Tag: accused

  • ಟಿಕ್‍ಟಾಕ್ ಸ್ಟಾರ್ ಹತ್ಯೆ – ಅಪ್ರಾಪ್ತ ಅರೆಸ್ಟ್

    ಟಿಕ್‍ಟಾಕ್ ಸ್ಟಾರ್ ಹತ್ಯೆ – ಅಪ್ರಾಪ್ತ ಅರೆಸ್ಟ್

    ನವದೆಹಲಿ: ಜಿಮ್ ಟ್ರೈನರ್ ಆಗಿರುವ ಟಿಕ್‍ಟಾಕ್ ಸ್ಟಾರ್ ನನ್ನು ಗುಂಡಿಕ್ಕಿ ಬರ್ಬರವಾಗಿ ಹತ್ಯೆ ಮಾಡಿದ ಅಪ್ರಾಪ್ತ ಬಾಲಕನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.

    ಮೋಹಿತ್ ಮೋರ್(27) ಮೃತ ಜಿಮ್ ಟ್ರೈನರ್. ಮೋಹಿತ್ ನಾಜಫ್‍ಗರ್ ನ ಧರಂಪುರನ ನಿವಾಸಿಯಾಗಿದ್ದು, ಮನೆಯ ಹತ್ತಿರ ಇರುವ ಫೋಟೋಕಾಪಿ ಶಾಪ್‍ನಲ್ಲಿ ತನ್ನ ಗೆಳೆಯನನ್ನು ಭೇಟಿ ಮಾಡಲು ಹೋಗಿದ್ದನು. ಈ ವೇಳೆ ಆರೋಪಿಗಳು ಮೋಹಿತ್‍ನನ್ನು ಗುಂಡಿಕ್ಕಿ ಕೊಲೆ ಮಾಡಿದ್ದರು.

    ಕೊಲೆ ಮಾಡಿದ್ದು ಯಾಕೆ?
    ಆರೋಪಿಗಳಾದ ಅಪ್ರಾಪ್ತ ಬಾಲಕ, ವಿಕಾಸ್ ಹಾಗೂ ರೋಹಿತ್, ಸಂದೀಪ್ ಫಾಲ್ವಾನ್ ಗ್ಯಾಂಗ್‍ನಲ್ಲಿ ಭಾಗಿಯಾಗಿದ್ದರು. ಬೇರೆಯೊಬ್ಬ ವ್ಯಕ್ತಿ ಜೊತೆಗೆ ಇದ್ದ ದ್ವೇಷವನ್ನು ತೀರಿಸಿಕೊಳ್ಳಲು ಒಂದು ತಿಂಗಳ ಹಿಂದೆ ಅಪ್ರಾಪ್ತ ಬಾಲಕ ಸಂದೀಪ್‍ನನ್ನು ಭೇಟಿಯಾಗಿದ್ದಾನೆ. ಅಲ್ಲದೆ ಸಂದೀಪ್‍ಗೆ ಗ್ಯಾಂಗ್‍ನಲ್ಲಿ ಸೇರಿಸಿಕೊಳ್ಳಲು ಹೇಳಿದ್ದಾನೆ. ಆಗ ಸಂದೀಪ್ ನೀನು ಟಿಕ್‍ಟಾಕ್ ಸ್ಟಾರ್ ಮೋಹಿತ್ ಮೋರ್ ನನ್ನು ಕೊಲೆ ಮಾಡಿದರೆ ಮಾತ್ರ ಸೇರಿಸಿಕೊಳ್ಳುವುದಾಗಿ ಷರತ್ತು ಹಾಕಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.

    ಮಂಗಳವಾರ ಸಂದೀಪ್ ಬಾಲಕನನ್ನು ನಾಜಫ್‍ಗರ್ ಬಳಿ ಭೇಟಿ ಆಗಲು ಹೇಳಿದ್ದನು. ಅಲ್ಲಿ ಬಂದ ಮೂವರು ಆರೋಪಿಗಳಿಗೆ ಸಂದೀಪ್ ಪಿಸ್ತೂಲ್ ನೀಡಿ ಮೋಹಿತ್‍ನನ್ನು ಜಿಮ್ ಅಥವಾ ಫೋಟೋಶಾಪ್‍ನಲ್ಲಿ ಕೊಲೆ ಮಾಡಿ ಎಂದು ಹೇಳಿದ್ದನು. ಮೋಹಿತ್ ಫೋಟೋಶಾಪ್ ಒಳಗೆ ಕುಳಿತುಕೊಂಡು ತನ್ನ ಸ್ನೇಹಿತನ ಜೊತೆ ಮಾತನಾಡುತ್ತಿದ್ದನು. ಈ ವೇಳೆ ಮೂವರು ಆರೋಪಿಗಳು ಅಂಗಡಿಯೊಳಗೆ ಬಂದು ಬರೋಬ್ಬರಿ 13 ಗುಂಡು ಹೊಡೆದು ಮೋಹಿತ್‍ನನ್ನು ಕೊಲೆ ಮಾಡಿದ್ದರು.

