Tag: actor Vishnuvardhan

  • ಸಾಹಸಸಿಂಹ ವಿಷ್ಣುವರ್ಧನ್‌, ಬಿ.ಸರೋಜಾದೇವಿಗೆ ಮರಣೋತ್ತರ ‘ಕರ್ನಾಟಕ ರತ್ನ’ ಪ್ರಶಸ್ತಿ ಘೋಷಣೆ

    ಸಾಹಸಸಿಂಹ ವಿಷ್ಣುವರ್ಧನ್‌, ಬಿ.ಸರೋಜಾದೇವಿಗೆ ಮರಣೋತ್ತರ ‘ಕರ್ನಾಟಕ ರತ್ನ’ ಪ್ರಶಸ್ತಿ ಘೋಷಣೆ

    – ಸಚಿವ ಸಂಪುಟ ಸಭೆಯಲ್ಲಿ ಸರ್ಕಾರ ನಿರ್ಧಾರ

    ಬೆಂಗಳೂರು: ಸಾಹಸಸಿಂಹ ಡಾ.ವಿಷ್ಣುವರ್ಧನ್‌ (Dr.Vishnuvardhan) ಹಾಗೂ ನಟಿ ಬಿ.ಸರೋಜಾದೇವಿ (B.Saroja Devi) ಅವರಿಗೆ ಮರಣೋತ್ತರ ‘ಕರ್ನಾಟಕ ರತ್ನ’ (Karnataka Ratna) ಪ್ರಶಸ್ತಿಯನ್ನು ಸರ್ಕಾರ ಘೋಷಿಸಿದೆ. ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

    ನಟ ವಿಷ್ಣುವರ್ಧನ್‌ ಅವರಿಗೆ ಮರಣೋತ್ತರ ಕರ್ನಾಟಕ ರತ್ನ ನೀಡುವಂತೆ ಪತ್ನಿ ಭಾರತಿ ಮತ್ತು ಅಳಿಯ ಅನಿರುದ್ಧ್‌, ಸಿಎಂ ಸಿದ್ದರಾಮಯ್ಯರನ್ನು ಭೇಟಿಯಾಗಿ ಮನವಿ ಮಾಡಿದ್ದರು. ಈ ಸಂಬಂಧ ವಿಷ್ಣು ಅಭಿಮಾನಿಗಳು ಸಹ ಸರ್ಕಾರದ ಮೇಲೆ ಒತ್ತಡ ಹಾಕಿದ್ದರು. ಸಿನಿಮಾ ರಂಗಕ್ಕೆ ವಿಷ್ಣು ಅವರ ಕೊಡುಗೆ ಹಾಗೂ ಅಭಿಮಾನಿಗಳ ಒತ್ತಾಸೆಯನ್ನು ಪರಿಗಣಿಸಿ ಸರ್ಕಾರ ಕರ್ನಾಟಕ ರತ್ನ ಪ್ರಶಸ್ತಿಯನ್ನು ಘೋಷಿಸಿದೆ. ಇದನ್ನೂ ಓದಿ: ದಿ.ಡಾ.ವಿಷ್ಣುವರ್ಧನ್, ಸರೋಜಾದೇವಿಯವರಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ಘೋಷಣೆಗೆ ನಟಿಯರ ಮನವಿ

    1971 ರಲ್ಲಿ ವಿಷ್ಣುವರ್ಧನ್ ಬೆಳ್ಳಿತೆರೆಗೆ ಪ್ರವೇಶಿಸಿದರು. ವಂಶವೃಕ್ಷ ಅವರ ಮೊದಲ ಚಿತ್ರ. ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್‌ ಅವರ ನಿರ್ದೇಶನದ ನಾಗರಹಾವು ಸಿನಿಮಾ ವಿಷ್ಣುವರ್ಧನ್‌ ಅವರ ಸಿನಿಮಾ ಬದುಕಿಗೆ ತಿರುವು ನೀಡಿತು. ಭೂತಯ್ಯನ ಮಗ ಅಯ್ಯು, ಗಂಧದ ಗುಡಿ ಸಿನಿಮಾಗಳಲ್ಲೂ ಗಮನ ಸೆಳೆದರು. ನಂತರ ಸಾಲು ಸಾಲು ಸಿನಿಮಾಗಳ ಮೂಲಕ ಕನ್ನಡ ರಂಗದಲ್ಲಿ ಅಪಾರ ಅಭಿಮಾನಿಗಳನ್ನು ಸಂಪಾದಿಸಿದರು. ಆಪ್ತರಕ್ಷಕ ವಿಷ್ಣು ಅಭಿನಯದ ಕೊನೆ ಚಿತ್ರ. ಇದು 2010 ರಲ್ಲಿ ತೆರೆ ಕಂಡಿತ್ತು.

    ಅಭಿನಯ ಸರಸ್ವತಿ ಎಂದೇ ಜನಪ್ರಿಯತೆ ಗಳಿಸಿದ್ದ ಅಭಿನೇತ್ರಿ ಬಿ.ಸರೋಜಾ ದೇವಿ ಅವರು ಜು.14 ರಂದು ನಿಧನರಾದರು. ಅವರು ಕನ್ನಡ, ತಮಿಳು, ತೆಲುಗು ಹಾಗೂ ಹಿಂದಿ ಚಿತ್ರರಂಗದಲ್ಲಿ ನಟಿಸಿ ಖ್ಯಾತಿ ಗಳಿಸಿದ್ದಾರೆ. ಸುಮಾರು 200 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿ ಸೈ ಎನಿಸಿಕೊಂಡಿದ್ದಾರೆ. 1955 ರಲ್ಲಿ ತೆರೆಕಂಡ ಮಹಾಕವಿ ಕಾಳಿದಾಸ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಕನ್ನಡದ ಮೊದಲ ಮಹಿಳಾ ಸೂಪರ್‌ಸ್ಟಾರ್‌ ಎಂಬ ಬಿರುದನ್ನೂ ಪಡೆದುಕೊಂಡರು. 1970ರ ದಶಕದ ವರೆಗೂ ಹಲವಾರು ಯಶಸ್ವಿ ಚಿತ್ರಗಳಲ್ಲಿ ನಟಿಸಿ ಖ್ಯಾತಿ ಗಳಿಸಿದರು. ಇದನ್ನೂ ಓದಿ: ನಟ ವಿಷ್ಣುವರ್ಧನ್‌ರಿಗೆ ಮರಣೋತ್ತರ ಕರ್ನಾಟಕ ರತ್ನ ನೀಡಿ: ಸಿಎಂಗೆ ಅನಿರುದ್ಧ ಮನವಿ

  • ವಿಷ್ಣು ಸ್ಮಾರಕಕ್ಕಾಗಿ ಕೋರ್ಟಿಗೆ ಬೇಕಾದ್ರೂ ಹೋಗ್ತೀನಿ, ಹಣಕಾಸು ಕೊಡಲು ರೆಡಿ ಇದ್ದೀನಿ: ಕಿಚ್ಚ ಸುದೀಪ್‌

    ವಿಷ್ಣು ಸ್ಮಾರಕಕ್ಕಾಗಿ ಕೋರ್ಟಿಗೆ ಬೇಕಾದ್ರೂ ಹೋಗ್ತೀನಿ, ಹಣಕಾಸು ಕೊಡಲು ರೆಡಿ ಇದ್ದೀನಿ: ಕಿಚ್ಚ ಸುದೀಪ್‌

    – ನಂಬಿಕೆಯುಳ್ಳ ದೇವಸ್ಥಾನ ಒಡೆದಾಗ‌ ಆಗುವಷ್ಟು ನೋವಾಗ್ತಿದೆ – ಸುದೀಪ್‌ ಕಂಬನಿ

    ರಾತ್ರೋ ರಾತ್ರಿ ನಟ ಡಾ. ವಿಷ್ಣುವರ್ಧನ್‌ ಸಮಾಧಿಯನ್ನ (Vishnuvardhan Memorial) ತೆರವುಗೊಳಿಸಿರೋದ್ರಿಂದ ಅಭಿಮಾನಿಗಳ ಆಕ್ರೋಶ ಕಟ್ಟೆಯೊಡೆದಿದೆ. ವಿಷ್ಣು ಸಮಾಧಿ ಜಾಗವನ್ನ ಉಳಿಸಿಕೊಳ್ಳಲು ಅಭಿಮಾನಿಗಳು ಹೋರಾಟ ನಡೆಸುತ್ತಿದ್ದಾರೆ. ಅಭಿಮಾನಿಗಳ ಹೋರಾಟಕ್ಕೆ ಈಗ ನಟ ಕಿಚ್ಚ ಸುದೀಪ್‌ (Kichcha Sudeepa) ಕೂಡ ಕೈಜೋಡಿಸಿದ್ದಾರೆ.

    ಎಕ್ಸ್‌ ಖಾತೆಯಲ್ಲಿ ಸುದೀರ್ಘ ಪೋಸ್ಟ್‌ವೊಂದನ್ನು ಹಂಚಿಕೊಂಡಿರುವ ಕಿಚ್ಚ ಸುದೀಪ್‌, ನಾವು ನಂಬಿಕೆಯಿಟ್ಟಂತಹ ದೇವಸ್ಥಾನ ಒಡೆದಾಗ ಎಷ್ಟು ನೋವಾಗುತ್ತದೋ ಅಷ್ಟೇ ನೋವು ಸಂಕಟ ನನಗಾಗಿದೆ. ವಿಷ್ಣು ಸ್ಮಾರಕ ಉಳಿಸಿಕೊಳ್ಳಲು ಸಾಕಷ್ಟು ಹೋರಾಟ ಮಾಡಿದ್ದೆವು. ಸಂಬಂಧ ಪಟ್ಟ ಮಂತ್ರಿಗಳಿಗೆ ಹೇಳಿದೆವು. ಅದಕ್ಕೆ ಹಣಕಾಸು ಬೇಕಾ? ಮತ್ತೇನಾದರೂ ಬೇಕಾ? ಎಲ್ಲದಕ್ಕೂ ನಾವು ಸಿದ್ಧರಿದ್ದೀವಿ ಅಂತ ನಾನೇ ಸ್ವತಃ ಹೇಳಿದ್ದೆ. ಆದರೂ ಸರ್ಕಾರ ಇದರ ಬಗ್ಗೆ ಗಮನ ತೆಗೆದುಕೊಳ್ಳಲಿಲ್ಲ. ಆ ಭೂಮಿ ಖರೀದಿ ಮಾಡಿರುವವರಲ್ಲಿ ನನ್ನದೊಂದು ಮನವಿ-ನಿಮಗೆ ಏನು ಹಣಕಾಸು ಬೇಕೋ, ಅದನ್ನು ಕೊಡಲು ನಾನು ಮತ್ತು ನನ್ನಂತಹ ಲಕ್ಷಾಂತರ ಜನರು ಮುಂದೆ ಬರುತ್ತೇವೆ. ನಾನೇ ಮುಂದೆ ನಿಂತು ಅದನ್ನು ಮತ್ತೆ ಒಂದು ಸ್ಮಾರಕವಾಗಿ ಮರುಸ್ಥಾಪನೆ ಮಾಡುವುದಕ್ಕೆ ಮುಂದಾಗಿತ್ತೇನೆ. ಅದಕ್ಕೆ ಒಂದು ಅವಕಾಶ ಮಾಡಿಕೊಡಿ ಅಂತ ಮನವಿ ಮಾಡಿದ್ದಾರೆ.

    ಸುದೀಪ್‌ ಎಕ್ಸ್‌ ಪೋಸ್ಟ್‌ನಲ್ಲಿ ಏನಿದೆ?
    ಸಾಹಸ ಸಿಂಹ ವಿಷ್ಣುವರ್ಧನ್ ಅಂದ್ರೆ ಅದು ಎಂದೂ ಮುಗಿಯದ ಒಂದು ಅಭಿಮಾನ, ಗೌರವ. ಮೊನ್ನೆ ರಾತ್ರಿ, ಅವರ ಸ್ಮಾರಕವನ್ನ ಒಡೆದು ಹಾಕಿರುವುದು, ನಾವು ವರ್ಷಾನುಗಟ್ಟಲೆ ಇಂದ ನಂಬಿ, ಮೊರೆ ಹೋದಂತಹ ಒಂದು ದೇವರ ದೇವಸ್ಥಾನವನ್ನು ಒಡೆದು ಹಾಕಿದಾಗ ಎಷ್ಟು ನೋವು ಆಗುತ್ತದೋ, ಅಷ್ಟೇ ನೋವು ಮತ್ತು ಸಂಕಟ ನನಗಾಗಿದೆ. ಇದು ಹೈಕೋರ್ಟ್ ಆದೇಶ, ನ್ಯಾಯಾಲಯದ ಆದೇಶ ಅಂತಾರೆ. ಆದ್ರೆ, ಸರ್ಕಾರಗಳ ಮುಖಾಂತರ, ಸರ್ಕಾರದಲ್ಲಿ ಇರುವ ಮಂತ್ರಿಗಳ ಮುಖಾಂತರ, ವಿಷ್ಣು ಸ್ಮಾರಕವನ್ನ ಉಳಿಸಿಕೊಳ್ಳುವುದಕ್ಕೆ ಏನೇನು ಕ್ರಮ ತೆಗೆದುಕೊಳ್ಳಬೇಕು ಅನ್ನುವುದನ್ನ ನಾವು ತುಂಬಾ ಹೋರಾಟ ಮಾಡಿದೆವು. ಸಂಬಂಧ ಪಟ್ಟ ಮಂತ್ರಿಗಳಿಗೆ ಹೇಳಿದೆವು. ಅದಕ್ಕೆ ಹಣಕಾಸು ಬೇಕಾ? ಮತ್ತೇನಾದರೂ ಬೇಕಾ? ಎಲ್ಲದಕ್ಕೂ ನಾವು ಸಿದ್ಧರಿದ್ದೀವಿ ಅಂತ ನಾನೇ ಸ್ವತಃ ಹೇಳಿದ್ದೆ. ಆದರೂ ಸರ್ಕಾರ ಇದರ ಬಗ್ಗೆ ಗಮನ ತೆಗೆದುಕೊಳ್ಳಲಿಲ್ಲವೋ, ಅಥವಾ ನ್ಯಾಯಾಲಯಕ್ಕೆ ಸಮಾಧಿ ಮಾಡದೆ, ಭೂಮಿಯಲ್ಲಿ ಹೂಳದೆ, ಚಿತೆ ಇಟ್ಟ ಕಡೆ ಸ್ಮಾರಕ ಅಲ್ಲ, ಆಗಲೇ ಮೈಸೂರಿನಲ್ಲಿ ಒಂದು ಸ್ಮಾರಕ ಇದೆ. ಅದನ್ನೇ ಅಧಿಕೃತ ಸ್ಮಾರಕವಾಗಿ ಅವರನ್ನ ಗೌರವಿಸುವುದಕ್ಕೆ ಇಟ್ಟುಕೊಳ್ಳಿ ಅಂತ ಮಾಹಿತಿ ನೀಡಿ ಹೈಕೋರ್ಟ್ ಕೂಡ ಆದೇಶ ಮಾಡಿದೆ.

    ನಾವು ನ್ಯಾಯಾಲಯದ ವಿರುದ್ಧ ಮಾತನಾಡಲು ಆಗುವುದಿಲ್ಲ. ಮತ್ತೆ ನ್ಯಾಯಾಲಯಕ್ಕೆ ಹೋಗಿ, ಯಾವ ಸಂಸ್ಥೆ ಅಥವಾ ವ್ಯಕ್ತಿ ಅದನ್ನ ಖರೀದಿ ಮಾಡಿರುವರೋ, ಅವರ ಮನವೊಲಿಸಿ, ಅವರಿಗೆ ಸಾಹಸ ಸಿಂಹರ ಸ್ಮಾರಕ ಇದ್ದ, ಅಷ್ಟು ಜಾಗವನ್ನಾದರೂ ನಮಗೆ ಉಳಿಸಿ ಕೊಡುವುದಕ್ಕೆ ಮನವಿ ಮಾಡಲು ನಾನು ತಯಾರಿದ್ದೀನಿ. ಸರ್ಕಾರ ಮಧ್ಯ ಪ್ರವೇಶಿಸುವುದರಿಂದ ಇದು ಬಗೆ ಹರಿಯುತ್ತದೆ ಎನ್ನುವುದಾದರೆ, ಸರ್ಕಾರಕ್ಕೂ ಮನವಿ ಮಾಡಲು ತಯಾರಿದ್ದೀನಿ. ನಾನು ವಿಷ್ಣುವರ್ಧನ್ ಅವರ ಒಬ್ಬ ಅಭಿಮಾನಿಯಾಗಿ ಮಾತನಾಡುತ್ತಿದೀನಿ. ಕಿಚ್ಚ ಆಗಿ ಅಲ್ಲ.

    ಅತಿಯಾದ ನೋವಿದೆ. ವಿಷ್ಣುವರ್ಧನ್ ಅವರಿಗೆ ಆಧ್ಯಾತ್ಮದಲ್ಲಿ ಒಲವಿತ್ತು. ಅವರು ಯಾವಾಗಲೂ ಹೇಳುತ್ತಿದ್ದರು- ನಾನು ರೂಪಕ ಆಗಬೇಕು. ಯಾವುದೋ ಕಟ್ಟಡಕ್ಕೆ ಹೋಗಿ ಸೇರಬಾರದು, ಸ್ಥಾವರಗಳಿಗೆ ಉಳಿಯಬಾರದು. ನಾನು ಪಂಚಭೂತಗಳಲ್ಲಿ ಇರಬೇಕು. ನಾವು ನೇಚರ್‌ಗೆ ಸಂಬಂಧ ಪಟ್ಟವರು ಅಂತ. ಒಂದು ಲೆಕ್ಕದಲ್ಲಿ ಅವರ ಇನ್ನೊಂದು ಆಸೆ ಈಡೇರಿದಂತೆ ಅನಿಸುತಿದೆ. ಆದ್ರೆ, ಇದು ನಾವು ಎಲ್ಲ ಸಾಮಾನ್ಯ ಅಭಿಮಾನಿಗಳಿಗೆ, ಜನರಿಗೆ ಅರ್ಥ ಆಗುವುದಿಲ್ಲ. ಪೋಸ್ಟ್ ಹಾಕಲು ಹೇಗೆ ಒಂದು ಪೋಸ್ಟ್ ಬಾಕ್ಸ್ ಬೇಕೋ, ಹಾಗೆ ನಾವು ಗೌರವ ಸಲ್ಲಿಸಲು, ಪೂಜೆ ಮಾಡಲು ಒಂದು ದೇವಸ್ಥಾನ ಬೇಕು, ಸ್ಮಾರಕ ಬೇಕು. ವಿಷ್ಣುವರ್ಧನ್ ಅಂತಹ ಒಬ್ಬ ಮೇರು ನಟರಿಗೆ, ಬೆಂಗಳೂರಿನಂತಹ ಒಂದು ರಾಜಧಾನಿಯಲ್ಲಿ, ಒಂದು ಅರ್ಧ ಎಕರೆ ಜಾಗ ಕೊಡಲಿಲ್ಲ, ಅವರ ಹೆಸರಿನಲ್ಲಿ, ಒಂದು ಪ್ರಾರ್ಥನೆ ಮಾಡಲು, ಅವರನ್ನು ನೋಡಲು, ಅವರ ಜನ್ಮ ದಿನ ಆಚರಿಸಲು, ನಮ್ಮ ಬಳಿ ಒಂದು ಜಾಗ ಇಲ್ಲ ಅಂದರೆ, ಇದು ಅತ್ಯಂತ ಖಂಡನೀಯ ವಿಷಯ.

    ನಾನು ಕೇಳ್ಪಟ್ಟೆ, ಬಾಲಕೃಷ್ಣ ಅಂತಹ ಹಿರಿಯ ನಟರ ಸಮಾಧಿಯನ್ನು ಕೂಡ ಒಡೆದು ಹಾಕಿದ್ದಾರೆ. ಅಲ್ಲಿದಂತಹ ಒಂದು ಗಣಪತಿ ದೇವಸ್ಥಾನವೂ ಈಗಲ್ಲಿ ಇಲ್ಲ. ವಿಷ್ಣು ಅವರ ಸ್ಮಾರಕ ಕೂಡ ಅಲ್ಲಿ ಇಲ್ಲ ಅಂದರೆ ಏನು ಅರ್ಥ? ಮನುಷ್ಯನ ಭಾವನೆಗಳಿಗಿಂತ, ಗೌರವಕ್ಕಿಂತ, ಅಭಿಮಾನಕ್ಕಿಂತ, ಈ ಒಂದು ಭೂಮಿ ವ್ಯವಹಾರ ಅಷ್ಟು ದೊಡ್ಡದಾಯಿತಾ? ಹಣ ನಮಗೆ ಅಷ್ಟು ಮುಖ್ಯ ಅಲ್ಲ. ಸರ್ಕಾರ ಮಧ್ಯ ಪ್ರವೇಶ ಮಾಡಬೇಕು. ಇದು ನನ್ನ ವಿನಂತಿ. ನ್ಯಾಯಾಲಯಕ್ಕೆ ಹೋಗುವುದಾದರೆ, ನಾನೂ ಬರಲು ಸಿದ್ಧ. ಸರ್ಕಾರ, ನ್ಯಾಯಾಲಯ ಮತ್ತು ಆ ಭೂಮಿ ಖರೀದಿ ಮಾಡಿರುವವರಲ್ಲಿ ನನ್ನದೊಂದು ಮನವಿ- ನಿಮಗೆ ಏನು ಹಣಕಾಸು ಬೇಕೋ, ಅದನ್ನು ಕೊಡಲು ನಾನು ಮತ್ತು ನನ್ನಂತಹ ಲಕ್ಷಾಂತರ ಜನರು ಮುಂದೆ ಬರುತ್ತೇವೆ. ನಾನೇ ಮುಂದೆ ನಿಂತು ಅದನ್ನು ಮತ್ತೆ ಒಂದು ಸ್ಮಾರಕವಾಗಿ ಮರುಸ್ಥಾಪನೆ ಮಾಡುವುದಕ್ಕೆ ಮುಂದಾಗಿತ್ತೇನೆ. ಅದಕ್ಕೆ ಒಂದು ಅವಕಾಶ ಮಾಡಿಕೊಡಿ. ಅವರು ನಮ್ಮ ಎದೆಯ ಒಳಗೆ ಸದಾ ಇರುತ್ತಾರೆ ನಿಜ. ಹಾಗಂತ ಪ್ರಾರ್ಥನೆ, ಗೌರವಕ್ಕೆ ಸಂಕೇತವಾಗಿ ಒಂದು ಸ್ಥಳ ಬೇಕು. ಆ ಪ್ರೀತಿಗೆ, ಪ್ರೇಮಕ್ಕೆ, ಅಭಿಮಾನಕ್ಕೆ ದ್ರೋಹ ಮಾಡಬೇಡಿ ಅಂತ ನಾನು ವಿನಂತಿ ಮಾಡುತ್ತೇನೆ.

  • ಡಿಸೆಂಬರ್ ಒಳಗೆ ವಿಷ್ಣುವರ್ಧನ್ ಸ್ಮಾರಕ ಉದ್ಘಾಟನೆ – ಸಿಎಂ

    ಡಿಸೆಂಬರ್ ಒಳಗೆ ವಿಷ್ಣುವರ್ಧನ್ ಸ್ಮಾರಕ ಉದ್ಘಾಟನೆ – ಸಿಎಂ

    ಬೆಂಗಳೂರು: ಮೈಸೂರಿನಲ್ಲಿ ನಿರ್ಮಾಣವಾಗುತ್ತಿರುವ ವಿಷ್ಣುವರ್ಧನ್ ಸ್ಮಾರಕವನ್ನು (Vishnu Memorial) ಡಿಸೆಂಬರ್ ಒಳಗೆ ಉದ್ಘಾಟಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ತಿಳಿಸಿದರು.

    ಈ ಹಿಂದೆ ವಿಷ್ಣುವರ್ಧನ್ (Vishnuvardhan) ಅವರಿದ್ದ ಜಯನಗರದ ಮನೆಯ ಸ್ಥಳದಲ್ಲಿಯೇ ನೂತನವಾಗಿ ನಿರ್ಮಾಣವಾಗಿರುವ ಮನೆಯ ಗೃಹ ಪ್ರವೇಶ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು. ಇದನ್ನೂ ಓದಿ: ಸಾಹಸ ಸಿಂಹ ವಿಷ್ಣುವರ್ಧನ್ ಮನೆ ಗೃಹಪ್ರವೇಶ: ನಾನಾ ಗಣ್ಯರು ಭಾಗಿ

    ಭಾರತಿಯವರು ಖುದ್ದಾಗಿ ಬಂದು ಗೃಹಪ್ರವೇಶಕ್ಕೆ ಆಹ್ವಾನ ನೀಡಿದ್ದರು. ವಿಷ್ಣುವರ್ಧನ್ ಅವರಿದ್ದ ಮನೆಯನ್ನು ಇನ್ನಷ್ಟು ಚಂದ ಮಾಡಿದ್ದಾರೆ. ನವೀಕರಣಗೊಂಡಿರುವ ವಿಷ್ಣುವರ್ಧನ್ ಅವರ ಮನೆಯ ಹಿಂದೆ ಭಾರತಿ ವಿಷ್ಣುವರ್ಧನ್ ಅವರ ಪ್ರಯತ್ನ ಹಾಗೂ ಶ್ರಮ ಎದ್ದು ಕಾಣುತ್ತಿದೆ. ವಿಷ್ಣುವರ್ಧನ್ ಅವರ ತ್ಯಾಗವನ್ನು ಅಳವಡಿಸಿದ್ದಾರೆ ಎನ್ನುವುದು ನನ್ನ ಭಾವನೆ. ಅವರಿಗೆ ಶುಭ ಕೋರಲು ಬಂದಿದ್ದೇನೆ ಎಂದರು.

    ಮೈಸೂರಿನಲ್ಲಿ ನಿರ್ಮಾಣವಾಗುತ್ತಿರುವ ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಾಣ ಪೂರ್ಣಗೊಳ್ಳುತ್ತಾ ಬಂದಿದೆ. ಡಿಸೆಂಬರ್ ಒಳಗೆ ಸ್ಮಾರಕದ ಉದ್ಘಾಟನೆಯನ್ನು ಅದ್ದೂರಿಯಾಗಿ ಮಾಡಲು ತೀರ್ಮಾನಿಸಲಾಗಿದೆ. ಹೆಚ್ಚಿನ ವಿವರಗಳನ್ನು ಅವರ ಕುಟುಂಬದವರೊಂದಿಗೆ ಚರ್ಚಿಸಿ ನಿರ್ಧಾರಕ್ಕೆ ಬರಲಾಗುವುದು. ವಿಷ್ಣುವರ್ಧನ್ ಅವರ ಮೇರು ವ್ಯಕ್ತಿತ್ವ ಹಾಗೂ ಘನತೆಗೆ ತಕ್ಕ ಹಾಗೆ ಕಾರ್ಯಕ್ರಮವನ್ನು ವೈಭವಯುತವಾಗಿ ಆಯೋಜಿಸಲಾಗುವುದು ಎಂದು ಹೇಳಿದರು. ಇದನ್ನೂ ಓದಿ: ನಟ ಡಾ. ವಿಷ್ಣುವರ್ಧನ್ ಮನೆ ಹೇಗಿದೆ? ‘ವಲ್ಮೀಕ’ ವಿಶೇಷ

    ಚುಕ್ಕಿ ರೋಗ ತಡೆಗೆ ಕ್ರಮ
    ಚಿಕ್ಕಮಗಳೂರಿನಲ್ಲಿ ಅಡಿಕೆಗೆ ಎಲೆ ಚುಕ್ಕಿ ರೋಗ ಬಂದಿದ್ದು, ವಿಜ್ಞಾನಿಗಳ ಸಂಶೋಧನೆ ಒಂದು ಹಂತಕ್ಕೆ ಬಂದಿದೆ. ಅದಕ್ಕೆ ಪರಿಹಾರ ನೀಡುವ ಹಾಗೂ ರೋಗ ಹರಡದಂತೆ ಅನುದಾನ ಬಿಡುಗಡೆಯಾಗಿದೆ. ಮಲೆನಾಡ ಭಾಗದಲ್ಲಿ ಆನೆ ಹಾವಳಿ ಹೆಚ್ವಿದ್ದು, ನಾಲ್ಕು ಜಿಲ್ಲೆಗಳಲ್ಲಿ ಅರಣ್ಯ ಪಡೆಗಳನ್ನು ರಚಿಸಿ, ವಾಹನ ಸಲಕರಣೆಗೆ ಅನುದಾನ ಬಿಡುಗಡೆಯಾಗುತ್ತಿದೆ ಎಂದು ತಿಳಿಸಿದರು.

    ಶೃಂಗೇರಿಯಲ್ಲಿ ಆಸ್ಪತ್ರೆ
    ಶೃಂಗೇರಿಯಲ್ಲಿ ಆಸ್ಪತ್ರೆ ನಿರ್ಮಿಸಲು ತೀರ್ಮಾನಿಸಲಾಗಿದೆ. ಸ್ಥಳದ ಸಮಸ್ಯೆಯಿದ್ದು, ಅದನ್ನು ಬಗೆಹರಿಸಿ ಆಸ್ಪತ್ರೆ ನಿರ್ಮಿಸಲಾಗುವುದು ಎಂದರು.

    Live Tv
    [brid partner=56869869 player=32851 video=960834 autoplay=true]

  • ದೌರ್ಜನ್ಯ ನಡೆಸಿ ವಿಷ್ಣು ಸ್ಮಾರಕಕ್ಕೆ ಜಮೀನು ಕಿತ್ತುಕೊಳ್ಳೋ ಬದಲು ವಿಷ ಕೊಟ್ಟು ಬಿಡಿ – ರೈತ ಮಹಿಳೆ

    ದೌರ್ಜನ್ಯ ನಡೆಸಿ ವಿಷ್ಣು ಸ್ಮಾರಕಕ್ಕೆ ಜಮೀನು ಕಿತ್ತುಕೊಳ್ಳೋ ಬದಲು ವಿಷ ಕೊಟ್ಟು ಬಿಡಿ – ರೈತ ಮಹಿಳೆ

    ಮೈಸೂರು: ನಮ್ಮ ಮೇಲೆ ದೌರ್ಜನ್ಯ ನಡೆಸಿ ಜಮೀನು ಕಿತ್ತು ಕೊಳ್ಳುವ ಬದಲು ವಿಷ ಕೊಟ್ಟು ಬಿಡಿ ಇಲ್ಲೆ ಎಲ್ಲಾ ಸತ್ತು ಹೋಗುತ್ತೇವೆ ಎಂದು ಡಾ. ವಿಷ್ಣು ಸ್ಮಾರಕ ನಿರ್ಮಾಣ ಮಾಡಲು ಗುರುತಿಸಿರುವ ಜಮೀನಿನಲ್ಲಿ ಕೃಷಿ ಮಾಡುತ್ತಿರುವ ರೈತ ಮಹಿಳೆ ಜಯಮ್ಮ ಹೇಳಿದ್ದಾರೆ.

    ಮೈಸೂರಿನ ಹೊರವಲಯದ ಹಾಲಾಳು ಗ್ರಾಮದಲ್ಲಿ ಸ್ಮಾರಕ ನಿರ್ಮಾಣಕ್ಕೆ ಸರಕಾರ ಮುಂದಾಗಿತ್ತು. ಸರ್ಕಾರದ ನಿರ್ಧಾರಕ್ಕೆ ಈ ಜಾಗದಲ್ಲಿ ಕಳೆದ 4 ತಲೆಮಾರುಗಳಿಂದ ಉಳುಮೆ ಮಾಡುತ್ತಿರುವ ಜಯಮ್ಮ ಕುಟುಂಬ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದೆ.

    ವಿಷ್ಣು ಸ್ಮಾರಕ ವಿವಾದಕ್ಕೆ ಅಭಿಮಾನಿಗಳು ಆಗ್ರಹಿಸಿದ ಅಭಿಮಾನಿಗಳ ಹಿನ್ನೆಲೆಯಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ರೈತ ಮಹಿಳೆ ಜಯಮ್ಮ, ನಮಗೆ ಸೂಕ್ತವಾದ ಪರಿಹಾರ ಕೊಟ್ಟು ಜಮೀನು ತೆಗೆದುಕೊಳ್ಳಿ ಎಂದು ಹೇಳಿದ್ದೇನೆ. ಅದನ್ನು ಬಿಟ್ಟು ದೌರ್ಜನ್ಯ ಮಾಡಿ ಜಮೀನು ಕಿತ್ತು ಕೊಳ್ಳುವುದಾರೆ ವಿಷ ಕೊಡಿ. ನಮ್ಮ ಸಮಾಧಿಯೂ ಇಲ್ಲೇ ಮಾಡಿ ಎಂದರು.

    ಭಾರತಿ ವಿಷ್ಣುವರ್ಧನ್ ಅವರು ನಮ್ಮ ಜೊತೆ ಸರಿಯಾಗಿ ಮಾತನಾಡಿಲ್ಲ. ಇಲ್ಲಿಗೆ ಬರುವ ಎಲ್ಲರೂ ದೌರ್ಜನ್ಯದಿಂದ ನಡೆದುಕೊಳ್ಳುತ್ತಿದ್ದಾರೆ. ನಾಳೆಯಿಂದ ಈ ಜಮೀನಿಗೆ ಯಾರಿಗೂ ಕಾಲಿಡುವುದಕ್ಕೂ ಬಿಡಲ್ಲ. ನಮಗೇ ಸೂಕ್ತ ಪರಿಹಾರ ನೀಡದೆ 4 ತಲೆ ಮಾರುಗಳಿಂದ ಇದೇ ಭೂಮಿಯನ್ನು ನಂಬಿ ಜೀವನ ನಡೆಸುವ ನಮ್ಮ ಅನ್ನಕ್ಕೆ ಕಲ್ಲು ಹಾಕಬೇಡಿ. ನಿಮಗೇ ಇದೇ ಜಾಮೀನು ಬೇಕೆಂದರೆ ಸೂಕ್ತ ಪರಿಹಾರ ನೀಡಿ. ಈ ವಿಚಾರದಲ್ಲಿ ಭಾರತಿ ವಿಷ್ಣುವರ್ಧನ್ ಅವರು ಅಸಹಾಯಕರಾಗಿದ್ದಾರೆ. ಈ ಹಿಂದೆ ಸರ್ಕಾರ ಸ್ಮಾರಕ ನಿರ್ಮಾಣಕ್ಕೆ ಹಣ ನೀಡಲ್ಲ ಎಂದು ಹೇಳಿ, ಸ್ವತಃ ಅವರೇ ಹಣ ನೀಡುತ್ತೇನೆ ಎಂದು ಮಾಹಿತಿ ನೀಡಿದ್ದರು. ಆದರೆ ಅವರು ನೀಡುವ 20 ಲಕ್ಷ ರೂ. ಮಾತ್ರ ನೀಡಿದರೆ ನಮಗೆ ಅನ್ಯಾಯವಾಗುತ್ತದೆ. ಸರ್ಕಾರ ಗೋಮಾಳ ಎಂದು ಹೇಳುತ್ತೆ. ಅದಕ್ಕೆ ನಾವು ಪರಿಹಾರಕ್ಕಾಗಿ ನ್ಯಾಯಾಲಯ ಮೋರೆ ಹೋಗಿದ್ದೇವೆ ಎಂದರು. ಇದನ್ನು ಓದಿ : ಸಾಹಸ ಸಿಂಹನಿಗೆ ಪೂಜೆ ಸಲ್ಲಿಸಿದ ಅಭಿಮಾನಿಗಳು – ಸ್ಮಾರಕ ನಿರ್ಮಾಣಕ್ಕೆ ಶಂಕು ಸ್ಥಾಪನೆ

    ಎಷ್ಟು ಪರಿಹಾರ ಬೇಕು ಎಂದು ಕೇಳಿದ್ದಕ್ಕೆ, 20 ಲಕ್ಷ ಬೇಡ. ನಮ್ಮ ಮನೆಯಲ್ಲಿ 5 ಮಂದಿ ಇದ್ದಾರೆ. ಒಂದೊಂದು ತಲೆಗೆ 30 ಲಕ್ಷ ಕೊಡಬೇಕು. ನಮ್ಮ ಬೇಡಿಕೆಗೆ ಭಾರತಿ ವಿಷ್ಣುವರ್ಧನ್ ಒಪ್ಪಿಗೆ ನೀಡಲಿಲ್ಲ ಎಂದು ಹೇಳಿದರು.

    ಕಲಾವದರಿಗೂ ಕಷ್ಟ ಸುಖ ಗೊತ್ತಿರುತ್ತದೆ. ನಮಗೆ ಮಾತುಕತೆ ಮೂಲವೇ ಚರ್ಚೆ ನಡೆಸಿ ಪರಿಹಾರ ನೀಡಲು ಮುಂದಾದರೆ ಸಿದ್ಧರಾಗಿದ್ದೇವೆ. ಈ ಕುರಿತು ಸರ್ಕಾರದ ಅಧಿಕಾರಿಗಳಿಗೂ ಕೂಡ ನಮ್ಮ ಬೇಡಿಕೆ ತಿಳಿಸಿದ್ದೇವೆ. ಈ ಭೂಮಿಯನ್ನು ನಂಬಿಯೇ ನಮ್ಮ ಕುಟುಂಬ ಜೀವನ ನಡೆಸುತ್ತಿದ್ದು, ಸೂಕ್ತ ಪರಿಹಾರ ನೀಡಬೇಕು ಎಂದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ವಿಷ್ಣುದಾದಾ ಸ್ಮಾರಕಕ್ಕೆ ಭೂಮಿ ನೀಡಲು ಮುಂದಾದ ಅಭಿಮಾನಿ

    ವಿಷ್ಣುದಾದಾ ಸ್ಮಾರಕಕ್ಕೆ ಭೂಮಿ ನೀಡಲು ಮುಂದಾದ ಅಭಿಮಾನಿ

    – ವಿಷ್ಣುವರ್ಧನ್ ಸ್ಮಾರಕ ಬಗ್ಗೆ ಶೀಘ್ರದಲ್ಲೇ ನಿರ್ಧಾರ ಸಿಎಂ ಎಚ್‍ಡಿಕೆ ಸ್ಪಷ್ಟನೆ

    ಬೆಂಗಳೂರು: ಡಾ. ವಿಷ್ಣುವರ್ಧನ್ ಸ್ಮಾರಕ ನಿರ್ಮಾಣ ಮಾಡಲು ಸ್ವಂತ ಜಾಗವನ್ನು ನೀಡಲು ಅಭಿಮಾನಿಯೊಬ್ಬರು ಮುಂದಾಗಿದ್ದಾರೆ.

    ಮಂಡ್ಯದ ಕೆ.ಸಿ.ಪಿ ರಾಜಣ್ಣ ಅವರು ಸ್ಮಾರಕ ಸ್ಥಳಕ್ಕೆ ಜಮೀನು ನೀಡಲು ಮುಂದಾದ ಅಭಿಮಾನಿಯಾಗಿದ್ದು, ಮೈಸೂರಿನ ಕೆ.ಆರ್.ಎಸ್. ಜಲಾಶಯ ಬಳಿ ತಮ್ಮ ಹೆಸರಿನಲ್ಲಿ ಇರುವ 100*80 ನಿವೇಶನ ಹಾಗೂ ಪಕ್ಕದಲ್ಲೇ ಇರುವ 13 ಗುಂಟೆ ಜಾಗವನ್ನು ತಮ್ಮ ಹಣದಲ್ಲಿ ಖರೀದಿ ಮಾಡಿ ಸ್ಮಾರಕಕ್ಕೆ ನೀಡಲು ಮುಂದಾಗಿದ್ದಾರೆ.

    ಮೂರು ತಿಂಗಳ ಹಿಂದೆಯಷ್ಟೆ 100*80 ನಿವೇಶನವನ್ನು ರಾಜಣ್ಣ ಅವರು ಖರೀದಿ ಮಾಡಿದ್ದರು. ವೃತ್ತಿಯಲ್ಲಿ ಕಂಟ್ರ್ಯಾಕ್ಟರ್ ಆಗಿರುವ ರಾಜಣ್ಣ ಅವರು ವಿಷ್ಣುದಾದಾರ ಬಹುದೊಡ್ಡ ಅಭಿಮಾನಿ. ಹೀಗಾಗಿ ಸ್ಮಾರಕಕ್ಕೆ ಜಮೀನು ನೀಡಲು ಮುಂದಾಗಿದ್ದಾರೆ.

    ಈ ಕುರಿತು ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿರುವ ರಾಜಣ್ಣ ಅವರು, ಕೆ.ಆರ್.ಎಸ್ ಬಳಿ ಇರುವ ನನ್ನ ಭೂಮಿಯಲ್ಲಿ ದೇವಾಲಯವನ್ನು ನಿರ್ಮಾಣ ಮಾಡಲು ತೀರ್ಮಾನ ಮಾಡಿ ಸ್ಥಳ ಖರೀದಿ ಮಾಡಿದೆ. ಇದರ ಪಕ್ಕದಲ್ಲೇ 13 ಗುಂಟೆ ಖಾಸಗಿ ವ್ಯಕ್ತಿಯ ಸ್ಥಳವಿದೆ. ಅದನ್ನು ಖರೀದಿ ಮಾಡಿ ಸರ್ಕಾರಕ್ಕೆ ನೀಡುತ್ತೇನೆ. ಅಲ್ಲದೇ ಈ ಸ್ಥಳದಲ್ಲಿ ಸರ್ಕಾರದ 4 ಎಕರೆ ಪ್ರದೇಶವಿದೆ. ನಾನು ಅಶ್ರಮ ಮಾಡಬೇಕು ಎಂದಿದೆ. ಆದರೆ ವಿಷ್ಣು ಅವರ ಸ್ಮಾರಕಕ್ಕೆ ಉಂಟಾಗಿರುವ ಗೊಂದಲ ನಿವಾರಣೆ ಮಾಡಬೇಕಿದೆ. ಅದ್ದರಿಂದ ನಮ್ಮ ಕುಟುಂಬ ಈ ನಿರ್ಧಾರ ಮಾಡಿದೆ ಎಂದು ತಿಳಿಸಿದರು.

    ವಿಷ್ಣು ಅವರ ಸ್ಮಾರಕ ವಿಚಾರಕ್ಕೆ ಈ ರೀತಿ ಹೋರಾಟ ಗೊಂದಲ ಉಂಟಾಗುವುದು ಬೇಡ. ಇದರಿಂದ ನಮ್ಮ ವಿಷ್ಣು ಕುಟುಂಬಕ್ಕೆ ಸಮಸ್ಯೆ ಉಂಟಾಗುತ್ತದೆ. ಅಲ್ಲದೇ ಅಭಿಮಾನಿಗಳಿಗೂ ಒಂದು ರೀತಿ ಅವಮಾನ ಆಗುತ್ತದೆ. ಸರ್ಕಾರ ಹಾಗೂ ಭಾರತಿ ವಿಷ್ಣುವರ್ಧನ್ ಅಮ್ಮನವರು ಈ ಬಗ್ಗೆ ಮಾತನಾಡಿ ತೀರ್ಮಾನ ತೆಗೆದುಕೊಂಡರೆ ನಾನು ಈ ಕ್ಷಣಕ್ಕೆ ಜಾಗ ನೀಡಲು ಸಿದ್ಧ ಎಂದು ಸ್ಪಷ್ಟಪಡಿಸಿದರು.

    ಎಚ್‍ಡಿಕೆ ಸ್ಪಷ್ಟನೆ: ವಿಷ್ಣುದಾದಾ ಸ್ಮಾರಕ ಬಗ್ಗೆ ಶೀಘ್ರದಲ್ಲೇ ನಿರ್ಧಾರ ಕೈಗೊಳ್ಳುವುದಾಗಿ ಸಿಎಂ ಕುಮಾರಸ್ವಾಮಿ ಹೇಳಿದ್ದು, ಡಾ. ರಾಜ್‍ಕುಮಾರ್, ಡಾ. ವಿಷ್ಣುವರ್ಧನ್ ಸ್ಮರಿಸುವ ವಿಷ್ಯದಲ್ಲಿ ನಾನು ಬದ್ಧ. ವಿಷ್ಣು ಸ್ಮಾರಕ ಬಗ್ಗೆ ಶೀಘ್ರವೇ ನಿರ್ಧಾರ ಕೈಗೊಳುತ್ತೇವೆ ಎಂದು ಟ್ವೀಟ್ ಮಾಡಿದ್ದಾರೆ. ಇತ್ತ ಇಂದು ಮಧ್ಯಾಹ್ನ 2 ಗಂಟೆಗೆ ನಿರ್ಮಾಪಕರ ಸಂಘದ ಸದಸ್ಯರು ವಿಷ್ಣು ಕುಟುಂಬಸ್ಥರನ್ನು ಭೇಟಿ ಆಗಲಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಅಪ್ಪಾಜಿಯನ್ನ ವಿರೋಧಿಸಿದವರೇ ನಮ್ಮನ್ನು ಕಡೆಗಣಿಸುತ್ತಿದ್ದಾರೆ: ವಿಷ್ಣು ಪುತ್ರಿ

    ಅಪ್ಪಾಜಿಯನ್ನ ವಿರೋಧಿಸಿದವರೇ ನಮ್ಮನ್ನು ಕಡೆಗಣಿಸುತ್ತಿದ್ದಾರೆ: ವಿಷ್ಣು ಪುತ್ರಿ

    ಬೆಂಗಳೂರು: ಅಪ್ಪಾಜಿ ಅವರನ್ನು ವಿರೋಧಿಸುತ್ತಿದ್ದವರೇ ಈಗ ಅವರ ಕುಟುಂಬವನ್ನು ಕಡೆಗಣಿಸುವ ಕೆಲಸ ಮಾಡುತ್ತಿದ್ದಾರೆ ಎಂದು ವಿಷ್ಣುವರ್ಧನ್ ಪುತ್ರಿ ಕೀರ್ತಿ ಅನಿರುದ್ಧ್ ಗಂಭೀರವಾಗಿ ಆರೋಪಿಸಿದರು.

    ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಅಪ್ಪನ ಬಗ್ಗೆ ಗೊತ್ತಿರುವವರು ನಮ್ಮ ಕುರಿತು ಹಗುರವಾಗಿ ಮಾತನಾಡುತ್ತಿರಲಿಲ್ಲ. ಕೆ.ಮಂಜು ಅವರು ಮಾಧ್ಯಮಗಳ ಮುಂದೆ ಮಾತ್ರ ಮಾತನಾಡುತ್ತಾರೆ. ನಮ್ಮ ಬಳಿಗೆ ಬಂದು ಯಾವತ್ತೂ ಚರ್ಚೆ ಮಾಡಿಲ್ಲ. ತಮಗೆ ಬಂದಂತೆ ಹೇಳಿಕೆ ನೀಡುತ್ತಿದ್ದಾರೆ ಎಂದು ಆರೋಪಿಸಿದರು.

    ಅಪ್ಪ ಏನು ಅಂತಾ ನನಗೆ ಗೊತ್ತು. ಅವರ ಪ್ರತಿ ಅಭಿಮಾನಿಗಳ ಬಗ್ಗೆ ಮಾಹಿತಿಯಿದೆ. ನಮ್ಮನ್ನು ಯಾಕೆ ಇಷ್ಟು ದ್ವೇಷಿಸುತ್ತಿದ್ದಾರೆ, ಗುರಿ ಮಾಡುತ್ತಿದಾರೆ ಎನ್ನುವುದೇ ಅರ್ಥವಾಗುತ್ತಿಲ್ಲ ಎಂದ ಅವರು, ವೀರಕಪುತ್ರ ಶ್ರೀನಿವಾಸ್ ಅವರನ್ನು ನಾನು ನೇರವಾಗಿ ನೋಡಿಲ್ಲ. ಆದರೂ ಸ್ಮಾರಕ ವಿಚಾರದಲ್ಲಿ ಮಾಧ್ಯಮಗಳ ಮುಂದೆ ಮಾತನಾಡುತ್ತಿದ್ದಾರೆ ಎಂದು ದೂರಿದರು. ಇದನ್ನು ಓದಿನಿಮಗೆ ಏನು ಅನ್ನಿಸುತ್ತೆ ಹಾಗೆಯೇ ಮಾಡಿ: ಭಾರತಿ ವಿಷ್ಣುವರ್ಧನ್

    ಕಳೆದ 9 ವರ್ಷಗಳಿಂದ ಮುಖ್ಯಮಂತ್ರಿಗಳಿಗೆ ಮನವಿ ಪತ್ರಗಳನ್ನು ನೀಡುತ್ತಲೇ ಬಂದಿದ್ದೇವೆ. ಅಪ್ಪನ ಸ್ಮಾರಕದ ಯಾರೊಬ್ಬರೂ ಮಾತನಾಡಲಿಲ್ಲ. ಸಿಎಂ ಗಳು ಬದಲಾಗುತ್ತಾ ಬಂದರೇ ಹೊರತು, ಯಾರೊಬ್ಬರೂ ಸ್ಮಾರಕದ ಬಗ್ಗೆ ಯೋಚನೆ ಮಾಡಲಿಲ್ಲ. ಕುಮಾರಸ್ವಾಮಿ ಅವರು ಈಗ ನೀಡಿರುವ ಭರವಸೆಯನ್ನು ಈ ಹಿಂದೆಯೇ ನೀಡಬಹುದಿತ್ತು. ನಮ್ಮನ್ನು ಕಚೇರಿಯಿಂದ ಕಚೇರಿಗೆ ಅಲೆದಾಡಿಸಿದರು ಎಂದು ಕಿಡಿಕಾರಿದರು.

    ಸ್ಮಾರಕ ನಿರ್ಮಾಣ ಮಾಡಿದರೆ ನಮಗೆ ಏನು ಸಿಗುತ್ತದೆ. ನಾವೇನು ಅಲ್ಲಿಯೇ ಇರುತ್ತೀವಾ? ಕೆಲವರು ಅಪ್ಪಾಜಿಯನ್ನು ಕಡೆಗಣಿಸುತ್ತಿದ್ದಾರೆ. ಮಾಧ್ಯಮಗಳ ಮುಂದೆ ಮಾತನಾಡುವವರು ನಮ್ಮ ಜೊತೆಗೆ ಕುಳಿತು ಚರ್ಚೆ ಮಾಡಲಿ. ಪರಿಸ್ಥಿತಿ ಏನು ಎನ್ನುವುದು ಅರ್ಥವಾಗುತ್ತದೆ ಎಂದು ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ನಿಮಗೆ ಏನು ಅನ್ನಿಸುತ್ತೆ ಹಾಗೆಯೇ ಮಾಡಿ: ಭಾರತಿ ವಿಷ್ಣುವರ್ಧನ್

    ನಿಮಗೆ ಏನು ಅನ್ನಿಸುತ್ತೆ ಹಾಗೆಯೇ ಮಾಡಿ: ಭಾರತಿ ವಿಷ್ಣುವರ್ಧನ್

    -ಭಗವಂತನ ಇಚ್ಛೆ ಏನ್ ಇದೆಯೋ ಅದೇ ಆಗಲಿ

    ಬೆಂಗಳೂರು: ನಿಮಗೆ ಏನು ಎನಿಸುತ್ತದೆ ಹಾಗೆಯೇ ಮಾಡಿ ಎಂದು ಸರ್ಕಾರಕ್ಕೆ ಭಾರತಿ ವಿಷ್ಣುವರ್ಧನ್ ಹೇಳಿದ್ದಾರೆ.

    ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ವಿಷ್ಣುಗೆ ಸ್ಮಾರಕವೇ ಬೇಕಿಲ್ಲ. ಕುಲಕೋಟಿ ಅಭಿಮಾನಿಗಳ ಪ್ರೀತಿ ಸಿಕ್ಕಿದೆ ಅಷ್ಟೇ ಸಾಕು ಎಂದು ಮಾತು ಶುರು ಮಾಡುತ್ತಲೇ ಭಾರತಿ ವಿಷ್ಣುವರ್ಧನ್  ಭಾವುಕರಾದರು.

    ಅಭಿಮಾನ್ ಸ್ಟುಡಿಯೋದಲ್ಲಿ ವಿಷ್ಣು ಅಂತ್ಯಸಂಸ್ಕಾರದ ಬಳಿಕ ಸ್ಮಾರಕದ ಬಗ್ಗೆ ಯಾರು ಮಾತನಾಡಿರಲಿಲ್ಲ. ಇದರಿಂದಾಗಿ ನನಗೆ ತುಂಬಾ ಸಂಕಟವಾಗಿತ್ತು. ಬಳಿಕ ನಾನೇ 7 ಲಕ್ಷ ರೂ, ಖರ್ಚು ಮಾಡಿ ಸ್ವಂತ ಹಣದಲ್ಲಿ ಪುಣ್ಯಭೂಮಿ ನಿರ್ಮಿಸಿದ್ದೇವು. ಅಲ್ಲಿ ಆರೋಗ್ಯ ಶಿಬಿರ, ಸಾಂಸ್ಕೃತಿಕ ಚಟುವಟಿಕೆ ನಡೆಸಿ ವಿಷ್ಣುವರ್ಧನ್ ಪುಣ್ಯಭೂಮಿ ಇದೆ ಅಂತಾ ಜನರಿಗೆ ಗೊತ್ತಾಯಿತು ಎಂದು ಹೇಳಿದರು.

    ಅಭಿಮಾನಿಗಳು ಈಗ ಸ್ಮಾರಕದ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ರೆಬಲ್ ಸ್ಟಾರ್ ಅಂಬರೀಶ್ ಅವರು ಹಿರಿಯ ಕಲಾವಿದರಿಗೆ ಗೌರವ ಸಲ್ಲಿಸಬೇಕು. ಹೀಗಾಗಿ ವಿಷ್ಣುವರ್ಧನ್ ಅವರ ಸ್ಮಾರಕ ಭವನ ನಿರ್ಮಾಣಕ್ಕೆ ಮುಂದಾಗಿದ್ದಾರೆ ಎಂದು ತಿಳಿಸಿದರು.

    ವಿಷ್ಣುಗೆ ಮೈಸೂರು ಅಂದರೆ ತುಂಬಾ ಇಷ್ಟ ಹೀಗಾಗಿ ಮೈಸೂರಿನಲ್ಲಿ ಸ್ಮಾರಕ ಮಾಡಿ ಅಂತ ಕೇಳಿಕೊಳುತ್ತಿದ್ದೇವೆ ಅಷ್ಟೇ. ಅಭಿಮಾನ್ ಸ್ಟುಡಿಯೋದಲ್ಲಿ ಜಾಗ ಸಿಗದ ಕಾರಣಕ್ಕೆ ಸರ್ಕಾರವೇ ಮೈಸೂರಿನಲ್ಲಿ ಜಾಗ ಗೊತ್ತುಪಡಿಸಿದೆ. ಹೀಗಾಗಿ ನಾವು ಮೈಸೂರಿನಲ್ಲಿ ಸ್ಮಾರಕ ನಿರ್ಮಾಣಕ್ಕೆ ಒಪ್ಪಿಕೊಂಡಿದ್ದೇವೆ. ಅಲ್ಲಿಯೂ ಕೂಡ ಅಡ್ಡಿಯಾಗುತ್ತಿದೆ. ಈ ಜಾಗ ನಮಗೆ ಜಾಗಬೇಕು ಎಂದು ರೈತರು ಅಂತಿದ್ದಾರೆ. ಯಾರೊಬ್ಬರೂ ಕಾಳಜಿ ತೆಗೆದುಕೊಳ್ಳದಿದ್ದರೆ ಹೇಗೆ ಸಮಸ್ಯೆ ಬಗೆಹರಿಯುತ್ತದೆ ಎಂದು ಸರ್ಕಾರವನ್ನ ಪ್ರಶ್ನೆ ಮಾಡಿದರು.

    ಮೈಸೂರಿನಲ್ಲಿ ಸ್ಮಾರಕ ನಿರ್ಮಾಣ ಮಾಡಿಕೊಡುವುದಕ್ಕೆ ಆಗಲ್ಲ ಅಂದರೆ ಅಭಿಮಾನ್ ಸ್ಟುಡಿಯೋದಲ್ಲಿಯೇ ಮಾಡಿ ತೊಂದರೆಯಿಲ್ಲ. ನಾನು ಯಾವುದೇ ಒತ್ತಾಯವನ್ನು ಸರ್ಕಾರದ ಮೇಲೆ ಹೇರುವುದಿಲ್ಲ. ಸರ್ಕಾರ ನಿಗದಿಪಡಿಸಿದ ಜಾಗದಲ್ಲೇ ಆಗಲಿ. ಸ್ಮಾರಕದ ವಿಚಾರದಲ್ಲಿ ನಾವು ವಾದ ಮಾಡುವುದಿಲ್ಲ. ಅವರ ಇಚ್ಚೆ ಭಗವಂತನ ಇಚ್ಚೆ ಏನಿದೆಯೋ ಹಾಗೆಯೇ ಆಗಲಿ. ನಿಜವಾದ ಅಭಿಮಾನಿಗಳು ನಮ್ಮ ಜೊತೆ ಇದ್ದಾರೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿಷ್ಣು ಸ್ಮಾರಕದ ಕುರಿತು ಉತ್ತಮ ಸ್ಪಂದನೆ ನೀಡುತ್ತಾರೆಂಬ ನಂಬಿಕೆಯಿದೆ ಅಂತ ಅಂದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಕನ್ನಡ ಮೇರು ನಟರ ಸ್ಮಾರಕ ಒಂದೆಡೆ ಆಗಬೇಕು – ಬಿಎಸ್‍ವೈ

    ಕನ್ನಡ ಮೇರು ನಟರ ಸ್ಮಾರಕ ಒಂದೆಡೆ ಆಗಬೇಕು – ಬಿಎಸ್‍ವೈ

    ಬೆಂಗಳೂರು: ಕನ್ನಡ ಚಿತ್ರರಂಗದ ಮೂವರು ಮೇರು ನಟರ ಸ್ಮಾರಕಗಳು ಒಂದೇ ಕಡೆ ಆಗಬೇಕೇಂಬುದು ನನ್ನ ಬಯಕೆ ಎಂದು ಮಾಜಿ ಸಿಎಂ, ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರು ಹೇಳಿದ್ದಾರೆ.

    ನಗರದಲ್ಲಿ ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕನ್ನಡದ ಮೂವರು ಮೇರು ನಟರಾದ ಡಾ. ರಾಜ್‍ಕುಮಾರ್, ಡಾ. ವಿಷ್ಣುವರ್ಧನ್, ಡಾ. ಅಂಬರೀಶ್ ಅವರ ಸ್ಮಾರಕಗಳು ಒಂದೇ ಕಡೆ ಆಗಬೇಕು ಎಂಬುವುದು ನನ್ನ ಬಯಕೆ. ನಾನು ಹೇಳಿದ್ದು ಆದರೆ ಒಳ್ಳೆಯದು ಎಂದು ವಿಷ್ಣು ಸ್ಮಾರಕ ಸ್ಥಳಾಂತರ ಬಗ್ಗೆ ಪರೋಕ್ಷವಾಗಿ ಒಪ್ಪಿಗೆ ನೀಡಿದ್ದಾರೆ.

    ಸದ್ಯ ಕುಮಾರಸ್ವಾಮಿ ಅವರ ಹೇಳಿಕೆ ಬಗ್ಗೆ ಚರ್ಚೆ ಬೇಡ. ಈಗಾಗಲೇ ಅಂಬರೀಶ್ ಅವರ ಅಂತಿಮ ಕಾರ್ಯಗಳನ್ನು ಮಾಡಲು ಸರ್ಕಾರ ಯಶಸ್ವಿಯಾಗಿ ವ್ಯವಸ್ಥೆ ಮಾಡಿದೆ. ಸಿಎಂ ಕುಮಾರಸ್ವಾಮಿ ಅವರು, ಸಚಿವ ಡಿಕೆ ಶಿವಕುಮಾರ್ ಅವರು ಸ್ಮಾರಕದ ಬಗ್ಗೆ ಚಿಂತನೆ ಹೊಂದಿದ್ದಾರೆ. ನನ್ನ ಅಭಿಪ್ರಾಯದಂತೆ ಮೂವರಿಗೂ ಸರಿಸಮಾನವಾಗಿ ಒಂದೇ ಕಡೆ ಸ್ಮಾರಕ ನಿರ್ಮಾಣ ಮಾಡುವುದು ಒಳ್ಳೆಯದು ಎಂಬ ಸಲಹೆ ನೀಡುವುದಾಗಿ ಹೇಳಿದರು. ಅಲ್ಲದೇ ಈ ಹಿಂದೆ ನಡೆದ ಬಗ್ಗೆ ಈಗ ಚರ್ಚೆ ಮಾಡುವುದು ಬೇಡ. ಏಕೆಂದರೆ ಈಗಿನ ಸರ್ಕಾರ ಉತ್ತಮ ನಿರ್ಧಾರ ಕೈಗೊಳ್ಳಲಿ ಎಂದರು. ಅಂದ ಹಾಗೇ, ವಿಷ್ಣುವರ್ಧನ್ ಅವರು 2009ರಲ್ಲಿ ಇಹಲೋಕ ತ್ಯಜಿಸಿದಾಗ ಯಡಿಯೂರಪ್ಪ ಅವರೇ ಸಿಎಂ ಆಗಿದ್ದರು.

    ಅಭಿಮಾನಿಗಳ ಬೇಡಿಕೆ ಬಗ್ಗೆ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ ಭಾರತಿ ವಿಷ್ಣು ವರ್ಧನ್ ಅವರು, ಈಗಾಗಲೇ ಮೈಸೂರಿನಲ್ಲಿ ಅವರ ಸ್ಮಾರಕ ನಿರ್ಮಾಣ ಕಾರ್ಯ ಒಂದು ಹಂತಕ್ಕೆ ಆಗಿರುವುದರಿಂದ ಮತ್ತೆ ಅದರ ಸ್ಥಳಾಂತರದ ಚರ್ಚೆ ಬೇಡ. ಈ ಬಗ್ಗೆ ಚರ್ಚೆ ಮಾಡಲು ನಮಗೆ ಇಷ್ಟವಿಲ್ಲ. ಏಕೆಂದರೆ ಅದಕ್ಕೆ ಕಾಲಾವಕಾಶ ಅಂತ್ಯವಾಗಿದೆ. ಕೆಲವರು ಸ್ಮಾರಕದ ಬಗ್ಗೆ ಕೋರ್ಟ್ ಮೆಟ್ಟಿಲು ಹತ್ತಿದ್ದು, ಸಿಎಂ ಅವರು ಈ ಕುರಿತು ಚರ್ಚೆ ನಡೆಸಿ ತೀರ್ಮಾನ ಕೈಗೊಂಡರೆ ಒಳಿತು ಎಂದು ತಿಳಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv