Tag: accused

  • ಒಬ್ಬಂಟಿಯಾಗಿ ಸಂಚಾರಿಸುವವರನ್ನು ಟಾರ್ಗೆಟ್ ಮಾಡ್ತಿದ್ದ ದರೋಡೆ ಗ್ಯಾಂಗ್ ಅಂದರ್

    ಒಬ್ಬಂಟಿಯಾಗಿ ಸಂಚಾರಿಸುವವರನ್ನು ಟಾರ್ಗೆಟ್ ಮಾಡ್ತಿದ್ದ ದರೋಡೆ ಗ್ಯಾಂಗ್ ಅಂದರ್

    ಬೆಂಗಳೂರು: ರಸ್ತೆಯಲ್ಲಿ ಒಬ್ಬಂಟಿಯಾಗಿ ಸಂಚರಿಸುತ್ತಿದ್ದ ವ್ಯಕ್ತಿಗಳನ್ನು ಟಾರ್ಗೆಟ್ ಮಾಡಿ ಹಲ್ಲೆ ನಡೆಸಿ ದರೋಡೆ ಮಾಡುತ್ತಿದ್ದ ಗ್ಯಾಂಗನ್ನು ನಗರದ ಮಹದೇವಪುರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಮೊಹಮ್ಮದ್ ರಸೂಲ್ (19), ಸಿರಾಜ್ ಶೇಖ್(20), ಅಪ್ಸರ್ ಶೇಖ್ (20) ಮತ್ತು ಪ್ರದೀಪ್ (22) ಬಂಧಿತ ಅರೋಪಿಗಳು. ಬಂಧಿತರು ಮಹದೇವಪುರ ಪೊಲೀಸ್ ಠಾಣಾ ವ್ಯಾಪ್ತಿಯ ಆಲ್ಫೈನ್ ಅರ್ಪಾಟ್ ಮೆಂಟ್ ಬಳಿಯ ನಿರ್ಜನ ಪ್ರದೇಶದಲ್ಲಿ ದರೋಡೆಗೆ ಹೊಂಚು ಹಾಕಿ ಕುಳಿತಿದ್ದಾಗ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ.

    ಮಾರಕಾಸ್ತ್ರಗಳೊಂದಿಗೆ ದರೋಡೆ ನಡೆಸಲು ಸಂಚು ರೂಪಿಸಲು ಕಾಯುತ್ತಿದ್ದ ಆರೋಪಿಗಳ ನಡವಳಿಕೆ ಕುರಿತು ಅನುಮಾನಗೊಂಡ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸಾರ್ವಜನಿಕರು ನೀಡಿದ ಮಾಹಿತಿ ಮೇರೆಗೆ ದಾಳಿ ನಡೆಸಿ ಪೊಲೀಸರು ದರೋಡೆ ನಡೆಸಲು ಸಂಗ್ರಹಿಸಿಟ್ಟಿದ್ದ ಮಾರಕಾಸ್ತ್ರ, ಖಾರದ ಪುಡಿ ಸಮೇತ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

    ಬಂಧಿತರಿಂದ 3 ದ್ವಿಚಕ್ರ ವಾಹನ, ಮಾರಕಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಈ ಗ್ಯಾಂಗ್ ನ ಮತ್ತೊಬ್ಬ ದರೋಡೆಕೋರ ಧನರಾಜ್ ಆಯುಧ ಸಮೇತ ಪರಾರಿಯಾಗಿದ್ದಾನೆ. ಸದ್ಯ ಆರೋಪಿ ಧನರಾಜ್ ಪತ್ತೆಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

  • ಮದ್ಯದ ನಶೆಯಲ್ಲಿ ವೃದ್ಧೆಯ ಮೇಲೆ ಅತ್ಯಾಚಾರಗೈದು ಕೊಲೆಗೈದ ಕಾಮುಕರು ಅಂದರ್

    ಮದ್ಯದ ನಶೆಯಲ್ಲಿ ವೃದ್ಧೆಯ ಮೇಲೆ ಅತ್ಯಾಚಾರಗೈದು ಕೊಲೆಗೈದ ಕಾಮುಕರು ಅಂದರ್

    ಕಲಬುರಗಿ: ಚಿತ್ತಾಪುರ ತಾಲೂಕಿನ ದಂಡೋತಿ ಗ್ರಾಮದಲ್ಲಿ ವೃದ್ಧೆಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

    60 ವರ್ಷದ ಶುಕರಾ ಬಿ ಮೇಲೆ ಅತ್ಯಾಚಾರ ಎಸಗಿ ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಸೇಡಂ ತಾಲೂಕಿನ ಸೂರವಾರ ಗ್ರಾಮದ ಮಲ್ಲಿಕಾರ್ಜುನ್(26), ಚಿತ್ತಾಪುರ ತಾಲೂಕಿನ ದಂಡೋತಿ ಗ್ರಾಮದ ನಿವಾಸಿ ಗಜೇಂದ್ರ(25) ಪೊಲೀಸರು ಬಂಧಿಸಿದ್ದಾರೆ.

    ಏನಿದು ಪ್ರಕರಣ?
    ಆರೋಪಿ ಮಲ್ಲಿಕಾರ್ಜುನ ಈ ಮೊದಲೇ ಕಳ್ಳತನ ಪ್ರಕರಣದಲ್ಲಿ ಜೈಲಿಗೆ ಹೋಗಿದ್ದ. ಜುಲೈ 16 ರಂದು ಬಿಡುಗಡೆಯಾದ ಬಳಿಕ ಸಂಬಂಧಿ ಗಜೇಂದ್ರನ ಊರಿಗೆ ತೆರಳಿದ್ದ. ಜುಲೈ 26 ಗುರುವಾರ ಇಬ್ಬರು ದಂಡೋತಿ ಗ್ರಾಮದ ಹೊರವಲಯದಲ್ಲಿ ಕೂತು ಮದ್ಯಪಾನ ಮಾಡಿದ್ದಾರೆ. ಸಂಜೆ ಜಮೀನಿನ ಕೆಲಸ ಮುಗಿಸಿಕೊಂಡು ರಾತ್ರಿ ಮನೆಗೆ ಬರುವಾಗ ದಾರಿಯಲ್ಲಿ ಸಿಕ್ಕ ವೃದ್ಧೆಯ ಮೇಲೆ ಜಮೀನಿನಲ್ಲಿ ಇಬ್ಬರು ಸೇರಿ ಅತ್ಯಾಚಾರ ಎಸಗಿದ್ದಾರೆ. ಬಳಿಕ ಕಲ್ಲಿನಿಂದ ಜಜ್ಜೆ ಕೊಲೆ ಮಾಡಿ ಪರಾರಿಯಾಗಿದ್ದಾರೆ.

