Tag: accused

  • ಅತ್ಯಾಚಾರಿ ಆರೋಪಿ ಬಳಿ 35 ಲಕ್ಷ ಲಂಚ ಕೇಳಿ ಸಿಕ್ಕಿಬಿದ್ದ ಲೇಡಿ ಪಿಎಸ್‍ಐ

    ಅತ್ಯಾಚಾರಿ ಆರೋಪಿ ಬಳಿ 35 ಲಕ್ಷ ಲಂಚ ಕೇಳಿ ಸಿಕ್ಕಿಬಿದ್ದ ಲೇಡಿ ಪಿಎಸ್‍ಐ

    ಅಹಮದಾಬಾದ್: ಅತ್ಯಾಚಾರಿ ಆರೋಪಿಯ ಬಳಿ ಲಂಚ ಕೇಳಿ ಮಹಿಳಾ ಪಿಎಸ್‍ಐ ಸಿಕ್ಕಿ ಬಿದ್ದಿರುವ ಘಟನೆ ಗುಜರಾತ್‍ನ ಅಹಮದಾಬಾದ್‍ನಲ್ಲಿ ನಡೆದಿದೆ.

    ಪಶ್ಚಿಮ ಅಹಮದಾಬಾದ್‍ನ ಮಹಿಳಾ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಸಬ್ ಇನ್ಸ್‍ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಶ್ವೇತಾ ಜಡೇಜಾ ಲಂಚ ಕೇಳಿ ಸಿಕ್ಕಿಬಿದ್ದ ಪೊಲೀಸ್ ಅಧಿಕಾರಿ. ಆರೋಪಿಯ ವಿರುದ್ಧ ಸಾಮಾಜಿಕ ವಿರೋಧಿ ಚಟುವಟಿಕೆಗಳ ತಡೆ (ಪಿಎಎಸ್‍ಎ) ಕಾಯ್ದೆ ಆಡಿ ಪ್ರಕರಣ ದಾಖಲು ಮಾಡದೇ ಇರಲು ಶ್ವೇತಾ 35 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ.

    ಆರೋಪಿ ಕೆನಾಲ್ ಶಾ 2019ರಲ್ಲಿ ಅತ್ಯಾಚಾರ ಮಾಡಿದ್ದ, ಈ ಪ್ರಕರಣವನ್ನು ಶ್ವೇತಾ ಜಡೇಜಾ ಅವರು ವಿಚಾರಣೆ ಮಾಡುತ್ತಿದ್ದರು. ಈ ವೇಳೆ ಪಿಎಎಸ್‍ಎ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸದೇ ಇರಲು ಆರೋಪಿ ಕೆನಾಲ್ ಶಾನ ಸಹೋದರನ ಬಳಿ 35 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಪಿಎಎಸ್‍ಎ ಕಾಯ್ದೆ ಅಡಿ ಪ್ರಕರಣ ದಾಖಲಿಸದೇ ಆರೋಪಿಯನ್ನು ಪೊಲೀಸರು ಜಿಲ್ಲಾ ಕಾರಾಗೃಹದಿಂದ ಬೇರೆ ಜೈಲಿಗೆ ಸ್ಥಳಾಂತರಿಸುವುದನ್ನು ತಡೆಯಲು ಶ್ವೇತಾ ಮುಂದಾಗಿದ್ದರು ಎನ್ನಲಾಗಿದೆ.

    ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿರುವ ದಾಖಲೆಯ ಪ್ರಕಾರ, ಪೊಲೀಸ್ ಅಧಿಕಾರಿ ಶ್ವೇತಾ ಜಡೇಜಾ ಅವರು, ಆರೋಪಿ ಕಡೆಯ ಮಧ್ಯವರ್ತಿಯ ಬಳಿ ಈಗಾಗಲೇ 20 ಲಕ್ಷ ಹಣವನ್ನು ಪಡೆದುಕೊಂಡಿದ್ದಾರೆ. ಆದರೆ ಇದಾದ ನಂತರ ಹೆಚ್ಚುವರಿಯಾಗಿ ಇನ್ನೂ 15 ಲಕ್ಷ ಹಣವನ್ನು ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. ಈಗಾಗಲೇ 20 ಲಕ್ಷ ಪಡೆದು ಮತ್ತೆ 15 ಲಕ್ಷಕ್ಕೆ ಪೀಡಿಸುತ್ತಿದ್ದ ಕಾರಣ, ಆರೋಪಿ ಮಹಿಳಾ ಅಧಿಕಾರಿ ವಿರುದ್ಧ ದೂರು ನೀಡಿದ್ದಾನೆ.

    ಆರೋಪಿ ನೀಡಿದ ದೂರಿನ ಆಧಾರದ ಮೇಲೆ ಶ್ವೇತಾ ಜಡೇಜಾರನ್ನು ಪೊಲೀಸರು ಬಂಧಿಸಿದ್ದು, ಸೆಷನ್ಸ್ ನ್ಯಾಯಾಲಯದ ಮುಂದೆ ನಿಲ್ಲಿಸಿದ್ದಾರೆ. ಈ ವೇಳೆ ವಿಚಾರಣೆ ಮಾಡಿದ ನ್ಯಾಯಾಲಯ ಪೊಲೀಸ್ ಅಧಿಕಾರಿನ್ನು ಏಳು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.

  • ಮೂವರು ಆರೋಪಿಗಳಿಗೆ ಸೋಂಕು- ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆ ಸೀಲ್‍ಡೌನ್

    ಮೂವರು ಆರೋಪಿಗಳಿಗೆ ಸೋಂಕು- ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆ ಸೀಲ್‍ಡೌನ್

    ಬೆಂಗಳೂರು: ಮೂವರು ಕೊಲೆ ಆರೋಪಿಗಳಿಗೆ ಕೊರೊನಾ ಸೋಂಕು ಕಾಣಿಸಿಕೊಂಡ ಕಾರಣ ಸಿಲಿಕಾನ್ ಸಿಟಿಯ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆ ಸೀಲ್‍ಡೌನ್ ಮಾಡಲು ರೆಡಿಯಾಗಿದೆ.

    ಈ ಮೂಲಕ ಬೆಂಗಳೂರು ಪಶ್ಚಿಮ ವಿಭಾಗದಲ್ಲಿ ಮತ್ತೊಂದು ಸ್ಟೇಷನ್ ಸೀಲ್‍ಡೌನ್‍ಗೆ ಸಿದ್ಧತೆ ನಡೆದಿದೆ. ಪಶ್ಚಿಮ ವಿಭಾಗದ ಪೊಲೀಸರಿಗೆ ಕೊರೊನಾ ಕಂಟಕವಾಗಿದೆ. ಡಿಸಿಪಿ ಕಚೇರಿ, ಎಸಿಪಿ ಕಚೇರಿ, ಉಪ್ಪಾರಪೇಟೆ, ಮಾರ್ಕೆಟ್, ಕಲಾಸಿಪಾಳ್ಯ, ಚಾಮರಾಜಪೇಟೆ, ಜೆಜೆ ಆರ್ ನಗರ, ಕಾಮಾಕ್ಷಿಪಾಳ್ಯ, ಕೆಪಿ ಅಗ್ರಹಾರ, ಕೆಂಗೇರಿ ಪೊಲೀಸ್ ಠಾಣೆಗಳು ಸೀಲ್ ಡೌನ್ ಆಗಿದ್ದವು. ಇದೀಗ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಸ್ಟೇಷನ್ ಸೀಲ್‍ಡೌನ್‍ಗೆ ಸಿದ್ಧವಾಗಿದೆ.

    ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಕೊಲೆ ನಡೆದಿದ್ದು, ಈ ಪ್ರಕರಣ ಸಂಬಂಧ ಪೊಲೀಸರು 9 ಜನ ಕೊಲೆ ಆರೋಪಿಗಳನ್ನು ಬಂಧಿಸಿ ಸೆಲ್‍ನಲ್ಲಿ ಇಟ್ಟಿದ್ದರು. ಈ 9 ಜನರ ಪೈಕಿ ಎಲ್ಲರನ್ನೂ ಕೊರೊನಾ ಪರೀಕ್ಷೆಗೆ ಒಳಪಡಿಸಿದ್ದು, ಇದರಲ್ಲಿ ಮೂವರು ಆರೋಪಿಗಳಿಗೆ ಕೊರೊನಾ ಪಾಸಿಟಿವ್ ಬಂದಿದೆ. ಹೀಗಾಗಿ ಪೊಲೀಸ್ ಠಾಣೆಯನ್ನು ಸೀಲ್‍ಡೌನ್ ಮಾಡಲು ತೀರ್ಮಾನ ಮಾಡಿದ್ದು, ಸಂಪರ್ಕದಲ್ಲಿದ್ದ ಪೊಲೀಸರನ್ನು ಹೋಂಕ್ವಾರಂಟೈನ್ ಮಾಡಲಾಗಿದೆ.

  • ತುಮಕೂರಿನಿಂದ ಬೆಂಗ್ಳೂರಿಗೆ ತಂದು ಬಾಂಬ್ ಸ್ಫೋಟಿಸಿದ್ವಿ – ತಪ್ಪೊಪಿಕೊಂಡ ಆರೋಪಿಗಳು

    ತುಮಕೂರಿನಿಂದ ಬೆಂಗ್ಳೂರಿಗೆ ತಂದು ಬಾಂಬ್ ಸ್ಫೋಟಿಸಿದ್ವಿ – ತಪ್ಪೊಪಿಕೊಂಡ ಆರೋಪಿಗಳು

    – ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಬಾಂಬ್ ಸ್ಫೋಟ ಪ್ರಕರಣ
    – ಎನ್‍ಐಎ ಕೋರ್ಟ್‍ನಲ್ಲಿ ಆರೋಪಿಗಳಿಂದ ತಪ್ಪೊಪ್ಪಿಗೆ

    ಬೆಂಗಳೂರು: 2010ರಲ್ಲಿ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ನಡೆದ ಬಾಂಬ್ ಸ್ಫೋಟ ಪ್ರಕರಣದ ಇಬ್ಬರು ಆರೋಪಿಗಳು ನ್ಯಾಯಾಲಯದ ಮುಂದೆ ತಪ್ಪೊಪಿಕೊಂಡಿದ್ದಾರೆ.

    ಆರೋಪಿಗಳಾದ ಅಹಮ್ಮದ್ ಜಮಾಲ್, ಹಾಗು ಆಫ್ತಾಬ್ ಆಲಮ್ ಅಲಿಯಾಸ್ ಫಾರೂಕ್ ತಪ್ಪೊಪ್ಪಿಕೊಂಡಿದ್ದಾರೆ. ಈ ಇಬ್ಬರು ಎನ್‍ಐಎ ನ್ಯಾಯಾಲಯದ ಮುಂದೆ ತಪ್ಪೊಪ್ಪಿಕೊಂಡಿದ್ದಾರೆ. ಜೊತೆಗೆ ನಾವು ಇಂಡಿಯನ್ ಮುಜಾಹಿದ್ದೀನ್ ಸಂಘಟನೆಯವರು ಎಂದು ಹೇಳಿದ್ದಾರೆ.

    ನಾವು ದೆಹಲಿಯ ಜಾಮೀಯಾ ನಗರದ ಮನೆಯೊಂದರಲ್ಲಿ ಬಾಂಬ್ ಸ್ಫೋಟದ ಒಳ ಸಂಚು ರೂಪಿಸಿದ್ದೆವು. ಈ ಮನೆಯಲ್ಲಿರುವಾಗಲೇ ನಮಗೆ ಲಷ್ಕರ್ ಇ-ತೋಯ್ಬಾ ಸಂಘಟನೆಯಿಂದ ಆರ್ಥಿಕ ಸಹಾಯ ದೊರಕಿತ್ತು. ಬೆಂಗಳೂರಿನಲ್ಲಿ ಬಾಂಬ್ ಸ್ಫೋಟಿಸುವ ಸ್ಥಳವನ್ನು ಪ್ರಕರಣದ ಪ್ರಮುಖ ಆರೋಪಿಯಾದ ಮಹಮದ್ ಯಾಸಿನ್ ನಿರ್ದೇಶನದಂತೆ ಗುರುತಿಸಲಾಗಿತ್ತು ಎಂದು ತಿಳಿಸಿದ್ದಾರೆ.

    ಬೆಂಗಳೂರಿನ ಸದಾಶಿವನಗರ ಹಾಗೂ ತುಮಕೂರಿನಲ್ಲಿ ಸ್ಫೋಟದ ಸಂಚು ರೂಪಿಸಲಾಗಿತ್ತು. ಹೀಗಾಗಿ ಬಾಂಬ್ ಸ್ಫೋಟಕವನ್ನು ತುಮಕೂರಿನಿಂದ ಬೆಂಗಳೂರಿಗೆ ತಂದಿದ್ದೇವು. ಯಾಸಿನ್ ಮತ್ತು ಇತರ ನಾಲ್ವರು ಸೇರಿಕೊಂಡು ಸ್ಟೇಡಿಯಂ ಬಳಿ 5 ಸ್ಫೋಟಕಗಳನ್ನು ಅಳವಡಿಸಿದ್ದೇವು ಎಂದು ಆರೋಪಿಗಳು ನ್ಯಾಯಾಲಯದ ಮುಂದೆ ಹೇಳಿದ್ದಾರೆ. ಚಿನ್ನಸ್ವಾಮಿ ಸ್ಟೇಡಿಯಂ ಗೇಟ್ ನಂಬರ್ 12ರಲ್ಲಿದ್ದ ಬಾಂಬ್ ಸ್ಫೋಟಗೊಂಡು 15 ಮಂದಿ ಗಾಯಗೊಂಡಿದ್ದರು. ಉಳಿದ ನಾಲ್ಕು ಬಾಂಬ್‍ಗಳನ್ನು ಪೊಲೀಸರು ಪತ್ತೆ ಮಾಡಿ ನಿಷ್ಕ್ರಿಯಗೊಳಿಸಿದ್ದರು.

