Tag: accused

  • ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತನ ಕೊಲೆ- ನಾಲ್ವರ ಬಂಧನ

    ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತನ ಕೊಲೆ- ನಾಲ್ವರ ಬಂಧನ

    ಮಂಗಳೂರು: ಪುತ್ತೂರಿನಲ್ಲಿ ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತನ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಪುತ್ತೂರಿನ ಆರ್ಯಾಪು ನಿವಾಸಿಗಳಾದ ಕಿರಣ್(36), ಚರಣ್(26), ಉಳ್ಳಾಲ ನಿವಾಸಿ ಪ್ರೀತೇಶ್(28) ಹಾಗೂ ಆರೋಪಿಗಳಿಗೆ ಆಶ್ರಯ ನೀಡಿದ್ದ ಅತ್ತಾವರ ನಿವಾಸಿ ಸ್ಟೀವನ್ ಮೊಂತೇರೊನನ್ನು ಪುತ್ತೂರು ಪೊಲೀಸರು ಬಂಧಿಸಿದ್ದಾರೆ. ಹಿಂಜಾವೇ ತಾಲೂಕು ಕಾರ್ಯದರ್ಶಿ ಕಾರ್ತಿಕ್ ಮೇರ್ಲ(30) ಅವರನ್ನು ಹಣಕಾಸು ವಿಚಾರದಲ್ಲಿ ಕಿರಣ್ ಮತ್ತು ಸೋದರ ಚರಣ್ ಹಾಗೂ ಪ್ರೀತೇಶ್ ಕೊಲೆ ಮಾಡಿದ್ದರು.

    ಮಂಗಳವಾರ ಸಂಪ್ಯ ಪೊಲೀಸ್ ಠಾಣೆ ಮುಂಭಾಗ ಗಣೇಶೋತ್ಸವ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಈ ವೇಳೆ ಸಾರ್ವಜನಿಕರ ಎದುರಲ್ಲೇ ಯುವಕನನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿದ್ದರು.

    ಕಾರ್ತಿಕ್ ಖಾಸಗಿ ಫೈನಾನ್ಸ್ ಸಂಸ್ಥೆಯಿಂದ ಹಣವನ್ನು ಪಡೆದಿದ್ದರು. ಈ ವಿಚಾರಕ್ಕೆ ಕಾರ್ತಿಕ್ ಜೊತೆ ಕಿರಣ್ ಮತ್ತು ಸೋದರ ಚರಣ್ ಹಾಗೂ ಪ್ರೀತೇಶ್ ಜಗಳಕ್ಕಿಳಿದಿದ್ದರು. ಆಗ ಮಾತಿಗೆ ಮಾತು ಬೆಳೆದು ಜಗಳ ತಾರಕ್ಕಕ್ಕೇರಿ ಕೋಪಗೊಂಡ ಮೂವರು ಆರೋಪಿಗಳು ಕಾರ್ತಿಕ್‍ಗೆ ಚೂರಿಯಿಂದ ಇರಿದು ಕೊಲೆ ಮಾಡಿದ್ದರು. ಬಳಿಕ ಸ್ಥಳದಿಂದ ಪರಾರಿಯಾಗಿದ್ದರು.

    ಈ ಸಂಬಂಧ ಸಂಪ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ಕೈಗೆತ್ತಿಕೊಂಡ ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದರು. ಸುತ್ತಮುತ್ತಲ ಠಾಣೆಗಳಿಗೆ ಈ ಬಗ್ಗೆ ಮಾಹಿತಿ ನೀಡಿದ್ದರು.

  • ಜೋಡಿ ಕೊಲೆ ಆರೋಪಿ ಮೇಲೆ ಖಾಕಿ ಫೈರಿಂಗ್

    ಜೋಡಿ ಕೊಲೆ ಆರೋಪಿ ಮೇಲೆ ಖಾಕಿ ಫೈರಿಂಗ್

    ಬೆಂಗಳೂರು: ಜೋಡಿ ಕೊಲೆ ಆರೋಪಿ ಕಾಲಿಗೆ ಪೊಲೀಸರು ಗುಂಡು ಹಾರಿಸಿದ ಘಟನೆ ಬೆಂಗಳೂರಿನ ತಲಘಟ್ಟಪುರದ ನಾಗೇಗೌಡನಪಾಳ್ಯ ಬಳಿ ನಡೆದಿದೆ.

    ವಿನೋದ ಅಲಿಯಾಸ್ ಕೋತಿ ಎಂಬಾತನೇ ಜೋಡಿ ಕೊಲೆಯ ಆರೋಪಿ. ವಿನೋದ್ ನನ್ನು ಬಂಧಿಸಲು ಹೋದಾಗ ಪೇದೆ ಪ್ರದೀಪ್ ಮೇಲೆಯೇ ಹಲ್ಲೆಗೆ ಯತ್ನಿಸಿದ್ದಾನೆ. ಈ ವೇಳೆ ಅತ್ಮ ರಕ್ಷಣೆಗಾಗಿ ತಲಘಟ್ಟಪುರ ಠಾಣೆಯ ಎಸ್‍ಐ ನಾಗೇಶ್ ಒಂದು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ.

    ಆದರೂ ಆರೋಪಿ ಪುನಃ ಹಲ್ಲೆಗೆ ಮುಂದಾಗಿದ್ದಾನೆ. ಹೀಗಾಗಿ ಎಸ್‍ಐ ನಾಗೇಶ್ ಅವರು ವಿನೋದ್ ಕಾಲಿಗೆ ಗುಂಡು ಹಾರಿಸಿದ್ದಾರೆ. ಪರಿಣಾಮ ಬಲಗಾಲಿಗೆ ಗುಂಡು ತಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

    ಆರೋಪಿ ಜೆ ಪಿ ನಗರದಲ್ಲಿ ಕಳೆದ ವಾರ ನಡೆದ ರೌಡಿ ಮಂಜ ಹಾಗೂ ವರುಣ್ ಕೊಲೆಯಲ್ಲಿ ಭಾಗಿಯಾಗಿದ್ದನು ಎನ್ನಲಾಗಿದೆ.

