Tag: accused

  • ಖತರ್ನಾಕ್ ಕಳ್ಳರು ಅರೆಸ್ಟ್ – 96 ಗ್ರಾಂ ಚಿನ್ನಾಭರಣ, 128 ಗ್ರಾಂ ಬೆಳ್ಳಿ ವಶ

    ಖತರ್ನಾಕ್ ಕಳ್ಳರು ಅರೆಸ್ಟ್ – 96 ಗ್ರಾಂ ಚಿನ್ನಾಭರಣ, 128 ಗ್ರಾಂ ಬೆಳ್ಳಿ ವಶ

    ಮಡಿಕೇರಿ: ಕೊಡಗು ಜಿಲ್ಲೆಯ ಸೋಮವಾರಪೇಟೆ ಸಮೀಪದ ಬಿಳಿಗೇರಿ ಗ್ರಾಮದಲ್ಲಿ ಮನೆಯ ಬೀಗ ಮುರಿದು ಕಳವು ಮಾಡಿದ್ದ ಖತರ್ನಾಕ್ ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ.

    ಬಂಧಿತ ಆರೋಪಿಗಳನ್ನು ಸತೀಶ್ (32), ಕಿರಣ್ (23) ಚಂದ್ರಶೇಖರ್.ಕೆ (23) ಎಂದು ಗುರುತಿಸಲಾಗಿದೆ. ಬಂಧಿತರಿಂದ 3,64,800 ರೂ. ಮೌಲ್ಯದ 96 ಗ್ರಾಂ ಚಿನ್ನಾಭರಣ, 128 ಗ್ರಾಂ ತೂಕದ ಬೆಳ್ಳಿ, 1 ಮೊಬೈಲ್ ಹಾಗೂ ಕೃತ್ಯಕ್ಕೆ ಉಪಯೋಗಿಸುತ್ತಿದ್ದ ಸ್ಪ್ಲೆಂಡರ್ ಬೈಕ್ ಹಾಗೂ ಮನೆ ಬೀಗ ಒಡೆಯಲು ಬಳಸಿದ್ದ 2 ಕಬ್ಬಿಣದ ರಾಡ್‍ನ್ನು ವಶಪಡಿಸಿಕೊಳ್ಳಲಾಗಿದೆ.

    ಆರೋಪಿಗಳು ಮೂರು ತಿಂಗಳ ಹಿಂದೆ ಬಿಳಿಗೇರಿ ಗ್ರಾಮದಲ್ಲಿ ಕೆಲಸದ ಸಲುವಾಗಿ ಮನೆಗೆ ಬೀಗ ಹಾಕಿ ತೆರಳಿದ್ದವರ ಮನೆಯ ಬೀಗ ಮುರಿದು ಚಿನ್ನಾಭರಣ ದೋಚಿದ್ದರು. ಈ ಸಂಬಂಧ 2 ಪ್ರಕರಣಗಳು ದಾಖಲಾಗಿದ್ದವು. ಸದರಿ ಪ್ರಕರಣವನ್ನು ಪತ್ತೆ ಮಾಡುವ ನಿಟ್ಟಿನಲ್ಲಿ ಸೋಮವಾರಪೇಟೆ ಪೊಲೀಸರು ವಿಶೇಷ ತಂಡವನ್ನು ರಚಿಸಿದ್ದರು.

    ಈ ವಿಶೇಷ ತಂಡ ಸೋಮವಾರಪೇಟೆ ಪೊಲೀಸ್ ಅಧೀಕ್ಷಕರು ಹಾಗೂ ಉಪಾಧೀಕ್ಷಕರ ಸೂಚನೆ ಮೆರೆಗೆ ಕಾರ್ಯಪ್ರವೃತ್ತರಾಗಿ ಮೊಬೈಲ್ ಟ್ರ್ಯಾಕ್ ಮಾಡುವ ಮೂಲಕ ಆರೋಪಿಗಳನ್ನು ಬಿಳಿಗೇರಿ ಹಾಗೂ ಶಿವಮೊಗ್ಗದಲ್ಲಿ ಬಂಧಿಸಿದ್ದಾರೆ.

  • ಬಂಧಿತ, ಗಾಯಗೊಂಡ ಆರೋಪಿಗಳಿಗೆ ಚಿಕಿತ್ಸೆ ಕಡ್ಡಾಯ: ಪೊಲೀಸ್ ಇಲಾಖೆ

    ಬಂಧಿತ, ಗಾಯಗೊಂಡ ಆರೋಪಿಗಳಿಗೆ ಚಿಕಿತ್ಸೆ ಕಡ್ಡಾಯ: ಪೊಲೀಸ್ ಇಲಾಖೆ

    ಬೆಂಗಳೂರು: ಬಂಧಿತ ಆರೋಪಿಗಳು ಮತ್ತು ಗಾಯಗೊಂಡ ಆರೋಪಿಗಳಿಗೆ ಕಡ್ಡಾಯವಾಗಿ ತಪ್ಪದೆ ಠಾಣಾಧಿಕಾರಿಗಳು ವೈದ್ಯಕೀಯ ತಪಾಸಣೆ ಮಾಡಿಸಬೇಕು ಅಂತ ಪೊಲೀಸ್ ಮಹಾ ನಿರ್ದೇಶಕರು ಸುತ್ತೋಲೆ ಹೊರಡಿಸಿದ್ದಾರೆ. ರಾಜ್ಯ ಮಾನವ ಹಕ್ಕುಗಳ ಆಯೋಗದ ಶಿಫಾರಸು ಮೇಲೆ ಪೊಲೀಸ್ ಇಲಾಖೆ ಹೊಸ ಸುತ್ತೋಲೆ ಹೊರಡಿಸಿದೆ. ಅಲ್ಲದೆ ಸುಪ್ರೀಂಕೋರ್ಟ್ ಆದೇಶ ಪಾಲನೆ ಮಾಡುವಂತೆ ಸೂಚನೆ ನೀಡಲಾಗಿದೆ.

