Tag: accused

  • ದರೋಡೆಗೆ ಯತ್ನಿಸುತ್ತಿದ್ದ ಕುಖ್ಯಾತ ಆರೋಪಿಗಳು ಅರೆಸ್ಟ್

    ದರೋಡೆಗೆ ಯತ್ನಿಸುತ್ತಿದ್ದ ಕುಖ್ಯಾತ ಆರೋಪಿಗಳು ಅರೆಸ್ಟ್

    ಬೆಂಗಳೂರು: ಹೈವೇಯಲ್ಲಿ ದರೋಡೆಗೆ ಯತ್ನಿಸುತ್ತಿದ್ದ ಕುಖ್ಯಾತ ಆರೋಪಿಗಳನ್ನು ಬಂಧಿಸುವಲ್ಲಿ ಹೆಬ್ಬಗೋಡಿ ಪೊಲೀಸರು ಯಶಸ್ವಿಯಾಗಿದ್ದಾರೆ.

    ಜೆಪಿ ನಗರ, ಕಾಟನ್ ಪೇಟೆ ಮತ್ತು ಮೈಕೋ ಲೇಔಟ್ ಠಾಣಾ ವ್ಯಾಪ್ತಿಯಲ್ಲಿ ಕೊಲೆ ಹಾಗೂ ದರೋಡೆ ಯತ್ನ ಪ್ರಕರಣದಲ್ಲಿ ಬೇಕಾದ ಆರೋಪಿಗಳಾದ ಪೀಟರ್, ರಾಕೇಶ್, ಮಹೇಶ್, ಅಣ್ಣ ದೊರೈ ಮತ್ತು ರಾಜೇಶ್ ಎಂಬವರನ್ನು ಬಂಧಿಸಿದ್ದಾರೆ.

    ಹೆಬ್ಬಗೋಡಿ ಪೊಲೀಸ್ ಠಾಣಾ ವ್ಯಾಪ್ತಿಗೆ ಬರುವ ಹೈವೇಯಲ್ಲಿ ಈ ದರೋಡೆಕೋರರು ಕಳ್ಳತನ ಮಾಡಲು ಹೊಂಚುಹಾಕುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಪಿಎಸ್‍ಐ ಜಗದೀಶ್ ಹಾಗೂ ತಂಡ ದಾಳಿ ಮಾಡಿದ್ದು, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಬಂಧಿತ ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ ಮಾರಕಾಸ್ತ್ರಗಳು ಹಾಗು ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಸಂಬಂಧ ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಪೊಲೀಸ್ ಠಾಣೆಯಲ್ಲೇ ಆರೋಪಿಯ ಬರ್ತ್‌ಡೇ

    ಪೊಲೀಸ್ ಠಾಣೆಯಲ್ಲೇ ಆರೋಪಿಯ ಬರ್ತ್‌ಡೇ

    ಬೆಂಗಳೂರು: ನಗರದ ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ಕೇಕ್ ತರಿಸಿ ಕೇಕ್ ಕಟ್ ಮಾಡಿಸಿ ಪೊಲೀಸರು ಆರೋಪಿಯ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ.

    ವಿದ್ಯಾರಣ್ಯಪುರ ಪೊಲೀಸರು ವಂಚನೆ ಪ್ರಕರಣದಲ್ಲಿ ಬಂಧನವಾಗಿದ್ದ, ಅಭಿಷೇಕ್(25) ನ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ. ಆರೋಪಿ ಪೊಲೀಸ್ ಠಾಣೆಯಲ್ಲಿದ್ದಾಗ ಬರ್ತ್‌ಡೇ ಎಂದು ತಿಳಿದಿದೆ. ನಂತರ ಪೊಲೀಸರು ಆತನಿಂದ ಕೇಕ್ ಕಟ್ ಮಾಡಿಸಿ ಹುಟ್ಟುಹಬ್ಬದ ಶುಭಾಶಯವನ್ನು ತಿಳಿಸಿದ್ದಾರೆ. ಇದರಿಂದ ಪೊಲೀಸರ ವರ್ತನೆ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

    ಆರೋಪಿ ಅಭೀಷೇಕ್ ವಿದ್ಯಾರಣ್ಯಪುರ ಕ್ರೈಂ ಪಿಸಿ ಎಂದುಕೊಂಡು ವಂಚಿಸುತ್ತಿದ್ದನು. ಅಷ್ಟೇ ಅಲ್ಲದೇ ಬಂಧಿತ ಅಭಿಷೇಕ್ ಕಾರು ಮಾಲೀಕರೊಬ್ಬರಿಂದ 10 ಸಾವಿರ ಸುಲಿಗೆ ಮಾಡಿದ್ದನು. ಇಂತಹ ಆರೋಪಿಯನ್ನ ಬಂಧಿಸಿ ಪೊಲೀಸ್ ಠಾಣೆಯಲ್ಲಿ ಬರ್ತ್‌ಡೇ ಪಾರ್ಟಿಯನ್ನು ಪೊಲೀಸರು ಮಾಡಿದ್ದಾರೆ. ಇದರಿಂದ ದರೋಡೆಕೊರರಿಗೆ, ಕೊಲೆ ಪಾತಕರಿಗೆ ಭಯ ಹುಟ್ಟಿಸುವಂತ ಕೆಲಸ ಮಾಡಬೇಕಿರುವ ಖಾಕಿ ಪೊಲೀಸ್ ಠಾಣೆಯನ್ನ ವಂಚಕರ ಬರ್ತ್‌ಡೇ ವೇದಿಕೆಯನ್ನಾಗಿ ಮಾಡಿಕೊಟ್ಟಿದ್ದು ಎಷ್ಟು ಸರಿ ಎಂದು ಪ್ರಶ್ನೆ ಎದ್ದಿದೆ.

