ಶಿವಮೊಗ್ಗ: ನಟೋರಿಯಸ್ ರೌಡಿಯೊಬ್ಬ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ತಪ್ಪಿಸಿಕೊಳ್ಳಲು ಹೋಗಿ ಗುಂಡೇಟು ತಿಂದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
ಶಿವಮೊಗ್ಗ ಸಮೀಪ ಹೊಳಲೂರು ಸಮೀಪ ಘಟನೆ ನಡೆದಿದ್ದು, ಸೊನಟಾ ಆಸೀಫ್ ಪೊಲೀಸರಿಂದ ಗುಂಡೇಟು ತಿಂದ ರೌಡಿ ಶೀಟರ್. ಕಳೆದ ವಾರ ಉದ್ಯಮಿಯೊಬ್ಬರ ಸಂಬಂಧಿಯ ಕಿಡ್ನಾಪ್ ಪ್ರಕರಣದಲ್ಲಿ ಆರೋಪಿಯಾಗಿದ್ದ ಆಸೀಫ್ ನನ್ನು ಶಿವಮೊಗ್ಗ ಡಿಸಿಬಿ ಇನ್ಸ್ ಪೆಕ್ಟರ್ ಕುಮಾರ್ ಮತ್ತು ತಂಡ ಬೆಂಗಳೂರಿನಲ್ಲಿ ಬಂಧಿಸಿ ಕರೆತಂದಿದ್ದರು.
ಕಿಡ್ನಾಪ್ ಪ್ರಕರಣದ ಇನ್ನೊಬ್ಬ ಆರೋಪಿ ಅಸ್ಲಾಂ ಎಂಬಾತ ಹೊಳಲೂರಿನಲ್ಲಿ ಇರುತ್ತಾನೆ. ನಾನು ತೋರಿಸುತ್ತೇನೆ ಬನ್ನಿ ಎಂದು ಆಸೀಪ್ ತುಂಗಾ ನಗರ ಪೊಲೀಸರ ಜೊತೆ ಹೊಳಲೂರಿಗೆ ಹೋಗಿದ್ದ. ಹೀಗೆ ಹೋದಾಗ ಬಹಿರ್ದೆಸೆಯ ನೆಪದಲ್ಲಿ ಜೀಪಿಂದ ಇಳಿದವನು ಪೊಲೀಸರಿಗೆ ಹಲ್ಲೆ ಮಾಡಿ, ಕಲ್ಲು ತೂರಿ ಓಡಲು ಯತ್ನಿಸಿದ್ದನು.
ತುಂಗಾ ನಗರ ಠಾಣೆ ಎಸ್ ಐ ಗಿರೀಶ್ ಎಚ್ಚರಿಕೆ ನೀಡಿದರೂ ಕಿವಿಗೊಡದಾಗ ಪಿಸ್ತೂಲ್ ನಿಂದ ಆಸೀಫ್ ಕಾಲಿಗೆ ಶೂಟ್ ಮಾಡಿದ್ದಾರೆ. ಘಟನೆಯಲ್ಲಿ ತುಂಗಾನಗರ ಠಾಣೆ ಪೇದೆ ಮರ್ದಾನ್ ಹಾಗೂ ಎಸ್ ಐ ಗಿರೀಶ್ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಆಸೀಫ್ ಈಗ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಶ್ರೀನಗರ: ಜಮ್ಮು ಕಾಶ್ಮೀರ ಬಿಜೆಪಿ ಶಾಸಕರೊಬ್ಬರ ಪತ್ನಿ ತಮ್ಮ ಪತಿ ಕಾಲೇಜು ಯುವತಿಯೊಂದಿಗೆ ಮದುವೆಯಾಗಿರುವುದಾಗಿ ಆರೋಪ ಮಾಡಿ, ಬಿಜೆಪಿ ಶಿಸ್ತು ಸಮಿತಿಗೆ ದೂರು ನೀಡಿದ್ದಾರೆ.
ಜಮ್ಮು ಜಿಲ್ಲೆಯ ಶಾಸಕ ಗಗನ್ ಭಗತ್ ವಿರುದ್ಧ ಪತ್ನಿ ಮೋನಿಕಾ ಶರ್ಮಾ ಈ ಆರೋಪ ಮಾಡಿದ್ದು, 19 ವರ್ಷದ ಕಾಲೇಜು ಯುವತಿಯೊಂದಿಗೆ ಮದುವೆಯಾಗಿ ಆಕೆಯೊಂದಿಗೆ ವಾಸಿಸುತ್ತಿದ್ದಾರೆ ಎಂದು ದೂರಿದ್ದಾರೆ.
ಸದ್ಯ ಶಾಸಕ ಪತ್ನಿ ಆರೋಪದೊಂದಿಗೆ ಕಾಲೇಜು ಯುವತಿಯ ತಂದೆಯೂ ಸಹ ತಮ್ಮ ಮಗಳನ್ನು ಪಂಜಾಬ್ ಕಾಲೇಜಿನಿಂದ ಅಪಹರಣ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಆದರೆ ಈ ಆರೋಪಗಳನ್ನು ಯುವತಿ ಹಾಗೂ ಶಾಸಕ ಗಗನ ಭಗತ್ ನಿರಾಕರಿಸಿದ್ದು, ತಮ್ಮ ರಾಜಕೀಯ ಜೀವನಕ್ಕೆ ಕಪ್ಪು ಚುಕ್ಕೆ ತರಲು ಆಧಾರ ರಹಿತ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಪ್ರತಿಕ್ರಿಯಿಸಿದ್ದಾರೆ.
ಅಂದಹಾಗೇ 13 ವರ್ಷಗಳ ಹಿಂದೆ ಶಾಸಕ ಗಗನ್ ಭಗತ್ ಹಾಗೂ ಮೋನಿಕಾ ಶರ್ಮಾ ಮದುವೆಯಾಗಿರುವುದಾಗಿ ತಿಳಿಸಿದ್ದು, ಸದ್ಯ ಶಾಸಕರ ವಿರುದ್ಧ ಪ್ರಧಾನಿ ಮೋದಿ ಸೇರಿದಂತೆ ಪಕ್ಷದ ಹಿರಿಯ ನಾಯಕರಿಗೆ ಶರ್ಮಾ ದೂರು ನೀಡಿದ್ದಾರೆ. ಅಲ್ಲದೇ ಈ ಹಿಂದೆ ತಮ್ಮ ದೈನಂದಿನ ಜೀವನ ನಿರ್ವಹಣೆಗಾಗಿ ಮಾಸಿಕ 1 ಲಕ್ಷ ರೂ. ಹಣ ನೀಡುವುದಾಗಿ ಗಗನ್ ಭಗತ್ ಹೇಳಿದ್ದರು. ಆದರೆ ಇದುವರೆಗೂ ಯಾವುದೇ ಹಣವನ್ನು ನೀಡಿಲ್ಲ. ಇದರಿಂದ ನನಗೆ ಹಾಗೂ ಮಕ್ಕಳಿಗೆ ತೀವ್ರ ಸಮಸ್ಯೆಯಾಗಿದೆ ಎಂದು ದೂರಿದ್ದಾರೆ.
