Tag: accused

  • ಪೊಲೀಸ್ ಮೇಲೆಯೇ ಚಾಕುವಿನಿಂದ ಹಲ್ಲೆಗೈದ ಆರೋಪಿ

    ಪೊಲೀಸ್ ಮೇಲೆಯೇ ಚಾಕುವಿನಿಂದ ಹಲ್ಲೆಗೈದ ಆರೋಪಿ

    ಚಿಕ್ಕಬಳ್ಳಾಪುರ: ಪೊಲೀಸ್ ಸಿಬ್ಬಂದಿ ಮೇಲೆಯೇ ಆರೋಪಿಯೊಬ್ಬ ಚಾಕುವಿನಿಂದ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಅರಳುಮಲ್ಲಿಗೆ ಬಳಿ ನಡೆದಿದೆ.

    ದೊಡ್ಡಬಳ್ಳಾಪುರ ಪೊಲೀಸರು ಕೊಲೆ ಆರೋಪಿಯನ್ನು ಬಂಧಿಸಿಲು ಹೋದಾಗ ಆರೋಪಿ ಮಲ್ಲೋಹಳ್ಳಿಯ ಶಿವಶಂಕರ್ ಈ ಕೃತ್ಯ ಎಸಗಿದ್ದಾನೆ.

    ದೊಡ್ಡಬಳ್ಳಾಪುರ ಗ್ರಾಮಾಂತರ ಪಿಎಸ್‍ಐ ಗಜೇಂದ್ರ ಹಾಗೂ ರಾಧಾಕೃಷ್ಣ ಅವರು ಆರೋಪಿಯನ್ನು ತಡರಾತ್ರಿ ಬಂಧಿಸಲು ತೆರಳಿದ್ದರು. ಈ ವೇಳೆ ಪೊಲೀಸ್ ಸಿಬ್ಬಂದಿಯನ್ನು ಕಂಡ ಶಿವಶಂಕರ್, ರಾಧಾಕೃಷ್ಣರಿಗೆ ಚಾಕುವಿನಿಂದ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ್ದಾನೆ.

    ಇದೇ ಸಂದರ್ಭದಲ್ಲಿ ಗಜೇಂದ್ರ ಅವರು ತಮ್ಮ ಆತ್ಮರಕ್ಷಣೆಗಾಗಿ ರಿವಾಲ್ವರ್ ನಿಂದ ಆರೋಪಿ ಕಾಲಿಗೆ ಗುಂಡು ಹಾರಿಸಿದ್ದಾರೆ. ಪರಿಣಾಮ ಆರೋಪಿ ಸ್ಥಳದಲ್ಲೇ ಬಿದ್ದಿದ್ದು, ನಂತರ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

    ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

  • ಕೊಲೆ ಆರೋಪಿಗಳನ್ನು ಶಿಕ್ಷಿಸುವ ಬದಲು ಪೊಲೀಸ್ ಸಿಬ್ಬಂದಿಗೆ ಶಿಕ್ಷೆ

    ಕೊಲೆ ಆರೋಪಿಗಳನ್ನು ಶಿಕ್ಷಿಸುವ ಬದಲು ಪೊಲೀಸ್ ಸಿಬ್ಬಂದಿಗೆ ಶಿಕ್ಷೆ

    -50ಕ್ಕೂ ಹೆಚ್ಚು ಸಿಬ್ಬಂದಿಗೆ ನೋಟಿಸ್ ನೀಡಿ ಸಸ್ಪೆಂಡ್

    ಹುಬ್ಬಳ್ಳಿ: ಕೊಲೆ ಮಾಡಿದ ಆರೋಪಿಗಳನ್ನು ಶಿಕ್ಷಿಸುವ ಬದಲು ಪೊಲೀಸ್ ಸಿಬ್ಬಂದಿಗೆ ಶಿಕ್ಷೆ ನೀಡಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

    ಅಪರಾಧ ಚಟುವಟಿಕೆಗಳನ್ನು ತಡೆಯುವ ಪೊಲೀಸರಿಗೆ ಮಾನಸಿಕ ಸ್ಥೈರ್ಯ ಕೊಡಬೇಕಾದ ಹಿರಿಯ ಪೊಲೀಸ್ ಅಧಿಕಾರಿಗಳು ಕೆಳಹಂತದ ಸಿಬ್ಬಂದಿಗೆ ಶಿಕ್ಷೆ ಕೊಟ್ಟಿದ್ದಾರೆ. ಒಂದಲ್ಲ ಎರಡಲ್ಲ ಬರೋಬ್ಬರಿ 50ಕ್ಕೂ ಹೆಚ್ಚು ಸಿಬ್ಬಂದಿಗೆ ನೋಟಿಸ್ ನೀಡಿ ಸಸ್ಪೆಂಡ್ ಮಾಡಿರುವುದು ಪೊಲೀಸ್ ಪೇದೆಗಳ ಮಾನಸಿಕ ಸ್ಥೈರ್ಯವನ್ನೆ ಕುಂದಿಸಿದೆ.

    ಸಮಾಜ ಅಂದ ಮೇಲೆ ಕೊಲೆ ಅಪರಾಧ ಚಟುವಟಿಕೆಗಳು ನಡೆಯುತ್ತಾನೆ ಇರುತ್ತವೆ. ಆದರೆ ಅಪರಾಧ ಪ್ರಕರಣಗಳನ್ನು ಕಡಿಮೆ ಮಾಡಲು ಹಿರಿಯ ಪೊಲೀಸ್ ಅಧಿಕಾರಿಗಳು ಕಳಹಂತದ ಪೇದೆಗಳಿಗೆ ಧೈರ್ಯ ಹೇಳಿ ಆತ್ಮಸ್ಥೈರ್ಯ ತುಂಬಬೇಕು. ಆಗ ಮಾತ್ರ ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕಬಹುದು. ಹುಬ್ಬಳ್ಳಿ ಧಾರವಾಡ ಮಹನಾಗರ ಪೊಲೀಸ್ ವ್ಯಾಪ್ತಿಯಲ್ಲಿ ನಡೆದ ಕೊಲೆ ಅಪರಾಧ ಚಟುವಟಿಕೆಗಳಿಗೆ ಇದೀಗ ಪೊಲೀಸ್ ಪೇದೆಗಳನ್ನು ಹೊಣೆಯಾಗಿಸುವ ಯತ್ನ ನಡೆಯುತ್ತಿದೆ.