    ವಿಚಾರಣೆಯಲ್ಲಿ ಹೇಳಿದ್ದೇನು?
    ಸಂದೀಪ್ ಸಹಚರನಾಗಿದ್ದ ಮಾಂಗು ಈ ಹಿಂದೆ ಕೊಲೆ ಆಗಿದ್ದನು. ಕೊಲೆ ಆಗುವ ಮೊದಲು ಮೋಹಿತ್ ಮೂಲಕ ಮೋಹನ್ ಗಾರ್ಡನ್‍ನಲ್ಲಿ ಆಸ್ತಿಗಾಗಿ 30 ಲಕ್ಷ ರೂ. ಇನ್‍ವೆಸ್ಟ್ ಮಾಡಿದ್ದನು. ಮಾಂಗು ಕೊಲೆ ಆದ ನಂತರ ಸಂದೀಪ್ ಹಣ ಕೇಳಿದ್ದಾಗ ಮೋಹಿತ್ ಕೊಡಲು ನಿರಾಕರಿಸಿದ್ದನು. ಬಳಿಕ ಸಂದೀಪ್ ಬಾಲಕನ ಮೂಲಕ ಮೋಹಿತ್ ಬಳಿ ಹಣ ಕೇಳಿದ್ದನು. ಆಗ ಮೋಹಿತ್ ಬಾಲಕನ ಮೇಲೆ ಹಲ್ಲೆ ಮಾಡಿದ್ದನು. ಆಗ ಸಂದೀಪ್ ಹಾಗೂ ಮೂವರು ಆರೋಪಿಗಳು ಮೋಹಿತ್‍ನನ್ನು ಕೊಲೆ ಮಾಡಲು ನಿರ್ಧರಿಸಿದ್ದರು.

    ಕೊಲೆ ಮಾಡುವ ಮೊದಲು ಬಾಲಕ ಮೋಹಿತ್‍ನನ್ನು ಕರೆ ಮಾಡಿ ಎಲ್ಲಿದ್ದೀಯಾ ಎಂದು ಕೇಳಿದ್ದಾನೆ. ಆಗ ಮೋಹಿತ್ ಫೋಟೋಶಾಪ್‍ನಲ್ಲಿ ಇದ್ದೇನೆ ಎಂದು ಹೇಳಿದ್ದಾನೆ. ಬಳಿಕ ಆರೋಪಿಗಳು ಶಾಪ್‍ಗೆ ಹೋಗಿ ಮೋಹಿತ್‍ನನ್ನು ಗುಂಡಿಕ್ಕಿ ಕೊಲೆ ಮಾಡಿದ್ದರು. ಸದ್ಯ ಪೊಲೀಸರು ಬಾಲಕನ ಬಳಿ ಇದ್ದ ಪಿಸ್ತೂಲ್ ಹಾಗೂ ಎರಡು ಜೀವಂತ ಕಾಟ್ರಿಡ್ಜ್ ವಶಕ್ಕೆ ಪಡೆದುಕೊಂಡಿದ್ದಾರೆ.

    ಮೃತ ಮೋಹಿತ್ ಮೋರ್ ಗೆ ಟಿಕ್‍ಟಾಕ್‍ನಲ್ಲಿ 5 ಲಕ್ಷ ಸಬ್‍ಸ್ಕ್ರೈಬರ್ ಇದ್ದು, ಇನ್‍ಸ್ಟಾಗ್ರಾಂನಲ್ಲಿ 3 ಸಾವಿರಕ್ಕೂ ಹೆಚ್ಚು ಫಾಲೋವರ್ಸ್ ಇದ್ದಾರೆ. ಮೋಹಿತ್ ತನ್ನ ಇನ್‍ಸ್ಟಾಗ್ರಾಂನಲ್ಲಿ ತನ್ನ ಫಿಟ್ನೆಸ್ ವಿಡಿಯೋ ಅಪ್ಲೋಡ್ ಮಾಡುತ್ತಿದ್ದನು.

  • ಕಾರು ಚಾಲಕನನ್ನು ಜೀವಂತವಾಗಿ ಸುಟ್ಟಿದ್ದ ಆರೋಪಿ ಮೇಲೆ ಫೈರಿಂಗ್!

    ಕಾರು ಚಾಲಕನನ್ನು ಜೀವಂತವಾಗಿ ಸುಟ್ಟಿದ್ದ ಆರೋಪಿ ಮೇಲೆ ಫೈರಿಂಗ್!

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮತ್ತೆ ಪೊಲೀಸರ ಬಂದೂಕು ಸದ್ದು ಮಾಡಿದ್ದು, ಕಾರು ಚಾಲಕನನ್ನು ಜೀವಂತವಾಗಿ ಸುಟ್ಟಿದ್ದ ನಟೋರಿಯಸ್ ಮೇಲೆ ಪೊಲೀಸರು ಇಂದು ಫೈರಿಂಗ್ ಮಾಡಿದ್ದಾರೆ.

    ನೆಲಮಂಗಲ ಸಿಪಿಐ ಅನಿಲ್ ಕುಮಾರ್ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದ್ದು, ಆರೋಪಿ ಹೇಮಂತ್ ಸಾಗರ್ ಹಾಗೂ ವಿನೋದ್ ಕುಮಾರ್ ನನ್ನು ಸೆರೆಹಿಡಿಯಲು ಹೋಗಿದ್ದಾರೆ. ಈ ವೇಳೆ ಆರೋಪಿಗಳು ಪೊಲೀಸರ ಮೇಲೆಯೇ ಹಲ್ಲೆ ಮಾಡಲು ಮುಂದಾಗಿದ್ದಾರೆ. ಈ ವೇಳೆ ಪೊಲೀಸರು ಆತ್ಮ ರಕ್ಷಣೆಗಾಗಿ ಫೈರಿಂಗ್ ಮಾಡಿದ್ದಾರೆ.

    ಸೋಮವಾರ ನೆಲಮಂಗಲ ತಾಲೂಕಿನ ಮಲ್ಲರಬಾಣವಾಡಿಯಲ್ಲಿ ಹೆಬ್ಬಗೋಡಿ ಮೂಲದ ಕೆಂಪೇಗೌಡನ ಓಲಾ ಕಾರು ಕಸಿದು ಸುಟ್ಟು ಕೊಲೆ ಮಾಡಿದ್ದರು. ಪ್ರಕರಣ ಬೆನ್ನತ್ತಿದ ನೆಲಮಂಗಲ ಪೊಲೀಸರು ಆರೋಪಿಗಳನ್ನು ಸೆರೆಹಿಡಿದಿದ್ದಾರೆ.

