Tag: actor

  • ಲಾಕ್‍ಡೌನ್ ನಡುವೆಯೂ ಸಪ್ತಪದಿ ತುಳಿದ ನಟ, ನಟಿ

    ಲಾಕ್‍ಡೌನ್ ನಡುವೆಯೂ ಸಪ್ತಪದಿ ತುಳಿದ ನಟ, ನಟಿ

    – ಮಾಸ್ಕ್ ಧರಿಸಿ ಮದುವೆಯಾದ ಜೋಡಿ

    ಶಿವಮೊಗ್ಗ: ಕೊರೊನಾ ಲಾಕ್‍ಡೌನ್ ಭೀತಿಯ ನಡುವೆಯೇ ಶಿವಮೊಗ್ಗದಲ್ಲಿ ಸಿನಿಮಾ ಜೋಡಿಯೊಂದು ಸಪ್ತಪದಿ ತುಳಿದಿದೆ.

    ಚಲನಚಿತ್ರ ನಟ ನಟಿಯರಾಗಿರುವ ಅರ್ನವ್ ವಿನ್ಯಾಸ್ ಮತ್ತು ವಿಹಾನಾ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು, ಮಲೆನಾಡಿನ ತವರೂರು ಎಂದೇ ಕರೆಸಿಕೊಳ್ಳುವ ಶಿವಮೊಗ್ಗದಲ್ಲಿ ಮದುವೆಯಾಗಿ ಸುದ್ದಿಯಾಗಿದ್ದಾರೆ. ಅಂದಹಾಗೆ ಅರ್ನವ್ ವಿನ್ಯಾಸ್ ಹೊಂಬಣ್ಣ ಎಂಬ ಚಿತ್ರದಲ್ಲಿ ಹೀರೋ ಪಾತ್ರದಲ್ಲಿ ಮಿಂಚಿದ್ದು, ಅದೇ ರೀತಿ ಹೀರೋಯಿನ್ ವಿಹಾನಾ ನೆನಪುಗಳು ಎಂಬ ಚಲನಚಿತ್ರದಲ್ಲಿ ನಟಿಸಿ, ಉತ್ತಮ ಅವಕಾಶಕ್ಕಾಗಿ ಕಾಯುತ್ತಿದ್ದಾರೆ.

    ಮಂಡ್ಯ ಮೂಲದ ನಟ ಅರ್ನವ್ ವಿನ್ಯಾಸ್, ಶಿವಮೊಗ್ಗದ ವಿಹಾನಾ ಅವರನ್ನು ಪ್ರೀತಿಸುತ್ತಿದ್ದು, ಮನೆಯವರ ಒಪ್ಪಿಗೆ ಮೇರೆಗೆ ಮದುವೆಯಾಗಿದ್ದಾರೆ. ಇಂದು ಕೇವಲ ಈ ಇಬ್ಬರ ಕುಟುಂಬಸ್ಥರ ಬೆರಳೆಣಿಕೆಯಷ್ಟು ಜನರ ನಡುವೆಯೇ ಶಾಸ್ತ್ರೋಕ್ತವಾಗಿ ಸಪ್ತಪದಿ ತುಳಿದಿದ್ದಾರೆ.

    ಶಿವಮೊಗ್ಗದ ಹೊರವಲಯದಲ್ಲಿರುವ ಸೋಶಿಯಲ್ ಹಾರ್ಬರ್ ಎಂಬ ಸುಂದರ ಪ್ರಕೃತಿಯ ಮಧ್ಯೆ ಈ ಇಬ್ಬರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು, ಮಾಸ್ಕ್ ಧರಿಸಿಯೇ ವಿವಾಹವಾಗಿದ್ದಾರೆ. ಅಲ್ಲದೆ ಕೇವಲ ಮನೆ ಸದಸ್ಯರ ಹಾಜರಿ ನಡುವೆ ಮದುವೆ ಶಾಸ್ತ್ರ ನೆರವೇರಿಸಲಾಗಿದ್ದು, ವಾಲಗ ಮತ್ತು ವಿಡಿಯೋದವರು ಕೂಡ ಮಾಸ್ಕ್ ಧರಿಸಿಯೇ ಹಾಜರಗಿದ್ದರು. ಬೆರಳೆಣಿಕೆಯಷ್ಟು ತಮ್ಮ ಕುಟುಂಬದವರ ಜೊತೆ ಈ ಸ್ಯಾಂಡಲ್‍ವುಡ್ ತಾರೆಯರು ಹೊಸ ಜೀವನವನ್ನು ಆರಂಭಿಸಿದ್ದಾರೆ.

  • ಬುಲೆಟ್ ಪ್ರಕಾಶ್ ಆರೋಗ್ಯ ಸ್ಥಿತಿ ಗಂಭೀರ- ವೆಂಟಿಲೇಟರ್‌ನಲ್ಲಿ ಚಿಕಿತ್ಸೆ

    ಬುಲೆಟ್ ಪ್ರಕಾಶ್ ಆರೋಗ್ಯ ಸ್ಥಿತಿ ಗಂಭೀರ- ವೆಂಟಿಲೇಟರ್‌ನಲ್ಲಿ ಚಿಕಿತ್ಸೆ

    ಬೆಂಗಳೂರು: ಹಲವು ದಿನಗಳಿಂದ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಹಾಸ್ಯ ನಟ ಬುಲೆಟ್ ಪ್ರಕಾಶ್ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

    ಕಳೆದೊಂದು ತಿಂಗಳಿನಿಂದ ಬುಲೆಟ್ ಪ್ರಕಾಶ್ ಆರೋಗ್ಯದಲ್ಲಿ ಏರುಪೇರಾಗಿತ್ತು. ಇದೀಗ ಆರೋಗ್ಯ ಸ್ಥಿತಿ ಗಂಭೀರವಾದ ಕಾರಣ ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೆಂಟಿಲೇಟರ್‌ನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ. ಕಿಡ್ನಿ ಹಾಗೂ ಲಿವರ್ ಸಮಸ್ಯೆಯಿಂದಾಗಿ ಬುಲೆಟ್ ಪ್ರಕಾಶ್ ಶನಿವಾರ ಕನ್ನಿಂಗ್‍ಹ್ಯಾಮ್ ರಸ್ತೆಯ ಫೋರ್ಟಿಸ್ ಆಸ್ಪತ್ರೆಗೆ ದಾಖಲಾಗಿದ್ದರು.

