Tag: accused

  • ಕಿಡ್ನಾಪ್ ಯತ್ನ ವಿಫಲವಾದಾಗ ಬಾಲಕಿಯ ಮೂಗನ್ನೇ ಕತ್ತರಿಸಿದ ಗ್ಯಾಂಗ್

    ಕಿಡ್ನಾಪ್ ಯತ್ನ ವಿಫಲವಾದಾಗ ಬಾಲಕಿಯ ಮೂಗನ್ನೇ ಕತ್ತರಿಸಿದ ಗ್ಯಾಂಗ್

    ಚಂಡೀಗಢ: ಮನೆಗೆ ನುಗ್ಗಿ ಬಾಲಕಿಯೋರ್ವಳನ್ನು ಅಪಹರಿಸಲು ಗ್ಯಾಂಗೊಂದು ಯತ್ನಿಸಿದ್ದು, ತಮ್ಮ ಪ್ರಯತ್ನ ವಿಫಲವಾದಾಗ ಆಕೆಯ ಮೂಗನ್ನೇ ಕತ್ತರಿಸಿ ದುಷ್ಕರ್ಮಿಗಳು ಪರಾರಿಯಾದ ಅಮಾನವೀಯ ಘಟನೆ ಹರ್ಯಾಣದ ಗುರುಗ್ರಾಮದಲ್ಲಿ ನಡೆದಿದೆ.

    ಭಾನುವಾರ ಈ ಘಟನೆ ನಡೆದಿದೆ. ಸಂತ್ರಸ್ತೆ ಪೂನಂ ಕುಮಾರಿ ತನ್ನ ಕುಟುಂಬಸ್ಥರೊಂದಿಗೆ ಮನೆಯಲ್ಲಿ ಇದ್ದಾಗ ಆರೋಪಿಗಳಾದ ಗೌರವ್ ಯಾದವ್, ಆಕಾಶ್ ಯಾದವ್, ಸತೀಶ್ ಯಾದವ್, ಮೋನು ಯಾದವ್ ಮತ್ತು ಲೀಲು ಯಾದವ್ ಈ ದುಷ್ಕøತ್ಯವೆಸೆಗಿದ್ದಾರೆ. ಮನೆಗೆ ನುಗ್ಗಿದ ಆರೋಪಿಗಳು ಬಾಲಕಿಯನ್ನು ಅಪಹರಿಸಲು ಯತ್ನಿಸಿದ್ದಾರೆ. ಆದರೆ ಈ ವೇಳೆ ಆಕೆಯ ಅಣ್ಣ ಅಡ್ಡಬಂದಾಗ ಆತನ ಮೇಲೆ ಹಾಗೂ ಕುಟುಂಬಸ್ಥರ ಮೇಲೆ ಆರೋಪಿಗಳು ಹಲ್ಲೆ ಮಾಡಿದ್ದಾರೆ. ಅಷ್ಟೇ ಅಲ್ಲದೆ ಗೌರವ್ ಹಾಗೂ ಆಕಾಶ್ ಇಬ್ಬರು ಸೇರಿ ಹರಿತವಾದ ವಸ್ತುವಿನಿಂದ ಬಾಲಕಿಯ ಮೂಗು ಕತ್ತರಿಸಿದ್ದಾರೆ. ಬಳಿಕ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.

    ಈ ಬಗ್ಗೆ ಬಾಲಕಿ ಅಣ್ಣ ಪೊಲೀಸರಿಗೆ ದೂರು ನೀಡಿದ್ದು, ಹಲ್ಲೆ ಮಾಡಿದ ಆರೋಪಿಗಳು ಪ್ರಭಾವಿಗಳು. ಊರಿನಲ್ಲಿ ಎಲ್ಲರ ಜೊತೆಗೂ ಅವರು ಜಗಳವಾಡುತ್ತಾರೆ. ಆಸ್ತಿ ವಿಚಾರಕ್ಕೆ ಅವರ ವಿರುದ್ಧ ನಮ್ಮ ಕುಟುಂಬ ದೂರು ನೀಡಿತ್ತು. ಅದಕ್ಕಾಗಿ ನಮ್ಮ ಕುಟುಂಬದ ಮೇಲೆ ಅವರು ಹಲ್ಲೆ ಮಾಡಿದ್ದಾರೆ. ನನ್ನ ತಂಗಿಯ ಮೂಗನ್ನು ಕತ್ತರಿಸಿ ವಿಕೃತಿ ಮೆರೆದಿದ್ದಾರೆ ಎಂದು ಪೊಲೀಸರಿಗೆ ತಿಳಿಸಿದ್ದಾರೆ.

    5ರಿಂದ 6 ಮಂದಿ ಆರೋಪಿಗಳು ನಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ. ಆದರೆ ಅವರು ಹಲ್ಲೆ ನಡೆಸುತ್ತಿದ್ದಾಗ ಮನೆಯ ಹೊರಗೆ 15ರಿಂದ 20 ಮಂದಿ ಇದ್ದರು. ಅವರು ಅಕ್ಕಪಕ್ಕದ ಮನೆಯವರು ನಮ್ಮ ಸಹಾಯಕ್ಕೆ ಬರಬಾರದೆಂದು ಅವರನ್ನು ತಡೆಯುತ್ತಿದ್ದರು ಎಂದು ಬಾಲಕಿ ಅಣ್ಣ ತಿಳಿಸಿದ್ದಾರೆ. ಸದ್ಯ ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.

  • ವಿಕಲಚೇತನ ಯುವತಿ ಮೇಲೆ ಅತ್ಯಾಚಾರಕ್ಕೆ ಯತ್ನ – ಆರೋಪಿಗೆ ಸಖತ್ ಗೂಸ

    ವಿಕಲಚೇತನ ಯುವತಿ ಮೇಲೆ ಅತ್ಯಾಚಾರಕ್ಕೆ ಯತ್ನ – ಆರೋಪಿಗೆ ಸಖತ್ ಗೂಸ

    ಶಿವಮೊಗ್ಗ: ವಿಕಲಚೇತನ ಯುವತಿಯೋರ್ವಳ ಮೇಲೆ ಅತ್ಯಾಚಾರಕ್ಕೆ ಯತ್ನಿಸಿರುವ ಘಟನೆ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನಲ್ಲಿ ನಡೆದಿದೆ.

    ಅತ್ಯಾಚಾರಕ್ಕೆ ಯತ್ನಿಸಿದ ಆರೋಪಿ ತೀರ್ಥಹಳ್ಳಿ ತಾಲೂಕಿನ ಶಿವರಾಜಪುರದ ಸತೀಶ್ (38) ಎಂದು ಗುರುತಿಸಲಾಗಿದೆ. ಮನೆಯವರೆಲ್ಲಾ ಕೆಲಸಕ್ಕೆಂದು ಹೊರಗಡೆ ಹೋಗಿದ್ದ ಸಂದರ್ಭದಲ್ಲಿ ಆರೋಪಿ ಸತೀಶ್ ವಿಕಲಚೇತನ ಯುವತಿಯನ್ನು ವೀಲ್ ಚೇರ್ ಗೆ ಕಟ್ಟಿ ಹಾಕಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ.

    ಆರೋಪಿ ಅತ್ಯಾಚಾರಕ್ಕೆ ಪ್ರಯತ್ನಿಸಿದ್ದರಿಂದ ಯುವತಿ ಜೋರಾಗಿ ಕಿರುಚಾಟ ನಡೆಸಿದ್ದಾಳೆ. ಯುವತಿಯ ಕಿರುಚಾಟ ಕೇಳಿ ಮನೆಯತ್ತ ಧಾವಿಸಿ ಬಂದ ಗ್ರಾಮಸ್ಥರು ಆರೋಪಿಯನ್ನು ಹಿಡಿದು ಕಂಬಕ್ಕೆ ಕಟ್ಟಿ ಹಾಕಿ ಸಖತ್ ಗೂಸ ನೀಡಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಆರೋಪಿ ಸತೀಶ್ ತನ್ನ ಪತ್ನಿಯ ಸಹೋದರನ ಮನೆಗೆ ಬಂದಿದ್ದನು. ಈ ವೇಳೆ ಈ ದುಷ್ಕೃತ್ಯ ನಡೆಸಲು ಹೋಗಿ ಸಿಕ್ಕಿ ಬಿದ್ದಿದ್ದಾನೆ.

    ಸದ್ಯ ಯುವತಿಯನ್ನು ವೈದ್ಯಕೀಯ ಚಿಕಿತ್ಸೆಗಾಗಿ ತೀರ್ಥಹಳ್ಳಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಆಗುಂಬೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ನ್ಯಾಯಾಲಯದ ಮುಂದೆ ಶರಣಾದ ಕೊಲೆ ಆರೋಪಿಗಳು

    ನ್ಯಾಯಾಲಯದ ಮುಂದೆ ಶರಣಾದ ಕೊಲೆ ಆರೋಪಿಗಳು

    ಮಂಡ್ಯ: ಕಳೆದ ನಾಲ್ಕು ದಿನಗಳ ಹಿಂದೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಮೊಗರಹಳ್ಳಯಲ್ಲಿ ಅಕ್ರಮ ಸಂಬಂಧ ಹಿನ್ನೆಲೆಯಲ್ಲಿ ಉದಯ್‍ಕುಮಾರ್ ಎಂಬ ವ್ಯಕ್ತಿಯನ್ನು ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿಗಳು ಇಂದು ನ್ಯಾಯಾಲಯಕ್ಕೆ ಶರಣಾಗಿದ್ದಾರೆ.

    ಮೊಗರಹಳ್ಳಿಯಲಿ ನಾಲ್ಕು ದಿನಗಳ ಹಿಂದೆ ಉದಯ್‍ಕುಮಾರ್ ಎಂಬಾತನನ್ನು ಕೋಲೆ ಮಾಡಿ ಕುಳ್ಳಚ್ಚಿ ವಿನಯ್ ಮತ್ತು ಧರ್ಮ ತಲೆಮರಿಸಿಕೊಂಡಿದ್ದರು. ಇಂದು ಶ್ರೀರಂಗಪಟ್ಟಣದ ತಾಲೂಕು ನ್ಯಾಯಾಲಯಕ್ಕೆ ತಾವೇ ಬಂದು ಶರಣಾಗಿದ್ದಾರೆ. ಇಂದು ವಕೀಲರ ಜೊತೆಯಲ್ಲಿ ಬಂದ ಈ ಇಬ್ಬರು ಕೊಲೆ ಆರೋಪಿಗಳು ತಾವೇ ಉದಯ್‍ಕುಮಾರ್ ಅನ್ನು ಕೊಲೆ ಮಾಡಿದ್ದು ಎಂದು ಒಪ್ಪಿಕೊಂಡು ಶರಣಾಗಿದ್ದಾರೆ.