    ಈ ಮಧ್ಯೆ ಆರೋಪಿಗಳ ತಪ್ಪೊಪ್ಪಿಗೆಯನ್ನು ತಿರಸ್ಕರಿಸುವಂತೆ ಸರ್ಕಾರಿ ಪರ ವಕೀಲರಿಂದ ನ್ಯಾಯಲಯಕ್ಕೆ ಮನವಿ ಮಾಡಿದ್ದಾರೆ. ಆರೋಪಿಗಳು ದೇಶದ ವಿರುದ್ಧ ಯುದ್ಧ ಸಾರಿದವರು, ಹೀಗಾಗಿ ಇವರಿಗೆ ಶಿಕ್ಷೆ ಆಗಬೇಕು. ಈ ಹಿನ್ನಲೆ ನ್ಯಾಯಾಲಯ ಆರೋಪಿಗಳ ತಪ್ಪೊಪ್ಪಿಗೆ ಅರ್ಜಿ ವಜಾ ಮಾಡಬೇಕು ಎಂದು ಮನವಿ ಮಾಡಿದ್ದಾರೆ. ಸದ್ಯ ಇಬ್ಬರು ಆರೋಪಿಗಳ ಹೇಳಿಕೆಯ ಆಧಾರದಲ್ಲಿ ನ್ಯಾಯಾಲಯ ತೀರ್ಪನ್ನು ಕಾಯ್ದಿರಿಸಿದೆ.

  • ಉದ್ಯಮಿ ಭಾಸ್ಕರ ಶೆಟ್ಟಿ ಕೊಲೆ ಪ್ರಕರಣ – 3ನೇ ಆರೋಪಿಗೆ ಷರತ್ತುಬದ್ಧ ಜಾಮೀನು

    ಉದ್ಯಮಿ ಭಾಸ್ಕರ ಶೆಟ್ಟಿ ಕೊಲೆ ಪ್ರಕರಣ – 3ನೇ ಆರೋಪಿಗೆ ಷರತ್ತುಬದ್ಧ ಜಾಮೀನು

    ಉಡುಪಿ: ಇಡೀ ದೇಶದ ಗಮನ ಸೆಳೆದಿದ್ದ ಉಡುಪಿಯ ಉದ್ಯಮಿ ಭಾಸ್ಕರ ಶೆಟ್ಟಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರನೇ ಆರೋಪಿಗೆ ಉಡುಪಿ ಕೋರ್ಟ್ ಜಾಮೀನು ಕೊಟ್ಟಿದೆ. ಆರೋಪಿ ನಿರಂಜನ ಭಟ್ ತಂದೆ ಮೃತಪಟ್ಟಿದ್ದು, ಕೋರ್ಟ್ ಷರತ್ತುಬದ್ಧ ಜಮೀನು ಮಂಜೂರು ಮಾಡಿದೆ.

    ಉಡುಪಿಯ ಬಹುಕೋಟಿ ಉದ್ಯಮಿ, ವಿದೇಶದಲ್ಲಿ ಸೂಪರ್ ಮಾರ್ಕೆಟ್ ಹೊಂದಿದ್ದ ಭಾಸ್ಕರ ಶೆಟ್ಟಿಯನ್ನು ತಾಯಿ ಮಗ ಸೇರಿ ಕೊಲೆಗೈದ ಪ್ರಕರಣ ಇದಾಗಿದ್ದು, ಮೂರನೇ ಆರೋಪಿ ನಿರಂಜನ ತನ್ನ ಮನೆಯ ಹೋಮಕುಂಡದಲ್ಲಿ ಮೃತದೇಹ ಸುಡಲು ಸಹಾಯ ಮಾಡಿದ್ದ. ಪ್ರಕರಣದ ಪ್ರಮುಖ ಆರೋಪಿಯಾಗಿರುವ ನಿರಂಜನ ಭಟ್‍ಗೆ ಮಧ್ಯಂತರ ಜಾಮೀನು ಮಂಜೂರಾಗಿದೆ.

    ಹೋಮಕುಂಡದಲ್ಲಿ ಸುಟ್ಟಿದ್ದರು
    ಜುಲೈ 28, 2016ರಲ್ಲಿ ಉದ್ಯಮಿ ಭಾಸ್ಕರ ಶೆಟ್ಟಿ ಕೊಲೆಯಾಗಿತ್ತು. ಭಾಸ್ಕರ ಶೆಟ್ಟಿಯ ಪತ್ನಿ ರಾಜೇಶ್ವರಿ, ಪುತ್ರ ನವನೀತ್ ಸೇರಿ ಇಂದ್ರಾಳಿಯ ಸಮೀಪದ ತಮ್ಮ ಮನೆಯಲ್ಲಿ ಕೊಲೆ ಮಾಡಿದ್ದರು. ಮನೆಯಿಂದ 25 ಕಿಮೀ ದೂರ ಕಾರಲ್ಲಿ ಸಾಗಿಸಿದ್ದರು. ರಾಜೇಶ್ವರಿ ಪ್ರಿಯಕರ ನಿರಂಜನ ಹೋಮಕುಂಡದಲ್ಲಿ ಸುಡಲು ಸಹಾಯ ಮಾಡಿದ್ದ. ನಿರಂಜನನ ಮನೆಯಲ್ಲೇ ಕುಂಡ ತಯಾರಿಸಿ ಮೃತದೇಹ ಸುಡಲಾಗಿತ್ತು.

    ಭಾಸ್ಕರ ಶೆಟ್ಟಿ ಮಿಸ್ಸಿಂಗ್ ಮಿಸ್ಟರಿ ಕೊಲೆಯೆಂದು 10 ದಿನದ ನಂತರ ಸಾಭೀತಾಗಿತ್ತು. ಮೂರು ಪ್ರಮುಖ ಆರೋಪಿಗಳು ಬಂಧನಕ್ಕೊಳಗಾಗಿದ್ದು, ಪ್ರಕರಣ ಕೋರ್ಟಿನಲ್ಲಿದೆ. ಇದೀಗ ಮೂರನೇ ಆರೋಪಿ ತಂದೆಯ ಸಾವಿನ ಹಿನ್ನೆಲೆಯಲ್ಲಿ ಕೋರ್ಟಿನಲ್ಲಿ ಜಾಮೀನಾಗಿದೆ. ಆತನ ತಂದೆ ಶ್ರೀನಿವಾಸ ಭಟ್ ಮಾನಸಿಕ ಖಿನ್ನತೆ ಮತ್ತು ಅನಾರೋಗ್ಯದಿಂದ ಸಾವಿಗೀಡಾಗಿದ್ದು, 14 ದಿನಗಳ ಮಟ್ಟಿಗೆ ಐದು ಲಕ್ಷ ರೂಪಾಯಿಗಳ ವೈಯಕ್ತಿಕ ಬಾಂಡ್ ಆಧಾರದಲ್ಲಿ ಉಡುಪಿ ಜಿಲ್ಲಾ ಸೆಷನ್ಸ್ ನ್ಯಾಯಾಲಯ ಜಾಮೀನನ್ನು ಮಂಜೂರು ಮಾಡಿದೆ.

