Tag: Actor Komal

  • ಅವಾಚ್ಯ ಶಬ್ದಗಳಿಂದ ನಿಂದಿಸಿ, ಥಳಿಸಿದ – ಹಲ್ಲೆ ಹೇಗಾಯ್ತು ವಿವರಿಸಿದ ಕೋಮಲ್

    ಅವಾಚ್ಯ ಶಬ್ದಗಳಿಂದ ನಿಂದಿಸಿ, ಥಳಿಸಿದ – ಹಲ್ಲೆ ಹೇಗಾಯ್ತು ವಿವರಿಸಿದ ಕೋಮಲ್

    ಬೆಂಗಳೂರು: ಮಗಳನ್ನು ಟ್ಯೂಷನ್‍ಗೆ ಬಿಡಲು ತೆರಳಿದ್ದ ಸಂದರ್ಭದಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಏಕಾಏಕಿ ಹಲ್ಲೆ ನಡೆಸಿದ್ದಾನೆ ಎಂದು ನಟ ಕೋಮಲ್ ಅವರು ತಿಳಿಸಿದ್ದಾರೆ.

    ಮಲ್ಲೇಶ್ವರಂ ಪೊಲೀಸ್ ಠಾಣೆಗೆ ದೂರು ನೀಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನನಗೆ ಹಲ್ಲೆ ಮಾಡಿದ ವ್ಯಕ್ತಿ ಯಾರು ಎನ್ನುವುದೇ ಗೊತ್ತಿಲ್ಲ. ಆದರೆ ಏಕಾಏಕಿ ಕಾರು ತಡೆದ ಆತ, ಈ ನಡುವೆ ನಿನ್ನದು ಜಾಸ್ತಿಯಾಗಿದೆ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ. ಆದ್ದರಿಂದ ನಾನು ಕಾರಿನಿಂದ ಇಳಿದೆ. ಕಾರು ಇಳಿಯುತ್ತಿದ್ದಂತೆ ನನ್ನ ಮೇಲೆ ಆತ ಹಲ್ಲೆ ನಡೆಸಿದ. ಆದರೆ ನನ್ನ ಮೇಲೆ ಹಲ್ಲೆ ನಡೆಸುವ ಉದ್ದೇಶ ಏನು ಎನ್ನುವುದು ಗೊತ್ತಿಲ್ಲ ಎಂದು ಹೇಳಿದರು.

    ಸಿನಿಮಾ ಮಾಡುವ ಉದ್ದೇಶದಿಂದ ಕಳೆದ 4 ವರ್ಷಗಳಿಂದ ನಾನು ಮನೆಯಿಂದ ಹೆಚ್ಚು ಹೊರ ಬಂದಿಲ್ಲ. ಆದರೆ ಏಕೆ ನನ್ನ ಮೇಲೆ ಹಲ್ಲೆ ನಡೆದಿದೆ ಎಂಬುವುದು ಅಚ್ಚರಿ ತಂದಿದೆ. ಸಿನಿಮಾ ಮಾಡುವುದೇ ತಪ್ಪು ಎಂದರೆ ಹೇಗೆ ಎಂದು ಪ್ರಶ್ನಿಸಿದರು.

    ಇದೇ ವೇಳೆ ಈ ಘಟನೆ ಸಿನಿಮಾ ರಂಗದವರಿಂದ ಹಲ್ಲೆ ನಡೆದಿದ್ಯಾ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಇತ್ತೀಚೆಗೆ ನನ್ನ ಸಿನಿಮಾ ಬಿಡುಗಡೆಯಾಗಿದ್ದು, ಆದರ ಕೆಲಸದಲ್ಲಿ ನಾನು ತೊಡಗಿಕೊಂಡಿದ್ದೇನೆ. ಆತ ಯಾರೇ ಎಂಬುವುದು ನನಗೆ ತಿಳಿದಿಲ್ಲ. ಆತನ ಉದ್ದೇಶ ಏನು ಎಂಬುವುದು ಸಹ ಗೊತ್ತಿಲ್ಲ. ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಅವರು ವಿಚಾರಣೆ ನಡೆಸುತ್ತಾರೆ ಎಂದರು.

    ಸದ್ಯ ಲಭ್ಯವಿರುವ ಮಾಹಿತಿ ಅನ್ವಯ ಕೋಮಲ್ ಅವರ ಮೇಲೆ ಹಲ್ಲೆ ಮಾಡಿದ ವ್ಯಕ್ತಿಯನ್ನು ಜಕ್ಕರಾಯನ ಕೆರೆಯ ನಿವಾಸಿ ವಿಜಯ್ ಅಲಿಯಾಸ್ ವಿಜಿ ಎಂದು ಗುರುತಿಸಲಾಗಿದೆ. ಈತ ತನ್ನ ಭಾವಿ ಪತ್ನಿಯೊಂದಿಗೆ ಬೈಕ್‍ನಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಬಂದು ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ಅಲ್ಲದೇ ಈ ವೇಳೆ ಮದ್ಯ ಸೇವನೆ ಮಾಡಿದ್ದ ಎಂಬ ಅನುಮಾನವನ್ನು ಕೋಮಲ್ ಅವರ ಸಹೋದರ, ನಟ ಜಗ್ಗೇಶ್ ವ್ಯಕ್ತಪಡಿಸಿದ್ದಾರೆ.