    ವಿಚಾರಣಾಧೀನ ಕೈದಿ ಸಂಜು ಸಂಜೀವ್ ಕುಮಾರ್ ಅಸಹಜ ಸಾವಿನ ಪ್ರಕರಣದಿಂದ ಈ ಮಹತ್ವದ ಸುತ್ತೋಲೆ ಇಲಾಖೆ ಹೊರಡಿಸಿದೆ. ಅಪರಾಧ ಪ್ರಕರಣದಲ್ಲಿ ಅಥವಾ ಇತರೆ ಸಂದರ್ಭಗಳಲ್ಲಿ ಬಂಧಿತ ಆರೋಪಿಗಳಿಗೆ ಯಾವ ಯಾವ ನಿಯಮ ಪಾಲನೆ ಮಾಡಬೇಕು ಅಂತ ಸುಪ್ರೀಂಕೋರ್ಟ್ ಡಿಕೆ ಬಸು ವಿರುದ್ಧ ಪಶ್ಚಿಮ ಬಂಗಾಳ ರಾಜ್ಯದ ಪ್ರಕರಣದಲ್ಲಿ 11 ಅಂಶಗಳ ಕಾರ್ಯಸೂಚಿಯನ್ನು ನೀಡಿದೆ. ಈ ಮಾರ್ಗಸೂಚಿಯನ್ನ ಕಟ್ಟು ನಿಟ್ಟಾಗಿ ಜಾರಿಗೆ ತರಲು ಪೊಲೀಸ್ ಇಲಾಖೆ ಎಲ್ಲಾ ಠಾಣೆಗಳಿಗೆ ಸೂಚನೆ ನೀಡಿದೆ.

    ಬಂಧಿತ ಆರೋಪಿಗೆ ವೈದ್ಯಕೀಯ ಚಿಕಿತ್ಸೆ ಅಥವಾ ಪರೀಕ್ಷೆ ಒಳಪಡಿಸುವ ಕುರಿತಾಗಿ ಸುಪ್ರೀಂಕೋರ್ಟ್ ಮಾರ್ಗಸೂಚಿ 8 ನೇ ಅಂಶದಲ್ಲಿ ಸೂಚನೆ ನೀಡಲಾಗಿದೆ. ಈ ಮಾರ್ಗಸೂಚಿ ಅನ್ವಯ ಬಂಧಿತ ಆರೋಪಿಗೆ ಪ್ರತಿ 48 ಗಂಟೆಗೊಮ್ಮೆ ವೈದ್ಯಕೀಯ ಪರೀಕ್ಷೆ ಮಾಡಸಬೇಕು ಅಂತ ಸೂಚನೆ ನೀಡಲಾಗಿದೆ. ಈ ಆದೇಶ ಪಾಲಿಸುವಂತೆ ಇಲಾಖೆ ಕಟ್ಟು ನಿಟ್ಟಿನ ಸೂಚನೆ ನೀಡಿದೆ.

    ಬಂಧಿತ ಆರೋಪಿಯನ್ನ ಬಂಧನದ ತಕ್ಷಣ ವೈದ್ಯಕೀಯ ಪರೀಕ್ಷೆ ಮಾಡಿಸಬೇಕು. ಆರೋಪಿ ಪರೀಕ್ಷೆಗೆ ಪೊಲೀಸರು ಮೊದಲ ಆದ್ಯತೆ ಕೊಡಬೇಕು. ಬಂಧಿತ ಆರೋಪಿ ಆರೋಗ್ಯ ಸ್ಥಿತಿ ವಿಷಮಿಸದಂತೆ ಅಗತ್ಯ ಕ್ರಮವಹಿಸಬೇಕು ಅಂತ ಇಲಾಖೆ ಸುತ್ತೋಲೆಯ ಉಲ್ಲೇಖ ಮಾಡಿದೆ. ಯಾವುದೇ ಠಾಣೆಗಳು ಮಾರ್ಗಸೂಚಿ ಪಾಲನೆ ಮಾಡದೇ ಇದ್ದರೆ ಕ್ರಮ ತೆಗೆದುಕೊಳ್ಳುವ ಎಚ್ಚರಿಕೆಯನ್ನು ಇಲಾಖೆ ನೀಡಿದೆ.

  • ಕೊಬ್ಬರಿ ಎಣ್ಣೆ ಡಬ್ಬಿಯಲ್ಲಿ ಡ್ರಗ್ಸ್ – ಪೊಲೀಸರ ದಾರಿ ತಪ್ಪಿಸಲು ಖತರ್ನಾಕ್ ಪ್ಲಾನ್

    ಕೊಬ್ಬರಿ ಎಣ್ಣೆ ಡಬ್ಬಿಯಲ್ಲಿ ಡ್ರಗ್ಸ್ – ಪೊಲೀಸರ ದಾರಿ ತಪ್ಪಿಸಲು ಖತರ್ನಾಕ್ ಪ್ಲಾನ್

    ಬೆಂಗಳೂರು: ಕೊಬ್ಬರಿ ಎಣ್ಣೆ ಡಬ್ಬಿಯಲ್ಲಿ ಡ್ರಗ್ಸ್ ಇಟ್ಟುಕೊಂಡು ಬೆಂಗಳೂರಿಗೆ ತರುತ್ತಿದ್ದ ಇಬ್ಬರು ಅಂತರರಾಜ್ಯ ಡ್ರಗ್ಸ್ ಪೆಡ್ಲರ್‌ಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

    ಮಾದಕ ವಸ್ತುಗಳ ಸಾಗಾಟ ಮಾಡೋದಕ್ಕೆ ಪೊಲೀಸರು ಬಿಡುತ್ತಿಲ್ಲ. ಏನೇ ಮಾಡಿದರು ಪೊಲೀಸರ ಬಳಿ ಸಿಕ್ಕಿಬೀಳ್ತೀವಿ ಅಂತ ಖತರ್ನಾಕ್ ಉಪಾಯ ಮಾಡಿ ಆರೋಪಿಗಳು ಕೊಬ್ಬರಿ ಎಣ್ಣೆ ಡಬ್ಬಿಯಲ್ಲಿ ಡ್ರಗ್ಸ್ ಇಟ್ಟುಕೊಂಡು ಬೆಂಗಳೂರಿಗೆ ತರುತ್ತಿದ್ದರು. ಆದರೆ ಡ್ರಗ್ಸ್ ಪೆಡ್ಲರ್‌ಗಳಾದ ಸಿಂಟೋ ಥಾಮಸ್(35) ಹಾಗೂ ತಾಜುದ್ದೀನ್ ತಲಾತ್(29) ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸರಿಗೆ ಅನುಮಾನ ಬರಬಾರದು ಎಂದು ಪ್ಯಾರಚೂಟ್ ಕೊಬ್ಬರಿ ಎಣ್ಣೆ ಡಬ್ಬಿಯಲ್ಲಿ ಡ್ರಗ್ಸ್ ಇಟ್ಟು ಆರೋಪಿಗಳು ಮಾರಾಟಕ್ಕೆ ಯತ್ನಿಸಿದ್ದರು.

