Tag: actor

  • ವಿರಸ ಬಿಟ್ಟು ಸಾಮರಸ್ಯದೊಂದಿಗೆ ಮುನ್ನಡೆಯೋಣ – ಸಾರಿಗೆ ನೌಕರರ ಪತ್ರಕ್ಕೆ ಯಶ್ ಉತ್ತರ

    ವಿರಸ ಬಿಟ್ಟು ಸಾಮರಸ್ಯದೊಂದಿಗೆ ಮುನ್ನಡೆಯೋಣ – ಸಾರಿಗೆ ನೌಕರರ ಪತ್ರಕ್ಕೆ ಯಶ್ ಉತ್ತರ

    ಬೆಂಗಳೂರು: ತಮ್ಮನ್ನು ಬೆಂಬಲಿಸುವಂತೆ ಸಾರಿಗೆ ನೌಕರರು ರಾಕಿಂಗ್ ಸ್ಟಾರ್ ಯಶ್ ಅವರಿಗೆ ಬರೆದ ಪತ್ರಕ್ಕೆ ಇದೀಗ ನಟ ಉತ್ತರ ನೀಡಿದ್ದಾರೆ.

    ಈ ಸಂಬಂಧ ಪತ್ರ ಬರೆದಿರುವ ಯಶ್, ಸಾರಿಗೆ ಸಂಸ್ಥೆಯ ನೌಕರರು ಮತ್ತು ಪ್ರಯಾಣಿಕರ ನಡುವಿನ ಸಂಬಂಧ ಮತ್ತು ಸಹಕಾರ ಲೆಕ್ಕವಿಲ್ಲದಷ್ಟು ಗೆಳೆತನಗಳಿಗೆ ಸಾಕ್ಷಿಯಾಗಿವೆ. ಆದರೆ ನಮ್ಮ ಸಾರಿಗೆ ಸಂಸ್ಥೆಯ ನೌಕರರ ಸಂಬಳದ ತಾರತಮ್ಯವಿರಬಹುದು. ರಜೆಗಳಿಗಾಗಿ ನಡೆಯುವ ತಕರಾರುಗಳಿರಬಹುದು. ಓವರ್ ಡ್ಯೂಟಿಗಾಗಿ ನಡೆಯುವ ಜಟಾಪಟಿಗಳಿರಬಹುದು. ಎಲ್ಲವನ್ನೂ ನಾನು ಹತ್ತಿರದಿಂದ ಬಲ್ಲವನು ಎಂದು ಹೇಳಿದ್ದಾರೆ.

    ನ್ಯಾಯ ಕೊಡಿ ಎಂದು ಪ್ರಾಮಾಣಿಕವಾಗಿ ಹೋರಾಟಕ್ಕಿಳಿದಿರುವ ಸಾರಿಗೆ ನೌಕರರ ಕೂಗು ಮತ್ತು ಸಾರಿಗೆ ಬಸ್ಸುಗಳ ಮೇಲೆಯೇ ಅವಲಂಬಿತವಾಗಿರುವ ಮಧ್ಯಮ ವರ್ಗದ ಜನರ ಅಳಲು, ಈ ಎರಡು ಕೂಡ ನನ್ನನ್ನು ಬಹುವಾಗಿ ಕಾಡುತ್ತಿವೆ. ಸಾರಿಗೆ ಸಚಿವ ಲಕ್ಷ್ಮಣ್ ಸವದಿ ಅವರೊಂದಿಗೆ ಈ ಬಗ್ಗೆ ವಿವರವಾಗಿ ಮಾತನಾಡಿದ್ದೇನೆ. ಸಾರಿಗೆ ನೌಕರರ ಸಮಸ್ಯೆಗಳನ್ನು ಮನವರಿಕೆ ಮಾಡುವ ಪ್ರಯತ್ನ ಮಾಡಿದ್ದೇನೆ ಎಂದರು.

    ಸಮಾಧಾನದ ವಿಷಯ ಅಂದ್ರೆ ಲಕ್ಷ್ಮಣ್ ಸವದಿ ಅವರಿಗೆ ಸಾರಿಗೆ ನೌಕರರ ಬೇಡಿಕೆಗಳ ಬಗ್ಗೆ ಅರಿವು ಮತ್ತು ಕಳಕಳಿ ಇದೆ. ಜೊತೆಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಸಾರಿಗೆ ನೌಕರರ ಬಹುಮುಖ್ಯ ಬೇಡಿಕೆಯಾದ ವೇತನ ತಾರತಮ್ಯವನ್ನು ತಪ್ಪದೆ ಈಡೇರಿಸುವ ಮಾತನ್ನು ನನಗೆ ಕೊಟ್ಟಿದ್ದಾರೆ. ಇದು ನನಗೆ ಮತ್ತಷ್ಟು ಖುಷಿ ಕೊಟ್ಟಿದೆ ಎಂದು ಭರವಸೆ ನೀಡಿದರು.

    ಸಮಸ್ಯೆಗೆ ಮತ್ತೊಂದು ಸಮಸ್ಯೆ ಎಂದಿಗೂ ಪರಿಹಾರವಲ್ಲ. ಬದಲಿಗೆ ಮುಕ್ತ ಮನಸ್ಸುಗಳ ಬಿಚ್ಚುಮಾತು ಈ ಸಮಸ್ಯೆಗೆ ಪರಿಹಾರವಾಗಬಲ್ಲದು ಎಂಬುದು ನನ್ನ ದೃಢ ವಿಶ್ವಾಸ. ವಿರಸ ಬಿಟ್ಟು ಸಾಮರಸ್ಯದೊಂದಿಗೆ ಮುನ್ನಡೆಯೋಣ ಎಂದು ಯಶ್ ಅವರು ಸಾರಿಗೆ ನೌಕರರಿಗೆ ಪರಿಸ್ಥಿತಿ ಮನವರಿಕೆ ಮಾಡಿದರು.

    ಪತ್ರ:

    ರವರಿಗೆ,
    ಕರ್ನಾಟಕ ರಾಜ್ಯ ಸಾರಿಗೆ ನೌಕರರ ಒಕ್ಕೂಟ ಪ್ರೀತಿಯ ಸಾರಿಗೆ ಸಂಸ್ಥೆ ನೌಕರರ ಕುಟುಂಬಕ್ಕೆ ನಿಮ್ಮ ಯಶ್ ಮಾಡುವ ನಮಸ್ಕಾರಗಳು. ಇಂದು ನಿಮ್ಮ ಯಶ್ ಏನೇ ಆಗಿರಬಹುದು. ಆದರೆ ಅದಕ್ಕೂ ಮೊದಲು ನಾನು ನಿಮ್ಮ ಸಂಸ್ಥೆಯ ಪ್ರಾಮಾಣಿಕ ಚಾಲಕನ ಪುತ್ರ.