    ಕೋಮಲ್ ಅವರ ಕಾರು ನನ್ನ ಬೈಕಿಗೆ ತಾಗಿದ ವಿಚಾರಕ್ಕೆ ಮಾತಿಗೆ ಮಾತು ಬೆಳೆದು ಹಲ್ಲೆ ನಡೆಸಿದ್ದಾಗಿ ವಿಜಯ್ ಪೊಲೀಸರ ಮುಂದೇ ಹೇಳಿಕೆ ನೀಡಿದ್ದಾನೆ ಎಂಬ ಮಾಹಿತಿ ಲಭಿಸಿದೆ. ಸದ್ಯ ವಿಜಯ್‍ನನ್ನು ಮಲ್ಲೇಶ್ವರಂ ಪೊಲೀಸರು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ಈ ಘಟನೆ ಸಂಬಂಧ ಮಲ್ಲೇಶ್ವರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ನಟ ಕೋಮಲ್ ಮೇಲೆ ಅಪರಿಚಿತ ವ್ಯಕ್ತಿಯಿಂದ ಹಲ್ಲೆ

    ನಟ ಕೋಮಲ್ ಮೇಲೆ ಅಪರಿಚಿತ ವ್ಯಕ್ತಿಯಿಂದ ಹಲ್ಲೆ

    ಬೆಂಗಳೂರು: ಸ್ಯಾಂಡಲ್‍ವುಡ್ ನಟ ಕೋಮಲ್ ಅವರ ಮೇಲೆ ಅಪರಿಚಿತ ವ್ಯಕ್ತಿ ಹಲ್ಲೆ ಮಾಡಿರುವ ಘಟನೆ ನಗರದ ಸಂಪಿಗೆ ಚಿತ್ರಮಂದಿರದ ರೈಲ್ವೇ ಅಂಡರ್ ಪಾಸ್ ಬಳಿ ಇಂದು ಸಂಜೆ ನಡೆದಿದೆ.

    ಕೋಮಲ್ ಅವರು ತಮ್ಮ ಕಾರಿನಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಬೈಕ್ ಮೇಲೆ ಬಂದ ಅಪರಿಚಿತ ವ್ಯಕ್ತಿಯೊಬ್ಬ ಕಾರನ್ನು ಅಡ್ಡಗಟ್ಟಿದ್ದು, ಆ ಬಳಿಕ ಅವರ ಮೇಲೆ ಹಲ್ಲೆ ನಡೆಸಿದ್ದಾನೆ. ಕೋಮಲ್ ಅವರ ಮೇಲೆ ಸುಖಾ ಸುಮ್ಮನೆ ರಕ್ತ ಬರುವಂತೆ ಹಲ್ಲೆ ಮಾಡಿದ್ದಾನೆ ಎನ್ನುವ ವಿಚಾರ ತಿಳಿದು ಬಂದಿದೆ.

    ಘಟನೆಯಲ್ಲಿ ಕೋಮಲ್ ಮುಖ ಹಾಗೂ ಮೂಗಿಗೆ ಗಾಯವಾಗಿದ್ದು, ಘಟನೆ ನಿಖರವಾದ ಕಾರಣ ಇನ್ನೂ ತಿಳಿದು ಬಂದಿಲ್ಲ. ಘಟನೆ ನಡೆದ ಬಳಿಕ ಅಪರಿಚಿತ ವ್ಯಕ್ತಿಯೂ ಮಲ್ಲೇಶ್ವರಂ ಪೊಲೀಸ್ ಠಾಣೆಗೆ ಹೋಗಿದ್ದಾನೆ ಎಂಬ ಮಾಹಿತಿ ಲಭಿಸಿದೆ. ಸದ್ಯ ಅಪರಿಚಿತ ವ್ಯಕ್ತಿಯನ್ನು ಪೊಲೀಸರು ಠಾಣೆಯಲ್ಲಿ ವಿಚಾರಣೆ ನಡೆಸಿದ್ದಾರೆ.

    ಕೋಮಲ್ ಮೇಲೆ ಹಲ್ಲೆ ನಡೆದ ಬಗ್ಗೆ ಮಾಹಿತಿ ಪಡೆದ ನಟ ಜಗ್ಗೇಶ್ ಅವರು ಕೂಡ ಪೊಲೀಸ್ ಠಾಣೆಗೆ ಆಗಮಿಸಿ ಘಟನೆ ಬಗ್ಗೆ ಮಾಹಿತಿ ಪಡೆದಿದ್ದಾರೆ. ಕೋಮಲ್ ಅವರು ಗಾಯಗೊಂಡಿರುವುದರಿಂದ ಕೆಸಿ ಜನರಲ್ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಆ ಬಳಿಕ ಪೊಲೀಸ್ ಠಾಣೆಗೆ ಆಗಮಿಸಿದ್ದರು. ಘಟನೆ ನಿಖರ ಕಾರಣ ತಿಳಿದು ಬಂದಿಲ್ಲ, ಪೊಲೀಸರು ಹೆಚ್ಚಿನ ಮಾಹಿತಿ ಪಡೆಯುತ್ತಿದ್ದಾರೆ.