Tag: Accused of robbery

  • ದರೋಡೆ ಆರೋಪಿಗೆ ಥರ್ಡ್ ಡಿಗ್ರಿ ಟ್ರೀಟ್‍ಮೆಂಟ್ ನೀಡಿದ ಎಸ್‍ಐ ಅಮಾನತು

    ದರೋಡೆ ಆರೋಪಿಗೆ ಥರ್ಡ್ ಡಿಗ್ರಿ ಟ್ರೀಟ್‍ಮೆಂಟ್ ನೀಡಿದ ಎಸ್‍ಐ ಅಮಾನತು

    ಬೆಂಗಳೂರು: ದರೋಡೆ ಆರೋಪಿಗೆ ಥರ್ಡ್ ಡಿಗ್ರಿ ಟ್ರೀಟ್‍ಮೆಂಟ್ ನೀಡಿದ ಸುಬ್ರಹ್ಮಣ್ಯನಗರ ಪೊಲೀಸ್ ಠಾಣೆಯ ಸಬ್‌ಇನ್ಸ್‌ಪೆಕ್ಟರ್‌ ಶ್ರೀಕಂಠೇಗೌಡ ಅವರನ್ನು ಅಮಾನತು ಮಾಡಲಾಗಿದೆ.

    ಕಳೆದ ಮೇ ತಿಂಗಳಲ್ಲಿ ದರೋಡೆ ಆರೋಪಿಗೆ ಬಾಂಬೆ ಕಟ್ಟು(ಎರಡು ಕಾಲನ್ನು ಕಟ್ಟಿ ಹಾಕಿ ಪಾದಕ್ಕೆ ಹೊಡೆಯುವುದು) ಹಾಕಿ ಸುಬ್ರಹ್ಮಣ್ಯನಗರ ಎಸ್‍ಐ ಶ್ರೀಕಂಠೇಗೌಡ ಅವರು ಥರ್ಡ್ ಡಿಗ್ರಿ ಟ್ರೀಟ್‍ಮೆಂಟ್ ನೀಡಿದ್ದರು. ಈ ಘಟನೆಯ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ಬಗ್ಗೆ ಪಬ್ಲಿಕ್ ಟಿವಿ ವರದಿ ಬಿತ್ತರಿಸಿತ್ತು. ಈ ಹಿನ್ನೆಲೆಯಲ್ಲಿ ಆರೋಪಿಯ ಜೊತೆ ಪೊಲೀಸರು ಅನುಚಿತವಾಗಿ ವರ್ತಿಸಿರುವುದು ತಪ್ಪು ಎಂದು ಎಸ್‍ಐ ಶ್ರೀಕಂಠೇಗೌಡ ಅವರನ್ನು ಅಮಾನತು ಗೊಳಿಸಿ ಆದೇಶ ಹೊರಡಿಸಲಾಗಿದೆ.

    ದರೋಡೆ ಆರೋಪಿಯೊಬ್ಬನನ್ನು ಪೊಲೀಸರು ಠಾಣೆಗೆ ಕರೆತಂದು ವಿಚಾರಣೆ ನಡೆಸುತ್ತಿದ್ದ ವೇಳೆ ಥಳಿಸಿದ್ದಾರೆ. ಪೊಲೀಸ್ ಲಾಟಿ ಹಾಗೂ ಹಾಕಿ ಸ್ಟಿಕ್‍ನಿಂದ ಆರೋಪಿಯ ಕಾಲಿಗೆ ಹೊಡೆದಿದ್ದಾರೆ. ಇಬ್ಬರು ಪೊಲೀಸ್ ಪೇದೆಗಳು ಆರೋಪಿಯ ಕಾಲನ್ನು ಉದ್ದನೆಯ ಕೋಲಿಗೆ ಕಟ್ಟಿ ಹಾಕಿ ಆತನ ಕಾಲನ್ನು ಮೇಲು ಮಾಡಿ ಹಿಡಿದಿದ್ದು, ಎಸ್‍ಐ ಲಾಟಿ ಹಾಗೂ ಹಾಕಿ ಸ್ಟಿಕ್ ಹಿಡಿದು ಆರೋಪಿ ಕಾಲಿಗೆ ಬಾರಿಸಿದ್ದಾರೆ. ಎಸ್‍ಐ ಆರೋಪಿ ಕಾಲಿಗೆ ಹೊಡೆದ ಏಟಿಗೆ ಹಾಕಿ ಸ್ಟಿಕ್ ಮುರಿದು ಹೋಗಿದೆ. ಈ ದೃಶ್ಯಾವಳಿಗಳನ್ನು ಠಾಣೆಯಲ್ಲಿದ್ದವರು ಮೊಬೈಲ್‍ನಲ್ಲಿ ವಿಡಿಯೋ ಮಾಡಿದ್ದರು. ಈ ವಿಡಿಯೋ ಸದ್ಯ ಎಲ್ಲೆಡೆ ಸಖತ್ ವೈರಲ್ ಆಗಿದೆ.

    ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ನಿವೃತ್ತ ಎಸಿಪಿ ಅಶೋಕ್ ಕುಮಾರ್ ಅವರು ಮಾತನಾಡಿ, ಪೊಲೀಸರು ಈ ರೀತಿ ಥರ್ಡ್ ಡಿಗ್ರಿ ಟ್ರೀಟ್‍ಮೆಂಟ್ ವಿಧಾನ ಅನುಸರಿಸೋದು ತೀರ ಕಡಿಮೆ. ನಟೋರಿಯಸ್ ಅಪರಾಧಿಗಳು ಅಥವಾ ಆರೋಪಿಗಳು, ಅಮಾನವೀಯ ಕೃತ ಎಸಗಿರುವುದು ಮೇಲೆ ಕೆಲವೊಂದು ಬಾರಿ ಅವರ ಬಾಯಿ ಬಿಡಿಸಲು ಥರ್ಡ್ ಡಿಗ್ರಿ ಟ್ರೀಟ್‍ಮೆಂಟ್ ಬಳಸಲಾಗುತ್ತೆ. ಆದರೆ ಎಲ್ಲಾ ಪ್ರಕರಣಗಳಲ್ಲಿ ಈ ವಿಧಾನ ಬಳಸುವಂತಿಲ್ಲ ಅದು ತಪ್ಪಾಗುತ್ತೆ. ಆರೋಪಿಗಳ ಬಾಯಿಬಿಡಿಸಲು ಬೇರೆ ಬೇರೆ ವಿಧಾನಗಳಿವೆ. ಅದನ್ನು ಬಳಸಿ ಪೊಲೀಸರು ಆರೋಪಿಗಳಿಂದ ಸತ್ಯವನ್ನು ಬಾಯಿಬಿಡಿಸುತ್ತಾರೆ. ಅದನ್ನು ಪೊಲೀಸರು ತಾಳ್ಮೆಯಿಂದ, ಬುದ್ಧಿವಂತಿಕೆಯಿಂದ ಮಾಡಬಹುದು ಎಂದು ಪ್ರತಿಕ್ರಿಯಿಸಿದರು.

    ಪೊಲೀಸರು ಸುಲಭ ವಿಧಾನಕ್ಕೆ ಕೈಗೆತ್ತಿಕೊಳ್ಳುತ್ತಾರೆ. ಆರೋಪಿಗಳು ತಾಳ್ಮೆಯಿಂದ ಕೇಳಿದರೆ ಸುಲಭವಾಗಿ ಬಾಯಿಬಿಡಲ್ಲ ಎಂದು ಈ ರೀತಿ ಹೊಡೆದು ಬಾಯಿಬಿಡಿಸುತ್ತಾರೆ. ಆದರೆ ಥರ್ಡ್ ಡಿಗ್ರಿ ಟ್ರೀಟ್‍ಮೆಂಟ್ ಕೊಡುವುದು ತಪ್ಪು, ಇದು ಅಮಾನವೀಯವಾಗಿದ್ದು, ಇದನ್ನು ಪೊಲೀಸರು ಈ ರೀತಿ ದರೋಡೆ, ಕಳ್ಳತನದಂತಹ ಪ್ರಕರಣಗಳಿಗೆ ಬಳಸುವಂತಿಲ್ಲ ಎಂದು ತಿಳಿಸಿದರು. ಹಾಗೆಯೇ ಪೊಲೀಸ್ ಠಾಣೆಯಲ್ಲಿ ಈ ವಿಡಿಯೋ ಯಾರು ಸೆರೆಹಿಡಿದವರು ಎನ್ನುವುದನ್ನು ಕೂಡ ನೋಡಬೇಕಾಗುತ್ತೆ. ಕೆಲವೊಮ್ಮೆ ಇಲಾಖೆಯಲ್ಲಿ ಒಬ್ಬರ ಮೇಲೆ ದ್ವೇಷವಿಟ್ಟುಕೊಂಡವರು ಅವರ ಹೆಸರು ಹಾಳು ಮಾಡಲು ಕುತಂತ್ರ ಮಾಡುತ್ತಾರೆ. ಅದನ್ನು ಕೂಡ ನಾವು ಪರಿಶೀಲಿಸಬೇಕಾಗುತ್ತೆದೆ ಎಂದು ತಿಳಿಸಿದರು.