    ಇದುವರೆಗೆ ಮೂರು ಆಸ್ಪತ್ರೆಯನ್ನು ಬದಲಿಸಿರುವ ಬುಲೆಟ್ ಪ್ರಕಾಶ್ ಶನಿವಾರ ಫೋರ್ಟಿಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸದ್ಯ ಇದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಸ್ಥಿತಿ ಇದೀಗ ಗಂಭೀರವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

    ಲಿವರ್ ಹಾಗೂ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಪ್ರಕಾಶ್, ಒಂದು ತಿಂಗಳ ಹಿಂದೆ ಹೆಬ್ಬಾಳದ ಕೊಲಂಬಿಯಾ ಏಷ್ಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅಲ್ಲಿಂದ ಅಸ್ಕರ್ ಆಸ್ಪತ್ರೆಗೆ ದಾಖಲಾಗಿದ್ದರು. ಇದೀಗ ಫೋರ್ಟಿಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಿಡ್ನಿ ವೈಫಲ್ಯದ ಜೊತೆಗೆ ಕಾಲಿಗೆ ಗ್ಯಾಂಗ್ರಿನ್ ಕೂಡ ಆಗಿದೆ. ಹೀಗಾಗಿ ಗಂಭೀರ ಸ್ಥಿತಿಯಲ್ಲಿದ್ದಾರೆ. ವೆಂಟಿಲೇಟರ್‍ನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ.

    ಕೃತಕ ಉಸಿರಾಟ ಸಾಧನದಿಂದ ಉಸಿರಾಡುತ್ತಿದ್ದು, ಕೆಲವೇ ಕ್ಷಣಗಳಲ್ಲಿ ಹೆಲ್ತ್ ಬುಲೆಟಿನ್ ಬಿಡುಗಡೆಯಾಗಲಿದೆ. ಎರಡು ವರ್ಷಗಳ ಹಿಂದೆ ತೂಕ ಇಳಿಸಿಕೊಳ್ಳಲು ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿದ್ದರು. ಶಸ್ತ್ರ ಚಿಕಿತ್ಸೆಯ ನಂತರ ಹಲವು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದರು. ಹೀಗಾಗಿ ಶಸ್ತ್ರ ಚಿಕಿತ್ಸೆಯೇ ಅವರ ಜೀವಕ್ಕೆ ಮುಳ್ಳಾಯಿತಾ ಎಂಬ ಪ್ರಶ್ನೆ ಎದ್ದಿತ್ತು. ಅಲ್ಲದೆ ಶಸ್ತ್ರ ಚಿಕಿತ್ಸೆಯ ನಂತರ ಸಿನಿಮಾಗಳಲ್ಲಿ ಅವಕಾಶ ಕಡಿಮೆಯಾಗಿತ್ತು. ಹೀಗಾಗಿ ಹಾಸ್ಯನಟ ಮಾನಸಿಕವಾಗಿ ಬಹಳ ನೊಂದಿದ್ದ ವಿಚಾರ ಆಪ್ತ ಮೂಲಗಳಿಂದ ತಿಳಿದು ಬಂದಿತ್ತು.

  • ಬೀದಿ ನಾಯಿಗಳನ್ನು ಕಾಪಾಡಲು ತಂಡವನ್ನೇ ಕಟ್ಟಿದ ಸಂಯುಕ್ತಾ

    ಬೀದಿ ನಾಯಿಗಳನ್ನು ಕಾಪಾಡಲು ತಂಡವನ್ನೇ ಕಟ್ಟಿದ ಸಂಯುಕ್ತಾ

    ಬೆಂಗಳೂರು: ದೇಶವೇ ಲಾಕ್ ಡೌನ್ ಆಗಿರುವುದರಿಂದ ಜನರು ಹೊರಗೆ ಬರುವುದು ವಿರಳವಾಗಿದ್ದು, ಹೀಗಾಗಿ ಪ್ರಾಣಿ ಪಕ್ಷಿಗಳು ಅನ್ನ, ನೀರು ಇಲ್ಲದೆ ಪರದಾಡುತ್ತಿವೆ. ಹಲವು ನಟ, ನಟಿಯರು ಕಷ್ಟದಲ್ಲಿರುವ ಸಿನಿಮಾ ಕಾರ್ಮಿಕರಿಗೆ ಹಾಗೂ ಬಡವರಿಗೆ ಸಹಾಯ ಮಾಡುವ ಮೂಲಕ ಸ್ಪಂದಿಸುತ್ತಿದ್ದಾರೆ. ಆದರೆ ಪ್ರಾಣಿಗಳು ಮಾತ್ರ ನರಳುತ್ತಿವೆ. ಹೀಗಾಗಿ ನಟಿ ಸಂಯುಕ್ತಾ ಹೊರನಾಡು ಪ್ರಾಣಿಗಳತ್ತ ಲಕ್ಷ್ಯ ಹರಿಸಿದ್ದಾರೆ.

    ಹೋಮ್ ಕ್ವಾರೆಂಟೈನ್‍ನಿಂದಾಗಿ ಹಲವು ನಟ, ನಟಿಯರು ಮನೆಯಲ್ಲೇ ಉಳಿದುಕೊಂಡಿದ್ದು, ಕುಟುಂಬದೊಂದಿಗೆ ಹಾಗೂ ತಮ್ಮ ಮುಂದಿನ ಸಿನಿಮಾ ಚಟುವಟಿಕೆಗಳಲ್ಲಿ ನಿರತರಾಗಿದ್ದಾರೆ. ಆದರೆ ಸಂಯುಕ್ತಾ ಹೊರನಾಡು ಅವರು ಇನ್ನೂ ಒಂದು ಹೆಜ್ಜೆ ಮುಂದೆ ಬೀದಿ ನಾಯಗಳಿಗೆ ಆಹಾರ ನೀಡುವುದರಲ್ಲಿ ನಿರತರಾಗಿದ್ದಾರೆ. ಈ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.

    ಪ್ರಾಣಿಗಳು ಅದರಲ್ಲೂ ನಾಯಿ ಎಂದರೆ ಸಂಯುಕ್ತ ಅವರಿಗೆ ಪಂಚ ಪ್ರಾಣ, ಅವರೂ ಒಂದು ನಾಯಿಯನ್ನು ದತ್ತು ಪಡೆದಿದ್ದಾರೆ. ಅದಕ್ಕೆ ಗುಂಡ ಎಂದು ನಾಮಕರಣ ಮಾಡಿದ್ದು, ಅದರ ಜೊತೆಗೆ ಹೆಚ್ಚು ಸಮಯವನ್ನು ಕಳೆಯುತ್ತಾರೆ. ಇದರ ಜೊತೆಗೆ ಇದೀಗ ಬೀದಿ ನಾಯಿಗಳನ್ನು ಕಾಪಾಡಲು ಮುಂದಾಗಿದ್ದಾರೆ.

