Tag: actor Darshan

  • ರೇಣುಕಾಸ್ವಾಮಿ ಕೊಲೆ ಕೇಸ್: ತಪ್ಪಿತಸ್ಥರಿಗೆ ಶಿಕ್ಷೆಯಾಗೋವರೆಗೂ ಪ್ರಾಮಾಣಿಕ ತನಿಖೆ ನಡೆಸಬೇಕು: ಬೊಮ್ಮಾಯಿ

    ರೇಣುಕಾಸ್ವಾಮಿ ಕೊಲೆ ಕೇಸ್: ತಪ್ಪಿತಸ್ಥರಿಗೆ ಶಿಕ್ಷೆಯಾಗೋವರೆಗೂ ಪ್ರಾಮಾಣಿಕ ತನಿಖೆ ನಡೆಸಬೇಕು: ಬೊಮ್ಮಾಯಿ

    ಬೆಂಗಳೂರು: ರೇಣುಕಾಸ್ವಾಮಿ ಕೊಲೆ (Renukaswamy Murder Case) ಗಂಭೀರ ಪ್ರಕರಣವಾಗಿದ್ದು, ಈ ಪ್ರಕರಣದಲ್ಲಿ ಆರೋಪಿಗಳಿಗೆ ಶಿಕ್ಷೆ ಸಿಗುವವರೆಗೂ ಅಧಿಕಾರಿಗಳು ಚುರುಕುತನ, ನಿಯತ್ತಿನ ತನಿಖೆ ನಡೆಸಬೇಕು ಎಂದು ಮಾಜಿ ಸಿಎಂ ಹಾಗೂ ಸಂಸದ ಬಸವರಾಜ ಬೊಮ್ಮಾಯಿ (Basavaraj Bommai) ಒತ್ತಾಯಿಸಿದರು.

    ಹುಬ್ಬಳ್ಳಿಯಲ್ಲಿ (Hubballi) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಮಾನವೀಯವಾಗಿ ವರ್ತಿಸುವ ಅಧಿಕಾರ ಯಾರಿಗೂ ಇಲ್ಲ. ಅಧಿಕಾರದಲ್ಲಿ ಇರುವವರು ಆಗಿರಬಹುದು, ಸೆಲೆಬ್ರಿಟಿ ಆಗಬಹುದು. ಯಾರಿಗೂ ವಿಶೇಷ ಅಧಿಕಾರ ಇಲ್ಲ. ಕಾನೂನಿನ ಮುಂದೆ ನಾವೆಲ್ಲರೂ ಸಮಾನರು. ಕಾನೂನನ್ನು ಕೈಗೆತ್ತಿಕೊಳ್ಳುವುದೇ ಅಪರಾಧ. ಅದು ಮರ್ಡರ್ ಆಗುವ ಮಟ್ಟಕ್ಕೆ ಹೋದರೆ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದು ಹೇಳಿದರು. ಇದನ್ನೂ ಓದಿ: ಶೀಘ್ರವೇ ಮೊಬೈಲ್ ಸಂಖ್ಯೆ, ಲ್ಯಾಂಡ್‌ಲೈನ್ ಸಂಖ್ಯೆಗೆ ಪಾವತಿಸಬೇಕು ಶುಲ್ಕ!

    ಹತ್ಯೆಯಾದ ರೇಣುಕಾಸ್ವಾಮಿ
    ಹತ್ಯೆಯಾದ ರೇಣುಕಾಸ್ವಾಮಿ

    ಕೊಲೆಯಲ್ಲಿ ಹಲವಾರು ರೀತಿ ಇವೆ. ಇದು ಸಂಚು ಮಾಡಿ ಮರ್ಡರ್ ಮಾಡಿರುವ ಪ್ರಕರಣ. ಇದೊಂದು ಗಂಭೀರ ಪ್ರಕರಣ. ದರ್ಶನ್ (Actor Darshan) ಪ್ರಕರಣದಲ್ಲಿ ಆರಂಭದಲ್ಲಿ ತನಿಖೆ ಚುರುಕಾಗಿ ನಡೆಯುತ್ತಿದೆ. ಕೊನೆಯವರೆಗೂ ಇದೇ ಚುರುಕುತನ, ನಿಯತ್ತು ತನಿಖೆಯಲ್ಲಿರಬೇಕು. ಹಾಗಾದಾಗ ಮಾತ್ರ ತಪ್ಪಿತಸ್ಥರಿಗೆ ಶಿಕ್ಷೆಯಾಗುತ್ತದೆ ಎಂದರು. ಇದನ್ನೂ ಓದಿ: ಮಹಾರಾಷ್ಟ್ರದಿಂದ ಮಾಂಜ್ರಾನದಿಗೆ ಅಪಾರ ಪ್ರಮಾಣದ ನೀರು ಬಿಡುಗಡೆ; ಬೀದರ್‌ ರೈತರ ಜಮೀನುಗಳಿಗೆ ನುಗ್ಗಿದ ನೀರು

    ಶಿಗ್ಗಾಂವಿಗೆ ಉಪಚುನಾವಣೆ ಪ್ರಕ್ರಿಯೆ ಪ್ರಾರಂಭವಾಗಿಲ್ಲ:
    ಇನ್ನು ಶಿಗ್ಗಾಂವಿ (Shiggavi) ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಪ್ರಕ್ರಿಯೆ ಪ್ರಾರಂಭವಾಗಿಲ್ಲ. ನಾನಿನ್ನು ರಾಜೀನಾಮೆ ಕೊಟ್ಟಿಲ್ಲ. ಇಂದಿಗೂ ನಾನು ಶಿಗ್ಗಾಂವಿ ಕ್ಷೇತ್ರದ ಶಾಸಕ. ನಾನು ರಾಜೀನಾಮೆ ಕೊಟ್ಟ ನಂತರ ಉಪಚುನಾವಣೆ ಪ್ರಕ್ರಿಯೆ ಪ್ರಾರಂಭವಾಗುತ್ತದೆ ಎಂದರು. ಇದನ್ನೂ ಓದಿ: ದೋಡಾ ಟೆರರಿಸ್ಟ್ ಅಟ್ಯಾಕ್ – 4 ಉಗ್ರರ ರೇಖಾಚಿತ್ರ ಬಿಡುಗಡೆ

    ತಮ್ಮ ಪುತ್ರನಿಗೆ ಉಪಚುನಾವಣೆಯಲ್ಲಿ ಟಿಕೆಟ್ ನೀಡುವ ವಿಚಾರದ ಕುರಿತು ಕೇಳಿದ ಪ್ರಶ್ನೆಗೆ, ಟಿಕೆಟ್ ವಿಚಾರದಲ್ಲಿ ಪಕ್ಷ ತೀರ್ಮಾನ ಮಾಡುತ್ತದೆ. ಪಕ್ಷ ಮಾಡುವ ತೀರ್ಮಾನಕ್ಕೆ ನಾವು ಬದ್ಧವಾಗಿರಬೇಕು. ಪಕ್ಷ ಯಾರಿಗೇ ಟಿಕೆಟ್ ಕೊಟ್ಟರೂ ಅವರ ಪರವಾಗಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು. ಇದನ್ನೂ ಓದಿ: ಅರುಣಾಚಲ ಪ್ರದೇಶದ ಸಿಎಂ ಆಗಿ ಸತತ 3ನೇ ಅವಧಿಗೆ ಪೆಮಾ ಖಂಡು ಪ್ರಮಾಣವಚನ ಸ್ವೀಕಾರ

  • ದರ್ಶನ್ ವಿರುದ್ಧ ರೌಡಿ ಶೀಟ್? – ಗೃಹಸಚಿವ ಪರಮೇಶ್ವರ್ ಹೇಳಿದ್ದೇನು?

    ದರ್ಶನ್ ವಿರುದ್ಧ ರೌಡಿ ಶೀಟ್? – ಗೃಹಸಚಿವ ಪರಮೇಶ್ವರ್ ಹೇಳಿದ್ದೇನು?

    ಬೆಂಗಳೂರು: ದರ್ಶನ್ ಪ್ರಕರಣ (Actor Darshan Case) ರಾಷ್ಟ್ರಮಟ್ಟದಲ್ಲಿ ಸದ್ದು ಮಾಡ್ತಿದೆ. ಪ್ರಕರಣದ ತನಿಖೆ ಚುರುಕುಗೊಂಡಿದ್ದು, ಸ್ಫೋಟಕ ರಹಸ್ಯಗಳು ಹೊರಬರುತ್ತಿವೆ. ಪ್ರಕರಣದ ವರದಿಯನ್ನು ಗೃಹ ಸಚಿವರು ಮುಖ್ಯಮಂತ್ರಿಗೆ ನೀಡಿದ್ದಾರೆ.

    ಇನ್ನೂ ಈ ಕುರಿತು ಮಾತನಾಡಿರುವ ಸಚಿವ ಜಿ. ಪರಮೇಶ್ವರ್ (G Parameshwara), ಪ್ರಕರಣದ ತನಿಖೆ ನಡೆಯುತ್ತಿದೆ, ಕಾನೂನು ಎಲ್ಲರಿಗೂ ಒಂದೇ ಆಗಿದೆ. ರೇಣುಕಾಸ್ವಾಮಿ, ಪವಿತ್ರಾಗೌಡ (Pavithra Gowda) ಅವರಿಗೆ ಸೋಶಿಯಲ್ ಮೀಡಿಯಾದಲ್ಲಿ ಅಶ್ಲೀಲ ಮೆಸೇಜ್ ಮಾಡಿದ್ದರಂತೆ, ಅದಕ್ಕೆ ಕಾನೂನು ಕ್ರಮ ಕೈಗೊಳ್ಳಬಹುದಿತ್ತು. ಕೊಲೆ ಮಾಡುವ ಹಂತಕ್ಕೆ ಹೋಗುವುದು ಸರಿಯಲ್ಲ ಎಂದಿದ್ದಾರೆ.

    ಇನ್ನೂ ಯಾವುದೇ ಪ್ರಭಾವಿಗಳು ದರ್ಶನ್ ಪರವಾಗಿ ಲಾಬಿ ಮಾಡಿಲ್ಲ. ಈ ಪ್ರಕರಣವನ್ನು ಸಿಬಿಐಗೆ ವಹಿಸುವ ಅಗತ್ಯವೂ ಇಲ್ಲ. ನಮ್ಮ ಪೊಲೀಸರೇ ತನಿಖೆ ನಡೆಸುತ್ತಿದ್ದಾರೆ. ರೇಣುಕಾಸ್ವಾಮಿ ಕುಟುಂಬಕ್ಕೆ ನೆರವು ನೀಡುವ ಬಗ್ಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದು ನುಡಿದಿದ್ದಾರೆ. ಇದನ್ನೂ ಓದಿ: ಕುವೈತ್ ಅಗ್ನಿ ದುರಂತದಲ್ಲಿ 40 ಮಂದಿ ಭಾರತೀಯರ ದುರ್ಮರಣ – ಮೋದಿ ಸಂತಾಪ

    ಇದೇ ವೇಳೆ ದರ್ಶನ್ ವಿರುದ್ಧ ರೌಡಿ ಶೀಟ್ ತೆರೆಯುವ ವಿಚಾರ ತೆರೆಯುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ದರ್ಶನ್ ಅವರದ್ದು ಇದೇ ಮೊದಲ ಪ್ರಕರಣವಲ್ಲ. ಹಿಂದೆಯೂ ಬೇರೆ ಬೇರೆ ಪ್ರಕರಣ ಕಂಡುಬಂದಿದೆ. ತನಿಖೆ ನಂತರ ಪೊಲೀಸರು ಏನು ಶಿಫಾರಸು ಮಾಡ್ತಾರೆ ನೋಡಬೇಕು. ರೌಡಿ ಶೀಟ್ ತೆರೆಯುವ ವಿಚಾರವನ್ನು ಪೊಲೀಸರು ನೋಡಿಕೊಳ್ತಾರೆ ಎಂದು ತಿಳಿಸಿದ್ದಾರೆ.

    ಇನ್ನೂ ದರ್ಶನ್-ಪವಿತ್ರಾಗೌಡ ಪರ ವಕೀಲ ನಾರಾಯಣಸ್ವಾಮಿ ಮಾತಾನಾಡಿ, ತಮ್ಮ ಕಕ್ಷಿದಾರರಿಬ್ಬರು ಅಮಾಯಕರು. ಅವರಿಗೆ ಏನು ಗೊತ್ತಿಲ್ಲ ಎಂದಿದ್ದಾರೆ. ರಾಜ್ಯಸಭಾ ಸದಸ್ಯರೂ ಆಗಿರುವ ನಟ ಜಗ್ಗೇಶ್ ಎಕ್ಸ್ ಖಾತೆ ಮೂಲಕ ಪ್ರತಿಕ್ರಿಯಿಸಿದ್ದು, `ರಾಮನಾಗು.. ರಾವಣನಾದರೇ ಅಂತ್ಯ ಎಂದಿದೆ ಸನಾತನ ಕೃತಿ.. ಮದಕ್ಕೆ ಕಾರುಣ್ಯದ ಅರಿವಿಲ್ಲ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಪ್ರಸಿದ್ಧರು, ಸೆಲೆಬ್ರಿಟಿಗಳೆಂದು ಬಿಡುವ ಪ್ರಶ್ನೆ ಇಲ್ಲ: ದರ್ಶನ್ ಕೇಸ್‌ಗೆ ಹೆಬ್ಬಾಳ್ಕರ್ ಪ್ರತಿಕ್ರಿಯೆ 

  • ಪ್ರಸಿದ್ಧರು, ಸೆಲೆಬ್ರಿಟಿಗಳೆಂದು ಬಿಡುವ ಪ್ರಶ್ನೆ ಇಲ್ಲ: ದರ್ಶನ್ ಕೇಸ್‌ಗೆ ಹೆಬ್ಬಾಳ್ಕರ್ ಪ್ರತಿಕ್ರಿಯೆ

    ಪ್ರಸಿದ್ಧರು, ಸೆಲೆಬ್ರಿಟಿಗಳೆಂದು ಬಿಡುವ ಪ್ರಶ್ನೆ ಇಲ್ಲ: ದರ್ಶನ್ ಕೇಸ್‌ಗೆ ಹೆಬ್ಬಾಳ್ಕರ್ ಪ್ರತಿಕ್ರಿಯೆ

    ಉಡುಪಿ: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಕಾನೂನು ಚೌಕಟ್ಟಿನಲ್ಲಿ ಎಲ್ಲಾ ಆಯಾಮದ ತನಿಖೆ ಆಗುತ್ತದೆ. ಈ ದೇಶದಲ್ಲಿ ರಾಷ್ಟ್ರಪತಿ, ಸೆಲೆಬ್ರಿಟಿ, ಪಂಚರ್ ಹಾಕುವವನಿಗೂ ಒಂದೇ ಕಾನೂನು. ಪ್ರಸಿದ್ದರು ದೊಡ್ಡವರು ಯಾರೇ ಇದ್ದರೂ ಬಿಡುವ ಪ್ರಶ್ನೆಯೇ ಇಲ್ಲ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಹೇಳಿದರು.

    ಕೊಲೆ ಪ್ರಕರಣದಲ್ಲಿ ಬಂಧಿತನಾಗಿರುವ ನಟ ದರ್ಶನ್ (Actor Darshan) ಕುರಿತಾಗಿ ಬುಧವಾರ ಉಡುಪಿಯಲ್ಲಿ ಪ್ರತಿಕ್ರಿಯಿಸಿದ ಅವರು, ಕಾನೂನು ಎಲ್ಲರಿಗೂ ಒಂದೇ. ಕಾನೂನು ಚೌಕಟ್ಟಿನಲ್ಲಿ ಎಷ್ಟೇ ದೊಡ್ಡವರಿದ್ದರೂ ಶಿಕ್ಷೆಯಾಗುತ್ತದೆ. ನೊಂದ ಕುಟುಂಬಕ್ಕೆ ನ್ಯಾಯ ಸಿಕ್ಕೇ ಸಿಗುತ್ತದೆ. ಈ ಸರ್ಕಾರ ಯಾವ ಭಾಗದ, ಯಾರ ಒತ್ತಡಕ್ಕೂ ಮಣಿಯುವುದಿಲ್ಲ ಎಂದರು. ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆಯಾದ ಶೆಡ್‌ನಲ್ಲಿ ಒಂದೂವರೆ ಗಂಟೆಗೂ ಹೆಚ್ಚು ಕಾಲ ಸ್ಥಳ ಮಹಜರು!

    ತಪ್ಪಿತಸ್ಥರಿಗೆ ಖಂಡಿತವಾಗಿ ಶಿಕ್ಷೆಯಾಗಿಯಾಗುತ್ತದೆ. ಸಂತ್ರಸ್ತ ಕುಟುಂಬದ ಜೊತೆ ಸರ್ಕಾರ ಆರ್ಥಿಕವಾಗಿಯೂ ಬೆಂಬಲಕ್ಕೆ ನಿಲ್ಲುತ್ತದೆ ಎಂದು ನುಡಿದರು. ಕೊಲೆ ಕೃತ್ಯದ ಸಮಗ್ರ ತನಿಖೆ ಆಗುತ್ತದೆ. ನೊಂದ ಕುಟುಂಬಕ್ಕೆ ನ್ಯಾಯ ನೀಡುವ ಕೆಲಸವನ್ನು ಪೊಲೀಸ್ ಇಲಾಖೆ ಮಾಡುತ್ತದೆ ಎಂದು ಭರವಸೆ ಮೂಡಿಸಿದರು.

    ರೇಣುಕಾಸ್ವಾಮಿ ಕೊಲೆ ಆರೋಪ ಪ್ರಕರಣದಲ್ಲಿ ನಟ ದರ್ಶನ್‌, ಪವಿತ್ರಾ ಗೌಡ ಸೇರಿದಂತೆ 13 ಮಂದಿಯನ್ನು ಪೊಲೀಸರು ಬಂಧಿಸಿದ್ದರು. ನಂತರ ಅವರನ್ನು ಕೋರ್ಟ್‌ ಮುಂದೆ ಹಾಜರುಪಡಿಸಿದರು. ಎಲ್ಲರನ್ನೂ 6 ದಿನಗಳ ಕಾಲ ಪೊಲೀಸ್‌ ಕಸ್ಟಡಿಗೆ ವಹಿಸಿ ನ್ಯಾಯಾಲಯ ಮಂಗಳವಾರ ಆದೇಶ ಹೊರಡಿಸಿದೆ. ಇದನ್ನೂ ಓದಿ: ದರ್ಶನ್ ನನ್ನ ಸ್ನೇಹಿತರು – ಕೊಲೆ ಕೇಸ್‌ನಲ್ಲಿ ಅರೆಸ್ಟ್ ಆಗಿರೋದು ಶಾಕ್ ಆಗ್ತಿದೆ: ದರ್ಶನ್ ಪುಟ್ಟಣ್ಣಯ್ಯ

  • ರೇಣುಕಾಸ್ವಾಮಿ ಕೊಲೆಯಾದ ಶೆಡ್‌ನಲ್ಲಿ ಒಂದೂವರೆ ಗಂಟೆಗೂ ಹೆಚ್ಚು ಕಾಲ ಸ್ಥಳ ಮಹಜರು!

    ರೇಣುಕಾಸ್ವಾಮಿ ಕೊಲೆಯಾದ ಶೆಡ್‌ನಲ್ಲಿ ಒಂದೂವರೆ ಗಂಟೆಗೂ ಹೆಚ್ಚು ಕಾಲ ಸ್ಥಳ ಮಹಜರು!

    – ಆರೋಪಿಗಳ ಸಾಲಿನಲ್ಲಿ ಕೈಕಟ್ಟಿ ನಿಂತಿದ್ದ ನಟ ದರ್ಶನ್

    ಬೆಂಗಳೂರು: ಕೊಲೆಯಾದ ಚಿತ್ರದುರ್ಗದ ರೇಣುಕಾಸ್ವಾಮಿ (Renukaswamy) ಅವರನ್ನಿರಿಸಿದ್ದ ಪಟ್ಟಣಗೆರೆಯ ಶೆಡ್‌ನಲ್ಲಿ ಪೊಲೀಸರು ಇಂದು (ಬುಧವಾರ) ಸ್ಥಳ ಮಹಜರು ನಡೆಸಿದ್ದಾರೆ. ಆರೋಪಿ ನಟ ದರ್ಶನ್ (Darshan), ಪವಿತ್ರಾ ಗೌಡ (Pavithra Gowda) ಸೇರಿದಂತೆ ಇತರ ಆರೋಪಿಗಳನ್ನ ಕರೆತಂದು ಕಾಮಾಕ್ಷಿ ಪಾಳ್ಯ ಪೊಲೀಸರು ಸ್ಥಳ ಮಹಜರು ನಡೆಸಿದರು.

    ಪೊಲೀಸ್ ಅಧಿಕಾರಿಗಳು ಹಾಗೂ ವಿಧಿವಿಜ್ಞಾನ ಪ್ರಯೋಗಾಲಯ ತಂಡ (FSL Team) ಸುಮಾರು ಒಂದೂವರೆಗಂಟೆಗೂ ಹೆಚ್ಚು ಕಾಲ ತಪಾಸಣೆ ನಡೆಸಿದೆ. ಕೊಲೆಯಾದ ರೇಣುಕಾಸ್ವಾಮಿ ಮೇಲೆ ಹಲ್ಲೆ ಮಾಡಿದ್ದ ಸ್ಥಳ, ದಿಕ್ಕು ಹಾಗೂ ಹಲ್ಲೆ ಬಳಿಕ ಆತ ಸಾವನ್ನಪ್ಪಿದ ಸ್ಥಿತಿ, ಮೃತಪಟ್ಟ ನಂತರ ರೇಣುಕಾಸ್ವಾಮಿ ತಲೆ ಮತ್ತು ಕೈಕಾಲುಗಳು ಯಾವ ದಿಕ್ಕಿಗೆ ತಿರುಗಿತ್ತು? ಎಲ್ಲಾ ವಿಷಗಳನ್ನು ಆರೋಪಿಗಳಿಂದ ವಿಚಾರಣೆ ನಡೆಸಿ, ಸ್ಥಳ ಮಹಜರು ನಡೆಸಿದ್ದಾರೆ.

    ಆರೋಪಿಗಳ ಸಮ್ಮುಖದಲ್ಲಿ ಘಟನೆಯನ್ನ ಮರುಸೃಷ್ಟಿ ಮಾಡಿದ್ದ ಪೊಲೀಸರು, ಬಳಿಕ ಅದನ್ನು ವೀಡಿಯೋ ಚಿತ್ರೀಕರಣ ಮಾಡಿಕೊಂಡಿದ್ದಾರೆ. ಜೊತೆಗೆ ಹಲ್ಲೆಗೆ ಬಳಸಿದ್ದ ವಸ್ತುಗಳು, ರಕ್ತದ ಕಲೆಗಳು, ಮೃತನ ಕೂದಲು, ಬಟ್ಟೆಯ ತುಂಡುಗಳ ಸಾಕ್ಷ್ಯವನ್ನು ಸಂಗ್ರಹಿಸಿದ್ದಾರೆ. ಸ್ಥಳ ಮಹಜರು ಮುಗಿದ ಬಳಿಕ ಪೊಲೀಸರು ಮತ್ತೆ ಠಾಣೆಗೆ ಆರೋಪಿಗಳನ್ನು ಕರೆದೊಯ್ದಿದ್ದಾರೆ. ಇದನ್ನೂ ಓದಿ: ದರ್ಶನ್ ನನ್ನ ಸ್ನೇಹಿತರು – ಕೊಲೆ ಕೇಸ್‌ನಲ್ಲಿ ಅರೆಸ್ಟ್ ಆಗಿರೋದು ಶಾಕ್ ಆಗ್ತಿದೆ: ದರ್ಶನ್ ಪುಟ್ಟಣ್ಣಯ್ಯ

    50 ಮೀಟರ್ ವರೆಗೆ ಪ್ರವೇಶ ನಿಷೇಧ:
    ಸ್ಥಳ ಮಹಜರು ವೇಳೆ ಪಟ್ಟಣಗೆರೆಯ ಜಯಣ್ಣ ಅವರಿಗೆ ಸೇರಿದ್ದ ಶೆಡ್ ಮುಂಭಾಗ 50 ಮೀಟರ್ ವರೆಗೂ ಸಾರ್ವಜನಿಕರ ಪ್ರವೇಶ ನಿಷೇಧಗೊಳಿಸಲಾಗಿತ್ತು. ಇದನ್ನೂ ಓದಿ: ನನ್ನ ಮಗ ತಪ್ಪು ಮಾಡಿಲ್ಲ, ಯಾರೋ ಪಿತೂರಿ ಮಾಡಿದ್ದಾರೆ: ರೇಣುಕಾಸ್ವಾಮಿ ಕೊಲೆ ಕೇಸ್‌ ಎ3 ಆರೋಪಿ ತಾಯಿ 

  • ನನ್ನ ಮಗ ತಪ್ಪು ಮಾಡಿಲ್ಲ, ಯಾರೋ ಪಿತೂರಿ ಮಾಡಿದ್ದಾರೆ: ರೇಣುಕಾಸ್ವಾಮಿ ಕೊಲೆ ಕೇಸ್‌ ಎ3 ಆರೋಪಿ ತಾಯಿ

    ನನ್ನ ಮಗ ತಪ್ಪು ಮಾಡಿಲ್ಲ, ಯಾರೋ ಪಿತೂರಿ ಮಾಡಿದ್ದಾರೆ: ರೇಣುಕಾಸ್ವಾಮಿ ಕೊಲೆ ಕೇಸ್‌ ಎ3 ಆರೋಪಿ ತಾಯಿ

    ರಾಮನಗರ: ನನ್ನ ಮಗ ತಪ್ಪು ಮಾಡಿಲ್ಲ. ಯಾರೋ ಪಿತೂರಿ ಮಾಡಿದ್ದಾರೆ ಎಂದು ರೇಣುಕಾಸ್ವಾಮಿ (Renukaswamy) ಕೊಲೆ ಪ್ರಕರಣದ ಎ3 ಆರೋಪಿ ತಾಯಿ ಜಯಲಕ್ಷ್ಮಮ್ಮ ಮಾತನಾಡಿದರು.

    ನನ್ನ ಮಗ ಪವನ್‌ ಯಾವುದೇ ತಪ್ಪು ಮಾಡಿಲ್ಲ. ಯಾರೋ ಪಿತೂರಿ ಮಾಡಿ ಅವನನ್ನು ಸಿಕ್ಕಿಹಾಕಿಸಿದ್ದಾರೆ ಎಂದು ಆರೋಪಿ ತಾಯಿ ಕಣ್ಣೀರಿಟ್ಟರು. ಇದನ್ನೂ ಓದಿ: ದರ್ಶನ್ ನನ್ನ ಸ್ನೇಹಿತರು – ಕೊಲೆ ಕೇಸ್‌ನಲ್ಲಿ ಅರೆಸ್ಟ್ ಆಗಿರೋದು ಶಾಕ್ ಆಗ್ತಿದೆ: ದರ್ಶನ್ ಪುಟ್ಟಣ್ಣಯ್ಯ

    ಕಳೆದ 12 ವರ್ಷಗಳಿಂದ ದರ್ಶನ್ (Actor Darshan) ಜೊತೆಯಲ್ಲಿದ್ದಾನೆ. ದರ್ಶನ್ ಅವರೇ ಅವನನ್ನ ಎಂ.ಕಾಂ ಓದಿಸಿದ್ದಾರೆ. ದರ್ಶನ್‌ರನ್ನ ಅಣ್ಣ ಅಣ್ಣ ಅಂತ ಕರೆಯುತ್ತಿದ್ದ. ತಿಂಗಳಿಗೊಮ್ಮೆ ಊರಿಗೆ ಬಂದು ಹೋಗ್ತಿದ್ದ. ಅವರ ಮನೆಯಲ್ಲೇ ಕೆಲಸ ಮಾಡಿಕೊಂಡು ಇದ್ದ ಎಂದು ತಿಳಿಸಿದರು.

    ನಮ್ಮ ಮಗ ಕೊಲೆ ಮಾಡುವಂತಹ ವ್ಯಕ್ತಿ ಅಲ್ಲ. ನಮ್ಮ ಮಗನ ಬಗ್ಗೆ ನಂಬಿಕೆ ಇದೆ. ಅವನು ಇಂತಹ ಕೆಲಸ ಮಾಡಿಲ್ಲ. ಈ ಕೇಸ್‌ನಲ್ಲಿ ಅವನನ್ನ ಯಾರೋ ಪಿತೂರಿ ಮಾಡಿ ಸಿಕ್ಕಿಹಾಕಿಸಿದ್ದಾರೆ. ಅವನ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಯಾರೋ ಮಾಡಿದ ತಪ್ಪನ್ನ ನನ್ನ ಮಗನ ಮೇಲೆ ಹೊರಿಸಲಾಗ್ತಿದೆ ಎಂದು ಅಳಲು ತೋಡಿಕೊಂಡರು. ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ ಆರೋಪಿ ನಂದೀಶ್ ಕುಟುಂಬಸ್ಥರ ಕಣ್ಣೀರು

  • ದರ್ಶನ್ ನನ್ನ ಸ್ನೇಹಿತರು – ಕೊಲೆ ಕೇಸ್‌ನಲ್ಲಿ ಅರೆಸ್ಟ್ ಆಗಿರೋದು ಶಾಕ್ ಆಗ್ತಿದೆ: ದರ್ಶನ್ ಪುಟ್ಟಣ್ಣಯ್ಯ

    ದರ್ಶನ್ ನನ್ನ ಸ್ನೇಹಿತರು – ಕೊಲೆ ಕೇಸ್‌ನಲ್ಲಿ ಅರೆಸ್ಟ್ ಆಗಿರೋದು ಶಾಕ್ ಆಗ್ತಿದೆ: ದರ್ಶನ್ ಪುಟ್ಟಣ್ಣಯ್ಯ

    ಬೆಂಗಳೂರು: ನಟ ದರ್ಶನ್ (Actor Darshan) ನನ್ನ ಸ್ನೇಹಿತ, ಕೊಲೆ ಕೇಸ್ ನಲ್ಲಿ ಅರೆಸ್ಟ್ ಆಗಿರೋ ವಿಷಯ ನನಗೂ ಶಾಕ್ ಆಯ್ತು ಅಂತ ಶಾಸಕರೂ ಆಗಿರುವ ನಟ ದರ್ಶನ್ ಸ್ನೇಹಿತ ದರ್ಶನ್ ಪುಟ್ಟಣ್ಣಯ್ಯ (Dharshan Puttannaiah) ತಿಳಿಸಿದ್ದಾರೆ.

    ಬೆಂಗಳೂರಿನಲ್ಲಿ (Bengaluru) ಮಾತನಾಡಿದ ಅವರು, ದರ್ಶನ್ ಬಂಧನದ (Darshan Arrest) ಬಗ್ಗೆ ಮಂಗಳವಾರ ನಮಗೆ ಮಾಹಿತಿ ಗೊತ್ತಾಯ್ತು. ಮಂಡ್ಯದಲ್ಲಿ ಪ್ರೆಸ್‌ನವರು ಕೇಳಿದಾಗ ಗೊತ್ತಿರಲಿಲ್ಲ. ಈಗ ಬಂಧನವಾಗಿರುವ ಮಾಹಿತಿ ಗೊತ್ತಾಯ್ತು. ಏನಾಯ್ತು ಏನು ಅನ್ನೋದು ಈಗ ಮಾಹಿತಿಗಳು ಹೊರಗಡೆ ಬರ್ತಿದೆ. ಪೊಲೀಸರು ಮಂಗಳವಾರ ಹೇಳಿಕೆ ಪಡೆದಿದ್ದಾರೆ. ದರ್ಶನ್ ಅವರು ನನಗೆ ತುಂಬಾ ಆತ್ಮೀಯರು. ನಮ್ಮ ನಡುವೆ ಹಲವಾರು ವರ್ಷಗಳಿಂದ ಒಳ್ಳೆಯ ಸಂಬಂಧ ಇದೆ. ಈ ರೀತಿ ಆಗಿದೆ ಅಂದಾಗ ನನಗೂ ಶಾಕ್ ಆಯ್ತು ಎಂದಿದ್ದಾರೆ.

    ಈ ಪ್ರಕರಣ ಏನಾಗುತ್ತೆ ಅನ್ನೋದು ಪೊಲೀಸರ ತನಿಖೆಯಿಂದ ಗೊತ್ತಾಗುತ್ತೆ. ಈ ಕೇಸ್‌ನಲ್ಲಿ ಭಾಗಿಯಾಗಿದ್ದಾರೆ ಎಂಬ ಸಂಶಯ ಇದೆ ಅಂತ ದರ್ಶನ್‌ ಅವರನ್ನ ಅರೆಸ್ಟ್‌ ಮಾಡಿದ್ದಾರೆ. ಈಗ ಅದು ಸಾಬೀತು ಆಗಬೇಕಿದೆ. ಇದೆಲ್ಲ ನಮಗೆ ಗೊತ್ತಿಲ್ಲ ನಮ್ಮದು ಫ್ರೆಂಡ್ ಶಿಪ್ ಅಂತೂ ಇದ್ದೇ ಇದೆ, ಮುಂದೆಯೂ ಇರುತ್ತೆ. ಆದ್ರೆ ಕಳೆದೆರಡು ದಿನಗಳಿಂದ ದರ್ಶನ್‌ ಜೊತೆ ಸಂಪರ್ಕದಲ್ಲಿರಲಿಲ್ಲ. ಈ ವಿಷಯದ ಬಗ್ಗೆಯೂ ಮಾತುಕತೆ ಆಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

    ಇನ್ನೂ ದರ್ಶನ್ ವಿಚಾರದಲ್ಲಿ ಬರೀ ಕಾಂಟ್ರವರ್ಸಿ ಹೆಚ್ಚಾಗ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಈ ವಿಷಯ ಅವರಿಗೆ ಕೇಳಬೇಕು. ಕೊಲೆ ಮಾಡುವ ಹಂತಕ್ಕೆಲ್ಲ ಹೋಗಿದೆಯಲ್ಲ ಎಂಬ ಪ್ರಶ್ನೆಗೆ ಉತ್ತರಿಸಿ, ಅದೇ ನನಗೂ ಶಾಕ್ ಆಯ್ತು. ಯಾಕೆ ಏನು ಅಂತ ನನೆಗೆ ಗೊತ್ತಿಲ್ಲ ವಿಚಾರಣೆ ಮಾಡಿದಾಗ ಗೊತ್ತಾಗುತ್ತೆ, ಮುಂದೆ ಏನಾಗುತ್ತೆ ನೋಡೋಣ ಅಂದಿದ್ದಾರೆ.

  • ಕೈ ನಡುಗುತ್ತಿದೆ, ದಯಮಾಡಿ ಒಂದು ಸಿಗರೇಟ್ ಕೊಡಿಸಿ – ಪೊಲೀಸರ ಬಳಿ ದರ್ಶನ್‌ ಮನವಿ!

    ಕೈ ನಡುಗುತ್ತಿದೆ, ದಯಮಾಡಿ ಒಂದು ಸಿಗರೇಟ್ ಕೊಡಿಸಿ – ಪೊಲೀಸರ ಬಳಿ ದರ್ಶನ್‌ ಮನವಿ!

    ಬೆಂಗಳೂರು: ಚಿತ್ರದುರ್ಗದ (Chitradurga) ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ನಟ ದರ್ಶನ್‌ ಒಂದೇ ಒಂದು ಸಿಗರೇಟ್‌ ಕೊಡಿಸುವಂತೆ ಪೊಲೀಸರಿಗೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.

    ಸದ್ಯ 6 ದಿನಗಳ ಕಾಲ ಪೊಲೀಸ್‌ ಕಸ್ಟಡಿಯಲ್ಲಿರುವ ಆರೋಪಿ ದರ್ಶನ್‌ (Actor Darshan), ವಿಚಾರಣೆಯಲ್ಲಿ ನಾನು ಏನು ತಪ್ಪು ಮಾಡಿಲ್ಲ, ನನಗೆ ಗೊತ್ತಿಲ್ಲ. ನಾನು ಕೊಲೆ ಮಾಡಲು ಹೇಳಿಲ್ಲ, ಮಾಡಿಸಿಯೂ ಇಲ್ಲ ಎಂದು ಅಲವತ್ತುಕೊಂಡಿದ್ದಾರೆ. ಇದೇ ವೇಳೆ ದಯಮಾಡಿ ಒಂದೇ ಒಂದು ಸಿಗರೇಟ್‌ (Cigarette) ಕೊಡಿಸಿ, ಕೈಗಳು ನಡುಗುತ್ತಿವೆ ಅಂತ ಪೊಲೀಸರಿಗೆ ಬೇಡಿಕೊಂಡಿದ್ದಾರೆ. ಇದಕ್ಕೆ ಗರಂ ಆದ ಪೊಲೀಸರು, ಸಿಗರೇಟ್‌ ಕೊಡಿಸಲು ಸಾಧ್ಯವಿಲ್ಲ ಎಂದು ಹೇಳಿರುವುದಾಗಿ ತಿಳಿದುಬಂದಿದೆ.

    ಸದ್ಯ ಆರೋಪಿ ದರ್ಶನ್‌, ಪೊಲೀಸರ ಎದುರು ತಾನೇನು ಮಾಡಿಲ್ಲ ಎಂದು ಹೇಳುತ್ತಿರುವುದಾದರೂ, ತನಿಖೆಯಲ್ಲಿ ದರ್ಶನ್‌ ಹಲ್ಲೆ ಮಾಡಿದ್ದಾರೆ ಎಂಬುದಕ್ಕೆ ಸಾಕ್ಷ್ಯಗಳು ಲಭ್ಯವಾಗಿದೆ. ಸಾಕ್ಷ್ಯಗಳನ್ನು ಮುಂದಿಟ್ಟು ಪ್ರಶ್ನೆ ಕೇಳಿದರೆ ಆಗ ಸೈಲೆಂಟ್‌ ಆಗುತ್ತಿದ್ದಾರೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಆನ್‌ಲೈನ್‌ ವಂಚನೆ – ಆಗ್ನೇಯ ಏಷ್ಯಾ ಮೂಲದ ಕ್ರಿಮಿನಲ್‌ಗಳಿಗೆ ಭಾರತೀಯರೇ ಟಾರ್ಗೆಟ್‌; ವಂಚನೆ ಬಲೆಗೆ ಹೇಗೆ ಬೀಳಿಸ್ತಾರೆ ಗೊತ್ತಾ?

    ಸ್ಫೋಟಕ ಮಾಹಿತಿ ಬಯಲಿಗೆ:
    ಚಿತ್ರದುರ್ಗದ ರೇಣುಕಾಸ್ವಾಮಿಯನ್ನ ಕೊಲೆಗೈದ ಪ್ರಕರಣದಲ್ಲಿ ಅರೆಸ್ಟ್‌ ಆಗಿದ್ದರೂ ಈ ಪ್ರಕರಣದಿಂದ ಪಾರಾಗಲು ದರ್ಶನ್‌ ಭಾರೀ ಪ್ಲ್ಯಾನ್‌ ಮಾಡಿದ ವಿಚಾರ ಪೊಲೀಸ್‌ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ರೇಣುಕಾಸ್ವಾಮಿಯನ್ನು ಕೊಲೆಮಾಡಿ ಶವ ವಿಲೇವಾರಿ ಬಳಿಕ ಹಂತಕರಿಗೆ ನಡುಕ ಶುರುವಾಗಿತ್ತು. ಹೀಗಾಗಿ ಮೂವರಲ್ಲಿ ಶರಣಾಗುವಂತೆ ದರ್ಶನ್‌ ಸೂಚನೆ ನೀಡಿದ್ದರು. ಜೂನ್‌ 10 ರಂದು ಮೂವರು ಕಾಮಾಕ್ಷಿಪಾಳ್ಯ ಠಾಣೆಗೆ ಶರಣಾಗಿ ನಾವು ಹಣಕಾಸು ವಿಚಾರಕ್ಕೆ ಕೊಲೆ ಮಾಡಿರುವುದಾಗಿ ಹೇಳಿಕೆ ನೀಡಿದ್ದರು. ಇದನ್ನೂ ಓದಿ: ಮುಖ್ಯಮಂತ್ರಿಯಾಗಿ ಚಂದ್ರಬಾಬು ನಾಯ್ಡು, ಸಚಿವರಾಗಿ ಪವನ್‌ ಕಲ್ಯಾಣ್‌ ಪ್ರಮಾಣವಚನ ಸ್ವೀಕಾರ

    ಕೊಲೆ ಮಾಡಿ ಶರಣಾದ ಹಿನ್ನೆಲೆಯಲ್ಲಿ ಅನುಮಾನಗೊಂಡ ಪೊಲೀಸರು (Police) ಮೂವರನ್ನು ಪ್ರತ್ಯೇಕವಾಗಿ ಕರೆದು ಪೊಲೀಸ್‌ ಶೈಲಿಯಲ್ಲಿ ವಿಚಾರಣೆ ನಡೆಸಿ ಯಾರ ಮಾಹಿತಿ ಮೇರೆಗೆ ಬಂದು ಶರಣಾಗಿದ್ದೀರಿ ಎಂದು ಪ್ರಶ್ನಿಸಿದ್ದಾರೆ. ಈ ವೇಳೆ ಒಬ್ಬೊಬ್ಬರು ಸಂಬಂಧವೇ ಇಲ್ಲದ ಒಂದೊಂದು ಹೇಳಿಕೆ ನೀಡಿದ್ದಾರೆ. ಪೊಲೀಸರು ಮತ್ತೆ ತನಿಖೆಗೆ ಇಳಿದು ಮೊಬೈಲ್‌ ಪರಿಶೀಲನೆ ನಡೆಸಿದಾಗ ದರ್ಶನ್‌ಗೆ ರಾತ್ರಿಯಿಡಿ ವಾಟ್ಸಪ್‌ ಕರೆ ಮಾಡಿರುವ ವಿಚಾರ ಗೊತ್ತಾಗಿದೆ. ಈ ವಿಚಾರ ತಿಳಿದು ವಿಚಾರಣೆಯನ್ನು ಮತ್ತಷ್ಟು ತೀವ್ರಗೊಳಿಸಿದಾಗ ಈ ಪ್ರಕರಣದ ನೈಜ ಹಂತಕರ ಬಗ್ಗೆ ಬಾಯಿಬಿಟ್ಟಿದ್ದಾರೆ.

  • ಪೊಲೀಸ್‌ ಠಾಣೆಯಲ್ಲಿ ದರ್ಶನ್‌ ಫ್ಯಾನ್ಸ್‌ ದಂಡು; ಪೊಲೀಸರಿಂದ ಲಾಠಿ ಚಾರ್ಜ್‌

    ಪೊಲೀಸ್‌ ಠಾಣೆಯಲ್ಲಿ ದರ್ಶನ್‌ ಫ್ಯಾನ್ಸ್‌ ದಂಡು; ಪೊಲೀಸರಿಂದ ಲಾಠಿ ಚಾರ್ಜ್‌

    ಬೆಂಗಳೂರು: ಕೊಲೆ ಆರೋಪ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಸ್ಯಾಂಡಲ್‌ವುಡ್‌ ನಟ ದರ್ಶನ್‌ನನ್ನು (Darshan) ನೋಡಲು ಪೊಲೀಸ್‌ ಠಾಣೆ ಮುಂದೆ ಜಮಾಯಿಸಿರುವ ಅಭಿಮಾನಿಗಳನ್ನು ಓಡಿಸಲು ಪೊಲೀಸರು ಲಾಠಿ ಚಾರ್ಜ್‌ ಮಾಡಿದ್ದಾರೆ.

    ಚಿತ್ರದುರ್ಗದ ರೇಣುಕಾಸ್ವಾಮಿ ಅಪಹರಿಸಿ ಕೊಲೆ ಮಾಡಿದ ಆರೋಪದಡಿ ಬಂಧನಕ್ಕೊಳಗಾಗಿರುವ ನಟ ದರ್ಶನ್‌ ಅವರನ್ನು ಅನ್ನಪೂರ್ಣೇಶ್ವರಿನಗರ ಪೊಲೀಸ್‌ ಠಾಣೆಯಲ್ಲಿ ಇರಿಸಲಾಗಿದೆ. ನೆಚ್ಚಿನ ನಟನನ್ನು ನೋಡಲು ಠಾಣೆ ಮುಂದೆ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ನೆರೆದಿದ್ದಾರೆ. ಇದನ್ನೂ ಓದಿ: ಕೈ ನಡುಗುತ್ತಿದೆ, ದಯಮಾಡಿ ಒಂದು ಸಿಗರೇಟ್ ಕೊಡಿಸಿ – ಪೊಲೀಸರ ಬಳಿ ದರ್ಶನ್‌ ಮನವಿ!

    ಪ್ರಕರಣ ಸಂಬಂಧ ಸ್ಥಳ ಮಹಜರಿಗೆ ಕರೆದುಕೊಂಡು ಹೋಗಲು ಸಿದ್ಧತೆ ಮಾಡಿಕೊಂಡಿದ್ದಾರೆ. ಅಭಿಮಾನಿಗಳು ಠಾಣೆ ಮುಂದೆ ಅಪಾರ ಸಂಖ್ಯೆಯಲ್ಲಿ ನೆರೆದಿರುವುದರಿಂದ ಪೊಲೀಸರಿಗೆ ಸಮಸ್ಯೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಎಲ್ಲರನ್ನೂ ಚದುರಿಸಲು ಲಘು ಲಾಠಿ ಪ್ರಹಾರ ನಡೆಸಿದರು.

    ರೇಣುಕಾಸ್ವಾಮಿ ಕೊಲೆ ಆರೋಪ ಪ್ರಕರಣದಲ್ಲಿ ನಟ ದರ್ಶನ್‌, ಪವಿತ್ರಾ ಗೌಡ ಸೇರಿದಂತೆ 12 ಮಂದಿಯನ್ನು ಪೊಲೀಸರು ಬಂಧಿಸಿದ್ದರು. ನಂತರ ಅವರನ್ನು ಕೋರ್ಟ್‌ ಮುಂದೆ ಹಾಜರುಪಡಿಸಿದರು. ಎಲ್ಲರನ್ನೂ 6 ದಿನಗಳ ಕಾಲ ಪೊಲೀಸ್‌ ಕಸ್ಟಡಿಗೆ ವಹಿಸಿ ನ್ಯಾಯಾಲಯ ಮಂಗಳವಾರ ಆದೇಶ ಹೊರಡಿಸಿತು. ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ ಆರೋಪಿ ನಂದೀಶ್ ಕುಟುಂಬಸ್ಥರ ಕಣ್ಣೀರು

    ದರ್ಶನ್‌ ಸೇರಿದಂತೆ ಎಲ್ಲಾ ಆರೋಪಿಗಳನ್ನು ಅನ್ನಪೂರ್ಣೇಶ್ವರಿನಗರ ಪೊಲೀಸ್‌ ಠಾಣೆಯಲ್ಲಿ ಇರಿಸಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.

  • ಚಿತ್ರದುರ್ಗದ ವೀರಶೈವ ರುದ್ರಭೂಮಿಯಲ್ಲಿ ರೇಣುಕಾಸ್ವಾಮಿ ಅಂತ್ಯಕ್ರಿಯೆ

    ಚಿತ್ರದುರ್ಗದ ವೀರಶೈವ ರುದ್ರಭೂಮಿಯಲ್ಲಿ ರೇಣುಕಾಸ್ವಾಮಿ ಅಂತ್ಯಕ್ರಿಯೆ

    ಚಿತ್ರದುರ್ಗ: ಕೊಲೆಯಾದ ರೇಣುಕಾಸ್ವಾಮಿ ಅಂತ್ಯಕ್ರಿಯೆಯು ಚಿತ್ರದುರ್ಗದ ವೀರಶೈವ ರುದ್ರಭೂಮಿಯಲ್ಲಿ ಹೆತ್ತವರ, ಸಂಬಧಿಗಳ ಆಕ್ರಂದನದ ನಡುವೆ ನಡೆಯಿತು.

    ಮರಣೋತ್ತರ ಪರೀಕ್ಷೆ ಬಳಿಕ ಮಂಗಳವಾರ ರಾತ್ರಿ ರೇಣುಕಾಸ್ವಾಮಿ ನಿವಾಸಕ್ಕೆ ಮೃತದೇಹ ನೀಡಲಾಯಿತು. ಅಂಬುಲೆನ್ಸ್ನಲ್ಲಿ ಬಂದ ಮೃತದೇಹ ವೀಕ್ಷಿಸುತ್ತಿದ್ದಂತೆ ಕುಟುಂಬಸ್ಥರು, ಸಂಬಂಧಿಗಳು, ಸ್ನೇಹಿತರ ಆಕ್ರಂದನ ಮುಗಿಲು ಮುಟ್ಟಿತು. ಲಕ್ಷ್ಮಿ ವೆಂಕಟೇಶ್ವರ ಬಡಾವಣೆಯಲ್ಲಿನ ನಿವಾಸದಲ್ಲಿ ಅಂತಿಮದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಇದನ್ನೂ ಓದಿ: ನಟ ದರ್ಶನ್‌ ಗ್ಯಾಂಗ್‌ನಿಂದ ರೇಣುಕಾಸ್ವಾಮಿ ಕೊಲೆ ಕೇಸ್‌; ಟೈಮ್‌ಲೈನ್‌ ಹೀಗಿದೆ ನೋಡಿ..

    ನಂತರ ನಗರದ ವೀರಶೈವ ರುದ್ರಭೂಮಿಗೆ ಪಾರ್ಥಿವ ಶರೀರ ರವಾನಿಸಲಾಯಿತು. ವೀರಶೈವ ಸಂಪ್ರದಾಯದಂತೆ ಅಂತಿಮ ಸಂಸ್ಕಾರಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಅಂತ್ಯಸಂಸ್ಕಾರಕ್ಕೂ ಮುನ್ನ ಪತಿಯ ಮೃತದೇಹ ನೋಡಿ ಪತ್ನಿ ಸಹನಾ ಕಣ್ಣೀರಿಟ್ಟರು. ತಂದೆ ಕಾಶಿನಾಥ್ ಮತ್ತು ತಾಯಿ ರತ್ನಮ್ಮರ ದುಃಖ ಉಮ್ಮಳಿಸಿ ಬಂತು.

    ಕೊನೆಗೆ ರೇಣುಕಾಸ್ವಾಮಿ ಮೃತದೇಹಕ್ಕೆ ಕುಟುಂಬಸ್ಥರು ಪೂಜೆ ಮಾಡಿದರು. ವೀರಶೈವ ಸಂಪ್ರದಾಯದಂತೆ ಅಂತ್ಯಸಂಸ್ಕಾರ ನೆರವೇರಿಸಲಾಯಿತು. ರೇಣುಕಾಸ್ವಾಮಿ ಅಂತ್ಯಕ್ರಿಯೆಯಲ್ಲಿ ನೂರಾರು ಮಂದಿ ಭಾಗಿಯಾಗಿದ್ದರು. ಇದನ್ನೂ ಓದಿ: ನನ್ನ ಮಗ ವಿಲವಿಲ ಒದ್ದಾಡಿ ಸತ್ತಂತೆ ದರ್ಶನ್ ಸಾಯಬೇಕು: ಕೊಲೆಯಾದ ರೇಣುಕಾಸ್ವಾಮಿ ತಾಯಿ ಹಿಡಿಶಾಪ

  • ನಟ ದರ್ಶನ್‌ ಗ್ಯಾಂಗ್‌ನಿಂದ ರೇಣುಕಾಸ್ವಾಮಿ ಕೊಲೆ ಕೇಸ್‌; ಟೈಮ್‌ಲೈನ್‌ ಹೀಗಿದೆ ನೋಡಿ..

    ನಟ ದರ್ಶನ್‌ ಗ್ಯಾಂಗ್‌ನಿಂದ ರೇಣುಕಾಸ್ವಾಮಿ ಕೊಲೆ ಕೇಸ್‌; ಟೈಮ್‌ಲೈನ್‌ ಹೀಗಿದೆ ನೋಡಿ..

    ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣ ರಾಜ್ಯಾದ್ಯಂತ ಸಂಚಲನ ಮೂಡಿಸಿದೆ. ಹತ್ಯೆ ಪ್ರಕರಣದಲ್ಲಿ ಸ್ಯಾಂಡಲ್‌ವುಡ್‌ ಸ್ಟಾರ್‌ ನಟ ದರ್ಶನ್‌ (Darshan) ಬಂಧನವು ಪ್ರಕರಣದ ಗಂಭೀರತೆ ಹೆಚ್ಚಿಸಿದೆ. ಪ್ರಕರಣ ಬೆಳಕಿಗೆ ಬಂದಾಗಿನಿಂದ ಸ್ಫೋಟಕ ಮಾಹಿತಿಗಳು ಒಂದೊಂದಾಗಿ ಹೊರಬೀಳುತ್ತಿವೆ. ರೇಣುಕಾಸ್ವಾಮಿ ಅಪಹರಣದಿಂದ ಹಿಡಿದು ಇಲ್ಲಿವರೆಗೆ ಏನೇನಾಯಿತು ಎಂಬ ಬಗ್ಗೆ ಟೈಮ್‌ಮೈನ್‌ ಹೀಗಿದೆ ನೋಡಿ.

    ಜೂನ್‌ 7
    * ಚಿತ್ರದುರ್ಗದಿಂದ ಸಂಜೆ ರೇಣುಕಾಸ್ವಾಮಿ ಕಿಡ್ನ್ಯಾಪ್
    * ರಾತ್ರಿ ಹೊತ್ತಿಗೆ ಪಟ್ಟಣಗೆರೆಯ ಶೆಡ್‌ಗೆ ರೇಣುಕಾಸ್ವಾಮಿ ಶಿಫ್ಟ್‌
    * ಇಡೀ ರಾತ್ರಿ ದರ್ಶನ್‌ ಬೆಂಬಲಿಗರು, ಆಪ್ತರಿಂದ ರೇಣುಕಾಸ್ವಾಮಿ ಮೇಲೆ ಹಲ್ಲೆ

    ಜೂನ್‌ 8
    * ಸತತ 24 ಗಂಟೆಗಳ ಕಾಲ ರೇಣುಕಾಸ್ವಾಮಿಗೆ ಚಿತ್ರಹಿಂಸೆ
    * ಹಲ್ಲೆ ವೇಳೆ ನಟ ದರ್ಶನ್‌ ಮತ್ತು ಪವಿತ್ರಾಗೌಡ ಇದ್ದರು ಎಂಬ ಮಾಹಿತಿ

    ಜೂನ್‌ 9
    * ತೀವ್ರ ಸ್ವರೂಪದ ಹಲ್ಲೆ ಕಾರಣ ರೇಣುಕಾಸ್ವಾಮಿ ನಸುಕಿನಜಾವ ಸಾವು
    * ಬೆಳಗಿನ ಜಾವವೇ ಸುಮ್ಮನಹಳ್ಳಿಯ ಮೋರಿ ಬಳಿ ಶವ ಎಸೆದಿದ್ದ ದರ್ಶನ್‌ ಗ್ಯಾಂಗ್‌
    * ಬೆಳಗ್ಗೆ 10 ಗಂಟೆಗೆ ರೇಣುಕಾಸ್ವಾಮಿ ಶವ ಪತ್ತೆ ಬಗ್ಗೆ ಪೊಲೀಸರಿಗೆ ಮಾಹಿತಿ
    * ರೇಣುಕಾಸ್ವಾಮಿ ಶವದ ಮೇಲೆ 15ಕ್ಕೂ ಹೆಚ್ಚು ಗಾಯಗಳ ಗುರುತು ಪತ್ತೆ
    * ರೇಣುಕಾಸ್ವಾಮಿ ಮೂಗು, ಬಾಯಿ, ದವಡೆ ಮೇಲೆ ಸುಟ್ಟಗಾಯ

    ಜೂನ್‌ 10
    * ಮಧ್ಯಾಹ್ನ 12ರ ಹೊತ್ತಿಗೆ ಶವ ರೇಣುಕಾಸ್ವಾಮಿಯದ್ದು ಎಂದು ಗುರುತಿಸಿದ ಪೊಲೀಸರು.. ಕುಟುಂಬಸ್ಥರಿಗೆ ಮಾಹಿತಿ
    * ಸಂಜೆ 4 ಗಂಟೆ ಹೊತ್ತಿಗೆ ರೇಣುಕಾಸ್ವಾಮಿ ಕೊಂದಿದ್ದು ತಾವೇ ಎನ್ನುತ್ತಾ ಪೊಲೀಸರ ಮುಂದೆ ಮೂವರು ಶರಣು
    * ರಾತ್ರಿ 8 ಗಂಟೆಗೆ ಪೊಲೀಸರಿಂದ ಮತ್ತೆ ನಾಲ್ವರು ಆರೋಪಿಗಳು ವಶಕ್ಕೆ
    * ವಿಚಾರಣೆ ವೇಳೆ ದರ್ಶನ್‌-ಪವಿತ್ರಾಗೌಡ ಹೆಸರು ಬಾಯಿಬಿಟ್ಟ ಆರೋಪಿಗಳು

    ಜೂನ್‌ 11
    * ಬೆಳಗ್ಗೆ 8.30 ಕ್ಕೆ ಮೈಸೂರಿನ ಖಾಸಗಿ ಹೋಟೆಲ್‌ನಲ್ಲಿ ನಟ ದರ್ಶನ್‌ ಅರೆಸ್ಟ್‌
    * ಜಿಮ್‌ನಲ್ಲಿ ವರ್ಕೌಟ್‌ ಮುಗಿಸಿ ಹೋಟೆಲ್‌ಗೆ ಬಂದ ದರ್ಶನ್‌ ಅರೆಸ್ಟ್‌
    * ಬೆಂಗಳೂರಿನ ಅನ್ನಪೂರ್ಣೇಶ್ವರಿನಗರ ಠಾಣೆಗೆ ದರ್ಶನ್‌ ಕರೆತಂದು ವಿಚಾರಣೆ
    * ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ರೇಣುಕಾಸ್ವಾಮಿ ಮರಣೋತ್ತರ ಪರೀಕ್ಷೆ
    * ಸಂಜೆ 7 ಗಂಟೆ ಸುಮಾರಿಗೆ ದರ್ಶನ್‌ ಸೇರಿದಂತೆ 13 ಆರೋಪಿಗಳು 6 ದಿನ ಪೊಲೀಸ್‌ ಕಸ್ಟಡಿಗೆ