    ಬೆಳಕಿಗೆ ಬಂದಿದ್ದು ಹೇಗೆ?
    ಮುಂಜಾನೆ ಕೆಲಸಕ್ಕೆ ಹೋದ ಶುಕರಾರವರು ರಾತ್ರಿಯಾದರೂ ಮನೆಗೆ ಬಾರದೆ ಹಿನ್ನೆಲೆಯಲ್ಲಿ ಮನೆಯವರು ಹುಡುಕಾಟ ನಡೆಸಿದ್ದಾರೆ. ಈ ವೇಳೆ ತಡರಾತ್ರಿ 11ರ ಸಮಯದಲ್ಲಿ ಅವರ ಮೃತದೇಹ ಜಮೀನಿನಲ್ಲಿ ಪತ್ತೆಯಾಗಿದೆ. ಮೃತದೇಹ ಪತ್ತೆಯಾದ ಹಿನ್ನೆಲೆಯಲ್ಲಿ ವೃದ್ಧೆಯ ಕುಟುಂಬಸ್ಥರು ಮಾಡ್‍ಬೂಳ್ ಠಾಣೆಯಲ್ಲಿ ದೂರು ನೀಡಿದ್ದರು.

    ಆರೋಪಿಗಳು ಸಿಕ್ಕಿಬಿದ್ದಿದ್ದು ಹೇಗೆ?
    ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ಇಳಿದ ಪೊಲೀಸರು ಗ್ರಾಮಸ್ಥರನ್ನು ವಿಚಾರಣೆ ನಡೆಸಿದಾಗ ಇಬ್ಬರು ವ್ಯಕ್ತಿಗಳು ಮದ್ಯಪಾನ ಸೇವಿಸಿ ಕುಳಿತುಕೊಂಡಿದ್ದ ವಿಚಾರವನ್ನು ತಿಳಿಸಿದ್ದಾರೆ. ಈ ಆಧಾರದ ಹಿನ್ನೆಲೆಯಲ್ಲಿ ಒರ್ವ ಗಜೇಂದ್ರನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ನಾವೇ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ. ಈ ಮಾಹಿತಿಯ ಆಧಾರದಲ್ಲಿ ಮಲ್ಲಿಕಾರ್ಜುನ್ ನನ್ನು ಬಂಧಿಸಿದ್ದಾರೆ.

  • ಬೆಂಗ್ಳೂರಿನಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಗ್ಯಾಂಗ್ ರೇಪ್-ಮೂವರು ಆರೋಪಿಗಳು ಪೊಲೀಸ್ ವಶಕ್ಕೆ

    ಬೆಂಗ್ಳೂರಿನಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಗ್ಯಾಂಗ್ ರೇಪ್-ಮೂವರು ಆರೋಪಿಗಳು ಪೊಲೀಸ್ ವಶಕ್ಕೆ

    ಬೆಂಗಳೂರು: 16 ವರ್ಷದ ಬಾಲಕಿಯನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರವೆಸಗಿದ ಘಟನೆ ಹೆಬ್ಬಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಸಂತೋಷ್, ಆಕಾಶ್ ಹಾಗೂ ಜೋಸೆಫ್ ಎಂಬವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಶುಕ್ರವಾರ ಮಧ್ಯಾಹ್ನದ ವೇಳೆ ಬಾಲಕಿಯ ಅಪಹರಣ ಮಾಡಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ತಿಳಿದು ಬಂದಿದೆ.

    ಸಂತ್ರಸ್ತ ಬಾಲಕಿಗೆ ಬಂಧಿತ ಆರೋಪಿ ಜೋಸೆಫ್ ಪರಿಚಯವಿತ್ತು ಎನ್ನಲಾಗಿದ್ದು. ಬಾಲಕಿಗೆ ಮಾತನಾಡುಲು ಬರುವಂತೆ ಹೇಳಿ ಕಾರಿಗೆ ಹತ್ತಿಸಿಕೊಂಡು ಹೆಬ್ಬಾಳದ ಮನೋರಾಯನ ಪಾಳ್ಯ ಬಳಿ ಅಪಹರಣ ಮಾಡಿದ್ದಾರೆ. ಬಳಿಕ ಮೂವರು ಆರೋಪಿಗಳು ಬಾಲಕಿಯನ್ನು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ.

    ಬಾಲಕಿ ಮೇಲೆ ಅತ್ಯಾಚಾರ ನಡೆಸಿದ ಆರೋಪಿಗಳು ಬಳಿಕ ಆಕೆಯನ್ನು ವಾಪಸ್ ಕರೆತಂದು ಹೆಬ್ಬಾಳ ಪೊಲೀಸ್ ಠಾಣೆ ವ್ಯಾಪ್ತಿಯ ಪಾರ್ಕ್ ಬಳಿ ಬಿಟ್ಟು ತೆರಳಿದ್ದಾರೆ. ಬಾಲಕಿ ಮನೆಗೆ ವಾಪಸ್ ಆದ ವೇಳೆ ಅತ್ಯಾಚಾರ ಎಸಗಿದ ಕೃತ್ಯ ಬೆಳಕಿಗೆ ಬಂದಿದೆ. ಬಾಲಕಿ ನೀಡಿದ ಮಾಹಿತಿ ಮೇರೆಗೆ ಮೂರು ಜನ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ಘಟನೆಯ ಕುರಿತು ದೂರು ದಾಖಲಾಗಿದೆ.

  • ಅಪ್ರಾಪ್ತ ಮಗಳನ್ನ ರೇಪ್‍ಗೈದಿದ್ದ ಕಾಮುಕನನ್ನು ಹಿಡಿದು ಕೊಟ್ಟ ತಾಯಿ

    ಅಪ್ರಾಪ್ತ ಮಗಳನ್ನ ರೇಪ್‍ಗೈದಿದ್ದ ಕಾಮುಕನನ್ನು ಹಿಡಿದು ಕೊಟ್ಟ ತಾಯಿ

    ಭೋಪಾಲ್: ಶಾಲೆಗೆ ತೆರಳುತ್ತಿದ್ದ ಅಪ್ರಾಪ್ತ ಬಾಲಕಿಗೆ ಬೈಕಿನಲ್ಲಿ ಲಿಫ್ಟ್ ಕೊಡುವುದಾಗಿ ಹೇಳಿ ಅತ್ಯಾಚಾರ ಎಸಗಿದ್ದ ಆರೋಪಿಯನ್ನು ಸಂತ್ರಸ್ತೆಯ ತಾಯಿಯೇ ಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆ ಮಧ್ಯಪ್ರದೇಶದ ಭೋಪಾಲ್ ನಲ್ಲಿ ನಡೆದಿದೆ.

