Tag: actor Darshan

  • ಕಾಡಿನ ಉಳಿವಿಗೆ ಅಭಿಮಾನಿಗಳಲ್ಲಿ ನಟ ದರ್ಶನ್ ಮನವಿ

    ಕಾಡಿನ ಉಳಿವಿಗೆ ಅಭಿಮಾನಿಗಳಲ್ಲಿ ನಟ ದರ್ಶನ್ ಮನವಿ

    ಬೆಂಗಳೂರು: ಬಂಡೀಪುರದಲ್ಲಿ ಕಾಣಿಸಿಕೊಂಡಿದ್ದ ಕಾಡ್ಗಿಚ್ಚನ್ನು ತಡೆಯಲು ಅಭಿಮಾನಿಗಳಿಗೆ ಮನವಿ ಮಾಡಿದ್ದ ನಟ ದರ್ಶನ್, ಇಂದು ತಮ್ಮ ಅಭಿಮಾನಿಗಳಲ್ಲಿ ಮತ್ತೊಂದು ಮನವಿ ಮಾಡಿದ್ದು ಅರಣ್ಯ ಬೆಳೆಸಲು ಕರೆ ನೀಡಿದ್ದಾರೆ.

    ಪ್ರೀಮಿಯರ್ ಪದ್ಮಿನಿ ಸಿನಿಮಾ ಆಡಿಯೋ ರಿಲೀಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ದರ್ಶನ್ ಚಿತ್ರತಂಡಕ್ಕೆ ಶುಭಕೋರಿದರು. ಇದೇ ವೇಳೆ ಅರಣ್ಯ ನಾಶದ ಬಗ್ಗೆ ದರ್ಶನ್ ಹಾಗೂ ಜಗ್ಗೇಶ್ ಇಬ್ಬರು ಕೂಡ ಬೇಸರ ವ್ಯಕ್ತಪಡಿಸಿದರು. ಕಾರ್ಯಕ್ರಮದ ವೇಳೆ ಜಗ್ಗೇಶ್ ಅವರು ಒಂದು ಸಂಪಿಗೆ ಸಸಿ ಕೊಟ್ಟು ಸಂದೇಶ ನೀಡುವಂತೆ ದರ್ಶನ್ ಅವರಿಗೆ ಮನವಿ ಮಾಡಿದರು.

    ಜಗ್ಗೇಶ್‍ರಿಂದ ಗಿಡ ಪಡೆದ ಬಳಿಕ ಮಾತನಾಡಿದ ದರ್ಶನ್ ಅವರು, ಗಿಡ ನೆಡುವುದು ಮುಖ್ಯವಲ್ಲ. ಅದರ ಪಾಲನೆ ಪೋಷಣೆ ಮುಖ್ಯ. ಗಿಡ ನೆಟ್ಟ ವೇಳೆ ಸೆಲ್ಫಿ ತೆಗೆದುಕೊಳ್ಳುವುದೇ ಅಲ್ಲ. ಗಿಡ ನೆಟ್ಟ ಮೇಲೆ ಪ್ರತಿ ವರ್ಷ ಅದರ ಬೆಳವಣಿಗೆ ಬಗ್ಗೆ ಸೆಲ್ಫಿ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಎಂದು ಕರೆ ನೀಡಿದರು.

    ನಗರದ ಶೆರ್ಟಾನ್ ಹೋಟೆಲ್ ನಲ್ಲಿ ಪ್ರೀಮಿಯರ್ ಪದ್ಮಿನಿ ಸಿನಿಮಾ ಆಡಿಯೋ ರಿಲೀಸ್ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಬಳಿಕ ಮಾತನಾಡಿದ ನಟ ಜಗ್ಗೇಶ್ ಬಂಡೀಪುರ ಸೇರಿದಂತೆ ರಾಜ್ಯದ ಹಲವೆಡೆ ಅರಣ್ಯ ನಾಶದ ಪರಿಸ್ಥಿತಿ ಇದೆ. ಆಧುನಿಕ ತಂತ್ರಜ್ಞಾನ ಬಳಕೆ ಮಾಡಿ ಕಾಡ್ಗಿಚ್ಚಿನಂತಹ ಅವಘಡಗಳನ್ನು ತಡೆಯಬೇಕು. ಇದೇ ಪರಿಸ್ಥಿತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ಸಾಕಷ್ಟು ಬೆಲೆ ತೆರಬೇಕಾಗುತ್ತದೆ. ಎಲ್ಲರೂ ಕೂಡ ಅರಣ್ಯ ಬೆಳೆಸುವ ಕಾರ್ಯಕ್ಕೆ ಮುಂದಾಗೋಣ ಎಂದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬಂಡೀಪುರ ಉಳಿಸಿ – ಅಭಿಮಾನಿಗಳಲ್ಲಿ ‘ದಚ್ಚು’ ಮನವಿ

    ಬಂಡೀಪುರ ಉಳಿಸಿ – ಅಭಿಮಾನಿಗಳಲ್ಲಿ ‘ದಚ್ಚು’ ಮನವಿ

    ಬೆಂಗಳೂರು/ಚಾಮರಾಜನಗರ: ಬಂಡೀಪುರ ಹುಲಿರಕ್ಷಿತಾರಣ್ಯ ಉಂಟಾಗಿರುವ ಕಾಡ್ಗಿಚ್ಚಿನಿಂದ ಸಾಕಷ್ಟು ವನ್ಯಜೀವಿ ಸಂಕುಲಕ್ಕೆ ತೊಂದರೆಯಾಗಿದ್ದು, ಬೆಂಕಿ ನಂದಿಸಲು ಸ್ವಯಂ ಸೇವಕರು ಸರ್ಕಾರದ ಇಲಾಖೆಯೊಂದಿಗೆ ಕೈಜೋಡಿಸಬೇಕು ಎಂದು ನಟ ದರ್ಶನ್ ಅಭಿಮಾನಿಗಳಲ್ಲಿ ವಿನಂತಿ ಮಾಡಿದ್ದಾರೆ.

    ಕಳೆದ 5 ದಿನಗಳಿಂದ ಬಂಡೀಪುರ ಅಭಯಾರಣ್ಯದಲ್ಲಿ ಪದೇ ಪದೇ ಕಾಡ್ಗಿಚ್ಚು ಕಾಣಿಸಿಕೊಳ್ಳುತ್ತಿದ್ದು, ಅಗ್ನಿಶಾಮಕ ಇಲಾಖೆ ಸೇರಿದಂತೆ ಹಲವು ಸ್ವಯಂ ಸೇವಕರು ಈಗಾಗಲೇ ಬೆಂಕಿ ನಂದಿಸುವ ಕಾರ್ಯ ಮಾಡುತ್ತಿದ್ದಾರೆ. ಸತತ ಪ್ರಯತ್ನ ನಡುವೆಯೂ ಬೆಂಕಿ ನರ್ತನ ಮುಂದುವರಿದಿದ್ದು, ಅನೇಕ ಪ್ರಾಣಿಗಳು ಬೆಂಕಿಯಲ್ಲಿ ಸಿಕ್ಕಿ ಭಸ್ಮವಾಗಿದೆ. ಈ ಕುರಿತಂತೆ ದರ್ಶನ ಅವರು ಕೂಡ ಫೋಟೋ ಟ್ವೀಟ್ ಮಾಡಿದ್ದು, ಮೊಲವೊಂದು ಸುಟ್ಟು ಕರಕಲಾಗಿರುವ ದೃಶ್ಯವನ್ನು ಕಾಣಬಹುದಾಗಿದೆ.