    ಕೊರೊನಾ ಭೀತಿಯಿಂದಾಗಿ ದೇಶವೇ ಲಾಕ್‍ಡೌನ್ ಅಗಿದ್ದು, ಬಹುತೇಕರು ಸ್ವಯಂ ದಿಗ್ಬಂಧನ ವಿಧಿಸಿಕೊಂಡು ಮನೆಯಲ್ಲಿಯೇ ಕಾಲ ಕಳೆಯುತ್ತಿದ್ದಾರೆ. ಹೀಗಾಗಿ ಪ್ರಾಣಿ, ಪಕ್ಷಿಗಳು ಆಹಾರ ನೀರು ಇಲ್ಲದೆ ಪರಿತಪಿಸುತ್ತಿವೆ. ಇದನ್ನು ಕಂಡ ನಟಿ ಸಂಯುಕ್ತಾ ಹೊರನಾಡು, ಬೀದಿ ನಾಯಿಗಳಿಗೆ ಬಿಸ್ಕೆಟ್ ಹಾಗೂ ತಿಂಡಿಯನ್ನು ಹಾಕಿ ಮಾನವೀಯತೆ ಮೆರೆದಿದ್ದಾರೆ. ಲಾಕ್‍ಡೌನ್ ಹಿನ್ನೆಲೆ ಮನೆಯಲ್ಲೇ ಕಾಲ ಕಳೆಯುತ್ತಿರುವ ಸಂಯುಕ್ತಾ ಹೊರನಾಡು ಶುಕ್ರವಾರ ಹೊರಗಡೆ ಬಂದಿದ್ದಾರೆ. ಈ ವೇಳೆ ಬೀದಿ ನಾಯಿಗಳು ಆಹಾರವಿಲ್ಲದೆ ಪರದಾಡುವುದನ್ನು ನೋಡಿದ್ದಾರೆ. ತಕ್ಷಣವೇ ಬಿಸ್ಕೆಟ್ ತಿನ್ನಿಸಿದ್ದಾರೆ.

    ಈ ಕುರಿತು ಟ್ವೀಟ್ ಮಾಡಿರುವ ಅವರು, ಕಳೆದೊಂದು ವಾರದಿಂದ ನಾಯಿಗಳು ಆಹಾರವಿಲ್ಲದೆ ಪರದಾಡುತ್ತಿರುವುದನ್ನು ಕಂಡು ಹೃದಯಕ್ಕೆ ತುಂಬಾ ಘಾಸಿಯುಂಟಾಗಿತ್ತು. ಹೀಗಾಗಿ ಕೆಲವು ನಾಯಿಗಳಿಗೆ ನಾನು ಆಹಾರ ತಿನ್ನಿಸಿದೆ. ಅಲ್ಲದೆ ಟಾಸ್ಕ್ ಫೋರ್ಸ್‍ನಲ್ಲಿ ಭಾಗವಾಗಿಸಿದ್ದಕ್ಕೆ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರಿಗೆ ಧನ್ಯವಾದಗಳು. ಈ ನಿಟ್ಟಿನಲ್ಲಿ ನಮ್ಮ ತಂಡ ಫುಲ್ ಆ್ಯಕ್ಟಿವ್ ಆಗಿದ್ದು, ತುಂಬಾ ಬೀದಿ ನಾಯಿಗಳಿಗೆ ಆಹಾರ ನೀಡುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

    ಸಂಯುಕ್ತಾ ಹೊರನಾಡು ಲೈಫು ಇಷ್ಟೇನೆ ಸಿನಿಮಾ ಮೂಲಕ ಸ್ಯಾಂಡಲ್‍ವುಡ್‍ನಲ್ಲಿ ಗುರುತಿಸಿಕೊಂಡಿದ್ದು, ನಂತರ ಬರ್ಫಿ, ಒಗ್ಗರಣೆ, ನೀನೆ ಬರಿ ನೀನೆ, ಜಿಗರ್‍ಥಂಡ, ಸರ್ಕಾರಿ ಕೆಲಸ ದೇವರ ಕೆಲಸ, ದಯವಿಟ್ಟು ಗಮನಿಸಿ, ದಿ ವಿಲನ್ ಹಾಗೂ ಇತ್ತೀಚೆಗೆ ನಾನು ಮತ್ತು ಗುಂಡ ಸಿನಿಮಾದಲ್ಲಿ ನಟಿಸಿದ್ದಾರೆ. ಇಷ್ಟು ಮಾತ್ರವಲ್ಲದೆ ಕೆಲ ತಮಿಳು ಸಿನಿಮಾಗಳಲ್ಲಿ ಸಹ ನಟಿಸಿದ್ದಾರೆ.

  • ನಟ, ವೈದ್ಯ ಡಾ.ಸೇತುರಾಮನ್ ನಿಧನ

    ನಟ, ವೈದ್ಯ ಡಾ.ಸೇತುರಾಮನ್ ನಿಧನ

    ಚೆನ್ನೈ: ತಮಿಳು ನಟ ಮತ್ತು ಚರ್ಮರೋಗ ವೈದ್ಯ ಡಾ.ಸೇತುರಾಮನ್ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ.

    ಗುರುವಾರ ಚೆನ್ನೈನಲ್ಲಿರುವ ತಮ್ಮ ನಿವಾಸದಲ್ಲಿ ಹೃದಯಾಘಾತದಿಂದ ಡಾ.ಸೇತುರಾಮನ್ ಅವರು ನಿಧನರಾಗಿದ್ದಾರೆ. ಇವರು ಚಿತ್ರರಂಗದಲ್ಲಿ ಸೇತು ಎಂದೇ ಖ್ಯಾತಿ ಪಡೆದಿದ್ದರು.

    2013ರಲ್ಲಿ ಬಿಡುಗಡೆಯಾಗಿದ್ದ ‘ಕನ್ನ ಲಡ್ಡು ತಿನ್ನ ಆಸಯ್ಯ’ ಸಿನಿಮಾದ ಮೂಲಕ ಡಾ.ಸೇತುರಾಮನ್ ಅವರು ಚಿತ್ರರಂಗಕ್ಕೆ ಎಂಟ್ರಿಯಾಗಿದ್ದರು. ‘ಕನ್ನ ಲಡ್ಡು ತಿನ್ನ ಆಸಯ್ಯ’ ಸಿನಿಮಾದ ಯಶಸ್ಸಿನ ನಂತರ, ಸೇತುರಾಮನ್ ಇನ್ನೂ ಮೂರು ತಮಿಳು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ‘ವಾಲಿಬ ರಾಜಾ’, ‘ಸಕ್ಕ ಪೊಡು ಪೊಡು ರಾಜ’ ಮತ್ತು ’50/50′ ಸಿನಿಮಾಗಳಲ್ಲಿ ನಟಿಸಿದ್ದಾರೆ.

    ನಟನ ಸಾವಿನ ಸುದ್ದಿ ಕೇಳಿ ಸ್ನೇಹಿತರು, ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ. ಡಾ.ಸೇತುರಾಮನ್ ಅವರು 2016 ಫೆಬ್ರವರಿಯಲ್ಲಿ ಮದುವೆಯಾಗಿದ್ದರು. ಇದೀಗ ಪತ್ನಿ ಮತ್ತು ಮಗುವನ್ನು ಅಗಲಿದ್ದಾರೆ.

