Tag: ac

  • ವಿಧಾನಸಭೆಯಲ್ಲಿನ ಕಂಪ್ಯೂಟರ್, ಎಸಿ, ಪೀಠೋಪಕರಣಗಳನ್ನು ಮನೆಗೆ ಹೊತ್ತೊಯ್ದ ಮಾಜಿ ಸ್ಪೀಕರ್

    ವಿಧಾನಸಭೆಯಲ್ಲಿನ ಕಂಪ್ಯೂಟರ್, ಎಸಿ, ಪೀಠೋಪಕರಣಗಳನ್ನು ಮನೆಗೆ ಹೊತ್ತೊಯ್ದ ಮಾಜಿ ಸ್ಪೀಕರ್

    ಹೈದರಾಬಾದ್: ವಿಧಾನಸಭೆ ಕಟ್ಟಡದಲ್ಲಿನ ಕಂಪ್ಯೂಟರ್, ಎಸಿ ಹಾಗೂ ಪೀಠೋಪಕರಣಗಳನ್ನು ಆಂಧ್ರ ಪ್ರದೇಶದ ಮಾಜಿ ಸ್ಪೀಕರ್ ತಮ್ಮ ಮನೆಗೆ ಹೊತ್ತೊಯ್ದಿರುವ ಅಪರೂಪದ ಘಟನೆ ನಡೆದಿದೆ.

    ಕಳೆದ ವಾರ ಹೈದರಾಬ್‍ನಿಂದ ಅಮರಾವತಿಗೆ ಸ್ಥಳಾಂತರಿಸುವ ಸಂದರ್ಭದಲ್ಲಿ ವಿಧಾನಸಭೆಯ ಕಟ್ಟಡದಲ್ಲಿನ ಕಂಪ್ಯೂಟರ್, ಎಸಿ ಹಾಗೂ ಪೀಠೋಪಕರಣಗಳು ಕಳೆದು ಹೋಗಿವೆ ಎಂದು ಪೊಲೀಸರು ದೂರು ದಾಖಲಿಸಿಕೊಂಡಿದ್ದರು. ಪೊಲೀಸರು ಈ ಕುರಿತು ತನಿಖೆ ಪ್ರಾರಂಭಿಸಿದ್ದು, ಈ ವೇಳೆ ಪೀಠೋಪಕರಣಗಳನ್ನು ಮಾಜಿ ಸ್ಪೀಕರ್ ಕೊದೆಲಾ ಶಿವಪ್ರಸಾದ್ ಅವರ ಸತ್ತೇನಪಲ್ಲಿ ಮನೆಗೆ ತೆಗೆದುಕೊಂಡು ಹೋದ ವಿಚಾರ ಬೆಳಕಿಗೆ ಬಂದಿದೆ.

    ಈ ಕುರಿತು ವಿಧಾನಸಭೆಯ ಕಾರ್ಯದರ್ಶಿ ಮಾಜಿ ಸ್ಪೀಕರ್ ಕೊದೆಲಾ ಶಿವಪ್ರಸಾದ್ ಅವರಿಗೆ ಪತ್ರ ಬರೆದರೂ ಸಹ ಅವರು ಉತ್ತರಿಸಲಿಲ್ಲ. ಸ್ಥಳಾಂತರದ ಲಾಭವನ್ನೇ ಬಳಸಿಕೊಂಡು ಪೀಠೋಪಕರಣಗಳನ್ನು ಹೊತ್ತೊಯ್ದಿದ್ದಾರೆ. ಈ ಮೂಲಕ ಪ್ರಜಾಪ್ರಭುತ್ವದ ಪವಿತ್ರ ಸಂಸ್ಥೆಯ ಉಪಕರಣಗಳನ್ನು ಕದ್ದಿದ್ದಾರೆ ಎಂದು ಮಾಧ್ಯಮಗಳು ವರದಿ ಬಿತ್ತರಿಸಿವೆ. ಆಡಳಿತಾರೂಢ ವೈಎಸ್‍ಆರ್ ಕಾಂಗ್ರೆಸ್‍ನ ಕಾರ್ಯಕರ್ತರು ಈ ಕೃತ್ಯದ ಕುರಿತು ಟೀಕಿಸಿದ್ದು, ಕಳ್ಳತನ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

    ಇಷ್ಟೆಲ್ಲ ಆರೋಪಗಳು ಕೇಳಿ ಬಂದ ನಂತರ, ಕಡೆಗೂ ಮಾಜಿ ಸ್ಪೀಕರ್ ಶಿವಪ್ರಸಾದ್ ಅವರು ಕೆಲ ಉಪಕರಣಗಳನ್ನು ಸತ್ತೇನಪಲ್ಲಿಯ ಕ್ಯಾಂಪ್ ಆಫೀಸ್‍ಗೆ ಸ್ಥಳಾಂತರಿಸಿರುವುದಾಗಿ ಒಪ್ಪಿಕೊಂಡಿದ್ದಾರೆ. ಆದರೆ, ನಾನು ಕದಿಯುವ ದೃಷ್ಟಿಯಿಂದ ಅವುಗಳನ್ನು ಕೊಂಡೊಯ್ದಿಲ್ಲ. ಪೀಠೋಪಕರಣಗಳು ಹಾಗೂ ಕಂಪ್ಯೂಟರ್ ಗಳು ಹಾಳಾಗುತ್ತಿದ್ದವು. ಹೀಗಾಗಿ ಅವುಗಳನ್ನು ಸಂರಕ್ಷಿಸುವ ಉದ್ದೇಶದಿಂದ ನನ್ನ ಕಚೇರಿಗೆ ಸ್ಥಳಾಂತರಿಸಿದೆ. ನನ್ನ ಕಚೇರಿಗೆ ತಂದಿರುವ ಪೀಠೋಪಕರಣಗಳು ಹಾಗೂ ಅದಕ್ಕಾಗುವ ವೆಚ್ಚವನ್ನು ಭರಿಸಲು ಸಿದ್ಧನಿದ್ದೇನೆ ಎಂದು ಶಿವಪ್ರಸಾದ್ ತಿಳಿಸಿದ್ದಾರೆ.

    ಚುನಾವಣೆಯಲ್ಲಿ ಸೋಲನುಭವಿಸಿದ ನಂತರ ಈ ವಸ್ತುಗಳನ್ನು ವಾಪಸ್ ತೆಗೆದುಕೊಂಡು ಹೋಗುವಂತೆ ಅಧಿಕಾರಿಗಳಿಗೆ ತಿಳಿಸಿದ್ದೆ. ಆದರೆ ಈ ಕುರಿತು ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಲಿಲ್ಲ ಎಂದು ತಿಳಿಸಿದ್ದಾರೆ.

