Tag: Activa Honda

  • ಸೈನಿಕನ ಹೆಸರಿನಲ್ಲಿ ಸೈಬರ್ ವಂಚನೆ: ಹಣ ಉಳಿಸಲು ಹೋಗಿ ಮೋಸಕ್ಕೆ ಬಿದ್ದ ಯುವಕ

    ಸೈನಿಕನ ಹೆಸರಿನಲ್ಲಿ ಸೈಬರ್ ವಂಚನೆ: ಹಣ ಉಳಿಸಲು ಹೋಗಿ ಮೋಸಕ್ಕೆ ಬಿದ್ದ ಯುವಕ

    ರಾಯಚೂರು: ಆನ್‍ಲೈನ್ ಆ್ಯಪ್ ಓಎಲ್‍ಎಕ್ಸ್ ನಲ್ಲಿ ಹೋಂಡಾ ಆ್ಯಕ್ಟಿವಾ ಖರೀದಿಸಲು ಹೋಗಿ ರಾಯಚೂರಿನ ಯುವಕ ಮೋಸಹೋಗಿದ್ದಾರೆ.

    ಯುವಕ ವಿಜಯ್‍ರಾಜ್ ಮೇದಾ ಸೆಕೆಂಡ್ ಹ್ಯಾಂಡ್ ಬೈಕ್ ಖರೀದಿಸಲು ಓಎಲ್‍ಎಕ್ಸ್ ನಲ್ಲಿ ಹುಡುಕಾಟ ನಡೆಸಿದ್ದರು. ಈ ವೇಳೆ ಬೆಂಗಳೂರಿನ ವಿಕಾಸ್ ಪಾಟೀಲ್ ಎಂಬ ಹೆಸರಿನಲ್ಲಿ ಆ್ಯಕ್ಟಿವ್ ಹೋಂಡಾ ಫೋಟೋ ಹಾಕಿ, ಮಾರಾಟಕ್ಕಿದೆ ಅಂತ ತಿಳಿಸಿದ್ದ. ಕಡಿಮೆ ಬೆಲೆಗೆ ಸಿಗುತ್ತಿದೆ ಅಂತ ವಿಜಯರಾಜ್ ಕರೆ ಮಾಡಿ ಮಾತನಾಡಿದ್ದರು.

    ನಾನು ಆರ್ಮಿಯಲ್ಲಿ ಕೆಲಸ ಮಾಡುತ್ತಿದ್ದು, ಬೆಂಗಳೂರಿನಿಂದ ಕಾಶ್ಮೀರಕ್ಕೆ ವರ್ಗಾವಣೆಯಾಗಿದೆ. ಹೀಗಾಗಿ ಬೈಕ್ ಮಾರುತ್ತಿದ್ದೇನೆ. ನಾನು ಆರ್ಮಿ ಕ್ಯಾಂಪ್‍ನಿಂದ ಗಾಡಿ ಹೊರತರಲು ಕಾರಣ ಕೊಡಬೇಕು. ಹಾಗಾಗಿ ಮೊದಲು ದುಡ್ಡು ಹಾಕಿ ಎಂದು ವಿಕಾಸ್ ಪಾಟೀಲ್ ಹೇಳಿದ್ದಾನೆ. ಆತನ ಮಾತು ನಂಬಿದ ವಿಜಯ್‍ರಾಜ್ ಹಂತ ಹಂತವಾಗಿ 48 ಸಾವಿರ ರೂ. ಫೋನ್ ಪೇ ಮೂಲಕ ಹಣ ಪಾವತಿಸಿ ಮೋಸ ಹೋಗಿದ್ದಾರೆ.

    ವಾಹನ ದಾಖಲೆಗಳನ್ನು ಪರಿಶೀಲಿಸಿದಾಗ ವಂಚನೆ ಬಯಲಾಗಿದೆ. ವಿಕಾಸ್ ಪಾಟೀಲ್ ವಿರುದ್ಧ ರಾಯಚೂರು ಸೈಬರ್ ಕ್ರೈಂ ಠಾಣೆಯಲ್ಲಿ ವಿಜಯ್‍ರಾಜ್ ದೂರು ದಾಖಲಿಸಿದ್ದಾರೆ. ನನ್ನಂತೆ ಬೇರೆ ಯಾರೂ ಮೋಸ ಹೋಗಬಾರದು ಅಂತ ವಂಚನೆಗೊಳಗಾದ ಯುವಕ ಮನವಿ ಮಾಡಿದ್ದಾರೆ.

  • ಆಕ್ಟಿವಾಗೆ ಟಿಪ್ಪರ್ ಲಾರಿ ಡಿಕ್ಕಿ: ಭಯಾನಕ ಅಪಘಾತದಿಂದ ಇಬ್ಬರು ಪಾರು

    ಆಕ್ಟಿವಾಗೆ ಟಿಪ್ಪರ್ ಲಾರಿ ಡಿಕ್ಕಿ: ಭಯಾನಕ ಅಪಘಾತದಿಂದ ಇಬ್ಬರು ಪಾರು

    ಚಿಕ್ಕಬಳ್ಳಾಪುರ: ಆಕ್ಟಿವಾ ಹೋಂಡಾ ಬೈಕಿಗೆ ಟಿಪ್ಪರ್ ಲಾರಿಯೊಂದು ಡಿಕ್ಕಿ ಹೊಡೆದ ಭೀಕರ ಅಪಘಾತದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಕನ್ನಮಂಗಲ ಪಾಳ್ಯ ಗೇಟ್ ಬಳಿ ಈ ಅಪಘಾತ ನಡೆದಿದೆ. ಇದು ಒಂದು ವಾರದ ಹಿಂದೆ ಅಪಘಾತ ನಡೆದಿದೆ ಎನ್ನಲಾಗಿದೆ. ಈ ಅಪಘಾತದ ದೃಶ್ಯ ಹೆದ್ದಾರಿ ಬದಿಯ ಹೋಟೆಲ್‍ವೊಂದರ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ಆಕ್ಟಿವಾ ಹೋಂಡಾ ಬೈಕ್ ನಲ್ಲಿದ್ದ ಸವಾರ ನೋಡದೇ ಬಲಗಡೆಗೆ ಗಾಡಿಯನ್ನು ತಿರುಗಿಸಿದ್ದಾನೆ. ಈ ವೇಳೆ ಅತಿ ವೇಗದಿಂದ ಬರುತ್ತಿದ್ದ ಟಿಪ್ಪರ್ ಲಾರಿ ಬಂದು ಆಕ್ಟಿವಾಗೆ ಡಿಕ್ಕಿ ಹೊಡೆದಿದೆ. ಈ ಡಿಕ್ಕಿ ಹೊಡೆದ ರಭಸಕ್ಕೆ ಆಕ್ಟಿವಾ ಹೋಂಡಾ ನೆಲಕ್ಕುರುಳಿ ಬಿದ್ದು ಸವಾರನಿಗೆ ತೀವ್ರವಾದ ಗಾಯಗಳಾಗಿದೆ. ಅದೇ ಆಕ್ಟಿವಾ ಹೋಂಡಾದ ಹಿಂಬದಿ ಕುಳಿತಿದ್ದ ಮಹಿಳೆ ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾಳೆ.

    ಸದ್ಯ ಇಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಅಂತ ತಿಳಿದುಬಂದಿದೆ. ಈ ಕುರಿತು ದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.