Tag: achieve

  • ಉತ್ತರಾಖಂಡ್ ರಕ್ಷಣಾ ಕಾರ್ಯಚರಣೆ ಸ್ಫೂರ್ತಿ -ಚಹಾ ಮಾರುವವನ ಪುತ್ರಿ ಭಾರತೀಯ ವಾಯುಸೇನೆಗೆ ಆಯ್ಕೆ!

    ಉತ್ತರಾಖಂಡ್ ರಕ್ಷಣಾ ಕಾರ್ಯಚರಣೆ ಸ್ಫೂರ್ತಿ -ಚಹಾ ಮಾರುವವನ ಪುತ್ರಿ ಭಾರತೀಯ ವಾಯುಸೇನೆಗೆ ಆಯ್ಕೆ!

    ಭೋಪಾಲ್: ಭಾರತೀಯ ವಾಯುಸೇನೆ ನಡೆಸುವ ಹಾರಾಟ ವಿಭಾಗಕ್ಕೆ ನಡೆಸಿದ ಪ್ರವೇಶ ಪರೀಕ್ಷೆಯಲ್ಲಿ ಮಧ್ಯಪ್ರದೇಶದ ಮಿಮುಚ್ ಜಿಲ್ಲೆಯಿಂದ ಚಹಾ ಮಾರಾಟ ಮಾಡುವವನ ಪುತ್ರಿ ನೇಮಕಗೊಂಡು ರಾಜ್ಯಕ್ಕೆ ಕೀರ್ತಿ ತಂದಿದ್ದಾಳೆ.

    ಅಂಚಲ್ ಗಂಗ್ವಾಲ್(24) ಆಯ್ಕೆಗೊಂಡ ಯುವತಿ. ಮೂಲತಃ ಮಿಮುಚ್ ಜಿಲ್ಲೆಯವರಾದ ಅಂಚಲ್ ವಾಯುಸೇನೆ ನೇಮಕಾತಿ ಪ್ರವೇಶ ಪರೀಕ್ಷೆಯಲ್ಲಿ ಮಧ್ಯಪ್ರದೇಶ ರಾಜ್ಯದಿಂದ ಆಯ್ಕೆಯಾದ ಒಬ್ಬಳೆ ಒಬ್ಬ ಯುವತಿ. ಇವರ ತಂದೆ ಸುರೇಶ್ ಗಂಗ್ವಾಲ್ ಮಿಮುಚ್‍ನ ಬಸ್ ನಿಲ್ದಾಣದ ಬಳಿ ಚಹಾ ಅಂಗಡಿ ನಡೆಸುತ್ತಿದ್ದಾರೆ.

    ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅಂಚಲ್, ನಾನು 12ನೇ ತರಗತಿಯಲ್ಲಿ ಓದುತ್ತಿರುವಾಗ 2013ರ ಉತ್ತರಾಖಂಡ್‍ನಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಲ್ಲಿ ಭಾರತೀಯ ರಕ್ಷಣಾ ಪಡೆಗಳು ನಡೆಸಿದ ರಕ್ಷಣಾ ಕಾರ್ಯಚರಣೆಯಿಂದ ಪ್ರೇರೇಪಣೆಗೊಂಡು ಅಂದೇ ಭಾರತೀಯ ಸೇನೆಗೆ ಸೇರಬೇಕೆಂದು ನಿರ್ಧಾರ ಮಾಡಿಕೊಂಡಿದ್ದೆ. ಆದರೆ ನನ್ನ ಕುಟುಂಬ ನನ್ನನ್ನು ಓದಿಸುವಷ್ಟು ಆರ್ಥಿಕ ಸ್ಥಿತಿಯಲ್ಲಿರಲಿಲ್ಲ. ಹೀಗಾಗಿ ನಾನು ಭಾರತೀಯ ವಾಯುಸೇನೆಯ ಪ್ರವೇಶ ಪರೀಕ್ಷೆಯನ್ನು ತೆಗೆದುಕೊಂಡು ಆಯ್ಕೆಯಾಗಿದ್ದೇನೆ ಎಂದು ತಿಳಿಸಿದರು.

