ಶಿವಮೊಗ್ಗ: ಜಿಲ್ಲೆಯಲ್ಲಿ ಅಕ್ರಮ ಮರಳು ಸಾಗಾಣಿಕೆಯಲ್ಲಿ ಕೆಲವು ಪೊಲೀಸರು ಶಾಮೀಲಾಗಿದ್ದಾರೆ ಎಂಬ ಆರೋಪ ಈ ಹಿಂದಿನಿಂದಲೂ ಕೇಳಿ ಬಂದಿತ್ತು. ಈ ಆರೋಪಕ್ಕೆ ಇಂದು ಪೊಲೀಸ್ ಪೇದೆಯೋರ್ವ ಎಸಿಬಿ ಬಲೆಗೆ ಬಿದ್ದಿರುವುದು ಮತ್ತಷ್ಟು ಪುಷ್ಠಿ ನೀಡಿದೆ.
ಹೌದು. ಶಿವಮೊಗ್ಗದಲ್ಲಿ ಇಂದು ಎಸಿಬಿ ಡಿವೈಎಸ್‍ಪಿ ಮನೋಜ್ ಕುಮಾರ್ ನೇತೃತ್ವದಲ್ಲಿ ದಾಳಿ ನಡೆಸಿದ್ದಾರೆ. ಈ ವೇಳೆ ಅಕ್ರಮ ಮರಳು ಸಾಗಾಣಿಕೆಗೆ ಅನುಕೂಲ ಮಾಡಿಕೊಡುವ ಸಂಬಂಧ ವ್ಯಕ್ತಿಯೊಬ್ಬರಿಂದ ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದ ಪೊಲೀಸ್ ಪೇದೆಯೋರ್ವನನ್ನು ಎಸಿಬಿ ಅಧಿಕಾರಿಗಳು ಬಲೆಗೆ ಬೀಳಿಸಿದ್ದಾರೆ.
ತುಂಗಾನಗರ ಠಾಣೆಯ ಪೇದೆ ನಾರಾಯಣಸ್ವಾಮಿ ಎಸಿಬಿ ಬಲೆಗೆ ಬಿದ್ದ ಪೇದೆ. ದಾಳಿಯಲ್ಲಿ ಎಸಿಬಿ ಡಿವೈಎಸ್‍ಪಿ ಮನೋಜ್‍ಕುಮಾರ್, ಇನ್ಸ್‌ಪೆಕ್ಟರ್ ತಿಪ್ಪೇಸ್ವಾಮಿ ಸೇರಿದಂತೆ ಇತರೆ ಸಿಬ್ಬಂದಿ ಭಾಗಿಯಾಗಿದ್ದರು. ನಾರಾಯಣಸ್ವಾಮಿ ಶಿವಮೊಗ್ಗದ ಟಿಪ್ಪು ನಗರದ ನಿವಾಸಿ ಅಬ್ದುಲ್ ಸಲೀಂ ಬಳಿ ಇಂದು ಗೋಪಾಳ ಬಸ್ ನಿಲ್ದಾಣ ಸಮೀಪ 7 ಸಾವಿರ ರೂ. ಲಂಚ ಪಡೆಯುತ್ತಿದ್ದರು. ಈ ವೇಳೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು ಲಂಚ ಪಡೆಯುತ್ತಿದ್ದ ಪೇದೆಯನ್ನು ಹಾಗೂ ಲಂಚದ ಹಣವನ್ನು ವಶಕ್ಕೆ ಪಡೆದಿದ್ದಾರೆ.
ಚಿಕ್ಕಬಳ್ಳಾಪುರ: ನಗರ ಯೋಜನಾ ಪ್ರಾಧಿಕಾರದ ಮೇಲೆ ಎಸಿಬಿ ದಾಳಿ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ.
ಚಿಕ್ಕಬಳ್ಳಾಪುರ ಶಾಸಕರಿಗೂ ಲಂಚದ ಹಣದಲ್ಲಿ 5 ಲಕ್ಷ ಕೊಡಬೇಕು ಎನ್ನುವ ಅಂಶ ಎಸಿಬಿ ದಾಖಲಿಸಿರುವ ದೂರಿನಲ್ಲಿ ಉಲ್ಲೇಖವಾಗಿರುವುದು ಉಪಚುನಾವಣೆ ಹೊತ್ತಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಅಂದಹಾಗೆ ಗುರುವಾರ ಚಿಕ್ಕಬಳ್ಳಾಪುರ ನಗರ ಯೋಜನಾ ಪ್ರಾಧಿಕಾರದ ಸದಸ್ಯಾಧಿಕಾರಿ ಕೃಷ್ಣಪ್ಪ 3 ಲಕ್ಷ ಹಣ ಪಡೆಯುವಾಗ ಸಿಕ್ಕಿಬಿದ್ದಿದ್ದರು.