    ವಿಶಾಖಪಟ್ಟಣಂನಿಂದ ಬೆಂಗಳೂರಿಗೆ ಡ್ರಗ್ಸ್ ತರಿಸಿ ಮಾರಾಟ ಮಾಡ್ತಿದ್ದ ಪೆಡ್ಲರ್‌ಗಳು, ಹ್ಯಾಶಿಶ್ ಆಯಿಲ್ ಎನ್ನುವ ಡ್ರಗ್ಸ್ ಮಾರಾಟ ಮಾಡುತ್ತಿದ್ದರು. 1 ಗ್ರಾಂ ಡ್ರಗ್ಸ್ ಅನ್ನು ಸುಮಾರು 3 ಸಾವಿರ ರೂಪಾಯಿಗೆ ಮಾರಾಟ ಮಾಡುತ್ತಿದ್ದರು. ಈ ಬಗ್ಗೆ ಮಾಹಿತಿ ತಿಳಿದ ಸಿಸಿಬಿ ಪೊಲೀಸರು ಆರೋಪಿಗಳ್ನು ಬಂಧಿಸಿ, ಅವರಿಂದ 4,500 ಗ್ರಾಂ ಹ್ಯಾಶಿಶ್ ಆಯಿಲ್ ವಶಪಡಿಸಿಕೊಂಡಿದ್ದಾರೆ. ಡ್ರಗ್ಸ್ ಜೊತೆಗೆ 22 ಕೆ.ಜಿ ಗಾಂಜಾವನ್ನು ಕೂಡ ವಶಕ್ಕೆಪಡೆದಿರುವ ಪೊಲೀಸರು ಆರೋಪಿಗಳನ್ನು ವಿಚಾರಣೆ ನಡೆಸುತ್ತಿದ್ದಾರೆ.

  • ಅತ್ತೆ ಮಗಳನ್ನು ಕಿಡ್ನಾಪ್ ಮಾಡಿ ತಾಳಿ ಕಟ್ಟಿದವ ಅರೆಸ್ಟ್

    ಅತ್ತೆ ಮಗಳನ್ನು ಕಿಡ್ನಾಪ್ ಮಾಡಿ ತಾಳಿ ಕಟ್ಟಿದವ ಅರೆಸ್ಟ್

    – ಘಟನೆಯಿಂದ ಮನನೊಂದು ಯುವತಿ ತಂದೆ ಅಸ್ವಸ್ಥ

    ಹಾಸನ: ಅತ್ತೆ ಮಗಳನ್ನು ಕಿಡ್ನಾಪ್ ಮಾಡಿ ಕಾರಿನಲ್ಲೇ ತಾಳಿ ಕಟ್ಟಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಯನ್ನು ರಾಮನಗರದಲ್ಲಿ ಬಂಧಿಸಿದ್ದಾರೆ.

    ಯುವಕ ಮನು ಬಲವಂತವಾಗಿ ತನ್ನ ಅತ್ತೆ ಮಗಳಿಗೆ ತಾಳಿ ಕಟ್ಟಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಯುವತಿಯ ಪೋಷಕರು ನೀಡಿದ ದೂರಿನ ಮೆರೆಗೆ ಪೊಲೀಸರು ಗಂಭೀರವಾಗಿ ತನಿಖೆ ನೆಡಸಲು ಶುರು ಮಾಡಿದ್ದರು. ಇದೀಗ ಪೊಲೀಸರು ರಾಮನಗರದಲ್ಲಿ ಯುವತಿಯನ್ನು ರಕ್ಷಿಸಿ ಯುವಕನನ್ನು ಬಂಧಿಸಿದ್ದಾರೆ.

    ದುದ್ದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸದ್ಯ ಪೊಲೀಸರು ಯುವಕ ಮತ್ತು ಯುವತಿಯನ್ನು ಎಸ್‍ಪಿ ಆಫೀಸ್‍ಗೆ ಕರೆ ತರುತ್ತಿದ್ದಾರೆ. ಈ ಘಟನೆಯಿಂದ ಯುವತಿಯ ತಂದೆ ಮನನೊಂದು ಅಸ್ವಸ್ಥರಾಗಿದ್ದು, ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದನ್ನೂ ಓದಿ: ಅತ್ತೆ ಮಗಳನ್ನು ಕಿಡ್ನಾಪ್ ಮಾಡಿ ಕಾರಲ್ಲೇ ತಾಳಿ ಕಟ್ಟಿದ

    ಏನಿದು ಪ್ರಕರಣ?
    ಮನು ಎಂಬವನು ಬಸ್ಸಿಗಾಗಿ ಕಾಯುತ್ತಿದ್ದ ತನ್ನ ಅತ್ತೆ ಮಗಳನ್ನು ಕಿಡ್ನಾಪ್ ಮಾಡಿ ಕಾರಿನಲ್ಲೇ ತಾಳಿ ಕಟ್ಟಿದ್ದನು. ಎರಡು ದಿನಗಳ ಹಿಂದೆ ಈ ಘಟನೆ ನಡೆದಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಮನು ಅರಸೀಕೆರೆ ತಾಲೂಕಿನ ಕುಡುಕುಂದಿ ಗ್ರಾಮದವನಾಗಿದ್ದು, ತನ್ನ ಅತ್ತೆ ಮಗಳನ್ನು ಇಷ್ಟಪಡುತ್ತಿದ್ದನು. ಆದರೆ ಯುವತಿ ಮನುವನ್ನು ಮದುವೆಯಾಗಲು ನಿರಾಕರಿಸಿದ್ದಳು. ವಿರೋಧವಿದ್ದರೂ ಯುವಕ ಬಲವಂತವಾಗಿ ಕಿಡ್ನಾಪ್ ಮಾಡಿ ತಾಳಿ ಕಟ್ಟಿದ್ದಾನು.