    ಸಮೀರ್ ಖಾನ್ ಬಂಧಿತ ಆರೋಪಿ. ಸಮೀರ್ ವೃತ್ತಿಯಲ್ಲಿ ಟೈಲರಿಂಗ್ ಮಾಡಿಕೊಂಡಿದ್ದು, ಬಾಲಕಿಯ ನೆರೆಯ ಮನೆಯಲ್ಲಿಯೇ ವಾಸಿಯಾಗಿದ್ದನು. ಸಮೀರ್ ಬಾಲಕಿ ಶಾಲೆಗೆ ಹೋಗುವ ವೇಳೆ ಡ್ರಾಪ್ ಮಾಡುವ ನೆಪದಲ್ಲಿ ಬೈಕ್ ಹತ್ತಿಸಿಕೊಂಡಿದ್ದ. ಬಳಿಕ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದನು. ಅಲ್ಲದೇ ಈ ಕುರಿತು ಯಾರಿಗಾದರು ತಿಳಿಸಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದನು.

    ಆರೋಪಿಯ ಮಾತಿಗೆ ಹೆದರಿದ ಬಾಲಕಿ ತನ್ನ ಮೇಲೆ ನಡೆದ ಕೃತ್ಯವನ್ನು ಯಾರಿಗೂ ತಿಳಿಸದೆ ತೆರಳಿದ್ದಳು. ಆದರೆ ಮತ್ತೊಮ್ಮೆ ಆರೋಪಿ ದಾರಿಯಲ್ಲಿ ಅಡ್ಡಗಡ್ಡಿ ಜೊತೆ ಬರುವಂತೆ ಒತ್ತಾಯ ಮಾಡಿದ್ದನು. ಇದಾದ ಬಳಿಕ ಬಾಲಕಿ ಧೈರ್ಯ ಮಾಡಿ ನಡೆದ ಘಟನೆಯನ್ನು ತಾಯಿಗೆ ತಿಳಿಸಿದ್ದಳು. ಮಗಳ ಮೇಲೆ ನಡೆದ ಕೃತ್ಯದ ಕುರಿತು ಕೇಳಿ ಅತಂಕಗೊಂಡ ತಾಯಿ ಆರೋಪಿಯನ್ನು ಪೊಲೀಸರ ಬಲೆಗೆ ಬೀಳುವಂತೆ ಮಾಡುಲು ಪ್ಲಾನ್ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಅಲ್ಲದೇ ಎಂದಿನಂತೆ ಮಗಳಿಗೆ ಶಾಲೆಗೆ ತೆರಳುವಂತೆ ಹೇಳಿದ್ದಾರೆ.

    ಶಾಲೆಗೆ ತೆರಳುತ್ತಿದ್ದ ಬಾಲಕಿ ಬಳಿ ಬಂದ ಆರೋಪಿ ಮತ್ತೆ ಆಕೆಯನ್ನು ಬಲವಂತವಾಗಿ ಬೈಕ್ ಹತ್ತಿಸಿಕೊಂಡು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದಾನೆ. ಈ ವೇಳೆ ಆರೋಪಿಯನ್ನು ಹಿಂಬಾಲಿಸಿದ ಬಾಲಕಿ ತಾಯಿ ಪೊಲೀಸರಿಗೆ ಮಾಹಿತಿ ನೀಡಿ ರೆಡ್ ಹ್ಯಾಂಡ್ ಆಗಿ ಹಿಡಿದು ಒಪ್ಪಿಸಿದ್ದಾರೆ.

    ಈ ಘಟನೆ ಕುರಿತು ಆರೋಪಿ ಸಮೀರ್ ಖಾನ್ ವಿರುದ್ಧ ಅಪಹರಣ, ಕಿರುಕುಳ, ಅತ್ಯಾಚಾರ ಆರೋಪದ ಮೇಲೆ ದೂರು ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.

  • ಗೌರಿ ಹತ್ಯೆ ಪ್ರಕರಣದ ತನಿಖೆ ವೇಳೆ ಎಸ್‍ಐಟಿ ಪೊಲೀಸರಿಗೇ ಫುಲ್ ಶಾಕ್

    ಗೌರಿ ಹತ್ಯೆ ಪ್ರಕರಣದ ತನಿಖೆ ವೇಳೆ ಎಸ್‍ಐಟಿ ಪೊಲೀಸರಿಗೇ ಫುಲ್ ಶಾಕ್

    ಬೆಂಗಳೂರು: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆ ವೇಳೆ ಎಸ್‍ಐಟಿ ಪೊಲೀಸರೇ ಫುಲ್ ಶಾಕ್ ಗೆ ಒಳಗಾಗಿದ್ದಾರೆ. ಬಂಧಿತ ಆರೋಪಿಗಳಾದ ಪರಶುರಾಮ್ ವಾಗ್ಮೋರೆ ಮತ್ತು ಅಮೋಲ್ ಕಾಳೆ, ಇಬ್ಬರು ಪೊಲೀಸ್ ಅಧಿಕಾರಿಯ ಮನೆಯನ್ನು ಬಾಡಿಗೆ ಪಡೆದುಕೊಂಡು ಸಂಚು ರೂಪಿಸಿದ್ದರು ಎಂಬ ಅಚ್ಚರಿಯ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಆರೋಪಿಗಳು ಮಾಗಡಿ ರಸ್ತೆಯ ಕಡಬನಗೆರೆ ಕ್ರಾಸ್‍ನಲ್ಲಿಯ ಎಸಿಬಿ ಇನ್ಸ್ ಪೆಕ್ಟರ್ ಮನೆಯಲ್ಲಿಯೇ ಬಾಡಿಗೆ ಪಡೆದುಕೊಂಡಿದ್ದರು. ಈ ಇಬ್ಬರು ಸುರೇಶ್ ಎಂಬಾತನ ಹೆಸರಿನಲ್ಲಿ ಮನೆಯನ್ನ ಬಾಡಿಗೆಗೆ ಪಡೆದುಕೊಂಡಿದ್ದರಂತೆ. ಪೊಲೀಸ್ ಮನೆಯಲ್ಲಿಯೇ ಕುಳಿತು ಆರೋಪಿಗಳು ಹತ್ಯೆಗೆ ಸಂಚು ರೂಪಿಸಿದ್ದರು ಎಂಬ ಮಾಹಿತಿ ಇದೀಗ ಲಭ್ಯವಾಗಿವೆ.

    ಆದ್ರೆ ಮನೆಯ ಮಾಲೀಕ ಪೊಲೀಸ್ ಅಧಿಕಾರಿಗೆ ಯಾವುದೇ ಮಾಹಿತಿ ಇರಲಿಲ್ಲ ಎನ್ನಲಾಗುತ್ತಿದೆ. ಈ ಸಂಬಂಧ ಎಸ್‍ಐಟಿ ಅಧಿಕಾರಿಗಳು ಮನೆಯ ಮಾಲೀಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ತನ್ನ ಸಂಬಂಧಿಗಳಿಗೆ ಮನೆಯನ್ನು ನೋಡಿಕೊಳ್ಳುವ ಹಾಗು ಬಾಡಿಗೆ ಪಡೆಯುವ ಜವಾಬ್ದಾರಿಯನ್ನು ಇನ್ಸ್ ಪೆಕ್ಟರ್ ನೀಡಿದ್ದರು. ಈ ಹಿನ್ನೆಲೆಯಲ್ಲಿ ತನ್ನ ಮನೆಯಲ್ಲಿ ಯಾರು ವಾಸವಿದ್ದರು ಎಂಬ ಬಗ್ಗೆ ಸರಿಯಾದ ಮಾಹಿತಿ ಇರಲಿಲ್ಲ ಎನ್ನಲಾಗುತ್ತಿದೆ.