    ಭಾರತೀಯ ವಾಯುಸೇನಾ ಪರೀಕ್ಷೆಯು ಅಷ್ಟು ಸುಲಭವಾಗಿರಲಿಲ್ಲ. ನಾನು ಹಲವು ವರ್ಷಗಳಿಂದ 5 ಭಾರೀ ಪರೀಕ್ಷೆ ಬರೆದಿದ್ದರೂ ಆಯ್ಕೆಗೊಂಡಿರಲಿಲ್ಲ. ಈ ವರ್ಷ ಬರೆದ ಪರೀಕ್ಷೆಯಲ್ಲಿ ಜೂನ್ 6ರ ಫಲಿತಾಂಶದಲ್ಲಿ ತೇರ್ಗಡೆಯಾಗಿದ್ದೇನೆ ಎಂದು ಸಂತಸ ಹಂಚಿಕೊಂಡಿದ್ದಾರೆ.

    ಮಗಳ ಸಾಧನೆಯ ಬಗ್ಗೆ ಪ್ರತಿಕ್ರಿಯಿಸಿದ ತಂದೆ, ನಾನು ಬಸ್ ನಿಲ್ದಾಣದ ಹತ್ತಿರ ಚಹಾ ವ್ಯಾಪಾರ ಮಾಡುತ್ತಿದ್ದು, ಎಲ್ಲರೂ ನಾಮದೇವ್ ಟೀ ಸ್ಟಾಲ್ ಎಂದೇ ಗುರುತಿಸುತ್ತಾರೆ. ಮಗಳ ಈ ಸಾಧನೆಗೆ ಬರುವ ಗ್ರಾಹಕರು ಅಭಿನಂದನೆ ಸಲ್ಲಿಸಿ ಹೋಗುತ್ತಿದ್ದಾರೆ ಎಂದು ಹೇಳಿದ್ದಾರೆ.

    ನನ್ನ ಆರ್ಥಿಕ ಸಂಕಷ್ಟದ ನಡುವೆಯೂ ಮೂರು ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಿದ್ದೇನೆ. ಮಗ ಎಂಜಿನಿಯರಿಂಗ್ ಮಾಡುತ್ತಿದ್ದು, ಮಗಳು 12 ನೇ ತರಗತಿ ಓದುತ್ತಿದ್ದಾಳೆ. ಇಬ್ಬರಿಗೂ ಕೋಚಿಂಗ್ ನೀಡಲು ಸಾಲ ಮಾಡಿ ಸೇರಿಸಿದ್ದೆ ಎಂದು ಈ ವೇಳೆ ಹೇಳಿಕೊಂಡರು.

    ದೇಶಾದ್ಯಂತ ಒಟ್ಟು 6 ಲಕ್ಷ ಅಭ್ಯರ್ಥಿಗಳು ಈ ಪರೀಕ್ಷೆಗೆ ಹಾಜರಾಗಿದ್ದು,  ಕೇವಲ 22 ಮಂದಿ ಆಯ್ಕೆಗೊಂಡಿದ್ದಾರೆ ಇದರಲ್ಲಿ ಅಂಚಲ್‍ ಕೂಡ ಒಬ್ಬರಾಗಿದ್ದಾರೆ. ವಾಯುಸೇನಾ ಪಡೆಯು ಅಂಚಲ್‍ಗೆ ಜೂನ್ 30ರೊಳಗಾಗಿ ಹೈದರಾಬಾದ್‍ನ ದುಂಡಿಗಲ್ ಬಳಿ ಇರುವ ಭಾರತೀಯ ವಾಯುಸೇನಾ ಅಕಾಡೆಮಿಗೆ ಸೇರುವಂತೆ ಸೂಚಿಸಿದೆ.

  • 8ನೇ ವಯಸ್ಸಲ್ಲೇ 3 ಜೀವ ಉಳಿಸಿ 2 ಕೈ, 1 ಪಾದ ಕಳ್ಕೊಂಡ್ರೂ ಕಾಲಲ್ಲೇ ಪರೀಕ್ಷೆ ಬರೆದ ಸಾಹಸಿ!

    8ನೇ ವಯಸ್ಸಲ್ಲೇ 3 ಜೀವ ಉಳಿಸಿ 2 ಕೈ, 1 ಪಾದ ಕಳ್ಕೊಂಡ್ರೂ ಕಾಲಲ್ಲೇ ಪರೀಕ್ಷೆ ಬರೆದ ಸಾಹಸಿ!