ಜಮ್ಮು ಕಾಶ್ಮೀರದ ಬಿಜೆಪಿ ಮಹಿಳಾ ಘಟಕದ ಕಾರ್ಯದರ್ಶಿಯಾಗಿರುವ ನಾನು ತನ್ನ ಕುಟುಂಬ ಒಳಿತಿಗಾಗಿ ಒಂದು ವರ್ಷದಿಂದ ಈ ಕುರಿತು ಮಾಹಿತಿ ಬಹಿರಂಗ ಪಡಿಸಿಲ್ಲ. ತನಗೆ 12 ವರ್ಷದ ಮಗ ಹಾಗೂ 4 ವರ್ಷದ ಮಗಳು ಇದ್ದಾರೆ. ಪತಿ ವಿರುದ್ಧ ಆರೋಪದ ಕುರಿತು ಸಾಕ್ಷಿ ನೀಡಲು ತಮ್ಮ ಬಳಿ ಆಧಾರಗಳು ಇದ್ದು, ಅವುಗಳನ್ನು ಬಿಜೆಪಿ ಶಿಸ್ತು ಸಮಿತಿಗೆ ನೀಡಿದ್ದಾಗಿ ಹೇಳಿದ್ದಾರೆ. ಅಲ್ಲದೇ ಕಳೆದ ಎರಡು ದಿನಗಳ ಹಿಂದೆ ಈ ಆಧಾರಗಳನ್ನು ಸಮಿತಿಗೆ ನೀಡದಿರಲು ಗಗನ್ ಭಗತ್ ತಮ್ಮ ಬಳಿ ಮನವಿ ಮಾಡಿದ್ದಾಗಿ ತಿಳಿಸಿದ್ದಾರೆ.
ತಮ್ಮ ಪತಿ ಜವಾಬ್ದಾರಿಯುತ ಸ್ಥಾನದಲ್ಲಿ ಇದ್ದು, ಅವರು ಇಂತಹ ಕೆಲಸ ಮಾಡಿ ಸಮಾಜಕ್ಕೆ ಯಾವ ಸಂದೇಶ ನೀಡುತ್ತಾರೆ. ಆದರೆ ಅವರು ಮದುವೆಯಾಗುವುದಕ್ಕೆ ಯಾವುದೇ ಆಕ್ಷೇಪವಿಲ್ಲ. ಅದನ್ನು ಬಹಿರಂಗ ಪಡಿಸಲಿ ಎಂದು ತಿಳಿಸಿದ್ದಾರೆ.
ವಾಷಿಂಗ್ಟನ್: ಇಲ್ಲಿನ ಕಾನ್ಸಾಸ್ ರೆಸ್ಟೋರೆಂಟ್ ನಲ್ಲಿ 25 ವರ್ಷದ ಭಾರತೀಯ ವಿದ್ಯಾರ್ಥಿಯನ್ನು ದರೋಡೆ ಮಾಡಿ ಬರ್ಬರವಾಗಿ ಕೊಲೆಗೈಯಾಗಿದ್ದು, ಇದೀಗ ಆರೋಪಿಯ ಪತ್ತೆಗೆ ಸಹಕರಿಸಿದವರಿಗೆ ಬಂಪರ್ ಆಫರ್ ನೀಡಲಾಗಿದೆ.
ತೆಲಂಗಾಣ ಮೂಲದ ಶರತ್ ಕೊಪ್ಪುವನ್ನು ಹತ್ಯೆಗೈದ ಆರೋಪಿಯನ್ನು ಪತ್ತೆ ಮಾಡಲು ಮಾಹಿತಿ ನೀಡಿ ಸಹಕರಿಸಿದವರಿಗೆ 10 ಸಾವಿರ ಡಾಲರ್(6.88 ಲಕ್ಷ ರೂ.) ಬಹುಮಾನ ನೀಡಲಾಗುವುದು ಎಂದು ಕಾನ್ಸಾಸ್ ಪೊಲೀಸರು ಘೋಷಿಸಿದ್ದಾರೆ. ಸದ್ಯ ಪೊಲೀಸರು ವಿದ್ಯಾರ್ಥಿಯ ಕೊಲೆಗೈದ ಆರೋಪಿಯ ಸಿಸಿಟಿವಿ ದೃಶ್ಯಾವಳಿಯನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ರಿಲೀಸ್ ಮಾಡಿದ್ದಾರೆ.
ಅಪರಿಚಿತ ವ್ಯಕ್ತಿಯೊಬ್ಬ ಕಾನ್ಸಾಸ್ ನಗರದಲ್ಲಿರೋ ರೆಸ್ಟೋರೆಂಟ್ ಒಂದರಲ್ಲಿ ಶರತ್ ಅವರನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಶರತ್ ಕಾನ್ಸಾಸ್ ನಗರದಲ್ಲಿರೋ ಮಿಶೌರಿ ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದ. ಕಾನ್ಸಾಸ್ ರೆಸ್ಟೋರೆಂಟ್ ನಲ್ಲಿದ್ದ ಸಂದರ್ಭದಲ್ಲಿ ಅಪರಿಚಿತ ತಂಡವೊಂದು ಏಕಾಏಕಿ ದಾಳಿ ಮಾಡಿ ಶರತ್ ಮೇಲೆ ಗುಂಡಿನ ಮಳೆ ಸುರಿಸಿದೆ. ಪರಿಣಾಮ ಶರತ್ ದೇಹಕ್ಕೆ 5 ಬುಲೆಟ್ ಗಳು ಹೊಕ್ಕಿದೆ. ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು ಅಂತ ಶರತ್ ಸೋದರ ಸಂಬಂಧಿ ಸಂದೀಪ್ ವೆಮುಲಕೊಂಡ ಮಾಧ್ಯಮಕ್ಕೆ ತಿಳಿಸಿದ್ದಾರೆ.
Looking for this suspect in the robbery & murder of 25-y.o. Sharath Kopuu at 5412 Prospect last night. Sharath was from India and is a student at UMKC. $10,000 reward for info leading to charges in this (& every KCMO murder) https://t.co/qUxkcItwXf
ಕಳೆದ ಜನವರಿಯಲ್ಲಿ ಶರತ್ ವಿದ್ಯಾಭ್ಯಾಸ ಮಾಡಲೆಂದು ಅಮೆರಿಕಕ್ಕೆ ತೆರಳಿದ್ದರು. ಆದ್ರೆ ಅಮೆರಿಕ ಕಾಲಮಾನದ ಪ್ರಕಾರ ಕಳೆದ ರಾತ್ರಿ 8 ಗಂಟೆ ಸುಮಾರಿಗೆ ಅಪರಿಚಿತ ವ್ಯಕ್ತಿಗಳು ಶರತ್ ನನ್ನು ಗುಂಡಿಕ್ಕಿ ಕೊಂದಿದ್ದಾರೆ. ಈ ವಿಚಾರವನ್ನು ನಮಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಅಂತ ಸಂದೀಪ್ ಕಣ್ಣೀರು ಹಾಕಿದ್ದಾರೆ.
ಈ ಸಂಬಂಧ ಶೀಘ್ರ ತನಿಖೆ ನಡೆಸಿ, ಆರೋಪಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ವೆಮುಲಕೊಂಡ ಅವರು ಈಗಾಗಲೇ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರನ್ನು ಮನವಿ ಮಾಡಿಕೊಂಡಿದ್ದಾರೆ. ಅಲ್ಲದೇ ಅಂತಿಮ ಸಂಸ್ಕಾರಕ್ಕಾಗಿ ಶರತ್ ಮೃತದೇಹವನ್ನು ಹೈದರಾಬಾದ್ ಗೆ ಕಳುಹಿಸಲು ಸಹಕರಿಸುವಂತೆ ಕೇಳಿಕೊಂಡಿದ್ದಾರೆ.
Kansas incident – My heartfelt condolences to the bereaved family. We will follow this up with the Police and provide all assistance to the family. @IndiainChicago@IndianEmbassyUS @NavtejSarna
ರಾಂಚಿ: ಗೋ ರಕ್ಷಣೆಯ ಹೆಸರಿನಲ್ಲಿ ಕೊಲೆಗೈದ 7 ಆರೋಪಿಗಳಿಗೆ ಹೂಹಾರ ಹಾಕಿ ಆಕ್ರೋಶಕ್ಕೆ ಒಳಗಾಗಿದ್ದ ಜಯಂತ್ ಸಿನ್ಹಾ ವಿರುದ್ಧ ಇದೀಗ ತಂದೆ, ಮಾಜಿ ಕೇಂದ್ರ ಸಚಿವ ಯಶ್ವಂತ್ ಸಿನ್ಹಾ ಗರಂ ಆಗಿದ್ದಾರೆ.
ಈ ಕುರಿತು ಟ್ವಿಟ್ಟರ್ ನಲ್ಲಿ ಆಕ್ರೋಶ ವ್ಯಕ್ತಪಡಿಸಿದ ಸಿನ್ಹಾ, ಮಗನ ಈ ಕಾರ್ಯವನ್ನು ಯಾವುದೇ ಕಾರಣಕ್ಕೂ ನಾನು ಒಪ್ಪಲು ಸಿದ್ಧನಿಲ್ಲ. ಈ ಹಿಂದೆ ನಾನು ಒಬ್ಬ ನಾಲಾಯಕ್ ಮಗನ ಅಪ್ಪನಾಗಿದ್ದೆ. ಆದ್ರೆ ಇದೀಗ ಪಾತ್ರಗಳು ಬದಲಾಗಿವೆ. ಇದು ಟ್ವಿಟ್ಟರ್ ಮಹಿಮೆ ಅಂತ ಹೇಳೋ ಮೂಲಕ ಮಗನ ವಿರುದ್ಧ ಕೆಂಡಾಮಂಡಲಾಗಿದ್ದಾರೆ.
Earlier I was the Nalayak Baap of a Layak Beta. Now the roles are reversed. That is twitter. I do not approve of my son's action. But I know even this will lead to further abuse. You can never win.
ಏನಿದು ಘಟನೆ?:
ಕಳೆದ ವರ್ಷ ಜೂನ್ ತಿಂಗಳಲ್ಲಿ ಜಾರ್ಖಂಡ್ ನ ರಾಮ್ ಗ್ರಹ್ ನಲ್ಲಿ 55 ವರ್ಷದ ವ್ಯಕ್ತಿಯೊಬ್ಬರು ದನದ ಮಾಂಸವನ್ನು ಸಾಗಾಟ ಮಾಡುತ್ತಿದ್ದಾರೆಂದು ಆರೋಪಿಸಿ ಅವರನ್ನ ಕಾರಿನಿಂದ ಎಳೆದು ಹಲ್ಲೆ ಮಾಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ಬಿಜೆಪಿ ಮುಖಂಡ ಸೇರಿ 11 ಮಂದಿ ಜೈಲು ಪಾಲಾಗಿದ್ದರು. ಇದೀಗ ಒಂದು ವರ್ಷದ ನಂತರ ಜೂನ್ 29ರಂದು ಜಾರ್ಖಂಡ್ ಹೈಕೋರ್ಟ್ 8 ಆರೋಪಿಗಳ ಜೀವಾವಧಿ ಶಿಕ್ಷೆಯನ್ನು ರದ್ದುಗೊಳಿಸಿತ್ತು.ಹೀಗಾಗಿ ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆಯಾದ ಇವರೆಲ್ಲರೂ ರಾಂಚಿಯಲ್ಲಿರೋ ಜಯಂತ್ ಸಿನ್ಹಾ ಅವರ ನಿವಾಸಕ್ಕೆ ಭೇಟಿ ಕೊಟ್ಟಿದ್ದರು. ಈ ವೇಳೆ ಸಚಿವರು ಎಲ್ಲರನ್ನೂ ಹಾರ ಹಾಕಿ ಸ್ವಾಗತಿಸಿದ್ದಾರೆ.
ಈ ಕುರಿತ ಭಾವಚಿತ್ರಗಳು ಇದೀಗ ವೈರಲ್ ಆಗಿದ್ದು, ಇದೀಗ ಮಗ ಜಯಂತ್ ಸಿನ್ಹಾ ವಿರುದ್ಧ ತಂದೆ ಯಶ್ವಂತ್ ಸಿಂಗ್ ಕಿಡಿಕಾರಿದ್ದಾರೆ.
There you are. Exactly as I had predicted. You can never win.
ಬೆಂಗಳೂರು: ಬೆದರಿಸಿ ಹಣ ಸುಲಿಗೆ ಮಾಡುತ್ತಿದ್ದ ಆರೋಪಿಯನ್ನು ಬೆಂಗಳೂರಿನ ಮಾರತ್‍ಹಳ್ಳಿ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ಮಹೇಂದ್ರ ಕುಮಾರ್ ಬಂಧಿತ ಆರೋಪಿ. ಜೂನ್ 10ರಂದು ಮಹೇಂದ್ರ ಲಾಡ್ಜ್ ಗೆ ಹೋಗಿ ಯುವಕನನ್ನು ಬೆದರಿಸಿದ್ದನು.
ಯುವಕನೊಬ್ಬ ತನ್ನ ಸ್ನೇಹಿತೆ ಜೊತೆಗೆ ಲಾಡ್ಜ್ ಗೆ ಹೋಗಿದ್ದ. ಆಗ ಮಹೇಂದ್ರ ಮಧ್ಯರಾತ್ರಿ ಲಾಡ್ಜ್ ರೂಮ್‍ಗೆ ಹೋಗಿ ಯುವಕನಿಗೆ ಬೆದರಿಕೆ ಹಾಕಿದ್ದಾನೆ. ಲಾಡ್ಜ್ ರೂಮ್‍ನಲ್ಲಿ ಏನ್ ಮಾಡ್ತಾ ಇದ್ದೀರಾ ಎಂದು ಪ್ರಶ್ನಿಸಿ, ನಿಮ್ಮ ವಿಡಿಯೋಗಳು ಸಹ ನಮ್ಮ ಬಳಿ ಇದೆ ಎಂದು ಹೇಳಿ 50 ಸಾವಿರ ರೂ. ಹಣದ ಬೇಡಿಕೆ ಇಟ್ಟನು. ಹಣ ನೀಡಿಲ್ಲ ಎಂದರೆ ಸಾಮಾಜಿಕ ಜಾಲತಾಣಕ್ಕೆ ವಿಡಿಯೋ ಹಾಕುತ್ತೇನೆ ಎಂದು ಬೆದರಿಸಿದ್ದಾನೆ.
