ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ ‘ಕುರುಕ್ಷೇತ್ರ’ ಬಿಡುಗಡೆಯ ದಿನಾಂಕ ಫಿಕ್ಸ್ ಆಗಿದ್ದು, ಆಗಸ್ಟ್ 9ರ ವರಮಹಾಲಕ್ಷ್ಮಿ ಹಬ್ಬದ ದಿನದಂದು ತೆರೆಗೆ ಅಪ್ಪಳಿಸಲಿದೆ.
ಸಿನಿಮಾ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ನಿರ್ಮಾಪಕ ಮುನಿರತ್ನ ಅವರು ಚಿತ್ರದ ಬಿಡುಗಡೆ ಬಗ್ಗೆ ಮಾಹಿತಿ ನೀಡಿದರು. ಆಗಸ್ಟ್ 9ಕ್ಕೆ ಕುರುಕ್ಷೇತ್ರ ಸಿನಿಮಾ ಬಿಡುಗಡೆ ಆಗಲಿದ್ದು, ಜುಲೈ ಮೊದಲ ವಾರ ಆಡಿಯೋ ರಿಲೀಸ್ ಮಾಡಲು ಚಿಂತನೆ ನಡೆಸಲಾಗಿದೆ ಎಂದು ತಿಳಿಸಿದರು.
ಚಿತ್ರದ ಟೈಟಲ್ ಲಾಂಚ್ ವೇಳೆ ಸುದ್ದಿಗೋಷ್ಠಿ ನಡೆಸಿದ್ದ ಚಿತ್ರತಂಡ ಬರೋಬ್ಬರಿ ಒಂದೂವರೆ ವರ್ಷಗಳ ಮತ್ತೆ ಮಾಧ್ಯಮಗಳ ಮುಂದೇ ಆಗಮಿಸಿತ್ತು. ಆದರೆ ಈ ಸಂದರ್ಭದಲ್ಲಿ ನಟ ದರ್ಶನ್ ಹಾಗೂ ನಟ ನಿಖಿಲ್ ಗೈರಾಗಿದ್ದರು. ಸುದ್ದಿಗೋಷ್ಠಿಯಲ್ಲಿ ಚಿತ್ರದ ನಿರ್ಮಾಪಕ ಮುನಿರತ್ನ, ನಿರ್ದೇಶಕ ನಾಗಣ್ಣ, ಸಂಕಲನಕಾರ ಜೋನಿಹರ್ಷ ಅವರು ಹಾಜರಿದ್ದರು. ಇದೇ ಸಂದರ್ಭದಲ್ಲಿ ಇಬ್ಬರು ನಟರ ಗೈರ ಹಾಜರಿಗೆ ಸ್ಪಷ್ಟನೆ ನೀಡಿದ ನಿರ್ಮಾಪಕರು ಚಿತ್ರ ಬಿಡುಗಡೆ ದಿನಾಂಕ ಮಾತ್ರ ಇಂದು ಘೋಷಣೆ ಮಾಡಲಾಗುತ್ತದೆ. ಪ್ರಚಾರದ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೆ ಎಂದರು.
ನಟ ಅಂಬರೀಶ್ ಅವರು ಅನಾರೋಗ್ಯದ ನಡುವೆಯೂ ಸುಮಾರು 20 ದಿನಗಳ ಕಾಲ ಶೂಟಿಂಗ್ ನಲ್ಲಿ ಭಾಗವಹಿಸಿ ಭೀಷ್ಮನ ಪಾತ್ರ ಮಾಡಿದ್ದಾರೆ. ಅಂಬರೀಶ್ ಪಾತ್ರಕ್ಕೆ ಅವರೇ ಡಬ್ ಮಾಡಿದ್ದಾರೆ. ಆದರೆ ಅವರಗೆ ಯಾವುದೇ ಸಂಭಾವನೆ ಕೊಟ್ಟಿಲ್ಲ ಎಂದು ತಿಳಿಸಿದರು.