    ಮನೆಯಲ್ಲಿ ನಾನು ತಡ ಮಾಡಿದ್ರೆ ದಿನಾಲೂ ನನ್ನ ಬಸ್ಸಿನಲ್ಲಿಯೇ ಬರೋ ಪ್ರಯಾಣಿಕರಿಗೆ ಟ್ರೈನ್ ಮಿಸ್ ಆಗುತ್ತೇನೋ.. ಆಫೀಸ್ ಗೆ ಲೇಟ್ ಆಗುತ್ತೇನೋ..ಅಂತ ನಮ್ಮಪ್ಪ ಎಷ್ಟೋ ದಿನ ಬೆಳಗ್ಗೆ ಮನೆಯಲ್ಲಿ ತಿಂಡಿ ಕೂಡ ತಿನ್ನದೇ ಗಡಿಬಿಡಿಯಲ್ಲಿ ನಡೆಯುತ್ತಿದ್ದ ಆ ದಿನಗಳು ಈಗಲೂ ನೆನಪಾಗುತ್ತೆ. ಬಹುಶಃ ಇದು ನನ್ನ ಅಪ್ಪನ ಕತೆ ಮಾತ್ರವಲ್ಲ…ಕರ್ತವ್ಯ ನಿಷ್ಠೆ ಮೆರೆವ ಸಾವಿರಾರು ಸಾರಿಗೆ ನೌಕರರುಗಳ ದಿನಚರಿ ಹೀಗೆ ಇರುತ್ತೆ..

    ಸಾರಿಗೆ ಸಂಸ್ಥೆಯ ನೌಕರರು ಮತ್ತು ಪ್ರಯಾಣಿಕರ ನಡುವಿನ ಸಂಬಂಧ ಮತ್ತು ಸಹಕಾರ ಲೆಕ್ಕವಿಲ್ಲದಷ್ಟು ಗೆಳೆತನಗಳಿಗೆ ಸಾಕ್ಷಿಯಾಗಿವೆ… ಆದರೆ ನಮ್ಮ ಸಾರಿಗೆ ಸಂಸ್ಥೆಯ ನೌಕರರ ಸಂಬಳದ ತಾರತಮ್ಯ ವಿರಬಹುದು.. ರಜೆಗಳಿಗಾಗಿ ನಡೆಯುವ ತಕರಾರುಗಳಿರಬಹುದು.. ಓವರ್ ಡ್ಯೂಟಿಗಾಗಿ ನಡೆಯುವ ಜಟಾಪಟಿಗಳಿರಬಹುದು. ಎಲ್ಲವನ್ನೂ ನಾನು ಹತ್ತಿರದಿಂದ ಬಲ್ಲವನು. ನ್ಯಾಯ ಕೊಡಿ ಎಂದು ಪ್ರಾಮಾಣಿಕವಾಗಿ ಹೋರಾಟಕ್ಕಿಳಿದಿರುವ ಸಾರಿಗೆ ನೌಕರರ ಕೂಗು ಮತ್ತು ಸಾರಿಗೆ ಬಸ್ಸುಗಳ ಮೇಲೆಯೇ ಅವಲಂಬಿತವಾಗಿರುವ ಮಧ್ಯಮ ವರ್ಗದ ಜನರ ಅಳಲು. ಈ ಎರಡು ಕೂಡ ನನ್ನನ್ನು ಬಹುವಾಗಿ ಕಾಡುತ್ತಿವೆ.

    ದೊಡ್ಡ ಸಮಸ್ಯೆಯೊಂದರ ಪರಿಹಾರಕ್ಕೆ ಚಿಕ್ಕ ಪ್ರಯತ್ನವೆಂಬಂತೆ ಸನ್ಮಾನ್ಯ ಸಾರಿಗೆ ಸಚಿವರಾದ ಲಕ್ಷ್ಮಣ್ ಸವದಿ ಅವರೊಂದಿಗೆ ಈ ಬಗ್ಗೆ ವಿವರವಾಗಿ ಮಾತನಾಡಿ ಸಾರಿಗೆ ನೌಕರರ ಸಮಸ್ಯೆಗಳನ್ನು ಮನವರಿಕೆ ಮಾಡುವ ಪ್ರಯತ್ನ ಮಾಡಿದ್ದೇನೆ. ಸಮಾಧಾನದ ವಿಷಯ ಅಂದ್ರೆ ಸನ್ಮಾನ್ಯ ಸಾರಿಗೆ ಸಚಿವರಾದ ಲಕ್ಷ್ಮಣ್ ಸವದಿ ಅವರಿಗೆ ಸಾರಿಗೆ ನೌಕರರ ಬೇಡಿಕೆಗಳ ಬಗ್ಗೆ ಇದ್ದ ಅರಿವು ಮತ್ತು ಕಳಕಳಿ, ಜೊತೆಗೆ ಮಾನ್ಯ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಸಾರಿಗೆ ನೌಕರರ ಬಹುಮುಖ್ಯ ಬೇಡಿಕೆಯಾದ ವೇತನ ತಾರತಮ್ಯವನ್ನು ತಪ್ಪದೆ ಈಡೇರಿಸುವ ಮಾತನ್ನು ನನಗೆ ಕೊಟ್ಟಿದ್ದು ಮತ್ತಷ್ಟು ಖುಷಿ ಕೊಡು…

    ಸಮಸ್ಯೆಗೆ ಮತ್ತೊಂದು ಸಮಸ್ಯೆ ಎಂದಿಗೂ ಪರಿಹಾರವಲ್ಲ. ಬದಲಿಗೆ ಮುಕ್ತ ಮನಸ್ಸುಗಳ ಬಿಚ್ಚುಮಾತು ಈ ಸಮಸ್ಯೆಗೆ ಪರಿಹಾರವಾಗಬಲ್ಲದು ಎಂಬುದು ನನ್ನ ದೃಢ ವಿಶ್ವಾಸ.

    ವಿರಸ ಬಿಟ್ಟು ಸಾಮರಸ್ಯದೊಂದಿಗೆ ಮುನ್ನಡೆಯೋಣ.

    ವಂದನೆಗಳೊಂದಿಗೆ
    ನಿಮ್ಮ ಪ್ರೀತಿಯ
    ಯಶ್

  • ಸೈಕಲ್‍ನಲ್ಲಿ ತೆರಳಿ ವೋಟ್ ಹಾಕಿದ್ದಕ್ಕೆ ವಿಜಯ್ ಸ್ಪಷ್ಟನೆ

    ಸೈಕಲ್‍ನಲ್ಲಿ ತೆರಳಿ ವೋಟ್ ಹಾಕಿದ್ದಕ್ಕೆ ವಿಜಯ್ ಸ್ಪಷ್ಟನೆ

    ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಸ್ಟಾರ್ ನಟ ವಿಜಯ್ ಸೈಕಲ್ ನಲ್ಲಿ ತೆರಳಿ ವೋಟ್ ಮಾಡಿರುವುದು ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಸದ್ಯ ಸ್ವತಃ ನಟನೆ ಈ ಬಗ್ಗೆ ಸ್ಪಷ್ಟನೆ ನೀಡುವ ಮೂಲಕ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.