ಕೊನೆಗೆ ದೂರುದಾರ ಯುವಕ ಹಣ ಕೊಡಲು ಒಪ್ಪಿಕೊಂಡನು. ಬಳಿಕ ಮಹೇಂದ್ರ ಯುವಕನನ್ನು ಕಾರಿನಲ್ಲಿ ಎಟಿಎಂಗೆ ಕರೆದುಕೊಂಡು ಹೋಗಿ 20 ಸಾವಿರ ರೂ. ಡ್ರಾ ಮಾಡಿಸಿಕೊಂಡಿದ್ದನು. ಹಣ ಪಡೆದ ಬಳಿಕ ಮಹೇಂದ್ರ ಯುವಕನನ್ನು ಕೆಆರ್ ಪುರಂ ಬಳಿ ಬಿಟ್ಟು ಹೋಗಿದ್ದಾನೆ.
ಇದಾದ ಬಳಿಕ ಮಹೇಂದ್ರ ಮತ್ತೆ ಯುವಕನ ಮೊಬೈಲ್‍ಗೆ ಕರೆ ಮಾಡಿ ಉಳಿದ ಹಣವನ್ನು ಕೊಡುವಂತೆ ಬೇಡಿಕೆ ಇಟ್ಟಿದ್ದಾನೆ. ಹಣ ಕೊಡದಿದ್ದಲ್ಲಿ ವಿಡಿಯೋ ಅಪ್ಲೋಡ್ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ. ಅಂತಿಮವಾಗಿ ಯುವಕ ಮಾರತ್‍ಹಳ್ಳಿ ಪೊಲೀಸ್ ಠಾಣೆಯಲ್ಲಿ ಮಹೇಂದ್ರ ವಿರುದ್ಧ ದೂರು ದಾಖಲಿಸಿದ್ದರು.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿ ಜೈ ಭಾರತ್ ಸಂಘ ಎನ್ನುವ ಸಂಘಟನೆ ಮಾಡಿಕೊಂಡಿದ್ದನೆ ಎಂದು ತಿಳಿದು ಬಂದಿದೆ. ಮೂರು ವರ್ಷಗಳಿಂದ ಆರೋಪಿ ಇದೇ ರೀತಿ ಕೃತ್ಯ ಎಸಗುತ್ತಿದ್ದನು. ಆದರೆ ನೊಂದವರು ಮಾನಕ್ಕೆ ಹೆದರಿ ಪೊಲೀಸರಿಗೆ ದೂರು ನೀಡಿರಲಿಲ್ಲ. ಈಗ ಅಂತಿಮವಾಗಿ ಮಾರತ್‍ಹಳ್ಳಿ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿ ಮಹೇಂದ್ರನನ್ನು ಬಂಧಿಸಿದ್ದಾರೆ.
ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ಪರ ಅಲೆ ಇದ್ದರೂ ನಮ್ಮದೇ ತಪ್ಪುಗಳಿಂದ ಹಾಗೂ ಲೋಪದೋಷಗಳಿಂದ ನಾವು ಸೋಲಬೇಕಾಯಿತು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ವಿಷಾದ ವ್ಯಕ್ತಪಡಿಸಿದ್ದಾರೆ.
ವಿಧಾನಸಭಾ ಚುನಾವಣೆ ಬಳಿಕ ಇದೇ ಮೊದಲ ಬಾರಿಗೆ ಬೆಂಗಳೂರು ಅರಮನೆ ಮೈದಾನದ ಗಾಯತ್ರಿ ವಿಹಾರ್ ದಲ್ಲಿ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಆಯೋಜಿಸಲಾಗಿದೆ. ಈ ಕಾರ್ಯಕಾರಿಣಿಯಲ್ಲಿ ಬಿಜೆಪಿ ನಾಯಕರು, ಶಾಸಕರು, ಸಂಸದರು ಸೇರಿದಂತೆ ಅನೇಕ ನಾಯಕರು ಭಾಗವಹಿಸಿದ್ದಾರೆ.
ಈ ವೇಳೆ ಮಾತನಾಡಿದ ಅವರು, ಮಾಜಿ ಸಿಎಂ ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿ ಮತಕ್ಷೇತ್ರದಲ್ಲಿ ಸೋತರು. ಆದರೆ ಬಾದಾಮಿಯಲ್ಲಿ ಕೇವಲ 1,600 ಮತಗಳ ಅಂತರದಿಂದ ಗೆಲುವು ಸಾಧಿಸಿದರು. ಬಾದಾಮಿಯಲ್ಲಿಯೂ ಸಿದ್ದರಾಮಯ್ಯ ಅವರನ್ನು ಸೋಲಿಸಲು ಅಕಾಶಗಳಿದ್ದವು. ಈ ನಿಟ್ಟಿನಲ್ಲಿ ಶ್ರೀರಾಮುಲು ಅವರು ಒಂದು ದಿನ ಹೆಚ್ಚು ಪ್ರಚಾರ ಮಾಡಿದ್ದರೆ ಅಲ್ಲಿಯೂ ಬಿಜೆಪಿ ಜಯಗಳಿಸುತಿತ್ತು ಎಂದರು.
ಹಿಂದಿನ ನೀರಾವರಿ ಯೋಜನೆಗಳಿಗೆ ಸಂಬಂಧಿಸಿದ ಯಾವುದೇ ಬಿಲ್ ಗಳನ್ನು ಪಾವತಿ ಮಾಡಬಾರದು ಎಂದು ನೀರಾವರಿ ಸಚಿವ ಡಿ.ಕೆ.ಶಿವಕುಮಾರ್ ಅವರು ಮೌಖಿಕ ಆದೇಶ ನೀಡಿದ್ದಾರಂತೆ. ಅಲ್ಲದೇ ಹಿಂದಿನ ಸಚಿವರಿಗೆ ಕಮಿಷನ್ ಕೊಟ್ಟಿದ್ದರು ಕೂಡಾ ಈಗ ನಮ್ಮ ಪಾಲು ಕೊಡಿ ಎಂದು ಅವರು ಕೇಳಿರುವ ಬಗ್ಗೆ ರಾಜ್ಯದಾದ್ಯಂತ ಗುತ್ತಿಗೆದಾರರು ಆರೋಪ ಮಾಡುತ್ತಿದ್ದಾರೆ ಎಂದು ದೂರಿದರು.
ಕಳೆದ ಸರ್ಕಾರದ 17 ಸಚಿವರು ಸೋತಿದ್ದಾರೆ. ಆದರೆ ರಾಜ್ಯದ ಯಾವುದೇ ಮೂಲೆಗೆ ಹೋದರೂ ಬಿಜೆಪಿಗೆ ಹಿನ್ನಡೆ ಹೇಗಾಯಿತು ಎನ್ನುವುದೇ ಚರ್ಚೆಯಾಗುತ್ತಿದೆ. ಈಗಲೂ ಬಿಜೆಪಿ ಅಧಿಕಾರಕ್ಕೆ ಬರಲೆಂದು ಜನ ಬಯಸುತ್ತಾರೆ. ಜೆಡಿಎಸ್ 14 ಜಿಲ್ಲೆಯ ಒಂದೇ ಒಂದು ಮತಕ್ಷೇತ್ರದಿಂದ ಜಯಗಳಿಸಿಲ್ಲ. ಆದರೂ ಅಧಿಕಾರ ಚುಕ್ಕಾಣಿ ಹಿಡಿದಿದೆ ಎಂದು ವ್ಯಂಗ್ಯವಾಡಿದರು.
