Tag: Actor yash

  • ಸೈನೈಡ್ ಗುಡ್ಡದ ಮೇಲೆ ಕೆಜಿಎಫ್-2 ಸಿನಿಮಾ ಶೂಟಿಂಗ್ ಪುನರ್ ಆರಂಭ

    ಸೈನೈಡ್ ಗುಡ್ಡದ ಮೇಲೆ ಕೆಜಿಎಫ್-2 ಸಿನಿಮಾ ಶೂಟಿಂಗ್ ಪುನರ್ ಆರಂಭ

    ಕೋಲಾರ: ಹಲವು ಅಡೆತಡೆಗಳ ನಡುವೆಯೇ ಕೆಜಿಎಫ್-2 ಸಿನಿಮಾ ಶೂಟಿಂಗ್ ಆರಂಭವಾಗಿದ್ದು, ಶೂಟಿಂಗ್ ಹಿನ್ನೆಲೆಯಲ್ಲಿ ಸೆಟ್ ಬಳಿ ಸಾರ್ವಜನಿಕರಿಗೆ ಪ್ರವೇಶ ನಿರಾಕರಣೆ ಮಾಡಲಾಗುತ್ತಿದೆ.

    ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹು ನಿರೀಕ್ಷಿತ ಕೆಜಿಎಪ್ 2 ಶೂಟಿಂಗ್ ನಡ್ಯದಂತೆ ಈ ಹಿಂದೆ ನ್ಯಾಯಾಲಕ್ಕೆ ಅರ್ಜಿ ಸಲ್ಲಿಸಲಾಗಿತ್ತು. 2 ತಿಂಗಳಿನಿಂದ ಸ್ಥಗಿತಗೊಂಡಿದ್ದ ಶೂಟಿಂಗ್ ಸದ್ಯ ಮತ್ತೆ ಆರಂಭವಾಗಿದೆ. ದಕ್ಷಿಣ ಭಾರತದಲ್ಲಿ ಹೊಸ ಅಲೆಯನ್ನು ಸೃಷ್ಟಿಸಿದ್ದ ಕೆಜಿಎಫ್ ಸಿನಿಮಾದ ಶೂಟಿಂಗ್‍ಗಾಗಿಯೇ ಕೋಲಾರ ಕೆಜಿಎಫ್ ಸೈನೈಡ್ ಗುಡ್ಡದ ಮೇಲೆ ವಿಶೇಷ ಸೆಟ್ ನಿರ್ಮಿಸಲಾಗಿದೆ. ಇದನ್ನೂ ಓದಿ: ದಕ್ಷಿಣ ಭಾರತದ ಸೆನ್ಸೇಷನ್ ಕೆಜಿಎಫ್-2ಗೆ ವಿಘ್ನಗಳ ಮೇಲೆ ವಿಘ್ನ

    ಶೂಟಿಂಗ್ ಸ್ಥಗಿತಗೊಂಡಿದ್ದ ಕಾರಣದಿಂದ ಶೂಟಿಂಗ್‍ಗಾಗಿ ನಿರ್ಮಿಸಿದ್ದ ಸೆಟ್ ಭಾಗಶಃ ನಾಶವಾಗಿತ್ತು. ಆದರೆ ಸದ್ಯ ಎಲ್ಲ ಅಡೆತಡೆಗಳನ್ನು ಎದುರಿಸುತ್ತಿರುವ ಚಿತ್ರತಂಡ ಮತ್ತೆ ಚಿತ್ರೀಕರಣಕ್ಕೆ ಗ್ರೀನ್ ಸಿಗ್ನಲ್ ನೀಡಿದೆ. ಸದ್ಯ ಶೂಟಿಂಗ್ ಸ್ಥಳಕ್ಕೆ ಸಾರ್ವಜನಿಕರು ಬಾರದಂತೆ ರಕ್ಷಣೆ ನೀಡಲಾಗುತ್ತಿದ್ದು, ಚಿತ್ರೀಕರಣ ಸ್ಥಳವನ್ನು ಬೇರೆಯವರು ತಮ್ಮ ಮೊಬೈಲ್‍ನಲ್ಲಿ ಸೆರೆ ಹಿಡಿಯಲು ಕೂಡ ಅವಕಾಶ ನಿರಾಕರಿಸಲಾಗಿದೆ. ಚಿತ್ರತಂಡ ಕೆಲ ಯುವಕರನ್ನು ಈ ಕಾರ್ಯಕ್ಕೆ ನೇಮಿಸಿದೆ. ಅಲ್ಲದೇ ಚಿತ್ರೀಕರಣ ಆರಂಭವಾದ ಹಿನ್ನೆಲೆಯಲ್ಲಿ ಚಿತ್ರತಂಡ ಪೊಲೀಸ್ ಭದ್ರತೆಗೂ ಮನವಿ ಮಾಡಿದ್ದು, ಮನವಿಯ ಮೇರೆಗೆ ಎಸ್ ಪಿ ಪೊಲೀಸ್ ರಕ್ಷಣೆಯನ್ನು ನೀಡಿದ್ದಾರೆ.

  • ಕೆಜಿಎಫ್ 2 ಚಿತ್ರೀಕರಣ – ಚಿತ್ರತಂಡಕ್ಕೆ ಬಿಗ್ ರಿಲೀಫ್

    ಕೆಜಿಎಫ್ 2 ಚಿತ್ರೀಕರಣ – ಚಿತ್ರತಂಡಕ್ಕೆ ಬಿಗ್ ರಿಲೀಫ್

    ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷೆಯ ‘ಕೆಜಿಎಫ್-2’ ಚಿತ್ರತಂಡಕ್ಕೆ ಚಿತ್ರೀಕರಣ ನಡೆಸದಂತೆ ಕೋಲಾರ ಸಿಟಿ ಸಿವಿಲ್ ಕೋರ್ಟ್ ನೀಡಿತ್ತು. ಇದೀಗ ಕೋರ್ಟ್ ನೀಡಿದ್ದ ಆದೇಶಕ್ಕೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದ್ದು, ಚಿತ್ರತಂಡಕ್ಕೆ ಬಿಗ್ ರಿಲೀಫ್ ಸಿಕ್ಕಿದೆ.

    ಸಿಟಿ ಸಿವಿಲ್ ಕೋರ್ಟ್ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಚಿತ್ರದ ನಿರ್ಮಾಪಕ ವಿಜಯ್ ಕಿರಗಂದೂರು ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಚಿತ್ರೀಕರಣ ವೇಳೆ ಪರಿಸರಕ್ಕೆ ಯಾವುದೇ ಹಾನಿ ಮಾಡಿಲ್ಲ. ಇನ್ನೂ 25 ದಿನಗಳಲ್ಲಿ ಚಿತ್ರೀಕರಣ ಮುಗಿಸುತ್ತೇವೆ ಎಂದು ಮನವಿ ಕೋರ್ಟ್ ಬಳಿ ಮಾಡಿಕೊಂಡಿದ್ದರು. ನಿರ್ಮಾಪಕರ ಮನವಿ ಪುರಸ್ಕರಿಸಿದ ಹೈಕೋರ್ಟ್ ಚಿತ್ರೀಕರಣಕ್ಕೆ ಅನುಮತಿ ನೀಡಿದೆ.

