Tag: Accusers

  • ರೌಡಿಶೀಟರ್ ಫ್ರೂಟ್ ಇರ್ಫಾನ್ ಹತ್ಯೆ ಪ್ರಕರಣ- ಭೂಗತ ಪಾತಕಿ ಬಚ್ಚಾಖಾನ್ ಸಹಚರರ ಬಂಧನ

    ರೌಡಿಶೀಟರ್ ಫ್ರೂಟ್ ಇರ್ಫಾನ್ ಹತ್ಯೆ ಪ್ರಕರಣ- ಭೂಗತ ಪಾತಕಿ ಬಚ್ಚಾಖಾನ್ ಸಹಚರರ ಬಂಧನ

    ಹುಬ್ಬಳ್ಳಿ: ರೌಡಿಶೀಟರ್ ಫ್ರೂಟ್ ಇರ್ಫಾನ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಳೆ ಹುಬ್ಬಳ್ಳಿ ಠಾಣೆ ಪೊಲೀಸರು ಮತ್ತಿಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಇದರಿಂದ ಬಂಧಿತರ ಸಂಖ್ಯೆ ಏಳಕ್ಕೇರಿದಂತಾಗಿದೆ. ಬಂಧಿತರಿಬ್ಬರು ಬಚ್ಚಾಖಾನ್ ಸಹಚರರೆಂದು ಪೊಲೀಸ್ ಮೂಲಗಳು ತಿಳಿಸಿವೆ.

    ಮೈಸೂರಿನ ಶಿವರಾತ್ರಿ ಶೇಶ್ವನಗರದ ಬನ್ನಿಮಂಟಪ ಲೇಔಟ್ ನ ಶಹಜಾನ ಆಶ್ರಫ್. ಕೆ (24) ಹಾಗೂ ಮೈಸೂರು ಗಾಂಧಿನಗರದ ಸೈಯದ್ ಸೋಹೈಲ್ ಪೀರ್ ಸೈಯದ ಆಜೀಮ್ ಪೀರ್ (22) ಬಂಧಿತರು. ಆರೋಪಿಗಳಿಂದ ಎರಡು ಮೊಬೈಲ್ ಗಳನ್ನು ವಶಕ್ಕೆ ಪಡೆಯಲಾಗಿದೆ.

    ಧಾರವಾಡದ ರೌಡಿಶೀಟರ್ ಪ್ರೂಟ್ ಇರ್ಫಾನ್ ಮೇಲೆ ಅಗಸ್ಟ್ 6ರಂದು ಹಳೆ ಹುಬ್ಬಳ್ಳಿಯ ಕಲ್ಯಾಣ ಮಂಟಪದ ಬಳಿ ಗುಂಡಿನ ದಾಳಿ ನಡೆಸುವ ಮೂಲಕ ಹತ್ಯೆ ನಡೆಸಲಾಗಿತ್ತು. ಹತ್ಯೆಯಾದ ನಂತರ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು, ಇದೂವರೆಗೆ 7 ಜನರನ್ನು ಬಂಧಿಸಿದ್ದಾರೆ. ಅಲ್ಲದೆ ಈ ಗುಂಡಿನ ದಾಳಿ ಪ್ರಕರಣದಲ್ಲಿ ಬಾಂಬೆ ಮೂಲದ ಶಾರ್ಪ್ ಶೂಟರ್ ಗಳು ಪರಾರಿಯಾಗಿದ್ದು, ಅವರಿಗಾಗಿ ಶೋಧ ಮುಂದುವರಿದಿದೆ. ಘಟನೆಯ ಕುರಿತು ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ನಿಮ್ಮಿಂದ ನಮ್ಮನ್ನು ಏನೂ ಮಾಡಲು ಸಾಧ್ಯವಿಲ್ಲ, ಪೊಲೀಸರನ್ನು ಕೊಲ್ಲಿ, ಒಬ್ಬರನ್ನೂ ಬಿಡಬೇಡಿ – ಎಫ್ಐಆರ್‌ನಲ್ಲಿ ಏನಿದೆ?

    ನಿಮ್ಮಿಂದ ನಮ್ಮನ್ನು ಏನೂ ಮಾಡಲು ಸಾಧ್ಯವಿಲ್ಲ, ಪೊಲೀಸರನ್ನು ಕೊಲ್ಲಿ, ಒಬ್ಬರನ್ನೂ ಬಿಡಬೇಡಿ – ಎಫ್ಐಆರ್‌ನಲ್ಲಿ ಏನಿದೆ?