    ಯುವತಿ ಟೈಲರಿಂಗ್ ಕ್ಲಾಸಿಗೆ ಹೋಗುತ್ತಿದ್ದಳು. ಹೀಗಾಗಿ ಯುವತಿ ಬಸ್ ಸ್ಟ್ಯಾಂಡ್‍ನಲ್ಲಿ ಬಸ್ಸಿಗಾಗಿ ಕಾಯುತ್ತಿದ್ದಳು. ಈ ವೇಳೆ ಯುವತಿಯ ಅತ್ತೆ ಮಗ ತನ್ನ ಸ್ನೇಹಿತರ ಜೊತೆ ಸೇರಿ ಆಕೆಯನ್ನು ಕಿಡ್ನಾಪ್ ಮಾಡಿ ತಾಳಿ ಕಟ್ಟಲು ಮುಂದಾಗಿದ್ದನು. ಈ ವೇಳೆ ಯುವತಿ ಮನುವಿನ ಕೈ ಕಚ್ಚಿ, ತನ್ನ ಕುತ್ತಿಗೆಗೆ ಕೈ ಅಡ್ಡ ಇಟ್ಟಿದ್ದಳು. ಕೈ ಕಚ್ಚಿದರೂ, ಕುತ್ತಿಗೆಗೆ ಕೈ ಅಡ್ಡ ಇಟ್ಟಿದ್ದರು ಸಹ ಮನು, ಯುವತಿಯನ್ನು ಬಿಡದೆ ತಾಳಿ ಕಟ್ಟಿ ಮದುವೆ ಆಗಿದ್ದನು.

  • ಯುವತಿಯ ಮೇಲೆ ಎರಡು ಬಾರಿ ಅತ್ಯಾಚಾರ – ಜೈಲಿಗೆ ಹೋದ್ರೂ ಬುದ್ಧಿ ಕಲಿಯದ ಕಿರಾತಕ

    ಯುವತಿಯ ಮೇಲೆ ಎರಡು ಬಾರಿ ಅತ್ಯಾಚಾರ – ಜೈಲಿಗೆ ಹೋದ್ರೂ ಬುದ್ಧಿ ಕಲಿಯದ ಕಿರಾತಕ

    ಬೆಂಗಳೂರು: ಒಂದೇ ಹುಡುಗಿಗಾಗಿ ಎರಡೆರಡು ಬಾರಿ ಜೈಲಿಗೆ ಹೋಗಿ ಬಂದರೂ ಅದೇ ಹುಡುಗಿಯನ್ನು ಅತ್ಯಾಚಾರ ಮಾಡಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕುತ್ತಿರುವ ಆರೋಪಿಯ ವಿರುದ್ಧ ಮೂರನೇ ಬಾರಿ ದೂರು ದಾಖಲಾಗಿದೆ.

    ಪ್ರೀತಿ ಮಾಡುವುದಾಗಿ ಹೇಳಿ ಬಲವಂತವಾಗಿ ಅತ್ಯಾಚಾರ ಮಾಡಿದ್ದ ಅಕ್ಬರ್ ಪಾಷಾ ವಿರುದ್ಧ ನೊಂದ ಯುವತಿ ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಳು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಆರೋಪಿ ಅಕ್ಬರ್ ಪಾಷಾನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು.

    ವರ್ಷದ ಬಳಿಕ ಜಾಮೀನಿನ ಮೇಲೆ ಜೈಲಿನಿಂದ ಹೊರಗೆ ಬಂದ ಅಕ್ಬರ್ ಅದೇ ಯುವತಿ ಮೇಲೆ ಅತ್ಯಾಚಾರ ಎಸಗಿದ್ದಾನೆ. ಮತ್ತೆ ಯುವತಿ ಅದೇ ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ಅಕ್ಬರ್ ವಿರುದ್ಧ ದೂರು ನೀಡಿ ಜೈಲಿಗೆ ಕಳುಹಿಸಿದ್ದಳು.

    ಎರಡನೇ ಬಾರಿ ಜೈಲಿನಿಂದ ಹೊರಗೆ ಬಂದ ಅಕ್ಬರ್ ಪಾಷಾ, ಯುವತಿ ಕಾಲೇಜಿನಿಂದ ಮನೆಗೆ ಹೋಗುವಾಗ ಅಡ್ಡ ಗಟ್ಟಿ ಹಲ್ಲೆ ಮಾಡಿದ್ದಾನೆ. ಅಲ್ಲದೆ ನಿಮ್ಮ ತಾಯಿ ಹಾಗೂ ಅಣ್ಣನನ್ನ ಕೊಲೆ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದಾನೆ ಎಂದು ಮೂರನೇ ಬಾರಿ ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ.

    ಈ ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಅಕ್ಬರ್ ಪಾಷಾನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

  • ಡ್ರಾಪ್ ಕೊಡೋ ನೆಪದಲ್ಲಿ ಅಪ್ರಾಪ್ತೆ ಮೇಲೆ ಅತ್ಯಾಚಾರ- ಆರೋಪಿ ಬಂಧನ

    ಡ್ರಾಪ್ ಕೊಡೋ ನೆಪದಲ್ಲಿ ಅಪ್ರಾಪ್ತೆ ಮೇಲೆ ಅತ್ಯಾಚಾರ- ಆರೋಪಿ ಬಂಧನ

    – ವಿಷ ಸೇವಿಸಿ ಬಾಲಕಿ ತಂದೆ ಆತ್ಮಹತ್ಯೆ

    ರಾಯಚೂರು: ಜಿಲ್ಲೆಯ ಸಿಂಧನೂರು ತಾಲೂಕಿನಲ್ಲಿ ಡ್ರಾಪ್ ಕೊಡುವ ನೆಪದಲ್ಲಿ ಬಾಲಕಿ ಮೇಲೆ ಅತ್ಯಾಚಾರವೆಸಿಗಿದ್ದ ಆರೋಪಿ ಕೊನೆಗೂ ಸೆರೆಸಿಕ್ಕಿದ್ದಾನೆ. ಮಸ್ಕಿ ತಾಲೂಕಿನ ಸಣ್ಣ ಪಾಮಣ್ಣ ಬಂಧಿತ ಆರೋಪಿ.

    ಜನವರಿ 24 ರಂದು ಬಾಲಕಿಯ ತಂದೆಗೆ ಮದ್ಯಪಾನ ಮಾಡಿಸಿದ್ದ ಆರೋಪಿ ತಾನು ಕಂಠಪೂರ್ತಿ ಕುಡಿದಿದ್ದ. ಆ ಬಳಿಕ ಬಾಲಕಿಯನ್ನು ಮನೆಗೆ ಬೈಕ್ ನಲ್ಲಿ ಬಿಟ್ಟು ಬರಲು ಹೋದಾಗ ಮಾರ್ಗ ಮಧ್ಯೆಯಲ್ಲಿ ಅತ್ಯಾಚಾರ ಮಾಡಿ ಪರಾರಿಯಾಗಿದ್ದ. ಜಿಲ್ಲೆಯ ಬಾಲಕಿಯರ ವಸತಿ ನಿಲಯವೊಂದರಲ್ಲಿ ಓದುತ್ತಿದ್ದ ಬಾಲಕಿಯನ್ನು ಅವಳ ತಂದೆ ಮನೆಗೆ ಕರೆದುಕೊಂಡು ಹೋಗಲು ಬಂದಿದ್ದರು. ಆದರೆ ಮರಳಿ ಗ್ರಾಮಕ್ಕೆ ತಲುಪುವುದರೊಳಗೆ ಆರೋಪಿ ಈ ಕೃತ್ಯ ಎಸಗಿದ್ದ.

    ಈ ಸಂಬಂಧ ಸಿಂಧನೂರು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಘಟನೆಯಿಂದ ಮಾನಸಿಕ ಖಿನ್ನತೆಗೆ ಒಳಗಾದ ಬಾಲಕಿಯ ತಂದೆ ಫೆಬ್ರವರಿ 2 ರಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಆರೋಪಿ ಬಳಸುತ್ತಿದ್ದ ಬೈಕ್ ಆಧಾರದಲ್ಲಿ ಅವನನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸರ ಕೈಗೆ ಸಿಕ್ಕಿರುವ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

  • 5 ಸಾವಿರ ಹಣಕ್ಕಾಗಿ ಸ್ನೇಹಿತನನ್ನೇ ಕೊಂದ ಕಿರಾತಕರು ಅಂದರ್

    5 ಸಾವಿರ ಹಣಕ್ಕಾಗಿ ಸ್ನೇಹಿತನನ್ನೇ ಕೊಂದ ಕಿರಾತಕರು ಅಂದರ್

    ತುಮಕೂರು: ಕೇವಲ 5 ಸಾವಿರ ರೂ. ಹಣಕ್ಕಾಗಿ ಸ್ನೇಹಿತನನ್ನೇ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

    ಜನವರಿ 29ರ ರಾತ್ರಿ ತುಮಕೂರು ನಗರದ ಹೊರವಲಯದ ಮಾರನಾಯಕನ ಪಾಳ್ಯದಲ್ಲಿ ತಮ್ಮ ಸ್ನೇಹಿತನನ್ನೇ ಕೊಲೆ ಮಾಡಿದ ಕಿರಾತಕರನ್ನು ಕ್ಯಾತಸಂದ್ರ ಪೊಲೀಸರು ಬಂಧಿಸಿದ್ದಾರೆ. ಭರತ್ ಹಾಗೂ ಕಾಂತರಾಜು ಬಂಧಿತ ಆರೋಪಿಗಳು. ಇವರಿಬ್ಬರು ತಮ್ಮ ಸ್ನೇಹಿತ ಪಾಲನೇತ್ರಯ್ಯನನ್ನ ಮಚ್ಚಿನಿಂದ ಕೊಲೆ ಮಾಡಿದ್ದರು. ಇದನ್ನೂ ಓದಿ: ಹಣಕ್ಕಾಗಿ ಸ್ನೇಹಿತನನ್ನೇ ಮಚ್ಚಿನಿಂದ ಕೊಚ್ಚಿ ಕೊಂದ ಕಿರಾತಕ

    ಪಾಲನೇತ್ರಯ್ಯನ ಮನೆಯ ನಾಯಿ ಆರೋಪಿ ಕಾಂತರಾಜುಗೆ ಕಚ್ಚಿತ್ತು. ಆಗ ಆರೋಪಿಗಳಾದ ಕಾಂತರಾಜು ಹಾಗೂ ಭರತ್ ಪಾಲನೇತ್ರಯ್ಯನ ತಾಯಿಯನ್ನು ಪ್ರಶ್ನಿಸಿದ್ದರು. ಈ ಜಗಳ ನಿಧಾನವಾಗಿ ತಾರಕ್ಕಕೇರಿದ್ದು, ಮಧ್ಯ ಪ್ರವೇಶಿಸಿದ ಪಾಲನೇತ್ರಯ್ಯ ಇಬ್ಬರು ಸ್ನೇಹಿತರನ್ನು ತರಾಟೆ ತೆಗೆದುಕೊಂಡಿದ್ದನು.