    ಹುಬ್ಬಳ್ಳಿ ಧಾರವಾಡ ಮಹಾನಗರ ಪೊಲೀಸ್ ವ್ಯಾಪ್ತಿಯಲ್ಲಿ ಕಳೆದ ಒಂದು ತಿಂಗಳಿನಿಂದ ನಾಲ್ಕು ಕೊಲೆ, ಒಂದು ಶೂಟೌಟ್, ಸರಗಳ್ಳತನ ಸೇರಿದಂತೆ ಹಲವು ಗದ್ದಲ ಗಲಾಟೆ ಪ್ರಕರಣಗಳು ನಡೆದಿವೆ. ಈ ಅಪರಾಧ ಪ್ರಕರಣಗಳಿಗೆ ಇದೀಗ ಪೊಲೀಸ್ ಪೇದೆಗಳನ್ನೆ ಹೊಣೆಯಾಗಿಸಿ ಬರೋಬ್ಬರಿ 50ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಗೆ ಶಿಕ್ಷೆ ವಿಧಿಸಲಾಗಿದೆ. ಹುಬ್ಬಳ್ಳಿ ವ್ಯಾಪ್ತಿಯಲ್ಲಿ 17 ಪೇದೆಗಳು, ಧಾರವಾಡ ಠಾಣೆಗಳ ವ್ಯಾಪ್ತಿಯಲ್ಲಿ 14 ಜನ ಪೇದೆಗಳನ್ನು ಅಮಾನತು ಮಾಡಿ ಶಿಕ್ಷೆ ವಿಧಿಸಲಾಗಿದೆ. ಜೊತೆಗೆ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ 30 ಸಿಬ್ಬಂದಿಗೆ ನೋಟಿಸ್ ಜಾರಿ ಮಾಡಿರುವುದು ಪೊಲೀಸ್ ಪೇದೆಗಳ ಮಾನಸಿಕ ಸ್ಥೈರ್ಯವನ್ನೆ ಕುಂದಿಸಿದೆ. ಪಿಎಸ್‍ಐ, ಇನ್ಸ್‌ಪೆಕ್ಟರ್‌ ಸೇರಿದಂತೆ ಹಿರಿಯ ಅಧಿಕಾರಿಗಳಿಗೆ ಇಲ್ಲದ ಶಿಕ್ಷೆ ನಮಗ್ಯಾಕೆ ಎಂದು ಪೇದೆಗಳು ಅಳಲು ತೋಡಿಕೊಳ್ಳುತ್ತಿದ್ದಾರೆ. ಅಲ್ಲದೇ ಇದು ಸಿಬ್ಬಂದಿ ಮಾನಸಿಕ ಆತ್ಮಸ್ಥೈರ್ಯ ಕುಂದಿಸಿದಂತಾಗುತ್ತದೆ ಎಂದು ಹೇಳುತ್ತಿದ್ದಾರೆ.

  • ಚರ್ಚ್ ಬ್ಲಾಸ್ಟ್ ಪ್ರಕರಣದ ಆರೋಪಿ ಪತ್ನಿಯ ವೀಸಾ ರದ್ದು- ಪಾಕಿಸ್ತಾನಕ್ಕೆ ಕಳುಹಿಸಿದ ಗೃಹ ಇಲಾಖೆ

    ಚರ್ಚ್ ಬ್ಲಾಸ್ಟ್ ಪ್ರಕರಣದ ಆರೋಪಿ ಪತ್ನಿಯ ವೀಸಾ ರದ್ದು- ಪಾಕಿಸ್ತಾನಕ್ಕೆ ಕಳುಹಿಸಿದ ಗೃಹ ಇಲಾಖೆ

    ಕಾರವಾರ: 2015ರಲ್ಲಿ ಬೆಂಗಳೂರು ಚರ್ಚ್ ಬ್ಲಾಸ್ಟ್ ಪ್ರಕರಣದಲ್ಲಿ ಭಾಗಿಯಾಗಿದ್ದ ಭಟ್ಕಳ ಮೂಲದ ಭಯೋತ್ಪಾದಕ ಅಫಾಕ್ ಲಂಕಾ ಪತ್ನಿ ಅರ್ಸಲ ಅಬೀರ್ ವೀಸಾವನ್ನು ಕೇಂದ್ರ ಗೃಹ ಇಲಾಖೆ ರದ್ದು ಪಡಿಸಿ, ಮರಳಿ ಪಾಕಿಸ್ತಾನಕ್ಕೆ ಕಳುಹಿಸಿದೆ.

    ಒಂದು ತಿಂಗಳ ಹಿಂದೆಯೇ ಪಾಕಿಸ್ತಾನಕ್ಕೆ ತೆರಳುವಂತೆ ಅರ್ಸಲ ಅಬೀರ್ ಗೆ ನೋಟಿಸ್ ನೀಡಲಾಗಿತ್ತು. 2006ರಿಂದ ದೀರ್ಘ ಅವಧಿಯ ವೀಸಾ ಪಡೆದು ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಮೂವರು ಮಕ್ಕಳೊಂದಿಗೆ ಅರ್ಸಲ ಅಬೀರ್ ವಾಸವಿದ್ದರು. ಅಪಕಾ ಲಂಕಾ ಪಾಕಿಸ್ತಾನ ಮೂಲದ ಅರ್ಸಲಳನ್ನು ದುಬೈನಲ್ಲಿ ಮದುವೆಯಾಗಿದ್ದನು. ನಂತರ ಪಾಕಿಸ್ತಾನದಲ್ಲಿ ಇಬ್ಬರೂ ಕೆಲವು ವರ್ಷ ನೆಲೆಸಿ ನಂತರ ಭಟ್ಕಳದ ಆಜಾದ್ ನಗರದಲ್ಲಿ ಅಫಾಕ್ ಲಂಕಾ ಯುನಾನಿ ವೈದ್ಯಕೀಯ ಚಿಕಿತ್ಸಾ ಕೇಂದ್ರ ತೆರೆದಿದ್ದನು. ಈ ವೇಳೆ ಬೆಂಗಳೂರಿನ ಚರ್ಚ್ ಬ್ಲಾಸ್ಟ್ ಪ್ರಕರಣದಲ್ಲಿ ಆರೋಪಿಯಾಗಿದ್ದ ಈತನನ್ನು ಬೆಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದರು.

    ಈತನ ಪತ್ನಿ ಹಾಗೂ ಈತನ ಖಾತೆಗೆ ಪಾಕಿಸ್ತಾನದ ಕೆಲವು ನಿಷೇಧಿತ ಸಂಘಟನೆಗಳು ಹಣ ವರ್ಗಾವಣೆ ಮಾಡಿದ್ದವು. ಈ ಹಿನ್ನೆಲೆಯಲ್ಲಿ ಅರ್ಸಲ ಅಬೀರ್‍ಳನ್ನು ಕೂಡ ತನಿಖೆ ನಡೆಸಲಾಗಿತ್ತು. ಇದೀಗ ದೇಶದ ಭದ್ರತೆಯ ದೃಷ್ಟಿಯಿಂದ ಕೇಂದ್ರ ಗೃಹ ಇಲಾಖೆ ಈಕೆಯ ವೀಸಾವನ್ನು ರದ್ದು ಪಡಿಸಿದ್ದು, ಪಾಕಿಸ್ತಾನಕ್ಕೆ ಕಳುಹಿಸಿಕೊಟ್ಟಿದೆ.