  • ಅಕ್ರಮವಾಗಿ 49 ಕೆ.ಜಿ ಬೆಳ್ಳಿ ಸಾಗಾಟ ಮಾಡ್ತಿದ್ದ ಮೂವರ ಬಂಧನ

    ಅಕ್ರಮವಾಗಿ 49 ಕೆ.ಜಿ ಬೆಳ್ಳಿ ಸಾಗಾಟ ಮಾಡ್ತಿದ್ದ ಮೂವರ ಬಂಧನ

    ಚಿಕ್ಕೋಡಿ(ಬೆಳಗಾವಿ): ಅಕ್ರಮವಾಗಿ ಬೆಳ್ಳಿ ಸಾಗಾಟ ಮಾಡುತ್ತಿದ್ದ ಮೂವರನ್ನು ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಯಮಕನಮರಡಿ ಪೋಲೀಸರು ಬಂಧಿಸಿದ್ದು, 49 ಕೆ.ಜಿ ಬೆಳ್ಳಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

    ಆರೋಪಿಗಳನ್ನು ಮಹಾರಾಷ್ಟ್ರ ರಾಜ್ಯದ ಕೊಲ್ಲಾಪುರ ಜಿಲ್ಲೆಯ ಕರವೀರ ತಾಲೂಕಿನ ಕೆರಲೆ ಗ್ರಾಮದ ಸುಹಾಸ ಬಾಸ್ಕರ ಗಾಯಕವಾಡ (45), ಅದೇ ಗ್ರಾಮದ ಸಂದೀಪ ಸುಹಾಸ ಗಾಯಕವಾಡ (38) ಹಾಗೂ ಬೆಳಗಾವಿ ಜಿಲ್ಲೆಯ ಹಿಂಡಲಗಾದ ಗೋಕುಲ ನಗರ ನಿವಾಸಿ ಮಾರುತಿ ಅಮೃತ ಮುತಗೆಕರ (38) ಎಂದು ಗುರುತಿಸಲಾಗಿದೆ.

    ಇವರು ಮಹಾರಾಷ್ಟ್ರದ ಕೊಲ್ಲಾಪೂರ ಕಡೆಯಿಂದ ಬೆಳಗಾವಿಗೆ ತೆರಳುವಾಗ ಎನ್ ಎಚ್ – 4 ರಸ್ತೆಯಲ್ಲಿ ಹುಕ್ಕೇರಿ ತಾಲೂಕಿನ ಹತ್ತರಗಿ ಟೂಲ್ ನಾಕಾ ಬಳಿ ಆರೋಪಿಗಳನ್ನು ಬಂಧಿಸಲಾಗಿದೆ.

    ಆರೋಪಿಗಳು ಯಾವುದೇ ದಾಖಲಾತಿಗಳಿಲ್ಲದೆ ಬೆಳ್ಳಿಯ ಆಭರಣಗಳನ್ನು ಕೊರಿಯರ್ ಬಳಕೆಗೆ ಬಳಸುತ್ತಿದ್ದ ಕ್ರೂಷರ್ ವಾಹನ ಮೂಲಕ ಸಾಗಾಟ ಮಾಡುತ್ತಿದ್ದರು. ಈ ವೇಳೆ ಪೊಲೀಸರು ತಡೆದು ತಪಾಸಣೆ ನಡೆಸಿದಾಗ 47 ಕೆ.ಜಿ 990 ಗ್ರಾಂ ಅಂದಾಜು 14,39,670 ಬೆಲೆಯ ಆಭರಣಗಳು ಸಿಕ್ಕಿದ್ದು, ವಶಕ್ಕೆ ಪಡೆದುಕೊಂಡಿದ್ದಾರೆ.

    ಕಾರ್ಯಚರಣೆಯಲ್ಲಿ ಹುಕ್ಕೇರಿ ಸಿಪಿಐ ಗುರುರಾಜ ಕಲ್ಯಾಣಶೆಟ್ಟಿ, ಯಮಕನಮರಡಿ ಪೊಲೀಸ್ ಠಾಣೆಯ ಪಿಎಸ್‍ಐ ರಮೇಶ್ ಪಾಟೀಲ್ ಹಾಗೂ ಸಿಬ್ಬಂದಿ ಇದ್ದರು. ಪೋಲಿಸರ ಈ ಕಾರ್ಯಾಚರಣೆಗೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

    ಈ ಕುರಿತು ಯಮಕನಮರಡಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಬೆಂಗಳೂರಲ್ಲಿ ಕೊಲೆ ಆರೋಪಿಗೂ ಕೊರೊನಾ

    ಬೆಂಗಳೂರಲ್ಲಿ ಕೊಲೆ ಆರೋಪಿಗೂ ಕೊರೊನಾ

    ಬೆಂಗಳೂರು: ರಾಜ್ಯದಲ್ಲಿ ಕೊರೊನಾ ವೈರಸ್ ಎಂಬ ಮಹಾಮಾರಿ ತನ್ನ ಅಟ್ಟಹಾಸ ಮೆರೆಯುತ್ತಿದ್ದು, ಸೋಂಕಿನ ಯಾವುದೇ ಲಕ್ಷಣ ಇಲ್ಲದಿದ್ದವರಿಗೂ ಕೊರೊನಾ ಪಾಸಿಟಿವ್ ಬರುತ್ತಿದೆ. ಈ ಮಧ್ಯೆ ಕೊಲೆ ಆರೋಪಿಯೊಬ್ಬನಿಗೂ ಕೊರೊನಾ ಪಾಸಿಟಿವ್ ಬಂದಿದ್ದು, ಪೊಲೀಸರಿಗೆ ಆತಂಕ ಆರಂಭವಾಗಿದೆ.

    ಹೌದು. ಹೆಚ್‍ಎಸ್‍ಆರ್ ಲೇಔಟ್ ಠಾಣೆಯಲ್ಲಿ ಬಂಧಿಯಾಗಿದ್ದ ಆರೋಪಿಯ ವರದಿಯಲ್ಲಿ ಕೊರೊನಾ ಪಾಸಿಟಿವ್ ಎಂದು ಬಂದಿದೆ. ಈ ವ್ಯಕ್ತಿಗೆ ಆಂಧ್ರ ಟ್ರಾವೆಲ್ ಹಿಸ್ಟರಿ ಇದೆ. ಕೊಲೆ ಆರೋಪಿಗೆ ಕೊರೊನಾ ಬಂದಿರುವ ಹಿನ್ನೆಲೆಯಲ್ಲಿ ಪೊಲೀಸರಿಗೆ ಕೂಡ ಹೆಮ್ಮಾರಿ ಭೀತಿ ಎದುರಾಗಿದೆ.

    ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಹೆಲ್ತ್ ಬುಲೆಟಿನ್ ನಲ್ಲಿ ಬೆಂಗಳೂರು ನಗರದಲ್ಲಿ 35 ಕೊರೊನಾ ಪ್ರಕರಣಗಳು ವರದಿಯಾಗಿವೆ. ರಾಜ್ಯದಲ್ಲಿ ಇಂದು ಪತ್ತೆಯಾದ 213 ಪ್ರಕರಣಗಳ ಪೈಕಿ 103 ಮಂದಿ ಅಂತರಾಜ್ಯ ಹಾಗೂ 23 ಮಂದಿಗೆ ಅಂತರಾಷ್ಟ್ರೀಯ ಪ್ರಯಾಣದ ಹಿನ್ನೆಲೆ ಹೊಂದಿದ್ದಾರೆ.