ಟೀಸರ್ ನಿಂದಲೇ ಸಾಕಷ್ಟು ನಿರೀಕ್ಷೆ ಮೂಡಿಸಿದ್ದ ಕುರುಕ್ಷೇತ್ರ ಸಿನಿಮಾ ಬಗ್ಗೆ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಇದ್ದು, ಚಿತ್ರಕ್ಕೆ ಹರಿಕೃಷ್ಣ ಸಂಗೀತ ನೀಡಿದ್ದಾರೆ. ಬಹು ತಾರಾಗಣದ ಕುರುಕ್ಷೇತ್ರ ಸಿನಿಮಾ ನಾಲ್ಕು ಭಾಷೆಗಳಲ್ಲಿ ಬಿಡುಗಡೆ ಆಗಲಿದೆ.
ಮಂಡ್ಯ: ಲೋಕಸಭಾ ಚುನಾವಣೆ ಮತದಾನಕ್ಕೆ ಕೆಲ ದಿನಗಳಷ್ಟೇ ಬಾಕಿ ಇದ್ದು, ಕ್ಷೇತ್ರದ ಮೈತ್ರಿ ಅಭ್ಯರ್ಥಿ, ಪುತ್ರ ನಿಖಿಲ್ ಪರ ಪ್ರಚಾರ ಕಾರ್ಯವನ್ನು ತೀವ್ರಗೊಳಿಸಿರುವ ಸಿಎಂ ಎಚ್‍ಡಿ ಕುಮಾರಸ್ವಾಮಿ ಅವರು ನಟ ಯಶ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಜಿಲ್ಲೆಯ ಕೆ.ಆರ್ ಪೇಟೆ ಸಮಾವೇಶದಲ್ಲಿ ಮಾತನಾಡಿದ ಸಿಎಂ ಎಚ್‍ಡಿಕೆ, ರೈತರು ಆತ್ಮಹತ್ಯೆ ಮಾಡಿಕೊಂಡು ಮಂಡ್ಯದ ತಾಯಂದಿರು ಕಣ್ಣೀರುಡುತ್ತಿದ್ದ ವೇಳೆ ಬಾರದ ಇವರು ಇಂದು ಬಂದಿದ್ದಾರೆ. ಈಗ ಬಂದು ಮಂಡ್ಯ ಸ್ವಾಭಿಮಾನ ಎಂದು ಸಿನಿಮಾದವರು ಮಾತನಾಡುತ್ತಾರೆ. ಅಂದು ಮಹಿಳೆಯರು ಕಣ್ಣೀರು ಹಾಕುತ್ತಿದ್ದ ವೇಳೆ ಯಾರು ಬಂದಿದ್ದರು ಎಂದು ಪ್ರಶ್ನೆ ಮಾಡಿದರು.
ರೈತರು ಆತ್ಮಹತ್ಯೆ ಮಾಡಿಕೊಳ್ಳುವ ವೇಳೆ ಅವರ ಸ್ವಾಭಿಮಾನ ಉಳಿಸಲು ಏಕೆ ಬಂದಿರಲಿಲ್ಲ? ನಾನು ಕಲಾವಿದರು ಎಂದು ಗೌರವ ಕೊಟ್ಟು ಮಾತನಾಡಿದ್ದೇನೆ. ಯಾವನೋ ಯಶ್ ನನ್ನ ಪಕ್ಷವನ್ನು ರಾತ್ರಿ ವೇಳೆ ಹಳ್ಳಿ ಕಡೆ ಬಂದು ಕಳ್ಳರ ಪಕ್ಷ ಎಂದು ಕರೆಯುತ್ತಾರೆ. ಆದರೆ ಅವರಿಗೆ ನನ್ನ ಕಾರ್ಯಕರ್ತರು ಏಕೆ ಸುಮ್ಮನೆ ಇದ್ದಾರೆ ಎಂದು ಇನ್ನು ಗೊತ್ತಿಲ್ಲಾ. ನನ್ನ ಹೆಸರಿಗೆ ಕಳಂಕ ಬರುತ್ತದೆ, ತಪ್ಪು ಸಂದೇಶ ರವಾನೆ ಆಗುತ್ತೆ ಎಂದು ಸುಮ್ಮನಿದ್ದಾರೆ. ನಾನು ನಿರ್ಮಾಪಕ ಆಗಿದ್ದವನು. ನನ್ನಂಥ ನಿರ್ಮಾಪಕ ಇಲ್ಲದಿದ್ದರೆ ಇವರು ಎಲ್ಲಿ ಬದುಕುತ್ತಾರೆ. ಸಿನಿಮಾದಲ್ಲಿ ನೋಡುವುದು ನಿಜ ಎಂದು ತಿಳಿದುಕೊಳ್ಳಬೇಡಿ. ನಿಮ್ಮ ಮನೆಯಲ್ಲಿ ನಡೆಯುತ್ತಿರುವುದು ನಿಜವಾದ ಜೀವನ ಎಂದು ತೀವ್ರ ವಾಗ್ದಾಳಿ ನಡೆಸಿದರು.