    ವೋಟ್ ಮಾಡಿ ಮನೆಗೆ ತೆರಳುವಾಗಲೂ ನಟನಿಗೆ ಅಭಿಮಾನಿಗಳಿಂದ ಕಿರಿಕಿರಿ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಅವರು ಮಾಧ್ಯಮಗಳಿಗೆ ಕೂಡ ಹೇಳಿಕೆ ನೀಡದೆ ಸ್ನೇಹಿತರ ಬೈಕಿನಲ್ಲಿ ಮನೆಗೆ ವಾಪಸ್ಸಾಗಿದ್ದರು. ನಂತರ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿದ ನಟ, ನನ್ನ ಮತಗಟ್ಟೆ ತುಂಬಾ ಇಕ್ಕಟ್ಟಾದ ಸ್ಥಳದಲ್ಲಿದೆ. ಹೀಗಾಗಿ ಅಲ್ಲಿಗೆ ಕಾರಿನಲ್ಲಿ ತೆರಳಲು ಸಾಧ್ಯವಿಲ್ಲವಾಯಿತು. ಅಲ್ಲದೆ ಪಾರ್ಕಿಂಗ್ ಸಮಸ್ಯೆ ಕೂಡ ಉಂಟಾಗಬಹುದು ಎಂದು ಸೈಕಲ್ ನಲ್ಲಿ ತೆರಳಿ ವೋಟ್ ಹಾಕಿ ಬಂದೆ. ಆದರೆ ಇದರ ಹಿಂದೆ ಬೇರೆ ಯಾವುದೇ ಉದ್ದೇಶ ಇಲ್ಲ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.

    ನಟ ವಿಜಯ್ ಅವರು ನಿನ್ನೆ ಸೈಕಲ್‍ನಲ್ಲಿ ಚೆನ್ನೈನ ನೀಲಾಂಕರೈನಲ್ಲಿರುವ ವೆಲ್ಸ್ ಇಂಟರ್ ನ್ಯಾಷನಲ್ ಪ್ರೀ ಸ್ಕೂಲ್ ಮತಗಟ್ಟೆಗೆ ಬಂದಿದ್ದರು. ಈ ವೇಳೆ ಅಭಿಮಾನಿಗಳು ವಿಜಯ್ ಅವರ ಜೊತೆಯಲ್ಲಿ ಫೋಟೋ ಮತ್ತು ವೀಡಿಯೋವನ್ನು ಕ್ಲಿಕ್ಕಿಸಿಕೊಂಡಿದ್ದು, ಈ ಫೋಟೋ ಹಾಗೂ ವೀಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಸದ್ದು ಮಾಡಿದ್ದವು.

    ಅಲ್ಲದೆ ಹಲವರು ಹಲವು ರೀತಿಯ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದರು. ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಭಾರೀ ಪ್ರಮಾಣದಲ್ಲಿ ಏರಿಕೆ ಮಾಡಿರುವುದನ್ನು ಖಂಡಿಸಿ ವಿಜಯ್ ಸೈಕಲ್ ನಲ್ಲಿ ತೆರಳಿ ವೋಟ್ ಹಾಕಿದ್ದಾರೆ. ಈ ಮೂಲಕ ಬೆಲೆ ಏರಿಕೆಯನ್ನು ವಿಜಯ್ ಸಾಂಕೇತಿಕವಾಗಿ ಖಂಡಿಸಿದ್ದಾರೆ ಎಂದು ಭಾರೀ ಚರ್ಚೆಗೀಡಾಗಿತ್ತು.

  • ದುಬಾರಿ ಕಾರ್ ಮಾಲೀಕನಾದ ನಟ ಪ್ರಭಾಸ್

    ದುಬಾರಿ ಕಾರ್ ಮಾಲೀಕನಾದ ನಟ ಪ್ರಭಾಸ್

    ಬೆಂಗಳೂರು: ಟಾಲಿವುಡ್ ನಟ ಪ್ರಭಾಸ್ ಮನೆಗೆ ಇದೀಗ ಹೊಸ ಅತಿಥಿಯ ಆಗಮನವಾಗಿದೆ. ದುಬಾರಿ ಬೆಲೆಯ ಲ್ಯಾಂಬೋರ್ಗಿನಿ ಕಾರನ್ನು ಪ್ರಭಾಸ್ ಖರೀದಿ ಮಾಡಿ ಸುದ್ದಿಯಾಗಿದ್ದಾರೆ.

    ಹೌದು ಬಾಹುಬಲಿ ಖ್ಯಾತಿಯ ಪ್ರಭಾಸ್ ಕಿತ್ತಳೆ ಬಣ್ಣದ ಹೊಸ ಕಾರ್ ಖರೀದಿಸಿದ್ದಾರೆ. ಭಾರತದಲ್ಲಿ ಲ್ಯಾಂಬೋರ್ಗಿನಿ ಅವೆನ್ಟೆಡೊರ್ ರೋಡ್‍ಸ್ಟರ್ ಬೆಲೆ 5.6 ಕೋಟಿ ರೂಪಾಯಿ. ಪ್ರಭಾಸ್ ದುಬಾರಿ ಬೆಲೆಯ ಕಾರ್ ಖರೀದಿಸುವ ಮೂಲಕ ಸುದ್ದಿಯಾಗಿದ್ದಾರೆ.

    ಪ್ರಭಾಸ್ ಬಳಿ ಈಗಾಗಲೇ ಹಲವು ಐಷಾರಾಮಿ ಕಾರುಗಳಿವೆ. ಪ್ರಭಾಸ್ ಬಳಿ ಈಗಾಗಲೇ ಬಿಎಂಡಬ್ಲ್ಯೂ, ಮರ್ಸಿಡೀಸ್, ಆಡಿ ಕ್ಯೂ5 ಕಾರ್‍ಗಳಿವೆ. ಇದೀಗ ಈ ಸಾಲಿಗೆ ಲ್ಯಾಂಬೋರ್ಗಿನಿ ಕೂಡ ಸೇರಿದೆ. ಪ್ರಭಾಸ್ ಅವರ ಹೊಸ ಕಾರಿನ ಫೋಟೋ ಮತ್ತು ವೀಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿವೆ.

    ಬಿಲ್ಲಾ, ಡಾಲಿರ್ಂಗ್, ಮಿರ್ಚಿ, ಬಾಹುಬಲಿ, ಬಾಹುಬಲಿ 2, ಸಾಹೋ ಚಿತ್ರಗಳಲ್ಲಿ ಅಭಿನಯಿಸಿ ಪ್ರೇಕ್ಷಕರ ಮನ ಗೆದ್ದಿದ್ದಾರೆ. ಬ್ಯಾಕ್ ಟು ಬ್ಯಾಕ್ ಸೂಪರ್ ಹಿಟ್ಸ್ ಕೊಟ್ಟಿರುವ ನಟ ಪ್ರಭಾಸ್ ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರ ಪೈಕಿ ಒಬ್ಬರಾಗಿದ್ದಾರೆ. ಸಿನಿಮಾಗಳ ಮೂಲಕವಾಗಿ ಸುದ್ದಿಯಾಗುತ್ತಿದ್ದ ನಟ ಇದೀಗ ಐಶಾರಾಮಿ ಕಾರ್ ಕೊಳ್ಳುವ ಮೂಲಕವಾಗಿ ಸುದ್ದಿಯಾಗಿದ್ದಾರೆ.

  • ಸ್ಯಾಂಡಲ್‍ವುಡ್ ನಟ ಮಯೂರ್ ಪಟೇಲ್‍ಗೆ ಜೀವ ಬೆದರಿಕೆ!

    ಸ್ಯಾಂಡಲ್‍ವುಡ್ ನಟ ಮಯೂರ್ ಪಟೇಲ್‍ಗೆ ಜೀವ ಬೆದರಿಕೆ!

    ಬೆಂಗಳೂರು: ಚಂದನವನದ ನಟ ಮಯೂರ್ ಪಟೇಲ್ ಗೆ ಜೀವ ಬೆದರಿಕೆ ಹಾಕಲಾಗಿದೆ.

    ಹೌದು. ಸೈಟ್ ಖರೀದಿ ವಿಚಾರಕ್ಕೆ ಸಂಬಂಧಿಸಿದಂತೆ ಈ ಬೆದರಿಕೆ ಹಾಕಲಾಗಿದೆ. ಸುಬ್ರಹ್ಮಣ್ಯಂ ಎಂಬವರಿಂದ ಮಯೂರ್ ಅವರು ಬೆಂಗಳೂರು ಹೊರವಲಯ ಬೇಗೂರು ಬಳಿಯ ಪರಂಗಿಪಾಳ್ಯದಲ್ಲಿ ಸೈಟ್ ಖರೀದಿಗೆ ಮುಂದಾಗಿದ್ದರು.

    ಜನವರಿ 22 ರಂದು ಗೆಳೆಯನೊಂದಿಗೆ ಮಯೂರ್ ಸೈಟ್ ನೋಡಲು ಹೋಗಿದ್ದರು. ಆಗ ಮಯೂರ್ ಕರಾರು ಮಾಡಿಕೊಂಡಿದ್ದ ಸೈಟ್‍ನಲ್ಲಿ ಕಾಂಪೌಂಡ್ ಇತ್ತು. ಈ ಸೈಟ್ ಅನಂತರಾಮರೆಡ್ಡಿ ಹಾಗೂ ಗನ್ ಮಂಜಣ್ಣ ಎಂಬವರಿಗೆ ಸೇರಿದ್ದಾಗಿದ್ದು, ನೀವು ಇಲ್ಲಿಗೆ ಬಂದರೆ ಸುಮ್ಮನೇ ಬಿಡುವುದಿಲ್ಲ ಅಂತ ಮಯೂರ್‍ಗೆ ಆವಾಜ್ ಹಾಕಿದ್ದಾರೆ.

    ಇತ್ತ ಅನಂತರಾಮರೆಡ್ಡಿಯನ್ನು ಸಂಪರ್ಕಿಸಿರೋ ಮಯೂರ್, ಆ ಜಾಗವನ್ನ ನನ್ನ ಮಗನ ಹೆಸರಿಗೆ ದಾನ ಪತ್ರ ಮಾಡಿಕೊಟ್ಟಿದ್ದೇನೆ. ಅಲ್ಲಿಗೆ ಯಾರನ್ನು ಕೂಡ ಬರಲು ಬಿಡಲ್ಲ. ನೀನು ಆ ಜಾಗಕ್ಕೆ ಬಾ ಆಮೇಲೆ ನಾವು ಯಾರು ಎಂದು ಗೊತ್ತಾಗುತ್ತದೆ ಎಂದು ಅನಂತರಾಮರೆಡ್ಡಿ, ಮಯೂರ್ ಪಟೇಲ್ ಗೆ ಅವಾಜ್ ಹಾಕಿ ಜೀವಬೆದರಿಕೆ ಒಡ್ಡಿದ್ದಾರೆ.

    ನಾನು ಅಗ್ರಿಮೆಂಟ್ ಹಾಕಿಕೊಂಡಿರೋ ಸೈಟಿಗೆ ಅಕ್ರಮವಾಗಿ ಕಂಪೌಂಡ್ ನಿರ್ಮಿಸಿದ್ದಾರೆ. ನಕಲಿ ದಾಖಲಾತಿಗಳನ್ನ ಸೃಷ್ಟಿಸಿಕೊಂಡು ಅನಂತರಾಮರೆಡ್ಡಿ ನಿಜ ದಾಖಲಾತಿ ಅಂತ ಬೆದರಿಕೆ ಹಾಕ್ತಿದ್ದಾರೆ ಎಂದು ಮಯೂರ್ ದೂರಿದ್ದಾರೆ. ಅಲ್ಲದೆ ಅನಂತರಾಮರೆಡ್ಡಿ, ಆತನ ಮಗ ಮಂಜುನಾಥ್ ರೆಡ್ಡಿ ಹಾಗೂ ನಾಲ್ವರ ವಿರುದ್ಧ ಹೆಚ್.ಎಸ್.ಆರ್ ಲೇಔಟ್ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.

  • ಪರಾರಿಯಾಗಿದ್ದ ನಟ, ಗಾಯಕ ದೀಪ್ ಸಿಧು ಕೊನೆಗೂ ಬಂಧನ

    ಪರಾರಿಯಾಗಿದ್ದ ನಟ, ಗಾಯಕ ದೀಪ್ ಸಿಧು ಕೊನೆಗೂ ಬಂಧನ

    ನವದೆಹಲಿ: ರೈತರ ಟ್ರ್ಯಾಕ್ಟರ್  ರ‍್ಯಾಲಿ ವೇಳೆ ಹಿಂಸಾಚಾರ ಮತ್ತು ಕೆಂಪು ಕೋಟೆ ಮೇಲೆ ಧಾರ್ಮಿಕ ಧ್ವಜ ಹಾರಿಸಿದ ಸಂಬಂಧ ದೆಹಲಿಯ ವಿಶೇಷ ಪೊಲೀಸ್ ತಂಡ ನಟ, ಗಾಯಕ ದೀಪ್ ಸಿಧುನನ್ನು ಬಂಧಿಸಿದ್ದಾರೆ.

    ಜನವರಿ 26 ರ ದೆಹಲಿಯಲ್ಲಿ ನಡೆದ ರೈತರ ಟ್ರ್ಯಾಕ್ಟರ್ ರ‍್ಯಾಲಿ  ವೇಳೆ ಕೆಂಪು ಕೋಟೆಯ ಮೇಲೆ ಖಾಸಗಿ ಧ್ವಜ ಹಾರಿಸಲು ಸಿಧು ಸಹಕರಿಸಿದ್ದನು. ಅಷ್ಟೇ ಅಲ್ಲದೇ ಅಲ್ಲಿಂದಲೇ ಫೇಸ್‍ಬುಕ್ ಲೈವ್ ಮಾಡಿದ್ದ. ಸಿಧುನಿಂದಲೇ ಪ್ರತಿಭಟನೆ ಹಾದಿ ತಪ್ಪಿತು ಎಂದು ರೈತ ಮುಖಂಡರು ಆರೋಪ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಸಿಧು ಬಂಧನವಾಗಿದೆ.

    ಪ್ರಮುಖ ಆರೋಪಿಯಾಗಿರುವ ದೀಪ್ ಸಿಧು ತಲೆ ಮರೆಸಿಕೊಂಡಿದ್ದನು. ಈ ಹಿನ್ನೆಲೆ ಸಿಧು ಗಾಹೂ ಇತರೆ ಮೂವರು ಆರೋಪಿಗಳ ಕುರಿತಾಗಿ ಮಾಹಿತಿ ನೀಡಿದರೆ 1 ಲಕ್ಷ ರೂಪಾಯಿ ನೀಡುವುದಾಗಿ ಪೊಲೀಸರು ಬಹುಮಾನ ಪ್ರಕಟಿಸಿದ್ದರು. ಸಿಧುನ ಹುಡುಕಾಟದಲ್ಲಿರುವ ಪೊಲೀಸರಿಗೆ ಸಿಧು ತನ್ನ ಗೆಳತಿಯ ಫೋನ್ ಬಳಕೆ ಮಾಡುತ್ತಿದ್ದಾನೆ ಎಂದು ಸುಳಿವು ಸಿಕ್ಕಿದೆ. ಈ ಕುರಿತಾಗಿ ಮಾಹಿತಿ ಪಡೆದ ಪೊಲೀಸ್ ತಂಡ ಸಿಧು ಇದ್ದ ಸ್ಥಳವನ್ನು ಪತ್ತೆ ಮಾಡಿ ಅರೆಸ್ಟ್ ಮಾಡಿದ್ದಾರೆ.

    ನನ್ನನ್ನು ದೇಶದ್ರೋಹಿ ಎಂದು ಕರೆದಿದ್ದಾರೆ. ರೈತ ಪ್ರತಿಭಟನೆಗೆ ನನ್ನನ್ನೇ ಸಮರ್ಪಿಸಿಕೊಂಡು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದೇನು. ಆದರೆ ಗಣರಾಜ್ಯೋತ್ಸವದ ಗಲಭೆ ನಂತರ ರೈತ ಸಂಘಟನೆಗಳು, ರೈತ ಮುಖಂಡರು ನನ್ನನ್ನು ಕಡೆಗಳಿಸುತ್ತಿದ್ದಾರೆ. ನಾನು ಪಂಜಾಬ್ ಜನರಿಗಾಗಿ ಧ್ವನಿ ಎತ್ತಿದೆ. ಕೆಂಪು ಕೋಟೆಯಲ್ಲಿ ಹಲವು ಗಾಯಕರು, ನಾಯಕರು ಸೇರಿದಂತೆ 5 ಲಕ್ಷಕ್ಕೂ ಹೆಚ್ಚು ಜನರು ಇದ್ದರು. ಆದರೆ ನನ್ನನ್ನು ಮಾತ್ರ ಆರೋಪಿ ಸ್ಥಾನದಲ್ಲಿ ನೋಡುತ್ತಿದ್ದಾರೆ. ನಾನೀಗ ಬಿಹಾರದ ಕಾರ್ಮಿಕರೊಂದಿಗೆ ಇದ್ದೇನೆ ಎಂದು ಫೇಸ್‍ಬುಕ್ ವೀಡಿಯೋದಲ್ಲಿ ಕಣ್ಣೀರು ಹಾಕಿದ್ದ.

  • ರಾಜ್ಯ ಸರ್ಕಾರದ ವಿರುದ್ಧ ನಟ ಧ್ರುವ ಸರ್ಜಾ ಕಿಡಿ

    ರಾಜ್ಯ ಸರ್ಕಾರದ ವಿರುದ್ಧ ನಟ ಧ್ರುವ ಸರ್ಜಾ ಕಿಡಿ

    ಬೆಂಗಳೂರು: ರಾಜ್ಯ ಸರ್ಕಾರದ ವಿರುದ್ಧ ನಟ ಧ್ರುವ ಸರ್ಜಾ ಅವರು ಕಿಡಿಕಾರಿದ್ದಾರೆ.

    ಹೌದು. ಚಿತ್ರಮಂದಿರ ಶೇ.100 ಭರ್ತಿಗೆ ನಿರ್ಬಂಧ ಹೇರಿ, ಶೇ.50 ಭರ್ತಿಗೆ ರಾಜ್ಯ ಸರ್ಕಾರ ಆದೇಶ ನೀಡಿದೆ. ಈ ಹಿನ್ನೆಲೆಯಲ್ಲಿ ನಟ ಸರ್ಕಾರದ ನಡೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

    ಈ ಸಂಬಂಧ ಟ್ವೀಟ್ ಮಾಡಿರುವ ಧ್ರುವ, ಮಾರ್ಕೆಟ್‍ನಲ್ಲಿ ಗಿಜಿ ಗಿಜಿ ಜನ ಸೇರುತ್ತಾರೆ. ಬಸ್ಸಿನಲ್ಲೂ ಫುಲ್ ರಶ್ ಇರುತ್ತೆ. ಆದರೆ ಚಿತ್ರಮಂದಿರಕ್ಕೆ ಮಾತ್ರ ಏಕೆ ಶೇ.50 ನಿರ್ಬಂಧ ಎಂದು ಸರ್ಕಾರವನ್ನು ಪ್ರಶ್ನಿಸಿದ್ದಾರೆ. ಅಲ್ಲದೆ ಈ ಟ್ವೀಟ್ ಅನ್ನು ಸಿಎಂ, ಡಿಸಿಎಂ ಅಶ್ವತ್ಥ್ ನಾರಾಯಣ್ ಹಾಗೂ ಆರೋಗ್ಯ ಸಚಿವ ಸುಧಾಕರ್‍ಗೆ ಟ್ಯಾಗ್ ಮಾಡಿದ್ದಾರೆ.

    ಮಹಾಮಾರಿ ಕೊರೊನಾ ವೈರಸ್ ಪ್ರಕರಣಗಳು ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಚಿತ್ರಮಂದಿರಗಳ ಭರ್ತಿಗೆ ಆದೇಶ ನೀಡಿ ಮಾರ್ಗಸೂಚಿ ಪ್ರಕಟಿಸಿ, ರಾಜ್ಯ ಸರ್ಕಾರಗಳು ಈ ಸಂಬಂಧ ನಿರ್ಧಾರ ಕೈಗೊಳ್ಳಬಹುದು ಎಂದು ಸೂಚಿಸಿತ್ತು. ಆದರೆ ರಾಜ್ಯ ಸರ್ಕಾರ ಚಿತ್ರಮಂದಿರಗಳಲ್ಲಿ ಶೇ. 50ರಷ್ಟು ಆಸನ ಮಾತ್ರ ಭರ್ತಿ ಮಾಡಲು ಅವಕಾಶ ನೀಡಿ ಮಂಗಳವಾರ ಆದೇಶ ಹೊರಡಿಸಿದೆ. ಇದರಿಂದ ದೊಡ್ಡ ದೊಡ್ಡ ಸಿನಿಮಾಗಳಿಗೆ ಮತ್ತೆ ನಿರಾಸೆಯಾಗಿದೆ.

    ಒಟ್ಟಿನಲ್ಲಿ ಚಿತ್ರಮಂದಿರ ಶೇ.100 ರಷ್ಟು ಭರ್ತಿಗೆ ಕೇಂದ್ರ ಅನುಮತಿ ಕೊಟ್ಟರೂ ರಾಜ್ಯ ಸರ್ಕಾರ ಅಡ್ಡಿಪಡಿಸಿದೆ. ಈ ಹಿನ್ನೆಲೆಯಲ್ಲಿ ಟ್ವೀಟ್‍ನಲ್ಲಿ ನಟ ಧೃವ ಸರ್ಜಾ ಅಸಮಾಧಾನ ಹೊರಹಾಕಿದ್ದಾರೆ.

  • ಶ್ರೀ ರಾಮಮಂದಿರ ನಿರ್ಮಾಣ ನಿಧಿ ಸಮರ್ಪಣಾ ಅಭಿಯಾನಕ್ಕೆ ಅಭಿಷೇಕ್ ಚಾಲನೆ

    ಶ್ರೀ ರಾಮಮಂದಿರ ನಿರ್ಮಾಣ ನಿಧಿ ಸಮರ್ಪಣಾ ಅಭಿಯಾನಕ್ಕೆ ಅಭಿಷೇಕ್ ಚಾಲನೆ

    – ದೇಣಿಗೆ ನೀಡಿದ ಅಂಬಿ ಪುತ್ರ

    ಮೈಸೂರು: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಕೆಲಸ ಭರದಿಂದ ಸಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ದೇಶಾದ್ಯಂತ ನಿಧಿ ಸಮರ್ಪಣಾ ಅಭಿಯಾನ ಕೈಗೊಳ್ಳಲಾಗಿದೆ. ಅಂತೆಯೇ ಮೈಸೂರಿನಲ್ಲಿ ಈ ಅಭಿಯಾನಕ್ಕೆ ನಟ ಅಭಿಷೇಕ್ ಅಂಬರೀಶ್ ಚಾಲನೆ ನೀಡಿದ್ದಾರೆ.

    ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ವತಿಯಿಂದ ನಿಧಿ ಸಮರ್ಪಣಾ ಅಭಿಯಾನ ಆಯೋಜಿಸಲಾಗಿತ್ತು. ಹೀಗಾಗಿ ಟ್ರಸ್ಟ್ ರಾಮಮಂದಿರ ನಿರ್ಮಾಣಕ್ಕೆ ಹಣ ನೀಡುವ ಸಲುವಾಗಿ ಅಭಿಯಾನ ಹಮ್ಮಿಕೊಂಡಿದೆ. ಮೈಸೂರಿನ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ಅಭಿಷೇಕ್ ಚಾಲನೆ ನೀಡಿದ್ದಾರೆ.

    ಚಾಲನೆ ನೀಡಿದ ಬಳಿಕ ನಟ ಟ್ರಸ್ಟ್ ಗೆ ಸ್ವತಃ ದೇಣಿಗೆ ನೀಡಿದ್ದಾರೆ. ಈ ವೇಳೆ ಬಿಜೆಪಿ ನಗರಾಧ್ಯಕ್ಷ ಶ್ರೀವತ್ಸ, ಸ್ಥಳೀಯ ಬಿಜೆಪಿ ಮುಖಂಡರು ಸೇರಿದಂತೆ ಟ್ರಸ್ಟ್ ಪದಾಧಿಕಾರಿಗಳು ಭಾಗಿಯಾಗಿದ್ದಾರೆ.

    ಈಗಾಗಲೇ ಶ್ರೀ ಕ್ಷೇತ್ರ ಧರ್ಮಸ್ಥಳದ ವತಿಯಿಂದ 25 ಲಕ್ಷ ದೇಣಿಗೆ ನೀಡಲಾಗಿದೆ. ಹಾಗೆಯೇ ನಟಿ ಪ್ರಣಿತಾ ಕೂಡ ಕೈ ಜೋಡಿಸಿದ್ದು, ರಾಮ ಮಂದಿರ ನಿರ್ಮಾಣಕ್ಕೆ 1 ಲಕ್ಷ ರೂ. ನೀಡುವುದಾಗಿ ಘೋಷಿಸಿದ್ದರು. ಈ ಕುರಿತು ಟ್ವೀಟ್ಟರ್‍ನಲ್ಲಿ ವೀಡಿಯೋ ಹಂಚಿಕೊಳ್ಳುವ ಮೂಲಕ ತಿಳಿಸಿದ್ದ ನಟಿ, ಅಯೋಧ್ಯೆ ರಾಮ ಮಂದಿರ ನಿಧಿ ಸಮರ್ಪಣಾ ಅಭಿಯಾನದ ಭಾಗವಾಗಿ ಆರಂಭಿಕವಾಗಿ 1 ಲಕ್ಷ ರೂ. ನೀಡುವುದಾಗಿ ಪ್ರತಿಜ್ಞೆ ಸ್ವೀಕರಿಸುತ್ತಿದ್ದೇನೆ. ನೀವೂ ಸಹ ಇದರ ಭಾಗವಾಗಿ ಐತಿಹಾಸಿಕ ಅಭಿಯಾನಕ್ಕೆ ಕೈ ಜೋಡಿಸಿ ಎಂದು ನಟಿ ಮನವಿ ಮಾಡಿದ್ದರು.

  • ರಾಜಕೀಯ ಪಕ್ಷ ಸ್ಥಾಪನೆಯ ನಿರ್ಧಾರದಿಂದ ಹಿಂದೆ ಸರಿದ ರಜನಿಕಾಂತ್

    ರಾಜಕೀಯ ಪಕ್ಷ ಸ್ಥಾಪನೆಯ ನಿರ್ಧಾರದಿಂದ ಹಿಂದೆ ಸರಿದ ರಜನಿಕಾಂತ್

    ಚೆನ್ನೈ: ನಟ ರಜನಿಕಾಂತ್ ತಮ್ಮ ಹೊಸ ಅಧ್ಯಾಯವಾಗಿ ರಾಜಕೀಯ ಪಕ್ಷವನ್ನು ಜನವರಿಯಲ್ಲಿ ಸ್ಥಾಪಿಸುವುದಾಗಿ ಘೋಷಿಸಿಕೊಂಡಿದ್ದರು. ಆದರೆ ಇದೀಗ ದಿಢೀರ್ ಈ ನಿರ್ಧಾರದಿಂದ ಹೊರಬಂದಿರುವ ನಟ, ತಮ್ಮ ಆರೋಗ್ಯ ಸಮಸ್ಯೆಯಿಂದಾಗಿ ಪಕ್ಷ ಸ್ಥಾಪಿಸುವುದಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.

    2021ರ ತಮಿಳುನಾಡು ಚುನಾವಣೆಗಾಗಿ ರಾಜಕೀಯ ಪಕ್ಷ ಕಟ್ಟಲು ಹೊರಟಿದ್ದ ತಲೈವಾ, ಕೆಲದಿನಗಳ ಹಿಂದೆ ಆರೋಗ್ಯ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಇದೀಗ ಆಸ್ಪತ್ರೆಯಿಂದ ಡಿಸ್ರ್ಟಾಜ್ ಆದ ಬೆನ್ನಲ್ಲೇ ಆರೋಗ್ಯ ಸಮಸ್ಯೆ ದೇವರ ಎಚ್ಚರಿಕೆಯಾಗಿದೆ. ಹಾಗಾಗಿ ನನ್ನನ್ನು ನಂಬುವ ಜನರನ್ನು ಬಲಿಪಶು ಮಾಡಲು ಬಯಸುವುದಿಲ್ಲ ಎಂದು ಹೇಳಿಕೊಂಡಿದ್ದಾರೆ.

    ಇತ್ತೀಚೆಗೆ ಮೂತ್ರಪಿಂಡದ ಕಸಿ ಮಾಡಿಸಿಕೊಂಡಿದ್ದ ರಜನಿಕಾಂತ್ ಹೈದರಾಬಾದ್‍ನ ಆಸ್ಪತ್ರೆಯಲ್ಲಿ ಅಧಿಕ ರಕ್ತದೊತ್ತಡ ಸಮಸ್ಯೆಯಿಂದ ಮೂರು ದಿನಗಳ ಕಾಲ ಚಿಕಿತ್ಸೆ ಪಡೆದುಕೊಂಡಿದ್ದರು. ನಂತರ ಚೆನ್ನೈಗೆ ಮರಳಿದ್ದ ನಟ, ತಮ್ಮ ಆರೋಗ್ಯ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು ಕೆಲ ದಿನಗಳ ಹಿಂದೆ ತೀರ್ಮಾನಿಸಿದ್ದ ತಮ್ಮ ನಿರ್ಧಾರದಿಂದ ಹಿಂದೆ ಸರಿಯುವುದಾಗಿ ಅಭಿಮಾನಿಗಳಿಗೆ ತಿಳಿದಿದ್ದಾರೆ.

  • ಸ್ನಾನಕ್ಕೆಂದು ನೀರಿಗಿಳಿದ ನಟ ಶವವಾಗಿ ಪತ್ತೆ!

    ಸ್ನಾನಕ್ಕೆಂದು ನೀರಿಗಿಳಿದ ನಟ ಶವವಾಗಿ ಪತ್ತೆ!

    ತಿರುವನಂತಪುರಂ: ಖ್ಯಾತ ನಟ ಮಾಲಂಕಾರ ಡ್ಯಾಮ್ ನಲ್ಲಿ ಸ್ನಾನಕ್ಕೆ ಎಂದು ಹೋದವರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಅನಿಲ್ ನೆಡುಮಂಗಾಡ್ (48) ಮೃತಪಟ್ಟ ಮಲಯಾಳಂ ನಟ. ಇವರು ಸ್ನಾನಕ್ಕೆ ಎಂದು ಡ್ಯಾಮ್‍ಗೆ ಇಳಿದು ಸಾವನ್ನಪ್ಪಿದ್ದಾರೆ.

    ಪ್ರಾಥಮಿಕ ವಿಚಾರಣೆಯ ಪ್ರಕಾರ, ಸಂಜೆ ಸುಮಾರಿಗೆ ನಟ ಅನಿಲ್ ನೆಡುಮಂಗಾಡ್ ಅವರ ಸ್ನೇಹಿತರೊಂದಿಗೆ ಶೂಟಿಂಗ್ ವಿರಾಮದ ಸಮಯದಲ್ಲಿ ಸ್ನಾನ ಮಾಡಲು ಡ್ಯಾಮ್‍ಗೆ ಹೋಗಿದ್ದಾರೆ. ಆಗ ಅಲ್ಲಿ ಅವರು ಆಳವಾದ ನೀರಿಗೆ ಇಳಿದಾಗ ನೀರಿನ ಸೆಳೆತ ಅವರನ್ನು ಎಳೆದೊಯ್ದಿದೆ. ತಕ್ಷಣ ಅನಿಲ್ ಅವರನ್ನು ನೀರಿನಿಂದ ರಕ್ಷಿಸಿ ಹತ್ತಿರದ ಖಾಸಗಿ ಆಸ್ಪತ್ರೆಗೆ ಸಾಗಿಸಿದರೂ ಪ್ರಯೋಜನವಾಗಿಲ್ಲ. ನಟನ ಶವವನ್ನು ತೋಡುಪುಳ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಎಂದು ಇಡುಕಿ ವಿಶೇಷ ಶಾಖೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

    ಅನಿಲ್ ಟಿವಿ ನಿರೂಪಕರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು ಮತ್ತು ಕಮ್ಮಟ್ಟಿ ಪಾಡಮ್, ಎನ್ಜನ್ ಸ್ಟೀವ್ ಲೋಪೆಜ್ ಮತ್ತು ಪೊರಿಂಜು ಮರಿಯಮ್ ಜೋಸ್ ಚಿತ್ರಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದರು. ಇತ್ತೀಚೆಗೆ ತೆರೆಕಂಡ ಅಯ್ಯಪ್ಪನುಂಕೊಶಿಯಮ್ ಚಿತ್ರದಲ್ಲಿ ಪೊಲೀಸ್ ಅಧಿಕಾರಿಯಾಗಿ ಅಭಿನಯಿಸಿದ್ದ ಅನಿಲ್, ಅಪಾರ ಜನಪ್ರಿಯತೆ ಗಳಿಸಿ ಮಲಯಾಳಂ ಚಿತ್ರರಂಗದಲ್ಲಿ ಒಳ್ಳೆಯ ಹೆಸರನ್ನು ಮಾಡಿಕೊಂಡಿದ್ದರು.

    ಘಟನೆ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಚಿತ್ರದ ಚಿತ್ರೀಕರಣಕ್ಕೆ ಸಂಬಂಧಿಸಿದಂತೆ ಅವರು ತೊಡುಪುಳದಲ್ಲಿದ್ದರೆಂದು ಮಾಹಿತಿ ತಿಳಿಸಿದೆ.

  • ಸೋನು ಸೂದ್‍ಗೆ ದೇವಾಲಯ ಕಟ್ಟಿ ಪೂಜಿಸಿದ ಅಭಿಮಾನಿಗಳು

    ಸೋನು ಸೂದ್‍ಗೆ ದೇವಾಲಯ ಕಟ್ಟಿ ಪೂಜಿಸಿದ ಅಭಿಮಾನಿಗಳು

    ಹೈದ್ರಾಬಾದ್: ನಿರ್ಗತಿಕರ ಬಾಳಿನ ಆಶಾಕಿರವಾಣವಾದ ರಿಯಲ್ ಹೀರೊ ಸೋನು ಸೂದ್ ಹಲವರ ಪಾಲಿನ ದೇವರಾಗಿದ್ದಾರೆ. ಹೀಗಿರುವಾಗ ತೆಲಂಗಾಣದಲ್ಲಿ ಅವರ ಅಭಿಮಾನಿಗಳು ಸೋನು ಸೂದ್ ಅವರ ಪ್ರತಿಮೆ ಇಟ್ಟು ದೇವಸ್ಥಾನವನ್ನು ಕಟ್ಟಿದ್ದಾರೆ.

    ಕೊರೋನಾ ಲಾಕ್‍ಡೌನ್ ವೇಳೆಯಲ್ಲಿ ನಟ ಮತ್ತು ಲೋಕೋಪಕಾರಿ ಸೋನು ಸೂದ್ ಅವರ ಮಾನವೀಯ ಕಾರ್ಯವನ್ನು ಅರಿತುಕೊಂಡು, ತೆಲಂಗಾಣದ ಸಿದ್ದಿಪೇಟೆ ಜಿಲ್ಲಾ ಅಧಿಕಾರಿಗಳ ಸಹಾಯದಿಂದ ದುಬ್ಬಾ ತಾಂಡಾ ಗ್ರಾಮದ ಸ್ಥಳೀಯ ಜನರು ದೇವಾಲಯವನ್ನು ನಿರ್ಮಿಸಿದ್ದಾರೆ. ಇವರು ಸಹಾಯವನ್ನು ನೆನೆದು ಸೋನು ಸೂದ್ ಪ್ರತಿಮೆಯನ್ನು ಪೂಜಿಸುತ್ತಿದ್ದಾರೆ.

     

    ಸ್ಥಳೀಯ ಜನರ ಸಮ್ಮುಖದಲ್ಲಿ ದೇವಾಲಯದ ಉದ್ಘಾಟನೆ ಮಾಡಲಾಗಿದೆ. ಮಹಿಳೆಯರು ಸಾಂಪ್ರದಾಯಿಕ ಉಡುಪನ್ನು ಧರಿಸಿ ಜಾನಪದ ಗೀತೆಗಳನ್ನು ಹಾಡುತ್ತಾ ಸೋನು ಸೂದ್ ಪ್ರತಿಮೆಗೆ ಆರತಿ ಮಾಡಿದ್ದಾರೆ.

    ಕೊರೊನಾ ವೈರಸ್ ಸಾಂಕ್ರಾಮಿಕದ ಮಧ್ಯೆ ಸೂದ್ ಅವರು ಸಾರ್ವಜನಿಕರಿಗಾಗಿ ಸಾಕಷ್ಟು ಉತ್ತಮ ಕೆಲಸಗಳನ್ನು ಮಾಡಿದ್ದಾರೆ ಮತ್ತು ಈಗಲೂ ಮಾಡುತ್ತಿದ್ದಾರೆ ಎಂದು ಜಿಲ್ಲಾ ಪರಿಷತ್ ಸದಸ್ಯ ಗಿರಿ ಕೊಂಡಾಲ್ ರೆಡ್ಡಿ ಉದ್ಘಾಟನೆ ವೇಳೆ ಹೇಳಿದ್ದಾರೆ.

    ಲಾಕ್‍ಡೌನ್ ಸಮಯದಲ್ಲಿ ಸಾವಿರಾರು ವಲಸೆ ಕಾರ್ಮಿಕರು ಊರಿಗೆ ತೆರಳಲು ಸಾಧ್ಯವಾಗದೆ ಅಸಾಹಯಕ ಸ್ಥಿತಿಯಲ್ಲಿದ್ದಾಗ ಸೋನು ಸೂದ್ ಬಡವರು, ನಿರ್ಗತಿಕರು, ವಲಸೆ ಕಾರ್ಮಿಕರಿಗೆ ಸಹಾಯ ಮಾಡುವ ಮೂಲಕವಾಗಿ ಮಾನವೀಯತೆ ಮೇರೆದಿದ್ದರು.

    ಲಾಕ್‍ಡೌನ್ ಸಮಯದಲ್ಲಿ ಮಾಡಿದ ಸಹಾಯ ರಿಯಲ್ ಹೀರೋ ಆಗಿದ್ದಾರೆ. ಮಾನವೀಯತೆಗೆ ಮತ್ತೊಂದು ಹೆಸರೆ ಸೋನು ಸೂದ್ ಆಗಿದ್ದಾರೆ. ಯಾವುದೇ ರೀತಿಯ ಸಮಸ್ಯೆಗಳು ಎದುರಾದರೂ ಬಗೆಹರಿಸುತ್ತಾರೆ. ಭಾರತದಲ್ಲಿರುವ ಒಬ್ಬನೇ ದೇವರು ಎಂದರೆ ಸೋನು ಸೂದ್. ತನ್ನ ಒಳ್ಳೆಯ ಕಾರ್ಯಗಳಿಂದ ದೇವರ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಹೀಗಾಗಿ ನಾವು ಸೋನು ಸೂದ್‍ಗಾಗಿ ದೇವಾಲಯವನ್ನು ನಿರ್ಮಿಸಿದ್ದೇವೆ ಎಂದು ಇಲ್ಲಿನ ಸ್ಥಳಿಯರು ಹೇಳಿದ್ದಾರೆ.