    – ಲಾಂಗ್, ದೊಣ್ಣೆ, ರಾಡ್, ಕಲ್ಲು, ಇಟ್ಟಿಗೆಗಳಿಂದ ದಾಳಿ
    – ದೂರು ನೀಡಿದ ಇನ್ಸ್ ಪೆಕ್ಟರ್ ಕೇಶವಮೂರ್ತಿ

    ಬೆಂಗಳೂರು: ಡಿಜೆ ಹಳ್ಳಿಯಲ್ಲಿ ನಡೆದ ಗಲಭೆಗೆ ಸಂಬಂಧಿಸಿದಂತೆ ಪೊಲೀಸರೂ ದೂರುಗಳ ಮೇಲೆ ದೂರು ದಾಖಲಾಗುತ್ತಿದ್ದು, ಡಿಜೆ ಹಳ್ಳಿ ಇನ್ಸ್ ಪೆಕ್ಟರ್ ಕೇಶವಮೂರ್ತಿ ಸೇರಿ ಒಟ್ಟು 12 ಎಫ್‍ಐಆರ್ ದಾಖಲಾಗಿದೆ.

    ಇನ್ಸ್ ಪೆಕ್ಟರ್ ಕೇಶವಮೂರ್ತಿಯವರು ತಮ್ಮ ದೂರಿನಲ್ಲಿ ಘಟನೆ ಕುರಿತು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದು, ಎಫ್‍ಐಆರ್ ನಲ್ಲಿ ಗಲಭೆ ಕುರಿತು ವಿವರಿಸಲಾಗಿದೆ. ಐಪಿಸಿ ಸೆಕ್ಷನ್ 143, 147, 307, 436, 353, 332, 333, 427, 504, 506, 149, 34 ಅಡಿ ಅಲ್ಲದೆ ಸಾರ್ವಜನಿಕ ಆಸ್ತಿ ಹಾನಿ ತಡೆ ಕಾಯ್ದೆ ಹಾಗೂ ಕರ್ನಾಟಕ ಆಸ್ತಿ, ಪಾಸ್ತಿ ಹಾನಿ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

    ಡಿಜೆ ಹಳ್ಳಿ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಎನ್.ಎನ್.ಕೇಶವಮೂರ್ತಿ ಈ ಕುರಿತು ವಿವರಿಸಿದ್ದು, ಪೊಲೀಸರನ್ನು ಕೊಲ್ಲಿ, ಬಿಡಬೇಡಿ ಅವರನ್ನು, ಮುಗಿಸಿಬಿಡಿ, ಒಬ್ಬರನ್ನೂ ಬಿಡಬೇಡಿ ಎಂದು ಕಿರುಚುತ್ತಿದ್ದರು. ಐವರು ಆರೋಪಿಗಳು ದೊಂಬಿಗೆ ಪ್ರಚೋದನೆ ನೀಡಿದ್ದು, ತಮ್ಮ ಆಕ್ರೋಶಭರಿತ ಹೇಳಿಕೆಗಳಿಂದ 300ಕ್ಕೂ ಹೆಚ್ಚು ಉದ್ರಿಕ್ತರನ್ನು ಪ್ರಚೋದಿಸುತ್ತಿದ್ದರು ಎಂದು ಅವರು ದೂರು ನೀಡಿದ್ದಾರೆ.

    ದೂರಿನಲ್ಲಿ ಏನಿದೆ?
    ಎ1 ಆರೋಪಿ ಅಫ್ನಾನ್, ಎ2 ಆರೋಪಿ ಮುಜಾಮಿಲ್ ಪಾಷಾ, ಎ3 ಸೈಯದ್ ಮಸೂದ್, ಎ4 ಮತ್ತು ಎ5 ಆರೋಪಿ ಅಲ್ಲಾ ಬಕಾಶ್ ಪ್ರಚೋದನೆ ನೀಡಿದ್ದು, ಇವರ ಹಿಂಬಾಲಕರಾದ 200-300 ಜನ ಶಸ್ತ್ರಾಸ್ತ್ರಗಳಿಂದ ದಾಳಿ ಮಾಡಿದ್ದಾರೆ. ಪೊಲೀಸ್ ಅಧಿಕಾರಿಗಳಿನ್ನು ಸಾಯಿಸಬೇಕು, ಠಾಣೆಗೆ ಹಾನಿಯನ್ನುಂಟು ಮಾಡಬೇಕು ಎಂಬ ಉದ್ದೇಶದಿಂದ 300ಕ್ಕೂ ಹೆಚ್ಚು ಜನರ ಅಕ್ರಮ ಕೂಟ ರಚಿಸಿಕೊಂಡು ಮಚ್ಚು, ಲಾಂಗ್, ದೊಣ್ಣೆ, ರಾಡ್, ಕಲ್ಲು, ಇಟ್ಟಿಗೆ ಗಳನ್ನು ಹಿಡಿದು ಪೊಲೀಸರ ಮೇಲೆ ಪ್ರಹಾರ ಮಾಡಿದ್ದಾರೆ. ಅಲ್ಲದೆ ಅನುಮಾನ ಬಾರದಂತೆ ಡಿಜೆ ಹಳ್ಳಿ ಪೊಲೀಸ್ ಠಾಣೆ ಸುತ್ತುವರಿದಿದ್ದ ಗ್ಯಾಂಗ್, ಠಾಣೆಯ ಕಿಟಕಿ, ಬಾಗಿಲು ಜಖಂ ಗೊಳಿಸಿ, ಬೇಸ್ ಮೆಂಟ್ ನಲ್ಲಿದ್ದ ವಾಹನಗಳಿಗೆ ಬೆಂಕಿ ಹಾದ್ದಾರೆ.