    ಉದಯ್‍ಕುಮಾರ್ ಮೊಗರಹಳ್ಳಿ ಗ್ರಾಮದ ಮಹಿಳೆಯೊಂದಿಗೆ ಸಂಬಂಧ ಇಟ್ಟುಕೊಂಡಿದ್ದ. ಆ ಮಹಿಳೆಗೆ ಗಂಡ ಇಲ್ಲದ ಕಾರಣ ಮುಂದಿನ ದಿನಗಳಲ್ಲಿ ಮದುವೆ ಆಗಲು ಕೂಡ ಇಬ್ಬರು ನಿರ್ಧಾರ ಮಾಡಿದ್ದರು. ಹೀಗಿರುವಾಗ ಕುಳ್ಳಚ್ಚಿ ವಿನಯ್‍ಗೆ ಇದನ್ನು ನೋಡಿ ಸಹಿಸಲಾಗದೇ, ತನ್ನ ಸ್ನೇಹಿತರೊಂದಿಗೆ ಏಕಾಏಕಿ ಮನೆಗೆ ನುಗ್ಗಿ ಉದಯ್‍ಕುಮಾರ್ ಅನ್ನು ಕೊಲೆ ಮಾಡಿ ಪರಾರಿಯಾಗಿದ್ದರು. ಈ ಬಗ್ಗೆ ಕೆಆರ್‍ಎಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಇಬ್ಬರೂ ಆರೋಪಿಗಳು ನ್ಯಾಯಾಲಯಕ್ಕೆ ಶರಣಾಗಿದ್ದಾರೆ.

  • ಎಸಿಬಿ ಸೋಗಿನಲ್ಲಿ ಅಧಿಕಾರಿಗೆ ವಂಚನೆ – ಖತರ್ನಾಕ್ ಖದೀಮರು ಅಂದರ್

    ಎಸಿಬಿ ಸೋಗಿನಲ್ಲಿ ಅಧಿಕಾರಿಗೆ ವಂಚನೆ – ಖತರ್ನಾಕ್ ಖದೀಮರು ಅಂದರ್

    ಚಿತ್ರದುರ್ಗ: ಸರ್ಕಾರಿ ಅಧಿಕಾರಿಗಳ ಭ್ರಷ್ಟತನ ಮನಗೊಂಡ ಕರ್ನಾಟಕ ಸರ್ಕಾರ ಜನರ ಹಿತದೃಷ್ಟಿ ಹಾಗೂ ಭ್ರಷ್ಟ ಅಧಿಕಾರಿಗಳ ಬೇಟೆಗಾಗಿ ಎಸಿಬಿ ಇಲಾಖೆಯನ್ನು ಜಾರಿಗೆ ತಂದಿದೆ. ಆದರೆ ಈ ಇಲಾಖೆಯ ಹೆಸರನ್ನೇ ಬಂಡವಾಳ ಮಾಡಿಕೊಂಡು ಅಧಿಕಾರಿಯೊಬ್ಬರನ್ನು ಬೆದರಿಸಿ, ವಂಚಿಸಿದ್ದ ಖತರ್ನಾಕ್ ತಂಡವೊಂದು ಪೊಲೀಸರ ಅತಿಥಿಯಾಗಿದೆ.

    ಈ ಖತರ್ನಾಕ್ ತಂಡವು ಬುದ್ಧಿವಂತಿಕೆಯಿಂದ ಪ್ಲಾನ್ ಮಾಡಿ, ಪಂಚಾಯತ್ ರಾಜ್ ಉಪವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಎಲ್.ಟಿ ಶ್ರೀರಂಗಪ್ಪ ಅವರ ಚಲನಾವಲನಗಳನ್ನು ಗಮನಿಸಿದ್ದರು. ಬಳಿಕ ನಿಮ್ಮ ಮೇಲೆ ಬೆಂಗಳೂರಿನ ಎಸಿಬಿ ಕೇಂದ್ರ ಕಛೇರಿಯಲ್ಲಿ ದೂರು ದಾಖಲಾಗಿದೆಯೆಂದು ಬೆದರಿಸಿ, ಅವರಿಂದ 1,24,000 ಸಾವಿರ ಹಣವನ್ನು ಖಾತೆಗೆ ಜಮಾ ಮಾಡಿಸಿಕೊಂಡಿದ್ದರು. ಅಲ್ಲದೆ ನಾವು ಚಿತ್ರದುರ್ಗದ ಎಸಿಬಿ ಇಲಾಖೆಯ ಡಿವೈಎಸ್‍ಪಿ ಎಂದು ಹೇಳಿ ಅಧಿಕಾರಿಯನ್ನು ವಂಚಿಸಿ ಹಣವನ್ನು ಅವರ ಖಾತೆಗೆ ಜಮಾ ಮಾಡಿಸಿಕೊಂಡಿದ್ದ ಖತರ್ನಾಕ್ ತಂಡವೊಂದನ್ನು ಹಿರಿಯೂರು ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಇವರ ಮೇಲೆ ಈ ಹಿಂದೆಯೂ ವಂಚನೆ ಆರೋಪದ ಮೇಲೆ ಹಿರಿಯೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದವು. ಹೀಗಾಗಿ ಪ್ರಕರಣದ ಹಾದಿ ಹಿಡಿದ ವೃತ್ತ ನಿರೀಕ್ಷಕ ಚನ್ನೇಗೌಡ ನೇತೃತ್ವದ ತಂಡ ಆರೋಪಿಗಳನ್ನು ಹುಡುಕುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳಾದ ರಜನಿಕಾಂತ್, ಚಿದಾನಂದ, ಅರುಳ್ ರೇಗಸ್, ಹೇದರ್, ಮುರಿಗೆಪ್ಪ ನಿಂಗಪ್ಪ ಕುಂಬಾರನನ್ನು ಬಂಧಿಸಲಾಗಿದೆ.

    ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ ಮೊಬೈಲ್‍ಗಳು, ಸಿಮ್‍ಗಳು, ಒಂದು ಬೈಕ್, ಎರಡು ಚಿನ್ನದ ಉಂಗುರ ಮತ್ತು 52 ಸಾವಿರ ನಗದು ವಶಪಡಿಸಿಕೊಂಡಿದ್ದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಹಿರಿಯೂರು ಪೊಲೀಸರ ಕಾರ್ಯಾಚರಣೆಗೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಕೆ ಅರುಣ್ ಅಭಿನಂದಿಸಿದ್ದಾರೆ.

  • ಬೆಳ್ಳಂಬೆಳಗ್ಗೆ ಸದ್ದು ಮಾಡಿದ ಪೊಲೀಸ್ ರಿವಾಲ್ವರ್

    ಬೆಳ್ಳಂಬೆಳಗ್ಗೆ ಸದ್ದು ಮಾಡಿದ ಪೊಲೀಸ್ ರಿವಾಲ್ವರ್

    ಬೆಂಗಳೂರು: ಬೆಳ್ಳಂಬೆಳಗ್ಗೆ ಬೆಂಗಳೂರು ಪೊಲೀಸರ ರಿವಾಲ್ವರ್ ಸದ್ದು ಮಾಡಿದೆ.

    ಬೆಂಗಳೂರಿನ ನಂದಿನಿ ಲೇಔಟ್ ಪೊಲೀಸರು ಬಾಬು ಎನ್ನುವ ವ್ಯಕ್ತಿಯ ಕಾಲಿಗೆ ಶೂಟ್ ಮಾಡಿದ್ದಾರೆ. ನಂದಿನಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಘು ಅಲಿಯಾಸ್ ಕ್ಯಾಟ್ ರಘು ಎಂಬವರನ್ನು ಕೊಲೆ ಮಾಡಿದ್ದ ಆರೋಪಿಯಾಗಿದ್ದ ಬಾಬುವನ್ನು ಇಂದು ಬೆಳಗ್ಗೆ ಪೊಲೀಸರು ಬಂಧಿಸಲು ಹೋಗಿದ್ದಾಗ ಫೈರಿಂಗ್ ಮಾಡಿದ್ದಾರೆ.

    ಜಾಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಮನೆಯಲ್ಲಿ ಬಾಬು ವಾಸವಾಗಿದ್ದನು. ಆತನನ್ನು ವಶಕ್ಕೆ ಪಡೆಯಲು ಹೋಗಿದ್ದ ಪೊಲೀಸರ ಮೇಲೆ ಬಾಬು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾನೆ. ಈ ಸಮಯದಲ್ಲಿ ಪೊಲೀಸರು ತಮ್ಮ ರಕ್ಷಣೆಗಾಗಿ ಬಾಬು ಕಾಲಿಗೆ ಗುಂಡನ್ನು ಹೊಡೆದಿದ್ದಾರೆ.

    ನಂದಿನಿ ಲೇಔಟ್ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ವೆಂಕಟ್ ಬಾಬು ಕಾಲಿಗೆ ಗುಂಡನ್ನು ಹಾರಿಸಿದ್ದು, ರಘು ಕೊಲೆ ಕೇಸ್ ನಲ್ಲಿ ಎ2 ಆರೋಪಿಯಾಗಿರುವ ಬಾಬು ಪಿಎಸ್‍ಐ ಹಾಗೂ ಪಿಸಿ ಮೇಲೆ ಹಲ್ಲೆ ಮಾಡಿದ್ದಾನೆ. ಸದ್ಯ ಬಾಬು ಹಾಗೂ ಪಿಸಿ ಮತ್ತು ಪಿಎಸ್‍ಐ ಮೂರು ಜನರನ್ನು ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಮುಂದುವರಿದಿದೆ.

  • ಸ್ಫೋಟಕ ವಸ್ತುಗಳನ್ನು ಸಾಗಿಸುತ್ತಿದ್ದ ಆರೋಪಿಗಳ ಬಂಧನ

    ಸ್ಫೋಟಕ ವಸ್ತುಗಳನ್ನು ಸಾಗಿಸುತ್ತಿದ್ದ ಆರೋಪಿಗಳ ಬಂಧನ

    ದಾವಣಗೆರೆ: ಸ್ಕಾರ್ಪಿಯೋ ವಾಹನದಲ್ಲಿ ಸ್ಫೋಟಕ ವಸ್ತುಗಳನ್ನು ಸಾಗಿಸುತ್ತಿದ್ದ ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳ ಬಳಿಯಲ್ಲಿದ್ದ ಸ್ಫೋಟಕ ವಸ್ತುಗಳನ್ನು ದಾವಣಗೆರೆಯ ಜಿಲ್ಲೆಯ ಚನ್ನಗಿರಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

    ಆಂಧ್ರಪ್ರದೇಶದ ಅನಂತಪುರ ಮೂಲದ ವಿಜಯ್ ಗಣೇಶ (36) ಹಾಗೂ ಬಂಗರಾಜ್ (42) ಬಂಧಿತ ಆರೋಪಿಗಳು. ಚನ್ನಗಿರಿ ಪಟ್ಟಣದ ಚಿತ್ರದುರ್ಗ-ಶಿವಮೊಗ್ಗ ರಾಜ್ಯ ಹೆದ್ದಾರಿಯ ಗರಗ ಕ್ರಾಸ್‍ನಲ್ಲಿ ಈ ಇಬ್ಬರನ್ನು ಬಂಧಿಸಲಾಗಿದೆ. ಬಂಧಿತರಿಂದ 8800 ಜಿಲೆಟಿನ್ ಕಡ್ಡಿಗಳು, 3700 ಎಲೆಕ್ಟ್ರಾನಿಕ್ ಡಿಟೊನೇಟರ್, ಸ್ಕಾರ್ಪಿಯೋ ಕಾರು ಮತ್ತು 6 ಲಕ್ಷ ರೂಪಾಯಿ ನಗದು ವಶಪಡಿಸಿಕೊಳ್ಳಲಾಗಿದೆ.