    ಇದರಿಂದ ಕೋಪಗೊಂಡಿದ್ದ ಭರತ್ ಹಾಗೂ ಕಾಂತರಾಜು ಪಾಲನೇತ್ರಯ್ಯನ ಮೇಲೆ ಸೇಡು ತೀರಿಸಿಕೊಳ್ಳಲು ಹೊಂಚು ಹಾಕಿದ್ದರು. ಈ ನಡುವೆ ಪಾಲನೇತ್ರಯ್ಯ ಭರತನಿಂದ 5 ಸಾವಿರ ರೂ. ಸಾಲ ಪಡೆದಿದ್ದನು. ಸಾಲ ವಾಪಸ್ ಕೊಡುವಂತೆ ಭರತ್ ಕೇಳಿದ್ದಾಗ ಪಾಲನೇತ್ರಯ್ಯ ಹಣ ಕೊಡಲು ಸತಾಯಿಸುತ್ತಿದ್ದನು. ಘಟನೆ ನಡೆದಿದ್ದ ದಿನ ರಾತ್ರಿ ಬಸ್ ನಿಲ್ದಾಣದ ಬಳಿ ಪಾಲನೇತ್ರಯ್ಯನನ್ನು ಕರೆದು, ದುಡ್ಡು ವಾಪಸ್ ಕೊಡುವಂತೆ ಆರೋಪಿಗಳು ಧಮ್ಕಿ ಹಾಕಿದ್ದರು. ಈ ವೇಳೆ ಪಾಲನೇತ್ರಯ್ಯ ಎರಡು ದಿನ ಸಮಯ ಕೊಡಿ ಹಣ ನೀಡುತ್ತೇನೆ ಎಂದಿದ್ದನು. ಆದರೂ ಇಬ್ಬರು ಆರೋಪಿಗಳು ಸೇರಿ ಪಾಲನೇತ್ರನನ್ನು ಹತ್ಯೆ ಮಾಡಿದ್ದರು. ಈ ಬಗ್ಗೆ ತನಿಖೆ ಕೈಗೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

  • ದೂರು ವಾಪಸ್ ಪಡೆಯಲು ರೇಪ್ ಸಂತ್ರಸ್ತೆ ನಕಾರ – ಆ್ಯಸಿಡ್ ಎರಚಿದ ಕಾಮುಕನ ಕುಟುಂಬ

    ದೂರು ವಾಪಸ್ ಪಡೆಯಲು ರೇಪ್ ಸಂತ್ರಸ್ತೆ ನಕಾರ – ಆ್ಯಸಿಡ್ ಎರಚಿದ ಕಾಮುಕನ ಕುಟುಂಬ

    ಲಕ್ನೋ: ಉತ್ತರಪ್ರದೇಶದಲ್ಲಿ ದೂರು ವಾಪಸ್ ಪಡೆಯದಿದ್ದಕ್ಕೆ ಅತ್ಯಾಚಾರಕ್ಕೊಳಗಾಗಿದ್ದ ಅಪ್ರಾಪ್ತೆ ಮೇಲೆ ಅತ್ಯಾಚಾರಿಯ ಕುಟುಂಬಸ್ಥರು ಆ್ಯಸಿಡ್ ದಾಳಿ ನಡೆಸಿದ್ದಾರೆ.

    ಉತ್ತರ ಪ್ರದೇಶದ ಹಾಪುರ್ ನಲ್ಲಿ ಈ ಘಟನೆ ನಡೆದಿದೆ. ಭಾನುವಾರ ಅತ್ಯಾಚಾರ ಸಂತ್ರಸ್ತೆಯ ಮೇಲೆ ಅತ್ಯಾಚಾರಿಯ ಕುಟುಂಬಸ್ಥರು ಆ್ಯಸಿಡ್ ಎರಚಿ, ಆಕೆಯ ಪೋಷಕರ ಮೇಲೆ ಹಲ್ಲೆ ನಡೆಸಿದ್ದಾರೆ. ಆರೋಪಿಗಳು ಎರಚಿದ ಆ್ಯಸಿಡ್ ಬಾಲಕಿಯ ಕಾಲಿನ ಮೇಲೆ ಬಿದ್ದಿದ್ದು, ಸದ್ಯ ಆಕೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಈಗಾಗಲೇ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಇನ್ನು ಉಳಿದ ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.

    2019ರ ಸೆಪ್ಟೆಂಬರ್ 2ರಂದು ಬಾಲಕಿಯ ಮೇಲೆ ಅತ್ಯಾಚಾರ ನಡೆದಿತ್ತು. ಆ ಬಳಿಕ ಬಾಲಕಿಯ ಕುಟುಂಬಸ್ಥರು ಕಾಮುಕನ ವಿರುದ್ಧ ದೂರು ನೀಡಿದ್ದರು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು. ಆದರೆ ಆರೋಪಿ ಕುಟುಂಬಸ್ಥರು ಕೊಟ್ಟಿರುವ ದೂರನ್ನು ವಾಪಸ್ ಪಡೆಯುವಂತೆ ಸಂತ್ರಸ್ತೆ ಹಾಗೂ ಆಕೆಯ ಪೋಷಕರಿಗೆ ಕಾಡುತ್ತಿದ್ದರು.

    ಇದೇ ವಿಚಾರಕ್ಕೆ ಭಾನುವಾರ ಕೂಡ ಸಂತ್ರಸ್ತೆ, ಆಕೆಯ ಪೋಷಕರು ಹಾಗೂ ಆರೋಪಿಯ ಕುಟುಂಬಸ್ಥರ ನಡುವೆ ಗಲಾಟೆ ನಡೆದಿತ್ತು. ಇದರಿಂದ ಸಿಟ್ಟಿಗೆದ್ದ ಆರೋಪಿ ಕುಟುಂಬಸ್ಥರು ಸಂತ್ರಸ್ತೆಯ ಮೇಲೆ ಆ್ಯಸಿಡ್ ದಾಳಿ ನಡೆಸಿದ್ದಾರೆ.

  • ಜೇಬಿನಲ್ಲಿದ್ದ ಕಡಲೆಕಾಯಿಂದ ಆರೋಪಿಗಳನ್ನು ಪತ್ತೆ ಹಚ್ಚಿದ ಪೊಲೀಸರು – ಮೂವರು ಅಂದರ್

    ಜೇಬಿನಲ್ಲಿದ್ದ ಕಡಲೆಕಾಯಿಂದ ಆರೋಪಿಗಳನ್ನು ಪತ್ತೆ ಹಚ್ಚಿದ ಪೊಲೀಸರು – ಮೂವರು ಅಂದರ್

    ಬಾಗಲಕೋಟೆ: ಜೇಬಲ್ಲಿ ಸಿಕ್ಕ ಕಡಲೆಕಾಯಿಯ ಸುಳಿವಿನಿಂದಲೇ ಕೊಲೆಗಾರರನ್ನು ಪತ್ತೆ ಹಚ್ಚುವಲ್ಲಿ ಬಾಗಲಕೋಟೆ ಜಿಲ್ಲೆಯ ಜಮಖಂಡಿ ಪೊಲೀಸರು ಯಶಸ್ವಿಯಾಗಿದ್ದಾರೆ.

    ಸಂಕ್ರಾಂತಿ ದಿನ ಜನವರಿ 14ರಂದು ಜಮಖಂಡಿ ತಾಲೂಕಿನ ಕುಂಚನೂರು ಪುನರ್ವಸತಿ ಕೇಂದ್ರದಲ್ಲಿ 34 ವರ್ಷದ ತುಕ್ಕಪ್ಪ ರೇವಣ್ಣವರ ಕೊಲೆಯಾಗಿತ್ತು. ಹಗ್ಗದಿಂದ ಕತ್ತು ಬಿಗಿದು ಕಲ್ಲಿನಿಂದ ಜಜ್ಜಿ ಕೊಲೆ ಮಾಡಲಾಗಿತ್ತು. ಆಸ್ತಿ ವಿಚಾರವಾಗಿ ಚಿಕ್ಕಪ್ಪನಿಂದಲೇ ಕೊಲೆಗೆ ಸುಪಾರಿ ಕೊಡಲಾಗಿತ್ತು ಎಂಬ ಸುದ್ದಿ ತನಿಖೆಯಿಂದ ಹೊರ ಬಿದ್ದಿದೆ. ತುಕ್ಕಪ್ಪನ ಕೊಲೆಗೆ ಆತನ ಚಿಕ್ಕಪ್ಪನಾದ ಕರೆಪ್ಪ ರೇವಣ್ಣವರ ಸುಪಾರಿ ನೀಡಿದ್ದಾಗಿ ತನಿಖೆಯಿಂದ ಬಯಲಾಗಿದೆ.

    ಧರ್ಮಣ್ಣ ಗುಡದಾರ ಹಾಗೂ ವಿಠ್ಠಲ ಬಬಲೇಶ್ವರ ಕೊಲೆ ಮಾಡಿದ ಆರೋಪಿಗಳು ಎಂದು ಗುರುತಿಸಲಾಗಿದೆ. ಕೊಲೆ ಮಾಡುವ ಮೊದಲು ಕೊಲೆಗಾರರು ಹಾಗೂ ಕೊಲೆಯಾದ ವ್ಯಕ್ತಿ ಬಾರ್ ನಲ್ಲಿ ಮದ್ಯ ಸೇವನೆ ಮಾಡಿದ್ದರು. ಈ ವೇಳೆ ಬಾರ್ ನಲ್ಲಿ ನೆನೆಸಿಟ್ಟ ಕಡಲೆಗಳನ್ನು ಸ್ನ್ಯಾಕ್ಸ್ ರೀತಿಯಲ್ಲಿ ಕೊಡಲಾಗಿತ್ತು. ಶವ ಪರಿಶೀಲನೆ ವೇಳೆ ಮೃತ ವ್ಯಕ್ತಿಯ ಜೇಬಿನಲ್ಲಿ ಕಡಲೆಕಾಳು ಪತ್ತೆಯಾಗಿದ್ದವು. ಬಳಿಕ ಕಡಲೆಕಾಳು ಸ್ನ್ಯಾಕ್ಸ್ ರೀತಿ ಕೊಡುವ ಎಲ್ಲಾ ಬಾರ್ ಗಳನ್ನು ಪೊಲೀಸರು ತಡಕಾಡಿದ್ದರು. ಕೊನೆಗೆ ಜಮಖಂಡಿ ಬಾಲಾಜಿ ಬಾರ್ ನ ಸಿಸಿಟಿವಿ ದೃಶ್ಯಾವಳಿ ಪೊಲೀಸರಿಗೆ ಪ್ರಕರಣ ಬೇಧಿಸಲು ಸಹಕಾರಿಯಾಗಿದೆ.

    ಕೊಲೆಗೆ ಸುಪಾರಿ ಕೊಟ್ಟ ಮೃತ ತುಕ್ಕಪ್ಪನ ಚಿಕ್ಕಪ್ಪನಾದ ಕರೆಪ್ಪ ಹಾಗೂ ಕೊಲೆ ಮಾಡಿ ಧರ್ಮಣ್ಣ ಗುಡದಾರ, ವಿಠ್ಠಲ ಬಬಲೇಶ್ವರ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಈ ಮೂವರು ಕೂಡ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಮುಂಡಗನೂರು ಗ್ರಾಮದವರು ಎಂದು ತಿಳಿದು ಬಂದಿದೆ.

  • ಹಣಕ್ಕಾಗಿ ಕಾಲೇಜು ವಿದ್ಯಾರ್ಥಿಗಳ ಕಿಡ್ನಾಪ್ ಯತ್ನ – ಆರೋಪಿಗಳು ಅಂದರ್

    ಹಣಕ್ಕಾಗಿ ಕಾಲೇಜು ವಿದ್ಯಾರ್ಥಿಗಳ ಕಿಡ್ನಾಪ್ ಯತ್ನ – ಆರೋಪಿಗಳು ಅಂದರ್

    ರಾಮನಗರ: ಬೆಂಗಳೂರಿನ ಕ್ರೈಸ್ಟ್ ಕಾಲೇಜು ವಿದ್ಯಾರ್ಥಿಗಳ ಅಪಹರಣಕ್ಕೆ ಯತ್ನಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ರಾಮನಗರದ ಐಜೂರು ಪೊಲೀಸರು ಯಶಸ್ವಿಯಾಗಿದ್ದಾರೆ.

    ವಿದ್ಯಾರ್ಥಿಗಳನ್ನ ಕಿಡ್ನಾಪ್ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಆರೋಪಿಗಳನ್ನು ರಾಮನಗರದ ಮಥೀನ್ (29) ಹಾಗೂ ಸುಹೇಲ್ (30) ಎಂದು ಗುರುತಿಸಲಾಗಿದೆ ಮತ್ತೊಬ್ಬ ಆರೋಪಿಯ ಹೆಸರು ತಿಳಿದು ಬಂದಿಲ್ಲ. ಈ ಇಬ್ಬರು ರಾಮನಗರದಲ್ಲಿ ರೇಡಿಯಂ ಸ್ಟಿಕ್ಕರ್ ಅಂಗಡಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದವರು. ಇದೇ ಮೊದಲ ಬಾರಿಗೆ ಹಣ ಮಾಡಕೊಳ್ಳಲು ವಿದ್ಯಾರ್ಥಿಗಳನ್ನು ಅಡ್ಡಗಟ್ಟಿ ಅಪಹರಣ ಮಾಡಲು ಯತ್ನಿಸಿದ್ದರು.

    ಬೆಂಗಳೂರಿನ ಪ್ರತಿಷ್ಟಿತ ಕ್ರೈಸ್ಟ್ ಕಾಲೇಜಿನಲ್ಲಿ ಬಿ.ಟೆಕ್ ಮಾಡುತ್ತಿದ್ದ ವಿದ್ಯಾರ್ಥಿಗಳು ಪ್ರಾಜೆಕ್ಟ್ ನಿಮಿತ್ತ ಮೈಸೂರಿಗೆ ತೆರಳಿದ್ದರು. ನಂತರ ವಾಪಸ್ ಬರುವ ವೇಳೆ ರಾಮನಗರದಲ್ಲಿ ಬೈಕ್ ನಿಲ್ಲಿಸಿ ಮೊಬೈಲ್‍ನಲ್ಲಿ ಮಾತನಾಡುವ ವೇಳೆ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ.

    ರಾಮನಗರದಲ್ಲಿ ಬೈಕ್ ನಿಲ್ಲಿಸಿ ಮಾತನಾಡುತ್ತಿದ್ದ ವಿದ್ಯಾರ್ಥಿಗಳನ್ನು ಗಮನಿಸಿದ ಮೂವರು ಕಿಡಿಗೇಡಿಗಳ ತಂಡ ವಿದ್ಯಾರ್ಥಿನಿಯನ್ನು ಅಡ್ಡಗಟ್ಟಿದ್ದಾರೆ. ನೀನು ಮುಸ್ಲಿಂ ನಿನ್ನ ಜೊತೆ ಇರುವ ಗೆಳೆಯ ಬೇರೆ ಧರ್ಮದವನು, ನೀವು ಇಬ್ಬರು ಪ್ರೀತಿ ಮಾಡುತ್ತಿದ್ದೀರಾ. ಈ ವಿಚಾರವನ್ನು ಗುರು ಹಿರಿಯರಿಗೆ ತಿಳಿಸುತ್ತೇನೆ. ನೀನು ಬೈಕ್ ಹತ್ತಿ ಬಾ ನಮ್ಮ ಸಂಘದ ಕಚೇರಿಗೆ ಕರೆದುಕೊಂಡು ಹೋಗಿ ಅಲ್ಲಿ ತೀರ್ಮಾನ ಮಾಡೋಣ ಎಂದು ಬಲವಂತವಾಗಿ ವಿದ್ಯಾರ್ಥಿನಿಯನ್ನು ಕರೆದುಕೊಂಡು ಹೋಗಿದ್ದಾರೆ.

    ಆದರೆ ರಾಮನಗರದ ಒಳಭಾಗ ತಲುಪಿದ ನಂತರ ಬೈಕ್‍ನ್ನು ಬೇರೆಡೆ ತಿರುಗಿಸಿ ಕೈಲಾಂಚ ಗ್ರಾಮದ ಎಟಿಎಂ ಬಳಿ ನಿಲ್ಲಿಸಿದ್ದಾರೆ. ನಂತರ ನಮಗೆ 5 ಸಾವಿರ ಹಣ ಕೊಡು ನಿಮ್ಮನ್ನ ಬಿಟ್ಟು ಕಳುಹಿಸುತ್ತೇನೆ ಎಂದು ಬೆದರಿಕೆ ಹಾಕಿದ್ದಾರೆ. ತಕ್ಷಣ ಆ ವಿದ್ಯಾರ್ಥಿನಿ ತನ್ನ ಸಹೋದರನಿಗೆ ವಿಷಯ ಮುಟ್ಟಿಸಿ ಹಣ ಹಾಕಲು ಹೇಳಿದ್ದಾರೆ. ಹಣ ಡ್ರಾ ಮಾಡುವ ನೆಪದಲ್ಲಿ ವಿದ್ಯಾರ್ಥಿನಿ ತನ್ನ ಅಣ್ಣನಿಗೆ ತಾನು ಇರುವ ಮೊಬೈಲ್ ಲೊಕೇಷನ್ ಹಾಗೂ ವಿಚಾರ ಹೇಳಿದ್ದಾರೆ. ವಿದ್ಯಾರ್ಥಿನಿ ಅಣ್ಣ ರಾಮನಗರ ಕಂಟ್ರೋಲ್ ರೂಂಗೆ ಮಾಹಿತಿ ಕೊಟ್ಟಿದ್ದು. ಕಂಟ್ರೋಲ್ ರೂಂಗೆ ಬಂದ ಮಾಹಿತಿ ಮೇರೆಗೆ ಪೊಲೀಸರು ವಿದ್ಯಾರ್ಥಿಗಳನ್ನು ರಕ್ಷಿಸಿದ್ದಾರೆ.

    ಈ ಪ್ರಕರಣದಲ್ಲಿ ಸಿಕ್ಕಿಬಿದ್ದು ತಪ್ಪಿಸಿಕೊಂಡಿದ್ದ ಆರೋಪಿಗಳು ಇದೀಗ ಪೊಲೀಸರ ಅಥಿತಿಯಾಗಿದ್ದಾರೆ. ಈ ಸಂಬಂಧ ಐಜೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.