ಬೆಂಗಳೂರು ಮೂಲದ ಉದ್ಯಮಿಯೊಬ್ಬರು ಚಿಕ್ಕಬಳ್ಳಾಪುರ ತಾಲೂಕು ಕುಪ್ಪಹಳ್ಳಿ ಬಳಿಯ ತಮ್ಮ ಲೇಔಟ್‍ನಲ್ಲಿ ಭೂ ಪರಿವರ್ತನೆಗೊಂಡ ಶೇ. 40ರಷ್ಟು ನಿವೇಶನಗಳ ಮಾರಾಟಕ್ಕೆ ಬಿಡುಗಡೆಗೆ ಅನುಮತಿ ಮಾಡಿಕೊಡುವಂತೆ ಅರ್ಜಿ ಸಲ್ಲಿಸಿದರು. ಹೀಗಾಗಿ ಯೋಜನಾ ಸದಸ್ಯಾಧಿಕಾರಿ ಕೃಷ್ಣಪ್ಪ 9 ಲಕ್ಷ ಕೊಡುವಂತೆ ಬೇಡಿಕೆ ಇಟ್ಟಿದ್ದು, 9 ಲಕ್ಷದಲ್ಲಿ 5 ಲಕ್ಷ ಹಣ ಶಾಸಕರಿಗೂ ಕೊಡಬೇಕು. ಇಲ್ಲವಾದರೆ ಎಂಎಲ್‍ಎ ಬಳಿ ಫೋನ್ ಮಾಡಿಸಿ ಕೇವಲ 4 ಲಕ್ಷ ಕೊಡಿ ಸಾಕು ಎಂದು ಹೇಳಿದ್ದಾರೆ.
ಈ ಬಗ್ಗೆ ಕಾಲ್ ರೆಕಾರ್ಡ್ ಮಾಡಿಕೊಂಡಿದ್ದ ಉದ್ಯಮಿ ರಾಮಾಂಜಿನಪ್ಪ ಎಸಿಬಿ ಗೆ ದೂರು ನೀಡಿದರು. ದೂರು ಪಡೆದಿದ್ದ ಎಸಿಬಿ ಗುರುವಾರ ಕಾರ್ಯಾಚರಣೆ ನಡೆಸಿ ಕೃಷ್ಣಪ್ಪ ಅವರನ್ನು ಬಲೆಗೆ ಬೀಳಿಸುವುದರಲ್ಲಿ ಯಶಸ್ವಿಯಾಗಿದೆ. ಆದರೆ ಉಪಚುನಾವಣೆ ಹೊತ್ತಲ್ಲಿ ಎಸಿಬಿ ದಾಖಲಿಸಿರುವ ಎಫ್‍ಐಆರ್ ನಲ್ಲಿ ಶಾಸಕರಿಗೂ 5 ಲಕ್ಷ ಹಣ ಕೊಡಬೇಕು ಎನ್ನುವ ವಿಚಾರ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಚಿಕ್ಕಬಳ್ಳಾಪುರ ಶಾಸಕ ಸುಧಾಕರ್ ಅನರ್ಹಗೊಂಡಿದ್ದು, ಎಫ್‍ಐಆರ್ ನಲ್ಲಿ ಉಲ್ಲೇಖವಾಗಿರುವ ಶಾಸಕ ಸುಧಾಕರ್ ಎನ್ನುವುದು ವಿರೋಧ ಪಕ್ಷದವರು ವಾದ. ಹೀಗಾಗಿ ಎಫ್‍ಐಆರ್ ಪ್ರತಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತಿದ್ದು, ಪರ ವಿರೋಧದ ಚರ್ಚೆಗಳು ಜೋರಾಗಿ ನಡೆದಿವೆ.
ತೆಲಂಗಾಣ: ತಹಶೀಲ್ದಾರ್ ಅಥವಾ ಮಂಡಲ್ ಕಂದಾಯ ಅಧಿಕಾರಿ(ಎಂಆರ್‍ಓ) ಮನೆ ಮೇಲೆ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ದಾಳಿ ನಡೆಸಿ ಬರೋಬ್ಬರಿ 93.5 ಲಕ್ಷ ರೂ ನಗದು, 400 ಗ್ರಾಂ ಚಿನ್ನಾಭರಣವನ್ನು ಜಪ್ತಿ ಮಾಡಿದೆ.
ರಂಗ ರೆಡ್ಡಿ ಜಿಲ್ಲೆಯ ತಹಶೀಲ್ದಾರ್ ಲಾವಣ್ಯ ಅವರ ನಿವಾಸದ ಮೇಲೆ ಬುಧವಾರ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದರು. ಗ್ರಾಮ ಕಂದಾಯ ಅಧಿಕಾರಿ(ವಿಆರ್‍ಓ) ಅಂತಯ್ಯ ಅವರು ರೈತರಾಗಿರುವ ಭಾಸ್ಕರ್ ಅವರ ಬಳಿ ಜಮೀನಿನ ದಾಖಲೆಗಳನ್ನು ಸರಿಪಡಿಸಲು 4 ಲಕ್ಷ ರೂ ಲಂಚ ತೆಗೆದುಕೊಳ್ಳುತ್ತಿದ್ದರು. ಈ ವೇಳೆ ಎಸಿಬಿ ಬಲೆಗೆ ಅಧಿಕಾರಿ ಸಿಕ್ಕಿಬಿದ್ದಿದ್ದರು. ಈ ವಿಚಾರ ತಿಳಿಯುತ್ತಿದ್ದಂತೆಯೇ ತಹಶೀಲ್ದಾರ್ ಲಾವಣ್ಯ ಅವರ ಮನೆ ಮೇಲೆ ಎಸಿಬಿ ದಾಳಿ ನಡೆಸಿದೆ.
