Tag: accused

  • ದೀಪಕ್ ರಾವ್ ಹತ್ಯೆಗೆ ಫಾರಿನ್ ಫಂಡಿಂಗ್- ಟಾರ್ಗೆಟ್ ಗ್ರೂಪ್ ಮೂಲಕ ಸುಪಾರಿ

    ದೀಪಕ್ ರಾವ್ ಹತ್ಯೆಗೆ ಫಾರಿನ್ ಫಂಡಿಂಗ್- ಟಾರ್ಗೆಟ್ ಗ್ರೂಪ್ ಮೂಲಕ ಸುಪಾರಿ

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಸುರತ್ಕಲ್ ಸಮೀಪದ ಕಾಟಿಪಳ್ಳದಲ್ಲಿ ನಡೆದ ಹಿಂದೂ ಸಂಘಟನೆಯ ಕಾರ್ಯಕರ್ತ ದೀಪಕ್ ರಾವ್ ಹತ್ಯೆಗೆ ಸ್ಫೋಟಕ ತಿರುವೊಂದು ದೊರೆತಿದೆ.

    ದೀಪಕ್ ರಾವ್ ಹತ್ಯೆಗೆ ಫಾರಿನ್ ಫಂಡಿಂಗ್ ಬಂದಿದ್ದು, ಉಳ್ಳಾಲದ ಟಾರ್ಗೆಟ್ ಗ್ರೂಪ್ ಮೂಲಕ ಹತ್ಯೆಗೆ ಸುಪಾರಿ ಕೊಡಲಾಗಿತ್ತು. ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರೋ ನಾಲ್ವರು ಈ ಟಾರ್ಗೆಟ್ ಗ್ರೂಪ್ ಪ್ರಮುಖನ ಸಹಚರರಾಗಿದ್ದಾರೆ ಅನ್ನೋ ಮಾಹಿತಿ ಸಿಕ್ಕಿದೆ. ಇದನ್ನೂ ಓದಿ: ಯುಟಿ ಖಾದರ್ ಜೊತೆ ದೀಪಕ್ ಹತ್ಯೆಯ ಆರೋಪಿ ಕುಳಿತಿರುವ ಫೋಟೋ ವೈರಲ್

    ಟಾರ್ಗೆಟ್ ಗ್ರೂಪಿನಲ್ಲಿದ್ದ ಕಾಟಿಪಳ್ಳದ ಸಫ್ವಾನ್ ಸುರತ್ಕಲ್ ಪ್ರದೇಶದಲ್ಲಿ ಗ್ಯಾಂಗ್ ಕಟ್ಟಿಕೊಂಡಿದ್ದ. ಹೀಗಾಗಿ ಪೊಲೀಸರು ರೌಡಿ ಸಫ್ವಾನ್ ಬಂಧನಕ್ಕೆ ಬಲೆ ಬೀಸಿದ್ದರು. ಆದ್ರೆ ರಾಜಕಾರಣಿಗಳಿಂದ ಇದಕ್ಕೆ ತಡೆಹಿಡಿಯಲಾಗುತ್ತಿತ್ತು. ಎರಡು ತಿಂಗಳ ಹಿಂದೆಯಷ್ಟೇ ರೌಡಿ ತಂಡವೊಂದು ಸಫ್ವಾನ್ ನನ್ನು ಕೊಲೆ ಮಾಡಿತ್ತು. ಇತ್ತೀಚೆಗೆ ಚಾರ್ಮಡಿಯಲ್ಲಿ ಸಫ್ವಾನ್ ಎಂಬಾತನ ಶವ ಪತ್ತೆಯಾಗಿತ್ತು. ಆತನ ಕೊಲೆಯನ್ನು ಉಳ್ಳಾಲದ ಟಾರ್ಗೆಟ್ ಗುಂಪಿನ ಇನ್ನೊಬ್ಬ ಸಫ್ವಾನ್ ಎಂಬಾತ ನಡೆಸಿದ್ದ. ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಈ ಕೊಲೆ ನಡೆದಿತ್ತು. ಸದ್ಯ ಆರೋಪಿ ಸಫ್ವಾನ್ ಜೈಲಿನಲ್ಲಿದ್ದಾನೆ ಅಂತ ಪಬ್ಲಿಕ್ ಟಿವಿಗೆ ಉನ್ನತ ಮೂಲಗಳಿಂದ ಮಾಹಿತಿ ಲಭಿಸಿದೆ. ಇದನ್ನೂ ಓದಿ: ನಾನು ನಂಬಿದ ದೇವರು ಆರೋಪಿಗಳಿಗೆ ಶಿಕ್ಷೆ ನೀಡ್ತಾನೆ: ದೀಪಕ್ ತಾಯಿ ಕಣ್ಣೀರು

    ಟ್ರಾವೆಲ್ ಏಜೆನ್ಸಿ ಮೂಲಕ ತೆರೆದುಕೊಂಡಿದ್ದ ಟಾರ್ಗೆಟ್ ಗ್ರೂಪ್, ಉಳ್ಳಾಲದ ಮಾಸ್ತಿಕಟ್ಟೆಯಲ್ಲಿ ಎಂಟು ವರ್ಷಗಳ ಹಿಂದೆ ಆರಂಭಗೊಂಡಿತ್ತು. ಸುರತ್ಕಲ್, ಮಂಗಳೂರು, ಉಳ್ಳಾಲದಲ್ಲಿ ಸಕ್ರಿಯವಾಗಿರುವ ಈ ತಂಡದಿಂದ ಮೂರು ತಿಂಗಳ ಹಿಂದೆ ಉಳ್ಳಾಲದಲ್ಲಿ ಬಿಜೆಪಿ ಕಾರ್ಯಕರ್ತ ಝುಬೈರ್ ಎಂಬವರನ್ನು ಕೊಲೆ ಮಾಡಲಾಗಿದೆ. ಇನ್ನು ಈ ಟಾರ್ಗೆಟ್ ಗ್ರೂಪ್ ಗೆ ಸೌದಿ, ದುಬೈನಿಂದ ಹಣಕಾಸಿನ ನೆರವು ಹರಿದುಬರುತ್ತಿದೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: 7 ವರ್ಷಗಳ ಕಾಲ ನನ್ನ ಜೊತೆಯಿದ್ದ ದೀಪಕ್ ಸಾವು ಊಹಿಸಲು ಸಾಧ್ಯವಿಲ್ಲ: ಮಾಲೀಕ ಮಜೀದ್

