ಬೆಂಗಳೂರು: ಉದ್ಯಮಿಯ ಮೊಮ್ಮಗನ ಪುಂಡಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಆದರೆ ವಿಷ್ಣು ಇನ್ನೂ ಕೂಡ ಪೊಲೀಸರಿಗೆ ಮರೀಚಿಕೆಯಾಗಿಯೇ ಉಳಿದಿದ್ದಾನೆ. ಇದರ ಬೆನ್ನಲ್ಲೆ ಇಂದು ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸುತ್ತಾ ಇದ್ದು ಪೊಲೀಸರ ಕಣ್ಣಿಗೆ ಮಣ್ಣೆರಚುವ ಪ್ರಯತ್ನ ಮಾಡುತ್ತಿದ್ದಾನೆ.
ಸಾಲು ಸಾಲು ರಜೆಯ ಹಿನ್ನೆಲೆಯಲ್ಲಿ ಜಾಮೀನಿಗೆ ಅರ್ಜಿ ಸಲ್ಲಿಸಲು ಸಾಧ್ಯವಾಗದೆ ಪರಾರಿಯಾಗಿರೋ ವಿಷ್ಣುವಿಗೆ ಇಂದು ನಿರೀಕ್ಷಣಾ ಜಾಮೀನು ಸಿಗುತ್ತದೆಯೇ ನೋಡಬೇಕಿದೆ. ಆದರೆ ವಿಷ್ಣುವಿಗಾಗಿ ಹೈದರಾಬಾದ್ ಮತ್ತು ಗೋವಾದಲ್ಲಿ ಹುಡುಕಾಟ ಮಾಡುತ್ತಿದ್ದು ವಿಷ್ಣುವಿನ ಅಪ್ಪ ಶ್ರೀನಿವಾಸ್ ಮೂರ್ತಿ ಅವರನ್ನು ಹೈದರಾಬಾದ್‍ನಲ್ಲೆಲ್ಲಾ ಅಲೆಸುತ್ತಿದ್ದಾರೆ.

ಈ ನಡುವೆ ಸ್ಪಷ್ಟನೆ ನೀಡಿರುವ ವಿಷ್ಣು ತಂದೆ ಶ್ರೀನಿವಾಸ್ ಮೂರ್ತಿ, ವಿಷ್ಣು ಡ್ರಗ್ ವ್ಯಸನಿ ಅಲ್ಲ. ಆತನ ಕಾರಿನಲ್ಲಿ ಡ್ರಗ್ ಸಿಕ್ಕಿರುವ ಸಾಧ್ಯತೆ ಇಲ್ಲ. ಅಪಘಾತವಾದಾಗ ಯಾರೋ ತಂದು ಇಟ್ಟಿರಬಹುದು ಅನ್ನಿಸುತ್ತಿದೆ. ಇನ್ನು ಮಾಧ್ಯಮಗಳಲ್ಲಿ ಸುದ್ದಿ ನೋಡಿ ಆಸ್ಪತ್ರೆಯಿಂದ ಹೊರಟು ಹೋಗಿರಬಹುದು. ಆತ ಎಲ್ಲಿ ಹೋಗಿದ್ದಾನೆ ಎಂಬುದು ಗೊತ್ತಿಲ್ಲ ಅಂತಾ ತಿಳಿಸಿದ್ದಾರೆ. ಅಲ್ಲದೇ ಘಟನೆಯಿಂದ ನಮ್ಮ ಕುಟುಂಬದ ಗೌರವಕ್ಕೆ ಕುಂದು ಉಂಟಾಗದಂತೆ ಕಾಪಾಡಬೇಕೆಂದೂ ಮನವಿ ಮಾಡಿಕೊಂಡಿದ್ದಾರೆ.

ಅಪಘಾತ ನಡೆದಿದ್ದು ಹೇಗೆ?
ಗೀತಾವಿಷ್ಣು ಅವರು ಜಯನಗರದಲ್ಲಿ ಹೋಟೆಲ್ ಉದ್ಯಮ ನಡೆಸುತ್ತಿದ್ದಾರೆ. ಘಟನೆ ನಡೆದ ದಿನ ಅವರು ವ್ಯಾಪಾರ ಮುಗಿಸಿ ಮನೆಗೆ ತೆರಳುತ್ತಿದ್ದರು. ಹಾಗೆ ತೆರಳುವ ಹೊತ್ತಲ್ಲಿ ಅವರು ಹೋಗುವ ದಾರಿಯಲ್ಲಿ ಗ್ರೀನ್ ಸಿಗ್ನಲ್ ಇದ್ದುದರಿಂದ ಚಾಲಕರು ವಾಹನವನ್ನು ಮುನ್ನಡೆಸುತ್ತಿದ್ದರು. ಅದೇ ಹೊತ್ತಿಗೆ ಪಕ್ಕದ ರಸ್ತೆಯಿಂದ ರೆಡ್ ಸಿಗ್ನಲ್ ಇದ್ದಾಗಲ್ಲೂ ಮಾರುತಿ ಓಮ್ನಿ ವಾಹನ ವೇಗವಾಗಿ ಬಂದಿದ್ದರಿಂದ, ಅಪಘಾತವನ್ನು ತಪ್ಪಿಸುವ ಸಲುವಾಗಿ ಚಾಲಕ ಕಾರನ್ನು ಪಕ್ಕಕ್ಕೆ ತಿರುಗಿಸಿದ್ದಾರೆ. ಹಾಗಿದ್ದರೂ ಅದು ಓಮ್ನಿಗೆ ಡಿಕ್ಕಿ ಹೊಡೆದಿದೆ. ನಂತರ ವಾಹನ ಫುಟ್ ಪಾತ್ ಮೇಲೆ ಏರಿ ಎರಡು ಕಂಬಗಳ ನಡುವೆ ನಿಂತಿದೆ.

ಅಪಘಾತದ ತೀವ್ರತೆ ತಪ್ಪಿಸುವ ಸಲುವಾಗಿ ಎಚ್ಚರಿಕೆಯಿಂದಲೂ ಚಾಕಚಕ್ಯತೆಯಿಂದಲೂ ವಾಹನ ಓಡಿಸುವ ಮೂಲಕ ಚಾಲಕ ಆಗಬಹುದಾಗಿದ್ದ ಹಾನಿಯನ್ನು ತಪ್ಪಿಸಿದ್ದಾರೆ. ಅಪಘಾತದ ಸದ್ದು ಕೇಳುತ್ತಿದ್ದಂತೆ ಅಕ್ಕಪಕ್ಕದ ಅಂಗಡಿಗಳಲ್ಲಿದ್ದ ಮೊಹಮ್ಮಡನ್ ಬ್ಲಾಕ್ ಮಂದಿ ಬಂದು ಗೀತಾವಿಷ್ಣು ಅವರಿಗೆ ಮಾತಾಡಲಿಕ್ಕೂ ಅವಕಾಶ ಕೊಡದೇ ಅವರ ಮೇಲೆ ಹಲ್ಲೆ ಮಾಡಿದ್ದಾರೆ. ಹಾಗೆಯೇ ಮತ್ತೆ ಕೆಲವರು ಗೀತಾವಿಷ್ಣು ತಪ್ಪಿಲ್ಲವೆಂದು ಹೇಳಿ ಅವರ ಪರವಾಗಿ ನಿಂತಿದ್ದಾರೆ ಚಾಲಕನ ಸಮಯ ಪ್ರಜ್ಞೆಯಿಂದ ಅಪಘಾತದ ತೀವ್ರತೆಯನ್ನು ಕಡಿಮೆ ಮಾಡಿದ್ದಾರೆ ಎಂದು ಹೇಳಿ ಅವರನ್ನು ಒಳಗೆ ಕೂರಿಸಿ ಉಪಚರಿಸಿದ್ದಾರೆ. ಸರಿಯಾದ ಸಮಯಕ್ಕೆ ಆಗಮಿಸಿದ ಪೊಲೀಸರು ಹೆಚ್ಚಿನ ಘರ್ಷಣೆ ನಡೆಯುವ ಮೊದಲು ಬಂದೋಬಸ್ತ್ ಮಾಡಿ ಎರಡೂ ಕಡೆಯ ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

ಡ್ರಗ್ ವ್ಯಸನಿ ಅಲ್ಲ: ಗೀತಾವಿಷ್ಣು ಮೊದಲು ರಾಮಕೃಷ್ಣ ನರ್ಸಿಂಗ್ ಹೋಮ್‍ನಲ್ಲಿ ಪ್ರಥಮ ಚಿಕಿತ್ಸೆ ಪಡೆದುಕೊಂಡು. ನಂತರ ಹೆಚ್ಚಿನ ಚಿಕಿತ್ಸೆಗೆ ಮಲ್ಯ ಆಸ್ಪತ್ರೆ ದಾಖಲಾಗಿದ್ದರು. ಗೀತಾ ವಿಷ್ಣುವಿಗೆ ನಾರ್ಕೋಟಿಕ್(ಗಾಂಜಾ) ಸೇವಿಸುವ ಅಭ್ಯಾಸ ಇಲ್ಲ. ಆತನ ಕಾರಿನಲ್ಲಿ ಗಾಂಜಾ ಪ್ಯಾಕೆಟ್ಟುಗಳು ಸಿಕ್ಕಿರುವ ಸಾಧ್ಯತೆಯೂ ಇಲ್ಲ. ಅದನ್ನು ಆಮೇಲೆ ಯಾರಾದರೂ ತಂದಿಟ್ಟಿರಬಹುದು. ಆ ಕುರಿತು ನನಗೆ ಗೊತ್ತಿಲ್ಲ. ಮಲ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸೇರಿದ ಗೀತಾವಿಷ್ಣು ತನಗೆ ತಲೆ ಸುತ್ತು ಬರುವುದಾಗಿ ಹೇಳಿರುವುದು ದಾಖಲಾಗಿದೆ. ವೈದ್ಯರೂ ಅದನ್ನೇ ದೃಢಪಡಿಸಿದ್ದಾರೆ. ರಕ್ತದ ಸ್ಯಾಂಪಲ್ಲನ್ನು ಪಡೆಯಲಾಗಿದೆ. ಇಷ್ಟಾದ ಮೇಲೆ ವಾಹಿನಿಗಳಲ್ಲಿ ಬರುತ್ತಿರುವ ಸುದ್ದಿಗಳನ್ನು ನೋಡಿ ಗಾಬರಿಯಾಗಿ ಗೀತಾವಿಷ್ಣು ಅಲ್ಲಿಂದ ಹೊರಟು ಹೋಗಿದ್ದಾನೆ ಎಂದು ನನಗೆ ಅನ್ನಿಸುತ್ತದೆ. ಆತ ಎಲ್ಲಿಗೆ ಹೋಗಿದ್ದಾನೆ ಎಂಬುದು ನನಗೂ ಗೊತ್ತಿಲ್ಲ. ಆತ ಡ್ರಗ್ ವ್ಯಸನಿ ಅಲ್ಲ ಎಂದು ಹೇಳಿದ್ದಾರೆ.