    ಯಾವ ಕಾರಣಕ್ಕೆ ಸ್ಪೋಟಕ ವಸ್ತುಗಳನ್ನು ಸಾಗಾಟ ಮಾಡುತ್ತಿದ್ದರು ಎನ್ನುವುದು ತನಿಖೆ ನಂತರ ತಿಳಿದು ಬರಬೇಕಿದೆ. ಡಿವೈಎಸ್ಪಿ ಪ್ರಶಾಂತ್ ಮನ್ನೋಳಿ ಮಾರ್ಗದರ್ಶನದಲ್ಲಿ ಸಿಪಿಐ ಆರ್. ಆರ್. ಪಾಟೀಲ್ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದರು.

  • ಕೇರಳ ಲಾಟರಿ ಮಾರಾಟ – ಕೊಡಗಿನಲ್ಲಿ ಆರೋಪಿ ಬಂಧನ

    ಕೇರಳ ಲಾಟರಿ ಮಾರಾಟ – ಕೊಡಗಿನಲ್ಲಿ ಆರೋಪಿ ಬಂಧನ

    ಮಡಿಕೇರಿ: ನಿಷೇಧಿತ ಕೇರಳ ರಾಜ್ಯದ ಲಾಟರಿ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಕೇಂಬುಕೊಲ್ಲಿಯಲ್ಲಿ ಕುಟ್ಟ ಪೊಲೀಸರು ಬಂಧಿಸಿದ್ದಾರೆ.

    ವಿರಾಜಪೇಟೆ ತಾಲೂಕಿನ ಕುಟ್ಟ ಗ್ರಾಮದ ನಿವಾಸಿ ರಾಜು ಬಂಧಿತ ಆರೋಪಿ. ಈತ ಕೇಂಬುಕೊಲ್ಲಿಯಲ್ಲಿ ಲಾಠರಿಯನ್ನು ಮಾರಾಟ ಮಾಡುತ್ತಿದ್ದ ಸಂದರ್ಭದಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ರಾಜು ಬಳಿ ಇದ್ದ 6,000 ಮೌಲ್ಯದ ಕೇರಳ ಮೂಲದ ಲಾಟರಿ ಟಿಕೆಟ್ ಹಾಗೂ ಬೈಕನ್ನು ವಶಪಡಿಸಿಕೊಳ್ಳಲಾಗಿದೆ.

    ಈ ಸಂಬಂಧ ಕುಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈಗಾಗಲೇ ಸರ್ಕಾರ ಕರ್ನಾಟಕದಲ್ಲಿ ಲಾಟರಿ ಮಾರಾಟ ನಿಷೇಧಿಸಿರುವುದರಿಂದ ಕೊಡಗು-ಕೇರಳ ರಾಜ್ಯಕ್ಕೆ ಹೊಂದಿಕೊಂಡಿರುವ ವಿರಾಜಪೇಟೆ ತಾಲೂಕಿನ ಗಡಿ ಭಾಗದಲ್ಲಿ ಲಾಟರಿ ದಂಧೆ ಅವ್ಯಹತವಾಗಿ ನಡೆಯುತ್ತಿದೆ.

  • ಲೈಂಗಿಕ ಕಿರುಕುಳದ ದೂರು ನೀಡಲು ಹೊರಟಿದ್ದ ಹುಡುಗಿಯನ್ನ ಅರೆಬೆತ್ತಲಾಗಿಸಿ, ಥಳಿಸಿದ್ರು

    ಲೈಂಗಿಕ ಕಿರುಕುಳದ ದೂರು ನೀಡಲು ಹೊರಟಿದ್ದ ಹುಡುಗಿಯನ್ನ ಅರೆಬೆತ್ತಲಾಗಿಸಿ, ಥಳಿಸಿದ್ರು

    ಲಕ್ನೋ: ಲೈಂಗಿಕ ಕಿರುಕುಳದ ವಿರುದ್ಧ ದೂರು ನೀಡಲು ಹೊರಟ್ಟಿದ್ದ 17 ವರ್ಷದ ಹುಡುಗಿಯನ್ನು ಆರೋಪಿಗಳು ಅರೆಬೆತ್ತಲಾಗಿಸಿ, ಹಲ್ಲೆಗೈದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

    ಉತ್ತರ ಪ್ರದೇಶದ ಚೌರಿ ಚೌರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಅಮಾನುಷ ಘಟನೆ ನಡೆದಿದೆ. ಭಾನುವಾರ ಹುಡುಗಿಗೆ ಇಬ್ಬರು ಕಾಮುಕರು ಲೈಂಗಿಕ ಕಿರುಕುಳ ನೀಡಿದ್ದರು. ಇದರಿಂದ ನೊಂದ ಸಂತ್ರಸ್ತೆ ಕಾಮುಕರ ವಿರುದ್ಧ ದೂರು ದಾಖಲಿಸಲು ಚೌರಿ ಚೌರಾ ಪೊಲೀಸ್ ಠಾಣೆಗೆ ಹೋಗುತ್ತಿದ್ದಳು. ಈ ವೇಳೆ ಆಕೆಯನ್ನು ಅಡ್ಡಗಟ್ಟಿದ್ದ ಆರೋಪಿಗಳು ತಮ್ಮ ವಿರುದ್ಧ ದೂರು ನೀಡಬಾರದು ಎಂದು ಬೆದರಿಕೆಯೊಡ್ಡಿದ್ದರು. ಇದ್ಯಾವುದಕ್ಕೂ ಜಗ್ಗದೆ ಹುಡುಗಿ ದೂರು ನೀಡಲು ಹೊರಟಾಗ ಆಕೆಯನ್ನು ಅಲೆಬೆತ್ತಲೆಗೊಳಿಸಿ, ಮನಬಂದಂತೆ ಥಳಿಸಿ ವಿಕೃತಿ ಮೆರೆದಿದ್ದಾರೆ.

    ಈ ವೇಳೆ ಆಕೆಯ ರಕ್ಷಣೆಗೆ ಬಂದ ತಂದೆ ಹಾಗೂ ಸಂಬಂಧಿಕರನ್ನೂ ಕೂಡ ಆರೋಪಿಗಳು ಥಳಿಸಿದ್ದಾರೆ. ಸೋಮವಾರ ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು, ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಸರ್ಕಲ್ ಇನ್ಸ್‌ಪೆಕ್ಟರ್ ರಚನಾ ಮಿಶ್ರಾ ತಿಳಿಸಿದ್ದಾರೆ.

    ಆರೋಪಿಗಳ ವಿರುದ್ಧ ಪೋಸ್ಕೋ ಕಾಯ್ದೆ ಅಡಿಯಲ್ಲಿ, ಐಪಿಸಿ ಸೆಕ್ಷನ್ 323, 354, 341ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

  • ಕಳ್ಳನೆಂದು ಶಂಕಿಸಿ ನಡು ರಸ್ತೆಯಲ್ಲಿ ವ್ಯಕ್ತಿಯ ಮರ್ಮಾಂಗ ಸುಟ್ಟು ಕೊಂದ ದುಷ್ಕರ್ಮಿಗಳು – ವಿಡಿಯೋ ವೈರಲ್

    ಕಳ್ಳನೆಂದು ಶಂಕಿಸಿ ನಡು ರಸ್ತೆಯಲ್ಲಿ ವ್ಯಕ್ತಿಯ ಮರ್ಮಾಂಗ ಸುಟ್ಟು ಕೊಂದ ದುಷ್ಕರ್ಮಿಗಳು – ವಿಡಿಯೋ ವೈರಲ್

    ತಿರುವನಂತಪುರಂ: ಕಳ್ಳತನದ ಆರೋಪ ಮಾಡಿ ವ್ಯಕ್ತಿಯೋರ್ವನನ್ನು ಏಳು ಮಂದಿಯ ಗುಂಪೊಂದು ಹಿಗ್ಗಾಮುಗ್ಗಾ ಥಳಿಸಿ, ಆತನ ಮರ್ಮಾಂಗವನ್ನೇ ಸುಟ್ಟು ಕೊಲೆಗೈದ ಅಮಾನುಷ ಘಟನೆ ಕೇರಳದಲ್ಲಿ ನಡೆದಿದೆ.

    ತಿರುವಲ್ಲಂ ಜಿಲ್ಲೆಯ ನಿವಾಸಿ ಅಜೀಶ್ ಮೃತ ದುರ್ದೈವಿ. ತಂಪನೂರು ಪ್ರದೇಶದ ಸೆಂಟ್ರಲ್ ಬಸ್ ನಿಲ್ದಾಣದಲ್ಲಿ ಪ್ರಯಾಣಿಕನೋರ್ವ ಮಲಗಿದ್ದ ವೇಳೆ ಆತನ ಪರ್ಸ್ ಕಳವು ಮಾಡಲಾಗಿತ್ತು. ಆದರೆ ಆ ಪರ್ಸನ್ನು ಅಜೀಶ್ ಕದ್ದಿದ್ದಾನೆ ಎಂದು ಆರೋಪಿಸಿ, ಸ್ಥಳದಲ್ಲಿದ್ದ ಗುಂಪೊಂದು ಆತನನ್ನು ಥಳಿಸಿ, ಆತನ ಮರ್ಮಾಂಗವನ್ನು ಸುಟ್ಟು ಚಿತ್ರಹಿಂಸೆ ಕೊಟ್ಟಿದ್ದಾರೆ. ಪರಿಣಾಮ ಅಜೀಶ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

    ಅಲ್ಲದೆ ಜನರು ಅಜೀಶ್‍ನನ್ನು ಹೊಡೆಯುತ್ತಿರುವ ದೃಶ್ಯವನ್ನು ಸ್ಥಳೀಯರು ಮೊಬೈಲ್‍ನಲ್ಲಿ ವಿಡಿಯೋ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇದನ್ನು ಹರಿಬಿಟ್ಟಿದ್ದಾರೆ. ಸದ್ಯ ಈ ವಿಡಿಯೋ ಎಲ್ಲೆಡೆ ಸಖತ್ ವೈರಲ್ ಆಗಿದ್ದು, ಸಂತ್ರಸ್ತನಿಗೆ ಚಿತ್ರಹಿಂಸೆ ಕೊಟ್ಟು ಕೊಂದ ಜನರ ವಿರುದ್ಧ ನೆಟ್ಟಿಗರು ಕಿಡಿಕಾರಿದ್ದಾರೆ.

    ಈ ವಿಡಿಯೋ ಪೊಲೀಸರ ಕೈತಲುಪಿದ್ದು, ಇದರ ಮೂಲಕವೇ ಸಂತ್ರಸ್ತನನ್ನು ಕೊಂದ ಐವರು ಆರೋಪಿಗಳನ್ನು ಪೊಲೀಸರು ಪತ್ತೆಹಚ್ಚಿ, ಬಂಧಿಸಿದ್ದಾರೆ. ಅಲ್ಲದೆ ಉಳಿದ ಇಬ್ಬರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

    ಬಂಧಿತ ಆರೋಪಿಗಳನ್ನು ನಾಸೀರ್, ದಿನೇಶ್ ವರ್ಗಿಸ್, ಅರ್ಜುನ್, ಸಜನ್ ಮತ್ತು ರಾಬಿನ್‍ಸನ್ ಎಂದು ಗುರುತಿಸಲಾಗಿದೆ. ಈಗಾಗಲೇ ಆರೋಪಿಗಳನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಕೋರ್ಟ್ ನ್ಯಾಯಾಂಗ ಬಂಧನ ವಿಧಿಸಿದೆ.

    ಮೃತ ವ್ಯಕ್ತಿಯ ಮರ್ಮಾಂಗದ ಶೇ.40ರಷ್ಟು ಭಾಗ ಸುಟ್ಟು ಹೋಗಿದೆ. ಅದ್ದರಿಂದಲೇ ಆತ ಸಾವನ್ನಪ್ಪಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ. ಸದ್ಯ ಈ ಸಂಬಂಧ ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

  • ಮದುವೆಗೆ ಚಿನ್ನಾಭರಣ, ವಾಹನದ ಇಎಂಐ ಕಟ್ಟಲು ದರೋಡೆ- ಏಳು ಮಂದಿ ಬಂಧನ

    ಮದುವೆಗೆ ಚಿನ್ನಾಭರಣ, ವಾಹನದ ಇಎಂಐ ಕಟ್ಟಲು ದರೋಡೆ- ಏಳು ಮಂದಿ ಬಂಧನ

    ಮಂಡ್ಯ: ಜಿಲ್ಲೆಯ ಎರಡು ಕ್ರಷರ್ ಪ್ರಕರಣ ಸೇರಿದಂತೆ ಇತರೆಡೆ ನಡೆದಿದ್ದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

    ಪಾಂಡವಪುರ ತಾಲೂಕಿನ ಹೊನಗಾನಹಳ್ಳಿ ಗ್ರಾಮದ ಎಸ್.ಕೃಷ್ಣ, ಚಿನಕುರುಳಿ ಗ್ರಾಮದ ಸಿ.ಎನ್.ಆಕಾಶ್ ಮತ್ತು ಸಿ.ಎಸ್ ಗುರುಕಿರಣ್, ಮೈಸೂರಿನ ನವಾಜ್, ಆಬೀದ್, ರೋಹನ್ ಮತ್ತು ವಸೀಂ ಬಂಧಿತರು. ಇವರಿಂದ 2.10 ಲಕ್ಷ ರೂ. ನಗದು, 60 ಗ್ರಾಂ ಚಿನ್ನ, 300 ಗ್ರಾಂ ಬೆಳ್ಳಿ, 4 ಸ್ಮಾರ್ಟ್ ಫೋನ್, 4 ಬೈಕ್ ಸೇರಿದಂತೆ ಒಟ್ಟು 9.26 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.

    ಏನಿದು ಪ್ರಕರಣ?
    ಡಿ. 3ರಂದು ಪಾಂಡವಪುರ ಪೊಲೀಸ್ ಠಾಣಾ ವ್ಯಾಪ್ತಿಯ ಬೇಬಿ ಬೆಟ್ಟದಲ್ಲಿರುವ ಅಹಲ್ಯದೇವಿ ಕ್ರಷರ್ ಗೆ ನುಗ್ಗಿ ಕಚೇರಿಯ ಸಿಬ್ಬಂದಿಗೆ ಪ್ರಾಣ ಬೆದರಿಕೆ ಹಾಕಿ, 18 ಸಾವಿರ ರೂ. ನಗದು ದೋಚಿ ಈ ಖದೀಮರು ಪರಾರಿಯಾಗಿದ್ದರು. ಅದೇ ದಿನ ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಟಿ.ಎಂ ಹೊಸೂರು ಶ್ರೀರಂಗನಾಥ ಸ್ಟೋನ್ ಕ್ರಷರ್ ಗೆ ನುಗ್ಗಿ 4 ಸಾವಿರ ರೂ. ನಗದು ಮತ್ತು 4 ಸ್ಮಾರ್ಟ್ ಫೋನ್ ದೋಚಿದ್ದರು. ಈ ಎರಡು ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

    ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಅಹಲ್ಯದೇವಿ ಕ್ರಷರ್ ನಲ್ಲಿ ಅಳವಡಿಸಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದ್ದ ದೃಶ್ಯಾವಳಿಯನ್ನು ಪರಿಶೀಲಿಸಿದರು. ಈ ವೇಳೆ ಬಂಧಿತರ ಪೈಕಿ ಇಬ್ಬರು ಕೆಲ ದಿನದ ಹಿಂದೆ ಸುಮಾರು ಹೊತ್ತು ಸಿಬ್ಬಂದಿಗಳೊಡನೆ ಮಾತನಾಡುತ್ತಿರುವುದು ಗೊತ್ತಾಗಿತ್ತು. ಅಂತೆಯೇ, ಅವರ ಮುಖ ಸ್ಪಷ್ಟವಾಗಿ ಪೊಲೀಸರಿಗೆ ತಿಳಿಯಿತು. ಇದರ ಆಧಾರದ ಮೇಲೆ ಡಿ. 9ರಂದು ಎಸ್.ಕೃಷ್ಣ ಮತ್ತು ಸಿ.ಎನ್ ಆಕಾಶ್‍ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಖದೀಮರು ತಪ್ಪೊಪ್ಪಿಕೊಂಡಿದ್ದಾರೆ. ಬಳಿಕ ಉಳಿದ ಆರೋಪಿಗಳನ್ನು ಮೈಸೂರಿನಲ್ಲಿಯೇ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.