ಜಮೀನಿನ ದಾಖಲೆಗಳನ್ನು ಸರಿಪಡಿಬೇಕಾದರೆ 8 ಲಕ್ಷ ಹಣ ನೀಡಬೇಕು ಎಂದು ರೈತನ ಬಳಿ ಅಧಿಕಾರಿಗಳು ಕೇಳಿದ್ದರು. ಅದರಲ್ಲಿ 5 ಲಕ್ಷ ಎಂಆರ್‍ಓ ಗೆ ಹಾಗೂ ಉಳಿದ 3 ಲಕ್ಷ ವಿಆರ್‍ಓಗೆ ನೀಡಬೇಕು ಎಂದು ಬೇಡಿಕೆ ಇಡಲಾಗಿತ್ತು.
ಬಳಿಕ ರೈತ ಹಣವನ್ನು ತಂದಿರುವ ಬಗ್ಗೆ ವಿಆರ್‍ಓ ಅವರು ಎಂಆರ್‍ಓ ಅವರಿಗೆ ಮಾಹಿತಿ ತಿಳಿಸಿದ್ದಾರೆ. ಈ ಬಗ್ಗೆ ಮಾಹಿತಿ ತಿಳಿದ ಎಸಿಬಿ ಅಧಿಕಾರಿಗಳು ಲಾವಣ್ಯ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ ಎನ್ನಲಾಗಿದೆ. ಅಷ್ಟೇ ಅಲ್ಲದೆ ತಮ್ಮ ಮನೆಯ ಮೇಲೆ ಎಸಿಬಿ ದಾಳಿ ಮಾಡಿರುವ ಆರೋಪವನ್ನು ಲಾವಣ್ಯ ಅವರು ನಿರಾಕರಿಸಿದ್ದಾರೆ.
ಇತ್ತೀಚೆಗೆ ರೈತ, ಲಾವಣ್ಯ ಅವರ ಕಾಲಿಗೆ ಬಿದ್ದು, ತನ್ನ ಜಮೀನಿನ ದಾಖಲೆಗಳನ್ನು ಸರಿಪಡಿಸಿಕೊಡಿ ಎನ್ನುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳನ್ನು ಭಾರೀ ವೈರಲ್ ಆಗಿತ್ತು. ಅಲ್ಲದೆ ರೈತನ ಪಾಸ್ ಬುಕ್ ನೀಡಲು ಅವರ ಬಳಿ ವಿಆರ್‍ಓ 30 ಸಾವಿರ ಹಣ ಪಡೆದಿದ್ದಾರೆ ಎನ್ನುವ ಆರೋಪ ಕೂಡ ಅಧಿಕಾರಿಗಳ ಮೇಲೆ ಕೇಳಿಬಂದಿದೆ.
ಜಮೀನಿನ ದಾಖಲೆಗಳನ್ನು ಸರಿಪಡಿಸಿಕೊಡಲು ಈ ಇಬ್ಬರು ಅಧಿಕಾರಿಗಳು ತಮ್ಮ ಬಳಿ ಹಣದ ಬೇಡಿಕೆ ಇಟ್ಟಿದ್ದಾರೆ ಎಂದು ರೈತ ಎಸಿಬಿ ಅಧಿಕಾರಿಗಳಿಗೆ ತಿಳಿಸಿದ್ದಾರೆ.
ಕಳೆದ ಎರಡು ವರ್ಷಗಳ ಹಿಂದೆ ಲಾವಣ್ಯ ಅವರಿಗೆ ಅತ್ಯುತ್ತಮ ತಹಶೀಲ್ದಾರ್ ಪ್ರಶಸ್ತಿಯನ್ನು ನೀಡಿ ತೆಲಂಗಾಣ ಸರ್ಕಾರ ಗೌರವಿಸಿತ್ತು. ಆದರೆ ಈ ಭ್ರಷ್ಟಾಚಾರದ ಆರೋಪ ಲಾವಣ್ಯ ಅವರ ವೃತ್ತಿ ಬದುಕಿಗೆ ಕಪ್ಪು ಚುಕ್ಕೆ ಇಟ್ಟಂತಾಗಿದೆ.
Telangana: Rs 93.5 lakh in cash, and gold ornaments, seized by Anti-Corruption Bureau (ACB) from the residence of Lavanya, Tehsildar of Ranga Reddy District late last night. A case has been registered and investigation is underway pic.twitter.com/1eeVixlpsH
ಬೆಂಗಳೂರು: ಬಿಡಿಎ ಎಂಜಿನಿಯರ್ ಗೌಡಯ್ಯ ಮನೆ ಮೇಲೆ ಬರೋಬ್ಬರಿ 20 ಗಂಟೆಗಳ ಕಾಲ ನಡೆದ ದಾಳಿ ಅಂತ್ಯವಾಗಿದ್ದು, ಸದ್ಯ ಗೌಡಯ್ಯನ ರಹಸ್ಯ ಬಗೆದಷ್ಟೂ ಬಯಲಾಗ್ತಿದೆ.
ಶುಕ್ರವಾರ ಮಧ್ಯರಾತ್ರಿವರೆಗೆ ಪರಿಶೀಲನೆ ನಡೆಸಿ ಎಸಿಬಿ ಅಧಿಕಾರಿಗಳು ನಿಟೀಸ್ ಜಾರಿ ಮಾಡಿ ಹಿಂದಿರುಗಿದ್ದಾರೆ. ಹೊಸ ಸರ್ಕಾರ, ಹೊಸ ಸಚಿವರು ಬಂದ್ರೂ ಗೌಡಯ್ಯ ಮಾತ್ರ ಕದಲುತ್ತಿಲ್ಲ ಯಾಕೆ ಎನ್ನುವ ಪ್ರಶ್ನೆಯೊಂದು ಇದೀಗ ಜನಸಾಮಾನ್ಯರಲ್ಲಿ ಮೂಡಿದೆ.