    ಆರೋಪಿಗಳನ್ನು ಬೆನ್ನಟ್ಟಿ ಹಿಡಿಯುವ ವೇಳೆ ಪೊಲೀಸರ ಮೇಲೆ ದಾಳಿ ಮಾಡಿದ್ದಾರೆ. ಈ ವೇಳೆ ನೆಲಮಂಗಲದ ಗಣೇಶನ ಗುಡಿ ಬಳಿ ಆತ್ಮ ರಕ್ಷಣೆಗೆ ಪೊಲೀಸರು ಆರೋಪಿಗಳ ಮೇಲೆ ದಾಳಿ ಮಾಡಿದ್ದಾರೆ. ಈ ಘಟನೆಯಲ್ಲಿ ನೆಲಮಂಗಲ ಟೌನ್ ಕೈಂ ಪಿಎಸ್‍ಐ ನವೀನ್ ಕುಮಾರ್ ಗೆ ಗಾಯಗಳಾಗಿದ್ದು, ನೆಲಮಂಗಲ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಖಾಸಗಿ ಆಸ್ಪತ್ರೆಗೆ ಗ್ರಾಮಾಂತರ ಎಎಸ್‍ಪಿ ಸಜೀತ್ ಭೇಟಿ ನೀಡಿದ್ದಾರೆ. ಇಬ್ಬರು ಆರೋಪಿಗಳು ಇನೋವಾ ಕಾರು ಕಳ್ಳತನಕ್ಕೆ ಕೊಲೆ ಮಾಡಿದ್ದರು. ಕೊಲೆಯಾದ ಕೆಂಪೇಗೌಡ ವಿಚಾರದಲ್ಲಿ ಎರಡು ದಿನದ ಹಿಂದೆ ಬೆಂಗಳೂರಿನ ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಪ್ರಕರಣ ದಾಖಲಾಗಿತ್ತು.

    ಆರೋಪಿಗಳು ಶೋಕಿ ಮಾಡಲು ಓಲಾ ಕಂಪನಿ ಮೂಲಕ ಇನೋವಾ ಕಾರು ಬುಕ್ ಮಾಡಿದ್ದರು. ನಂತರ ಮೃತ ಕೆಂಪೇಗೌಡನ ಬಳಿ ಕಾರಿನ ಡಾಕ್ಯುಮೆಂಟ್ ಸಹಿ ಪಡೆದಿದ್ದರು. ಕೆಂಪೇಗೌಡ ಸಾಲಸೊಲ ಮಾಡಿ ಕಾರು ಖರೀದಿಸಿದ್ದನು. ಆರೋಪಿಗಳ ಮೇಲೆ ರಾಮನಗರ, ಮಂಡ್ಯ, ತಾವರೆಕೆರೆ ಪೊಲೀಸ್ ಠಾಣೆಯಲ್ಲಿ ಕಳ್ಳತನದ ಕೇಸ್ ದಾಖಲಾಗಿದೆ.

  • 10 ರೂ. ಕೊಟ್ಟು ತಿಂಡಿ ತಾ ಎಂದು ಹೇಳಿ ಅತ್ಯಾಚಾರವೆಸಗಿದ!

    10 ರೂ. ಕೊಟ್ಟು ತಿಂಡಿ ತಾ ಎಂದು ಹೇಳಿ ಅತ್ಯಾಚಾರವೆಸಗಿದ!

    ಶಿಮ್ಲಾ: ತಿಂಡಿ ತಗೊಂಡು ಬಾ ಎಂದು 9 ವರ್ಷದ ಬಾಲಕಿ ಕೈಯಲ್ಲಿ 10 ರೂ ಕೊಟ್ಟು, ಆಕೆ ಅಂಗಡಿಗೆ ಹೋಗುತ್ತಿದ್ದಂತೆಯೇ ಆಕೆಯನ್ನು ದೂಡಿ ಅತ್ಯಾಚಾರವೆಸಗಿದ ಘಟನೆ ಹಿಮಾಚಲ ಪ್ರದೇಶದ ಕುಲು ಜಿಲ್ಲೆಯಲ್ಲಿ ನಡೆದಿದೆ.

    ಈ ಘಟನೆ ಕುಲು ಜಿಲ್ಲೆಯಲ್ಲಿ ಲೋಕಸಭಾ ಚುನಾವಣೆಯ ಮತದಾನ ಕೇಂದ್ರದ ಬಳಿಯೇ ಭಾನುವಾರ ನಡೆದಿದೆ. ಘಟನೆ ಸಂಬಂಧ ಬಾಲಕಿಯ ತಾಯಿ ನೀಡಿದ ದೂರಿನಂತೆ ಪೊಲೀಸರು ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಆರೋಪಿಯನ್ನು ದೇವೇಂದ್ರ ಸಿಂಗ್ ಎಂದು ಗುರುತಿಸಲಾಗಿದ್ದು, ಈತ ಭರೇಶ್ ಗ್ರಾಮದವನು ಎನ್ನಲಾಗಿದೆ. ಜಿಲ್ಲೆಯ ಅನ್ನಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಮತದಾನ ಕೇಂದ್ರದ ಬಳಿಯ ಶಾಲಾ ಮೈದಾನದಲ್ಲಿ ಬಾಲಕಿ ಆಟವಾಡುತ್ತಿದ್ದಳು. ಈ ವೇಳೆ ಆಕೆಯನ್ನು ಕರೆದ ಆರೋಪಿ ಏಕಾಂತ ಸ್ಥಳಕ್ಕೆ ಕರೆದೊಯ್ದು ಅತ್ಯಾಚಾರ ಮಾಡಿದ್ದಾನೆ.

    ಆರೋಪಿ ಬಾಲಕಿಗೆ 10 ರೂ. ಕೊಟ್ಟು ತಿಂಡಿ ತರುವಂತೆ ಕಳುಹಿಸಿದ್ದಾನೆ. ಹೀಗಾಗಿ ಬಾಲಕಿ ಹಣ ಹಿಡಿದುಕೊಂಡು ಅಂಗಡಿಯತ್ತ ತೆರಳುತ್ತಿದ್ದಳು. ಈ ವೇಳೆ ಆರೋಪಿ ಆಕೆಯನ್ನು ಶಿಥಿಲಾವಸ್ಥೆಯಲ್ಲಿದ್ದ ಕಟ್ಟಡದೊಳಗೆ ಎಳೆದುಕೊಂಡು ಆಕೆಯನ್ನು ರೇಪ್ ಮಾಡುವ ಮೂಲಕ ತನ್ನ ಕಾಮತೃಷೆ ತೀರಿಸಿಕೊಂಡಿದ್ದಾನೆ.

    ಸಂತ್ರಸ್ತೆಯ ತಾಯಿ ಚುನಾವಣಾ ಕಾರ್ಯದಲ್ಲಿ ಬ್ಯುಸಿಯಾಗಿದ್ದು, ಬಾಲಕಿ ಆರೋಪಿಯ ಮನೆಗೆ ಆಟವಾಡಲು ತೆರಳಿರಬಹುದೆಂದು ನಂಬಿದ್ದರು. ಆದರೆ ಆತ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂಬ ವಿಚಾರ ತಿಳಿಯುತ್ತಿದ್ದಂತೆಯೇ ತಾಯಿ ನೇರವಾಗಿ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ.

    ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ವಿರುದ್ಧ ಕ್ರಮಕೈಗೊಳ್ಳುವುದಾಗಿ ಎಸ್‍ಪಿ ತೇಜಿಂದ್ರ ವರ್ಮಾ ತಿಳಿಸಿದ್ದಾರೆ.

  • ಬೆಳ್ಳಂಬೆಳಗ್ಗೆ ಸೌಂಡ್ ಮಾಡಿದ ಪೊಲೀಸ್ ರಿವಾಲ್ವರ್

    ಬೆಳ್ಳಂಬೆಳಗ್ಗೆ ಸೌಂಡ್ ಮಾಡಿದ ಪೊಲೀಸ್ ರಿವಾಲ್ವರ್

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಬೆಳ್ಳಂಬೆಳಗ್ಗೆ ಮತ್ತೆ ಪೊಲೀಸ್ ರಿವಾಲ್ವರ್ ಸದ್ದು ಮಾಡಿದೆ.

    ಸಿನೀಮೀಯ ರೀತಿಯಲ್ಲಿ ಸರಗಳ್ಳರನ್ನು ಪೊಲೀಸರು ಚೇಸ್ ಮಾಡಿದ್ದಾರೆ. ಉತ್ತರ ವಿಭಾಗದಲ್ಲಿ ಆಕ್ಟೀವ್ ಆಗಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ನಂದಿನಿ ಲೇಔಟ್, ಬಾಗಲಗುಂಟೆ, ಸೋಲದೇವನಹಳ್ಳಿ ಪೊಲೀಸರು ಬೆಳ್ಳಂಬೆಳಗ್ಗೆ ಕಾರ್ಯಾಚರಣೆಗೆ ಇಳಿದಿದ್ದರು.

    ಈ ವೇಳೆ ಚೇಸ್ ಮಾಡಿದ ಪೊಲೀಸರ ಮೇಲೆ ಸರಗಳ್ಳರು ಹಲ್ಲೆಗೆ ಮುಂದಾದರು. ಆಗ ತಕ್ಷಣ ಪೊಲೀಸರು ಸುರೇಂದ್ರ ಸಿಂಗ್, ಕರಣ್ ಗುಪ್ತಾ ಆರೋಪಿಗಳ ಕಾಲಿಗೆ ಗುಂಡು ಹಾರಿಸಿ ಸೆರೆ ಹಿಡಿದಿದ್ದಾರೆ. ಸೋಲದೇವನಹಳ್ಳಿಯ ಸಾಸಿವೆಘಟ್ಟ ಬಳಿ ಫೈರಿಂಗ್ ನಡೆದಿದೆ.

    ಫೈರಿಂಗ್ ನಡೆಸುವ ಮೊದಲು ಪೊಲೀಸರು ಎರಡು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿದ್ದರು. ಗಾಳಿಯಲ್ಲಿ ಗುಂಡು ಹಾರಿಸಿ ಎಚ್ಚರಿಸಿದರೂ ಆರೋಪಿಗಳು ಕೇಳಲಿಲ್ಲ. ಹೀಗಾಗಿ ಪೊಲೀಸರು ಆರೋಪಿಗಳ ಕಾಲಿಗೆ ಗುಂಡು ಹೊಡೆದಿದ್ದಾರೆ.

  • ಮನೆ ಮುಂದೆ ಬಂದು ಗುಂಡು ಹಾರಿಸಿದ ದುಷ್ಕರ್ಮಿಗಳು!

    ಮನೆ ಮುಂದೆ ಬಂದು ಗುಂಡು ಹಾರಿಸಿದ ದುಷ್ಕರ್ಮಿಗಳು!

    ನವದೆಹಲಿ: ವ್ಯಕ್ತಿಯೋರ್ವನ ಮೇಲೆ ನಾಲ್ವರು ದುಷ್ಕರ್ಮಿಗಳು ಮನೆ ಮುಂದೆಯೇ ಬಂದು ಏಕಾಏಕಿ ಗುಂಡು ಹಾರಿಸಿದ ಘಟನೆ ರಾಷ್ಟ್ರ ರಾಜಧಾನಿಯಲ್ಲಿ ನಡೆದಿದೆ.

    ಶುಕ್ರವಾರದ ಸಂಜೆ ಹೊತ್ತಿಗೆ ದೆಹಲಿಯ ಸೆಕ್ಟರ್-11ರ ರೋಹಿಣಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಮೂಲತಃ ದೆಹಲಿಯ ಖೇದಾ ಖರ್ದ್ ಗ್ರಾಮದವರಾದ ಮನೀಶ್ ಅವರ ಮೇಲೆ ದುಷ್ಕರ್ಮಿಗಳು ಗುಂಡು ಹಾರಿಸಿದ್ದಾರೆ. ಸಹೋದ್ಯೊಗಿಗಳ ಜೊತೆ ಹೊರಗಡೆ ಹೊರಟಿದ್ದ ಮನೀಶ್ ಕಾರನ್ನು ದುಷ್ಕರ್ಮಿಗಳು ಮತ್ತೊಂದು ವಾಹನದಲ್ಲಿ ಬಂದು ರೋಹಿಣಿ ಪ್ರದೇಶದಲ್ಲಿ ಅಡ್ಡಗಟ್ಟಿದ್ದರು. ಈ ವೇಳೆ ಕಾರಿನಿಂದ ಮನೀಶ್ ಇಳಿದು ಕೆಳಗೆ ಬಂದ ಮೇಲೆ ನಾಲ್ವರು ದುಷ್ಕರ್ಮಿಗಳು ಒಬ್ಬರ ಹಿಂದೆ ಒಬ್ಬರಂತೆ ಬಂದು ಮನೀಶ್ ಮೇಲೆ ಗುಂಡು ಹಾರಿಸಿದ್ದಾರೆ.

    ಆರೋಪಿಗಳು ಮನೀಶ್ ಮೇಲೆ ದಾಳಿ ಮಾಡಿರುವ ದೃಶ್ಯಾವಳಿಗಳು ಘಟನಾ ಸ್ಥಳದಲ್ಲಿದ್ದ ಮನೆಯೊಂದರ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸದ್ಯ ಗುಂಡೇಟು ತಿಂದಿರುವ ಗಾಯಾಳುವನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದು, ಆತನ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಪ್ರಕರಣ ಸಂಬಂಧ ಆರೋಪಿಗಳನ್ನು ಸೆರೆಹಿಡಿಯಲು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

    ವಿಡಿಯೋದಲ್ಲಿ ಗಮನಿಸಿದರೆ ಮೊದಲು ಇಬ್ಬರು ವ್ಯಕ್ತಿಗಳು ಮನೀಶ್ ಬಳಿ ಬಂದು ಗುಂಡು ಹೊಡೆಯುತ್ತಾರೆ. ಅವರ ಹಿಂದೆಯೇ ಇನ್ನಿಬ್ಬರು ಸಾಲಾಗಿ ಬಂದು ಗುಂಡು ಹಾರಿಸಿ ಅಲ್ಲಿಂದ ಎಸ್ಕೇಪ್ ಆಗಿದ್ದಾರೆ. ಈ ವೇಳೆ ಸ್ಥಳದಲ್ಲಿದ್ದ ಮಹಿಳೆಯೊಬ್ಬರು ಘಟನೆಯನ್ನು ಕಂಡು ತಮ್ಮ ಮನೆಯ ಗೇಟ್ ಮುಚ್ಚಿ ಭಯದಿಂದ ಮನೆಯೊಳಗೆ ಹೋದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.

  • 1 ಬಕೆಟ್ ನೀರಿಗಾಗಿ ಮಹಿಳೆಗೆ ಚಾಕು ಇರಿದ!

    1 ಬಕೆಟ್ ನೀರಿಗಾಗಿ ಮಹಿಳೆಗೆ ಚಾಕು ಇರಿದ!

    ನವದೆಹಲಿ: ಶೌಚಾಲಯದ ಬಾಗಿಲಲ್ಲಿ ಒಂದು ಬಕೆಟ್ ನೀರು ಇಟ್ಟು ಹೋದರು ಎಂಬ ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೋರ್ವ ನೆರೆಮನೆಯ ಮಹಿಳೆಗೆ ಚಾಕು ಇರಿದು ಕೊಲೆಗೈದ ಭಯಾನಕ ಘಟನೆ ರಾಷ್ಟ್ರ ರಾಜಧಾನಿಯಲ್ಲಿ ನಡೆದಿದೆ.

    ದೆಹಲಿಯ ರಂಗಪುರಿ ಪಹಾರಿ ಪ್ರದೇಶದಲ್ಲಿ ಶುಕ್ರವಾರದಂದು ಈ ಘಟನೆ ನಡೆದಿದೆ. ರಂಗಪುರಿ ಪಹಾರಿ ನಿವಾಸಿ ಗೋಪಾಲ್ ಸಿಂಗ್ ಅದೇ ಪ್ರದೇಶದ ರೇಖಾ ಕೌರ್ ಅವರನ್ನು ಚಾಕು ಇರಿದು ಕೊಲೆ ಮಾಡಿದ್ದಾನೆ. ಶೌಚಾಲಯದ ಬಾಗಿಲ ಮುಂದೆ ರೇಖಾ ನೀರು ತುಂಬಿದ್ದ ಬಕೆಟ್ ಇಟ್ಟು ಹೋಗಿದ್ದಾರೆಂಬ ಕಾರಣಕ್ಕೆ ಗೋಪಾಲ್ ಕೋಪಗೊಂಡಿದ್ದಾನೆ. ಬಳಿಕ ಈ ಬಗ್ಗೆ ಮಹಿಳೆ ಬಳಿ ಜಗಳವನ್ನೂ ಕೂಡ ಮಾಡಿದ್ದಾನೆ. ಆದರೆ ಕೊನೆಗೆ ಜಗಳ ತಾರಕ್ಕಕ್ಕೇರಿ ಮಹಿಳೆಗೆ ಚಾಕು ಇರಿದು ಆರೋಪಿ ಕೊಲೆ ಮಾಡಿದ್ದಾನೆ.

    ಆರೋಪಿ ಯಾವಾಗಲು ನೆರೆಹೊರೆಯವರ ಜೊತೆ ಪದೇ ಪದೇ ಜಗಳಾವಾಡುತ್ತಿದ್ದ. ಅಲ್ಲದೆ ಕೆಲ ದಿನಗಳಿಂದ ರೇಖಾ ಟ್ಯಾಂಕರ್ ನಲ್ಲಿ ಬರುತ್ತಿದ್ದ ನೀರನ್ನು ಹೆಚ್ಚು ಬಳಸುತ್ತಾರೆ ಎಂದು ಆರೋಪಿ ಕ್ಯಾತೆ ತೆಗೆದಿದ್ದ. ಅಲ್ಲದೆ ನೀರಿಗಾಗಿ ಅವರಿಬ್ಬರ ನಡುವೆ ಜಗಳ ಕೂಡ ನಡೆಯುತ್ತಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ.

    ಸದ್ಯ ಈ ಘಟನೆ ಸಂಬಂಧ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಿದ್ದಾರೆ.

  • ಏರ್‌ಪೋರ್ಟ್‌ನಲ್ಲಿ ಬರೋಬ್ಬರಿ 39.57 ಲಕ್ಷ ಮೌಲ್ಯದ ಚಿನ್ನ ಸೀಜ್!

    ಏರ್‌ಪೋರ್ಟ್‌ನಲ್ಲಿ ಬರೋಬ್ಬರಿ 39.57 ಲಕ್ಷ ಮೌಲ್ಯದ ಚಿನ್ನ ಸೀಜ್!

    ಬೆಂಗಳೂರು: ಅಕ್ರಮವಾಗಿ ಸಾಗಿಸುತ್ತಿದ್ದ ಬರೋಬ್ಬರಿ 39.57 ಲಕ್ಷ ರೂ. ಬೆಲೆ ಬಾಳುವ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆದುಕೊಂಡಿದ್ದಾರೆ.

    ಶ್ರೀಲಂಕಾ ಮೂಲದ ಮೂವರು ಹಾಗೂ ಭಾರತದ ಓರ್ವ ಅಕ್ರಮವಾಗಿ ಚಿನ್ನವನ್ನು ವಿಮಾನದಲ್ಲಿ ಸಾಗಿಸಲು ಮುಂದಾಗಿದ್ದರು. ಆದರೆ ಆರೋಪಿಗಳು ಎಷ್ಟೇ ಚಾಣಾಕ್ಷ್ಯತನ ಮಾಡಿದರು ಅಧಿಕಾರಿಗಳಿಂದ ತಪ್ಪಿಸಿಕೊಳ್ಳಲು ಆಗಲಿಲ್ಲ. ಇಂದು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಾಲ್ಕು ಮಂದಿ ಬೇರೆ ಬೇರೆಯಾಗಿ ಸುಮಾರು 1.2 ಕೆ.ಜಿ ಚಿನ್ನವನ್ನು ಸಾಗಿಸುತ್ತಿದ್ದರು. ಈ ಬಗ್ಗೆ ಮಾಹಿತಿ ಲಭ್ಯವಾದ ಹಿನ್ನೆಲೆ ಕಸ್ಟಮ್ಸ್ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.

    ಪ್ರತ್ಯೇಕ ನಾಲ್ಕು ಪ್ರಕರಣಗಳಲ್ಲಿ 39.57 ಲಕ್ಷ ಮೌಲ್ಯದ 1.2 ಕೆಜಿ ಚಿನ್ನವನ್ನ ಅಧಿಕಾರಿಗಳು ಸೀಜ್ ಮಾಡಿದ್ದಾರೆ. ಹಾಗೆಯೇ ಅಕ್ರಮವಾಗಿ ಚಿನ್ನ ಸಾಗಿಸ್ತಿದ್ದ ನಾಲ್ವರನ್ನೂ ಕೂಡ ಬಂಧಿಸಲಾಗಿದೆ.

  • ಪೊಲೀಸರ ಮೇಲೆ ಮಚ್ಚಿನಿಂದ ಹಲ್ಲೆಗೆ ಯತ್ನಿಸಿ ಗುಂಡೇಟು ತಿಂದ!

    ಪೊಲೀಸರ ಮೇಲೆ ಮಚ್ಚಿನಿಂದ ಹಲ್ಲೆಗೆ ಯತ್ನಿಸಿ ಗುಂಡೇಟು ತಿಂದ!

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ರೌಡಿಶೀಟರ್ ಒಬ್ಬನು ಪೊಲೀಸರ ಮೇಲೆಯೇ ಹಲ್ಲೆಗೆ ಯತ್ನಿಸಿದ್ದಕ್ಕೆ ಖಾಕಿ ಪಡೆ ಗುಂಡೇಟಿನ ರುಚಿ ತೋರಿಸಿದ್ದಾರೆ.

    ರಾಜಧಾನಿಯಲ್ಲಿ ಮತ್ತೆ ಪೊಲೀಸರ ಗನ್ ಸದ್ದು ಮಾಡಿದ್ದು, ರೌಡಿ ಶೀಟರ್ ವಿನೋದ್ ಅಲಿಯಾಸ್ ಪಚ್ಚೆ ಮೇಲೆ ಪೊಲೀಸರು ಫೈರಿಂಗ್ ಮಾಡಿದ್ದಾರೆ. ಅಶೋಕನಗರ ಪೊಲೀಸ್ ಠಾಣೆಯಲ್ಲಿ ರೌಡಿಶೀಟರ್ ಆಗಿದ್ದ ಪಚ್ಚಿ ರಾಬರಿ, ಸೇರಿದಂತೆ ಹಲವು ಕೊಲೆ ಯತ್ನದಲ್ಲಿ ಭಾಗಿಯಾಗಿದ್ದನು. ಹೀಗೆ ಕೊಲೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಪೊಲೀಸರು ವಿನೋದ್‍ನನ್ನು ಸೆರೆಹಿಡಿಯಲು ಬಲೆ ಬೀಸಿದ್ದರು. ಈ ವೇಳೆ ಪೊಲೀಸರ ಮೇಲೆಯೇ ಆರೋಪಿ ಹಲ್ಲೆ ಮಾಡಲು ಮುಂದಾದಾಗ ಖಾಕಿ ಪಡೆ ಶೂಟೌಟ್ ನಡೆಸಿದ್ದಾರೆ.

    ಶುಕ್ರವಾರ ರಾತ್ರಿ ಆರೋಪಿ ಬನ್ನೇರುಘಟ್ಟ ರಸ್ತೆಯಲ್ಲಿರುವ ಇಂಡಿಯನ್ ಕ್ರಿಶ್ಚಿಯನ್ ಸೆರಮನಿ ಬಳಿ ಇರುವ ಬಗ್ಗೆ ಖಚಿತ ಮಾಹಿತಿ ಪೊಲೀಸರಿಗೆ ದೊರಕಿತ್ತು. ಈ ವೇಳೆ ಸ್ಥಳಕ್ಕೆ ಬಂದ ಪೊಲೀಸರು ಸರೆಂಡರ್ ಆಗುವಂತೆ ಆರೋಪಿಗೆ ಹೇಳಿದ್ದಾರೆ. ಆದರೆ ಆತ ಪೊಲೀಸರ ಮೇಲೆಯೆ ಮಚ್ಚಿನಿಂದ ಹಲ್ಲೆ ಮಾಡಲು ಯತ್ನಿಸಿದ್ದಾನೆ. ಈ ವೇಳೆ ಅಶೋಕ ನಗರ ಇನ್ಸ್‌ಪೆಕ್ಟರ್ ಶಶಿಧರ್, ಆರೋಪಿಯ ಕಾಲಿಗೆ ಗುಂಡು ಹೊಡೆದಿದ್ದಾರೆ. ಪರಿಣಾಮ ಆರೋಪಿಯ ಬಲಗಾಲಿಗೆ ಗುಂಡು ತಗುಲಿ ಗಾಯಗೊಂಡಿದ್ದಾನೆ.

    ಸದ್ಯ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಬೌರಿಂಗ್ ಆಸ್ಪತ್ರೆಯಲ್ಲಿ ಆತನಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

  • ಸಾಂಸ್ಕೃತಿಕ ನಗರಿಯಲ್ಲಿ ಶೂಟೌಟ್ – ಮನಿ ಡಬ್ಲಿಂಗ್ ದಂಧೆಯಲ್ಲಿ ಭಾಗಿಯಾಗಿದ್ದ ಓರ್ವ ಸಾವು

    ಸಾಂಸ್ಕೃತಿಕ ನಗರಿಯಲ್ಲಿ ಶೂಟೌಟ್ – ಮನಿ ಡಬ್ಲಿಂಗ್ ದಂಧೆಯಲ್ಲಿ ಭಾಗಿಯಾಗಿದ್ದ ಓರ್ವ ಸಾವು

    ಮೈಸೂರು: ಸಾಂಸ್ಕೃತಿಕ ನಗರಿಯಲ್ಲಿ ಮನಿ ಡಬ್ಲಿಂಗ್ ದಂಧೆಯಲ್ಲಿ ತೊಡಗಿದ್ದವರ ಮೇಲೆ ಪೊಲೀಸರಿಂದ ಶೂಟೌಟ್ ನಡೆದಿದ್ದು, ಖಾಕಿ ಗುಂಡೇಟಿಗೆ ಓರ್ವ ಸಾವನ್ನಪ್ಪಿದ್ದಾನೆ.

    ನಗರದ ಹೆಬ್ಬಾಳ್ ರಿಂಗ್ ರಸ್ತೆ ಬಳಿಯ ಅಪಾರ್ಟ್‌ಮೆಂಟ್ ಮೇಲೆ ಮೈಸೂರಿನ ವಿಜಯನಗರ ಪೊಲೀಸರು ಶೂಟೌಟ್ ನಡೆಸಿದ್ದಾರೆ. ಬಾಂಬೆ ಮೂಲದ ವ್ಯಕ್ತಿಗಳು ಮನಿ ಡಬ್ಲಿಂಗ್ ದಂಧೆಯಲ್ಲಿ ತೊಡಗಿದ್ದಾರೆ ಎಂಬ ಖಚಿತ ಮಾಹಿತಿ ಲಭ್ಯವಾಗಿತ್ತು. ಹೀಗಾಗಿ ಆರೋಪಿಗಳನ್ನು ಸೆರೆಹಿಡಿಯಲು ಪೊಲೀಸರು ಫೈರಿಂಗ್ ಮಾಡಿದ್ದಾರೆ. ಈ ವೇಳೆ ಫೈರಿಂಗ್‍ನಲ್ಲಿ ಓರ್ವ ದಂಧೆಕೋರ ಸಾವನ್ನಪ್ಪಿದ್ದು, ಇನ್ನಿತರರು ಪೊಲೀಸರ ಕಣ್ತಪ್ಪಿಸಿ ಎಸ್ಕೇಪ್ ಆಗಿದ್ದಾರೆ.

    ಶೂಟೌಟ್ ಬಳಿಕ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಗಳು ಗನ್ ಸಮೇತ ನಾಪತ್ತೆಯಾಗಿದ್ದಾರೆ. ಆರೋಪಿಗಳ ಸೆರೆಗೆ ಪೊಲೀಸರು ಬಲೆ ಬೀಸಿದ್ದು, ಚೆಕ್ ಪೋಸ್ಟ್ ಗಳಲ್ಲಿ ಅಲರ್ಟ್ ಆಗಿರುವಂತೆ ಸಿಬ್ಬಂದಿಗೆ ಪೊಲೀಸ್ ಇಲಾಖೆಯಿಂದ ಸಂದೇಶ ರವಾನಿಸಲಾಗಿದೆ.

    ಸದ್ಯ ಸ್ಥಳಕ್ಕೆ ಮೈಸೂರು ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ, ಡಿಸಿಪಿ ಮುತ್ತುರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದೀಗ ಕೆ.ಆರ್.ಆಸ್ಪತ್ರೆಗೆ ಮೃತದೇಹವನ್ನು ಪೊಲೀಸರು ಕೊಂಡೊಯ್ದಿದ್ದು, ಆಸ್ಪತ್ರೆ ಸುತ್ತಲು ಪೊಲೀಸರ ಸರ್ಪಗಾವಲು ಹಾಕಲಾಗಿದೆ.

  • ಮಗನ ಮುಂದೆಯೇ ತಾಯಿಯನ್ನು ಎಳೆದೊಯ್ದು ಕೊಲೆಗೈದ ಪಾಪಿ!

    ಮಗನ ಮುಂದೆಯೇ ತಾಯಿಯನ್ನು ಎಳೆದೊಯ್ದು ಕೊಲೆಗೈದ ಪಾಪಿ!

    ಕೋಲಾರ: ಮಗನೊಂದಿಗೆ ಬರುತ್ತಿದ್ದ ಮಹಿಳೆಯನ್ನು ವ್ಯಕ್ತಿಯೋರ್ವ ಎಳೆದೊಯ್ದು ಅಮಾನುಷವಾಗಿ ಕೊಲೆಗೈದಿರುವ ಘಟನೆ ಜಿಲ್ಲೆಯ ನೀಲಗಿರಿ ತೋಪಿನಲ್ಲಿ ನಡೆದಿದೆ.

    ಜಿಲ್ಲೆಯ ಮಾಲೂರು ತಾಲೂಕು ರಾಂಪುರ ಸೊಣ್ಣಪಹಳ್ಳಿ ಬಳಿ ಇಂದು ಮಧ್ಯಾಹ್ನ ಈ ಘಟನೆ ನಡೆದಿದ್ದು, ಬೆಂಗಳೂರಿನ ಸರ್ಜಾಪುರ ಮೂಲದ ಮಂಜುಳಾ (38) ಕೊಲೆಯಾದ ದುರ್ದೈವಿ. ರಾಂಪುರದ ಮೂಲದ ಅಂಬರೀಶ್ ಎಂಬಾತನೇ ಕೊಲೆಗೈದ ಆರೋಪಿಯಾಗಿದ್ದಾನೆ. ಇಂದು ಮಧ್ಯಾಹ್ನ 2 ಗಂಟೆ ಸುಮಾರಿಗೆ ತನ್ನ 14 ವರ್ಷದ ಮಗನೊಂದಿಗೆ ದ್ವಿಚಕ್ರ ವಾಹನದಲ್ಲಿ ರಾಂಪುರಕ್ಕೆ ಮಂಜುಳಾ ಬಂದಿದ್ದಾರೆ. ಈ ವೇಳೆ ರಾಂಪುರ ಹಾಗೂ ಸೊಣ್ಣಪ್ಪನಹಳ್ಳಿ ಮಾರ್ಗ ಮಧ್ಯೆ ಮಹಿಳೆಯನ್ನು ಅಡ್ಡಗಟ್ಟಿದ ಅಂಬರೀಶ್ ನೀಲಗಿರಿ ತೋಪಿಗೆ ಎಳೆದೊಯ್ದು ಕೊಲೆ ಮಾಡಿದ್ದಾನೆ ಎಂದು ಜೊತೆಯಲ್ಲಿದ್ದ ಮಗ ಪೊಲೀಸರಿಗೆ ತಿಳಿಸಿದ್ದಾನೆ.

    ಕಳೆದ 11 ವರ್ಷಗಳ ಹಿಂದೆಯೆ ತನ್ನ ಗಂಡನನ್ನ ಕಳೆದುಕೊಂಡಿರುವ ಮಂಜುಳಾ ಸರ್ಜಾಪುರದ ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಇಂದು ಮಹಿಳೆ ಅಂಬರೀಶ್‍ನನ್ನೇ ಭೇಟಿ ಮಾಡಲು ಬಂದಿದ್ದರು ಎನ್ನಲಾಗಿದೆ. ಅಲ್ಲದೆ ಸ್ವತಃ ಅಂಬರೀಶ್ ತಾನೇ ಕೊಲೆ ಮಾಡಿರುವುದು ತಪ್ಪೊಪ್ಪಿಕೊಂಡು ಪೊಲೀಸರಿಗೆ ಶರಣಾಗಿದ್ದಾನೆ. ಆದರೆ ಕೊಲೆ ಮಾಡಿರುವುದಕ್ಕೆ ನಿಖರ ಕಾರಣವನ್ನು ಆರೋಪಿ ಬಾಯಿಬಿಟ್ಟಿಲ್ಲ.

    ಸದ್ಯ ಘಟನಾ ಸ್ಥಳಕ್ಕೆ ಎಸ್‍ಪಿ ರೋಹಿಣಿ ಕಟೋಜ್ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಮಾಲೂರು ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.