    ಪೊಲೀಸ್ ಠಾಣೆ ಸುತ್ತ 144 ಸೆಕ್ಷನ್ ಹಾಕಲಾಗಿದೆ. ಈ ಕ್ಷಣವೇ ಜಾಗ ಖಾಲಿ ಮಾಡಬೇಕು ಎಂದು ಸೂಚನೆ ನೀಡದರೂ, ಡೋಂಟ್ ಕೇರ್ ಎಂದು ಪೊಲೀಸರು ಮತ್ತು ಠಾಣೆಯನ್ನು ಮುಗಿಸಿ ಬಿಡುತ್ತೇವೆ ಎಂದು ಕೂಗೂತ್ತ ಠಾಣೆ ಹಾಗೂ ನಮ್ಮ ಮೇಲೆ ದಾಳಿ ಮಾಡಿದರು. ಈ ವೇಳೆ ಪೊಲೀಸ್ ಸಿಬ್ಬಂದಿ ಶ್ರೀಧರ್ ಎಚ್.ಸಿ.ಅವರ ತಲೆಗೆ ಕಲ್ಲು ತಗುಲ್ಲಿದ್ದು, ತೀವ್ರ ಗಾಯವಾಗಿ ರಕ್ತಸ್ರಾವ ಉಂಟಾಗಿತ್ತು. ಅಧಿಕಾರಿ ಕೂಡಲೇ ಮೇಲಾಧಿಕಾರಿಗೆ ತಿಳಿಸಿ, ಇನ್ನೂ ಹೆಚ್ಚಿನ ಶಸ್ತ್ರಾಸ್ತ್ರಗಳ ಅಗತ್ಯವಿದೆ ಎಂದು ಹೇಳಿದ್ದಾರೆ. ನಂತರ ಸೇರಿದ್ದ ಗುಂಪನ್ನು ಚದುರಿ ಹೋಗುವಂತೆ ಹಾಗೂ ಶಾಂತಿ ಕಾಪಾಡುವಂತೆ ಹೇಳಿದ್ದಾರೆ. ಆರೋಪಿಗಳು ಅವರ ಮಾತನ್ನು ಕೇಳದೆ ಪೊಲೀಸ್ ಠಾಣೆಯ ಒಳಗೆ ಹಾಗೂ ಹೊರಗೆ ನಿಂತಿದ್ದ ಸರ್ಕಾರಿ ಹಾಗೂ ಖಾಸಗಿ ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ.

    ಬಲಪ್ರಯೋಗ ಮಾಡಬೇಕಾಗುತ್ತದೆ ಎಂದರೂ ಕೇಳದ ಗುಂಪು, ಸಿಎಆರ್ ಪಡೆಯ ಸಿಬ್ಬಂದಿಯಿಂದ ಶಸ್ತ್ರಾಸ್ತ್ರಗಳನ್ನು ಕಿತ್ತುಕೊಂಡು ದಾಳಿಗೆ ಮುಂದಾಯಿತು. ಇನ್ಸ್‍ಪೆಕ್ಟರ್ ಆಗಲಿ, ಸಿಬ್ಬಂದಿಯಾಗಲಿ ಏನೂ ಮಾಡಿಕೊಳ್ಳಲು ಆಗುವುದಿಲ್ಲ. ಇಂದು ನಾವು ಉದ್ದೇಶಿಸಿದ ಕೆಲಸ ಮಾಡಿಯೇ ತೀರುತ್ತೇವೆ ಎಂದು ಹೇಳುತ್ತಿದ್ದರು. ತಕ್ಷಣವೇ ಸಿಬ್ಬಂದಿ ಲಾಠಿ ಪ್ರಹಾರ ಮಾಡಿದ್ದು, ಈ ವೇಳೇ ಸಿಬ್ಬಂದಿ ಮೇಲೆ ಕಲ್ಲು ಹಾಗೂ ಇಟ್ಟಿಗೆಗಳನ್ನು ತೂರಿದ್ದಾರೆ. ಈ ವೇಳೆ ಅಶ್ರುವಾಯುವನ್ನು ಸಿಡಿಸಲಾಗಿದ್ದು, ಇಷ್ಟಾದರೂ ಆರೋಪಿಗಳು ಪೊಲೀಸರನ್ನು ಮುಗಿಸಿಯೇ ತೀರುತ್ತೇವೆ ಎಂದು ಜೋರಾಗಿ ಅರಚಾಡುತ್ತ, ಸಶಸ್ತ್ರ ಮೀಸಲು ಪಡೆಯ ಸಿಬ್ಬಂದಿ ಬಳಿ ಇದ್ದ ಶಸ್ತ್ರಾಸ್ತ್ರಗೋಳನ್ನು ಕಿತ್ತುಕೊಂಡಿದ್ದಾರೆ. ಈ ವೇಳೆ ಸಿಬ್ಬಂದಿ ಎಚ್ಚರಿಕೆ ನೀಡಿದ್ದು, ಸಾರ್ವಜನಿಕ ಆಸ್ತಿಪಾಸ್ತಿ ಹಾನಿ ಮಾಡಿದರೆ, ಜೀವಕ್ಕೆ ಅಪಾಯವನ್ನುಂಟುಮಾಡಿದರೆ ತೀವ್ರ ಬಲಪ್ರಯೋಗ ಮಾಡಬೇಕಾಗುತ್ತದೆ ಎಂದು ಹೇಳಿದ್ದಾರೆ. ಇಷ್ಟಾದರೂ ನಿಮ್ಮಿಂದ ಏನೂ ಮಾಡಿಕೊಳ್ಳಲು ಆಗುವುದಿಲ್ಲ. ಇಂದು ನಾವು ಉದ್ದೇಶಿಸಿದ ಕೆಲಸವನ್ನು ಮಾಡಿಯೇ ತೀರುತ್ತೇವೆ ಎಂದು ಠಾಣೆಗೆ ನುಗ್ಗಿದ್ದಾರೆ.