    ಸೇತುರಾಮನ್ ಚೆನ್ನೈನಲ್ಲಿ ಕ್ಲಿನಿಕ್‍ನಲ್ಲಿ ಚರ್ಮರೋಗ ವೈದ್ಯರಾಗಿ ಕೆಲಸ ಮಾಡುತ್ತಿದ್ದರು. ಸೇತು ಅವರು 36 ವರ್ಷದಲ್ಲೇ ಪಾರ್ಶ್ವವಾಯುವಿಗೆ ಒಳಗಾಗಿದ್ದು, 2017ರಲ್ಲಿ ಇವರಿಗೆ ಸರ್ಜರಿ ಕೂಡ ಆಗಿತ್ತು ಎಂದು ತಿಳಿದುಬಂದಿದೆ.

    ಇತ್ತೀಚೆಗೆ ಕೊರೊನಾ ವೈರಸ್ ಸೋಂಕವನ್ನು ತಡೆಗಟ್ಟುವ ಕ್ರಮಗಳ ಬಗ್ಗೆ ಮಾತನಾಡಿದ್ದು, ಮೊದಲಿಗೆ ಮನೆಯಲ್ಲಿಯೇ ಇದ್ದು ಕೊರೊನಾ ವೈರಸ್ ಹರಡದಂತೆ ತಡೆಯಬೇಕು ಎಂದು ಮನವಿ ಮಾಡಿಕೊಂಡಿದ್ದರು.

  • ಕೊರೊನಾ ಬಗ್ಗೆ ಅವೈಜ್ಞಾನಿಕ ಥಿಯರಿ ಹರಡಬೇಡಿ – ಕಿಚ್ಚನಿಗೆ ಚೇತನ್ ಟ್ವೀಟ್

    ಕೊರೊನಾ ಬಗ್ಗೆ ಅವೈಜ್ಞಾನಿಕ ಥಿಯರಿ ಹರಡಬೇಡಿ – ಕಿಚ್ಚನಿಗೆ ಚೇತನ್ ಟ್ವೀಟ್

    ಬೆಂಗಳೂರು: ಕೊರೊನಾ ವೈರಸ್ ತಡೆಯುವ ಬಗ್ಗೆ ಅವೈಜ್ಞಾನಿಕ ಥಿಯರಿ ಹರಡಬೇಡಿ ಎಂದು ಆದಿನಗಳು ನಟ ಚೇತನ್ ಕುಮಾರ್ ಕಿಚ್ಚ ಸುದೀಪ್ ಅವರಿಗೆ ಟ್ವೀಟ್ ಮಾಡಿದ್ದಾರೆ.

    ಸುದೀಪ್ ಅವರು ಭಾನುವಾರ ವಿಡಿಯೋ ಒಂದನ್ನು ಟ್ವೀಟ್ ಮಾಡಿ, ಸಂಜೆ 5 ಗಂಟೆಗೆ ಎಲ್ಲರೂ ಚಪ್ಪಾಳೆ ತಟ್ಟಲು ದಯವಿಟ್ಟು ಭಾಗವಹಿಸಿ. ಹೀಗೆ ಮಾಡಿದರೆ ನಾವು ಯಾವುದನ್ನಾದರೂ ಕಳೆದುಕೊಳ್ಳುತ್ತೇವೆಯೇ? ಇಲ್ಲವಲ್ಲ. ನಾವು ಗಳಿಸುತ್ತೇವೆಯೇ? ಬಹುಶಃ ಗಳಿಸಬಹುದು. ಆದರೆ ಕನಿಷ್ಠ ಪ್ರಯತ್ನಿಸೋಣ. ಎಲ್ಲವನ್ನೂ ಆಮೇಲೆ ಯೋಚಿಸೋಣ. ಇದು ನಮ್ಮ ಜೀವನಕ್ಕಾಗಿ ಎಂದು ಬರೆದುಕೊಂಡಿದ್ದರು.

    ವಿಡಿಯೋದಲ್ಲಿ ಏನಿದೆ?
    ಯುವತಿಯೊಬ್ಬರು ಮಾತನಾಡುತ್ತಾ, ‘ಚಪ್ಪಾಳೆ ತಟ್ಟುವುದನ್ನ ತುಂಬಾ ಲಘುವಾಗಿ ಪರಿಗಣಿಸಬೇಡಿ. ದಯವಿಟ್ಟು ಎಲ್ಲರೂ ಸಂಜೆ 5 ಗಂಟೆಗೆ ಚಪ್ಪಾಳೆ ತಟ್ಟಲು ಭಾಗವಹಿಸಿ. ಪ್ರಧಾನಿ ನರೇಂದ್ರ ಮೋದಿ ಅವರ ಈ ಸಂದೇಶದಿಂದ ಎನರ್ಜಿ ಮೆಡಿಸಿನ್ ಸೃಷ್ಟಿಯಾಗುತ್ತದೆ ಎಂದು ಎಲ್ಲರಿಗೂ ತಿಳಿಸೋಣ. ನಿಮ್ಮ ಬಾಲ್ಕನಿ, ಮನೆಯಲ್ಲಿ ಮಾತ್ರ ನೀವು ಸುರಕ್ಷಿತವಾಗಿರಲು ಸಾಧ್ಯ. ನಿಮಗಾಗಿ ಶ್ರಮಿಸುವವರಿಗೆ ಚಪ್ಪಾಳೆ ಮೂಲಕ ಧನ್ಯವಾದ ತಿಳಿಸಿ ಎಂದು ಮನವಿ ಮಾಡಿಕೊಂಡಿದ್ದರು.

    ಇದಕ್ಕೆ ಪ್ರತಿಕ್ರಿತಿಯೆ ನೀಡಿರುವ ನಟ ಚೇತನ್, ಸುದೀಪ್ ಸರ್. ಸಿನಿಮಾ ಕ್ಷೇತ್ರದಲ್ಲಿ ನಿಮ್ಮ ಕೆಲಸವನ್ನು ನಾನು ಗೌರವಿಸುತ್ತೇನೆ. ವೈದ್ಯ ದಂಪತಿಯ ಮಗನಾಗಿ ನಮ್ಮ ವೈದ್ಯಕೀಯ ಸಿಬ್ಬಂದಿಯನ್ನು ಪ್ರಶಂಸಿಸಬೇಕು ಎಂಬುದನ್ನು ನಾನು ಒಪ್ಪುತ್ತೇನೆ. ಆದರೆ ಮೂಢನಂಬಿಕೆ ಮತ್ತು ತಪ್ಪು ಮಾಹಿತಿಯ ಹಾದಿಯಲ್ಲಿ ನಮ್ಮನ್ನು ಕೊಂಡೊಯ್ಯುವ ಇಂತಹ ಅವೈಜ್ಞಾನಿಕ ‘ಎನರ್ಜಿ ಮೆಡಿಸಿನ್’ ಸಿದ್ಧಾಂತಗಳನ್ನು ಹರಡುವುದರ ಮೂಲಕ ವೈದ್ಯರನ್ನು ಪ್ರಶಂಸಿಸುವುದು ಸರಿಯಲ್ಲ. ವಿಜ್ಞಾನದ ಮೂಲಕ ಕೊರೊನಾ ವೈರಸ್ ವಿರುದ್ಧ ಹೋರಾಡೋಣ ಎಂದು ಟ್ವೀಟ್ ಮಾಡಿದ್ದಾರೆ.

  • ಮತ್ತು ಬರೋ ಜ್ಯೂಸ್ ಕುಡಿಸಿ ನಟನಿಂದ ರೇಪ್ – ಕೃತ್ಯದ ವಿಡಿಯೋ ರೆಕಾರ್ಡ್

    ಮತ್ತು ಬರೋ ಜ್ಯೂಸ್ ಕುಡಿಸಿ ನಟನಿಂದ ರೇಪ್ – ಕೃತ್ಯದ ವಿಡಿಯೋ ರೆಕಾರ್ಡ್

    – 20ರ ಯುವತಿಯ ಮೇಲೆ ಹಿರಿಯ ನಟನ ಪುತ್ರನಿಂದ ಅತ್ಯಾಚಾರ
    – ವಿಡಿಯೋ ಅಪ್ಲೋಡ್ ಮಾಡೋದಾಗಿ ಬೆದರಿಕೆ

    ಚೆನ್ನೈ: ಕಾಲೇಜು ಯುವತಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ತಮಿಳಿನ ಹಿರಿಯ ನಟ ಸೂರ್ಯಕಾಂತ್ ಅವರ ಮಗ ವಿಜಯ್ ಹರೀಶ್‍ನನ್ನು ತಿರುವೊಟ್ಟಿಯೂರ್ ಮಹಿಳಾ ಪೊಲೀಸರು ಬಂಧಿಸಿದ್ದಾರೆ.

    ವಿಜಯ್ ಹರೀಶ್ (25) ಅಣ್ಣಾ ನಗರದ ನಿವಾಸಿಯಾಗಿದ್ದು, ಅತ್ಯಾಚಾರದ ವಿಡಿಯೋವನ್ನು ಆನ್‍ಲೈನ್‍ನಲ್ಲಿ ಅಪ್ಲೋಡ್ ಮಾಡುವುದಾಗಿ ಯುವತಿಗೆ ಬೆದರಿಕೆ ಹಾಕಿದ ಆರೋಪವೂ ಇದೆ. ಆರೋಪಿ ಹರೀಶ್ ಚೆನ್ನೈ ಮೂಲದ 20 ವರ್ಷದ ಕಾಲೇಜು ಯುವತಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ವಿಜಯ್ ಹರೀಶ್ ವಿರುದ್ಧ ಸಂತ್ರಸ್ತೆ ದೂರು ನೀಡಿದ್ದು, ಇದೀಗ ಆತನನ್ನು ಬಂಧಿಸಲಾಗಿದೆ.

    ಏನಿದು ಪ್ರಕರಣ?
    ಚೆನ್ನೈನ ವಿರುಗಂಬಕ್ಕಂನಲ್ಲಿರುವ ಅಪಾರ್ಟ್ ಮೆಂಟ್‍ನಲ್ಲಿ ಇದ್ದಾಗ ಇಬ್ಬರಿಗೂ ಪರಿಚಯವಿತ್ತು. ಆದರೆ ಜನವರಿಯಲ್ಲಿ ವಿಜಯ್ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಹರೀಶ್ ನನಗೆ ಕುಡಿಯಲು ಜ್ಯೂಸ್ ಕೊಟ್ಟಿದ್ದನು. ಆದರೆ ಅದರಲ್ಲಿ ನನಗೆ ತಿಳಿಯದಂತೆ ಮತ್ತು ಬರುವ ಔಷಧಿಯನ್ನು ಮಿಕ್ಸ್ ಮಾಡಿದ್ದನು. ಅದನ್ನು ಕುಡಿದ ನಂತರ ನನಗೆ ಪ್ರಜ್ಞೆ ತಪ್ಪಿದೆ. ಬಳಿಕ ವಿಜಯ್ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದ ಸಂತ್ರಸ್ತೆ ಪೊಲೀಸರಿಗೆ ಹೇಳಿದ್ದಾರೆ.

    ಜನವರಿ 2 ರಂದು ಈ ಘಟನೆ ನಡೆದಿದೆ ಎನ್ನಲಾಗಿದೆ. ಅಷ್ಟೇ ಅಲ್ಲದೇ ವಿಜಯ್ ಇಡೀ ಕೃತ್ಯವನ್ನು ರೆಕಾರ್ಡ್ ಮಾಡಿಕೊಂಡಿದ್ದು, ಯಾರಿಗಾದರೂ ಈ ವಿಚಾರವನ್ನು ಹೇಳಿದರೆ ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಸದ್ಯಕ್ಕೆ ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಆತನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ವಿಜಯ್ ಹರೀಶ್ ಕೂಡ ಒಬ್ಬ ನಟನಾಗಿದ್ದು ‘ನಾಂಗಲುಂ ನಲ್ಲವಾಂಗಥಾನ್’ ಸಿನಿಮಾದಲ್ಲಿ ಅಭಿನಯಿಸಿದ್ದಾನೆ. ವಿಜಯ್ ತಂದೆ ಸೂರ್ಯಕಾಂತ್ ಅನೇಕ ಚಲನಚಿತ್ರಗಳಲ್ಲಿ ವಿಲನ್ ಮತ್ತು ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. ಜೊತೆಗೆ ಎಐಎಡಿಎಂಕೆ ಸ್ಪೀಕರ್ ಕೂಡ ಆಗಿದ್ದಾರೆ.

  • ನಿಮ್ಮ ಜೊತೆ ನಾವಿದ್ದೀನಿ ಅನ್ನೋ ಧೈರ್ಯ ನೀಡೋದು ಮುಖ್ಯ: ವಿಜಯ ರಾಘವೇಂದ್ರ

    ನಿಮ್ಮ ಜೊತೆ ನಾವಿದ್ದೀನಿ ಅನ್ನೋ ಧೈರ್ಯ ನೀಡೋದು ಮುಖ್ಯ: ವಿಜಯ ರಾಘವೇಂದ್ರ

    ದಾವಣಗೆರೆ: ವಿಶ್ವ ವಿರಳ ರೋಗ ದಿನಾಚರಣೆ ಪ್ರಯುಕ್ತ ದಾವಣಗೆರೆಯಲ್ಲಿ ಇಂದು ವಾಕಥಾನ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿರು. ನಗರದ ಹಿಮೊಫಿಲಿಯಾ ಸೊಸೈಟಿ ಹಮ್ಮಿಕೊಂಡಿದ್ದ ಈ ಕಾರ್ಯಕ್ರಮದ ವಾಕಥಾನ್‍ಗೆ ನಟ ವಿಜಯ ರಾಘವೇಂದ್ರ ಚಾಲನೆ ನೀಡಿದ್ದಾರೆ.

