Tag: actor

  • ಮೊದಲು ಡ್ರಗ್ಸ್ ಮಾಫಿಯಾದ ಬುಡ ಕಿತ್ತು ಬಿಸಾಕಬೇಕು: ನಟ ಜೆಕೆ

    ಮೊದಲು ಡ್ರಗ್ಸ್ ಮಾಫಿಯಾದ ಬುಡ ಕಿತ್ತು ಬಿಸಾಕಬೇಕು: ನಟ ಜೆಕೆ

    – ಸಾಕ್ಷ್ಯ ಇದ್ದು ಮಾತನಾಡಬೇಕು

    ಬೆಂಗಳೂರು: ಯಾರೋ ಡ್ರಗ್ಸ್ ತೆಗೊಂತಿದ್ದಾರೆ ಎಂದು ಅವರನ್ನು ಒಳಗೆ ಹಾಕಿ, ಅವರ ಜೀವನ ಹಾಳು ಮಾಡುವ ಬದಲು ಅದರ ಮೂಲವನ್ನು ಕಂಡುಹಿಡಿಯಬೇಕು. ಈ ಮೂಲಕ ಡ್ರಗ್ಸ್ ಮಾಫಿಯಾದ ಬುಡ ಸಮೇತ ಕಿತ್ತು ಬಿಸಾಕಬೇಕು ಎಂದು ನಟ ಜೆಕೆ ಹೇಳಿದ್ದಾರೆ.

    ನಗರದಲ್ಲಿ ಇಂದು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಡ್ರಗ್ಸ್ ಮಾಫಿಯಾದಲ್ಲಿ ಸಿಲುಕಿಕೊಂಡವರ ಹೆಸರು ಬಹಿರಂಗಪಡಿಸಿದರೆ ಒಳ್ಳೆಯದು. ಈ ಮಾಫಿಯಾದಲ್ಲಿ ಯಾರೆಲ್ಲ ಇದ್ದಾರೆ ಹಾಗೂ ಅವರಿಗೆ ಎಲ್ಲಿಂದ ಡ್ರಗ್ಸ್ ಬರ್ತಾ ಇದೆ ಎಂಬುದನ್ನು ಕಂಡು ಹಿಡಿದರೆ ಬಹಳ ಒಳ್ಳೆಯದು. ಯಾಕೆಂದರೆ ಯವ ಪೀಳಿಗೆ ಈ ದೇಶವನ್ನು ಒಳ್ಳೆಯ ರೀತಿಯಲ್ಲಿ ಒಂದು ಮಟ್ಟಕ್ಕೆ ತೆಗೆದುಕೊಂಡು ಹೋಗುತ್ತದೆ. ದೇಶದ ಬೆಳವಣಿಗೆಗೆ ಯುವ ಪೀಳಿಗೆ ಪ್ರಮುಖ ಪಾತ್ರ ವಹಿಸುತ್ತದೆ. ಅವರನ್ನು ಡ್ರಗ್ಸ್ ತಪ್ಪು ದಾರಿಗೆ ಎಳೆಯುತ್ತಿದ್ದು, ಅದನ್ನು ನಿಲ್ಲಿಸಬೇಕಾಗಿದೆ ಎಂದರು.

    ಯುವನಟ ಸಾವನ್ನಪ್ಪಿದ್ದಾರೆ ಎಂಬ ಇಂದ್ರಜಿತ್ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸಂಪೂರ್ಣ ಮಾಹಿತಿ ಇಟ್ಟುಕೊಂಡೇ ಯಾವತ್ತೂ ಮಾತನಾಡಬೇಕು. ಅವರು ಯಾವ ರೀತಿಯಲ್ಲಿ ಮಾತನಾಡಿದ್ದಾರೆ ಹಾಗೂ ಅವರಲ್ಲಿ ಈ ಬಗ್ಗೆ ಎಷ್ಟು ಸಾಕ್ಷ್ಯ ಇದೆ ಎಂದು ನನಗೆ ಗೊತ್ತಿಲ್ಲ. ಹೀಗಾಗಿ ನನ್ನ ಪ್ರಕಾರ ಇದು ತಪ್ಪು. ಯಾಕೆಂದರೆ ಈ ಬಗ್ಗೆ ತನಿಖೆ ಮಾಡಲು ಪೊಲೀಸರು, ಸಿಬಿಐ ಅವರು ಇದ್ದಾರೆ. ಅವರು ತನಿಖೆ ಮಾಡಿ ಅದಕ್ಕೊಂದು ಸಾರಾಂಶ ಕೊಟ್ಟ ಬಳಿಕ ಮಾತನಾಡಿದರೆ ಒಳ್ಳೆಯದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

    ಇಂದ್ರಜಿತ್ ಅವರು ಇಷ್ಟೊಂದು ಧೈರ್ಯದಿಂದ ಹೇಳುತ್ತಿದ್ದಾರೆ ಅಂದರೆ ಅವರಿಗೆ ತಿಳಿದಿದೆ ಅಂತಾನೇ ಹೇಳಬಹುದು. ಈ ಬಗ್ಗೆ ನಮಗೆ ಗೊತ್ತಿಲ್ಲ. ಆದರೆ ಇದರಿಂದ ಸಮಾಜಕ್ಕೆ ಒಳ್ಳೆಯದಾಗುವುದಿದ್ದರೆ ಇದೊಂದು ಒಳ್ಳೆಯ ಹೆಜ್ಜೆ ಎಂದು ತಿಳಿಸಿದರು.

    10 ವರ್ಷದಿಂದ ಚಿತ್ರರಂಗದಲ್ಲಿ ಇದ್ದೀನಿ ಅಂದರೆ ಅದರ ಮೇಲೆ ಇರುವ ಪ್ರೀತಿಯೇ ಕಾರಣ. ಸ್ಯಾಂಡಲ್‍ವುಡ್ ನನಗೆ ಬೆಳೆಯಲು ಅವಕಾಶ ಕೊಟ್ಟಿದೆ. ಎಲ್ಲಾ ಕೆರಿಯರ್ ನಲ್ಲಿ ಏರಿಳಿತಗಳು ಇವೆ. ತುಂಬಾ ಅಡಚಣೆಗಳು ಬರುತ್ತಾನೇ ಇರುತ್ತವೆ. ಅದನ್ನು ಎದುರಿಸಿಕೊಂಡು ಹೋಗುವುದೇ ಜೀವನ ಎಂದು ಹೇಳಿದರು.

    ಇದೂವರೆಗೂ ನಾವು ಬರೀ ಟಿವಿ ಹಾಗೂ ಸಿನಿಮಾಗಳಲ್ಲಿ ಡ್ರಗ್ಸ್ ಮಾಫಿಯಾ ಬಗ್ಗೆ ನೋಡುತ್ತಿದ್ವಿ. ಆವಾಗ ಅನ್ನಿಸುತ್ತಿತ್ತು ಈ ರೀತಿ ಆಗುತ್ತಾ..? ಯಾಕೆ ಜನ ತಗೊತ್ತಿದ್ದಾರೆ?. ಯಾವ ಕಾರಣಕ್ಕೆ ಡ್ರಗ್ಸ್ ಸೇವನೆ ಮಾಡುತ್ತಾರೆ?. ಅದರಿಂದ ಏನು ಸಿಗುತ್ತೆ ಎಂದು ಯಾವಾಗಲೂ ಯೋಚನೆ ಮಾಡುತ್ತಿದ್ದೆವು. ನನ್ನ ಕಾಲೇಜು ದಿನಗಳಿಂದಲೂ ನಾನು ನೋಡ್ತಾ ಇದ್ದೆ. ಆದರೆ ಯಾವತ್ತೂ ಇದರ ಬಗ್ಗೆ ಆಸಕ್ತಿ ಬಂದಿಲ್ಲ. ಬರೀ ಫಿಟ್ ನೆಸ್ ಬಗ್ಗೆನೇ ಹೆಚ್ಚು ಆಸಕ್ತಿ ಹೊಂದಿದ್ದೆ. ಆದರೆ ಇದು ಚಿತ್ರರಂಗದಲ್ಲಿ ಆಗುತ್ತಿದೆ ಅಂದರೆ ನಿಜಕ್ಕೂ ಬೇಸರವಾಗುತ್ತಿದ್ದು, ಇದು ಆಗಬಾರದು. ಇದನ್ನು ನಿಲ್ಲಿಸಲೇ ಬೇಕು ಎಂದರು.