  • ವೈದ್ಯರ ಮೇಲೆ ಹಲ್ಲೆ ಮಾಡಿದರೆ 10 ವರ್ಷ ಜೈಲು, 10 ಲಕ್ಷ ದಂಡ

    ವೈದ್ಯರ ಮೇಲೆ ಹಲ್ಲೆ ಮಾಡಿದರೆ 10 ವರ್ಷ ಜೈಲು, 10 ಲಕ್ಷ ದಂಡ

    – ಹೊಸ ಕಾನೂನು ತರಲು ಮುಂದಾದ ಕೇಂದ್ರ ಸರ್ಕಾರ

    ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ವೈದ್ಯರ ಮೇಲಾದ ಹಲ್ಲೆ ಖಂಡಿಸಿ ದೇಶಾದ್ಯಂತ ಪ್ರತಿಭಟನೆ ಗಲಾಟೆಗಳು ನಡೆದಿತ್ತು. ಆರೋಗ್ಯ ಸಿಬ್ಬಂದಿ ಮೇಲೆ ಹಲ್ಲೆಗಳು ಆಗುತ್ತಿರುವ ಹಿನ್ನೆಲೆಯಲ್ಲಿ ಇವುಗಳನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಕಠಿಣ ಕಾನೂನು ತರಲು ಮುಂದಾಗುತ್ತಿದೆ.

    ಕರ್ತವ್ಯ ನಿರತ ವೈದ್ಯರು ಅಥವಾ ಆರೋಗ್ಯ ಸಿಬ್ಬಂದಿ ಮೇಲೆ ಹಲ್ಲೆ ಅಥವಾ ದಾಳಿ ನಡೆಸಿದ ಆರೋಪಿಗಳಿಗೆ 10 ವರ್ಷ ಜೈಲು ಶಿಕ್ಷೆ ಮತ್ತು 10 ಲಕ್ಷ ರೂ.ವರೆಗೂ ದಂಡ ವಿಧಿಸುವ ಕಾಯ್ದೆ ತರಲು ಮುಂದಾಗುತ್ತಿದೆ. ವೈದ್ಯರ ಮೇಲಿನ ದಾಳಿ, ಹಲ್ಲೆ ರೀತಿಯ ಘಟನೆಗಳನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.

    ಈ ಸಂಬಂಧ ಸಾರ್ವಜನಿಕ ಅಭಿಪ್ರಾಯಗಳ ಸಂಗ್ರಹಿಸಲು ಸರ್ಕಾರ ನಿರ್ಧರಿಸಿದೆ. ಆದ್ದರಿಂದ ಸೋಮವಾರದಿಂದ ಆರೋಗ್ಯ ಸಚಿವಾಲಯ ಆರೋಗ್ಯಪಾಲನೆ ಸೇವೆಗಳ ಸಿಬ್ಬಂದಿ ಮತ್ತು ಕ್ಲಿನಿಕಲ್ ಎಸ್ಟಾಬ್ಲಿಷ್‍ಮೆಂಟ್ಸ್ (ಹಿಂಸೆ ಮತ್ತು ಆಸ್ತಿ ಹಾನಿ ನಿಷೇಧ) ಕರಡು ಮಸೂದೆ -2019 ನಿಯಮಗಳನ್ನು ರೂಪಿಸಿದೆ. ಅಲ್ಲದೆ ಸಾರ್ವಜನಿಕರು 30 ದಿನಗಳ ಒಳಗೆ ತಮ್ಮ ಅಭಿಪ್ರಾಯಗಳನ್ನು us-ms-mohfw@nic.in ಗೆ ಮೇಲ್ ಮಾಡಿ ತಿಳಿಸಬಹುದಾಗಿದೆ.

    ಭಾರತೀಯ ದಂಡ ಸಂಹಿತೆ(ಐಪಿಸಿ) 320ನೇ ಕಲಂ ಇಟ್ಟುಕೊಂಡು ಈ ಕಾಯ್ದೆಯನ್ನು ರಚಿಸಲು ಸಕಾರ ಮುಂದಾಗಿದೆ. ಕರ್ತವ್ಯ ಸಲ್ಲಿಸುವ ವೇಳೆ ರೋಗಿಗಳ ಕುಟುಂಬ ಅಥವಾ ಅವರ ಕಡೆಯವರು ಆರೋಗ್ಯ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದರೆ ಕನಿಷ್ಠ ಮೂರು ವರ್ಷ, ಗರಿಷ್ಠ 10 ವರ್ಷ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಅದರ ಜೊತೆಗೆ ಕನಿಷ್ಠ 2 ಲಕ್ಷದಿಂದ 10 ಲಕ್ಷ ರೂ. ದಂಡ ವಿಧಿಸುವ ಅಂಶ ಈ ಕರಡು ಮಸೂದೆಯಲ್ಲಿದೆ.

    ಕರಡು ಮಸೂದೆಯಲ್ಲಿರುವ ಸಂಪೂರ್ಣ ವಿವರ ಓದಲು ಕ್ಲಿಕ್ ಮಾಡಿ: www.mohfw.gov.in

  • ಅತ್ಯಾಚಾರಕ್ಕೆ ಯತ್ನಿಸಿದವನಿಗೆ ಕಂಬಕ್ಕೆ ಕಟ್ಟಿ, ಚಪ್ಪಲಿ ಏಟು ಕೊಟ್ಟ ಗ್ರಾಮಸ್ಥರು

    ಅತ್ಯಾಚಾರಕ್ಕೆ ಯತ್ನಿಸಿದವನಿಗೆ ಕಂಬಕ್ಕೆ ಕಟ್ಟಿ, ಚಪ್ಪಲಿ ಏಟು ಕೊಟ್ಟ ಗ್ರಾಮಸ್ಥರು

    ಧಾರವಾಡ: ಮನೆಯಲ್ಲಿ ಯಾರು ಇಲ್ಲದ ವೇಳೆ ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಯುವಕನನ್ನು ಗ್ರಾಮಸ್ಥರು ಕಂಬಕ್ಕೆ ಕಟ್ಟಿ, ಚಪ್ಪಲಿ ಏಟು ಕೊಟ್ಟ ಘಟನೆ ಜಿಲ್ಲೆಯ ಮನಸೂರ ಗ್ರಾಮದಲ್ಲಿ ನಡೆದಿದೆ.