  • ನಡುರಸ್ತೆಯಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯ ಬರ್ಬರ ಕೊಲೆ

    ನಡುರಸ್ತೆಯಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯ ಬರ್ಬರ ಕೊಲೆ

    ವಿಜಯಪುರ: ಬೆಳ್ಳಂಬೆಳಗ್ಗೆ ವ್ಯಕ್ತಿಯೋರ್ವನನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿರುವ ಭಯಾನಕ ಘಟನೆ ನಗರದ ಶಿಖಾರಖಾನೆಯಲ್ಲಿ ನಡೆದಿದೆ.

    ಸುರೇಶ್ ಬೆಡಸೂರ್ (45) ಕೊಲೆಯಾದ ವ್ಯಕ್ತಿ. ಸುರೇಶ್‍ನನ್ನು ರಸ್ತೆಯಲ್ಲಿಯೇ ಮಾರಕಾಸ್ತ್ರಗಳಿಂದ ಕೊಚ್ಚಿ, ಆತನ ತಲೆಯನ್ನು ಕಲ್ಲಿನಿಂದ ಜಜ್ಜಿ ಭೀಕರವಾಗಿ ಕೊಲೆಗೈಯಲಾಗಿದೆ. ಬೆಳ್ಳಂಬೆಳಗ್ಗೆ ರಸ್ತೆ ಮೇಲೆ ಸುರೇಶ್ ಮೃತದೇಹ ಕಂಡು ಭಯಗೊಂಡ ಸ್ಥಳೀಯರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

    ಕೊಲೆ ಮಾಡಿದವರು ಯಾರು? ಕೊಲೆಗೆ ಕಾರಣವೇನು ಎಂಬ ಬಗ್ಗೆ ನಿಖರ ಮಾಹಿತಿ ದೊರಕಿಲ್ಲ. ಎಪಿಎಂಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಸದ್ಯ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  • ಬಂಧಿಸಿದ್ದು ಗಾಂಜಾ ಮಾರಾಟಕ್ಕೆ – ಬೆಳಕಿಗೆ ಬಂತು ಬೃಹತ್ ದ್ವಿಚಕ್ರ ಕಳ್ಳತನ ಜಾಲ

    ಬಂಧಿಸಿದ್ದು ಗಾಂಜಾ ಮಾರಾಟಕ್ಕೆ – ಬೆಳಕಿಗೆ ಬಂತು ಬೃಹತ್ ದ್ವಿಚಕ್ರ ಕಳ್ಳತನ ಜಾಲ

    ಬೆಂಗಳೂರು: ಗಾಂಜಾ ಮಾರಾಟದೊಂದಿಗೆ, ದ್ವಿಚಕ್ರ ವಾಹನಗಳನ್ನು ಕದಿಯುತ್ತಿದ್ದ ಗ್ಯಾಂಗ್ ಸದಸ್ಯರನ್ನು ಉತ್ತರ ವಿಭಾಗದ ಪೊಲೀಸರು ಬಂಧಿಸಿದ್ದಾರೆ.

    ಈ ಸಂಬಂಧ ತಮಿಳುನಾಡು ಮೂಲದ ಪರಮೇಶ್, ಸೈಯ್ಯದ್ ಫಾರೂಕ್, ಬಸವರಾಜ್, ಬಾಲಾಜಿ, ತಿಮ್ಮರಾಜು ಮತ್ತು ಅರುಣ್ ಹಾಗೂ ಬೆಂಗಳೂರು ಮೂಲದ ಸೈಯ್ಯದ್ ಸಾಧಿಕ್ ಮತ್ತು ಸೈಯ್ಯದ್ ದಾವುದ್ ಬಂಧಿತ ಆರೋಪಿಗಳು.

    ಬೆಂಗಳೂರಿನ ನಂದಿನಿ ಲೇಔಟ್ ಠಾಣಾ ವ್ಯಾಪ್ತಿಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ನಂತರ ಆರೋಪಿಗಳನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ದ್ವಿಚಕ್ರ ವಾಹನಗಳನ್ನು ಸಹ ಕಳ್ಳತನ ಮಾಡುತ್ತಿದ್ದೇವು ಎಂದು ಬಾಯಿ ಬಿಟ್ಟಿದ್ದಾರೆ. ಬಂಧಿತರಿಂದ ಒಟ್ಟು 25 ದ್ವಿಚಕ್ರ ವಾಹನಗಳು, 400 ಗ್ರಾಂ ಗಾಂಜಾವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಬೆಂಗಳೂರು ನಗರ ಮತ್ತು ಗ್ರಾಮಾಂತರ ವ್ಯಾಪ್ತಿಯಲ್ಲಿ 11 ದ್ವಿಚಕ್ರ ವಾಹನಗಳನ್ನು ಆರೋಪಿಗಳು ಕದ್ದಿದ್ದರು. ಇನ್ನೂ ಉಳಿದ 14 ದ್ವಿಚಕ್ರ ವಾಹನಗಳ ಮಾಲೀಕರ ಪತ್ತೆ ಕಾರ್ಯದಲ್ಲಿ ಪೊಲೀಸರು ತೊಡಗಿದ್ದಾರೆ.

  • ಕೊಲೆ ಆರೋಪಿಗಳನ್ನು ಬಂಧಿಸಿ, ರಸ್ತೆಯಲ್ಲಿ ಮೆರವಣಿಗೆ ಮಾಡಿದ ಪೊಲೀಸರು

    ಕೊಲೆ ಆರೋಪಿಗಳನ್ನು ಬಂಧಿಸಿ, ರಸ್ತೆಯಲ್ಲಿ ಮೆರವಣಿಗೆ ಮಾಡಿದ ಪೊಲೀಸರು

    ಭೋಪಾಲ್: 20 ವರ್ಷದ ಯುವಕನೋರ್ವನನ್ನು ಬರ್ಬರವಾಗಿ ಕೊಲೆ ಮಾಡಿದ್ದ ಆರೋಪದ ಮೇಲೆ ಇಬ್ಬರನ್ನು ಬಂಧಿಸಿರುವ ಇಂದೋರ್ ಪೊಲೀಸರು ರಸ್ತೆಗಳಲ್ಲಿ ಮೆರವಣಿಗೆ ಮಾಡಿಸಿದ್ದಾರೆ.

    ಜುಲೈ 22ರ ರಾತ್ರಿ ಇಂದೋರ್‍ನ ನಿವಾಸಿ ಅರ್ಪಿತ್ ಕೊಲೆ ನಡೆದಿತ್ತು. ಈ ಕೊಲೆ ಆರೋಪಿಗಳಾದ ರಾಜ ಕಚೋರಿ ಮತ್ತು ಆಶಿಶ್ ಶರ್ಮಾರನ್ನು ಮಂಗಳವಾರ ಪೊಲೀಸರು ಬಂಧಿಸಿದ್ದರು. ಆದರೆ ಈ ಆರೋಪಿಗಳನ್ನು ಸುಮ್ಮನೆ ಬಿಡದೇ ರಸ್ತೆಯಲ್ಲಿ ಪೊಲೀಸರು ಮೆರವಣಿಗೆ ಮಾಡಿಸಿದ್ದಾರೆ.

    ಇಂದೋರಿನ ನಂದಾ ನಗರದಲ್ಲಿ ಮುಂಜಾನೆ 1 ಗಂಟೆ ಸುಮಾರಿಗೆ ಅರ್ಪಿತ್‍ಗೆ ಆರೋಪಿಗಳು ಚಾಕು ಇರಿದಿದ್ದರು. ಕೆಲವು ಗಂಟೆಗಳ ನಂತರ ಯುವಕ ಸಾವನ್ನಪ್ಪಿದ್ದನು. ಈ ಸಂಬಂಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 307, 323, 294, 506 ಮತ್ತು 302ರ ಅಡಿಯಲ್ಲಿ ಪರದೇಸಿಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಇಂದೋರ್ ಎಸ್‍ಎಸ್‍ಪಿ ರುಚಿ ವರ್ಧನ್ ಮಿಶ್ರಾ ತಿಳಿಸಿದ್ದಾರೆ.

    ಕೊಲೆಯಾಗಿರುವ ಅರ್ಪಿತ್ ಕ್ರಿಮಿನಲ್ ಹಿನ್ನೆಲೆ ಹೊಂದಿದ್ದನು. ಹಣದ ವಿಚಾರಕ್ಕೆ ಆಶಿಶ್ ಹಾಗೂ ಅರ್ಪಿತ್ ನಡುವೆ ಜಗಳ ನಡೆದಿತ್ತು. ಹಾಗೆಯೇ ರಾಜ ಕಚೋರಿಗೂ ಕೂಡ ಅರ್ಪಿತ್ ಮೇಲೆ ದ್ವೇಷವಿತ್ತು. ಅಲ್ಲದೇ ಈ ಆರೋಪಿಗಳನ್ನು ಬಿಟ್ಟು ಲೋಕೇಶ್, ಅಶು, ವತನ್ ಈ ಮೂವರೊಟ್ಟಿಗೆ ಕೂಡ ಅರ್ಪಿತ್ ದ್ವೇಷ ಹೊಂದಿದ್ದನು.

    ಆರೋಪಿಗಳು ಈ ಕೃತ್ಯ ಎಸಗುವ ಮುನ್ನ ಮೂರು ಬಾರಿ ಅರ್ಪಿತ್ ಕೊಲೆ ಮಾಡಲು ಯತ್ನಿಸಿದ್ದರು. ಆದರೆ ವಿಫಲರಾಗಿದ್ದರು ಎಂದು ಮಿಶ್ರಾ ಅವರು ಹೇಳಿದ್ದಾರೆ.

    ಆ ಬಳಿಕ ಲೋಕೇಶ್ ಮನೆಯಲ್ಲಿ ಆರೋಪಿಗಳು ಅರ್ಪಿತ್ ಕೊಲೆಗೆ ಸಂಚು ರೂಪಿಸಿದ್ದರು. ಅವರಿಗೆ ಲೋಕೇಶ್ ಚಾಕು ತಂದು ಕೊಟ್ಟು ಕೊಲೆ ಮಾಡಲು ಸಹಾಯ ಮಾಡಿದ್ದನು. ನಂತರ ಆರೋಪಿಗಳು ಕರೆ ಮಾಡಿ ಅರ್ಪಿತ್ ನನ್ನು ಕರೆಸಿಕೊಂಡು ಚಾಕು ಇರಿದು ಕೊಲೆ ಮಾಡಿದ್ದಾರೆ ಎಂಬುದು ತಿಳಿದು ಬಂದಿದೆ.