    ಬಳಿಕ ಮಾತನಾಡಿದ ನಟ, ಈ ರೀತಿಯ ಕಾರ್ಯಕ್ರಮ ಮಾಡುವುದರಿಂದ ಸಮಾಜದಲ್ಲಿ ಅತಿ ವಿರಳವಾಗಿ ಬರುವಂತಹ ರೋಗಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಆಗುತ್ತದೆ. ಅಲ್ಲದೆ ತಂದೆ-ತಾಯಂದಿರು ಈ ಕಾರ್ಯಕ್ರಮದಿಂದ ತಮ್ಮ ಮಕ್ಕಳ ಆರೋಗ್ಯದ ಬಗ್ಗೆ ಜಾಗ್ರತೆ ವಹಿಸಿ, ಗರ್ಭಿಣಿಯಾದಾಗಲೇ ಮಗುವಿಗೆ ಚಿಕಿತ್ಸೆ ಕೊಡಿಸುವಂತಹ ಕೆಲಸ ಮಾಡಬೇಕು. ಈ ವಾಕಥಾನ್ ನಲ್ಲಿ ಭಾಗವಹಿಸಿದ್ದು ನನಗೆ ಸಂತೋಷವಾಗಿದೆ. ಇಲ್ಲಿ ಕೇವಲ ಕಾರ್ಯಕ್ರಮ ಹಮ್ಮಿಕೊಂಡಿದ್ದು ಮುಖ್ಯವಲ್ಲ. ನಿಮ್ಮ ಜೊತೆ ನಾವು ಇದ್ದೀವಿ ಎನ್ನುವ ಧೈರ್ಯ ನೀಡುತ್ತೇವೆ ಅಲ್ವ ಅದು ಮುಖ್ಯ. ಕಾಯಿಲೆಗೆ ತುತ್ತಾಗಿರುವವರಿಗೆ ನಾವು ಮಾನಸಿಕವಾಗಿ ಧೈರ್ಯ ತುಂಬಬೇಕಿದೆ ಎಂದು ತಿಳಿಸಿದರು.

    ಕಾರ್ಯಕ್ರಮದಲ್ಲಿ 7ಸಾವಿರ ರೋಗಕ್ಕೆ 7 ಸಾವಿರ ಮೀಟರ್ ನಡಿಗೆ ಎನ್ನುವ ಮೂಲಕ ನೂರಾರು ಯುವಕ-ಯುವತಿಯರು ಭಾಗವಹಿಸಿದ್ದರು. ಅರಂಭಿಕವಾಗಿ ವಾರ್ಮಪ್ ಮಾಡಲು ಝುಂಭಾ ಕ್ಲಾಸ್ ನಡೆಸಿದ್ದು, ಡಿಜೆ ಸೌಂಟ್‍ಗೆ ರ್ಯಾಂಪ್ ಮೇಲೆ ಟ್ರೈನರ್ಸ್ ಮಾಡ್ತಾ ಇದ್ದರೆ, ಇತ್ತ ಕೆಳಗೆ ವಯಸ್ಸಾದವರಿಂದ ಹಿಡಿದು ಚಿಕ್ಕ ಮಕ್ಕಳ ತನಕ ಸಾಂಗ್ ಗೆ ಟ್ರೈನರ್ ಮಾಡ್ತಾ ಇರೋ ಹಾಗೇ ಡ್ಯಾನ್ಸ್ ಮಾಡಿದರು.

    ಅಲ್ಲದೆ ನಟ ವಿಜಯ್ ರಾಘವೇಂದ್ರ ಅವರಿಗೆ ಹಿಮೊಫಿಲಿಯಾ ಸೊಸೈಟಿ ವತಿಯಿಂದ ಸನ್ಮಾನ ಹಮ್ಮಿಕೊಂಡಿದ್ದು, ಸಂಸದ ಜಿ ಎಂ ಸಿದ್ದೇಶ್ವರ್, ಎಸ್ ಪಿ ಹನುಮಾಂತರಾಯ ಸೇರಿದಂತೆ ಹಲವು ಗಣ್ಯರು ವಿಜಯ ರಾಘವೇಂದ್ರ ರವರಿಗೆ ಸನ್ಮಾನ ಮಾಡಿ ವಾಕಥಾನ್‍ಗೆ ಚಾಲನೆ ನೀಡಿದರು. ನಂತರ ಸ್ವಲ್ಪ ದೂರ ಅವರು ಕೂಡ ಯುವಕ ಯುವತಿಯರ ಜೊತೆ ಹೆಜ್ಜೆ ಹಾಕಿದರು. ಹಿಮೊಫಿಲಿಯಾ ಸೊಸೈಟಿಯಿಂದ ಪ್ರಾರಂಭಗೊಂಡು ಎಸ್‍ಎಸ್‍ಲೇ ಔಟ್ ಸರ್ಕಲ್, ಸಂಗೊಳ್ಳಿ ರಾಯಣ್ಣ ವೃತ್ತ, ಪಿಬಿ ರಸ್ತೆ, ಎವಿಕೆ, ರಾಮ್ ಆ್ಯಂಡ್ ಕೋ ಸರ್ಕಲ್ ಮೂಲಕ ಹಿಮೊಫಿಲಿಯಾ ಸೊಸೈಟಿಗೆ ಜಾಥ ತಲುಪಿತು. ಜಾಥದಲ್ಲಿ ಮೇಯರ್ ಬಿಜೆ ಅಜಯ್ ಕುಮಾರ್, ಎಸ್ಪಿ ಹನುಮಂತರಾಯ ಸೇರಿದಂತೆ ಹಲವರು ಸಾಥ್ ನೀಡಿದರು.

    ಬಹುತೇಕ ರೋಗಗಳ ಅನುವಂಶೀಯವಾಗಿದ್ದು, ಈ ರೋಗಗಳ ವೈದ್ಯಕೀಯ ವೈಜ್ಞಾನಿಕ ಸಂಶೋಧನೆಗಳಿಗೆ ಸರ್ಕಾರ ಮತ್ತು ವೈದ್ಯಕೀಯ ಸಂಸ್ಥೆಗಳಿಗೆ ಆದ್ಯತೆ ನೀಡಿ ಸೂಕ್ತ ಚಿಕಿತ್ಸೆ ಕಂಡು ಹಿಡಿಯಲು ಪ್ರಯತ್ನಿಸಬೇಕು. ಜೊತೆಗೆ ಸ್ವಯಂ ಸೇವಾ ಸಂಸ್ಥೆಗಳನ್ನು ರಚಿಸಿ ಅವರ ಹಕ್ಕಿನ ರಕ್ಷಣೆಗಾಗಿ ಸಂಘಟಿತರಾಗಲು ಪ್ರೋತ್ಸಾಹ ನೀಡಬೇಕು ಎಂದು ಜಾಥಾ ಮೂಲಕ ಬೇಡಿಕೆ ಈಡೇರಿಕೆಗೆ ಸರ್ಕಾರದ ಗಮನ ಸೆಳೆಯಲಾಯಿತು. ಈ ರೋಗದ ಬಗ್ಗೆ ಜನರಲ್ಲಿ, ಕುಟುಂಬಸ್ಥರಲ್ಲಿ ಜಾಗೃತಿ ಮೂಡಿಸಲಾಯಿತು.

