Tag: Actor Rajinikanth

  • ಏಕಭಾಷೆ ಪರಿಕಲ್ಪನೆ ಸಾಧ್ಯವಿಲ್ಲ – ಅಮಿತ್ ಶಾಗೆ ರಜನಿಕಾಂತ್ ಟಾಂಗ್

    ಏಕಭಾಷೆ ಪರಿಕಲ್ಪನೆ ಸಾಧ್ಯವಿಲ್ಲ – ಅಮಿತ್ ಶಾಗೆ ರಜನಿಕಾಂತ್ ಟಾಂಗ್

    ಚೆನ್ನೈ: ಏಕಭಾಷೆ ಪರಿಕಲ್ಪನೆ ದೇಶದ ಬೆಳವಣಿಗೆಗೆ ಒಳ್ಳೆಯದು. ದುರದೃಷ್ಟಕರ ಸಂಗತಿ ಎಂದರೆ ನಮ್ಮ ದೇಶದಲ್ಲಿ ಇದು ಸಾಧ್ಯವಿಲ್ಲದಿರುವುದು. ಹೀಗಾಗಿ ಯಾವುದೇ ಭಾಷೆಯನ್ನು ಯಾರ ಮೇಲೆಯೂ ಹೇರಲು ಸಾಧ್ಯವಿಲ್ಲ ಎಂದು ಸೂಪರ್ ಸ್ಟಾರ್ ರಜನಿಕಾಂತ್ ಅಭಿಪ್ರಾಯ ಪಟ್ಟಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಏಕಭಾಷಾ ಸೂತ್ರಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಏಕ ಭಾಷಾ ಸೂತ್ರ ಭಾರತಕ್ಕೆ ಮಾತ್ರವಲ್ಲ ಯಾವುದೇ ದೇಶದ ಏಕತೆ ಹಾಗೂ ಪ್ರಗತಿಗೆ ಒಳ್ಳೆಯದು. ಆದರೆ ದುರದೃಷ್ಟವೆಂಬಂತೆ ನಮ್ಮ ದೇಶದಲ್ಲಿ ಸಾಮಾನ್ಯ ಭಾಷೆಯನ್ನು ತರಲು ಸಾಧ್ಯವಿಲ್ಲ. ಆದ್ದರಿಂದ ನೀವು ಯಾವುದೇ ಭಾಷೆಯನ್ನು ಯಾರ ಮೇಲೆಯೂ ಹೇರಲು ಸಾಧ್ಯವಿಲ್ಲ ಎಂದು ರಜನಿಕಾಂತ್ ತಿಳಿಸಿದ್ದಾರೆ.

    ವಿಶೇಷವಾಗಿ ತಮಿಳುನಾಡಿನಲ್ಲಿ ಮಾತ್ರವಲ್ಲ, ಹಿಂದಿ ಹೇರಿದಲ್ಲಿ ದಕ್ಷಿಣ ಭಾರತ ಯಾವುದೇ ರಾಜ್ಯಗಳು ಅದನ್ನು ಸ್ವೀಕರಿಸುವುದಿಲ್ಲ. ಉತ್ತರ ಭಾರತದಲ್ಲಿಯೂ ಅನೇಕ ರಾಜ್ಯಗಳು ಇದನ್ನು ಒಪ್ಪಿಕೊಳ್ಳುವುದಿಲ್ಲ ಎಂದು ತಿಳಿಸಿದ್ದಾರೆ.

    ಹಿಂದಿಯೇತರ ರಾಜ್ಯಗಳಲ್ಲಿ ಭಾಷೆಯನ್ನು ಹೇರಲು ಈ ಹಿಂದೆ ಸಾಕಷ್ಟು ಬಾರಿ ಪ್ರಯತ್ನ ಮಾಡಲಾಗಿದೆ ಆದರೂ ಅದು ಸಾಧ್ಯವಾಗಿಲ್ಲ. ಇದೀಗ ಏಕ ಭಾಷಾ ಸೂತ್ರವನ್ನು ಅಮಿತ್ ಶಾ ಮತ್ತೊಮ್ಮೆ ಉಚ್ಛರಿಸಿದ್ದರು.

    `ಹಿಂದಿ ದಿವಸ್’ ಆಚರಣೆ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 14ರಂದು ಅಮಿತ್ ಶಾ ಅವರು ದೆಹಲಿಯಲ್ಲಿ ಮಾತನಾಡಿ, ಈ ದೇಶದ ವಿಶೇಷತೆ ಅಂದರೆ ಭಾಷೆ. ಜಗತ್ತಿನ ಯಾವುದೇ ಭಾಷೆಯ ಜೊತೆ ಹೋಲಿಸಿ ನೋಡಿದಾಗ ನಮ್ಮ ಭಾಷೆಯ ವ್ಯಾಪಕತೆ, ಸಮೃದ್ಧತೆಯೇ ಸರ್ವಶ್ರೇಷ್ಠ ಎಂದಿದ್ದರು. ಅಲ್ಲದೇ ಭಾಷೆಗಳು ಮತ್ತು ಉಪಭಾಷೆಗಳ ವೈವಿಧ್ಯತೆಯು ನಮ್ಮ ರಾಷ್ಟ್ರದ ಶಕ್ತಿ. ಆದರೆ, ನಮ್ಮ ರಾಷ್ಟ್ರವು ಒಂದೇ ಭಾಷೆಯನ್ನು ಹೊಂದುವ ಅವಶ್ಯಕತೆಯಿದೆ. ನಮ್ಮ ಸ್ವಾತಂತ್ರ್ಯ ಹೋರಾಟಗಾರರು ಹಿಂದಿಯನ್ನು `ರಾಜ್ ಭಾಷಾ’ ಎಂದು ಕರೆದು ಸ್ವೀಕರಿಸಿದ್ದರು. ಮಾತೃ ಭಾಷೆಯ ಜೊತೆಗೆ ಹಿಂದಿ ಭಾಷೆಯನ್ನು ಹೆಚ್ಚಾಗಿ ಬಳಸಿ ಎಂದಿದ್ದರು ಎಂದು ಹೇಳಿದ್ದರು.

    ಭಾರತವನ್ನು ಒಂದುಗೂಡಿಸುವ ಸಾಮಥ್ರ್ಯ ಹಿಂದಿ ಭಾಷೆಗೆ ಇದೆ. ಭಾರತವೂ ವಿಭಿನ್ನ ಭಾಷೆಗಳ ದೇಶ. ಪ್ರತಿ ಭಾಷೆಗೂ ತನ್ನದೇ ಮಹತ್ವವಿದೆ. ಆದರೆ ಜಾಗತಿಕವಾಗಿ ಭಾರತದ ಅಸ್ಮಿತೆ ಆಗುವ ಭಾಷೆಯ ಅಗತ್ಯವಿದೆ ಎಂದು ಅಮಿತ್ ಶಾ ಟ್ವೀಟ್ ಮಾಡಿದ್ದರು. ಶಾ ಅವರ ಈ ಹೇಳಿಗೆ ಬಿಜೆಪಿ ಕಾರ್ಯಾಧ್ಯಕ್ಷ ಜೆಪಿ ನಡ್ಡಾ ಕೂಡ ದನಿಗೂಡಿಸಿದ್ದರು.

    ಈ ಬಗ್ಗೆ ಸೋಮವಾರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಟ್ವೀಟ್ ಮಾಡಿ, ಭಾರತೀಯ ಸಂವಿಧಾನ ಅಂಗೀಕರಿಸಿದ ಭಾಷೆಗಳಲ್ಲಿ ಯಾವುದೇ ತಾರತಮ್ಯ ಸಲ್ಲದು. ಕರ್ನಾಟಕ ರಾಜ್ಯದಲ್ಲಿ ಕನ್ನಡವೇ ಅಧಿಕೃತ ಭಾಷೆ ಮತ್ತು ಕನ್ನಡ ಭಾಷಾ ಸ್ವಾಭಿಮಾನಕ್ಕೆ ಧಕ್ಕೆ ತರುವ ಯಾವ ಪ್ರಯತ್ನವನ್ನೂ ನಮ್ಮ ಸರ್ಕಾರ ಸಹಿಸುವುದಿಲ್ಲ. ನಮ್ಮ ದೇಶದಲ್ಲಿನ ಎಲ್ಲ ಅಧಿಕೃತ ಭಾಷೆಗಳು ಸಮಾನವಾಗಿವೆ. ಅದೇ ರೀತಿ ಕರ್ನಾಟಕದಲ್ಲಿಯೂ ಕನ್ನಡ ಪ್ರಮುಖ ಭಾಷೆಯಾಗಿದೆ. ಕನ್ನಡದ ಮಹತ್ವ ಹಾಗೂ ಅಸ್ಮಿತೆಯ ವಿಚಾರದಲ್ಲಿ ನಾವು ಎಂದಿಗೂ ರಾಜಿಯಾಗುವುದಿಲ್ಲ. ಅಲ್ಲದೆ, ಕನ್ನಡ ಹಾಗೂ ರಾಜ್ಯದ ಸಂಸ್ಕೃತಿಯನ್ನು ಬೆಳೆಸಲು ಕಟಿಬದ್ಧರಾಗಿದ್ದೇವೆ ಎಂದು ಅಮಿತ್ ಶಾ ಹೇಳಿಕೆಗೆ ಕುಟುಕ್ಕಿದ್ದರು.

    ಈ ಕುರಿತು ನಟ-ರಾಜಕಾರಣಿ ಕಮಲ್ ಹಾಸನ್ ಪ್ರತಿಕ್ರಿಯಿಸಿ, ಭಾರತ ಗಣತಂತ್ರವಾದಾಗಲೇ ವೈವಿಧ್ಯತೆಯಲ್ಲಿ ಏಖತೆಯಿಂದ ಕೂಡಿದೆ ಎಂದು ಪ್ರಮಾಣೀಕರಿಸಲಾಗಿದೆ. ಇದೀಗ ಯಾವುದೇ ಶಾ, ಸುಲ್ತಾನ್ ಅಥವಾ ಸಾಮ್ರಾಟ್ ಇದನ್ನು ಹುಸಿಗೊಳಿಸಬಾರದು ಎಂದು ಸೋಮವಾರ ಪ್ರತಿಕ್ರಿಯಿಸಿದ್ದರು.

  • ಮೋದಿ-ಅಮಿತ್ ಶಾ ಕೃಷ್ಣಾರ್ಜುನ್ ಇದ್ದಂತೆ: ರಜನಿಕಾಂತ್

    ಮೋದಿ-ಅಮಿತ್ ಶಾ ಕೃಷ್ಣಾರ್ಜುನ್ ಇದ್ದಂತೆ: ರಜನಿಕಾಂತ್

    ಚೆನ್ನೈ: ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರು ಕೃಷ್ಣ-ಅರ್ಜುನ ಇದ್ದಂತೆ ಎಂದು ಸೂಪರ್ ಸ್ಟಾರ್ ರಜನಿಕಾಂತ್ ಹೊಗಳಿದ್ದಾರೆ.

    ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಅವರ ಎರಡು ವರ್ಷಗಳ ಆಡಳಿತಾವಧಿಯ ಕುರಿತ ಪುಸ್ತಕ ಬಿಡುಗಡೆ ಕಾರ್ಯಕ್ರಮವು ಭಾನುವಾರ ಚೆನ್ನೈನಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರಜನಿಕಾಂತ್ ಅವರು, ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370 ಹಾಗೂ 35 (ಎ) ವಿಧಿಗಳನ್ನು ರದ್ದು ಮಾಡಿದ ಕೇಂದ್ರ ಎನ್‍ಡಿಎ ಸರ್ಕಾರದ ಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ‘ಮಿಷನ್ ಕಾಶ್ಮೀರ ಕಾರ್ಯಾಚರಣೆಗಾಗಿ ಗೃಹ ಸಚಿವ ಅಮಿತ್ ಶಾ ಅವರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು. ನೀವು ಅದನ್ನು ನಡೆಸಿದ ರೀತಿ, ವಿಶೇಷವಾಗಿ ನೀವು ಸಂಸತ್ತಿನಲ್ಲಿ ಮಾಡಿದ ಭಾಷಣ ಅದ್ಭುತವಾಗಿತ್ತು. ನನಗೆ ಕೃಷ್ಣ-ಅರ್ಜುನ ಯಾರು ಅಂತ ಗೊತ್ತಿಲ್ಲ. ಮೋದಿ ಮತ್ತು ಅಮಿತ್ ಶಾ ಅವರಿಬ್ಬರು ಗೊತ್ತು. ಅಮಿತ್ ಶಾ ಜಿ ಮತ್ತು ನರೇಂದ್ರ ಮೋದಿ ಜಿ ಕೃಷ್ಣ-ಅರ್ಜುನರ ಜೋಡಿಯಂತೆ ಎಂದು ರಜನಿಕಾಂತ್ ಹೇಳಿದ್ದಾರೆ.

    ಇದೇ ವೇಳೆ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರನ್ನು ಹೊಗಳಿದ ರಜನಿಕಾಂತ್, ನಾಯ್ಡು ಅವರು ಜನರ ಕಲ್ಯಾಣದಲ್ಲಿ ಆಸಕ್ತಿ ಹೊಂದಿರುವ ಸಂಪೂರ್ಣ ಆಧ್ಯಾತ್ಮಿಕ ವ್ಯಕ್ತಿ ಎಂದು ಹೇಳಿದರು.

    ಈ ಕಾರ್ಯಕ್ರಮದಲ್ಲಿ ಗೃಹ ಸಚಿವ ಅಮಿತ್ ಶಾ, ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಪ್ರಕಾಶ್ ಜಾವಡೇಕರ್, ತಮಿಳುನಾಡು ರಾಜ್ಯಪಾಲ ಬನ್ವರಿಲಾಲ್ ಪುರೋಹಿತ್, ಮುಖ್ಯಮಂತ್ರಿ ಕೆ.ಪಳನಿಸ್ವಾಮಿ ಮತ್ತು ಉಪಮುಖ್ಯಮಂತ್ರಿ ಒ.ಪನ್ನೀರ್ಸೆಲ್ವಂ ಇದ್ದರು.

  • ರಜಿನಿಕಾಂತ್ ಭೇಟಿ ಆಗಬೇಕೆಂದ ಬ್ರಾವೋ

    ರಜಿನಿಕಾಂತ್ ಭೇಟಿ ಆಗಬೇಕೆಂದ ಬ್ರಾವೋ

    ಚೆನ್ನೈ: ಸೂಪರ್ ಸ್ಟಾರ್ ರಜಿನಿಕಾಂತ್ ಅವರನ್ನು ಭೇಟಿಯಾಗಬೇಕು ಎಂದು ಚೆನ್ನೈ ಸೂಪರ್ ಕಿಂಗ್ಸ್ ತಂಡ ಆಟಗಾರ ಬ್ರಾವೋ ಇಚ್ಛೆ ವ್ಯಕ್ತಪಡಿಸಿದ್ದಾರೆ.

    ಐಪಿಎಲ್ ಹಲವು ಆವೃತ್ತಿಗಳಲ್ಲಿ ವೆಸ್ಟ್ ಇಂಡೀಸ್ ಆಟಗಾರ ಚೆನ್ನೈ ತಂಡದ ಪರ ಆಡುತ್ತಿದ್ದು, ಭಾರತವೆಂದರೆ ತಮಗೆ ಇಷ್ಟ ಎಂದು ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ. ಅಲ್ಲದೇ ಇಲ್ಲಿನ ಸಂಸ್ಕೃತಿ, ಆಹಾರ ಹಾಗೂ ಜೀವನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಇದೇ ವೇಳೆ ಒಮ್ಮೆಯಾದರೂ ನಟ ರಜಿನಿಕಾಂತ್ ಅವರನ್ನು ನಾನು ಭೇಟಿ ಮಾಡಬೇಕೆಂಬ ಇಚ್ಛೆ ಇದೆ. ಅವರ ಬಗ್ಗೆ ಸಾಕಷ್ಟು ಸಂಗತಿಗಳನ್ನು ಕೇಳಿದ್ದೇನೆ. ಆದರೆ ಅವರು ನಟಿಸಿರುವ ಸಿನಿಮಾ ನೋಡಲು ಅವಕಾಶ ಲಭಿಸಿಲ್ಲ. ಇಷ್ಟರಲ್ಲೇ ಅವರ ಸಿನಿಮಾಗಳನ್ನು ನೋಡುತ್ತೇನೆ ಎಂದು ಹೇಳಿದ್ದಾರೆ.

    ಸಂಗೀತ ಕ್ಷೇತ್ರದಲ್ಲೂ ತಮ್ಮ ಪ್ರತಿಭೆಯನ್ನು ತೋರಿಸಿರುವ ಬ್ರಾವೋ ಮಕ್ಕಳಿಗಾಗಿ ವಿಶೇಷ ಹಾಡೊಂದನ್ನು ಸಿದ್ಧಪಡಿಸಿದ್ದು, ನಮ್ಮ ತಂಡದ ಆಟಗಾರರ ಮಕ್ಕಳು ಈ ಹಾಡು ತಯಾರಿಸಲು ನನಗೆ ಪ್ರೇರಣೆ. ಹರ್ಭಜನ್ ಸಿಂಗ್ ಮಗಳು ನನ್ನನ್ನು ಚಾಂಪಿಯನ್ ಎಂದೇ ಕರೆಯುತ್ತಾಳೆ. ಈ ಹಾಡು ಬರೆಯಲು ಸಿಎಸ್‍ಕೆ ಅಭಿಮಾನಿ ಬಳಗ ನನಗೆ ಸಾಕಷ್ಟು ಸಹಾಯ ಮಾಡಿದೆ ಎಂದಿದ್ದಾರೆ. 2020ರ ಟೂರ್ನಿಯಲ್ಲಿ ಧೋನಿಗಾಗಿಯೇ ಹಾಡೊಂದನ್ನು ಸಿದ್ಧಪಡಿಸಲು ಈಗಾಗಲೇ ತಯಾರಿ ನಡೆಸಿದ್ದೇನೆ ಎಂದಿದ್ದಾರೆ.

  • ರಜಿನಿ ಸಿನಿಮಾ ವಿರುದ್ಧ ವಾಟಾಳ್ ಪ್ರತಿಭಟನೆ – ಅಂಬಿ ಇಲ್ಲದ ಹೊತ್ತಲ್ಲೇ ತಲೈವಾಗೆ ಸಂಕಷ್ಟನಾ?

    ರಜಿನಿ ಸಿನಿಮಾ ವಿರುದ್ಧ ವಾಟಾಳ್ ಪ್ರತಿಭಟನೆ – ಅಂಬಿ ಇಲ್ಲದ ಹೊತ್ತಲ್ಲೇ ತಲೈವಾಗೆ ಸಂಕಷ್ಟನಾ?

    ಬೆಂಗಳೂರು: ತಲೈವಾ ರಜನಿಕಾಂತ್ ಅಭಿನಯದ 2.0 ಸಿನಿಮಾವನ್ನು ಬೆಂಗಳೂರಲ್ಲಿ ಬಿಡುಗಡೆ ಮಾಡಿದಕ್ಕೆ ಕನ್ನಡಪರ ಹೋರಾಟ ವಾಟಾಳ್ ನಾಗರಾಜ್ ವಿರೋಧ ವ್ಯಕ್ತಪಡಿಸಿದ್ದಾರೆ.

    ರಜನಿ ಸಿನಿಮಾ ವಿರುದ್ಧ ಊವರ್ಶಿ ಥಿಯೇಟರ್ ಮುಂಭಾಗ ಪ್ರತಿಭಟಿಸಿ ವಾಟಾಳ್ ನಾಗರಾಜ್, ಕನ್ನಡ ಚಿತ್ರಗಳು ಬಿಟ್ಟು ಪರಭಾಷಾ ಚಿತ್ರಗಳ ಪ್ರದರ್ಶನ ಬೇಡ. ನವೆಂಬರ್ ತಿಂಗಳಲ್ಲಿ ಬೇರೆ ಭಾಷೆ ಸಿನಿಮಾಗಳು ರಿಲೀಸ್ ಆಗಬಾರದು. ಇದರಿಂದ ಕನ್ನಡ ಸಿನಿಮಾಗಳಿಗೆ ತೊಂದರೆ ಆಗುತ್ತದೆ. ಇದರ ವಿರುದ್ಧ ಡಿಸೆಂಬರ್ 1 ರಂದು ವಾಣಿಜ್ಯ ಮಂಡಳಿಗೆ ಮುತ್ತಿಗೆ ಹಾಕುತ್ತೇವೆ ಎಂದರು. ಈ ವೇಳೆ ಪ್ರತಿಭಟನಾಕಾರರನ್ನು ತಡೆದ ಪೊಲೀಸರು ವಶಕ್ಕೆ ಪಡೆದರು.

    ಪ್ರತಿಭಟನೆ ಹಿನ್ನೆಲೆಯಲ್ಲಿ ಊರ್ವಶಿ ಚಿತ್ರ ಮಂದಿರ ಬಳಿ ಹೆಚ್ಚಿನ ಪೊಲೀಸ್ ಭದ್ರತೆ ವಹಿಸಲಾಗಿತ್ತು. ಅಲ್ಲದೇ ಚಿತ್ರ ಮಂದಿರ ಮುಂದೆ ಯಾವುದೇ ಕಟೌಟ್ ಮತ್ತು ಬ್ಯಾನರ್ಸ್ ಹಾಕದೆ ಎಚ್ಚರ ವಹಿಸಲಾಗಿತ್ತು. ಚಿತ್ರ ಮಂದಿರ ಬಳಿಕ ಒಂದು ಕೆ.ಎಸ್.ಆರ್.ಪಿ ತುಕಡಿ ನಿಯೋಜನೆ ಮಾಡಿ 60ಕ್ಕೂ ಹೆಚ್ಚು ಪೊಲೀಸರ ರಕ್ಷಣೆ ನೀಡಿದ್ದರು.

    ರೋಬೋ ಚಿತ್ರದ ಮುಂದುವರಿದ ಭಾಗವಾದ 2.0 ಎಸ್. ಶಂಕರ್ ನಿರ್ದೇಶನದ ಬಹುನಿರೀಕ್ಷಿತ ಬೆಂಗಳೂರು ಸೇರಿದಂತೆ ರಾಜ್ಯದ ವಿವಿದೆಡೆ ಬಿಡುಗಡೆ ಆಗಿದೆ. ಸಿನಿಮಾದ ಟೀಸರ್, ಫಸ್ಟ್ ಲುಕ್ ಮತ್ತು ಮೇಕಿಂಗ್ ವಿಡಿಯೋಗಳಿಂದ ಸಿಕ್ಕಾಪಟ್ಟೆ ಸದ್ದು ಮಾಡಿದ್ದ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. 2.0 ಸಿನಿಮಾದಲ್ಲಿ ರಜನಿಕಾಂತ್, ಅಕ್ಷಯ್ ಕುಮಾರ್ ಮತ್ತು ಆ್ಯಮಿ ಜಾಕ್ಸನ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಎಸ್.ಶಂಕರ್ ಆ್ಯಕ್ಷನ್ ಕಟ್ ಹೇಳಿದ್ದು, ಎ.ಆರ್.ರೆಹಮಾನ್ ಸಂಗೀತದಲ್ಲಿ ಹಾಡುಗಳು ಮೂಡಿ ಬಂದಿವೆ. 2010ರಲ್ಲಿ ರೋಬೋ ಸಿನಿಮಾ ತೆರೆ ಕಂಡಿತ್ತು. ರಜನಿ ಮತ್ತು ಐಶ್ವರ್ಯ ರೈ ನಟಿಸಿದ್ದ ಸಿನಿಮಾ ಕೋಟಿ ಕೋಟಿ ಹಣವನ್ನು ಗಳಿಸಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪೊಲೀಸ್ ರಕ್ಷಣೆ ನೀಡಲು ಮಾತ್ರ ಸೂಚನೆ – ಪ್ರತಿಭಟನೆ ನಡೆಸುವುದು ನಮ್ಮ ಹಕ್ಕು : ಸಾರಾ ಗೋವಿಂದು

    ಪೊಲೀಸ್ ರಕ್ಷಣೆ ನೀಡಲು ಮಾತ್ರ ಸೂಚನೆ – ಪ್ರತಿಭಟನೆ ನಡೆಸುವುದು ನಮ್ಮ ಹಕ್ಕು : ಸಾರಾ ಗೋವಿಂದು

    ಬೆಂಗಳೂರು: ಕಾಲಾ ಸಿನಿಮಾ ಬಿಡುಗಡೆ ಪೊಲೀಸ್ ರಕ್ಷಣೆ ನೀಡಲು ಹೈಕೋರ್ಟ್ ಸೂಚನೆ ನೀಡಿದೆ, ಆದರೆ ಪ್ರತಿಭಟನೆ ಮಾಡಬೇಡಿ ಎಂದು ಎಲ್ಲೂ ಹೇಳಿಲ್ಲ. ಪ್ರತಿಭಟನೆ ನಡೆಸುವುದು ನಮ್ಮ ಹಕ್ಕು ಎಂದು ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಸಾರಾ ಗೋವಿಂದು ಹೇಳಿದ್ದಾರೆ.

    ನಟ ರಜನಿಕಾಂತ್ ಅಭಿನಯದ ಕಾಲಾ ಸಿನಿಮಾ ಬಿಡುಗಡೆಗೆ ಕೋರ್ಟ್ ಪೊಲೀಸ್ ರಕ್ಷಣೆ ನೀಡುವಂತೆ ಆದೇಶ ನೀಡಿದ ಬಳಿಕ ಕರವೇ ಪ್ರವೀಣ್ ಶೆಟ್ಟಿ ಸೇರಿದಂತೆ ಕನ್ನಡಪರ ಹೋರಾಟಗಾರರು ಸಾ.ರಾ ಗೋವಿಂದ್ ಅವರ ನೇತೃತ್ವದಲ್ಲಿ ಸಿಎಂ ಕುಮಾರಸ್ವಾಮಿ ಕೃಷ್ಣ ಗೃಹ ಕಚೇರಿಯಲ್ಲಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.

    ಸಿಎಂ ಭೇಟಿ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಸಾರಾ ಗೋವಿಂದ್, ಸಿನಿಮಾ ಬಿಡುಗಡೆಗೆ ರಕ್ಷಣೆ ಕೊಡಿ ಎಂದು ಕೋರ್ಟ್ ಸೂಚನೆ ನೀಡಿದೆ. ಆದರೆ ಕನ್ನಡ ಪರ ಸಂಘಟನೆಗಳಿಗೆ ಪ್ರತಿಭಟನೆ ಮಾಡಬೇಡಿ ಎಂದು ಎಲ್ಲೂ ಹೇಳಿಲ್ಲ. ಪ್ರತಿಭಟನೆ ಮಾಡೋದು ನಮ್ಮ ಹಕ್ಕು. ಪೊಲೀಸರು ಯಾವುದೇ ಪ್ರಕರಣ ದಾಖಲಿಸಿದರೂ ಭಯವಿಲ್ಲ. ಈ ವಿಚಾರದಲ್ಲಿ ಜೈಲಿಗೂ ಹೋಗಲು ಸಿದ್ಧ. ಕಾಲಾ ಸಿನಿಮಾ ಬಿಡುಗಡೆಯನ್ನು ತಡೆದು ನಿಲ್ಲಿಸುತ್ತೇವೆ ಎಂದು ಹೇಳಿದರು.

    ಕಾವೇರಿ ವಿಚಾರದಲ್ಲಿ ನಟ ರಜಿನಿಕಾಂತ್ ಅವರು ನೀಡಿರುವ ಹೇಳಿಕೆಗಳು ಸರಿಯಿಲ್ಲ. ಅದ್ದರಿಂದ ಕಾಲಾ ಸಿನಿಮಾ ಬಿಡುಗಡೆಗೆ ಅನುಮತಿ ನೀಡಬಾರದು ಎಂದು ಸಾರಾ ಗೋವಿಂದು ಅವರು ಮನವಿ ಮಾಡಿದ್ದಾರೆ.