  • ಖಾಕಿ ವಿರುದ್ಧ ತಿರುಗಿಬಿದ್ದ ರೌಡಿಯ ಮೇಲೆ ಫೈರಿಂಗ್

    ಖಾಕಿ ವಿರುದ್ಧ ತಿರುಗಿಬಿದ್ದ ರೌಡಿಯ ಮೇಲೆ ಫೈರಿಂಗ್

    ಬೆಂಗಳೂರು: ಬಂಧಿಸಲು ಹೋಗಿದ್ದ ಪೊಲೀಸರ ವಿರುದ್ಧವೇ ರೌಡಿಶೀಟರ್ ತಿರುಗಿಬಿದ್ದ ಹಿನ್ನೆಲೆ ಆತನ ಕಾಲಿಗೆ ಖಾಕಿಪಡೆ ಗುಂಡು ಹೊಡೆದ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.

    ರೌಡಿಶೀಟರ್ ಅನಿಲ್ ಅಲಿಯಾಸ್ ಚಾಂಡಲ್ ಕಾಲಿಗೆ ಪೊಲೀಸರು ಗುಂಡು ಹೊಡೆದಿದ್ದಾರೆ. ಚಾಮರಾಜಪೇಟೆ ಠಾಣೆಯ ಇನ್ಸ್‌ಪೆಕ್ಟರ್ ಕುಮಾರಸ್ವಾಮಿ ಅವರು ರೌಡಿಶೀಟರ್ ಮೇಲೆ ಫೈರಿಂಗ್ ಮಾಡಿದ್ದಾರೆ. ಕಾಟನ್ ಪೇಟೆಯ ವೆಟರ್ನರಿ ಆಸ್ಪತ್ರೆ ಬಳಿ ಈ ಘಟನೆ ನಡೆದಿದ್ದು, ಕೊಲೆ, ಕೊಲೆಯತ್ನ ಸೇರಿದಂತೆ ಎಂಟಕ್ಕೂ ಹೆಚ್ಚು ಪ್ರಕರಣಗಳಲ್ಲಿ ಅನಿಲ್ ಶಾಮಿಲಾಗಿದ್ದನು ಎನ್ನಲಾಗಿದೆ.

    ತಡರಾತ್ರಿ ಅನಿಲ್ ಬಗ್ಗೆ ಖಚಿತ ಮಾಹಿತಿ ದೊರಕಿದ ಬಳಿಕ ಆತನನ್ನು ಪೊಲೀಸರು ಸೆರೆಹಿಡಿಯಲು ತೆರಳಿದ್ದರು. ಈ ವೇಳೆ ತಪ್ಪಿಸಿಕೊಳ್ಳಲು ಯತ್ನಿಸಿದ ಅನಿಲ್ ಪೊಲೀಸರ ಮೇಲೆ ತಿರುಗಿಬಿದ್ದಿದ್ದಾನೆ. ಆಗ ಆತ್ಮರಕ್ಷಣೆಗಾಗಿ ಇನ್ಸ್‌ಪೆಕ್ಟರ್ ಕುಮಾರಸ್ವಾಮಿ ಅವರು ಫೈರಿಂಗ್ ಮಾಡಿದ್ದಾರೆ.

    ಅನಿಲ್ ಕಾಲಿಗೆ ಗುಂಡು ತಗಲಿದ್ದು, ಸದ್ಯ ಆತನನ್ನು ಬಂಧಿಸಿದ ಪೊಲೀಸರು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಿದ್ದಾರೆ.

  • ವ್ಯಾಸರಾಜರ ವೃಂದಾವನ ಧ್ವಂಸ ಪ್ರಕರಣ- 5 ಮಂದಿಯ ಬಂಧನ

    ವ್ಯಾಸರಾಜರ ವೃಂದಾವನ ಧ್ವಂಸ ಪ್ರಕರಣ- 5 ಮಂದಿಯ ಬಂಧನ

    ಕೊಪ್ಪಳ: ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗೊಂದಿ ಬಳಿಯಿರುವ ವ್ಯಾಸರಾಯರ ವೃಂದಾವನಕ್ಕೆ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ 5 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ.

    ಪೊಲ್ಲಾರಿ, ಡಿ ಮನೋಹರ, ಕೆ.ಕುಮ್ಮಟಕೇಶವ, ಬಿ ವಿಜಯಕುಮಾರ್ ಹಾಗೂ ಟಿ ಬಾಲರನಸಯ್ಯ ಬಂಧಿತ ಆರೋಪಿಗಳು. ಇವರೆಲ್ಲರು ಆಂಧ್ರಪ್ರದೇಶದ ಅನಂತಪುರ್ ಜಿಲ್ಲೆಯ ತಾಡಪತ್ರಿ ನಿವಾಸಿಗಳು ಎಂದು ಹೇಳಲಾಗುತ್ತಿದೆ.

    ಮೊಬೈಲ್ ಸಿಗ್ನಲ್ ಆಧಾರದ ಮೇಲೆ ಆರೋಪಿಗಳನ್ನು ಬಂಧಿಸಲಾಗಿದ್ದು, ಬಂಧಿತರಿಂದ ವ್ಯಾಸರಾಜರ ವೃಂದಾವನ ಧ್ವಂಸಕ್ಕೆ ಬಳಸಿದ ಹಾರೆ, ಗುದ್ದಲಿ, ಇನ್ನೋವಾ ಕಾರು ವಶಕ್ಕೆ ಪಡೆಯಲಾಗಿದೆ.

    ನಿಧಿಗಾಗಿ ಕಳೆದ 17 ರ ತಡರಾತ್ರಿ ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಆನೆಗೊಂದಿಯ ನವವೃಂದಾವನದಲ್ಲಿ ಧ್ವಂಸ ಮಾಡಲಾಗಿತ್ತು. ವ್ಯಾಸರಾಜದ ವೃಂದಾವನ ಕಿತ್ತು ಹಾಕಿದ್ದಕ್ಕೆ ರಾಜ್ಯಾದ್ಯಾಂತ ಖಂಡನೆ ವ್ಯಕ್ತವಾಗಿತ್ತು. ವಿವಿಧ ಮಠಾಧೀಶರು ಆರೋಪಿಗಳನ್ನ ಬಂಧಿಸುವಂತೆ ಅಗ್ರಹಿಸಿದ್ದರು. ಹಾಗೆಯೇ ಆರೋಪಿಗಳ ಬಂಧನಕ್ಕೆ ಕೊಪ್ಪಳ ಪೊಲೀಸ್ ವರಿಷ್ಠ ಅಧಿಕಾರಿ ವಿಶೇಷ ತಂಡ ರಚನೆ ಮಾಡಿದ್ದು, ಇದೀಗ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

  • ಅತ್ಯಾಚಾರಿ ಆರೋಪಿಯನ್ನು ಸೌದಿಯಿಂದ ಎಳೆತಂದ ಕೇರಳದ ಲೇಡಿ ಐಪಿಎಸ್

    ಅತ್ಯಾಚಾರಿ ಆರೋಪಿಯನ್ನು ಸೌದಿಯಿಂದ ಎಳೆತಂದ ಕೇರಳದ ಲೇಡಿ ಐಪಿಎಸ್

    ತಿರುವನಂತಪುರಂ: ಕೇರಳದ ಲೇಡಿ ಐಪಿಎಸ್ ಅಧಿಕಾರಿಯೊಬ್ಬರು ಅತ್ಯಾಚಾರ ಆರೋಪಿಯನ್ನು ಸೌದಿ ಅರೇಬಿಯಾದಿಂದ ಭಾರತಕ್ಕೆ ಎಳೆ ತಂದಿದ್ದಾರೆ.

    ಸುನೀಲ್ ಕುಮಾರ್ ಅತ್ಯಾಚಾರವೆಸಗಿದ ಆರೋಪಿ. ಸುನೀಲ್ ಕುಮಾರ್ ಮೂಲತಃ ಕೊಲ್ಲಂ ನಿವಾಸಿಯಾಗಿದ್ದು, ಸೌದಿಯಲ್ಲಿ ಕೆಲಸ ಮಾಡುತ್ತಿದ್ದನು. ಸುನೀಲ್ 2017ರಲ್ಲಿ ರಜೆಗೆಂದು ಕೊಲ್ಲಂಗೆ ಬಂದಿದ್ದನು. ಈ ವೇಳೆ ಆತ ತನ್ನ ಸ್ನೇಹಿತನ 13 ವರ್ಷದ ಮಗಳ ಮೇಲೆ 3 ತಿಂಗಳ ಕಾಲ ನಿರಂತರವಾಗಿ ಅತ್ಯಾಚಾರ ಎಸಗಿದ್ದ.

    ಅಪ್ರಾಪ್ತೆ ಈ ವಿಷಯವನ್ನು ತನ್ನ ಪೋಷಕರಿಗೆ ತಿಳಿಸಿದ್ದಳು. ಆಗ ಪೋಷಕರು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರು. ದೂರು ದಾಖಲಿಸಿಕೊಂಡ ಪೊಲೀಸರು ಲುಕೌಟ್ ನೋಟಿಸ್ ಜಾರಿ ಮಾಡಿದ್ದರು. ಅಷ್ಟರಲ್ಲಿ ಆರೋಪಿ ಸುನೀಲ್ ಸೌದಿ ಅರೇಬಿಯಾಗೆ ಪರಾರಿ ಆಗಿದ್ದನು. ಇದಾದ ಬಳಿಕ ಪೊಲೀಸರು ಈ ಪ್ರಕರಣದ ಬಗ್ಗೆ ಹೆಚ್ಚು ಗಮನ ಕೊಡಲಿಲ್ಲ. ಬಳಿಕ ಅಪ್ರಾಪ್ತೆ ಆತ್ಮಹತ್ಯೆ ಮಾಡಿಕೊಂಡಿದ್ದಳು. ಈ ಮೊದಲು ಆರೋಪಿಯನ್ನು ಬಾಲಕಿಯ ಕುಟುಂಬಕ್ಕೆ ಪರಿಚಯಿಸಿದ್ದ ವ್ಯಕ್ತಿ ಕೂಡ ಆತ್ಮಹತ್ಯೆಗೆ ಶರಣಾಗಿದ್ದನು.

    2019 ಜೂನ್ ತಿಂಗಳಿನಲ್ಲಿ ಮೇರಿನ್ ಜೋಸೆಫ್ ಕೊಲ್ಲಂನ ಪೊಲೀಸ್ ಆಯುಕ್ತರಾಗಿ ನೇಮಕಗೊಂಡರು. ಅಧಿಕಾರ ಸ್ವೀಕರಿಸುತ್ತಿದ್ದಂತೆ ಮೇರಿನ್ ಅವರು ಮಕ್ಕಳು ಮತ್ತು ಮಹಿಳೆಯರಿಗೆ ಸಂಬಂಧಿಸಿದ್ದ ಬಾಕಿ ಉಳಿದಿದ್ದ ಫೈಲ್ ತರಿಸಿಕೊಂಡಿದ್ದರು. ಈ ಬಗ್ಗೆ ಮಾತನಾಡಿದ ಅವರು, ನಾನು ಈ ಪ್ರಕರಣವನ್ನು ನೋಡಿದೆ. ಆಗ ಆರೋಪಿ ಅತ್ಯಾಚಾರವೆಸಗಿ 2 ವರ್ಷಗಳ ಕಾಲ ತಲೆಮರೆಸಿಕೊಂಡಿದ್ದಾನೆ ಎಂಬುದು ತಿಳಿಯಿತು. ಬಳಿಕ ಈ ಪ್ರಕರಣ ತನಿಖೆ ನಿಂತು ಹೋಗಿತ್ತು ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕುತ್ತಿದ್ದರು ಎಂದರು.

    2017ರಲ್ಲಿ ಆರೋಪಿ ಸುನೀಲ್‍ಗೆ ಇಂಟರ್ ಪೋಲ್ ನೋಟಿಸ್ ನೀಡಲಾಗಿತ್ತು. ಆದರೆ ಪ್ರಕರಣ ಮುಂದುವರಿಯಲಿಲ್ಲ. ಇಂಟರ್ ಪೋಲ್ ನೋಟಿಸ್ ನೀಡಿದ್ದರೂ ಅನೇಕ ಪ್ರಕರಣ ಮುಂದುವರೆಯಲ್ಲ. ಏಕೆಂದರೆ ಇದಕ್ಕೆ ಆ ದೇಶದಿಂದ ನಿರಂತರ ಸಹಕಾರ ಹಾಗೂ ಫಾಲೋ ಅಪ್ ಬೇಕಾಗುತ್ತದೆ. 2010ರಲ್ಲಿ ಪ್ರಧಾನಿಯಾಗಿದ್ದ ಮನ್‍ಮೋಹನ್ ಸಿಂಗ್ ಅವರು ಸೌದಿಯ ದೊರೆ ಅಬ್ದುಲ ಜೊತೆ ಭಾರತ- ಸೌದಿ ಹಸ್ತಾಂತರ ಒಪ್ಪಂದ ಸಹಿ ಮಾಡಿತ್ತು. ಆ ನಂತರ ಕೇರಳದ ವಾಂಟೆಡ್ ಕ್ರಿಮಿನಲ್‍ಗಳು ಸೌದಿಗೆ ಪರಾರಿಯಾಗಿದ್ದರು. ಆದರೆ ಆ ಆರೋಪಿಗಳ ಹಸ್ತಾಂತರ ಆಗಲಿಲ್ಲ. ಕೆಲವು ದಿನಗಳ ಹಿಂದೆ ಸುನೀಲ್‍ನನ್ನು ಕಸ್ಟಡಿಗೆ ತೆಗೆದುಕೊಂಡಿದ್ದೇವೆ ಎಂದು ಸೌದಿ ಪೊಲೀಸರು ತಿಳಿಸಿದ್ದರು. ಮರೀನ್ ಅವರು ಜೂನಿಯರ್ ಅಧಿಕಾರಿಯನ್ನು ಕಳುಹಿಸುವ ಬದಲು ಸ್ವತಃ ತಾವೇ ದುಬೈಗೆ ಹೋಗಿದ್ದರು.

    ಆರೋಪಿಯನ್ನು ಕರೆತಂದ ಬಳಿಕ ಮಾತನಾಡಿದ ಮರೀನ್, ನಾವು ಮೊದಲ ಬಾರಿಗೆ ಇಂತಹ ಹಸ್ತಾಂತರವನ್ನು ಮಾಡುತ್ತಿದ್ದೇವೆ. ಅದು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಕಲಿಯಲು ನಾನು ಬಯಸಿದ್ದೆ. ಅಲ್ಲದೆ ಇದರ ಬಗ್ಗೆ ನನ್ನ ತಂಡದ ಜೊತೆ ಹಂಚಿಕೊಳ್ಳಬಹುದು ಎಂದು ಎನಿಸಿತ್ತು. ಇದಕ್ಕೆ ಸಾಕಷ್ಟು ಪೇಪರ್ ಕೆಲಸಗಳು ಇದ್ದವು. ಆರೋಪಿಯನ್ನು ಅಲ್ಲಿಂದ ಕರೆ ತರಲು ದಾಖಲೆ ಕೂಡ ಮಾಡಬೇಕಿತ್ತು. ಹಾಗಾಗಿ ನಾನು ಸೌದಿಗೆ ಹೋಗಲು ನಿರ್ಧರಿಸಿದೆ. ಮಹಿಳೆಯರು ಹಾಗೂ ಮಕ್ಕಳನ್ನು ಒಳಗೊಂಡಿರುವ ಪ್ರಕರಣದ ಬಗ್ಗೆ ಕೆಲಸ ಮಾಡಲು ನನಗೆ ಇಷ್ಟ. ಅಲ್ಲದೆ ಆರೋಪಿಯನ್ನು ಕರೆತಂದು ವಿಚಾರಣೆ ನಡೆಸಬೇಕು ಎಂದು ನಿರ್ಧರಿಸಿದೆ. ಸುನೀಲ್ ಕುಮಾರ್ ಕೇರಳದಲ್ಲಿ ನಡೆದ ಅಪರಾಧಕ್ಕಾಗಿ ಹಸ್ತಾಂತರಿಸಲ್ಪಟ್ಟ ಮೊದಲ ವ್ಯಕ್ತಿ ಎಂದು ಹೇಳಿದ್ದಾರೆ.

  • ಆರೋಪಿಯ ಕಿರುಕುಳಕ್ಕೆ ಬೇಸತ್ತು ಮಧು ಪತ್ತಾರ್ ಆತ್ಮಹತ್ಯೆ – ಸಿಐಡಿಯಿಂದ ಚಾರ್ಜ್ ಶೀಟ್ ಸಲ್ಲಿಕೆ

    ಆರೋಪಿಯ ಕಿರುಕುಳಕ್ಕೆ ಬೇಸತ್ತು ಮಧು ಪತ್ತಾರ್ ಆತ್ಮಹತ್ಯೆ – ಸಿಐಡಿಯಿಂದ ಚಾರ್ಜ್ ಶೀಟ್ ಸಲ್ಲಿಕೆ

    ರಾಯಚೂರು: ಭಾರೀ ಸಂಚಲನ ಮೂಡಿಸಿದ್ದ ರಾಯಚೂರು ಎಂಜಿನಿಯರಿಂಗ್ ವಿದ್ಯಾರ್ಥಿನಿ ಮಧು ಪತ್ತಾರ್ ಸಾವು ಪ್ರಕರಣದಲ್ಲಿ ಸಿಐಡಿ ಪೊಲೀಸರು ನ್ಯಾಯಾಲಯಕ್ಕೆ ಆರೋಪಿ ಸುದರ್ಶನ್ ಯಾದವ್ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.

    ಆರೋಪಿ ಯುವತಿಗೆ ಕಿರುಕುಳ ಹಾಗೂ ಆತ್ಮಹತ್ಯೆಗೆ ಮಾಡಿಕೊಳ್ಳಲು ಪ್ರಚೋದನೆ ನೀಡಿದ್ದಾನೆ ಎಂದು ದೋಷಾರೋಪಣೆ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ. ಸುಮಾರು ಒಂದು ಸಾವಿರ ಪುಟಗಳ ದೋಷಾರೋಪಣೆ ಪಟ್ಟಿಯಲ್ಲಿ ಆತ್ಮಹತ್ಯೆಗೆ ಪ್ರಚೋದನೆ, ಕಿರುಕುಳ, ಅಡ್ಡಗಟ್ಟಿ ಹಲ್ಲೆ ಮಾಡಿದ್ದ ಎಂದು ಆರೋಪಗಳಿವೆ. ಸುಮಾರು 60 ಸಾಕ್ಷಿ, 45 ದಾಖಲೆಗಳನ್ನ ರಾಯಚೂರಿನ 3 ನೇ ಹೆಚ್ಚುವರಿ ಜೆಎಂಎಫ್‍ಸಿ ನ್ಯಾಯಾಲಯಕ್ಕೆ ಸಿಐಡಿ ಪೊಲೀಸರು ಸಲ್ಲಿಸಿದ್ದಾರೆ.

    ವಿದ್ಯಾರ್ಥಿನಿ ಶವ ಕೆಲದಿನಗಳಾದ ಮೇಲೆ ಪತ್ತೆಯಾದ ಹಿನ್ನೆಲೆ ಕಪ್ಪುಬಣ್ಣಕ್ಕೆ ತಿರುಗಿದೆ, ಯಾವುದೇ ಸುಟ್ಟಗಾಯಗಳಿಲ್ಲದಿರುವುದು ಮರಣೋತ್ತರ ಪರೀಕ್ಷೆಯಲ್ಲಿ ಬಯಲಾಗಿದೆ ಎನ್ನುವ ಮಾಹಿತಿಯನ್ನ ಸಿಐಡಿ ನ್ಯಾಯಾಲಯಕ್ಕೆ ನೀಡಿದೆ. ಆರೋಪಿ ಸುದರ್ಶನ್ ಕಳೆದ 90 ದಿನಗಳಿಂದ ನ್ಯಾಯಾಂಗ ಬಂಧನದಲ್ಲಿದ್ದಾನೆ.

    ಪಿಯುಸಿಯಲ್ಲಿ ಸಹಪಾಠಿಯಾಗಿದ್ದ ಮಧು ಹಾಗೂ ಸುದರ್ಶನ ಕಳೆದ ಐದು ವರ್ಷಗಳಿಂದ ಪ್ರೀತಿಸುತ್ತಿದ್ದರು. ಆದ್ರೆ ಮಧು ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ಕೆಲ ತಿಂಗಳಿಂದ ಸುದರ್ಶನ್ ಮಧು ನಡವಳಿಕೆ ಬಗ್ಗೆ ಸಂಶಯಪಟ್ಟು ಕಿರುಕುಳ ಕೊಡುತ್ತಿದ್ದನು. ಇದರಿಂದ ವಿದ್ಯಾರ್ಥಿನಿ ನೊಂದಿದ್ದಳು. ಹೀಗಾಗಿ ಆರೋಪಿಯಿಂದ ಮಧು ಅಂತರ ಕಾಯ್ದುಕೊಂಡಿದ್ದಳು.

    ಕಳೆದ ಏ.13ರಂದು ಮಧು ಮನೆಯಿಂದ ಕಾಲೇಜಿಗೆ ತೆರಳುತ್ತಿದ್ದಾಗ ದಾರಿ ಮಧ್ಯೆ ಸುದರ್ಶನ್ ಆಕೆಯ ಜೊತೆ ಜಗಳವಾಡಿದ್ದನು. ಆಗ ಸಾರ್ವಜನಿಕರು ಜಗಳ ಬಿಡಿಸಿ ಕಳುಹಿಸಿದ್ದರು. ಆ ಬಳಿಕ ಅಲ್ಲಿಂದ ಮಧು ನೇರವಾಗಿ ತಾನು ಓದುತ್ತಿದ್ದ ನವೋದಯ ಕಾಲೇಜಿನ ಆವರಣಕ್ಕೆ ಹೋಗಿದ್ದಳು. ಆದರೆ ಮಧುವನ್ನು ಹಿಂಬಾಲಿಸಿಕೊಂಡು ಬಂದಿದ್ದ ಆರೋಪಿ ಕಾಲೇಜಿನ ಆವರಣದ ಪಾರ್ಕಿಂಗ್‍ನಲ್ಲಿ ಆಕೆಯ ದ್ವಿಚಕ್ರ ವಾಹನದ ಕೀ ಮತ್ತು ಮೊಬೈಲ್ ಕಸಿದುಕೊಂಡಿದ್ದನು. ನೀನು ನನ್ನನ್ನೇ ಪ್ರೀತಿಸಬೇಕು, ಇಲ್ಲದಿದ್ದರೆ ನಿನ್ನನ್ನು ಸುಮ್ಮನೆ ಬಿಡುವುದಿಲ್ಲ ಎಂದು ಹೆದರಿಸಿದ್ದನು. ಸುದರ್ಶನ್ ಕಿರುಕುಳದಿಂದ ಬೇಸತ್ತ ಮಧು ನೇರವಾಗಿ ಕಾಲೇಜು ಆವರಣದಿಂದ ನಿರ್ಜನ ಪ್ರದೇಶಕ್ಕೆ ಹೋಗಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ದೋಷಾರೋಪಣೆ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.

  • 3 ಸಾವಿರ ಕೋಟಿ ಪಂಗನಾಮ ಹಾಕಿದ್ದ ವಂಚಕಿಯನ್ನ ವಶಕ್ಕೆ ಪಡೆದ ಬಳ್ಳಾರಿ ಪೊಲೀಸ್

    3 ಸಾವಿರ ಕೋಟಿ ಪಂಗನಾಮ ಹಾಕಿದ್ದ ವಂಚಕಿಯನ್ನ ವಶಕ್ಕೆ ಪಡೆದ ಬಳ್ಳಾರಿ ಪೊಲೀಸ್

    ಬಳ್ಳಾರಿ: ಲಕ್ಷಾಂತರ ಮಂದಿ ಅಮಾಯಕರಿಂದ ಬರೋಬ್ಬರಿ 3 ಸಾವಿರ ಕೋಟಿ ರೂ. ಹಣವನ್ನು ಅಕ್ರಮವಾಗಿ ಸಂಗ್ರಹಿಸಿ ಜನರಿಗೆ ಮೋಸ ಮಾಡಿದ್ದ ಎಂಇಪಿ ಪಕ್ಷದ ಸಂಸ್ಥಾಪಕಿ ನೌಹೀರಾ ಶೇಖ್ ಳನ್ನು ಬಳ್ಳಾರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಹೀರಾ ಗೋಲ್ಡ್ ಕಂಪನಿಯ ನಿರ್ದೇಶಕಿ ನೌಹೀರಾ ಶೇಖ್ ಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಜನರಿಗೆ 3,.000 ಕೋಟಿ ರೂಪಾಯಿಗಳ ವಂಚನೆ ಮಾಡಿರುವ ಆರೋಪದಲ್ಲಿ ಹೈದರಾಬಾದ್‍ನ ಚಂಚಲಗೂಡು ಜೈಲಿನಲ್ಲಿ ಇಷ್ಟು ದಿನ ನೌಹೀರಾಳನ್ನು ಇರಿಸಲಾಗಿತ್ತು. ಆದರೆ ಈಗ ಬಳ್ಳಾರಿ ಪೊಲೀಸರು ವಶಕ್ಕೆ ಪಡೆದಿದ್ದು, ಕಾರಣಾಂತರಗಳಿಂದಾಗಿ ಯಾಕೆ ಹೈದರಾಬಾದ್ ಜೈಲಿನಿಂದ ಬಳ್ಳಾರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ? ಪೊಲೀಸ್ ಠಾಣೆಯಲ್ಲಿ ಆರೋಪಿಯನ್ನು ಇರಿಸಲಾಗುತ್ತಾ? ಇಲ್ಲಾ ಬಳ್ಳಾರಿ ಜೈಲಿಗೆ ಆರೋಪಿಯನ್ನು ಕರೆದುಕೊಂಡು ಹೋಗಲಾಗುತ್ತಾ ಎಂಬ ಮಾಹಿತಿಯನ್ನು ಪೊಲೀಸರು ಗೌಪ್ಯವಾಗಿ ಇಟ್ಟಿದ್ದಾರೆ.

    ಸುಮಾರು 24 ಬೇನಾಮಿ ಆಸ್ತಿ ಹಾಗೂ 182 ಬ್ಯಾಂಕ್ ಖಾತೆಯನ್ನು ಹೊಂದಿದ್ದ ನೌಹೀರಾ, 1,72,114 ಹೂಡಿಕೆದಾರರಿಂದ ಮೂರು ಸಾವಿರ ಕೋಟಿ ಹಣ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದಳು. ಈ ವಂಚನೆ ಬೆಳಕಿಗೆ ಬಂದ ನಂತರ ನೌಹೀರಾಳನ್ನು ಬಂಧಿಸಲಾಗಿತ್ತು. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.