Tag: Actor Yogesh

  • ʻಲೂಸ್ ಮಾದʼ ಚಿತ್ರಕ್ಕೆ ಯೋಗಿನೇ ಹೀರೋ

    ʻಲೂಸ್ ಮಾದʼ ಚಿತ್ರಕ್ಕೆ ಯೋಗಿನೇ ಹೀರೋ

    ಕನ್ನಡದ ಅತ್ಯಂತ ಜನಪ್ರಿಯ ಚಿತ್ರಗಳಲ್ಲಿ ಒಂದಾದ ʻದುನಿಯಾʼ ಚಿತ್ರದಲ್ಲಿ ʻಲೂಸ್ ಮಾದʼ (Loose Mada Movie) ಪಾತ್ರವನ್ನು ಯೋಗೇಶ್ ಅವರು ಮಾಡಿದ್ದರು. ಆ ಪಾತ್ರಕ್ಕೆ ನೋಡುಗರು ಫಿದಾ ಆದರು ಅಂದಿನಿಂದಲೂ “ಲೂಸ್ ಮಾದ” ಯೋಗೇಶ್ ಅಂತಲೇ ಯೋಗಿ ಜನಪ್ರಿಯರಾದರು. ಈಗ ʻಲೂಸ್ ಮಾದʼ ಚಿತ್ರದ ಶೀರ್ಷಿಕೆಯಾಗಿದೆ. ಈ ಚಿತ್ರದ ನಾಯಕನಾಗಿ ಯೋಗೇಶ್ (Loose Mada Yogi) ಅವರೇ ಅಭಿನಯಿಸುತ್ತಿದ್ದಾರೆ.

    ಜಾನಕಿ ಕಂಬೈನ್ಸ್ ಲಾಂಛನದಲ್ಲಿ ಧರ್ಮೇಂದ್ರ ಅವರು ನಿರ್ಮಿಸುತ್ತಿರುವ ಈ ಚಿತ್ರವನ್ನು ರಂಜಿತ್ ಕುಮಾರ್ ಗೌಡ ನಿರ್ದೇಶಿಸುತ್ತಿದ್ದಾರೆ. ಇತ್ತೀಚೆಗೆ ಈ ಚಿತ್ರದ ಮುಹೂರ್ತ ಸಮಾರಂಭ ಬಂಡೆ ಮಹಾಂಕಾಳಿ ದೇವಸ್ಥಾನದಲ್ಲಿ ನೆರವೇರಿತು. ಯೋಗೇಶ್ ಅವರ ತಂದೆ, ನಿರ್ಮಾಪಕ ಟಿ.ಪಿ ಸಿದ್ದರಾಜು ಮೊದಲ ಸನ್ನಿವೇಶಕ್ಕೆ ಆರಂಭ ಫಲಕ ತೋರಿದರು. ಚಿತ್ರದ ನಿರ್ಮಾಪಕ ಧರ್ಮೇಂದ್ರ ಅವರೇ ಕ್ಯಾಮೆರಾ ಚಾಲನೆ ಮಾಡಿದರು. ಉದಯ್ ಶೆಟ್ಟಿ, ಉಮೇಶ್ ಶೆಟ್ಟಿ, ರಘು ಗುಜ್ಜಲ್ ಮುಂತಾದ ಗಣ್ಯರು ಹಾಗೂ ಚಿತ್ರತಂಡದ ಸದಸ್ಯರು ಮುಹೂರ್ತ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಸಾಹಿತ್ಯ ಯೋಗೇಶ್ ಅವರು ಮುಹೂರ್ತ ಸಮಾರಂಭಕ್ಕೆ ಆಗಮಿಸಿದ್ದರು. ಸಿನಿಮಾ ಮುಹೂರ್ತದ ನಂತರ ಚಿತ್ರತಂಡದ ಸದಸ್ಯರು ಪತ್ರಿಕಾಗೋಷ್ಠಿಯಲ್ಲಿ ಚಿತ್ರದ ಕುರಿತು ಮಾತನಾಡಿದರು.

    ಈ ವೇಳೆ ನಿರ್ಮಾಪಕ ಧರ್ಮೇಂದ್ರ ಮಾತನಾಡಿ, ನಾನು ಮೂಲತಃ ಮಂಗಳೂರಿನವನು, ವೃತ್ತಿಯಲ್ಲಿ ಕಂಟ್ರ್ಯಾಕ್ಟರ್. ಸಿನಿಮಾ ರಂಗ ನನಗೆ ಹೊಸತು. ಕೆಲ ಸ್ನೇಹಿತರು ಈ ಚಿತ್ರವನ್ನ ನಿರ್ಮಾಣ ಮಾಡಿ ಅಂತ ಹೇಳಿದರು. ನಿರ್ದೇಶಕರು ಹೇಳಿದ ಕಥೆಯೂ ಇಷ್ಟವಾಯಿತು. ಜೊತೆಗೆ ನಾನು ಲೂಸ್ ಮಾದ ಯೋಗೇಶ್ ಅವರ ಅಭಿಮಾನಿ. ಅವರೇ ನಮ್ಮ ಚಿತ್ರದ ನಾಯಕರಾಗಿರುವುದು ಖುಷಿಯಾಗಿದೆ. ಇಂದಿನ ಸಮಾರಂಭಕ್ಕೆ ಆಗಮಿಸಿರುವ ಪ್ರತಿಯೊಬ್ಬರಿಗೂ ನನ್ನ ಧನ್ಯವಾದ. ನಮ್ಮ ಚಿತ್ರಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು.

    ʻಲೂಸ್ ಮಾದʼ ನನ್ನ ನಿರ್ದೇಶನದ 3ನೇ ಚಿತ್ರ. ಈ ಚಿತ್ರಕ್ಕೆ ʻThe Wolfʼ ಎಂಬ ಅಡಿಬರಹವಿದೆ. ಇದೊಂದು ಕರಾವಳಿ ಭಾಗದಲ್ಲಿ ನಡೆಯುವ ಕಥೆ. ಉಡುಪಿ, ಸುರತ್ಕಲ್ ಹಾಗೂ ಮಂಗಳೂರಿನಲ್ಲಿ ಚಿತ್ರೀಕರಣವಾಗಲಿದೆ. ಆಗಸ್ಟ್ 25 ರಿಂದ ಚಿತ್ರೀಕರಣ ಆರಂಭವಾಗಲಿದೆ. ಯೋಗೇಶ್ ಅವರು ಹಲವು ವರ್ಷಗಳ ಪರಿಚಯ. ಅವರಿಗೆ ಈ ಚಿತ್ರದ ಕಥೆ ಹೇಳಿದೆ. ನಾಯಕನಾಗಿ ನಟಿಸಲು ಒಪ್ಪಿಕೊಂಡರು. ಧರ್ಮೇಂದ್ರ ಅವರು ನಿರ್ಮಾಣಕ್ಕೆ ಮುಂದಾದರು. ಎಲ್ಲಾ ಪ್ರಾಣಿಗಳಿಗಿಂತ ತೋಳವನ್ನು ಪಳಗಿಸುವುದು ಸ್ವಲ್ಪ ಕಷ್ಟ. ಅದು ಯಾರ ಮಾತನ್ನು ಕೇಳದ ಪ್ರಾಣಿ. ನಮ್ಮ ಚಿತ್ರದಲ್ಲಿ ನಾಯಕನ ಸ್ವಭಾವವೂ ಇದೇ ರೀತಿ. ಯಾವುದಕ್ಕೂ ಹಾಗೂ ಯಾರಿಗೂ ಅಂಜದ ಹುಡುಗ. ಈ ಹಿಂದೆ ಯೋಗೇಶ್ ಅವರು ಮಾಡಿರುವ ಪಾತ್ರಗಳಿಗಿಂತ ಭಿನ್ನ ಪಾತ್ರ. ಕಿಶೋರ್ ಅವರು ಸಹ ಈ ಚಿತ್ರದ ಮುಖ್ಯಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಆದಿ ಲೋಕೇಶ್, ಅಚ್ಯುತ ಕುಮಾರ್, ಗೋಪಾಲಕೃಷ್ಣ ದೇಶಪಾಂಡೆ ಮುಂತಾದವರು ತಾರಾಬಳಗದಲ್ಲಿದ್ದಾರೆ.