    ಚರ್ಚ್ ಸ್ಫೋಟ ಪ್ರಕರಣ:
    ಬೆಂಗಳೂರು ನಗರದ ಹೃದಯ ಭಾಗವಾದ ಎಂ.ಜಿ.ರಸ್ತೆ ಬಳಿಯ ಚರ್ಚ್ ಸ್ಟ್ರೀಟ್‍ನಲ್ಲಿ ಡಿ.28ರ ರಾತ್ರಿ ಸುಮಾರು 8.30ರ ವೇಳೆಗೆ ಬಾಂಬ್ ಸ್ಫೋಟ ಸಂಭವಿಸಿತ್ತು. ಘಟನೆಯಲ್ಲಿ ತಮಿಳುನಾಡು ಮೂಲದ ಭವಾನಿ(37) ಎಂಬ ಮಹಿಳೆ ಸಾವನ್ನಪ್ಪಿದ್ದರು. ವಿದ್ಯಾರ್ಥಿ ಕಾರ್ತಿಕ್(23), ಸಾಫ್ಟ್‍ವೇರ್ ಎಂಜಿನಿಯರ್, ರಾಜರಾಜೇಶ್ವರಿ ನಗರದ ನಿವಾಸಿ ಸಂದೀಪ್(30) ಮತ್ತು ಐಬಿಎಂ ಉದ್ಯೋಗಿ ವಿನಯ್(39) ಗಾಯಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ವಿಶೇಷವಾಗಿ ಪರಿಗಣಿಸಿ ದೂರು ದಾಖಲಿಸಿಕೊಂಡಿದ್ದರು. ನಂತರ ಪೊಲೀಸರು ತನಿಖೆ ನಡೆಸಿ ಆರೋಪಿಗಳಾದ ಸದ್ದಾಂ ಹುಸೇನ್ (35) ಹಾಗೂ ಸೈಯದ್ ಇಸ್ಮಾಯಿಲ್ ಅಫಾಕ್ (34) ಹಾಗೂ ಎಂಬಿಎ ವಿದ್ಯಾರ್ಥಿ ಅಬ್ದುಸ್ ಸುಬುರ್ (24) ಬಂಧಿಸಿದ್ದರು.

  • ಸಿಲಿಕಾನ್ ಸಿಟಿಯಲ್ಲಿ ಬೆಳ್ಳಂಬೆಳಗ್ಗೆ ಸದ್ದು ಮಾಡಿದ ಪೊಲೀಸರ ಪಿಸ್ತೂಲ್

    ಸಿಲಿಕಾನ್ ಸಿಟಿಯಲ್ಲಿ ಬೆಳ್ಳಂಬೆಳಗ್ಗೆ ಸದ್ದು ಮಾಡಿದ ಪೊಲೀಸರ ಪಿಸ್ತೂಲ್

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಬೆಳ್ಳಂಬೆಳಗ್ಗೆ ಪೊಲೀಸರ ಪಿಸ್ತೂಲ್ ಸದ್ದು ಮಾಡಿದ್ದು, ರೌಡಿಶೀಟರ್‌ಗಳ ಮೇಲೆ ಜಾಲಹಳ್ಳಿ ಪೊಲೀಸರು ಗುಂಡಿನ ದಾಳಿ ನಡೆಸಿದ್ದಾರೆ.

    ಆರೋಪಿಗಳಾದ ವಿಜಯ್ ದಡಿಯಾ ವಿಜಿ ಹಾಗು ಮೋರಿ ಅನಿ ಮೇಲೆ ಜಾಲಹಳ್ಳಿ ಇನ್ಸ್‌ಪೆಕ್ಟರ್‌ಗಳಾದ ಯಶವಂತ್ ಹಾಗೂ ಪಿಎಸ್‍ಐ ಲೇಪಾಕ್ಷಿ ಫೈರಿಂಗ್ ನಡೆಸಿದ್ದಾರೆ. ದಡಿಯಾ ವಿಜಿ ನಂದಿನಿ ಲೇಔಟ್‍ನ ರೌಡಿಶೀಟರ್ ಆಗಿದ್ದು, ಸುಮಾರು 15 ಪ್ರಕರಣದಲ್ಲಿ ಭಾಗಿಯಾಗಿದ್ದನು. ಅಲ್ಲದೆ ಇಬ್ಬರು ಹಲವು ಪ್ರಕರಣದಲ್ಲಿ ಬೇಕಾಗಿದ್ದರು.

    ಕಳೆದ ವಾರ ವಿಜಿ ಹಾಗೂ ಅನಿ ಸರಗಳ್ಳತನ ಮಾಡಿದ್ದರು. ಅಲ್ಲದೆ ಸರಗಳ್ಳತನದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಆರೋಪಿಗಳು ಮುಂಜಾನೆ ನಂದಿನಿ ಲೇಔಟ್‍ನ ಕೂಲಿನಗರದಲ್ಲಿ ಅಡಗಿಕೊಂಡಿದ್ದರು. ಹಾಗಾಗಿ ಇನ್ಸ್‌ಪೆಕ್ಟರ್‌ ಯಶವಂತ್ ಅಂಡ್ ಟೀಂ ಆರೋಪಿಗಳ ಬಂಧನಕ್ಕೆ ತೆರಳಿದ್ದರು.

    ಬಂಧನಕ್ಕೆ ತೆರಳಿದ್ದ ವೇಳೆ ಆರೋಪಿಗಳು ಪೊಲೀಸ್ ಸಿಬ್ಬಂದಿ ಶ್ರೀನಿವಾಸ್ ಮೂರ್ತಿ ಮತ್ತು ನರೇಶ್ ಮೇಲೆ ಹಲ್ಲೆ ನಡೆಸಿದ್ದಾರೆ. ಆತ್ಮರಕ್ಷಣೆಗಾಗಿ ಇನ್ಸ್‌ಪೆಕ್ಟರ್‌ ಯಶವಂತ್ ಮತ್ತು ಪಿಎಸ್ ಐ ಲೇಪಾಕ್ಷಿ ಆರೋಪಿಗಳ ಕಾಲಿಗೆ ಗುಂಡು ಹಾರಿಸಿದ್ದಾರೆ.

    ಗಾಯಾಳು ಆರೋಪಿಗಳಿಗೆ ಹಾಗೂ ಪೊಲೀಸ್ ಸಿಬ್ಬಂದಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

  • ಬೆಂಗ್ಳೂರು ದರೋಡೆ ಪ್ರಕರಣಕ್ಕೆ ಟ್ವಿಸ್ಟ್ – ಹ್ಯಾಪಿ ಎಂಡಿಂಗ್‍ಗೆ ಬಂದವರಿಂದಲೇ ಮಹಿಳೆಗೆ ಚಾಕು ಇರಿತ

    ಬೆಂಗ್ಳೂರು ದರೋಡೆ ಪ್ರಕರಣಕ್ಕೆ ಟ್ವಿಸ್ಟ್ – ಹ್ಯಾಪಿ ಎಂಡಿಂಗ್‍ಗೆ ಬಂದವರಿಂದಲೇ ಮಹಿಳೆಗೆ ಚಾಕು ಇರಿತ

    ಬೆಂಗಳೂರು: ದರೋಡೆ ಪ್ರಕರಣವೊಂದು ಭಾರೀ ತಿರುವು ಪಡೆದುಕೊಂಡಿದ್ದು, ಪರಿಚಿತರೇ ದರೋಡೆ ಮಾಡಿದರೂ ಅವರ್ಯಾರೂ ಗೊತ್ತೇ ಇಲ್ಲ ಎಂದಿದ್ದ ಮಹಿಳೆಯ ಬಣ್ಣವನ್ನು ಪೊಲೀಸರು ಬಯಲು ಮಾಡಿದ್ದಾರೆ.

    ಕುಡಿಯಲು ನೀರು ಕೇಳುವ ನೆಪದಲ್ಲಿ ಅಕ್ರಮ ಸಂಬಂಧ ಹೊಂದಿದ್ದವನೇ ಮಹಿಳೆಗೆ ಚಾಕುವಿನಿಂದ ಇರಿದ ಘಟನೆ ಬಾಗಲಗುಂಟೆಯಲ್ಲಿ ನಡೆದಿದೆ. ದರೋಡೆಕೋರರು ಪರಿಚಯವಿದ್ದರೂ ಸಹ ಮಹಿಳೆ ಅವರ್ಯಾರು ಗೊತ್ತೇ ಇಲ್ಲ ಎಂದು ದೂರು ನೀಡಿದ್ದು, ಡಬಲ್ ಗೇಮ್ ಆಡುವ ಮೂಲಕ ಮಾಜಿ ಮುಖ್ಯಮಂತ್ರಿಗಳ ಪ್ರತಿಭಟನೆಯಲ್ಲಿ ಬ್ಯುಸಿ ಇದ್ದ ಪೊಲೀಸರಿಗೆ ಮಹಿಳೆ ಥಂಡಾ ಹೊಡೆಸಿದ್ದಾಳೆ.

    ಏನಿದು ಪ್ರಕರಣ?
    ಅ.1 ರಂದು ಮಹಿಳೆಯೊಬ್ಬರ ಮನೆಗೆ ನುಗ್ಗಿ ಚಾಕು ಹಾಕಿ, ದರೋಡೆ ಮಾಡಲಾಗಿತ್ತು. ಯಾರೋ ಅಪರಿಚಿತರು ನೀರು ಕೇಳುವ ನೆಪದಲ್ಲಿ ಮನೆಗೆ ನುಗ್ಗಿ, ಚಾಕುವಿನಿಂದ ಇರಿದು ದರೋಡೆ ಮಾಡಿದ್ದಾರೆ ಎಂದು ಮಹಿಳೆ ದೂರು ನೀಡಿದ್ದಳು. ಈ ದೂರಿನ ಹಿನ್ನೆಲೆಯಲ್ಲಿ ಟವರ್ ಲೋಕೇಶನ್ ಮೂಲಕ ಬಾಗಲಕುಂಟೆ ಪೊಲೀಸರು ಆರೋಪಿಗಳಾದ ರಾಕೇಶ್ ಗೌಡ ಮತ್ತು ಇರ್ಫಾನ್ ಬಂಧಿಸಿದ್ದಾರೆ. ತನಿಖೆ ಕೈಗೊಂಡ ಪೊಲೀಸರಿಗೆ ಬೇರೆಯದೇ ಸತ್ಯ ಅನಾವರಣವಾಗಿದೆ.

    ಮಲ್ಲೇಶ್ವರದ ಗ್ಲಾಮರ್ ಸ್ಪಾ ಆ್ಯಂಡ್ ಸಲೂನ್‍ನಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಗೆ ರಾಕೇಶ್ ಗೌಡಮ ಪರಿಚಯವಾಗಿತ್ತು. ಸ್ಪಾ ಹೆಸರಲ್ಲಿ ರಾಕೇಶ್ ಗೌಡ ಮಹಿಳೆ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದ. ಆಗಾಗ ಸ್ಪಾಗೆ ಆಗಮಿಸಿ ಮಹಿಳೆಯ ಜೊತೆಗೆ ಅನೈತಿಕ ಸಂಬಂಧ ಬೆಳೆಸುತ್ತಿದ್ದ. ಇದೇ ಪರಿಚಯದ ಮೇಲೆ ರಾಕೇಶ್ ಮಹಿಳೆಗೆ ಸ್ವಲ್ಪ ಹಣ ಕೊಟ್ಟಿದ್ದ. ಈ ಹಣ ಕೇಳಲು ರಾಕೇಶ್ ತನ್ನ ಸ್ನೇಹಿತ ಇರ್ಫಾನನ್ನೂ ಜೊತೆಗೆ ಕರೆದುಕೊಂಡು ಮಂಗಳವಾರ ಬಾಗಲಗುಂಟೆಯ ಮಹಿಳೆ ಮನೆಗೆ ಹೋಗಿದ್ದ.

    ಈ ವೇಳೆ ಮಹಿಳೆಯ ಜೊತೆ ರಾಸಲೀಲೆ ನಡೆಸಿದ ರಾಕೇಶ್, ಬಳಿಕ ಹಣ ಕೊಡುವಂತೆ ಕೇಳಿದ್ದ. ನಾನು ನಿನ್ನ ಜೊತೆ ಸಹಕರಿಸಿಯೂ ಹಣವನ್ನೂ ಕೊಡಬೇಕೇ? ನಾನು ಹಣ ನೀಡಲ್ಲ ಎಂದು ಮಹಿಳೆ ದಬಾಯಿಸಿದ್ದಾಳೆ. ಮಹಿಳೆ ಕೂಗಿಕೊಳ್ಳಲು ಪ್ರಾರಂಭಿಸುತ್ತಿದ್ದಂತೆ ರಾಕೇಶ್ ಗೌಡ ಮತ್ತು ಇರ್ಫಾನ್ ಅವಳ ಮುಖಕ್ಕೆ ಬಟ್ಟೆ ಸುತ್ತಿ ಕೈಗೆ ಚಾಕು ಇರಿದಿದ್ದರು. ನಂತರ ಮಹಿಳೆಯ ಮನೆಯಲ್ಲಿದ್ದ ಚಿನ್ನ ದೋಚಿ ರಾಕೇಶ್ ಮತ್ತೂಟ್ ಫೈನಾನ್ಸಿನಲ್ಲಿ ಅಡವಿಟ್ಟಿದ್ದ.

    ರಾಕೇಶ್ ಗೌಡ ದರೋಡೆ ಮಾಡಿಕೊಂಡು ಹೋಗುತ್ತಿದ್ದಂತೆ ಮಹಿಳೆ ಪೊಲೀಸರಿಗೆ ಸತ್ಯ ಮರೆಮಾಚಿ, ಯಾರೋ ಅಪರಿಚಿತರು ನೀರು ಕೇಳಲು ಬಂದು ನನ್ನ ಮನೆ ದರೋಡೆ ಮಾಡಿದ್ದಾರೆ ಎಂದು ಸುಳ್ಳು ದೂರು ದಾಖಲಿಸಿದ್ದಳು. ತನಿಖೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಬಾಗಲಗುಂಟೆ ಪೊಲೀಸರು ಯಶಸ್ವಿಯಾಗಿದ್ದಾರೆ. ಜೊತೆಗೆ ಮಹಿಳೆಯ ಡಬಲ್ ಗೇಮ್ ಸಹ ಬಯಲಾಗಿದೆ.

  • ಅಪ್ರಾಪ್ತೆಯನ್ನು ಅಪಹರಿಸಿ, ಬಂಧಿಸಿಟ್ಟು 3 ದಿನಗಳ ಕಾಲ ಗ್ಯಾಂಗ್ ರೇಪ್

    ಅಪ್ರಾಪ್ತೆಯನ್ನು ಅಪಹರಿಸಿ, ಬಂಧಿಸಿಟ್ಟು 3 ದಿನಗಳ ಕಾಲ ಗ್ಯಾಂಗ್ ರೇಪ್

    ಚಂಡೀಗಢ: ಅಪ್ರಪ್ತ ಬಾಲಕಿಯೊಬ್ಬಳನ್ನು ಆಕೆಯ ಮನೆ ಮುಂದೆಯೇ ಅಪಹರಿಸಿದ 4 ಮಂದಿ ಯುವಕರು, ಆಕೆಯನ್ನು ಬಂಧಿಸಿಟ್ಟು, ಸತತ 3 ದಿನಗಳ ಕಾಲ ಸಾಮೂಹಿಕ ಅತ್ಯಾಚಾರ ಮಾಡಿದ ನಾಚಿಕೆಗೇಡಿ ಘಟನೆ ಪಂಜಾಬ್‍ನಲ್ಲಿ ನಡೆದಿದೆ.

    ಪಂಜಾಬ್‍ನ ಬರ್ನಾಲಾ ಜಿಲ್ಲೆಯ ಮೌರ್ ನಭಾ ಗ್ರಾಮದ 12 ವರ್ಷದ ಬಾಲಕಿಯನ್ನು ಅದೇ ಗ್ರಾಮದ 4 ಮಂದಿ ಯುವಕರು ಅಪಹರಿಸಿದ್ದರು. ಸೆ. 29ರಂದು ಬಾಲಕಿಯ ಮನೆಯ ಮುಂಭಾಗದಲ್ಲೇ ಆಕೆಯನ್ನು ಅಪಹರಿಸಿ, ಕೋಣೆಯೊಂದರಲ್ಲಿ ಬಂಧಿಸಿಟ್ಟಿದ್ದರು. ಅಲ್ಲದೆ ಸತತ ಮೂರು ದಿನಗಳ ಕಾಲ ಆಕೆಯ ಮೇಲೆ ಆರೋಪಿಗಳು ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ. ಬಾಲಕಿ ನಾಪತ್ತೆಯಾದ ಬಗ್ಗೆ ಬಾಲಕಿ ಪೋಷಕರು ಪೊಲೀಸರಿಗೆ ದೂರನ್ನು ಕೂಡ ನೀಡಿದ್ದರು. ಆದರೆ ಪೊಲೀಸರು ಈ ಬಗ್ಗೆ ನಿರ್ಲಕ್ಷ್ಯ ತೋರಿ, ಯಾವುದೇ ಕ್ರಮ ತೆಗೆದುಕೊಂಡಿರಲಿಲ್ಲ ಎಂದು ಪೋಷಕರು ಆರೋಪಿಸಿದ್ದಾರೆ.

    ಮೂರು ದಿನಗಳ ನಂತರ ದುಷ್ಟರಿಂದ ತಪ್ಪಿಸಿಕೊಂಡು ಬಂದ ಬಾಲಕಿ, ಕುಟುಂಬದವರ ಮುಂದೆ ನೋವು ತೋಡಿಕೊಂಡಿದ್ದಾಳೆ. ಹೀನಾಯ ಸ್ಥಿತಿಗೆ ತಲುಪಿದ್ದ ಬಾಲಕಿಯನ್ನು ಪೋಷಕರು ಮೊದಲು ಆಸ್ಪತ್ರೆಗೆ ಸೇರಿಸಿ, ಬಳಿಕ ಪೊಲೀಸರಿಗೆ ಈ ಬಗ್ಗೆ ದೂರು ನೀಡಿದ್ದಾರೆ.

    ನಾಲ್ವರು ಆರೋಪಿಗಳಲ್ಲಿ ಓರ್ವ ಆರೋಪಿಯನ್ನು ಮೌರ್ ನಭಾ ಗ್ರಾಮದ ನಿವಾಸಿ ಗುರ್‌ಪ್ರೀತ್‌ ಸಿಂಗ್ ಎಂದು ಬಾಲಕಿ ಗುರುತಿಸಿದ್ದು, ಇನ್ನುಳಿದವರ ಬಗ್ಗೆ ಮಾಹಿತಿ ಕಲೆ ಹಾಕಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ. ಅಲ್ಲದೇ ಈ ಬಗ್ಗೆ ತನಿಖೆ ಕೈಗೊಂಡಿದ್ದೇವೆ. ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸಲಾಗುತ್ತದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಭರವಸೆ ಕೊಟ್ಟಿದ್ದಾರೆ.

  • ಸಂತ್ರಸ್ತೆ ಕಚ್ಚಿದ ಗುರುತಿನಿಂದ ರೇಪ್ ಆರೋಪಿ ಸಿಕ್ಕಿಬಿದ್ದ

    ಸಂತ್ರಸ್ತೆ ಕಚ್ಚಿದ ಗುರುತಿನಿಂದ ರೇಪ್ ಆರೋಪಿ ಸಿಕ್ಕಿಬಿದ್ದ

    ಮುಂಬೈ: 50 ವರ್ಷದ ಮಹಿಳೆ ಮೇಲೆ ಅತ್ಯಾಚಾರ ಎಸಗಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಂತ್ರಸ್ತೆ ಆರೋಪಿಯ ಎದೆ ಮೇಲೆ ಕಚ್ಚಿದ್ದ ಗುರುತಿನ ಆಧಾರದ ಮೇರೆಗೆ ಆತನನ್ನ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಈ ಘಟನೆ ಮಹಾರಾಷ್ಟ್ರದ ಥಾಣೆ ಪ್ರದೇಶದಲ್ಲಿ ನಡೆದಿದ್ದು, ಆರೋಪಿಯನ್ನು ಲಖನ್ ದೇವ್ಕರ್ ಎಂದು ಗುರುತಿಸಲಾಗಿದೆ. ಕಳೆದ ಜೂನ್ 23 ರಂದು ಈ ಘಟನೆ ನಡೆದಿದ್ದು, ಆರೋಪಿಯನ್ನು ಶನಿವಾರ ಬಂಧಿಸಲಾಗಿದೆ.

    ಏನಿದು ಪ್ರಕರಣ?
    ಜೂನ್ 23 ರಂದು ಸಂತ್ರಸ್ತೆ ಒಂಟಿಯಾಗಿ ಮನೆಗೆ ಹಿಂದಿರುಗುತ್ತಿದ್ದರು. ಆಗ ಆರೋಪಿ ಮಹಿಳೆಯನ್ನು ಬಲವಂತವಾಗಿ ನಿರ್ಜನ ಪ್ರದೇಶಕ್ಕೆ ಎಳೆದುಕೊಂಡು ಹೋಗಿ ಅತ್ಯಾಚಾರ ಮಾಡಿದ್ದಾನೆ. ನಂತರ ಮಹಿಳೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಆಕೆ ಪೊಲೀಸರಿಗೆ ದೂರು ನೀಡಿದ್ದರು ಎಂದು ಪೊಲೀಸ್ ಇನ್ಸ್ ಪೆಕ್ಟರ್ ಬಾಲಾಜಿ ತಿಳಿಸಿದ್ದಾರೆ.

    ಪೊಲೀಸರು ಈ ಕುರಿತು ತನಿಖೆ ನಡೆಸುತ್ತಿರುವಾಗ ಆ ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ಮಾಡಿದ್ದಾರೆ. ಜೊತೆಗೆ ಅಲ್ಲಿನ ಅನೇಕ ಸ್ಥಳೀಯರು, ಕಾರ್ಮಿಕರು ಸೇರಿದಂತೆ ಇತರರನ್ನು ವಿಚಾರಣೆ ನಡೆಸಿದ್ದಾರೆ. ಕೆಲವು ಪ್ರದೇಶದ ಸಿಸಿಟಿವಿಯನ್ನು ಪರಿಶೀಲನೆ ಮಾಡಿದಾಗ ಆರೋಪಿಯ ವರ್ತನೆ ಅನುಮಾನವಾಗಿ ಕಂಡು ಬಂದಿದೆ. ತಕ್ಷಣ ಆತನನ್ನು ವಶಪಡಿಸಿಕೊಂಡು ವಿಚಾರಣೆ ಮಾಡಿದೆವು. ಈ ವೇಳೆ ಆತನ ಎದೆಯ ಮೇಲೆ ಕಚ್ಚಿದ ಗುರುತುಗಳು ಕಂಡುಬಂದಿತ್ತು ಎಂದು ಬಾಲಾಜಿ ಹೇಳಿದರು.

    ನಂತರ ಆರೋಪಿ ತಾನು ಮಾಡಿದ ಅಪರಾಧವನ್ನು ಒಪ್ಪಿಕೊಂಡನು. ಆರೋಪಿ ಅತ್ಯಾಚಾರ ಮಾಡಲು ಹೋದಾಗ ಮಹಿಳೆ ವಿರೋಧಿಸುವ ಪ್ರಯತ್ನದಲ್ಲಿ ಆತನ ಎದೆಯ ಮೇಲೆ ಕಚ್ಚಿದ್ದರು. ಸದ್ಯಕ್ಕೆ ಆರೋಪಿಯನ್ನು ಬಂಧಿಸಲಾಗಿದೆ. ಈತನ ವಿರುದ್ಧ ಅತ್ಯಾಚಾರ ಮತ್ತು ಕ್ರಿಮಿನಲ್ ಬೆದರಿಕೆ ಸೇರಿದಂತೆ ಅನೇಕ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

  • 51 ಕೆಜಿ ತೂಕದ 10 ಆನೆ ದಂತ ವಶ – ಮೂವರು ಅರೆಸ್ಟ್

    51 ಕೆಜಿ ತೂಕದ 10 ಆನೆ ದಂತ ವಶ – ಮೂವರು ಅರೆಸ್ಟ್

    ಬೆಂಗಳೂರು: ಆನೆ ದಂತ ಮಾರಾಟ ಮಾಡುತ್ತಿದ್ದ ಬೃಹತ್ ಜಾಲ ಪತ್ತೆಯಾಗಿದ್ದು, ಸಿಐಡಿ ಅರಣ್ಯ ಘಟಕದಿಂದ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.

    ಬಂಧಿತ ಆರೋಪಿಗಳನ್ನು ಉಜಿರೆಯ ಎ.ಎಂ ಆಬ್ರಾಹಂ, ಕಣ್ಣೂರಿನ ಸುರೇಶ್ ಬಾಬು ಮತ್ತು ಹಾಸನದ ರಮೇಶ್ ಎಂದು ಗುರುತಿಸಲಾಗಿದೆ. ಉಜಿರೆಯ ತೋಟದ ಮನೆ ಮೇಲೆ ದಾಳಿ ನಡೆಸಿದ ಅಧಿಕಾರಿಗಳು ಬಂಧಿತ ಆರೋಪಿಗಳಿಂದ 51  ಕೆಜಿ ತೂಕದ 10 ಆನೆ ದಂತಗಳನ್ನು ವಶಕ್ಕೆ ಪಡೆದು ಆರೋಪಿಗಳನ್ನು ಬಂಧಿಸಿದ್ದಾರೆ.

    ಆರೋಪಿ ಆಬ್ರಾಹಂ ಕೋವಿಯಿಂದ ಆನೆಗಳನ್ನು ಕೊಂದು ದಂತಗಳನ್ನು ಸಂಗ್ರಹಿಸುತ್ತಿದ್ದ. ಅನೆಗಳನ್ನು ಕೊಂದು ದಂತಗಳನ್ನು ಮಂಗಳೂರಿನ ಅನ್ವರ್ ಎಂಬಾತನ ಮೂಲಕ ಕರಾವಳಿ ಸೇರಿ ಹಲವೆಡೆ ಮಾರಾಟ ಮಾಡುತ್ತಿದ್ದ. ಬಂಧಿತರಿಂದ 10 ಆನೆ ದಂತ, ಒಂದು ಕೋವಿ ಮತ್ತು 8 ಜೀವಂತ ಮದ್ದುಗುಂಡು ವಶಕ್ಕೆ ಪಡೆಯಲಾಗಿದೆ.

    ಈ ಸಂಬಂಧ ಬೆಳ್ತಂಗಡಿ ವಲಯ ಅರಣ್ಯ ಕಚೇರಿಯಲ್ಲಿ ಪ್ರಕರಣ ದಾಖಲಾಗಿದೆ. ಮಂಗಳೂರಿನ ಅನ್ವರ್ ಪರಾರಿಯಾಗಿದ್ದು, ಆರೋಪಿಗಾಗಿ ಶೋಧಕಾರ್ಯ ಮುಂದುವರಿದಿದೆ.

  • ಡಿಕೆಶಿ ವಿರುದ್ಧ ಇಡಿಯಿಂದ ಹೊಸ ಆರೋಪ – ಕಾನೂನು ಹೋರಾಟ ಮುಂದುವರಿಸ್ತೇವೆ ಎಂದ್ರು ಡಿಕೆ ಸುರೇಶ್

    ಡಿಕೆಶಿ ವಿರುದ್ಧ ಇಡಿಯಿಂದ ಹೊಸ ಆರೋಪ – ಕಾನೂನು ಹೋರಾಟ ಮುಂದುವರಿಸ್ತೇವೆ ಎಂದ್ರು ಡಿಕೆ ಸುರೇಶ್

    ನವದೆಹಲಿ: ಮಾಜಿ ಸಚಿವ ಡಿಕೆ ಶಿವಕುಮಾರ್ ಅವರ ವಿರುದ್ಧ ಇಡಿ ಹೊಸ ಆರೋಪ ಮಾಡಿದ್ದು, 20 ದೇಶಗಳಲ್ಲಿ ವಿವಿಧ ಅಕೌಂಟ್ ಗಳ ಮೂಲಕ ಡಿಕೆಶಿ ಹಣ ವರ್ಗಾವಣೆ ಮಾಡಿದ್ದಾರೆ ಎಂದು ಇಡಿ ಹೇಳಿದೆ.

    ಇಂದು ಇಡಿ ಕಸ್ಟಡಿಯ ಅವಧಿ ಮುಕ್ತಾಯವಾದ ಹಿನ್ನೆಲೆಯಲ್ಲಿ ಡಿಕೆ ಶಿವಕುಮಾರ್ ಅವರನ್ನು ಅಧಿಕಾರಿಗಳು ನ್ಯಾಯಾಲಯದ ಎದುರು ಹಾಜರುಪಡಿಸಿದ್ದರು. ಈ ವೇಳೆ ಅಧಿಕಾರಿಗಳು ವಿಚಾರಣೆಗಾಗಿ ಕಸ್ಟಡಿಯ ಅವಧಿಯನ್ನು ವಿಸ್ತರಣೆ ಮಾಡಲು ಮನವಿ ಮಾಡಿದ್ದರು. ನ್ಯಾಯಾಲಯ ಸೆ.17ರ ವರೆಗೂ ಕಸ್ಟಡಿಗೆ ನೀಡಿತು.

    ಇದಕ್ಕೂ ಮುನ್ನ ನ್ಯಾಯಾಲಯದಲ್ಲಿ ವಾದ ಮಂಡಿಸಿದ ಇಡಿ ಪರ ವಕೀಲರು ಡಿಕೆಶಿ ಅವರ ವಿರುದ್ಧ ಆರೋಪಗಳ ಬಗ್ಗೆ ನ್ಯಾಯಾಲಯದ ಗಮನಕ್ಕೆ ತಂದರು. 20 ದೇಶಗಳಲ್ಲಿ ಡಿಕೆ ಶಿವಕುಮಾರ್ ಅವರು 317 ಅಕೌಂಟ್ ಹೊಂದಿದ್ದು, 200 ಕೋಟಿ ರೂ. ಕಪ್ಪು ಹಣ ಚಲಾವಣೆಯಾಗಿದೆ. 800 ಕೋಟಿ ಬೇನಾಮಿ ಆಸ್ತಿ ಹೊಂದಿದ್ದಾರೆ ಎಂದು ಆರೋಪಿಸಿದ್ದರು.

    ನ್ಯಾಯಾಲಯದ ಆದೇಶದ ಬಳಿಕ ಮಾತನಾಡಿದ ಸಂಸದ ಡಿಕೆ ಸುರೇಶ್ ಅವರು, ಇದುವರೆಗೂ ಡಿಕೆ ಶಿವಕುಮಾರ್ ಅವರ ಮೇಲೆ ಯಾವುದೇ ಭ್ರಷ್ಟಾಚಾರದ ಆರೋಪವಿಲ್ಲ. ಈಗಾಗಲೇ ಚುನಾವಣಾ ಆಯೋಗಕ್ಕೆ ಸಲ್ಲಿಕೆ ಮಾಡಲಾಗಿರುವ ಆಸ್ತಿ ವಿವರಗಳನ್ನೇ ಮುಂದಿಟ್ಟು ಆರೋಪ ಮಾಡಿದ್ದಾರೆ. ಆ ಮೂಲಕ ನ್ಯಾಯಾಲಯದ ದಿಕ್ಕು ತಪ್ಪಿಸುವ ಕೆಲಸವನ್ನು ಮಾಡುತ್ತಿದ್ದಾರೆ ಎಂದರು.

    ಇದೇ ವೇಳೆ 317 ಖಾತೆಗಳನ್ನು ಹೊಂದಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಈಗ ಅವರು ಅಷ್ಟು ಖಾತೆಗಳಲ್ಲಿ ಇರುವ ಹಣವನ್ನು ನೀಡಿದರೆ ಸಂತೋಷ ಪಡುತ್ತೇವೆ ಎಂದು ಆರೋಪಗಳ ವಿರುದ್ಧ ವ್ಯಂಗ್ಯವಾಡಿದರು.

    ಡಿಕೆ ಶಿವಕುಮಾರ್ ಅವರನ್ನು ರಾಜಕೀಯವಾಗಿ ಹತ್ತಿಕ್ಕುವ ಕೆಲಸ ಮಾಡಲಾಗುತಿದೆ. ಆದ್ದರಿಂದಲೇ ಅವರ ಮೇಲೆ ಯಾವುದೇ ಪ್ರಕರಣ ಇಲ್ಲದಿದ್ದರೂ ಕೂಡ ಒತ್ತಡಕ್ಕೆ ಒಳಗಾಗಿ ಈ ರೀತಿ ಮಾಡಲಾಗುತ್ತಿದೆ. ಯಾರದ್ದೋ ಆಸ್ತಿ ಹೊಂದಿದ್ದರೆ ಅದನ್ನು ನಮ್ಮದೇ ಎಂದು ಆರೋಪ ಮಾಡುತ್ತಿದ್ದಾರೆ ಅಷ್ಟೇ. ಕಾನೂನಿನ ಮೇಲೆ ಗೌರವ ಇದ್ದು, ಕಾನೂನು ಹೋರಾಟ ಮುಂದುವರಿಸುವ ಮೂಲಕ ಜಯ ಪಡೆಯುತ್ತೇವೆ. ಡಿಕೆ ಶಿವಕುಮಾರ್ ಕೂಡ ತಮ್ಮ ಬೆಂಬಲಿಗರಿಗೆ ಸಂದೇಶ ನೀಡಿದ್ದು, ಈ ಹೋರಾಟದಲ್ಲಿ ಗೆದ್ದು ಬರುವುದಾಗಿ ಹೇಳಿದ್ದಾರೆ. ಆದ್ದರಿಂದ ಯಾರು ದೆಹಲಿಗೆ ಬರುವ ಪ್ರಯತ್ನವನ್ನು ಮಾಡಬೇಡಿ ಎಂದು ಮನವಿ ಮಾಡಿದರು.

  • ಮದ್ವೆ ಆಮಂತ್ರಣ ನೀಡೋ ನೆಪದಲ್ಲಿ ಸುಲಿಗೆಗೆ ಯತ್ನ

    ಮದ್ವೆ ಆಮಂತ್ರಣ ನೀಡೋ ನೆಪದಲ್ಲಿ ಸುಲಿಗೆಗೆ ಯತ್ನ

    – ಕೊಲೆ ಆರೋಪಿಗಳಿಗೆ ಬಿತ್ತು ಗೂಸಾ

    ಉಡುಪಿ: ಮದುವೆ ಆಮಂತ್ರಣ ಕೊಡುವ ನೆಪದಲ್ಲಿ ಒಂಟಿ ಮಹಿಳೆಯ ಮನೆಗೆ ನುಗ್ಗಿ ಸುಲಿಗೆ ಮಾಡಲು ಯತ್ನಿಸಿದ ಕೊಲೆ ಆರೋಪಿಗಳಿಗೆ ಸಖತ್ ಗೂಸಾ ಬಿದ್ದಿದೆ. ಈ ಘಟನೆ ಉಡುಪಿ ಜಿಲ್ಲೆ ಕುಂದಾಪುರದ ಜಿ.ಎಂ. ರೋಡ್ ಮಸೀದಿ ಬಳಿ ನಡೆದಿದ್ದು, ಮಹಿಳೆ ಮತ್ತು ಯುವಕನನ್ನು ಪೋಲಿಸರಿಗೆ ಒಪ್ಪಿಸಲಾಗಿದೆ.

    ಕಾಪು ಮಜೂರಿನ ಮಹಿಳೆ ಫಿರ್ದೋಸ್ ಮತ್ತು ಕಾರ್ಕಳ ತಾಲೂಕು ಕುಂಟಲಪಾಡಿಯ ನಿವಾಸಿ ಮೊಹಮ್ಮದ್ ಆಸೀಫ್ ಬಂಧಿತ ಆರೋಪಿಗಳು. ಆಸೀಫ್ ಕುಂದಾಪುರ ಜಿ. ಎಂ ರೋಡ್ ನಿವಾಸಿಯಾಗಿದ್ದು, ಮೆಹರುನ್ನೀಸಾ(74) ಕುಟುಂಬಕ್ಕೆ ಡ್ರೈವರ್ ಆಗಿದ್ದನು.

    ಹಳೆಯ ಪರಿಚಯದ ನೆಪದಲ್ಲಿ ಕುಟುಂಬದ ಮತ್ತು ಮನೆಯ ಆಗುಹೋಗುಗಳ ಬಗ್ಗೆ ಮಾಹಿತಿಯನ್ನು ತಿಳಿದುಕೊಂಡಿದ್ದನು. ನಿನ್ನೆ ಶುಕ್ರವಾರವಾದ ಕಾರಣ ಮೆಹರುನ್ನೀಸಾ ಅವರ ಪತಿ ಅಬು ಮಹಮ್ಮದ್ ಮಸೀದಿಗೆ ತೆರಳಿದ್ದರು. ಇದೇ ಸಂದರ್ಭ ಮದುವೆ ಆಮಂತ್ರಣ ಪತ್ರಿಕೆ ಕೊಡೋ ನೆಪದಲ್ಲಿ ಮನೆಗೆ ಬಂದ ಇಬ್ಬರು ಆರೋಪಿಗಳು, ಮೆಹರುನ್ನೀಸಾ ಅವರ ಕೈಯನ್ನು ಕಟ್ಟಿ ಕುತ್ತಿಗೆಯಲ್ಲಿದ್ದ ಚಿನ್ನದ ಒಡವೆಗಳನ್ನು ಕಸಿದಿದ್ದಾರೆ.

    ಇದೇ ಸಂದರ್ಭ ಮೆಹರುನ್ನೀಸಾ ಕೂಗಾಡಿದ್ದನ್ನು ಕೇಳಿದ ಸಾರ್ವಜನಿಕರು ಆಗಮಿಸಿ ಇಬ್ಬರಿಗೂ ಚೆನ್ನಾಗಿ ಗೂಸ ನೀಡಿದ್ದಾರೆ. ಆರೋಪಿ ಮಹಿಳೆ ಫಿರ್ದೋಸ್, ಆಸೀಫ್ ಜೊತೆ ಸೇರಿ ತನ್ನ ಪತಿ ಸಮೀರ್ ನನ್ನು ತಮಿಳುನಾಡಿಗೆ ಕರೆದುಕೊಂಡು ಮೋಸದಿಂದ ಕೊಲೆಗೈದ ಆರೋಪಿಗಳಾಗಿದ್ದಾರೆ.

    ಕೊಲೆ ಪ್ರಕರಣದಲ್ಲಿ ಬಂಧಿತರಾಗಿ ಕಳೆದ ತಿಂಗಳಷ್ಟೇ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಇದೀಗ ಮತ್ತೆ ಇಬ್ಬರೂ ಸೇರಿ ಈ ಕೃತ್ಯ ಎಸಗಿದ್ದಾರೆ. ಈ ಸಂಬಂಧ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.