Tag: abu dhabi

  • ಚೆನ್ನೈಗೆ 163 ರನ್ ಟಾರ್ಗೆಟ್

    ಚೆನ್ನೈಗೆ 163 ರನ್ ಟಾರ್ಗೆಟ್

    ಅಬುಧಾಬಿ: ಕ್ರಿಕೆಟ್ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದ ಐಪಿಎಲ್ ಸರಣಿ ಆರಂಭವಾಗಿದ್ದು, ಚೆನ್ನೈ ತಂಡಕ್ಕೆ ಮುಂಬೈ 163 ರನ್ ಗಳ ಗುರಿಯನ್ನು ನೀಡಿದೆ.

    ಚೆನ್ನೈ ಸೂಪರ್ ಕಿಂಗ್ಸ್ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಬ್ಯಾಟ್ ಮಾಡಿದ ಮುಂಬೈ 9 ವಿಕೆಟ್ ನಷ್ಟಕ್ಕೆ 162 ರನ್ ಹೊಡೆಯಿತು. ಆರಂಭಿಕ ಆಟಗಾರರಾಗಿ ರೋಹಿತ್ ಶರ್ಮಾ ಹಾಗೂ ಡಿ ಕುಕ್ ಫೀಲ್ಡಿಗಿಳಿದರು. ರೋಹಿತ್ ಶರ್ಮಾ ಕೇವಲ 10 ಬಾಲ್‍ಗೆ 12 ರನ್ ಗಳಿಸುವ ಮೂಲಕ ಕ್ಯಾಚ್ ನೀಡಿ ಪಿಯೂಶ್ ಚಾವ್ಲಾಗೆ ವಿಕೆಟ್ ಒಪ್ಪಿಸಿದರು. ನಂತರ ಡಿ ಕುಕ್ 20 ಬಾಲ್‍ಗೆ 33 ರನ್ ಗಳಿಸಿ ಔಟಾದರು.

    ಆರಂಭದಲ್ಲಿ ಅಬ್ಬರಿಸಿದ್ದ ಮುಂಬೈ ಇಂಡಿಯನ್ಸ್ ತಂಡ ನಂತರ ಅಷ್ಟೇ ವೇಗದಲ್ಲಿ ವಿಕೆಟ್ ಕಳೆದುಕೊಂಡಿತು. ಕುಕ್ ಬಳಿಕ ಬಂದ ಸೂರ್ಯ ಕುಮಾರ್ ಯಾದವ್ 16 ಬಾಲ್‍ಗೆ 17 ರನ್ ಗಳಿಸಿ ಕ್ಯಾಚ್ ನೀಡಿದರು. ಸೌರಭ್ ತಿವಾರಿ 31 ಬಾಲ್‍ಗೆ 42ರನ್ ಗಳಿಸಿದರೂ ಅರ್ಧ ಶತಕ ಬಾರಿಸಲು ಸಾಧ್ಯವಾಗಲಿಲ್ಲ. ಹಾರ್ದಿಕ್ ಪಾಂಡ್ಯಾ 10 ಬಾಲ್‍ಗೆ 14ರನ್ ಗಳಿಸಿ ಔಟಾದರೆ, ಪೊಲಾರ್ಡ್ 14 ಬಾಲ್‍ಗೆ 18 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು.

    ಬೌಲರ್ ಗಳ ಪೈಕಿ ಲುಂಗಿ ಎನ್‍ಗಿಡಿ 3, ದೀಪಕ್ ಚಹರ್ ಹಾಗೂ ರವೀಂದ್ರ ಜಡೇಜಾ ತಲಾ ಎರಡು ವಿಕೆಟ್ ಪಡೆದರು. ಪಿಯೂಶ್ ಚಾವ್ಲಾ, ಕರಣ್ ತಲಾ ಒಂದು ವಿಕೆಟ್ ಕಿತ್ತರು.

  • ಆರ್‌ಸಿಬಿ ಕ್ಯಾಪ್ಟನ್ ಕೊಹ್ಲಿ ಬಳಿ ಎಬಿಡಿ ಸ್ಪೆಷಲ್ ರಿಕ್ವೆಸ್ಟ್

    ಆರ್‌ಸಿಬಿ ಕ್ಯಾಪ್ಟನ್ ಕೊಹ್ಲಿ ಬಳಿ ಎಬಿಡಿ ಸ್ಪೆಷಲ್ ರಿಕ್ವೆಸ್ಟ್

    ಅಬುಧಾಬಿ: ಐಪಿಎಲ್ 2020ರ ಆವೃತ್ತಿ ಆರಂಭಕ್ಕೆ ಕೆಲ ದಿನಗಳು ಬಾಕಿ ಇರುವ ಸಂದರ್ಭದಲ್ಲಿ ಆರ್‌ಸಿಬಿ ಕ್ಯಾಪ್ಟನ್ ವಿರಾಟ್ ಕೊಹ್ಲಿ ಬಳಿ ಸಹ ಆಟಗಾರ ಎಬಿ ಡಿವಿಲಿಯರ್ಸ್ ವಿಶೇಷ ಮನವಿ ಮಾಡಿದ್ದಾರೆ.

    ಸೆ.19 ರಿಂದ ನ.10 ವರೆಗೂ ಐಪಿಎಲ್ 2020ರ ಪಂದ್ಯಗಳು ನಡೆಯಲಿದೆ. ಸೆ.21 ರಂದು ದುಬೈನಲ್ಲಿ ನಡೆಯಲಿರುವ ಪಂದ್ಯದಲ್ಲಿ ಹೈದರಾಬಾದ್ ತಂಡವನ್ನು ಆರ್‌ಸಿಬಿ ಎದುರಿಸಲಿದೆ. ಕಳೆದ ಎರಡು ಆವೃತ್ತಿಗಳಿಗೆ ಹೋಲಿಸಿದರೆ ಈ ಬಾರಿ ಆರ್‌ಸಿಬಿ ತಂಡ ಸಮತೋಲನದಿಂದ ಕೂಡಿದಂತೆ ಕಾಣಿಸುತ್ತಿದೆ.

    ಇತ್ತೀಚೆಗೆ ತಂಡದ ತರಬೇತಿಯ ವೇಳೆ ಈ ಬಾರಿ ಟೂರ್ನಿಯಲ್ಲಿ ತಮಗೆ ಬೌಲಿಂಗ್ ಮಾಡುವ ಅವಕಾಶ ನೀಡಬೇಕು. ನಾಯಕ ಕೊಹ್ಲಿ ಅಗತ್ಯ ಎನಿಸಿದರೇ 1-2 ಓವರ್ ಬೌಲಿಂಗ್ ಮಾಡಲು ಸಿದ್ಧ. ನಾನು ಉತ್ತಮ ಬೌಲರ್ ಅಲ್ಲದಿದ್ದರೂ, ಹೊಸ ವಿಚಾರಗಳನ್ನು ಕಲಿಯಲು ಇಷ್ಟಪಡುತ್ತೇನೆ ಎಂದು ಎಬಿಡಿ ನಗೆ ಬೀರಿದ್ದಾರೆ. ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಅಭಿಮಾನಿಗಳಿಂದ ಮಿಸ್ಟರ್ 360 ಎಂದು ಕರೆಯಿಸಿಕೊಳ್ಳುವ ಎಬಿಡಿ, ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದಲ್ಲಿ ಕೆಲ ಸಮಯ ವಿಕೆಟ್ ಕೀಪರ್ ಆಗಿಯೂ ಸೇವೆ ಸಲ್ಲಿಸಿದ್ದಾರೆ. ಅಲ್ಲದೇ ಟೆಸ್ಟ್, ಏಕದಿನ ಕ್ರಿಕೆಟ್ ಪಂದ್ಯಗಳಲ್ಲಿ ಬೌಲಿಂಗ್ ಕೂಡ ಮಾಡಿದ್ದಾರೆ.