    ಮನಸೂರ ಗ್ರಾಮದ ನಿವಾಸಿ ನರಸಿಂಗ ಏಟು ತಿಂದ ಯುವಕ. ಗ್ರಾಮದ ಮಹಿಳೆಯೊಬ್ಬರ ಮನೆಯಲ್ಲಿ ಯಾರು ಇಲ್ಲದಿರುವುದನ್ನು ಗಮನಿಸಿದ ಆರೋಪಿ ಆಕೆಯ ಮೇಲೆ ಅತ್ಯಾಚಾರ ಎಸಗಲು ಮುಂದಾಗಿದ್ದಾನೆ. ಮನೆಗೆ ನುಗ್ಗಿ ಆಕೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಈ ವೇಳೆ ಮಹಿಳೆ ಕೂಗಾಡಿದಾಗ ಅಕ್ಕ ಪಕ್ಕದ ಮನೆಯವರು ಬಂದು ಆಕೆಯನ್ನು ಆರೋಪಿಯಿಂದ ರಕ್ಷಿಸಿದ್ದಾರೆ.

    ನಂತರ ಆರೋಪಿ ಸ್ಥಳದಿಂದ ಓಡಿಹೋಗಲು ಯತ್ನಿಸಿದಾಗ ಗ್ರಾಮಸ್ಥರು ಆತನನ್ನು ಹಿಡಿದು ಕಂಬಕ್ಕೆ ಕಟ್ಟಿ ಹಾಕಿದ್ದಾರೆ. ಹೀನ ಕೃತ್ಯಕ್ಕೆ ಕೈಹಾಕಿದ್ದಕ್ಕೆ ಚಪ್ಪಲಿಯಿಂದ ಹೊಡೆದು, ಹಿಗ್ಗಾಮುಗ್ಗಾ ಥಳಿಸಿದ್ದಾರೆ.

    ಸದ್ಯ ಆರೋಪಿಯನ್ನು ಗ್ರಾಮಸ್ಥರು ಪೊಲೀಸರಿಗೆ ಒಪ್ಪಿಸಿದ್ದು, ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

  • ಸಾಲಕ್ಕೆ ಸಿಗರೇಟ್ ನೀಡದ್ದಕ್ಕೆ ಅಂಗವಿಕಲನ ಪೆಟ್ಟಿಗೆ ಅಂಗಡಿ ಸುಟ್ಟ ಪುಡಾರಿಗಳು

    ಸಾಲಕ್ಕೆ ಸಿಗರೇಟ್ ನೀಡದ್ದಕ್ಕೆ ಅಂಗವಿಕಲನ ಪೆಟ್ಟಿಗೆ ಅಂಗಡಿ ಸುಟ್ಟ ಪುಡಾರಿಗಳು

    -ಅಂಗಡಿ ಕಳೆದುಕೊಂಡು ಕಣ್ಣೀರಿಟ್ಟ ಅಂಗವಿಕಲ

    ಬೆಂಗಳೂರು: ಅಂಗವೈಫಲ್ಯದ ಕಾರಣಕ್ಕೆ ಎಷ್ಟೋ ಮಂದಿ ಭಿಕ್ಷೆಬೇಡಿ ಜೀವನ ನಡೆಸುತ್ತಾರೆ. ಅಂತಹ ಜನರ ನಡುವೆ ತಮ್ಮ ಅಂಗವಿಕಲತೆಯನ್ನು ಲೆಕ್ಕಿಸದೆ ಸ್ವಾಭಿಮಾನದಿಂದ ದುಡಿದು ಬದುಕುವ ಮಂದಿ ಕೂಡ ಇದ್ದಾರೆ. ಹೀಗೆ ಸ್ವಾಭಿಮಾನದಿಂದ ಅಂಗಡಿ ನಡೆಸುತ್ತಿದ್ದ ಅಂಗವಿಕಲ ವ್ಯಕ್ತಿಯೊಬ್ಬರು ಸಾಲ ನೀಡಲು ನಿರಾಕರಿಸಿದ್ದಕ್ಕೆ ಅವರ ಪೆಟ್ಟಿಗೆ ಅಂಗಡಿಗೆ ಬೆಂಕಿ ಇಟ್ಟು ಸುಟ್ಟು ದುಷ್ಕರ್ಮಿಗಳು ವಿಕೃತಿ ಮೆರೆದಿದ್ದಾರೆ.

    ಎರಡು ಕಾಲುಗಳನ್ನು ಕಳೆದುಕೊಂಡಿದ್ದ ಚಿನ್ನಸ್ವಾಮಿ ಅವರು ಚಾಮರಾಜಪೇಟೆಯಲ್ಲಿ ಒಂದು ಪೆಟ್ಟಿಗೆ ಅಂಗಡಿ ಇಟ್ಟುಕೊಂಡು ಜೀವನ ನಡೆಸುತ್ತಿದ್ದರು. ತಮ್ಮ ತಂದೆ-ತಾಯಿಯನ್ನು ಕೂಡ ನೋಡಿಕೊಳ್ಳುತ್ತಿದ್ದರು. ಆದರೆ ಇವರ ಅಂಗಡಿಗೆ ಬರುತ್ತಿದ್ದ ಕೆಲ ಸ್ಥಳೀಯ ಪುಡಾರಿಗಳು ಹಣ ನೀಡದೆ ಸಾಲದಲ್ಲಿ ಟೀ-ಸಿಗರೇಟು ಖರೀದಿಸುತ್ತಿದ್ದರು. ಹೀಗೆ ಸಾಲದ ಪಟ್ಟಿ ಹೆಚ್ಚಾಗಿದಕ್ಕೆ ಚಿನ್ನಸ್ವಾಮಿ ಅವರ ವ್ಯಾಪಾರದಲ್ಲಿ ನಷ್ಟವಾಗುತ್ತಿತ್ತು. ಆದ್ದರಿಂದ ಅವರು ಸಾಲ ಕೊಡಲ್ಲ, ಹಣ ಕೊಟ್ಟು ವ್ಯಪಾರ ಮಾಡಿ ಎಂದು ಹೇಳಿದ್ದಕ್ಕೆ ಕೋಪಗೊಂಡ ದುಷ್ಕರ್ಮಿಗಳು ಮಾನವೀಯತೆ ಮರೆತು ಚಿನ್ನಸ್ವಾಮಿಯವರ ಅಂಗಡಿಗೆ ಬೆಂಕಿ ಇಟ್ಟು ಸುಟ್ಟಿದ್ದಾರೆ.

    ಕಿಡಿಗೇಡಿಗಳು ರಾತ್ರೋರಾತ್ರಿ ಚಿನ್ನಸ್ವಾಮಿ ಪೆಟ್ಟಿಗೆ ಅಂಗಡಿಗೆ ಬೆಂಕಿಯಿಟ್ಟು ಸೇಡು ತೀರಿಸಿಕೊಂಡಿದ್ದಾರೆ. ಇದರಿಂದ ಜೀವನಕ್ಕೆ ಆಧಾರವಾಗಿದ್ದ ಒಂದು ಅಂಗಡಿಯನ್ನು ಕಳೆದುಕೊಂಡು ಚಿನ್ನಸ್ವಾಮಿ ಹಾಗೂ ಅವರ ವೃದ್ಧ ತಂದೆ-ತಾಯಿ ಕಣ್ಣೀರಿಡುತ್ತಿದ್ದಾರೆ.

    ದುರುಳರ ವಿಕೃತತನಕ್ಕೆ ಚಿನ್ನಸ್ವಾಮಿ ಅವರ ಪೆಟ್ಟಿಗೆ ಅಂಗಡಿ ಬೆಂಕಿ ಕೆನ್ನಾಲಿಗೆಯಲ್ಲಿ ಹೊತ್ತಿಯುರಿದಿದೆ. ಕಿಡಿಗೇಡಿಗಳು ಪೆಟ್ಟಿಗೆ ಅಂಗಡಿಗೆ ಬೆಂಕಿಯಿಟ್ಟಿದಷ್ಟೇ ಅಲ್ಲದೆ, ಪಕ್ಕದ ರಸ್ತೆಯಲ್ಲಿ ನಿಲ್ಲಿಸಿದ್ದ ಬೈಕ್ ಗಳಿಗೆ ಲಾಂಗು-ಮಚ್ಚುಗಳಿಂದ ಹಾನಿ ಮಾಡಿ ದುಷ್ಟತನ ಮೆರೆದಿದ್ದಾರೆ.

    ಅಂಗಡಿಗೆ ಬೆಂಕಿ ಹಂಚಿರುವ ಬಗ್ಗೆ ತಿಳಿಯುತ್ತಿದ್ದಂತೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸಂಪೂರ್ಣ ಸುಟ್ಟುಹೋಗುತ್ತಿದ್ದ ಅಂಗಡಿಯ ಬೆಂಕಿಯನ್ನು ಪೊಲೀಸರು ಸ್ಥಳೀಯರ ಸಹಾಯ ಪಡೆದು ನಂದಿಸಿದ್ದಾರೆ. ಸದ್ಯ ಈ ಘಟನೆ ಬಗ್ಗೆ ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ಸೆರೆಹಿಡಿಯಲು ಪೊಲೀಸರು ಬಲೆ ಬೀಸಿದ್ದಾರೆ.

  • ಕೋತಿ ತಾನು ತಿಂದು ಮೇಕೆ ಮೂತಿಗೆ ಒರೆಸಿತು: ಎಚ್‍ಡಿಕೆಗೆ ಸಿಎಂ ಪುತ್ರ ಟಾಂಗ್

    ಕೋತಿ ತಾನು ತಿಂದು ಮೇಕೆ ಮೂತಿಗೆ ಒರೆಸಿತು: ಎಚ್‍ಡಿಕೆಗೆ ಸಿಎಂ ಪುತ್ರ ಟಾಂಗ್

    ಬೆಂಗಳೂರು: ಕೋತಿ ತಾನು ತಿಂದು ಮೇಕೆ ಬಾಯಿಗೆ ಒರೆಸಿದಂತಿದೆ ನಿಮ್ಮ ಮಾತುಗಳು ಎಂದು ಟ್ವೀಟ್ ಮಾಡುವ ಮೂಲಕ ಸಿಎಂ ಯಡಿಯೂರಪ್ಪ ಅವರ ಪುತ್ರ ಸಂಸದ ವಿಜಯೇಂದ್ರ ಅವರು ಮಾಜಿ ಸಿಎಂ ಕುಮಾರಸ್ವಾಮಿ ಅವರಿಗೆ ಟಾಂಗ್ ನೀಡಿದ್ದಾರೆ.

    ವರ್ಗಾವಣೆ ದಂಧೆ ಮಾಡಲು ಯಡಿಯೂರಪ್ಪ ಸ್ವತಃ ತಮ್ಮ ಸುಪುತ್ರನನ್ನೇ ಬಿಟ್ಟಿದ್ದಾರೆ ಎಂಬ ಹೆಚ್.ಡಿ ಕುಮಾರಸ್ವಾಮಿ ಅವರ ಮಾತಿಗೆ ತಿರುಗೇಟು ಕೊಟ್ಟಿರುವ ಅವರು ಕಮೀಷನ್ ದಂಧೆ, ವರ್ಗಾವಣೆ ದಂಧೆ, ನೇಮಕಾತಿ ದಂಧೆಗಳ ಜನಕರು ಹಾಗೂ ಗುತ್ತಿಗೆದಾರರು ನೀವು ಎನ್ನುವುದು ಇಡೀ ರಾಜ್ಯಕ್ಕೇ ತಿಳಿದಿದೆ ಕುಮಾರಸ್ವಾಮಿಯವರೇ ಎಂದು ಹೇಳಿದ್ದಾರೆ.