    ಸಫಾರಿ ಬಂದ್:
    ಇಂದು ಬೆಳಗಿನ ವೇಳೆ ನಿಯಂತ್ರಣಕ್ಕೆ ಬಂದಿದ್ದ ಬೆಂಕಿ ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತಿದೆ. ಕಳೆದ ಐದು ದಿನಗಳಿಂದ ಬಂಡೀಪುರದ ಗೋಪಾಲಸ್ವಾಮಿ ಬೆಟ್ಟ ಮತ್ತು ಕುಂದಕೆರೆ ವಲಯದ ಸಾವಿರಾರು ಎಕರೆ ಅರಣ್ಯ ಪ್ರದೇಶ ನಾಶವಾಗಿದೆ. ಇದೀಗ ಮತ್ತೆ ಗೋಪಾಲಸ್ವಾಮಿ ಬೆಟ್ಟದ ವಲಯದಲ್ಲಿ ಬೆಂಕಿ ಕಾಣಿಸಿಕೊಂಡು ಭಾರೀ ಅನಾಹುತವನ್ನೇ ಸೃಷ್ಟಿಸಿದೆ. ಪರಿಣಾಮ ಅರಣ್ಯದಲ್ಲಿ ಒಂದು ವಾರದ ಕಾಲ ಸಫಾರಿಯನ್ನು ಸ್ಥಗಿತಗೊಳಿಸಲಾಗಿದೆ.

    ಹಸಿರಿನಿಂದ ಕಂಗೊಳಿಸುತ್ತಿದ್ದ ಬಂಡೀಪುರ ಹುಲಿರಕ್ಷಿತಾರಣ್ಯ ಇದೀಗ ಬೆಂದ ಕಾಡಾಗಿದ್ದು, ಹುಲಿ, ಕರಡಿ, ಚಿರತೆ, ಆನೆ, ಜಿಂಕೆ ಮೊದಲಾದ ವನ್ಯಪ್ರಾಣಿಗಳ ಆವಾಸ ಸ್ಥಾನವಾದ ಬಂಡೀಪುರ ಇದೀಗ ಅಕ್ಷರಶ: ಸ್ಮಶಾನದಂತೆ ಗೋಚರಿಸುತ್ತಿದೆ. ಸ್ಥಳೀಯರ ಪ್ರಕಾರ ಸುಮಾರು ಹತ್ತು ಸಾವಿರ ಎಕರೆ ಅರಣ್ಯ ಪ್ರದೇಶ ಸುಟ್ಟು ಕರಕಲಾಗಿದ್ದಾರೆ, ಅಪರೂಪದ ಸರಿಸೃಪಗಳು ಕೂಡ ಬೆಂಕಿಯ ಕೆನ್ನಾಲಿಗೆ ಭಸ್ಮವಾಗಿದೆ.

    ಕಳೆದ ಐದು ದಿನಗಳಿಂದ ನೂರಾರು ಅರಣ್ಯ ಸಿಬ್ಬಂದಿ, ಅಗ್ನಿಶಾಮಕದಳ ಹಾಗು ಸ್ವಯಂ ಸೇವಕರ ಸತತ ಕಾರ್ಯಾಚರಣೆ ಫಲವಾಗಿ ಬೆಂಕಿ ಹತೋಟಿ ಪ್ರಯತ್ನಿಸುತ್ತಿದ್ದಾರೆ. ಆದರೆ ಗಾಳಿಯ ರಭಸಕ್ಕೆ ವ್ಯಾಪಕವಾಗಿ ಹರಡುತ್ತಿದೆ.

    ಅಧಿಕ ನಷ್ಟ: ಬೆಂಕಿಯ ನರ್ತನಕ್ಕೆ ಆಪಾರ ಪ್ರಮಾಣದ ವನ್ಯ ಸಂಪತ್ತು ನಾಶವಾಗಿ ನಷ್ಟ ಅನುಭವಿಸಿದೆ. ಇದರೊಂದಿಗೆ ಸಫಾರಿಗೆ ಆಗಮಿಸುತ್ತ ಸಾವಿರಾರು ಪ್ರವಾಸಿಗರಿಗೂ ನಿರಾಸೆಯಾಗಿದ್ದು, ಸಫಾರಿ ನಿಷೇಧ ಮಾಡಿರುವುದರಿಂದ ಅರಣ್ಯ ಇಲಾಖೆಗೆ ಲಕ್ಷಾಂತರ ರೂಪಾಯಿ ಆದಾಯ ಕೂಡ ನಷ್ಟವಾಗಿದೆ.

    ಕಳೆದ ವರ್ಷ ಬಂಡಿಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಯಾವುದೇ ಬೆಂಕಿ ಅವಘಡ ಸಂಭವಿಸಿರಲಿಲ್ಲ. ಆದರೆ ಈ ವರ್ಷದ ಬೇಸಿಗೆ ಆರಂಭದಲ್ಲೇ ಕಾಡ್ಗಿಚ್ಚಿಗೆ ಸಾವಿರಾರು ಎಕರೆ ಅರಣ್ಯ ಪ್ರದೇಶ ಸುಟ್ಟು ಕರಕಲಾಗಿರುವುದು ಆತಂಕ ಮೂಡಿಸಿದೆ.

     

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಇಂಡಸ್ಟ್ರಿಗೆ ಒಬ್ಬರೇ ‘ಯಜಮಾನ’, ಅದು ಸಾಹಸಸಿಂಹ ವಿಷ್ಣುವರ್ಧನ್ ಮಾತ್ರ: ನಟ ದರ್ಶನ್

    ಇಂಡಸ್ಟ್ರಿಗೆ ಒಬ್ಬರೇ ‘ಯಜಮಾನ’, ಅದು ಸಾಹಸಸಿಂಹ ವಿಷ್ಣುವರ್ಧನ್ ಮಾತ್ರ: ನಟ ದರ್ಶನ್

    ಬೆಂಗಳೂರು: ನಟ ದರ್ಶನ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ ಯಜಮಾನ ಚಿತ್ರ ಸೆಟ್ಟಿರಿದ ಬಳಿಕ ಸ್ಯಾಂಡಲ್‍ವುಡ್ ಅಂಗಳದಲ್ಲಿ ಕೇಳಿ ಬಂದಿದ್ದ ಟೈಟಲ್ ಕುರಿತ ಚರ್ಚೆಗೆ ಸ್ಪಷ್ಟನೆ ನೀಡಿ ದರ್ಶನ್ ಬ್ರೇಕ್ ಹಾಕಿದ್ದಾರೆ.

    ಯಜಮಾನ ಚಿತ್ರದ ಟೈಟಲ್ ಘೋಷಣೆ ಆದ ಬಳಿಕ ಗಾಂಧಿ ನಗರದಲ್ಲಿ ಈ ಕುರಿತು ಭಾರೀ ಚರ್ಚೆ ನಡೆದಿತ್ತು. ಅಲ್ಲದೇ ಸಾಹಸ ಸಿಂಹ ವಿಷ್ಣುವರ್ಧನ್ ಅವರ ಯಜಮಾನ ಚಿತ್ರಕ್ಕೆ ಹೋಲಿಕೆ ಮಾಡಿ ಸ್ಯಾಂಡಲ್‍ವುಡ್ ಯಜಮಾನ ಯಾರು ಎಂಬ ಮಾತು ಕೇಳಿ ಬಂದಿತ್ತು. ಆದರೆ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ದರ್ಶನ್ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ‘ನನ್ನ ಯಜಮಾನ ಸಿನಿಮಾಗೂ ವಿಷ್ಣುದಾದ ಅವರಿಗೂ ಸಂಬಂಧ ಇಲ್ಲ. ಸುಖಾ ಸುಮ್ಮನೇ ಸಿನಿಮಾದ ಬಗ್ಗೆ ಗೊಂದಲ ಮೂಡಿಸುವುದು ಬೇಡ. ಸಿನಿಮಾ ರಂಗದಲ್ಲಿ ಈ ಬಗ್ಗೆ ಚರ್ಚೆಯಾಗುತ್ತಿದೆ. ಅದ್ದರಿಂದ ಮತ್ತೊಮ್ಮೆ ಹೇಳುತ್ತಿದ್ದೇವೆ. ಇಂಡಸ್ಟ್ರಿಗೆ ಒಬ್ಬರೇ ‘ಯಜಮಾನ’, ಅದು ವಿಷ್ಣುದಾದ ಮಾತ್ರ ಎಂದು ಹೇಳಿದರು.