    ನಾಯಕ ಲೂಸ್ ಮಾದ ಯೋಗೇಶ್ ಮಾತನಾಡಿ, ನನ್ನ ಸ್ನೇಹಿತರ ಮೂಲಕ ನಿರ್ಮಾಪಕ ಧರ್ಮೇಂದ್ರ ಅವರು ಪರಿಚಯವಾದರು. ನಿರ್ದೇಶಕರು ಹೇಳಿದಂತೆ ನನಗೆ ಅವರು ಬಹಳ ವರ್ಷಗಳ ಪರಿಚಯ. ಈ ಹಿಂದೆ ನಮ್ಮಿಬ್ಬರ ಕಾಂಬಿನೇಶನ್ ನಲ್ಲಿ “ಕಂಸ” ಎಂಬ ಸಿನಿಮಾ ಆರಂಭವಾಗಬೇಕಿತ್ತು. ಕಾರಣಾಂತರದಿಂದ ಆ ಸಿನಿಮಾ ವಿಳಂಬವಾಯಿತು. ಈಗ “ಲೂಸ್ ಮಾದ” ಸಿನಿಮಾ ಶುರುವಾಗಿದೆ. ಈ ಶೀರ್ಷಿಕೆಯನ್ನಿಟ್ಟುಕೊಂಡು ಹಿಂದೆ ಸಾಕಷ್ಟು ನಿರ್ಮಾಪಕರು ಚಿತ್ರ ಮಾಡಲು ಮುಂದಾಗಿದ್ದರು. ನಾನೇ ಬೇಡ ಎನ್ನುತ್ತಿದ್ದೆ. ಆದರೆ ಈ ಕಥೆಗೂ ಶೀರ್ಷಿಕೆಗೂ ಪೂರಕವಾಗಿದೆ. “ದುನಿಯಾ” ಸಿನಿಮಾದ ಲೂಸ್ ಮಾದನ ಪಾತ್ರಕ್ಕೂ ಈ ಚಿತ್ರದ ಪಾತ್ರಕ್ಕೂ ಸಂಬಂಧ ಇರುವುದಿಲ್ಲ. ನೋಡುಗರಿಗೆ ಒಂದೊಳ್ಳೆ ಸಿನಿಮಾ ಕೊಡಬೇಕು. ಹಾಗಾಗಿ ಇಡೀ ತಂಡದ ಸಹಕಾರ ಮುಖ್ಯ. ನಮ್ಮ ಚಿತ್ರಕ್ಕೆ ಅಂತಹ ಉತ್ತಮ ತಂಡ ಸಿಕ್ಕಿದೆ. ಪ್ರದೀಪ್ ರೆಡ್ಡಿ ಛಾಯಾಗ್ರಹಣ, ರಂಜನ್ ಸಂಕಲನ, ಶಶಾಂಕ್ ಶೇಷಗಿರಿ ಸಂಗೀತ ನಿರ್ದೇಶನ, ವಿನೋದ್ ಸಾಹಸ ನಿರ್ದೇಶನ ಹಾಗೂ ಸಚಿನ್ ಪೂಜಾರಿ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ಕಿಶೋರ್, ಆದಿ ಲೋಕೇಶ್, ಅಚ್ಯುತಕುಮಾರ್ ಮೊದಲಾದ ಅನುಭವಿ ಕಲಾವಿದರ ತಾರಾಬಳಗವಿರುವ “ಲೂಸ್ ಮಾದ” ಚಿತ್ರ ನೋಡುಗರಿಗೆ ಮನೋರಂಜನೆಯ ರಸದೌತಣ ನೀಡುವುದು ಖಂಡಿತ ಎಂದು ತಿಳಿಸಿದರು.

    ಯೋಗೇಶ್ ಜೊತೆಗೆ ಅಭಿನಯಿಸುತ್ತಿರುವುದು ಖುಷಿಯಾಗಿದೆ. ಪಾತ್ರದ ಬಗ್ಗೆ ಹೆಚ್ಚು ಹೇಳುವ ಹಾಗಿಲ್ಲ ಎಂದರು ನಟ ಆದಿ ಲೋಕೇಶ್. ಸಂಗೀತ ನಿರ್ದೇಶಕ ಶಶಾಂಕ್ ಶೇಷಗಿರಿ, ಛಾಯಾಗ್ರಾಹಕ ಪ್ರದೀಪ್ ರೆಡ್ಡಿ, ಸಂಕಲನಕಾರ ರಂಜನ್, ಕಾರ್ಯಕಾರಿ ನಿರ್ಮಾಪಕ ಪವನ್ ಕುಮಾರ್ ಉಡುಪಿ ಹಾಗೂ ಚಿತ್ರದಲ್ಲಿ ಅಭಿನಯಿಸುತ್ತಿರುವ ವಿವಾನ್ ಆಕರ್ಷ್, ರಿತೇಶ್ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