    ಆಡಳಿತಾರೂಢ ವೈಎಸ್‍ಆರ್ ಕಾಂಗ್ರೆಸ್‍ನ ಹಿರಿಯ ನಾಯಕರು ತೀವ್ರವಾಗಿ ಟೀಕಿಸಿದ್ದು, ನಾವು ಸ್ಪೀಕರ್ ಅವರಿಗೆ ಅವಮಾನ ಮಾಡುತ್ತಿಲ್ಲ. ಬದಲಿಗೆ ಒಬ್ಬ ಸಾಮಾನ್ಯ ವ್ಯಕ್ತಿ ಈ ಕೆಲಸವನ್ನು ಮಾಡಿದ್ದರೆ ನೀವು ಅವನನ್ನು ಏನೆಂದು ಕರೆಯುತ್ತಿದ್ದಿರಿ. ಕಳ್ಳನೆಂದು ಕರೆಯುತ್ತಿದ್ದಿರಲ್ಲವೇ ಎಂದು ಆಂಧ್ರ ಪ್ರದೇಶದ ಕೃಷಿ ಸಚಿವ ಕಣ್ಣಾ ಬಾಬು ಅವರು ಪ್ರಶ್ನಿಸಿದ್ದಾರೆ.

  • ವಿಶ್ವಕಪ್ ಸಮಯದಲ್ಲೂ ಏರಿಕೆಯಾಗದ ಟಿವಿ ಮಾರಾಟ, ಎಸಿಗಾಗಿ ಮುಗಿಬಿದ್ದ ಜನ

    ವಿಶ್ವಕಪ್ ಸಮಯದಲ್ಲೂ ಏರಿಕೆಯಾಗದ ಟಿವಿ ಮಾರಾಟ, ಎಸಿಗಾಗಿ ಮುಗಿಬಿದ್ದ ಜನ

    ಕೋಲ್ಕತ್ತಾ: ಐಸಿಸಿ ವಿಶ್ವಕಪ್ ಕ್ರಿಕೆಟ್ ಅಬ್ಬರ ಆರಂಭವಾಗಿದ್ದು, ಕ್ರಿಕೆಟ್ ಪ್ರಿಯ ಅಭಿಮಾನಿಗಳನ್ನು ಹೆಚ್ಚು ಹೊಂದಿರುವ ಭಾರತದಲ್ಲಿ ಇದರ ಕ್ರೇಜ್ ಹೆಚ್ಚಾಗಿಯೇ ಇರುತ್ತದೆ. ಈ ಹಿನ್ನೆಲೆಯಲ್ಲೇ ವಿಶ್ವಕಪ್ ಸಮಯದಲ್ಲಿ ಹೊಸ ಟಿವಿಗಳ ಮಾರಾಟ ಕೂಡ ಸಾಮಾನ್ಯವಾಗಿ ಹೆಚ್ಚಾಗುತ್ತದೆ. ಆದರೆ ಈ ಬಾರಿ ಹೆಚ್ಚಾದ ಬಿಸಿಲಿನ ತಾಪಮಾನದಿಂದಾಗಿ ಹೆಚ್ಚು ಮಂದಿ ಟಿವಿ ಖರೀದಿ ಮಾಡುವ ಬದಲು ಎಸಿಗಳ ಖರೀದಿ ಮಾಡಿದ್ದಾರೆ. ಪರಿಣಾಮ ಮಾರುಕಟ್ಟೆಯಲ್ಲಿ ಎಸಿ ಮಾರಾಟ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗಿದೆ.

    ಸಾಮಾನ್ಯವಾಗಿ ವಿಶ್ವಕಪ್ ಟೂರ್ನಿ ಆರಂಭವಾಗುತ್ತಿದಂತೆ ಟಿವಿ ಮಾರಾಟಗಾರ ಸಂಖ್ಯೆಯಲ್ಲೂ ಹೆಚ್ಚಾಗುತ್ತಿತ್ತು. ಆದರೆ ಈ ವರ್ಷ ದೇಶದಲ್ಲಿ ತಾಪಮಾನ ಏರಿಕೆ 40 ಡಿಗ್ರಿ ಸೆಲ್ಸಿಯಸ್ ತಾಪಮಾನದಿಂದಾಗಿ, ಐಸಿಸಿ ವಿಶ್ವಕಪ್ ಆಕರ್ಷಣೆಯ ನಡುವೆಯೂ ಎಸಿ ಖರೀದಿಗೆ ಗ್ರಾಹಕರು ಮುಗಿಬಿದ್ದಿದ್ದಾರೆ.

    2017-18ರಲ್ಲಿ ಎಸಿ ಮಾರಾಟದಲ್ಲಿ ಭಾರೀ ಇಳಿಕೆಯಾಗಿತ್ತು, ಆದರೆ ಈ ಬಾರಿ ಏಪ್ರಿಲ್‍ನಿಂದ ಮೇ ತಿಂಗಳವರೆಗೆ ಎಸಿ ಮಾರಾಟ ಶೇ.18-20ರಷ್ಟು ಹೆಚ್ಚಾಗಿದೆ. ಇದೇ ಟ್ರೆಂಡ್ ಜೂನ್ ಮೊದಲ ವಾರದಲ್ಲೂ ಮುಂದುವರಿಯುತ್ತಿದೆ. ಟೀಂ ಇಂಡಿಯಾ ವಿಶ್ವಕಪ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದರೂ ಟಿವಿ ಮಾರಾಟ ಪ್ರಮಾಣದ ಕೇವಲ ಶೇ.5-8 ರಷ್ಟು ಮಾತ್ರ ಏರಿಕೆಯಾಗಿದೆ.

    ಭಾರೀ ಹೊಡೆತ:
    ವಿಶ್ವಕಪ್ ಪಂದ್ಯಾವಳಿ ವಿಕ್ಷೀಸುವವರ ಸಂಖ್ಯೆ ಭಾರತದಲ್ಲಿ ಹೆಚ್ಚಾಗಿದ್ದರೂ ಕೂಡ ಶೇ.80-90ರಷ್ಟು ಏರಿಕೆಯಾಗುತ್ತಿದ್ದ ಟಿವಿ ಮಾರಾಟ ಪ್ರಮಾಣ ಬಾರಿ ಮಟ್ಟದಲ್ಲಿ ಇಳಿಕೆಯಾಗಿದೆ. ಈ ಬಾರಿ ಕ್ರಿಕೆಟ್ ವೀಕ್ಷಕರ ಸಂಖ್ಯೆ ಹೆಚ್ಚಳವಾಗಿದ್ದರೂ ಸಹ ಟಿವಿ ಖರೀದಿಯಲ್ಲಿ ಮಾತ್ರ ಕುಸಿತದಿಂದ ಎಲೆಕ್ಟ್ರಾನಿಕ್ಸ್ ವ್ಯಾಪಾರಿಗಳಿಗೆ ಹೊಡೆತ ನೀಡಿದೆ.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ಥಾಮ್ಸನ್ ಮತ್ತು ಕೊಡಕ್ ಟಿವಿ ತಯಾರಿಕಾ ಸಂಸ್ಥೆಯ ಸೂಪರ್ ಪ್ಲಾಸ್ಟ್ರೋನಿಕ್ಸ್ ಸಿಇಓ ಅವನೀತ್ ಸಿಂಗ್, ಕಳೆದ ಎರಡು ತಿಂಗಳಿಂದ ಗ್ರಾಹಕರ ಕೊಂಡುಕೊಳ್ಳುವ ಸಾಮರ್ಥ್ಯ ಕಡಿಮೆಯಾಗುತ್ತಲೇ ಇದ್ದು, ಎಸಿ ಖರೀದಿಸಿದ ಬಳಿಕ ಜನ ಬೇರೆ ಉತ್ಪನ್ನಗಳಿಗೆ ಸಾವಿರ ರೂ.ಗಳನ್ನೂ ಖರ್ಚು ಮಾಡಲು ಜನರು ಹಿಂಜರಿಯುತ್ತಾರೆ ಎಂದಿದ್ದಾರೆ.


    ಗ್ರೇಟ್ ಈಸ್ಟರ್ನ್ ರಿಟೇಲ್‍ನ ನಿರ್ದೇಶಕ ಪುಲಕಿತ್ ಬೇದ್ ಮಾತನಾಡಿ, ಒಟ್ಟಾರೆಯಾಗಿ ಕಳೆದ ದೀಪಾವಳಿಯಿಂದಲೂ ಟಿವಿ ಕಂಪನಿಗಳು ಗ್ರಾಹಕರನ್ನು ಸೆಳೆಯಲು ವಿವಿಧ ಪ್ರಯತ್ನಗಳನ್ನು ನಡೆಸುತ್ತಿದೆ. ಟಿವಿ ಮಾರಾಟ ಮೇ ತಿಂಗಳಿನಲ್ಲಿ ಮಾತ್ರ ಶೇ.20ರಷ್ಟು ಹೆಚ್ಚಾಗಿತ್ತು. ಆದರೆ 2018ರ ರಷ್ಯಾದ ಫುಟ್ಬಾಲ್ ಫಿಫಾ ವಿಶ್ವಕಪ್ ಸಮಯ ಸೇರಿದಂತೆ 2018 ರ ಜೂನ್ ನಿಂದ ಮಾರಾಟ ಪ್ರಮಾಣ ಭಾರೀ ಇಳಿಕೆ ಕಂಡಿದೆ ಎಂದಿದ್ದಾರೆ.

    ವಿಜಯ್ ಸೇಲ್ಸ್, ಗ್ರೇಟ್ ಎಲೆಕ್ಟ್ರಾನಿಕ್ಸ್ ಮತ್ತು ಕೊಹಿನೂರ್ ಎಲೆಕ್ಟ್ರಾನಿಕ್‍ಗಳಂತಹ ಉತ್ತಮ ಬ್ರಾಂಡ್‍ಗಳು ಸಹ ಈ ವರ್ಷ ಹೆಚ್ಚಿನ ಪ್ರಚಾರವನ್ನು ಕಂಡಿಲ್ಲ. ಕಂಪನಿಗಳಲ್ಲಿ ಹಳೆಯ ಮಾದರಿ ಟಿವಿ ಗಳಿಂದ ಹೊಸ ಮಾಡೆಲ್‍ಗಳ ಟಿವಿಗಳು ಮಾರಾಟವಾಗದೇ ಹಾಗೆ ಉಳಿದಿವೆ. ಕಳೆದ ಎರಡು ವಿಶ್ವಕಪ್‍ಗಳಲ್ಲಿ ಕ್ರಿಕೆಟ್ ಆಟಗಾರರು ಬ್ರಾಂಡ್‍ಗಳ ಬಗ್ಗೆ ಜಾಹೀರಾತು ನೀಡಿದ್ದರೂ ಮಾರುಕಟ್ಟೆಯಲ್ಲಿ ಕುಸಿತ ಕಂಡಿದೆ ಎಂದು ವಿಜಯ್ ಸೇಲ್ಸ್ ತಿಳಿಸಿದ್ದಾರೆ.

    2015ರ ವಿಶ್ವಕಪ್ ಸಮಯದಲ್ಲಿ 55 ಇಂಚುಗಳ ಪರದೆಯ ಟಿವಿಯ ಮಾರಾಟವನ್ನು ದ್ವಿಗುಣಗೊಂಡಿತ್ತು. ಆದರೆ, ಈ ವರ್ಷದ ವಿಶ್ವಕಪ್ ಸಮಯದಲ್ಲಿ 55 ಇಂಚುಗಳ ಟಿವಿಯ ಮಾರಾಟ ಶೇ.20-25 ರಷ್ಟು ಮಾತ್ರ ಹೆಚ್ಚಾಗಿದೆ. ಅಲ್ಲದೇ 26, 32 ಮತ್ತು 45 ಇಂಚುಗಳ ಪರದೆಯ ಟಿವಿಗೆ ಬಹು ಬೇಡಿಕೆ ಉಂಟಾಗಿದ್ದು, ಮಾರಾಟದಲ್ಲಿ ಶೇ.90ರಷ್ಟು ಏರಿಕೆ ಕಂಡಿದೆ ಎಂದು ಸೋನಿ ಇಂಡಿಯಾ ಕಂಪನಿಯ ಮುಖ್ಯಸ್ಥ ಸಚ್ಚಿನ್ ರೈ ಹೇಳಿದ್ದಾರೆ. ಇತ್ತ ಟೀಂ ಇಂಡಿಯಾ ವಿಶ್ವಕಪ್ ಟೂರ್ನಿಯಲ್ಲಿ ನಾಕೌಟ್ ಹಂತ ತಲುಪಿದರೆ ಬಹುಶಃ ಟಿವಿ ಮಾರಾಟದಲ್ಲಿ ಏರಿಕೆ ಕಾಣಬಹುದೆಂದು ಟಿವಿ ಮಾರಾಟ ಉದ್ಯಮಗಳು ಭರವಸೆ ಹೊಂದಿವೆ.

    ಈ ಬಾರಿಯ ವಿಶ್ವಕಪ್ ಅವಧಿ ಆಫೀಸ್ ಸಮಯದಲ್ಲಿ ನಡೆಯುತ್ತಿದೆ. ಹೀಗಾಗಿ ಕ್ರಿಕೆಟ್ ಪ್ರಿಯರು ತಮ್ಮ ಫೋನ್‍ಗಳಲ್ಲೇ ವೀಕ್ಷಣೆ ಮಾಡುತ್ತಿದ್ದಾರೆ. ಈ ಕಾರಣದಿಂದ ಟಿವಿ ಮಾರುಕಟ್ಟೆಗೆ ಹೊಡೆತ ಬಿದ್ದಿರಬಹುದು ಎನ್ನುವ ವಿಶ್ಲೇಷಣೆ ಕೇಳಿ ಬಂದಿದೆ.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ಲಾಡ್ಜ್‌ನಲ್ಲಿ ಏಸಿ ಬ್ಲಾಸ್ಟ್- ತಪ್ಪಿತು ಭಾರೀ ಅವಘಡ!

    ಲಾಡ್ಜ್‌ನಲ್ಲಿ ಏಸಿ ಬ್ಲಾಸ್ಟ್- ತಪ್ಪಿತು ಭಾರೀ ಅವಘಡ!

    ಚಿಕ್ಕಮಗಳೂರು: ಲಾಡ್ಜ್‌ನಲ್ಲಿದ್ದ ಏಸಿ ಬ್ಲಾಸ್ಟ್ ಆದ ಪರಿಣಾಮ ರೂಂನಲ್ಲಿದ್ದ ಕಾಟ್, ಬೆಡ್ ಹಾಗೂ ಸೋಫಾ ಸೆಟ್ ಸುಟ್ಟು ಕರಕಲಾಗಿರುವ ಘಟನೆ ಲೋಟಸ್ ಲಾಡ್ಜ್‌ನಲ್ಲಿ ನಡೆದಿದೆ.

    ನಗರದ ಐಜಿ ರಸ್ತೆಯಲ್ಲಿರುವ ಲೋಟಸ್ ಹೋಟಲ್‍ನ ರೂಂ ನಂಬರ್ 205ರಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಹೋಟೆಲ್‍ನಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಸಿಬ್ಬಂದಿ ಭಯದಿಂದ ಹೊರ ಓಡಿ ಬಂದಿದ್ದು, ತಕ್ಷಣ ಅಗ್ನಿಶಾಮಕ ದಳದವರಿಗೆ ಫೋನ್ ಮಾಡಿ ಮಾಹಿತಿ ತಿಳಿಸಿದ್ದಾರೆ.

    ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿ ಹೋಟೆಲ್ ಮಾಲೀಕರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಗರದ ಬಹುತೇಕ ಹೋಟೆಲ್ ಮಾಲೀಕರು ಅಗ್ನಿ ಸುರಕ್ಷತಾ ಪತ್ರವನ್ನೇ ಪಡೆದಿಲ್ಲ. ಅಗ್ನಿ ದುರಂತವಾದರೆ ನಾವು ಜವಾಬ್ದಾರರಲ್ಲ, ಕೂಡಲೇ ಅಗ್ನಿ ಸುರಕ್ಷತಾ ಪತ್ರ ಪಡೆಯುವಂತೆ ಹೋಟೆಲ್ ಮಾಲೀಕರಿಗೆ ಮನವಿ ಮಾಡಿದ್ದಾರೆ.

    ಈ ಅವಘಡದಿಂದ ಸದ್ಯ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಈ ಮೂಲಕ ಕೂದಲೆಳೆ ಅಂತರದಲ್ಲಿ ಭಾರೀ ಅನಾಹುತವೊಂದು ತಪ್ಪಿದಂತಾಗಿದೆ.

  • ಎಸಿ ಆನ್ ಮಾಡಿ ಮಲಗಿದ್ದ 8ರ ಮಗ ಸೇರಿ ದಂಪತಿ ದುರ್ಮರಣ

    ಎಸಿ ಆನ್ ಮಾಡಿ ಮಲಗಿದ್ದ 8ರ ಮಗ ಸೇರಿ ದಂಪತಿ ದುರ್ಮರಣ

    ಚೆನ್ನೈ: ಎಸಿಯಿಂದ ಅನಿಲ ಸೋರಿಕೆಯಾಗಿ 8 ವರ್ಷದ ಮಗ ಸೇರಿದಂತೆ ಕುಟುಂಬದ ಮೂವರು ಉಸಿರುಗಟ್ಟಿ ಮೃತಪಟ್ಟ ದುರ್ಘಟನೆ ತಮಿಳುನಾಡಿನ ಚೆನ್ನೈನಲ್ಲಿ ನಡೆದಿದೆ.

    ಚೆನ್ನೈ ಕೊಯಂಬಿಡುನ ತಿರುವಲ್ಲೂವರ್ ನಗರದಲ್ಲಿ ಸೋಮವಾರ ರಾತ್ರಿ ಈ ಘಟನೆ ನಡೆದಿದೆ. 35 ವರ್ಷದ ವ್ಯಕ್ತಿ, ಅವರ ಪತ್ನಿ ಹಾಗೂ 8 ವರ್ಷದ ಮಗು ಮೃತಪಟ್ಟಿದೆ.

    ಆಗಿದ್ದು ಏನು?
    ದಂಪತಿ ಸೋಮವಾರ ರಾತ್ರಿ ಎಸಿ ಹಚ್ಚಿಕೊಂಡು ಮಲಗಿದ್ದಾರೆ. ಈ ವೇಳೆ ಅನಿಲ ಸೋರಿಕೆಯಾಗಿದ್ದು, ಉಸಿರಾಟ ಸಮಸ್ಯೆಯಿಂದಾಗಿ ಮನೆಯಲ್ಲಿಯೇ ಮೃತಪಟ್ಟಿದ್ದಾರೆ. ಮಂಗಳವಾರ ಬೆಳಗ್ಗೆ ಮನೆಯ ಬಾಗಿಲನ್ನು ತೆರೆದಿರಲಿಲ್ಲ. ಹೀಗಾಗಿ ನೆರೆಹೊರೆಯವರು ಶಂಕೆ ವ್ಯಕ್ತಪಡಿಸಿದ್ದಾರೆ. ಬಳಿಕ ಬಾಗಿಲು ಮುರಿದು ನೋಡಿದಾಗ ಮಗು ಹಾಗೂ ದಂಪತಿಯ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ.

    ವಿದ್ಯುತ್ ಕಡಿತವಾಗಿದ್ದರಿಂದ ಮಧ್ಯರಾತ್ರಿ ಇನ್ವರ್ಟರ್ ಮುಖಾಂತರ ಎಸಿ ಆನ್ ಆಗಿದೆ. ಹೀಗಾಗಿ ಎಸಿ ಸಮರ್ಪಕವಾಗಿ ಕಾರ್ಯನಿರ್ವಹಿಸದ ಪರಿಣಾಮ ಅನಿಲ ಸೋರಿಕೆಯಾಗಿದೆ. ಇದರಿಂದಾಗಿ ದಂಪತಿ ಹಾಗೂ ಮಗು ಉಸಿರುಗಟ್ಟಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕಾನ್ಪುರ ಆಸ್ಪತ್ರೆಯಲ್ಲಿ 24 ಗಂಟೆಯೊಳಗೆ 5 ರೋಗಿಗಳು ಸಾವು!

    ಕಾನ್ಪುರ ಆಸ್ಪತ್ರೆಯಲ್ಲಿ 24 ಗಂಟೆಯೊಳಗೆ 5 ರೋಗಿಗಳು ಸಾವು!

    ಕಾನ್ಪುರ: ಉತ್ತರಪ್ರದೇಶದ ಲಾಲಾ ಲಜಪತ್ ರಾಯ್ ಆಸ್ಪತ್ರೆಯಲ್ಲಿ 24 ಗಂಟೆಗಳೊಳಗೆ ಐದು ಮಂದಿ ರೋಗಿಗಳು ಮೃತಪಟ್ಟ ಘಟನೆ ವರದಿಯಾಗಿದೆ.

    ಕಳೆದ ಹಲವು ದಿನಗಳಿಂದ ಸರ್ಕಾರಿ ಆಸ್ಪತ್ರೆಯ ಐಸಿಯುವಿನಲ್ಲಿದ್ದ ಎಸಿ ಸರಿಯಾಗಿ ಕಾರ್ಯನಿರ್ವಹಿಸದೇ ಇರುವುದು ಈ ಅವಘಡಕ್ಕೆ ಕಾರಣ ಅಂತ ಮೃತರ ಸಂಬಂಧಿಗಳು ಆರೋಪಿಸುತ್ತಿದ್ದಾರೆ.

    ಕಳೆದ ಗುರುವಾರದಿಂದ ಆಸ್ಪತ್ರೆಯ ಐಸಿಯು ಕೋಣೆಯಲ್ಲಿದ್ದ ಎಸಿಗಳು ಕಾರ್ಯ ನಿರ್ವಹಿಸುತ್ತಿರಲಿಲ್ಲ. ಈ ಬಗ್ಗೆ ಅಲ್ಲಿನ ಹಿರಿಯ ದಾದಿಯೊಬ್ಬರು ಲಿಖಿತ ದೂರು ನೀಡಿದ್ದರು. ರೋಗಿಗಳು ಇರುವ ಕೊಠಡಿಯ ಕಿಟಕಿ ಮತ್ತು ಬಾಗಿಲು ತೆರೆದಿಡಲಾಗುತ್ತಿದೆ. ಆದ್ರೂ ನಗರದಲ್ಲಿ ವಿಪರೀತ ಸೆಕೆ ಇದ್ದು, ಈ ಗಾಳಿ ಸಾಲುತ್ತಿಲ್ಲ. ಹೀಗಾಗಿ ನಾವು ಕೈಯಲ್ಲೇ ಗಾಳಿ ಬೀಸುವ ಮೂಲಕ ರೋಗಿಗಳಿಗೆ ಸೆಕೆಯಿಂದ ಮುಕ್ತಗೊಳಿಸಲು ಪ್ರಯತ್ನಿಸುತ್ತೇವೆ ಅಂತ ರೋಗಿಗಳ ಸಂಬಂಧಿಕರು ತಿಳಿಸಿದ್ದಾರೆ. ಬುಧವಾರ ಮತ್ತು ಗುರುವಾರ ಸುಡುಬಿಸಿಲು ಇದ್ದುದರಿಂದ ರೋಗಿಗಳು ಸೆಕೆಯಿಂದ ಪರದಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ 5 ಮಂದಿ ರೋಗಿಗಳು ಮೃತಪಟ್ಟಿದ್ದಾರೆ ಅಂತ ವರದಿಯಾಗಿದೆ.

    ಎಸಿಯುನಲ್ಲಿ ಅಳವಡಿಸಿದ್ದ ಎಸಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಆಸ್ಪತ್ರೆ ಒಪ್ಪಿಕೊಂಡಿದೆ. ಆದರೆ ಎಸಿ ಕಾರಣದಿಂದಾಗಿ ಸಾವು ಸಂಭವಿಸಿದೆ ಎಂಬ ಆರೋಪವನ್ನು ನಿರಾಕರಿಸಿದ್ದು, ಐಸಿಯು ರೋಗಿಗಳು ಸ್ಥಿತಿ ಗಂಭೀರವಾಗಿರುತ್ತದೆ. ಜೊತೆಗೆ ನೈಸರ್ಗಿಕ ಕಾರಣಗಳಿಂದಾಗಿ ಸಾವುಗಳು ಸಂಭವಿಸುತ್ತಿವೆ ಎಂದು ಐಸಿಯು ವಿಭಾಗದ ಉಸ್ತುವಾರಿ ಸೌರಬ್ ಅಗರ್ವಾಲ್ ಹೇಳಿದ್ದಾರೆ.

    ಗಣೇಶ ಶಂಕರ್ ವಿದ್ಯಾರ್ಥಿ ಮೆಮೋರಿಯಲ್ ಮೆಡಿಕಲ್ ಕಾಲೇಜಿನ ಮುಖ್ಯಸ್ಥ ಕೂಡಾ ಹೃದಯಾಘಾತ ಮತ್ತು ದೀರ್ಘಕಾಲದ ಅನಾರೋಗ್ಯದ ಕಾರಣದಿಂದ ಸಾವು ಸಂಭವಿಸಿದೆ ಎಂದು ಹೇಳಿದ್ದಾರೆ. ಈ ಕುರಿತು ತನಿಖೆ ಮಾಡಲು ಜಿಲ್ಲಾ ನ್ಯಾಯಾಧೀಶರೊಬ್ಬರಿಗೆ ದೂರು ನೀಡಲಾಗಿದೆ.