    ಇದುವರೆಗೂ ಎಬಿಡಿ ಟಿ20 ಮಾದರಿ ಕ್ರಿಕೆಟ್ ನಲ್ಲಿ ಮಾತ್ರ ಬೌಲಿಂಗ್ ಮಾಡಿಲ್ಲ. ಆದ್ದರಿಂದ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಬೌಲಿಂಗ್ ಮಾಡುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ. ಇತ್ತ ಈ ಬಾರಿಯ ಟೂರ್ನಿಯಲ್ಲಿ ಪಾರ್ಥಿವ್ ಪಟೇಲ್ ಬದಲಿಗೆ ಎಬಿಡಿ ಅವರಿಗೆ ತಂಡದ ವಿಕೆಟ್ ಕೀಪಿಂಗ್ ಜವಾಬ್ದಾರಿ ವಹಿಸುವ ಸಾಧ್ಯತೆ ಇದೆ.

  • ಆರ್‌ಸಿಬಿ ಕೊಹ್ಲಿ, ಎಬಿಡಿ ಮೇಲೆ ಅವಲಂಬಿತವಾಗಿಲ್ಲ: ಉಮೇಶ್ ಯಾದವ್

    ಆರ್‌ಸಿಬಿ ಕೊಹ್ಲಿ, ಎಬಿಡಿ ಮೇಲೆ ಅವಲಂಬಿತವಾಗಿಲ್ಲ: ಉಮೇಶ್ ಯಾದವ್

    – ರಣಜಿಯಲ್ಲಿ ಖಾಲಿ ಮೈದಾನದಲ್ಲಿ ಆಡಿ ಅಭ್ಯಾಸವಿದೆ

    ಅಬುಧಾಬಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೇವಲ ನಾಯಕ ವಿರಾಟ್ ಕೊಹ್ಲಿ ಮತ್ತು ಎಬಿ ಡಿವಿಲಿಯರ್ಸ್ ಮೇಲೆ ಅವಲಂಬಿತವಾಗಿದೆ ಎಂಬ ಮಾತನ್ನು ಆರ್‌ಸಿಬಿ  ತಂಡದ ಅನುಭವಿ ವೇಗಿ ಉಮೇಶ್ ಯಾದವ್ ಅವರು ತಳ್ಳಿ ಹಾಕಿದ್ದಾರೆ.

    ಆರ್‌ಸಿಬಿ ತಂಡ ಐಪಿಎಲ್ ಆಡಲು ಈಗಾಗಲೇ ಯುಎಇಗೆ ತೆರಳಿ ಅಭ್ಯಾಸವನ್ನು ಆರಂಭಿಸಿದೆ. ಈ ಬಾರಿ ಕಪ್ ಗೆಲ್ಲುವ ತವಕದಲ್ಲಿ ಭರ್ಜರಿ ಸಿದ್ಧತೆಯನ್ನು ಕೂಡ ನಡೆಸಿದೆ. ಅಂತಯೇ ತಂಡದ ಪ್ರಮುಖ ವೇಗಿ ಉಮೇಶ್ ಯಾದವ್ ಅವರು ಮಾತನಾಡಿ, ರಣಜಿಯಲ್ಲಿ ಖಾಲಿ ಮೈದಾನದಲ್ಲಿ ಆಡಿ ಅಭ್ಯಾಸವಿದೆ ಎಂದು ಹೇಳಿದ್ದಾರೆ.

    ಇದೇ ವೇಳೆ ಆರ್‌ಸಿಬಿ ತಂಡ ಕೊಹ್ಲಿ ಮತ್ತು ಎಬಿ ಡಿವಿಲಿಯರ್ಸ್ ಮೇಲೆ ಜಾಸ್ತಿ ಅವಲಂಬಿತವಾಗಿದೆ ಎಂಬ ಪ್ರಶ್ನೆಗೆ ಉತ್ತರಿಸಿರುವ ಅವರು, ಜನರು ನಾವು ಅವರ ಮೇಲೆ ಅವಲಂಬಿತವಾಗಿದ್ದೇವೆ ಎಂದು ಹೇಳುತ್ತಾರೆ. ಅವರು ಕೆಲ ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ ನಿಜ. ಆದರೆ ಇಡೀ ತಂಡವೇ ಅವರ ಮೇಲೆ ಅವಲಂಬಿತವಾಗಿದೆ ಎಂಬುದನ್ನು ಒಪ್ಪುವುದಿಲ್ಲ. ಒಂದು ಪಂದ್ಯ ಗೆಲ್ಲಬೇಕಾದರೆ ತಂಡದ ಪ್ರತಿಯೊಬ್ಬ ಆಟಗಾರನ ಶ್ರಮವಿರುತ್ತದೆ ಎಂದು ತಿಳಿಸಿದ್ದಾರೆ.

    ತಂಡದಲ್ಲಿ 11 ಜನರು ಒಟ್ಟಿಗೆ ಆಡುತ್ತೇವೆ. ಅದರಲ್ಲಿ ನಾವು ಇಬ್ಬರೇ ಆಟಗಾರರ ಮೇಲೆ ಅವಲಂಬಿತವಾದರೆ, ಇನ್ನುಳಿದ ಆಟಗಾರರು ಏನೂ ಮಾಡುತ್ತಾರೆ. ತಂಡದಲ್ಲಿ ಪ್ರತಿಯೊಬ್ಬ ಆಟಗಾರನೂ ಕೂಡ ಪಂದ್ಯ ಗೆಲ್ಲಲು ತನ್ನದೇ ಆದ ಕೊಡುಗೆ ನೀಡಿರುತ್ತಾನೆ. ಆದರೆ ಕೊಹ್ಲಿ ಮತ್ತು ಎಬಿ ಡಿವಿಲಿಯರ್ಸ್ ಉಳಿದ ಆಟಗಾರರಿಗಿಂತ ಜಾಸ್ತಿ ಕೊಡುಗೆ ನೀಡಿದ್ದಾರೆ ಅಷ್ಟೆ. ತಂಡಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಅವರು ಜಾಸ್ತಿ ಶ್ರಮಪಟ್ಟಿದ್ದಾರೆ ಎಂದು ಉಮೇಶ್ ಯಾದವ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಜೊತೆಗೆ ಖಾಲಿ ಮೈದಾನದಲ್ಲಿ ಐಪಿಎಲ್ ಆಡುವ ಬಗ್ಗೆ ಮಾತನಾಡಿರುವ ಅವರು, ಖಾಲಿ ಮೈದಾನದಲ್ಲಿ ಆಡುವುದು ನಮಗೆ ಹೊಸದೇನಲ್ಲ. ನಾವು ಅದನ್ನು ಯುಎಇಯಲ್ಲಿ ನೋಡಿಲ್ಲ. ಆದರೆ ಭಾರತದಲ್ಲಿ ಬಹಳ ರಣಜಿ ಟ್ರೋಫಿ ಪಂದ್ಯಗಳನ್ನು ಖಾಲಿ ಮೈದಾನದಲ್ಲಿ ಆಡಿದ್ದೇವೆ. ಹಲವಾರು ರಣಜಿ ಪಂದ್ಯದ ನಂತರ ನಾನು ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ಬಂದಿದ್ದೇನೆ. ಹೀಗಾಗಿ ಖಾಲಿ ಮೈದಾನದಲ್ಲಿ ನಮ್ಮನ್ನು ನಾವೇ ಹೇಗೆ ಹುರಿದುಂಬಿಸಿಕೊಳ್ಳಬೇಕು ಎಂದು ಗೊತ್ತಿದೆ ಎಂದಿದ್ದಾರೆ.

    ಆರ್‌ಸಿಬಿ ಕಳೆದ ಅಗಸ್ಟ್ 21ರಂದೇ ಯುಎಇಗೆ ಹೋಗಿದ್ದು, ಆರು ದಿನಗಳ ಕ್ವಾಂರಟೈನ್ ಅವಧಿಯನ್ನು ಮುಗಿಸಿ ಅಭ್ಯಾಸವನ್ನು ಆರಂಭ ಮಾಡಿದೆ. ಸೆಪ್ಟಂಬರ್ 19ರಿಂದ ಖಾಲಿ ಮೈದಾನದಲ್ಲಿ ಐಪಿಎಲ್ ಆರಂಭವಾಗಲಿದೆ. ಮೊದಲ ಪಂದ್ಯ ಮುಂಬೈ ಮತ್ತು ಚೆನ್ನೈ ತಂಡಗಳ ನಡುವೆ ನಡೆಯಬೇಕಿತ್ತು. ಆದರೆ ಚೆನ್ನೈ ತಂಡದಲ್ಲಿ 13 ಮಂದಿಗೆ ಕೊರೊನಾ ಕಾಣಿಸಿಕೊಂಡ ಕಾರಣ ಆರ್‌ಸಿಬಿ ಆರಂಭಿಕ ಪಂದ್ಯವನ್ನು ಮುಂಬೈ ಎದುರು ಆಡಲಿದೆ ಎಂದು ಹೇಳಲಾಗಿದೆ.

  • ಕ್ಯಾಪ್ಟನ್ ತ್ರಯರಿಂದ ಸಾಕಷ್ಟು ಕಲ್ತಿದ್ದೇನೆ: ಕೆಎಲ್ ರಾಹುಲ್

    ಕ್ಯಾಪ್ಟನ್ ತ್ರಯರಿಂದ ಸಾಕಷ್ಟು ಕಲ್ತಿದ್ದೇನೆ: ಕೆಎಲ್ ರಾಹುಲ್

    ಅಬುಧಾಬಿ: ಎಂಎಸ್ ಧೋನಿ, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ನಾಯಕತ್ವ ಲಕ್ಷಣಗಳನ್ನು ಗಮನಿಸಿದ್ದು, ಸಾಕಷ್ಟು ಕಲಿತಿದ್ದೇನೆ. ಈ ಬಾರಿಯ ಟೂರ್ನಿಯಲ್ಲಿ ಅವುಗಳನ್ನು ಅಳವಡಿಸಿಕೊಳ್ಳುತ್ತೇನೆ ಎಂದು ಕಿಂಗ್ಸ್ ಇಲೆವೆನ್ ತಂಡದ ನಾಯಕ ಕೆಎಲ್ ರಾಹುಲ್ ಹೇಳಿದ್ದಾರೆ.

    ಪಂಜಾಬ್ ತಂಡದ ನಾಯಕತ್ವ ವಹಿಸಿಕೊಂಡಿರುವ ಬಗ್ಗೆ ಮಾತನಾಡಿರುವ ಕೆಎಲ್ ರಾಹುಲ್, ಧೋನಿ, ಕೊಹ್ಲಿ ರೋಹಿತ್ ಅವರೊಂದಿಗೆ ಕಳೆದ 10 ವರ್ಷಗಳಿಂದ ಆಡುತ್ತಿದ್ದು, ಅವರ ನಾಯಕತ್ವದಲ್ಲಿ ಆಡಲು ನನಗೆ ಅವಕಾಶ ಲಭಿಸಿದೆ. ಕೊಹ್ಲಿ, ಧೋನಿ ವ್ಯಕ್ತಿಗತವಾಗಿ ಭಿನ್ನವಾಗಿದ್ದರೂ, ತಂಡವನ್ನು ಮುನ್ನಡೆಸುವ ವಿಚಾರದಲ್ಲಿ ಒಂದೇ. ಆದರೆ ಆ ಪದ್ಧತಿಗಳು ಮಾತ್ರ ಬೇರೆ. ಅವರಿಂದ ಸಾಕಷ್ಟು ಕಲಿತಿದ್ದೇನೆ. ಇತ್ತ ಸಾಕಷ್ಟು ಅನುಭವವನ್ನು ಹೊಂದಿರುವ ಟೀಂ ಇಂಡಿಯಾ ಮಾಜಿ ನಾಯಕ ಅನಿಲ್ ಕುಂಬ್ಳೆ ತಂಡದ ಕೋಚ್ ಆಗಿ ತಮ್ಮ ಪಕ್ಕದಲ್ಲೇ ಇರುವುದು ಸಾಕಷ್ಟು ಸಂತಸ ತಂದಿದೆ ಎಂದಿದ್ದಾರೆ.

    ಕೊರೊನಾ ಕಾರಣದಿಂದ ಕ್ರಿಕೆಟ್‍ನಿಂದ ಸಾಕಷ್ಟು ಸಮಯ ದೂರ ಉಳಿದ ಕಾರಣ ಸ್ಪಲ್ಪ ಆತಂಕ ಎದುರಾಗಿತ್ತು. ಆದರೆ ಯಾವುದೇ ರೀತಿಯ ಭಯವಿಲ್ಲ. ಮೂರು ವಾರಗಳಲ್ಲಿ ಲಯಕ್ಕೆ ಮರಳಬೇಕಿದೆ. ಅಲ್ಲದೇ ಮನಸ್ಸು ಮತ್ತು ಶರೀರದ ಸಮನ್ವಯ ಸಾಧಿಸಬೇಕಿದೆ ಎಂದಿದ್ದಾರೆ. ಕೆಎಲ್ ರಾಹುಲ್ ಕಳೆದ ಎರಡು ಆವೃತ್ತಿಗಳಿಂದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಪರ ಆಡುತ್ತಿದ್ದು, ಈ ಬಾರಿಗೆ ಅವರಿಗೆ ತಂಡದ ನಾಯತ್ವದ ಜವಾಬ್ದಾರಿ ವಹಿಸಿಕೊಳ್ಳುವ ಅವಕಾಶ ಲಭಿಸಿದೆ. ಈಗಾಗಲೇ ಟೂರ್ನಿಗಾಗಿ ಯುಎಇಗೆ ತೆರಳಿರುವ ತಂಡದ ಕ್ವಾರಂಟೈನ್ ಅವಧಿಯನ್ನು ಪೂರ್ಣಗೊಳಿಸಿ ತರಬೇತಿಯನ್ನು ಆರಂಭಿಸಿದೆ.

  • ದುಬೈ ರಸ್ತೆ ಅಪಘಾತದಲ್ಲಿ  ಇಬ್ಬರು ಭಾರತೀಯ ವಿದ್ಯಾರ್ಥಿಗಳು ಸಾವು

    ದುಬೈ ರಸ್ತೆ ಅಪಘಾತದಲ್ಲಿ ಇಬ್ಬರು ಭಾರತೀಯ ವಿದ್ಯಾರ್ಥಿಗಳು ಸಾವು

    ಅಬುಧಾಬಿ: ರಸ್ತೆ ಅಪಘಾತದಲ್ಲಿ ಇಬ್ಬರು ಭಾರತೀಯ ವಿದ್ಯಾರ್ಥಿಗಳು ಮೃತಪಟ್ಟ ಘಟನೆ ಬುಧವಾರ ಬೆಳಗ್ಗೆ ನಡೆದಿದೆ.

    ರೋಹಿತ್ ಕೃಷ್ಣಕುಮಾರ್(19) ಹಾಗೂ ಶರತ್ ಕುಮಾರ್ (21) ಮೃತಪಟ್ಟ ವಿದ್ಯಾರ್ಥಿಗಳು. ರೋಹಿತ್ ಹಾಗೂ ಶರತ್ ಮೂಲತಃ ಕೇರಳದವರಾಗಿದ್ದು, ಕ್ರಿಸ್ಮಸ್ ಪಾರ್ಟಿಯಲ್ಲಿ ಭಾಗಿಯಾಗಲು ಹೋಗಿದ್ದರು.

    ಕ್ರಿಸ್ಮಸ್ ಪಾರ್ಟಿಯಲ್ಲಿ ಭಾಗಿಯಾದ ನಂತರ ಶರತ್ ಬುಧವಾರ ನಸುಕಿನ ಜಾವದಲ್ಲಿ ರೋಹಿತ್‍ನನ್ನು ಮನೆಗೆ ಡ್ರಾಪ್ ಮಾಡಲು ಹೋಗುತ್ತಿದ್ದರು. ಈ ವೇಳೆ ಕಾರು ಅಪಘಾತ ಸಂಭವಿಸಿದ್ದು, ಪರಿಣಾಮ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

    ಶರತ್ ಕುಮಾರ್ ತನ್ನ ಉನ್ನತ ಶಿಕ್ಷಣಕ್ಕಾಗಿ ಅಮೆರಿಕಗೆ ತೆರಳಿದ್ದನು. ಇತ್ತ ರೋಹಿತ್ ಕೃಷ್ಣಕುಮಾರ್ ತನ್ನ ಉನ್ನತ ಶಿಕ್ಷಣಕ್ಕಾಗಿ ಲಂಡನ್‍ಗೆ ತೆರಳಿದ್ದನು. ಕ್ರಿಸ್ಮಸ್ ಹಬ್ಬವನ್ನು ಆಚರಿಸಲು ಇಬ್ಬರು ಮಂಗಳವಾರ ರಾತ್ರಿ ದುಬೈಯಲ್ಲಿ ಭೇಟಿ ಆಗಿದ್ದರು.

  • ತಿಳಿಯದೆ ನಿರ್ಲಕ್ಷಿಸಿದ ಬಾಲಕಿಯ ಮನೆಗೆ ಭೇಟಿಕೊಟ್ಟ ಅಬುಧಾಬಿ ರಾಜಕುಮಾರ

    ತಿಳಿಯದೆ ನಿರ್ಲಕ್ಷಿಸಿದ ಬಾಲಕಿಯ ಮನೆಗೆ ಭೇಟಿಕೊಟ್ಟ ಅಬುಧಾಬಿ ರಾಜಕುಮಾರ

    ಅಬುಧಾಬಿ: ಅಬುಧಾಬಿಯ ರಾಜಕುಮಾರ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ತಿಳಿಯದೆ ನಿರ್ಲಕ್ಷಿಸಿ ಬಾಲಕಿಯ ಮನೆಗೆ ಭೇಟಿ ಕೊಟ್ಟು, ಆಕೆಯನ್ನು ಖುಷಿಪಡಿಸಿ ಸರಳತೆ ಮೆರೆದಿದ್ದಾರೆ.

    ದುಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರು ಸೌದಿ ಅರೇಬಿಯಾದ ರಾಜಕುಮಾರ ಮೊಹಮ್ಮದ್ ಬಿನ್-ಸಲ್ಮಾನ್ ಅವರೊಂದಿಗೆ ಭಾಗವಹಿಸಿದ್ದರು. ಅವರನ್ನು ಸ್ವಾಗತಿಸಲು ಪುಟ್ಟ ಪುಟ್ಟ ಬಾಲಕಿಯರು ಎರಡೂ ಕಡೆ ಸಾಲುಗಟ್ಟಿ ನಿಂತಿದ್ದರು.

    ಒಂದು ಕಡೆ ಸೌದಿಯ ರಾಜಕುಮಾರ ಸಲ್ಮಾನ್, ಇನ್ನೊಂದು ಕಡೆ ಅಬುಧಾಬಿಯ ರಾಜಕುಮಾರ ಅಲ್ ನಹ್ಯಾನ್ ನಡೆದು ಬರುತ್ತಿದ್ದರು. ಈ ವೇಳೆ ಬಾಲಕಿಯೊಬ್ಬಳು ಅಲ್ ನಹ್ಯಾನ್ ಅವರ ಕೈಕುಲುಕಲು ಪ್ರಯತ್ನಿಸಿದಳು. ಹೀಗಾಗಿ ಬಿನ್-ಸಲ್ಮಾನ್ ಅವರು ಬರುತ್ತಿದ್ದ ಸಾಲಿನಲ್ಲಿ ನಿಂತಿದ್ದ ಬಾಲಕಿ ತಕ್ಷಣವೇ ಎದುರಿನ ಸಾಲಿನಲ್ಲಿ ಬಂದು ನಿಂತಳು. ಸಾಲಿನಲ್ಲಿ ನಿಂತಿದ್ದ ಅನೇಕ ಮಕ್ಕಳ ಕೈಕುಲುಕತ್ತ ಬಂದ ಅಲ್ ನಹ್ಯಾನ್ ಬಾಲಕಿ ಬಳಿ ಬರುತ್ತಿದ್ದಂತೆ ತಮ್ಮ ಗಮನವನ್ನು ಬೇರೆ ಕಡೆಗೆ ಹರಿಸಿ, ಅಲ್ಲಿಂದ ಮುಂದೆ ಸಾಗಿದರು. ಇದರಿಂದಾಗಿ ಬಾಲಕಿ ನಿರಾಸೆಗೊಂಡಿದ್ದಳು.

    ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ರಾಜಕುಮಾರ ಅಲ್ ನಹ್ಯಾನ್ ಅವರು ವಿಷಯ ತಿಳಿದು, ಬಾಲಕಿ ಆಯೆಷಾ ಮೊಹಮ್ಮದ್ ಮಶೀತ್ ಅಲ್ ಮಜೂರಿ ಮನೆಗೆ ತಲುಪಿ, ಅವಳನ್ನು ಭೇಟಿಯಾದರು. ಈ ವೇಳೆ ಬಾಲಕಿ ಆಯೆಷಾಗೆ ಮುತ್ತಿಟ್ಟು, ಆಕೆಯ ಜೊತೆಗೆ ಫೋಟೋ ತೆಗೆಸಿಕೊಂಡಿದ್ದಾರೆ.

    ರಾಜಕುಮಾರ ಅಲ್ ನಹ್ಯಾನ್ ಆಯೆಷಾ ಜೊತೆಗಿರುವ ಫೋಟೋಗಳನ್ನು ಟ್ವಿಟ್ಟರ್‍ನಲ್ಲಿ ಹಂಚಿಕೊಂಡಿದ್ದಾರೆ. ಇಂದು ನಾನು ಬಾಲಕಿ ಆಯೆಷಾ ಮನೆಗೆ ಭೇಟಿ ನೀಡಿದ್ದೆ. ಅವಳ ಕುಟುಂಬವನ್ನು ಭೇಟಿಯಾಗಿದ್ದು ತುಂಬಾ ಖುಷಿ ತಂದಿದೆ ಎಂದು ಬರೆದುಕೊಂಡಿದ್ದಾರೆ.

    https://twitter.com/7XFIl/status/1201480698563059712

  • 8 ಸಾವಿರ ವರ್ಷದ ಹಿಂದಿನ ಮುತ್ತು ಅಬುಧಾಬಿಯಲ್ಲಿ ಪತ್ತೆ

    8 ಸಾವಿರ ವರ್ಷದ ಹಿಂದಿನ ಮುತ್ತು ಅಬುಧಾಬಿಯಲ್ಲಿ ಪತ್ತೆ

    ಅಬುಧಾಬಿ: ಯುನೈಟೆಡ್ ಅರಬ್ ಎಮಿರೇಟ್ಸ್ ನ ರಾಜಧಾನಿ ಅಬುಧಾಬಿಯಲ್ಲಿ 8 ಸಾವಿರ ಹಿಂದಿನ ಮುತ್ತು ಪತ್ತೆಯಾಗಿದೆ ಎಂದು ಅಬುಧಾಬಿಯ ಪುರಾತತ್ವ ಇಲಾಖೆ ಹೇಳಿದೆ.

    ಈ ಮುತ್ತು ಅಬುಧಾಬಿಯ ಮರಾವಾ ದ್ವೀಪದಲ್ಲಿ ಉತ್ಖನನ ಮಾಡುವಾಗ ಸಿಕ್ಕಿದ ಕೋಣೆಯೊಂದರ ಒಳಗೆ ಈ ಮುತ್ತು ಕಂಡು ಬಂದಿದೆ. ಮುತ್ತನ್ನು ಪರಿಶೀಲನೆ ಮಾಡಿದ ಪುರಾತತ್ವ ಇಲಾಖೆ ಅಧಿಕಾರಿಗಳು ಇದು ನವಶಿಲಾಯುಗ ಅಂದರೆ ಸುಮಾರು ಕ್ರಿ.ಪೂ 5800 – 5600 ಕಾಲದ್ದು ಎಂದು ಹೇಳಿದ್ದಾರೆ.

    ಈ ವಿಚಾರದ ಬಗ್ಗೆ ಮಾತನಾಡಿರುವ ಅಬುಧಾಬಿಯ ಇಲಾಖೆ ಅಧ್ಯಕ್ಷ ಮೊಹಮ್ಮದ್ ಆಲ್ ಮುಬಾರಕ್, ಅಬುಧಾಬಿಯಲ್ಲಿ ವಿಶ್ವದ ಅತ್ಯಂತ ಹಳೆಯ ಮುತ್ತುಗಳ ಆವಿಷ್ಕಾರ ನಮ್ಮ ಇತ್ತೀಚಿನ ಆರ್ಥಿಕ ಮತ್ತು ಸಾಂಸ್ಕೃತಿಕ ಇತಿಹಾಸವು ಆಳವಾದ ಬೇರುಗಳನ್ನು ಹೊಂದಿದೆ. ಈ ಹಿಂದೆ ಮರಾವಾ ತಾಣದಲ್ಲಿ ಉತ್ಖನನ ಮಾಡುವಾಗ ಪಿಂಗಾಣಿ, ಶೆಲ್ ಮತ್ತು ಕಲ್ಲಿನಿಂದ ಮಾಡಿದ ಮಣಿಗಳು, ಬಾಣಗಳು ಸಿಕ್ಕಿದ್ದವು ಎಂದು ಹೇಳಿದರು.

    ಈ ಹಿಂದೆ ಈ ಪ್ರದೇಶದ ಮೂಲಕ ಪ್ರಯಾಣಿಸಿದ ವೆನೆಷಿಯನ್ ಆಭರಣ ವ್ಯಾಪಾರಿ ಗ್ಯಾಸ್ಪರೋ ಬಾಲ್ಬಿ, ಅಬುಧಾಬಿಯ ಕರಾವಳಿಯ ದ್ವೀಪಗಳನ್ನು ಮುತ್ತುಗಳ ಮೂಲವೆಂದು 16 ನೇ ಶತಮಾನದಲ್ಲಿ ಉಲ್ಲೇಖಿಸಿದ್ದಾರೆ. ಮುತ್ತು ಉದ್ಯಮವು ಒಮ್ಮೆ ಯುನೈಟೆಡ್ ಅರಬ್ ಎಮಿರೇಟ್ಸ್ ನ ಆರ್ಥಿಕತೆಗೆ ಆಧಾರವಾಗಿತ್ತು, ಆದರೆ 1930 ರ ದಶಕದಲ್ಲಿ ಜಪಾನಿನ ಸುಸಂಸ್ಕೃತ ಮುತ್ತುಗಳ ಆಗಮನದೊಂದಿಗೆ ವ್ಯಾಪಾರವು ಕುಸಿಯಿತು ಎಂದು ಅಬುಧಾಬಿ ಸಂಸ್ಕೃತ ಇಲಾಖೆ ಹೇಳಿದೆ.