    ಬುಧವಾರ ಮಧ್ಯಾಹ್ನ ಸುಮಾರು 1.30ರ ಸಮಯಕ್ಕೆ ಸುರತ್ಕಲ್ ಸಮೀಪದ ಕಾಟಿಪಳ್ಳದಲ್ಲಿ ದೀಪಕ್ ರಾವ್ ಅವರನ್ನು ದುಷ್ಕರ್ಮಿಗಳು ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ರು. ಕೂಡಲೇ ಎಚ್ಚೆತ್ತ ಪೊಲೀಸರು ಸಿನಿಮೀಯ ರೀತಿಯಲ್ಲಿ ಆರೋಪಿಗಳನ್ನು ಬೆನ್ನಟ್ಟಿ ಬಂಧಿಸಿದ್ದಾರೆ. ಸದ್ಯ ಆರೋಪಿಗಳನ್ನು ಅಜ್ಞಾತ ಸ್ಥಳದಲ್ಲಿರಿಸಿ ವಿಚಾರಣೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ. ಇದನ್ನೂ ಓದಿ: ದೀಪಕ್ ಹತ್ಯೆ ಕೇಸ್: ಪೊಲೀಸರ 27 ಕಿ.ಮೀ ಥ್ರಿಲ್ಲಿಂಗ್ ಚೇಸಿಂಗ್ ಸ್ಟೋರಿ ಓದಿ

    https://www.youtube.com/watch?v=h2ySxt7VrtE

    https://www.youtube.com/watch?v=0iJpHrCbDbc

    ಝುಬೈರ್ ಕೊಲೆ ಆರೋಪಿಗಳು

                                                                                    

  • ಯುವಕರಿಗೆ ಗಾಂಜಾ ಮಾರಾಟ ಮಾಡಲು ತಯಾರಿ ನಡೆಸಿದ್ದ ಇಬ್ಬರ ಬಂಧನ- 8.5 ಕೆ.ಜಿ ಗಾಂಜಾ ವಶ

    ಯುವಕರಿಗೆ ಗಾಂಜಾ ಮಾರಾಟ ಮಾಡಲು ತಯಾರಿ ನಡೆಸಿದ್ದ ಇಬ್ಬರ ಬಂಧನ- 8.5 ಕೆ.ಜಿ ಗಾಂಜಾ ವಶ

    ಮಂಡ್ಯ: ಹೊಸ ವರ್ಷ ಆಚರಣೆ ವೇಳೆ ಯುವಜನತೆಗೆ ಗಾಂಜಾ ಮಾರಲು ತಯಾರಿ ನಡೆಸಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಮಂಡ್ಯ ಪೊಲೀಸರು ಯಶಸ್ವಿಯಾಗಿದ್ದಾರೆ.

    ಜಿಲ್ಲೆಯ ಕೆಆರ್ ಪೇಟೆ ತಾಲೂಕಿನ ಮುರುಕನಹಳ್ಳಿ ಗ್ರಾಮದಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ರಂಗರಾಜು ಮತ್ತು ಕೃಷ್ಣೇಗೌಡ ಬಂಧಿತ ಆರೋಪಿಗಳು. ಬಂಧಿತರಿಂದ ಎಂಟೂವರೆ ಕೆಜಿ ಗಾಂಜಾ ಸೊಪ್ಪನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

    ಮುರುಕನಹಳ್ಳಿ ಗ್ರಾಮದ ಹೊರವಲಯದ ಗುಡಿಸಲಿನಲ್ಲಿ ಆರೋಪಿಗಳು ಅಕ್ರಮವಾಗಿ ಗಾಂಜಾ ಸೊಪ್ಪನ್ನು ಮಾರಾಟ ಮಾಡುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಕೆಆರ್ ಪೇಟೆ ಸರ್ಕಲ್ ಇನ್ಸ್‍ಪೆಕ್ಟರ್ ವೆಂಕಟೇಶಯ್ಯ ನೇತೃತ್ವದ ತಂಡ, ಇಬ್ಬರು ಆರೋಪಿಗಳನ್ನು ಬಂಧಿಸಿ ಎಂಟೂವರೆ ಕೆಜಿ ಗಾಂಜಾವನ್ನು ವಶಕ್ಕೆ ಪಡೆದಿದ್ದಾರೆ.

    ಘಟನೆ ಸಂಬಂಧ ಕೆಆರ್‍ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಸೀರಿಯಲ್ ನಲ್ಲಿ ಅವಕಾಶ ಕೊಡಿಸೋದಾಗಿ ಕರೆದೊಯ್ದು ಅಪ್ರಾಪ್ತೆ ಮೇಲೆ ಅತ್ಯಾಚಾರ ಆರೋಪ – ಡ್ಯಾನ್ಸ್ ಟೀಚರ್ ಅರೆಸ್ಟ್

    ಸೀರಿಯಲ್ ನಲ್ಲಿ ಅವಕಾಶ ಕೊಡಿಸೋದಾಗಿ ಕರೆದೊಯ್ದು ಅಪ್ರಾಪ್ತೆ ಮೇಲೆ ಅತ್ಯಾಚಾರ ಆರೋಪ – ಡ್ಯಾನ್ಸ್ ಟೀಚರ್ ಅರೆಸ್ಟ್

    ಮುಂಬೈ: ಡ್ಯಾನ್ಸ್ ಶಿಕ್ಷಕನೊಬ್ಬ ಧಾರಾವಾಹಿಯಲ್ಲಿ ಅವಕಾಶ ಕೊಡಿಸುವುದಾಗಿ ಕರೆದುಕೊಂಡು ಹೋಗಿ ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂಬ ಆರೋಪದ ಮೇರೆಗೆ ಆತನನ್ನು ಭಾನುವಾರ ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