ಗೌಡಯ್ಯ ಡಿಸಿಎಂ ಅದೇಶಕ್ಕೆ ಕವಡೆ ಕಾಸಿನ ಕಿಮ್ಮತ್ತು ನೀಡುತ್ತಿರಲಿಲ್ಲ. ಹೀಗಾಗಿ ಪರಮೇಶ್ವರ್ ಅವರು ಬಿಡಿಎ ಅಧ್ಯಕ್ಷರಾಗುತ್ತಿದ್ದಂತೆ ಗೌಡಯ್ಯನ ಬದಲಾವಣೆಗೆ ಮುಂದಾಗಿದ್ದರು. ಆದ್ರೆ ಈ ವೇಳೆ ಗೌಡಯ್ಯನ ಕಾಪಾಡಲು ಸಚಿವ ಎಚ್.ಡಿ.ರೇವಣ್ಣ ಅವರು ಎಂಟ್ರಿ ಕೊಟ್ಟಿದ್ದು, ಗೌಡಯ್ಯನ ಬದಲಾವಣೆ ಮಾಡದಂತೆ ಸಚಿವ ಪರಮೇಶ್ವರ್‍ಗೆ ತಾಕೀತು ಮಾಡಿದ್ದರು. ಇಷ್ಟು ಮಾತ್ರವಲ್ಲದೇ ರೇವಣ್ಣ ಅವರು ದೇವೇಗೌಡರಿಂದಲೂ ಫೋನ್ ಮಾಡಿಸಿ ಒತ್ತಡ ಹೇರಿದ್ದರು ಎಂಬ ಮಾಹಿತಿಯೊಂದು ಇದೀಗ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
ದಾಳಿ ವೇಳೆ ಸಿಕ್ಕಿದ್ದೇನು..?:
ಎಸಿಬಿ ದಾಳಿ ವೇಳೆ 10 ಕೆ.ಜಿ ಚಿನ್ನ, ಕೋಟಿ ಕೋಟಿ ನಗದು ಪತ್ತೆಯಾಗಿದೆ. ಅಲ್ಲದೇ 40 ಎಕರೆ ಜಮೀನು, ಡಾಂಬರು ಮಿಶ್ರಣ ಘಟಕ, ರೋಡ್ ರೋಲರ್, ಶಾಲಾ ಬಸ್‍ಗಳು, ಕಾರುಗಳು ಪತ್ತೆಯಾಗಿವೆ. ನಿನ್ನೆಯ ದಾಳಿಯಲ್ಲಿ ಸುಮಾರು 200 ಅಧಿಕಾರಿಗಳು ಮತ್ತು ಸಿಬ್ಬಂದಿ ಇದ್ದರು. ಇತ್ತ ಜಯನಗರದಲ್ಲಿರೋ ಅತ್ತೆಯ ಮನೆಯಲ್ಲಿ ಕೆಜಿಗಟ್ಟಲೇ ಚಿನ್ನ ಇಟ್ಟಿದ್ದು ದಾಳಿ ವೇಳೆ ಬಹಿರಂಗವಾಗಿದೆ. ಅತ್ತೆ ಮನೆಯಲ್ಲಿ ಗೌಡಯ್ಯ ದಂಪತಿ 80 ಬಳೆ, ವಜ್ರದ ಸರ ಒಟ್ಟು 4.5 ಕೆ.ಜಿ ಚಿನ್ನದ ಆಭರಣ ಬಚ್ಚಿಟ್ಟಿದ್ದರು. ಆದ್ರೆ ಇದು ಅತ್ತೆಗೇ ಗೊತ್ತಿರಲಿಲ್ಲ. ಎಸಿಬಿ ರೈಡ್ ಮಾಡಿ ಬಾಚಿಕೊಂಡ ಬಳಿಕ ಅತ್ತೆಗೆ ಚಿನ್ನ ಎಂದು ಗೊತ್ತಾಗಿರುವುದಾಗಿ ತಿಳಿದುಬಂದಿದೆ.
ಅತ್ತೆ ಮನೆಯಲ್ಲಿ ಗೌಡಯ್ಯ ದಂಪತಿ ಕೋಣೆಯೊಂದನ್ನ ಇಟ್ಟಿಕೊಂಡಿದ್ದರು. ಅತ್ತೆ ಮನೆಗೆ ಗೌಡಯ್ಯ ದಂಪತಿ ಹೋದಾಗಲೆಲ್ಲ ರೂಂಗೆ ಹೋಗಿ ಬಾಗಿಲು ಹಾಕಿಕೊಳ್ಳುತ್ತಿದ್ದರಂತೆ. ಮನೆಯಲ್ಲಿದ್ದ ಚಿನ್ನಾಭರಣ ಎಸಿಬಿ ಅಧಿಕಾರಿಗಳು ದಾಳಿ ವೇಳೆ ವಶಪಡಿಸಿಕೊಂಡಾಗ ಗೌಡಯ್ಯನ ಅತ್ತೆ ಕಕ್ಕಾಬಿಕ್ಕಿ ಆದರು. ಸದ್ಯ ಅತ್ತೆ ಮನೆಯಿಂದ 80 ಬಳೆ, 15 ಕ್ಯಾರೆಟ್ ವಜ್ರದ ಸರವನ್ನು ವಶಪಡಿಸಿಕೊಳ್ಳಲಾಗಿದೆ. ಶನಿವಾರದಿಂದ ಬ್ಯಾಂಕ್ ಖಾತೆಗಳನ್ನು ಪರಿಶೀಲಿಸಲಾಗುತ್ತದೆ. ಗೌಡಯ್ಯ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನಲ್ಲೂ ಭಾರೀ ಆಸ್ತಿ ಸಂಪಾದಿಸಿದ್ದಾರೆ. 40 ಎಕರೆ ಜಮೀನು, ಡಾಂಬರು ಮಿಶ್ರಣ ಘಟಕ, ರೋಡ್ ರೋಲರ್, ಶಾಲಾ ಬಸ್‍ಗಳು, ಕಾರುಗಳು ಪತ್ತೆಯಾಗಿವೆ.
ವಿಜಯಪುರ: ಜಿಲ್ಲೆಯ ಇಂಡಿ ತಾಲೂಕಿನ ಝಳಕಿ ಗ್ರಾಮದಲ್ಲಿರುವ RTO ಚೆಕ್ ಪೋಸ್ಟ್ ಮೇಲೆ ಎಸಿಬಿ ಅಧಿಕಾರಿಗಳು ಗುರುವಾರ ರಾತ್ರಿ ದಾಳಿ ನಡೆಸಿದ್ದಾರೆ.
ಎಸಿಬಿ ಎಸ್‍ಪಿ ಅಮರನಾಥ ರೆಡ್ಡಿ ನೇತೃತ್ವದಲ್ಲಿ ದಾಳಿ ನಡೆಸಿರುವ ಅಧಿಕಾರಿಗಳು ಚೆಕ್ ಪೋಸ್ಟ್ ನಲ್ಲಿನ ದಾಖಲಾತಿಗಳು ಹಾಗು ಕಚೇರಿ ಪರಿಶೀಲನೆ ನಡೆಸಿದ್ದಾರೆ. ಇದೇ ವೇಳೆ 25,000 ರೂ. ನಗದು ಪತ್ತೆಯಾಗಿದೆ.
ಅಕ್ರಮವಾಗಿ ಸಂಗ್ರಹಿಸಿದ್ದ ಹಣ ಜಪ್ತಿ ಮಾಡಲಾಗಿದ್ದು, ಮೋಟಾರ್ ವೆಹಿಕಲ್ ಇನ್ಸ್ ಪೆಕ್ಟರ್ ರಂಜಿತ್, ಇಬ್ಬರು ಹೋಮ್ ಗಾರ್ಡ್ ಹಾಗೂ 5 ಏಜೆಂಟರನ್ನ ಎಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ.
ಕಳೆದ ವರ್ಷ ಕೂಡ ಮಾರ್ಚ್ 7 ರಂದು ಝಳಕಿ ಚಕ್ ಪೋಸ್ಟ್ ಮೇಲೆ ಎಸಿಬಿ ದಾಳಿ ನಡೆಸಿತ್ತು.
ಬೆಂಗಳೂರು: ರಾಜ್ಯದ ವಿವಿಧ ಭಾಗಗಳಲ್ಲಿ ಬೆಳ್ಳಂಬೆಳಗ್ಗೆ ಎಸಿಬಿ ಅಧಿಕಾರಿಗಳು ಬೇಟೆ ಆರಂಭಿಸಿದ್ದಾರೆ.
ರಾಜ್ಯ ಜಿಲ್ಲಾ ತರಬೇತಿ ಕೇಂದ್ರದ ಪ್ರಾಂಶುಪಾಲ ಡಾ.ಕುಮಾರ್‍ಗೌಡ ಮತ್ತವರ ಸ್ನೇಹಿತ ಪ್ರಕಾಶ್ ಅವರಿಗೆ ಸಂಬಂಧಿಸಿದ ನಾಲ್ಕು ಸ್ಥಳಗಳಲ್ಲಿ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಕೋಲಾರ ಜಿಲ್ಲೆಯ ಮುಳಬಾಗಿಲಿನಲ್ಲಿರುವ ಕುಮಾರ್ ಗೌಡ ಒಡೆತನದ ಸಾಯಿ ವಿಹಾರಿಕಾ ನರ್ಸಿಂಗ್ ಹೋಂ, ಮನೆ, ಕಚೇರಿ ಮತ್ತು ಬೆಂಗಳೂರಿನ ವಾಣಿಜ್ಯ ಮಳಿಗೆಗಳ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದು, ಕಡತಗಳ ಪರಿಶೀಲನೆ ನಡೆಸುತ್ತಿದ್ದಾರೆ.
ಕಲಬುರಗಿಯಲ್ಲೂ ಎಸಿಬಿ ಅಧಿಕಾರಿಗಳು ಕಾರ್ಯಾಚರಣೆಗೆ ಇಳಿದಿದ್ದು, ಜೆಸ್ಕಾಂ ಎಇಇ ಸಹದೇವ ಮಾನಕೆರೆ ನಿವಾಸದ ಮೇಲೆ ದಾಳಿ ನಡೆಸಿದ್ದಾರೆ. ಆದಾಯಕ್ಕೂ ಮೀರಿ ಆಸ್ತಿ ಗಳಿಕೆ ಆರೋಪ ಹಿನ್ನೆಲೆಯಲ್ಲಿ ಜೇವರ್ಗಿ ಕಾಲೋನಿ ಮತ್ತು ಬೀದರ್ ನಗರದಲ್ಲಿ ಸಹದೇವಾ ಅವರಿಗೆ ಸೇರಿದ ಮನೆಗಳ ಮೇಲೆ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. ಹಾವೇರಿ ನಗರದ ಬಸವೇಶ್ವರ ನಗರದಲ್ಲಿರೋ ಕಂದಾಯ ನಿರೀಕ್ಷಕ ವಿಜಯಕುಮಾರ ಗುಡಿಗೇರಿ ಮನೆ ಮೇಲೆ ದಾಳಿ ನಡೆದಿದೆ.
ದಾವಣಗೆರೆಯಲ್ಲಿ ಕೂಡ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಬೆಂಗಳೂರು ಕೇಂದ್ರ ವಲಯದ ಸಾರಿಗೆ ಆಯುಕ್ತ ಕೆ.ಟಿ.ಹಾಲಸ್ವಾಮಿಯ ಮನೆ ಮೇಲೆ ದಾಳಿ ನಡೆದಿದೆ. ಬೆಂಗಳೂರಿನ ಡಾಲರ್ಸ್ ಕಾಲೋನಿಯ ಮನೆ ಹಾಗೂ ಚನ್ನಗಿರಿ ತಾಲೂಕಿನ ಎನ್ ಗಾಣದಗಟ್ಟೆ ಗ್ರಾಮದಲ್ಲಿರುವ ಮನೆಯಲ್ಲಿ ಎಸಿಬಿ ಅಧಿಕಾರಿಗಳಿಂದ ದಾಳಿ ನಡೆದಿದ್ದು, ಗ್ರಾಮದಲ್ಲಿ 20 ಎಕರೆ ಅಡಿಕೆ ತೋಟ, ಮನೆ, ಟ್ರಾಕ್ಟರ್ ಸೇರಿದಂತೆ ಹಲವು ಆಸ್ತಿ ಪತ್ತೆಯಾಗಿದೆ. ದಾವಣಗೆರೆಯ ಎಸಿಬಿ ಅಧಿಕಾರಿ ಪ್ರಕಾಶ್ ಗೌಡ ಪಾಟೀಲ್ ಹಾಗೂ ಬೆಂಗಳೂರಿನ ಎಸಿಬಿ ಇನ್ಸ್ ಪೆಕ್ಟರ್ ರಿಂದ ತನಿಖೆ ಮುಂದುವರೆದಿದೆ.
ಆದಾಯ ಮೀರಿ ಆಸ್ತಿ ಗಳಿಕೆ ಮಾಡಿದ್ದಾರೆಂಬ ದೂರಿನ ಹಿನ್ನಲೆಯಲ್ಲಿ ಯಾದಗಿರಿ ನಗರದ ಚಿತ್ತಾಪೂರ ರಸ್ತೆಯಲ್ಲಿರುವ ಕೆಬಿಜೆಎನ್‍ಎಲ್ ಸಾಹಯಕ ಎಂಜಿನಿಯರ ಚನ್ನಪ್ಪ ಕಂದಾಯ ನಿವಾಸದ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಯಾದಗಿರಿ ಎಸಿಬಿ ಡಿವೈಎಸ್‍ಪಿ ವಿರೇಶ ಕರಡಿಗುಡ್ಡ, ಸಿಪಿಐ ಯಶವಂತ ಬಿಸನಳ್ಳಿ ನೇತೃತ್ವದಲ್ಲಿ ದಾಳಿ ನಡೆದಿದ್ದು, ಮಹತ್ವದ ದಾಖಲೆ ಪರಿಶೀಲನೆ ನಡೆಸಿದ್ದಾರೆ.
ರಾಯಚೂರು ಜಿಲ್ಲಾ ಪಂಚಾಯ್ತಿ ಕಾರ್ಯನಿರ್ವಾಹಕ ಅಭಿಯಂತರ ಬಿ.ಆರ್.ಗೌಡೂರು ಮನೆ ಹಾಗೂ ಕಚೇರಿ ಮೇಲೆ ಎಸಿಬಿ ದಾಳಿ ನಡೆದಿದೆ.
ಹುಬ್ಬಳ್ಳಿ: ಮಂಗಳವಾರದಂದು ವಾಣಿಜ್ಯ ತೆರಿಗೆ ಇಲಾಖೆ ಸಹಾಯಕ ಆಯುಕ್ತ ಕರಿಯಪ್ಪ ಮನೆಯಲ್ಲಿ ಸಿಕ್ಕ 7 ಸಾವಿರ ಸೀರೆಗಳ ರಹಸ್ಯ ಬಯಲಾಗಿದೆ.
ಕರ್ನಲ್ ಅವರ ಪತ್ನಿಗೆ ವಿಪರೀತ ಸೀರೆ ಹುಚ್ಚಂತೆ. ಹೀಗಾಗಿ ಕರಿಯಪ್ಪ ಪತ್ನಿ ಕಮಲಾ ಅಲಿಯಾಸ್ ಶಾಂತಾ ರಾಜ್ಯದ ನಾನಾ ಭಾಗಗಳ ಸುಪ್ರಸಿದ್ಧ ಸೀರೆಯ ಮಳಿಗೆಯಲ್ಲಿ ಸೀರೆಯನ್ನು ಖರೀದಿ ಮಾಡುತ್ತಿದ್ರು. ಪ್ರತಿ ಶಾಪಿಂಗ್‍ನಲ್ಲೂ ಕನಿಷ್ಠ ಪಕ್ಷ ನೂರಕ್ಕೂ ಹೆಚ್ಚು ಸೀರೆಗಳನ್ನು ಖರೀದಿ ಮಾಡ್ತಿದ್ರು ಎಂದು ತಿಳಿದು ಬಂದಿದೆ.
ಕರ್ನಲ್ ಕರಿಯಪ್ಪ ಮನೆ ಮೇಲೆ ಮಂಗಳವಾರದಂದು ಎಬಿಸಿ ಅಧಿಕಾರಿಗಳು ದಾಳಿ ನಡೆಸಿದ್ದರು. ದಾಳಿಯಲ್ಲಿ ಅಪಾರ ಪ್ರಮಾಣದ ಅಸ್ತಿ ಪಾಸ್ತಿ ಜೊತೆ ಸಾವಿರಾರು ರೇಷ್ಮೇ ಸೀರೆಗಳನ್ನು ಅಧಿಕಾರಿಗಳು ಜಪ್ತಿ ಮಾಡಿದ್ದರು. ಸುಮಾರು ಎರಡು ಕೊಠಡಿಗಳಲ್ಲಿ ಸಂಗ್ರಹಿಸಿಟ್ಟಿದ್ದ ಸೀರೆಗಳನ್ನು 10 ಜನ ಅಧಿಕಾರಿಗಳು ಎಣಿಸಿದ್ದು, 7 ಸಾವಿರ ಸೀರೆಗಳು ಪತ್ತೆಯಾಗಿದ್ದವು. ಕರಿಯಪ್ಪ ಅವರ ಮನೆಯಲ್ಲಿ ದೊರೆತ ಒಂದೊಂದು ಸೀರೆಯ ಬೆಲೆ ಅಂದಾಜು 10 ರಿಂದ 15 ಸಾವಿರ ರೂಪಾಯಿ ಎಂದು ಹೇಳಲಾಗುತ್ತಿದೆ.
ಕರಿಯಪ್ಪ ಹುಬ್ಬಳ್ಳಿ ನಗರದಲ್ಲಿ ಎರಡು ಬಂಗಲೆ, ಬೆಂಗಳೂರಿನಲ್ಲಿ ಎರಡು ಮನೆ ಮತ್ತು ನೆಲಮಂಗಲದ ಬಳಿ ಒಂದು ಫ್ಲಾಟ್ ಹೊಂದಿದ್ದಾರೆ. ಅಪಾರ ಪ್ರಮಾಣದ ಕೃಷಿ ಭೂಮಿ, ವಿವಿಧೆಡೆ ನಿವೇಶನಗಳನ್ನು ಹೊಂದಿದ್ದು ಪತ್ತೆಯಾಗಿದೆ. ಕರಿಯಪ್ಪರ ಇಬ್ಬರು ಮಕ್ಕಳು ವಿದೇಶದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಮನೆಯಲ್ಲಿ 7.50 ಲಕ್ಷ ನಗದು ಹಾಗೂ ಕಚೇರಿಯಲ್ಲಿ 1.30 ಲಕ್ಷ ನಗದು ಹಣ ದೊರೆತಿದೆ.
ಕರಿಯಪ್ಪ ಮನೆ ಮೇಲಿನ ದಾಳಿ ಬಳಿಕ ಅವರ ಸಂಬಂಧಿಕರು, ಸ್ನೇಹಿತರ ಮನೆಗಳ ಮೇಲೂ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಹುಬ್ಬಳ್ಳಿಯ ಕಾಂಗ್ರೆಸ್ ಮುಂಖಡ ಪ್ರಸಾದ್ ಅಬ್ಬಯ್ಯ ನಿಕಟವರ್ತಿ ನಿರಂಜನ್ ದೇಸಾಯಿ ಮನೆಯಲ್ಲಿ ಕರ್ನಲ್ ಕರಿಯಪ್ಪಗೆ ಸೇರಿದ 2 ಕೋಟಿಗೂ ಅಧಿಕ ಮೌಲ್ಯದ ಆಸ್ತಿ ದಾಖಲೆಗಳು ಪತ್ತೆಯಾಗಿದೆ.
ಇಂದು ಕೂಡ ಕರ್ನಲ್ ಕರಿಯಪ್ಪ ಅವರ ಮನೆಯಲ್ಲಿ ಶೋಧ ಮುಂದುವರೆಯಲಿದೆ. ಇಂದು ಕರ್ನಲ್ ಕರಿಯಪ್ಪ ಅವರ ಬ್ಯಾಂಕ್ ಲಾಕರ್‍ಗಳನ್ನು ಅಧಿಕಾರಿಗಳು ಹೊರ ತೆಗೆಯಲಿದ್ದಾರೆ. ಕರ್ನಲ್ ಅವರು ಹತ್ತಕ್ಕೂ ಹೆಚ್ಚು ಬ್ಯಾಂಕ್‍ಗಳಲ್ಲಿ ಅಕೌಂಟ್ ಹೊಂದಿದ್ದು, ಅಪಾರ ಪ್ರಮಾಣದ ಚಿನ್ನಾಭರಣ ಇಟ್ಟಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಬೆಂಗಳೂರು: ರಾಜ್ಯದ ಹಲವೆಡೆ ಇಂದು ಬೆಳ್ಳಂಬೆಳಗ್ಗೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಭ್ರಷ್ಟ ಕುಳಗಳಿಗೆ ಶಾಕ್ ಕೊಟ್ಟಿದ್ದಾರೆ. ಬೀದರ್, ಬೆಳಗಾವಿ, ಗದಗ, ಹುಬ್ಬಳ್ಳಿ, ಶಿವಮೊಗ್ಗ, ಬೆಂಗಳೂರು ಮೊದಲಾದ ಕಡೆಗಳಲ್ಲಿ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಬೀದರ್ ಜಿಲ್ಲೆಯ ಔರಾದ್ ತಾಲೂಕು ಪಂಚಾಯತಿ ಇಓ ಜಗನ್ನಾಥ ಮಾಣಿಕಪ್ಪ ಹೋತಗಿ ನಿವಾಸದ ಮೇಲೆ ಎಸಿಬಿ ಎಸ್.ಪಿ ಅನೀತ್ ಹದ್ದಣ್ಣನವರ್ ನೇತೃತ್ವದಲ್ಲಿ ದಾಳಿ ನಡೆದಿದೆ. ಬೆಳಗಾವಿಯಲ್ಲಿ ಡೆಪ್ಯೂಟಿ ತಹಶಿಲ್ದಾರ್ ಸಲೀಂ ಸಾಬುಸಾಬ್ ಸೈಯದ್ ಮನೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ಮಾಡಿ ಅಕ್ರಮ ಆಸ್ತಿಗಳ ದಾಖಲೆಗಳನ್ನ ವಶ ಪಡಿಸಿಕೊಂಡಿದ್ದಾರೆ. ಗದಗ ಜಿಲ್ಲೆಯಲ್ಲೂ ಎಸಿಬಿ ಇನ್ಸ್ ಪೆಕ್ಟರ್ ಮಹಾಂತೇಶ ನೇತೃತ್ವದಲ್ಲಿ ದಾಳಿ ನಡೆದಿದ್ದು ಯಾವಗಲ್ ಗ್ರಾಮಪಂಚಾಯತ್‍ನ 2015-16 ನೇ ಸಾಲಿನ ಯೋಜನೆಗಳ ಅವ್ಯವಹಾರ ಕುರಿತು ಕಾಮಗಾರಿಯ ಕಡತಗಳ ಪರಿಶೀಲನೆ ನಡೆಯುತ್ತಿದೆ.
ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ವಾಣಿಜ್ಯ ತೆರಿಗೆ ಇಲಾಖೆಯ ಸಹಾಯಕ ಆಯುಕ್ತ ಕರಿಯಪ್ಪ ಕರ್ನಲ್ ಮನೆಯ ಮೇಲೆ ಎಸಿಬಿ ದಾಳಿ ನಡೆದಿದ್ದು, ಇವರ ಸ್ನೇಹಿತರ ಮನೆಗಳಲ್ಲೂ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಶಿವಮೊಗ್ಗದಲ್ಲಿ ಆರ್‍ಟಿಓ ಇನ್ಸ್‍ಪೆಕ್ಟರ್ ಕರುಣಾಕರ್ ಮನೆ ಮೇಲೆ ಎಸಿಬಿ ವೃತ್ತ ನಿರೀಕ್ಷಕ ಹಾಗೂ ಚಿತ್ರದುರ್ಗದ ಎಸಿಬಿ ವೃತ್ತ ನಿರೀಕ್ಷಕ ಪ್ರಕಾಶ್ ನೇತೃತ್ವದಲ್ಲಿ ದಾಳಿ ನಡೆದಿದೆ.
ಬೆಂಗಳೂರಿನಲ್ಲೂ ಎಂಟು ಕಡೆಗಳಲ್ಲಿ ಎಸಿಬಿ ಅಧಿಕಾರಿಗಳು ಬಲೆ ಬೀಸಿದ್ದು, ಜಯನಗರದ 3 ನೇ ಹಂತದಲ್ಲಿರುವ ಬಿಬಿಎಂಪಿಯ ಚೀಫ್ ಎಂಜಿನಿಯರ್ ಆಗಿರುವ ಕೆಟಿ ನಾಗರಾಜು ನಿವಾಸದಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ. ಜಯನಗರ 4 ನೇ ಹಂತದಲ್ಲಿರುವ ಬಿಡಿಎ ಎಇಇ ಕುಮಾರ್ ನಿವಾಸ ಸೇರಿದಂತೆ ಹಾಸನದಲ್ಲೂ 2 ಕಡೆಗಳಲ್ಲಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಬೆಂಗಳೂರಿನಲ್ಲಿ 2 ಡಿವೈಎಸ್‍ಪಿ ಮತ್ತು ಹಾಸನದಲ್ಲಿ 2 ಡಿವೈಎಸ್ ಪಿ ನೇತೃತ್ವದಲ್ಲಿ ಅಕ್ರಮ ದಾಖಲೆಗಳ ಶೋಧ ಕಾರ್ಯ ನಡೆಯುತ್ತಿದೆ.