    ಈ ಹಿಂದೆ ಉತ್ತರಪ್ರದೇಶ ಗೋರಖ್‍ಪುರದ ಬಿಆರ್‍ಡಿ ಮೆಡಿಕಲ್ ಕಾಲೇಜಿನಲ್ಲಿ ಅನೇಕ ಮಕ್ಕಳು ಆಮ್ಲಜನಕ ಸಿಲಿಂಡರ್ ಕೊರತೆಯ ಕಾರಣದಿಂದಾಗಿ ಮೃತಪಟ್ಟಿದ್ದವು.

  • ವಿಮಾನದಲ್ಲಿ ಪ್ರಯಾಣಿಕರ ಎದುರೇ ಎಸಿ ಕೆಳಗೆ ಒಳಉಡುಪು ಒಣಗಿಸಿದ ಮಹಿಳೆಯ ವಿಡಿಯೋ ವೈರಲ್!

    ವಿಮಾನದಲ್ಲಿ ಪ್ರಯಾಣಿಕರ ಎದುರೇ ಎಸಿ ಕೆಳಗೆ ಒಳಉಡುಪು ಒಣಗಿಸಿದ ಮಹಿಳೆಯ ವಿಡಿಯೋ ವೈರಲ್!

    ಅಂಕಾರಾ: ವಿಮಾನದಲ್ಲಿ ಮಹಿಳೆಯೊಬ್ಬರು ಪ್ರಯಾಣಿಕರೆದುರೇ ಎಸಿ ಕೆಳಗೆ ಒಳಉಡುಪು ಒಣಗಿಸಿದ ಘಟನೆಯೊಂದು ನಡೆದಿದ್ದು, ಇದರ ವಿಡಿಯೋ ಈಗ ವೈರಲ್ ಆಗಿದೆ.

    ಈ ಘಟನೆ ಫೆಬ್ರವರಿ 14 ರಂದು ಟರ್ಕಿಯ ಅಂಟಾಲ್ಯಾ ದಿಂದ ಮಾಸ್ಕೋ ಗೆ ತೆರಳುತ್ತಿದ್ದ ವಿಮಾನದಲ್ಲಿ ನಡೆದಿದೆ. ಮಹಿಳೆ ಒಳಉಡುಪು ಒಣಗಿಸುತ್ತಿರುವ ದೃಶ್ಯವನ್ನು ಹಿಂಬದಿ ಕುಳಿತ ಪ್ರಯಾಣಿಕರೊಬ್ಬರು ಸೆರೆಹಿಡಿದಿದ್ದಾರೆ. ಇದೀಗ ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ವಿಡಿಯೋದಲ್ಲಿ ಮಹಿಳೆ ಒಳಉಡುಪನ್ನು ತನ್ನ ಕೈಯಲ್ಲಿ ಹಿಡಿದುಕೊಂಡು ಎಸಿ ಕೆಳಗಡೆ ಒಣಗಿಸುತ್ತಿರುವುದನ್ನು ಕಾಣಬಹುದು. ಆದ್ರೆ ಮಹಿಳೆ ವಿಮಾನದಲ್ಲಿ ಈ ರೀತಿ ನಡೆದುಕೊಂಡಾಗ ಉಳಿದ ಪ್ರಯಾಣಿಕರಿಗೆ ಅಚ್ಚರಿಯೆನಿಸಿದ್ರೂ, ಮಹಿಳೆಯನ್ನ ಪ್ರಶ್ನಿಸದೇ ಸುಮ್ಮನೆ ಕುಳಿತಿದ್ದರು ಎಂದು ವರದಿಯಾಗಿದೆ.

    ಮಹಿಳೆ ಯಾವುದೇ ಮುಜುಗರವಿಲ್ಲದೇ ಪ್ರಯಾಣಿಕರ ಎದುರೇ ಸುಮಾರು 20 ನಿಮಿಷಗಳ ಕಾಲ ಒಳಉಡುಪು ಕೈಯಲ್ಲಿ ಹಿಡಿದುಕೊಂಡೇ ಎಸಿ ಕೆಳಗಡೆ ಒಣಗಿಸಿದ್ದಾರೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದು, ಮಹಿಳೆಯ ವರ್ತನೆ ಬಗ್ಗೆ ಕಿಡಿಕಾರಿದ್ದಾರೆ.

    https://www.youtube.com/watch?v=xBhL8fc451U

  • ಭೇಟಿ ವೇಳೆ ನನಗೆ ಯಾವುದೇ ವಿಶೇಷ ವ್ಯವಸ್ಥೆ ಬೇಡ: ಅಧಿಕಾರಿಗಳಿಗೆ ಯುಪಿ ಸಿಎಂ ಸೂಚನೆ

    ಭೇಟಿ ವೇಳೆ ನನಗೆ ಯಾವುದೇ ವಿಶೇಷ ವ್ಯವಸ್ಥೆ ಬೇಡ: ಅಧಿಕಾರಿಗಳಿಗೆ ಯುಪಿ ಸಿಎಂ ಸೂಚನೆ

    ಲಕ್ನೋ: ರಾಜ್ಯದ ಪ್ರದೇಶಗಳಿಗೆ ಭೇಟಿ ನೀಡುವ ವೇಳೆ ನನಗೆ ಯಾವುದೇ ವಿಶೇಷ ವ್ಯವಸ್ಥೆಗಳನ್ನು ಮಾಡಬೇಡಿ ಅಂತಾ ಉತ್ತರಪ್ರದೆಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಧಿಕಾರಿಗಳಿಗೆ ಖಡಕ್ಕಾಗಿ ಸೂಚಿಸಿದ್ದಾರೆ.

    ರಾಜ್ಯದ ಜನತೆಯನ್ನು ಗೌರವಿಸಿದ್ರೆ ಸಾಕು. ಅದೇ ಮುಖ್ಯಮಮಂತ್ರಿಗೆ ಗೌರವ ಸೂಚಿಸಿದಂತಾಗುತ್ತದೆ. ಹೀಗಾಗಿ ಪರಿಶೀಲನೆ ಅಥವಾ ರಾಜ್ಯ ಪ್ರವಾಸಕ್ಕೆ ತೆರಳುವ ವೇಳೆ ಯಾವುದೇ ವಿಶೇಷ ಆಯೋಜನೆಗಳನ್ನು ಮಾಡಬೇಡಿ ಎಂದು ಅಧಿಕಾರಿಗಳಿಗೆ ಆದೇಶಿಸಿದ್ದಾರೆ.

    ಇತ್ತೀಚೆಗಷ್ಟೇ ಹುತಾತ್ಮ ಬಿಎಸ್‍ಎಫ್ ಯೋಧರೊಬ್ಬರ ಮನೆಗೆ ಯೋಗಿ ಆದಿತ್ಯನಾಥ್ ಭೇಟಿ ನೀಡಿದ್ದರು. ಈ ವೇಳೆ ಅವರ ಮನೆಯಲ್ಲಿ ಸೋಫಾ, ಎಸಿ, ಕಾರ್ಪೆಟ್ ಗಳನ್ನು ತಂದು ಅಧಿಕಾರಿಗಳು ಹಾಕಿದ್ದರು. ಸಿಎಂ ಮನೆಯಿಂದ ತೆರಳಿದ ತಕ್ಷಣವೇ ಅವುಗಳನ್ನು ಅಲ್ಲಿಂದ ತೆರವುಗೊಳಿಸಿದ್ದರು. ಅಲ್ಲದೇ ಸಿಎಂ ಭೇಟಿ ನೀಡುವ ಹಿನ್ನೆಲೆಯಲ್ಲಿ ಕುಶಿನಗರ ಜಿಲ್ಲಾಡಳಿತ ಅಲ್ಲಿನ ಬುಡಕಟ್ಟು ಜನಾಂದ ಮಂದಿಗೆ ಸೋಪು-ಶಾಂಪು ನೀಡಿ ಸ್ನಾನ ಮಾಡಿಕೊಂಡು ಶುಚಿಯಾಗಿ ಬರುವಂತೆ ಸೂಚಿಸಲಾಗಿತ್ತು. ಈ ಎಲ್ಲಾ ವಿಚಾರ ಮಾಧ್ಯಮಗಳಲ್ಲಿ ವರದಿಯಾಗಿದ್ದು, ಸಿಎಂ ಗಮನಕ್ಕೆ ಬಂದಿದೆ. ವರದಿಗಳನ್ನು ನೋಡಿದ ಯೋಗಿ ಆದಿತ್ಯನಾಥ್ ವಿಶೇಷ ಸಿದ್ಧತೆಗಳನ್ನು ಮಾಡದಂತೆ ಆದೇಶಿಸಿದ್ದಾರೆ.

  • ಹುತಾತ್ಮ ಯೋಧನ ಮನೆಗೆ ಸಿಎಂ ಆದಿತ್ಯನಾಥ್ ಭೇಟಿ- ಸೋಫಾ, ಎಸಿಯೂ ಬಂದ್ವು, ಹೋದ್ವು

    ಹುತಾತ್ಮ ಯೋಧನ ಮನೆಗೆ ಸಿಎಂ ಆದಿತ್ಯನಾಥ್ ಭೇಟಿ- ಸೋಫಾ, ಎಸಿಯೂ ಬಂದ್ವು, ಹೋದ್ವು

    ಶ್ರೀನಗರ: ಜಮ್ಮು-ಕಾಶ್ಮೀರ ಗಡಿಯಲ್ಲಿ ಪಾಕಿಸ್ತಾನದ ದಾಳಿಗೆ ಹುತಾತ್ಮರಾದ ಯೋಧ ಪ್ರೇಮ್‍ಸಾಗರ್ ಅವರ ಮನೆಗೆ ಸಿಎಂ ಯೋಗಿ ಆದಿತ್ಯನಾಥ್ ಭೇಟಿ ನೀಡಿದ ವೇಳೆ ಅವರಿಗಾಗಿ ವಿಶೇಷ ವ್ಯವಸ್ಥೆಗಳನ್ನ ಮಾಡಲಾಗಿದ್ದು, ಇದರಿಂದ ನಮಗೆ ಅವಮಾನವಾಗಿದೆ ಅಂತ ಪ್ರೇಮ್ ಸಾಗರ್ ಕುಟುಂಬದವರು ಹೇಳಿದ್ದಾರೆ.

    ಜಮ್ಮು ಕಾಶ್ಮೀರದ ಗಡಿ ನಿಯಂತ್ರಣಾ ರೇಖೆಯ ಬಳಿ ಪಾಕಿಸ್ತಾನ ಸೈನಿಕರ ಪೈಶಾಚಿಕ ಕೃತ್ಯದಿಂದ ಶಿರಚ್ಛೇಧನಗೊಂಡಿದ್ದ ಯೋಧ ಪ್ರೇಮ್ ಸಾಗರ್ ಅವರ ಮೃತದೇಹವನ್ನು ಅಂತ್ಯಸಂಸ್ಕಾರ ಮಾಡುವುದಿಲ್ಲ ಎಂದು ಕುಟುಂಬಸ್ಥರು ಪಟ್ಟು ಹಿಡಿದಿದ್ದರು. ದಿಯೋರಿಯಾದ ಸಣ್ಣ ಗ್ರಾಮದಲ್ಲಿ ಸುಮಾರು 24 ಗಂಟೆಗಳಿಗೂ ಹೆಚ್ಚಿನ ಕಾಲ ಕುಟುಂಬಸ್ಥರು ಅಂತ್ಯಸಂಸ್ಕಾರ ಮಾಡದೇ ಆಕ್ರೋಶ ವ್ಯಕ್ತಪಡಿಸಿದ್ರು. ಸಿಎಂ ಯೋಗಿ ಆದಿತ್ಯನಾಥ್ ಫೋನ್‍ನಲ್ಲಿ ಕುಟುಂಬದವರೊಂದಿಗೆ ಮಾತನಾಡಿದ ಬಳಿಕ ಅಂತ್ಯಸಂಸ್ಕಾರ ಮಾಡಲಾಗಿತ್ತು.

    ಭಾನುವಾರದಂದು ಯೋಗಿ ಆದಿತ್ಯನಾಥ್ ದಿಯೋರಿಯಾದಲ್ಲಿರುವ ಪ್ರೇಮ್‍ಸಾಗರ್ ಅವರ ಮನೆಗೆ ಭೇಟಿ ನೀಡಿದ್ದರು. ಸಿಎಂ ಬರುವುದಕ್ಕೂ ಮೊದಲು ಮನೆಗೆ ಬಂದ ಅಧಿಕಾರಿಗಳು ಎಸಿ ಅಳವಡಿಸಿದ್ರು, ಸೋಫಾ ಹಾಕಿದ್ರು, ಕಾರ್ಪೆಟ್ ಹಾಕಿದ್ರು. ಯಾವುದೇ ಕಾರಣಕ್ಕೂ ಕರೆಂಟ್ ಕಟ್ ಆಗಬಾರದು ಅಂತಾ ಜನರೇಟರ್ ವ್ಯವಸ್ಥೆ ಮಾಡಿದ್ರು. ಅತ್ತ ಸಿಎಂ ಹೋಗ್ತಿದ್ದಂತೆ ಅಧಿಕಾರಿಗಳು ಮನೆಯಲ್ಲಿ ಅಳವಡಿಸಿದ್ದ ಎಸಿ, ಸೋಫಾ, ಕುರ್ಚಿ, ಜನರೇಟರ್ ಎಲ್ಲವನ್ನೂ ಎತ್ತಿಕೊಂಡು ಹೋದ್ರು ಅಂತ ಪ್ರೇಮ್ ಸಾಗರ್ ಅವರ ಪುತ್ರ ಈಶ್ವರ್ ಹೇಳಿದ್ದಾರೆ.

    ಹುತಾತ್ಮ ಯೋಧ ಪ್ರೇಮ್‍ಸಾಗರ್ ಅವರ ಸಹೋದರ ಕೂಡ ಬಿಎಸ್‍ಎಫ್‍ನಲ್ಲಿ ಕೆಲಸ ಮಾಡುತ್ತಿದ್ದು, ಈ ಘಟನೆಯಿಂದ ನಮಗೆ ಅವಮಾನವಾಗಿದೆ ಎಂದಿದ್ದಾರೆ.

    ಪ್ರೇಮ್ ಸಾಗರ್ ಅವರಿಗೆ 40 ಸಾವಿರ ರೂ. ಸಂಬಳ ಬರುತ್ತಿತ್ತು. ಪ್ರೇಮ್‍ಸಾಗರ್ ಕುಟುಂಬಕ್ಕೆ ಸಿಎಂ ಯೋಗಿ ಆದಿತ್ಯನಾಥ್ ಹಣಕಾಸಿನ ನೆರವು ನೀಡುವ ಭರವಸೆ ನೀಡಿದ್ದರು. ಜೊತೆಗೆ ಕುಟುಂಬದಲ್ಲಿ ಒಬ್ಬರಿಗೆ ಉದ್ಯೋಗ ನೀಡುವುದಾಗಿ ಭರವಸೆ ನೀಡಿದ್ದರು ಎಂದು ವರದಿಯಾಗಿದೆ.

    ಮೇ 1ರಂದು ನಡೆದಿದ್ದ ಗುಂಡಿನ ಕಾಳಗದಲ್ಲಿ ಗಡಿ ಭದ್ರತಾ ಪಡೆಯ ಮುಖ್ಯ ಕಾನ್ಸ್ ಸ್ಟೇಬಲ್ ಆಗಿದ್ದ ಪ್ರೇಮ್ ಸಾಗರ್ ಹಾಗೂ ಯೋಧ ಪರಮ್‍ಜಿತ್ ಸಿಂಗ್ ವೀರಮರಣವನ್ನಪ್ಪಿದ್ದರು. ಪಾಕಿಸ್ತಾನದ ಯೋಧರು ಇವರ ಶಿರಚ್ಛೇದನ ಮಾಡಿ ವಿಕೃತಿ ಮೆರೆದಿದ್ದರು. ತನ್ನ ತಂದೆಯ ಸಾವಿಗೆ ಪ್ರತೀಕಾರವಾಗಿ 50 ತಲೆಗಳು ಬೇಕು ಎಂದು ಪ್ರೇಮ್‍ಸಾಗರ್ ಅವರ ಪುತ್ರಿ ಹೇಳಿದ್ದರು.

  • ಮರಳು ಮಾಫಿಯಾಗೆ ಸಿಂಹಸ್ವಪ್ನವಾಗಿದ್ದ ಸೇಡಂ ಎಸಿ ಭೀಮಾಶಂಕರ್ ವರ್ಗಾವಣೆ

    ಮರಳು ಮಾಫಿಯಾಗೆ ಸಿಂಹಸ್ವಪ್ನವಾಗಿದ್ದ ಸೇಡಂ ಎಸಿ ಭೀಮಾಶಂಕರ್ ವರ್ಗಾವಣೆ

    ಕಲಬುರಗಿ: ಮರಳು ಮಾಫಿಯಾಗೆ ಸಿಂಹಸ್ವಪ್ನವಾಗಿದ್ದ, `ಜನರ ಎಸಿ’ ಅಂತಾನೇ ಖ್ಯಾತಿಯಾಗಿದ್ದ ಸೇಡಂ ಎಸಿ ಭೀಮಾಶಂಕರ್ ತೆಗಳ್ಳಿ ಅವರನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ನೀಡಿದೆ.

    ಭೀಮಾಶಂಕರ್ ತೆಗಳ್ಳಿ ಅವರು ಕಳೆದ ಎರಡು ತಿಂಗಳಲ್ಲಿ 48 ಪ್ರಕರಣ ಪತ್ತೆ ಮಾಡಿದ್ದರು. ಮಾತ್ರವಲ್ಲದೇ 2016ರಲ್ಲಿ 276 ಅಕ್ರಮ ಮರಳು ದಂಧೆ ಪ್ರಕರಣ ದಾಖಲಿಸಿದ್ದರು. ರಾತ್ರಿ ವೇಳೆ ನಡೆಯೋ ಅಕ್ರಮ ಮರಳು ದಂಧೆಗೆ ಬ್ರೇಕ್ ಹಾಕಿದ್ರು.

    ಏಕ ಕಾಲದಲ್ಲಿ ಚಿತ್ತಾಪುರ, ಸೇಡಂ ಮತ್ತು ಚಿಂಚೋಳಿ ಎಸಿಯಾಗಿ ಕರ್ತವ್ಯ ನಿರ್ವಹಣೆ ಮಾಡ್ತಿದ್ದ ಇವರು `ಜನರ ಎಸಿ’ ಅಂತಾನೆ ಖ್ಯಾತಿ ಪಡೆದಿದ್ದರು. ಕಳೆದ ವಾರ ತೆಗಳ್ಳಿ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಇದೀಗ ಭೀಮಾಶಂಕರ್ ಅವರ ವರ್ಗಾವಣೆಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.

    ಸದ್ಯ ಕೃಷ್ಣಾ ಮೇಲ್ದಂಡೆ ಯೋಜನೆ ಭೂ ಸ್ವಾಧೀನ ಅಧಿಕಾರಿಯಾಗಿ ಭೀಮಾಶಂಕರ್ ತೆಗಳ್ಳಿ ವರ್ಗಾವಣೆಗೊಂಡಿದ್ದಾರೆ.