    ಸಂತ್ರಸ್ತ ಬಾಲಕಿಯ ಪೋಷಕರು, ಡ್ಯಾನ್ಸ್ ಟೀಚರ್ ಅಝಾದ್ ನಮ್ಮ 15 ವರ್ಷದ ಮಗಳನ್ನು ಧಾರಾವಾಹಿಯಲ್ಲಿ ಅವಕಾಶ ಕೊಡಿಸುವುದಾಗಿ ಡಿಸೆಂಬರ್ 23 ರಂದು ಮುಂಬೈಗೆ ಕರೆದುಕೊಂಡು ಹೋಗಿದ್ದ ಎಂದು ಆತನ ವಿರುದ್ಧ ದೂರು ನೀಡಿದ್ದಾರೆ. ಬಾಲಕಿಯನ್ನು ಸಂಪರ್ಕಿಸಲು ಸಾಧ್ಯವಾಗದಿದ್ದಾಗ ಆಕೆಯ ಪೋಷಕರು ದೂರು ನೀಡಿದ್ದರು. ದೂರಿನ ಅನ್ವಯ ಆರೋಪಿ ಅಝಾದ್ ವಿರುದ್ಧ ಅಪಹರಣದ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

    ಬಾಲಕಿಯ ಕುಟುಂಬದವರು ಆರೋಪಿ ಅಝಾದ್ ವಿರುದ್ಧ ಅತ್ಯಾಚಾರದ ಆರೋಪ ಮಾಡುತ್ತಿದ್ದಾರೆ. ಆದರೆ ಪೊಲೀಸರು ಇನ್ನೂ ಇದನ್ನು ಖಚಿತಪಡಿಸಿಲ್ಲ. ಡಿಸೆಂಬರ್ 23 ರಿಂದಲೂ ಬಾಲಕಿ ದೆಹಲಿಯಲ್ಲಿದ್ದಳು ಎಂದು ವರದಿಯಾಗಿದೆ.

    ಶನಿವಾರ ದೆಹಲಿಯಲ್ಲಿ ಸಂತ್ರಸ್ತೆ ಪತ್ತೆಯಾಗಿದ್ದು, ಅಝಾದ್‍ನನ್ನು ಬಂಧಿಸಲಾಗಿದೆ. ಸಂತ್ರಸ್ತೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಸರ್ಕಲ್ ಆಫೀಸರ್ ಓಂಕಾರ್ ಸಿಂಗ್ ತಿಳಿಸಿದರು.

    ಈ ಪ್ರಕರಣವನ್ನು ಹಿಂದೂ ಸಂಘಟನೆಗಳು ಲವ್ ಜಿಹಾದ್ ಎಂದು ಆರೋಪಿಸುತ್ತಿವೆ. ಇದೊಂದು ಲವ್ ಜಿಹಾದ್ ಪ್ರಕರಣ. ಆದ್ದರಿಂದ ಪೊಲೀಸರು ಮತ್ತು ಜಿಲ್ಲಾ ಆಡಳಿತ ಈ ಪ್ರಕರಣದ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸುತ್ತಿದ್ದಾರೆ ಎಂದು ಕಪೀಲ್ ದೇವಾನಾ ಹೇಳಿದ್ದಾರೆ.

  • ಮನೆಗಳ್ಳತನ ಮಾಡುತ್ತಿದ್ದ ಆರೋಪಿಗಳ ಬಂಧನ- ಅರ್ಧ ಕೆಜಿಗೂ ಹೆಚ್ಚಿನ ಚಿನ್ನಾಭರಣ ವಶ

    ಮನೆಗಳ್ಳತನ ಮಾಡುತ್ತಿದ್ದ ಆರೋಪಿಗಳ ಬಂಧನ- ಅರ್ಧ ಕೆಜಿಗೂ ಹೆಚ್ಚಿನ ಚಿನ್ನಾಭರಣ ವಶ

    ಬೆಂಗಳೂರು: ಮನೆಗಳ್ಳತನ ಹಾಗೂ ಸುಲಿಗೆ ಮಾಡುತ್ತಿದ್ದ ಐವರು ಕಳ್ಳರನ್ನು ಬಂಧಿಸಿ, ಅರ್ಧ ಕೆಜಿ ಗೂ ಹೆಚ್ಚಿನ ಚಿನ್ನಾಭರಣಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

    ನಗರದ ಹೊರವಲಯ ಆನೇಕಲ್ ತಾಲೂಕಿನ ಹೆಬ್ಬಗೋಡಿಯಲ್ಲಿ ನಡೆದಿದ್ದ ಸುಮಾರು ಮೂವತ್ತು ಪ್ರಕರಣಗಳಲ್ಲಿ ಆರೋಪಿಗಳಾಗಿದ್ದ ಸಿ.ವಿ. ವಿಶ್ವಾಸ್, ಗೌರೀಶ್, ಕುಮಾರ್, ಮರಿಯಪ್ಪ, ಗುಜರಿ, ಸತೀಶ ಹಾಗೂ ಮುರುಗ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.

    ಬಂಧಿತ ಆರೋಪಿಗಳಿಂದ ಸುಮಾರು 502 ಗ್ರಾಂ ಚಿನ್ನಾಭರಣಗಳನ್ನು ವಶಕ್ಕೆ ಪಡೆಯಲಾಗಿದೆ. ಅಲ್ಲದೇ ನಗರದ ಹೆಬ್ಬಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಎರಡು ಸುಲಿಗೆ, ಒಂಬತ್ತು ಮನೆ ಕಳ್ಳತನ ಪ್ರಕರಣಗಳು ಪತ್ತೆಯಾಗಿವೆ.

    ಚಿನ್ನಾಭರಣ ಕಳೆದುಕೊಂಡ ಸಾರ್ವಜನಿಕರಿಗೆ ಇಂದು ಪೊಲೀಸರು ಅಭರಣಗಳನ್ನು ಹಿಂತಿರುಗಿಸಿದರು. ಈ ವೇಳೆ ಗ್ರಾಮಾಂತರ ಎಸ್ಪಿ ಅಮಿತ್ ಸಿಂಗ್ ಹೆಬ್ಬಗೋಡಿ ಸಿಪಿಐ ಜಗದೀಶ್ ಹಾಗೂ ಠಾಣಾ ಪೊಲೀಸ್ ಸಿಬ್ಬಂದಿ ಉಪಸ್ಥಿತರಿದ್ದರು.

  • 15 ವರ್ಷದಿಂದ ತಪ್ಪಿಸಿಕೊಂಡಿದ್ದ ಆರೋಪಿ ವಾಷಿಂಗ್ ಮಷೀನ್ ನಲ್ಲಿ ಸಿಕ್ಕಿಬಿದ್ದ!

    15 ವರ್ಷದಿಂದ ತಪ್ಪಿಸಿಕೊಂಡಿದ್ದ ಆರೋಪಿ ವಾಷಿಂಗ್ ಮಷೀನ್ ನಲ್ಲಿ ಸಿಕ್ಕಿಬಿದ್ದ!