    ಬೆಂಗಳೂರಲ್ಲಿ ಮನೆಯನ್ನು ಬಾಡಿಗೆ ನೀಡುವಾಗ ವ್ಯಕ್ತಿಯ ದಾಖಲಾತಿಗಳನ್ನು ಪಡೆದುಕೊಳ್ಳಬೇಕು ಎಂದು ಪೊಲೀಸರು ಸೂಚಿಸುತ್ತಾರೆ. ಆದ್ರೆ ಪೊಲೀಸ್ ಅಧಿಕಾರಿಯೇ ತನ್ನ ಮನೆಯನ್ನು ಬಾಡಿಗೆಗೆ ನೀಡುವಾಗ ದಾಖಲಾತಿಗಳನ್ನು ಪಡೆದುಕೊಳ್ಳದೇ ಇರೋದು ಎಷ್ಟು ಸರಿ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

    ತನಿಖೆಯ ಹಿನ್ನೆಲೆ:
    ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆ ತೀವ್ರಗತಿಯಲ್ಲಿ ನಡೆಯುತ್ತಿದ್ದು, ದಿನಕ್ಕೊಂದು ರೋಚಕ ಸ್ಟೋರಿಗಳು ಹೊರಬರುತ್ತಿವೆ. ಆರೋಪಿಗಳಿಗೆ ಬಾಡಿಗೆ ನೀಡಲು ಸಹಾಯ ಮಾಡಿದ್ದ ಹಿನ್ನೆಲೆಯಲ್ಲಿ ಈಗಾಗಲೇ ಮಂಗಳೂರು ಮೂಲದ ಮೋಹನ್ ನಾಯಕ್ ಎಂಬಾತನನ್ನು ಅಧಿಕಾರಿಗಳು ಬಂಧಿಸಿದ್ದಾರೆ. ಇತ್ತ ಮೋಹನ್ ನಾಯಕ್ ಹೇಳಿಕೆ ಆಧರಿಸಿದ ಹುಬ್ಬಳ್ಳಿ ಮೂಲದ ಇಬ್ಬರು ಮತ್ತು ಮಡಿಕೇರಿ ಮೂಲದ ಓರ್ವನನ್ನು ಎಸ್‍ಐಟಿ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

    ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಅಮೋಲ್ ಕಾಳೆ ರೋಚಕ ಸತ್ಯವನ್ನು ಬಹಿರಂಗ ಮಾಡಿದ್ದಾನೆ. ಈ ಅಮೂಲ್ ಕಾಳೆಗೆ ಯುವಕರನ್ನು ಪರಿಚಯಿಸುತ್ತಿದ್ದ ವ್ಯಕ್ತಿ ಸುಜಿತ್. ಹಿಂದೂಪರ ಸಮಾವೇಶದಲ್ಲಿ ಭಾಗಿಯಾಗುತ್ತಿದ್ದ ಸುಜಿತ್, ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸುಮಾರು 10 ಸಾವಿರ ಯುವಕರ ನಂಬರ್ ಪಡೆದುಕೊಂಡಿದ್ದನು. ಬಳಿಕ ಪ್ರತಿಯೊಬ್ಬರಿಗೂ ಕರೆ ಮಾಡಿ ಪರಿಚಯಿಸಿಕೊಂಡಿದ್ದನು. ಫೋನ್ ನಲ್ಲಿ ಮಾತನಾಡುತ್ತಾ, ಧರ್ಮ ವಿರೋಧಿ ಚಟುವಟಿಕೆಗಳನ್ನು ವಿರೋಧಿಸುವವರ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದ ಯುವಕರನ್ನು ಸುಜಿತ್ ಆಯ್ಕೆ ಮಾಡಿಕೊಳ್ಳುತ್ತಿದ್ದನು.

    ರೈಫಲ್ ತರಬೇತಿ: ಯುವಕರನ್ನು ಆಯ್ಕೆ ಮಾಡಿಕೊಂಡ ಬಳಿಕ ಎಲ್ಲರೊಂದಿಗೆ ನಯವಾಗಿ ಮಾತನಾಡುತ್ತಾ ಧರ್ಮ ವಿರೋಧಿಗಳನ್ನು ಕೊಲೆ ಮಾಡುವಂತೆ ಪ್ರೇರೇಪಿಸಿ ಮೈಂಡ್ ವಾಶ್ ಮಾಡುತ್ತಿದ್ದನಂತೆ. ಇದೇ ರೀತಿ ಯುವಕರ ಮೈಂಡ್ ವಾಶ್ ಬಳಿಕ ಎಲ್ಲರನ್ನು `ದಾದಾ’ ಎಂಬಾತನ ಬಳಿ ಕಳುಹಿಸಿದ್ದನು. ಈ ದಾದಾನ ಅಣತಿಯಂತೆ ಮತ್ತೊಮ್ಮೆ ಯುವಕರ ಪುನರ್ ಆಯ್ಕೆ ನಡೆಯುತ್ತಿತ್ತು. ಆಯ್ಕೆಗೊಂಡ ಯುವಕರಿಗೆ ಸತಾರಾ, ಗೋವಾ, ಮಹಾರಾಷ್ಟ್ರ, ಬೆಳಗಾವಿಯ ನಿರ್ಜನ ಪ್ರದೇಶದಲ್ಲಿ ಏರ್ ಗನ್ ನ ಮೂಲಕ ರೈಫಲ್ ಬಳಸಲು ತರಬೇತಿ ನೀಡಲಾಗುತ್ತಿತ್ತು ಎಂಬ ಮಾಹಿತಿ ಲಭ್ಯವಾಗಿವೆ.

    ಪಕ್ಕಾ ಶಾರ್ಪ್ ಶೂಟರ್ ಅಂತಾ ತಿಳಿದ ಮೇಲೆ ದಾದಾ ಎಂಬಾತ ಬರೋಬ್ಬರಿ 100 ಯುವಕರನ್ನು ಅಮೋಲ್ ಕಾಳೆಗೆ ಪರಿಚಯಿಸಿದ್ದನು. ಈ 100 ಯುವಕರಲ್ಲಿ ಪರಶುರಾಮ್ ವಾಗ್ಮೋರೆ ಸಹ ಒಬ್ಬ ಎಂದು ಹೇಳಲಾಗುತ್ತಿದೆ. ಹಿಂದೂ ಧರ್ಮದ ಉದ್ಧಾರಕ್ಕಾಗಿ ನೀವು ವಿಷ್ಣುವಿನ ಅವತಾರದಲ್ಲಿ ಜನಿಸಿದ್ದೀಯಾ, ಧರ್ಮದ ವಿರುದ್ಧ ಮಾತನಾಡುವರನ್ನು ಕೊಲ್ಲಬೇಕು. ನಿನ್ನ ಕೈಯಲ್ಲಿರುವ ಬಂದೂಕು ವಿಷ್ಣುವಿನ ಬಳಿಯ ಸುದರ್ಶನ ಚಕ್ರವಿದ್ದಂತೆ. ಯಾರು ಧರ್ಮಕ್ಕೆ ವಿರುದ್ಧ ಮಾತನಾಡುತ್ತಾರೆಯೋ ಅಂತಹವರನ್ನು ಶತ್ರುಗಳ ರೀತಿಯಲ್ಲಿಯೇ ಕೊಂದು ಮುಗಿಸಬೇಕು ಎಂದು ಅಮೂಲ್ ಕಾಳೆ, ಪರಶುರಾಮ್ ವಾಗ್ಮೋರೆಗೆ ಉಪದೇಶ ಮಾಡಿ ಬೆಂಗಳೂರಿಗೆ ಕಳುಹಿಸಿದ್ದ ಎಂಬ ಮಾಹಿತಿ ಈ ಹಿಂದೆ ಪಬ್ಲಿಕ್ ಟಿವಿಗೆ ಲಭಿಸಿತ್ತು.

  • ಸಿಸಿಟಿವಿಗೆ ಛತ್ರಿ ಹಿಡಿದು ಎಟಿಎಂನಿಂದ 14 ಲಕ್ಷ ರೂ. ಕಳ್ಳತನ- ದುಬೈನಲ್ಲಿ ಆರೋಪಿ ಅರೆಸ್ಟ್

    ಸಿಸಿಟಿವಿಗೆ ಛತ್ರಿ ಹಿಡಿದು ಎಟಿಎಂನಿಂದ 14 ಲಕ್ಷ ರೂ. ಕಳ್ಳತನ- ದುಬೈನಲ್ಲಿ ಆರೋಪಿ ಅರೆಸ್ಟ್

    ಕಲಬುರಗಿ: ಸಿಸಿಟಿವಿಗೆ ಛತ್ರಿ ಹಿಡಿದು ಎಟಿಎಂಗೆ ಕನ್ನ ಹಾಕಿ 14 ಲಕ್ಷ ರೂ. ಹಣ ದೋಚಿ ದುಬೈಗೆ ಪರಾರಿಯಾಗಿದ್ದ ಆರೋಪಿಯನ್ನು ಜಿಲ್ಲೆಯ ವಾಡಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಶಿವಕುಮಾರ್ (25) ಬಂಧಿತ ಆರೋಪಿ. ಜಿಲ್ಲೆಯ ಚಿತ್ತಾಪುರ ತಾಲೂಕಿನ ಕುಂಬಾರಹಳ್ಳಿ ಗ್ರಾಮದ ಬಳಿಯಿರುವ ಇಂಡಿಯಾ ಒನ್ ಎಟಿಎಂ ನಲ್ಲಿ ಜೂನ್ 06 ರಂದು ಶಿವಕುಮಾರ್, ಜಗದೇವಪ್ಪ (23) ಹಾಗೂ ಜಗನ್ನಾಥ್ (26) ಸೇರಿ ಎಟಿಎಂ ಪಾಸ್ ವರ್ಡ್ ಬಳಸಿ ಕಳ್ಳತನ ಮಾಡಿದ್ದರು. ಬಳಿಕ ಶಿವಕುಮಾರ್ ದುಬೈಗೆ ಎಸ್ಕೇಪ್ ಆಗಿದ್ದ.

    ಎಟಿಎಂ ಕಳ್ಳತನ ಕುರಿತು ಮಾಹಿತಿ ಪಡೆದ ಪೊಲೀಸರು ದೂರು ದಾಖಲಿಸಿ ತನಿಖೆ ಆರಂಭಿಸಿದ್ದರು. ಪ್ರಾಥಮಿಕ ತನಿಖೆ ವೇಳೆ ಎಟಿಎಂ ಅಳವಡಿಸಿದ್ದ ಸಿಸಿಟಿವಿ ದೃಶ್ಯಗಳನ್ನು ಪೊಲೀಸರು ಪರಿಶೀಲಿಸಿದ್ದರು. ದೃಶ್ಯಗಳಲ್ಲಿ ಎಟಿಎಂನಲ್ಲಿ ಕಳ್ಳತನ ಮಾಡಿದ್ದ ಆರೋಪಿಗಳು ಸಿಸಿಟಿವಿಗೆ ಛತ್ರಿ ಅಡ್ಡ ಹಿಡಿದು ಕೃತ್ಯ ಎಸಗಿದ್ದರು.

    ಆರೋಪಿಗಳು ಸಿಕ್ಕಿ ಬಿದಿದ್ದು ಹೇಗೆ:
    ಎಟಿಎಂ ನಲ್ಲಿ ಕಳ್ಳತನ ನಡೆದ ಬಳಿಕ ಎಟಿಎಂ ಗನ್‍ಮ್ಯಾನ್ ಆಗಿದ್ದ ಬಂಧಿತ ಜಗದೇವಪ್ಪ 10 ದಿನಗಳ ಕಾಲ ನಾಪತ್ತೆಯಾಗಿದ್ದ. ಅಲ್ಲದೇ ಕಳ್ಳತನ ಎಸಗಿದ್ದ ಆರೋಪಿಗಳು ಎಟಿಎಂ ಪಿನ್ ಕೋಡ್ ಬಳಸಿ ಕಳ್ಳತನ ಮಾಡಿದ್ದರು. ಈ ಮಾಹಿತಿಯನ್ನ ಪಡೆದ ಪೊಲೀಸರು ಜಗದೇವಪ್ಪನನ್ನು ಬಂಧಿಸಿ ವಿಚಾರಣೆ ನಡೆಸಿದ್ದರು. ಈ ವೇಳೆ ಕೃತ್ಯದಲ್ಲಿ ಭಾಗಿಯಾಗಿದ್ದ ಮತ್ತೊಬ್ಬ ಜಗನ್ನಾಥನನ್ನು ಬಂಧಿಸಿದ್ದು, ಬಂಧಿತರಿಂದ 10.20 ಲಕ್ಷ ರೂ. ನಗದು, ಬೈಕ್, ಮೊಬೈಲ್, 12 ಎಟಿಎಂ ಪಾಸ್ ವರ್ಡ್ ವಶಕ್ಕೆ ಪಡೆದಿದ್ದರು.

    ಅಲ್ಲದೇ ಬಂಧಿತರನ್ನು ಪೊಲೀಸರು ಹೆಚ್ಚಿನ ತನಿಖೆಗೆ ಒಳಪಡಿಸಿದ ವೇಳೆ ಆರೋಪಿಗಳು ಶಿವಕುಮಾರ್ ದುಬೈಗೆ ಎಸ್ಕೇಪ್ ಆಗಿದ್ದರ ಕುರಿತು ಬಾಯ್ಬಿಟ್ಟಿದ್ದಾರೆ. ಬಳಿಕ ಆರೋಪಿಗಳಿಂದ ಪಡೆದ ಮಾಹಿತಿ ಅನ್ವಯ ಪೊಲೀಸರು ದುಬೈನಲ್ಲಿರುವ ಭಾರತೀಯ ರಾಯಭಾರಿ ಕಚೇರಿಗೆ ಮಾಹಿತಿ ನೀಡಿದ್ದರು. ಹೀಗಾಗಿ ಇಂದು ಮುಂಜಾನೆ ವಾಡಿ ಪೊಲೀಸರು ಆರೋಪಿಯನ್ನು ಬಂಧಿಸಿ ದುಬೈನಿಂದ ವಾಪಸ್ ಕರೆತಂದಿದ್ದಾರೆ.

  • ಪಾಕ್ ಧ್ವಜ ಹಾರಾಟ ಕೇಸ್- ಗೌರಿ ಹತ್ಯೆಯ ಆರೋಪಿ ವಾಗ್ಮೋರೆ ಖುಲಾಸೆ

    ಪಾಕ್ ಧ್ವಜ ಹಾರಾಟ ಕೇಸ್- ಗೌರಿ ಹತ್ಯೆಯ ಆರೋಪಿ ವಾಗ್ಮೋರೆ ಖುಲಾಸೆ

    ವಿಜಯಪುರ: ಜಿಲ್ಲೆಯ ಸಿಂಧಗಿ ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಪಾಕ್ ಧ್ವಜ ಹಾರಿಸಿದ ಪ್ರಕರಣದಲ್ಲಿ ಪರಶುರಾಮ ವಾಗ್ಮೋರೆ ಸೇರಿದಂತೆ ಆರು ಆರೋಪಿಗಳು ಖುಲಾಸೆಗೊಂಡಿದ್ದಾರೆ.

    2012ರ ಜನವರಿ 1 ರಂದು ಸಿಂಧಗಿ ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಪಾಕಿಸ್ತಾನ ಧ್ವಜ ಹಾರಿಸಲಾಗಿತ್ತು. ಈ ಪ್ರಕರಣದಲ್ಲಿ ಗೌರಿ ಲಂಕೇಶ್ ಹತ್ಯೆಯ ಪ್ರಮುಖ ಆರೋಪಿ ಪರಶುರಾಮ ಆರೋಪಿ ಸೇರಿ ಒಟ್ಟು 7 ಜನರನ್ನು ಆರೋಪಿಗಳನ್ನಾಗಿ ಮಾಡಲಾಗಿತ್ತು. ಬರೋಬ್ಬರಿ 6 ವರ್ಷಗಳ ಸುದೀರ್ಘ ವಿಚಾರಣೆ ನಂತರ ಇಂದು ಪರಶುರಾಮ ವಾಗ್ಮೋರೆ ಸೇರಿದಂತೆ 6 ಆರೋಪಿಗಳಿಗೆ ವಿಜಯಪುರದ 1ನೇ ಹೆಚ್ಚುವರಿ ನ್ಯಾಯಾಲಯ ಆರೋಪ ಮುಕ್ತಗೊಳಿಸಿದೆ.

    ತಾಂತ್ರಿಕ ದೋಷದಿಂದ ಆರೋಪ ಸಾಬೀತು ಮಾಡಲು ಸಾಧ್ಯವಾಗದೆ ಕೇಸ್ ಖುಲಾಸೆ ಆಗಿದೆ. ಅಲ್ಲದೇ ಪ್ರಕರಣದ ಮತ್ತೋರ್ವ ಆರೋಪಿ ಅಪ್ರಾಪ್ತ ಆಗಿದ್ದಾನೆ ಎಂದು ವಕೀಲರಾದ ಲಗಳಿ ಮಾಧ್ಯಮಗಳಿಗೆ ಸ್ಪಷ್ಟ ಪಡಿಸಿದರು.

    ಗೌರಿ ಹತ್ಯೆ ಪ್ರಕರಣದ ಬಗ್ಗೆ ಮಾಧ್ಯಮಗಳು ಪ್ರಶ್ನಿಸಿದಾಗ ವಾಗ್ಮೋರೆ ಮೌನ ವಹಿಸಿದ್ದ, ಅಲ್ಲದೇ ಮಾಧ್ಯಮಗಳ ಕ್ಯಾಮೆರಾ ಕಂಡು ಮುಖ ಮುಚ್ಚಿಕೊಳ್ಳಲು ಯತ್ನಿಸಿದ್ದ. ವಿಷಯ ಎಲ್ಲರಿಗೂ ಗೊತ್ತಿರೋದೆ ಎಂದಾಗ ಕ್ಯಾಮೆರಾಗಳಿಗೆ ಮುಖ ದರ್ಶನ ಮಾಡಿದ್ದಾನೆ. ಅಲ್ಲದೇ ಸಾಕು ಹೋಗ್ರಿ ಎಂದು ಕ್ಯಾಮೆರಾ ಮೇನ್ ಗಳಿಗೆ ವಾಗ್ಮೋರೆ ಆವಾಜ್ ಹಾಕಿದ್ದಾನೆ.

    ತಾಯಿ ಜಾನಕಿಬಾಯಿಯವರು ಚಿತ್ರಿಕರಣಕ್ಕೆ ಅಡ್ಡಿ ಪಡೆಸಿದ್ದಲ್ಲದೇ, ಕಲ್ಲು ತೆಗೆದುಕೊಂಡು ಕ್ಯಾಮೆರಾಗೆ ಹೊಡೆಯೋಕೆ ಮುಂದಾಗಿದ್ದರು. ವಿನಾಕಾರಣ ಮಗನ ವಿಡಿಯೋ ಮಾಡಬೇಡಿ, ಅವನಿಗೆ ಟೆನ್ಷನ್ ಕೊಡಬೇಡಿ ಎಂದು ಮನವಿ ಮಾಡಿಕೊಂಡರು.

  • ಹೊಳೆಯಲ್ಲಿ ನಿಧಿ ಸಿಕ್ಕಿದೆ, 5 ಕೆಜಿ ಚಿನ್ನ ಇದೆ- ಒರಿಜಿನಲ್ ಗೋಲ್ಡ್ ಕೊಟ್ಟು ಯಾಮಾರಿಸುತ್ತೆ ಗ್ಯಾಂಗ್!

    ಹೊಳೆಯಲ್ಲಿ ನಿಧಿ ಸಿಕ್ಕಿದೆ, 5 ಕೆಜಿ ಚಿನ್ನ ಇದೆ- ಒರಿಜಿನಲ್ ಗೋಲ್ಡ್ ಕೊಟ್ಟು ಯಾಮಾರಿಸುತ್ತೆ ಗ್ಯಾಂಗ್!

    ಬೆಂಗಳೂರು: ಹೊಳೆಯಲ್ಲಿ ನಿಧಿ ಸಿಕ್ಕಿದೆ, 5 ಕೆಜಿ ಚಿನ್ನ ಇದೆ ಅಂತ ಬಂದು ಸ್ಯಾಂಪಲ್‍ಗೆ ಅಂತ ಒರಿಜಿನಲ್ ಗೋಲ್ಡ್ ಕೊಡ್ತಾರೆ. ಆಮೇಲೆ ನಕಲಿ ಚಿನ್ನ ಕೊಟ್ಟು ನಿಮ್ಮನ್ನ ಯಾಮಾರಿಸೋ ಗ್ಯಾಂಗ್ ಒಂದು ಇದೀಗ ಸಿಕ್ಕಿಬಿದ್ದಿದೆ.

    ಹೌದು. ಪಬ್ಲಿಕ್ ಟಿವಿಯ ‘ಆಪರೇಷನ್ ಗೋಲ್ಡ್’ ಕಾರ್ಯಾಚರಣೆಯ ವೇಳೆ ಖದೀಮರು ಸಿಕ್ಕಿಬಿದ್ದಿದ್ದಾರೆ. ಇವರಿಗೆ ಕನ್ನಡ ಬರಲ್ಲ, ಕೇವಲ ಹಿಂದಿ ಮಾತ್ರ ಮಾತಾಡ್ತಾರೆ. ವಸ್ತುಗಳನ್ನು ಖರೀದಿಸುವ ನೆಪದಲ್ಲಿ ಮೊದಲು ಪರಿಚಯ ಮಾಡಿಕೊಳ್ಳುತ್ತಾರೆ.

    ಕುರುಬರಹಳ್ಳಿ ನಿವಾಸಿ, ವರ್ತಕ ಪರಮೇಶ್ ಅನ್ನೋರಿಗೆ ಚಿನ್ನದ ದೋಖಾ ಗ್ಯಾಂಗ್ ಪರಿಚಯವಾಗಿತ್ತು. ಬಳಿಕ ಕಳೆದ ಹದಿನೈದು ದಿನಗಳಿಂದಲೂ ಕಿಲಾಡಿಗಳು ವ್ಯಾಪಾರ ಕುದುರಿಸುತಿದ್ದರು. ಮೊದಲು 5 ಕೆಜಿ ಚಿನ್ನ ಇದೆ. 30 ಲಕ್ಷ ಕೊಡಿ ಎಂದು ಬೇಡಿಕೆಯಿಟ್ಟಿದ್ದರು. ಅಂತ ಪರಮೇಶ್ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ. ಕುರುಬರ ಹಳ್ಳಿಯಲ್ಲಿ ಮಹಿಳೆಯೊಬ್ಬರಿಗೆ ಇದೇ ರೀತಿ ನಕಲಿ ಚಿನ್ನ ನೀಡಿ 3 ಲಕ್ಷ ರೂ. ದೋಖಾ ಮಾಡಿತ್ತು ಗ್ಯಾಂಗ್.

    ಬಳಿಕ ನಕಲಿ ಚಿನ್ನ ಕೊಟ್ಟು ದುಡ್ಡು ಪಡೆಯಲು ಇಬ್ಬರು ಖದೀಮರು ಬಂದಿದ್ದರು. ಈ ವೇಳೆ ಪರಮೇಶ್, ವಿನೋದ್ ಹಾಗೂ ಲಕ್ಷ್ಮಮ್ಮ ಸೇರಿ ಅವರನ್ನು ಸಿನಿಮಾ ಸ್ಟೈಲಲ್ಲಿ ಚೇಸ್ ಮಾಡಿ ಹಿಡಿದಿದ್ದಾರೆ. ಬಳಿಕ ಇಬ್ಬರು ಆರೋಪಿಗಳನ್ನು ಸ್ಥಳೀಯರು ಸೇರಿ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.

    ಸದ್ಯ ಪೊಲೀಸರು ಚಿನ್ನದ ದೋಖಾ ಮಾಡುವ ಗ್ಯಾಂಗ್‍ಗಾಗಿ ಹುಡುಕಾಟ ಆರಂಭಿಸಿದ್ದಾರೆ.

  • ಪಂಜಾಬ್ ಪೊಲೀಸರ ಗ್ರೂಪ್ ಫೋಟೋ ವೈರಲ್: ನೆಟ್ಟಿಗರಿಂದ ಭಾರೀ ಕಮೆಂಟ್ಸ್

    ಪಂಜಾಬ್ ಪೊಲೀಸರ ಗ್ರೂಪ್ ಫೋಟೋ ವೈರಲ್: ನೆಟ್ಟಿಗರಿಂದ ಭಾರೀ ಕಮೆಂಟ್ಸ್

    ಚಂಡೀಗಢ: ಕಳ್ಳರನ್ನು ಹಿಡಿದ ಮೇಲೆ ಪೊಲೀಸರು ಗ್ರೂಪ್ ಫೋಟೋ ತೆಗೆಸಿಕೊಳ್ಳುವುದು ಸಾಮಾನ್ಯ ಪ್ರಕ್ರಿಯೆ. ಆದರೆ ಪಂಜಾಬ್ ಪೊಲೀಸರು ಈಗ ಇಂತಹದ್ದೇ ಗ್ರೂಪ್ ಫೋಟೋ ಸಾಮಾಜಿಕ ಜಾಲತಾಣಲದಲ್ಲಿ ವೈರಲ್ ಆಗಿದ್ದು, ಪರ ಹಾಗೂ ವಿರೋಧ ಕಮೆಂಟ್ಸ್‍ಗಳು ಹರಿದಾಡುತ್ತಿವೆ.

    ಏನಿದೆ ಫೋಟೋದಲ್ಲಿ?
    ಗ್ರೂಪ್ ಫೋಟೋ ತೆಗೆಸುತ್ತಿರುವ ವೇಳೆ ಆರೋಪಿಗಳನ್ನು ಕುರ್ಚಿ ಮೇಲೆ ಕೂರಿಸಲಾಗಿರುತ್ತದೆ. ಆದರೆ ತಮ್ಮ ತಪ್ಪಿನಿಂದ ಎಚ್ಚೆತ್ತ ಪೊಲೀಸರು ಪುನಃ ಆರೋಪಿಗಳನ್ನು ಕೆಳಗೆ ಕೂರಿಸಿ ಫೋಟೋ ತೆಗೆಸಿಕೊಂಡಿದ್ದಾರೆ. ಈ ಎರಡು ಫೋಟೋಗಳನ್ನು ಸೇರಿಸಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಲಾಗಿದ್ದು, ನೆಟ್ಟಿಗರಿಂದ ಭಾರೀ ಕಮೆಂಟ್ಸ್ ಕೇಳಿಬರುತ್ತಿವೆ.

    ಪಂಜಾಬ್ ಪೊಲೀಸರು ಇಂತಹದಕ್ಕೆ ಉತ್ತಮರು. ದರೋಢೆಕೊರರ ಜೊತೆ ಪೂರ್ಣ ಗೌರವ ನೀಡುವ ಗ್ರೂಪ್ ಫೋಟೋ ತಗೆಸಿಕೊಂಡಿದ್ದಾರೆ ಎಂದು ಬರೆದು ಅಮನ್ ಸಿಂಗ್ ಟ್ವೀಟ್ ಮೂಲಕ ವ್ಯಂಗ್ಯವಾಡಿದ್ದಾರೆ.

    ಇದರಲ್ಲಿ ಯಾವುದೇ ತಪ್ಪಿಲ್ಲ. ಇದೊಂದು ಸೌಜನ್ಯದ ಸಂಕೇತ. ಆರೋಪ ಸಾಬೀತು ಆಗುವವರೆಗೆ ಅವರು ಮುಗ್ಧರು ಎಂದು ಕಾನೂನಿನಲ್ಲಿದೆ ಎಂದು ಬರೆದು ಗುರ್ಸಾಟಿಂದರ್ ಸಿಂಗ್ ಟ್ವೀಟ್ ಮಾಡಿ, ಪೊಲೀಸರನ್ನು ಬೆಂಬಲಿಸಿದ್ದಾರೆ.

    https://twitter.com/Gursatinder68/status/1019808763258081280

  • ಕಾರ್ಕಳದಲ್ಲಿ ಒಂಟಿ ಮಹಿಳೆ ಮರ್ಡರ್- ಮಹಾರಾಷ್ಟ್ರದಲ್ಲಿ ಆರೋಪಿ ಅರೆಸ್ಟ್

    ಕಾರ್ಕಳದಲ್ಲಿ ಒಂಟಿ ಮಹಿಳೆ ಮರ್ಡರ್- ಮಹಾರಾಷ್ಟ್ರದಲ್ಲಿ ಆರೋಪಿ ಅರೆಸ್ಟ್

    ಉಡುಪಿ: ಜಿಲ್ಲೆಯ ಕಾರ್ಕಳ ತಾಲೂಕಿನ ಕುಕ್ಕುಂದೂರು ಗ್ರಾಮದಲ್ಲಿ ನಡೆದ ಒಂಟಿ ಮಹಿಳೆಯ ಕೊಲೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ.

    ಫ್ಲೋರಿನ್ ಮಚಾದೋ ಎಂಬ ಒಂಟಿ ಮಹಿಳೆ ಕೊಲೆ ಕಾರ್ಕಳದ ಕುಕ್ಕುಂದೂರಿನಲ್ಲಿ ನಡೆದಿತ್ತು. ಪ್ರಕರಣ ಬೆನ್ನತ್ತಿದ ಕಾರ್ಕಳ ಪೊಲೀಸರು ಮಹಾರಾಷ್ಟ್ರದ ಪನ್ವೇಲ್ ರೈಲು ನಿಲ್ದಾಣದಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿ ಈದು ಗ್ರಾಮದ ಹೊಸ್ಮಾರಿನ ಮೊಹಮ್ಮದ್ ರಿಯಾಜ್ ಆಗಿದ್ದು, ಈತ ದುಬೈಯಲ್ಲಿ ಪಾಸ್‍ಪೋರ್ಟ್, ವೀಸಾ ಕೊಡಿಸುವ ಏಜೆನ್ಸಿಯಲ್ಲಿ ಉದ್ಯೋಗಿಯಾಗಿದ್ದ ಎಂದು ತಿಳಿದು ಬಂದಿದೆ.

    ಇವರಿಬ್ಬರಿಗೂ ಫೇಸ್‍ಬುಕ್ ಮೂಲಕ 5 ವರ್ಷಗಳಿಂದ ಪರಿಚಯವಿದ್ದು, ತುಂಬಾ ಆತ್ಮೀಯವಾಗಿ ಹಣಕಾಸಿನ ವ್ಯವಹಾರದಲ್ಲಿ ಮುಂದುವರಿದಿದ್ದರು. ಆರೋಪಿ ರಿಯಾಜ್‍ನಿಂದ ಫ್ಲೋರಿನ್ 13 ಲಕ್ಷದಷ್ಟು ಸಾಲ ಪಡೆದು ಲೇವಾದೇವಿಗೆ ವಿನಿಯೋಗಿಸಿದ್ದಳು. ಆಕೆ ಹಣ ಮರುಪಾವತಿ ಮಾಡದ ಕಾರಣ ಆಗಾಗ ಅವರಿಬ್ಬರ ನಡುವೆ ಜಗಳ ನಡೆದಿತ್ತು. ಶನಿವಾರ ರಾತ್ರಿ ಆತ ಮತ್ತೆ ಫ್ಲೋರಿನ್ ಮನೆಗೆ ಹಣ ವಸೂಲಿಗಾಗಿ ಬಂದಿದ್ದ, ಆ ವೇಳೆ ಹಣ ನೀಡದೇ ಇದ್ದಾಗ ಆಕೆಯನ್ನು ಚಾಕುವಿನಿಂದ ಇರಿದಿದ್ದಾನೆ. ಆಕೆಯ ಮನೆಯಲ್ಲಿದ್ದ ಚಿನ್ನಾಭರಣ, ನಗದು, ಮೊಬೈಲ್ ಹಾಗೂ ಸ್ಕೂಟರ್ ತೆಗೆದುಕೊಂಡು ಪರಾರಿಯಾಗಿದ್ದಾನೆ.

    ಆರೋಪಿ ಪತ್ತೆಗೆ ಬಲೆ ಬೀಸಿದ ಪೊಲೀಸರು, ಆತನ ಮೊಬೈಲ್ ನೆಟ್‍ವರ್ಕ್ ಆಧಾರದಲ್ಲಿ ಆರೋಪಿ ಅಜ್ಮೀರ್‍ದಲ್ಲಿದ್ದಾನೆಂದು ತಿಳಿಯುತ್ತದೆ. ತಕ್ಷಣವೇ ರೈಲ್ವೆ ನಿಲ್ದಾಣದಲ್ಲಿ ಮಾಹಿತಿ ಕಲೆ ಹಾಕಿದ ಪೊಲೀಸರು, ಆತ ಅಹಮದಾಬಾದ್‍ನಿಂದ ಮುಂಬೈ ಮೂಲಕ ಮಂಗಳೂರಿಗೆ ರೈಲಿನಲ್ಲಿ ಬರುತ್ತಿರುವುದಾಗಿ ಖಚಿತ ಮಾಹಿತಿ ಪಡೆದು ಪನ್ವೇಲ್ ನಿಲ್ದಾಣದಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ.