Tag: accused

  • ಬಂಧಿಸಲು ಹೋದಾಗ ಕಲ್ಲು ತೂರಿದ- ಕೊಲೆ ಆರೋಪಿಯ ಮೇಲೆ ಪೊಲೀಸ್ ಫೈರಿಂಗ್

    ಬಂಧಿಸಲು ಹೋದಾಗ ಕಲ್ಲು ತೂರಿದ- ಕೊಲೆ ಆರೋಪಿಯ ಮೇಲೆ ಪೊಲೀಸ್ ಫೈರಿಂಗ್

    ಬೆಂಗಳೂರು: ಕೊಲೆ ಆರೋಪಿಯನ್ನು ಇಂದು ಮುಂಜಾನೆ ಬಂಧಿಸಲು ಹೋದಾಗ ಆತ ಪೊಲೀಸರ ಮೇಲೆಯೇ ಕಲ್ಲು ತೂರಾಟ ನಡೆಸಿದ್ದಾನೆ. ಹೀಗಾಗಿ ಪೊಲೀಸರು ಆತನ ಮೇಲೆ ಫೈರಿಂಗ್ ನಡೆಸಿದ್ದಾರೆ.

    ರಾಜೇಂದ್ರ ಅಲಿಯಾಸ್ ಬೆಂಕಿ ರಾಜನ ಕಾಲಿಗೆ ಪೊಲೀಸರು ಗುಂಡು ಹೊಡೆದಿದ್ದಾರೆ. ಬೆಂಗಳೂರಿನ ಕೋಣನಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನೆಡದಿದ್ದು, ಆರೋಪಿ ರಾಜೇಂದ್ರ ಕಳೆದ ಭಾನುವಾರ ಸೆಕ್ಯೂರಿಟಿ ಗಾರ್ಡ್ ವೊಬ್ಬರನ್ನು ಬರ್ಬರ ಕೊಲೆ ಮಾಡಿದ್ದನು.

    ಇಂದು ಮುಂಜಾನೆ ಪೊಲೀಸರು ಆರೋಪಿ ರಾಜೇಂದ್ರನನ್ನು ಸೆರೆ ಹಿಡಿಯಲು ಯತ್ನಿಸಿದ್ದಾರೆ. ಈ ವೇಳೆ ರಾಜೇಂದ್ರ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದಾನೆ. ಆತ್ಮರಕ್ಷಣೆಗಾಗಿ ಪೊಲೀಸರು ಆತನ ಕಾಲಿಗೆ ಗುಂಡು ಹೊಡೆದಿದ್ದಾರೆ. ಆರೋಪಿ ರಾಜೇಂದ್ರ ಒಟ್ಟು ಮೂರು ಕೊಲೆ ಕೇಸ್ ನಲ್ಲಿ ಆರೋಪಿಯಾಗಿದ್ದನು.

    ಕಳೆದ ಶನಿವಾರ ರಾಜೇಂದ್ರ ಪದ್ಮನಾಭನಗರದ ಮುಖ್ಯರಸ್ತೆಯ ಕರ್ನಾಟಕ ಬ್ಯಾಂಕ್ ಎದುರುಗಡೆ ಸೆಕ್ಯೂರಿಟಿ ಗಾರ್ಡ್ ಲಿಂಗಪ್ಪನನ್ನು ಕೊಲೆ ಮಾಡಿದ್ದನು. ಶನಿವಾರ ತಡರಾತ್ರಿ ಲಿಂಗಪ್ಪ ಮಲಗಿರುವಾಗ ರಾಜೇಂದ್ರ ಆತನ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಕೊಲೆ ಮಾಡಿದ್ದನು. ಕೊಲೆ ಮಾಡಿದ ಬಳಿಕ ಆರೋಪಿ ಪರಾರಿಯಾಗಿದ್ದರು.

  • ಜಾಮೀನು ಬೇಕಾದ್ರೆ ಹುತಾತ್ಮ ಯೋಧರ ಕುಟುಂಬಕ್ಕೆ 1 ಲಕ್ಷ ನೀಡಿ: ತೆಲಂಗಾಣ ಹೈಕೋರ್ಟ್

    ಜಾಮೀನು ಬೇಕಾದ್ರೆ ಹುತಾತ್ಮ ಯೋಧರ ಕುಟುಂಬಕ್ಕೆ 1 ಲಕ್ಷ ನೀಡಿ: ತೆಲಂಗಾಣ ಹೈಕೋರ್ಟ್

    ಹೈದರಾಬಾದ್: ಜಾಮೀನು ಬೇಕಾದರೆ ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ ಯೋಧರ ಕುಟುಂಬಕ್ಕೆ 1 ಲಕ್ಷ ರೂ. ನೆರವನ್ನು ನೀಡಿ ಎಂದು ತೆಲಂಗಾಣ ಹೈಕೋರ್ಟ್ ಆರೋಪಿಗಳಿಗೆ ಸೂಚಿಸಿದೆ.

    14 ಸಾವಿರ ಹೂಡಿಕೆದಾರರಿಗೆ ಮೋಸ ಮಾಡಿರುವ ಆರೋಪದ ಮೇಲೆ ಸನ್ ಪರಿವಾರ್ ಗ್ರೂಪ್‍ನ ಆಯೋಜಕರ ಮೇಲೆ ಪ್ರಕರಣ ದಾಖಲಾಗಿತ್ತು. ಹೂಡಿಕೆದಾರರಿಗೆ ಸುಮಾರು 150 ಕೋಟಿ ರೂ. ನಷ್ಟು ಹಣವನ್ನು ಈ ಕಂಪನಿ ವಂಚಿಸಿತ್ತು. ಆದರಿಂದ ಕಳೆದ ವರ್ಷ ಈ ಕಂಪನಿ ಮೇಲೆ ವಂಚನೆ ಕೇಸ್ ದಾಖಲಾಗಿತ್ತು. ಅಲ್ಲದೆ, ವಂಚಿಸಿದ್ದ ಆರೋಪಿಗಳನ್ನು ಬಂಧಿಸಿ ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು. ತನಿಖಾಧಿಕಾರಿ ಸೂಚಿಸಿದಾಗ ವಿಚಾರಣೆಗೆ ಹಾಜರಾಗಬೇಕೆಂಬ ಷರತ್ತಿನ ಮೇರೆಗೆ ಅವರಿಗೆ ಜಾಮೀನು ಮಂಜೂರು ಮಾಡಲಾಗಿತ್ತು.

    ಆರೋಪಿಗಳು ತನಿಖೆಗೆ ಸರಿಯಾಗಿ ಹಾಜರಾಗದ ಕಾರಣ ಅವರ ಜಾಮೀನು ರದ್ದುಗೊಳಿಸಲಾಗಿತ್ತು. ರದ್ದಾದ ಹಿನ್ನೆಲೆಯಲ್ಲಿ ಆರೋಪಿಗಳು ಮತ್ತೆ ಜಾಮೀನಿಗಾಗಿ ಕೋರ್ಟ್ ಮೊರೆ ಹೋಗಿದ್ದರು.

    ಈ ಅರ್ಜಿ ವಿಚಾರಣೆ ವೇಳೆ ನ್ಯಾ.ಬಿ. ಶಿವಶಂಕರ್ ಅವರು ಎಲ್ಲಾ ಆರೋಪಿಗಳು ತಮಗೆ ಜಾಮೀನು ಬೇಕಿದ್ದರೆ ಪುಲ್ವಾಮ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಯೋಧರ ಕುಟುಂಬಗಳಿಗೆ 1 ಲಕ್ಷ ರೂ. ಸಹಾಯಧನ ನೀಡಿದರೆ ಮಾತ್ರ ಮಂಜೂರು ಮಾಡಲಾಗುವುದು ಎಂದು ತಿಳಿಸಿದ್ದಾರೆ. ಅಲ್ಲದೆ, ತನಿಖಾಧಿಕಾರಿಗಳು ವಿಚಾರಣೆಗೆ ಕರೆದಾಗ ಅವರಿಗೆ ಸಹಕರಿಸಬೇಕೆಂದು ಸೂಚಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕಳ್ಳತನ ಮಾಡ್ತಿದ್ದವರಿಗೆ ಎಚ್ಚರಿಕೆ ಕೊಟ್ಟ ಸೂಪರ್‌ವೈಜರನ್ನೇ ಕೊಲೆಗೈದ್ರು..!

    ಕಳ್ಳತನ ಮಾಡ್ತಿದ್ದವರಿಗೆ ಎಚ್ಚರಿಕೆ ಕೊಟ್ಟ ಸೂಪರ್‌ವೈಜರನ್ನೇ ಕೊಲೆಗೈದ್ರು..!

    ರಾಮನಗರ: ಕಬ್ಬಿಣದ ವಸ್ತುಗಳನ್ನು ಕಳವು ಮಾಡುತ್ತಿದ್ದವರ ವಿರುದ್ಧ ದೂರು ನೀಡಲು ಮುಂದಾದ ಸೂಪರ್ ವೈಜರ್ ನನ್ನು ಕೊಲೆ ಮಾಡಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಕಗ್ಗಲೀಪುರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

    ಬೆಂಗಳೂರು ದಕ್ಷಿಣ ತಾಲೂಕು ಗಾಂಧಿನಗರದ ಮಹಮದ್ ಏಜಾಜ್ ಷರೀಫ್, ಮಹಮದ್ ಪ್ಯಾರು, ಸುಹೇಲ್ ಅಹಮದ್ ಹಾಗೂ ಸುಬ್ರಮಣ್ಯಪುರ ನಿವಾಸಿ ಇಸ್ಮಾಯಿಲ್ ಬಂಧಿತ ಆರೋಪಿಗಳು.

    ಏನಿದು ಪ್ರಕರಣ:
    ಬೆಂಗಳೂರು – ಕನಕಪುರ ಮುಖ್ಯರಸ್ತೆ ಕಗ್ಗಲೀಪುರ ಟೌನ್ ಕೆರೆಯ ಬಳಿಯ ರಸ್ತೆ ಅಗಲೀಕರಣದ ಸ್ಥಳದಲ್ಲಿ ಫೆ.7 ರಂದು ಅಪರಿಚಿತ ವ್ಯಕ್ತಿಯ ಶವ ಗೋಣಿ ಚೀಲದಲ್ಲಿ ಪತ್ತೆಯಾಗಿತ್ತು. ಮೃತ ವ್ಯಕ್ತಿಯ ಎರಡು ಕಾಲುಗಳನ್ನು ಕತ್ತರಿಸಿ ಚೀಲದಲ್ಲಿ ಕಟ್ಟಿ ತಂದು ಎಸೆದಿದ್ದರು.

    ಈ ಘಟನೆ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಕಗ್ಗಲೀಪುರ ಠಾಣೆಯ ಪೊಲೀಸರು ತನಿಖೆ ನಡೆಸಿ ವೇಳೆ ಮೃತ ವ್ಯಕ್ತಿ ಆಂಧ್ರಪ್ರದೇಶ ಕಡಪ ಜಿಲ್ಲೆ ಪುಲಿವೆಂದಲ ತಾಲೂಕಿನ ಗಂಗಾರಪುವಂಡ್ಲಪಲ್ಲಿ ಗ್ರಾಮದ ಸಗಿಲಿ ನಾಗೇಶ್ವರರೆಡ್ಡಿ (32) ಎಂದು ತಿಳಿದುಬಂದಿತ್ತು.

    ಕಗ್ಗಲೀಪುರ ಟೌನ್ ಬೈಪಾಸ್ ರಸ್ತೆಯ ಕಾಮಗಾರಿ ನಡೆಯುತ್ತಿದ್ದ ಸ್ಥಳದಲ್ಲಿ ಜೀಪ್ ಚಾಲಕನಾಗಿದ್ದ ಏಜಾಜ್ ಷರೀಫ್, ಕಾಮಗಾರಿಗೆ ಬಳಸುವ ಕಬ್ಬಿಣದ ವಸ್ತುಗಳನ್ನು ಹಾಕಿಕೊಳ್ಳಲು ಮತ್ತು ಕೆಲಸಗಾರರು ಇರಲು ನಿರ್ಮಿಸಿದ್ದ ಶೆಡ್ ಬಳಿ ಹಾಕಿದ್ದ ಸೆಂಟ್ರಿಂಗ್ ಕಬ್ಬಿಣದ ವಸ್ತುಗಳನ್ನು ಮಹಮದ್ ಪ್ಯಾರು ನೊಂದಿಗೆ ಸೇರಿಕೊಂಡು ಆಗಾಗ ಕಳ್ಳತನ ಮಾಡಿ ಮಾರಾಟ ಮಾಡುತ್ತಿದ್ದರು.

