Tag: actor prakash rai

  • ಪ್ರತಾಪ್ ಸಿಂಹ ವಿಷಾದ – ಕ್ಷಮೆಯನ್ನು ಅಂಗೀಕರಿಸುತ್ತೇನೆ ಎಂದ ಪ್ರಕಾಶ್ ರೈ

    ಪ್ರತಾಪ್ ಸಿಂಹ ವಿಷಾದ – ಕ್ಷಮೆಯನ್ನು ಅಂಗೀಕರಿಸುತ್ತೇನೆ ಎಂದ ಪ್ರಕಾಶ್ ರೈ

    ಬೆಂಗಳೂರು: ಬಹುಭಾಷಾ ನಟ ಪ್ರಕಾಶ್ ರೈ ತನ್ನ ವಿರುದ್ಧ ಹೂಡಿದ್ದ ಮಾನನಷ್ಟ ಮೊಕದ್ದಮೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸದ ಪ್ರತಾಪ್ ಸಿಂಹ ವಿಷಾದ ವ್ಯಕ್ತಪಡಿಸಿದ್ದಾರೆ.

    ಪ್ರತಾಪ್ ಸಿಂಹ ಅವರು ತಮ್ಮ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಿದ್ದಾರೆ ಎಂದು ಆರೋಪಿಸಿ ಪ್ರಕಾಶ್ ರೈ ಅವರು ಕೇವಲ 1 ರೂ. ಪರಿಹಾರ ಕೋರಿ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಈ ಪ್ರಕರಣದ ವಿಚಾರಣೆ ಸಂಬಂಧ ಟ್ವೀಟ್ ಮಾಡಿ ಸದ್ಯ ಪ್ರತಾಪ್ ಸಿಂಹ ಅವರು ವಿಷಾದ ಕೋರಿದ್ದಾರೆ. ಈ ಮೂಲಕ ಪ್ರಕರಣಕ್ಕೆ ಇತಿಶ್ರೀ ಹಾಡಿದ್ದಾರೆ.

    ಟ್ವೀಟ್‍ನಲ್ಲೇನಿದೆ?
    ‘ಆತ್ಮೀಯ ಪ್ರಕಾಶ್ ರಾಜ್ ಅವರೇ, 2017 ಅಕ್ಟೋಬರ್ 2 ಮತ್ತು 3 ರಂದು ನಿಮ್ಮ ಹಾಗೂ ನಿಮ್ಮ ಕುಟುಂಬದ ವಿರುದ್ಧ ಅವಹೇಳನಕಾರಿ ಲೇಖನವನ್ನು ಪೋಸ್ಟ್ ಮಾಡಿದ್ದೆ. ಆದರೆ ಈ ಪೋಸ್ಟ್ ಗಳು ಅನಗತ್ಯ ಹಾಗೂ ನೋಯಿಸುವ ಅಂಶಗಳನ್ನು ಹೊಂದಿತ್ತು ಎಂಬುವುದನ್ನು ಅರ್ಥೈಸಿಕೊಂಡಿದ್ದೇನೆ. ಆದ್ದರಿಂದ ಟ್ವಿಟ್ಟರ್ ಹಾಗೂ ಫೇಸ್‍ಬುಕ್ ಪೋಸ್ಟ್‍ಗೆ ನಾನು ವಿಷಾದಿಸುತ್ತೇನೆ’ ಎಂದು ಬರೆದುಕೊಂಡಿದ್ದಾರೆ.

    ಪ್ರತಾಪ ಸಿಂಹ ಅವರ ಟ್ವೀಟ್‍ಗೆ ಪ್ರತಿಕ್ರಿಯೆ ನೀಡಿರುವ ಪ್ರಕಾಶ್ ರೈ ಅವರು, ಧನ್ಯವಾದ, ನಾನು ನಿಮ್ಮ ಕ್ಷಮೆಯನ್ನು ಅಂಗೀಕರಿಸುತ್ತೇನೆ. ನಮ್ಮ ನಡುವೆ ಹಲವು ವಿಚಾರಗಳಲ್ಲಿ ವೈಚಾರಿಕ ಭಿನ್ನಾಭಿಪ್ರಾಯಗಳು ಇರಬಹುದು. ಆದರೆ ವೈಯಕ್ತಿಕ ಜೀವನದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನ ಮಾಡುವುದು ತಪ್ಪು. ಇಬ್ಬರು ತಮ್ಮದೇ ಕ್ಷೇತ್ರದಲ್ಲಿ ಉತ್ತಮ ಮಟ್ಟದಲ್ಲಿ ಇದ್ದೇವೆ. ಹೀಗಾಗಿ ನಾವು ಮಾದರಿಯಾಗಿ ಇರುವುದು ನಮ್ಮ ಕರ್ತವ್ಯವಾಗಿದೆ. ನಿಮಗೆ ಒಳ್ಳೆಯದಾಗಲಿ ಎಂದಿದ್ದಾರೆ.

    ಪ್ರತಾಪ್ ಸಿಂಹ ಟ್ವೀಟ್ ಏನಿತ್ತು?
    ಅಕ್ಟೋಬರ್ 2 ರಂದು ಪ್ರತಾಪ್ ಸಿಂಹ ವೆಬ್‍ಸೈಟ್ ಒಂದರಲ್ಲಿ ಬಂದಿದ್ದ ಸುದ್ದಿಯನ್ನು ಟ್ವೀಟ್ ಮಾಡಿದ್ದರು. “ಮಗನ ಸಾವಿನ ದು:ಖದಲ್ಲಿದ್ದ ಹೆಂಡತಿಯನ್ನು ಬಿಟ್ಟು ಡ್ಯಾನ್ಸರ್ ಹಿಂದೆ ಓಡಿದ ರೈಯಂತಹವನು ಮೋದಿ? ಯೋಗಿಗೆ ಹೇಳುವಷ್ಟು ಯೋಗ್ಯತೆಯಿರುವವನಾ?” ಎನ್ನುವ ಹೆಡ್‍ಲೈನ್ ಈ ಸುದ್ದಿಯಲ್ಲಿತ್ತು.

    ನ್ಯಾಯಮೂರ್ತಿಗಳ ಕಳವಳ: ಇಂದು ಶಾಸಕರು ಸಂಸದರ ಕ್ರಿಮಿನಲ್ ಪ್ರಕರಣಗಳ ವಿಚಾರಣೆಯ ವಿಶೇಷ ನ್ಯಾಯಾಲಯದಲ್ಲಿ ಈ ಅರ್ಜಿ ವಿಚಾರಣೆಗೆ ಬಂದಿತ್ತು. ಈ ವೇಳೆ ನ್ಯಾ. ರಾಮಚಂದ್ರ ಡಿ.ಹುದ್ದಾರ ಅವರು ಉತ್ತರ ಕರ್ನಾಟಕದ ನೆರೆ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಇಬ್ಬರು ಸೆಲೆಬ್ರೆಟಿಗಳಾಗಿದ್ದು, ಸಮಾಜಕ್ಕೆ ಮಾದರಿಯಾಗಿರಬೇಕು. ಆದರೆ ರಾಜ್ಯದಲ್ಲಿ ಏನಾಗುತ್ತಿದೆ ಎಂದು ನಿಮಗೆ ಗೊತ್ತಿದ್ಯಾ? ಉತ್ತರ ಕರ್ನಾಟಕದಲ್ಲಿ ಪ್ರವಾಹ ಪರಿಸ್ಥಿತಿ ಇದೆ. ಹಲವು ಜಿಲ್ಲೆಗಳಲ್ಲಿ ಜನರಿಗೆ ತಿನ್ನಲು ಊಟ ಇಲ್ಲದ ಸ್ಥಿತಿ ಇದೆ. ಮಾಧ್ಯಮಗಳಲ್ಲಿ ದೃಶ್ಯಗಳನ್ನು ನೋಡಿದರೆ ಕಣ್ಣೀರು ಬರುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು. ಅಲ್ಲದೇ ಪ್ರವಾಹ ಪೀಡಿತ ಪ್ರದೇಶಗಳ ಕಡೆ ಗಮನಹರಿಸಿ ಎಂದು ಪ್ರತಾಪ್ ಸಿಂಹ ಅವರಿಗೆ ಸಲಹೆ ನೀಡಿದ್ದರು.

  • ಪ್ರಿಯಾಂಕ ಗಾಂಧಿ ಪರ ಬ್ಯಾಟ್ ಬೀಸಿ ಪ್ರಧಾನಿ ಮೋದಿಗೆ ಟಾಂಗ್ ಕೊಟ್ಟ ಪ್ರಕಾಶ್ ರೈ

    ಪ್ರಿಯಾಂಕ ಗಾಂಧಿ ಪರ ಬ್ಯಾಟ್ ಬೀಸಿ ಪ್ರಧಾನಿ ಮೋದಿಗೆ ಟಾಂಗ್ ಕೊಟ್ಟ ಪ್ರಕಾಶ್ ರೈ

    ಚಿತ್ರದುರ್ಗ: ಹೆಣ್ಣು ಮಗಳು ರಾಜಕೀಯಕ್ಕೆ ಬಂದಿರುವುದು ಒಳ್ಳೆಯ ಬೆಳವಣಿಗೆ. ಆದರೆ ಗಾಂಧಿ ಕುಟುಂಬಕ್ಕೆ ಸೇರಿದ್ದಾರೆ ಅಂತ ಹೇಳುವುದು ಸರಿಯಲ್ಲ. ಪ್ರಿಯಾಂಕಾ ಅವರು ಗಾಂಧಿ ಕುಟುಂಬದಲ್ಲಿ ಹುಟ್ಟಿದ್ದೇ ತಪ್ಪಾ ಎಂದು ಬಹುಭಾಷಾ ನಟ ಪ್ರಕಾಶ್ ರೈ ಪ್ರಶ್ನಿಸಿದ್ದಾರೆ.

    ಇಲ್ಲಿನ ಬೋವಿ ಗುರುಪೀಠದ ಸಿದ್ಧರಾಮೇಶ್ವರ ಶ್ರೀಗಳನ್ನು ಭೇಟಿ ಮಾಡಿ ಬಳಿಕ ಮಾತನಾಡಿದ ಅವರು, ಪ್ರಿಯಾಂಕಾ ಗಾಂಧಿ ಅವರು ರಾಜಕೀಯಕ್ಕೆ ಕಾಲಿಟ್ಟಿರುವುದನ್ನು ಸ್ವಾಗತಿಸುತ್ತೇನೆ. ಕಾಂಗ್ರೆಸ್ ಹೊರತಾದ ರಾಷ್ಟ್ರೀಯ ಪಕ್ಷಗಳಲ್ಲಿ ಕುಟುಂಬ ರಾಜಕಾರಣ ಇಲ್ಲವೇ? ಅದು ನಿಮ್ಮ ಕಣ್ಣಿಗೆ ಕಾಣುವುದಿಲ್ಲವೇ ಎಂದು ಪ್ರಶ್ನಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಟಾಂಗ್ ಕೊಟ್ಟರು.

    ಪ್ರತಿ ಮಾತಿಗೂ ಪ್ರಧಾನಿ ನರೇಂದ್ರ ಮೋದಿ, ಮೋದಿ ಎನ್ನುತ್ತಾರೆ. ಮೋದಿ ಅವರಿಗೆ ಕುಟುಂಬವಿಲ್ಲ. ಆದರೆ ಅವರ ಪಕ್ಷದಲ್ಲಿ ಯಾರೂ ಕುಟುಂಬ ರಾಜಕೀಯ ಮಾಡಿಲ್ಲವೇ? ಗಾಂಧಿ ಕುಟುಂಬ ಕಂಡರೆ ಮಾತ್ರ ಯಾಕೆ ಕುಟುಕುತ್ತೀರಿ ಎಂದು ಪ್ರಶ್ನಿದರು.

    ಪ್ರಧಾನಿ ಮೋದಿ ಅವರು ಮೇಲ್ಜಾತಿಗೆ ಶೇ. 10 ಮೀಸಲಾತಿ ನೀಡುವ ನಿರ್ಧಾರದ ಕುರಿತು ಪ್ರತಿಕ್ರಿಯೆ ನೀಡಿದ ಪ್ರಕಾಶ್ ರೈ ಅವರು, ಶೋಷಿತ ಸಮುದಾಯಕ್ಕೆ ಶೇ. 10 ಮೀಸಲಾತಿ ಬದಲಾಗಿ ಬಡವರಿಗೆ ಕೆಲಸ ಕೊಡಬೇಕು ಎಂದ ಅವರು, ನಾನು ಹೇಳುತ್ತಿದ್ದೇನೆ ಮುಂದಿನ ದಿನಗಳಲ್ಲಿ ಮೋದಿ ಅವರು ಅಧಿಕಾರಕ್ಕೆ ಬರಲ್ಲ ಎಂದು ಹೇಳಿದರು.

    ಕೇವಲ ನಟರಾದರೆ ರಾಜಕೀದಲ್ಲಿ ಪಳಗುವುದಿಲ್ಲ. ಬಡವರು, ಶೋಷಿತ ವರ್ಗದವರ ಅಳಲು ಕೇಳಬೇಕು. ಆಗ ಮಾತ್ರ ನಿಜವಾದ ರಾಜಕಾರಣಿ ಆಗಬಹುದು ಅಂತ ಚಿತ್ರರಂಗದಿಂದ ರಾಜಕೀಯ ಪ್ರವೇಶ ಮಾಡಿ ಕೈ ಸುಟ್ಕೊಂಡವರಿಗೂ ಛಾಟಿ ಬೀಸಿದ ಅವರು, ರಾಷ್ಟ್ರೀಯ ಪಕ್ಷಗಳಲ್ಲಿ ಅವರ ಹೈಕಮಾಂಡ್ ಹೇಳಿದಂತೆ ನಡೆಯುತ್ತದೆ. ಅವರವರ ಬೇಳೆಯನ್ನು ಬೇಯಿಸಿಕೊಳ್ಳುವಲ್ಲಿ ಎಲ್ಲಾ ಪಕ್ಷಗಳು ನಿರತವಾಗಿದೆ. ಆದ್ದರಿಂದ ಬಡವರ ಪರ ಧ್ವನಿ ಎತ್ತಲು ನಾನು ರಾಜಕೀಯ ಪ್ರವೇಶ ಮಾಡಿದ್ದೇನೆ. ಈ ಬಾರಿಯ ಚುನಾವಣೆಗೆ ಬೆಂಗಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದೇನೆ ಎಂದು ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪ್ರಧಾನಿ ವಿರುದ್ಧ ಮಾತನಾಡಲು ಆರಂಭಿಸಿದ್ದ ದಿನದಿಂದ ಬಾಲಿವುಡ್ ಆಫರ್ ಗಳೇ ಬಂದಿಲ್ಲ: ಪ್ರಕಾಶ್ ರೈ

    ಪ್ರಧಾನಿ ವಿರುದ್ಧ ಮಾತನಾಡಲು ಆರಂಭಿಸಿದ್ದ ದಿನದಿಂದ ಬಾಲಿವುಡ್ ಆಫರ್ ಗಳೇ ಬಂದಿಲ್ಲ: ಪ್ರಕಾಶ್ ರೈ

    ನವದೆಹಲಿ: ಬಿಜೆಪಿ ಹಾಗೂ ಪ್ರಧಾನಿ ಮೋದಿ ವಿರುದ್ಧ ಮಾತನಾಡಲು ಆರಂಭಿಸಿದ ಬಳಿಕ ತನಗೆ ಬಾಲಿವುಡ್ ನಲ್ಲಿ ಯಾವುದೇ ಸಿನಿಮಾ ಆಫರ್ ಬಂದಿಲ್ಲ ಎಂದು ಬಹುಭಾಷಾ ನಟ ಪ್ರಕಾಶ್ ರೈ ಹೇಳಿದ್ದಾರೆ.

    ಖಾಸಗಿ ಮಾಧ್ಯಮವೊಂದರ ಸಂದರ್ಶನದ ವೇಳೆಯಲ್ಲಿ ಈ ಕುರಿತು ಮಾತನಾಡಿದ ರೈ, ಕಳೆದ ಆಕ್ಟೋಬರ್ ತಿಂಗಳಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯನ್ನು ಸಂಭ್ರಮಿಸುತ್ತಿದ್ದ ಬಿಜೆಪಿ ಕಾರ್ಯಯರ್ತರ ವಿರುದ್ಧ ಪ್ರಧಾನಿ ಮೋದಿ ಅವರ ಮೌನವನ್ನು ಪ್ರಶ್ನಿಸಿದ್ದೆ. ಬಳಿಕ ಹಿಂದಿ ಚಿತ್ರೋದ್ಯಮ ತನ್ನನ್ನು ಸೈಡ್ ಲೈನ್ ಮಾಡಿದೆ ಎಂದು ಹೇಳಿದರು.

    ಸದ್ಯ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಪರೋಕ್ಷವಾಗಿ ಪ್ರಚಾರ ನಡೆಸುತ್ತಿರುವ ಪ್ರಕಾಶ್ ರೈ, ತನಗೆ ದಕ್ಷಿಣ ಚಿತ್ರ ರಂಗದಿಂದ ಯಾವುದೇ ಸಮಸ್ಯೆ ಉಂಟಾಗಿಲ್ಲ. ಆದರೆ ಬಾಲಿವುಡ್ ಈ ನಡೆಯಿಂದ ತನಗೆ ಯಾವುದೇ ಸಮಸ್ಯೆ ಉಂಟಾಗಿಲ್ಲ. ಏಕೆಂದರೆ ತನ್ನ ಬಳಿ ಸಾಕಷ್ಟು ಹಣ ಇದೆ ಎಂದು ತಿಳಿಸಿದ್ದಾರೆ.

    ಗೌರಿ ಲಂಕೇಶ್ ಅವರ ಹತ್ಯೆ ತನಗೆ ತುಂಬಾ ಗೊಂದಲ ಉಂಟು ಮಾಡಿತು. ಆಕೆ ಪ್ರಶ್ನೆಗಳನ್ನು ಕೇಳುತ್ತಿದ್ದಳು. ಆದರೆ ಆಕೆಯ ಹತ್ಯೆ ಬಳಿಕ ನಿಶಬ್ಧ ಮೂಡಿತ್ತು. ಬಳಿಕ ತಾನು ಪ್ರಶ್ನೆ ಮಾಡಲು ಆರಂಭಸಿದೆ. ತಾನು ಮಾಡುವ ಕಾರ್ಯವನ್ನು ಬಿಜೆಪಿ ತಡೆಯಲು ಮುಂದಾಗಿದೆ ಎಂದು ಆರೋಪಿಸಿದರು.

    ಇದೇ ವೇಳೆ ಅಮಿತ್ ಶಾ ಅವರ ವಿರುದ್ಧ ವಾಗ್ದಾಳಿ ಮಾಡಿರುವ ಪ್ರಕಾಶ್ ರೈ, ದೇಶಕ್ಕೆ ಅಮಿತ್ ಶಾ ಅವರ ಕೊಡುಗೆ ಏನು? ನಾಯಕರಾಗಿ ಅವರ ಸಾಧನೆ ಏನು? ದೇಶದ ಅಭಿವೃದ್ಧಿ ಬಗ್ಗೆ ಅವರು ಯಾವ ಯೋಜನೆಗಳನ್ನು ರೂಪಿಸಿದ್ದಾರೆ. ಯಾವ ಆಧಾರದ ಮೇಲೆ ಅವರನ್ನು ಚಾಣಕ್ಯ ಎಂದು ಕರೆಯಲಾಗುತ್ತದೆ ಅಂತಾ ಪ್ರಶ್ನಿಸಿದರು.

  • ಅತಂತ್ರ ಸ್ಥಿತಿ ನಿರ್ಮಾಣವಾದ್ರೆ ಬಿಜೆಪಿ ಜೊತೆ ಜೆಡಿಎಸ್ ಕೈ ಜೋಡಿಸಬಾರದು: ಪ್ರಕಾಶ್ ರೈ

    ಅತಂತ್ರ ಸ್ಥಿತಿ ನಿರ್ಮಾಣವಾದ್ರೆ ಬಿಜೆಪಿ ಜೊತೆ ಜೆಡಿಎಸ್ ಕೈ ಜೋಡಿಸಬಾರದು: ಪ್ರಕಾಶ್ ರೈ

    ಮಡಿಕೇರಿ: ರಾಜ್ಯದಲ್ಲಿ ಪ್ರಾದೇಶಿಕ ಪಕ್ಷಗಳು ಗಟ್ಟಿಗೊಳ್ಳಬೇಕು. ಎರಡು ರಾಷ್ಟ್ರೀಯ ಪಕ್ಷಗಳ ಮುಂದೆ ಭಿಕ್ಷೆ ಬೇಡುವ ಹೈಕಮಾಂಡ್ ಸಂಸ್ಕೃತಿ ತೊಲಗಬೇಕು. ಚುನಾವಣೆ ಬಳಿಕ ರಾಜ್ಯದಲ್ಲಿ ಅತಂತ್ರ ನಿರ್ಮಾಣವಾಗಬಹುದು. ಆಗ ಬಿಜೆಪಿ ಜೊತೆ ಜೆಡಿಎಸ್ ಕೈ ಜೋಡಿಸದೆ ನೈತಿಕತೆಯನ್ನು ಉಳಿಸಿಕೊಳ್ಳಬೇಕು ಎಂದು ಬಹುಭಾಷಾ ನಟ ಪ್ರಕಾಶ್ ರೈ ಮನವಿ ಮಾಡಿದ್ದಾರೆ.

    ಮಡಿಕೇರಿಯಲ್ಲಿ ಆಯೋಜಿಸಲಾಗಿದ್ದ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಮಾತಾನಾಡಿದ ಅವರು, ಜಸ್ಟ್ ಆಸ್ಕಿಂಗ್ ಎನ್ನುವುದು ರಾಜಕೀಯ ವೇದಿಕೆಯಲ್ಲ ರಾಜಕೀಯ ಪಕ್ಷಗಳು ಅಲ್ಪ ಸಂಖ್ಯಾತ ಗುಂಪಿನಲ್ಲಿವೆ, ಪ್ರಶ್ನಿಸುವ ಜನರು ಬಹುಸಂಖ್ಯೆಯಲ್ಲಿದ್ದಾರೆ. ನಾನು ಬಹುಸಂಖ್ಯಾತರ ಪರವಾಗಿ ಪ್ರಶ್ನಿಸಿ ಸಾಮಾನ್ಯನಾಗಿ ಇರುತ್ತೇನೆ. ರಾಜಕೀಯಕ್ಕೆ ಪ್ರವೇಶಿಸಿ ಎಂಎಲ್‍ಎ, ಎಂಪಿ ಆಗುವ ಮೂಲಕ ಸಣ್ಣ ಬಾವಿಗೆ ಬೀಳಲಾರೆ. ಸಾಗರದಂತಿರುವ ಜನರ ಬಳಿಯೇ ನಾನು ಸದಾ ಇರಲು ಇಚ್ಚೆಪಡುತ್ತೇನೆ ಎಂದು ಹೇಳಿದ್ದಾರೆ.

    ಬೆಂಗಳೂರಿನಲ್ಲಿ ನಡೆದ ಗೌರಿ ಲಂಕೇಶ್ ಹತ್ಯೆ ನನ್ನನ್ನು ಪ್ರಶ್ನೆ ಕೇಳುವಂತೆ ಪ್ರೇರಣೆ ನೀಡಿತು. ಆಕೆಯ ಹತ್ಯೆಯನ್ನು ಒಂದು ವರ್ಗದ ಜನರು ಸಂಭ್ರಮ ಆಚರಿಸಿ ಖುಷಿಪಟ್ಟರು. ಬಿಜೆಪಿಯ ಈ ನಡೆಯನ್ನು ಪ್ರಧಾನಿ ಮೋದಿ ತಡೆಯದೆ ಸುಮ್ಮನಿದ್ದರು. ಹಾಗಾಗಿ ನಾನು ಮೊದಲು ಪ್ರಧಾನಿ ಮೋದಿಯನ್ನ ವಿರೋಧಿಸಿದೆ. ನಾನು ಅನ್ಯಾಯವನ್ನು ನಿರಂತರವಾಗಿ ಪ್ರಶ್ನೆ ಮಾಡುತ್ತಲೇ ಇರುತ್ತೇನೆ. ಅಲ್ಲದೇ ಕೋಮುವಾದ ತಡೆಯಲು ಬಿಜೆಪಿ ವಿಫಲವಾಗುತ್ತಿದೆ. ಹಾಗಾಗೀ ನಾನು ಬಿಜೆಪಿಯನ್ನು ವಿರೋಧಿಸುತ್ತೇನೆ ಎಂದು ತಿಳಿಸಿದರು.

    ಕಾವೇರಿ ಸತ್ಯ ಬಹಿರಂಗ: ಕಾವೇರಿ ವಿಚಾರವಾಗಿ ಎರಡು ತಿಂಗಳಲ್ಲಿ ಸತ್ಯವನ್ನು ಬಹಿರಂಗ ಮಾಡುತ್ತೇನೆ. ಈ ವಿಚಾರದಲ್ಲಿ ಎರಡು ರಾಜ್ಯದ ಜನಪ್ರತಿನಿಧಿಗಳು ಎರಡು ರಾಜ್ಯದ ಜನರಿಗೆ ಮೋಸ ಮಾಡಿದ್ದಾರೆ. ಪ್ರಕೃತಿಯನ್ನು ಬದಲಾವಣೆ ಮಾಡಬೇಡಿ. ಪ್ರವೃತ್ತಿಯನ್ನು ಬದಲಾವಣೆ ಮಾಡಿಕೊಳ್ಳಿ ಎಂದು ಸಲಹೆ ನೀಡುತ್ತೇನೆ ಎಂದರು.

     

    ಪ್ರಾದೇಶಿಕ ಪಕ್ಷ ಅಗತ್ಯ: ನಮ್ಮ ರಾಜ್ಯದಲ್ಲಿ ಪ್ರಾದೇಶಿಕ ಪಕ್ಷಗಳು ಗಟ್ಟಿಗೊಳ್ಳಬೇಕು. ಎರಡು ರಾಷ್ಟ್ರೀಯ ಪಕ್ಷಗಳ ಮುಂದೆ ಭಿಕ್ಷೆ ಬೇಡುವ ಹೈಕಮಾಂಡ್ ಸಂಸ್ಕೃತಿ ತೊಲಗಬೇಕು. ಚುನಾವಣೆ ಬಳಿಕ ರಾಜ್ಯದಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಬಹುದು. ಆಗ ಬಿಜೆಪಿ ಜೊತೆ ಜೆಡಿಎಸ್ ಕೈ ಜೋಡಿಸದೆ ನೈತಿಕತೆಯನ್ನು ಉಳಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.

    ಟಿಪ್ಪು ಜಯಂತಿ ಜನಭಿಪ್ರಾಯ: ಕೊಡಗಿನಲ್ಲಿ ಟಿಪ್ಪು ಜಯಂತಿ ಆಚರಣೆ ವಿಚಾರದ ಬಗ್ಗೆ ಮಾತಾನಾಡಿದ ಅವರು ಜಿಲ್ಲೆಯಲ್ಲಿ ಮುಂದಿನ ದಿನಗಳಲ್ಲಿ ಟಿಪ್ಪು ಜಯಂತಿ ಆಚರಣೆ ಬಗ್ಗೆ ಜನಾಭಿಪ್ರಾಯ ಸಂಗ್ರಹಿಸುತ್ತೇನೆ. ಎಲ್ಲಾ ವರ್ಗದ ಜನರನ್ನು ಗಣನೆಗೆ ತೆಗೆದುಕೊಂಡು ಚರ್ಚೆ ಮಾಡುತ್ತೇನೆ. ಜಯಂತಿ ಆಚರಣೆ ಸಂದರ್ಭ ಚರ್ಚಿಸುವುದಕ್ಕಿಂದ 6 ತಿಂಗಳು ಮುಂಚೆ ಚರ್ಚೆ ಆಗಬೇಕು. ಟಿಪ್ಪು ಜಯಂತಿ ನೆಪದಲ್ಲಿ ಎರಡು ರಾಷ್ಟ್ರೀಯ ಪಕ್ಷಗಳು ರಾಜಕೀಯ ಮಾಡುತ್ತಿದೆ. ಜಿಲ್ಲೆಯ ಸಮಸ್ಯೆಗಳ ಚರ್ಚೆಗೆ ಜಸ್ಟ್ ಆಸ್ಕಿಂಗ್ ವೇದಿಕೆಯಾಗುತ್ತೆ ಎಂದು ತಿಳಿಸಿದ್ದರು.

  • ಬಿಎಸ್‍ಪಿ ಬಳಿಕ ಟಿಆರ್‌ಎಸ್‌  ಪಕ್ಷದೊಂದಿಗೆ ಜೆಡಿಎಸ್ ಮೈತ್ರಿ – ತೃತೀಯ ರಂಗ ಸ್ಥಾಪನೆಗೆ ಮುನ್ನುಡಿ

    ಬಿಎಸ್‍ಪಿ ಬಳಿಕ ಟಿಆರ್‌ಎಸ್‌ ಪಕ್ಷದೊಂದಿಗೆ ಜೆಡಿಎಸ್ ಮೈತ್ರಿ – ತೃತೀಯ ರಂಗ ಸ್ಥಾಪನೆಗೆ ಮುನ್ನುಡಿ

    ಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ ಶತಾಯ ಗತಾಯ ಗೆಲುವು ಪಡೆಯಲು ಮಯಾವತಿಯವರ ಬಿಎಸ್‍ಪಿ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದ ಜೆಡಿಎಸ್, ಪ್ರಾದೇಶಿಕ ಪಕ್ಷಗಳೊಂದಿಗೆ ಮೈತ್ರಿ ರಾಜಕಾರಣವನ್ನು ಮುಂದುವರೆಸಿದ್ದು ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್‌) ಪಕ್ಷದೊಂದಿಗೆ ಸೇರಿ ತೃತೀಯ ರಂಗ ರಚಿಸಲು ಹೊರಟಿದೆ.

    ರಾಷ್ಟ್ರ ಮಟ್ಟದಲ್ಲಿ ತೃತಿಯ ರಂಗ ಸ್ಥಾಪನೆ ಸಂಬಂಧ ತೆಲಂಗಾಣ ಮುಖ್ಯಮಂತ್ರಿ ಟಿಆರ್ ಎಸ್ ಪಕ್ಷದ ನಾಯಕ ಕೆಸಿ ಚಂದ್ರಶೇಖರ್ ರಾವ್(ಕೆಸಿಆರ್) ಇಂದು ಮಾಜಿ ಪ್ರಧಾನಿ ದೇವೇಗೌಡರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ನಗರದ ಪದ್ಮನಾಭ ನಗರದ ಎಚ್‍ಡಿಡಿ ನಿವಾಸಕ್ಕೆ ಆಗಮಿಸಿದ ಚಂದ್ರಶೇಖರ್ ರಾವ್ ಅವರು ಸುಮಾರು 2 ಗಂಟೆಕಾಲ ದೇವೇಗೌಡರ ಜೊತೆ ಮಾತುಕತೆ ನಡೆಸಿದರು. ಈ ವೇಳೆ ಮಾಜಿ ಸಿಎಂ ಕುಮಾರಸ್ವಾಮಿ, ನಟ ಪ್ರಕಾಶ್ ರೈ, ಟಿಆರ್ ಎಸ್ ಪಕ್ಷದ ಸಂಸದರು, ಶಾಸಕರು ಚರ್ಚೆಯಲ್ಲಿ ಭಾಗಿದ್ದರು.

    ಎಚ್‍ಡಿಡಿ ನಿವಾಸದಲ್ಲೇ ಮಧ್ಯಾಹ್ನದ ಭೋಜನ ಸೇವಿಸಿದ ಕೆಸಿಆರ್ ಕರ್ನಾಟಕ ವಿಧಾನಸಭಾ ಚನಾವಣೆಯಲ್ಲಿ ಜೆಡಿಎಸ್ ಪಕ್ಷವನ್ನು ಬೆಂಬಲಿಸುವಂತೆ ಕರ್ನಾಟಕದಲ್ಲಿರುವ ಎಲ್ಲ ತೆಲುಗು ಭಾಷಿಕ ಮತದಾರರಿಗೆ ಮನವಿ ಮಾಡುವುದಾಗಿ ಘೋಷಿಸಿದರು. ಅಲ್ಲದೇ ಕುಮಾರಸ್ವಾಮಿ ಅವರು ಎಲ್ಲೆಲ್ಲಿ ನನ್ನ ಅಗತ್ಯ ಇದೆ ಎಂದು ಕರೆಯುತ್ತಾರೋ ಅಲ್ಲಿಗೆ ನಾನು ಪ್ರಚಾರಕ್ಕೆ ಬರುತ್ತೇನೆ ಎಂದರು.

    ಜಂಟಿಯಾಗಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಕೆಸಿಆರ್, ರಾಜ್ಯ ಜೆಡಿಎಸ್ ಬೆಂಬಲದೊಂದಿಗೆ ರಾಷ್ಟ್ರ ಮಟ್ಟದಲ್ಲಿ ತೃತಿಯ ರಂಗ ಸ್ಥಾಪನೆ ವಿಷಯವನ್ನು ಪ್ರಸ್ತಾಪಿಸಿದರು. ಈಗಾಗಲೇ ಪಶ್ಚಿಮ ಬಂಗಾಳ, ಜಾರ್ಖಂಡ್ ರಾಜ್ಯಗಳ ಪ್ರಾದೇಶಿಕ ಪಕ್ಷಗಳ ಜೊತೆ ಚರ್ಚೆ ನಡೆಸಲಾಗಿದೆ. ದೇಶದ ಪ್ರಮುಖ ನದಿಗಳಲ್ಲಿ ಅಗತ್ಯಕ್ಕಿಂತ ಹೆಚ್ಚು ನೀರಿದೆ. ಆದರೆ ರಾಜ್ಯಗಳ ನಡುವೆ ನಿರಂತರವಾಗಿ ನೀರಿಗಾಗಿ ಜಗಳ ನಡೆಯುತ್ತಿದೆ. ಈ ಜಲ ಯುದ್ಧಕ್ಕೆ ಕಾರಣ ಯಾರು? 65 ವರ್ಷ ಕಳೆದರೂ ಸಮಸ್ಯೆ ಪರಿಹಾರ ಸಿಕ್ಕಿಲ್ಲ. ರೈತರಿಗೆ ನೀರು ಸಿಗುತ್ತಿಲ್ಲ. ಕೇಂದ್ರ ಬಿಜೆಪಿ ಸರಕಾರ ಮತ್ತು ಕಾಂಗ್ರೆಸ್ ಟ್ರ್ಯಾಪ್ ನಿಂದ ಪ್ರಾದೇಶಿಕ ಪಕ್ಷಗಳನ್ನು ಹೊರತರಬೇಕಿದೆ. ಇದಕ್ಕಾಗಿ ನೂತನ ತೃತೀಯ ರಂಗ ಸ್ಥಾಪನೆಗೆ ಮುಂದಾಗಿದ್ದೇವೆ ಎಂದರು.

    ಜನಪರ, ಜನ ಸಾಮಾನ್ಯರ, ರೈತರ ಪರವಾದ ತೃತೀಯ ರಂಗವನ್ನು ರಚಿಸುವುದು ನಮ್ಮ ಉದ್ದೇಶ. ದೇಶದಲ್ಲಿ ಸಾಕಷ್ಟು ನೀರು ಇದೆ. ಕರ್ನಾಟಕ, ತಮಿಳುನಾಡು ಸೇರಿದಂತೆ ಎಲ್ಲ ರಾಜ್ಯಗಳಿಗೂ ಸಮರ್ಪಕ ನೀರು ಸಿಗುವಂತೆ ಮಾಡುತ್ತೇವೆ. ಎರಡೂ ರಾಷ್ಟ್ರೀಯ ಪಕ್ಷಗಳಿಂದ ಭಾರತ, ಭಾರತ ಮಾತೆ ಮತ್ತು ಭಾರತೀಯರನ್ನು ರಕ್ಷಿಸಬೇಕಿದೆ. ಈ ನಿಟ್ಟಿನಲ್ಲಿ ಯಾವುದೇ ಪಕ್ಷ ನಮ್ಮ ತೃತೀಯ ರಂಗಕ್ಕೆ ಸೇರಿದರೂ ಆ ಪಕ್ಷಕ್ಕೆ ಸ್ವಾಗತ ಎಂದರು.

    ಈ ವೇಳೆ ಮಾತನಾಡಿದ ಎಚ್‍ಡಿಡಿ ತೃತೀಯ ರಂಗ ಎನ್ನುವುದಕ್ಕಿಂತ ಇದು ರಾಷ್ಟ್ರೀಯ ಪಕ್ಷಗಳ ವಿರುದ್ಧ ಹೋರಾಟ. ಕೆಸಿಆರ್ ತೆಲಂಗಾಣ ಪ್ರತ್ಯೇಕ ರಾಜ್ಯ ನಂತರ ಇದು ಮೊದಲ ಭೇಟಿಯಾಗಿದ್ದು, ರಾಜ್ಯದ ಸಿಎಂ ಆಗಿ ಕೆಸಿಆರ್ ಉತ್ತಮ ಕೆಲಸ ಮಾಡುತ್ತಿದ್ದಾರೆ. ಇಬ್ಬರು ನೀರಾವರಿ ಹಾಗೂ ರೈತರ ಬಗ್ಗೆ ಚರ್ಚೆ ನಡೆಸಿದ್ದೇವೆ ಎಂದು ಹೇಳಿದರು.

    ವಿಶೇಷವಾಗಿ ಈ ಭೇಟಿಯಲ್ಲಿ ಭಾಗವಹಿಸಿದ್ದ ಬಹು ಭಾಷಾ ನಟ ಪ್ರಕಾಶ್ ರೈ ಮಾತನಾಡಿ, ನಾವು ಸಮಾನ ಮನಸ್ಕರು ಒಂದು ವೇದಿಕೆಯಾಡಿ ಬರುವ ಪ್ರಯತ್ನ ಮಾಡುತ್ತಿದ್ದೇವೆ. ನಮ್ಮಲ್ಲಿ ಸಾಕಷ್ಟು ಸಂಪನ್ಮೂಲವಿದ್ದರೂ ರಾಷ್ಟ್ರಾಭಿವೃದ್ದಿ ಸಾಧ್ಯವಾಗಿಲ್ಲ. ಹಾಗಾಗಿ ಯಾರನ್ನೂ ಮುಕ್ತ ಮಾಡುವ ವಿಷಯ ನಮ್ಮದಲ್ಲ. ನಾನು ಯಾವೊಂದು ರಾಜಕೀಯ ಪಕ್ಷವನ್ನೂ ಬೆಂಬಲಿಸುತ್ತಿಲ್ಲ. ಹಾಗಾಗಿಯೇ ಅಭಿವೃದ್ಧಿ ಪರವಾದ ಕೆಸಿಆರ್ ಪ್ರಯತ್ನಕ್ಕೆ ನಾನು ಕೈ ಜೋಡಿಸಿದ್ದೇನೆ ಎಂದರು.

  • ಹಿಂದೂ ಭಯೋತ್ಪಾದನೆ ಕುರಿತ ನಟ ಕಮಲ ಹಾಸನ್ ಹೇಳಿಕೆಗೆ ಪ್ರಕಾಶ್ ರೈ ಬೆಂಬಲ

    ಹಿಂದೂ ಭಯೋತ್ಪಾದನೆ ಕುರಿತ ನಟ ಕಮಲ ಹಾಸನ್ ಹೇಳಿಕೆಗೆ ಪ್ರಕಾಶ್ ರೈ ಬೆಂಬಲ

    ನವದೆಹಲಿ: ದೇಶದಲ್ಲಿ ಹಿಂದೂ ಭಯೋತ್ಪಾದನೆ ಇರುವುದನ್ನು ಬಲಪಂಥೀಯರು ತಳ್ಳಿಹಾಕುವುದಕ್ಕೆ ಸಾಧ್ಯವಿಲ್ಲ ಎಂದು ನಟ ಕಮಲ್ ಹಾಸನ್ ಅವರು ಹೇಳಿಕೆ ನೀಡಿದ ಮರುದಿನವೇ ನಟ ಪ್ರಕಾಶ್ ರೈ ಕಮಲ್ ಹಾಸನ್ ಹೇಳಿಕೆಗೆ ಬೆಂಬಲ ವ್ಯಕ್ತಪಡಿಸುವ ರೀತಿಯಲ್ಲಿ ಭಯೋತ್ಪಾದನೆ ಬಗ್ಗೆ ಟ್ವೀಟ್ ಮಾಡಿದ್ದಾರೆ.

    ಧರ್ಮ, ನೈತಿಕತೆ, ಸಂಸ್ಕೃತಿ ಹೆಸರಲ್ಲಿ ನನ್ನ ದೇಶದ ಬೀದಿಗಳಲ್ಲಿ ಯುವ ಜೋಡಿಗಳ ಮೇಲೆ ಹಲ್ಲೆ ಮಾಡುವುದು ಭಯೋತ್ಪಾದನೆಯಲ್ಲದೆ ಮತ್ತೇನು? ಗೋಹತ್ಯೆ ಬಗ್ಗೆ ಸಣ್ಣ ಅನುಮಾನ ಬಂದ್ರೂ ಕಾನೂನು ಕೈಗೆತ್ತಿಕೊಂಡು ಜನರನ್ನ ಹತ್ಯೆ ಮಾಡೋದು ಭಯೋತ್ಪಾದನೆ ಅಲ್ಲದಿದ್ರೆ, ಪ್ರತಿರೋಧಿ ಧ್ವನಿಗಳನ್ನು ಹತ್ತಿಕ್ಕಲು ನಿಂದನೆ, ಬೆದರಿಕೆ ಮೂಲಕ ಟ್ರೋಲ್ ಮಾಡೋದು ಭಯೋತ್ಪಾದನೆ ಅಲ್ಲದಿದ್ರೆ…. ಹಾಗಾದ್ರೆ ಭಯೋತ್ಪಾದನೆ ಎಂದರೆ ಏನು? ಎಂದು ಪ್ರಶ್ನಿಸಿ ಟ್ವೀಟ್ ಮಾಡಿದ್ದಾರೆ.

    ಕೆಲ ದಿನಗಳ ಹಿಂದೆ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಸಂದರ್ಭದಲ್ಲೂ ಪ್ರಕಾಶ್ ರೈ, ಪ್ರಧಾನಿ ಮೋದಿಯವರ ವಿರುದ್ಧ ಹೇಳಿಕೆಯನ್ನು ನೀಡಿದ್ದರು. ಗೌರಿ ಲಂಕೇಶ್ ಅವರ ಹತ್ಯೆಯನ್ನು ಸಂಭ್ರಮಿಸಿ ಟ್ರೊಲ್ ಮಾಡಿದವರನ್ನು ಮೋದಿ ಫಾಲೋ ಮಾಡುತ್ತಿದ್ದಾರೆ. ನನಗಿಂತ ಅವರು ದೊಡ್ಡ ನಟ ಎಂದು ಹೇಳಿ ಭಾರೀ ವಿವಾದಕ್ಕೆ ಕಾರಣರಾಗಿದ್ದರು. ಈ ಹೇಳಿಕೆಗೆ ದೇಶಾದ್ಯಂತ ಹಲವರು ವಿರೋಧವನ್ನು ವ್ಯಕ್ತಪಡಿಸಿದ್ದರು. ಅಲ್ಲದೇ ನಟ ಪ್ರಕಾಶ್ ಅವರ ವಿರುದ್ಧ ವಕೀಲರೊಬ್ಬರು ಲಕ್ನೋ ಕೋರ್ಟ್‍ನಲ್ಲಿ ಪ್ರಕರಣವನ್ನು ದಾಖಲಿಸಿದ್ದರು.

    ನಂತರ ಕಾರಂತರ ಪ್ರಶಸ್ತಿ ಸ್ವೀಕರಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಕಾಶ್ ರಾಜ್, ನನ್ನ ಮಾತಿನಿಂದ ನೋವಾಗಿದ್ದಾರೆ ಕ್ಷಮಿಸಿ. ನಿಮ್ಮಲ್ಲಿ ಆತಂಕವನ್ನು ಸೃಷ್ಟಿದ್ದಕ್ಕೆ ಕ್ಷಮೆ ಇರಲಿ ಎಂದು ಹೇಳಿದ್ದರು.

    ತಮಿಳು ನಟ ಕಮಲ್ ಹಾಸನ್ ಆನಂದ ವಿಕಟನ್ ಎಂಬ ವಾರ ಪತ್ರಿಕೆಗೆ ಅಂಕಣ ಬರೆದಿದ್ದರು. ಈ ಲೇಖನದಲ್ಲಿ ಹಿಂದೂ ಭಯೋತ್ಪಾದನೆ ಇರುವುದನ್ನು ಬಲಪಂಥೀಯರು ತಳ್ಳಿಹಾಕುವುದಕ್ಕೆ ಸಾಧ್ಯವಿಲ್ಲ ಎಂದು ಯಾವುದೇ ಸಂಘಟನೆ ಹೆಸರನ್ನು ಪ್ರಸ್ತಾಪಿಸದೆ ತಮ್ಮ ಅಭಿಪ್ರಾಯವನ್ನು ವ್ಯಕ್ತ ಪಡಿಸಿದ್ದರು. ನಟ ಕಮಲ್ ರ ಹೇಳಿಕೆಗೆ ಬಲಪಂಥೀಯ ಸಂಘಟನೆಗಳಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಅಲ್ಲದೇ ಅವರ ವಿರುದ್ಧ ಕೋರ್ಟ್‍ನಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಲಾಗಿದೆ.

  • ಪ್ರಕಾಶ್ ರೈಗೆ ಪ್ರಶಸ್ತಿ ನೀಡದಂತೆ ಹಿಂದೂ ಸಂಘಟನೆ ಪ್ರತಿಭಟನೆ- ರೈ ಪ್ರತಿಕ್ರಿಯಿಸಿದ್ದು ಹೀಗೆ

    ಪ್ರಕಾಶ್ ರೈಗೆ ಪ್ರಶಸ್ತಿ ನೀಡದಂತೆ ಹಿಂದೂ ಸಂಘಟನೆ ಪ್ರತಿಭಟನೆ- ರೈ ಪ್ರತಿಕ್ರಿಯಿಸಿದ್ದು ಹೀಗೆ

    ಮಂಗಳೂರು, ಉಡುಪಿ: ಕಳೆದ 12 ವರ್ಷಗಳಿಂದ ವಿವಾದವೇ ಇಲ್ಲದೆ, ತಣ್ಣಗೆ ನಡೆಯುತ್ತಿದ್ದ ಕೋಟ ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಈ ಬಾರಿ ಭಾರೀ ವಿವಾದಕ್ಕೆ ಕಾರಣವಾಗಿದೆ.

    ಬಿಜೆಪಿಯ ಭಾರೀ ವಿರೋಧದ ನಡುವೆ ಡಾ. ಕೋಟ ಶಿವರಾಮ ಕಾರಂತರ ಹುಟ್ಟೂರ ಪ್ರಶಸ್ತಿ ಸ್ವೀಕರಿಸಲು ಬಹುಭಾಷಾ ನಟ ಪ್ರಕಾಶ್ ರೈ ಬಂದಿದ್ದಾರೆ. ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅವರನ್ನು ಡಿವೈಎಫ್‍ಐ ಕಾರ್ಯಕರ್ತರು ಸ್ವಾಗತಿಸಿದ್ರು.

    ಇದೇ ವೇಳೆ ಮಾತನಾಡಿದ ಪ್ರಕಾಶ್ ರೈ, ಪ್ರತಿಭಟಿಸುವುದು ಅವರವರ ಹಕ್ಕು. ಪ್ರತಿಭಟಿಸಲಿ ಬೇಡ ಅನ್ನುವುದಿಲ್ಲ. ಕಾರಂತ ನನಗೆ ಅಜ್ಜ. ತುಂಬಾ ಆತ್ಮೀಯರಾಗಿದ್ದರು. ಅವರ ಹೆಸರಲ್ಲಿ ಪ್ರಶಸ್ತಿ ಸ್ವೀಕರಿಸುವುದು ಹೆಮ್ಮೆಯಿದೆ ಅಂತ ಹೇಳಿದರು. ಬಳಿಕ ಉಡುಪಿ ಮೂಲಕ ಕುಂದಾಪುರಕ್ಕೆ ತೆರಳಿದ್ರು. ಹಲವರ ಆಕ್ಷೇಪದ ನಡುವೆಯೂ ಇಂದು ಕುಂದಾಪುರದ ಕೋಟದಲ್ಲಿ ಪ್ರಕಾಶ ರೈಗೆ ಕಾರಂತ ಪ್ರಶಸ್ತಿ ಪ್ರದಾನ ನಡೆಯಲಿದೆ.

    ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕೋಟ ಶಿವರಾಮ ಕಾರಂತರ ಹುಟ್ಟೂರ ಪ್ರಶಸ್ತಿಯನ್ನು ಪ್ರಕಾಶ್ ರೈಗೆ ನೀಡಬಾರದು ಎಂಬ ಕೂಗು ಸಾಮಾಜಿಕ ಜಾಲತಾಣದಲ್ಲಿ ಎದ್ದ ಬೆನ್ನಲ್ಲೇ ಬಿಜೆಪಿಯೂ ಅಸಮಾಧಾನ ವ್ಯಕ್ತಪಡಿಸಿದೆ. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕೋಟತಟ್ಟು ಗ್ರಾಮ ಪಂಚಾಯತ್, ಶಿವರಾಮ ಕಾರಂತ ಟ್ರಸ್ಟ್, ಶಿವರಾಮಕಾರಂತ ಹುಟ್ಟೂರ ಪ್ರತಿಷ್ಠಾನ ಜಂಟಿಯಾಗಿ ಕಳೆದ ಹದಿಮೂರು ವರ್ಷಗಳಿಂದ ಈ ಪ್ರಶಸ್ತಿಯನ್ನು ನೀಡುತ್ತಿದೆ. ಖ್ಯಾತ ನಟ ಪ್ರಕಾಶ್ ರೈಗೆ ಈ ಬಾರಿಯ ಸನ್ಮಾನವನ್ನು ಮಾಡಬೇಕು ಎಂದು ಪ್ರತಿಷ್ಠಾನ ಮೂರು ತಿಂಗಳ ಹಿಂದೆ ನಿರ್ಧಾರ ಮಾಡಿತ್ತು. ಆಯ್ಕೆ ಸಮಿತಿ, ಪಂಚಾಯತ್ ಮತ್ತು ಪ್ರತಿಷ್ಠಾನ ಹತ್ತು ದಿನಗಳ ಕಾರ್ಯಕ್ರಮಕ್ಕೆ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿತ್ತು.

    ಇದನ್ನೂ ಓದಿ: `ಕಾರಂತ ಪ್ರಶಸ್ತಿ’ ಪ್ರಕಾಶ್ ರೈ ಸಾಧನೆಗೆ ನೀಡುತ್ತಿರುವುದು, ರಾಜಕೀಯ ಬೆರೆಸಬೇಡಿ- ಪ್ರಮೋದ್

    ಇತ್ತೀಚೆಗೆ ನಡೆದ ಬೆಳವಣಿಗೆಯಲ್ಲಿ ಪ್ರಕಾಶ್ ರೈ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ, ಮಾಧ್ಯಮಗಳಲ್ಲಿ ಬಿಸಿ ಬಿಸಿ ಚರ್ಚೆ ನಡೆಯುತ್ತಿದೆ. ರೈ ಗೆ ಪ್ರಶಸ್ತಿ ನೀಡಬಾರದು ಎಂಬ ದೊಡ್ಡ ಕೂಗು ಎದ್ದಿದೆ. ಪ್ರಕಾಶ್ ರೈ ಕಾವೇರಿ ನದಿ ವಿಚಾರದಲ್ಲಿ ಕರ್ನಾಟಕಕ್ಕೆ ವಿರುದ್ಧವೆಂಬಂತಹ ಹೇಳಿಕೆಗಳನ್ನ ನೀಡಿದ್ದರು. ಗೌರಿ ಲಂಕೇಶ್ ಹತ್ಯೆ ಸಂದರ್ಭ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮಾತನಾಡಿದ್ದರು. ಡಿವೈಎಫ್‍ಐ ರಾಜ್ಯ ಸಮ್ಮೇಳನದಲ್ಲಿ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಒಳ್ಳೆ ನಟ ಅಂತ ಲೇವಡಿ ಮಾಡಿದ್ದರು. ಈ ಎಲ್ಲಾ ವಿಚಾರವನ್ನಿಟ್ಟು ಸಾಮಾಜಿಕ ಜಾಲತಾಣದಲ್ಲಿ ರೈಗೆ ಪ್ರಶಸ್ತಿ ನೀಡೋದಕ್ಕೆ ಭಾರೀ ವಿರೋಧ ವ್ಯಕ್ತವಾಗಿದೆ.

    ಡಾ. ಶಿವರಾಮ ಕಾರಂತರ ಹೆಸರಿನಲ್ಲಿ ಕೊಡಲಾಗುವ ಪ್ರಶಸ್ತಿಯನ್ನು ಸ್ವೀಕರಿಸಲು ಪ್ರಕಾಶ್ ರೈ ಅವರಿಗೆ ನೈತಿಕತೆ ಇಲ್ಲ ಎಂಬ ಬರಹಗಳು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಆಗಿ ಶೇರ್ ಆಗ್ತಾ ಇದೆ. ಆದ್ರೆ ಪ್ರಶಸ್ತಿ ನೀಡುವ ಸಂಸ್ಥೆ ನಮ್ಮ ಸಮಿತಿಯಲ್ಲಿ ಯಾವುದೇ ಗೊಂದಲವಿಲ್ಲ. ನಟ ಪ್ರಕಾಶ್ ರೈ ಯವರೇ ಕಾರಂತರ ಹೆಸರಿನ ಗೌರವಕ್ಕೆ ಪಾತ್ರರಾಗಲಿದ್ದಾರೆ ಎಂದು ಕೋಟತಟ್ಟು ಗ್ರಾ.ಪಂ. ಅಧ್ಯಕ್ಷ ಪ್ರಮೋದ್ ಹಂದೆ ಹೇಳಿದ್ದಾರೆ.

    ಸಂಜೆ ನಾಲ್ಕು ಗಂಟೆಗೆ ಕುಂದಾಪುರ ತಾಲೂಕಿನ ಕೋಟ ಕಾರಂತ ಥೀಂ ಪಾರ್ಕಿನಲ್ಲಿ ತಂಬೆಲರು ಎಂಬ 10 ದಿನದ ಕಾರ್ಯಕ್ರಮದ ಸಮಾರೋಪ ನಡೆಯಲಿದೆ. ಜೈ ಭಾರ್ಗವ ಸಂಘಟನೆ ಕಪ್ಪು ಬಾವುಟ ತೋರಿಸಿ ಪ್ರತಿಭಟಿಸುವ ಸೂಚನೆ ನೀಡಿದ್ದಾರೆ. ಯೋಗಿ ಆದಿತ್ಯನಾಥ್ ಪಂಥದ ಜೋಗಿ ಮಠದ ಭಕ್ತರು ಕಪ್ಪು ಅಂಗಿ ಧರಿಸಿ ಕಾರ್ಯಕ್ರಮದಲ್ಲೇ ಕುಳಿತು ವಿರೋಧ ವ್ಯಕ್ತಪಡಿಸುವುದಾಗಿ ಹೇಳಿದ್ದಾರೆ. ಕಾರ್ಯಕ್ರಮಕ್ಕೂ ಮುನ್ನ ಪ್ರತಿಭಟನೆ ಮಾಡೋದಾಗಿ ಬಿಜೆಪಿ ಕೂಡ ಎಚ್ಚರಿಕೆ ನೀಡಿದೆ.