    ಇದು ಕೇವಲ ಸ್ಯಾಂಡಲ್ ವುಡ್ ಮಾತ್ರವಲ್ಲ, ಇಡೀ ವಿಶ್ವದಲ್ಲೇ ನಡೆಯುತ್ತಿರೋ ಜಾಲವಾಗಿದೆ. ನಮ್ಮ ಸ್ಯಾಂಡಲ್ ವುಡ್ ನಲ್ಲಿ ಈ ರೀತಿ ಆಗ್ತಿದೆ ಅಂದಾಗ ತುಂಬಾನೇ ಬೇಜಾರಾಗುತ್ತದೆ. ಹೀಗಿರುವಾಗ ಈ ಮಾಫಿಯಾದಲ್ಲಿ ಯಾರೂ ಭಾಗಿಯಾಗಿಲ್ಲ ಅಂತ ಹೇಳಿದರೆ ನಮಗೆ ತುಂಬಾನೇ ಖುಷಿಯಾಗುತ್ತದೆ. ಯಾಕಂದರೆ ಸ್ಯಾಂಡಲ್ ವುಡ್ ಅಂದರೆ ನಮಗೆ ಒಂದು ಕುಟುಂಬ ಇದ್ದಂತೆ ಎಂದು ನುಡಿದರು.

     

  • ಸಹಾಯಕ್ಕಾಗಿ ನಟ ಸೋನು ಸೂದ್‍ಗೆ ಪ್ರತಿನಿತ್ಯ ಬರ್ತಿದೆ 32 ಸಾವಿರ ಮನವಿಗಳು!

    ಸಹಾಯಕ್ಕಾಗಿ ನಟ ಸೋನು ಸೂದ್‍ಗೆ ಪ್ರತಿನಿತ್ಯ ಬರ್ತಿದೆ 32 ಸಾವಿರ ಮನವಿಗಳು!

    – ನನ್ನ ಕೈಲಾದಷ್ಟು ಸಹಾಯ ಮಾಡ್ತೀನಿ
    – ಮೆಸೇಜ್ ಕಳಿಸಿದವರಲ್ಲಿ ನಟ ಕ್ಷಮೆ

    ಮುಂಬೈ: ಮಹಾಮಾರಿ ಕೊರೊನಾ ವೈರಸ್ ಭಾರತವನ್ನು ಒಕ್ಕರಿಸಿದ ಬಳಿಕ ಇಡೀ ದೇಶವನ್ನೇ ಲಾಕ್‍ಡೌನ್ ಮಾಡಲಾಯಿತು. ಈ ಸಂದರ್ಭದಲ್ಲಿ ಅನೇಕ ಮಾನವೀಯ ಕಾರ್ಯಗಳು ಬೆಳಕಿಗೆ ಬಂದಿದ್ದು, ಅವುಗಳಲ್ಲಿ ಬಾಲಿವುಡ್ ನಟ ಸೋನು ಸೂದ್ ಅವರು ಸಂಕಷ್ಟಕ್ಕೀಡಾದವರ ನೆರವಿಗೆ ನಿಲ್ಲುವ ಮೂಲಕ ಭಾರೀ ಸುದ್ದಿಯಾಗಿದ್ದಾರೆ.

    ವಿದೇಶದಲ್ಲಿರುವ ಭಾರತೀಯರನ್ನು ಹಾಗೆಯೇ ಬಡವರ ಪರ ನಿಂತು ಜನರ ಮೆಚ್ಚುಗೆಗೆ ಪಾತ್ರರಾಗಿದ್ದರು. ಸಾವಿರಾರು ಮಂದಿಯ ಕಷ್ಟಕಾಲಕ್ಕೆ ಬೆನ್ನುಲುಬಾಗಿ ನಿಂತು ಸಹಾಯ ಮಾಡಿದ್ದರೂ ನಟ ಇದೀಗ ಜನರ ಮುಂದೆ ಕ್ಷಮೆ ಕೇಳಿದ್ದಾರೆ. ಇದನ್ನೂ ಓದಿ: ಸಹಾಯ ಮಾಡುವಂತೆ ಮನವಿ- ಮೂವರು ಅನಾಥ ಮಕ್ಕಳ ದತ್ತು ಪಡೆದ ಸೋನು ಸೂದ್

    ಹೌದು. ಕಷ್ಟದಲ್ಲಿವರಿಗೆ ನೆರವು ನೀಡುವ ಸಲುವಾಗಿ ಸಹಾಯವಾಣಿ ಆರಂಭಿಸಿದ್ದ ನಟನಿಗೆ ಇದೀಗ ಸಾಮಾಜಿಕ ಜಾಲತಾಂಗಳ ಮೂಲಕ ಅನೇಕ ಮನವಿಗಳು ಬರುತ್ತಿದೆ. ಪ್ರತಿ ದಿನ 32 ಸಾವಿರ ಸಂದೇಶಗಳು ಸಹಾಯ ಮಾಡುವಂತೆ ಬರುತ್ತಿದ್ದು, ನನ್ನ ಕೈಲಾದಷ್ಟು ಸಹಾಯ ಮಾಡುವುದಾಗಿ ಸೋನು ಸೂದ್ ಅವರು ತಿಳಿಸಿದ್ದಾರೆ. ಇದನ್ನೂ ಓದಿ: ಕೆಲಸ ಕಳ್ಕೊಂಡು ತರಕಾರಿ ಮಾರಾಟ ಮಾಡ್ತಿದ್ದ ಟೆಕ್ಕಿಗೆ ಸೋನು ಸೂದ್ ಸಹಾಯ

    ನಟನಿಗೆ ಸುಮಾರು 1,137 ಇಮೇಲ್, 19 ಸಾವಿರ ಫೇಸ್‍ಬುಕ್ ಮೆಸೇಜ್, 4,812 ಇನ್ಸ್ ಸ್ಟಾಗ್ರಾಂ ಮೆಸೇಜ್, 6,741 ಟ್ವಿಟ್ಟರ್ ನಲ್ಲಿ ಸಹಾಯ ಮಾಡುವಂತೆ ಮನವಿಗಳು ಬರುತ್ತಿವೆ. ಸಹಾಯಕ್ಕಾಗಿ ಇಷ್ಟೊಂದು ಮನವಿಗಳು ಬಂದರೆ ಒಬ್ಬನೇ ವ್ಯಕ್ತಿ ಎಷ್ಟು ಜನರಿಗೆ ಸಹಾಯ ಮಾಡಲು ಸಾಧ್ಯ?. ಎಲ್ಲರನ್ನೂ ಸಂಪರ್ಕಿಸಲೂ ಸಾಧ್ಯವಿಲ್ಲ. ಆದರೂ ನನ್ನ ಕೈಲಾದಷ್ಟು ಸಹಾಯ ಮಾಡುವುದಾಗಿ ನಟ ಭರವಸೆ ನೀಡಿದ್ದಲ್ಲದೆ, ಒಂದು ವೇಳೆ ನಿಮ್ಮ ಮೆಸೇಜ್ ನೋಡಿಲ್ಲ ಎಂದರೆ ದಯವಿಟ್ಟು ಕ್ಷಮಿಸಿಬಿಡಿ ಎಂದು ತಿಳಿಸಿದ್ದಾರೆ.

    ಕಳೆದ ಬುಧವಾರ ಕರ್ನಾಟಕದ ವರಲಕ್ಷ್ಮಿ ಎಂಬಾಕೆ ನಟನ ಬಳಿ ತನಗೊಂದು ತರಕಾರಿ ಅಂಗಡಿ ನೀಡಬೇಕು ಎಂದು ಮನವಿ ಮಾಡಿಕೊಂಡಿದ್ದಳು. ಇದಕ್ಕೆ ಕೂಡಲೇ ಪ್ರತಿಕ್ರಿಯಿಸಿದ್ದ ನಟ, ಹೊಸ ಅಂಗಡಿಯೊಂದಿಗೆ ನಿಮ್ಮ ಬೆಳಗ್ಗಿನ ದಿನ ಪ್ರಾರಂಭವಾಗುತ್ತದೆ ಎಂದು ಪ್ರತಿಕ್ರಿಯಿಸಿದ್ದರು.

  • ಸಿನಿ ರಂಗಕ್ಕೆ ಮತ್ತೊಂದು ಆಘಾತ- ಸುಶಾಂತ್ ಬೆನ್ನಲ್ಲೇ ಮತ್ತೊಬ್ಬ ಯುವನಟ ಆತ್ಮಹತ್ಯೆ

    ಸಿನಿ ರಂಗಕ್ಕೆ ಮತ್ತೊಂದು ಆಘಾತ- ಸುಶಾಂತ್ ಬೆನ್ನಲ್ಲೇ ಮತ್ತೊಬ್ಬ ಯುವನಟ ಆತ್ಮಹತ್ಯೆ

    ಮುಂಬೈ: ಬಾಲಿವುಡ್ ನಟ ಆತ್ಮಹತ್ಯೆಗೆ ಶರಣಾಗಿ ಭಾರೀ ಸುದ್ದಿಯಾಗುತ್ತಿರುವ ಬೆನ್ನಲ್ಲೇ ಇದೀಗ ಮತ್ತೊಬ್ಬ ಯುವ ನಟ ಸಾವಿಗೆ ಶರಣಾಗಿದ್ದಾರೆ.

    ಹೌದು. ಮರಾಠಿ ನಟ ಅಶುತೋಷ್ ಭಕ್ರೆ ಆತ್ಮಹತ್ಯೆಗೆ ಶರಣಾಗಿದ್ದಾರೆ. 32 ವರ್ಷದ ನಟ ಮಹಾರಾಷ್ಟ್ರದ ಮರಾಠವಾಡದ ನಂದೇಡ್ ಪಟ್ಟಣದಲ್ಲಿರುವ ತಮ್ಮ ಮನೆಯಲ್ಲಿ ಬುಧವಾರ ನೇಣುಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

    ಅಶುತೋಷ್ ಸೀರಿಯಲ್ ನಟಿ ಮಯೂರಿ ದೇಶ್‍ಮುಖ್ ಪತಿ. ತಿಂಗಳ ಹಿಂದೆಯಷ್ಟೇ ಅಶುತೋಷ್ ನಂದೇಡ್ ನಲ್ಲಿರುವ ತಮ್ಮ ಪೋಷಕರ ಮನೆಗೆ ಬಂದಿದ್ದಾರೆ. ಸದ್ಯ ಆತ್ಮಹತ್ಯೆಗೆ ನಿಖರ ಕಾಣವೇನೆಂದು ತಿಳಿದುಬಂದಿಲ್ಲ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನು ಓದಿ: ಬಾಲಿವುಡ್‍ಗೆ ಬೈ ಹೇಳಿ ಕೊಡಗಿನಲ್ಲಿ ಕೃಷಿ ಮಾಡೋಕೆ ಮುಂದಾಗಿದ್ದ ಸುಶಾಂತ್ ಸಿಂಗ್

    ಅಶುತೋಷ್ ಕೆಲ ದಿನಗಳ ಹಿಂದೆ ಅವರು ಖಿನ್ನತೆಯಿಂದ ಬಳಲುತ್ತಿದ್ದರು. ಅಲ್ಲದೆ ಈ ಹಿಂದೆ, ಒಬ್ಬ ವ್ಯಕ್ತಿ ಯಾಕೆ ಆತ್ಮಹತ್ಯೆಗೆ ಶರಣಾಗುತ್ತಾನೆ ಎಂದು ವಿಶ್ಲೇಷಣೆ ಇರುವ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಕೂಡ ಮಾಡಿಕೊಂಡಿದ್ದರು. ಅಶುತೋಷ್ ಭಕ್ರೆ ಅವರು ‘ಭಕರ್’, ‘ಇಚರ್ ಥಾರ್ಲ ಪಕ್ಕಾ’ ಮೊದಲಾದ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದನ್ನೂ ಓದಿ: ರಿಯಾಗೆ ನಾನೆಂದೂ ಸುಶಾಂತ್‍ನನ್ನು ಬಿಟ್ಟು ಬರೋಕೆ ಹೇಳಿರಲಿಲ್ಲ: ಮಹೇಶ್ ಭಟ್

    ಇದೀಗ ನಟನ ಆತ್ಮಹತ್ಯೆಗೆ ಸಂಬಂಧಿಸಿದಂತೆ ಶಿವಾಜಿನಗರ ಠಾಣೆಯ ಪೊಲೀಸರು ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಸುಶಾಂತ್ ಡೆಬಿಟ್, ಕ್ರೆಡಿಟ್ ಕಾರ್ಡ್ ಬಳಸ್ತಿದ್ದ ರಿಯಾ

    ಜೂನ್ 14ರಂದು ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಮುಂಬೈನ ಬಾಂದ್ರಾ ನಿವಾಸದಲ್ಲಿ ಪತ್ತೆಯಾಗಿತ್ತು. ಮಾನಸಿಕ ಖಿನ್ನತೆಗೆ ಒಳಗಾಗಿದ್ದರಿಂದ ಸುಶಾಂತ್ ಆತ್ಮಹತ್ಯೆ ಮಾಡಿಕೊಂಡಿದ್ದರು ಎಂದು ಹೇಳಲಾಗಿದೆ. ಆದ್ರೆ ಬಾಲಿವುಡ್ ನಟಿ ಕಂಗನಾ ರಣಾವತ್ ಮತ್ತು ಅಭಿಮಾನಿಗಳು ಇದೊಂದು ಪೂರ್ವಯೋಜಿತ ಕೊಲೆ ಎಂದು ಆರೋಪಿಸುತ್ತಿದ್ದರೆ, ಇತ್ತ ತಂದೆ, ಸುಶಾಂತ್ ಪ್ರೇಯಸಿ ನಟಿ ರಿಯಾ ಚಕ್ರವರ್ತಿ ವಿರುದ್ಧ ದೂರು ನೀಡಿದ್ದಾರೆ.

  • ಮಧ್ಯರಾತ್ರಿ ಅಪಾರ್ಟ್‌ಮೆಂಟ್‌ನಲ್ಲಿ ಜೂಜಾಟ – ಖ್ಯಾತ ನಟ ಸೇರಿ 12 ಮಂದಿ ಅರೆಸ್ಟ್

    ಮಧ್ಯರಾತ್ರಿ ಅಪಾರ್ಟ್‌ಮೆಂಟ್‌ನಲ್ಲಿ ಜೂಜಾಟ – ಖ್ಯಾತ ನಟ ಸೇರಿ 12 ಮಂದಿ ಅರೆಸ್ಟ್

    ಚೆನ್ನೈ: ಕೊರೊನಾ ನಿಯಂತ್ರಣಕ್ಕಾಗಿ ವಿಧಿಸಿರುವ ಲಾಕ್‍ಡೌನ್ ನಿಯಮವನ್ನು ಉಲ್ಲಂಘನೆ ಮಾಡಿ ಮನೆಯಲ್ಲಿಯೇ ಜೂಜಾಟ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ದಕ್ಷಿಣ ಭಾರತದ ಖ್ಯಾತ ಸೇರಿ ಹಲವರನ್ನು ಪೊಲೀಸರು ಬಂಧಿಸಿದ್ದಾರೆ.

    ಖ್ಯಾತ ನಟ ಶ್ಯಾಮ್ ನುಂಗಂಬಕ್ಕಂ ಪ್ರದೇಶದ ಸಮೀಪವಿರುವ ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ಜೂಜಾಟ ಆಡುತ್ತಿದ್ದರು. ಅಲ್ಲದೇ ಈ ಜೂಜಾಟದಲ್ಲಿ ತಮಿಳು ನಟರೊಬ್ಬರು ಹಣ ಕಳೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ಖಚಿತ ಮಾಹಿತಿ ಮೇರೆಗೆ ಪೊಲೀಸರು ನಟನ ಅಪಾರ್ಟ್‌ಮೆಂಟ್ ಮೇಲೆ ದಾಳಿ ಮಾಡಿದ್ದಾರೆ. ಆಗ ಪೊಲೀಸರು ನಟ ಶ್ಯಾಮ್ ಸೇರಿದಂತೆ 12 ಜನರನ್ನು ಪೊಲೀಸರು ಬಂಧಿಸಿದ್ದಾರೆ.

    ಲಾಕ್‍ಡೌನ್ ನಡುವೆಯೂ ತಡರಾತ್ರಿ ಅಕ್ರಮ ಚಟುವಟಿಕೆಯಲ್ಲಿ ತೊಡಗಿದ್ದ ಫ್ಲ್ಯಾಟ್‍ನಿಂದ ಜೂಜಾಟಕ್ಕೆ ಬಳಸಿದ ಟೋಕನ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ. ಸದ್ಯಕ್ಕೆ ನಟ ಶ್ಯಾಮ್ ಮತ್ತು ಇತರ 11 ಮಂದಿಯನ್ನು ಬಂಧಿಸಲಾಗಿದೆ. ಟೋಕನ್‍ಗಳ ಬಳಕೆಯ ಬಗ್ಗೆ ನಾವು ತನಿಖೆ ನಡೆಸುತ್ತಿದ್ದೇವೆ. ಈ ಜೂಜಾಟದಲ್ಲಿ ಹಣದ ರೂಪದಲ್ಲಿ ಟೋಕನ್ ಗಳನ್ನು ಬಳಸಲಾಗುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

    ಇತ್ತೀಚೆಗೆ ವಿದ್ಯಾರ್ಥಿಯೊಬ್ಬ ಆನ್‍ಲೈನ್ ಜೂಜಾಟದಲ್ಲಿ ಸುಮಾರು 20 ಸಾವಿರ ಹಣವನ್ನು ಕಳೆದುಕೊಂಡಿದ್ದನು. ಇದೇ ಖಿನ್ನತೆಯಲ್ಲಿ ಯುವಕ ಮನನೊಂದು ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿದ್ದನು. ಈ ಘಟನೆ ಬಳಿಕ ತಮಿಳುನಾಡಿನಲ್ಲಿ ಜೂಜಾಟದ ಅಡ್ಡೆಗಳ ಮೇಲೆ ಪೊಲೀಸರು ನಿರಂತರವಾಗಿ ದಾಳಿ ನಡೆಸುತ್ತಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಲಾಕ್‍ಡೌನ್ ಸಮಯದಲ್ಲಿ ಕೆಲಸವಿಲ್ಲದ ಕಾರಣ ಯುವಕರು ಆನ್‍ಲೈನ್ ಮೂಲಕ ಜೂಜಾಟ ಆಟವಾಡುತ್ತಿದ್ದಾರೆ. ಇದರಿಂದ ಅನೇಕ ಕುಟುಂಬಗಳು ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿವೆ. ಹೀಗಾಗಿ ಅನೇಕ ಆನ್‍ಲೈನ್ ಗೇಮ್‍ಗಳ ನಿಯಂತ್ರಣಕ್ಕೆ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು ಎಂದು ನ್ಯಾಯಮೂರ್ತಿ ಪುಗಳೇಂದಿ ಹೇಳಿದ್ದಾರೆ. ಅಲ್ಲದೇ ಕೆಲವು ಆನ್‍ಲೈನ್ ಗೇಮ್‍ಗಳ ಪಟ್ಟಿಯನ್ನು ಕೂಡ ಮಾಡಿದ್ದಾರೆ.

  • ಬಾಲಿವುಡ್ ನಟ ರಂಜನ್ ಸೆಹಗಲ್ ನಿಧನ

    ಬಾಲಿವುಡ್ ನಟ ರಂಜನ್ ಸೆಹಗಲ್ ನಿಧನ

    ಮುಂಬೈ: ಸರ್ಬಜಿತ್ ಸಿನಿಮಾ ಖ್ಯಾತಿಯ ನಟ ರಂಜನ್ ಸೆಹಗಲ್ ಇಂದು ನಿಧನರಾಗಿದ್ದಾರೆ. ಪಂಜಾಬಿ ಮತ್ತು ಹಿಂದಿ ಸಿನಿಮಾಗಳಲ್ಲಿ ರಂಜನ್ ಗುರುತಿಸಿಕೊಂಡಿದ್ದರು. ರಂಜನ್ ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದರು.

    ರಣ್‍ದೀಪ್ ಹುಡಾ ಮತ್ತು ಐಶ್ವರ್ಯಾ ರೈ ಬಚ್ಚನ್ ನಟನೆಯ ಸರ್ಬಜಿತ್ ಚಿತ್ರದಲ್ಲಿ ರಂಜನ್ ನಟಿಸಿದ್ದರು. ಪಂಜಾಬಿಯ ಹಲವು ಚಿತ್ರಗಳಲ್ಲಿ ನಟಿಸಿದ್ದ ರಂಜನ್ ಗೆ 2017ರಲ್ಲಿ ಬಿಡುಗಡೆಯಾಗಿದ್ದ ‘ಮಾಹಿ ಎನ್‍ಆರ್‍ಐ’ ಮತ್ತು 2014ರಲ್ಲಿ ತೆರೆಕಂಡಿದ್ದ ‘ಯಾರ್ ದಾ ಕ್ಯಾಚಪ್’ ಹೆಸರು ತಂದು ಕೊಟ್ಟಿದ್ದವು.

    https://www.instagram.com/p/BWt6sJHDVGR/

    ಪಂಜಾಬ್ ಮೂಲದವರಾದ ರಂಜನ್ ಚಂಡೀಗಢನಲ್ಲಿ ವಾಸವಾಗಿದ್ದರು. ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಥಿಯಟರ್ ಸ್ಟಡಿಯಲ್ಲಿ ಮಾಸ್ಟರ್ ಡಿಗ್ರಿ ಪಡೆದುಕೊಂಡು ಮುಂಬೈಗೆ ಬಂದಿದ್ದರು. ರಿಶತೋ ಸೇ ಬಡಿ ಪ್ರಥಾ, ತುಮ್ ದೇನಾ ಸಾಥ್ ಮೇರಾ ಧಾರವಾಹಿಗಳಲ್ಲಿ ಅವಕಾಶ ಪಡೆದುಕೊಂಡಿದ್ದರು. ತದನಂತರ ಕ್ರೈಂ ಪೆಟ್ರೋಲ್ ಮತ್ತು ಸಾವಧಾನ್ ಇಂಡಿಯಾ ಸಂಚಿಕೆಗಳಲ್ಲಿ ರಂಜನ್ ನಟಿಸಿದ್ದರು.

    https://www.instagram.com/p/BSLWNlMjplm/

    2014ರಲ್ಲಿ ಕಾಸ್ಟ್ಯೂಮ್ ಡಿಸೆನರ್ ನಿವ್ಯಾ ಚಾಬ್ಡಾ ಅವರನ್ನು ಮದುವೆಯಾಗಿದ್ದರು. ಕಳೆದ ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ರಂಜನ್ ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ.

    https://www.instagram.com/p/BB2NK6xCbzu/

  • ನಟ ಚಿರಂಜೀವಿ ಸರ್ಜಾ ಇನ್ನಿಲ್ಲ

    ನಟ ಚಿರಂಜೀವಿ ಸರ್ಜಾ ಇನ್ನಿಲ್ಲ

    ಬೆಂಗಳೂರು: ಸ್ಯಾಂಡಲ್‍ವುಡ್ ನಟ ಚಿರಂಜೀವಿ ಸರ್ಜಾ(39) ಅವರು ಇಂದು ಹೃದಯಾಘಾತದಿಂದ ವಿಧಿವಶರಾಗಿದ್ದಾರೆ.

    ಚಿರಂಜೀವಿ ಸರ್ಜಾ ಅವರಿಗೆ ನಿನ್ನೆ ರಾತ್ರಿಯಿಂದ ತೀವ್ರ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು. ಈ ಹಿನ್ನೆಲೆ ಇಂದು ಮಧ್ಯಾಹ್ನ 3:30ರ ಸುಮಾರಿಗೆ ಅಶೋಕಾ ಪಿಲ್ಲರ್ ಬಳಿ ಇರುವ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ.

    ವಾಯುಪುತ್ರ ಚಿತ್ರದ ಮೂಲಕ ಸ್ಯಾಂಡಲ್‍ವುಡ್‍ಗೆ ಎಂಟ್ರಿ ಕೊಟ್ಟಿದ್ದ ಸರ್ಜಾ ಅವರು ದಂಡಂ ದಶಗುಣಂ, ವರದ ನಾಯಕ, ಸಿಂಗ ಸೇರಿ 22ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಸಿದ್ದರು.

    ಜಯನಗರದ ಅಪೊಲೊ ಆಸ್ಪತ್ರೆಯಲ್ಲಿ ಚಿರಂಜೀವಿ ಸರ್ಜಾ ಮೃತದೇಹ ಇಡಲಾಗಿದೆ. ಕೆಲವೇ ಕ್ಷಣಗಳಲ್ಲಿ ಪೋಲೀಸ್ ಇಲಾಖೆಗೆ ಹಸ್ತಾಂತರ ಮಾಡಲಾಗುತ್ತದೆ ಎಂದು ಅಪೊಲೊ ಆಸ್ಪತ್ರೆ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ಆಸ್ಪತ್ರೆಯಲ್ಲಿ ಚಿರಂಜೀವಿ ಸರ್ಜಾ ಅವರ ತಮ್ಮ ಧ್ರುವ ಸರ್ಜಾ, ಪತ್ನಿ ಮೇಘನಾ ರಾಜ್ ಹಾಗೂ ಸುಂದರರಾಜ್, ಪ್ರಮೀಳಾ ಜೋಷಾಯ್ ಇದ್ದಾರೆ. ಕುಟುಂಬಸ್ಥರು ಹಾಗೂ ಅಭಿಮಾನಿಗಳ ಆಕ್ರಂದನ ಮುಗಿಲುಮುಟ್ಟಿದೆ.

  • ಲಾಕ್‍ಡೌನ್‍ನಿಂದ ನಟ ಆತ್ಮಹತ್ಯೆ – ಪತ್ನಿ ಊಟ ಮಾಡ್ತಿದ್ದಾಗಲೇ ನೇಣಿಗೆ ಶರಣು

    ಲಾಕ್‍ಡೌನ್‍ನಿಂದ ನಟ ಆತ್ಮಹತ್ಯೆ – ಪತ್ನಿ ಊಟ ಮಾಡ್ತಿದ್ದಾಗಲೇ ನೇಣಿಗೆ ಶರಣು

    – ಇತ್ತೀಚೆಗಷ್ಟೆ ಮದುವೆಯಾಗಿದ್ದ ನಟ

    ಮುಂಬೈ: ‘ಆದಾತ್ ಸೆ ಮಜ್ಬೂರ್’ ಶೋ ಖ್ಯಾತಿಯ ಬಾಲಿವುಡ್‍ ನಟ ಮನ್‍ಮೀತ್ ಗ್ರೆವಾಲ್ (32) ತಮ್ಮ ಖಾರ್ಗರ್ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮನ್‍ಮೀತ್ ಲಾಕ್‍ಡೌನ್‍ನಿಂದ ಕೆಲಸವಿಲ್ಲದ ಕಾರಣ ಒತ್ತಡದಲ್ಲಿದ್ದರು ಎಂದು ಪತ್ನಿ ಪೊಲೀಸರಿಗೆ ತಿಳಿಸಿದ್ದಾರೆ.

    ‘ಆದಾತ್ ಸೆ ಮಜ್ಬೂರ್’ ಮತ್ತು ‘ಕುಲದೀಪಕ್’ ಮುಂತಾದ ಧಾರಾವಾಹಿಗಳಲ್ಲಿ ನಟ ಮನ್‍ಮೀತ್ ಅಭಿನಯಿಸಿದ್ದರು. ಲಾಕ್‍ಡೌನ್‍ನಿಂದ ಅನೇಕ ಪ್ರಾಜೆಕ್ಟ್‌ಗಳು ಸ್ಥಗಿತಗೊಂಡಿವೆ. ಹೀಗಾಗಿ ಕೆಲಸವಿಲ್ಲದೆ ಮಾನಸಿಕವಾಗಿ ಬಳಲುತ್ತಿದ್ದರು. ಜೊತೆಗೆ ಆರ್ಥಿಕ ಸಮಸ್ಯೆ ಕೂಡ ಇತ್ತು ಎಂದು ಪೊಲೀಸರು ತಿಳಿಸಿದ್ದಾರೆ.

    ಮೇ 15 ರಂದು ರಾತ್ರಿ ಸುಮಾರು 9.30ಕ್ಕೆ ತನ್ನ ಫ್ಲ್ಯಾಟ್‍ನಲ್ಲಿ ಮನ್‍ಮೀತ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರ ಮೂಲ ಹೆಸರು ಅಮರ್‌ಜ್ಯೋತ್ ಸಿಂಗ್, ಇತ್ತೀಚೆಗೆ ರವೀಂದ್ರ ಕೌರ್ ಅವರನ್ನು ವಿವಾಹವಾಗಿದ್ದರು. ಇವರ ಕುಟುಂಬ ಪಂಜಾಬ್‍ನಲ್ಲಿ ನೆಲೆಸಿದೆ. ಪತ್ನಿ ಅಡುಗೆಮನೆಯಲ್ಲಿ ಊಟ ಮಾಡುತ್ತಿದ್ದಾಗ ಬೆಡ್‍ರೂಮಿಗೆ ಹೋಗಿ ದುಪ್ಪಟ್ಟದಿಂದ ಸೀಲಿಂಗ್ ಫ್ಯಾನಿಗೆ ನೇಣು ಹಾಕಿಕೊಂಡಿದ್ದಾರೆ. ಕುರ್ಚಿ ಬೀಳುವ ಶಬ್ದ ಕೇಳಿದಾಗ ಪತ್ನಿ ರೂಮಿಗೆ ಹೋಗಿ ನೋಡಿದಾಗ ಪತಿ ಫ್ಯಾನಿಗೆ ನೇಣು ಹಾಕಿಕೊಂಡಿದ್ದನ್ನು ನೋಡಿದ್ದಾರೆ ಎಂದು ಸಬ್ ಇನ್ಸ್‌ಪೆಕ್ಟರ್ ಅಜಿತ್ ಕಾಂಬ್ಲೆ ತಿಳಿಸಿದ್ದಾರೆ.

    ಮನ್‍ಮೀತ್‍ರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ದಾರಿ ಮಧ್ಯೆಯೇ ನಟ ಮೃತಪಟ್ಟಿದ್ದರು. ವೆಬ್ ಸರಣಿಗಳು ಮತ್ತು ಕೆಲವು ಜಾಹೀರಾತುಗಳು ಸೇರಿದಂತೆ ಅನೇಕ ಪ್ರಾಜೆಕ್ಟ್‌ಗಳು ಸ್ಥಗಿತಗೊಂಡಿದ್ದರಿಂದ ಕಳೆದ ಕೆಲವು ದಿನಗಳಿಂದ ಪತಿ ತೀವ್ರ ಒತ್ತಡದಲ್ಲಿದ್ದರು ಎಂದು ಕೌರ್ ಪೊಲೀಸರಿಗೆ ತಿಳಿಸಿದ್ದಾರೆ.

    ಅಷ್ಟೇ ಅಲ್ಲದೇ ಮನ್‍ಮೀತ್ ವಿದೇಶಕ್ಕೆ ಹೋಗುವ ಬಗ್ಗೆ ಪತ್ನಿ ಜೊತೆ ಮಾತನಾಡಿದ್ದು, ಈ ಲಾಕ್‍ಡೌನ್ ಎಲ್ಲವನ್ನು ಹಾಳು ಮಾಡಿತು ಎಂದಿದ್ದರಂತೆ. ಮನ್‍ಮೀತ್ ಕೆಲವರ ಬಳಿ ಸಾಲ ಪಡೆದಿದ್ದರು. ಅದನ್ನು ಮರುಪಾವತಿಸಲಾಗುವುದಿಲ್ಲ ಎಂದು ಪತ್ನಿ ಬಳಿ ಹೇಳಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

  • ಕಣ್ಣಿಗೆ ಕಾಣುವ ದೇವರಿಗೆ ಸ್ಯಾಂಡಲ್‍ವುಡ್ ತಾರೆಯರ ಸ್ಪೆಷಲ್ ಪೋಸ್ಟ್

    ಕಣ್ಣಿಗೆ ಕಾಣುವ ದೇವರಿಗೆ ಸ್ಯಾಂಡಲ್‍ವುಡ್ ತಾರೆಯರ ಸ್ಪೆಷಲ್ ಪೋಸ್ಟ್

    ಬೆಂಗಳೂರು: ಅಮ್ಮ ಎಂದರೆ ಮಕ್ಕಳ ಪಾಲಿಗೆ ಕಣ್ಣಿಗೆ ಕಾಣುವ ದೇವರು. ಕುಟುಂಬಕ್ಕಾಗಿ ಹಗಲಿರುಳು ಶ್ರಮಿಸುವ ಜೀವ ಎಂದರೆ ಅಮ್ಮ. ಇಂದು ನಮ್ಮನ್ನು ಭೂಮಿಗೆ ತಂದ ದೇವರಿಗೆ ಕೃತಜ್ಞತೆ ಸಲ್ಲಿಸುವ ದಿನವಾಗಿದ್ದು, ಎಲ್ಲರೂ ತಮ್ಮ ತಾಯಿಯಂದಿರಿಗೆ ಪ್ರೀತಿಯಿಂದ ವಿಶ್ ಮಾಡಿದ್ದಾರೆ. ಈ ವಿಶೇಷ ದಿನವನ್ನು ಸ್ಯಾಂಡಲ್‍ವುಡ್ ಕಲಾವಿದರೂ ಕೂಡ ಖುಷಿಯಿಂದ ಆಚರಿಸಿದ್ದು, ತಮ್ಮ ಮುದ್ದಿನ ಅಮ್ಮಂದಿರ ಜೊತೆಗಿರುವ ಫೋಟೋಗಳನ್ನು ಪೋಸ್ಟ್ ಮಾಡಿ ತಾಯಿ ಪ್ರೀತಿಗೆ ಸಾಟಿಯಿಲ್ಲ ಎಂದಿದ್ದಾರೆ.

    https://www.instagram.com/p/B__lO4Op_7J/

    ಚಂದನವನದ ನಟ, ನಟಿಯರು ತಮ್ಮ ಅಮ್ಮಂದಿರ ಜೊತೆಗಿರುವ ಕ್ಯೂಟ್ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಖುಷಿಪಟ್ಟಿದ್ದಾರೆ. ಅಲ್ಲದೇ ಕೆಲವರು ಅಮ್ಮನನ್ನು ವರ್ಣಿಸಿ ಕವಿತೆ ಬರೆದು ಎಲ್ಲರ ಗಮನ ಸೆಳೆದಿದ್ದಾರೆ. ನವರಸ ನಾಯಕ ಜಗ್ಗೇಶ್, ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್, ಶ್ರೀಮುರುಳಿ, ರಾಘವೇಂದ್ರ ರಾಜ್‍ಕುಮಾರ್, ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್, ರಮೇಶ್ ಅರವಿಂದ್, ನಟಿ ರಕ್ಷಿತಾ, ಪ್ರಣಿತಾ, ಹರಿಪ್ರಿಯಾ, ರಚಿತಾ ರಾಮ್ ಹೀಗೆ ಹಲವು ಕಲಾವಿದರು ಅಮ್ಮಂದಿರ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ತಾಯಿಯಂದಿರ ದಿನದ ಶುಭಾಷಯ ಕೋರಿದ್ದಾರೆ.

    https://www.instagram.com/p/B__mMJDphN-/

    ಪೋಸ್ಟ್ ನಲ್ಲಿ ಏನಿದೆ?
    ನವರಸ ನಾಯಕ ಜಗ್ಗೇಶ್ ಅಮ್ಮನನ್ನು ಜಗತ್ತಿಗೆ ಹೋಲಿಸಿ, ಅಮ್ಮನ ಪ್ರೀತಿಯನ್ನು ವರ್ಣಿಸಿದ್ದಾರೆ. “ಅಮ್ಮಂದಿರ ದಿನದ ಶುಭಾಶಯಗಳು. ಸನಾತನ ಧರ್ಮದಲ್ಲಿ ಅಮ್ಮನನ್ನು ಜಗತ್ತಿಗೆ ಹೋಲಿಸಲಾಗಿದೆ. ಜಗತ್ತು ಪಂಚಭೂತದಿಂದ ಸೃಷ್ಟಿಯಾಗಿದೆ. ಹಾಗೆ ತಾಯಿಯ ಒಡಲು ಪಂಚಭೂತಗಳಿಂದ ಅಂದರೆ “ಅಗ್ನಿ, ವಾಯು, ಜಲ, ಭೂಮಿ, ಆಕಾಶ” (ಅಗ್ನಿ ಅಮ್ಮನ ಬೆಚ್ಚನೆಯ ಮಡಿಲು, ವಾಯು ಅಮ್ಮನ ಉಸಿರು ದೇಣಿಗೆ, ಜಲ ಅಮ್ಮನ ಎದೆಹಾಲು, ಭೂಮಿ ಅಮ್ಮ ಜನ್ಮಕೊಟ್ಟ ಉದರ, ಆಕಾಶ ಅವಳು ಕೊಟ್ಟ ಪ್ರೀತಿಯ ಎತ್ತರ) ಇಂಥ ದೇವತೆಗೆ ನಾವೇನು ಮರಳಿಕೊಟ್ಟರು ಸಾಸಿವೆಯ ಸಹಸ್ರ ಕಣದ ಧೂಳಿಗೆ ಸಮ. ಇಂದು ಮಾತ್ರ ನೆನೆಯುವ ಬದಲು ಸಾಯುವವರೆಗೂ ಆರಾಧಿಸಿ ಅಮ್ಮನನ್ನ” ಎಂದು ಅಮ್ಮನನ್ನು, ಅಮ್ಮನ ಪ್ರೀತಿಯನ್ನು ವರ್ಣಿಸಿ, ತಮ್ಮ ಕೈಮೇಲೆ ಇರುವ ತಮ್ಮ ಅಮ್ಮನ ಟ್ಯಾಟು ಫೋಟೋವನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ.

    https://www.instagram.com/p/B__qwEYHWny/

    ಕಿಚ್ಚ ಸುದೀಪ್ ಅವರು ಅಮ್ಮಂದಿರ ದಿನಕ್ಕೆ ವಿಶೇಷವಾಗಿ ಶುಭಕೋರಿದ್ದಾರೆ. “ಜೀವ ಕೊಟ್ಟ ನನ್ನ ಹೆತ್ತ ತಾಯಿಗೆ, ಜೀವನ ಕೊಟ್ಟ ನನ್ನ ಕನ್ನಡ ತಾಯಿಗೆ, ಅನ್ನ ಕೊಟ್ಟ ಭೂತಾಯಿಗೆ, ತಮ್ಮ ಹೃದಯಗಳಲ್ಲಿ ಪ್ರೀತಿಯ ಸ್ಥಾನ ಕೊಟ್ಟು, ನನ್ನನ್ನು ಅಕ್ಕರೆಯಿಂದ ಬೆಳೆಸುತ್ತಿರುವ ಎಲ್ಲಾ ಮಾತೃಹೃದಯಿ ಸ್ವರೂಪ ಅಭಿಮಾನಿ ತಾಯಂದಿರಿಗೆ ನಾನು ಸದಾ ಋಣಿ. ವಿಶ್ವದ ಎಲ್ಲಾ ಅಮ್ಮಂದಿರಿಗೆ ಈ ಕಿಚ್ಚನ ಶುಭಾಶಯಗಳು” ಎಂದು ಬರೆದು ಫೋಟೋವೊಂದನ್ನು ಹಂಚಿಕೊಂಡಿದ್ದಾರೆ.

    https://www.instagram.com/p/B__vHRbg-yh/

    ಅಮ್ಮ ನೀನು ನಮಗಾಗಿ ಎಂದು ಪುನೀತ್ ರಾಜ್‍ಕುಮಾರ್ ಪವರ್‍ಫುಲ್ ವಿಶ್ ಜೊತೆ ಅಮ್ಮನ ಫೋಟೋವನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಮಾಡಿದ್ದಾರೆ. ಇತ್ತ ಚಿನ್ನಾರಿ ಮುತ್ತ ವಿಜಯ್ ರಾಘವೇಂದ್ರ ಹಾಡಿನ ಸಾಲುಗಳನ್ನು ಬರೆದು ಅಮ್ಮನ ಪ್ರೀತಿ ವರ್ಣಿಸಿ ಶುಭಕೋರಿದ್ದಾರೆ. ತಾಯಿನೇ ಎಲ್ಲಾ ಬದಲಾಗೋದಿಲ್ಲ ಯುಗ ಉರುಳಿ ಕಳೆದೋದರೂ ಎಂದು ಶಿವಣ್ಣ ಅಮ್ಮನನ್ನು ನೆನೆದು ಫೋಟೋವನ್ನು ಹಂಚಿಕೊಂಡಿದ್ದಾರೆ.

    https://www.instagram.com/p/CAAKFOsAI0X/

    ಇತ್ತ ನಟಿ ರಕ್ಷಿತಾ ಪ್ರೇಮ್ ಅಮ್ಮನೊಂದಿಗೆ ಇರುವ ತಮ್ಮ ಬಾಲ್ಯದ ಫೋಟೋವನ್ನು ಹಂಚಿಕೊಂಡು ಹ್ಯಾಪಿ ಮದರ್ಸ್ ಡೇ ಎಂದು ವಿಶ್ ಮಾಡಿದ್ದಾರೆ. ನಟಿ ರಚಿತಾ ರಾಮ್ ಅವರು ಕೂಡ ಅಮ್ಮನ ಜೊತೆ ಇರುವ ಬಾಲ್ಯದ ಫೋಟೋ, ಈಗಿನ ಫೋಟೋಗಳನ್ನ ಅಪ್ಲೋಡ್ ಮಾಡಿ ಲವ್ ಯು ಅಮ್ಮ ಎಂದಿದ್ದಾರೆ.

    https://www.instagram.com/p/CAALa3agmPk/

  • ನಟ ಜೈ ಜಗದೀಶ್ ವಿರುದ್ಧ ಎಫ್‍ಐಆರ್

    ನಟ ಜೈ ಜಗದೀಶ್ ವಿರುದ್ಧ ಎಫ್‍ಐಆರ್

    ಬೆಂಗಳೂರು: ಸ್ಯಾಂಡಲ್‍ವುಡ್‍ನ ನಟ, ನಿರ್ಮಾಪಕ ಜೈ ಜಗದೀಶ್ ವಿರುದ್ಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ.

    ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಮತ್ತು ಚಲನಚಿತ್ರ ಕಾರ್ಮಿಕರ, ಕಲಾವಿದರ ಒಕ್ಕೂಟದ ಗೌರವಾಧ್ಯಕ್ಷ ಸಾ.ರಾ.ಗೋವಿಂದು ಅವರು ನಿಂದನೆ ಆರೋಪದ ಅಡಿ ಜೈ ಜಗದೀಶ್ ವಿರುದ್ಧ ದೂರು ನೀಡಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

    ಏನಿದು ಪ್ರಕರಣ?:
    ಹೆಮ್ಮಾರಿ ಕೊರೊನಾದಿಂದಾಗಿ ಇಡೀ ಜಗತ್ತೇ ತತ್ತರಿಸಿ ಹೋಗಿದೆ. ಭಾರತದಲ್ಲಿ ಲಾಕ್‍ಡೌನ್‍ನಿಂದಾಗಿ ಸಿನಿಮಾ, ಕಿರುತೆರೆ ಶೂಟಿಂಗ್ ಸೇರಿದಂತೆ ಚಿತ್ರೋದ್ಯಮದ ಚಟುವಟಿಕೆಗಳು ಸ್ತಬ್ದವಾಗಿವೆ. ಹೀಗಾಗಿ ನೂರಾರು ಕಲಾವಿದರು, ತಂತ್ರಜ್ಞರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಅಂತಹವರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮುಂದಾಗಿತ್ತು.

    ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾತೃ ಸಂಸ್ಥೆಯಾಗಿದ್ದು ನಿರ್ಮಾಪಕ, ವಿತರಕ ಹಾಗೂ ಪ್ರದರ್ಶಕ ಮೂರು ವಲಯಗಳು ಇದರಲ್ಲಿ ಒಗ್ಗೂಡಿವೆ. ಸಂಕಷ್ಟದಲ್ಲಿರುವ ಕಲಾವಿದರು, ತಂತ್ರಜ್ಞರಿಗೆ ಆಹಾರದ ಕಿಟ್ ವಿತರಿಸಲು ನಿರ್ಮಾಪಕ ಸಾ.ರಾ. ಗೋವಿಂದು, ವಾಣಿಜ್ಯ ಮಂಡಳಿಯ ಸದಸ್ಯ ಕೆ.ಎಂ. ವೀರೇಶ್ ನೇತೃತ್ವದಲ್ಲಿ ಸರ್ಕಾರದೊಂದಿಗೆ ಮಾತನಾಡಿ ಸಹಾಯಕ್ಕೆ ನಿಂತಿದ್ದರು.

    ಈ ವಿಚಾರವಾಗಿ ನಟ ನಿರ್ಮಾಪಕ ಜೈ ಜಗದೀಶ್ ಕೋಪಗೊಂಡಿದ್ದರು. “ನಿರ್ಮಾಪಕರು ಅನ್ನದಾತರು, ಸಾವಿರಾರು ಜನಕ್ಕೆ ಅನ್ನವನ್ನು ನೀಡಿದ್ದಾರೆ. ನಮಗೆ ಆಹಾರದ ಕಿಟ್ ನೀಡಿ ಅವಮಾನ ಮಾಡಬೇಡಿ” ಎಂದು ಹೇಳಿದ್ದರು. ಅಷ್ಟೇ ಅಲ್ಲದೆ ಸಾ.ರಾ.ಗೋವಿಂದು ಹಾಗೂ ಕೆ.ಎಂ.ವೀರೇಶ್ ಅವರನ್ನು ಅವಾಚ್ಯ ಪದಗಳಿಂದ ನಿಂದಿಸಿ ಬೈದಿದ್ದಾರೆ. ಅವರು ಮಾತನಾಡಿದ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ ಭಾರೀ ಚರ್ಚೆಗೆ ಎಡೆಮಾಡಿಕೊಟ್ಟಿತ್ತು.

    ಇದರಿಂದಾಗಿ ಅಸಮಾಧಾನಗೊಂಡ ಸಾ.ರಾ.ಗೋವಿಂದು ಅವರು, ಜೈ ಜಗದೀಶ್ ಅವರು ಉದ್ದೇಶ ಪೂರ್ವಕವಾಗಿ ನನ್ನ ಬಗ್ಗೆ ತಮ್ಮ ವಾಟ್ಸಪ್ ಮೂಲಕ ಇಲ್ಲಸಲ್ಲದ ಆರೋಪಗಳನ್ನು ಮಾಡಿದ್ದಾರೆ. ಜೊತೆಗೆ ತೀರಾ ಕೆಳಮಟ್ಟದಲ್ಲಿ ಬಾಯಿಗೆ ಬಂದಂತೆ ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ. ನನ್ನ ವಿರುದ್ಧ, ಸ್ನೇಹಿತರ ಹಾಗೂ ಚಲನಚಿತ್ರ ವಾಣಿಜ್ಯ ಮಂಡಳಿಯ ಬಗ್ಗೆ ಆರೋಪ ಮಾಡಿರುವ ಜೈ ಜಗದೀಶ್ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರಿಗೆ ಮನವಿ ಮಾಡಿಕೊಂಡಿದ್ದರು.

  • 600 ರೂ. ಇಲ್ಲದ್ದಕ್ಕೆ ಕ್ರಿಕೆಟ್ ಕನಸು ಕೈಚೆಲ್ಲಿಕೊಂಡಿದ್ದ ಇರ್ಫಾನ್ ಖಾನ್

    600 ರೂ. ಇಲ್ಲದ್ದಕ್ಕೆ ಕ್ರಿಕೆಟ್ ಕನಸು ಕೈಚೆಲ್ಲಿಕೊಂಡಿದ್ದ ಇರ್ಫಾನ್ ಖಾನ್

    ಮುಂಬೈ: ಭಾರತೀಯ ಸಿನಿಮಾ ಕ್ಷೇತ್ರದಲ್ಲಿ ಅತ್ಯುತ್ತಮ ನಟರಲ್ಲಿ ಒಬ್ಬರಾದ ಇರ್ಫಾನ್ ಖಾನ್ ಅವರು ತಮ್ಮ 53ನೇ ವಯಸ್ಸಿನಲ್ಲಿ ಮುಂಬೈ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರನ್ನು ನೆನೆದು ಅಭಿಮಾನಿಗಳು ಕಣ್ಣೀರಾಗಿದ್ದಾರೆ.

    ಇರ್ಫಾನ್ ಖಾನ್ ಬಾಲಿವುಡ್‍ನಲ್ಲಿ ಮಹತ್ತರ ಕಾರ್ಯ ಮಾಡಿದ್ದರೂ ಅವರೊಳಗೆ ಒಬ್ಬ ಕ್ರಿಕೆಟಿಗನಿದ್ದ ಎನ್ನುವುದು ಅನೇಕರಿಗೆ ತಿಳಿದಿಲ್ಲ. ಇರ್ಫಾನ್ ಖಾನ್ 600 ರೂ. ಇಲ್ಲದ್ದಕ್ಕೆ ಕ್ರಿಕೆಟ್ ಜಗತ್ತಿನಿಂದ ಹೊರ ಬಂದಿದ್ದ ಕಥೆ ನಿಮಗೆ ಗೊತ್ತಾ?

    ಹೌದು.. ಇರ್ಫಾನ್ 20ನೇ ವಯಸ್ಸಿನಲ್ಲಿ ಕ್ರಿಕೆಟಿಗನಾಗಬೇಕೆಂಬ ಕನಸು ಕಟ್ಟಿಕೊಂಡಿದ್ದರು. ಅದಕ್ಕೆ ತಕ್ಕಂತೆ ಅಭ್ಯಾಸ ನಡೆಸಿದ್ದ ಅವರು ಸಿಕೆ ನಾಯ್ಡು ಟ್ರೋಫಿಯಲ್ಲಿ ಆಡಲು ಆಯ್ಕೆಯಾಗಿದ್ದರು. ಆದರೆ ಹಣದ ಕೊರತೆಯಿಂದಾಗಿ ಕ್ರಿಕೆಟ್ ಕನಸಿನ ಮನೆಯಿಂದ ಹೊರ ನಡೆದು ಬಂದು ಬಿಟ್ಟರು.

    ಈ ವಿಚಾರವಾಗಿ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಇರ್ಫಾನ್ ಖಾನ್, “ನಾನು ಕ್ರಿಕೆಟ್ ಆಡಿದ್ದೇನೆ, ಕ್ರಿಕೆಟಿಗನಾಗಲು ಬಯಸಿದ್ದೆ. ಜೈಪುರ ತಂಡದಲ್ಲಿ ಕಿರಿಯ ಆಟಗಾರನಾಗಿದ್ದ ನಾನು ಆಲ್‍ರೌಂಡರ್ ಜವಾಬ್ದಾರಿ ನಿರ್ವಹಿಸಿದ್ದೆ. ಕ್ರಿಕೆಟ್‍ನಲ್ಲಿಯೇ ವೃತ್ತಿಜೀವನ ಆರಂಭಿಸಲು ಬಯಸಿದ್ದೆ. ಆದರೆ ಸಿ.ಕೆ.ನಾಯ್ಡು ಟೂರ್ನಿಗೆ ಆಯ್ಕೆಯಾದಾಗ 600 ರೂ. ಶುಲ್ಕ ಪಾವತಿಸಲು ನನ್ನ ಬಳಿ ಹಣವಿರಲಿಲ್ಲ. ಆಗ ಯಾರನ್ನ ಕೇಳಬೇಕೆಂದು ತಿಳಿದಿರಲಿಲ್ಲ. ಅಂದಿನಿಂದ ಕ್ರಿಕೆಟ್ ಮನೆಯಿಂದ ಹೊರ ಬಂದುಬಿಟ್ಟೆ” ಎಂದು ಹೇಳಿದ್ದರು.

    ನಂತರದ ದಿನಗಳಲ್ಲಿ ಇರ್ಫಾನ್ ಪ್ರತಿಷ್ಠಿತ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ (ಎನ್‍ಎಸ್‍ಡಿ)ದಲ್ಲಿ ಪ್ರವೇಶ ಪಡೆದರು. ಅದಕ್ಕಾಗಿ ಅವರಿಗೆ 300 ರೂ. ಅಗತ್ಯವಿತ್ತು. ಅವರ ಬಳಿ ಅಷ್ಟು ಹಣವಿಲ್ಲದಿದ್ದಾಗ ಸಹೋದರಿಯೇ ಹಣದ ವ್ಯವಸ್ಥೆ ಮಾಡಿದ್ದರು. 1994-98ರವರೆಗೆ ‘ಚಂದ್ರಕಾಂತ’ ಹಾಗೂ ‘ಬನೇಗಿ ಅಪ್ನಿ ಬಾತ್’ ನಂತಹ ಜನಪ್ರಿಯ ಧಾರಾವಾಹಿಗಳಲ್ಲಿ ನಟಿಸಿದ್ದ ಇರ್ಫಾನ್ ಖಾನ್, 1988ರಲ್ಲಿ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾದಲ್ಲಿ ಅಂತಿಮ ವರ್ಷದ ವಿದ್ಯಾರ್ಥಿ ಆಗಿರುವಾಗಲೇ ‘ಸಲಾಮ್ ಬಾಂಬೆ’ ಚಿತ್ರದಲ್ಲಿ ನಟನೆಯ ಆಹ್ವಾನ ಪಡೆದುಕೊಂಡಿದ್ರು. ಅಂದಿನಿಂದ ಕ್ರಿಕೆಟ್ ವೃತ್ತಿ ಬದುಕಿನ ಕಡೆಗೆ ಅವರು ತಿರುಗಿ ನೋಡಲಿಲ್ಲ.

    “ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾಕ್ಕೆ ನನಗೆ 300 ರೂ. ಬೇಕಿತ್ತು. ಅಷ್ಟು ಹಣವನ್ನು ಹೊಂದಿಸುವುದು ನನಗೆ ಕಷ್ಟಕರವಾಗಿತ್ತು. ನನ್ನ ತಂಗಿ ಅಂತಿಮವಾಗಿ ಹಣವನ್ನು ಹೊಂದಿಸಿ ಕೊಟ್ಟಿದ್ದಳು” ಎಂದು ಇರ್ಫಾನ್ ಖಾನ್ ಸಂದರ್ಶನದಲ್ಲಿ ಬಹಿರಂಗಪಡಿಸಿದ್ದರು.

    “ಕ್ರಿಕೆಟ್ ಬಿಟ್ಟುಕೊಡುವುದು ಪ್ರಜ್ಞಾಪೂರ್ವಕ ನಿರ್ಧಾರ. ಇಡೀ ದೇಶದಲ್ಲಿ ಕೇವಲ 11 ಆಟಗಾರರಿದ್ದಾರೆ. ನಟರ ವಿಚಾರಕ್ಕೆ ಬಂದ್ರೆ ಮಿತಿ ಎನ್ನುವುದೇ ಇಲ್ಲ. ನಟನೆಯಲ್ಲಿ ಯಾವುದೇ ವಯಸ್ಸಿನ ಮಿತಿಯಿಲ್ಲ? ಸಿನಿಮಾ ರಂಗದಲ್ಲಿ ನೀವೇ ನಿಮ್ಮ ಸ್ವಂತ ಆಯುಧ” ಎಂದು ತಮ್ಮ ಸಿನಿಮಾ ಬದುಕಿನ ಆಯ್ಕೆಯನ್ನು ಖಾನ್ ಸಮರ್ಥಿಸಿಕೊಂಡಿದ್ದರು.

    ಟಿ20 ಕ್ರಿಕೆಟ್‍ನ ಆಗಮನವು ಆಟವನ್ನು ಹಾಳು ಮಾಡಿದೆ ಎಂದು ಇರ್ಫಾನ್ ಖಾನ್ ವಿಮರ್ಶಾತ್ಮಕ ಹೇಳಿಕೆ ನೀಡಿದ್ದರು. ಅವರು ಸಾಂಪ್ರದಾಯಿಕ ಮಾದರಿ ಟೆಸ್ಟ್ ಪಂದ್ಯದ ದೊಡ್ಡ ಅಭಿಮಾನಿಯಾಗಿದ್ದರು.

    ”ಕ್ರಿಕೆಟ್ ಕಾ ಡೌನ್ ಹೋನಾ ಭೀ ಚಾಹಿಯೆ! ಕ್ರಿಕೆಟ್ ಸಮಯ ವ್ಯರ್ಥದ ಆಟವಾಗಿ ಪರಿಣಮಿಸಿದೆ. ಟೆಸ್ಟ್ ಪಂದ್ಯದ ಮೋಡಿ, ಆಟಕ್ಕೆ ಹೋಲಿಸಿದರೆ ಈ ಟಿ20 ಅಷ್ಟು ಅದ್ಬುತವಾಗಿಲ್ಲ. ಟಿ20 ಕ್ರಿಕೆಟ್ ಅತ್ಯಾಚಾರದಂತೆ ಕಾಣುತ್ತದೆ. ಎಲ್ಲಾ ರೀತಿಯ ಕೃತ್ಯಗಳು ಅಲ್ಲಿ ನಡೆಯುತ್ತಿವೆ” ಎಂದು ಹೇಳಿದ್ದರು.