    ಈ ವಿಚಾರ ಸೂಪರ್ ವೈಜರ್ ನಾಗೇಶ್ವರ ರೆಡ್ಡಿಗೆ ಗೊತ್ತಾಗಿ ಕೆಲಸದಿಂದ ತೆಗೆಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸುವುದಾಗಿ ಏಜಾಜ್ ಷರೀಫ್ ಗೆ ಎಚ್ಚರಿಕೆ ನೀಡಿದ್ದರು. ಇದರಿಂದ ನಾಗೇಶ್ವರ ರೆಡ್ಡಿ ಅವರನ್ನು ಕೊಲೆ ಮಾಡಲು ನಿರ್ಧರಿಸಿದ್ದ ಆರೋಪಿಗಳಾದ ಮಹಮ್ಮದ್ ಏಜಾಜ್ ಷರೀಫ್ ಮತ್ತು ಮಹಮ್ಮದ್ ಪ್ಯಾರು ಸಂಚು ರೂಪಿಸಿ ಫೆ.6 ರ ಬೆಳಗಿನ ಜಾವ 4 ಗಂಟೆ ಸಮಯದಲ್ಲಿ ಶೆಡ್ಡಿನಲ್ಲಿದ್ದ ಕಬ್ಬಿಣದ ಪೈಪಿನಿಂದ ತಲೆಗೆ ಹೊಡೆದು ನಾಗೇಶ್ವರ ರೆಡ್ಡಿರನ್ನು ಕೊಲೆ ಮಾಡಿದ್ದರು.

    ಕೊಲೆಯನ್ನು ಕೃತ್ಯವನ್ನು ಮರೆಮಾಚಲು ಮರುದಿನ ಫೆ.7 ರ ರಾತ್ರಿ ಮೃತನ ಎರಡೂ ಕಾಲುಗಳನ್ನು ಚಾಕುವಿನಿಂದ ಕತ್ತರಿಸಿ ಬಳಿಕ ಅವುಗಳನ್ನು ಅಲ್ಲೇ ಪಕ್ಕದಲ್ಲಿದ್ದ ಲೇಔಟ್ ಯುಜಿಡಿ ಮ್ಯಾನ್ ಹೋಲ್ ಗೆ ಎಸೆದು ಮೃತದೇಹವನ್ನು ಗೋಣಿ ಚೀಲದಲ್ಲಿ ತುಂಬಿ ಕಗ್ಗಲೀಪುರ ಕೆರೆಯ ಬಳಿ ತಂದು ಎಸೆದಿದ್ದರು.

    ಸದ್ಯ ಕೊಲೆ ಪ್ರಕರಣ ಬೇಧಿಸಿದ ಪೊಲೀಸರು ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ ವಾಹನ, ಆಯುಧಗಳು ಮತ್ತು ಕಳ್ಳತನವಾಗಿದ್ದ ಸುಮಾರು ಮೂರೂವರೆ ಟನ್ ತೂಕದ ಕಬ್ಬಿಣದ ಸೆಂಟ್ರಿಂಗ್ ವಸ್ತುಗಳ ಸಮೇತ ವಾಹನವನ್ನು ವಶಪಡಿಸಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಶ್ರೀಮಂತರ ಸೋಗಿನಲ್ಲಿ ಚಿನ್ನಾಭರಣ ಕಳ್ಳತನ ಮಾಡ್ತಿದ್ದ ಇಬ್ಬರ ಹೆಂಡಿರ ಮುದ್ದಿನ ಗಂಡ ಅರೆಸ್ಟ್!

    ಶ್ರೀಮಂತರ ಸೋಗಿನಲ್ಲಿ ಚಿನ್ನಾಭರಣ ಕಳ್ಳತನ ಮಾಡ್ತಿದ್ದ ಇಬ್ಬರ ಹೆಂಡಿರ ಮುದ್ದಿನ ಗಂಡ ಅರೆಸ್ಟ್!

    – ಐಷಾರಾಮಿ ಜೀವನಕ್ಕೆ ಕಳ್ಳತನವನ್ನೇ ವೃತ್ತಿ

    ಚಿಕ್ಕಬಳ್ಳಾಪುರ: ಜಾತ್ರೆ, ಸಭೆ ಸಮಾರಂಭಗಳಿಗೆ ಐಷಾರಾಮಿ ಸೋಗಿನಲ್ಲಿ ಬಂದು ಭರ್ಜರಿಯಾಗಿ ಚಿನ್ನಾಭರಣ ಎಗರಿಸುತ್ತಿದ್ದ ಖತರ್ನಾಕ್ ಕುಟುಂಬ ಸದಸ್ಯರನ್ನು ಬಂಧಿಸುವಲ್ಲಿ ಚಿಕ್ಕಬಳ್ಳಾಪುರ ಪೊಲೀಸರು ಯಶಸ್ವಿಯಾಗಿದ್ದು, ಕೃತ್ಯದ ಹಿಂದಿನ ಮಾಸ್ಟರ್ ಮೈಂಡ್ ಆಗಿದ್ದ ಇಬ್ಬರ ಹೆಂಡಿರ ಮುದ್ದಿನ ಗಂಡನ್ನು ಪೊಲೀಸರು ಬಂಧಿಸಿದ್ದಾರೆ.

    ಶ್ರೀಕಾಂತ್ ಬಂಧಿತ ಆರೋಪಿಯಾಗಿದ್ದು, ಈತನೊಂದಿಗೆ ಪತ್ನಿಯರಾದ ಲಕ್ಷ್ಮೀ, ಗಾಯತ್ರಿ ಹಾಗೂ ಸಹೋದರಿ ಶಿವಮ್ಮ ಹಾಗೂ ಭೋಜ ಎಂಬವರನ್ನು ಕೂಡ ಬಂಧಿಸಲಾಗಿದೆ. ಬಂಧಿತರಿಂದ 12 ಲಕ್ಷ ರೂ. ಮೌಲ್ಯದ 410 ಗ್ರಾಂ ಚಿನ್ನಾಭರಣ, 50 ಸಾವಿರ ರೂ. ಹಣವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

    ಸಿಕ್ಕಿ ಬಿದ್ದಿದ್ದು ಹೇಗೆ: ಕಳೆದ ಡಿಸೆಂಬರ್ 23 ರಂದು ಚಿಕ್ಕಬಳ್ಳಾಪುರ ತಾಲೂಕು ನಂದಿಗಿರಿಧಾಮ ಪೊಲೀಸ್ ಠಾಣಾ ವ್ಯಾಪ್ತಿಯ ಸೂಲಾಲಪ್ಪನದಿನ್ನೆಯ ಶ್ರೀ ವೀರಾಂಜನೇಯಸ್ವಾಮಿ ದೇವರ ಕಡಲೆಕಾಯಿ ಪರಿಷೆ ನಡೆಯುತ್ತಿತ್ತು. ಈ ವೇಳೆ ಇನ್ನೋವಾ ಕಾರಿನಲ್ಲಿ ಬಂದ ಕಳ್ಳ ಕುಟುಂಬ ಬರೋಬ್ಬರಿ 350 ಗ್ರಾಂ ಚಿನ್ನಾಭರಣ ಕಳ್ಳತನ ಮಾಡಿದ್ದರು. ಈ ಬಗ್ಗೆ ಚಿನ್ನ ಕಳೆದುಕೊಂಡ ಸಾರ್ವಜನಿಕರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

    ಪ್ರಕರಣದ ತನಿಖೆ ಆರಂಭಿಸಿದ ಪೊಲೀಸರಿಗೆ ಚಿಕ್ಕಬಳ್ಳಾಪುರದ ನಂದಿ ಮತ್ತು ಚಿತ್ರಾವತಿ ಜಾತ್ರೆಯಲ್ಲಿ ನಡೆದ ಕಳ್ಳತನದ ಪ್ರಕರಣಗಳ ನಡುವೆ ಸಮ್ಯಾತೆ ಕಾಣಿಸಿತ್ತು. ಅಲ್ಲದೇ ಈ ಬಗ್ಗೆ ಅನುಮಾನ ಹೆಚ್ಚಾಗಿ ವಿಚಾರಣೆಯನ್ನು ತೀವ್ರಗೊಳಿಸಿದ ವೇಳೆ ಕಾರಿನಲ್ಲಿ ಸಾರ್ವಜನಿಕ ಸಭೆ, ಸಮಾರಂಭಗಳಿಗೆ ಬಂದು ಕಳ್ಳತನ ಮಾಡುವ ಬಗ್ಗೆ ಮಾಹಿತಿ ಲಭಿಸಿತ್ತು. ಈ ಎಳೆ ಆಧರಿಸಿ ತನಿಖೆ ಮುಂದುವರಿಸಿದ ಸಮಯದಲ್ಲಿ ಆರೋಪಿಗಳ ಕೃತ್ಯ ಬೆಳಕಿಗೆ ಬಂದಿದೆ.

    ಕಳ್ಳತನವೇ ವೃತ್ತಿ ಮಾಡಿಕೊಂಡಿದ್ರು: ಈ ಹಿಂದೆ ಬಡತನದಿಂದ ಸಮಸ್ಯೆಗಳನ್ನು ಎದುರಿಸಿದ್ದ ಈ ಕುಟುಂಬ ಸದಸದ್ಯರು ಇತ್ತೀಚೆಗೆ ಏಕಾಏಕಿ ಐಷಾರಾಮಿ ಜೀವನ ನಡೆಸಲು ಮುಂದಾಗಿದ್ದರು. ತಮ್ಮ ಈ ಐಷಾರಾಮಿ ಜೀವನಕ್ಕೆ ಕುಟುಂಬದ ಎಲ್ಲಾ ಸದಸ್ಯರು ಕೂಡ ಸರಗಳ್ಳತನ ಮಾಡುವುದನ್ನು ವೃತ್ತಿಯಾಗಿ ತೆಗೆದುಕೊಂಡಿದ್ದರು ಎಂಬ ಮಾಹಿತಿ ಲಭಿಸಿದೆ. ಸದ್ಯ ಐದು ಪ್ರಕರಣಗಳಿಗೆ ಸಂಬಂಧಿಸಿದಂತೆ 410 ಗ್ರಾಂ ಚಿನ್ನಾಭರಣ ಹಾಗೂ ಕೃತ್ಯಕ್ಕೆ ಬಳಸಿದ ಇನ್ನೋವಾ ಕಾರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಯುವಕರಿಬ್ಬರ ಬರ್ಬರ ಹತ್ಯೆ ಪ್ರಕರಣ: ಪ್ರಮುಖ  ಆರೋಪಿ ಅರೆಸ್ಟ್

    ಯುವಕರಿಬ್ಬರ ಬರ್ಬರ ಹತ್ಯೆ ಪ್ರಕರಣ: ಪ್ರಮುಖ ಆರೋಪಿ ಅರೆಸ್ಟ್

    ಉಡುಪಿ: ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಕೋಟದಲ್ಲಿ ನಡೆದ ಇಬ್ಬರು ಯುವಕರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪಂಚಾಯತ್ ಸದಸ್ಯನೋರ್ವನನ್ನು ಬಂಧಿಸಲಾಗಿದೆ.

    ರಾಘವೇಂದ್ರ ಕಾಂಚನ್ (38) ಬಂಧಿತ ಜಿ.ಪಂ ಸದಸ್ಯನಾಗಿದ್ದು, ಈತ ಬಿಜೆಪಿಯಿಂದ ಆಯ್ಕೆಯಾದವನಾಗಿದ್ದಾನೆ. ಈತನೇ ಭರತ್ ಮತ್ತು ಯತೀಶ್ ಕೊಲೆಗೆ ಪ್ರಮುಖ ಸೂತ್ರಧಾರಿಯಾಗಿದ್ದು, ಈ ಮೂಲಕ ಬಂಧಿತರ ಸಂಖ್ಯೆ 6ಕ್ಕೆ ಏರಿಕೆಯಾಗಿದೆ.

    ಈ ಹಿಂದೆ ರೌಡಿಶೀಟರ್ ಹರೀಶ್ ರೆಡ್ಡಿ, ರವೀಂದ್ರ ಪೂಜಾರಿ, ಮಹೇಶ್ ಗಾಣಿಗ ಈ ಮೂವರು ಆರೋಪಿಗಳನ್ನು ಶಿವಮೊಗ್ಗದ ಹೊಸನಗರದಿಂದ ಪೊಲೀಸರು ವಶಕ್ಕೆ ಪಡೆದಿದ್ದರು. ಇನ್ನು ರಾಜಶೇಖರ ರೆಡ್ಡಿ ಹಾಗೂ ರವಿಯನ್ನು ಕೊಡಗಿನಲ್ಲಿ ಬಂಧಿಸಲಾಗಿತ್ತು.