ಜೆಡಿಎಸ್ ಹಾಗೂ ಕಾಂಗ್ರೆಸ್ಸಿನ ಹಲವು ಮುಖಂಡರು ಬಿಜೆಪಿಗೆ ಬರಲು ಮುಂದಾಗಿದ್ದಾರೆ. ಅವರ ಮನೆಗಳಿಗೆ ಹೋಗಿ ಚರ್ಚಿಸಿ ಪಕ್ಷಕ್ಕೆ ಕರೆ ತರುವ ಕೆಲಸ ಮಾಡಬೇಕಾಗಿದೆ. ಬೇರೆ ಪಕ್ಷಗಳ ಮುಖಂಡರು ಬಂದರೆ ನಿಮ್ಮ ಸ್ಥಾನಕ್ಕೆ ಕುತ್ತು ಬರುತ್ತದೆ ಎಂದು ಯೋಚಿಸುವುದನ್ನು ಬಿಡಿ. ಪಕ್ಷಕ್ಕೆ ಆಗಮಿಸುವ ಮುಖಂಡರಿಂದ ವಿಧಾನಸಭೆ ಕ್ಷೇತ್ರಗಳಲ್ಲಿ ಪಕ್ಷ ಬಲವರ್ಧನೆ ಮಾಡಬೇಕು ಎಂದು ಕರೆ ನೀಡಿದರು.
ಇದು ಅಪವಿತ್ರ ಮೈತ್ರಿ ಸರ್ಕಾರವಾಗಿದ್ದು, ಹೆಚ್ಚು ದಿನ ಆಡಳಿತ ಮಾಡುವುದಿಲ್ಲ. ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಸುಳ್ಳು ಭರವಸೆ ನೀಡುತ್ತಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ಜನ ಅವರನ್ನು ಒಂಟಿಗಾಲಿನಲ್ಲಿ ನಿಲ್ಲಿಸುತ್ತಾರೆ. ಆದರೆ ಪಕ್ಷದಲ್ಲಿ ನೀವು ಯಾರು ಈ ಕುರಿತು ಪತ್ರಿಕಾಗೋಷ್ಠಿ ನಡೆಸಿಲ್ಲ. ಅಲ್ಲದೇ ದಿವಾಳಿ ಸರ್ಕಾರದ ಕುರಿತು ಜನ ಜಾಗೃತಿ ಮೂಡಿಸಿಲ್ಲ. ಹೀಗಾಗಿ ನಾನೇ ಈ ಸಭೆಯನ್ನು ಆಯೋಜಿಸಬೇಕಾದ ಪರಿಸ್ಥಿತಿ ಬಂತು ಎಂದು ಹೇಳಿದರು.
ಸಮ್ಮಿಶ್ರ ಸರ್ಕಾರದಲ್ಲಿ ಬಜೆಟ್ ಮಂಡಿಸುವ ವಿಚಾರದಿಂದ ಕಚ್ಚಾಟ ಜೋರಾಗಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಬಜೆಟ್ ಗೆ ಪಾವಿತ್ರ್ಯತೆ ಇಲ್ಲ. ಸರ್ಕಾರ ರಚನೆಯಾಗಿ 22 ದಿನಗಳು ಕಳೆದಿದ್ದರೂ ಆಡಳಿತ ಸ್ಥಗಿತಗೊಂಡಿದೆ. ಹೀಗಾಗಿ ಕಳೆದ ನಾಲ್ಕು ತಿಂಗಳಿಂದ 10 ಸಾವಿರ ಕೋಟಿ ರೂ. ಅನುದಾನ ಬಳಕೆಯಾಗದೆ ಹಾಗೇ ಬಾಕಿ ಉಳಿದಿದೆ. ನಮ್ಮ ದೇಶದ ಸಂವಿಧಾನದ ಪ್ರಕಾರ ಅತಿ ದೊಡ್ಡ ಪಕ್ಷವನ್ನು ಸರ್ಕಾರ ರಚನೆಗೆ ರಾಜ್ಯಪಾಲರು ಕರೆದು ಅವಕಾಶ ಕೊಟ್ಟಿದ್ದರು. ಆದರೆ ಜೆಡಿಎಸ್ ಹಾಗೂ ಕಾಂಗ್ರೆಸ್ಸಿನವರು ದೇಶದ ಇತಿಹಾಸದಲ್ಲಿ ಮೊದಲ ಬಾರಿ ರಾಜ್ಯಪಾಲರ ನಡೆ ಪ್ರಶ್ನಿಸಿ ಸುಪ್ರೀಂ ಕೋರ್ಟ್ ನಲ್ಲಿ ಪ್ರಕರಣ ದಾಖಲಿಸಿದರು. ಇದರಿಂದಾಗಿ ನಮಗೆ ದೊರೆತ 24 ಗಂಟೆಯ ಒಳಗೆ ಬಹುಮತ ಸಾಬೀತು ಪಡಿಸಲು ಸಾಧ್ಯವಾಗಲಿಲ್ಲ ಎಂದರು.
ನಮ್ಮ ಮೊದಲ ಸಂಪುಟ ಸಭೆಯಲ್ಲಿಯೇ ರೈತರ ಸಾಲಮನ್ನಾ ಮಾಡಲು ಮುಖ್ಯ ಕಾರ್ಯದರ್ಶಿ ಜತೆ ಚರ್ಚೆ ನಡೆಸಲಾಗಿತ್ತು. ಅಲ್ಲದೇ ನೋಟ್ ಸಿದ್ಧ ಪಡಿಸಲಾಗಿತ್ತು. ಆದರೆ ಸುಪ್ರೀಂ ಕೋರ್ಟ್ ತೀರ್ಪಿನಿಂದಾಗಿ ಬಹುಮತ ಸಾಬೀತು ಮಾಡಲು ಸಾಧ್ಯವಾಗಲಿಲ್ಲ. ಹೀಗಾಗಿ ರೈತರ ಸಾಲಮನ್ನಾ, ಸೇರಿದಂತೆ ಹಲವು ಯೋಜನೆ ಘೋಷಣೆ ಮಾಡಲು ಆಗಲಿಲ್ಲ ಎಂದು ಬಿಎಸ್‍ವೈ ಹೇಳಿದರು.
ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಅಕ್ರಮಕ್ಕೆ ಮುಂದಾಗಿದ್ದವು. ಮುಖ್ಯಮಂತ್ರಿ ಜನರಿಗೆ ಸುಳ್ಳು ಭರವಸೆಗಳನ್ನು ನೀಡಿದರು. ಪ್ರಣಾಳಿಕೆಯ ಅಂಶಗಳನ್ನು ಮುಖ್ಯಮಂತ್ರಿಗಳು ಮರೆತಿದ್ದಾರೆ ಎಂದು ದೂರಿದರು.
ಕಾರ್ಯಕಾರಿಣಿಯಲ್ಲಿ ಬಿಜೆಪಿಯ ಮುರಳೀಧರ್ ರಾವ್, ಅನಂತಕುಮಾರ್, ರಮೇಶ್ ಜಿಗಜಿಣಗಿ, ಜಗದೀಶ್ ಶೆಟ್ಟರ್, ಆರ್.ಅಶೋಕ್, ಬಿ.ಎಲ್.ಸಂತೋಷ್, ಸಿ.ಟಿ.ರವಿ, ಗೋವಿಂದ ಕಾರಜೋಳ, ಅರವಿಂದ ಲಿಂಬಾವಳಿ, ಶೋಭಾ ಕರಂದ್ಲಾಜೆ, ಪ್ರಹ್ಲಾದ್ ಜೋಷಿ, ಶ್ರೀರಾಮುಲು ಸೇರಿದಂತೆ 800ಕ್ಕೂ ಕಾರ್ಯಕಾರಿಣಿ ಸದಸ್ಯರು ಭಾಗಿಯಾಗಿದ್ದರು. ಆದರೆ ಅನಾರೋಗ್ಯದಿಂದಾಗಿ ಡಿವಿ ಸದಾನಂದಗೌಡ ಹಾಗೂ ಕೆ.ಎಸ್.ಈಶ್ವರಪ್ಪ ಗೈರಾಗಿದ್ದಾರೆ.
ಬೆಂಗಳೂರು: ಮಾಜಿ ಕೇಂದ್ರ ಸಚಿವ ಚಿದಂಬರಂ ಸಂಬಂಧಿಯನ್ನು ಅನೈತಿಕ ಸಂಬಂಧದ ಹಿನ್ನೆಲೆ ಅಪಹರಿಸಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಕರ್ನಾಟಕ ತಮಿಳುನಾಡಿ ಗಡಿ ಆನೇಕಲ್ ಗೆ ಹೊಂದಿಕೊಂಡಿರುವ ಹೊಸೂರು ಬಳಿ ನಡೆದಿದೆ.
ತಮಿಳುನಾಡಿನ ತಿರಪೂರ್ ನಲ್ಲಿ ಗಾರ್ಮೆಂಟ್ಸ್ ಉದ್ಯಮ ನಡೆಸುತ್ತಿರುವ ಮಾಜಿ ಕೇಂದ್ರ ಸಚಿವ ಪಿ ಚಿದಂಬರಂ ಸಂಬಂಧಿ ಶಿವಮೂರ್ತಿ(40) ಎಂಬುವವರೆ ಕೊಲೆಯಾದ ದುರ್ದೈವಿ. ಶಿವಮೂರ್ತಿ ಅವರ ಕೊಲೆ ಅನೈತಿಕ ಸಂಬಂಧದ ಹಿನ್ನೆಲೆ ನಡೆದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿದೆ.
ಶಿವಮೂರ್ತಿ ಹತ್ಯೆಗೆ ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡುವ ಮೂರ್ತಿ ಎಂಬುವವರು ಕೊಲೆಗೆ ಸುಪಾರಿ ನೀಡಿದ್ದು, ಮೂರ್ತಿ ಹೆಂಡತಿಯೊಂದಿಗೆ ಶಿವಮೂರ್ತಿ ಅಕ್ರಮ ಸಂಬಂಧ ಹೊಂದಿದ್ದೆ ಕೊಲೆಗೆ ಕಾರಣ ಎನ್ನಲಾಗಿದೆ. ಶಿವಮೂರ್ತಿಯನ್ನು ಕೊಲೆಗೆ ಮಾಡಲು ವಿಮಲ್, ಗೌತಮ್ ಹಾಗೂ ಮನಿಭಾರತಿ ಎಂಬುವರಿಗೆ ಸುಪಾರಿ ನೀಡಲಾಗಿತ್ತು ಎನ್ನಲಾಗಿದೆ.
ಇದೇ ತಿಂಗಳ 25 ರಂದು ಶಿವಮೂರ್ತಿಯವರನ್ನು ಮೂವರು ಆರೋಪಿಗಳು ಅವರದೇ ಕಾರಿನಲ್ಲಿ ಅಪಹರಿಸಿ ಮೆಟ್ಟೂರು ಬಳಿ ಶಿವಮೂರ್ತಿಯವರ ಮುಖಕ್ಕೆ ಟೇಪ್ ಸುತ್ತಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದರು. ಬಳಿಕ 2 ದಿನಗಳ ಕಾಲ ಶವವನ್ನು ಎಸೆಯಲು ಆಗದೆ ಶವದೊಂದಿಗೆ ತಿರುಗಿದ್ದು ಕೊನೆಗೆ ಬುಧವಾರ ಸಂಜೆ ಹೊಸೂರಿನ ಸಮೀಪದ ಡ್ಯಾಂನಲ್ಲಿ ಮೃತ ದೇಹಕ್ಕೆ ಮೈಲಿಕಲ್ಲು ಕಟ್ಟಿ ಎಸೆದು ಹೋಗಿದ್ದಾರೆ. ಆದರೆ ಈ ವೇಳೇ ವಾನಂಬಾಡಿ ಬಳಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದಾಗ ಕೊಲೆ ರಹಸ್ಯ ಬಯಲಾಗಿದೆ. ಸದ್ಯ ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಅವರು ನೀಡಿದ ಮಾಹಿತಿ ಮೇರೆಗೆ ಡ್ಯಾಂ ನಲ್ಲಿ ತೀವ್ರ ಹುಡುಕಾಟ ನಡೆಸಿ ಶಿವಮೂರ್ತಿಯ ಮೃತ ದೇಹವನ್ನು ಹೊರಕ್ಕೆ ತೆಗೆದಿದ್ದಾರೆ.
ಬೆಂಗಳೂರು: ಸುಮಾರು 10 ಪ್ರಕರಣಗಳಲ್ಲಿ ಬೇಕಾಗಿರುವ ನಗರದ ಕುಖ್ಯಾತ ರೌಡಿಶೀಟರ್ ಸೈಕಲ್ ರವಿಗೆ ಕಾಲಿಗೆ ಪೊಲೀಸರು ಗುಂಡು ಹಾರಿಸಿ ಪೊಲೀಸರು ಬಂಧಿಸಿದ್ದಾರೆ.
ಪ್ರಮುಖ ಪ್ರಕರಣಗಳಲ್ಲಿ ಆರೋಪಿಯಾಗಿರುವ ರೌಡಿ ಸೈಕಲ್ ರವಿ ಬಂಧನಕ್ಕೆ ತೆರಳಿದ್ದ ವೇಳೆ ಪೊಲೀಸ್ ಕಾನ್ಸ್ ಟೇಬಲ್ ಸತೀಶ್ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ. ಈ ವೇಳೆ ಆತ್ಮ ರಕ್ಷಣೆಗೆ ಮುಂದಾದ ಸಿಸಿಬಿ ಇನ್ಸ್ ಪೆಕ್ಟರ್ ಪ್ರಕಾಶ್ ಹಾಗು ಪಿಐ ಮಲ್ಲಿಕಾರ್ಜುನ್ ತಕ್ಷಣವೇ 2 ಸುತ್ತಿನ ಗುಂಡು ಹಾರಿಸಿ, ಆರೋಪಿಯನ್ನು ಬಂಧಿಸಿದ್ದಾರೆ.
ಬಂಧಿತ ರವಿ ಮೇಲೆ ಸುಮಾರು 14 ಪೊಲೀಸ್ ಠಾಣೆಗಳಲ್ಲಿ ಆರೋಪಿಯಾಗಿದ್ದು, 6 ಕೊಲೆ ಪ್ರಕರಣ, 4 ಕೊಲೆ ಯತ್ನ ಪ್ರಕರಣಗಳು ದಾಖಲಾಗಿದೆ.
ಸೈಕಲ್ ರವಿ ಹಿನ್ನೆಲೆ ಏನು: ಆರೋಪಿ ರವಿ ಮೇಲೆ 1998 ರಲ್ಲಿ ಮೊದಲ ಬಾರಿಗೆ ಬನಶಂಕರಿಯಲ್ಲಿ ರೌಡಿಶೀಟರ್ ಪಟ್ಟ ದಾಖಲಾಗಿತ್ತು. ಕೆಪಿ ಅಗ್ರಹಾರದಲ್ಲಿ ಸಣ್ಣ ಪುಟ್ಟ ಗಲಾಟೆಯಲ್ಲಿ ಭಾಗಿಯಾಗಿದ್ದ ರವಿ, ಸುಬ್ರಹ್ಮಣ್ಯಪುರ ಮುಖ್ಯ ಕೇಂದ್ರವಾಗಿಸಿಕೊಂಡು ಕಾನೂನು ಬಾಹಿರ ಕೃತ್ಯಗಳಲ್ಲಿ ತೊಡಗಿಕೊಂಡಿದ್ದ. ಪ್ರಮುಖವಾಗಿ ಕೊಲೆ, ಕೊಲೆಯತ್ನ, ಅಪಹರಣ, ಧಮ್ಕಿ, ಹಫ್ತಾವಸೂಲಿ ಸೇರಿ 30 ಕ್ಕೂ ಹೆಚ್ಚು ಪ್ರಕರಣಗಳು ಆತನ ಮೇಲೆ ದಾಖಲಾಗಿದೆ.
ಕುಖ್ಯಾತ ರೌಡಿ ಲಿಂಗ ಮರ್ಡರ್, ಕೆಂಗೇರಿಯಲ್ಲಿ ಜಾನಿ, ಟಾಮಿ ಜೊಡಿ ಮರ್ಡರ್ ಸೇರಿದಂತೆ, ನಗರದಲ್ಲಿ ಜೆಪಿನಗರ ತಲಘಟ್ಟಪುರ, ಬನಶಂಕರಿ, ಸುಬ್ರಹ್ಮಣ್ಯಪುರ ಕೆಂಗೇರಿ ರಾಜರಾಜೇಶ್ವರಿ ನಗರ ಕೆಜಿ ನಗರ ಕೆಪಿ ಅಗ್ರಹಾರ ಸೇರಿ 14 ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಉಳಿದಂತೆ ಸೈಕಲ್ ರವಿ ಬೆಂಗಳೂರಿನ ಮತ್ತೊಬ್ಬ ಕುಖ್ಯಾತ ರೌಡಿಶೀಟರ್ ಹೆಬ್ಬೆಟ್ ಮಂಜನ ಸ್ನೇಹಿತನಾಗಿದ್ದ.
ಚಿಕ್ಕಬಳ್ಳಾಪುರ: ಯಾವುದೇ ಸರ್ಕಾರ ಇದ್ದರೂ ಟೀಕಿಸುವ ಮೂಲಕ ಎಚ್ಚರಿಸುವ ಕೆಲಸವನ್ನು ಮಾಧ್ಯಮಗಳ ಮಾಡುತ್ತವೆ. ಆದರೆ ಇಂದು ಸಮ್ಮಿಶ್ರ ಸರ್ಕಾರವೇ ಮಾಧ್ಯಮಗಳ ಮೇಲೆ ಗೂಬೆ ಕೂರಿಸುತ್ತಿದೆ.
ಚಿಕ್ಕಬಳ್ಳಾಪುರದಲ್ಲಿ ಸಚಿವ ಶಿವಶಂಕರ್ ರೆಡ್ಡಿ, ಬೆಂಗಳೂರಿನಲ್ಲಿ ನಡೆದ ಕೆಂಪೇಗೌಡ ಜಯಂತಿಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಕೊಪ್ಪಳದಲ್ಲಿ ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್ ಅವರು ಮಾಧ್ಯಗಳ ವಿರುದ್ಧವೇ ವಾಗ್ದಾಳಿ ನಡೆಸಿ, ಮಾಧ್ಯಗಳು ತಪ್ಪು ಮಾಡುತ್ತಿವೆ ಎನ್ನುವಂತೆ ಬಿಂಬಿಸಿದರು.
ಶಾಂತಿವನದಲ್ಲಿ ಮಾಜಿ ಮುಖ್ಯಂತ್ರಿ ಸಿದ್ದರಾಮಯ್ಯ ಹೇಳಿಕೆಯಲ್ಲಿ ಯಾವುದೇ ವಿವಾದ ಇಲ್ಲ. ಆದರೆ ಮಾಧ್ಯಮಗಳು ಇದಕ್ಕೆ ಉಪ್ಪು-ಹುಳಿ ಹಾಕುವ ಕೆಲಸ ಮಾಡುತ್ತೀವೆ ಎಂದು ಕೃಷಿ ಸಚಿವ ಶಿವಶಂಕರ್ ರೆಡ್ಡಿ ಹೇಳಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಆಯೋಜಿಸಿದ್ದ ಕೆಂಪೇಗೌಡ ಜಯಂತಿಯಲ್ಲಿ ಸಿದ್ದರಾಮಯ್ಯ ಹಾಗೂ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರನ್ನು ಸಮರ್ಥಿಸಿಕೊಂಡು ಮಾತನಾಡಿದ ಅವರು, ಬಜೆಟ್ ನಲ್ಲಿ ಕಾಂಗ್ರೆಸ್ಸಿನ ಕಾರ್ಯಕ್ರಮಗಳನ್ನು ತೆಗೆದು ಹಾಕುವುದಾಗಿ ಎಲ್ಲಿಯೂ ಕುಮಾರಸ್ವಾಮಿ ಅವರು ಹೇಳಿಲ್ಲ. ಎರಡೂ ಪಕ್ಷಗಳ ಪ್ರಣಾಳಿಕೆಗಳಲ್ಲಿನ ಪ್ರಮುಖ ಯೋಜನೆಗಳನ್ನು ಕೈ ಬಿಡುವ ಪ್ರಶ್ನೆಯೇ ಇಲ್ಲ. ಸಮ್ಮಿಶ್ರ ಸರ್ಕಾರ ಬಜೆಟ್ ಮೂಲಕ ಎರಡು ಪಕ್ಷಗಳ ಹಿತಾಸಕ್ತಿಯನ್ನು ರಕ್ಷಿಸಲಿದೆ. ಇನ್ನೂ ಈ ಬಾರಿಯ ಬಜೆಟ್ ನಲ್ಲಿ ಶೇ 100 ಕ್ಕೆ 100 ರಷ್ಟು ಸಿಹಿ ಸುದ್ದಿ ಸಿಗಲಿದ್ದು, ರೈತರ ಸಾಲಮನ್ನಾ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬೆಂಗಳೂರಿನಲ್ಲಿ ನಡೆದ ಕೆಂಪೇಗೌಡ ಜಯಂತಿಯಲ್ಲಿ ಮಾತನಾಡಿದ ಕುಮಾರಸ್ವಾಮಿ ಅವರು, ಉತ್ತರ ಕರ್ನಾಟಕ ಅಭಿವೃದ್ಧಿಯನ್ನು ಸರ್ಕಾರ ಮರೆತಿದೆ ಅಂತಾ ಮಾಧ್ಯಮಗಳು ಸುದ್ದಿ ಮಾಡುತ್ತಿವೆ. ಆದರೆ ನಾವು ಎಲ್ಲ ಭಾಗಗಳ ಅಭಿವೃದ್ಧಿಗೆ ಕೆಲಸ ಮಾಡುತ್ತಿದ್ದೇವೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು. ಇನ್ನು ಕೊಪ್ಪಳದ ಕಾರ್ಯಕ್ರಮದಲ್ಲಿ ಖರ್ಗೆ-ಸಿದ್ದರಾಮಯ್ಯ ಭೇಟಿ ಬಗ್ಗೆ ಕೇಳಿದ್ದಕ್ಕೆ ಮಾಧ್ಯಮಗಳಿಗೆ ಏನಾಗಿದೆ ಅಂತಾ ಡಿಸಿಎಂ ಜಿ.ಪರಮೇಶ್ವರ್ ಅವರು ಗರಂ ಆದರು.
ಭೋಪಾಲ್: ಮಧ್ಯಪ್ರದೇಶದ ವಿಧಾನಸೌದಲ್ಲಿ ಆಡಳಿತಾರೂಢ ಬಿಜೆಪಿ ಶಾಸಕಿಯೊಬ್ಬರು ಕಣ್ಣೀರು ಹಾಕಿದ್ದು, ತಮ್ಮದೇ ಪಕ್ಷದ ಹಿರಿಯ ನಾಯಕರ ವಿರುದ್ಧ ಕಿರುಕುಳದ ಆರೋಪ ಮಾಡಿದ್ದಾರೆ.
ಮಧ್ಯಪ್ರದೇಶ ರೇವಾ ಜಿಲ್ಲೆಯ ಸಿಮರಿಯಾ ಕ್ಷೇತ್ರದ ಬಿಜೆಪಿ ಶಾಸಕಿ ನೀಲಂ ಮಿಶ್ರಾ ವಿಧಾನಸೌದಲ್ಲಿ ಕಣ್ಣೀರು ಹಾಕಿದ್ದು, ಪಕ್ಷದ ಹಿರಿಯ ಮುಖಂಡರೊಬ್ಬರು ತಮಗೇ ಹಾಗೂ ಕುಟುಂಬ ಸದಸ್ಯರಿಗೆ ಕಿರುಕುಳ ನೀಡುತ್ತಿದ್ದಾರೆ. ಸಚಿವರು ನಡೆಸುತ್ತಿದ್ದ ಅಕ್ರಮ ಗಣಿಗಾರಿಕೆಯನ್ನು ಬಯಲಿಗೆ ತಂದಿದ್ದು, ಇದರಿಂದ ದ್ವೇಷಸಾಧಿಸುತ್ತಿದ್ದಾರೆ ಎಂದು ಆರೋಪಿಸಿದ್ದಾಗಿ ಮಾಧ್ಯಮೊಂದು ವರದಿ ಮಾಡಿದೆ.
ಸದನದ ಶೂನ್ಯ ವೇಳೆಯಲ್ಲಿ ಮಾತನಾಡಿ, ತಮಗೂ ಹಾಗೂ ಕುಟುಂಬಕ್ಕೂ ರಕ್ಷಣೆ ನೀಡುವಂತೆ ಮನವಿ ಮಾಡಿದ್ದ, ಮುಂಬರುವ ಚುನಾವಣೆಯಲ್ಲಿ ತಾವು ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದಾರೆ.
ಹಿರಿಯ ನಾಯಕರ ನಿರ್ದೇಶನದ ಮೇರೆಗೆ ಸ್ಥಳೀಯ ಪೊಲೀಸರು ಸಹ ತಮ್ಮ ಮೇಲೆ ಇಲ್ಲದ ಆರೋಪ ಮಾಡಿ ಸುಳ್ಳು ಪ್ರಕರಣದಲ್ಲಿ ಸಿಲುಕಿಸಲು ಯತ್ನಿಸುತ್ತಿದ್ದಾರೆ. ತಮ್ಮ ಕುಟುಂಬ ಸದಸ್ಯರಿಗೂ ಪೊಲೀಸರು ಕಿರುಕುಳ ನೀಡುತ್ತಿದ್ದಾರೆ. ಅದ್ದರಿಂದ ಅನಿವಾರ್ಯವಾಗಿ ಸದನದಲ್ಲಿ ಈ ಕುರಿತು ಪ್ರಸ್ತಾಪ ಮಾಡಲಾಗಿದೆ ಎಂದು ಹೇಳಿದ್ದಾರೆ. ಶಾಸಕಿಯ ಪ್ರಸ್ತಾಪವನ್ನು ಸ್ವೀಕರಿಸಿದ ಸ್ಪೀಕರ್ ಗೃಹ ಸಚಿವರಿಗೆ ಸೂಕ್ತ ರಕ್ಷಣೆ ನೀಡುವುವಂತೆ ಸೂಚನೆ ನೀಡಿದ್ದಾಗಿ ಮಾಧ್ಯಮ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಸದ್ಯ ಶಾಸಕಿ ನೀಲಂ ಮಿಶ್ರಾ ಅವರ ಆರೋಪವನ್ನು ಪಕ್ಷದ ಹಿರಿಯ ನಾಯಕ, ಸಚಿವರಾದ ಶುಕ್ಲಾ, ನನ್ನ ಮೇಲಿನ ಆರೋಪದಲ್ಲಿ ಯಾವುದೇ ಆಧಾರವಿಲ್ಲ. ಆದರೆ ಶಾಸಕಿ ತಮ್ಮ ವೈಯಕ್ತಿಕ ಪ್ರಚಾರಕ್ಕಾಗಿ ಈ ರೀತಿ ಮಾಡಿದ್ದಾರೆ ಎಂದು ಸದನ ಬಳಿಕ ಮಾಧ್ಯಮಗಳೊಂದಿಗೆ ಹೇಳಿಕೆ ನೀಡಿದ್ದಾರೆ.
ಶಾಸಕಿಯ ಹೇಳಿಕೆ ಬಳಿಕ ಸದನದಲ್ಲಿ ಕಾಂಗ್ರೆಸ್ ಸೇರಿದಂತೆ ಹಲವು ವಿರೋಧ ಪಕ್ಷಗಳು ಆಡಳಿತ ಪಕ್ಷವನ್ನು ತರಾಟೆಗೆ ತೆಗೆದುಕೊಂಡಿದೆ.