    ಕೋಲಾರ ಜಿಲ್ಲೆಯ ಕೆಜಿಎಫ್‍ನ ಕೆನಡೀಸ್ ಸೈನೈಡ್ ಗುಡ್ಡದ ಮೇಲೆ ಯಶ್ ಅಭಿನಯದ ಬಹುನಿರೀಕ್ಷಿತ ಕೆಜಿಎಫ್-2 ಸಿನಿಮಾ ಚಿತ್ರೀಕರಣ ನಡೆಯುತ್ತಿತ್ತು. ದುಬಾರಿಯ ಸೆಟ್ ಹಾಕಲಾಗಿತ್ತು. ಆದರೆ ಶ್ರೀನಿವಾಸ್ ಎಂಬವರು ಪರಿಸರ ಹಾನಿ ಹಾಗೂ ಚಿತ್ರೀಕರಣದಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ ಎಂದು ಕೆಜಿಎಫ್ ಸಿವಿಲ್ ನ್ಯಾಯಾಲಯದ ಮೊರೆ ಹೋಗಿದ್ದರು. ಅರ್ಜಿದಾರರ ವಾದ ಪುರಸ್ಕರಿಸಿ ಕೋರ್ಟ್ ಕೆಜಿಎಫ್ ನಿರ್ಮಾಪಕರಿಗೆ ತಾತ್ಕಾಲಿಕವಾಗಿ ಶೂಟಿಂಗ್ ನಿಲ್ಲಿಸುವಂತೆ ಸೂಚನೆ ನೀಡಿತ್ತು.

    ಇದೀಗ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡುವ ಮೂಲಕ ಚಿತ್ರೀಕರಣಕ್ಕೆ ಅವಕಾಶ ನೀಡಿದೆ. ಯಶ್ ಅಭಿನಯಿಸುತ್ತಿರುವ ‘ಕೆಜಿಎಫ್-2’ ಸಿನಿಮಾವನ್ನ ಪ್ರಶಾಂತ್ ನೀಲ್ ನಿರ್ದೇಶನ ಮಾಡುತ್ತಿದ್ದಾರೆ. ವಿಜಯ್ ಕಿರಗಂದೂರು ನಿರ್ಮಿಸುತ್ತಿದ್ದಾರೆ.

  • ರಾಜ್ಯಕ್ಕೆ ಒಳ್ಳೆದಾಗಬೇಕು, ಸ್ಥಿರ ಸರ್ಕಾರ ರಚನೆಯಾಗಬೇಕು : ಯಶ್

    ರಾಜ್ಯಕ್ಕೆ ಒಳ್ಳೆದಾಗಬೇಕು, ಸ್ಥಿರ ಸರ್ಕಾರ ರಚನೆಯಾಗಬೇಕು : ಯಶ್

    ಬೆಂಗಳೂರು: ರಾಜ್ಯ ರಾಜಕೀಯ ಬೆಳವಣಿಗೆಗಳ ಬಗ್ಗೆ ನಟ ರಾಕಿಂಗ್ ಸ್ಟಾರ್ ಯಶ್ ಮಾತನಾಡಿದ್ದು, ರಾಜ್ಯಕ್ಕೆ ಒಳ್ಳೆದಾಗಬೇಕು, ಸ್ಥಿರ ಸರ್ಕಾರ ರಚನೆ ಆಗಬೇಕು ಎಂಬುದು ಎಲ್ಲರ ಆಶಯ ಎಂದು ಹೇಳಿದ್ದಾರೆ.

    ಕೆಜಿಎಫ್ 2 ನಲ್ಲಿ ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ನಟ ಯಶ್ ಅವರು, ರಾಜಕೀಯದಲ್ಲಿ ಆಗುತ್ತಿರುವ ಗೊಂದಲಗಳಿಂದ ಸಹಜವಾಗಿ ಬೇಸರ ಆಗಿದೆ. ಮುಂದೆ ಬರುವ ಸರ್ಕಾರ ರಾಜ್ಯದ ಜನರ ಕಷ್ಟಗಳಿಗೆ ಸರಿಯಾದ ರೀತಿಯಲ್ಲಿ ಸ್ಪಂದಿಸಬೇಕು. ರಾಜ್ಯದಲ್ಲಿ ಬರ ಪರಿಸ್ಥಿತಿ ಇದೆ. ಬಹಳಷ್ಟು ಯೋಜನೆಗಳು ಆಗಬೇಕಿದೆ ಎಂದು ಜನರು ಕಾಯುತ್ತಿದ್ದು, ಸಾಕಷ್ಟು ನಿರೀಕ್ಷೆಗಳನ್ನು ಹೊಂದಿದ್ದಾರೆ ಎಂದರು.

    ಪಕ್ಷಗಳ ಆಂತರಿಕ ಸಮಸ್ಯೆಯಿಂದ ರಾಜ್ಯದ ಜನರಿಗೆ ಅನ್ಯಾಯ ಆಗುವುದು ಒಳ್ಳೆದಲ್ಲ ಎಂಬುವುದು ಅಷ್ಟೇ ನಮ್ಮ ಉದ್ದೇಶ. ಯಾರು ಅಧಿಕಾರಕ್ಕೆ ಬಂದರೂ ಕೂಡ ಒಂದು ನಿಶ್ಚಿತ ಸರ್ಕಾರ ರಚನೆ ಆಗಬೇಕು. ಆ ಮೂಲಕ ಒಳ್ಳೆಯ ಯೋಜನೆಗಳು ಜಾರಿ ಆಗಬೇಕು. ಇಂತಹ ಸಂದರ್ಭದಲ್ಲಿ ಎಲ್ಲರಂತೆ ನಮಗೂ ಬೇಸರ ಆಗುತ್ತದೆ. ಆದರೆ ಮುಂದೆ ಬರುವ ಸರ್ಕಾರ ಉತ್ತಮವಾಗಿ ಇರಬೇಕಿದೆ ಎಂದು ಅಭಿಪ್ರಾಯ ಪಟ್ಟರು.

    ಲೋಕಸಭಾ ಚುನಾವಣೆಯಲ್ಲಿ ಮಂಡ್ಯದ ಕ್ಷೇತ್ರದಲ್ಲಿ ಸುಮಲತಾ ಅಂಬರೀಶ್ ಪರ ಪ್ರಚಾರ ನಡೆಸಿದ್ದ ಯಶ್, ಸಂಸದೆಯಾಗಿ ಕಾರ್ಯನಿರ್ವಹಿಸುತ್ತಿರುವ ಸುಮಲತಾ ಅವರ ಕೆಲಸಗಳ ಬಗ್ಗೆಯೂ ಇದೇ ಸಂದರ್ಭದಲ್ಲಿ ಮಾತನಾಡಿದರು. ಮಂಡ್ಯಕ್ಕೆ ಹೊಸ ಯೋಜನೆಗಳನ್ನು ತರುವ ನಿಟ್ಟಿನಲ್ಲಿ ಕೇಂದ್ರ ನಾಯಕರ ಸಲಹೆ ಪಡೆಯುತ್ತಿದ್ದಾರೆ ಎಂದು ತಿಳಿಸಿದರು.