    ಈ ವಿಚಾರವಾಗಿ ಇಂದು ಬೆಳಗ್ಗೆ ಟ್ವೀಟ್ ಮಾಡಿರುವ ವಿಜಯೇಂದ್ರ ಅವರು, ಕಮೀಷನ್ ದಂಧೆ, ವರ್ಗಾವಣೆ ದಂಧೆ, ನೇಮಕಾತಿ ದಂಧೆಗಳ ಜನಕರು ಹಾಗೂ ಗುತ್ತಿಗೆದಾರರು ನೀವು ಎನ್ನುವುದು ಇಡೀ ರಾಜ್ಯಕ್ಕೇ ತಿಳಿದಿದೆ ಕುಮಾರ ಸ್ವಾಮಿಯವರೇ. ಕೋತಿ ತಾನು ತಿಂದು ಮೇಕೆ ಬಾಯಿಗೆ ಒರೆಸಿದಂತಿದೆ ನಿಮ್ಮ ಮಾತುಗಳು. ಸಿಬಿಐ ತನಿಖೆಗೆ ಹೆದರಿ ಹತಾಶ ಹೇಳಿಕೆ ನೀಡುತ್ತಿದ್ದೀರಿ. ವಿಷಯಾಂತರಗೊಳಿಸಿ ಜನತೆಯ ದಿಕ್ಕು ತಪ್ಪಿಸುವ ಕುತಂತ್ರದ ಮಾತು ನಿಲ್ಲಿಸಿ ಎಂದು ಹೇಳಿದ್ದಾರೆ.

    ಕುಮಾರಸ್ವಾಮಿ ಹೇಳಿದ್ದೇನು?
    ಭಾನುವಾರ ಉಡುಪಿಯಲ್ಲಿ ಮಾತನಾಡಿದ್ದ ಕುಮಾರಸ್ವಾಮಿ ಅವರು, ನಮ್ಮ ಸರ್ಕಾರ ವರ್ಗಾವಣೆ ದಂಧೆ ಮಾಡಿದೆ ಅಂದರು. ಆದರೆ ಯಲಹಂಕ ತಹಶೀಲ್ದಾರ್ ಪೋಸ್ಟ್ ಗೆ ಎಷ್ಟು ವ್ಯವಹಾರ ಆಯ್ತು ಹೇಳಿ. ನಮಗೆ ವರ್ಗಾವಣೆ ಲೂಟಿ ಅಂತೀರಿ, ನೀವೇನು ಮಾಡುತ್ತಿದ್ದೀರಿ. ವರ್ಗಾವಣೆ ದಂಧೆಗೆ ಯಡಿಯೂರಪ್ಪನವರು ಸುಪುತ್ರನನ್ನೇ ಬಿಟ್ಟಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದರು.

  • ಪೊಲೀಸರಿಗೆ ಪಿಸ್ತೂಲ್ ತೋರಿಸಿದವ ಅಂದರ್

    ಪೊಲೀಸರಿಗೆ ಪಿಸ್ತೂಲ್ ತೋರಿಸಿದವ ಅಂದರ್

    ಹುಬ್ಬಳ್ಳಿ: ಕರ್ತವ್ಯ ನಿರತ ಆರ್ ಪಿಎಫ್ ಪೊಲೀಸ್ ಸಿಬ್ಬಂದಿಗೆ ಪಿಸ್ತೂಲ್ ತೋರಿಸಿದ ಯುವಕನನ್ನು ಬಂಧಿಸಿರುವ ಘಟನೆ ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ನಡೆದಿದೆ.

    ಸ್ವಾತಂತ್ರ್ಯೋತ್ಸವ ಹಿನ್ನೆಲೆಯಲ್ಲಿ ಹುಬ್ಬಳ್ಳಿಯಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಹುಬ್ಬಳ್ಳಿ ರೈಲು ನಿಲ್ದಾಣದಲ್ಲೂ ಬಿಗಿ ಭದ್ರತೆ ಏರ್ಪಡಿಸಲಾಗಿತ್ತು. ಈ ವೇಳೆ ನಿಲ್ದಾಣದ ವಿಐಪಿ ಲಾಂಜ್ ಬಳಿ ವ್ಯಕ್ತಿಯೊಬ್ಬ ಮೊಬೈಲ್ ಹಿಡಿದು ಫೋಟೋ ತೆಗೆದಿದ್ದಾರೆ. ಇದನ್ನು ಗಮನಿಸಿದ ಆರ್ ಪಿಎಫ್ ಪೊಲೀಸ್ ಪೇದೆ ಭದ್ರತೆಯ ದೃಷ್ಟಿಯಿಂದ ಫೋಟೋ ಡಿಲೀಟ್ ಮಾಡುವಂತೆ ಮನವಿ ಮಾಡಿದ್ದಾರೆ.

    ಈ ವೇಳೆ ಯುವಕ ಹಾಗೂ ಆತನ ಜೊತೆಗಿದ್ದ ಸ್ನೇಹಿತರು ಫೋಟೋ ಡಿಲೀಟ್ ಮಾಡಲು ನಿರಾಕರಿಸಿದ್ದು, ಈ ಸಂದರ್ಭದಲ್ಲಿ ಪೊಲೀಸರು ಹಾಗೂ ಯುವಕರ ನಡುವೆ ವಾಗ್ವಾದ ನಡೆದಿದೆ. ಈ ಹಂತದಲ್ಲಿ ಅವರನ್ನು ಬೆದರಿಸಲು ಪೊಲೀಸ್ ಬಂದೂಕು ತೋರಿಸಿದ್ದಾರೆ. ಇದರಿಂದ ಮತ್ತಷ್ಟು ಆಕ್ರೋಶಗೊಂಡ ಯುವಕ ತನ್ನ ಬಳಿಯೂ ಪಿಸ್ತೂಲ್ ಇದೆ ಎಂದು ತೋರಿಸಿ ಅವಾಜ್ ಹಾಕಿದ್ದಾನೆ. ಪರಿಣಾಮ ಯುವಕನ್ನ ಪೊಲೀಸರು ಬಂಧಿಸಿದ್ದಾರೆ.

    ಮಾಹಿತಿಯ ಅನ್ವಯ ಬಂಧಿತ ಯುವಕ ಮಂಟೂರು ರಸ್ತೆಯ ಬ್ಯಾಳಿ ಓಣಿ ನಿವಾಸಿ ಶರೀಫ ಆದೋನಿ ಎನ್ನಲಾಗಿದ್ದು, ಆತನೊಂದಿಗೆ ಇದ್ದ ಯುವಕರನ್ನು ವಶಕ್ಕೆ ಪಡೆದು ಗದಗ ರಸ್ತೆಯ ಠಾಣೆಗೆ ಕರೆ ತಂದು ವಿಚಾರಣೆ ನಡೆಸಿದ್ದರು. ಆ ಬಳಿಕ ಅವರನ್ನು ಶಹರ ಪೊಲೀಸ್ ಠಾಣೆಗೆ ಕರೆ ತಂದಿದ್ದಾರೆ. ಘಟನೆಯಿಂದ ನಿಲ್ದಾಣದಲ್ಲಿ ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.

  • 9 ತಿಂಗಳ ಕಂದಮ್ಮನ ಅತ್ಯಾಚಾರಗೈದು, ಕೊಲೆ ಮಾಡಿದವನಿಗೆ ಗಲ್ಲು ಶಿಕ್ಷೆ

    9 ತಿಂಗಳ ಕಂದಮ್ಮನ ಅತ್ಯಾಚಾರಗೈದು, ಕೊಲೆ ಮಾಡಿದವನಿಗೆ ಗಲ್ಲು ಶಿಕ್ಷೆ

    ಹೈದರಾಬಾದ್: 9 ತಿಂಗಳ ಕಂದಮ್ಮನ ಮೇಲೆ ಅತ್ಯಾಚಾರ ಮಾಡಿ, ಕೊಲೆ ಮಾಡಿದ್ದ ಯುವಕನಿಗೆ ತೆಲಂಗಾಣದ ಅಧೀನ ನ್ಯಾಯಾಲಯವು ಕೃತ್ಯ ನಡೆದ 50 ದಿನದಲ್ಲೇ ಗಲ್ಲು ಶಿಕ್ಷೆ ವಿಧಿಸಿದೆ.

    ವಾರಂಗಲ್ ಜಿಲ್ಲೆ ಹನುಮಕೊಂಡದ ನಿವಾಸಿ ಪ್ರವೀಣ್‍ಗೆ(25) ಗಲ್ಲು ಶಿಕ್ಷೆ ವಿಧಿಸಲಾಗಿದೆ. ಜೂನ್ 19ರಂದು ಕುಡಿದ ಅಮಲಿನಲ್ಲಿ ಆರೋಪಿ ಟೆರೇಸ್ ಮೇಲೆ ತಾಯಿ ಪಕ್ಕದಲ್ಲಿ ಮಲಗಿದ್ದ ಹಸುಳೆಯನ್ನು ಅಪಹರಿಸಿಕೊಂಡು ಹೋಗಿ ಅತ್ಯಾಚಾರ ಮಾಡಿದ್ದನು. ಬಳಿಕ ತನ್ನ ಕೃತ್ಯ ಬೆಳಕಿಗೆ ಬರಬಹುದೆಂಬ ಭಯದಿಂದ ಪುಟ್ಟ ಕಂದಮ್ಮನನ್ನು ಅಮಾನುಷವಾಗಿ ಕೊಲೆಗೈದಿದ್ದನು.

    ಈ ಬಗ್ಗೆ ಸ್ಥಳೀಯರಿಗೆ ತಿಳಿದ ಬಳಿಕ ಆರೋಪಿಯನ್ನು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದರು. ಅಲ್ಲದೆ ಆರೋಪಿಯ ವಿಕೃತಿಯನ್ನು ಖಂಡಿಸಿ ಆಂಧ್ರ ಪ್ರದೇಶದಲ್ಲಿ ಪ್ರತಿಭಟನೆಗಳು ಕೂಡ ನಡೆದಿದ್ದವು. ಆರೋಪಿ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಿ ಎಂಬ ಕೂಗ ಕೂಡ ಹೆಚ್ಚಾಗಿತ್ತು.

    ಇದೇ ಬೆನ್ನಲ್ಲಿ ಪ್ರಕರಣ ಸಂಬಂಧ ತನಿಖೆ ಕೈಗೊಂಡಿದ್ದ ಹನುಮಕೊಂಡ ಪೊಲೀಸರು ಸಿಸಿಟಿವಿ ಆಧಾರದ ಮೇಲೆ ಆರೋಪಿ ವಿರುದ್ಧ ಚಾರ್ಜ್ ಶೀಟ್ ಹಾಕಿದ್ದರು. ಸಿಸಿಟಿವಿ ದೃಶ್ಯಾವಳಿಯಲ್ಲಿ ಆರೋಪಿ ಕೃತ್ಯವೆಸೆಗಿ ಪರಾರಿಯಾಗುತ್ತಿದ್ದಾಗ ಸ್ಥಳೀಯರ ಕೈಗೆ ಸಿಕ್ಕಿಬಿದ್ದ ದೃಶ್ಯಾವಳಿಗಳು ಸೆರೆಯಾಗಿವೆ. ಈ ಆಧಾರದ ಮೇಲೆ 1 ತಿಂಗಳ ಒಳಗಾಗಿ ತನಿಖೆ ಪೂರ್ಣಗೊಳಿಸಿ ವಾರಂಗಲ್‍ನ ಪ್ರಥಮ ದರ್ಜೆ ಹೆಚ್ಚುವರಿ ಸೆಷೆನ್ಸ್ ಕೋರ್ಟ್ ನಲ್ಲಿ ಆರೋಪಪಟ್ಟಿ ದಾಖಲಿಸಿದ್ದರು. ಆರೋಪಿ ಪರ ವಕಾಲತು ವಹಿಸದಿರಲು ಜಿಲ್ಲಾ ಬಾರ್ ಅಸೋಸಿಯೇಷನ್ ನಿರ್ಧರಿಸಿತ್ತು. ಜೂನ್ 24ರಂದು ವಿಚಾರಣೆ ಆರಂಭಿಸಿದ್ದ ನ್ಯಾಯಾಲಯವು ಗುರುವಾರ ಆರೋಪಿಗೆ ಗಲ್ಲು ಶಿಕ್ಷೆ ಪ್ರಕಟಿಸಿದೆ.

  • ಹಲ್ಲೆಗೆ ಮುಂದಾದ ಆರೋಪಿಗಳಿಗೆ ಗುಂಡಿನ ರುಚಿ ತೋರಿಸಿದ ಪೊಲೀಸರು

    ಹಲ್ಲೆಗೆ ಮುಂದಾದ ಆರೋಪಿಗಳಿಗೆ ಗುಂಡಿನ ರುಚಿ ತೋರಿಸಿದ ಪೊಲೀಸರು

    ಬೆಂಗಳೂರು: ಹಲ್ಲೆಗೆ ಮುಂದಾದ ಕೊಲೆ ಆರೋಪಿಗಳಿಗೆ ಮಾದನಾಯಕನಹಳ್ಳಿ ಪೊಲೀಸರು ಕಾಲಿಗೆ ಗುಂಡು ಹೊಡೆದಿದ್ದಾರೆ.

    ನಂದಿನಿ ಲೇಔಟ್ ಪೊಲೀಸ್ ಠಾಣೆಯ ರೌಡಿಶೀಟರ್‍ ಗಳಾಗಿರುವ ಚಂದನ್ ಮತ್ತು ಶರಣ್ ಮೇಲೆ ಮಾದನಾಯಕನಹಳ್ಳಿ ಸಿಪಿಐ ಸತ್ಯನಾರಾಯಣ್ ಅವರು ಗುಂಡು ಹಾರಿಸಿದ್ದಾರೆ.

    ಆರೋಪಿಗಳು ಕಳೆದ ಜುಲೈ 23 ರಂದು ಮಂಜುನಾಥ್ ಎಂಬುವರನ್ನು ಕಿಡ್ನಾಪ್ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದರು. ನಂತರ ಅವರನ್ನು ಕೊಲೆ ಮಾಡಿದ್ದರು. ಈ ಆರೋಪಿಗಳು ಬೆಂಗಳೂರು ಉತ್ತರ ತಾಲೂಕಿನ ಮಾಚೋಹಳ್ಳಿ ಫಾರೆಸ್ಟ್ ಗೇಟ್ ಬಳಿ ಇದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ಮಾಡಿದ್ದಾರೆ. ಈ ವೇಳೆ ಆರೋಪಿಗಳು ಪೇದೆ ಮನಗುಂಡಿ ಮತ್ತು ಪಿ.ಎಸ್.ಐ ಮುರಳಿ ಅವರು ಮೇಲೆ ಹಲ್ಲೆ ಮಾಡಿದ್ದಾರೆ.

    ಈ ವೇಳೆ ಸ್ಥಳದಲ್ಲಿದ್ದ ಸಿಪಿಐ ಸತ್ಯನಾರಾಯಣ್ ಆರೋಪಿಗಳ ಕಾಲಿಗೆ ಗುಂಡು ಹೊಡೆದಿದ್ದಾರೆ. ಈ ಘಟನೆಯಲ್ಲಿ ಗಾಯಗೊಂಡ ಆರೋಪಿಗಳು ಹಾಗೂ ಪೊಲೀಸರನ್ನು ಮಾಗಡಿ ರಸ್ತೆಯ ಅನುಪಮ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • 3 ವರ್ಷದ ಬಾಲಕಿಯನ್ನ ಅಪಹರಿಸಿ ಗ್ಯಾಂಗ್‍ರೇಪ್ – ಶಿರಚ್ಛೇದ ಮಾಡಿ ಕೊಲೆ

    3 ವರ್ಷದ ಬಾಲಕಿಯನ್ನ ಅಪಹರಿಸಿ ಗ್ಯಾಂಗ್‍ರೇಪ್ – ಶಿರಚ್ಛೇದ ಮಾಡಿ ಕೊಲೆ

    ಜಮ್‍ಶೆಡ್‍ಪುರ: ಮೂರು ವರ್ಷದ ಬಾಲಕಿಯನ್ನ ಅಪಹರಿಸಿ, ಆಕೆಯ ಮೇಲೆ ಗ್ಯಾಂಗ್ ರೇಪ್ ಮಾಡಿ ಬಳಿಕ ಶಿರಚ್ಛೇದ ಗೈದು ಕೊಲೆ ಮಾಡಿರುವ ಪೈಶಾಚಿಕ ಕೃತ್ಯ ಜಮ್‍ಶೆಡ್‍ಪುರದಲ್ಲಿ ನಡೆದಿದೆ.

    ಜಾರ್ಖಂಡ್‍ನ ಜಮ್‍ಶೆಡ್‍ಪುರ ರೈಲ್ವೆ ನಿಲ್ದಾಣದ ಬಳಿ ಜುಲೈ 25ರ ಗುರುವಾರ ರಾತ್ರಿ ಘಟನೆ ನಡೆದಿದೆ. ಬಾಲಕಿ ಫೋಷಕರೊಂದಿಗೆ ಮಲಗಿದ್ದ ಸಮಯದಲ್ಲಿ ದುಷ್ಕರ್ಮಿಗಳು ಕಳೆದ ಆಕೆಯನ್ನು ಅಪಹರಣ ಮಾಡಿದ್ದರು. ಈ ಸುದ್ದಿ ರಾಷ್ಟ್ರಮಟ್ಟದಲ್ಲಿ ಶಾಕ್ ಉಂಟು ಮಾಡಿತ್ತು. ಪೋಷಕರ ಮಗ್ಗುಲಲ್ಲೇ ಮಲಗಿದ್ದ ಬಾಲಕಿಯ ಅಪಹರಣ ದೃಶ್ಯ ರೈಲ್ವೆ ನಿಲ್ದಾಣದ ಸೆಕ್ಯೂರಿಟಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.

    ಪ್ರಕರಣದಲ್ಲಿ ರಿಂಕು ಸಾಹು ಎಂಬಾತನನ್ನು ಜುಲೈ 27ರ ಶನಿವಾರ ಬಂಧಿಸಲಾಗಿದ್ದು, ಈತ 2015 ರಲ್ಲಿ ಬಾಲಕಿಯ ಕಿಡ್ನಾಪ್ ಹಾಗೂ ಕೊಲೆ ಪ್ರಕರಣದಲ್ಲಿ ಜೈಲು ಸೇರಿ ಇತ್ತೀಚೆಗಷ್ಟೇ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ. ಆರೋಪಿ ರಿಂಕು ಆತನ ಸ್ನೇಹಿತ ಕೈಲಾಶ್‍ನೊಂದಿಗೆ ಸೇರಿ ಬರ್ಬರ ಕೃತ್ಯ ನಡೆಸಿದ್ದಾನೆ. ಪೊಲೀಸರ ಎದುರು ಆರೋಪಿಗಳು ನೀಡಿರುವ ಹೇಳಿಕೆಯ ಅನ್ವಯ, ಬಾಲಕಿಯ ದೇಹವನ್ನು ಪ್ಲಾಸ್ಟಿಕ್ ಕವರಿನಲ್ಲಿ ಸುತ್ತಿ ಕಾಲುವೆಗೆ ಎಸೆದಿದ್ದಾರೆ. ಪೊಲೀಸರು ಮಗುವಿನ ಮುಂಡವನ್ನು ಪತ್ತೆ ಮಾಡಿದ್ದು, ಮೃತ ದೇಹದಿಂದ ಕಾಣೆಯಾಗಿದ್ದ ತಲೆಯ ಪತ್ತೆಗೆ ಕಾರ್ಯಾಚರಣೆ ನಡೆಸಿದ್ದಾರೆ. ರೈಲ್ವೇ ನಿಲ್ದಾಣದ 4 ಕಿಮೀ ವ್ಯಾಪ್ತಿಯಲ್ಲಿ ಹುಡುಕಾಟ ನಡೆಸಿದ್ದಾರೆ. ಹೆಚ್ಚಿನ ಮಳೆ ಆಗುತ್ತಿರುವುದು ಕಾರ್ಯಾಚರಣೆಗೆ ತಡವಾಗುತ್ತಿದೆ ಎಂಬ ಮಾಹಿತಿ ಲಭಿಸಿದೆ.

    ಇಬ್ಬರು 30 ವರ್ಷದ ವಯಸ್ಸಿನ ಆರೋಪಿಗಳನ್ನು ಸೈಕೋ ಕಿಲ್ಲರ್‍ಗಳು ಎಂದು ಪೊಲೀಸರು ತಿಳಿಸಿದ್ದಾರೆ. ಟಾಟಾ ನಗರದ ರೈಲ್ವೆ ನಿಲ್ದಾಣದಿಂದ ಬಾಲಕಿ ಕಾಣೆಯಾಗಿದ್ದಳು. ಈ ಬಗ್ಗೆ ಬಾಲಕಿಯ ತಾಯಿಯಿಂದ ದೂರು ಪಡೆದ ಪೊಲೀಸರಿಗೆ ಸಿಸಿಟಿವಿ ದೃಶ್ಯಗಳಲ್ಲಿ ಆರೋಪಿಯ ಚಹರೆ ಪತ್ತೆಯಾಗಿತ್ತು. ಟಿ ಶರ್ಟ್ ಮತ್ತು ಶಾಟ್ರ್ಸ್ ಧರಿಸಿದ್ದ ಆರೋಪಿ ರಿಂಕು ಮಗುವನ್ನು ತೆಗೆದುಕೊಂಡು ಪರಾರಿಯಾಗಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಪ್ರಕರಣ ಬೆಳಕಿಗೆ ಬಂದ ಬಳಿಕ ಬಾಲಕಿಯ ಕಿಡ್ನಾಪ್ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

    ಅಂದಹಾಗೇ ಆರೋಪಿ ರಿಂಕು ಸಾಹು ಅವರ ತಾಯಿ ಪೊಲೀಸ್ ಪೇದೆಯಾಗಿದ್ದಾರೆ. ಅವರು ರಿಂಕು ಜೈಲಿನಿಂದ ಬಿಡುಗಡೆಯಾಗಲು ಸಹಾಯ ಮಾಡಿದ್ದರು ಎಂದು ಸ್ಥಳೀಯರು ಆರೋಪ ಮಾಡಿದ್ದಾರೆ. ಅಲ್ಲದೇ ಆರೋಪಿ ರಿಂಕು ಕೂಡ 3 ಮಕ್ಕಳ ತಂದೆಯಾಗಿದ್ದು, ಈ ಹಿಂದೆ ಹಲವು ಮಕ್ಕಳನ್ನು ಕಿಡ್ನಾಪ್ ಮಾಡಿ ಕಿರುಕುಳ ನೀಡಿದ ಆರೋಪವಿದೆ. ಆತನ ಸ್ನೇಹಿತ ಕೈಲಾಶ್ ತಂದೆ ಕೂಡ ಯೋಧರಾಗಿದ್ದು, ಜಮ್ಮು ಕಾಶ್ಮೀರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.