ಇದಕ್ಕೂ ಮುನ್ನ ಭಾವುಕರಾಗಿ ಮಾತನಾಡಿದ ಸಿಎಂ, ನಾನು ಕಣ್ಣೀರು ಹಾಕೋದನ್ನು ನಿಲ್ಲಿಸಿದ್ದೆ. ನಮ್ಮ ನಾಯಕರಾದ ವಿಶ್ವನಾಥ್ ಅವರು ಯಾರು ನಿನ್ನ ಕಷ್ಟ, ನಿನ್ನ ಆರೋಗ್ಯದ ಬಗ್ಗೆ ಯೋಚಿಸುತ್ತಿಲ್ಲ. ಅದು ನೋವಾಗುತ್ತೆ ಎಂದು ಹೇಳಿದಾಗ ಅವರ ಮಾತು ಕೇಳಿ ಕಣ್ಣಲ್ಲಿ ನೀರು ಬಂತು ಎಂದು ಭಾವುಕರಾದರು. ಅಲ್ಲದೇ ನಾನು ಮುಖ್ಯಮಂತ್ರಿ ಆದ ದಿನದಿಂದ ಒಂದು ದಿನ ನೆಮ್ಮದಿಯಾಗಿ ಆಡಳಿತ ಮಾಡಲು ಬಿಟ್ಟಿಲ್ಲ. ನಾನು 120 ಸೀಟ್ ಗೆದ್ದಿದ್ದರೆ ನೆಮ್ಮದಿಯಾಗಿ ಆಡಳಿತ ನಡೆಸುತ್ತಿದೆ ಎಂದರು.
ಅಂಬಿ ಶವ ರಾಜಕೀಯ: ಅಂದು ನಟ ರಾಜಕುಮಾರ್ ನಿಧನರಾದಾಗ ನಮ್ಮ ಗಮನಕ್ಕೆ ತರದೆ ಮಾಧ್ಯಮಕ್ಕೆ ಘೋಷಣೆ ಮಾಡಿದ್ದರು. ಇದರಿಂದ ಯಾವುದೇ ಮುಂಜಾಗ್ರತೆ ತೆಗೆದುಕೊಳ್ಳಲಾಗಲಿಲ್ಲ. ಪರಿಣಾಮ ಅಂತ್ಯಕ್ರಿಯೆಯ ವೇಳೆ ಹಲವು ಗೊಂದಲವಾಯಿತು. ಅಂಬರೀಶ್ ಅವರನ್ನು ಮೊದಲು ಎಂಪಿ ಮಾಡಿದ್ದು ಜನತಾ ಪಕ್ಷ. ನಂತರ ಕಾಂಗ್ರೆಸ್ ಗೆ ಹೋದರು. ನಾನು ಅವರಿಗೆ ಏನು ಸಹಾಯ ಮಾಡಿದ್ದೇನೆ, ಅವರು ನನಗೆ ಏನು ಸಹಾಯ ಮಾಡಿದ್ದಾರೆ ಈಗ ಮಾತನಾಡುವುದು ಬೇಡ. ಅಂಬರೀಶ್ ನಿಧನರಾದಾಗ ನನಗೆ ನನ್ನ ಮಗ ತಿಳಿಸಿದ. ಆಸ್ಪತ್ರೆಗೆ ಹೋದಾಗ ಅಲ್ಲಿ ಇಂದು ಚುನಾವಣೆ ನಡೆಸಲು ಬಂದವರು ಇರಲಿಲ್ಲ. ಈ ಸಂದರ್ಭದಲ್ಲಿ ಆ ತಾಯಿಗೆ ಕೇಳುತ್ತೇನೆ. ಆ ಸಣ್ಣ ಸೌಜನ್ಯದ ಕ್ರಿಯೆ ಅವರಿಗೆ ಇದೆಯಾ? ಅವರು ವಾಸ ಮಾಡುತ್ತಿದ್ದ ಮನೆಗೆ ಪಾರ್ಥಿವ ಶರೀರ ತೆಗೆದುಕೊಂಡು ಹೋಗಲು ವ್ಯವಸ್ಥೆ ಮಾಡಿದೆ. ಮಧ್ಯ ರಾತ್ರಿಯಲ್ಲಿ ಒಂದು ರೂಂ ಕ್ಲೀನ್ ಮಾಡಿಸಿ ಅವರು ಬಾಳಿದ ಮನೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಿದೆ. ದೇಶದ ಇತಿಹಾಸದಲ್ಲಿ ಪಾರ್ಥಿವ ಶರೀರ ತೆಗೆದುಕೊಂಡು ಹೋಗಲು ಸೇನೆಯ ವಿಮಾನ ಕೊಡಲ್ಲ. ಅವತ್ತು ಈ ಅಭಿಮಾನಿಗಳು ಕೇಳಿಕೊಂಡರು ಎಂದು ಮಾಡಿದೆ. ನಾನು ಒಬ್ಬ ಮುಖ್ಯಮಂತ್ರಿ ಆಗಿ ನಾನು ಅಲ್ಲಿ ಕೂರಲಿಲ್ಲ ಎಂದು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದರು.
ಇಂದು ಕಣ್ಣಲ್ಲಿ ನೀರು ಹಾಕಿ ಡ್ರಾಮಾ ಆರಂಭ ಮಾಡಿದ್ದಾರೆ. ನಾನು, ನಮ್ಮ ತಂದೆ ಕಣ್ಣಲ್ಲಿ ನೀರು ಹಾಕುತ್ತೇವೆ. ಜನರ ಸಮಸ್ಯೆ ನೋಡಿ ಕಣ್ಣಲ್ಲಿ ನೀರು ಬರುತ್ತೆ. ಅಂಬರೀಶ್ ಪಾರ್ಥೀವ ಶರೀರವನ್ನ ಮಂಡ್ಯಕ್ಕೆ ತೆಗೆದುಕೊಂಡು ಹೋಗೋಣ ಅಂದರೆ ಮಗನೊಂದಿಗೆ ಬೇಡ ಎಂದ ಮಹಾನ್ ತಾಯಿ ಇವತ್ತು ಕಣ್ಣೀರಾಕಿ ಜನರ ಮುಂದೆ ಬಂದಿದ್ದಾರೆ ಎಂದು ಅಂಬರೀಶ್ ಪಾರ್ಥೀವ ಶರೀರ ಮಂಡ್ಯಕ್ಕೆ ತೆಗೆದುಕೊಂಡು ಹೋಗೋದು ಬೇಡ ಎಂದು ಸುಮಲತಾ ಅವರು ಹೇಳಿದ್ದರು ಎಂದು ತಿಳಿಸಿದರು.
ಇಲ್ಲಿಯವರೆಗೂ ನಾನು ಬಾಯಿ ಮುಚ್ಚಿಕೊಂಡಿದ್ದೆ. ಅವರಿಗೆ ಎಂಪಿ ಆಗಿದ್ದೇನೆ ಎಂದು ಮೂರು ತಿಂಗಳಿಂದ ನಿಮ್ಮ ತಲೆಗೆ ತುಂಬಿದ್ದಾರೆ. ನಾನು ಮಾಧ್ಯಮಗಳಿಂದ ಬದುಕಿಲ್ಲ. ಮಾಧ್ಯಮದವರು ನೀವು ಏನ್ ಬೇಕಾದರು ಮಾಡಿಕೊಳ್ಳಿ ಎಂದು ಕಿಡಿಕಾರಿದರು. ಅಲ್ಲದೇ ಎರಡು ಬಾರಿ ಚಿಕಿತ್ಸೆಗೆ ಒಳಗಾದವನು ನಾನು. ಇಸ್ರೇಲ್‍ಗೆ ಹೋದಾಗಲೇ ನನ್ನ ಜೀವ ಹೋಗಬೇಕಾಗಿತ್ತು. ವೈದ್ಯರು ಚಿಕಿತ್ಸೆ ಕೊಡಲೇ ಬೇಕು ಅಂದರು ಆದರೆ ನಾನು ಬಂದಿರುವುದು ರೈತರಿಗೆ ಒಳ್ಳೆಯದು ಮಾಡಲು ಎಂದು ಯಾವುದಾದರು ಮಾತ್ರೆ ಕೊಡಿ ಸಾಕು ಎಂದು ಬಂದೆ ಎಂದು ತಿಳಿಸಿ ಮತ್ತೊಮ್ಮೆ ತಾವು ಸಾವಿನ ಸನಿಹ ಹೋಗಿದ್ದ ಸನ್ನಿವೇಶ ಬಿಚ್ಚಿಟ್ಟರು.