    ಇದಷ್ಟೇ ಅಲ್ಲದೆ ಡಿ. 6ರಂದು ಪಾಂಡವಪುರ ಪೊಲೀಸ್ ಠಾಣಾ ವ್ಯಾಪ್ತಿಯ ಶಂಭೂನಹಳ್ಳಿ ರಸ್ತೆಯಲ್ಲಿ ಬೈಕ್‍ನಲ್ಲಿ ಬರುತ್ತಿದ್ದ ಚಿನಕುರಳಿಯ ವಿನಾಯಕ ಜ್ಯೂವೆಲರಿ ಅಂಗಡಿ ಮಾಲೀಕನನ್ನು ಅಡ್ಡಗಟ್ಟಿ, ಅವರ ಬಳಿಯಿದ್ದ ಹಣ ಹಾಗೂ ಒಡವೆ ಸುಲಿಗೆ ಮಾಡಿರುವುದಾಗಿಯೂ ಬಂಧಿತರು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದರು.

    ದರೋಡೆಗೆ ಮುನ್ನ ಸ್ಕೆಚ್:
    ಬಂಧಿತರೆಲ್ಲರೂ ಸ್ನೇಹಿತರಾಗಿದ್ದು, ಹಣದ ಸಮಸ್ಯೆ ಬಗೆಹರಿಸಿಕೊಳ್ಳಲು ಕೃತ್ಯ ನಡೆಸಿದ್ದಾರೆ. ಜೊತೆಗೆ ಇವರ ವಿರುದ್ಧ ಈವರೆಗೂ ಯಾವುದೇ ದೂರು ದಾಖಲಾಗಿಲ್ಲ. ಇನ್ನು ಅಹಲ್ಯದೇವಿ ಕ್ರಷರ್ ನಲ್ಲಿ ಹಣ ದೋಚುವುದಕ್ಕೂ ಮುನ್ನ ಖದೀಮರು ಬೈಕ್‍ನಲ್ಲಿ ತೆರಳುತ್ತಿದ್ದ ಚಿನ್ನದ ವ್ಯಾಪಾರಿಯಿಂದ ಹಣ ಕಸಿದುಕೊಳ್ಳುವ ಸ್ಕೆಚ್ ಹಾಕಿದ್ದರು. ಇದು ವಿಫಲವಾದ ಹಿನ್ನೆಲೆಯಲ್ಲಿ ಕ್ರಷರ್ ಗೆ ನುಗ್ಗಲಾಗಿತ್ತು.

    ಶ್ರೀರಂಗನಾಥ ಸ್ಟೋನ್ ಕ್ರಷರ್ ನಲ್ಲಿ ಕೃತ್ಯ ನಡೆಸಿದ ಬಳಿಕ ಬಾಬುರಾಯನಕೊಪ್ಪಲು ಬಳಿ ಎಟಿಎಂನಲ್ಲಿ ಹಣ ದೋಚಲು ಪ್ರಯತ್ನಿಸಿ ವಿಫಲರಾಗಿದ್ದರು. ಇನ್ನು ಕಳ್ಳತನಕ್ಕೆಂದು ಹೋಗಿದ್ದ ವೇಳೆ ಫಲ ಸಿಗದ ಹಿನ್ನೆಲೆಯಲ್ಲಿ ಗೊರೂರು ಮತ್ತು ಸಾಲಿಗ್ರಾಮ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತಲಾ ಒಂದು ಬೈಕ್ ಕಳ್ಳತನ ಮಾಡಿಕೊಂಡು ಬಂದಿದ್ದರು ಎಂದು ಪೊಲೀಸರು ಮಾಹಿತಿ ನೀಡಿದರು.

    ಚಿನ್ನಾಭರಣ, ಇಎಂಐಗಾಗಿ ಕೃತ್ಯ:
    ಸಿಕ್ಕಿಬಿದ್ದವರ ಪೈಕಿ ಇಬ್ಬರ ಸ್ಥಿತಿ ಏನೋ ಮಾಡಲು ಹೋಗಿ ಮತ್ತೇನೋ ಮಾಡಿದಂತಾಗಿದೆ. ಎಸ್.ಕೃಷ್ಣ ಟಿಪ್ಪರ್ ಖರೀದಿ ಮಾಡಿದ್ದು, ಇಎಂಐ ಕಟ್ಟಲು ಇದ್ದ ಗಡುವು ಮುಗಿದಿತ್ತು. ಇದರಿಂದಾಗಿ ವಾಹನವನ್ನು ಸೀಜ್ ಮಾಡಲಾಗಿತ್ತು. ಇದನ್ನ ಬಿಡಿಸಿಕೊಳ್ಳಲು ಡಿ. 10ರೊಳಗೆ ಹಣ ಕಟ್ಟಬೇಕಿದ್ದ ಕಾರಣ ಕೃತ್ಯದಲ್ಲಿ ಭಾಗಿಯಾಗಿದ್ದನು. ಇತ್ತ ಬಂಧಿತ ನವಾಜ್ ಮದುವೆ ಶಿಕ್ಷಕಿಯೊಂದಿಗೆ ಡಿ. 14ರಂದು ನಿಗದಿಯಾಗಿತ್ತು. ಮದುವೆಗೆಂದು ಚಿನ್ನಾಭರಣ ಮಾಡಿಸಿಕೊಳ್ಳಲು ಈ ಕೃತ್ಯ ಎಸಗಿದ್ದನು. ಆದರೆ, ಮದುವೆಗೆ ಮುನ್ನವೇ ಪೊಲೀಸರು ಈತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.