು ಪುನೀತ್ ರಾಜ್‍ಕುಮಾರ್ ಅವರಿಗೆ ಸ್ಯಾಂಡಲ್‍ವುಡ್ ನವರಸನಾಯಕ ಜಗ್ಗೇಶ್ ಅವರು ಸಹಾಯ ಮಾಡಿದ್ದಾರೆ. ಈ ಬಗ್ಗೆ ನಟ ಜಗ್ಗೇಶ್ ತಮ್ಮ ಟ್ವಿಟ್ಟರಿನಲ್ಲಿ ಟ್ವೀಟ್ ಮಾಡಿದ್ದಾರೆ.

    “ನಾನೇ ಈ ಭೇಟಿಗೆ ವ್ಯವಸ್ಥೆ ಮಾಡಿಸಿದ್ದು. ಮಾರ್ಚ್ 17 ಹುಟ್ಟಿದ ನಾವಿಬ್ಬರೂ ಒಂದೇ ದಿನ ಭೇಟಿ ಮಾಡುವ ಉದ್ದೇಶ. ಅಪ್ಪು ನಮ್ಮ ಯಜಮಾನರ ಮುದ್ದಿನ ಮಗ. ನನ್ನ ನೆಚ್ಚಿನ ಸಹೋದರ” ಎಂದು ನಟ ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.

    ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿದ ಪುನೀತ್ ರಾಜ್‍ಕುಮಾರ್ ದಂಪತಿ ಅವರನ್ನು ಸ್ವಾಗತ ಕೋರಿ ಡಾ. ರಾಜಕುಮಾರ್ ಆತ್ಮಚರಿತ್ರೆಯನ್ನು ಕಾಣಿಕೆಯಾಗಿ ನೀಡಿದ್ದರು. ಬಳಿಕ ಪುನೀತ್ ರಾಜ್‍ಕುಮಾರ್, ಮೋದಿ ಅವರನ್ನು ಭೇಟಿ ಮಾಡಿದ ಫೋಟೋಗಳನ್ನು ತಮ್ಮ ಫೇಸ್‍ಬುಕ್ ನಲ್ಲಿ ಪೋಸ್ಟ್ ಮಾಡಿದ್ದರು. ಈ ಫೋಟೋಗಳನ್ನು ಅಭಿಮಾನಿಗಳು ಕೂಡ ಶೇರ್ ಮಾಡಿ `ಪವರ್ ಮೀಟ್ಸ್ ಪವರ್’ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಮೋದಿಗೆ ರಾಜ್ ಆತ್ಮ ಚರಿತ್ರೆಯನ್ನು ನೀಡಿದ ಪುನೀತ್ ದಂಪತಿ

  • ಬಿಜೆಪಿ, ಜೆಡಿಎಸ್ ಪರ ಪ್ರಚಾರಕ್ಕಿಳಿದು ಮತದಾರರ ಗೊಂದಲಕ್ಕೆ ತೆರೆ ಎಳೆದ ಯಶ್

    ಬಿಜೆಪಿ, ಜೆಡಿಎಸ್ ಪರ ಪ್ರಚಾರಕ್ಕಿಳಿದು ಮತದಾರರ ಗೊಂದಲಕ್ಕೆ ತೆರೆ ಎಳೆದ ಯಶ್

    ಹಾಸನ: ಉತ್ತಮ ಕೆಲಸ ಮಾಡುವ ವ್ಯಕ್ತಿಗಳು ಮುಖ್ಯ. ಅದಕ್ಕಾಗಿ ಬಿಜೆಪಿ ಹಾಗೂ ಜೆಡಿಎಸ್ ಅಭ್ಯರ್ಥಿಗಳ ಪ್ರಚಾರ ಮಾಡುತ್ತಿದ್ದೇನೆ. ಯಾರು ಜನಪರ ಕೆಲಸ ಮಾಡುತ್ತಾರೋ ಅವರಿಗೆ ಮತ ಹಾಕಿ ಅಂತ ನಟ ಯಶ್ ಹೇಳಿದ್ದಾರೆ.

    ನಾನು ವಿವಿಧ ಪಕ್ಷಗಳ ಅಭ್ಯರ್ಥಿಗಳ ಪರ ಪ್ರಚಾರ ಮಾಡುವುದರಿಂದ ಮತದಾರರಿಗೆ ಗೊಂದಲವಾಗಿರಬಹುದೆಂದು ಸಮರ್ಥನೆ ನೀಡಿದ ಅವರು, ನನ್ನ ಪ್ರಚಾರ ಯಾವುದೇ ಪಕ್ಷದ ಪರ ಅಲ್ಲ. ನನಗೆ ಇಷ್ಟವಾಗುವ ವ್ಯಕ್ತಿಗಳ ಪರ ಮತಯಾಚನೆ ಮಾಡುವೆ. ನಾನು ರಾಜ್ಯದ ಎಲ್ಲಿ ಬೇಕಾದ್ರೂ ಚುನಾವಣೆಗೆ ನಿಲ್ಲಬಹುದು. ಆದರೆ ಆ ಬಗ್ಗೆ ನಾನು ಚಿಂತಿಸಿಲ್ಲ. ರಾಜಕೀಯ ಎಂದರೇನು ಎಂದು ಮರು ಪ್ರಶ್ನೆ ಹಾಕಿದ್ರು. ಇದನ್ನೂ ಓದಿ: ಬಿಜೆಪಿ, ಜೆಡಿಎಸ್ ಅಭ್ಯರ್ಥಿ ಪರ ಪ್ರಚಾರ ಮಾಡ್ತಿರೋದು ಯಾಕೆ: ರಾಕಿಂಗ್ ಸ್ಟಾರ್ ಹೇಳ್ತಾರೆ ಓದಿ