    ಇಂದು 180 ಜನರು ಕೊರೊನಾದಿಂದ ಗುಣಮುಖರಾಗಿ ಕೋವಿಡ್ 19 ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಒಟ್ಟು 7213 ಪ್ರಕರಣಗಳಲ್ಲಿ ರಾಜ್ಯದಲ್ಲಿ 2987 ಮಂದಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು, 4135 ಜನರು ಡಿಸ್ಚಾರ್ಜ್ ಆಗಿದ್ದಾರೆ. ಇಂದು ಕೂಡ ಕೊರೊನಾ ತನ್ನ ಮರಣ ಕೇಕೆಯನ್ನು ಮುಂದುವರಿಸಿದ್ದು ಇಬ್ಬರು ಸಾವನ್ನಪ್ಪಿರೋದನ್ನು ಆರೋಗ್ಯ ಇಲಾಖೆ ಖಚಿತಪಡಿಸಿದೆ.

    ರೋಗಿ 7060: ಧಾರವಾಡದ 65 ವರ್ಷದ ವೃದ್ಧ ರೋಗಿ-6222ರ ಜೊತೆ ಸಂಪರ್ಕ ಹೊಂದಿದ್ದರು. ಜೂನ್ 14ರಂದು ದಾಖಲಾಗಿದ್ದ ವೃದ್ಧ ಅಂದೇ ನಿಧನರಾಗಿದ್ದಾರೆ. ರೋಗಿ 7185 ಬೆಂಗಳೂರಿನ 75 ವರ್ಷದ ವೃದ್ಧೆಯಾಗಿದ್ದು, ಜ್ವರದ ಲಕ್ಷಣಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಜೂನ್ 13ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಜೂನ್ 15ರಂದು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.

  • ಕಿಟಕಿ ಮುರಿದು, ಬಾಯಿಗೆ ಬಟ್ಟೆ ಕಟ್ಟಿ ಸಿನಿಮೀಯ ರೀತಿಯಲ್ಲಿ ದರೋಡೆ- ಆರೋಪಿಗಳು ಅರೆಸ್ಟ್

    ಕಿಟಕಿ ಮುರಿದು, ಬಾಯಿಗೆ ಬಟ್ಟೆ ಕಟ್ಟಿ ಸಿನಿಮೀಯ ರೀತಿಯಲ್ಲಿ ದರೋಡೆ- ಆರೋಪಿಗಳು ಅರೆಸ್ಟ್

    ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದಿದ್ದ ದರೋಡೆ ಪ್ರಕರಣದ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ಕೊಡಗು ಎಸ್ ಪಿ.ಡಾ.ಸುಮನ್ ಡಿ.ಪನ್ನೇಕರ್ ತಿಳಿಸಿದ್ದಾರೆ.

    ಮಡಿಕೇರಿ ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಡಿಕೇರಿ ತಾಲೂಕಿನ ಎಮ್ಮೇಮಾಡು ನಿವಾಸಿಗಳಾದ ಇಬ್ರಾಹಿಂ, ಅಶ್ರಫ್ ಹಾಗೂ ಮಸ್ತಾಫಾ ಬಂಧಿತರು. ಇವರಿಂದ ಕೃತ್ಯಕ್ಕೆ ಬಳಸಿದ್ದ ಕತ್ತಿ, ಟೇಪ್‍ಗಳು, ಮೊಬೈಲ್ ಫೋನ್, ಮಾರುತಿ 800 ಕಾರು, 121 ಗ್ರಾಂ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

    ಇದರ ಜೊತೆಗೆ ಎರಡು ತಿಂಗಳ ಹಿಂದಷ್ಟೇ ಕಳವು ಮಾಡಿದ್ದ 3 ಚೀಲ ಕಾಫಿ ಮತ್ತು 400 ಕೆ.ಜಿ ಕರಿ ಮೆಣಸು ಸೇರಿದಂತೆ ಒಟ್ಟು 12 ಲಕ್ಷ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದು ಎಸ್‍ಪಿ ಹೇಳಿದ್ದಾರೆ. ಆರೋಪಿಗಳು ಕೊಡಗು ಹಾಗೂ ಮೈಸೂರು ಸೇರಿದಂತೆ ಇತರೇ ಜಿಲ್ಲೆಗಳ ಶ್ರೀಮಂತರ ಮನೆಗಳ ದರೋಡೆಗೆ ಸಂಚು ರೂಪಿಸಿದ್ದರು ಎಂದು ತಿಳಿದು ಬಂದಿದೆ.

    ಮೇ 5ರಂದು ವಿರಾಜಪೇಟೆ ತಾಲೂಕಿನ ಶಿವಾಸ್ ಜಂಕ್ಷನ್ ಬಳಿ ಮನೆಯೊಂದರ ಕಿಟಕಿ ಸರಳುಗಳನ್ನು ಮುರಿದು ಮನೆಯವರ ಕೈ, ಬಾಯಿ ಕಟ್ಟಿ ಹಲ್ಲೆ ನಡೆಸಿ ಸಿನಿಮೀಯಾ ರೀತಿಯಲ್ಲಿ ದರೋಡೆ ಮಾಡಲಾಗಿತ್ತು. ಘಟನೆ ಸ್ಥಳೀಯರಲ್ಲಿ ಭಯವನ್ನು ಉಂಟು ಮಾಡಿತ್ತು. ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದ ಸುಮನ್ ಡಿ.ಪನ್ನೇಕರ್, ವಿರಾಜಪೇಟೆ ಡಿವೈಎಸ್‍ಪಿ ಸಿ.ಟಿ.ಜಯಕುಮಾರ್ ನೇತೃತ್ವದಲ್ಲಿ ಅಪರಾಧ ಪತ್ತೆದಳದ ತಂಡ ರಚಿಸಿ ಕಾರ್ಯ ಪ್ರವೃತ್ತರಾಗಿದ್ದರು.

  • ತನ್ನ ಪತ್ನಿಯನ್ನು ಪಟಾಯಿಸಿದವನ ಕೊಲೆ ಮಾಡಿ ರಕ್ತ ಕುಡಿದ್ದಿದ ಆರೋಪಿ ಅರೆಸ್ಟ್

    ತನ್ನ ಪತ್ನಿಯನ್ನು ಪಟಾಯಿಸಿದವನ ಕೊಲೆ ಮಾಡಿ ರಕ್ತ ಕುಡಿದ್ದಿದ ಆರೋಪಿ ಅರೆಸ್ಟ್

    – ಅಪಹರಿಸಿ ರೈಲ್ವೇ ಟ್ರ್ಯಾಕ್ ಬಳಿ ಮರ್ಡರ್

    ಬೆಂಗಳೂರು: ತನ್ನ ಪತ್ನಿಯನ್ನು ಪಟಾಯಿಸಿಕೊಂಡು ಹೋದವನನ್ನು ಬರ್ಬರವಾಗಿ ಕೊಲೆ ಮಾಡಿ ಅವನ ರಕ್ತವನ್ನು ಕುಡಿದಿದ್ದ ಆರೋಪಿಯನ್ನು ಡಿಜೆ ಹಳ್ಳಿ ಪೊಲೀಸರು ಬಂಧಿಸಿದ್ದಾರೆ.

    ಬಂಧಿತರನ್ನು ತಬ್ರೇಜ್, ನಿಜಾಮ್ ಹಾಗೂ ಅಲಿ ಅಂಡು ಎಂದು ಗುರುತಿಸಲಾಗಿದೆ. ಕಳೆದ ತಿಂಗಳು ತಬ್ರೇಜ್ ಪತ್ನಿಯೊಂದಿಗೆ ವಾಸವಿದ್ದ ಶುಭಾನ್ ಅನ್ನು ಈ ಮೂವರು ಅಪಹರಿಸಿಕೊಂಡು ಬಂದು ಅವನನ್ನು ಹೊಡೆದು ಕೊಂದಿದ್ದರು. ಈ ಸಂಬಂಧ ಡಿಜೆ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

    ತಬ್ರೇಜ್ ಪತ್ನಿ ಮದುವೆಯಾದ ಬಳಿಕ ಶುಭಾನ್ ಜೊತೆ ಓಡಿ ಹೋಗಿದ್ದಳು. ಶುಭಾನ್ ಮತ್ತು ತಬ್ರೇಜ್ ಪತ್ನಿ ತುಮಕೂರಿನಲ್ಲಿ ವಾಸವಾಗಿದ್ದರು. ಈ ವಿಚಾರ ಒಂದು ದಿನ ತಬ್ರೇಜ್‍ಗೆ ಗೊತ್ತಾಗಿದೆ. ಆತ ಕೂಡಲೇ ತನ್ನ ಇಬ್ಬರು ಸ್ನೇಹಿತರಾದ ನಿಜಾಮ್ ಹಾಗೂ ಅಲಿಯನ್ನು ಕರೆದುಕೊಂಡು ತುಮಕೂರಿಗೆ ಹೋಗಿ ಶುಭಾನ್ ಅನ್ನು ಕಿಡ್ಯಾಪ್ ಮಾಡಿದ್ದಾನೆ. ನಂತರ ಅವನನ್ನು ಬೆಂಗಳೂರಿಗೆ ಕರೆದುಕೊಂಡು ಬಂದು ರೈಲ್ವೇ ಟ್ರ್ಯಾಕ್ ಬಳಿ ಕೊಂದು ಹಾಕಿದ್ದಾರೆ. ಈ ವೇಳೆ ತಬ್ರೇಜ್, ಶುಭಾನ್ ರಕ್ತವನ್ನು ಕೂಡ ಕುಡಿದ್ದಿದ್ದಾನೆ.

    ಈ ಪ್ರಕರಣವನ್ನು ದಾಖಲಿಸಿಕೊಂಡ ಡಿಜೆ ಹಳ್ಳಿ ಪೊಲೀಸರು ಇಂದು ಹಂತಕರನ್ನು ಬಂಧಿಸಿದ್ದಾರೆ. ಹತ್ಯೆಯ ಪ್ರಮುಖ ಆರೋಪಿ ತಬ್ರೇಜ್, ಪಿಕ್ ಪ್ಯಾಕೇಟರ್ ಆಗಿದ್ದು ಆತನ ಮೇಲೆ ಈಗಾಗಲೇ ಹಲವಾರು ಪ್ರಕರಣಗಳು ಇವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

  • ಆನೆ ಸತ್ತಿದ್ದು ಸ್ಫೋಟಕ ತುಂಬಿದ ಹಣ್ಣಿನಿಂದಲ್ಲ- ಬಂಧಿತ ಮೊದಲ ಆರೋಪಿ ಹೇಳಿದ್ದೇನು?

    ಆನೆ ಸತ್ತಿದ್ದು ಸ್ಫೋಟಕ ತುಂಬಿದ ಹಣ್ಣಿನಿಂದಲ್ಲ- ಬಂಧಿತ ಮೊದಲ ಆರೋಪಿ ಹೇಳಿದ್ದೇನು?

    ತಿರುವನಂತಪುರಂ: ಕೇರಳದಲ್ಲಿ ಗರ್ಭಿಣಿ ಆನೆ ಸಾವನ್ನಪ್ಪಿದ ಸುದ್ದಿ ದೇಶದ್ಯಾಂತ ಚರ್ಚೆಯಾಗಿತ್ತು. ಈಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೊದಲ ಆರೋಪಿಯನ್ನು ಅರೆಸ್ಟ್ ಮಾಡಿದ್ದು, ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ.

    ಬಂಧಿತ ಮೊದಲ ಆರೋಪಿಯನ್ನು 40 ವರ್ಷದ ವಿಲ್ಸನ್ ಎಂದು ಗುರುತಿಸಲಾಗಿದ್ದು, ಈತ ರಬ್ಬರ್ ವ್ಯಾಪಾರಿಯಾಗಿದ್ದ ಎಂದು ತಿಳಿದು ಬಂದಿದೆ. ಇದರ ಜೊತೆಗೆ ಈತ ಸ್ಫೋಟಕವನ್ನು ಬೇರೆಯವರಿಗೆ ತಯಾರು ಮಾಡಿಕೊಡುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ. ಇನ್ನಿಬ್ಬರು ತಪ್ಪಿಸಿಕೊಂಡಿದ್ದು, ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

    ಈ ವಿಚಾರದ ಬಗ್ಗೆ ಮಾಹಿತಿ ನೀಡಿರುವ ಮನ್ನಾರ್ಕಡ್ ವಿಭಾಗೀಯ ಅರಣ್ಯ ಅಧಿಕಾರಿ ಸುನಿಲ್ ಕುಮಾರ್, ನಾವು ಈಗಾಗಲೇ ಆನೆ ಪ್ರಕರಣಕ್ಕೆ ಸಂಬಂಧಿಸಿದ ಹಾಗೇ ಮೊದಲ ಆರೋಪಿಯನ್ನು ಪತ್ತೆ ಮಾಡಿದ್ದೇವೆ. ಇನ್ನಿಬ್ಬರನ್ನು ಪತ್ತೆ ಹಚ್ಚುವ ಸನಿಹದಲ್ಲಿ ಇದ್ದೇವೆ. ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿ ಮೃತಪಟ್ಟ ಗರ್ಭಿಣಿ ಆನೆ ಸ್ಫೋಟಕ ತುಂಬಿದ ಅನಾನಸ್ ಹಣ್ಣು ತಿಂದು ಸಾವನ್ನಪ್ಪಿಲ್ಲ. ಆನೆ ಸ್ಫೋಟಕ ತುಂಬಿದ ತೆಂಗಿನಕಾಯಿಯನ್ನು ತಿಂದು ಸಾವನ್ನಪ್ಪಿದೆ ಎಂದು ತನಿಖೆ ವೇಳೆ ತಿಳಿದಿದೆ ಎಂದು ಹೇಳಿದ್ದಾರೆ.