    ಈ ಹಿಂದೆ ವಿಷ್ಣುವರ್ಧನ್ ಅವರ ಯಜಮಾನ ಚಿತ್ರ ಬಿಡುಗಡೆಯಾಗಿ ಸೂಪರ್ ಹಿಟ್ ಆಗಿತ್ತು. ಈಗ ಮತ್ತೆ ಅದೇ ಹೆಸರಿನಲ್ಲಿ ದರ್ಶನ್ ಅವರ ಸಿನಿಮಾ ಬಿಡುಗಡೆ ಆಗುತ್ತಿದೆ. ಈ ಕುರಿತು ಚಿತ್ರದ ನಿರ್ದೇಶಕ ವಿ ಹರಿಕೃಷ್ಣ ಅವರು ಕೂಡ ಈ ಹಿಂದೆಯೇ ಸ್ಪಷ್ಟನೆ ನೀಡಿದ್ದರು. ಚಿತ್ರದ ಕಥೆಯನ್ನು ದರ್ಶನ್ ಅವರಿಗಾಗಿಯೇ ಬರೆಸಿದ್ದೆನೆ. ಅಲ್ಲದೇ ಚಿತ್ರದ ಕಥೆಯ ಬರವಣಿಗೆಯಲ್ಲಿ ನನ್ನ ಪಾತ್ರವೂ ಇದೆ. ಹಲವು ವರ್ಷಗಳಿಂದ ನನಗೆ ದರ್ಶನ್ ಅವರೊಂದಿಗೆ ಒಡನಾಟವಿದ್ದು, ಸಹಜವಾಗಿಯೇ ದರ್ಶನ್ ಅವರ ವ್ಯಕ್ತಿತ್ವ ಮತ್ತು ಚಿತ್ರರಂಗದಲ್ಲಿ ಅವರ ಅನುಭವ ಬಗ್ಗೆ ಗೊತ್ತಿದೆ. ಅದ್ದರಿಂದ ಯಜಮಾನ ಹೆಸರಿನಲ್ಲಿ ಚಿತ್ರ ಮಾಡಿದ್ದೇನೆ ಎಂದು ಸ್ಪಷ್ಟಪಡಿಸಿದ್ದರು.

    ಯಜಮಾನ ಚಿತ್ರವನ್ನು ಶೈಲಜಾ ನಾಗ್ ಹಾಗೂ ಬಿ ಸುರೇಶ್ ಅವರ ಹೊಸ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡುತ್ತಿದ್ದು, ನಟಿ ರಶ್ಮಿಕಾ ಸಿನಿಮಾದಲ್ಲಿ ದರ್ಶನ್ ಪಕ್ಕ ಕಾಣಿಸಿಕೊಂಡಿದ್ದಾರೆ. ಚಿತ್ರ ಟೇಲರ್, ಹಾಡು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಧೂಳೆಬ್ಬಿಸಿದ್ದು, ಹಲವು ದಾಖಲೆಗಳನ್ನ ನಿರ್ಮಾಣ ಮಾಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪುಲ್ವಾಮಾ ದಾಳಿ: ಹುತಾತ್ಮ ಯೋಧರಿಗೆ ಚಿತ್ರರಂಗದ ನಮನ

    ಪುಲ್ವಾಮಾ ದಾಳಿ: ಹುತಾತ್ಮ ಯೋಧರಿಗೆ ಚಿತ್ರರಂಗದ ನಮನ

    ಬೆಂಗಳೂರು: ಪುಲ್ವಾಮಾದಲ್ಲಿ ಭಯೋತ್ಪಾದನ ದಾಳಿಯಲ್ಲಿ ಹುತಾತ್ಮರಾದ 49 ಕ್ಕೂ ಹೆಚ್ಚು ಯೋಧರಿಗೆ ಚಿತ್ರರಂಗ ಹಲವು ಕಲಾವಿದರು ಸಂತಾಪ ಸೂಚಿಸಿದ್ದಾರೆ.

    ನಟರಾದ ದರ್ಶನ್, ಸುದೀಪ್, ಪುನೀತ್ ರಾಜ್‍ಕುಮಾರ್ ಜಗ್ಗೇಶ್ ಸೇರಿದಂತೆ ಕನ್ನಡ ಚಿತ್ರರಂಗದ ಅನೇಕ ನಟ-ನಟಿಯರು ಟ್ವೀಟ್ ಮಾಡಿ ತಮ್ಮ ಸಂತಾಪ ಸೂಚಿಸಿ ಹೇಡಿ ಕೃತ್ಯದ ವಿರುದ್ಧ ತಮ್ಮ ಆಕ್ರೋಶ ಹೊರಹಾಕಿದ್ದಾರೆ.

    ಪುಲ್ವಾಮಾ ದಾಳಿ ಬಗ್ಗೆ ತುಂಬಾ ದುಃಖವಾಗಿದೆ, ಭಯೋತ್ಪಾದನೆ ಯಾವತ್ತೂ ಮಾನವ ಕುಲಕ್ಕೆ ಅಪಾಯಕಾರಿ ಎಂದು ದರ್ಶನ್ ಟ್ವೀಟ್ ಮಾಡಿದ್ದು, ಕಾಶ್ಮೀರದ ಪುಲ್ವಾಮಾ ದಾಳಿಯಲ್ಲಿ ಯೋಧರು ಹುತಾತ್ಮರಾಗಿರುವುದು ಬೇಸರದ ಸಂಗತಿ ಎಂಬುದಾಗಿ ಪುನೀತ್ ನಮನ ಸಲ್ಲಿಸಿದ್ದಾರೆ.

    ಯೋಧರ ಬಲಿದಾನಕ್ಕೆ ಅವರ ತ್ಯಾಗಕ್ಕೆ ನನ್ನ ಭಾವಪೂರ್ಣ ನಮನ, ಅವರ ತ್ಯಾಗಕ್ಕೆ ತಕ್ಕ ನ್ಯಾಯ ಸಿಗಬೇಕು ಎಂದು ಯಶ್ ತಿಳಿಸಿದ್ದು, ಉಳಿದಂತೆ ಜಗ್ಗೇಶ್, ರಶ್ಮಿಕಾ, ಶ್ರೀಮುರುಳಿ, ಸುಮಲತಾ ಅಂಬರೀಶ್, ನಿರ್ದೇಶಕ ಪವನ್ ಒಡೆಯರ್ ಸೇರಿದಂತೆ ಅನೇಕ ನಟ-ನಟಿಯರು ಹುತಾತ್ಮ ಯೋಧರ ಆತ್ಮಕ್ಕೆ ಶಾಂತಿ ಕೋರಿ ಟ್ಟೀಟ್ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

     

  • ಮಾಜಿ ಸಿಎಂ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ನಟ ದರ್ಶನ್

    ಮಾಜಿ ಸಿಎಂ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ನಟ ದರ್ಶನ್

    ಮೈಸೂರು: ಸುತ್ತೂರು ಜಾತ್ರಾ ಮಹೋತ್ಸವದ ಹಿನ್ನೆಲೆ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ನಟ ದರ್ಶನ್ ಭಾಗವಹಿಸಿದ್ದರು. ಇದೇ ವೇಳೆ ಕಾರ್ಯಕ್ರಮದ ವೇದಿಕೆ ಆಗಮಿಸಿದ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಕಾಲಿಗೆ ನಮಸ್ಕರಿಸಿದ ದರ್ಶನ್ ಆಶೀರ್ವಾದ ಪಡೆದು ಸರಳತೆ ಮೆರೆದರು.