    ಈಗ ಸಿಕ್ಕಿರುವ ಎಂಟು ಸಾವಿರ ವರ್ಷದ ಹಿಂದಿನ ಮುತ್ತನ್ನು ಯುನೈಟೆಡ್ ಅರಬ್ ಎಮಿರೇಟ್ಸ್ ಆಕ್ಟೋಬರ್ 30 ರಂದು ಅಬುಧಾಬಿಯ ಲೌವ್ರೆಯಲ್ಲಿರುವ ಪ್ಯಾರಿಸ್ ಮ್ಯೂಸಿಯಂನಲ್ಲಿ ಮೊದಲ ಬಾರಿಗೆ ಪ್ರದರ್ಶನಕ್ಕೆ ಇಡಲಾಗುತ್ತದೆ ಎಂದು ಇಲಾಖೆ ತಿಳಿಸಿದೆ.

  • ಬಂಪರ್ ಬಹುಮಾನ – 23.18 ಕೋಟಿ ರೂ. ಲಾಟರಿ ಗೆದ್ದ ಸುಳ್ಯದ ಯುವಕ

    ಬಂಪರ್ ಬಹುಮಾನ – 23.18 ಕೋಟಿ ರೂ. ಲಾಟರಿ ಗೆದ್ದ ಸುಳ್ಯದ ಯುವಕ

    ಅಬುಧಾಬಿ: ಸುಳ್ಯ ಮೂಲದ ವ್ಯಕ್ತಿಯೊಬ್ಬರು 12 ದಶಲಕ್ಷ ದಿರ್ಹಾಮ್(23.18 ಕೋಟಿ ರೂ.) ಅಬುಧಾಬಿ ಲಾಟರಿ ಗೆದ್ದು ಸುದ್ದಿಯಾಗಿದ್ದಾರೆ.

    24 ವರ್ಷದ ಮೊಹಮ್ಮದ್ ಫಯಾಜ್ ಜೆ.ಎ. ಮೂಲತಃ ವಾಣಿಜ್ಯ ನಗರಿ ಮುಂಬೈನಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದಾರೆ. ಕೆಲಸದ ವೇಳೆ ರೂಮ್‍ಮೇಟ್ ಜೊತೆ ಲಾಟರಿ ಖರೀದಿಸಲು ಪ್ರಾರಂಭಿಸಿದ್ದರು. ಲಾಟರಿ ಖರೀದಿಸಲು ಪ್ರಾರಂಭಿಸಿ ಕೇವಲ ಆರು ತಿಂಗಳಾಗಿತ್ತು. ಸತತ ಪ್ರಯತ್ನದಿಂದ ಅಬುಧಾಬಿಯ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿನ ಬಿಗ್ ಟಿಕೆಟ್ ರಾಫೆಲ್ ಡ್ರಾದಲ್ಲಿ 23.18 ಕೋಟಿ ರೂ. ಗೆದ್ದಿದ್ದಾರೆ. ಇದನ್ನೂ ಓದಿ: ಲಾಟರಿ ಬಂಪರ್ – ಒಂದೇ ದಿನದಲ್ಲಿ ಕೋಟ್ಯಧಿಪತಿಯಾದ ಸುಳ್ಯದ ವ್ಯಕ್ತಿ!

    ಫಯಾಜ್ ಚಿಕ್ಕ ವಯಸ್ಸಿನಲ್ಲೇ ಹೆತ್ತವರನ್ನು ಕಳೆದುಕೊಂಡಿದ್ದಾರೆ. ಇವರಿಗೆ ಒಬ್ಬ ಸಹೋದರ, ಇಬ್ಬರು ಸಹೋದರಿಯರನ್ನು ಇದ್ದಾರೆ. ಕುಟುಂಬ ನಿರ್ವಹಣೆಗಾಗಿ ಮುಂಬೈನಲ್ಲಿ ಕೆಲಸಕ್ಕೆ ಸೇರಿದ್ದರು.

    ಮೂತ್ರಪಿಂಡದ ಖಾಯಿಲೆಯಿಂದ ನನ್ನ ಪೋಷಕರು ಇಬ್ಬರೂ ತೀರಿಕೊಂಡರು. ನನ್ನ ತಂದೆ ಸೌದಿ ಅರೇಬಿಯಾದಲ್ಲಿ ಬಹಳ ದಿನಗಳ ಕಾಲ ಕೆಲಸ ಮಾಡಿದ್ದರು. 12 ವರ್ಷಗಳಿಗೂ ಹೆಚ್ಚು ಕಾಲ ಮೂತ್ರಪಿಂಡ ವೈಫಲ್ಯದ ವಿರುದ್ಧ ಹೋರಾಡಿದ್ದರು. ನಮ್ಮ ಪೋಷಕರು ತುಂಬಾ ನೋವುಂಡಿದ್ದನ್ನು ನಾವು ನೋಡಿದ್ದೇವೆ. ನಮ್ಮ ಪೋಷಕರು ನಮ್ಮೊಂದಿಗೆ ಇಲ್ಲದಿರುವ ಆಘಾತದಿಂದ ಇನ್ನೂ ಚೇತರಿಸಿಕೊಳ್ಳುತ್ತಿದ್ದೇವೆ. ನನಗೆ ತಂಗಿ ಇದ್ದಾಳೆ, ಅಕ್ಕನ ಮದುವೆಯಾಗಿದೆ. ಮನೆ ನಿರ್ಮಿಸಲು ನಾನು ಸ್ವಲ್ಪ ಜಮೀನನ್ನು ಮಾರಿದ್ದೆವು. ಇದೀಗ ಮನೆ ನಿರ್ಮಿಸುವುದು ಬಾಕಿ ಇದೆ ಎಂದು ಲಾಟರಿ ಹೊಡೆದ ಖುಷಿಯಲ್ಲಿ ಫಯಾಜ್ ತಮ್ಮ ಮನದಾಳ ಹಂಚಿಕೊಂಡಿದ್ದಾರೆ.

    ಕುಟುಂಬದ ಹೊರೆ ನನ್ನ ಮೇಲೆಯೇ ಇದ್ದ ಕಾರಣ ಒಂದು ವರ್ಷದ ಹಿಂದೆ ಕೆಲಸಕ್ಕಾಗಿ ನಾನು ಮುಂಬೈಗೆ ಬಂದೆ. ಇಬ್ಬರು ಮಕ್ಕಳ ತಂದೆಯಾಗಿರುವ ನನ್ನ ಸಹೋದರ ಕರ್ನಾಟಕದಲ್ಲಿ ನಮ್ಮ ಹೊಲ ಮನೆಯನ್ನು ನೋಡಿಕೊಳ್ಳುತ್ತಿದ್ದಾನೆ ಎಂದು ತಿಳಿಸಿದ್ದಾರೆ.

    ಆನ್‍ಲೈನ್ ಮೂಲಕ ಲಾಟರಿ ಖರೀದಿಸುವ ಆಲೋಚನೆಯನ್ನು ನನ್ನ ರೂಮ್‍ಮೇಟ್ ನೀಡಿದ. ಗಡುವು ಮುಗಿದಿದ್ದರಿಂದ ಎರಡು ತಿಂಗಳುಗಳ ಕಾಲ ಲಾಟರಿ ಖರೀದಿಸಲು ಸಾಧ್ಯವಾಗಿರಲಿಲ್ಲ. ಆದರೆ ಈ ಬಾರಿ ಸರಿಯಾದ ಸಮಯಕ್ಕೆ ಖರೀದಿಸಿದೆ. ಸೆಪ್ಟೆಂಬರ್ ಕೊನೆಯ ದಿನ ನಿಜವಾಗಿಯೂ ವಿಜೇತನಾದೆ ಎಂದು ತಿಳಿಸಿದ್ದಾರೆ.

    ಲಾಟರಿ ವಿನ್ ಆಗಿದ್ದಕ್ಕೆ ಬಿಗ್ ಟಿಕೆಟ್ ಡ್ರಾದ ರಿಚರ್ಡ್ ಕಾಲ್ ಮಾಡಿದಾಗ ಫಯಾಜ್ ಮೊಬೈಲ್ ಬ್ಯುಸಿ ಬಂದಿತ್ತು. ಗೆದ್ದಿರುವ ಕುರಿತು ತಿಳಿಸಲು ರಿಚರ್ಡ್ ನಾಲ್ಕು ಬಾರಿ ನನಗೆ ಕರೆ ಮಾಡಿದ್ದರು. ನಂತರ ನನಗೆ ಕಾಲ್ ಕನೆಕ್ಟ್ ಆಗಿದೆ, ಈ ಕುರಿತು ರಿಚರ್ಡ್ ಹೇಳುತ್ತಿದ್ದಂತೆ ಅದೃಷ್ಟವನ್ನು ನಾನು ನಂಬಲಿಲ್ಲ. ನಂತರ ಆನ್‍ಲೈನ್‍ನಲ್ಲಿ ಪರಿಶೀಲಿಸಿದೆ. ಕರೆ ಬರುವುದಕ್ಕೂ ಹಿಂದಿನ ರಾತ್ರಿ ನಾನು ಇದನ್ನು ಗೆಲ್ಲುತ್ತೇನೆ ಎಂಬ ಕನಸು ಕಂಡಿದ್ದೆ. ನನ್ನ ಜೀವನದಲ್ಲಿ ಶೀಘ್ರವೇ ಮಹತ್ತರ ಸಂಗತಿ ನಡೆಯಲಿದೆ ಎಂದು ನನ್ನ ಸ್ನೇಹಿತರಿಗೆ ಹೇಳಿದ್ದೆ ಎಂದು ಫಯಾಜ್ ವಿವರಿಸಿದ್ದಾರೆ.

    ಈ ಹಣದಿಂದ ನಾನು ಏನು ಮಾಡಬೇಕು ಎನ್ನುವದನ್ನು ತೀರ್ಮಾನಿಸಿಲ್ಲ. ಆದರೆ ನನ್ನ ಸಹೋದರನಿಗೆ ಅರ್ಹತೆಗೆ ಅನುಗುಣವಾಗಿ ಕೆಲಸ ಸಿಗಬೇಕು ಎಂಬುದು ನನ್ನ ಆಸೆಯಾಗಿದೆ. ಸಹೋದರ ಎಂಬಿಎ ಪದವೀಧರರಾಗಿದ್ದು, ಕರ್ನಾಟಕದಲ್ಲಿ ಮೀನು ಮಾರುಕಟ್ಟೆಯೊಂದರಲ್ಲಿ ಚಾಲಕರಾಗಿ ಕೆಲಸ ಮಾಡುತ್ತಿದ್ದಾರೆ. ಅಲ್ಲದೆ ಮಾರಾಟ ಮಾಡಿದ್ದ ನಮ್ಮ ಜಮೀನನ್ನು ಮರಳಿ ಪಡೆಯಬೇಕೆಂಬುದು ನನ್ನ ಆಸೆಯಾಗಿದೆ. ಶೀಘ್ರದಲ್ಲೇ ನನ್ನ ಮನೆಯ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸುತ್ತೇನೆ. ನಾನು ಕೆಲವು ಚಾರಿಟಿ ಕೆಲಸವನ್ನು ಮಾಡುತ್ತೇನೆ. ಇನ್ನೂ ಯುಎಇಗೆ ಹೋಗಿಲ್ಲ, ಚೆಕ್ ಸ್ವೀಕರಿಸಲು ಮುಂದಿನ ತಿಂಗಳು ಹೊರಡುತ್ತೇನೆ ಎಂದು ತಿಳಿಸಿದ್ದಾರೆ.

  • ಬರೋಬ್ಬರಿ 7 ಗಂಟೆ ಬಸ್ಸಿನೊಳಗಿದ್ದ 6ರ ಬಾಲಕ ಸಾವು

    ಬರೋಬ್ಬರಿ 7 ಗಂಟೆ ಬಸ್ಸಿನೊಳಗಿದ್ದ 6ರ ಬಾಲಕ ಸಾವು

    ಅಬುಧಾಬಿ: ಹಲವಾರು ಗಂಟೆಗಳ ಕಾಲ ಬಸ್ಸಿನಲ್ಲಿ ಇದ್ದುದ್ದರಿಂದ ಆರು ವರ್ಷದ ಬಾಲಕ ಮೃತಪಟ್ಟಿರುವ ಘಟನೆ ದುಬೈನಲ್ಲಿ ನಡೆದಿದೆ.

    ಮೃತ ಬಾಲಕನನ್ನು ಮೊಹಮ್ಮದ್ ಫರ್ಹಾನ್ ಫೈಸಲ್ ಎಂದು ಗುರುತಿಸಲಾಗಿದೆ. ಬಾಲಕ ಮೂಲತಃ ಕೇರಳದವನಾಗಿದ್ದು, ಅಲ್ ಕ್ವೋಜ್‍ನ ಇಸ್ಲಾಮಿಕ್ ಕೇಂದ್ರದ ವಿದ್ಯಾರ್ಥಿಯಾಗಿದ್ದನು. ಈತ ಶನಿವಾರ ಸುಮಾರು 8 ಗಂಟೆಯಿಂದ ಬಸ್ಸಿನಲ್ಲಿ ಒಬ್ಬನೇ ಇದ್ದುದ್ದರಿಂದ ಮೃತಪಟ್ಟಿದ್ದಾನೆ ಎಂದು ವರದಿಯಾಗಿದೆ.

    ಶನಿವಾರ ಬೆಳಗ್ಗೆ ಶಾಲಾ ಬಸ್ಸಿನಿಂದ ಎಲ್ಲ ವಿದ್ಯಾರ್ಥಿಗಳು ಬೆಳಗ್ಗೆ 8 ಗಂಟೆ ಸುಮಾರಿಗೆ ಇಳಿದಿದ್ದಾರೆ. ಆದರೆ ಬಾಲಕ ಮಾತ್ರ ಬಸ್ಸಿನಲ್ಲಿಯೇ ಉಳಿದುಕೊಂಡಿದ್ದಾನೆ. ಮಧ್ಯಾಹ್ನ 3 ಗಂಟೆಗೆ ವಿದ್ಯಾರ್ಥಿಗಳನ್ನು ಮತ್ತೆ ಮನೆಗೆ ಬಿಡಲೆಂದು ಚಾಲಕ ಬಸ್ ಬಳಿ ಬಂದಿದ್ದಾರೆ. ಆಗ ಬಾಲಕನ ಮೃತದೇಹ ಪತ್ತೆಯಾಗಿದೆ. ನಂತರ ಈ ಬಗ್ಗೆ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಫರ್ಹಾನ್ ಪೋಷಕರು ದುಬೈ ನಿವಾಸಿಗಳಾಗಿದ್ದು, ಅವರ ತಂದೆ ಫೈಸಲ್ ದುಬೈ ಮತ್ತು ಕೇರಳದಲ್ಲಿ ಅನೇಕ ಉದ್ಯಮ ಮಾಡುತ್ತಿದ್ದಾರೆ. ಇವರಿಗೆ ಮೂವರು ಮಕ್ಕಳಿದ್ದು ಫರ್ಹಾನ್ ಕಿರಿಯವನಾಗಿದ್ದಾನೆ. ಈ ವರ್ಷದ ಆರಂಭದಲ್ಲಿ ಅಲ್ ಕ್ವೋಜ್‍ನ ಇಸ್ಲಾಮಿಕ್ ಕೇಂದ್ರಕ್ಕೆ ಸೇರಿದ್ದನು ಎಂದು ವರದಿಯಾಗಿದೆ.

    ಕಳೆದ ವಾರ ನಾನು ಕುಟುಂಬವನ್ನು ಭೇಟಿಯಾಗಿದ್ದೆ. ಆದರೆ ಇದ್ದಕ್ಕಿದ್ದಂತೆ ಆತ ಮೃತಪಟ್ಟಿದ್ದಾನೆ. ಇದರಿಂದ ಕುಟುಂಬದವರು ಆಘಾತಕ್ಕೊಳಗಾಗಿದ್ದಾರೆ ಎಂದು ಮೃತ ಬಾಲಕನ ಆಪ್ತರೊಬ್ಬರು ಹೇಳಿದ್ದಾರೆ.

    ಸ್ಥಳಕ್ಕೆ ಹೋಗಿ ಪ್ರಾಥಮಿಕ ತನಿಖೆಯ ನಂತರ ಮರಣೋತ್ತರ ಪರೀಕ್ಷೆಗಾಗಿ ಸಂಜೆ 6 ಗಂಟೆಗೆ ಮೃತದೇಹವನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ. ಬಾಲಕನ ಸಾವಿಗೆ ಇನ್ನೂ ನಿಖರ ಕಾರಣ ತಿಳಿದು ಬಂದಿಲ್ಲ. ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರ ತಿಳಿಯುತ್ತದೆ. ಕಾನೂನಿನ ಪ್ರಕ್ರಿಯೆಗಳು ಪೂರ್ಣಗೊಂಡ ನಂತರ ಬಾಲಕನ ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

    ಈ ಹಿಂದೆ ಅಂದರೆ 2014 ರಲ್ಲಿ ಇದೇ ರೀತಿಯ ಘಟನೆ ನಡೆದಿತ್ತು. ವಿದ್ಯಾರ್ಥಿಯೊಬ್ಬನನ್ನು ಬಸ್ಸಿನಲ್ಲಿ ಬಿಟ್ಟಿದ್ದರಿಂದ ಉಸಿರುಗಟ್ಟಿ ಮೃತಪಟ್ಟಿದ್ದನು ಎಂದು ವರದಿಯಾಗಿದೆ.

  • ಮಾರ್ಗ ಮಧ್ಯದಲ್ಲೇ ಸಾವನ್ನಪ್ಪಿದ ಭಾರತೀಯ – ತುರ್ತು ಭೂಸ್ಪರ್ಶ ಮಾಡಿದ ವಿಮಾನ

    ಮಾರ್ಗ ಮಧ್ಯದಲ್ಲೇ ಸಾವನ್ನಪ್ಪಿದ ಭಾರತೀಯ – ತುರ್ತು ಭೂಸ್ಪರ್ಶ ಮಾಡಿದ ವಿಮಾನ

    ಅಬುಧಾಬಿ: ಮಾರ್ಗ ಮಧ್ಯದಲ್ಲೇ ಭಾರತೀಯ ಮೂಲದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಕ್ಕೆ ನವದೆಹಲಿಯಿಂದ ಮಿಲನ್‍ಗೆ ಹೊರಟಿದ್ದ ವಿಮಾನ ಯುನೈಟೆಡ್ ಆರಬ್ ಎಮಿರೇಟ್ಸ್ (UAE) ನಲ್ಲಿ ಲ್ಯಾಂಡ್ ಆಗಿದೆ.

    ಇಟಲಿಯಲ್ಲಿ ನೆಲೆಸಿದ್ದ ಭಾರತದ ರಾಜಸ್ಥಾನ ಮೂಲದ ಕೈಲಾಶ್ ಚಂದ್ರ ಸೈನಿ (52) ಮೃತಪಟ್ಟ ವ್ಯಕ್ತಿ. ಕೈಲಾಶ್ ತನ್ನ 26 ವರ್ಷದ ಮಗ ಹೀರಾ ಲಾಲ್ ಸೈನಿಯೊಂದಿಗೆ ನವದೆಹಲಿಯಿಂದ ಮಿಲನ್‍ಗೆ ಹೋಗುವ ಮಾರ್ಗ ಮಧ್ಯದಲ್ಲಿ ಸಾವನ್ನಪ್ಪಿದ್ದಾರೆ. ಕೂಡಲೇ ಅಬುಧಾಬಿಯಲ್ಲಿ ವಿಮಾನವನ್ನು ಲ್ಯಾಂಡ್ ಮಾಡಿ ಅವರನ್ನು ಅಲ್ಲಿಯ ಮಾಫ್ರಾಕ್ ಎಂಬ ಅಸ್ಪತ್ರೆಗೆ ಸೇರಿಸಲಾಗಿತ್ತು. ಕೈಲಾಶ್ ಆಸ್ಪತ್ರೆಗೆ ಬರುವ ಮುನ್ನವೇ ಸಾವನ್ನಪ್ಪಿದ್ದಾರೆ ಎಂದು ವೈದೈರು ತಿಳಿಸಿದ್ದಾರೆ.

    ಈ ವಿಚಾರದ ಬಗ್ಗೆ ಪ್ರತಿಕ್ರಿಸಿರುವ ಯುಎಇಯಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಕೌನ್ಸಿಲರ್ ಎಂ. ರಾಜಮುರುಗನ್ ಅವರು, ಮಂಗಳವಾರ ಸೈನಿ ಅವರ ಮರಣೋತ್ತರ ಪರೀಕ್ಷೆ ನಡೆಸಿ ಮರಣ ಪ್ರಮಾಣ ಪತ್ರವನ್ನು ಯುಎಇ ಸರ್ಕಾರ ನೀಡಿದೆ. ಎತಿಹಾಡ್ ವಿಮಾನದ ಮೂಲಕ ಮೃತದೇಹ ಇಂದು ಭಾರತಕ್ಕೆ ಬರಲಿದೆ ಎಂದು ಹೇಳಿದ್ದಾರೆ.