ಪೊಲೀಸರಿಗೆ ಧನ್ಯವಾದ: ಭಯಗ್ರಸ್ತನಾಗಿ ಹೊರಟು ಹೋಗಿರುವ ಆತನ ಆರೋಗ್ಯ ಮತ್ತು ಭದ್ರತೆಯ ಬಗ್ಗೆ ನನಗೆ ಆತಂಕವಾಗುತ್ತಿದೆ. ಈ ಸುದ್ದಿಗಳಿಂದ ಆತನ ಮನಸ್ಸಿಗೂ ಆಘಾತ ಆಗಿರುತ್ತದೆ. ಗೀತಾವಿಷ್ಣು ವಾಹನ ಚಲಾಯಿಸುತ್ತಿದ್ದನೋ ಇಲ್ಲವೋ ಅನ್ನುವುದು ಕೂಡ ನಮಗಿನ್ನೂ ಖಚಿತವಾಗಿಲ್ಲ. ಆ ಕುರಿತು ಗೀತಾವಿಷ್ಣು ನೀಡಿದ ಹೇಳಿಕೆಯಲ್ಲಿ ತಾನು ವಾಹನ ಓಡಿಸುತ್ತಿರಲಿಲ್ಲ ಎಂದೇ ಹೇಳಿದ್ದಾರೆ. ಈ ಸಂದರ್ಭದಲ್ಲಿ ಗುಂಪನ್ನು ಹತೋಟಿಗೆ ತಂದು ಹೆಚ್ಚಿನ ಅನಾಹುತವಾಗದಂತೆ ನೋಡಿಕೊಂಡ ಪೊಲೀಸರಿಗೆ ಧನ್ಯವಾದ. ಅವರು ಮಾನವೀಯವಾಗಿ ವರ್ತಿಸಿ ಎರಡೂ ಕಡೆಯ ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸುವ ಕೆಲಸವನ್ನೂ ಮಾಡಿದ್ದಾರೆ. ಅವರಿಗೆ ಕೃತಜ್ಞತೆಗಳು. ಆದ್ದರಿಂದ ತಾವೆಲ್ಲರೂ ವದಂತಿಗಳು ಹಬ್ಬದಂತೆ ನೋಡಿಕೊಂಡು, ಗೀತಾವಿಷ್ಣು ಮನಸ್ಸಿಗೆ ಮುಂದೆಯೂ ಆಗಬಹುದಾದ ಆತಂಕ ಮತ್ತು ಒತ್ತಡಕ್ಕೆ ಅವಕಾಶ ಮಾಡಿಕೊಡಬಾರದೆಂದು ವಿನಂತಿ. ಹಾಗೆಯೇ ನಮ್ಮ ಕುಟುಂಬದ ಗೌರವಕ್ಕೆ ಕುಂದು ಉಂಟಾಗದಂತೆ ಕಾಪಾಡಬೇಕೆಂದೂ ಮನವಿ ಮಾಡಿಕೊಳ್ಳುತ್ತಿದ್ದೇನೆ. ಈ ಘಟನೆಯಲ್ಲಿ ಗಾಯಗೊಂಡ ಎಲ್ಲರೂ ಶೀಘ್ರ ಗುಣಮುಖರಾಗಲಿ ಎಂದು ಹಾರೈಸುತ್ತೇನೆ ಎಂದು ಶ್ರೀನಿವಾಸ್ ಮೂರ್ತಿ ತಿಳಿಸಿದ್ದಾರೆ.





















