    ನನ್ನ ಪ್ರಚಾರದಿಂದ ಅತಂತ್ರ ವಿಧಾನ ಸಭೆ ಸೃಷ್ಟಿಯಾಗದು. ಹೆಚ್ಚು ಸ್ಥಾನ ಪಡೆಯುವ ಪಕ್ಷ ಸರ್ಕಾರ ರಚನೆ ಮಾಡಲಿ. ನನಗೆ ಗೊಂದಲ, ಸಿದ್ಧಾಂತಕ್ಕಿಂತ ಜನ ಮುಖ್ಯ, ವ್ಯಕ್ತಿ ಮುಖ್ಯ. ಇಷ್ಟು ವರ್ಷವಾದ್ರೂ ಜನರು ಮೂಲಭೂತ ಸೌಕರ್ಯ ಸಮಸ್ಯೆ ಎದುರಿಸುತ್ತಿದ್ದಾರೆ. ಇದು ಸೇರಿ ಶಿಕ್ಷಣ, ಆರೋಗ್ಯ, ಅಭಿವೃದ್ಧಿಗೆ ಒತ್ತು ನೀಡುವವರು ಸಿಎಂ ಆಗಬೇಕು ಅಂದ್ರು. ಇದನ್ನೂ ಓದಿ: ಎರಡು ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ಮಾಡಲಿದ್ದಾರೆ ರಾಕಿಂಗ್ ಸ್ಟಾರ್!

    ಜಾತಿ ಎಲ್ಲಾ ಕಡೆ ಇರುವಾಗ, ರಾಜಕೀಯದಲ್ಲಿ ಜಾತಿ ರಾಜಕೀಯ ಇರುವ ಬಗ್ಗೆ ನಾನು ಏನನ್ನೂ ಹೇಳಲಾರೆ ಅಂತ ಹೇಳಿದ್ರು. ಇಂದು ಹಾಸನದ ವಿವಿಧೆಡೆ ಜೆಡಿಎಸ್, ಬಿಜೆಪಿ ಅಭ್ಯರ್ಥಿಗಳ ಪರ ಯಶ್ ಕ್ಯಾಂಪೇನ್ ಮಾಡಲಿದ್ದಾರೆ.

  • ಸಿನಿಮಾ ನಟ-ನಟಿಯರಿಂದ ಕೈ ಅಭ್ಯರ್ಥಿಯ ಪರ ಪ್ರಚಾರ

    ಸಿನಿಮಾ ನಟ-ನಟಿಯರಿಂದ ಕೈ ಅಭ್ಯರ್ಥಿಯ ಪರ ಪ್ರಚಾರ

    ರಾಮನಗರ: ಕರ್ನಾಟಕ ವಿಧಾನ ಸಭಾ ಚುನಾವಣೆ ದಿನೆದಿನೇ ರಂಗೇರುತ್ತಿದ್ದು, ಬೊಂಬೆನಗರಿ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಬುಧವಾರ  ಸ್ಯಾಂಡಲ್‍ ವುಡ್‍ನ ನಟ-ನಟಿಯರು ಕಾಂಗ್ರೇಸ್ ಅಭ್ಯರ್ಥಿ ಎಚ್.ಎಂ ರೇವಣ್ಣ ಪರ ರೋಡ್ ಶೋ ನಡೆಸಿ ಮತಯಾಚನೆ ನಡೆಸಿದ್ದಾರೆ.

    ನಟರಾದ ಅನೂಪ್ ರೇವಣ್ಣ, ಬಿಗ್ ಬಾಸ್ ವಿನ್ನರ್ ಪ್ರಥಮ್, ಕೋಟೆ ಪ್ರಭಾಕರ್, ನಟಿಯರಾದ ಮಯೂರಿ, ರೂಪಿಕಾ ಹಾಗೂ ನಿರ್ದೇಶಕ ಆರ್. ಚಂದ್ರ ಚನ್ನಪಟ್ಟಣದಲ್ಲಿ ರೋಡ್ ಶೋ ನಡೆಸಿ ರೇವಣ್ಣ ಪರ ಮತಯಾಚನೆ ನಡೆಸಿದ್ದಾರೆ.

    ನಗರದ ಮಂಗಳವಾರ ಪೇಟೆಯಿಂದ ಭೈರಾಪಟ್ಟಣದವರೆಗೆ ರೋಡ್ ಶೋ ನಡೆಸಿದ್ದು, ಇದೇ ವೇಳೆ ಮಾತನಾಡಿದ ಪ್ರಥಮ್, ಚನ್ನಪಟ್ಟಣದಲ್ಲಿ ಸತತವಾಗಿ 20 ವರ್ಷಗಳಿಂದ ಯೋಗೇಶ್ವರ್ ಆಯ್ಕೆಯಾಗುತ್ತಲೇ ಬಂದಿದ್ದಾರೆ. ಈ ಬಾರಿ ಅವರು ರಾಜಕೀಯದಿಂದ ವಿಶ್ರಾಂತಿ ಪಡೆಯಲಿ, ಇನ್ನೂ ಎಚ್.ಡಿ ಕುಮಾರಸ್ವಾಮಿಯವರು ಎರಡೂ ಕಡೆ ಸ್ಪರ್ಧಿಸಿರುವುದರಿಂದ ಹಣ ಪೋಲಾಗಲಿದೆ. ಈ ಬಾರಿ ಎಚ್.ಎಂ ರೇವಣ್ಣಗೆ ಒಂದು ಅವಕಾಶ ಕಲ್ಪಿಸುವಂತೆ ಮನವಿ ಮಾಡಿದ್ದಾರೆ.

    ಇನ್ನು ಈ ಬಗ್ಗೆ ಮಾತನಾಡಿದ ನಟಿ ಮಯೂರಿ ಕೂಡಾ ರೇವಣ್ಣರನ್ನ ಬೆಂಬಲಿಸುವಂತೆ ಮನವಿ ಮಾಡಿದ್ದಾರೆ.

  • ಟಾಲಿವುಡ್ ಯುವ ನಟನ ತಂದೆಗೆ 3 ವರ್ಷ ಜೈಲು!

    ಟಾಲಿವುಡ್ ಯುವ ನಟನ ತಂದೆಗೆ 3 ವರ್ಷ ಜೈಲು!

    ಹೈದರಾಬಾದ್: ಟಾಲಿವುಡ್ ಯುವ ನಾಯಕ ನಟರಾಗಿ ಹೆಸರು ಪಡೆದಿರುವ ನಟ ರಾಜ್ ತರುಣ್ ಅವರ ತಂದೆಗೆ ವಿಶಾಖಪಟ್ಟಣ ಸ್ಥಳೀಯ ನ್ಯಾಯಾಲಯ 3 ವರ್ಷ ಜೈಲು ಶಿಕ್ಷೆ ವಿಧಿಸಿದೆ.

    ನಟ ರಾಜ್ ತರುಣ್ ಅವರ ತಂದೆ ನಿಡಮರ್ತಿ ಬಸವರಾಜು ನಕಲಿ ಚಿನ್ನವನ್ನು ಅಡವಿಟ್ಟು ಸಾಲ ಪಡೆದ ಆರೋಪದ ಮೇಲೆ ಅವರಿಗೆ ನ್ಯಾಯಾಲಯ 3 ವರ್ಷ ಜೈಲು ಹಾಗೂ 20 ಸಾವಿರ ರೂ. ದಂಡವನ್ನು ವಿಧಿಸಿದೆ.

    ಏನಿದು ಪ್ರಕರಣ?: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಕಾರ್ಯನಿರ್ವಹಿಸುತ್ತಿದ್ದ ನಿಡಮರ್ತಿ ಬಸವರಾಜು 2013 ರಲ್ಲಿ ತಮ್ಮ ಪತ್ನಿ ರಾಜ್ಯಲಕ್ಷ್ಮಿ ಸೇರಿದಂತೆ ಹಲವರ ಹೆಸರಿನಲ್ಲಿ ನಕಲಿ ಚಿನ್ನ ಅಡವಿಟ್ಟು ಸಾಲ ಪಡೆದಿದ್ದಾರೆ.

    ಬ್ಯಾಂಕ್ ಅಧಿಕಾರಿಗಳು ವಾರ್ಷಿಕ ಲೆಕ್ಕ ಪರಿಶೀಲನೆ ನಡೆಸಿದ ವೇಳೆ ಈ ಕುರಿತು ಅನುಮಾನಗೊಂಡು ತನಿಖೆ ನಡೆಸಿದ್ದು, ಬಳಿಕ ಬಸವರಾಜು ನಡೆಸಿದ ಕೃತ್ಯ ಬೆಳಕಿಗೆ ಬಂದಿದೆ. ಸುಮಾರು 9.85 ಲಕ್ಷ ರೂ. ಹಣವನ್ನು ನಕಲಿ ಚಿನ್ನವನ್ನು ಅಡವಿಟ್ಟು ಸಾಲ ಪಡೆದಿದ್ದಾರೆ. ಬ್ಯಾಂಕ್ ಅಧಿಕಾರಿಗಳು ಘಟನೆ ಕುರಿತು ದೂರು ನೀಡಿದ್ದರಿಂದ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ನಿಡಮರ್ತಿ ಬಸವರಾಜುಗೆ ಶಿಕ್ಷೆ ನೀಡಿ ತೀರ್ಪು ಪ್ರಕಟಿಸಿದೆ.

  • ಇಂತಹವರಿಗೆ ಮತ ಹಾಕಿ ಎಂದು ಹೇಳಲ್ಲ, ಆದ್ರೆ ಬಿಜೆಪಿಗೆ ಮತ ಹಾಕಬೇಡಿ: ಪ್ರಕಾಶ್ ರೈ

    ಇಂತಹವರಿಗೆ ಮತ ಹಾಕಿ ಎಂದು ಹೇಳಲ್ಲ, ಆದ್ರೆ ಬಿಜೆಪಿಗೆ ಮತ ಹಾಕಬೇಡಿ: ಪ್ರಕಾಶ್ ರೈ

    ವಿಜಯಪುರ: ಚುನಾವಣೆಯಲ್ಲಿ ನಾನು ಇಂತಹವರಿಗೆ ಮತ ಹಾಕಿ ಎಂದು ಹೇಳಲ್ಲ. ಆದರೆ ಬಿಜೆಪಿಗೆ ಮತ ಹಾಕಬೇಡಿ ಎಂದು ಹೇಳುತ್ತೇನೆ ಎಂದು ಬಹುಭಾಷಾ ನಟ ಪ್ರಕಾಶ್ ರೈ ಹೇಳಿದ್ದಾರೆ.

    ಜಿಲ್ಲೆಯಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಕಾಂಗ್ರೆಸ್ ಮುಕ್ತ ಮಾಡಿ ಎಂದು ಹೇಳುತ್ತಾರೆ. ಹೀಗೆ ಹೇಳಲು ಇವರು ಯಾರು ಎಂದು ಪ್ರಶ್ನಿಸಿದ ರೈ, ಬಿಜೆಪಿ ಚುನಾವಣೆಯಲ್ಲಿ ಪ್ರಚಂಡ ಬಹುಮತದಿಂದ ಗೆದ್ದರೆ ನನ್ನ ಹೋರಾಟ ಇನ್ನೂ ತೀವ್ರಗೊಳಿಸುತ್ತೇನೆ ಎಂದು ಹೇಳಿದರು.

    ರಾಜಕೀಯ ಪ್ರವೇಶ ಇಲ್ಲ: ಇದೇ ವೇಳೆ ನಾನು ರಾಜಕೀಯಕ್ಕೆ ಬರೋದಿಲ್ಲ ಎಂದು ಸ್ಪಷ್ಟಪಡಿಸಿದ ರೈ, ನನಗೆ ರಾಜಕೀಯ ಬೇಡ. ನಾನು ಹಲವು ಭಾಷೆಗಳಲ್ಲಿ ಸಿನಿಮಾ ಮಾಡುತ್ತೇನೆ. ಸಾಕಷ್ಟು ಹಣ, ಹೆಸರು ಮಾಡಿದ್ದೇನೆ. ಸದ್ಯ ಪ್ರಜೆಗಳಿಗೆ ಧ್ವನಿ ಇಲ್ಲ. ರಾಜಕೀಯ ಬಿಟ್ಟು ಅವರ ಧ್ವನಿಯಾಗಬೇಕಿದೆ ಎಂದು ಅಭಿಪ್ರಾಯ ಪಟ್ಟರು.

    ಕಾವೇರಿ ಒಂದು ಜೀವನದಿ, ಒಂದೇ ದೇಶದಲ್ಲಿರುವ ಎರಡು ರಾಜ್ಯಗಳು ಸರಿಯಾಗಿ ಹಂಚಿಕೊಳ್ಳಲು ಆಗುತ್ತಿಲ್ಲ. ಎಲ್ಲಾ ರಾಜಕೀಯ ಪಕ್ಷಗಳು, ಜನಪ್ರತಿನಿಧಿಗಳಿಗೆ ಸಮಸ್ಯೆ ಬಗೆಹರಿಯುವುದು ಬೇಕಾಗಿಲ್ಲ. ಕಾವೇರಿ ನದಿಯ ಮೂಲವನ್ನು ರಕ್ಷಿಸುವ ಕೆಲಸ ಯಾರೂ ಮಾಡುತ್ತಿಲ್ಲ. ಕಾವೇರಿಯ ಕಾಡನ್ನು ರಕ್ಷಿಸುತ್ತಿಲ್ಲ, ಕಾವೇರಿ ತಟದಲ್ಲಿ ನಡೆಯುವ ಮರಳುಗಾರಿಕೆ ನಿಲ್ಲಿಸುವ ಕೆಲಸ ಯಾರೂ ಮಾಡುತ್ತಿಲ್ಲ ಎಂದು ಹೇಳಿ ಎಲ್ಲಾ ರಾಜಕೀಯ ಪಕ್ಷಗಳ ವಿರುದ್ಧ ಹರಿಹಾಯ್ದರು.

    ಕಾವೇರಿಯ ವಿಚಾರವಾಗಿ ತಜ್ಞರು ಚರ್ಚಿಸ ಬೇಕಾದ ವಿಚಾರವನ್ನು ಇಂದು ಯಾರೂ ಬೇಕಾದರು ಮಾತನಾಡುವಂತಾಗಿದೆ. ಕಾವೇರಿ ನದಿಯ ವಿಚಾರವಾಗಿ ತಜ್ಞರೊಂದಿಗೆ ಮಾತನಾಡಿದ್ದೇನೆ. ನದಿಯ ಪಾತ್ರ ಎಷ್ಟಿದೆ. ಎಷ್ಟು ಟಿಎಂಸಿ ನೀರು ಸಿಗುತ್ತೆ. ಟಿಎಂಸಿ ಅಂದರೆ ಏನು? ಎಲ್ಲದರ ಬಗ್ಗೆ ಒಂದೂವರೆ ತಿಂಗಳೊಳಗೆ 20 ನಿಮಿಷದ ಸಾಕ್ಷ್ಯ ಚಿತ್ರವನ್ನು ಮಾಡಿಕೊಡಿ ಎಂದು ಹೇಳಿರುವುದಾಗಿ ತಿಳಿಸಿದ್ದೇನೆ. ನದಿ ಜೋಡಣೆ ಹಾಗೂ ನದಿ ತಿರುವು ಯೋಜನೆಗಳ ಬಗ್ಗೆ ಸಾಕಷ್ಟು ಭಿನ್ನಾಭಿಪ್ರಾಯಗಳಿವೆ ಎಂದರು. ಅಲ್ಲದೇ ಪರ ಭಾಷಾ ಸಿನಿಮಾಗಳನ್ನು ಬ್ಯಾನ್ ಮಾಡಲು ಸಾಧ್ಯವಿಲ್ಲ ಎಂದು ನಟ ಪ್ರಕಾಶ್ ರೈ ಹೇಳಿದರು.

    ಅನಂತಕುಮಾರ್ ಹೆಗ್ಡೆ ವಿರುದ್ಧ ಕಿಡಿ: ಸಂವಿಧಾನವನ್ನೇ ಬದಲಾಯಿಸುತ್ತೇನೆ ಎಂದು ಸಚಿವರು ಹೇಳಿಕೆ ನೀಡಿದ್ದಾರೆ. ಆ ವೇಳೆ ಸಂವಿಧಾನ ಬದಲಾವಣೆ ಮಾಡಬೇಡಿ ಎಂದರೆ ತಂದೆ ತಾಯಿ, ರಕ್ತ, ಹುಟ್ಟಿನ ಬಗ್ಗೆ ಮಾತನಾಡಿದರೆ ನೋವು ಆಗುವುದಿಲ್ವಾ ಎಂದು ಪರೋಕ್ಷವಾಗಿ ಕೇಂದ್ರ ಸಚಿವ ಅನಂತಕುಮಾರ ಹೆಗ್ಡೆ ವಿರುದ್ಧ ವಾಗ್ದಾಳಿ ನಡೆಸಿದರು. ಅಲ್ಲದೆ ಪ್ರಧಾನಿ ಮೋದಿ, ಅಮಿತ್ ಶಾ, ಅನಂತಕುಮಾರ ಹೆಗ್ಡೆ ಅಂಥವರನ್ನು ನಾನು ವಿರೋಧಿಸುತ್ತೇನೆ. ನಾನು ಧರ್ಮದ ಬಗ್ಗೆ ಮಾತಾಡುತ್ತಿಲ್ಲ. ಇಂತಹ ರಾಕ್ಷಸರ ಬಗ್ಗೆ ಮಾತನಾಡುತ್ತೇನೆ ಎಂದು ಕಿಡಿ ಕಾರಿದರು.

    ಇತಂಹವರ ಬಗ್ಗೆ ಮಾತನಾಡಿದರೆ ನನ್ನನ್ನು ಹಿಂದೂ ವಿರೋಧಿ ಎಂದು ಏಕೆ ತಿಳಿದುಕೊಳುತ್ತೀರಿ. ಅನಂತಕುಮಾರ್ ಅವರೇ ಧೈರ್ಯ ಇದ್ದರೆ ಎದುರಿಗೆ ಬನ್ನಿ. ಒಂದೇ ವೇದಿಕೆಯಲ್ಲಿ ಎದುರು ಬದುರು ಕುಳಿತು ಚರ್ಚೆ ಮಾಡೋಣ ಎಂದು ಸವಾಲು ಎಸೆದರು. ಇದೇ ವೇಳೆ ಜಿಎಸ್‍ಟಿ ಬಗ್ಗೆಯೂ ಕಿಡಿಕಾರಿದ ಅವರು, ಕೈಮಗ್ಗಕ್ಕೆ ಏಕೆ 15% ತೆರಿಗೆ ವಿಧಿಸಿದ್ದೀರಾ ಎಂದು ಮೋದಿ ಅವರನ್ನು ಪ್ರಶ್ನಿಸಿದರು.

    ಅಮಿತ್ ಶಾ ವಿರುದ್ಧ ವಾಗ್ದಾಳಿ: ತಮ್ಮ ಪಕ್ಷದ ವಿರುದ್ಧ ನಾಯಿ, ಬೆಕ್ಕು, ಹಾವುಗಳು ಎಲ್ಲರೂ ಒಂದಾಗಿದ್ದಾರೆ ಎಂದು ದೇಶದ ಪ್ರಮುಖ ಪಕ್ಷದ ಅಧ್ಯಕ್ಷ ಸ್ಥಾನದಲ್ಲಿರುವವರು ಹೇಳುತ್ತಾರೆ. ಮೋದಿ ಹಾಗೂ ಅಮಿತ್ ಶಾ ಇಬ್ಬರು ಮಾತ್ರ ಮನುಷ್ಯರಾ? ಮೋದಿ ಎನ್ನುವ ಪ್ರಳಯ ಬಂದಿದೆ ಎಂದು ಅವರೇ ಹೇಳುತ್ತಾರೆ. ಪ್ರಳಯ ಬಂದರೆ ಎಲ್ಲಾ ಪ್ರಾಣಿಗಳು ಕೊಚ್ಚಿ ಹೋಗಬಾರದು ಎಂದು ಎಲ್ಲರೂ ಮೇಲೆ ಬರುತ್ತಾರೆ. ಜೀವಿಸುವ ಆಸೆ ಹಾಗೂ ಕನಸುಗಳು ಇರುವ ಪ್ರತಿಯೊಬ್ಬರು ಮೇಲೆ ಎದ್ದು ಬರುತ್ತಾರೆ ಎಂದು ಟಾಂಗ್ ನೀಡಿದರು.

  • ಕಾವೇರಿ ನೀರಿನ ಕುರಿತು ಮನ ಮಿಡಿಯುವ ಮಾತನ್ನಾಡಿದ ಸಿಂಬು

    ಕಾವೇರಿ ನೀರಿನ ಕುರಿತು ಮನ ಮಿಡಿಯುವ ಮಾತನ್ನಾಡಿದ ಸಿಂಬು

    ಚೆನ್ನೈ: ತಮಿಳುನಾಡು ಸರ್ಕಾರ ಕಾವೇರಿ ನದಿ ನಿರ್ವಹಣಾ ಮಂಡಲಿ ರಚನೆ ಕುರಿತು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ಹಲವು ತಮಿಳು ಸಿನಿಮಾ ನಟರು ಕಾವೇರಿ ಹೋರಾಟಕ್ಕೆ ಬೆಂಬಲ ನೀಡಿದ್ದಾರೆ. ಆದರೆ ತಮಿಳು ನಟ ಸಿಂಬು ಇತರರಿಗೆ ಭಿನ್ನವಾಗಿ ಶಾಂತಿ ಹಾಗೂ ಪ್ರೀತಿಯಿಂದ ನೀರನ್ನು ಪಡೆಯೋಣ ಎಂದಿದ್ದಾರೆ.

    ಸದ್ಯ ಕಾವೇರಿ ವಿವಾದ ಕುರಿತು ಸಿಂಬು ಮಾಡಿರುವ ಭಾಷಣದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಭಾಷಣದಲ್ಲಿ ಕಾವೇರಿಗಾಗಿ ರಾಜಕೀಯ ಬಿಟ್ಟು ಮಾನವೀಯತೆ ದೃಷ್ಟಿಯಿಂದ ಬಗೆಹರಿಸೋಣ, ನಾವೆಲ್ಲಾ ಕರ್ನಾಟಕದ ತಾಯಂದಿರು, ಅಣ್ಣಂದಿರನ್ನ ಪ್ರಾರ್ಥಿಸೋಣ. ಯಾರ ಮಾತೋ ಕೇಳಿ ನೀವು ಕೆಣಕುವ ಮಾತುಗಳನ್ನಾಡಿದಲ್ಲಿ ಕರ್ನಾಟಕದವರು ನೀರೇ ಕೊಡಲ್ಲ ಎಂದರೆ ಏನು ಮಾಡುತ್ತೀರಿ ಎಂದು ಪ್ರಶ್ನಿಸಿದ್ದಾರೆ.

    ಈ ರೀತಿಯ ಹೋರಾಟದ ಬದಲು ಕರ್ನಾಟಕದಲ್ಲಿರುವ ನಮ್ಮ ಮಾತೆಯರನ್ನು ಕೇಳೋಣ. ನಿಮ್ಮ ಮಕ್ಕಳಿಗೆ ಕುಡಿಸಿ ಉಳಿದ ನೀರನ್ನ ನಮಗೆ ಕೊಡಿ ಎಂದು ಮನವಿ ಮಾಡೋಣ. ಅದರು ಅವರ ಮನಸ್ಸು ಕರಗಿಲ್ಲ ಎಂದರೆ ನಮ್ಮ ಕಣ್ಣೀರಿಗೆ ಅವರ ಮನಸು ಕರಗುತ್ತದೆ. ಈ ರೀತಿಯ ಹೋರಾಟ ಬೇಡ. ಶಾಂತ ರೀತಿಯಲ್ಲಿ ಅವರನ್ನು ಕೇಳೋಣ ಎಂದು ಮನವಿ ಮಾಡಿಕೊಂಡಿದ್ದಾರೆ.

  • ಹತ್ತು ವರ್ಷಗಳ ಬಳಿಕ ಗೋಲ್ಡನ್ ಸ್ಟಾರ್ ಗಣೇಶ್‍ಗೆ ಸಿಕ್ತು ನ್ಯಾಯ

    ಹತ್ತು ವರ್ಷಗಳ ಬಳಿಕ ಗೋಲ್ಡನ್ ಸ್ಟಾರ್ ಗಣೇಶ್‍ಗೆ ಸಿಕ್ತು ನ್ಯಾಯ

    ಬೆಂಗಳೂರು: ನಟ ಗೋಲ್ಡನ್ ಸ್ಟಾರ್ ಗಣೇಶ್‍ಗೆ 75 ಲಕ್ಷ ಪರಿಹಾರ ನೀಡುವಂತೆ ಸಿಟಿ ಸಿವಿಲ್ ಕೋರ್ಟ್ ಮೋಕ್ಷ ಅಗರಬತ್ತಿ ಕಂಪನಿಗೆ ಗೆ ಆದೇಶ ನೀಡಿದೆ.

    ಮೋಕ್ಷ ಅಗರಬತ್ತಿ ಕಂಪೆನಿ ತನ್ನ ಸಂಸ್ಥೆಯ ಪ್ರಚಾರಕ್ಕೆ ಅನುಮತಿ ಇಲ್ಲದೆ ಗಣೇಶ ಅಭಿನಯದ ಚೆಲುವಿನ ಚಿತ್ತಾರ ಚಿತ್ರದ ಫೋಟೋ ಬಳಸಿಕೊಂಡಿತ್ತು. ಇದನ್ನು ಪ್ರಶ್ನಿಸಿ ಗೋಲ್ಡನ್ ಸ್ಟಾರ್ ಗಣೇಶ್ 2008 ರಲ್ಲಿ ಮೋಕ್ಷ ಸ್ವರ್ಣ ಚಂಪಾ ಅಗರಬತ್ತಿ ಕಂಪನಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಪ್ರಕರಣದ ವಿಚಾರಣೆ ಪೂರ್ಣಗೊಳಿಸಿದ್ದ ನ್ಯಾಯಾಲಯ ಇಂದು ಅಂತಿಮ ತೀರ್ಪು ಪ್ರಕಟಿಸಿದೆ.

    ಏನಿದು ಪ್ರಕರಣ?
    ಚೆಲುವಿನ ಚಿತ್ತಾರದ ಪ್ರಚಾರದ ಸಲುವಾಗಿ ಮೋಕ್ಷ ಅಗರಬತ್ತಿ ಅಂಡ್ ಕಂಪೆನಿ ತಿಂಗಳ ಅವಧಿಗೆ ಒಪ್ಪಂದ ಮಾಡಿಕೊಂಡಿದ್ದರು. ಆದರೆ ಈ ಅವಧಿ ಮುಗಿದ ಬಳಿಕವೂ ಸಂಸ್ಥೆ ಚಿತ್ರದ ಹೆಸರನ್ನು ಪ್ರಚಾರಕ್ಕೆ ಬಳಸಿತ್ತು. 2008ರಲ್ಲಿ ಒಪ್ಪಿಗೆಯಿಲ್ಲದೆ ಮೋಕ್ಷ ಅಗರಬತ್ತಿ ಅಂಡ್ ಕಂಪೆನಿ ತನ್ನ ಫೋಟೋಗಳನ್ನು ಬಳಸಿಕೊಳ್ಳಲಾಗಿದೆ ಎಂದು ಆರೋಪಿಸಿ ಚಿತ್ರನಟ ಗಣೇಶ್ ಮೋಕ್ಷ ಅಗರಬತ್ತಿ ಅಂಡ್ ಕಂಪೆನಿ ವಿರುದ್ಧ 75 ಲಕ್ಷ ರೂ. ಮಾನನಷ್ಟ ಮೊಕದ್ದಮೆ ಹೂಡಿದ್ದರು.

  • ಸ್ಯಾಂಡಲ್‍ವುಡ್ ನಟನನ್ನು ಕೊಲ್ಲಲು ಸುಪಾರಿ- ಠಾಣೆಗೆ ದೂರು ನೀಡಿದ ನಟ ಅರ್ಜುನ್ ದೇವ್

    ಸ್ಯಾಂಡಲ್‍ವುಡ್ ನಟನನ್ನು ಕೊಲ್ಲಲು ಸುಪಾರಿ- ಠಾಣೆಗೆ ದೂರು ನೀಡಿದ ನಟ ಅರ್ಜುನ್ ದೇವ್

    ಬೆಂಗಳೂರು: ಸ್ಯಾಂಡಲ್‍ವುಡ್ ನ `ಯುಗಪುರುಷ’ ಚಿತ್ರದ ನಾಯಕ ನಟನನ್ನು ಕೊಲ್ಲಲು ಸುಪಾರಿ ನೀಡಿರುವ ಬಗ್ಗೆ ಬೆಳಕಿಗೆ ಬಂದಿದೆ.

    ಕಾಂಗ್ರೆಸ್ ಪಕ್ಷದ ಅಧ್ಯಕ್ಷರೂ ಆಗಿರುವ ನಟ ಅರ್ಜುನ್ ದೇವ್ ರನ್ನು ಕೊಲ್ಲಲು ಕಾಶೀಫ್ ಎಂಬಾತ ಸುಪಾರಿ ಪಡೆದಿದ್ದಾನೆ ಎಂದು ಆರೋಪಿಸಲಾಗಿದೆ. ಮನೆ ಮುಂದೆ ಕೊಲ್ಲಲು ಹೊಂಚು ಹಾಕಿ ಹೋಗಿದ್ದಾರೆ. ಹೀಗಾಗಿ ದಯವಿಟ್ಟು ನನಗೆ ರಕ್ಷಣೆ ನೀಡಿ ಅಂತ ಇದೀಗ ನಟ ಅರ್ಜುನ್ ದೇವ್ ರಕ್ಷಣೆ ಕೋರಿ ಪೊಲೀಸ್ ಠಾಣೆ ಮಟ್ಟಿಲೇರಿದ್ದಾರೆ. ಆದ್ರೆ ಯಾರು ಸುಪಾರಿ ಕೊಟ್ಟರು, ಯಾಕಾಗಿ ಸುಪಾರಿ ಕೊಟ್ಟರು ಅನ್ನೋದನ್ನು ನಟ ತಿಳಿಸಿಲ್ಲ. ಇದನ್ನೂ ಓದಿ: `ಯುಗಪುರುಷ’ ಚಿತ್ರದ ನಟನ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ ಯತ್ನ

    ಈ ಹಿಂದೆ ಅರ್ಜುನ್ ದೇವ್ ಮೇಲೆ ಹಲ್ಲೆ ನಡೆದಿತ್ತು. ರಾಮನಗರ ತಾಲೂಕಿನ ಮಾಯಗಾನಹಳ್ಳಿ ಸಮೀಪ ಪಿತ್ರಾರ್ಜಿತ ಆಸ್ತಿ ವ್ಯಾಜ್ಯ ಸಂಬಂಧ ನ್ಯಾಯಾಲದ ವಿಚಾರಣೆಗೆ ನಟ ಅರ್ಜುನ್ ದೇವ್ ಬೆಂಗಳೂರಿನಿಂದ ರಾಮನಗರ ಜಿಲ್ಲಾ ಸತ್ರ ನ್ಯಾಯಾಲಯಕ್ಕೆ ಹೊರಟಿದ್ದರು. ಬೆಂಗಳೂರು-ಮೈಸೂರು ಹೆದ್ದಾರಿಯ ಎಸ್‍ಬಿಐ ಬ್ಯಾಂಕ್ ಪಕ್ಕದ ಕೋರ್ಟ್‍ನ ಮುಂಭಾಗದ ಗೇಟ್ ಸಮೀಪ ಕಾರು ನಿಲ್ಲಿಸುತ್ತಿದ್ದಂತೆ ಎರಡು ಬೈಕ್‍ಗಳಲ್ಲಿ ಬಂದ ನಾಲ್ವರು ದುಷ್ಕರ್ಮಿಗಳ ತಂಡ ರಾಡ್‍ನಿಂದ ಹಲ್ಲೆಗೆ ಮುಂದಾಗಿದ್ದರು.

    ಸದ್ಯ ಕೊಲೆಗೆ ಸುಪಾರಿ ನೀಡಿದ ಪ್ರಕರಣ ಸಂಬಂಧ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಟೀ ಕುಡಿಯಲು ಹಣವಿಲ್ಲದೇ ಪರದಾಡಿದ ನಟಿಯ ಸಹಾಯಕ್ಕೆ ಬಂದ್ರು ಸೂಪರ್ ಸ್ಟಾರ್!

    ಟೀ ಕುಡಿಯಲು ಹಣವಿಲ್ಲದೇ ಪರದಾಡಿದ ನಟಿಯ ಸಹಾಯಕ್ಕೆ ಬಂದ್ರು ಸೂಪರ್ ಸ್ಟಾರ್!

    ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್ ಜೊತೆ ‘ವೀರ್ ಗತಿ’ ಚಿತ್ರದಲ್ಲಿ ನಟಿಸಿ ಆಗಿನ ಕಾಲದಲ್ಲಿ ಪ್ರಸಿದ್ಧ ನಟಿಯಾಗಿದ್ದ ಪೂಜಾ ದದ್ವಾಲ್ ಟಿಬಿಯಿಂದ ಬಳಲುತ್ತಿರುವ ಬಗ್ಗೆ ಇತ್ತೀಚೆಗೆ ಸುದ್ದಿಯಾಗಿತ್ತು. ಇದೀಗ ಭೋಜ್‍ಪುರಿ ಸೂಪರ್ ಸ್ಟಾರ್ ರವಿ ಕಿಶನ್ ಪೂಜಾ ಅವರ ಸಹಾಯಕ್ಕೆ ಬಂದಿದ್ದಾರೆ.

    ಪೂಜಾ 90ರ ದಶಕದ ನಟಿಯಾಗಿದ್ದು, ಸಲ್ಮಾನ್ ಖಾನ್ ಜೊತೆ ವೀರ್ ಗತಿ ಚಿತ್ರದಲ್ಲಿ ನಟಿಸಿದ್ದರು. ಆದರೆ ಈಗ ಪೂಜಾ ಆರೋಗ್ಯದ ಸಮಸ್ಯೆ ಹಾಗೂ ಆರ್ಥಿಕ ಸಮಸ್ಯೆಯಿಂದ ಬಳಲುತ್ತಿದ್ದು, ಚಿಕಿತ್ಸೆ ಪಡೆಯಲು ಕೂಡ ಹಣವಿಲ್ಲದೇ ಪರದಾಡುತ್ತಿದ್ದಾರೆ. ಈಗ ಭೋಜ್‍ಪುರಿ ಸೂಪರ್ ಸ್ಟಾರ್ ರವಿ ಕಿಶನ್ ಪೂಜಾ ಅವರ ಸಹಾಯಕ್ಕೆ ಬಂದಿದ್ದಾರೆ.

    ಭೋಜ್‍ಪುರಿ ನಟ ರವಿ ಕಿಶನ್ ಈ ಹಿಂದೆ ಪೂಜಾ ಜೊತೆ ನಟಿಸಿದ್ದರು. ಸದ್ಯ ಈಗ ಅವರು ಹೈದರಾಬಾದ್‍ನಲ್ಲಿ ಎಂಎಲ್‍ಎ ಚಿತ್ರದಲ್ಲಿ ಬ್ಯೂಸಿಯಾಗಿದ್ದು, ತನ್ನ ಪರಿಚಯಸ್ಥರಿಂದ ಹಣ್ಣು ಹಾಗೂ ಹಣವನ್ನು ಪೂಜಾ ಗೆ ಕಳುಹಿಸಿಕೊಟ್ಟಿದ್ದಾರೆ. ವಿನಯ್ ಲಾಡ್ ನಿರ್ದೇಶನದಲ್ಲಿ ರವಿ ಕಿಶನ್ ಹಾಗೂ ಪೂಜಾ ದದ್ವಾಲ್ ನಟಿಸಿದ್ದು, ಈ ಹಿಂದೆ ರವಿ ಕಿಶನ್ ಹಲವರಿಗೆ ಈ ರೀತಿ ಸಹಾಯ ಮಾಡಿದ್ದಾರೆ ಎಂದು ರವಿಯ ಪರಿಚಯಸ್ಥರು ತಿಳಿಸಿದ್ದಾರೆ.

    ಇತ್ತೀಚಿಗೆ ಪೂಜಾ, ನಾನು ಸುಮಾರು ಬಾರಿ ಸಲ್ಮಾನ್ ಖಾನ್ ಅವರನ್ನು ಭೇಟಿ ಮಾಡಲು ಪ್ರಯತ್ನಿಸಿದೆ. ಆದರೆ ಅದು ಸಾಧ್ಯವಾಗಲಿಲ್ಲ. ನಾನು ಟಿಬಿ ಹಾಗೂ ಶ್ವಾಸಕೋಶಕ್ಕೆ ಸಂಬಂಧಿಸಿದ ಕಾಯಿಲೆಯಿಂದ ಬಳಲುತ್ತಿದ್ದು, ಮುಂಬೈನ ಶಿವಡಿ ಆಸ್ಪತ್ರೆಯಲ್ಲಿ ದಾಖಲಾಗಿದ್ದೇನೆ ಎಂದು ತಿಳಿಸಿದ್ದರು.

    ಟಿಬಿ ಹಾಗೂ ಶ್ವಾಸಕೋಶಕ್ಕೆ ಸಂಬಂಧಿಸಿದ ಕಾಯಿಲೆ ಇದೆ ಎಂದು 6 ತಿಂಗಳ ಹಿಂದೆ ನನಗೆ ತಿಳಿಯಿತು. ನಾನು ಸಲ್ಮಾನ್ ಖಾನ್ ಅವರನ್ನು ಭೇಟಿ ಮಾಡಿ ಸಹಾಯ ಕೇಳಲು ಪ್ರಯತ್ನಿಸಿದೆ. ಆದರೆ ಅದು ಸಾಧ್ಯವಾಗಲಿಲ್ಲ. ಅವರು ನನ್ನ ಈ ವಿಡಿಯೋ ನೋಡಿದರೆ ಸಹಾಯ ಮಾಡಬಹುದೆಂಬ ಆಶಯವಿದೆ. ಕಳೆದ 15 ದಿನಗಳಿಂದ ನಾನು ಆಸ್ಪತ್ರೆಯಲ್ಲಿ ದಾಖಲಾಗಿದ್ದೇನೆ ಎಂದು ಪೂಜಾ ಹೇಳಿದ್ದರು.

    ನಾನು ಟಿಬಿ ಕಾಯಿಲೆಗೆ ತುತ್ತಾಗುವ ಮೊದಲು ಗೋವಾದ ಕೆಸಿನೋದಲ್ಲಿ ಹಲವು ವರ್ಷಗಳಿಂದ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದೆ. ಈಗ ನನ್ನ ಹತ್ತಿರ ಹಣವಿಲ್ಲ ಹಾಗೂ ಒಂದು ಕಪ್ ಟೀ ಕುಡಿಯಲು ನಾನು ಇನ್ನೊಬ್ಬರ ಹತ್ತಿರ ಹಣ ಕೇಳುತ್ತಿದ್ದೇನೆ ಎಂದು ನಟಿ ಪೂಜಾ ವಿಡಿಯೋದಲ್ಲಿ ತಿಳಿಸಿದ್ದರು.

    ಪೂಜಾ ಆರೋಗ್ಯದ ಸಮಸ್ಯಯಿಂದ ಬಳಲುತ್ತಿರುವುದನ್ನು ನೋಡಿ ಆಕೆಯ ಪತಿ ಹಾಗೂ ಮಕ್ಕಳು ಆಕೆಯನ್ನು ಬಿಟ್ಟು ದೂರ ಹೋಗಿದ್ದಾರೆ ಎಂದು ನಟಿಯ ಹತ್ತಿರದವರು ತಿಳಿಸಿದ್ದರು. ಪೂಜಾ ವೀರ್ ಗತಿ ಚಿತ್ರ ಸೇರಿದಂತೆ ಹಿಂದೂಸ್ತಾನ್ ಹಾಗೂ ಸಿಂಧೂರ್ ಸೌಗಂಧ್ ಚಿತ್ರದಲ್ಲಿ ನಟಿಸಿದ್ದಾರೆ. ಇದನ್ನೂ ಓದಿ: ಅಂದು ಸಲ್ಮಾನ್ ಖಾನ್ ಜೊತೆ ನಟಿಸಿದ್ದ ನಟಿಗೆ ಇಂದು ಟೀ ಕುಡಿಯಲು ಹಣವಿಲ್ಲ!