Tag: Actor Chiranjeevi Sarja

  • ನೀನು ದೇವರಮನೆಗೆ ಹೋಗಿ ವರುಷವಾಯ್ತು: ಮೇಘನಾ ರಾಜ್ ಸರ್ಜಾ

    ನೀನು ದೇವರಮನೆಗೆ ಹೋಗಿ ವರುಷವಾಯ್ತು: ಮೇಘನಾ ರಾಜ್ ಸರ್ಜಾ

    – 365 ದಿನಗಳಲ್ಲಿ ನಿನ್ನ ನೆನೆಯದ ದಿನಗಳೇ ಇಲ್ಲ

    ಬೆಂಗಳೂರು: ನಟ ಚಿರಂಜೀವಿ ಸರ್ಜಾ ನಿಧನರಾಗಿ ಜೂನ್ ಏಳಕ್ಕೆ ವರ್ಷವಾಗುತ್ತೆ. ಪತ್ನಿ ಮೇಘನಾ ರಾಜ್ ಸರ್ಜಾ, ಸೋಶಿಯಲ್ ಮೀಡಿಯಾದಲ್ಲಿ ಭಾವನಾತ್ಮಕ ಸಾಲುಗಳನ್ನು ಬರೆದುಕೊಂಡಿದ್ದಾರೆ.

    ನೀನು ದೇವರ ಮನೆಗೆ ಹೋಗಿ ಒಂದು ವರುಷವಾಯಿತು. ಎಷ್ಟು ಬೇಗ ಒಂದು ವರುಷ! ಈ 365 ದಿನಗಳಲ್ಲಿ ನಿನ್ನ ನೆನೆಯದ ದಿನಗಳೇ ಇಲ್ಲ. ಮರೆಯಲಾಗದ ಚಿರ ನೆನಪುಗಳು. ಕುಟುಂಬದ ಮೇಲೆ ನಿನಗಿದ್ದ ಅಪಾರವಾದ ಗೌರವ, ಜನಗಳಿಗೆ ನೀನು ತೋರಿಸುತ್ತಿದ್ದ ಪ್ರೀತಿ, ಪ್ರೇಮ, ಸ್ನೇಹ, ಉದಾರಗುಣ ಮತ್ತು ಅಜಾತಶತ್ರುವಾಗಿದ್ದ ನಿನ್ನ ನೆನಪುಗಳೇ ಈಗ ನಮ್ಮ ಕರಗಲಾರದ ಆಸ್ತಿ. ನೀನೆಲ್ಲಿದ್ದರೂ ಅಲ್ಲಿ ನಗು ತುಂಬಿರಬೇಕು. ನಿನ್ನ ಆತ್ಮ ಸದಾ ಶಾಂತಿಯಿಂದಿರಬೇಕು. ಆ ಪ್ರಾರ್ಥನೆಯಲ್ಲೇ, ಎಂದೆಂದೂ ನಿನ್ನ ನೆನೆಪಿನಲ್ಲೇ, ನಿನ್ನ ಪ್ರೀತಿಯ ನಿನ್ನ ಕುಟುಂಬ ಎಂದು ಬರೆದು ಚಿರು ಫೋಟೋ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ನಮ್ಮ ನೋವು ದೂರ ಮಾಡಲು ಮಗು ರೂಪದಲ್ಲಿ ಚಿರು ಬಂದಿದ್ದಾನೆ – ಅರ್ಜುನ್ ಸರ್ಜಾ

    ಇಂದು ಬೆಳಗ್ಗೆ ಪತಿಯ ಜೊತೆಗಿನ ಫೋಟೋ ಹಂಚಿಕೊಂಡು ಚಿರುನನ್ನ ನೆನಪು ಮಾಡಿಕೊಂಡಿದ್ದರು. ಸಂದರ್ಶನದಲ್ಲಿ ಚಿರಂಜೀವಿ ಸರ್ಜಾ ನಿಧನದ ಕೊನೆ ಕ್ಷಣಗಳನ್ನು ಹೇಳಿದ್ದರು. 2020 ರ ಆರಂಭದಲ್ಲಿ ನಾನು ಮತ್ತು ಚಿರಂಜೀವಿ ಸರ್ಜಾ ಅವರು ತಮ್ಮ ಮೊದಲ ಮಗುವನ್ನು ನಿರೀಕ್ಷೆಯಲ್ಲಿದ್ದೆವು. ನನಗೆ ಐದು ತಿಂಗಳು ಪೂರ್ಣಗೊಂಡ ನಂತರ ಅಭಿಮಾನಿಗಳಿಗೆ ಈ ಸಿಹಿ ಸುದ್ದಿಯನ್ನು ತಿಳಿಸಬೇಕು ಅಂದುಕೊಂಡಿದ್ದೆವು. ಆದರೆ ಒಂದು ದಿನ ಇದ್ದಕ್ಕಿದ್ದಂತೆ ಚಿರಂಜೀವಿ ಸರ್ಜಾ ಮನೆಯಲ್ಲಿ ಕುಸಿದುಬಿದ್ದಾಗ ನನಗೆ ದೊಡ್ಡ ಆಘಾತವಾಗಿತ್ತು. ನಾವು ಚಿರುನನ್ನು ಹಾಗೆ ನೋಡಿರಲಿಲ್ಲ. ಅವನು ಪ್ರಜ್ಞೆ ಕಳೆದುಕೊಂಡು ಸ್ವಲ್ಪ ಸಮಯದ ನಂತರ ಮತ್ತೆ ಪ್ರಜ್ಞೆ ಬಂದಿತ್ತು. ಆದರೆ ನಾವು ಅಂಬುಲೆನ್ಸ್ ಗಾಗಿ ಕಾಯುವ ಬದಲು, ಕುಟುಂಬ ಸದಸ್ಯರು ಎಲ್ಲರೂ ಸೇರಿ ಹತ್ತಿರದ ಆಸ್ಪತ್ರೆಗೆ ಹೋಗಲು ನಿರ್ಧರಿಸಿದೇವು.  ಇದನ್ನೂ ಓದಿ: ಚಿರು ಮಗನನ್ನ 20 ವರ್ಷದ ನಂತ್ರ ನಾನೇ ಲಾಂಚ್ ಮಾಡ್ತೀನಿ: ಅರ್ಜುನ್ ಸರ್ಜಾ

    ವೈದ್ಯರು ಅವನನ್ನು ಎಮರ್ಜೆನ್ಸಿ ಕೋಣೆಗೆ ಕರೆದೊಯ್ದುರು. ಹೃದಯಘಾತವಾಗಿದೆ ಎಂದು ಹೇಳಿದರು. ಇದೆಲ್ಲವೂ ಇಷ್ಟು ಬೇಗ ಸಂಭವಿಸಿತು. ಅವರು ಆಸ್ಪತ್ರೆ ಹೊರಡುವ ಮೊದಲು ನೀನು ಏನು ಟೆನ್ಶನ್ ತಗೋಬೇಡಾ ನನಗೆ ಏನು ಆಗುವುದಿಲ್ಲ ಎಂದು ಅವರು ನನಗೆ ಹೇಳಿರುವ ಕೊನೆಯ ಮಾತಾಗಿದೆ ಎಂದು ಹೇಳುವಾಗ ಮೇಘನಾ ಅವರ ಕಣ್ಣಲ್ಲಿ ನೀರು ಜಾರಿತ್ತು. ಇದನ್ನೂ ಓದಿ: ಚಿರುವಿನ ಕೊನೆಯ ದಿನ ನಡೆದಿದ್ದು ಏನು? – ಬಹಿರಂಗ ಪಡಿಸಿದ ಮೇಘನಾ

    ಕಳೆದ ವರ್ಷ ಜೂನ್ 7 ರಂದು ಭಾರೀ ಹೃದಯಾಘಾತದಿಂದ ಬಳಲುತ್ತಿದ್ದ ಚಿರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. 39 ವರ್ಷದ ಚಿರಂಜೀವಿ ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎನ್ನುವ ಸುದ್ದಿ ಸ್ಯಾಂಡಲ್‍ವುಡ್, ಅಭಿಮಾನಿಗಳು, ಕುಟುಂಬಸ್ಢರಲ್ಲಿ ನಂಬಲು ಅಸಾಧ್ಯವಾಗದ ಸುದ್ದಿಯಾಗಿತ್ತು. ಆದರೆ ಈ ಸುದ್ದಿ ತುಂಬಾ ಕಷ್ಟಕರವಾಗಿದ್ದರೂ ನಂಬಲೇ ಬೇಕಾದ ಸತ್ಯವಾಗಿತ್ತು. ಇದನ್ನೂ ಓದಿ: ಚಿರುವನ್ನು ನೆನಪಿಸಿಕೊಂಡ ಮೇಘನಾ ರಾಜ್

  • ಸಿನಿಮಾ ಶೂಟಿಂಗ್ ವೇಳೆ ಸಿಲಿಂಡರ್ ಬ್ಲಾಸ್ಟ್ – 5 ವರ್ಷದ ಮಗು ಸೇರಿ, ತಾಯಿ ಸಾವು

    ಸಿನಿಮಾ ಶೂಟಿಂಗ್ ವೇಳೆ ಸಿಲಿಂಡರ್ ಬ್ಲಾಸ್ಟ್ – 5 ವರ್ಷದ ಮಗು ಸೇರಿ, ತಾಯಿ ಸಾವು

    ಬೆಂಗಳೂರು: ನಟ ಚಿರಂಜೀವಿ ಸರ್ಜಾ ‘ರಣಂ’ ಶೂಟಿಂಗ್ ವೇಳೆ ನಡೆದ ಸಿಲಿಂಡರ್ ಸ್ಫೋಟದಲ್ಲಿ ಶೂಟಿಂಗ್ ನೋಡಲು ಬಂದಿದ್ದ ಐದು ವರ್ಷದ ಮಗು ಸೇರಿ ತಾಯಿ ಸಾವನ್ನಪ್ಪಿದ್ದಾರೆ.

    ಆಯಿಷಾ ಖಾನ್ (5), ತಾಯಿ ಸುಯೇರಾ ಬಾನು ಸಾವನ್ನಪ್ಪಿದ ದುರ್ದೈವಿಗಳಾಗಿದ್ದು, ನಗರದ ಬಾಗಲೂರು ಬಳಿ ಚಿತ್ರದ ಚಿತ್ರೀಕರಣ ನಡೆಯುತಿತ್ತು. ಸುಯೇರಾ ಬಾನು ಅವರು ತಮ್ಮ ಮಗುವಿನೊಂದಿಗೆ ಶೂಟಿಂಗ್ ನೋಡಲು ಆಗಮಿಸಿದ್ದರು. ಈ ವೇಳೆ ಅವಘಡ ಸಂಭವಿಸಿದೆ.

    ರಣಂ ಚಿತ್ರದ ಸಾಹಸ ದೃಶ್ಯಗಳ ಚಿತ್ರೀಕರಣ ಭಾಗವಾಗಿ ಕಾರನ್ನು ಬ್ಲಾಸ್ಟ್ ಮಾಡುವ ದೃಶ್ಯ ಶೂಟ್ ಮಾಡಲಾಗುತಿತ್ತು. ಈ ವೇಳೆ ಸಿಲಿಂಡರ್ ಸ್ಫೋಟಗೊಂಡಿದ್ದು, ಸ್ಫೋಟದ ತೀವ್ರತೆಗೆ ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಮತ್ತೊಂದು ಮಗು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂಬ ಮಾಹಿತಿ ಲಭಿಸಿದೆ.

    ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿರುವ ಪೊಲೀಸರು ಮೃತ ದೇಹಗಳನ್ನು ಯಲಹಂಕ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ. ರಣಂ ಚಿತ್ರದಲ್ಲಿ ಚಿರಂಜೀವಿ ಸರ್ಜಾ, ಚೇತನ್ ಕುಮಾರ್ ಲೀಡ್ ರೋಲ್‍ನಲ್ಲಿ ಅಭಿನಯಿಸುತ್ತಿದ್ದು, ವಿ ಸಮುದ್ರಂ ಚಿತ್ರದ ನಿರ್ದೇಶಕರಾಗಿದ್ದಾರೆ. ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ನಟ ಚೇತನ್ ಕುಮಾರ್ ಆಗಮಿಸಿದ್ದರು. ಚಿರಂಜೀವಿ ಸರ್ಜಾ ಬೇರೊಂದು ಸಿನಿಮಾ ಶೂಟಿಂಗ್ ಹಿನ್ನೆಲೆಯಲ್ಲಿ ಮೈಸೂರಿಗೆ ತೆರಳಿದ್ದಾರೆ ಎನ್ನಲಾಗಿದೆ.