ಮಂಡ್ಯ: ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಯಲ್ಲಿ ವೀರ ಮರಣ ಹೊಂದಿದ್ದ ಮಂಡ್ಯದ ಯೋಧ ಗುರು ಅವರ ಕುಟುಂಬಕ್ಕೆ ನಟ ನಿಖಿಲ್ ಸಾಂತ್ವನ ಹೇಳಿದ್ದಾರೆ.
ಗುಡಿಗೆರೆ ಗ್ರಾಮಕ್ಕೆ ಭೇಟಿ ನೀಡಿದ ನಿಖಿಲ್ ಪುತ್ರನನ್ನು ಕಳೆದುಕೊಂಡ ಪೋಷಕರಿಗೆ ಸಾಂತ್ವನ ಹೇಳಿ ಧೈರ್ಯ ತುಂಬಿದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ನಿಖಿಲ್, ಪ್ರತಿಯೊಬ್ಬ ಭಾರತೀಯನಲ್ಲೂ ಜೀರ್ಣಿಸಿಕೊಳ್ಳಲಾಗದ ನೋವು ಇಂದು ಕಾಡುತ್ತಿದೆ. ಯೋಧರ ಸಾವಿಗೆ ಆಕ್ರೋಶದ ಕಿಚ್ಚು ಎಲ್ಲರಲ್ಲಿದ್ದು, ನಿಜಕ್ಕೂ ಬೇಸರ ತಂದಿದೆ. ಸೈನಿಕರ ಋಣದಲ್ಲಿ ನಾವೆಲ್ಲರೂ ಬದುಕುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಇಂತಹ ಉಗ್ರ ಚಟುವಟಿಕೆಗಳು ನಡೆಯದಂತೆ ಸರ್ಕಾರ ಕ್ರಮಕೈಗೊಳ್ಳಬೇಕಿದೆ ಎಂದು ತಿಳಿಸಿದರು.
ಯೋಧರು ನಮ್ಮ ದೇಶದ ಆಸ್ತಿಯಾಗಿದ್ದು, ಈ ಪ್ರತಿಯೊಂದು ಕ್ಷಣ, ನಿಮಿಷ ಅವರು ಕೊಟ್ಟಿರುವ ನೆಮ್ಮದಿಯ ಕ್ಷಣಗಳಾಗಿದೆ. ನಾವು ಎಷ್ಟೇ ಯೋಧರ ಕುಟುಂಬಕ್ಕೆ ಸಾಂತ್ವನ ಹೇಳಿದರೂ ಕೂಡ ಅವರ ಮಗನನ್ನು ವಾಪಸ್ ತಂದು ಕೊಡಲು ಸಾಧ್ಯವಿಲ್ಲ ಎಂಬ ಅರಿವು ನನಗಿದೆ. ಅವರ ಕುಟುಂಬ ನೋಡಿದರೆ ಹೊಟ್ಟೆಯಲ್ಲಿ ಬೆಂಕಿ ಹಚ್ಚಿದ ಹಾಗೆ ಆಗುತ್ತದೆ. ವೀರ ಯೋಧರಿಗೆ ಈ ರೀತಿ ಏನೂ ಆಗದಂತೆ ಕೇಂದ್ರ ಸರ್ಕಾರ ಕ್ರಮ ವಹಿಸಲಿ ಎಂದರು.