    ಠಾಣೆಯ ಸಿಬ್ಬಂದಿಯನ್ನು ಕೊಲೆ ಮಾಡುವ ಉದ್ದೇಶದಿಂದ ಉದ್ರಿಕ್ತರು ಠಾಣೆಯ ಒಳಗೆ ನುಗ್ಗಿದ್ದು, ಸಿಬ್ಬಂದಿಯನ್ನು ಕೊಲೆ ಮಾಡಲು ಯತ್ನಿಸಿದ್ದಾರೆ. ಅಲ್ಲದೆ ಅಲ್ಲಿನ ವಾಹನಗಳಿಗೆ ಬೆಂಕಿ ಹಚ್ಚಿ, ಠಾಣೆಯನ್ನು ಸಂಪೂರ್ಣ ಧ್ವಂಸ ಮಾಡಲು ಮುಂದಾಗಿದ್ದಾರೆ. ಆಗ ಅನಿವಾರ್ಯವಾಗಿ ಸಿಬ್ಬಂದಿ ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿದ್ದಾರೆ. ಇದನ್ನು ಲೆಕ್ಕಿಸದ ಅಫ್ನಾನ್, ಮುಜಾಮಿಲ್ ಪಾಷಾ, ಸೈಯದ್ ಮಸೂದ್ ಮತ್ತು ಅಲ್ಲಾ ಬಕಾಶ್ ಸಶಸ್ತ್ರ ಮೀಸಲು ಪಡೆ ಸಿಬ್ಬಂದಿಯ ಶಸ್ತ್ರಾಸ್ತ್ರಗಳನ್ನು ಕಿತ್ತುಕೊಂಡು, ನನ್ನನ್ನು ಹಾಗೂ ಠಾನೆಯ ಸಿಬ್ಬಂದಿಯನ್ನು ಕೊಲ್ಲಲು ಯತ್ನಿಸಿದ್ದಾರೆ.

    ಕೊನೆಗೆ ಮತ್ತೆ ಗಾಳಿಯಲ್ಲಿ ಗುಂಡು ಹಾರಿಸುತ್ತೇವೆ ಇಲ್ಲಿಂದ ಚದುರಿ ಪ್ರಾಣಾಪಾಯವಾಗಬಹುದೆಂದು ಹೇಳಿದರೂ ಸೇರಿದ್ದ ಜನ ಮಾತು ಕೇಳಲಿಲ್ಲ. ಪರಿಸ್ಥಿತಿಯನ್ನು ಮತ್ತಷ್ಟು ಉದ್ವಿಗ್ನಗೊಳಿಸಿದರು. ಆಗ ಮತ್ತೆ ಹಲವು ಸುತ್ತು ಗುಂಡು ಹಾರಿಸಲು ಪ್ರಾರಂಭಿಸಿದೆವು. ಆಗ ಕೆಲವು ಜನರಿಗೆ ತಾಗಿದ್ದರಿಂದ ಸ್ಥಳದಲ್ಲಿದ್ದ ಜನ ದಿಕ್ಕಾಪಾಲಾಗಿದ್ದಾರೆ. ಆಗ ಕೆಳಗೆ ಬಿದ್ದ ಕೆಲ ಜನರಿಗೆ ಗಾಯವಾಗಿದೆ. ಆಗ ನಾನು ಹಾಗೂ ಸಿಬ್ಬಂದಿ ಐವರು ಪ್ರಮುಖ ಆರೋಪಿಗಳನ್ನು ಹಾಗೂ ಅವರೊಂದಿಗಿದ್ದ 10 ಜನರನ್ನು ಘೇರಾವ್ ಮಾಡಿ ವಶಕ್ಕೆ ಪಡೆದೆವು. ಈ ವೇಳೆಯೂ ಐವರು ಪ್ರಮುಖ ಆರೋಪಿಗಳು ತಪ್ಪಿಸಿಕೊಂಡು ಹೋಗಲು ನನ್ನ ಮೇಲೆ ಹಾಗೂ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದರು.

    ಅಷ್ಟರಲ್ಲಾಗಲೇ ಪೊಲೀಸರ ಸಂಖ್ಯೆ ಹೆಚ್ಚಾಗಿದ್ದರಿಂದ ಆರೋಪಿಗಳು ಸ್ಥಳದಿಂದ ತಪ್ಪಿಸಿಕೊಂಡು ಹೋಗಲು ಸಾಧ್ಯವಾಗಲಿಲ್ಲ. ಆಗ ಈ ಐವರನ್ನು ವಶಕ್ಕೆ ಪಡೆದು ಠಾಣೆಯಲ್ಲಿರಿಸಿದೆವು. ಆಗ ಪರಿಸ್ಥಿತಿ ಹತೋಟಿಗೆ ಬಂದಿತು. ಇದೀಗ ಇವರ ವಿರುದ್ಧ ಸರ್ಕಾರದ ಪರವಾಗಿ ದೂರು ಸಲ್ಲಿಸುತ್ತಿದ್ದೇನೆ, ಇವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು.

  • ಗಲ್ಲು ತಡೆ ಕೋರಿ ಅಂತಾರಾಷ್ಟ್ರೀಯ ನ್ಯಾಯಾಲಯದ ಮೆಟ್ಟಿಲೇರಿದ ನಿರ್ಭಯಾ ರೇಪಿಸ್ಟ್‌ಗಳು

    ಗಲ್ಲು ತಡೆ ಕೋರಿ ಅಂತಾರಾಷ್ಟ್ರೀಯ ನ್ಯಾಯಾಲಯದ ಮೆಟ್ಟಿಲೇರಿದ ನಿರ್ಭಯಾ ರೇಪಿಸ್ಟ್‌ಗಳು

    ನವದೆಹಲಿ: ನಿರ್ಭಯಾ ಅತ್ಯಾಚಾರ ಪ್ರಕರಣದ ನಾಲ್ವರು ಆರೋಪಿಗಳ ಪೈಕಿ ಮೂವರು ದೋಷಿಗಳು ತಮ್ಮ ಗಲ್ಲು ಶಿಕ್ಷೆಯನ್ನು ಪ್ರಶ್ನಿಸಿ ಅಂತಾರಾಷ್ಟ್ರೀಯ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.

    ನಿರ್ಭಯಾ ಅತ್ಯಾಚಾರ ಪ್ರಕರಣದ ದೋಷಿಗಳು ಗಲ್ಲು ಶಿಕ್ಷಿಯಿಂದ ತಪ್ಪಿಸಿಕೊಳ್ಳಲು ದಿನಕ್ಕೊಂದು ನಾಟಕವಾಡುತ್ತಿದ್ದು, ರಾಷ್ಟ್ರಪತಿ, ಹೈಕೋರ್ಟ್, ಸುಪ್ರೀಂ ಕೋರ್ಟ್ ಹೀಗೆ ವಿವಿಧೆಡೆ ಕ್ಷಮಾದಾನಕ್ಕೆ ಅರ್ಜಿ ಸಲ್ಲಿಸುತ್ತಿದ್ದಾರೆ. ಆದರೆ ಎಲ್ಲ ಅರ್ಜಿಗಳು ತಿರಸ್ಕøತವಾಗುತ್ತಿದೆ. ಈ ಮಧ್ಯೆ ಈಗ ಅಂತಾರಾಷ್ಟ್ರೀಯ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.

    ಮಾರ್ಚ್ 20ರಂದು ಬೆಳಗ್ಗೆ 5.30ಕ್ಕೆ ಗಲ್ಲಿಗೇರಿಸಲು ಈಗಾಗಲೇ ದೆಹಲಿ ನ್ಯಾಯಾಲಯ ಆದೇಶಿಸಿದ್ದು, ಇದೀಗ ದೋಷಿಗಳು ತಮ್ಮ ಕಳ್ಳಾಟವನ್ನು ಮತ್ತೆ ಪ್ರಾರಂಭಿಸಿದ್ದಾರೆ. ಅಕ್ಷಯ್ ಸಿಂಗ್, ಪವನ್ ಗುಪ್ತಾ ಹಾಗೂ ವಿನಯ್ ಶರ್ಮಾ ಅವರು ಅಂತರಾಷ್ಟ್ರೀಯ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.

    ಬೆಳಗ್ಗೆಯಷ್ಟೇ ಗಲ್ಲು ಶಿಕ್ಷೆಗೊಳಗಾಗಿರುವ ಅಪರಾಧಿಗಳಲ್ಲಿ ಒಬ್ಬನಾದ ಮುಖೇಶ್ ಸಿಂಗ್ ಸಲ್ಲಿಸಿದ್ದ ಕ್ಯುರೇಟಿವ್ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾ ಮಾಡಿದೆ. ನ್ಯಾಯಾಧೀಶ ಅರುಣ್ ಮಿಶ್ರಾ ಹಾಗೂ ಎಂ.ಆರ್.ಶಾ ಅವರಿದ್ದ ಪೀಠ ಅರ್ಜಿಯ ವಿಚಾರಣೆ ನಡೆಸಿ, ಈ ಅರ್ಜಿ ವಿಚಾರಣೆಗೆ ಯೋಗ್ಯವಲ್ಲ ಎಂದು ಹೇಳಿ ತಿರಸ್ಕರಿಸಿದೆ.

    ಈ ಪ್ರಕರಣದಲ್ಲಿ ಅಮಿಕಸ್ ಕ್ಯೂರಿ ವೃಂದಾ ಗ್ರೋವರ್ ತಪ್ಪು ಮಾಹಿತಿ ನೀಡಿದ್ದರು. ಹೀಗಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮುಖೇಶ್ ಅರ್ಜಿ ಸಲ್ಲಿಸಿದ್ದ. ಆದರೆ ಈ ಆರೋಪದ ಕುರಿತು ದ್ವಿಸದಸ್ಯರ ಪೀಠ ವಿರೋಧ ವ್ಯಕ್ತಪಡಿಸುತ್ತಿದ್ದಂತೆ ಮುಖೇಶ್ ಪರ ವಕೀಲ ಎಂ.ಎಲ್.ಶರ್ಮಾ ಅವರು ಅರ್ಜಿಯನ್ನು ಹಿಂಪಡೆಯುವಂತೆ ಸೂಚಿಸಿದರು. ಹೀಗಾಗಿ ಮುಖೇಶ್ ಈ ಅರ್ಜಿಯನ್ನು ಹಿಂಪಡೆದಿದ್ದಾನೆ.

    ಈ ವೇಳೆ ಅರ್ಜಿಯಲ್ಲಿ ಮಾಡಲಾದ ಸಹಿ ಕುರಿತು ಪ್ರಶ್ನಿಸಿದ ನ್ಯಾಯಾಧೀಶರು, ಮುಖೇಶ್ ಅಫಿಡೆವಿಟ್‍ನಲ್ಲಿ ಆತ ಸಹಿ ಮಾಡಿಲ್ಲ. ಬದಲಿಗೆ ಆತನ ಸಹೋದರ ಸುರೇಶ್ ಅರ್ಜಿಗೆ ಸಹಿ ಮಾಡಿದ್ದಾನೆ. ನೀವು ಸಲ್ಲಿಸಿದ ಅರ್ಜಿಗೆ ಸುರೇಶ್ ಹೇಗೆ ಸಹಿ ಮಾಡಿದ, ಜೈಲಿನಲ್ಲಿ ಏನಾಯಿತು ಎಂಬುದು ಅವನಿಗೆ ಹೇಗೆ ಗೊತ್ತಾಯಿತು? ಇದು ಮುಖೇಶ್‍ಗೆ ತಿಳಿದಿಲ್ಲವೆಂದು ಅವನಿಗೆ ಹೇಗೆ ಗೊತ್ತಾಯಿತು ಎಂದು ಪ್ರಶ್ನಿಸಿದರು. ಮುಖೇಶ್ ಪರವಾಗಿ ಆತ ಮಾತನಾಡಲು ಸಾಧ್ಯವಿಲ್ಲ. ಏಕೆಂದರೆ ಇದು ಮುಖೇಶ್ ಸಲ್ಲಿಸಿದ್ದ ಅರ್ಜಿ. ಈ ಅರ್ಜಿಯನ್ನು ನೀವೇ ಹಿಂಪಡೆಯುತ್ತಿರೋ ಅಥವಾ ನಾವೇ ವಜಾ ಮಾಡಬೇಕೇ ಎಂದು ನ್ಯಾಯಾಧೀಶ ಅರುಣ್ ಮಿಶ್ರಾ ದೋಷಿಗಳ ಪರ ವಕೀಲ ಶರ್ಮಾ ಅವರನ್ನು ಪ್ರಶ್ನಿಸಿತ್ತು.

    ನೀವು ಈ ನ್ಯಾಯಾಲಯದ ವಕೀಲರ ವಿರುದ್ಧ ವಂಚನೆಯ ಗಂಭೀರ ಆರೋಪ ಮಾಡುತ್ತಿದ್ದೀರಿ. ನಿಮ್ಮ ಜ್ಞಾನದ ಮೂಲ ಯಾವುದು? ಜೈಲಿನಲ್ಲಿ ಏನಾಯಿತು ಎಂಬ ವೈಯಕ್ತಿಕ ವಿಚಾರ ಸುರೇಶ್‍ಗೆ ಹೇಗೆ ಗೊತ್ತಾಯಿತು ಎಂದು ಮುಖೇಶ್ ಪರ ವಕೀಲ ಶರ್ಮಾ ಅವರನ್ನು ಪ್ರಶ್ನಿಸಿತು.

    ಮರಣದಂಡನೆ ಶಿಕ್ಷೆಗೆ ಗುರಿಯಾದ ಒಂದು ವಾರದಲ್ಲಿ ಕ್ಯುರೇಟಿವ್ ಅರ್ಜಿ ಸಲ್ಲಿಸಬೇಕು ಎಂದು ನ್ಯಾಯಾಲಯದ ಮಧ್ಯಸ್ಥಿಕೆದಾರೆ(ಅಮಿಕಸ್ ಕ್ಯೂರಿ) ವಕೀಲೆ ವೃಂದಾ ಗ್ರೋವರ್ ತಪ್ಪು ಮಾಹಿತಿ ನೀಡಿದ್ದರು. ಅಲ್ಲದೆ, ಯಾವುದೇ ಮರು ಪರಿಶೀಲನಾ ಅರ್ಜಿ ತಿರಸ್ಕೃತವಾದ 3 ವರ್ಷಗಳವರೆಗೂ ಕ್ಯುರೇಟಿವ್ ಅರ್ಜಿ ಸಲ್ಲಿಕೆಗೆ ಅವಕಾಶವಿದೆ. ಹೀಗಾಗಿ, ಕ್ಯುರೇಟಿವ್ ಹಾಗೂ ಕ್ಷಮಾದಾನ ಅರ್ಜಿ ಸಲ್ಲಿಕೆಗೆ 2021ರ ಜುಲೈವರೆಗೂ ಅವಕಾಶ ಕಲ್ಪಿಸಬೇಕು ಎಂದು ತನ್ನ ವಕೀಲರ ಮೂಲಕ ಮುಖೇಶ್ ಕೋರಿದ್ದ.

  • ಅತ್ಯಾಚಾರಿ ಆರೋಪಿಗಳನ್ನು ಕೊಂದವರಿಗೆ 1 ಲಕ್ಷ ರೂ.ಬಹುಮಾನ: ಅರ್ಚಕರಿಂದ ಘೋಷಣೆ

    ಅತ್ಯಾಚಾರಿ ಆರೋಪಿಗಳನ್ನು ಕೊಂದವರಿಗೆ 1 ಲಕ್ಷ ರೂ.ಬಹುಮಾನ: ಅರ್ಚಕರಿಂದ ಘೋಷಣೆ

    ಲಕ್ನೋ: ಅತ್ಯಾಚಾರಿ ಆರೋಪಿಗಳನ್ನು ಕೊಲೆ ಮಾಡಿದರೆ ಒಂದು ಲಕ್ಷ ರೂ. ಬಹುಮಾನ ನೀಡುವುದಾಗಿ ಅರ್ಚಕರೊಬ್ಬರು ಘೋಷಿಸಿದ್ದಾರೆ.

    ಅತ್ಯಾಚಾರ ಪ್ರಕರಣಗಳಿಗೆ ಸಂಬಂಧಿಸಿದಂತೆ ಜನತೆ ಪೊಲೀಸ್ ಹಾಗೂ ನ್ಯಾಯಾಂಗ ವ್ಯವಸ್ಥೆ ಮೇಲೆ ನಂಬಿಕೆ ಕಳೆದುಕೊಳ್ಳುತ್ತಿರುವ ಬೆನ್ನಲ್ಲೇ ಅತ್ಯಾಚಾರಿ ಆರೋಪಿಗಳಿಗೆ ತಾವೇ ಶಿಕ್ಷೆ ನೀಡಬೇಕೆಂಬ ಉದ್ದೇಶದಿಂದ ಈ ಇಂತಹ ಕೆಲಸಗಳಿಗೆ ಕೈ ಹಾಕುತ್ತಿದ್ದಾರೆ. ಇಲ್ಲೊಬ್ಬ ಅರ್ಚಕರು ಇದೇ ರೀತಿ ಆಫರ್ ನೀಡಿದ್ದು, ಯಾವುದೇ ಪ್ರಕರಣದ ಅತ್ಯಾಚಾರಿಯನ್ನು ಕೊಲೆ ಮಾಡಿದವರಿಗೆ ಒಂದು ಲಕ್ಷ ರೂ.ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ.

    ಅಯೋಧ್ಯೆಯ ಹನುಮಾನ್ ಗಿರಿ ದೇವಸ್ಥಾನದ ಅರ್ಚಕರೊಬ್ಬರು ಅತ್ಯಾಚಾರಿಗಳನ್ನು ಕೊಲೆ ಮಾಡಿದವರಿಗೆ 1 ಲಕ್ಷ ರೂ.ಬಹುಮಾನವನ್ನು ಘೋಷಿಸಿದ್ದಾರೆ. ಅಲ್ಲದೆ ಒಂದು ವೇಳೆ ಪೊಲೀಸರೇ ಆರೋಪಿಗಳನ್ನು ಕೊಲೆ ಮಾಡಿದಲ್ಲಿ ಪೊಲೀಸರ ಕುಟುಂಬಕ್ಕೆ ಸಹಾಯ ಮಾಡುವುದಾಗಿ ತಿಳಿಸಿದ್ದಾರೆ.

    ತಮ್ಮ ಘೋಷಣೆ ಕುರಿತು ಸ್ಪಷ್ಟೀಕರಣ ನೀಡಿರುವ ಅರ್ಚಕರು, ಅತ್ಯಾಚಾರದಂತಹ ಗಂಭೀರ ಪ್ರಕರಣಗಳಲ್ಲಿ ಆರೋಪಿಗಳ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಇದರ ಉದ್ದೇಶವಾಗಿದೆ. ಅಲ್ಲದೆ ಇಂತಹ ಕೃತ್ಯಗಳು ಮಕ್ಕಳ ಮೇಲೆಯೇ ನಡೆಯುತ್ತಿದ್ದು ಆಘಾತಕಾರಿ ಸಂಗತಿಯಾಗಿದೆ. ಈ ಕುರಿತು ಸಮಾಜವೇ ಎಚ್ಚೆತ್ತುಕೊಳ್ಳದಿದ್ದರೆ, ಇಂತಹ ಅಪರಾಧಗಳನ್ನು ತಡೆಯಲು ಸಾಧ್ಯವಿಲ್ಲ ಎಂದು ಅರ್ಚಕರು ತಿಳಿಸಿದ್ದಾರೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.

    ಅರ್ಚಕರ ಘೋಷಣೆ ಕುರಿತು ಈ ವರೆಗೆ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ. ಅಯೋಧ್ಯೆಯ ಹಿರಿಯ ಪೊಲೀಸ್ ಅಧಿಕಾರಿ ಅಮರ್ ಸಿಂಗ್ ಈ ಕುರಿತು ಪ್ರತಿಕ್ರಿಯಿಸಿ, ಇಂತಹ ಹೇಳಿಕೆ ಕುರಿತು ನಮ್ಮ ಅರಿವಿಗೆ ಬಂದಿಲ್ಲ. ಒಂದು ವೇಳೆ ಸಾರ್ವಜನಿಕವಾಗಿ ಈ ರೀತಿಯಾಗಿ ಹೇಳಿದ್ದರೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

    ಈ ಹಿಂದೆ ಶಿವಸೇನಾ ನಾಯಕ ಅರುಣ್ ಪಾಠಕ್ ಇದೇ ರೀತಿ ಹೇಳಿಕೆ ನೀಡಿ, ಹಿಂದೂ ಮಹಾಸಭಾದ ಕಮಲೇಶ್ ತಿವಾರಿಯವರನ್ನು ಕೊಲೆ ಮಾಡಿ ಬಂಧನಕ್ಕೊಳಗಾಗಿರುವ ಆರೋಪಿಗಳನ್ನು ಕೊಲೆ ಮಾಡಿದವರಿಗೆ 1 ಕೋಟಿ ರೂ. ಬಹುಮಾನ ನೀಡುವುದಾಗಿ ಘೋಷಿಸಿದ್ದರು. ಈ ವಿಡಿಯೋ ಹೇಳಿಕೆಯಲ್ಲಿ ಯಾರಾದರೂ ಕಮಲೇಶ್ ತಿವಾರಿಯವರನ್ನು ಕೊಲೆ ಮಾಡಿದ ಆರೋಪಿಗಳನ್ನು ಕೊಲೆ ಮಾಡಿದರೆ 1 ಕೋಟಿ ರೂ. ಬಹುಮಾನ ನೀಡುವುದಾಗಿ ತಿಳಿಸಿದ್ದರು.