    ಕೇರಳದಲ್ಲಿ ಬೆಳೆ ನಾಶ ಮಾಡಲು ಅಥವಾ ತಿನ್ನಲು ಬಂದ ಕಾಡುಹಂದಿಯಂತಹ ಪ್ರಾಣಿಗಳನ್ನು ಹೆದರಿಸಲು ಈ ರೀತಿಯ ಸ್ಫೋಟಕವನ್ನು ಸ್ಥಳೀಯವಾಗಿ ಬಳಸುತ್ತಾರೆ. ಸ್ಫೋಟಕವನ್ನು ಹಣ್ಣು ಮತ್ತು ಪ್ರಾಣಿಗಳ ಮಾಂಸದಲ್ಲಿ ಇಟ್ಟು ಅದನ್ನು ಸ್ಫೋಟಗೊಳಿಸಿ ಪ್ರಾಣಿಗಳನ್ನು ಓಡಿಸಲಾಗುತ್ತದೆ. ಆದರೆ ಇವರು ಆನೆಗೂ ಇದೇ ರೀತಿ ಮಾಡಿದ್ದಾರೆ. ಆದರೆ ಯಾರಿಗೂ ತೊಂದರೆ ಮಾಡದೇ ಆಹಾರವನ್ನು ಅರಸಿ ಬಂದ ಆನೆ ಇಲ್ಲಿ ದುರಂತವಾಗಿ ಸಾವನ್ನಪ್ಪಿದೆ.

    ಅಧಿಕಾರಿಗಳು ಹೇಳಿರುವ ಪ್ರಕಾರ, ಆನೆ ತೆಂಗಿನಕಾಯಿಯ ಒಂದು ಭಾಗವನ್ನು ಮುರಿದುಕೊಂಡು ಬಾಯಿಯೊಳಗೆ ಹಾಕಿಕೊಂಡಿದೆ. ಈ ವೇಳೆ ಅದು ಸ್ಫೋಟಗೊಂಡಿದ್ದು, ಆನೆಯ ಎಡಭಾಗದ ಬಾಯಿ ಸಂಪೂರ್ಣವಾಗಿ ಗಾಯಗೊಂಡಿದೆ. ಇದರಿಂದ ಆನೆಗೆ ಆಹಾರ ಮತ್ತು ನೀರನ್ನು ಸೇವಿಸಲು ಆಗಿಲ್ಲ. ಆನೆ ಬಾಯಿಯ ನೋವಿನ ಜೊತೆಗೆ ಒಂದು ದಿನವೆಲ್ಲ ನರಳಿದೆ. ನಂತರ ಅದು ಪಾಲಕ್ಕಾಡ್‍ನ ವೆಲ್ಲಿಯಾರ್ ನದಿಯಲ್ಲಿ ಬಂದು ನಿಂತುಕೊಂಡು ಪ್ರಾಣಬಿಟ್ಟಿದೆ ಎಂದು ಹೇಳಿದ್ದಾರೆ.

    ಗರ್ಭಿಣಿ ಆನೆ ಮಾನವನ ಸ್ವಾರ್ಥಕ್ಕಾಗಿ ಪ್ರಾಣ ಬಿಟ್ಟಿದೆ ಎಂದು ತಿಳಿದು ಇಡೀ ವಿಶ್ವವೇ ಮರುಗಿತ್ತು. ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ಬಹಳ ಚರ್ಚೆಯಾಗಿತ್ತು. ಇಡೀ ದೇಶದಲ್ಲೇ ಸ್ಟಾರ್ ನಟ-ನಟಿಯರು ಕ್ರಿಕೆಟ್ ಆಟಗಾರರು ಕೂಡ ಆನೆ ಸಾವಿಗೆ ನ್ಯಾಯ ಕೊಡಿಸಿ ಎಂದು ಟ್ವೀಟ್ ಮಾಡಿದ್ದರು. ಈ ವಿಚಾರವಾಗಿ ಗುರುವಾರ ಟ್ವೀಟ್ ಮಾಡಿದ್ದ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಆನೆಯ ಸಾವಿಗೆ ನ್ಯಾಯ ಸಿಗುತ್ತದೆ ಎಂದು ಹೇಳಿದ್ದರು.

  • 15 ವರ್ಷಗಳ ಹಿಂದಿನ ತಂದೆಯ ಕೊಲೆ ರಹಸ್ಯ ಮಗಳಿಂದ ಬಯಲು- ತಾಯಿ ಸೇರಿ ಐವರು ಅರೆಸ್ಟ್

    15 ವರ್ಷಗಳ ಹಿಂದಿನ ತಂದೆಯ ಕೊಲೆ ರಹಸ್ಯ ಮಗಳಿಂದ ಬಯಲು- ತಾಯಿ ಸೇರಿ ಐವರು ಅರೆಸ್ಟ್

    – ಮಗಳ, ತಾಯಿ ಗಲಾಟೆಯಲ್ಲಿ ಪ್ರಕರಣ ಬಯಲಿಗೆ
    – 2015ರಲ್ಲಿ ಅಸ್ಥಿ ಪಂಜರ ಪತ್ತೆ
    – ಅನೈತಿಕ ಸಂಬಂಧಕ್ಕೆ ಪತಿಯ ಕೊಲೆ

    ಕೊಪ್ಪಳ: 15 ವರ್ಷಗಳ ಹಿಂದೆ ಮಹಿಳೆಯೊಬ್ಬಳು ತನ್ನ ಪತಿಯನ್ನು ಕೊಲೆ ಮಾಡಿಸಿ ಮುಚ್ಚಿ ಹಾಕಿದ್ದ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇದೀಗ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 5 ಜನ ಆರೋಪಿಗಳನ್ನು ಪೊಲೀಸರು ಬಂಧಿಸಿರುವ ಘಟನೆ ಕೊಪ್ಪಳದಲ್ಲಿ ನಡೆದಿದೆ.

    ಶಂಕರ್‌ಸಿಂಗ್ ಮೃತ ವ್ಯಕ್ತಿ. ಬಂಧಿತ ಆರೋಪಿಗಳನ್ನು ಗಂಗಾವತಿಯ ವಿರುಪಾಪೂರ ನಗರದ ಮೃತನ ಪತ್ನಿ ಲಕ್ಷ್ಮೀಸಿಂಗ್, ರಾಂಪೂರ ಪೇಟೆಯ ಅಮ್ಜದ್‍ಖಾನ್, ಕಿಲ್ಲಾ ಏರಿಯಾದ ಅಬ್ದುಲ್ ಹಫೀಜ್, ಬಾಬಾ ಜಾಕೀರಬಾಷಾ ಹಾಗೂ ಈಳಿಗನೂರ ಗ್ರಾಮದ ಶಿವನಗೌಡ ಎಂದು ಗುರುತಿಸಲಾಗಿದೆ. ಮೃತನ ಮಗಳು ತನ್ನ ತಂದೆಯ ಕೊಲೆಯ ರಹಸ್ಯವನ್ನು ಬಹಿರಂಗಪಡಿಸಿದ್ದಾಳೆ.

    ಅನೈತಿಕ ಸಂಬಂಧಕ್ಕೆ ಪತಿಯ ಕೊಲೆ:
    ಮೃತ ಶಂಕರ್‌ಸಿಂಗ್ ನನ್ನು ಹಲವಾರು ವರ್ಷಗಳ ಹಿಂದೆಯೇ ಆರೋಪಿ ಲಕ್ಷ್ಮೀಸಿಂಗ್ ಮದುವೆಯಾಗಿದ್ದಳು. ವಿವಾಹ ನಂತರ ಲಕ್ಷ್ಮೀಸಿಂಗ್ ಅಮ್ಜದ್‍ಖಾನ್, ಅಬ್ದುಲ್ ಹಫೀಜ್ ಮತ್ತು ಬಾಬಾ ಜಾಕೀರಬಾಷಾ ಇವರೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಳು. ಈ ವಿಚಾರ ಪತಿಗೆ ಗೊತ್ತಾಗಿ ಪತ್ನಿಗೆ ಹೊಡೆದು ಎಚ್ಚರಿಗೆ ನೀಡಿದ್ದಾನೆ. ಇದರಿಂದ ಕೋಪಗೊಂಡ ಪತ್ನಿ ಆತನನ್ನು ಕೊಲೆ ಮಾಡಲು ನಿರ್ಧರಿಸಿದ್ದಳು. ಅದರಂತೆಯೇ 2005ರಲ್ಲಿ ಆಗಸ್ಟ್ ತಿಂಗಳ ಒಂದು ದಿನ ಶಂಕರಸಿಂಗ್‍ಗೆ ಚಹಾದಲ್ಲಿ ನಿದ್ದೆ ಮಾತ್ರೆ ಹಾಕಿ ಕೊಟ್ಟು ಮಲಗಿಸಿದ್ದಾಳೆ. ಆಗ ಆರೋಪಿಗಳು ಆತನ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ. ನಂತರ ಆತನ ಕೈ-ಕಾಲುಗಳನ್ನು ಹಗ್ಗದಿಂದ ಕಟ್ಟಿ ಹಾಕಿ ಮನೆಯ ಪಕ್ಕದಲ್ಲಿ ಖಾಲಿಯಿದ್ದ ಸ್ಥಳದಲ್ಲಿ ಸಮಾಧಿ ಮಾಡಿಸಿದ್ದಾಳೆ.

    2015ರಲ್ಲಿ ಅಸ್ಥಿ ಪಂಜರ ಪತ್ತೆ:
    ಗಂಗಾವತಿಯ ಜಯನಗರದಲ್ಲಿ ಕೊಲೆಯನ್ನು ಮಾಡಿ ಮನೆಯ ಪಕ್ಕದಲ್ಲಿರುವ ಖಾಲಿ ನಿವೇಶನದಲ್ಲಿ ದೇಹವನ್ನು ಮುಚ್ಚಿ ಹಾಕಿದ್ದರು. ನಂತರ 2015ರಲ್ಲಿ ಆ ಖಾಲಿ ನಿವೇಶನವನ್ನು ಈಳಿಗನೂರ ಗ್ರಾಮದ ಶಿವನಗೌಡನಿಗೆ ಮಾರಾಟ ಮಾಡಿದ್ದಾಳೆ. ಮನೆ ಖರೀದಿ ಮಾಡಿದ ಶಿವನಗೌಡ ಮನೆಯನ್ನು ಕಟ್ಟಿಸುತ್ತಿರುವ ವೇಳೆಯಲ್ಲಿ ಶವದ ಮೂಳೆಗಳು ಪತ್ತೆಯಾಗಿವೆ. ಮೂಳೆಗಳು ಸೇರಿದಂತೆ ಬಟ್ಟೆ ಹಾಗೂ ದೇಹದ ಮೇಲಿದ್ದ ಇತರ ವಸ್ತುಗಳಿಂದ ನಮ್ಮ ತಂದೆ ಎಂದು ಮಕ್ಕಳು ಗುರುತಿಸಿದ್ದಾರೆ. ಆಗ ಮಗಳು ತನ್ನ ತಾಯಿಯನ್ನು ವಿಚಾರಿಸಿದಾಗ ಅಮ್ಜದ್‍ಖಾನ್, ಅಬ್ದುಲ್ ಹಫೀಜ್ ಮತ್ತು ಬಾಬಾ ಜಾಕೀರಬಾಷಾ ಸೇರಿ ಕೊಲೆ ಮಾಡಿ ತಾನೇ ಸಮಾಧಿ ಮಾಡಿರುವುದಾಗಿ ಹೇಳಿದ್ದಾಳೆ. ಈ ವಿಚಾರ ಮಕ್ಕಳಿಗೆ ಗೊತ್ತಾಗಿದ್ದರಿಂದ ಯಾರಿಗಾದರೂ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಮರುದಿನ ಶವದ ಮೂಳೆಗಳನ್ನು ಸುಟ್ಟು ಹಾಕಿ ಸಾಕ್ಷಿ ನಾಶ ಮಾಡಿದ್ದಾರೆ. ಅಲ್ಲದೇ ಮಗಳ ಫೋನಿನಲ್ಲಿದ್ದ ಅಸ್ಥಿಪಂಜರದ ಫೋಟೋಗಳನ್ನು ಡಿಲೀಟ್ ಮಾಡಿಸಿದ್ದಾಳೆ.

    ಮಗಳ, ತಾಯಿ ಗಲಾಟೆಯಲ್ಲಿ ಪ್ರಕರಣ ಬಯಲಿಗೆ:
    ಸುಮಾರು 5 ವರ್ಷಗಳ ನಂತರ ಇತ್ತೀಚೆಗೆ ಆರೋಪಿ ಲಕ್ಷ್ಮೀಸಿಂಗ್ ಮತ್ತು ಮೃತನ ಮಗಳ ಮಧ್ಯೆ ಜಗಳ ನಡೆದಿದೆ. ಆಗ ಆರೋಪಿ ತಾಯಿ ಅವಾಚ್ಯ ಶಬ್ದದಿಂದ ಬೈದು, ಹೊಡೆದು, ನಿಮ್ಮ ಅಪ್ಪನಿಗೆ ಮಾಡಿದಂತೆ ನಿನಗೂ ಒಂದು ಗತಿ ಕಾಣಿಸುತ್ತೇನೆ ಎಂದು ಹೆದರಿಸಿದ್ದಾಳೆ. ಇದರಿಂದ ಭಯಗೊಂಡ ಮಗಳು ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಾಳೆ. ಅಲ್ಲದೇ ಆರೋಪಿಗಳ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವಂತೆ ಮನವಿ ಮಾಡಿಕೊಂಡಿದ್ದಾಳೆ. ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಅಧಿಕಾರಿಗಳು ತನಿಖೆಯನ್ನು ನಡೆಸಿ, ಒಟ್ಟು 4 ಜನ ಕೊಲೆ ಮಾಡಿರುವ ಆರೋಪಿಗಳನ್ನು ಹಾಗೂ ಶವದ ಮೂಳೆಗಳನ್ನು ಸುಟ್ಟು ಸಾಕ್ಷಿ ನಾಶ ಪಡಿಸಿರುವ ಶಿವನಗೌಡ ಅವರನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಜಿ.ಸಂಗೀತಾ ತಿಳಿಸಿದ್ದಾರೆ.