    ವಿಶ್ವದಲ್ಲಿ 7ಸಾವಿರ ವಿವಿಧ ವಿರಳ ರೋಗಗಳು ಇದ್ದು, ಸಾರ್ವಜನಿಕರಿಗೆ ಅರಿವಿನ ಕೊರತೆಯಿಂದ ಸಮಸ್ಯೆಗಳು ಹೆಚ್ಚಾಗುತ್ತಿವೆ. ಈ ಹಿನ್ನೆಲೆಯಲ್ಲಿ ರೇಸ್ ಫಾರ್ 07 ಅಭಿಯಾನ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿರುವ ಕರ್ನಾಟಕ ಹಿಮೊಫಿಲಿಯಾ ಸೊಸೈಟಿ ಕಾಯಕ ನಿಜಕ್ಕೂ ಮೆಚ್ಚುವಂತದ್ದಾಗಿದೆ.

  • ಹಿರಿಯ ನಟಿ ಕಿಶೋರಿ ಬಲ್ಲಾಳ್ ಇನ್ನಿಲ್ಲ

    ಹಿರಿಯ ನಟಿ ಕಿಶೋರಿ ಬಲ್ಲಾಳ್ ಇನ್ನಿಲ್ಲ

    ಬೆಂಗಳೂರು: ಹಿರಿಯ ನಟಿ ಕಿಶೋರಿ ಬಲ್ಲಾಳ್ ಇಂದು ನಿಧನರಾಗಿದ್ದಾರೆ.

    ಸುಮಾರು 70ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಹಿರಿಯ ನಟಿ ಕಿಶೋರಿ ಬಲ್ಲಾಳ್ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಕಿಶೋರಿ ಬಲ್ಲಾಳರನ್ನು ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಿದ್ದರು. ಜಯನಗರದ ಸೇವಾಕ್ಷೇತ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

    ವಿಷಯ ತಿಳಿದು ಕುಟುಂಬಸ್ಥರು ಸೇವಾಕ್ಷೇತ್ರ ಆಸ್ಪತ್ರೆಯತ್ತ ಆಗಮಿಸುತ್ತಿದ್ದಾರೆ. ಶಾರೂಖ್ ಖಾನ್ ನಟನೆಯ ‘ಸ್ವದೇಶ್’ ಸಿನಿಮಾದಲ್ಲಿ ಕಿಶೋರಿ ಬಲ್ಲಾಳ್ ನಟಿಸಿದ್ದರು. ಕೆಲ ವರ್ಷಗಳಿಂದ ಬಣ್ಣದ ಲೋಕದಿಂದ ದೂರ ಸರಿದು ವಿಶ್ರಾಂತಿಯಲ್ಲಿದ್ದರು. ಅಜ್ಜಿ, ತಾಯಿ ಪಾತ್ರದಲ್ಲಿ ಕಿಶೋರಿ ಬಲ್ಲಾಳ್ ನಟಿಸುತ್ತಿದ್ದು, ಮನೆ ಮಾತಾಗಿದ್ದರು. ಕನ್ನಡದ ಬಹುತೇಕ ಸ್ಟಾರ್ ನಟರೊಂದಿಗೆ ಕಿಶೋರಿ ಬಲ್ಲಾಳ್ ತೆರೆಹಂಚಿಕೊಂಡಿದ್ದಾರೆ.

  • ಹೃದಯಾಘಾತದಿಂದ ಯುವನಟ ದುರ್ಮರಣ

    ಹೃದಯಾಘಾತದಿಂದ ಯುವನಟ ದುರ್ಮರಣ

    ಹೈದರಾಬಾದ್: ತೆಲುಗು ಮತ್ತು ತಮಿಳು ಸಿನಿಮಾಗಳಲ್ಲಿ ಅಭಿನಯಿಸಿದ್ದ ಯುವನಟ ನಂದೂರಿ ಉದಯ್ ಕಿರಣ್ (34) ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

    ಉದಯ್ ಕಿರಣ್‍ಗೆ ಶುಕ್ರವಾರ ರಾತ್ರಿ ಸುಮಾರು 10.30ಕ್ಕೆ ಎದೆನೋವು ಕಾಣಿಸಿಕೊಂಡಿದೆ. ತಕ್ಷಣ ಅವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಕಿರಣ್ ಸಾವನ್ನಪ್ಪಿದ್ದಾರೆ. ನಟನ ಅಂತಿಮ ದರ್ಶನ ಪಡೆದ ರಾಜಕೀಯ ನಾಯಕರು ಮತ್ತು ಸಿನಿಮಾರಂಗದವರು ಸಂತಾಪ ಸೂಚಿಸಿದ್ದಾರೆ.

    ಮೃತ ಉದಯ್ ಕಿರಣ್ ‘ಪರಾರೇ’ ಮತ್ತು ‘ಫ್ರೆಂಡ್ಸ್ ಬುಕ್’ ಸಿನಿಮಾಗಳಲ್ಲಿ ನಾಯಕನಟನಾಗಿ ಅಭಿನಯಿಸಿದ್ದರು. ತೆಲುಗು ಮಾತ್ರವಲ್ಲದೇ ತಮಿಳು ಸಿನಿಮಾಗಳಲ್ಲೂ ನಟಿಸುವ ಅವಕಾಶಗಳನ್ನು ಪಡೆದುಕೊಂಡಿದ್ದರು.

    ಮೃತ ಉದಯ್ ಕಿರಣ್ ಮೇಲೆ ಅನೇಕ ಆರೋಪಗಳು ಸಹ ಕೇಳಿ ಬಂದಿದ್ದು, ಈ ಕುರಿತು ಪ್ರಕರಣ ಸಹ ದಾಖಲಾಗಿತ್ತು. ಹುಡುಗಿಗೆ ಸಿನಿಮಾಗಳಲ್ಲಿ ನಟಿಸುವ ಅವಕಾಶಗಳನ್ನು ಕೊಡಿಸುವುದಾಗಿ ಹೇಳಿ ಮೋಸ ಮಾಡಿದ್ದು, ಈ ಪ್ರಕರಣದಲ್ಲಿ ಉದಯ್ ಕಿರಣ್ ಬಂಧಿತನಾಗಿದ್ದರು.

    ಅಷ್ಟೇ ಅಲ್ಲದೇ ಬಂಜಾರ ಹಿಲ್ಸ್ ನಲ್ಲಿ ಮನೆ ಮಾಲೀಕರ ಮೇಲೆ ದೌರ್ಜನ್ಯ ಎಸಗಿದ್ದ ಕಾರಣ 2018ರಲ್ಲಿ ಕ್ರಿಮಿಮಲ್ ಮೊಕದ್ದಮೆ ಸಹ ದಾಖಲಿಸಲಾಗಿತ್ತು. ಇದೇ ರೀತಿ ಅನೇಕ ಮಂದಿಗೆ ಮೋಸ ಮಾಡಿದ್ದ ಆರೋಪದ ಮೇರೆಗೆ ಮೃತ ಉದಯ್ ಕಿರಣ್ ಮೇಲೆ ಹಲವಾರು ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದವು.

  • ಫೈನಾನ್ಶಿಯರ್‌ನಿಂದ ಹಿರಿಯ ನಟ ದ್ವಾರಕೀಶ್ ಮೇಲೆ ದರ್ಪ

    ಫೈನಾನ್ಶಿಯರ್‌ನಿಂದ ಹಿರಿಯ ನಟ ದ್ವಾರಕೀಶ್ ಮೇಲೆ ದರ್ಪ

    – ದ್ವಾರಕೀಶ್ ಮನೆಗೆ ನುಗ್ಗಿ ದಾಂಧಲೆ

    ಬೆಂಗಳೂರು: ಸ್ಯಾಂಡಲ್‍ವುಡ್ ಹಿರಿಯ ನಟ ದಿಗ್ಗಜ ದ್ವಾರಕೀಶ್ ಅವರ ಮನೆಗೆ ನುಗ್ಗಿ ಫೈನಾನ್ಶಿಯರ್, ನಿರ್ಮಾಪಕರೊಬ್ಬರು ನುಗ್ಗಿ ದಾಂಧಲೆ ಮಾಡಿದ ಘಟನೆ ನಡೆದಿದೆ.

    ದ್ವಾರಕೀಶ್ ಅವರು ಆಯುಷ್ಮಾನ್ಬವ ಚಿತ್ರದ ನಿರ್ಮಾಪಕರಾಗಿದ್ದರು. ಹೀಗಾಗಿ ಅವರು ಫೈನಾಶಿಯರ್ ರಮೇಶ್ ಅವರಿಂದ ಹಣ ಪಡೆದಿದ್ದರು. ಆದರೆ ಚಿತ್ರ ನಿರೀಕ್ಷಿತ ಮಟ್ಟದಲ್ಲಿ ಹಣ ಗಳಿಸುವಲ್ಲಿ ವಿಫಲ ಆಗಿತ್ತು.

    ಫೈನಾನ್ಸ್ ಮಾಡಿದ್ದ ರಮೇಶ್ ಹಣವನ್ನು ವಾಪಸ್ ಕೊಡುವಂತೆ ದುಂಬಾಲು ಬಿದ್ದಿದ್ದರು. ಹೀಗಾಗಿ ಶುಕ್ರವಾರ ಮಧ್ಯಾಹ್ನ ಕೂಡ ರಮೇಶ್ ದ್ವಾರಕೀಶ್ ಮನೆಗೆ ಹೋಗಿ ಹಣವನ್ನು ಕೇಳಿದ್ದರು. ಆಗ ದ್ವಾರಕೀಶ್ ಅವರು, ಹಣದ ಕಷ್ಟದಲ್ಲಿ ಇದ್ದೇನೆ. ಸ್ವಲ್ಪ ಕಾಲಾವಕಾಶ ಕೊಡುವಂತೆ ಮನವಿ ಮಾಡಿದ್ದಾರೆ. ಆದರೆ ಹಣವನ್ನು ಬಿಡುವುದಕ್ಕೆ ಸಾಧ್ಯವಿಲ್ಲ. ನೀವು ಹೇಳಿದ ಗಡುವು ಮುಗಿಯಿತು. ಗಡುವು ಮುಗಿದ ಬಳಿಕವೂ ಹಣವನ್ನು ಬಿಡುವುದಕ್ಕೆ ಆಗುವುದಿಲ್ಲ ಅಂತ ರಮೇಶ್ ಪಟ್ಟು ಹಿಡಿದಿದ್ದರು.

    ರಮೇಶ್ ದ್ವಾರಕೀಶ್ ಅವರ ಮನೆಯಲ್ಲಿ ಗಲಾಟೆ ಇಳಿದಿದ್ದಾರೆ. ಇದರಿಂದ ಕೋಪಗೊಂಡ ದ್ವಾರಕೀಶ್ ಅವರು, ಒಂದೂವರೆ ವರ್ಷ ಆದರೂ ನಿನಗೆ ನಾನು ಹಣ ಕೊಡೋದಿಲ್ಲ ಅಂತ ಹೇಳಿದ್ದಾರೆ. ಈ ವಿಚಾರಕ್ಕೆ ಇಬ್ಬರ ಮಧ್ಯ ಗಲಾಟೆಯಾಗಿದೆ. ಈ ಸಂದರ್ಭದಲ್ಲಿ ನಿರ್ಮಾಪಕ ಜಯಣ್ಣ ಕೂಡ ರಮೇಶ್ ಜೊತೆಯಲ್ಲಿ ಇದ್ದರು ಎಂಬ ಮಾಹಿತಿ ಮೂಲಗಳಿಂದ ಲಭ್ಯವಾಗಿದೆ.

    ರಮೇಶ್ ಕೂಡ ಎರಡು ಚಿತ್ರದ ನಿರ್ಮಾಪಕರಾಗಿದ್ದಾರೆ. ಇಷ್ಟೇಲ್ಲಾ ಆದ್ಮೇಲೆ ದ್ವಾರಕೀಶ್ ಎಚ್‍ಎಸ್‍ಆರ್ ಲೇಔಟ್ ಪೊಲೀಸರಿಗೆ ದೂರು ನೀಡಿದ್ದಾರೆ. ಆದರೆ ಶನಿವಾರ ಸಂಜೆಯವರೆಗೂ ಪೊಲೀಸರು ಯಾವುದೇ ಎಫ್‍ಐಆರ್ ದಾಖಲಿಸಿಕೊಂಡಿಲ್ಲ ಎಂಬ ಮಾಹಿತಿ ಮೂಲಗಳಿಂದ ಲಭಿಸಿದೆ.

    ಈ ಕುರಿತು ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ದ್ವಾರಕೀಶ್ ಅವರ ಪುತ್ರ ಯೋಗೀಶ್, ನಾನು ಮನೆಯಲ್ಲಿ ಇಲ್ಲದೆ ಇರುವಾಗ ರಮೇಶ್ ಹಾಗೂ ಜಯಣ್ಣ ಮನೆಗೆ ಬಂದು ಗಲಾಟೆ ಮಾಡಿದ್ದಾರೆ. ವ್ಯವಹಾರದಲ್ಲಿ ಕಾನೂನು ಪ್ರಕಾರ ನಡೆದುಕೊಳ್ಳದೇ ಮನೆಗೆ ನುಗ್ಗಿದ್ದು ಸರಿಯಲ್ಲ. ಘಟನೆಯಿಂದಾಗಿ ತಂದೆ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದಾರೆ ಎಂದು ತಿಳಿಸಿದ್ದಾರೆ.