    ಕಾರ್ಯಕ್ರಮದಲ್ಲಿ ಮಾತನಾಡಿದ ದರ್ಶನ್, ನಾನು ಕೂಡ ಜೆಎಸ್‍ಎಸ್ ಪಾಲಿಟೆಕ್ನಿಕ್ ವಿದ್ಯಾರ್ಥಿಯಾಗಿದ್ದು, ಆದರೆ 6 ತಿಂಗಳು ಮಾತ್ರ ಇಲ್ಲಿ ಓದಿದೆ. ಅಲ್ಲದೇ ನಮ್ಮ ತಂದೆ ಅವರ ಅನಾರೋಗ್ಯದ ವೇಳೆ ಜೆಎಸ್‍ಎಸ್ ಆಸ್ಪತ್ರೆ ನನಗೆ ತುಂಬಾ ಸಹಾಯ ಮಾಡಿದೆ. ಅಲ್ಲದೇ ಸುತ್ತೂರು ಮಠ ಕೂಡ ಆತ್ಮೀಯವಾಯಿತು ಎಂದು ಹಿಂದಿನ ನೆನಪುಗಳನ್ನು ಸ್ಮರಿಸಿಕೊಂಡರು.

    ಶಿಕ್ಷಣ ಮಹತ್ವದ ಬಗ್ಗೆ ಮಾತನಾಡಿದ ದರ್ಶನ್ ಅವರು, ನೀವು ಪಡೆಯುವ ಪದವಿ ಒಂದು ಕೋಟಿಗೆ ಸಮನಾಗಿರುತ್ತದೆ. ಆದ್ದರಿಂದ ಯಾವುದೇ ಕಾರಣಕ್ಕೂ ಶಿಕ್ಷಣ ಬಗ್ಗೆ ನಿರ್ಲಕ್ಷ್ಯ ಮಾಡಬೇಡಿ. ಶಿಕ್ಷಣ ಇಲ್ಲದಿದ್ದರೆ ಎಂತಹ ಸಮಸ್ಯೆಗಳು ಎದುರಾಗುತ್ತದೆ ಎಂಬುವುದು ನನಗೆ ಚೆನ್ನಾಗಿ ಗೊತ್ತಿದೆ. ಯಾವುದೇ ಕಾರಣಕ್ಕೂ ಎರಡು ದೋಣಿ ಮೇಲೆ ಕಾಲಿಡಬೇಡಿ ಎಂದು ಸಲಹೆ ನೀಡಿದರು.

    ಸುತ್ತೂರು ಜಾತ್ರೆಯಲ್ಲಿ ನಾನು ಕೂಡ ಬಹಳಷ್ಟು ಬಾರಿ ಆರಾಮಾಗಿ ಓಡಾಡುತ್ತಿದ್ದೆ, ಆದರೆ ಈಗ ಅದು ಸಾಧ್ಯವಿಲ್ಲ. ಇಲ್ಲಿ ನೆರೆದಿರುವ ದನಗಳ ಜಾತ್ರೆ ನೋಡುವುದು ನನಗೆ ತುಂಬಾ ಇಷ್ಟ. ಸೆಲೆಬ್ರಿಟಿ ಆಗಿರುವ ಕಾರಣ ನೀವು ನನ್ನನ್ನು ಓಡಾಡಲು ಬಿಡೋಲ್ಲ. ಸಣ್ಣ ಪಾತ್ರಗಳನ್ನು ಮಾಡಿದ್ದ ನನ್ನನ್ನು ನೀವು ಇಲ್ಲಿಗೆ ತಂದು ನಿಲ್ಲಿಸಿದ್ದೀರಾ. ನಿಮ್ಮ ಪ್ರೀತಿ ಹೀಗೆ ಮುಂದುವರಿಯಲಿ ಎಂದರು. ಇತ್ತ ನಟ ದರ್ಶನ್ ಆಗಮಿಸುತ್ತಿದಂತೆ ಕಾರ್ಯಕ್ರಮದಲ್ಲಿ ಅಭಿಮಾನಿಗಳು ಮತ್ತಷ್ಟು ಸಂತಸಗೊಂಡು ಸ್ವಾಗತಿಸಿದರು.

    ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡ ಆತ್ಮೀಯರು: ವಿಧಾನಸಭಾ ಚುನಾವಣೆಯ ಬಳಿಕ ಒಮ್ಮೆಯೂ ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳದ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಹೆಚ್ ಸಿ ಮಹದೇವಪ್ಪ ಅವರು ಮೊದಲ ಬಾರಿಗೆ ಒಟ್ಟಿಗೆ ಕಾಣಿಸಿಕೊಂಡರು. ಈ ಹಿಂದೆ ಹಲವು ಬಾರಿ ನಮ್ಮ ಮಧ್ಯೆ ಯಾವುದೇ ಬಿನ್ನಭಿಪ್ರಾಯ ಇಲ್ಲ ಎಂದು ಹೇಳಿದ್ದ ನಾಯಕರು ಒಮ್ಮೆಯೂ ಸಾರ್ವಜನಿಕವಾಗಿ ಒಟ್ಟಾಗಿ ಕಾಣಿಸಿಕೊಂಡಿರಲಿಲ್ಲ. ಇಂದು ಸುತ್ತೂರು ವೇದಿಕೆಯಲ್ಲಿ ಹಲವು ದಿನಗಳ ನಂತರ ಭಾಗವಹಿಸಿದ್ದರು. ಸುತ್ತೂರು ಶ್ರೀಗಳ ಅಕ್ಕಪಕ್ಕದಲ್ಲಿ ಕುಳಿತು ಇಬ್ಬರು ಪರಸ್ಪರ ಮಾತುಕತೆ ನಡೆಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಕೇಕ್ ಕತ್ತರಿಸಿದ ‘ಯಜಮಾನ’

    ಕೇಕ್ ಕತ್ತರಿಸಿದ ‘ಯಜಮಾನ’

    ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ಮುಂದಿನ ಬಹು ನಿರೀಕ್ಷಿತ ಚಿತ್ರ ‘ಯಜಮಾನ’ ಸಿನಿಮಾದ ಶೂಟಿಂಗ್ ಸೆಟ್ಟಲ್ಲೇ ಹೊಸ ವರ್ಷ ಆಚರಿಸಿದ್ದಾರೆ.

    ನಗರದಲ್ಲಿ ‘ಯಜಮಾನ’ ಸಿನಿಮಾದ ಕೊನೆಯ ಹಾಡಿನ ಶೂಟಿಂಗ್ ನಡೆಯುತ್ತಿದ್ದು ಈ ವೇಳೆ ದರ್ಶನ್ ಯಜಮಾನ ಚಿತ್ರ ತಂಡದೊಂದಿಗೆ ಕೇಕ್ ಕಟ್ ಮಾಡುವುದರ ಮೂಲಕ ಹೊಸ ವರ್ಷವನ್ನ ಸ್ವಾಗತ ಮಾಡಿದರು.

    ಈ ಹಿಂದೆ ಹಾಡಿನ ಶೂಟಿಂಗ್‍ಗಾಗಿ ಸ್ವೀಡನ್ ತೆರಳಿದ್ದ ದರ್ಶನ್, ಅಂಬಿ ನಿಧನದ ಸುದ್ದಿ ತಿಳಿಯುತ್ತಿದಂತೆ ಶೂಟಿಂಗ್ ಪ್ಯಾಕ್ ಅಪ್ ಮಾಡಿ ವಾಪಸ್ಸಾಗಿದ್ರು. ಹೀಗಾಗಿ ಬಾಕಿ ಇದ್ದ ಹಾಡಿನ ಶೂಟಿಂಗ್ ಬೆಂಗಳೂರಿನಲ್ಲಿ ಸೆಟ್ ಹಾಕಿ ಚಿತ್ರೀಕರಣ ಮಾಡಲಾಗುತ್ತಿದೆ. ಭಟ್ರ ಸಾಹಿತ್ಯವಿರುವ `ಆಗೋಯ್ತು ಮರ್ಯಾದೆ ಸಸ್ತಾ ಮಾಲು’ ಪದಕ್ಕೆ ವಿ.ಹರಿಕೃಷ್ಯ ಸಂಗೀತ ನೀಡಿರೋ ಹಾಡಿನ ಚಿತ್ರೀಕರಣ ನಡೆಯುತ್ತಿದೆ. ಹರಿಕೃಷ್ಣ ಹಾಗೂ ಪಿ.ಕುಮಾರ್ ನಿರ್ದೇಶನದ ಯಜಮಾನ ಚಿತ್ರವನ್ನ ಶೈಲಜಾ ನಾಗ್ ನಿರ್ಮಿಸಿದ್ದು, ಬಿ. ಸುರೇಶ್ ಹಾಗೂ ಅವರ ಪತ್ನಿ ಶೈಲಜ ನಾಗ್ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಸದ್ಯ ದರ್ಶನ್‍ಗೆ ನಾಯಕಿಯಾಗಿ ರಶ್ಮಿಕಾ ಮಂದಣ್ಣ ಹಾಗೂ ತಾನ್ಯ ಹೋಪ್ ಕಾಣಿಸಿಕೊಳ್ಳುತ್ತಿದ್ದಾರೆ.

    ಇತ್ತ ಅಭಿಮಾನಿಗಳಿಗೆ ಹೊಸ ವರ್ಷದ ಶುಭಾಶಯ ಕೋರಿ ಟ್ವೀಟ್ ಮಾಡಿರುವ ದರ್ಶನ್, ಹೊಸ ವರ್ಷವೂ ನಿಮ್ಮ ಬಾಳಲ್ಲಿ ಹೊಸಬೆಳಕು ಮೂಡಿಸಿ ಸುಂದರ ಭವಿಷ್ಯದೆಡೆಗೆ ನಿಮ್ಮನ್ನು ಕರೆದೊಯ್ಯಲಿ. ನಾಡಿನ ಸಮಸ್ತ ಜನತೆಗೆ ನಿಮ್ಮ ದಾಸ ದರ್ಶನ್ ಕಡೆಯಿಂದ ಹೊಸ ಹುರುಪಿನಿಂದ ಕೂಡಿರುವ ಹೊಸ ವರ್ಷದ ಹಾರ್ದಿಕ ಶುಭಾಶಯಗಳು ಎಂದು ಬರೆದುಕೊಂಡಿದ್ದಾರೆ. ಇತ್ತ ದರ್ಶನ್ ಪತ್ನಿ ಈ ಬಾರಿ ಕೊಂಚ ಭಿನ್ನವಾಗಿ ಹೊಸವರ್ಷದ ಶುಭಾಶಯ ತಿಳಿಸಿದ್ದು, ಹುಲಿಯೊಂದಿಗೆ ಕುಳಿರುತಿರುವ ತಮ್ಮ ಫೋಟೋ ಹಾಕಿ ವಿಶ್ ಮಾಡಿದ್ದಾರೆ.

     

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಚಾಮುಂಡಿ ತಾಯಿ ಆಶೀರ್ವಾದ ಪಡೆದ ನಟ ದರ್ಶನ್ ದಂಪತಿ

    ಚಾಮುಂಡಿ ತಾಯಿ ಆಶೀರ್ವಾದ ಪಡೆದ ನಟ ದರ್ಶನ್ ದಂಪತಿ

    ಮೈಸೂರು: ಕಾರು ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಬಳಿಕ ಡಿಸ್ಚಾರ್ಜ್ ಆಗಿದ್ದ ನಟ ದರ್ಶನ್ ಇಂದು ಪತ್ನಿ ವಿಜಯಲಕ್ಷ್ಮೀ ಅವರೊಂದಿಗೆ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ದೇವಿಯ ಆಶೀರ್ವಾದ ಪಡೆದಿದ್ದಾರೆ.

    ಚಾಮುಂಡಿ ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ ದರ್ಶನ್ ದಂಪತಿ ಬಳಿಕ ಚಾಮುಂಡಿ ಬೆಟ್ಟದ ಪ್ರಧಾನ ಅರ್ಚಕರಾದ ಶಶಿಶೇಖರ್ ದೀಕ್ಷಿತ್ ಅವರ ನಿವಾಸಕ್ಕೆ ಭೇಟಿ ನೀಡಿದ್ದರು. ಈ ವೇಳೆ ಕುಟುಂಬಸ್ಥರ ಜೊತೆ ಕುಶಲೋಪರಿ ವಿಚಾರಿಸಿದರು. ಕೆಲ ಸ್ನೇಹಿತರು ಕೂಡಾ ದರ್ಶನ್ ಗೆ ಸಾಥ್ ನೀಡಿದ್ದರು.

     

    ಶನಿವಾರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದ ದರ್ಶನ್ ಅವರ ಬಲಗೈ ಮೂಳೆ ಮುರಿದಿದ್ದು, ಪ್ಲೇಟ್ ಅಳವಡಿಸಲಾಗಿದೆ. ಆಸ್ಪತ್ರೆಯಿಂದ ಹೊರ ಬಂದ ಬಳಿಕ ಮಾತನಾಡಿದ್ದ ದರ್ಶನ್ ಆಸ್ಪತ್ರೆಯಲ್ಲಿ ವೈದ್ಯರು ಉತ್ತಮ ಚಿಕಿತ್ಸೆ ನೀಡಿದ್ದಾರೆ. ನಾನು ಚೇತರಿಸಿಕೊಳ್ಳಲು ಹೆಚ್ಚಿನ ಸಮಯ ಬೇಕಾಗಿಲ್ಲ. ಒಂದು ತಿಂಗಳ ವಿಶ್ರಾಂತಿ ಬಳಿಕ ಮತ್ತೆ ಜಿಮ್ ಮಾಡುತ್ತೇನೆ ಎಂದು ತಿಳಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ದರ್ಶನ್ ಅಪಘಾತವಾಗಿದ್ದ  ಕಾರ್ ಮಿಸ್ಸಿಂಗ್ ಸ್ಟೋರಿಯ ಇನ್‍ಸೈಡ್ ಸ್ಟೋರಿ ಇಲ್ಲಿದೆ

    ದರ್ಶನ್ ಅಪಘಾತವಾಗಿದ್ದ ಕಾರ್ ಮಿಸ್ಸಿಂಗ್ ಸ್ಟೋರಿಯ ಇನ್‍ಸೈಡ್ ಸ್ಟೋರಿ ಇಲ್ಲಿದೆ

    ಬೆಂಗಳೂರು: ಮೈಸೂರಲ್ಲಿ ಅಪಘಾತಗೊಂಡು ಬಳಿಕ ನಾಪತ್ತೆಯಾಗಿದ್ದ ನಟ ದರ್ಶನ್ ಸಂಚರಿಸುತ್ತಿದ್ದ ಕಾರು ಶ್ರೀರಂಗಪಟ್ಟಣದ ಸ್ನೇಹಿತನ ತೋಟದ ಮನೆಯಲ್ಲಿ ಪತ್ತೆಯಾಗಿದೆ.

    ಮೈಸೂರಿನಲ್ಲಿ ನಡೆದ ಅಪಘಾತದ ಬಳಿಕ ಆಡಿ ಕ್ಯೂ7 ಕಾರನ್ನು ಸದ್ಯ ಶ್ರೀರಂಗಪಟ್ಟಣದ ತೋಟದ ಮನೆಗೆ ತೆಗೆದುಕೊಂಡು ಹೋಗಿದ್ದು ಯಾರು ಹಾಗೂ ಏಕೆ? ಯಾರಿಗೂ ತಿಳಿಯದಂತೆ ತೆಗೆದುಕೊಂಡು ಹೋಗಿದ್ದು ಏಕೆ ಎನ್ನುವ ಪ್ರಶ್ನೆ ಎದ್ದಿದೆ. ಅಷ್ಟೇ ಅಲ್ಲದೇ ಅಪಘಾತವಾದ ಬಳಿಕ ಪ್ರಕರಣವನ್ನು ಮುಚ್ಚಿ ಹಾಕಲು ಪೊಲೀಸರೇ ಸಹಕರಿಸಿದ್ರಾ ಎನ್ನುವ ಪ್ರಶ್ನೆಯೂ ಎದ್ದಿದೆ. ಇನ್ನು ಅಚ್ಚರಿ ಎಂಬಂತೆ ಸದ್ಯ ಪತ್ತೆಯಾಗಿರುವ ಕಾರಿನ ನೋಂದಣಿ ಫಲಕ ಕೂಡ ನಾಪತ್ತೆಯಾಗಿದೆ.

    ಅಪಘಾತ ನಡೆದ ಬಳಿಕ ಕಾರು ನಾಪತ್ತೆಯಾಗಿತ್ತು. ಸದ್ಯ ಪತ್ತೆಯಾಗಿರುವ ಕಾರು ಸಂಪೂರ್ಣವಾಗಿ ಹಾಳಾಗಿದ್ದು, ಕಾರಿನ ಒಳಭಾಗದಲ್ಲಿ ರಕ್ತದ ಕಲೆಗಳು ಕೂಡ ಪತ್ತೆಯಾಗಿದೆ. ಕಾರು ನಾಪತ್ತೆ ಆಗಿರುವ ಕುರಿತು ಮಾಧ್ಯಮಗಳಲ್ಲಿ ವರದಿಯಾಗುತ್ತಿದಂತೆ ಎಚ್ಚೆತ್ತ ಮೈಸೂರು ನಗರದ ಪೊಲೀಸ್ ಆಯುಕ್ತ ಸುಬ್ರಹ್ಮಣ್ಯೇಶ್ವರ ರಾವ್ ಅವರು ಕಾರನ್ನು ಠಾಣೆಗೆ ಹಾಜರು ಪಡಿಸುವಂತೆ ಸೂಚಿಸಿದ್ದಾರೆ. ಇದಾದ ಬಳಿಕ ಕಾರನ್ನು ಮೈಸೂರಿನ ವಿವಿಪುರಂ ಪೊಲೀಸ್ ಠಾಣೆಯ ಎದುರು ತಂದು ನಿಲ್ಲಿಸಲಾಗಿದೆ.

    ಅಪಘಾತವಾದ ಬಳಿಕ ಕಾರನ್ನು ಪೊಲೀಸರು ವಶಕ್ಕೆ ಪಡೆದು ಠಾಣೆಗೆ ಹಾಜರು ಪಡಿಸದೇ ಬೇರೆಡೆ ತೆಗೆದುಕೊಂಡು ಹೋಗಲು ಅನುಮತಿ ಕೊಟ್ಟಿದ್ದು ಹೇಗೆ ಎಂಬ ಪ್ರಶ್ನೆ ಮೂಡಿದೆ. ಅಲ್ಲದೇ ಅಪಘಾತ ನಡೆದ ವೇಳೆ ಸ್ಥಳದಲ್ಲಿದ್ದ ಸಾರ್ವಜನಿಕರು, ಅಪಘಾತವಾದ ಕಾರಿನಿಂದ ಕೆಲ ಬ್ಯಾಗ್‍ಗಳನ್ನು ದರ್ಶನ್ ಸ್ನೇಹಿತರು ಬೇರೆಂದು ಕಾರಿಗೆ ತುಂಬಿ ತೆಗೆದುಕೊಂಡು ಹೋಗುತ್ತಿದ್ದರು. ಈ ವೇಳೆ ಪೊಲೀಸರು ಕೂಡ ಸ್ಥಳದಲ್ಲಿ ಇದ್ದರು. ಬಳಿಕವೇ ಕಾರನ್ನು ತೆಗೆದುಕೊಂಡು ಹೋಗಲಾಯಿತು ಎಂದು ಮಾಹಿತಿ ನೀಡಿದ್ದಾರೆ.

    ಉಳಿದಂತೆ ಭಾನುವಾರ ಮೈಸೂರು ಮೃಗಾಲಯಕ್ಕೆ ಭೇಟಿ ನೀಡಿದ್ದ ದರ್ಶನ್ ಅವರು ಆಗಮಿಸಿದ್ದ ಕಾರು ಹಾಗೂ ಇಂದು ತೆರಳುತ್ತಿದ್ದ ಕಾರು ಒಂದೇ ಆಗಿದ್ದರೂ ನಂಬರ್ ಪ್ಲೇಟ್ ಮಿಸ್ ಆಗಿದ್ದು ಹೇಗೆ ಎಂಬುದು ಕುತೂಹಲ ಮೂಡಿಸಿದೆ. ಉಳಿದಂತೆ ಘಟನೆ ಸಂಬಂಧ 14 ಗಂಟೆಗಳ ಬಳಿಕ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಮೈಸೂರಿನ ಭೇಟಿ ವೇಳೆ ಆಡಿ ಕ್ಯೂ7 ಕಾರನ್ನು ದರ್ಶನ್ ಬಳಸಿದ್ದರು. ಕಾರಿನ ಸಂಖ್ಯೆ ಕೆಎ-51 ಝೆಡ್-7999 ಆಗಿದ್ದು ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಆರ್‍ಟಿಓ ಕಚೇರಿಯಲ್ಲಿ 2009 ಮೇ 29 ರಂದು ಶಾಸಕ ಸಂದೇಶ ನಾಗರಾಜ್ ಅವರ ಮಾಲೀಕತ್ವದಲ್ಲಿ ನೋಂದಣಿಯಾಗಿದೆ.

    ಈ ಕುರಿತು ಮಾಹಿತಿ ನೀಡಿದ ಪೊಲೀಸ್ ಆಯುಕ್ತ ಸುಬ್ರಹ್ಮಣ್ಯೇಶ್ವರ ರಾವ್ ಅವರು, ಅಪಘಾತದ ಬಳಿಕ ವಾಹನ ಬೆಂಗಳೂರಿಗೆ ಏಕೆ ರವಾನೆ ಮಾಡಿದ್ದಾರೆ ಎಂಬ ಬಗ್ಗೆ ಮಾಹಿತಿ ಇಲ್ಲ. ಸದ್ಯ ವಾಪಸ್ ವಾಹನ ತರಿಸುವಂತೆ ಸೂಚನೆ ನೀಡಿದ್ದೇವೆ. ವಾಹನ ಯಾರು ಚಾಲನೆ ಮಾಡುತ್ತಿದ್ದರು ಎನ್ನುವುದರ ಬಗ್ಗೆಯೂ ಮಾಹಿತಿ ಇಲ್ಲ. ಘಟನೆ ಕುರಿತು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದೇವೆ. ರಾಯ್ ಎಂಬ ವ್ಯಕ್ತಿ ಕಾರು ಚಲಾಯಿಸುತ್ತಿದ್ದರು ಎಂದು ದರ್ಶನ್ ಸ್ನೇಹಿತರು ಹೇಳಿದ್ದಾರೆ. ತನಿಖೆ ಬಳಿಕ ಈ ಕುರಿತು ಸಂಪೂರ್ಣ ಮಾಹಿತಿ ತಿಳಿಸಲಾಗುತ್ತದೆ ಎಂದು ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಅರಮನೆ ಅಂಗಳದಲ್ಲಿ ಸ್ಯಾಂಡಲ್ ವುಡ್ ನಟರ ಕಲರವ

    ಅರಮನೆ ಅಂಗಳದಲ್ಲಿ ಸ್ಯಾಂಡಲ್ ವುಡ್ ನಟರ ಕಲರವ

    ಮೈಸೂರು: ಈ ಬಾರಿಯ ದಸರಾ ಹಬ್ಬದ ಸಿದ್ಧತೆಗಳು ನಡೆಯುತ್ತಿರುವ ನಡುವೇ ಸ್ಯಾಂಡಲ್ ವುಡ್ ನಟರ ದಂಡು ಮೈಸೂರು ಅರಮನೆ ಅಂಗಳಕ್ಕೆ ಆಗಮಿಸಿದ್ದು, ಹಬ್ಬದ ಸಂಭ್ರಮಕ್ಕೂ ಮುನ್ನವೇ ಸಂತಸ ವಾತಾರಣ ನಿರ್ಮಾಣವಾಗಲು ಕಾರಣವಾಯಿತು.

    ಚಾಲೆಂಜಿಗ್ ಸ್ಟಾರ್ ದರ್ಶನ್, ಸೃಜನ್ ಲೋಕೇಶ್, ಪ್ರಜ್ವಲ್ ದೇವರಾಜ್, ಹಾಸ್ಯ ನಟರಾದ ವಿಶ್ವ, ಮಂಡ್ಯ ರಮೇಶ್ ಸೇರಿದಂತೆ ಹಲವು ನಟರು ಇಂದು ಅರಮನೆ ಆವರಣಕ್ಕೆ ಆಗಮಿಸಿದ್ದರು. ಈ ವೇಳೆ ಗಜಪಡೆ ಕಂಡು ಖುಷಿ ಪಟ್ಟರು. ಅಂಬಾರಿ ಆನೆ ಅರ್ಜುನನ್ನು ಕಂಡ ದರ್ಶನ್, ಅದರ ಮೈಸವರಿ ಖುಷಿ ಪಟ್ಟರು. ಬಳಿಕ ಗಜಪಡೆಯೊಂದಿಗೆ ಆಗಮಿಸಿರುವ ಕಾವಾಡಿ ಮತ್ತು ಮಾವುತರ ಕುಟುಂಬಸ್ಥರನ್ನ ಭೇಟಿ ಮಾಡಿ ಕುಶಲೋಪರಿ ವಿಚಾರಿಸಿದರು.

    ನಟ ದರ್ಶನ್ ಇದೇ ವೇಳೆ ಮಾವುತರು ಮತ್ತು ಕಾವಾಡಿ ಕುಟುಂಬಕ್ಕೆ ಆತಿಥ್ಯ ಕಾರ್ಯಕ್ರಮ ಆಯೋಜಿಸಿದ್ದರು. ಈ ಆತಿಥ್ಯ ಕಾರ್ಯಕ್ರಮದಲ್ಲಿ ಸಿನಿತರೆಯಾರರೊಂದಿಗೆ ರಾಜವಂಶಸ್ಥ ಯದುವೀರ್ ಕೂಡ ಭಾಗವಹಿಸಿದ್ದು ವಿಶೇಷವಾಗಿತ್ತು. ಈ ಕಾರ್ಯಕ್ರಮದಲ್ಲಿ ಎಲ್ಲರೊಂದಿಗೆ ಊಟ ಮಾಡುವ ಮೂಲಕ ನಟರು ತಮ್ಮ ಸರಳತೆ ಮೆರೆದರು.

    ಈ ವೇಳೆ ಮಾತನಾಡಿದ ಯದುವೀರ್, ನಟ ದರ್ಶನ್ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು. ಎಲ್ಲರು ದಸರಾ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದು ಸಂತಸ ತಂದಿದೆ. ಈ ಬಾರಿ ಅರಮನೆಯಲ್ಲಿ ದಸರಾ ಕಾರ್ಯಕ್ರಮಗಳು ಎಂದಿನಂತೆ ನಡೆಯಲಿದ್ದು, ಆದ್ಯವೀರ್ ಕೂಡ ಈ ಬಾರಿಯ ದಸರಾ ಕ್ಷಣಗಳಿಗೆ ಭಾಗಿಯಾಗುತ್ತಿರುವುದು ಮತ್ತಷ್ಟು ಸಂತಸ ತಂದಿದೆ. ಅಕ್ಟೋಬರ್ 10 ರಿಂದ ಅರಮನೆಯಲ್ಲಿ ದಸರಾ ಕಾರ್ಯಕ್ರಮಗಳು ಪ್ರಾರಂಭವಾಗಲಿದ್ದು, ವಿಜಯ ದಶಮಿ 19ಕ್ಕೆ ನಿಗಧಿಯಾಗಿದೆ. ಪ್ರತಿ ವರ್ಷದಂತೆ ಎಲ್ಲಾ ಕಾರ್ಯಕ್ರಮಗಳು ನಡೆಯುತ್ತವೆ. ಅಲ್ಲದೇ ದಸರಾ ಕಾರ್ಯಕ್ರಮಗಳು ಈಗಾಗಲೇ ಚುರುಕುಗೊಂಡಿವೆ ಎಂದು ತಿಳಿಸಿದರು.

    ಆತಿಥ್ಯ ಕಾರ್ಯಕ್ರಮದ ಬಳಿಕ ನಟ ದರ್ಶನ್ ಹಾಗೂ ಯದುವೀರ್, ಮಾವುತ ಮತ್ತು ಕಾವಾಡಿ ಕುಟುಂಬಸ್ಥರಿಗೆ ಹೊಸ ಬಟ್ಟೆ, ಬೆಡ್ ಶೀಟ್, ಮಕ್ಕಳಿಗೆ ಶಾಲಾ ಬ್ಯಾಗ್ ವಿತರಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

  • ಪ್ರಾಣಿಗಳನ್ನು ದತ್ತು ಪಡೆದ ದರ್ಶನ್, ಸೃಜನ್ ಲೋಕೇಶ್, ದೇವರಾಜ್ ಕುಟುಂಬ!

    ಪ್ರಾಣಿಗಳನ್ನು ದತ್ತು ಪಡೆದ ದರ್ಶನ್, ಸೃಜನ್ ಲೋಕೇಶ್, ದೇವರಾಜ್ ಕುಟುಂಬ!

    ಮೈಸೂರು: ನಟರಾದ ದರ್ಶನ್, ಸೃಜನ್ ಲೋಕೇಶ್ ಹಾಗೂ ದೇವರಾಜ್ ಕುಟುಂಬಸ್ಥರು ಇಂದು ಪ್ರಾಣಿಗಳ ದತ್ತು ಸ್ವೀಕಾರ ಮಾಡಿದ್ರು. ಮೈಸೂರಿನ ಚಾಮರಾಜೇಂದ್ರ ಮೃಗಾಲಯದಲ್ಲಿ ಪ್ರಾಣಿಗಳ ದತ್ತು ಪಡೆದಿದ್ದು, ನಟ ದೇವರಾಜ್ ಕುಟುಂಬ ಚಿರತೆ, ದರ್ಶನ್ ಮತ್ತು ಸೃಜನ್ ಲೋಕೇಶ್ ರಿಂದ ಜಿರಾಫೆ ಮರಿಯನ್ನು ದತ್ತು ಪಡೆಯಲಾಯಿತು.

    ಈ ವೇಳೆ ಜಿರಾಫೆ ಮರಿಗೆ `ತೂಗುಲೋಕ್’ ಎಂದು ಸೃಜನ್ ಲೋಕೇಶ್ ನಾಮಕರಣ ಮಾಡಿದ್ರು. ಈ ಹಿಂದೆ ಇಬ್ಬರು ಸೇರಿ ದತ್ತು ಪಡೆದ ಹುಲಿಗಳು ನಮ್ಮಂತೆಯೆ ಜೊತೆಯಾಗಿ ನಡೆಯುತ್ತಿವೆ. ಮೃಗಾಲಯದಲ್ಲಿ ಹುಲಿಗಳ ವಿಹಾರ ಕಂಡು ಸೃಜನ್ ಸಂತಸ ವ್ಯಕ್ತಪಡಿಸಿದ್ರು. ಹಾಸ್ಯ ನಟ ಕೀರ್ತಿ ಮೊಸಳೆಯನ್ನು ದತ್ತು ಸ್ವೀಕರಿಸಿದ್ರು.

    ಇತ್ತೀಚೆಗಷ್ಟೇ ದರ್ಶನ್ ಅವರು ಹುಲಿಯೊಂದನ್ನು ದತ್ತು ಪಡೆದಿದ್ದು, ಅದಕ್ಕೆ `ವಿನೀಶ್’ ಅಂತ ಹೆಸರಿಟ್ಟಿದ್ದಾರೆ. ನಾನು ಒಂದು ಹುಲಿನ ದತ್ತು ಪಡೆದುಕೊಂಡಿದ್ದು, ಅದರ ಹೆಸರು `ಅರ್ಜುನ’ ಎಂಬುದಾಗಿ ಇಟ್ಟಿದ್ದೇನೆ. ಒಟ್ಟಿನಲ್ಲಿ ಇಂದು ಎಲ್ಲರೂ ಸೇರಿ ಒಂದಷ್ಟು ಪ್ರಾಣಿಗಳನ್ನು ದತ್ತು ಪಡೆದುಕೊಂಡಿರುವುದು ಸಂತಸದ ವಿಚಾರ ಅಂತ ಸೃಜನ್ ಲೋಕೇಶ್ ತಿಳಿಸಿದ್ರು. ಇದನ್ನೂ ಓದಿ: ಕುಚುಕು ಗೆಳೆಯನನ್ನ ಹಿಂಬಾಲಿಸಿದ ಸೃಜನ್‍ಗೆ ದರ್ಶನ್ ಅಭಿನಂದನೆ

    ದರ್ಶನ್ ಕರೆ:
    ಇಂದು ನಾವು 5 ಸಾವಿರ ಅಥವಾ 10 ಸಾವಿರ ರೂ. ಗಳನ್ನು ಎಲ್ಲೋ ಕಳೆದು ಬಿಡ್ತೀವಿ. ಹೀಗಾಗಿ 1 ಸಾವಿರದಿಂದ ಹಿಡಿದು 1 ಲಕ್ಷದ 75 ಸಾವಿರದವರೆಗೆ ಪ್ರಾಣಿಗಳನ್ನು ಇಲ್ಲಿ ದತ್ತು ಪಡೆದುಕೊಳ್ಳಬಹುದು. ಅಷ್ಟು ಬೇಡ 10 ಅಥವಾ 20 ಸಾವಿರ ಖರ್ಚು ಮಾಡಿ ಜನರು ಪ್ರಾಣಿಗಳನ್ನು ದತ್ತು ಪಡೆದ್ರೆ ಅವುಗಳ ಸಂತತಿನೂ ಉಳಿಯುತ್ತದೆ. ಹಾಗೆಯೇ ಪ್ರಾಣಿಗಳನ್ನು ಸಾಕುವ ಖುಷಿಯೂ ನಮ್ಮದಾಗುತ್ತದೆ ಅಂತ ಸಲಹೆ ನೀಡಿದ್ರು.

    ಪ್ರಾಣಿಗಳನ್ನು ಮನೆಯಲ್ಲಿ ಸಾಕಲು ಸಾಧ್ಯವಿಲ್ಲ. ಹೀಗಾಗಿ ಇಲ್ಲೇ ಒಂದು ಪ್ರಾಣಿಯನ್ನು ಸಾಕಬಹುದು. ಹೀಗಾಗಿ ಎಲ್ಲಾ ಜನರು ಇಂತಹ ಒಂದು ಪ್ರಯೋಗಕ್ಕೆ ಕೈ ಜೋಡಿಸಿ ಅಂತ ದರ್ಶನ್ ಇದೇ ವೇಳೆ ಮನವಿ ಮಾಡಿಕೊಂಡರು.

    ಅರಣ್ಯ ಇಲಾಖೆ ರಾಯಾಭಾರಿಯಾದ ನಂತರ ಉತ್ತಮ ಗಾಳಿ ಸಿಕ್ಕಿದೆ. ಗಿಡ ಮರ ನೆಟ್ಟು ಸೆಲ್ಫಿ ತೆಗೆದುಕೊಳ್ಳುವುದು ದೊಡ್ಡದಲ್ಲ. ಕ್ರಮವಾಗಿ ಅರಣ್ಯ ಬೆಳೆಸಬೇಕು. ನಾವೂ ಅರಣ್ಯಕ್ಕೆ ಅತಿಕ್ರಮ ಪ್ರವೇಶ ಮಾಡಿದ್ದರಿಂದ ಪ್ರಾಣಿಗಳು ನಾಡಿಗೆ ಬರುತ್ತಿದೆ. ಯುವಕರು ದುಡ್ಡನ್ನು ವಿಕೆಂಡ್ ನೆಪದಲ್ಲಿ ಖರ್ಚು ಮಾಡುತ್ತಾರೆ. ಅದೇ ಹಣವನ್ನು ಉಳಿಸಿ ಪ್ರಾಣಿಗಳನ್ನ ದತ್ತು ಪಡೆಯಲಿ. ಕಾಡು ಪ್ರಾಣಿಗಳನ್ನ ಮನೆಯಲ್ಲಿ ಸಾಕಲು ಸಾಧ್ಯವಿಲ್ಲ. ಈ ಕಾರಣದಿಂದ ಮೃಗಾಲಯಕ್ಕೆ ಬಂದು ದತ್ತು ಪಡೆಯಿರಿ ಅಂತ ಹೇಳುವ ಮೂಲಕ ಪ್ರಾಣಿಗಳ ದತ್ತು ಸ್ವೀಕಾರ ಮಾಡಲು ಯುವಕರಿಗೆ ನಟ ದರ್ಶನ್ ಇದೇ ವೇಳೆ ಕರೆ ನೀಡಿದ್ರು.

    ದರ್ಶನ್ ಪ್ರೋತ್ಸಾಹ ಅಂದ್ರು ನಟ ದೇವರಾಜ್ ಪತ್ನಿ:
    ಇದೇ ವೇಳೆ ನಟ ಪ್ರಜ್ವಲ್ ತಾಯಿ ಮಾತನಾಡಿ, ತುಂಬಾ ಇಷ್ಟವಾಯಿತು. ನನ್ನ ಮಗ ದರ್ಶನ್ ಸರ್ ಅವರು ನನಗೆ ಮಾರ್ಗದರ್ಶನ ಮಾಡಿದ್ರು. ಹೀಗಾಗಿ ನಾನು ಚಿರತೆಯನ್ನು ದತ್ತು ಪಡೆದುಕೊಂಡಿದ್ದೇನೆ. ನನಗೆ ಪ್ರಾಣಿಗಳೆಂದರೆ ನನಗೆ ಮೊದಲಿನಿಂದಲೂ ತುಂಬಾ ಇಷ್ಟ. ಇದೀಗ ಅದಕ್ಕೆ ಪ್ರೋತ್ಸಾಹ ಕೊಟ್ಟಿದ್ದು ನನ್ನ ಮಗ. ಹೀಗಾಗಿ ತುಂಬಾ ಸಂತೋಷವಾಗ್ತಿದೆ. ಇತ್ತೀಚೆಗಷ್ಟೆ ನಾನು ಪ್ರಾಣಿಗಳನ್ನು ನೋಡಿಕೊಂಡು ಬಂದಿದ್ದೇನೆ ಅಂತ ಹೇಳಿದ್ರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv