Tag: Actor Sunny Deol

  • ಬಿಜೆಪಿ ಸೇರ್ಪಡೆಯಾಗಿ ದೇಶಕ್ಕೆ ಮೋದಿ ಅವಶ್ಯಕತೆ ಇದೆ ಎಂದ ಸನ್ನಿ ಡಿಯೋಲ್

    ಬಿಜೆಪಿ ಸೇರ್ಪಡೆಯಾಗಿ ದೇಶಕ್ಕೆ ಮೋದಿ ಅವಶ್ಯಕತೆ ಇದೆ ಎಂದ ಸನ್ನಿ ಡಿಯೋಲ್

    ನವದೆಹಲಿ: ಬಾಲಿವುಡ್‍ನ ನಟ ಸನ್ನಿ ಡಿಯೋಲ್ ಅವರು ಇಂದು ಅಧಿಕೃತವಾಗಿ ಬಿಜೆಪಿ ಪಕ್ಷವನ್ನು ಸೇರ್ಪಡೆಯಾಗಿದ್ದಾರೆ.

    ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್ ಹಾಗೂ ಪಿಯೂಷ್ ಗೋಯಲ್ ನೇತೃತ್ವದಲ್ಲಿ ಇಂದು ದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಬಿಜೆಪಿ ಸೇರಿದ್ದಾರೆ.

    ಈ ವೇಳೆ ಸನ್ನಿ ಡಿಯೋಲ್ ಮಾತನಾಡಿ, ನನ್ನ ತಂದೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಬೆಂಬಲ ನೀಡಿದ್ದರು ಹಾಗೂ ದೇಶಕ್ಕಾಗಿ ಶ್ರಮಿಸಿದರು. ನಾನು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಸೇರಿ ದೇಶದ ಅಭಿವೃದ್ಧಿಗಾಗಿ ದುಡಿಯುತ್ತೇನೆ. ನರೇಂದ್ರ ಮೋದಿ ಅವರ ಅವಶ್ಯಕತೆ ದೇಶಕ್ಕಿದೆ. ಈ ಬಾರಿಯೂ ಆಯ್ಕೆಯಾಗಬೇಕು, ದೇಶವನ್ನು ಮುನ್ನಡೆಸಬೇಕು ಎಂದು ಹೇಳಿದರು.

    ನಾನು ಏನನ್ನು ಹೇಳುವುದಿಲ್ಲ. ಕೆಲಸ ಮಾಡಿ ತೋರಿಸುತ್ತೇನೆ. ಪ್ರತಿಯೊಂದು ಕೆಲಸವನ್ನು ಹೃದಯಪೂರ್ವಕವಾಗಿ ಮಾಡುತ್ತೇನೆ ಎಂದು ಸನ್ನಿ ಡಿಯೋಲ್ ತಿಳಿಸಿದರು.

    ಕೇಂದ್ರ ಸಚಿವ ನಿರ್ಮಾಲಾ ಸೀತರಾಮನ್ ಅವರು ಮಾತನಾಡಿ, ಸನ್ನಿ ಡಿಯೋಲ್ ಪಕ್ಷಕ್ಕೆ ಸೇರ್ಪಡೆಯಾಗಿದ್ದು ಖುಷಿ ತಂದಿದೆ. ಅವರು ಸಿನಿಮಾ ಕ್ಷೇತ್ರದ ಮೂಲಕ ಜನರ ಮನಸ್ಸು ಗೆದ್ದಿದ್ದಾರೆ ಹಾಗೂ ಪ್ರೇಕ್ಷಕರಿಗೆ ಉತ್ತಮ ಸಂದೇಶ ನೀಡಿದ್ದಾರೆ ಎಂದರು.

    ಸನ್ನಿ ಡಿಯೋಲ್ ಅವರು ಹಿರಿಯ ಬಾಲಿವುಡ್ ನಟ ಧರ್ಮೇಂದ್ರ ಅವರ ಮೊದಲ ಪತ್ನಿಯ ಮಗ. ಈಗಾಗಲೇ ಧರ್ಮೇಂದ್ರ ಅವರ ಎರಡನೇ ಪತ್ನಿ, ನಟಿ ಹೇಮಾ ಮಾಲಿನಿ ಅವರು ಬಿಜೆಪಿ ಪಕ್ಷ ಸೇರಿದ್ದಾರೆ. ಅಷ್ಟೇ ಅಲ್ಲದೆ ಅವರಿಗೆ ಮಥುರಾ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಸಿಕ್ಕಿದ್ದು, ಭರ್ಜರಿ ಪ್ರಚಾರ ನಡೆಸಿದ್ದಾರೆ.

    ಸನ್ನಿ ಡಿಯೋಲ್ ಅವರು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಅವರನ್ನು ಶನಿವಾರ ಭೇಟಿಯಾಗಿದ್ದರು. ಈ ಮೂಲಕ ಅವರು ತಮ್ಮ ಚಿಕ್ಕಮ್ಮ ಹೇಮಾ ಮಾಲಿನಿ ಅವರಂತೆ, ಬಿಜೆಪಿಯಿಂದಲೇ ರಾಜಕೀಯ ಜೀವನ ಆರಂಭಿಸಲಿದ್ದಾರೆ ಎನ್ನುವ ಚರ್ಚೆ ಆರಂಭವಾಗಿತ್ತು.

    ಪಂಜಾಬ್‍ನ ಅಮೃತಸರ ಕ್ಷೇತ್ರದಿಂದ ಸನ್ನಿ ಡಿಯೋಲ್ ಅವರನ್ನು ಕಣಕ್ಕಿಳಿಸಲು ಬಿಜೆಪಿ ಚಿಂತನೆ ನಡೆಸಿದೆ ಎನ್ನಲಾಗಿದೆ. ಪಂಜಾಬ್‍ನಲ್ಲಿ ಬಿಜೆಪಿಯು ಶಿರೋಮಣಿ ಅಕಾಲಿ ದಳದ (ಎಸ್‍ಎಡಿ) ಜೊತೆ ಮೈತ್ರಿ ಮಾಡಿಕೊಂಡಿದೆ. ಈ ಮೂಲಕ ಒಟ್ಟು 13 ಲೋಕಸಭಾ ಕ್ಷೇತ್ರಗಳ ಪೈಕಿ ಮೂರು ಕ್ಷೇತ್ರಗಳು ಬಿಜೆಪಿಗೆ ಸಿಕ್ಕಿದ್ದು, 10 ಕ್ಷೇತ್ರಗಳಿಂದ ಎಸ್‍ಎಡಿ ಅಭ್ಯರ್ಥಿಗಳು ಕಣಕ್ಕೆ ಇಳಿಯಲಿದ್ದಾರೆ.