    ಸುಮಲತಾ ಅವರ ಕೆಲಸ ನೋಡಿ ಖುಷಿ ಆಗುತ್ತಿದೆ, ಅವರು ಎಲ್ಲೆ ಹೋದರೂ ನನಗೆ ಆಗಾಗ ಮಾಹಿತಿ ನೀಡುತ್ತಾರೆ. ಜನತೆಗೆ ಬೇಕಾದ ಉತ್ತಮ ಕೆಲಸಗಳನ್ನು ಮಾಡುತ್ತಾರೆ ಎಂಬ ನಂಬಿಕೆ ಇದೆ. ಕೇಂದ್ರ ಸರ್ಕಾರದ ನಾಯಕರು ಕೂಡ ಉತ್ತಮವಾಗಿ ಪ್ರತಿಕ್ರಿಯೆ ನೀಡುತ್ತಿದ್ದಾರೆ ಎಂದಿದ್ದಾರೆ. ಸುಮಲತಾರ ಕಾರ್ಯ ನಮಗೇ ಖುಷಿ ತಂದಿದೆ ಎಂದರು. ಇದನ್ನು ಓದಿ: ಜಿಲ್ಲೆಯ ಸಮಸ್ಯೆ ಬಗೆಹರಿಸಿಕೊಡಿ – ಅಮಿತ್ ಶಾ ಬಳಿ ಸುಮಲತಾ ಮನವಿ

  • ಮಂಡ್ಯದ ಜನತೆಗೆ ಸ್ವಾಭಿಮಾನದ ಭಿಕ್ಷೆ ಕೇಳಿದ ಸುಮಲತಾ ಅಂಬರೀಶ್

    ಮಂಡ್ಯದ ಜನತೆಗೆ ಸ್ವಾಭಿಮಾನದ ಭಿಕ್ಷೆ ಕೇಳಿದ ಸುಮಲತಾ ಅಂಬರೀಶ್

    -ಜೆಡಿಎಸ್ ನಾಯಕರ ಹೇಳಿಕೆಗೆ ಖಡಕ್ ತಿರುಗೇಟು
    -ಅಂಬಿಯ ಹಿತಶತ್ರು ಡಿಕೆಶಿ ಅಂದ್ರಲ್ಲಾ ರೆಬೆಲ್ ಲೇಡಿ
    -ನನ್ನನ್ನು ಕುಗ್ಗಿಸಲು ಕೀಳುಮಟ್ಟದ ರಾಜಕಾರಣ

    ಮಂಡ್ಯ: ನಾಲ್ಕು ವಾರಗಳ ಹಿಂದೆ ಇಲ್ಲಿಯೇ ಬಂದು ನಿಂತಿದ್ದೆ. ಈಗ ನಾಲ್ಕು ವಾರಗಳಲ್ಲಿ ಏನೇನು ಕಂಡಿದ್ದೇನೆ ಎಂಬುದನ್ನು ನಿಮ್ಮ ಮುಂದೆ ಹೇಳಲು ಮತ್ತೆ ಬಂದಿದ್ದೇನೆ. ಪಕ್ಷದಿಂದ ಉಚ್ಛಾಟನೆಗೊಂಡು ನನ್ನ ಪರ ಪ್ರಚಾರ ನಡೆಸಿದ ಕಾಂಗ್ರೆಸ್ ಕಾರ್ಯಕರ್ತರಿಗೆ ಧನ್ಯವಾದ. ಮಂಡ್ಯದ ಕ್ಷೇತ್ರದ ಜನರ ಪ್ರೀತಿಯನ್ನು ಈ ನಾಲ್ಕು ವಾರಗಳಲ್ಲಿ ಕಂಡಿದ್ದೇನೆ. ನಾನು ಮೊದಲು ಹೆಜ್ಜೆ ಇಟ್ಟಾಗ ಒಂಟಿ ಹೋರಾಟವಿತ್ತು. ಇದೀಗ ನೀವೆಲ್ಲರೂ ನನ್ನೊಂದಿಗೆ ಇದ್ದೀರಿ ಎಂದು ಹೇಳುವ ಮೂಲಕ ಮಂಡ್ಯ ಜನರನ್ನು ವಂದಿಸಿದರು.

    ಯಾರಿಗೂ ಗೌರವ ನೀಡದ ಸಿಎಂ: ಅಭಿವೃದ್ಧಿ ಪರ ಮಾತಾಡೋದನ್ನು ಬಿಟ್ಟು ಮಹಿಳೆಯರನ್ನು ತೇಜೋವಧೆ ಮಾಡಿ ನನ್ನನ್ನು ಕುಗ್ಗಿಸುವ ಪ್ರಯತ್ನ ಮಾಡಲಾಯಿತು. ರಾಜ್ಯದ ಮುಖ್ಯಮಂತ್ರಿಗಳಿಗೆ ಮಹಿಳೆಯರು, ದೇಶದ ಸೈನಿಕರ ಬಗ್ಗೆ ಗೌರವ ಇಲ್ಲ. ಮಂಡ್ಯದಲ್ಲಿ ನನ್ನ ಪತಿ ಅಂಬರೀಶ್ ಸೇವೆ ಸಲ್ಲಿಸಿದ ಕ್ಷೇತ್ರ. ನಾನು ಹುಚ್ಚೇಗೌಡರ ಸೊಸೆ ನೀವು ಒಪ್ಪಿಕೊಳ್ಳಿ ಬಿಡಿ. ಈಗಾಗಲೇ ಮಂಡ್ಯದ ಜನತೆ ನನಗೆ ಸರ್ಟಿಫಿಕೇಟ್ ನೀಡಿದ್ದಾರೆ. ರಾಜಕಾರಣದಲ್ಲಿ ಎಲ್ಲವನ್ನು ಬಿಟ್ಟು ನಡೆದುಕೊಳ್ಳಬೇಕೆಂದು ಎಲ್ಲಿಯೂ ಬರೆದಿಲ್ಲ.

    ಜನರ ಕಣ್ಣೀರು ಒರೆಸಲು ನಾನು ರಾಜಕಾರಣಕ್ಕೆ ಬಂದಿರೋದು. ನಮ್ಮ ಕಣ್ಣೀರು ಒರೆಸಲು ಅವರಿಲ್ಲ ಎಂದು ಹೇಳುವ ಮೂಲಕ ಸಿಎಂ ಕಣ್ಣೀರಿಗೆ ವ್ಯಂಗ್ಯ ಮಾಡಿದರು. ನಾಮಪತ್ರ ಸಲ್ಲಿಸುವ ವೇಳೆ ಕರೆಂಟ್, ಕೇಬಲ್ ಕಟ್ ಮಾಡಿಸಿದ್ದರು. ಅಂದು ಏನಾಗಿತ್ತು ಇಂದು ಸಹ ಅದೇ ಮಾಡುತ್ತಿದ್ದಾರೆ. ಒಬ್ಬ ಸುಮಲತಾರನ್ನು ಎದುರಿಸಲು ಕಾಂಗ್ರೆಸ್ ಅಧ್ಯಕ್ಷ, ಆಂಧ್ರ ಸಿಎಂ, ಮೈತ್ರಿ ಸರ್ಕಾರದ ನಾಯಕರು ಬರುತ್ತಾರೆ. ಎಲ್ಲರೂ ಅಭಿವೃದ್ಧಿ ವಿಚಾರ ಬಿಟ್ಟು ಸುಮಲತಾರ ಬಗ್ಗೆ ಮಾತನಾಡುತ್ತಾರೆ ಎಂದರು.

    ಹಿತ ಶತ್ರು: ಡಿಕೆ ಶಿವಕುಮಾರ್ ಅವರು ನಿಖಿಲ್ ಕುಮಾರಸ್ವಾಮಿಗೆ ಮತ ಹಾಕಿದ್ರೆ ಅಂಬರೀಶ್ ಆತ್ಮಕ್ಕೆ ಶಾಂತಿ ಸಿಗುತ್ತೆ ಎಂದು ಹೇಳುತ್ತಾರೆ. ಅಂಬರೀಶ್ ರಾಜಕೀಯದಲ್ಲಿ ಯಾರ ಬಗ್ಗೆಯೂ ಮಾತನಾಡಿಲ್ಲ. ಆದ್ರೆ ಅದೇ ಅಂಬರೀಶ್ ಅವರನ್ನು ರಾಜಕೀಯದಲ್ಲಿ ದ್ವೇಷ ಮಾಡುತ್ತಿದ್ದ ಓರ್ವ ವ್ಯಕ್ತಿ ಡಿ.ಕೆ.ಶಿವಕುಮಾರ್ ಎಂಬ ಗಂಭೀರ ಆರೋಪ ಮಾಡಿದರು. ರಾಜಕೀಯದಲ್ಲಿ ಇದು ನನ್ನ ಮೊದಲ ಹೆಜ್ಜೆ. ಆದರೆ ಅಂಬರೀಶ್ ಜೊತೆಯಲ್ಲಿದ್ದರಿಂದ ರಾಜಕಾರಣದ ವಿಷಯಗಳು ಗೊತ್ತಿದೆ.

    ಮಂಡ್ಯ ದುರಂತ: ನನ್ನ ನೋವನ್ನು ಮರೆತು ನಿಮ್ಮೊಂದಿಗೆ ಇರಲು ಬಂದೆ. ಆದರೆ ಪದೇ ಪದೇ ಅದನ್ನು ನೆನಪು ಮಾಡಿ ನೋವುಂಟು ಮಾಡುತ್ತಿದ್ದಾರೆ. ಈ ಕಣ್ಣೀರಿನ ಹಿಂದೆ ಈಗ ನೀವು ನೀಡಿದ ಧೈರ್ಯವಿದೆ. ಅಂದು ಮಂಡ್ಯ ದುರಂತ ಕಂಡ ಅಂಬರೀಶ್ ನಾನು ಅಲ್ಲಿಗೆ ಹೋಗಲು ಆಗುತ್ತಿಲ್ಲ ಎಂದು ನೊಂದು ಮಾತನಾಡಿದ್ರು. ಆಗ ಟಿವಿ ನೋಡದಂತೆ ಮನವಿ ಮಾಡಿದೆ. ಅಂದೇ ರಾತ್ರಿ 9 ಗಂಟೆ ವೇಳೆಗೆ ಅವರಿಗೆ ಹೃದಯಘಾತವಾಗಿತ್ತು. ನನಗೆ ಮಾತನಾಡಲು ಆಗದ ಶಾಕ್ ನಲ್ಲಿದೆ. ಮಂಡ್ಯಗೆ ಅವರು ಮಾಡಿದ ಸೇವೆ ಹಾಗೂ ಅರ್ಹತೆ ಕಾರಣದಿಂದ ನೀವು ಇಂದು ಮುಖ್ಯಮಂತ್ರಿಯಾಗಿ ನಿಮ್ಮ ಕರ್ತವ್ಯ ಮಾಡಿದ್ದೀರಿ. ಆದರೆ ನಿಮ್ಮ ಕಾರ್ಯದ ಬಗ್ಗೆ ಕೃತಜ್ಞತೆ ಇದೆ. ನಿಮ್ಮ ಒತ್ತಡದಿಂದಲೇ ಇದನ್ನೆಲ್ಲಾ ಹೇಳಿದ್ದೇನೆ. ವಿನಃ ಸಾರ್ವಜನಿಕರವಾಗಿ ಇಂತಹ ಅಂಶಗಳನ್ನು ಮಾತನಾಡಲು ನನಗೆ ಇಷ್ಟವಿಲ್ಲ ಎಂದರು.

    ಮಂಡ್ಯದಲ್ಲಿ ಅಂತರಾಷ್ಟ್ರಿಯ ಮಟ್ಟದ ಕ್ರೀಡಾಂಗಣ ಮಾಡುವ ಉದ್ದೇಶ ಅಂಬರೀಶ್ ಅವರಿಗೆ ಇತ್ತು. ಮಂಡ್ಯ ರಸ್ತೆಗಳನ್ನ ಸಿಂಗಾಪುರದಂತೆ ಮಾಡುವ ಆಸೆ ಹೊಂದಿದ್ದರು. ಅಂಬಿ ಕನಸಿನ ಅಭಿವೃದ್ಧಿಯನ್ನು ಮುಂದಿವರಿಸಲು ನಾನು ಬಂದಿದ್ದು, ಆದರೆ ಎಲ್ಲವನ್ನು 1 ದಿನದಲ್ಲಿ ಮಾಡುತ್ತೇನೆ ಎಂಬ ಸುಳ್ಳು ಆಶ್ವಾಸನೆ ನೀಡಿಲ್ಲ. ನನಗೆ ಒಂದು ಅವಕಾಶ ಕೊಟ್ಟು ನೋಡಿ ನಾನು ಅಂಬರೀಶ್ ಅವರ ಪತ್ನಿ ಎಂಬುವುದನ್ನು ತೋರಿಸುತ್ತೇನೆ. ಇಷ್ಟು ವರ್ಷ ಅವರಿಗೆ ನೀಡಿದ ಪ್ರೀತಿಯನ್ನು ನೀವು ಬಿಟ್ಟುಕೊಟ್ಟಿಲ್ಲ. ನಾನು ನಿಮ್ಮನ್ನು ಬಿಟ್ಟು ಹೋಗುವುದಿಲ್ಲ. ನನ್ನ ಮೇಲೆ ಭರವಸೆ ಇಡಿ, ಅಂಬರೀಶ್ ಎಂದು ನಿಮಗೆ ಮೋಸ ಮಾಡಿಲ್ಲ. ಜಾತಿ ರಾಜಕಾರಣ ಮಾಡಿಲ್ಲ. ಎಲ್ಲರನ್ನು ಸಮಾನರಾಗಿ ಕಾಣುತ್ತಿದ್ದರು. ನಾನು ಆದೇ ದಾರಿಯಲ್ಲಿ ನಡೆಯುತ್ತೇನೆ ಎಂದರು.

    ಇಂದು ನಾನು ನಿಮ್ಮಲ್ಲಿ ಕೇವಲ ಮತಗಳನ್ನು ಮಾತ್ರ ಕೇಳುತ್ತಿಲ್ಲ. ಮಂಡ್ಯ ಜನರ ಸ್ವಾಭಿಮಾನವನ್ನು ಭಿಕ್ಷೆಯಾಗಿ ಕೇಳುತ್ತಿದ್ದೇನೆ. ಮಂಡ್ಯದ ಸೊಸೆಯಾಗಿ ನಿಮ್ಮಲ್ಲಿ ಪ್ರಾರ್ಥನೆ ಮಾಡುತ್ತಿದ್ದು, ಸೆರಗು ಹಿಡಿದು ನಿಮ್ಮಲ್ಲಿ ಮನವಿ ಮಾಡುತ್ತಿದ್ದೇನೆ. ಯಾವುದೇ ಕಾರಣಕ್ಕೂ ನನ್ನ ಕೈ ಬಿಡಬೇಡಿ. ಇಂದು ನಾನು ಈ ಹೆಜ್ಜೆ ಹಾಕದಿದ್ದರೆ ಅದು ಅಂಬಿ ಅವರ ನೆನಪುಗಳಿಗೆ ಮಾಡಿದ ಮೋಸ ಆಗುತ್ತದೆ. ನನ್ನ ಮೊದಲ ಹೆಜ್ಜೆ ಕೇವಲ ಭಾವನಾತ್ಮಕ ಹೆಜ್ಜೆ ಆಗಿತ್ತು. ಆದರೆ ಈ 4 ವಾರಗಳ ಅವಧಿಯಲ್ಲಿ ನಾನು ಹಲವು ಸಂಗತಿಗಳನ್ನು ನೋಡಿದ್ದು, ಅಂದು ಅಂಬಿ ಅಣ್ಣನನ್ನು ನೋಡಲು ನಿಮ್ಮ ಹಣ ಏಕೆ ಎಂದು ಪ್ರಶ್ನೆ ಮಾಡಿದ್ದ ಸ್ವಾಭಿಮಾನವನ್ನು ಮತ್ತೆ ನನಗೆ ಕೊಡಿ ಎಂದು ಮನವಿ ಮಾಡಿದರು.

  • ಮಂಡ್ಯ ರಣಕಣದಲ್ಲಿ ಪ್ರಚಾರ ವೇಳೆ ಯಶ್ ಬೆಂಬಲಿಗನ ಅಸಭ್ಯ ವರ್ತನೆ..!

    ಮಂಡ್ಯ ರಣಕಣದಲ್ಲಿ ಪ್ರಚಾರ ವೇಳೆ ಯಶ್ ಬೆಂಬಲಿಗನ ಅಸಭ್ಯ ವರ್ತನೆ..!

    ಮಂಡ್ಯ: ಸುಮಲತಾ ಅಂಬರೀಶ್ ಪರ ಪ್ರಚಾರದ ವೇಳೆ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಯೊಬ್ಬ ಬಾಲಕಿಯ ಜೊತೆಗೆ ಅಸಭ್ಯವಾಗಿ ನಡೆದುಕೊಂಡ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

    ಕೆಆರ್ ಪೇಟೆ ತಾಲೂಕಿನಲ್ಲಿ ಘಟನೆ ನಡೆದಿದ್ದು, ಸ್ಥಳದಲ್ಲಿದ್ದ ಕೆಲವರು ಈ ದೃಶ್ಯವನ್ನು ತಮ್ಮ ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದಾರೆ. ಬಳಿಕ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

    ವಿಡಿಯೋದಲ್ಲಿ ಏನಿದೆ?:
    ತೆರೆದ ಪ್ರಚಾರ ವಾಹನದ ಮೇಲೆ ನಿಂತಿದ್ದ ನಟ ಯಶ್ ಮತದಾರರನ್ನು ಉದ್ದೇಶಿ ಮಾತನಾಡುತ್ತಿದ್ದರು. ಈ ವೇಳೆ ಬಾಲಕಿಯೊಬ್ಬಳು ಯಶ್ ಜೊತೆಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ವಾಹನ ಹತ್ತಿದ್ದಳು. ರಕ್ಷಿಸುವ ನೆಪದಲ್ಲಿ ಅಭಿಮಾನಿಯೊಬ್ಬ ಬಾಲಕಿಯ ಸೊಂಟವನ್ನು ಹಿಡಿಯುತ್ತಾನೆ. ಕೂಡಲೇ ಬಾಲಕಿಯು ಕುಚೇಷ್ಟೆ ಮಾಡಿದ ನಟ ಯಶ್ ಬೆಂಬಲಿಗನ ಕಡೆ ತಿರುಗಿದ್ದರಿಂದ ಬೆದರಿ, ಕೂಡಲೇ ಕೈ ಹಿಂತೆಗೆದುಕೊಂಡಿದ್ದಾನೆ.

  • ಭ್ರಷ್ಟಾಚಾರ ಮಾಡಿ ಯಾವತ್ತು ಗೆಲ್ಲೋಕೆ ಆಗಲ್ಲ: ನಟ ಯಶ್

    ಭ್ರಷ್ಟಾಚಾರ ಮಾಡಿ ಯಾವತ್ತು ಗೆಲ್ಲೋಕೆ ಆಗಲ್ಲ: ನಟ ಯಶ್

    ಮಂಡ್ಯ: ಜಿಲ್ಲೆಯಲ್ಲಿ ಮತಗಳಿಸಲು ಹಣ ಹಂಚಿಕೆ ಮಾಡುತ್ತಿದ್ದಾರೆ ಎಂಬ ಸುದ್ದಿಗೆ ಪ್ರತಿಕ್ರಿಯೆ ನೀಡಿರುವ ನಟ ಯಶ್, ಭ್ರಷ್ಟಾಚಾರ ಮಾಡಿ ಯಾವತ್ತು ಗೆಲ್ಲೋಕೆ ಸಾಧ್ಯವಿಲ್ಲ ಎಂದಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಯಶ್ ಅವರು, ಕ್ಷೇತ್ರದಲ್ಲಿ ಹಣ ಹಂಚಿಕೆ ಮಾಡುತ್ತಿರುವ ಬಗ್ಗೆ ಜನರೆ ನಮಗೆ ಮಾಹಿತಿ ನೀಡುತ್ತಿದ್ದಾರೆ. ರಾತ್ರಿ ಸಮಯದಲ್ಲಿ ಬಂದು ಮನೆ ಕದ ತಟ್ಟುವ ಕೆಲಸ ನಡೆಯುತ್ತಿದೆ. ಮತ ಪಡೆಯಲು ಹಣ ಹಂಚಿಕೆ ಮಾಡುವವರ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ನಟ ಯಶ್ ಕರೆ ನೀಡಿದರು.

    ಇಂದು ಅಂಬೇಡ್ಕರ್ ಅವರ ಜಯಂತಿ ಆಗಿದ್ದು, ಪ್ರಜಾಪ್ರಭುತ್ವವನ್ನು ಉಳಿಸಲು ಅವರು ಒಳ್ಳೆಯ ಸಂವಿಧಾನವನ್ನು ನೀಡಿದ್ದಾರೆ. ಅದನ್ನು ಉಳಿಸಿಕೊಳ್ಳುವ ಹೋಗುವ ಕರ್ತವ್ಯ ನಮ್ಮದಾಗಿದೆ. ಸಾಮಾನ್ಯ ವ್ಯಕ್ತಿಯೂ ಸಿಎಂ ಆಗುವಂತಹ ಅವಕಾಶ ಸಂವಿಧಾನದಲ್ಲಿ ಇದೆ. ಆದರೆ ಇಲ್ಲಿ ದುಡ್ಡು ಎಂದಿಗೂ ಡಾಮಿನೇಟ್ ಮಾಡಬಾರದು. ಅದ್ದರಿಂದ ಈ ಬಗ್ಗೆ ಅಭಿಮಾನಿಗಳಲ್ಲಿ ಮನವಿ ಮಾಡುತ್ತೇನೆ ಎಂದರು.

    ಕೆಲವೇ ದಿನಗಳು ಬಾಕಿ ಇದೆ. ಈ ವೇಳೆ ಹಣದ ಮೂಲಕ ಎಲ್ಲರನ್ನು ತಿರುಗಿಸುತ್ತೇವೆ ಎನ್ನುವ ಮಾತು ಕೇಳಿ ಬಂದಿದೆ. ಅಲ್ಲದೇ ಹಣ ನೀಡಿ ಪ್ರಮಾಣ ಮಾಡಿಕೊಳ್ಳುತ್ತಿರುವ ಬಗ್ಗೆಯೂ ಮಾಹಿತಿ ಇದೆ. ಆದರೆ ನಮ್ಮ ಪರ ಜನರಿದ್ದಾರೆ, ದೇವರನ್ನು ನಂಬಿದ್ದೇವೆ. ಆದರೆ ಹಣ ನೀಡಿ ಅಣೆ ಪ್ರಮಾಣ ಮಾಡಿಸಿಕೊಳ್ಳುವಂತಹ ತಪ್ಪುಗಳಿಗೆ ಎಂದಿಗೂ ದೇವರ ಬೆಂಬಲ ಇರುವುದಿಲ್ಲ ಎಂದರು.

    ಇದೇ ವೇಳೆ ಏ.16 ರಂದು ನಟ ದರ್ಶನ್, ಸುಮಲತಾ, ಅಭಿಷೇಕ್ ಅವರು ಒಟ್ಟಿಗೆ ಸೇರಿ ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳುತ್ತೇವೆ ಎಂದರು. ಜನರು ಈಗಾಗಲೇ ಎಲ್ಲರೂ ಒಟ್ಟಿಗೆ ಎಂದು ಕಾಣಿಸಿಕೊಳ್ಳುತ್ತೀರಾ ಎಂದು ಪ್ರಶ್ನೆ ಮಾಡಿದ್ದಾರೆ. ಜನರಿಂದ ಉತ್ತಮ ಬೆಂಬಲ ಸಿಗುತ್ತಿದೆ. ಮಂಡ್ಯ ಜನ ಸ್ವಾಭಿಮಾನಕ್ಕೆ ಬೆಂಬಲ ನೀಡುತ್ತಾರೆ ಎಂಬ ವಿಶ್ವಾಸ ಇದೆ ಎಂದರು.

  • ಮಂಡ್ಯ 7 ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರ ವಜಾ

    ಮಂಡ್ಯ 7 ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರ ವಜಾ

    ಬೆಂಗಳೂರು: ಮೈತ್ರಿ ಅಭ್ಯರ್ಥಿಯ ವಿರುದ್ಧ ಬಂಡಾಯದ ಸಾರಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರಿಗೆ ಬೆಂಬಲ ನೀಡಿದ್ದ 7 ಬ್ಲಾಕ್ ಕಾಂಗ್ರೆಸ್ ಅಧಯಕ್ಷರನ್ನ ಕೆಪಿಸಿಸಿ ವಜಾ ಮಾಡಿದೆ.

    ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿರುವ ಮಂಡ್ಯ ಗ್ರಾಮಾಂತರದ ಹೆಚ್. ಅಪ್ಪಾಜಿ, ಭಾರತಿ ನಗರದ ಎಎಸ್ ರಾಜೀವ್, ಮಳವಳ್ಳಿಯ ಪುಟ್ಟರಾಮು, ಮಳವಳ್ಳಿ ನಗರದ ಕೆಜೆ ದೇವರಾಜು, ನಾಗಮಂಗಲದ ಎಂ ಪ್ರಸನ್ನ, ಕೆಆರ್ ಪೇಟೆಯ ಕೆಆರ್ ರವೀಂದ್ರ ಬಾಬು, ಮೇಲುಕೋಟೆಯ ಎಸ್‍ಬಿ ಪ್ರಕಾಶ್ ವಿರುದ್ಧ ಶಿಸ್ತು ಕ್ರಮ ಕೈಗೊಂಡಿದ್ದು, ಮೈತ್ರಿ ಪಕ್ಷದ ಅಭ್ಯರ್ಥಿ ವಿರುದ್ಧವಾಗಿ ಕೆಲಸ ಮಾಡುತ್ತಿರುವ ಹಿನ್ನೆಲೆಯಲ್ಲಿ ವಜಾ ಮಾಡಲಾಗಿದೆ. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ವಿ. ವೈ. ಘೋರ್ಪಡೆ ಅವರು ವಜಾಗೊಳಿಸಿ ಆದೇಶ ನೀಡಿದ್ದಾರೆ.

    ಇತ್ತ ಕಳೆದ ಕೆಲ ದಿನಗಳಿಂದ ಸುಮಲತಾ ಅವರ ಪರ ಪ್ರಚಾರ ನಡೆಸಿದ್ದ ಯಶ್ ಅವರು ನಾಳೆ ಚುನಾವಣಾ ಪ್ರಚಾರದಿಂದ ಬ್ರೇಕ್ ಪಡೆದಿದ್ದಾರೆ. ಸಿನಿಮಾ ಚಿತ್ರೀಕರಣ ಹಿನ್ನೆಲೆಯಲ್ಲಿ ಯಶ್ ಬೆಂಗಳೂರಿಗೆ ಮರಳಲಿದ್ದಾರೆ ಎನ್ನಲಾಗಿದ್ದು, ಪರಿಣಾಮ ಇಂದು ತಡರಾತ್ರಿ ವರೆಗೂ ಪ್ರಚಾರ ನಡೆಸಿದ್ದು, ಶುಕ್ರವಾರದಿಂದ ಮತ್ತೆ ಪ್ರಚಾರಕ್ಕೆ ಆಗಮಿಸಲಿದ್ದಾರೆ ಎಂಬ ಮಾಹಿತಿ ಲಭಿಸಿದೆ.

  • ನಾವೂ ಮಾತನಾಡಿದ್ರೆ ಸಿನಿಮಾದವರಂತೆ ಅವರು ಸತ್ಯಹರಿಶ್ಚಂದ್ರನ ತುಂಡುಗಳಾ: ನಟ ಯಶ್ ಖಡಕ್ ತಿರುಗೇಟು

    ನಾವೂ ಮಾತನಾಡಿದ್ರೆ ಸಿನಿಮಾದವರಂತೆ ಅವರು ಸತ್ಯಹರಿಶ್ಚಂದ್ರನ ತುಂಡುಗಳಾ: ನಟ ಯಶ್ ಖಡಕ್ ತಿರುಗೇಟು

    ಮಂಡ್ಯ: ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ವಾಕ್ ಸಮಯ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ತಮ್ಮ ವಿರುದ್ಧ ಟೀಕೆ ಮಾಡಿ ಹೇಳಿಕೆ ನೀಡಿದ್ದ ಸಿಎಂ ಕುಮಾರಸ್ವಾಮಿ, ಮೈತ್ರಿ ಅಭ್ಯರ್ಥಿ ನಿಖಿಲ್ ಅವರಿಗೆ ನಟ ಯಶ್ ಸಿನಿಮಾ ಶೈಲಿಯಲ್ಲೇ ತಿರುಗೇಟು ನೀಡಿದ್ದಾರೆ.

    ಮಂಡ್ಯದಲ್ಲಿ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ನಟ ಯಶ್, ರಾಜ್ಯದಲ್ಲಿ ಆಡಳಿತ ನಡೆಸಿದ ಕೆಲವರು ಮಾಡದ ಕೆಲಸಗಳಿಂದ ಉತ್ತರ ಕರ್ನಾಟಕದಲ್ಲಿ ಜನರಿಗೆ ನೀರಿಲ್ಲದ ಸ್ಥಿತಿ ನಿರ್ಮಾಣವಾಗಿತ್ತು. ಅವರಿಗೆ ನೀರು ಕೊಡುವ ಕಾರ್ಯದಿಂದ ಮನೆ ಬಾಡಿಗೆ ಕಟ್ಟಲು ಆಗಲಿಲ್ಲ. ಬಾಡಿಗೆ ಕಟ್ಟಬೇಕಾ? ನೀರು ಕೊಡಬೇಕಾ? ಎಂಬ ಪ್ರಶ್ನೆ ಬಂದಾಗ ನಾನು ಅದನ್ನು ಜನರಿಗೆ ಉಪಯೋಗಿಸಿದೆ. ಆದ್ದರಿಂದ ನನ್ನ ಮೇಲೆ ಅದೊಂದು ಮಾತು ಇದೆ. ಆದರೆ ಕೆಲವರು ಹುಟ್ಟುತ್ತಲೇ ಎಲ್ಲವನ್ನು ಕೇಳಿಕೊಂಡು ಬಂದಿರುತ್ತಾರೆ. ಎಲ್ಲದಕ್ಕೂ ಜನ ಉತ್ತರ ನೀಡುತ್ತಾರೆ. ಜನರಿಗೆ ಮಾಡಬೇಕು ಎಂದರೆ ದೇವರು ಕೊಡುತ್ತಾರೆ. ಆದರೆ ಬಾಡಿಗೆ ಕಟ್ಟಲು ಕೊಡಲ್ಲ. ಮುಂದಿನ ದಿನಗಳಲ್ಲಿ ಇಂತಹ ಪರಿಸ್ಥಿತಿ ಬರುವುದು ಬೇಡ ಎಂದು ಪ್ರಾರ್ಥನೆ, ನೀವು ನನ್ನ ಪರ ಪ್ರಾರ್ಥನೆ ಮಾಡಿ ಎಂದರು.

    ಸಿನಿಮಾದಲ್ಲಿ ಬಂಡವಾಳ ಹಾಕಿ ಕಷ್ಟ ಪಡುತ್ತೇವೆ. ಅದರಿಂದ ಹಣ ಬರುತ್ತದೆ ಅಷ್ಟೇ. ಆದರೆ ನಾವು ಅಭಿವೃದ್ಧಿ ಮಾಡಿಲ್ಲ ಎನ್ನುತ್ತಾರೆ. ಅವರಿಗೆ ಒಂದು ಮಾತನ್ನು ಹೇಳಲು ಇಷ್ಟ ಪಡುತ್ತೇನೆ. ನಾವು ಎಂದು ಸುಳ್ಳು ಭರವಸೆಗಳನ್ನು ನೀಡಿಲ್ಲ. ಈಗ ಮಾಡುತ್ತೇವೆ ಎಂದು ಹೇಳುತ್ತಿದ್ದೇವೆ ಅದನ್ನು ಮುಂದೇ ಮಾಡುತ್ತೇವೆ. ನಾವು ಯಾರನ್ನು ಟೀಕೆ ಮಾಡಿಲ್ಲ. ನಿಮ್ಮ ಸಾಮಥ್ರ್ಯ ಏನಿದೆ ಅದನ್ನು ಮಾಡಿ. ಮಂಡ್ಯ ಜನರಿಗೆ ಹೇಳುವುದಿಷ್ಟೇ ಒಳ್ಳೆಯ ಅಭ್ಯರ್ಥಿ ಸಿಕ್ಕಿದ್ದಾರೆ ಮತ ನೀಡಿ ಗೆಲ್ಲಿಸಿ ಎಂದು ಮನವಿ ಮಾಡಿದ್ರು.

    ಸಂಜೆ ಮಳವಳ್ಳಿ ಸರ್ಕಲ್ ಬಳಿ ಮಾತನಾಡಿದ ಯಶ್, ಇಲ್ಲಿ ಯಾರು ಕೂಡ ದುಡ್ಡಿನ ಆಸೆಗೆ ಬಂದಿಲ್ಲ. ಕಳೆದ ಒಂದು ವಾರದಿಂದ ಮಂಡ್ಯದಲ್ಲಿ ಓಡಾಡುತ್ತಿದ್ದು, ಕ್ಷೇತ್ರದ ಎಲ್ಲ ಊರಿನಲ್ಲೂ ಅಂಬರೀಶ್ ಅಣ್ಣನ ಕೊಡುಗೆ ಕಾಣುತ್ತಿದೆ. ನಾವು ಕಳ್ಳೆತ್ತುಗಳಂತೆ ಎಂದು ಹೇಳಿಕೆ ನೀಡಿದ್ದು, ಏನು ಕದಿದ್ದೀವಿ ಹೇಳಿ ಸ್ವಾಮಿ? ನಾವೂ ಮಾತನಾಡಿದರೆ ಸಿನಿಮಾದವರಂತೆ, ಅವರು ಸತ್ಯಹರಿಶ್ಚಂದ್ರನ ತುಂಡುಗಳ ಎಂದು ಯಶ್ ಪ್ರಶ್ನೆ ಮಾಡಿದರು.

    ಅಂಬರೀಶ್ ಅಣ್ಣನ ಕುಟುಂಬದ ಬಗ್ಗೆ ಕೆಟ್ಟದಾಗಿ ಮಾತನಾಡಿದರೆ ಯಾವುದೇ ಕಾರಣಕ್ಕೂ ಸಹಿಸಲ್ಲ. ನಿಮಗೆ ಕೆಲಸ ಮಾಡಿದ್ದೇವೆ ಎಂದು ಸಾಕ್ಷಿ ಕೊಡಕ್ಕೆ ಆಗಲ್ಲ. ಆ ಸಾಕ್ಷಿ ಜನ ಕೊಡುತ್ತಾರೆ. ನಾವು ಮನಸಾಕ್ಷಿ ಇಟ್ಟುಕೊಂಡು ಬದುಕುತ್ತಿದ್ದೇವೆ. ಇವತ್ತು ದುಶ್ಮನಿ ಮಾಡಿದರೆ ನಾಳೆ ಸ್ನೇಹ ಮಾಡಲ್ಲ. ಒಂದು ಸಾರಿ ದುಶ್ಮನಿ ಅಂದರೆ ಅಷ್ಟೇ ಜೀವನಪೂರ್ತಿ ದುಶ್ಮನಿ ಮಾಡುತ್ತೇವೆ ಎಂದರು.

    ಅಂಬರೀಶಣ್ಣನ ಮೇಲಿನ ಅಭಿಮಾನದಿಂದ ನಾನು ಇಲ್ಲಿಗೆ ಬಂದಿದ್ದೇನೆ. ಯಾರ ಜೊತೆ ದುಶ್ಮನಿ ಮಾಡುವ ಉದ್ದೇಶ ಇಲ್ಲ. ಆದರೆ ಅಂಬರೀಶಣ್ಣನ ಕುಟುಂಬದ ಬಗ್ಗೆ ಕೆಟ್ಟದಾಗಿ ಮಾತನಾಡಿದರೆ ಮಾತ್ರ ಸಹಿಸಲ್ಲ. ಈ ಸಲ ನೀವು ಸುಮಕ್ಕನನ್ನ ಗೆಲ್ಲಿಸಲಿಲ್ಲ ಎಂದರೆ ಮತ್ತೆ ನಾನು ನಿಮ್ಮ ಮುಂದೆ ಬರಲು ಮುಖ ಇರಲ್ಲ, ಬರೋದು ಇಲ್ಲ. ದಯವಿಟ್ಟು ಅಕ್ಕನನ್ನ ಗೆಲ್ಲಿಸಿ ಎಂದು ಮನವಿ ಮಾಡಿದರು.

  • ಏಪ್ರಿಲ್ 2ರಿಂದ ಸುಮಲತಾ ಪರ ನಿರಂತರ ಪ್ರಚಾರಕ್ಕೆ ‘ಜೋಡೆತ್ತು’ ರೆಡಿ!

    ಏಪ್ರಿಲ್ 2ರಿಂದ ಸುಮಲತಾ ಪರ ನಿರಂತರ ಪ್ರಚಾರಕ್ಕೆ ‘ಜೋಡೆತ್ತು’ ರೆಡಿ!

    ಬೆಂಗಳೂರು: ಸ್ಟಾರ್ ಕದನವಾಗಿರುವ ಮಂಡ್ಯ ಲೋಕಸಭಾ ಚುನಾವಣೆಗೆ ಏಪ್ರಿಲ್ 2 ರಿಂದ ಮತ್ತಷ್ಟು ರಂಗು ಬರಲಿದ್ದು, ನಟ ದರ್ಶನ್ ಹಾಗು ನಟ ಯಶ್ ಅವರು ಸುಮಲತಾ ಅವರ ಪರ ನಿರಂತರ ಪ್ರಚಾರ ನಡೆಸಲಿದ್ದಾರೆ.

    ದರ್ಶನ್ ಮತ್ತು ಯಶ್ ಇಬ್ಬರೂ ಕೂಡ ಏಕಕಾಲದಲ್ಲಿ ಬೇರೆ ಬೇರೆ ತಾಲೂಕುಗಳಲ್ಲಿ ಪ್ರಚಾರ ನಡೆಸಲಿದ್ದು, ದರ್ಶನ್ 12 ದಿನ ಪ್ರಚಾರ ಮಾಡಿದರೆ, ಯಶ್ ಕೂಡ 13 ದಿನ ಪ್ರಚಾರ ನಡೆಸಲಿದ್ದಾರೆ. ಏಪ್ರಿಲ್ 16 ರಂದು ನಡೆಯುವ ಸಮಾವೇಶದಲ್ಲಿ ಇಬ್ಬರೂ ಒಟ್ಟಿಗೆ ಪಾಲ್ಗೊಳ್ಳಲಿದ್ದಾರೆ ಎಂಬ ಮಾಹಿತಿ ಲಭಿಸಿದೆ.

    ಪ್ರಚಾರ ನಡೆಯುವ ಅವಧಿಯಲ್ಲೂ ಮಾಸ್ಟರ್ ಪ್ಲಾನ್ ಮಾಡಲಾಗಿದ್ದು, ಪ್ರತಿ ದಿನ ಕ್ಷೇತ್ರದ ಮೂರು ಭಾಗಗಳಲ್ಲಿ ದರ್ಶನ್, ಯಶ್, ಸುಮಲತಾ ಅವರು ಪ್ರಚಾರ ನಡೆಸಲಿದ್ದಾರೆ. ಪ್ರತಿದಿನ ಮಂಡ್ಯ ಲೋಕಸಭಾ ಕ್ಷೇತ್ರದ ಬೇರೆ ಬೇರೆ ಸ್ಥಳಗಳಲ್ಲಿ ಪ್ರಚಾರ ಕಾರ್ಯ ನಡೆಯಲಿದೆ.

    ಸುಮಲತಾ: ಏ.2 ಮದ್ದೂರು, ಏ.3 ಮದ್ದೂರು ಮತ್ತು ಮಂಡ್ಯ, ಏ.4 ಮಂಡ್ಯ, ಏ.5 ಶ್ರೀರಂಗಪಟ್ಟಣ, ಏ.6 ಮತ್ತು 7 ಯುಗಾದಿ, ಏ.8 ನಾಗಮಂಗಲ, ಏ.9 ಶ್ರೀರಂಗಪಟ್ಟಣ ಮತ್ತು ಪಾಂಡವರಪುರ, ಏ.10 ಪಾಂಡವಪುರ, ಏ.11 ನಾಗಮಂಗಲ ಮತ್ತು ಕೆಆರ್ ಪೇಟೆ, ಏ.12 ಕೆಆರ್ ಪೇಟೆ, ಏ.13 ಕೆಆರ್ ನಗರ, ಏ.14 ಕೆಆರ್ ನಗರ ಮತ್ತು ಮಳವಳ್ಳಿ, ಏ.15 ಮಳವಳ್ಳಿ, ಏ.16 ರ‍್ಯಾಲಿ.

    ದರ್ಶನ್: ಏ.2 ಮಂಡ್ಯ, ಏ.3 ಕೆಆರ್ ಪೇಟೆ, ಏ.4 ನಾಗಮಂಗಲ, ಏ.5, ಏ.6 ಮತ್ತು 7 ಯುಗಾದಿ, ಏ.8 ಮಂಡ್ಯ ಮತ್ತು ಮದ್ದೂರು, ಏ.9 ಮದ್ದೂರು, ಏ.10 ಕೆಆರ್ ನಗರ, ಏ.11 ಕೆಆರ್ ನಗರ ಮತ್ತು ಮಳವಳ್ಳಿ, ಏ.12 ಮಳವಳ್ಳಿ, ಏ.13 ಶ್ರೀರಂಗಪಟ್ಟಣ, ಏ.14 ಶ್ರೀರಂಗಪಟ್ಟಣ ಮತ್ತು ಪಾಂಡವಪುರ, ಏ.15 ಪಾಂಡವಪುರ, ಏ.16 ರ‍್ಯಾಲಿ.

    ಯಶ್: ಏ.2 ಶ್ರೀರಂಗಪಟ್ಟಣ, ಏ.3 ಶ್ರೀರಂಗಪಟ್ಟಣ, ಏ.4 ಪಾಂಡವಪುರ, ಏ.5 ಮಳವಳ್ಳಿ, ಏ.6 ಮತ್ತು 7 ಯುಗಾದಿ, ಏ.8 ಮಳವಳ್ಳಿ, ಏ.9 ಮಂಡ್ಯ, ಏ.10 ಮಂಡ್ಯ ಮತ್ತು ಮದ್ದೂರು, ಏ.11 ಮದ್ದೂರು, ಏ.12 ನಾಗಮಂಗಲ, ಏ.13 ನಾಗಮಂಗಲ, ಏ.14 ಕೆಆರ್ ಪೇಟೆ, ಏ.15 ಕೆಆರ್ ಪೇಟೆ ಮತ್ತು ಮಂಡ್ಯ, ಏ.16 ರ‍್ಯಾಲಿ.

  • ಪುಲ್ವಾಮಾ ದಾಳಿ: ಹುತಾತ್ಮ ಯೋಧರಿಗೆ ಚಿತ್ರರಂಗದ ನಮನ

    ಪುಲ್ವಾಮಾ ದಾಳಿ: ಹುತಾತ್ಮ ಯೋಧರಿಗೆ ಚಿತ್ರರಂಗದ ನಮನ

    ಬೆಂಗಳೂರು: ಪುಲ್ವಾಮಾದಲ್ಲಿ ಭಯೋತ್ಪಾದನ ದಾಳಿಯಲ್ಲಿ ಹುತಾತ್ಮರಾದ 49 ಕ್ಕೂ ಹೆಚ್ಚು ಯೋಧರಿಗೆ ಚಿತ್ರರಂಗ ಹಲವು ಕಲಾವಿದರು ಸಂತಾಪ ಸೂಚಿಸಿದ್ದಾರೆ.

    ನಟರಾದ ದರ್ಶನ್, ಸುದೀಪ್, ಪುನೀತ್ ರಾಜ್‍ಕುಮಾರ್ ಜಗ್ಗೇಶ್ ಸೇರಿದಂತೆ ಕನ್ನಡ ಚಿತ್ರರಂಗದ ಅನೇಕ ನಟ-ನಟಿಯರು ಟ್ವೀಟ್ ಮಾಡಿ ತಮ್ಮ ಸಂತಾಪ ಸೂಚಿಸಿ ಹೇಡಿ ಕೃತ್ಯದ ವಿರುದ್ಧ ತಮ್ಮ ಆಕ್ರೋಶ ಹೊರಹಾಕಿದ್ದಾರೆ.

    ಪುಲ್ವಾಮಾ ದಾಳಿ ಬಗ್ಗೆ ತುಂಬಾ ದುಃಖವಾಗಿದೆ, ಭಯೋತ್ಪಾದನೆ ಯಾವತ್ತೂ ಮಾನವ ಕುಲಕ್ಕೆ ಅಪಾಯಕಾರಿ ಎಂದು ದರ್ಶನ್ ಟ್ವೀಟ್ ಮಾಡಿದ್ದು, ಕಾಶ್ಮೀರದ ಪುಲ್ವಾಮಾ ದಾಳಿಯಲ್ಲಿ ಯೋಧರು ಹುತಾತ್ಮರಾಗಿರುವುದು ಬೇಸರದ ಸಂಗತಿ ಎಂಬುದಾಗಿ ಪುನೀತ್ ನಮನ ಸಲ್ಲಿಸಿದ್ದಾರೆ.

    ಯೋಧರ ಬಲಿದಾನಕ್ಕೆ ಅವರ ತ್ಯಾಗಕ್ಕೆ ನನ್ನ ಭಾವಪೂರ್ಣ ನಮನ, ಅವರ ತ್ಯಾಗಕ್ಕೆ ತಕ್ಕ ನ್ಯಾಯ ಸಿಗಬೇಕು ಎಂದು ಯಶ್ ತಿಳಿಸಿದ್ದು, ಉಳಿದಂತೆ ಜಗ್ಗೇಶ್, ರಶ್ಮಿಕಾ, ಶ್ರೀಮುರುಳಿ, ಸುಮಲತಾ ಅಂಬರೀಶ್, ನಿರ್ದೇಶಕ ಪವನ್ ಒಡೆಯರ್ ಸೇರಿದಂತೆ ಅನೇಕ ನಟ-ನಟಿಯರು ಹುತಾತ್ಮ ಯೋಧರ ಆತ್ಮಕ್ಕೆ ಶಾಂತಿ ಕೋರಿ ಟ್ಟೀಟ್ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv