Tag: Act 1978

  • ಮತ್ತೆ ನೈಜಘಟನೆಯ ಬೆನ್ನುಹತ್ತಿದ ನಿರ್ದೇಶಕ ಮಂಸೋರೆ

    ಮತ್ತೆ ನೈಜಘಟನೆಯ ಬೆನ್ನುಹತ್ತಿದ ನಿರ್ದೇಶಕ ಮಂಸೋರೆ

    ರಡು ಬಾರಿ ರಾಷ್ಟ್ರ ಪ್ರಶಸ್ತಿ ಪಡೆದಿರುವ ನಿರ್ದೇಶಕ ಮಂಸೋರೆ, ಇದೀಗ ಮತ್ತೊಂದು ಸಿನಿಮಾಗೆ ಆಕ್ಸನ್ ಕಟ್ ಹೇಳುತ್ತಿದ್ದು, ಈ ಸಿನಿಮಾ ಇಂದಿನಿಂದ ಚಿತ್ರೀಕರಣ ಆರಂಭಿಸಿದೆ. ಇವರ ಚೊಚ್ಚಲು ಸಿನಿಮಾ ‘ಹರಿವು’ ಕೂಡ ನೈಜಘಟನೆಯನ್ನೇ ಆಧರಿಸಿತ್ತು. ಇದೀಗ ನಾಲ್ಕನೇ ಚಿತ್ರಕ್ಕೂ ಅವರು ನಡೆದ ಘಟನೆಯನ್ನೇ ತಮ್ಮ ಚಿತ್ರಕ್ಕಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ಇದನ್ನೂ ಓದಿ : ಕೆಜಿಎಫ್ ಸಿನಿಮಾ ಆಗೋಕೆ ಮೂವರು ಮಹಿಳೆಯರು ಕಾರಣ: ವಿಜಯ್ ಕಿರಗಂದೂರು

    ಹರಿವು ಸಿನಿಮಾದಲ್ಲಿ ಮಗನನ್ನು ಕಳೆದುಕೊಂಡ ಅಸಹಾಯಕ ತಂದೆಯೊಬ್ಬರು ಬೆಂಗಳೂರಿನಿಂದ ಉತ್ತರ ಕರ್ನಾಟಕದ ಹಳ್ಳಿಗೆ ತಮ್ಮ ಮಗನ ಶವವನ್ನು ಪೆಟ್ಟಿಗೆಯಲ್ಲಿ  ತಗೆದುಕೊಂಡು ಹೋದ ಅಮಾನವೀಯ ಘಟನೆಯನ್ನು ಆಯ್ಕೆ ಮಾಡಿಕೊಂಡಿದ್ದರು. ಈ ಬಾರಿ ಅವರು ಘಟನೆಯ ಬಗ್ಗೆ ಹೇಳಿಕೊಳ್ಳದೇ ‘ಈ ನೆಲದ ಮಣ್ಣಿನ ಜನರ ಆರ್ದ್ರ ಬದುಕಿನ ನೈಜ ಘಟನೆಯೊಂದನ್ನು ತೆರೆಯ ಮೇಲೆ ತರುವ ಪ್ರಯತ್ನ ಮಾಡುತ್ತಿದ್ದೇನೆ’ ಎಂದಷ್ಟೇ ಬರೆದುಕೊಂಡಿದ್ದಾರೆ. ಇದನ್ನೂ ಓದಿ : ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ವೇದಿಕೆಯಲ್ಲೇ ಕಪಾಳಮೋಕ್ಷ: ಅತ್ಯುತ್ತಮ ನಟ ಆಸ್ಕರ್ ವಿಜೇತ ವಿಲ್ ಸ್ಮಿತ್ ಉಗ್ರತಾಪ

    ಸಿನಿಮಾದ ಶೀರ್ಷಿಕೆಯೇ ಆಕರ್ಷಕವಾಗಿದೆ ಮತ್ತು ಕುತೂಹಲ ಮೂಡಿಸುತ್ತದೆ. ತಮ್ಮ ನಾಲ್ಕನೇ ಸಿನಿಮಾಗೆ ಅವರು ’19, 20, 21’ ಎಂದು ಹೆಸರಿಟ್ಟಿದ್ದಾರೆ. ಈ ಟೈಟಲ್ ನಾನಾ ಅರ್ಥಗಳನ್ನು ಹೇಳುತ್ತಿದೆ. ಈ ಮೂರು ತಾರೀಖಿನ ದಿನಗಳಲ್ಲಿ ನಡೆದ ಘಟನೆಯಾ? ಅಥವಾ ಆರ್ಟಿಕಲ್ 19, 20, 21ರ ಬಗೆಗಿನ ಕಥಾನಕವಾ ಎನ್ನುವುದು ಸದ್ಯ ಚರ್ಚೆಯ ವಿಷಯವಾಗಿದೆ. ಇದನ್ನೂ ಓದಿ: ಕೆಜಿಎಫ್-2 ಟ್ರೈಲರ್ ರಿಲೀಸ್ ಮಾಡಿದ ಶಿವಣ್ಣ- ರಾಕಿಬಾಯ್ ಅಬ್ಬರ ಶುರು

    ಎರಡ್ಮೂರು ದಿನಗಳ ಹಿಂದೆಯೇ ಇಡೀ ಟೀಮ್ ಕಟ್ಟಿಕೊಂಡು ಮಲೆನಾಡಿನ ಸೆರೆಗಿನಲ್ಲಿ ಬೀಡುಬಿಟ್ಟಿದ್ದಾರೆ ಮಂಸೋರೆ. ಉತ್ತರ ಕರ್ನಾಟಕದ ಕೆಲ ಕಡೆ ಮತ್ತು ಕರಾವಳಿ ಭಾಗದಲ್ಲೂ ಒಂದಷ್ಟು ದಿನಗಳ ಕಾಲ ಚಿತ್ರೀಕರಣ ನಡೆಸಲಿದೆ ತಂಡ. ಎಂದಿನಂತೆ ಬಹುತೇಕ ಆಕ್ಟ್ 1978 ಸಿನಿಮಾದಲ್ಲಿ ಕೆಲಸ ಮಾಡಿದವರೇ ಈ ಟೀಮ್ ನಲ್ಲೂ ಮುಂದುವರೆದಿದ್ದಾರೆ. ಸತ್ಯಾ ಹೆಗಡೆ ಅವರ ಸಿನಿಮಾಟೋಗ್ರಫಿ, ದೇವರಾಜ್ ಅವರ ನಿರ್ಮಾಣ ಚಿತ್ರಕ್ಕಿದೆ.

  • ಕೋವಿಡ್ ನಡುವೆಯೂ ಗೆಲುವು ತನ್ನದಾಗಿಸಿಕೊಂಡ ಮಂಸೋರೆ ಸಿನಿಮಾ

    ಕೋವಿಡ್ ನಡುವೆಯೂ ಗೆಲುವು ತನ್ನದಾಗಿಸಿಕೊಂಡ ಮಂಸೋರೆ ಸಿನಿಮಾ

    – ಯಶಸ್ವಿ 25 ದಿನ ಪೂರೈಸಿದ ‘ಆಕ್ಟ್ 1978’

    ಕೊರೊನಾ ಲಾಕ್‍ಡೌನ್ ಬಳಿಕ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ತರುವಲ್ಲಿ ಯಶಸ್ವಿಯಾದ ಮಂಸೋರೆ ನಿರ್ದೇಶನದ ‘ಆಕ್ಟ್ 1978’ ಚಿತ್ರ 25 ದಿನ ಪೂರೈಸಿದ ಖುಷಿಯಲ್ಲಿದೆ. ನವೆಂಬರ್ 20ರಂದು ರಾಜ್ಯಾದ್ಯಂತ ಬಿಡುಗಡೆಯಾಗಿದ್ದ ‘ಆಕ್ಟ್ 1978’ ಚಿತ್ರ ಮೊದಲ ದಿನವೇ ಪ್ರೇಕ್ಷಕರು ಹಾಗೂ ವಿಮರ್ಶಕರ ಮನಸ್ಸನ್ನು ಗೆದ್ದಿತ್ತು. ಕೊರೊನಾ ನಡುವೆಯೂ ಚಿತ್ರಮಂದಿರದಲ್ಲೇ ಸಿನಿಮಾ ವೀಕ್ಷಿಸಿ, ಮೆಚ್ಚಿ 25 ದಿನಗಳ ಗೆಲುವನ್ನು ದಾಖಲಿಸಲು ಸಹಕರಿಸಿದ ಪ್ರೇಕ್ಷಕ ಪ್ರಭುಗಳಿಗೆ ಚಿತ್ರತಂಡ ಧನ್ಯವಾದ ತಿಳಿಸಿದೆ.

    ದಕ್ಷಿಣ ಭಾರತೀಯ ಚಿತ್ರರಂಗದಲ್ಲೇ ಲಾಕ್‍ಡೌನ್ ಬಳಿಕ ಮೊದಲ ಬಾರಿ ಬಿಡುಗಡೆಯಾದ ಕನ್ನಡ ಸಿನಿಮಾ ಎಂಬ ಹೆಗ್ಗಳಿಕೆ ಪಾತ್ರವಾಗಿದ್ದ ‘ಆಕ್ಟ್ 1978’ ಚಿತ್ರ ಇದೀಗ ಕೊರೊನಾ ಮಹಾಮಾರಿ ನಡುವೆಯೂ ಯಶಸ್ವಿ 25 ದಿನಗಳನ್ನು ಪೂರೈಸಿದ ಹೆಗ್ಗಳಿಕೆಯನ್ನು ತನ್ನದಾಗಿಸಿಕೊಂಡಿದೆ. ಚಿತ್ರಕ್ಕೆ ಸಿಕ್ಕ ಗೆಲುವು ಹಾಗೂ ಪ್ರತಿಕ್ರಿಯೆಯಿಂದ ಚಿತ್ರತಂಡ ಖುಷಿಯಾಗಿದ್ದು ಐವತ್ತು ದಿನಗಳ ಸಂಭ್ರಮದತ್ತ ಎದುರು ನೋಡುತ್ತಿದೆ.

    ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿರ್ದೇಶಕ ಮಂಸೋರೆ ನಿರ್ದೇಶನದ ಮೂರನೇ ಸಿನಿಮಾ ಇದಾಗಿದ್ದು, ಸೋಶಿಯಲ್ ಥ್ರಿಲ್ಲರ್ ಸಬ್ಜೆಕ್ಟ್ ಇರುವ ಚಿತ್ರಕ್ಕೆ ಸಿನಿರಸಿಕರಲ್ಲದೆ ಚಿತ್ರರಂಗದ ಗಣ್ಯರು ಕೂಡ ಸಿನಿಮಾ ನೋಡಿ ಭೇಷ್ ಎಂದಿದ್ದರು. ಸೋಶಿಯಲ್ ಥ್ರಿಲ್ಲರ್ ಸಬ್ಜೆಕ್ಟ್ ಒಳಗೊಂಡಿರುವ ಚಿತ್ರದಲ್ಲಿ ಯಜ್ಞಾ ಶೆಟ್ಟಿ ಅಮೋಘ ಅಭಿನಯ ಎಲ್ಲರ ಮನಸೆಳೆದಿತ್ತು. ಇನ್ನು ಅಚ್ಯುತ್ ಕುಮಾರ್, ಸುಧಾ ಬೆಳವಾಡಿ, ಪ್ರಮೋದ್ ಶೆಟ್ಟಿ, ಕೃಷ್ಣ ಹೆಬ್ಬಾಳೆ, ದತ್ತಣ್ಣ, ಸಂಚಾರಿ ವಿಜಯ್, ಶರಣ್ಯ, ಶ್ರುತಿ ಒಳಗೊಂಡಂತೆ ದೊಡ್ಡ ತಾರಾಬಳಗ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ‘ಆಕ್ಟ್ 1978’ ದೇವರಾಜ್.ಆರ್ ನಿರ್ಮಾಣದಲ್ಲಿ ಮೂಡಿ ಬಂದಿದ್ದು, ಚಿತ್ರಕ್ಕೆ ಖ್ಯಾತ ಛಾಯಾಗ್ರಾಹಕ ಸತ್ಯ ಹೆಗ್ಡೆ ಕ್ಯಾಮೆರಾ ನಿರ್ದೇಶನವಿದೆ.

     

  • 2ನೇ ವಾರವೂ ‘ಆ್ಯಕ್ಟ್ 1978’ ಚಿತ್ರ ಹೌಸ್‍ಫುಲ್: ಮಂಸೂರೆ ಚಿತ್ರಕ್ಕೆ ಡೈನಾಮಿಕ್ ಪ್ರಿನ್ಸ್, ನಿರಂಜನ್ ದೇಶಪಾಂಡೆ ಫಿದಾ

    2ನೇ ವಾರವೂ ‘ಆ್ಯಕ್ಟ್ 1978’ ಚಿತ್ರ ಹೌಸ್‍ಫುಲ್: ಮಂಸೂರೆ ಚಿತ್ರಕ್ಕೆ ಡೈನಾಮಿಕ್ ಪ್ರಿನ್ಸ್, ನಿರಂಜನ್ ದೇಶಪಾಂಡೆ ಫಿದಾ

    ಸ್ಯಾಂಡಲ್‍ವುಡ್ ಅಂಗಳದಲ್ಲಿ ಕೊರೊನಾ ಲಾಕ್‍ಡೌನ್ ಬಳಿಕ ಹೊಸ ಅಲೆ ಸೃಷ್ಟಿಸಿರುವ ‘ಆ್ಯಕ್ಟ್ 1978’ ಚಿತ್ರ ಪ್ರತಿಯೊಬ್ಬರಿಂದ ಬಹುಪರಾಕ್ ಹೇಳಿಸಿಕೊಳ್ಳುತ್ತ ಮುನ್ನುಗ್ಗುತ್ತಿದೆ. ಪ್ರೇಕ್ಷಕ ಮಹಾಪ್ರಭು ಹಾಗೂ ಸಿನಿ ದಿಗ್ಗಜರಿಂದ ಅಭೂತ ಪೂರ್ವ ಮೆಚ್ಚುಗೆ ಪಡೆದುಕೊಂಡಿರುವ ‘ಆ್ಯಕ್ಟ್ 1978’ ಚಿತ್ರಕ್ಕೆ ಇದೀಗ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್, ಬಿಗ್ ಬಾಸ್ ಸ್ಪರ್ಧಿ ನಿರಂಜನ್ ದೇಶಪಾಂಡೆ ಫಿದಾ ಆಗಿದ್ದಾರೆ.

    ಎರಡನೇ ವಾರವೂ ಹೌಸ್‍ಫುಲ್ ಪ್ರದರ್ಶನ ಕಾಣುತ್ತಿರುವ ‘ಆ್ಯಕ್ಟ್ 1978′ ಚಿತ್ರವನ್ನು ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಹಾಗೂ ನಿರೂಪಕ, ಬಿಗ್‍ಬಾಸ್ ಸ್ಪರ್ಧಿ ನಿರಂಜನ್ ದೇಶಪಾಂಡೆ ಕೊಂಡಾಡಿದ್ದಾರೆ. ನಟ ಪ್ರಜ್ವಲ್ ದೇವರಾಜ್ ಮಾತನಾಡಿ ಈ ಚಿತ್ರದ ಬಗ್ಗೆ ಮಾತನಾಡೋದಕ್ಕೆ ನನಗೆ ತುಂಬಾ ಹೆಮ್ಮೆ ಆಗುತ್ತದೆ. ನಿಜ ಜೀವನಕ್ಕೆ ಹತ್ತಿರವಾದ ಈ ಸಿನಿಮಾ ನೋಡಿ ನಾನು ತುಂಬಾ ಭಾವುಕನಾದೆ ಎಂದಿದ್ದಾರೆ. ಇನ್ನು ನಿರಂಜನ್ ದೇಶಪಾಂಡೆ ಮಾತನಾಡಿ, ಕೆಲವು ಸಿನಿಮಾ ಬಗ್ಗೆ ಏನು ಮಾತನಾಡಬೇಕು ಅನ್ನೋದೇ ತಿಳಿಯೋದಿಲ್ಲ. ಸಿನಿಮಾ ನೋಡಿ ಆಚೆ ಬಂದ ಮೇಲೆ ಒಂದು ಕ್ಷಣ ಮೂಕವಿಸ್ಮಿತನಾದೆ. `ಆ್ಯಕ್ಟ್ 1978’ ಸಿನಿಮಾ ಒಂದು ರೆವಲೂಶನ್ ಕ್ರಿಯೇಟ್ ಮಾಡುವ ಚಿತ್ರ ಎಂದು ಪ್ರಶಂಸಿದ್ದಾರೆ. ಜೊತೆಗೆ ನಿರ್ದೇಶನ ಹಾಗೂ ಪಾತ್ರವರ್ಗಗಳ ನಟನೆಯನ್ನು ನಿರಂಜನ್ ದೇಶಪಾಂಡೆ ಕೊಂಡಾಡಿದ್ದಾರೆ.

    ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಮಂಸೂರೆ ನಿರ್ದೇಶನದ ‘ಆ್ಯಕ್ಟ್ 1978’ ಚಿತ್ರ ನವೆಂಬರ್ 20ರಂದು ಬಿಡುಗಡೆಯಾಗಿತ್ತು. ಬಿಡುಗಡೆಯಾದ ಮೊದಲ ದಿನವೇ ಚಿತ್ರತಂಡದ ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ ಸಿನಿರಸಿಕರಿಂದ ಚಿತ್ರಕ್ಕೆ ಸಿಕ್ಕಿತ್ತು. ಎರಡನೇ ವಾರವೂ ಚಿತ್ರ ಜನಭರಿತ ಪ್ರದರ್ಶನವನ್ನು ಕಾಣುತ್ತಿದ್ದು, ಅಭೂತಪೂರ್ವ ಪ್ರತಿಕ್ರಿಯೆಯನ್ನು ಪಡೆದುಕೊಳ್ಳುತ್ತಿದೆ. ಚಿತ್ರದ ಬಗ್ಗೆ ಕೇಳಿ ಬರುತ್ತಿದ್ದ ಮಾತುಗಳಿಂದ ಪ್ರಭಾವಿತರಾಗಿ ಪುನೀತ್ ರಾಜ್‍ಕುಮಾರ್, ಸುದೀಪ್, ದರ್ಶನ್, ಶ್ರೀಮುರಳಿ, ಖ್ಯಾತ ಹಾಗೂ ಹಿರಿಯ ಸಂಗೀತ ನಿರ್ದೇಶಕ ಹಂಸಲೇಖ, ನಟಿ ಆಶಿಕಾ ರಂಗನಾಥ್ ಸೇರಿದಂತೆ ಚಿತ್ರರಂಗದ ಖ್ಯಾತನಾಮರು ಹಾಗೂ ರಾಜಕೀಯ ನಾಯಕರು ಸಿನಿಮಾ ನೋಡಿ ಇಡೀ ಚಿತ್ರತಂಡಕ್ಕೆ ಶಹಬ್ಬಾಸ್ ಹೇಳಿ ‘ಆಕ್ಟ್ 1978’ ಚಿತ್ರದ ಯಶಸ್ಸಿನ ಪಯಣಕ್ಕೆ ಸಾಥ್ ನೀಡಿದ್ದರು.

    ದೇವರಾಜ್. ಆರ್ ನಿರ್ಮಾಣದಲ್ಲಿ ಮೂಡಿ ಬಂದಿರುವ ‘ಆ್ಯಕ್ಟ್ 1978’ ಚಿತ್ರದಲ್ಲಿ ಯಜ್ಞಾ ಶೆಟ್ಟಿ, ದತ್ತಣ್ಣ, ಅಚ್ಯುತ್ ಕುಮಾರ್, ಸಂಚಾರಿ ವಿಜಯ್, ಶ್ರುತಿ, ಸುಧಾ ಬೆಳವಾಡಿ ಸೇರಿದಂತೆ ಸ್ಟಾರ್ ಕಲಾವಿದರು ನಟಿಸಿದ್ದಾರೆ. ಕೊರೊನಾ ಭೀತಿ ನಡುವೆಯೂ ಜನ ಚಿತ್ರವನ್ನು ಚಿತ್ರಮಂದಿರಕ್ಕೆ ಬಂದು ನೋಡಿ ಪ್ರೀತಿ ತೋರಿಸುತ್ತಿರುವುದಕ್ಕೆ ಚಿತ್ರತಂಡ ದಿಲ್‍ಖುಷ್ ಆಗಿದೆ.

  • ಆಕ್ಟ್ 1978 ಸಿನಿಮಾ ಮೆಚ್ಚಿದ ಚಾಲೆಂಜಿಂಗ್ ಸ್ಟಾರ್ ದರ್ಶನ್

    ಆಕ್ಟ್ 1978 ಸಿನಿಮಾ ಮೆಚ್ಚಿದ ಚಾಲೆಂಜಿಂಗ್ ಸ್ಟಾರ್ ದರ್ಶನ್

    ಬೆಂಗಳೂರು: ಸದ್ಯ ಗಾಂಧಿನಗರದಲ್ಲಿ ಸಖತ್ ಸೌಂಡ್ ಮಾಡುತ್ತಿರುವ ಸಿನಿಮಾ ಅಂದ್ರೆ ಅದು ಆಕ್ಟ್ 1978. ಸಿನಿಮಾ ರಿಲೀಸ್ ಆಗಿ ಇನ್ನೂ 3 ದಿನ ಕಳೆದಿಲ್ಲ, ಎಲ್ಲರ ಬಾಯಲ್ಲೂ ಇದರದ್ದೇ ಮಾತು. ಅಷ್ಟೇ ಅಲ್ಲ ಈ ಸಿನಿಮಾವನ್ನ ಸ್ಟಾರ್ ನಟರು ಮೆಚ್ಚಿಕೊಂಡಿದ್ದು ಚಿತ್ರತಂಡಕ್ಕೆ ಮತ್ತಷ್ಟು ಸ್ಪೂರ್ತಿ ನೀಡಿದೆ. ಇದೀಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಚಿತ್ರತಂಡಕ್ಕೆ ಮತ್ತಷ್ಟು ಬಲ ತುಂಬಲು ಕೈ ಜೋಡಿಸಿದ್ದಾರೆ.

    ಸ್ಯಾಂಡಲ್ ವುಡ್ ನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಂದ್ರೆ ಸಹಾಯ ಮಾಡುವ ಯಜಮಾನ ಅನ್ನೋದು ಎಲ್ಲರಿಗೂ ಗೊತ್ತು. ಯಾರೇ ಹೊಸಬರು ಬೆಳೀತಿನಿ ಅಂತ ಬಂದ್ರೆ ಅವರ ಹಿಂದೆ ನಿಂತು ಸಪೋರ್ಟ್ ಮಾಡ್ತಾರೆ. ಹಾಗೇ ಪ್ರತಿಭೆಗಳಿಗೆ ಯಾವಾಗಲೂ ದರ್ಶನ್ ಅವರ ಪ್ರೋತ್ಸಾಹ ಇದ್ದೇ ಇರುತ್ತೆ. ಆಕ್ಟ್ 1978 ಸಿನಿಮಾದ ಬಗ್ಗೆ ಪ್ರೇಕ್ಷಕರಿಂದ ವ್ಯಕ್ತವಾಗುತ್ತಿರುವ ಪಾಸಿಟಿವ್ ರೆಸ್ಪಾನ್ಸ್ ಮತ್ತು ಚಿತ್ರದ ವಿಮರ್ಶೆಗಳನ್ನು ನೋಡಿ ದರ್ಶನ್ ಚಿತ್ರತಂಡದವರಿಗೆ ಇನ್ನಷ್ಟು ಬಲ ತುಂಬಿದ್ದಾರೆ. ಚಿತ್ರ ತಂಡದ ಸದಸ್ಯರನ್ನು ಅವರ ಮನೆಗೆ ಕರೆಸಿಕೊಂಡಿದ್ದಾರೆ. ಅಲ್ಲಿ ಒಂದಷ್ಟು ಮಾತುಕತೆಗಳನ್ನ ಆಡಿ, ಸಿನಿಮಾದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಆನಂತರ ಉಪಚರಿಸಿ, ತಂಡದ ಜೊತೆಗೆ ಬೆಂಬಲಕ್ಕೆ ನಿಲ್ಲುವುದಾಗಿ ಧೈರ್ಯ ತುಂಬಿ ಕಳುಹಿಸಿದ್ದಾರೆ. ಇದು ಇಡೀ ಚಿತ್ರತಂಡಕ್ಕೆ ಹೆಚ್ಚು ಸಂತಸ ನೀಡಿದ ವಿಚಾರವಾಗಿದೆ.

    ಕೊರೊನಾ ವೈರಸ್ ಕಾರಣದಿಂದ ಬರೋಬ್ಬರಿ 8 ತಿಂಗಳ ಕಾಲ ಚಿತ್ರಮಂದಿರವನ್ನು ಕಂಪ್ಲೀಟ್ ಮುಚ್ಚಲಾಗಿತ್ತು. ಆದ್ರೆ ಅನ್ ಲಾಕ್ 5 ರ ನಂತರ ಥಿಯೇಟರ್ ಗಳನ್ನು ತೆರೆಯಲು ಅನುಮತಿ ಸಿಕ್ಕಿತ್ತು. ಆದರೆ ಯಾವ ಉಪಯೋಗವೂ ಇರಲಿಲ್ಲ. ಪ್ರೇಕ್ಷಕರ ನೀರಸ ಪ್ರತಿಕ್ರಿಯೆ ಥಿಯೇಟರ್ ಮಾಲೀಕರು, ಸಿನಿಮಾ ನಿರ್ಮಾಪಕರಿಗೆ ತಲೆ ನೋವಾಗಿ ಪರಣಮಿಸಿತ್ತು. ಇಂಥ ಸಂದರ್ಭದಲ್ಲಿ ಸಿನಿಮಾ ರಿಲೀಸ್ ಮಾಡುವುದಾದರೆ ಹೇಗೆ ಎಂಬುದನ್ನು ಯೋಚಿಸಿ ಹೊಸ ಸಿನಿಮಾಗಳ ಬಿಡುಗಡೆಯ ಸಾಹಸಕ್ಕೆ ಯಾರೂ ಕೈ ಹಾಕಿರಲಿಲ್ಲ. ಆದರೆ ಅಂಥದ್ದೊಂದು ಹೊಸ ನಾಂದಿಗೆ ಮುನ್ನುಡಿ ಬರೆದಿದ್ದು ನಿರ್ದೇಶಕ ಮಂನ್ಸೋರೆ.

    ಆಕ್ಟ್ 1978 ಸಿನಿಮಾದಿಂದ ಜನರನ್ನು ಮತ್ತೆ ಥಿಯೇಟರ್ ಗೆ ಕರೆ ತರುವ ಉದ್ದೇಶ ಅವರದ್ದಾಗಿತ್ತು. ಇದೀಗ ಅವರ ಆಸೆ ಈಡೇರಿದೆ. ಸಾಮಾಜಿಕ ಜಾಲತಾಣದಲ್ಲಿ ಆಕ್ಟ್ 1978 ಸಿನಿಮಾಗೆ ವ್ಯಕ್ತವಾಗುತ್ತಿರುವ ಅಭಿಪ್ರಾಯ ಜನರನ್ನು ಕೊರೊನಾ ಭಯ ಬಿಟ್ಟು ಥಿಯೇಟರ್ ನತ್ತ ಕರೆ ತರುವಂತೆ ಮಾಡುತ್ತಿದೆ. ಥಿಯೆಟರ್ ಗಳಲ್ಲಿ ಹೌಸ್ ಫುಲ್ ಎಂಬ ಬೋರ್ಡ್ ನೋಡಿನೇ ಎಷ್ಟೋ ವರ್ಷಗಳು ಕಳೆದು ಹೋಗಿತ್ತು. ಆದರೆ ಈ ಸಿನಿಮಾದಿಂದ ಆ ಬೋರ್ಡ್ ನ್ನು ಮತ್ತೆ ನೋಡುವಂತಾಗಿದೆ. ವೀರೇಶ್ ಥಿಯೇಟರ್ ನಿನ್ನೆಯೆಲ್ಲಾ ಹೌಸ್ ಫುಲ್ ಆಗಿತ್ತು. ಈ ಬಗ್ಗೆಯೂ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿತ್ತು.

    1978ರಿಂದಲೂ ಭ್ರಷ್ಟ ವ್ಯವಸ್ಥೆಯನ್ನ ಕುಟುಕುವಂತಹ, ಸಮಾಜದ ಹುಳುಕನ್ನ ತೋರಿಸುವಂತಹ ಕೆಲಸಗಳು ತೆರೆಯಮೇಲೆ ಆಗುತ್ತಲೇ ಇವೆ. ಅನೇಕ ಸಿನಿಮಾಗಳಲ್ಲಿ ಹೀರೋಗಳು ನಾನಾ ಅವತಾರಗಳನ್ನ ಎತ್ತಿ ಭ್ರಷ್ಟ ವ್ಯವಸ್ಥೆಯನ್ನ ಹೋಗಲಾಡಿಸಲು ಪ್ರಯತ್ನಿಸುತ್ತಲೇ ಇದ್ದಾರೆ. ಆದರೆ ಆಗಿನಿಂದ ಈಗಿನವರೆಗೂ ವ್ಯವಸ್ಥೆ ಮಾತ್ರ ಬದಲಾಗಿಲ್ಲ. ಹೀಗಾಗಿ ಭವಿಷ್ಯದ ಭಾರತದ ಪ್ರಜೆಯನ್ನ ಹೊಟ್ಟೆಯಲ್ಲಿ ಹೊತ್ತ ಹೆಣ್ಣು ಮಗಳೊಬ್ಬಳು ಸರ್ಕಾರಿ ಕಛೇರಿಯಲ್ಲಿ ನಡೆಯುವ ಭ್ರಷ್ಟಾಚಾರ, ದುರಾಚಾರ, ಅನಾಚಾರಗಳನ್ನ ಕೊನೆಗಾಣಿಸುವ ಸಲುವಾಗಿ ಸಿಡಿದೇಳುವ ಪರಿಸ್ಥಿತಿ ಎದುರಾಗಿದೆ. ಆಕ್ಟ್ 1978 ಎಂಬ ಕಾಯಿದೆಯ ಬಗ್ಗೆ ಹೇಳುತ್ತಲೇ ಗೀತಾ ಎಂಬ ಹೆಣ್ಣು ಮಗಳೊಬ್ಬಳ ಮನಕಲಕುವ ಕಥೆಯನ್ನ ತೆರೆಮೇಲೆ ಪ್ರತಿಯೊಬ್ಬರಿಗೂ ಆಪ್ತವಾಗುವಂತೆ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ಮಂಸೋರೆ.

  • ಭ್ರಷ್ಟ ವ್ಯವಸ್ಥೆ ವಿರುದ್ಧ ಸಿಡಿದೇಳೋ ಹೆಣ್ಣುಮಗಳ ಕಥಾನಕ- ಆಕ್ಟ್ 1978

    ಭ್ರಷ್ಟ ವ್ಯವಸ್ಥೆ ವಿರುದ್ಧ ಸಿಡಿದೇಳೋ ಹೆಣ್ಣುಮಗಳ ಕಥಾನಕ- ಆಕ್ಟ್ 1978

    ಮಂಸೋರೆ ನಿರ್ದೇಶನದ ‘ಆಕ್ಟ್ 1978’ ಸಿನಿಮಾ ಮೊದಲ ದಿನವೇ ದೊಡ್ಡ ಮಟ್ಟದ ಪ್ರತಿಕ್ರಿಯೆಯನ್ನು ತನ್ನದಾಗಿಸಿಕೊಂಡಿದೆ. ಭ್ರಷ್ಟ ವ್ಯವಸ್ಥೆ, ಸರ್ಕಾರಿ ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಲಂಚಗುಳಿತನ ವಿರುದ್ಧ ಸಮಾಜದ ಅತಿ ಸಾಮಾನ್ಯ ವ್ಯಕ್ತಿ ತಿರುಗಿಬಿದ್ದಾಗ ಆಗಬಹುದಾದ ಪರಿಣಾಮ, ಬದಲಾವಣೆ ‘ಆಕ್ಟ್ 1978’ ಸಿನಿಮಾದ ಚಿತ್ರರೂಪ. ಬರೀ ಸಿನಿಮಾವಲ್ಲದೇ ಒಂದು ಪವರ್ ಫುಲ್ ಸಂದೇಶ ಕೂಡ ರವಾನಿಸಿದ್ದಾರೆ ನಿರ್ದೇಶಕ ಮಂಸೋರೆ.

    ಗೀತಾ ಎಂಬ ಒಬ್ಬ ಸಾಮಾನ್ಯ ಮಹಿಳೆ ಪರಿಹಾರದ ಹಣಕ್ಕಾಗಿ ಸರ್ಕಾರಿ ಕಛೇರಿಗೆ ಅಲೆದು ಅಲೆದು ಬೇಸತ್ತು ಹೋಗುತ್ತಾಳೆ. ಅಧಿಕಾರಿಗಳ ನಿರ್ಲಕ್ಷ್ಯ ಉತ್ತರಕ್ಕೆ ರೋಸಿ ಹೋದ ಗೀತಾ ಇವರಿಗೆಲ್ಲ ಪಾಠ ಕಲಿಸಲು ಟೊಂಕ ಕಟ್ಟಿ ನಿಲ್ಲುತ್ತಾಳೆ. ಹೊಸ ವೇಷ ಧರಿಸುತ್ತಾಳೆ. ಸರ್ಕಾರಿ ಅಧಿಕಾರಿಗಳನ್ನು ಒತ್ತೆಯಾಳಾಗಿಸಿಕೊಂಡು ಎಲ್ಲರ ಗಮನ ಸೆಳೆಯುತ್ತಾಳೆ. ತನ್ನ ಬೇಡಿಕೆಗಳನ್ನು ಗೀತಾ ಈಡೇರಿಸಿಕೊಳ್ಳುತ್ತಾಳಾ.? ಆಕೆ ತಿರುಗಿನಿಂತರೆ ಪರಿಣಾಮ ಏನೆಲ್ಲ ಆಗುತ್ತದೆ.? ಇದಕ್ಕೆ ಸರ್ಕಾರದ ಪ್ರತಿಕ್ರಿಯೆ ಯಾವ ರೀತಿ ಇರುತ್ತೆ ಎನ್ನೋದನ್ನ ಭಾವನಾತ್ಮಕ ಎಳೆಯೊಂದಿಗೆ ಮನಮುಟ್ಟುವಂತೆ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ಮಂಸೋರೆ.

    ಹೋರಾಟದ ಜೊತೆ ಭಾವನಾತ್ಮಕವಾದ ವಿಚಾರಗಳು ಚಿತ್ರದಲ್ಲಿ ನೋಡುಗರನ್ನು ಸೆಳೆಯುತ್ತದೆ. ಒಂದು ಬಲವಾದ ಸಂದೇಶವನ್ನು ಸಮಾಜಕ್ಕೆ ರವಾನಿಸುವಾಗ ಇಡೀ ಸಿನಿಮಾವನ್ನು ಹೋರಾಟ, ಹಿಂಸೆ, ಭಾವನಾತ್ಮಕ ಅಂಶಗಳು ಒಂದಕ್ಕೊಂದು ಮೇಳೈಸಿ ಸಾಗಬೇಕು. ಆ ವಿಚಾರದಲ್ಲಿ ನಿರ್ದೇಶಕ ಮಂಸೋರೆ ಹಾಗೂ ತಂಡ ತುಂಬಾ ಎಚ್ಚರಿಕೆ ವಹಿಸಿ ಹಿಡಿತ ಸಾಧಿಸಿದೆ. ನಮ್ಮ ನಡುವೆ ನಡೆಯೋ ದಿನನಿತ್ಯದ ವಿಚಾರವನ್ನು ಪ್ರಭಾವ ಶಾಲಿಯಾಗಿ ನೋಡುಗನ ಮೇಲೆ ಗಂಭೀರವಾಗಿ ನಾಟುವಂತೆ ಮಾಡುವ ಕೆಲಸದಲ್ಲಿ ಇಡೀ ಪಾತ್ರವರ್ಗ ನ್ಯಾಯ ಒದಗಿಸಿದೆ. ಈಗಾಗಲೇ ಎಲ್ಲಾ ಭಾಷೆಗಳಲ್ಲೂ ಭ್ರಷ್ಟ ವ್ಯವಸ್ಥೆ ವಿರುದ್ಧ ಹೋರಾಟದ ಕಥೆಗಳು ಸಿನಿಮಾಗಳಾಗಿ ತೆರೆ ಮೇಲೆ ಬಂದಿದ್ದರೂ ಸಹ ಯಾವುದಕ್ಕೂ ‘ಆಕ್ಟ್ 1978’ ಹೋಲಿಕೆ ಮಾಡಲು ಇಲ್ಲಿ ಸಾಧ್ಯವಿಲ್ಲ. ಇದು ನಿರ್ದೇಶಕ ಮಂಸೋರೆ ಅವರ ನಿರ್ದೇಶನದ ತಾಕತ್ತು ಎಂದು ಹೇಳಿದರೂ ತಪ್ಪಾಗೋದಿಲ್ಲ. ತೆರೆ ಮೇಲೆ ಚಿತ್ರವನ್ನು ನೋಡುತ್ತಾ ಪ್ರೇಕ್ಷಕ ಸರಿ-ತಪ್ಪುಗಳ ಜಿಜ್ಞಾಸೆಗೆ ಬೀಳುತ್ತಾ ಆಲೋಚನೆಗಿಳಿಯುವಂತೆ ಮಾಡುವಷ್ಟು ವಿಚಾರಗಳು ತೆರೆ ಮೇಲಿವೆ. ಅದರ ಜೊತೆಗೆ ಹದಬರಿತ ಹಾಸ್ಯವು ಇಲ್ಲಿದೆ.

     

    ಒಂದು ಹೆಣ್ಣು ಮಗಳ ಮುಖಾಂತರ ವ್ಯವಸ್ಥೆಯ ಮುಖವಾಡ ಕಳಚಿಸುವ ಕೆಲಸ ಅಷ್ಟು ಸುಲಭದ ಮಾತಲ್ಲ. ಆ ನಿಟ್ಟಿನಲ್ಲಿ ಯಜ್ಞಾ ಶೆಟ್ಟಿ ಪರಕಾಯ ಪ್ರವೇಶ ಮಾಡಿ ಗೀತಾ ಪಾತ್ರವನ್ನು ಜೀವಿಸಿದ್ದಾರೆ. ವ್ಯವಸ್ಥೆಯೊಂದಿಗಿನ ಸಂಘರ್ಷ, ಭಾವನಾತ್ಮಕ ಎಳೆಗಳು ಅದನ್ನು ಕಟ್ಟಿಕೊಟ್ಟ ಪರಿ, ಹೋರಾಟದ ಕಿಚ್ಚು ಎಲ್ಲವೂ ಎಲ್ಲೂ ಹೆಚ್ಚು ಕಮ್ಮಿಯಾಗದಷ್ಟು ಹದವಾಗಿ ಬೆರೆತ ಹೂರಣ ‘ಆಕ್ಟ್ 1978’. ಆ ಹೂರಣವನ್ನು ಅಷ್ಟೇ ನಾಜೂಕಾಗಿ ತೆರೆ ಮೇಲೆ ತರುವಲ್ಲಿ ನಿರ್ದೇಶಕ ಮಂಸೋರೆ ಹಾಗೂ ಇಡೀ ಚಿತ್ರತಂಡದ ಪ್ರಯತ್ನ ಯಶಸ್ವಿಯಾಗಿದೆ.

    ಗೀತಾ ಪಾತ್ರದಲ್ಲಿ ಯಜ್ಞಾ ಶೆಟ್ಟಿ ಅಭಿನಯ ಅಮೋಘವಾಗಿ ಮೂಡಿ ಬಂದಿದೆ. ಇನ್ನು ಒಂದೊಳ್ಳೆ ಸಂದೇಶ ಹಾಗೂ ಕಥೆಗೆ ತಕ್ಕಂತೆ ಅನುಭವಿ ನಟರನ್ನು ಆಯ್ಕೆ ಮಾಡಿಕೊಂಡ ನಿರ್ದೇಶಕರು ಗೆದ್ದಿದ್ದಾರೆ. ಚಿತ್ರದ ಪ್ರತಿಯೊಂದು ಪಾತ್ರವೂ ಪೈಪೋಟಿಗೆ ಬಿದ್ದಂತೆ ನಟಿಸಿದ್ದು, ಎಲ್ಲರೂ ಗಮನ ಸೆಳೆಯುತ್ತಾರೆ. ಹಿನ್ನೆಲೆ ಸಂಗೀತ, ಕ್ಯಾಮೆರಾ ನಿರ್ದೇಶನ ಪ್ರತಿಯೊಂದು ಅಷ್ಟೇ ಪೂರಕವಾಗಿ ಮೂಡಿ ಬಂದಿದೆ.

    ‘ಆಕ್ಟ್ 1978’ ಹಿಂದಿನಿಂದಲೂ ನೋಡಿಕೊಂಡು ಬಂದಿರೋ ಭ್ರಷ್ಟ ಸರ್ಕಾರಿ ವ್ಯವಸ್ಥೆಗೆ ಹಿಡಿದ ಕನ್ನಡಿ. ಹಾಗೆಯೇ ಒಬ್ಬ ಸಾಮಾನ್ಯ ವ್ಯಕ್ತಿ ವ್ಯವಸ್ಥೆಯ ವಿರುದ್ಧ ತಿರುಗಿನಿಂತರೆ ಏನೆಲ್ಲ ಆಗಲಿದೆ ಎಂಬ ಸಂದೇಶ ರವಾನಿಸುವ ಸಿನಿಮಾ ಕೂಡ ಹೌದು. ಒಟ್ಟಿನಲ್ಲಿ ಎಲ್ಲಾ ವರ್ಗದ ಜನರಿಗೂ ಈ ಸಿನಿಮಾ ಬಹು ಬೇಗ ಬೆಸೆದುಕೊಳ್ಳುತ್ತದೆ.

    ರೇಟಿಂಗ್: 4/5
    ಚಿತ್ರ: ಆಕ್ಟ್ 1978
    ನಿರ್ದೇಶನ: ಮಂಸೋರೆ
    ನಿರ್ಮಾಪಕ: ದೇವರಾಜ್. ಆರ್
    ಸಂಗೀತ: ರೋನಡ ಬಕ್ಕೇಶ್, ರಾಹುಲ್ ಶಿವಕುಮಾರ್
    ಛಾಯಾಗ್ರಹಣ: ಸತ್ಯ ಹೆಗಡೆ
    ತಾರಾಬಳಗ: ಯಜ್ಞಾ ಶೆಟ್ಟಿ, ಅಚ್ಯುತ್ ಕುಮಾರ್, ದತ್ತಣ್ಣ, ಸಂಚಾರಿ ವಿಜಯ್, ಬಿ.ಸುರೇಶ್, ಇತರರು.

  • ಥಿಯೇಟರ್ ಗೆ ಹೊಸ ಜೀವ ತುಂಬಲಿದೆಯಾ ಆ್ಯಕ್ಟ್ 1978

    ಥಿಯೇಟರ್ ಗೆ ಹೊಸ ಜೀವ ತುಂಬಲಿದೆಯಾ ಆ್ಯಕ್ಟ್ 1978

    ಬೆಂಗಳೂರು: ಕೊರೊನಾ ದೇಶಕ್ಕೆ ಬಂದಾಗಿನಿಂದಲೂ ಜನರ ಜೀವನ ಶೈಲಿಯೇ ಬದಲಾಗಿ ಹೋಗಿದೆ. ಲಾಕ್‍ಡೌನ್ ಆದಾಗಿನಿಂದ ಜನ ಮನೆಯಲ್ಲೇ ಲಾಕ್ ಆಗಿದ್ದರು. ಮನರಂಜನೆಯ ಬಾಗಿಲನ್ನು ಸಂಪೂರ್ಣವಾಗಿ ಕ್ಲೋಸ್ ಮಾಡಲಾಗಿತ್ತು. ಅನ್‍ಲಾಕ್ ಪ್ರಕ್ರಿಯೆಲ್ಲಿ ಕಡೆಗೂ ಥಿಯೇಟರ್ ಗಳ ಬಾಗಿಲನ್ನು ತೆರೆಯಲಾಗಿದೆ. ಆದರೂ ಪ್ರೇಕ್ಷಕರು ಥಿಯೇಟರ್ ಬಾಗಿಲಿಗೆ ಬರುತ್ತಿಲ್ಲ.

    ಥಿಯೇಟರ್ ಒಪನ್ ಆದರೂ ಜನ ಬರೋದು ಡೌಟೇ ಎಂಬುದನ್ನು ಅರಿತಿದ್ದ ನಿರ್ಮಾಪಕರು, ನಿರ್ದೇಶಕರು ಹೊಸ ಸಿನಿಮಾಗಳನ್ನ ಥಿಯೇಟರ್ ಗೆ ಬಿಟ್ಟು ಆಳ ನೋಡುವ ರಿಸ್ಕ್ ತೆಗೆದುಕೊಳ್ಳಲಿಲ್ಲ. ಹೀಗಾಗಿಯೇ ಸದ್ಯ ಥಿಯೇಟರ್ ಗಳಲ್ಲಿ ಮರು ಬಿಡುಗಡೆಯ ಪರ್ವ ಮುಂದುವರಿದಿದೆ.

    ಕೊರೊನಾ ವೈರಸ್ ಭಯ ಜನರನ್ನು ಇನ್ನು ಬಿಟ್ಟು ಹೋಗಿಲ್ಲ. ಹೀಗಾಗಿಯೇ ಜನ ಮನೆಯಿಂದ ಹೊರಗೆ ಬರಲು ಇನ್ನು ಹೆದರುತ್ತಿದ್ದಾರೆ. ವ್ಯಾಕ್ಸಿನ್ ಯಾವಾಗ ಸಿಗುತ್ತೋ? ಜನ ಧೈರ್ಯವಾಗಿ ಬಂದು ಸಿನಿಮಾ ನೋಡುವುದು ಯಾವಾಗಲೋ ಎಂಬ ಪ್ರಶ್ನೆ ಎಲ್ಲರನ್ನು ಕಾಡುತ್ತಿದೆ. ಹಾಗಾದ್ರೆ ಸಿನಿಮಾವನ್ನು ಸಿದ್ಧವಿಟ್ಟುಕೊಂಡು ವ್ಯಾಕ್ಸಿನ್ ಗಾಗಿ ಕಾಯುವುದರಲ್ಲಿ ಅರ್ಥವೇನಿದೆ ಅನ್ನೋದು ಇನ್ನೊಂದು ಪ್ರಶ್ನೆ. ಈ ಎಲ್ಲಾ ಪ್ರಶ್ನೆಗಳ ನಡುವೆ ಮಂಸೋರೆ ಒಂದು ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ.

    ಹೌದು ಅವರ ನಿರ್ದೇಶನದ ಆ್ಯಕ್ಟ್ 1978 ಚಿತ್ರವನ್ನು ಥಿಯೇಟರ್ ನಲ್ಲೇ ರಿಲೀಸ್ ಮಾಡಲು ನಿರ್ಧರಿಸಿ ಡೇಟ್ ಕೂಡ ಫಿಕ್ಸ್ ಮಾಡಿದ್ದಾರೆ. ಈ ಲಾಕ್‍ಡೌನ್ ಮುಗಿದ ಬಳಿಕ ಥಿಯೇಟರ್ ನಲ್ಲಿ ರಿಲೀಸ್ ಆಗುತ್ತಿರವ ಮೊದಲ ಹೊಸ ಸಿನಿಮಾವಿದು. ಎಲ್ಲರು ಹಿಂದೆ ಸರಿಯುತ್ತಿರುವಾಗ ಹೊಸ ಸಿನಿಮಾವನ್ನೇ ರಿಲೀಸ್ ಮಾಡಿ ಜನರನ್ನು ಥಿಯೇಟರ್ ನತ್ತ ಸೆಳೆಯಲು ಮಂಸೋರೆ ಟೀಂ ರೆಡಿಯಾಗಿದೆ. ಇದೇ ನವೆಂಬರ್ 20 ರಂದು ಆ್ಯಕ್ 1978 ಸಿನಿಮಾ ಥಿಯೇಟರ್ ಗೆ ಲಗ್ಗೆ ಇಡುತ್ತಿದೆ.

    ಈಗಾಗಲೇ ಸಿನಿಮಾದ ಬಗ್ಗೆ ಸಾಕಷ್ಟು ಟಾಕ್ ಕ್ರಿಯೇಟ್ ಆಗಿದೆ. ಮನುಷ್ಯನಿಗೆ, ಸಮಾಜಕ್ಕೆ ತೀರಾ ಹತ್ತಿರವಾದಂತ ಕಾನೂನಿನ ಬಗೆಗಿನ ಪೋಸ್ಟರ್ ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಹೀಗಾಗಿ ಜನ ಥಿಯೇಟರ್ ನತ್ತ ಬಂದೆ ಬರುತ್ತಾರೆ ಅನ್ನೋ ಭರವಸೆ ಎಲ್ಲರಲ್ಲೂ ಇದೆ. ಒಟ್ಟಾರೆ ಥಿಯೇಟರ್ ಗೆ ಜನ ಕರೆಸಿ ಹೊಸ ನಾಂದಿ ಹಾಡಲು ಹೊರಟಿದ್ದಾರೆ ಮಂಸೋರೆ ಟೀಂ.

    ಆ್ಯಕ್ಟ್ 1978 ಚಿತ್ರವನ್ನ ಮಂಸೋರೆ ನಿರ್ದೇಶನ ಮಾಡಿದ್ದು, ದೇವರಾಜ್ ಆರ್ ಬಂಡವಾಳ ಹೂಡಿದ್ದಾರೆ. ಯಜ್ಞ ಶೆಟ್ಟಿ, ಬಿ ಸುರೇಶ್, ಪ್ರಮೋದ್ ಶೆಟ್ಟಿ, ಅಚ್ಯುತ್ ಕುಮಾರ್, ಶ್ರುತಿ, ದತ್ತಣ್ಣ, ಸಂಚಾರಿ ವಿಜಯ್, ಶೋಭರಾಜ್, ಅವಿನಾಶ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ದಯಾನಂದ್ ಟಿ ಕೆ, ವೀರು ಮಲ್ಲಣ್ಣ, ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದಾರೆ.

  • ಆಕ್ಟ್-1978: ಟ್ರೇಲರ್ ಮೂಲಕ ಕೌತುಕದ ಬಾಂಬಿಟ್ಟರು ಮಂಸೋರೆ!

    ಆಕ್ಟ್-1978: ಟ್ರೇಲರ್ ಮೂಲಕ ಕೌತುಕದ ಬಾಂಬಿಟ್ಟರು ಮಂಸೋರೆ!

    – ಕೊರೊನಾ ಕಂಟಕವನ್ನೂ ಛಿದ್ರಗೊಳಿಸೋ ಲಕ್ಷಣ!

    ಒಂದೊಳ್ಳೆ ಸಿನಿಮಾ ಎಂಟ್ರಿ ಕೊಟ್ರೆ ತಿಂಗಳಿಂದೀಚೆಗೆ ಕವುಚಿಕೊಂಡಿರೋ ಕೊರೊನಾ ಗ್ರಹಣ ತಂತಾನೇ ಕಳಚಿಕೊಳ್ಳುತ್ತೆ. ಇದು ಸಿನಿಮಾ ಪ್ರೇಮಿಗಳ ಒಕ್ಕೊರಲಿನ ಅಭಿಪ್ರಾಯ. ಅದರಲ್ಲಿಯೇ ಮತ್ತೆ ಸಿನಿಮಾ ಮಂದಿರಗಳು ಗಿಜಿಗುಡುತ್ತಾ ಕಳೆಗಟ್ಟಿಕೊಳ್ಳಲೆಂಬ ಹಾರೈಕೆಯೂ ಇದೆ. ಅದೆಷ್ಟೋ ಸಿನಿಮಾ ಪ್ರೇಮಿಗಳ ಈ ಮನದಿಂಗಿತವನ್ನು ನಿಜವಾಗಿಸುವಂಥಾ ಗಾಢ ಭರವಸೆ ಹೊತ್ತು ಆಕ್ಟ್-1978 ಚಿತ್ರದ ಟ್ರೇಲರ್ ಲಾಂಚ್ ಆಗಿದೆ.

    ಬಿಡುಗಡೆಯಾಗಿ ಕೆಲವೇ ಗಂಟೆಗಳಲ್ಲಿ ಅದಕ್ಕೆ ದಕ್ಕಿರೋ ವೀಕ್ಷಣೆ, ನಾನಾ ದಿಕ್ಕುಗಳಿಂದ ಹರಿದು ಬರುತ್ತಿರೋ ಸದಭಿಪ್ರಾಯಗಳೆಲ್ಲವೂ ಒಂದು ಮಹಾ ಗೆಲುವಿನ ಮುನ್ಸೂಚನೆಯಂತೆಯೂ, ಚಿತ್ರರಂಗದ ಪಾಲಿಗೆ ಸುಗ್ಗಿ ಸಂಭ್ರಮ ಪಡಿಮೂಡಿಕೊಳ್ಳುವ ಶುಭ ಸೂಚನೆಯಂತೆಯೂ ಕಾಣಿಸಲಾರಂಭಿಸಿದೆ.

    ಇದು ಹರಿವು ಮತ್ತು ನಾತಿಚರಾಮಿಯಂಥ ಸದಭಿರುಚಿಯ ಸಿನಿಮಾಗಳನ್ನು ಕೊಡಮಾಡಿರುವ ಮಂಸೋರೆ ನಿರ್ದೇಶನದ ಚಿತ್ರ. ಈ ಹಿಂದೆ ಒಂದೇ ಒಂದು ಪೋಸ್ಟರ್ ಮೂಲಕ ಈ ಸಿನಿಮಾ ಸೃಷ್ಟಿಸಿದ್ದ ಕ್ರೇಜ್ ಎಂಥಾದ್ದೆಂಬುದನ್ನ ಯಾರೂ ಮರೆಯಲು ಸಾಧ್ಯವಿಲ್ಲ. ಆ ದೆಸೆಯಿಂದಲೇ ಆಕ್ಟ್-1978  ಬಗ್ಗೆ ವಿಶೇಷವಾದ ಕುತೂಹಲ ಮೂಡಿಕೊಂಡಿತ್ತು. ಈಗ ಪುನೀತ್ ರಾಜ್ ಕುಮಾರ್ ಅವರ ಪಿಆರ್‍ಕೆ ಯೂಟ್ಯೂಬ್ ಚಾನೆಲ್ ಮೂಲಕ ಲಾಂಚ್ ಆಗಿರೋ ಟ್ರೇಲರ್ ಎಲ್ಲ ನಿರೀಕ್ಷೆಗಳನ್ನೂ ಮತ್ತಷ್ಟು ಉದ್ದೀಪಿಸುವಂತೆ ಮೂಡಿ ಬಂದಿದೆ. ನಿರ್ದೇಶಕ ಮಂಸೋರೆ ಈ ಬಾರಿ ಎಲ್ಲರ ಮನಸುಗಳಿಗೂ ಕೌತುಕದ ಬಾಂಬಿಟ್ಟು ಬಿಟ್ಟಿದ್ದಾರೆ.

    ಮಂಸೋರೆ ಭಿನ್ನ ಪಥದಲ್ಲಿಯೇ ಸದ್ದು ಮಾಡುತ್ತಾ, ಪ್ರತಿ ಹೆಜ್ಜೆಯಲ್ಲಿಯೂ ಹೊಸಾ ಸಾಧ್ಯತೆಗಳತ್ತ ಕೈ ಚಾಚುತ್ತಾ ಈ ನೆಲದ ಕಥೆಗಳಿಗೆ ದೃಶ್ಯ ರೂಪ ನೀಡೋ ಅಪರೂಪದ ನಿರ್ದೇಶಕ. ಅವರು ಈ ಬಾರಿ ಪಕ್ಕಾ ಥ್ರಿಲ್ಲರ್ ಕಥಾನಕದೊಂದಿಗೆ ಅಡಿಯಿರಿಸುತ್ತಿದ್ದಾರೆ. ಈ ವ್ಯವಸ್ಥೆಯ ವಿರುದ್ಧ ಸಿಡಿದೆದ್ದು ಒಂದು ಸರ್ಕಾರಿ ಕಚೇರಿಯನ್ನೇ ಹೈಜಾಕ್ ಮಾಡೋ ದೃಶ್ಯಾವಳಿಗಳೊಂದಿಗೆ ಈ ಟ್ರೇಲರ್ ಎಲ್ಲರನ್ನೂ ಸೆಳೆದುಕೊಂಡಿದೆ. ಮೈಗೆ ಬಾಂಬು ಕಟ್ಟಿಕೊಂಡಿರೋ ಬಸುರಿ ಹೆಂಗಸಿನ ರೆಬೆಲ್ ಪಾತ್ರದಲ್ಲಿ ಯಜ್ಞ ಶೆಟ್ಟಿ ಅಕ್ಷರಶಃ ಮಿಂಚಿದ್ದಾರೆ. ಮಿಕ್ಕುಳಿದ ಪಾತ್ರಗಳೂ ಕೂಡಾ ಅಷ್ಟೇ ಮಜವಾಗಿ ಮೂಡಿ ಬಂದಿರೋದರ ಸೂಚನೆಗಳೂ ಈ ಟ್ರೇಲರ್‌ನಲ್ಲಿ ಕಾಣಿಸಿವೆ.

    ವ್ಯವಸ್ಥೆಯ ವಿರುದ್ಧ ಜನಸಾಮಾನ್ಯರೂ ಕೂಡಾ ಕುದಿತವೊಂದನ್ನು ಒಳಗಿಟ್ಟುಕೊಂಡಿರುತ್ತಾರೆ. ಆದರೆ, ಅದರ ವಿರುದ್ಧದ ಹೋರಾಟ, ಕ್ರಾಂತಿಗೆ ಮತ್ಯಾವುದೋ ಮಹಾ ಶಕ್ತಿಯೇ ಧರೆಗಿಳಿದು ಬರಬೇಕೆಂಬಂತೆ ಎಲ್ಲವನ್ನೂ ಅವುಡುಗಚ್ಚಿ ಸಹಿಸಿಕೊಂಡಿರುತ್ತಾರೆ. ಆದರೆ ಮನಸು ಮಾಡಿದರೆ ಸಾಮಾನ್ಯರ ಕುದಿತ, ಬೇಗುದಿಗಳೂ ಅಸಾಧಾರಣ ರೀತಿಯಲ್ಲಿ ಆಸ್ಫೋಟಗೊಳ್ಳಬಹುದೆಂಬ ಕಥಾ ಹೂರಣ ಈ ಟ್ರೇಲರ್‍ನಲ್ಲಿ ಧ್ವನಿಸಿದೆ. ಅಂತೂ ಪ್ರತಿ ಕ್ಷಣವೂ ಉಸಿರು ಬಿಗಿಹಿಡಿದು ಕಾಯುವಂಥಾ ಬಿಗುವಿನೊಂದಿಗೆ ಈ ಸಿನಿಮಾ ಮೂಡಿಬಂದಿದೆ ಅನ್ನೋ ನಂಬಿಕೆ ಪ್ರತಿಯೊಬ್ಬರಲ್ಲಿಯೂ ಮೂಡಿಕೊಂಡಿದೆ.

    ಈ ಹಿಂದಿನ ಸಿನಿಮಾಗಳನ್ನು ನೋಡಿದ ಬಹುತೇಕರು ನಿರ್ದೇಶಕ ಮಂಸೋರೆಯ ಅಗಾಧ ಪ್ರತಿಭೆಯನ್ನು ಮೆಚ್ಚಿಕೊಂಡಿದ್ದರು. ಅವರೀಗ ಪರಭಾಷಾ ಚಿತ್ರರಂಗಗಳ ಮಂದಿಯೇ ನಿಬ್ಬೆರಗಾಗೋ ಕಥಾ ವಸ್ತುವಿನೊಂದಿಗೆ ಕಮಾಲ್ ಮಾಡಲು ಮುಂದಾಗಿದ್ದಾರೆ. ಯಜ್ಞ ಶೆಟ್ಟಿಯನ್ನಂತೂ ಈ ಬಸುರಿ ಹೆಂಗಸಿನ ಪಾತ್ರ ಮತ್ತೊಂದು ಎತ್ತರಕ್ಕೇರಿಸೋದರಲ್ಲಿ, ಈ ಸಿನಿಮಾ ಮೂಲಕವೇ ಅವರ ವೃತ್ತಿ ಬದುಕಿನ ದಿಕ್ಕು ಬದಲಾಗೋದು ಗ್ಯಾರೆಂಟಿ ಅಂತ ನೋಡುಗರೇ ಭವಿಷ್ಯ ನುಡಿಯುತ್ತಿದ್ದಾರೆ. ಒಂದು ಟ್ರೇಲರ್ ಇಂಥಾ ಅಭಿಪ್ರಾಯಗಳನ್ನು ಹೊಮ್ಮಿಸುವಂತೆ ಮಾಡೋದು ಆರಂಭಿಕ ಗೆಲುವು. ಅದು ಆಕ್ಟ್-1978  ಚಿತ್ರಕ್ಕೆ ದಕ್ಕಿದೆ. ಮುಂದೆ ಮಹಾ ಗೆಲುವೊಂದು ಬಾಚಿ ತಬ್ಬಿಕೊಳ್ಳಲು ಕಾದು ನಿಂತಿರುವಂತಿದೆ!

  • ಆಕ್ಟ್ 1978: ಮಂಸೋರೆಯ ಮ್ಯಾಜಿಕಲ್ ಮೋಷನ್ ಪೋಸ್ಟರ್!

    ಆಕ್ಟ್ 1978: ಮಂಸೋರೆಯ ಮ್ಯಾಜಿಕಲ್ ಮೋಷನ್ ಪೋಸ್ಟರ್!

    ಬೆಂಗಳೂರು: ಹರಿವು ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಹೊಸಾ ಸಾಧ್ಯತೆಗಳ ಹರಿವೊಂದನ್ನು ಹಾಯಿಸಿ ಬಿಟ್ಟು, ನಾತಿಚರಾಮಿ ಚಿತ್ರದೊಂದಿಗೆ ನಿರ್ದೇಶಕರಾಗಿ ಮತ್ತಷ್ಟು ಗಟ್ಟಿಯಾಗಿ ನೆಲೆ ಕಂಡುಕೊಂಡಿರುವವರು ಮಂಸೋರೆ. ನಾತಿಚರಾಮಿ ಪ್ರೇಕ್ಷಕರ ಮನ ಗೆದ್ದ ನಂತರದಲ್ಲಿ ಈ ಬಾರಿ ಭಿನ್ನ ಜಾಡಿನ ಚಿತ್ರವೊಂದನ್ನು ನಿರ್ದೇಶನ ಮಾಡೋ ಸುಳಿವು ಮಂಸೋರೆ ಕಡೆಯಿಂದ ಜಾಹೀರಾಗಿತ್ತು. ಕಥೆಯನ್ನು ಗಟ್ಟಿಗೊಳಿಸೋದಕ್ಕಾಗಿ ಸುತ್ತಾಟದಲ್ಲಿದ್ದ ಅವರು ಹೊಸಾ ಪ್ರಾಜೆಕ್ಟಿನ ಬಗ್ಗೆ ಒಂದಷ್ಟು ಚರ್ಚೆಗಳಾಗುವಂತೆ ಮಾಡಿದ್ದರು. ಆದರೆ ತಿಂಗಳು ಕಳೆದರೂ ಆ ಬಗ್ಗೆ ಯಾವ ಸುಳಿವೂ ಬಿಟ್ಟುಕೊಡದಿದ್ದ ಮಂಸೋರೆ ಇದೀಗ ಸಂಪೂರ್ಣವಾಗಿಯೇ ಚಿತ್ರೀಕರಣವನ್ನು ಮುಗಿಸಿಕೊಂಡಿದ್ದಾರೆ. ಇದೀಗ ಈ ಚಿತ್ರದ ಮೋಷನ್ ಪೋಸ್ಟರ್‌ನೊಂದಿಗೆ ಸದ್ದು ಮಾಡಿದ್ದಾರೆ.

    ಈ ಬಾರಿ ಮಂಸೋರೆ ಶಶಕ್ತವಾದ ಕ್ರಿಯಾಶೀಲರ ಸಾಥ್‌ನೊಂದಿಗೆ ಸಾಮಾಜಿಕ ಥ್ರಿಲ್ಲರ್ ಕಥೆಯೊಂದನ್ನು ಹೇಳ ಹೊರಟಿದ್ದಾರೆ. ಈ ಚಿತ್ರಕ್ಕೆ ಆಕ್ಟ್ 1978 ಎಂಬ ನಾಮಕರಣವನ್ನೂ ಮಾಡಿದ್ದಾರೆ. ಇದೀಗ ಬಿಡುಗಡೆಯಾಗಿರೋ ಮೋಷನ್ ಪೋಸ್ಟರ್‌ನಲ್ಲಿ ರೋಚಕ ಕಥೆಯ ಸುಳಿವಿನೊಂದಿಗೆ, ಥ್ರಿಲ್ಲರ್ ಜಾನರಿನ ಚಹರೆಯನ್ನೂ ಹೊಮ್ಮಿಸಿದ್ದಾರೆ. ಯಾರೇ ನೋಡಿದರೂ ಅವರೊಳಗೆ ಕಥೆಯೇನಿರಬಹುದೆಂಬ ಪ್ರಶ್ನೆಗಳ ತಾಕಲಾಟ ಶುರು ಮಾಡುವಂತಿರೋ ಈ ಮೋಷನ್ ಪೋಸ್ಟರ್ ನಿಜಕ್ಕೂ ಪ್ರಾಮಿಸಿಂಗ್ ಆಗಿದೆ.

    ಈ ಚಿತ್ರದಲ್ಲಿ ಮೊನ್ನೆಯಷ್ಟೇ ದಾಂಪತ್ಯ ಜೀವನ ಆರಂಭಿಸಿರುವ ಯಜ್ಞಾ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಕೈಲಿ ಗನ್ನು ಹಿಡಿದು, ಬಾಂಬು ಕಟ್ಟಿಕೊಂಡು ಕೂತ ಗರ್ಭಿಣಿಯ ಅವತಾರವೇ ಯಜ್ಞಾರ ಪಾತ್ರ ವಿಶೇಷವಾಗಿದೆ ಎಂಬುದರ ಸುಳಿವು ಕೊಡುವಂತಿದೆ. ಈ ಬಾರಿ ನಿರ್ದೇಶಕ ಮಂಸೋರೆ ಕಮರ್ಶಿಯಲ್ ಜಾಡಿನತ್ತ ಹೊರಳಿಕೊಂಡಿದ್ದಾರೆ. ಇದರ ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯಲ್ಲಿ ಬೆಲ್‌ಬಾಟಂ ಖ್ಯಾತಿಯ ಕಥೆಗಾರ ಟಿ.ಕೆ ದಯಾನಂದ್ ಮತ್ತು ಯುವ ನಿರ್ದೇಶಕ ವೀರು ಮಲ್ಲಣ್ಣ ಸಾಥ್ ಕೊಟ್ಟಿದ್ದಾರೆ. ಯಾವ ಜಾನರಿನ ಚಿತ್ರವನ್ನೇ ಆದರೂ ಹೊಸತನದೊಂದಿಗೆ ಕಟ್ಟಿ ನಿಲ್ಲಿಸುವ ಕಸುವು ಹೊಂದಿರೋ ಮಂಸೋರೆ ಈ ಬಾರಿ ಮ್ಯಾಜಿಕ್ ಮಾಡೋ ಎಲ್ಲ ಸೂಚನೆಗಳೂ ಕಾಣಿಸುತ್ತಿವೆ.