    ಲಕ್ನೋ: ಸಾಹಸ ಮಾಡಿ ರಾಷ್ಟ್ರಪತಿಗಳಿಂದ ಶೌರ್ಯ ಪ್ರಶಸ್ತಿ ಪಡೆದ  ಉತ್ತರ ಪ್ರದೇಶ ಸಾಹಸಿಯೊಬ್ಬ ಕಾಲಿನಿಂದಲೇ ಪರೀಕ್ಷೆ ಬರೆದು ಮಾಧ್ಯಮಗಳಲ್ಲಿ ಸುದ್ದಿಯಾಗಿದ್ದಾನೆ.

    8 ವರ್ಷದ ವಯಸ್ಸಿನಲ್ಲಿ ರಿಯಾಜ್ ಅಹ್ಮದ್ ಇತರರ ಜೀವನವನ್ನು ಉಳಿಸಲು ಹೋಗಿ ತನ್ನ ಎರಡು ಕೈಗಳು ಮತ್ತು ಒಂದು ಪಾದವನ್ನು ಕಳೆದುಕೊಂಡಿದ್ದರು. ಈ ಶೌರ್ಯಕ್ಕೆ 2003 ರಲ್ಲಿ ರಾಷ್ಟ್ರೀಯ ಶೌರ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು. ಅನಂತರ ರಿಯಾಜ್ ತನ್ನ ಕಾಲೇಜು ಪರೀಕ್ಷೆಯನ್ನು ಕಾಲಿನಿಂದಲೇ ಬರೆದು ಈಗ ಮತ್ತೊಂದು ಸಾಧನೆ ತೋರಿದ್ದಾರೆ.

    ರಿಯಾಜ್ 1996 ಅಕ್ಟೋಬರ್ 10 ರಂದು ಲಕ್ನೋದ ಟೆಲಿಬಾಗ್‍ನಲ್ಲಿ ಜನಿಸಿದರು. ಇವನ ತಾಯಿ ಗೃಹಿಣಿಯಾಗಿದ್ದು, ತಂದೆ ಪುಶ್ಕಾರ್ಟ್‍ನಲ್ಲಿ ಮೊಟ್ಟೆಗಳನ್ನು ಮಾರಾಟ ಮಾಡಿಕೊಂಡು ಜೀವನವನ್ನು ಸಾಗಿಸುತ್ತಿದ್ದರು. ಕುಟುಂಬದ ಆರ್ಥಿಕ ಸಮಸ್ಯೆಯಿಂದಾಗಿ ರಿಯಾಜ್ ಶಿಕ್ಷಣ ತುಂಬಾ ಕಷ್ಟಕರವಾಗಿತ್ತು. ಆದರೂ ವಿದ್ಯಾಭ್ಯಾಸವನ್ನು ಮುಂದುವರಿಸಿದ್ದರು.

    ಅಂದು ನಡೆದಿದ್ದೇನು?
    2003 ರಲ್ಲಿ ಡಾಲಿಗನ್ಜ್ ಕ್ರಾಸಿಂಗ್‍ನಲ್ಲಿ ರೈಲ್ವೇ ಟ್ರ್ಯಾಕ್ ಮೂಲಕ ಹಾದುಹೋಗುವಾಗ ಒಂದು ಮಗು ರೈಲ್ವೆ ಹಳಿಗೆ ಸಿಲುಕಿಕೊಂಡಿತ್ತು. ಇದನ್ನು ನೋಡಿದ ನಾನು ಆಕೆಯ ತಂದೆಗೆ, ನಿಮ್ಮ ಮಗಳನ್ನು ಟ್ರ್ಯಾಕ್‍ನಿಂದ ಕಾಪಾಡಿ ಎಂದು ಹೇಳಿದ್ದೆ. ಆದರೆ ಅವರು ನನ್ನ ಮಾತನ್ನು ನಿರ್ಲಕ್ಷ್ಯ ಮಾಡಿದ್ದರು. ಆದರೆ ಅಷ್ಟರಲ್ಲಿ ರೈಲು ಬರುತ್ತಿತ್ತು. ಇದನ್ನು ನೋಡಿದ ತಂದೆ ಮಗಳನ್ನು ಕಾಪಾಡಲು ಓಡಿದ್ದರು. ಸ್ಥಳದಲ್ಲಿದ್ದ ಬೇರೊಬ್ಬ ಹುಡುಗನು ಮಗುವನ್ನು ಕಾಪಾಡಲು ದೌಡಾಯಿಸಿದ. ನಾನು ಕೂಡ ಓಡಿದೆ.

    ನಾವು ಅಲ್ಲಿಗೆ ತಲುಪುವಷ್ಟರಲ್ಲಿ ರೈಲು ತುಂಬಾ ಹತ್ತಿರ ಬಂದಿತ್ತು. ತಕ್ಷಣ ಮಗುವನ್ನು ಎತ್ತಿ ಪಕ್ಕಕ್ಕೆ ಬಿಸಾಕಿದೆ. ಅವರನ್ನು ಕೂಡ ತಕ್ಷಣ ತಳ್ಳಿದೆ. ಆದರೆ ನನ್ನ ಪಾದ ರೈಲಿನ ಹಳಿಗೆ ಸಿಲುಕಿಕೊಂಡಿತ್ತು. ಕೊನೆಗೆ ರೈಲು ಸಮೀಪ ಬಂದಿದ್ದರಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ. ನನ್ನ ಎರಡು ಕೈ ಮತ್ತು ಒಂದು ಪಾದ ತುಂಡಾಯಿತು. ಆದರೆ ನಾನು ಅಂದು ಮೂರು ಜೀವ ಉಳಿಸಿದ್ದ ತೃಪ್ತಿ ಇತ್ತು ಎಂದು ಖುಷಿಯಿಂದ ರಿಯಾಜ್ ಹೇಳಿದರು.

    ಅಂದಿನ ರಾಷ್ಟ್ರಪತಿ ಡಾ. ಅಬ್ದುಲ್ ಕಲಾಂ ಅವರು 2003 ರ ಜನವರಿ 24 ರಂದು ಸಂಜಯ್ ಚೋಪ್ರಾ ರಾಷ್ಟ್ರೀಯ ಶೌರ್ಯ ಪ್ರಶಸ್ತಿಯನ್ನು ನೀಡಿ ಪುರಸ್ಕರಿಸಿದ್ದರು. ನಂತರ ಅಟಲ್ ಬಿಹಾರಿ ವಾಜಪೇಯಿ ಅವರು ದೆಹಲಿಯಲ್ಲಿ ರಾಷ್ಟ್ರೀಯ ಶೌರ್ಯ ಪ್ರಶಸ್ತಿಯನ್ನು ನೀಡಿದ್ದರು. 2010 ರಲ್ಲಿ ಮಾರಿಷಸ್‍ನ ಅಧ್ಯಕ್ಷರು ನನಗೆ ಗ್ರೇಟ್ ಹೀರೋಸ್ ಗ್ಲೋಬಲ್ ಬ್ರೇವರಿ ಅವಾರ್ಡ್ ನೀಡಿ ಪುರಸ್ಕರಿಸಿದ್ದರು ಎಂದು ರಿಯಾಸ್ ವಿವರಿಸಿದರು.

    ಪ್ರಸ್ತುತ ನಾನು ಕೆಕೆಸಿಯಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದು, ನಾನು ನನ್ನ ಪರೀಕ್ಷೆಗಳೆಲ್ಲವನ್ನು ನನ್ನ ಉಳಿದಿರುವ ಒಂದು ಪಾದದಲ್ಲಿ ಬರೆಯುತ್ತೇನೆ. ನನ್ನ ಮೊದಲ ಬೋರ್ಡ್ ಪರೀಕ್ಷೆಯಲ್ಲಿ ಉತ್ತೀರ್ಣನಾಗಿದ್ದೇನೆ. ಈಗ ಹೊಂದಿರುವ ಕೈ ಮತ್ತು ಕಾಲು ಕೃತಕವಾದುದ್ದು ಎಂದು ಹೇಳಿದರು. ನನಗೆ ಇನ್ನು ತುಂಬಾ ಓದುಬೇಕು ಎಂಬ ಆಸೆ ಇದೆ. ಆದರೆ ನಾನು ಬೇರೆ ಸ್ಥಳಕ್ಕೆ ಹೋಗಿ ವಿದ್ಯಾಭ್ಯಾಸ ಮಾಡಲು ಹಣದ ಕೊರತೆಯಿದೆ. ಆದ್ದರಿಂದ ನನಗೆ ಸರ್ಕಾರ ಸಹಾಯ ಮಾಡಬಹುದು ಎನ್ನುವ ಆಶಾಭಾವನೆಯನ್ನು ನಾನು ಇಟ್ಟುಕೊಂಡಿದ್ದೇನೆ ಎಂದು ಅವರು ತಿಳಿಸಿದರು.