  • ನನಗೆ ನೋಟಿಸ್ ನೀಡಿದ್ದು ಆಶ್ಚರ್ಯ ತಂದಿದೆ: ಲೂಸ್ ಮಾದ ಯೋಗಿ

    ನನಗೆ ನೋಟಿಸ್ ನೀಡಿದ್ದು ಆಶ್ಚರ್ಯ ತಂದಿದೆ: ಲೂಸ್ ಮಾದ ಯೋಗಿ

    – 2013ರ ಬಳಿಕ ರಾಗಿಣಿ ಸಂಪರ್ಕವಿಲ್ಲ
    – ಸಿಗರೇಟ್, ಕುಡಿತದ ಚಟ ಇದ್ದಿದ್ದು ನಿಜ

    ಬೆಂಗಳೂರು: ಡ್ರಗ್ಸ್ ಮಾಫಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ನನಗೆ ಐಎಸ್‍ಡಿ ಶನಿವಾರ ನೋಟಿಸ್ ನೀಡಿತ್ತು. ಇದರ ಅನ್ವಯ ನೋಟಿಸ್ ವಿಚಾರಣೆಗೆ ಹಾಜರಾಗಿ ಪೊಲೀಸರ ಪ್ರಶ್ನೆಗೆ ಉತ್ತರಿಸಿದ್ದೇನೆ ಎಂದು ನಟ ಲೂಸ್ ಮಾದ ಯೋಗಿ ಹೇಳಿದ್ದಾರೆ.

    ಮಾಧ್ಯಮಗಳಿಗೆ ಈ ಕುರಿತು ಮಾಹಿತಿ ನೀಡಿದ ಯೋಗಿ, ನನಗೆ ನೋಟಿಸ್ ನೀಡಿದ್ದು, ಆಶ್ಚರ್ಯ ತಂದಿದೆ. ಶನಿವಾರ ನೋಟಿಸ್ ನೀಡಿದ ಬಳಿಕ ತಂದೆಯವರಿಗೆ ಕರೆ ಮಾಡಿ ಮಾಹಿತಿ ನೀಡಿದೆ. ಅವರು ಹೋಗು ಎಂದು ಹೇಳಿದರು. ವಿಚಾರಣೆ ಸಂದರ್ಭದಲ್ಲಿ ಅವರು ಕೇಳಿದ ಎಲ್ಲಾ ಪ್ರಶ್ನೆಗಳಿಗೂ ಸರಿಯಾಗಿ ಉತ್ತರಿಸಿದ್ದೇನೆ. ಸುಮಾರು ಎರಡೂವರೆ ಗಂಟೆ ವಿಚಾರಣೆ ನಡೆಸಿದರು ಎಂದರು. ಇದನ್ನೂ ಓದಿ: ಮೊಬೈಲ್ ವಶಕ್ಕೆ ಪಡೆದಿಲ್ಲ, ಯಾವುದೇ ತಪ್ಪು ಮಾಡಿಲ್ಲ: ನಟಿ ರಶ್ಮಿತಾ ಚೆಂಗಪ್ಪ

    ಸಂದರ್ಶನವೊಂದರಲ್ಲಿ ನಾನು ಹೇಳಿದ ಒಂದೇ ಒಂದು ಮಾತಿನಿಂದ ನನಗೆ ನೋಟಿಸ್ ನೀಡಿದ್ದಾರೆ ಎನಿಸುತ್ತದೆ. ಮಾಡಬಾರದ ಚಟ ಕಲಿತೆ ಎಂದು ಸಂದರ್ಶನದಲ್ಲಿ ಹೇಳಿದ್ದೆ. ಆ ಮಾತಿನ ಅರ್ಥ ಹೆಚ್ಚು ಕುಡಿತ, ಸಿಗರೇಟ್ ಸೇದುವುದನ್ನು ಮಾಡಿದ್ದೆ ಅಷ್ಟೇ. ಆದರೆ ಈಗ ಎಲ್ಲದರಿಂದ ನಾನು ಮುಕ್ತನಾಗಿದ್ದೇನೆ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಮಾಲ್ ಇದೆಯಾ? ಡ್ರಗ್ಸ್ ಜಾಲದಲ್ಲಿ ಬಿಟೌನ್ ಪದ್ಮಾವತಿ ದೀಪಿಕಾ

    2011-12ರ ಮುನ್ನ ಪಾರ್ಟಿಗೆ ಹೋಗುತ್ತಿದ್ದೆ. ಆದಾದ ಬಳಿಕ ಯಾವುದೇ ಪಾರ್ಟಿಗೆ ಹೋಗಿಲ್ಲ. ಈ ಬಗ್ಗೆ ಮಾಧ್ಯಮದವರಿಗೆ ನನಗಿಂತೂ ಹೆಚ್ಚು ಸ್ಪಷ್ಟ ಮಾಹಿತಿ ಇದೆ. ವಿಚಾರಣೆ ವೇಳೆ ನನ್ನ ಸಿನಿಮಾ ಹಾಗೂ ನಿತ್ಯ ಚಟುವಟಿಕೆಗಳ ಬಗ್ಗೆ ಪ್ರಶ್ನೆ ಮಾಡಿದ್ದರು. ನಟಿ ರಾಗಿಣಿ ವಿಚಾರದಲ್ಲೂ ನನಗೆ ಯಾವುದೇ ಪ್ರಶ್ನೆ ಕೇಳಿಲ್ಲ. 2013ರ ಸಿನಿಮಾ ಬಳಿಕ ರಾಗಿಣಿ ಅವರೊಂದಿಗೆ ಯಾವುದೇ ಫೋನ್, ಸಂದೇಶ ಬಂದಿಲ್ಲ. ನನಗೂ ಫ್ಯಾಮಿಲಿ ಇದೆ ಎಂದರು. ಇದನ್ನೂ ಓದಿ: ಕಪ್ಪಾಗಿ ಹುಟ್ಟಿದ್ದು ಕರ್ಮನಾ?- ದುನಿಯಾ ವಿಜಿ ಪ್ರಶ್ನೆಗೆ ಜಗ್ಗೇಶ್ ಉತ್ತರ

    ನನ್ನ ವಿಚಾರಣೆ ಸಂದರ್ಭದಲ್ಲಿ ದಿಗಂತ್, ರಾಗಿಣಿ ಸೇರಿದಂತೆ ಬೇರೆ ಯಾರ ಬಗ್ಗೆಯೂ ಪ್ರಶ್ನೆ ಕೇಳಿಲ್ಲ. ನನಗೆ ಮಾತ್ರ ಅಲ್ಲದೇ ಸುಮಾರು 15 ರಿಂದ 20 ಜನರಿಗೆ ನೋಟಿಸ್ ನೀಡಲಾಗಿದೆ ಎಂಬ ಮಾಹಿತಿ ಇದೆ. ಆದರೆ ನಾನು ಯಾವುದೇ ಪಾರ್ಟಿಯಲ್ಲಿ ಭಾಗಿಯಾಗಿಲ್ಲ ಎಂಬುದನ್ನು ಅವರಿಗೆ ತಿಳಿಸಿದ್ದೇನೆ. ನಾನು ಎರಡು ಮೊಬೈಲ್ ಫೋನ್ ಬಳಕೆ ಮಾಡುತ್ತೇನೆ. ಎರಡು ನನ್ನ ಬಳಿಕಯೇ ಇದೆ. ಪೊಲೀಸರು ನನ್ನ ಫೋನ್ ವಶಕ್ಕೆ ಪಡೆದಿಲ್ಲ. ಡ್ರಗ್ಸ್ ವಿಚಾರದಲ್ಲಿ ನನ್ನ ಕಣ್ಣೇದುರು ಇದುವರೆಗೂ ಅಂತಹ ಘಟನೆ ನಡೆದಿಲ್ಲ ಎಂದು ಹೇಳಿದರು. ಇದನ್ನೂ ಓದಿ: ‘ಬ್ರಹ್ಮಗಂಟು’ ಗೀತಾ, ‘ಗಟ್ಟಿಮೇಳ’ ವಿಕ್ರಾಂತ್ ವಿಚಾರಣೆಗೆ ಹಾಜರ್

    ಐಪಿಎಲ್ ಆರಂಭದಲ್ಲಿ ಎಲ್ಲರೂ ಕುಳಿತು ಪಂದ್ಯ ವೀಕ್ಷಣೆ ಮಾಡುತ್ತಿದ್ದೆವೂ. ಆ ವೇಳೆ ಸೌಂಡ್ ಜಾಸ್ತಿ ಇದೆ ಎಂದು ನೆರೆಹೊರೆಯವರು ದೂರು ನೀಡಿದ್ದರು. ಆ ವೇಳೆ ಪೊಲೀಸರು ಸೂಚನೆ ನೀಡಿದ್ದರಿಂದ ತಪ್ಪಾಯ್ತು ಅಂತಾ ಹೇಳಿದ್ದೇವು. ಎಲ್ಲವೂ ಅಲ್ಲಿಗೆ ಮುಕ್ತವಾಯ್ತು. ಆದರೆ ಯಾವುದೇ ಪಾರ್ಟಿ ಮಾಡಿ ಸೌಂಡ್ ಮಾಡಿಲ್ಲ ಎಂದರು.

    ನನಗೆ ಸಿನಿಮಾ ರಂಗದಲ್ಲಿ ಹೆಚ್ಚು ಸ್ನೇಹಿತರು ಇಲ್ಲ. ಆದ್ದರಿಂದ 2011-12ರ ಬಳಿಕ ಹೊರ ಹೋಗುವುದನ್ನು ಬಿಟ್ಟಿದೆ. ಸದ್ಯ ವಿಚಾರಣೆ ಬಗ್ಗೆ ಯಾವುದೇ ಎದುರಿಸಲು ನನಗೆ ಭಯವಿಲ್ಲ. ಧೈರ್ಯವಾಗಿ ನಾನು ಎಲ್ಲವನ್ನೂ ಎದುರಿಸುತ್ತೇನೆ. ನನ್ನ ಪಾಸ್‍ಪೋರ್ಟ್ 2018ರಲ್ಲೇ ಎಕ್ಸ್ ಪೈರ್ ಆಗಿದೆ. ನಾನು ಶ್ರೀಲಂಕಾದಲ್ಲಿ ರಾಜ್ ಕಪ್ ಆಡಲು ಹೋಗಿದ್ದೆ ಅಷ್ಟೇ. ಆದಾದ ಬಳಿಕ ಎಲ್ಲೂ ಹೋಗಿಲ್ಲ. ಮುಂದಿನ ತಿಂಗಳು 09 ರಿಂದ ನನ್ನ ಹೊಸ ಸಿನಿಮಾ ಶೂಟಿಂಗ್ ಆರಂಭವಾಗುತ್ತಿದೆ. ಚಿತ್ರತಂಡಕ್ಕೂ ಯಾವುದೇ ಸಮಸ್ಯೆ ಇಲ್ಲ ಶೂಟಿಂಗ್ ಆರಂಭ ಮಾಡಬಹುದು ಎಂದು ಹೇಳಿದ್ದೇನೆ. ಮತ್ತೆ ಸಿನಿಮಾ ರಂಗಕ್ಕೆ ಹಿಂದಿರುತ್ತೇನೆ. ಉತ್ತಮ ಸಿನಿಮಾದೊಂದಿಗೆ ಪ್ರೇಕ್ಷಕರ ಎದುರು ಬರುತ್ತೇನೆ. ಕನ್ನಡ ಸಿನಿಮಾ ರಂಗದಲ್ಲಿ ಇಂತಹ ಘಟನೆ ನಡೆಯಬಾರದಿತ್ತು ಎಂದು ಬೇಸರ ವ್ಯಕ್ತಪಡಿಸಿದರು.

  • ಸ್ಯಾಂಡಲ್‍ವುಡ್‍ನಲ್ಲಿ ಡ್ರಗ್ಸ್ ಬಿರುಗಾಳಿ- ವಿಚಾರಣೆ ವೇಳೆ ಲೂಸ್ ಮಾದ ಯೋಗಿ ಹೇಳಿದ್ದೇನು?

    ಸ್ಯಾಂಡಲ್‍ವುಡ್‍ನಲ್ಲಿ ಡ್ರಗ್ಸ್ ಬಿರುಗಾಳಿ- ವಿಚಾರಣೆ ವೇಳೆ ಲೂಸ್ ಮಾದ ಯೋಗಿ ಹೇಳಿದ್ದೇನು?

    ಬೆಂಗಳೂರು: ಸ್ಯಾಂಡಲ್‍ವುಡ್‍ಗೆ ಅಪ್ಪಳಿಸಿರುವ ಡ್ರಗ್ಸ್ ಸುಂಟರಗಾಳಿಗೆ ಈಗ ಹೊಸ ದಿಕ್ಕು ಸಿಕ್ಕಿದೆ. ಕನ್ನಡ ಸಿನಿಲೋಕದ ನಶೆ ದುನಿಯಾದಲ್ಲಿ ಲೂಸ್ ಮಾದ ಯೋಗಿ ಹೆಸರೂ ಕೇಳಿ ಬಂದಿದೆ.

    ಲೂಸ್ ಮಾದ ಯೋಗಿಯನ್ನ ಆಂತರಿಕ ಭದ್ರತಾ ವಿಭಾಗದ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಯೋಗಿಗೆ ಡ್ರಗ್ಸ್ ದಂಧೆಕೋರರ ಜೊತೆ ನಂಟಿರುವ ಬಗ್ಗೆ ಸುಳಿವು ಸಿಕ್ಕಿದೆ. ಮೊಬೈಲ್ ಲೋಕೇಷನ್ ಮತ್ತು ಕಾಲ್ ರೆಕಾರ್ಡ್ಸ್ ಮಾಹಿತಿ ಪ್ರಕಾರ ಡ್ರಗ್ಸ್ ಪೆಡ್ಲರ್ ರೊಂದಿಗೆ ನಟ ಸಂಪರ್ಕದಲ್ಲಿದ್ದರು ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿದೆ ಎನ್ನಲಾಗುತ್ತಿದೆ.

    ಸದ್ಯ ಜೈಲಲ್ಲಿರುವ ನಟಿ ರಾಗಿಣಿ ಜೊತೆಗಿನ ಆತ್ಮೀಯ ಸ್ನೇಹವೂ ಯೋಗಿಗೆ ಮುಳುವಾಗುವ ಸಾಧ್ಯತೆ ಇದೆ. ಈ ಹಿಂದೆ ತಾವು ದುಶ್ಚಟಗಳ ದಾಸನಾಗಿದ್ದೇ ಎಂದು ಕನ್ನಡದ ಯೂಟ್ಯೂಬ್ ಚಾನೆಲ್‍ಗೆ ನೀಡಿದ್ದ ಸಂದರ್ಶನದಲ್ಲಿ ಲೂಸ್ ಮಾದ ಹೇಳಿಕೊಂಡಿದ್ದರು. ಪುಂಡ ಸಿನಿಮಾದ ಸೋಲಿನಿಂದ ಕಂಗೆಟ್ಟು ಕೆಟ್ಟ ಚಟಗಳ ದಾಸನಾಗಿದ್ದೆ. ಅದರಿಂದ ಹೊರಬರಲು ಸಾಕಷ್ಟು ಕಷ್ಟಪಟ್ಟೆ. ಈಗ ಎಲ್ಲ ಚಟಗಳಿಂದ ಮುಕ್ತನಾಗಿದ್ದೇನೆ ಎಂದು ಯೋಗಿ ಹೇಳಿದ್ದರು.

    ಯೋಗಿ ಹೇಳಿದ್ದೇನು?
    ಈಗಾಗಲೇ ವಿಚಾರಣೆಗೆ ಒಳಗಾಗಿರುವ ಲೂಸ್ ಮಾದ ಯೋಗಿ ಪೊಲೀಸರಿಗೆ ಈ ಕುರಿತು ಮಾತನಾಡಿದ್ದಾರೆ.
    ಐಎಸ್‍ಡಿ ಅಧಿಕಾರಿ: ಡ್ರಗ್ಸ್ ಸಂಬಂಧ ಏನ್ ಹೇಳ್ತೀರಿ?
    ಲೂಸ್ ಮಾದ: ಡ್ರಗ್ಸ್ ಬಗ್ಗೆ ನನಗೇನು ಗೊತ್ತೇ ಇಲ್ಲ.
    ಐಎಸ್‍ಡಿ ಅಧಿಕಾರಿ: ಡ್ರಗ್ ಪೆಡ್ಲರ್ಸ್ ನಿಮ್ಮ ಹೆಸ್ರು ಹೇಳಿದ್ದಾರಲ್ಲ?
    ಲೂಸ್ ಮಾದ: ಯಾರು ಸರ್?
    ಐಎಸ್‍ಡಿ ಅಧಿಕಾರಿ: ಒಬ್ಬನೇ ಪೆಡ್ಲರ್ ಹೇಳಿಲ್ಲ, ಹಲವಾರು ಪೆಡ್ಲರ್‌ಗಳು ನಿಮ್ಮ ಹೆಸರು ಹೇಳಿದ್ದಾರೆ?
    ಲೂಸ್ ಮಾದ: ಹಾಗೇಕೆ ಹೇಳಿದ್ರು ಗೊತ್ತಿಲ್ಲ ಸರ್.
    ಐಎಸ್‍ಡಿ ಅಧಿಕಾರಿ: ಡ್ರಗ್ ಸೇವಿಸ್ತಿದ್ದೀರಾ ನೀವು?
    ಲೂಸ್ ಮಾದ: ಸರ್. ಫಿಲ್ಮ್ ಯೊಂದರ ಸೋಲಿನಿಂದ ವ್ಯಸನಿಯಾಗಿದ್ದೆ, ಡ್ರಗ್ ಸೇವಿಸಸ್ತಿರಲಿಲ್ಲ, ಎಣ್ಣೆ ಸಿಗರೇಟ್ ಹೆಚ್ಚಾಗಿತ್ತು ಅಷ್ಟೇ.

    ಐಎಸ್‍ಡಿ ಅಧಿಕಾರಿ: ನೀವು ಡ್ರಗ್ ತೆಗೆದುಕೊಳ್ಳುತ್ತಿದ್ದ ಬಗ್ಗೆ ನಮ್ಮ ಬಳಿ ಸಾಕ್ಷ್ಯ ಇದೆಯೆಲ್ಲ?
    ಲೂಸ್ ಮಾದ: ಉತ್ತರಿಸದೇ ಮೌನ.
    ಐಎಸ್‍ಡಿ ಅಧಿಕಾರಿ: ಅಂದ್ರಹಳ್ಳಿ ಬಳಿ ಸಿಕ್ಕಿದ ಡ್ರಗ್ ಪೆಡ್ಲರ್ ಗೂ ನಿಮಗೂ ಏನು ಸಂಬಂಧ?
    ಲೂಸ್ ಮಾದ: ಯಾರೋ ಗೊತ್ತಿಲ್ಲ ಸರ್.
    ಐಎಸ್‍ಡಿ ಅಧಿಕಾರಿ: ಏಳೆಂಟು ಜನ ಸೇರ್ಕೊಂಡು ಈಗಲು ಡ್ರಗ್ ತರಿಸಿಕೊಳ್ತಿದ್ದೀರಂತಲ್ಲ?
    ಲೂಸ್ ಮಾದ: ಯಾವುದು ಇಲ್ಲ ಸರ್.
    ಐಎಸ್‍ಡಿ ಅಧಿಕಾರಿ: ಯಾರ್ಯಾರು ನಿಮ್ಮ ಡ್ರಗ್ ಪಾಟ್ರ್ನರ್ಸ್ ಅಂತಾ ಹೇಳ್ಬೇಕಾ?
    ಲೂಸ್ ಮಾದ: ಉತ್ತರವಿಲ್ಲ
    ಐಎಸ್‍ಡಿ ಅಧಿಕಾರಿ: ಸಾಕಷ್ಟು ಎವಿಡೆನ್ಸ್ ನಿಮ್ಮನ್ನ ಡ್ರಗ್ ಕೇಸಲ್ಲಿ ತೋರಿಸ್ತಿವೆ
    ಲೂಸ್ ಮಾದ: ಉತ್ತರವಿಲ್ಲ
    ಐಎಸ್‍ಡಿ ಅಧಿಕಾರಿ : ವಿಚಾರಣೆಗೆ ಕರೆದಾಗ ಮತ್ತೆ ಬರಬೇಕು
    ಲೂಸ್ ಮಾದ : ಸರಿ ಸರ್.