    ಮುಂಬೈ: ಒಂದು ಲಕ್ಷ ರೂ. ವಂಚನೆಯ ಪ್ರಕರಣದಲ್ಲಿ ಬಂಧಿಯಾಗಿ ನಂತರ ತಪ್ಪಿಸಿಕೊಂಡಿದ್ದ 54 ವರ್ಷದ ಆರೋಪಿಯನ್ನು ಬರೋಬ್ಬರಿ 15 ವರ್ಷಗಳ ನಂತರ ಸೋಮವಾರ ಮುಂಬೈಯ ಜುಹೂ ನಗರದಲ್ಲಿರುವ ಆತನ ಮನೆಯಲ್ಲಿ ಮತ್ತೆ ಬಂಧಿಸುವಲ್ಲಿ ಎರಡು ಪೊಲೀಸ್ ತಂಡ ಯಶಸ್ವಿಯಾಗಿದೆ.

    ಆರೋಪಿಯ ಪತ್ನಿಯು ಅಝಾದ್ ಮೈದಾನ್ ಮತ್ತು ಜುಹೂ ಪೊಲೀಸರ ಬಳಿ ಮನೆಯಲ್ಲಿ ಪತಿ ಇಲ್ಲವೆಂದು ಮೂರು ಗಂಟೆಗಳ ಕಾಲ ವಾದ ಮಂಡಿಸಿದ್ದಾಳೆ. ಆದರೂ ಆತ ಮನೆಯಲ್ಲೇ ಅವಿತು ಕುಳಿತಿರಬಹುದು ಎನ್ನುವ ಬಲವಾದ ಶಂಕೆ ಹಿನ್ನೆಲೆಯಲ್ಲಿ ಎಲ್ಲ ಕೊಠಡಿ, ವಸ್ತುಗಳನ್ನು ಜಾಲಾಡಿ ಕೊನೆಗೆ ವಾಷಿಂಗ್ ಮಷೀನ್ ನಲ್ಲಿ ಅವಿತಿದ್ದ ಆರೋಪಿಯನ್ನು ಬಂಧಿಸಿದ್ದಾರೆ.

    2002 ರಲ್ಲಿ ವಂಚನೆ ಮಾಡಿ ತಪ್ಪಿಸಿಕೊಂಡಿದ್ದ ಆರೋಪಿಗಳನ್ನು ಪತ್ತೆ ಮಾಡಬೇಕು ಎಂದು ಕೋರ್ಟ್ ಆದೇಶಿಸಿತ್ತು. ಜೊತೆಗೆ ಪೊಲೀಸ್ ಆಯುಕ್ತರು ಕೂಡ ಹಳೆಯ ಕೇಸ್‍ಗಳ ಆರೋಪಿಗಳನ್ನು ಬಂಧಿಸಬೇಕು ಎಂದು ಆದೇಶಿಸಿದ್ದರು. ಬಳಿಕ ನಾವು ಆತನ ಮನೆಗೆ ಹೋಗಿ ಬಂಧಿಸಿದ್ದೇವೆ ಎಂದು ಅಝಾದ್ ಮೈದಾನ್ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಅಧಿಕಾರಿ ವಸಂತ್ ವಖಾರೆ ತಿಳಿಸಿದ್ದಾರೆ.

    ಪುಣೆಯಲ್ಲೂ 1 ಕೋಟಿ ರೂ. ವಂಚನೆ ಮಾಡಿದ ಆರೋಪ ಈತನ ಮೇಲಿದೆ. ಮುಂಬೈ ನಗರದಲ್ಲಿ 2002 ರಲ್ಲಿ ಮೂವರಿಗೆ ಬಿಎಡ್ ಕೋರ್ಸ್ ಗೆ ಪ್ರವೇಶ ಪಡೆಯಲು ಸಹಕರಿಸುತ್ತೇನೆ ಎಂದು ಹೇಳಿ ಒಂದು ಲಕ್ಷ ರೂ. ತೆಗೆದುಕೊಂಡು ವಂಚನೆ ಮಾಡಿದ್ದ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

    ಆರೋಪಿ ಪತ್ನಿ ಪೊಲೀಸರನ್ನು ಮೂರು ಗಂಟೆಯವರೆಗೆ ಬಿಡದೇ ನಂತರ ಹುಡುಕಲು ಅವಕಾಶ ಮಾಡಿಕೊಟ್ಟಿದ್ದಾಳೆ. ಬಳಿಕ ಪೊಲೀಸ್ ತಂಡ ಅಪಾರ್ಟ್ ಮೆಂಟ್ ಮೂರು ರೂಮ್‍ಗಳಲ್ಲೂ ಹುಡುಕಾಡಿದ್ದಾರೆ. ಎಲ್ಲೂ ಸಿಗದೇ ಇದ್ದಾಗ ಕೊನೆಗೆ ವಾಷಿಂಗ್ ಮಷೀನ್‍ನಲ್ಲಿ ಬಟ್ಟೆ ತೆಗೆಯುವಾಗ ಸಂದರ್ಭದಲ್ಲಿ ಆರೋಪಿ ಪತ್ತೆಯಾಗಿದ್ದಾನೆ.

    ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಸರ್ಕಾರಿ ಅಧಿಕಾರಿಗಳ ಕರ್ತವ್ಯಕ್ಕೆ ಅವಕಾಶ ನೀಡದೇ ತಡೆದಿದ್ದಕ್ಕೆ ಆತನ ಪತ್ನಿಯ ವಿರುದ್ಧವೂ ದೂರು ದಾಖಲಿಸಿಕೊಂಡಿದ್ದಾರೆ.

     

  • 2ಜಿ ಕೂಪದಿಂದ ಕನಿಮೋಳಿ ಹೊರಬರಲು ಶ್ರೀಕೃಷ್ಣ, ಮುಖ್ಯಪ್ರಾಣರೇ ಕಾರಣ : ಶೀರೂರು ಶ್ರೀ

    2ಜಿ ಕೂಪದಿಂದ ಕನಿಮೋಳಿ ಹೊರಬರಲು ಶ್ರೀಕೃಷ್ಣ, ಮುಖ್ಯಪ್ರಾಣರೇ ಕಾರಣ : ಶೀರೂರು ಶ್ರೀ

    ಉಡುಪಿ: 2ಜಿ ಹಗರಣದ ಬಲೆಯಿಂದ ಕರುಣಾನಿಧಿ ಪುತ್ರಿ ಕನಿಮೋಳಿ ಹೊರಬಂದಾಗಿದೆ. ಸಿಬಿಐ ವಿಶೇಷ ಕೋರ್ಟ್ ಕನಿಮೋಳಿಯನ್ನು ಖುಲಾಸೆ ಮಾಡಿದೆ. ಈ ಹಿನ್ನೆಲೆಯಲ್ಲಿ ತಮಿಳುನಾಡಿನಲ್ಲಿ ರಾಜಕೀಯ ಗರಿಗೆದರಿದೆ. ಆದರೆ 2 ಜಿ ಭ್ರಷ್ಟಚಾರ ಆರೋಪದಿಂದ ಕನಿಮೋಳಿ ಅವರು ಹೊರ ಬರಲು ಸಾಧ್ಯವೇ ಇಲ್ಲ ಎಂದು ವಿಶ್ಲೇಷಿಸಲಾಗಿದ್ದ ಎಲ್ಲರಿಗೂ ಅಚ್ಚರಿಯಾಗಿದ್ದು, ಇದಕ್ಕೆ ಪ್ರಮುಖ ಕಾರಣ ಉಡುಪಿ ಶ್ರೀ ಕೃಷ್ಣನೇ ಎನ್ನುವ ವಾದ ಹುಟ್ಟಿಕೊಂಡಿದೆ.

    ಆದರೆ ಕನಿಮೋಳಿ ಪ್ರಕರಣಕ್ಕೂ ಉಡುಪಿ ಶ್ರೀ ಕೃಷ್ಣ ಮಠಕ್ಕೂ ಏನು ಸಂಬಂಧ ಎಂಬ ಮಾಹಿತಿ ತಿಳಿಯಬೇಕಾದರೆ ಆರು ವರ್ಷಗಳ ಹಿಂದಿನ ಘಟನೆ ತೆರೆದುಕೊಳ್ಳುತ್ತದೆ. ಆ ಸಂದರ್ಭದಲ್ಲಿ ಉಡುಪಿ ಶ್ರೀಕೃಷ್ಣನ ಪೂಜಾಧಿಕಾರವನ್ನು ಶೀರೂರು ಮಠಾಧೀಶ ಲಕ್ಷ್ಮೀವರ ತೀರ್ಥರು ನೋಡಿಕೊಳ್ಳುತ್ತಿದ್ದರು.

    ಈ ಕುರಿತು ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿರುವ ಶೀರೂರು ಶ್ರೀಗಳು, ಆರು ವರ್ಷದ ಹಿಂದೆ ಕನಿಮೋಳಿಯವರ ತಾಯಿ ರಜತಿ ಅವರು ಮಠಕ್ಕೆ ಬಂದಿದ್ದರು. ತಮ್ಮ ಕುಟುಂಬದಲ್ಲಿ ಗೊಂದಲಗಳಾಗಿದೆ. ತನ್ನ ಮಗಳಿಗೆ ಮಾಡದ ತಪ್ಪಿಗೆ ಶಿಕ್ಷೆಯಾಗಿ ಜೈಲು ಸೇರಿದ್ದಾಳೆ. ಹೀಗಾಗಿ ದೇವರಲ್ಲಿ ವಿಶೇಷ ಪ್ರಾರ್ಥನೆ ನಡೆಸಲು ಕೇಳಿಕೊಂಡಿದ್ದರು ಎಂದು ತಿಳಿಸಿದರು.

    ಈ ಸಂದರ್ಭದಲ್ಲಿ ರಜತಿ ಅವರಿಗೆ ಧೈರ್ಯ ತುಂಬಿದ್ದ ಶ್ರೀಗಳು ತಪ್ಪು ಮಾಡದಿದ್ದರೆ ದೇವರ ಅನುಗ್ರಹ ನಿಮ್ಮ ಮೇಲೆ ಇರುತ್ತದೆ. ಅವರ ಮನವಿಯಂತೆ ಪೂಜೆಯ ಸಂದರ್ಭ ದೇವರಲ್ಲಿ ಪ್ರಾರ್ಥನೆಯನ್ನು ಮಾಡಿಕೊಂಡಿದ್ದೆವು. ಇದೀಗ ಕನಿಮೋಳಿ ಅವರು ಆರೋಪ ಮುಕ್ತರಾಗಿದ್ದಾರೆ ಎಂದು ವಿವರಿಸಿದರು.

    ಉಡುಪಿಯಲ್ಲಿ ಶ್ರೀಕೃಷ್ಣ ಭಕ್ತರ ಕಣ್ಮಣಿ, ಆದರೂ ಮಠದೊಳಗೆ ಮುಖ್ಯಪ್ರಾಣ ಅಂದರೆ ಆಂಜನೇಯ ದೇವರು ಹೆಚ್ಚು ಶಕ್ತಿಯನ್ನು ಹೊಂದಿದ್ದಾರೆ ಎಂಬ ನಂಬಿಕೆ ಇದೆ. ಕೃಷ್ಣ ಮುಖ್ಯಪ್ರಾಣರಿಗೆ ಮಾಡಿದ ಪ್ರಾರ್ಥನೆ ಫಲ ನೀಡಿದೆ. ಕರುಣಾನಿಧಿ ಕುಟುಂಬ ಹರಕೆ ತೀರಿಸಲು ಮತ್ತೆ ಉಡುಪಿಗೆ ಬರಬಹುದು ಎಂಬ ನಿರೀಕ್ಷೆಯಿದೆ ಎಂದು ಶ್ರೀ ಶೀರೂರು ಸ್ವಾಮೀಜಿ ಹೇಳಿದರು.

    ಹರಕೆ ಹೊತ್ತಿದ್ದರೆ, ದೇವರಲ್ಲಿ ಪ್ರಾರ್ಥನೆ ಮಾಡಿಕೊಂಡ ವೇಳೆ ಮತ್ತೆ ಬರುವುದಾಗಿ ಹೇಳಿಕೊಂಡಿದ್ದರೆ ಮತ್ತೆ ಉಡುಪಿಗೆ ಬಂದು ಕೃಷ್ಣಮುಖ್ಯಪ್ರಾಣರ ಸನ್ನಿಧಿಗೆ ಭೇಟಿಕೊಡಬೇಕು ಎಂಬ ನಂಬಿಕೆ ಭಕ್ತರಲ್ಲಿ ಇದೆ.

     

  • ಮಾರಕಾಸ್ತ್ರಗಳನ್ನು ಹಿಡಿದು ದರೋಡೆಗೆ ಹೊಂಚು ಹಾಕುತ್ತಿದ್ದ ಐವರ ಬಂಧನ

    ಮಾರಕಾಸ್ತ್ರಗಳನ್ನು ಹಿಡಿದು ದರೋಡೆಗೆ ಹೊಂಚು ಹಾಕುತ್ತಿದ್ದ ಐವರ ಬಂಧನ

    ಬೆಂಗಳೂರು: ಮಾರಕಾಸ್ತ್ರಗಳನ್ನು ಹಿಡಿದು ದರೋಡೆಗೆ ಹೊಂಚು ಹಾಕುತ್ತಿದ್ದ ಐವರು ಆರೋಪಿಗಳನ್ನು ಪೊಲೀಸರು ತಡರಾತ್ರಿ ಬಂಧಿಸಿರುವ ಘಟನೆ ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಅತ್ತಿಬೆಲೆ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    ಆರೋಪಿಗಳಾದ ತಮಿಳುನಾಡಿನ ಹೊಸೂರು ಮೂಲದ ವೆಂಕಟರಾಜು, ಶಂಕರ್, ಮುರಳಿ, ನಾಗೇಶ್ ಹಾಗೂ ನಾಗರಾಜು ಅತ್ತಿಬೆಲೆ ಸಮೀಪದ ಟಿವಿಎಸ್ ಕ್ರಾಸ್ ಬಳಿ ಭಾನುವಾರ ತಡರಾತ್ರಿ 2 ಕಾರುಗಳಲ್ಲಿ ದರೋಡೆಗೆ ಹೊಂಚು ಹಾಕುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಅತ್ತಿಬೆಲೆ ಸಿಪಿಐ ರಾಜೇಶ್, ಎಸ್.ಐ ಗಜೇಂದ್ರ, ಕ್ರೈಮ್ ಸಿಬ್ಬಂದಿ ಪ್ರಭು ಹಾಗೂ ನಟರಾಜು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನ ಬಂಧಿಸಿದ್ದಾರೆ.

    ಬಂಧಿತರಿಂದ 2 ಲಾಂಗ್ ವಶಪಡಿಸಿಕೊಂಡಿದ್ದು, ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ಆರೋಪಿಗಳು 10 ದಿನಗಳ ಹಿಂದೆ ವ್ಯಕ್ತಿಯೊಬ್ಬನನ್ನು ಅಡ್ಡಗಟ್ಟಿ 20,000 ಸಾವಿರ ರೂ. ನಗದು ಪರ್ಸ್ ಹಾಗೂ ಚಿನ್ನಾಭರಣ ದೋಚಿದ ಪ್ರಕರಣ ಸೇರಿದಂತೆ ಅತ್ತಿಬೆಲೆ ಹಾಗೂ ಸರ್ಜಾಪುರದಲ್ಲಿ ನಡೆದಿದ್ದ ಸರಗಳ್ಳತನ ಪ್ರಕರಣ ಬೆಳಕಿಗೆ ಬಂದಿದೆ.

    ಪ್ರಮುಖ ಆರೋಪಿಗಳಾದ ನಾಗರಾಜು ಹಾಗೂ ಶಂಕರ್ ನ ಮೇಲೆ ತಮಿಳುನಾಡಿನ ಹೊಸೂರು ಪೊಲೀಸ್ ಠಾಣೆಯಲ್ಲಿ 8 ಸರಗಳ್ಳತನ ಪ್ರಕರಣಗಳು ಬೆಳಕಿಗೆ ಬಂದಿದೆ.

  • ಬೆಂಗ್ಳೂರು ಐಟಿ ಅಧಿಕಾರಿಗಳ ಹೆಸರಲ್ಲಿ ನಡೆದ ದರೋಡೆ ಪ್ರಕರಣಕ್ಕೆ ರೋಚಕ ಟ್ವಿಸ್ಟ್

    ಬೆಂಗ್ಳೂರು ಐಟಿ ಅಧಿಕಾರಿಗಳ ಹೆಸರಲ್ಲಿ ನಡೆದ ದರೋಡೆ ಪ್ರಕರಣಕ್ಕೆ ರೋಚಕ ಟ್ವಿಸ್ಟ್

    ಬೆಂಗಳೂರು: ಕೆಲ ದಿನಗಳ ಹಿಂದೆ ನಗರದಲ್ಲಿ ಐಟಿ ಅಧಿಕಾರಿಗಳ ಹೆಸರಲ್ಲಿ ದರೋಡೆ ನಡೆಸಿದ ಪ್ರಕರಣಕ್ಕೆ ರೋಚಕ ಟ್ವಿಸ್ಟ್ ಸಿಕ್ಕಿದ್ದು, ದರೋಡೆ ಮಾಡಿದ್ದ ವ್ಯಕ್ತಿಗೂ, ದೂರುದಾರ ಮಹಿಳೆ ನಡುವೆ ಅನೈತಿಕ ಸಂಬಂಧ ಇತ್ತು ಎನ್ನುವ ವಿಚಾರ ಪೊಲೀಸ್ ತನಿಖೆ ವೇಳೆ ಬೆಳಕಿಗೆ ಬಂದಿದೆ.

    ಐಟಿ ಅಧಿಕಾರಿಗಳ ಹೆಸರಿನಲ್ಲಿ ದರೋಡೆ ನಡೆಸಿದ್ದ ಆರೋಪಿಗಳಾದ ಅಬ್ದುಲ್, ಮಹಮ್ಮದ್ ನಾಸಿರ್ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ವೇಳೆ ಪೊಲೀಸರಿಗೆ ದರೋಡೆಯಲ್ಲಿ ಪ್ರಮುಖ ಪಾತ್ರವಹಿಸಿದ್ದ ನಾಸಿರ್ ಹಾಗೂ ಈ ಬಗ್ಗೆ ದೂರು ನೀಡಿದ್ದ ಮಹಿಳೆಗೂ ಐದು ವರ್ಷದಿಂದ ಪರಿಚಯ ಇತ್ತು ಎನ್ನುವ ಅಂಶ ತಿಳಿದು ಬಂದಿದೆ.

    ದರೋಡೆ ಕುರಿತು ಪೊಲೀಸರಿಗೆ ದೂರು ನೀಡುವ ವೇಳೆ ಮಹಿಳೆ ಆರೋಪಿಯ ಬಗ್ಗೆ ಯಾವುದೇ ಮಾಹಿತಿ ನೀಡಿರಲಿಲ್ಲ. ಪೊಲೀಸರಿಗೆ ಮಾಹಿತಿ ತಿಳಿಸಿದರೆ ತನ್ನ ಅನೈತಿಕ ಸಂಬಂಧ ಬಯಲಾಗುತ್ತದೆ ಎಂಬ ಭಯದಲ್ಲಿ ಪೊಲೀಸರಿಗೆ ಮಾಹಿತಿ ನೀಡಿಲ್ಲ ಎನ್ನಲಾಗಿದೆ.

    ಏನಿದು ಘಟನೆ?
    ವಿದ್ಯಾರಣ್ಯಪುರದ ದೊಡ್ಡಬೊಮ್ಮಸಂದ್ರದಲ್ಲಿರೋ ಲಾವಣ್ಯ ಎಂಬವರ ಮನೆಯಲ್ಲಿ ಡಿಸೆಂಬರ್ 14 ರಾತ್ರಿ ದರೋಡೆ ನಡೆದಿತ್ತು. ರಾತ್ರಿ ವೇಳೆ ಮನೆಗೆ ನುಗ್ಗಿದ ಆರೋಪಿಗಳು ನಾವು ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಎಂದು ಹೇಳಿ ಮನೆಗೆ ಎಂಟ್ರಿ ಕೊಟ್ಟಿದ್ದರು. ನಂತರ ಲಾವಣ್ಯ ಅವರ ಮಗ ಜಗನ್ ಕೈಕಾಲು ಕಟ್ಟಿ ದರೋಡೆ ಮಾಡಿದ್ದರು. ಈ ವೇಳೆ ಲಾವಣ್ಯ ಮನೆಗೆ ಬಂದಿದ್ದು, ಆರೋಪಿಗಳನ್ನು ನೋಡಿದ್ದರು. ಆದರೆ ಈ ಕುರಿತು ವಿದ್ಯಾರಣ್ಯಪುರದ ಪೊಲೀಸರಿಗೆ ದೂರು ನೀಡುವ ವೇಳೆ ಯಾವುದೇ ಮಾಹಿತಿಯನ್ನು ನೀಡಿರಲಿಲ್ಲ.

    ವಿವೇಕ್ ನಗರದ ಪೊಲೀಸರು ವಾಹನ ತಪಾಸಣೆ ನಡೆಸುವ ವೇಳೆ ಆರೋಪಿಗಳ ಬಗ್ಗೆ ಅನುಮಾನಗೊಂಡು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಅರೋಪಿ ನಾಸಿರ್ ಲಾವಣ್ಯ ಅವರ ಜೊತೆಗಿನ ಸಂಬಂಧದ ಬಗ್ಗೆ ಸತ್ಯಾಂಶ ತಿಳಿಸಿದ್ದಾನೆ. ಇಬ್ಬರ ನಡುವೆ ಹಣದ ವ್ಯವಹಾರ ನಡೆದಿದ್ದು, ಈ ಹಿಂದೆಯು ಲಾವಣ್ಯ ಅವರ ಮನೆಯಲ್ಲಿ ದರೋಡೆಗೆ ಯತ್ನಿಸಿ ವಿಫಲನಾಗಿದ್ದ. ಈ ವೇಳೆಯೇ ಲಾವಣ್ಯ ಅವರಿಗೆ ದರೋಡೆ ನಡೆಸುವ ಕುರಿತು ಅನುಮಾನ ವ್ಯಕ್ತವಾಗಿತ್ತು ಎನ್ನಲಾಗಿದೆ.

    https://www.youtube.com/watch?v=3sFZqSht4I8

  • ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಕೊಲೆ ಆರೋಪಿಯೇ ಬರ್ಬರವಾಗಿ ಹತ್ಯೆಯಾದ!

    ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಕೊಲೆ ಆರೋಪಿಯೇ ಬರ್ಬರವಾಗಿ ಹತ್ಯೆಯಾದ!

    ಚೆನ್ನೈ: ಇಲ್ಲಿನ ವಾಡಿಪಟ್ಟಿ ಬಳಿಯ ತನಿಚಿಯಂನಲ್ಲಿ ದಿಂಡಿಗುಲ್- ಮಧುರೈ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಬಸ್ಸಿನೊಳಗೆಯೇ ವ್ಯಕ್ತಿಯೊಬ್ಬನನ್ನು ಮಾರಕಾಸ್ತ್ರಗಳಿಂದ ಬರ್ಬರವಾಗಿ ಹತ್ಯೆಗೈದ ಘಟನೆ ನಡೆದಿದೆ.

    ಈ ಘಟನೆ ಶುಕ್ರವಾರ ಮಧ್ಯಾಹ್ನ ಸುಮಾರು 2.15ರ ಸುಮಾರಿಗೆ ನಡೆದಿದೆ. ಮೃತನನ್ನು ಆರ್ ಅಮರ್ ಸೇನ್(22) ಎಂದು ಗರುತಿಸಲಾಗಿದೆ. 6 ವರ್ಷಗಳ ಹಿಂದೆ ನಡೆದ ಕೊಲೆಯೊಂದರ ಸೇಡು ತೀರಿಸಿಕೊಳ್ಳುವ ಸಲುವಾಗಿ ಈ ಕೃತ್ಯ ಎಸಗಲಾಗಿದೆ ಅಂತ ವಿರುದುವಾಘ್‍ನಗರ್ ಎಸ್‍ಪಿ ಎಂ ರಾಜರಾಜನ್ ಮಾಧ್ಯಮಕ್ಕೆ ತಿಳಿಸಿದ್ದಾರೆ.

    ಕರಿಮೆದು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2011ರಲ್ಲಿ ನಡೆದ ರಾಮ್ ಪ್ರಸಾದ್ ಕೊಲೆ ಪ್ರಕರಣದಲ್ಲಿ ಅಮರ್ ಮೂರನೇ ಆರೋಪಿಯಾಗಿದ್ದ. ಅಮರ್ ಕೊಲೆಯ ಹಿಂದೆ ರಾಮ್ ಪ್ರಸಾದ್ ಸಂಬಂಧಿಕರು ಹಾಗೂ ಗೆಳೆಯರ ಕೈವಾಡವಿದೆ ಎಂದು ಪೊಲೀಸರು ಶಂಕಿಸಿದ್ದಾರೆ.

     

    ದಿಂಡಿಗುಲ್ ಜಿಲ್ಲೆಯ ಬಟ್ಲಗುಂಡುವಿನಿಂದ ಅರಪಾಳಯಂ ಬಸ್ ನಿಲ್ದಾಣದ ಕಡೆಗೆ ಹೋಗುತ್ತಿದ್ದ ಸಾರಿಗೆ ಬಸ್ ನಲ್ಲಿ ಅಮರ್ ಸಂಚರಿಸುತ್ತಿದ್ದ. ಈ ವೇಳೆ ಬಸ್ ತನಿಚಿಯಂ ಬಳಿ ಹೋಗುತ್ತಿದ್ದಾಗ, ಚತುಷ್ಪಥ ಹೆದ್ದಾರಿಯಲ್ಲಿ ಕಾರ್ ಮತ್ತು 2 ಬೈಕ್ ನಲ್ಲಿ ಬಂದ 10 ಜನರ ತಂಡ ಬಸ್ಸನ್ನು ಅಡ್ಡಹಾಕಿತ್ತು. ನೋಡನೋಡುತ್ತಿದ್ದಂತೆಯೇ 10 ಮಂದಿ ಮಾರಕಾಸ್ತ್ರಗಳನ್ನು ಹಿಡಿದುಕೊಂಡು ಬಸ್ಸಿನೊಳಗೆ ನುಗ್ಗಿ ಮುಂಬದಿ ಸೀಟಲ್ಲಿ ಕುಳಿತಿದ್ದ ಅಮರ್ ಮೇಲೆ ಏಕಾಏಕಿ ಹಲ್ಲೆ ನಡೆಸಿದ್ದಾರೆ. ಪರಿಣಾಮ ಗಂಭೀರ ಗಾಯಗೊಂಡ ಅಮರ್ ರಕ್ತದ ಮಡುವಿನಲ್ಲಿ ಬೀಳುತ್ತಿದ್ದಂತೆಯೇ ದುಷ್ಕರ್ಮಿಗಳು ಬಸ್ ನಿಂದ ಇಳಿದು ತಮ್ಮ ವಾಹನದಲ್ಲಿ ಅಲ್ಲಿಂದ ಪರಾರಿಯಾಗಿದ್ದಾರೆ.

    ಸದ್ಯ ಘಟನೆ ಸಂಬಂಧಿಸಿದಂತೆ ಆರೋಪಿಗಳ ಪತ್ತೆಗೆ 3 ವಿಶೇಷ ತನಿಖಾ ತಂಡಗಳನ್ನ ರಚಿಸಲಾಗಿದೆ ಎಂದು ಎಸ್‍ಪಿ ಹೇಳಿದ್ದಾರೆ.

  • ಗ್ಯಾಸ್ ಸಿಲಿಂಡರಿನಲ್ಲಿ ಗಾಂಜಾ ಸಾಗಿಸ್ತಿದ್ದಾತನ ಬಂಧನ

    ಗ್ಯಾಸ್ ಸಿಲಿಂಡರಿನಲ್ಲಿ ಗಾಂಜಾ ಸಾಗಿಸ್ತಿದ್ದಾತನ ಬಂಧನ

    ಬೆಂಗಳೂರು: ಬಾಳೆಹಣ್ಣು, ಕಿತ್ತಳೆ ಆಯ್ತು ಇದೀಗ ಗ್ಯಾಸ್ ಸಿಲಿಂಡರಿನಲ್ಲಿ ಗಾಂಜಾ ಸಾಗಾಟ ಮಾಡುತ್ತಿರೋ ಪ್ರಕರಣವೊಂದು ಬೆಳಕಿಗೆ ಬಂದಿದೆ.

    ಸಿಲಿಂಡರಿನಲ್ಲಿ ಗಾಂಜಾ ಪ್ಯಾಕ್ ಗಳನ್ನು ಸಾಗಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಇದೀಗ ರಾಮಮೂರ್ತಿನಗರ ಪೊಲೀಸರು ಬಂಧಿಸಿದ್ದಾರೆ. ಈ ಖತರ್ನಾಕ್ ಆರೋಪಿ ಸಿಲಿಂಡರ್ ನ ಕೆಳಭಾಗವನ್ನು ಕತ್ತರಿಸಿ ಅದರೊಳಗಡೆ ಗಾಂಜಾ ಇಟ್ಟು ಒಂದು ಜಾಗದಿಂದ ಮತ್ತೊಂದು ಜಾಗಕ್ಕೆ ವಿತರಣೆ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

    ಬೆಂಗಳೂರಿನಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಸುಮಾರು 576 ಮಂದಿಯನ್ನು ಪೊಲೀಸರು ಬಂಧಿಸಿದ್ದು, ಇಲ್ಲಿಯವರೆಗೆ ಒಟ್ಟು 318 ಕೇಸ್ ದಾಖಲಾಗಿವೆ. ಅಲ್ಲದೇ ಆರೋಪಿಗಳಿಂದ ಸುಮಾರು 500 ಕೆ.ಜಿ ಗಾಂಜಾ, ಬ್ರೌನ್ ಶುಗರ್ ವಶಪಡಿಸಿಕೊಳ್ಳಲಾಗಿದೆ.

    ಕಳೆದ ವರ್ಷ 138 ಕೇಸ್ ಗಳು ದಾಖಲಾಗಿದ್ದು, 305 ಮಂದಿ ಆರೋಪಿಗಳನ್ನು ಬಂಧಿಸಿಲಾಗಿದೆ. ಇನ್ನು ಬಂಧಿತರಿಂದ 275 ಕೆಜಿ ಗಾಂಜಾ ವಶಕ್ಕೆ ಪಡೆಯಲಾಗಿದೆ ಎಂಬುದಾಗಿ ತಿಳಿದುಬಂದಿದೆ. ಇದನ್ನೂ ಓದಿ: ಪರಪ್ಪನ ಅಗ್ರಹಾರ ಜೈಲಿನಲ್ಲಿ ಎಗ್ಗಿಲ್ಲದೇ ನಡೆಯುತ್ತಿದೆ ಮೀಟರ್ ಬಡ್ಡಿದಂಧೆ!