    ಜನವರಿ 27 ರಂದು ಗಲಾಟೆಯ ರಾಜಿಗೆ ಹೋಗಿದ್ದಾಗ ಆರೋಪಿಗಳು ಇಬ್ಬರು ಯುವಕರನ್ನು ಕೊಲೆ ಮಾಡಿದ್ದರು. ರಾಘವೇಂದ್ರ ಕಾಂಚನ್‍ಗೂ ಭರತ್‍ಗೂ ವೈಷಮ್ಯವಿತ್ತು. ಇದರಿಂದ ಭರತ್ ಬೆಳವಣಿಗೆಯನ್ನು ರಾಘವೇಂದ್ರ ಕಾಂಚನ್ ಸಹಿಸಿರಲಿಲ್ಲ. ಹೀಗಾಗಿ ಸಂಚು ನಡೆಸಿ ಕೊಲೆ ಮಾಡಿರುವ ಸಾಧ್ಯತೆ ಇದೆ.

    ಬಂಧಿತರಲ್ಲಿ ಮೂವರು ರೌಡಿಶೀಟರ್ ಗಳಾಗಿದ್ದಾರೆ. ಪ್ರಕರಣ ಸಂಬಂಧ ಇನ್ನಷ್ಟು ಆರೋಪಿಗಳ ಬಂಧನವಾಗುವ ಸಾಧ್ಯತೆಗಳಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಹಂಪಿ ಸ್ಮಾರಕ ಧ್ವಂಸ ಪ್ರಕರಣ – ಮೂವರು ಆರೋಪಿಗಳು ಅರೆಸ್ಟ್

    ಹಂಪಿ ಸ್ಮಾರಕ ಧ್ವಂಸ ಪ್ರಕರಣ – ಮೂವರು ಆರೋಪಿಗಳು ಅರೆಸ್ಟ್

    ಬಳ್ಳಾರಿ: ವಿಶ್ವ ವಿಖ್ಯಾತ ಹಂಪಿಯ ಸ್ಮಾರಕಗಳನ್ನು ಧ್ವಂಸಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

    ಬಂಧಿತ ಆರೋಪಿಗಳಲ್ಲಿ ಬೆಂಗಳೂರಿನ ಇಬ್ಬರು ಹಾಗೂ ಹೈದರಾಬಾದ್‍ನ ಒಬ್ಬ ಯುವಕ ಇದ್ದು, ಮತ್ತೊರ್ವ ಆರೋಪಿಗಾಗಿ ಪೊಲೀಸರು ಬಿಹಾರದಲ್ಲಿ ಹುಡುಕಾಟ ನಡೆಸಿದ್ದಾರೆ ಎನ್ನಲಾಗಿದೆ. ಸದ್ಯ ಬಂಧನಕ್ಕೆ ಒಳಗಾಗಿರುವ ಆರೋಪಿಗಳು ತಮ್ಮ ಕೃತ್ಯದ ಬಗ್ಗೆ ತಪ್ಪೊಪ್ಪಿಗೆ ನೀಡಿದ್ದಾರೆ ಎಂಬ ಮಾಹಿತಿ ಲಭಿಸಿದೆ.

    ಪ್ರಕರಣ ಬೆಳಕಿಗೆ ಬಂದ ಬಳಿಕ ಆರೋಪಿಗಳನ್ನು ಬಂಧಿಸಲು ಪೊಲೀಸರು 3 ತಂಡಗಳಲ್ಲಿ ಕಾರ್ಯಾಚರಣೆ ನಡೆಸಿದ್ದರು. ಸದ್ಯ ಒಂದು ತಂಡ ಮತ್ತೊರ್ವ ಆರೋಪಿಯ ಬಂಧನಕ್ಕಾಗಿ ಬಿಹಾರಕ್ಕೆ ತೆರಳಿದ್ದು, ಅಲ್ಲಿ ಶೋಧ ಕಾರ್ಯ ನಡೆಸಿದೆ. ಸದ್ಯ ಆರೋಪಿಗಳು ರಕ್ಷಣೆ ಕೋರಿದ ಹಿನ್ನೆಲೆಯಲ್ಲಿ ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪೊಲೀಸರು ಗೌಪ್ಯವಾಗಿಟ್ಟಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

    ಏನಿದು ಪ್ರಕರಣ?
    ಹಂಪಿಯ ಗಜರಾಜ ಶಾಲೆಯ ಹಿಂಭಾಗದ ಸಾಲು ಕಂಬಗಳನ್ನು ಕಿಡಗೇಡಿಗಳು ಉರುಳಿಸಿ ಧ್ವಂಸ ಮಾಡಿದ್ದರು. ಅಲ್ಲದೇ ಈ ಕೃತ್ಯವನ್ನು ತಮ್ಮ ಮೊಬೈಲ್ ಫೋನಿನಲ್ಲಿ ಸೆರೆ ಹಿಡಿದಿದ್ದರು. ವಿಡಿಯೋವನ್ನು ಆಯುಷ್ ಸಾಹು ಎಂಬುವರು ಇನ್‍ಸ್ಟಾಗ್ರಾಮ್ ಪೋಸ್ಟ್ ಮಾಡಿದ್ದರು. ಆದರೆ ಈ ವಿಡಿಯೋಗೆ ಟೀಕೆ ವ್ಯಕ್ತವಾದ ಬಳಿಕ ಡಿಲೀಟ್ ಮಾಡಿದ್ದರು.

    ಇದೇ ವಿಡಿಯೋವನ್ನು ಬೆಂಗಳೂರಿನ ವ್ಯಕ್ತಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು, ಸೇವ್ ಹಂಪಿ ಹೆಸರಿನಲ್ಲಿ ಪೋಸ್ಟ್ ಮಾಡಿದ್ದರು. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಸಾಕಷ್ಟು ವೈರಲ್ ಆದ ಬಳಿಕ ಪೊಲೀಸ್ ಇಲಾಖೆ, ಪ್ರಾಚ್ಯ ವಸ್ತು ಮತ್ತು ಪುರಾತತ್ವ ಇಲಾಖೆ ಎಚ್ಚೆತ್ತುಕೊಂಡಿತ್ತು.

    ಪ್ರಕರಣದ ಬೆಳಕಿಗೆ ಬಂದ ಬಳಿಕ ಬಳ್ಳಾರಿ ಜಿಲ್ಲಾ ಎಸ್‍ಪಿ ಅರುಣ್ ರಂಗರಾಜನ್ ಸ್ಥಳಕ್ಕೆ ಭೇಟಿ ಮಾಡಿ ಪರಿಶೀಲನೆ ನಡೆಸಿದ್ದು. ಅಲ್ಲದೇ ಸ್ಮಾರಕ ನಾಶ ಬಗ್ಗೆ ಹಲವು ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಕೆಲಸದಿಂದ ತೆಗೆದಿದ್ದಕ್ಕೆ ಮಾಲೀಕನ ಮೇಲೆ ಹಲ್ಲೆಗೈದ ಆರೋಪಿ ಅರೆಸ್ಟ್

    ಕೆಲಸದಿಂದ ತೆಗೆದಿದ್ದಕ್ಕೆ ಮಾಲೀಕನ ಮೇಲೆ ಹಲ್ಲೆಗೈದ ಆರೋಪಿ ಅರೆಸ್ಟ್

    ಬೆಂಗಳೂರು: ಕೆಲಸದಿಂದ ತೆಗೆದು ಹಾಕಿದ್ದಕ್ಕೆ ಮಾಲೀಕನ ಮೇಲೆ ಲಾಂಗ್‍ನಿಂದ ಹಲ್ಲೆ ಮಾಡಿ ಪರಾರಿಯಾಗಿದ್ದ ಆರೋಪಿ ಹಾಗೂ ಆತನಿಗೆ ಸಾಥ್ ನೀಡಿದ್ದವನನ್ನು ಬೇಗೂರು ಠಾಣಾ ಪೊಲೀಸರು ಬಂಧಿಸಿದ್ದಾರೆ.

    ಬೊಮ್ಮನಹಳ್ಳಿಯ ರೌಡಿಶೀಟರ್ ಮದನ್ ಹಾಗೂ ಕಿರಣ್ ಬಂಧಿತ ಆರೋಪಿಗಳು. ಆನಂದ್ ಹಲ್ಲೆಗೊಳಗಾದ ಮಾಲೀಕ. ಹಲ್ಲೆ ಮಾಡಿದ ಬಳಿಕ ಮದನ್ ಹಾಗೂ ಕಿರಣ್ ಪಾಂಡಿಚೇರಿಗೆ ಪರಾರಿಯಾಗಿದ್ದರು. ಆರೋಪಿಗಳು ಇರುವ ಜಾಗವನ್ನು ಪತ್ತೆ ಹಚ್ಚಿದ ಪೊಲೀಸರು ಅಲ್ಲಿಯೇ ಅವರನ್ನು ಬಂಧಿಸಿ ಕರೆತಂದಿದ್ದಾರೆ.

    ಆಗಿದ್ದೇನು?:
    ಬೇಗೂರಿನ ಗಾರ್ವೆಬಾವಿಪಾಳ್ಯದಲ್ಲಿ ಆನಂದ್ ಕಳೆದ 15 ವರ್ಷಗಳಿಂದ ತಿರುಮಲ ವಾಟರ್ ಫ್ಯಾಕ್ಟರಿ ನಡೆಸುತ್ತಿದ್ದಾರೆ. ಅವರ ಕೈ ಕೆಳಗೆ ಸುಮಾರು 40 ಮಂದಿ ಕೆಲಸ ಮಾಡುತ್ತಿದ್ದಾರೆ. ಮದನ್ ತಾನು ರೌಡಿಶೀಟರ್ ಎಂದು ತಿಳಿಸದೆ ಆನಂದ್ ಬಳಿ ಕೆಲಸ ಕೇಳಿಕೊಂಡು ಬಂದಿದ್ದ. ಆತನ ಪರಿಸ್ಥಿತಿ ಅರಿತ ಆನಂದ್ ತನ್ನ ಕಾರು ಚಾಲಕನಾಗಿ ಕೆಲಸ ಮಾಡುವಂತೆ ತಿಳಿಸಿದ್ದ.

    ಮದನ್ ಕೆಲಸಕ್ಕೆ ಸೇರಿದ ಕೆಲವು ದಿನಗಳ ಬಳಿಕ ಹೆಣ್ಣಮಕ್ಕಳನ್ನು ಚುಡಾಯಿಸುವುದು, ಫ್ಯಾಕ್ಟರಿಯಲ್ಲೇ ಗಾಂಜಾ ಸೇದುತ್ತಿದ್ದ. ಈ ವಿಚಾರವಾಗಿ ಮಾಲೀಕ ಆನಂದ್‍ಗೆ ತಿಳಿದಿದ್ದರಿಂದ ವೇತನ ನೀಡಿ ಮದನ್‍ನನ್ನು ಕೆಲಸದಿಂದ ತೆಗೆದು ಹಾಕಿದ್ದರು. ಇದರಿಂದ ಕೋಪಗೊಂಡ ಮದನ್ ಸಹಚರರೊಂದಿಗೆ ಲಾಂಗ್ ಹಿಡಿದು ಫ್ಯಾಕ್ಟರಿಗೆ ನುಗ್ಗಿ ಆನಂದ್ ಮೇಲೆ ಜನವರಿ 30ರಂದು ಹಲ್ಲೆ ಮಾಡಿದ್ದ. ಅಷ್ಟೇ ಅಲ್ಲದೆ ವಾಟರ್ ಫ್ಯಾಕ್ಟರಿಯಲ್ಲಿದ್ದ ವಸ್ತುಗಳನ್ನು ಒಡೆದು, ಆನಂದ್‍ಗೆ ಜೀವ ಬೆದರಿಕೆ ಹಾಕಿ ಸ್ಥಳದಿಂದ ಪರಾರಿಯಾಗಿದ್ದ. ಘಟನಾ ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಮದನ್ ಹಾಗೂ ಆತನ ಸಹಚರರ ಕೃತ್ಯ ಸೆರೆಯಾಗಿತ್ತು.

    ಈ ಕುರಿತು ಆನಂದ್ ಬೇಗೂರು ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ಚುರುಕುಗೊಳಿಸಿ ಆರೋಪಿಗಳನ್ನು ಬಂಧಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ರೂಪದರ್ಶಿಗೆ ನಗ್ನಚಿತ್ರ ಕಳುಹಿಸಿ ಸೆಕ್ಸ್‌ಗೆ ಒತ್ತಾಯಿಸಿದ ವ್ಯಕ್ತಿ ಅರೆಸ್ಟ್

    ರೂಪದರ್ಶಿಗೆ ನಗ್ನಚಿತ್ರ ಕಳುಹಿಸಿ ಸೆಕ್ಸ್‌ಗೆ ಒತ್ತಾಯಿಸಿದ ವ್ಯಕ್ತಿ ಅರೆಸ್ಟ್

    ಬೆಂಗಳೂರು: ಫೇಸ್ ಬುಕ್ ಮೂಲಕ ರೂಪದರ್ಶಿಗೆ ಅಶ್ಲೀಲ ಸಂದೇಶ ಕಳುಹಿಸಿ ಸೆಕ್ಸ್‌ಗೆ ಒತ್ತಾಯ ಮಾಡುತ್ತಿದ್ದ ಮುಖಪುಟ ವಿನ್ಯಾಸಗಾರನನ್ನು ಪೊಲೀಸರು ಬಂಧಿಸಿದ್ದಾರೆ.

    ತಮ್ಮಣ್ಣ ಫಕೀರಪ್ಪ ಹಾದಿಮನಿ (52) ಬಂಧಿತ ಆರೋಪಿ. ತಮ್ಮಣ್ಣ ಕನ್ನಡ ಮತ್ತು ಆಂಗ್ಲ ವಾರ ಪತ್ರಿಕೆಗೆ ಮುಖಪುಟ ವಿನ್ಯಾಸಗಾರನಾಗಿ ಕೆಲಸ ಮಾಡುತ್ತಿದ್ದು, ಬೆಳಗಾವಿಯ ಗೋಕಾಕ್ ಬಸ್ ನಿಲ್ದಾಣದ ಬಳಿ ಲಾಡ್ಜ್ ನಲ್ಲಿದ್ದ ವೇಳೆ ಬಂಧಿಸಲಾಗಿದೆ.

    ತಮ್ಮಣ್ಣ ಫೇಸ್‍ಬುಕ್ ಮೂಲಕ ರೂಪದರ್ಶಿಗೆ ಪರಿಚಯಿಸಿಕೊಂಡಿದ್ದನು. ಬಳಿಕ ತಮ್ಮಣ್ಣ ರೂಪದರ್ಶಿಗೆ ನಗ್ನ ಚಿತ್ರ ಕಳುಹಿಸುವ ಮೂಲಕ ಲೈಂಗಿಕ ಸಂಪರ್ಕಕ್ಕೆ ಒತ್ತಾಯಿಸುತ್ತಿದ್ದನು. ದಿನೇ ದಿನೇ ತಮ್ಮಣ್ಣನ ಕಿರುಕುಳ ಹೆಚ್ಚಾಗುತ್ತಿದ್ದರಿಂದ ರೂಪದರ್ಶಿ ಮನನೊಂದಿದ್ದಳು.

    ತಮ್ಮಣ್ಣನ ಕಿರುಕುಳ ತಾಳಲಾರದೇ ರೂಪದರ್ಶಿ ಸೈಬರ್ ಕ್ರೈಂ ಪೋಲೀಸರಿಗೆ ದೂರು ನೀಡಿದ್ದಳು. ರೂಪದರ್ಶಿ ದೂರು ಆಧರಿಸಿ ಬೆಂಗಳೂರು ಸೈಬರ್ ಕ್ರೈಂ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕಲಬುರಗಿಯಲ್ಲಿ ಬೆಳ್ಳಂಬೆಳ್ಳಗೆ ಲೈವ್ ಮರ್ಡರ್ ಆರೋಪಿ ಮೇಲೆ ಫೈರಿಂಗ್

    ಕಲಬುರಗಿಯಲ್ಲಿ ಬೆಳ್ಳಂಬೆಳ್ಳಗೆ ಲೈವ್ ಮರ್ಡರ್ ಆರೋಪಿ ಮೇಲೆ ಫೈರಿಂಗ್

    ಕಲಬುರಗಿ: ಬೆಳ್ಳಂಬೆಳ್ಳಗೆ ಲೈವ್ ಮರ್ಡರ್ ಆರೋಪಿ ಮೇಲೆ ಫೈರಿಂಗ್ ಮಾಡಿದ ಘಟನೆ ಕಲಬುರಗಿ ಜಿಲ್ಲೆಯ ಶಹಾಬಾದ್ ಪಟ್ಟಣದ ಹೊರವಲಯದ ವಾಡಿ ರಸ್ತೆಯಲ್ಲಿ ನಡೆದಿದೆ.

    ಲೈವ್ ಮರ್ಡರ್ ಆರೋಪಿ ಸಂತೋಷ್ ಸ್ವಾಮಿ ಮೇಲೆ ಪೊಲೀಸರು ಎರಡು ಸುತ್ತು ಗುಂಡು ಹಾರಿಸಿ ಬಂದಿಸಿದ್ದಾರೆ. ಈ ಘಟನೆಯಲ್ಲಿ ಹಾಜಿ ಮಲಂಗ ಮತ್ತು ಪ್ರಮೋದ್ ಎಂಬ ಪೇದೆಗಳಿಗೆ ಗಾಯವಾಗಿದೆ. ಗಾಯಾಳು ಪೊಲೀಸರನ್ನು ಖಾಸಗಿ ಆಸ್ಪತ್ರೆಗೆ ಹಾಗೂ ಆರೋಪಿಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.

    ಏನಿದು ಪ್ರಕರಣ?
    ಜನವರಿ 10ರಂದು ಸಂತೋಷ್ ಲಾಡ್ಜ್ ಮ್ಯಾನೇಜರ್ ಮಲ್ಲಿಕಾರ್ಜುನ ಅವರನ್ನು ಹಾಡಹಗಲೇ ಬಸ್ ಸ್ಟ್ಯಾಂಡ್ ಬಳಿ ಹತ್ಯೆ ಮಾಡಿದ್ದ. ಲಾಡ್ಜ್ ಮ್ಯಾನೇಜರ್ ಹುದ್ದೆಗಾಗಿ ಈ ಕೊಲೆ ನಡೆದಿದ್ದು, ಆರೋಪಿ ಸಂತೋಷ್ ಸಹ ಈ ಹಿಂದೆ ಕಾವೇರಿ ಲಾಡ್ಜ್ ಮ್ಯಾನೇಜರ್ ಆಗಿದ್ದ. ಅವನ ಸ್ಥಳಕ್ಕೆ ಮಲ್ಲಿಕಾರ್ಜುನ ಬಂದ ಹಿನ್ನೆಲೆಯಲ್ಲಿ ಆತನನ್ನು ಹಾಡಹಾಗಲೇ ಕೊಲೆ ಮಾಡಿದ್ದನು.

    ಮ್ಯಾನೇಜರ್ ಹತ್ಯೆ ಮಾಡಿ ಪರಾರಿಯಾಗಿದ್ದ ಸಂತೋಷ್‍ನನ್ನು ಪೊಲೀಸರು ಬಂಧಿಸಲು ತೆರಳಿದ್ದಾಗ ಮಾರಕಾಸ್ತ್ರಗಳಿಂದ ಅವರ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ. ಆತ್ಮರಕ್ಷಣೆಗಾಗಿ ಆರ್‍ಜೆ ನಗರ ಠಾಣೆ ಪಿಎಸ್‍ಐ ಮಹಾಂತೇಶ್ ಆರೋಪಿ ಸಂತೋಷ್ ಮೇಲೆ ಎರಡು ಸುತ್ತು ಗುಂಡು ಹಾರಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕುಡಿಯುವ ನೀರಿನಲ್ಲಿ ವಿಷ ಮಿಶ್ರಣ- ಇಬ್ಬರು ಆರೋಪಿಗಳ ಬಂಧನ

    ಕುಡಿಯುವ ನೀರಿನಲ್ಲಿ ವಿಷ ಮಿಶ್ರಣ- ಇಬ್ಬರು ಆರೋಪಿಗಳ ಬಂಧನ

    -ನೀರಿಗೆ ವಿಷ ಬೆರೆಸಿ ಊರು ತುಂಬಾ ಡಂಗೂರ ಸಾರಿಸಿದ್ದ ಪಂಪ್ ಆಪರೇಟರ್ ಬಂಧನ!
    -ವಿಷ ಬೆರೆಸಿದ್ಯಾಕೆ ಗೊತ್ತಾ?

    ಯಾದಗಿರಿ: ಜಿಲ್ಲೆಯ ಹುಣಸಗಿ ತಾಲೂಕಿನ ಮುದನೂರ ಕೆ. ಗ್ರಾಮದ ಬಾವಿಯ ನೀರಿಗೆ ವಿಷ ಮಿಶ್ರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.

    ಶಖಾಪುರ ಪಂಪ್ ಆಪರೇಟರ್ ಮೌನೇಶ್ ಹಾಗೂ ಅರಕೇರಾ ಜೆ ಗ್ರಾಮದ ಮಾಜಿ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಶಾಂತಗೌಡ ಎಂಬ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಅರಕೇರಾ ಜೆ ಗ್ರಾಮ ಪಂಚಾಯ್ತಿಯ ಪಿಡಿಓ ವರ್ಗಾವಣೆ ಮಾಡಿಸುವ ಉದ್ದೇಶದಿಂದ ಆರೋಪಿಗಳು ನೀರಿನಲ್ಲಿ ಕ್ರಿಮಿನಾಶಕ ಬೆರೆಸಿದ್ದರು ಎಂದು ತಪ್ಪು ಒಪ್ಪಿಕೊಂಡಿದ್ದಾರೆ.

    ವಿಷ ಮಿಶ್ರಿತ ನೀರಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‍ಪಿ ಯಡಾ ಮಾರ್ಟಿನ್ ಅವರು ಸುರಪುರ ಡಿವೈಎಸ್ಪಿ ಶಿವನಗೌಡ ಪಾಟೀಲ ಅವರ ನೇತೃತ್ವದ 5 ಅಧಿಕಾರಿಗಳ ತನಿಖಾ ತಂಡ ರಚನೆ ಮಾಡಿದ್ದರು. ಎಸ್‍ಪಿ ಯಡಾ ಮಾರ್ಟಿನ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, “ಯಾದಗಿರಿಗೆ ಕರೆ ತಂದ ಸುರಪುರ ಡಿವೈಎಸ್ಪಿ ಶಿವನಗೌಡ ಪಾಟೀಲ ಅವರ ನೇತೃತ್ವದ ತನಿಖಾ ತಂಡ ರಚಿಸಲಾಗಿತ್ತು. ಇದೇ ತಿಂಗಳ 9ರಂದು ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಮುದನೂರ ಕೆ ಗ್ರಾಮದ ಬಾವಿಗೆ ಹಾಗೂ ನೀರು ಪೂರೈಸುವ ಪೈಪ್ ನಲ್ಲಿ ವಿಷ ಬೆರೆಸಿದ್ದರು. ಇಲ್ಲಿಂದ ತೆಗ್ಗಹಳ್ಳಿ ಹಾಗೂ ಶಖಾಪುರ ಗ್ರಾಮಕ್ಕೆ ನೀರು ಪೂರೈಸಲಾಗಿತ್ತು. ವಿಷ ಮಿಶ್ರಿತ ನೀರು ಸೇವಿಸಿ ತೆಗ್ಗಹಳ್ಳಿ ಗ್ರಾಮದ ಹೊನ್ನಮ್ಮ ಎಂಬವರು ಮೃತಪಟ್ಟಿದ್ದರು” ಎಂದರು.

    ಬಂಧನಕ್ಕೊಳಗಾದ ಪಂಪ್ ಆಪರೇಟರ್ ಮೌನೇಶ್, ಹಾಗೂ ಆತನ ತಾಯಿ ನಾಗಮ್ಮ ಸೇರಿದಂತೆ 17 ಜನ ವಿಷ ಮಿಶ್ರಿತ ನೀರು ಸೇವಿಸಿ ಆಸ್ಪತ್ರೆಗೆ ದಾಖಲಾಗಿ ನಂತರ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು. ಪಂಪ್ ಆಪರೇಟರ್ ಮೌನೇಶ್ ದುಷ್ಕರ್ಮಿಗಳು ವಿಷ ಬೆರೆಸಿದ್ದರು ಎಂದು ಕೆಂಬಾವಿ ಪೊಲೀಸ್ ಠಾಣೆಗೆ ದೂರು ನೀಡಿದ್ದ. ಈಗ ದೂರು ನೀಡಿದ್ದ ಮೌನೇಶ್ ಬಂಧನಕ್ಕೊಳಗಾಗಿದ್ದಾನೆ. ವಿಷ ಮಿಶ್ರಿತ ನೀರಿನ ಮಾಹಿತಿ ಅರಿತು ಪಂಪ್ ಆಪರೇಟರ್ ಮೌನೇಶ್ ನೀರು ಪೂರೈಸುವದನ್ನು ಸ್ಥಗಿತಗೊಳಿಸಿದ್ದನು ಹಾಗೂ ನೀರು ಕುಡಿಯದಂತೆ ಎಚ್ಚರಿಕೆ ನೀಡಿ ಸಾಕಷ್ಟು ಜನರ ಪ್ರಾಣ ಉಳಿಸಿದ್ದೆನೆಂದು ಮೌನೇಶ್ ಹೇಳಿಕೊಂಡಿದ್ದ. ಆದರೆ ಈಗ ಮೌನೇಶ ಬಂಧನಕ್ಕೊಳಗಾಗಿದ್ದಾನೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv