Tag: aap

  • ನಿತಿನ್ ಗಡ್ಕರಿ ಜೊತೆ ಕ್ಷಮೆ ಕೇಳಿದ ಕೇಜ್ರಿವಾಲ್

    ನಿತಿನ್ ಗಡ್ಕರಿ ಜೊತೆ ಕ್ಷಮೆ ಕೇಳಿದ ಕೇಜ್ರಿವಾಲ್

    ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರಲ್ಲಿ ಕ್ಷಮೆ ಕೇಳಿದ್ದಾರೆ.

    ಈ ಮೂಲಕ ಪಟಿಯಾಲ ಹೌಸ್ ಕೋರ್ಟ್ ನಲ್ಲಿ ಬಾಕಿ ಇರುವ ಮಾನಹಾನಿ ಕೇಸ್ ಹಿಂಪಡೆಯುವ ಸಲುವಾಗಿ ಗಡ್ಕರಿ ಜತೆಗಿನ ಜಂಟಿ ಹೇಳಿಕೆಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.

    “ಸತ್ಯಾಂಶಗಳನ್ನು ಪರಿಶೀಲಿಸದೆಯೇ ನಾನು ನಿಮ್ಮ ವಿರುದ್ಧ ಮಾಡಿರುವ ಆರೋಪಗಳಿಗೆ ವಿಷಾದ ವ್ಯಕ್ತಪಡಿಸಿ ಕ್ಷಮೆಯಾಚಿಸುತ್ತೇನೆ. ದಯವಿಟ್ಟು ಈ ಹಿಂದೆ ನಡೆದ ಘಟನೆಗಳನ್ನು ಮರೆತು ಬಿಡಿ” ಎಂದು ಸಚಿವ ಗಡ್ಕರಿ ಅವರಿಗೆ ಕೇಜ್ರಿವಾಲ್ ಪತ್ರ ಬರೆದಿದ್ದಾರೆ.

    ಲೋಕಸಭಾ ಚುನಾವಣೆಗೂ ಮುನ್ನ ಗಡ್ಕರಿ ಅವರನ್ನು ಉದ್ದೇಶಿಸಿ, ಕೇಜ್ರಿವಾಲ್ ದೇಶದ ಅತಿ ದೊಡ್ಡ ಭ್ರಷ್ಟಾಚಾರಿ ಎಂದು ಆರೋಪಿಸಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ಗಡ್ಕರಿ ಮಾನಹಾನಿ ಕೇಸ್ ಹಾಕಿದ್ದರು.

    ಪಂಜಾಬ್ ಮಾಜಿ ಕಂದಾಯ ಸಚಿವ ಬಿಕ್ರಂ ಸಿಂಗ್ ಮಜೀತಿಯ ಅವರಲ್ಲಿ ಕಳೆದ ವಾರ ಅರವಿಂದ ಕೇಜ್ರಿವಾಲ್ ಅವರು ಕ್ಷಮೆಯಾಚಿಸಿ ಅವರೊಂದಿಗಿನ ಮಾನಹಾನಿ ಕೇಸ್ ಕೋರ್ಟಿನಲ್ಲಿ ಇತ್ಯರ್ಥಪಡಿಸಿಕೊಂಡಿದ್ದರು.

    ಕೇಜ್ರಿವಾಲ್ ವಿರುದ್ಧ 33 ಮಾನನಷ್ಟ ಕೇಸ್ ಗಳು ದಾಖಲಾಗಿದ್ದು, ಈ ಎಲ್ಲ ಕೇಸ್ ಗಳನ್ನು ಹಿಂದಕ್ಕೆ ಪಡೆಯಲು ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ತಾನು ಮಾಡಿದ ಆರೋಪಗಳಿಗೆ ಕ್ಷಮೆ ಕೇಳುವ ಮೂಲಕ ಪ್ರಕರಣಗಳನ್ನು ಇತ್ಯರ್ಥ ಪಡಿಸಲು ಮುಂದಾಗಿದ್ದಾರೆ ಎಂದು ಮಾಧ್ಯಮವೊಂದು ವರದಿ ಪ್ರಕಟಿಸಿದೆ.


  • ಕಳಪೆ ಕಾಮಗಾರಿ ಬಗ್ಗೆ ಪ್ರಶ್ನಿಸಿದಕ್ಕೆ ಆಪ್ ಕಾರ್ಯಕರ್ತರ ವಿರುದ್ಧ ಅನ್ಸಾರಿ ಬೆಂಬಲಿಗರ ವಾಗ್ವಾದ

    ಕಳಪೆ ಕಾಮಗಾರಿ ಬಗ್ಗೆ ಪ್ರಶ್ನಿಸಿದಕ್ಕೆ ಆಪ್ ಕಾರ್ಯಕರ್ತರ ವಿರುದ್ಧ ಅನ್ಸಾರಿ ಬೆಂಬಲಿಗರ ವಾಗ್ವಾದ

    ಕೊಪ್ಪಳ: ಕಳಪೆ ಕಾಮಗಾರಿಯ ಬಗ್ಗೆ ಪ್ರಶ್ನಿಸಿದಕ್ಕೆ ಆಪ್ ಕಾರ್ಯಕರ್ತರ ವಿರುದ್ಧ ರೊಚ್ಚಿಗೆದ್ದ ಶಾಸಕ ಇಕ್ಬಾಲ್ ಅನ್ಸಾರಿ ಬೆಂಬಲಿಗರು ವಾಗ್ವಾದ ನಡೆಸಿರೋ ಘಟನೆ ಜಿಲ್ಲೆಯ ಗಂಗಾವತಿಯಲ್ಲಿ ನಡೆದಿದೆ.

    ಕೊಪ್ಪಳದ ಗಂಗಾವತಿಯ 23ನೇ ವಾರ್ಡ್ ನಲ್ಲಿ ಸಿಸಿ ರಸ್ತೆ ಕಾಮಗಾರಿ ನಡೆದಿತ್ತು. ಆದ್ರೆ ಕಾಮಗಾರಿ ಸಂಪೂರ್ಣ ಕಳಪೆ ಮಟ್ಟದಿಂದ ಕೂಡಿದ್ದು, ಇದನ್ನು ಪ್ರಶ್ನಿಸಿದಕ್ಕೆ ಶಾಸಕ ಅನ್ಸಾರಿ ಬೆಂಬಲಿಗರು, ಇದು ನಮ್ ಏರಿಯಾ… ನಮ್ ಕೆಲಸ ಹೆಂಗಾದ್ರು ಮಾಡ್ಕೋತೀವಿ ಅಂತಾ ಹೇಳಿದ್ದಾರೆ.

    ಇದನ್ನು ವಿರೋಧಿಸಿದ ಆಪ್ ಕಾರ್ಯಕರ್ತರು ಮತ್ತು ಅನ್ಸಾರಿ ಬೆಂಬಲಿಗರ ನಡುವೆ ವಾಗ್ವಾದ ನೆಡೆದಿದೆ. ಸಿಸಿ ರಸ್ತೆಯ ಗುಣಮಟ್ಟದ ಬಗ್ಗೆ ಕೇಳುತ್ತಿದ್ದಂತೆ ಕಾಮಗಾರಿಯನ್ನು ಅರ್ಧಕ್ಕೆ ಬಿಟ್ಟು ಹೋಗಿದ್ದಾರೆ.

  • ಗುಜರಾತ್‍ನಲ್ಲಿ 30 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಆಪ್ ಗತಿ ಏನಾಯ್ತು?

    ಗುಜರಾತ್‍ನಲ್ಲಿ 30 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಆಪ್ ಗತಿ ಏನಾಯ್ತು?

    ನವದೆಹಲಿ: ಗುಜರಾತ್ ಹಾಗೂ ಹಿಮಾಚಲಪ್ರದೇಶ ಚುನಾವಣಾ ಫಲಿತಾಂಶದಲ್ಲಿ ಬಿಜೆಪಿ ಜಯಭೇರಿ ಬಾರಿಸಿದೆ. ಗುಜರಾತ್‍ನಲ್ಲಿ ಬಿಜೆಪಿ ಸತತ 6ನೇ ಬಾರಿ ಸರ್ಕಾರ ರಚಿಸಲು ಸಿದ್ಧವಾಗ್ತಿದೆ. ಹಾಗೆ ಕಾಂಗ್ರೆಸ್ ಕೂಡ ಉತ್ತಮ ಸಾಧನೆ ಮಾಡಿದೆ ಎಂದೇ ಸುದ್ದಿಯಾಗ್ತಿದೆ. ಆದ್ರೆ ಈ ಮಧ್ಯೆ ಗುಜರಾತ್‍ನ ಒಟ್ಟು 182 ಕ್ಷೇತ್ರಗಳಲ್ಲಿ ಸುಮಾರು 30 ಸ್ಥಾನಗಳಿಗೆ ಸ್ಪರ್ಧಿಸಿದ್ದ ಆಮ್ ಆದ್ಮಿ ಪಾರ್ಟಿ ಧೂಳಿಪಟವಾಗಿದೆ.

    2 ವರ್ಷಗಳ ಹಿಂದೆ ದೆಹಲಿಯಲ್ಲಿ ಬಿಜೆಪಿಯನ್ನೇ ಮುಳುಗಿಸಿದ್ದ ಆಪ್ ಈ ಬಾರಿಯ ಗುಜರಾತ್ ಚುನಾವಣೆಯಲ್ಲಿ 2 ಕ್ಷೇತ್ರಗಳಲ್ಲಿ ಸ್ಪರ್ಧೆಯೊಡ್ಡಿದ್ದು ಬಿಟ್ಟರೆ ಉಳಿದ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದಾರೆ. ಅಲ್ಲದೆ ಕೆಲವರಂತೂ ಎರಡಂಕಿ ಮತಗಳನ್ನ ಪಡೆದಿದ್ದಾರೆ.

    ಆಪ್ ತನ್ನ ಇರುವಿಕೆಯನ್ನ ತೋರಿಸಿದ ಮೂರು ಕ್ಷೇತ್ರಗಳೆಂದರೆ ಚೋಟಾ ಉದೇಪುರ್, ವಂಕಾನೇರ್ ಹಾಗೂ ಬಾಪೂನಗರ್. ಚೋಟಾ ಉದೇಪುರ್‍ನಲ್ಲಿ ಆಪ್‍ನ ಅರ್ಜುನ್ ಭಾಯ್ ವಸಿಂಗ್‍ಭಾಯ್ ರತ್ವಾ 4500 ಮತಗಳನ್ನ ಪಡೆದಿದ್ದು, ಗುಜರಾತ್ ನಲ್ಲಿ ಇದೇ ಆಪ್ ನ ಅತ್ಯುತ್ತಮ ಸಾಧನೆ ಎಂದು ವರದಿಯಾಗಿದೆ.

    ಚೋಟಾ ಉದೇಪುರ್ ಕ್ಷೇತ್ರದಲ್ಲಿ ಗೆಲುವಿನ ಅಂತರವನ್ನ ನೋಡಿದಾಗ ರತ್ವಾ ಅವರ ಮತಗಳಿಕೆ ಗಮನಾರ್ಹವಾಗಿದೆ. ಇಲ್ಲಿ ಜಯ ಗಳಿಸಿರೋ ಕಾಂಗ್ರೆಸ್‍ನ ಮೋಹನ್ ಸಿನ್ ಚೋಟುಭಾಯ್ ಬಿಜೆಪಿಯ ಜಶುಭಾಯ್ ಭಿಲುಭಾಯ್ ರತ್ವಾ ಅವರನ್ನ ಕೇವಲ 1000 ಮತಗಳಿಂದ ಸೋಲಿಸಿದ್ದಾರೆ.

    ಅದರಂತೆ ವಾಂಕನೇರ್‍ನಲ್ಲಿ ಆಪ್‍ನ ಶೇರಾಸಿಯಾ ಉಸ್ಮಾಂಗನಿ ಹುಶೇನ್ 3000 ಕ್ಕೆ ಹತ್ತಿರದ ಮತಗಳನ್ನ ಗಳಿಸಿದ್ದಾರೆ. ಇಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದ್ದು, ಮತ್ತೊಮ್ಮೆ ಗೆಲುವಿನ ಅಂತರ 3 ಸಾವಿರ ಮತಗಳಿಗಿಂತ ಕಡಿಮೆ.

    ಇನ್ನು ಪಾಟಿದಾರ್ ಪ್ರಾಬಲ್ಯವಿರೋ ಉಂಜಾ ಕ್ಷೇತ್ರದಲ್ಲಿ ಆಪ್‍ನ ರಮೇಶ್ ಪಟೇಲ್ 8ನೇ ಸ್ಥಾನದಲ್ಲಿದ್ದು, 400ಕ್ಕಿಂತ ಕಡಿಮೆ ಮತ ಪಡೆದಿದ್ದಾರೆ. ಇಲ್ಲಿ ಕಾಂಗ್ರೆಸ್‍ನ ಡಾ. ಆಶಾ ಪಟೇಲ್ 80,927 ಮತಗಳೊಂದಿಗೆ ಗೆಲುವು ಸಾಧಿಸಿದ್ದಾರೆ.

    ವರದಿಗಳ ಪ್ರಕಾರ ಆಪ್ ಸುಮಾರು 30 ಸ್ಥಾನಗಳಿಗೆ ಸ್ಪರ್ಧಿಸಲು ನಿರ್ಧರಿಸಿದ್ದರೂ, 10 ಸ್ಥಾನಗಳ ಮೇಲೆ ಮಾತ್ರ ಗಮನ ಹರಿಸಲು ತೀರ್ಮಾನಿಸಿತ್ತು. ಆಂತರಿಕ ಸಮೀಕ್ಷೆಯ ಪ್ರಕಾರ ಆಪ್ ಈ ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆಂಬ ನಿರೀಕ್ಷೆಯಲ್ಲಿತ್ತು. ಆ ಹತ್ತು ಕ್ಷೇತ್ರಗಳಲ್ಲಿ ಉಂಜಾ, ಚೋಟಾ ಉದೇಪುರ್ ಹೊರತುಪಡಿಸಿ ಉಳಿದ ಕಡೆ ಸ್ಪರ್ಧಿಸಿದ್ದ ಅಭ್ಯರ್ಥಿಗಳು ಹಾಗೂ ಅವರು ಪಡೆದ ಮತಗಳು ಈ ಕೆಳಕಂಡಂತಿವೆ

    ಪಲಂಪುರ್- ನಭಾನಿ ರಮೇಶ್‍ಕುಮಾರ್ ಖೇಮ್‍ರಾಜ್‍ಬಾಯ್ (452 ಮತಗಳು)
    ರಾಜ್‍ಕೋಟ್(ಪೂರ್ವ)- ಅಜಿತ್ ಘುಸಾಭಾಯ್ ಲೋಕಿಲ್(1927 ಮತಗಳು)
    ಗೋಂಡಾಲ್- ಕುಂಟ್ ನಿಮಿಶಾಬೇನ್ ಧೀರಜ್‍ಲಾಲ್(2179 ಮತಗಳು)
    ಲಾತಿ ಎಂಡಿ ಭಾನುಭಾಯ್ ಮಂಜಾರಿಯಾ( 797 ಮತಗಳು)
    ಕಮ್ರೇಜ್- ರಾಮ್ ಧಡುಕ್(1454 ಮತಗಳು)
    ಕರಂಜ್- ಮೆಹ್ತಾ ಜಿಗ್ನೇಶ್ ಧೀರಜ್‍ಲಾಲ್(325 ಮತಗಳು)
    ಪರ್ದಿ ಡಾ ರಾಜೀವ್ ಶಂಭುನಾತ್ ಪಾಂಡೇ ( 539 ಮತಗಳು)
    ಧ್ರಾಂಗಧ್ರಾ- ದಧಾನಿಯಾ ಕಮ್ಲೇಶ್ ಮುಲ್ಜಿಭಾಯ್(505 ಮತಗಳು)

  • ಬಿಜೆಪಿ ಬಿಟ್ಟು ಈ ಪಕ್ಷಗಳಿಗೆ ಮಾತ್ರ ನಿಮ್ಮ ಮತವನ್ನು ನೀಡಿ: ಅರವಿಂದ್ ಕೇಜ್ರಿವಾಲ್

    ಬಿಜೆಪಿ ಬಿಟ್ಟು ಈ ಪಕ್ಷಗಳಿಗೆ ಮಾತ್ರ ನಿಮ್ಮ ಮತವನ್ನು ನೀಡಿ: ಅರವಿಂದ್ ಕೇಜ್ರಿವಾಲ್

    ನವ ದೆಹಲಿ: ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಮತ ಬಾಂಧವರು ಬಿಜೆಪಿ ಪಕ್ಷಕ್ಕೆ ಬಿಟ್ಟು ಬೇರೆ ಪಕ್ಷದ ಅಭ್ಯರ್ಥಿಗಳಿಗೆ ವೋಟ್ ಮಾಡಬೇಕೆಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮನವಿ ಮಾಡಿಕೊಂಡಿದ್ದಾರೆ.

    ಸದ್ಯ ದೇಶದ ಗಮನವೆಲ್ಲಾ ಗುಜರಾತ್ ಚುನವಾಣೆಯತ್ತ ಇದೆ. ಎಲ್ಲ ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷಗಳು ತಮ್ಮ ಅಭ್ಯರ್ಥಿಗಳ ಪರ ಪ್ರಚಾರದಲ್ಲಿ ತೊಡಗಿಕೊಂಡಿವೆ. 182 ಕ್ಷೇತ್ರಗಳಲ್ಲಿ ಆಪ್ ಕೇವಲ ಕೆಲವು ನಿರ್ದಿಷ್ಟ ಕ್ಷೇತ್ರಗಳಲ್ಲಿ ಮಾತ್ರ ಚುನಾವಣಾ ಕಣಕ್ಕೆ ಇಳಿಯುತ್ತಿದೆ. ದೇಶದ ಹಿತ ದೃಷ್ಟಿಯಿಂದ ನಮ್ಮ ಪಕ್ಷದ ಅಭ್ಯರ್ಥಿಗಳು ಪ್ರಬಲರಾಗಿದ್ದರೆ ನಮಗೆ ಮತ ನೀಡಿ ಹಾಗು ಉಳಿದ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿ ಹೊರತುಪಡಿಸಿ ಬೇರೆ ಯಾರಿಗಾದರೂ ನಿಮ್ಮ ಮತವನ್ನು ನೀಡಿ ಎಂದು ಕೇಜ್ರಿವಾಲ್ ಹೇಳಿದ್ದಾರೆ.

    ದೆಹಲಿಯ ರಾಮ್ ಲೀಲಾ ಮೈದಾನದಲ್ಲಿ ನಡೆದ ಆಪ್ ಪಕ್ಷದ ಐದನೇ ವರ್ಷದ ಸಮಾರಂಭದಲ್ಲಿ ಮಾತನಾಡಿದ ಕೇಜ್ರಿವಾಲ್, ನಮ್ಮ ಕ್ಷೇತ್ರದಲ್ಲಿ ಆಪ್ ಅಭ್ಯರ್ಥಿ ಗೆಲವು ಸಾಧಿಸುತ್ತಿದ್ದರೆ ಅವರಿಗೆ ನಿಮ್ಮ ಮತ ನೀಡಿ. ಒಂದು ವೇಳೆ ಬಿಜೆಪಿ ಅಭ್ಯರ್ಥಿ ಬಿಟ್ಟು ಬೇರೆ ಪ್ರಬಲ ಸ್ಪರ್ಧಿಯಿದ್ದರೆ ಅಂತಹವರಿಗೆ ನಿಮ್ಮ ಅಮೂಲ್ಯ ಮತ ನೀಡಿ. ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವುದು ನಮ್ಮ ಗುರಿ ಅಂತಾ ಅಂದ್ರು.

    ಈ ಮೊದಲು ತಮ್ಮ ಭಾಷಣದಲ್ಲಿ ಈ ಹಿಂದೆ ಕಾಂಗ್ರೆಸ್ ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡಲು ಆಪ್ ಪಕ್ಷದ ಸ್ಥಾಪನೆ ಮಾಡಲಾಗಿತ್ತು. ಆದರೆ ಇಂದು ಬಿಜೆಪಿ ಅದಕ್ಕಿಂತ ಹೆಚ್ಚು ಭ್ರಷ್ಟಾಚಾರದಲ್ಲಿ ತೊಡಗಿಕೊಂಡಿದ್ದು, ಅದರ ವಿರುದ್ಧ ಹೋರಾಟ ನಡೆಸಬೇಕಿದೆ ಎಂದು ಕೇಜ್ರಿವಾಲ್ ಕಾಂಗ್ರೆಸ್ ಮತ್ತು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದರು.

    ಮತ್ತೆ ಟ್ವಿಟರ್ ನಲ್ಲಿ ಗುಜರಾತ್ ರಾಜ್ಯದ ಜನರು ನಿಮ್ಮ ಮತಗಳನ್ನು ವಿಭಜಿಸಿಕೊಳ್ಳಬೇಡಿ ಎಂದು ಕೇಜ್ರಿವಾಲ್ ಮತ್ತೊಮ್ಮೆ ಮನವಿ ಮಾಡಿದ್ದಾರೆ.

    https://twitter.com/Amitjanhit/status/934755171632078848

  • ಗುಜರಾತ್ ಚುನಾವಣೆ-ಹಾರ್ದಿಕ್ ಪಟೇಲ್‍ಗೆ ಆಹ್ವಾನ ನೀಡಿದ ಕಾಂಗ್ರೆಸ್

    ಗುಜರಾತ್ ಚುನಾವಣೆ-ಹಾರ್ದಿಕ್ ಪಟೇಲ್‍ಗೆ ಆಹ್ವಾನ ನೀಡಿದ ಕಾಂಗ್ರೆಸ್

    ಗಾಂಧಿನಗರ: ಗುಜರಾತ್ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲವು ಸಾಧಿಸಲು ಶತಯಗಾತಯ ನಿರ್ಧರಿಸಿದಂತಿದ್ದು, ಹೊಸ ಬೆಳವಣಿಗೆಯೊಂದರಲ್ಲಿ ಗುಜರಾತ್ ಜಾಟ್ ಸಮುದಾಯದ ಮುಖಂಡ ಹಾರ್ದಿಕ್ ಪಟೇಲ್ ಅವರಿಗೆ ಪಕ್ಷಕ್ಕೆ ಆಹ್ವಾನವನ್ನು ನೀಡಿದೆ.

    ಹಾರ್ದಿಕ್ ಪಟೇಲ್ ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತು ತೀರ್ಮಾನವನ್ನು ಕೈಗೊಂಡರೆ ಪಕ್ಷದಿಂದ ಟಿಕೆಟ್ ನೀಡುವುದಾಗಿಯು ತಿಳಿಸಿದ್ದು, ಪಟೇಲ್ ಅವರ ಹೋರಾಟ ಹಾಗೂ ಬೇಡಿಕೆಗಳಿಗೆ ನಮ್ಮ ಬೆಂಬಲವಿದೆ ಎಂದು ಕಾಂಗ್ರೆಸ್ ತಿಳಿಸಿದೆ.

    ಗುಜರಾತ್ ಚುನಾವಣೆಯನ್ನು ಪ್ರತಿಷ್ಠೆಯ ಕಣವಾಗಿ ಸ್ವೀಕರಿಸಿರುವ ಕಾಂಗ್ರೆಸ್, ರಾಜ್ಯದ ಪ್ರಬಲ ಸಮುದಾಯದ ನಾಯಕರನ್ನು ಭೇಟಿ ಮಾಡಿ ಬೆಂಬಲವನ್ನು ಕೋರಿದೆ. ಪ್ರಮುಖವಾಗಿ ಪಟೇಲ್ ಸಮುದಾಯಕ್ಕೆ ಮೀಸಲಾತಿಯನ್ನು ಕೋರಿ ಹೋರಾಟವನ್ನು ನಡೆಸಿದ್ದ ಹಾರ್ದಿಕ್ ಪಟೇಲ್, ಠಾಕೋರ್ ಸಮುದಾಯದ ನಾಯಕರದ ಅಲ್ಪೇಸ್ ಠಾಕೋರ್ ಮತ್ತು ದಲಿತ ಸಮುದಾಯದ ನಾಯಕರಾದ ಜಿಗ್ನೇಶ್ ಮೇವಾನಿ ಅವರ ಬೆಂಬಲವನ್ನು ಪಡೆದು ಆಡಳಿತರೂಢ ಬಿಜೆಪಿ ಸರ್ಕಾರವನ್ನು ಸೋಲಿಸಲು ಕಾರ್ಯ ತಂತ್ರರೂಪಿಸಿದೆ.

    ಕಾಂಗ್ರೆಸ್ ಪ್ರಬಲ ಸಮುದಾಯಗಳ ಬೆಂಬಲ ಮಾತ್ರವಲ್ಲದೆ, ಚುನಾವಣಾ ಪೂರ್ವ ಮೈತ್ರಿಯನ್ನು ಮಾಡಿಕೊಳ್ಳುವ ಸಾಧ್ಯತೆಗಳಿದ್ದು, ಎನ್‍ಸಿಪಿ ಯ ಶರತ್ ಪವರ್ ಮತ್ತು ಜೆಡಿಯು ನ ವಾಸಾವ ಅವರೊಂದಿಗೆ ಮಾತುಕತೆಯನ್ನು ನಡೆಸಿದೆ. ಈ ಕುರಿತು ಮಾಹಿತಿಯನ್ನು ನೀಡಿದ ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ಭರತೀಶ್ ಸೋಲಂಕಿ, ಈ ಬಾರಿಯ ಚುನಾವಣೆಯಲ್ಲಿ ಸುಲಭವಾಗಿ 125 ಸ್ಥಾನಗಳನ್ನು ಗೆಲ್ಲುತ್ತೇವೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

    ಕೆಲ ದಿನಗಳ ಹಿಂದೆ ಗುಜರಾತ್‍ನಲ್ಲಿ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಹಲವು ನಾಯಕರು ಬಿಜೆಪಿ ಪರ ಮತ ಚಲಾಯಿಸಿದರು ಸಹ ನಂತರದ ಬೆಳವಣಿಗೆಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲವನ್ನು ನೀಡುವುದಾಗಿ ತಿಳಿಸಿದ್ದರು. ಇದರಲ್ಲಿ ಪ್ರಮುಖವಾಗಿ ಜೆಡಿಯು ಎಂಎಲ್‍ಎ ವಾಸಾವ ಬಿಜೆಪಿ ಪಕ್ಷದ ಆಡಳಿತ ಕ್ರಮ ವಿರುದ್ಧ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು.

    ಸೋಲಂಕಿಯವರು ಆಪ್ ಪಕ್ಷ ರಾಜ್ಯ ನಾಯಕರೊಂದಿಗೂ ನಿರಂತರವಾಗಿ ಸಂಪರ್ಕದಲ್ಲಿದ್ದು, ಅವರ ಬೆಂಬಲವನ್ನು ಪಡೆಯುವ ನಿರೀಕ್ಷೆಯನ್ನು ವ್ಯಕ್ತಪಡಿಸಿದರು. ಅಲ್ಲದೇ ಪಕ್ಷದಲ್ಲಿ ಉತ್ತಮ ಹಾಗೂ ಪ್ರಬಲ ಸದಸ್ಯರಿಗೆ ಟಿಕೆಟ್ ನೀಡಲಾಗುತ್ತದೆ ಎಂದು ತಿಳಿಸಿದರು. ಗುಜರಾತ್ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ಕಳೆದ 22 ವರ್ಷಗಳಿಂದ ಅಧಿಕಾರವನ್ನೇ ಪಡೆದಿಲ್ಲ.

  • ಮಾನನಷ್ಟ ಕೇಸ್: ಕೇಜ್ರಿ ಪರ ವಾದದಿಂದ ಹಿಂದಕ್ಕೆ ಸರಿದ ಜೇಠ್ಮಲಾನಿ

    ಮಾನನಷ್ಟ ಕೇಸ್: ಕೇಜ್ರಿ ಪರ ವಾದದಿಂದ ಹಿಂದಕ್ಕೆ ಸರಿದ ಜೇಠ್ಮಲಾನಿ

    ನವದೆಹಲಿ: ಹಣಕಾಸು ಸಚಿವ ಅರುಣ್ ಜೇಟ್ಲಿ ಹೂಡಿರುವ ಮಾನನಷ್ಟ ಪ್ರಕರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಪರ ವಾದ ಮಾಡದೇ ಇರಲು ಖ್ಯಾತ ವಕೀಲ ರಾಮ್ ಜೇಠ್ಮಲಾನಿ ನಿರ್ಧರಿಸಿದ್ದಾರೆ.

    ಈ ಸಂಬಂಧ ಕೇಜ್ರಿವಾಲ್ ಗೆ ಪತ್ರ ಬರೆದಿರುವ ರಾಮ್ ಜೇಠ್ಮಲಾನಿ ಈ ಪ್ರಕರಣದ ವಾದದಿಂದ ಹಿಂದಕ್ಕೆ ಸರಿಯುತ್ತಿದ್ದೇನೆ. ಈ ಪ್ರಕರಣದಲ್ಲಿ ವಾದಿಸಿದ್ದಕ್ಕೆ ಶುಲ್ಕವಾಗಿ 2 ಕೋಟಿ ರೂ. ಹಣವನ್ನು ಪಾವತಿಸಬೇಕು ಎಂದು ಕೇಳಿದ್ದಾರೆ.

    ಈ ವಿಚಾರವಾಗಿ ಜೇಠ್ಮಲಾನಿ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದು, ಕೇಜ್ರಿವಾಲ್ ನನಗೆ ಪತ್ರ ಬರೆದಿದ್ದು, ಈ ಪತ್ರಕ್ಕೆ ನಾನು ಪ್ರತಿಕ್ರಿಯೆ ನೀಡಿದ್ದೇನೆ. ಆದರೆ ಈ ಪತ್ರದಲ್ಲಿರುವ ವಿಚಾರವನ್ನು ನಾನು ಬಹಿರಂಗ ಪಡಿಸುವುದಿಲ್ಲ. ನೀವು ಬೇಕಾದರೆ ಕೇಜ್ರಿವಾಲ್ ಅವರನ್ನು ಈ ಪತ್ರದ ವಿಚಾರವಾಗಿ ಪ್ರಶ್ನೆ ಮಾಡಬಹುದು. ನಾನು ಈ ವಿಚಾರವನ್ನು ಸಾರ್ವಜನಿಕವಾಗಿ ತಿಳಿಸುವುದಿಲ್ಲ ಎಂದು ಅವರಿಗೆ ಭಾಷೆ ನೀಡಿದ್ದೇನೆ ಎಂದು ಹೇಳಿದ್ದಾರೆ.

    ಈ ಪ್ರಕರಣದ ಬಗ್ಗೆ ಚರ್ಚೆ ನಡೆಸುತ್ತಿರುವಾಗ ನೀವು, ನಾನು ಕೋರ್ಟ್ ನಲ್ಲಿ ಬಳಸಿದ ಪದಕ್ಕಿಂತಲೂ ಹೆಚ್ಚಿನ ಆಕ್ಷೇಪಾರ್ಹ ಪದವನ್ನು ಬಳಸಿದ್ದೀರಿ ಎನ್ನುವ ವಿಚಾರವನ್ನು ಜೇಠ್ಮಲಾನಿ ಪತ್ರದಲ್ಲಿ ಬರೆದಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ.

    ಏನಿದು ಪ್ರಕರಣ?
    ಅರುಣ್ ಜೇಟ್ಲಿ ದೆಹಲಿ ಜಿಲ್ಲಾ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆಪ್ ಆರೋಪಿಸಿತ್ತು. ಇದರ ವಿರುದ್ಧ ಅರುಣ್ ಜೇಟ್ಲಿ, ಅರವಿಂದ ಕೇಜ್ರಿವಾಲ್, ಕುಮಾರ್ ವಿಶ್ವಾಸ್, ಸಂಜಯ್ ಸಿಂಗ್, ರಾಘವ್ ಚಡ್ಡಾ, ಅಶುತೋಶ್ ಹಾಗೂ ದೀಪಕ್ ಬಾಜ್ಪೈ ಅವರ ಮೇಲೆ ಸಿವಿಲ್ ಹಾಗೂ ಕ್ರಿಮಿನಲ್ ಸೇರಿದಂತೆ ಎರಡು ಮಾನನಷ್ಟ ಮೊಕದ್ದಮೆ ಹಾಕಿದ್ದರು. ಸುಳ್ಳು ಹೇಳಿಕೆ ನೀಡಿ ಘನತೆಗೆ ಧಕ್ಕೆ ತಂದ ಆರೋಪದ ಮೇಲೆ 10 ಕೋಟಿ ರೂ. ಪರಿಹಾರ ನೀಡುವಂತೆ ಕೇಜ್ರಿವಾಲ್ ಹಾಗೂ ಇತರೆ ಮುಖಂಡರ ಮೇಲೆ ಸಿವಿಲ್ ಕೇಸ್ ಹಾಕಿದ್ದರು.

    ಈ ಪ್ರಕರಣದಲ್ಲಿ ಕೇಜ್ರಿವಾಲ್ ಪರ ರಾಮ್ ಜೇಠ್ಮಲಾನಿ ವಕಾಲತ್ತು ವಹಿಸಿದ್ದರು. ದೆಹಲಿ ಹೈಕೋರ್ಟ್ ನಲ್ಲಿ ಮೇ 17ರಂದು ನಡೆದ ವಿಚಾರಣೆ ವೇಳೆ ಜೇಠ್ಮಲಾನಿ ಜೇಟ್ಲಿ ವಿರುದ್ಧ ಆಕ್ಷೇಪಾರ್ಹ ಪದವನ್ನು ಬಳಕೆ ಮಾಡಿದ್ದರು. ಕೋರ್ಟ್ ನಲ್ಲಿ ಆಕ್ಷೇಪಾರ್ಹ ಪದ ಬಳಕೆ ಮಾಡಿರುವ ಸಂಬಂಧ ಅರುಣ್ ಜೇಟ್ಲಿ ಅವರು ಕೇಜ್ರಿವಾಲ್ ವಿರುದ್ಧ ಮತ್ತೊಂದು ಮಾನನಷ್ಟ ಮೊಕದ್ದಮೆ ದಾಖಲಿಸಿ, 10 ಕೋಟಿ ಪರಿಹಾರಕ್ಕೆ ಆಗ್ರಹ ಮಾಡಿದ್ದರು.

    ಈ ಕೇಸ್ ದಾಖಲಾದ ಬಳಿಕ ಅರವಿಂದ್ ಕೇಜ್ರಿವಾಲ್ ಕೋರ್ಟ್ ಗೆ ಅಫಿಡವಿತ್ ಸಲ್ಲಿಸಿದ್ದರು. ನಾನು ಅರುಣ್ ಜೇಟ್ಲಿ ಪರ ಆಕ್ಷೇಪಾರ್ಹ ಪದವನ್ನು ಬಳಕೆ ಮಾಡುವಂತೆ ಯಾವುದೇ ಸೂಚನೆ ನೀಡಿರಲಿಲ್ಲ. ಒಬ್ಬ ಹಿರಿಯ ವಕೀಲರಿಗೆ ನಾನು ಆಕ್ಷೇಪಾರ್ಹ ಪದವನ್ನು ಬಳಸುವಂತೆ ಸೂಚನೆ ನೀಡಲು ಸಾಧ್ಯವೇ ಎಂದು ಅಫಿಡವಿತ್‍ನಲ್ಲಿ ತಿಳಿಸಿದ್ದರು.

    ಕೇಜ್ರಿವಾಲ್ ಪರ ವಾದ ಮಾಡುವುದಕ್ಕೆ ನಾನು ಯಾವುದೇ ಶುಲ್ಕವನ್ನು ಪಡೆಯುವುದಿಲ್ಲ ಎಂದು ಜೇಠ್ಮಲಾನಿ ಈ ಹಿಂದೆ ತಿಳಿಸಿದ್ದರು. ಆದರೆ ಈ ಪ್ರಕರಣದ ವಿಚಾರಣೆಯಲ್ಲಿ ಜೇಠ್ಮಲಾನಿ ಹಾಜರಾಗಿದ್ದಕ್ಕೆ, ದೆಹಲಿ ಸರ್ಕಾರ ಈ ಫೆಬ್ರವರಿಯಲ್ಲಿ 3.5 ಕೋಟಿ ರೂ. ಪಾವತಿಸಿತ್ತು. ಒಂದು ಬಾರಿ ಜೇಠ್ಮಲಾನಿ ಕೋರ್ಟ್ ಗೆ ಹಾಜರಾದರೆ 22 ಲಕ್ಷ ರೂ. ಶುಲ್ಕವನ್ನು ಪಾವತಿಸಬೇಕಿತ್ತು.

    10 ಸಾವಿರ ದಂಡ: ಜೇಟ್ಲಿ ಹೂಡಿರುವ ಎರಡನೇ ಮಾನನಷ್ಟ ಕೇಸಿಗೆ ಸಂಬಂಧಿಸಿದಂತೆ ಸರಿಯಾದ ಪ್ರತಿಕ್ರಿಯೆ ನಿಗದಿತ ದಿನಾಂಕದ ಒಳಗಡೆ ಸಲ್ಲಿಸದ ಕಾರಣ ದೆಹಲಿ ಹೈಕೋರ್ಟ್ ಬುಧವಾರ ಕೇಜ್ರಿವಾಲ್ ಅವರಿಗೆ 10 ಸಾವಿರ ರೂ. ದಂಡ ವಿಧಿಸಿದೆ.

     

  • ಲೈವ್ ಡೆಮೋ ಮಾಡಿ ಆಪ್‍ನಿಂದ ಇವಿಎಂ ಹ್ಯಾಕ್: ಯಾರಿಗೆ ಎಷ್ಟು ವೋಟ್ ಬಿತ್ತು?

    ಲೈವ್ ಡೆಮೋ ಮಾಡಿ ಆಪ್‍ನಿಂದ ಇವಿಎಂ ಹ್ಯಾಕ್: ಯಾರಿಗೆ ಎಷ್ಟು ವೋಟ್ ಬಿತ್ತು?

    – ಆಪ್ ಆರೋಪವನ್ನು ತಿರಸ್ಕರಿಸಿದ ಚುನಾವಣಾ ಆಯೋಗ

    ನವದೆಹಲಿ: ಚುನಾವಣೆಯಲ್ಲಿ ಕೇಂದ್ರ ಸರ್ಕಾರದಿಂದ ಇವಿಎಂ ದುರ್ಬಳಕೆ ಆಗುತ್ತಿದೆ ಎಂದು ಆರೋಪ ಮಾಡಿದ್ದ ಆಪ್ ಇಂದು ವಿಧಾನಸಭೆಯಲ್ಲಿ ಲೈವ್ ಡೆಮೋ ನಡೆಸಿ ಹೇಗೆ ಹ್ಯಾಕ್ ಮಾಡಬಹುದು ಎನ್ನುವುದನ್ನು ವಿವರಿಸಿದೆ.

    ಆಪ್ ಶಾಸಕ ಸೌರಭ್ ಭಾರದ್ವಾಜ್ ಸದನದಲ್ಲಿ ಇವಿಎಂ ಹಿಡಿದು ಲೈವ್ ಡೆಮೋ ನೀಡಿದ್ದಾರೆ. ಕೋಡ್ ಬಳಸಿಕೊಂಡು, ಇವಿಎಂ ತಿರುಚಿ ಯಾವುದೇ ಪಕ್ಷ ಗೆಲುವು ಸಾಧಿಸಬಹುದು. ಆಡಳಿತರೂಢ ಕೇಂದ್ರ ಸರ್ಕಾರಕ್ಕೆ ಇದು ಅಸಾಧ್ಯವಲ್ಲ. ಬಿಜೆಪಿ ಇವಿಎಂ ದುರ್ಬಳಕೆ ಮಾಡಿಕೊಂಡು ಚುನಾವಣೆ ಗೆಲ್ಲುತ್ತಿದೆ ಎಂದು ದೂರಿದರು.

    ಡೆಮೋ ತೋರಿಸುವ ಮುನ್ನ ಮಾತನಾಡಿದ ಅವರು, ಇಲ್ಲಿ ತೋರಿಸುತ್ತಿರುವುದು ಚುನಾವಣೆಯಲ್ಲಿ ಬಳಕೆಯಾಗುತ್ತಿರುವ ಇವಿಎಂ ಅಲ್ಲ. ಇವಿಎಂ ರೀತಿಯಲ್ಲೇ ತಯಾರಾಗಿರುವ ಯಂತ್ರವಿದು. ನಾನು ಕಂಪ್ಯೂಟರ್ ಸೈನ್ಸ್ ಎಂಜಿನಿಯರ್ ಆಗಿದ್ದು, ರಾಜಕೀಯಕ್ಕೆ ಸೇರುವ ಮೊದಲು ಹಲವಾರು ಕಂಪೆನಿಗಳಲ್ಲಿ ಕೆಲಸ ಮಾಡಿದ್ದೇನೆ. ಎವಿಎಂ ಹ್ಯಾಕ್ ಮಾಡುವುದು ಕಷ್ಟದ ಕೆಲಸವಲ್ಲ. ಕೇವಲ 90 ಸೆಕೆಂಡ್ ನಲ್ಲಿ ಮದರ್‍ಬೋರ್ಡ್ ಬದಲಾಯಿಸಿ ಹ್ಯಾಕ್ ಮಾಡಬಹುದು ಎಂದು ಅವರು ವಿವರಿಸಿದರು.

    ಡೆಮೋದಲ್ಲಿ ಏನಾಯ್ತು?
    ಪ್ರಾತ್ಯಕ್ಷಿಕೆ ಸಂದರ್ಭದಲ್ಲಿ ಆಪ್‍ಗೆ 10, ಬಿಎಸ್‍ಪಿ 2, ಬಿಜೆಪಿ 3, ಕಾಂಗ್ರೆಸ್ 2, ಎಸ್‍ಪಿ 2 ಮತಗಳನ್ನು ಹಾಕಿದ್ದಾರೆ. ಆದರೆ ಫಲಿತಾಂಶ ಬಂದಾಗ ಆಪ್‍ಗೆ 2 ವೋಟ್ ಬಿದ್ದಿದ್ದರೆ, ಬಿಜೆಪಿಗೆ ಆಪ್‍ನ ವೋಟ್ ಸೇರಿ 11 ವೋಟ್ ಬಿದ್ದಿದೆ. ಬಿಎಸ್‍ಪಿಗೆ 2, ಕಾಂಗ್ರೆಸ್ 2, ಎಸ್‍ಪಿ 2 ವೋಟ್ ಬಿದ್ದಿದೆ.

    ಇವಿಎಂ ತಯಾರಿಸಿದ್ದು ಯಾರು?
    ಐಐಟಿಯ ಹಳೆ ವಿದ್ಯಾರ್ಥಿಗಳು ವಿಶೇಷ ಇವತ್ತಿನ ಡೆಮೋಗಾಗಿ ಇವಿಎಂ ಹೋಲುವ ಯಂತ್ರವನ್ನು ತಯಾರಿಸಿದ್ದಾರೆ. ಅಷ್ಟೇ ಅಲ್ಲದೇ ಇವಿಎಂ ತಜ್ಞರು ಸಹ ಇದನ್ನು ಪರಿಶೀಲಿಸಿದ್ದಾರೆ ಎಂದು ಎಎಪಿಯ ಮೂಲಗಳು ಮಾಹಿತಿ ನೀಡಿವೆ.

    ಇದೆ ವೇಳೆ, ನಾನು ಸವಾಲು ಎಸೆಯುತ್ತೇನೆ, ಮುಂದೆ ನಡೆಯಲಿರುವ ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಪೇಪರ್ ಬ್ಯಾಲೆಟ್ ಬಳಸಿದರೆ ಬಿಜೆಪಿ ಜಯಗಳಿಸಲು ಸಾಧ್ಯವೇ ಇಲ್ಲ ಎಂದು ಸೌರಭ್ ಭಾರದ್ವಾಜ್ ಹೇಳಿದರು. ಈ ವೇಳೆ ವಿಧಾನಸಭೆಯಲ್ಲಿ ತೀವ್ರ ಗದ್ದಲ ಕೋಲಾಹಲ ಸೃಷ್ಟಿಯಾಯ್ತು.

    ಈ ಮಧ್ಯೆ ಚುನಾವಣಾ ಆಯೋಗ ಆಮ್ ಆದ್ಮಿ ಆರೋಪ ನಿರಾಕರಿಸಿದೆ. ಆಯೋಗ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿ, ಆಪ್ ಚುನಾವಣೆಯಲ್ಲಿ ಬಳಕೆಯಾಗದ ಇವಿಎಂ ಬಳಸಿ ಡೆಮೋ ತೋರಿಸಿದ್ದಾರೆ. ಅಷ್ಟೇ ಅಲ್ಲದೇ ನಮ್ಮ ಅನುಮತಿ ಪಡೆಯದೇ ಪ್ರಾತ್ಯಕ್ಷಿಕೆ ನಡೆದಿದೆ ಎಂದು ಅವರು ತಿಳಿಸಿದ್ದಾರೆ.

    ಈ ವಿಚಾರದ ಬಗ್ಗೆ ಮೇ 12ರಂದು ಎಲ್ಲ ಪಕ್ಷಗಳ ಸಭೆಯನ್ನು ಚುನಾವಣಾ ಆಯೋಗ ಕರೆದಿದ್ದು, ಈ ಸಭೆಯ ಬಳಿಕ ಇವಿಎಂ ಹ್ಯಾಕಥಾನ್ ನಡೆಯುವ ದಿನಾಂಕ ಪ್ರಕಟವಾಗಲಿದೆ.

  • ಕೇಜ್ರಿವಾಲ್ 2 ಕೋಟಿ ಲಂಚ ತೆಗೆದುಕೊಂಡಿದ್ದನ್ನು ನಾನು ಕಣ್ಣಾರೆ ಕಂಡಿದ್ದೇನೆ: ಆಪ್ ಶಾಸಕ

    ಕೇಜ್ರಿವಾಲ್ 2 ಕೋಟಿ ಲಂಚ ತೆಗೆದುಕೊಂಡಿದ್ದನ್ನು ನಾನು ಕಣ್ಣಾರೆ ಕಂಡಿದ್ದೇನೆ: ಆಪ್ ಶಾಸಕ

    ನವದೆಹಲಿ: ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡಿ ಮುಖ್ಯಮಂತ್ರಿ ಪಟ್ಟವನ್ನು ಏರಿದ್ದ ಕೇಜ್ರಿವಾಲ್ ವಿರುದ್ಧ 2 ಕೋಟಿ ಲಂಚ ತೆಗೆದುಕೊಂಡಿರುವ ಗಂಭೀರ ಆರೋಪ ಕೇಳಿಬಂದಿದೆ.

    ಪ್ರವಾಸೋದ್ಯಮ ಸಚಿವ ಸ್ಥಾನದಿಂದ ವಜಾಗೊಂಡಿರುವ ಕಪಿಲ್ ಮಿಶ್ರಾ ಅವರು, ಕೇಜ್ರಿವಾಲ್ ಸತ್ಯೇಂದ್ರ ಜೈನ್ ರಿಂದ 2 ಕೋಟಿ ರೂ. ಲಂಚ ಪಡೆದಿದ್ದಾರೆ. ಲಂಚ ಪಡೆದಿರುವುದನ್ನು ನಾನು ಕಣ್ಣಾರೆ ನೋಡಿದ್ದೇನೆ ಎಂದು ಹೇಳಿದ್ದಾರೆ.

    ಕುಮಾರ್ ವಿಶ್ವಾಸ್ ಅವರ ಜತೆಗೂಡಿ ಆಮ್ ಆದ್ಮಿ ಪಕ್ಷದ ನಾಯಕತ್ವದ ವಿರುದ್ಧವೇ ಸಡ್ಡು ಹೊಡೆದಿದ್ದ ಪ್ರವಾಸೋದ್ಯಮ ಸಚಿವ ಕಪಿಲ್ ಮಿಶ್ರಾ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಲಾಗಿದೆ.ಇದೇ ವೇಳೆ ನಾನು ಆಪ್‍ನ ಸ್ಥಾಪಕ ಸದಸ್ಯನಾಗಿದ್ದು, ಆಪ್ ನಲ್ಲೇ ಇರುತ್ತೇನೆ. ಬಿಜೆಪಿ ಪಕ್ಷವನ್ನು ಸೇರುವುದಿಲ್ಲ ಎಂದು ಹೇಳಿದರು.

    ಮಂತ್ರಿ ಸ್ಥಾನದಿಂದ ವಜಾ ಮಾಡುತ್ತಿದ್ದಂತೆ ಮಿಶ್ರಾ, ಹಗರಣದಲ್ಲಿ ತೊಡಗಿದ ಕೆಲ ಆಮ್ ಆದ್ಮಿ ಪಕ್ಷದ ನಾಯಕರ ಬಣ್ಣ ಬಯಲು ಮಾಡುತ್ತೇನೆಂದು ಎಂದು ಹೇಳಿದ್ದರು.

    ಭ್ರಷ್ಟಾಚಾರ ಆರೋಪವಿಲ್ಲದ, ಸಿಬಿಐ ವಿಚಾರಣೆ ಎದುರಿಸದ ಏಕೈಕ ಸಚಿವ ನಾನು. ನನಗೆ ಮಾಹಿತಿಯನ್ನೂ ನೀಡದೆ ನನ್ನನ್ನು ಸಂಪುಟದಿಂದ ಹೊರಹಾಕಲಾಗಿದೆ ಕೇಜ್ರಿವಾಲ್ ವಿರುದ್ಧ ಅವರು ಆಕ್ರೋಶ ವ್ಯಕ್ತಪಡಿಸಿದ್ದರು.

  • ಆಪ್‍ನಲ್ಲಿ ಬಿರುಕು: ಕೇಜ್ರಿವಾಲ್ ವಿರುದ್ಧ ಬಂಡಾಯದ ಕಹಳೆ

    ಆಪ್‍ನಲ್ಲಿ ಬಿರುಕು: ಕೇಜ್ರಿವಾಲ್ ವಿರುದ್ಧ ಬಂಡಾಯದ ಕಹಳೆ

    ನವದೆಹಲಿ: ದೇಶದ ರಾಜಕೀಯ ಪುಟದಲ್ಲಿ ಯಾರೂ ನಿರೀಕ್ಷೆ ಮಾಡದಂತೆ ಮೇಲೆದ್ದು ಬಂದ ಆಮ್ ಆದ್ಮಿ ಪಾರ್ಟಿಯಲ್ಲಿ ದೊಡ್ಡ ಬಿರುಕು ಕಾಣಿಸಿದೆ. ದೆಹಲಿ  ಪಾಲಿಕೆ ಚುನಾವಣೆಯಲ್ಲಿ ಹೀನಾಯ ಸೋಲಿನ ಬಳಿಕ ಕೇಜ್ರಿವಾಲ್ ಅವರನ್ನು ಮುಖ್ಯಮಂತ್ರಿ ಕುರ್ಚಿಯಿಂದ ಕೆಳಗೆ ಇಳಿಸಲು  ವಿರೋಧ ಬಣ ಸಜ್ಜಾಗಿದೆ.

    ಆದರೆ ಕುರ್ಚಿಯಿಂದ ಕೆಳಗೆ ಇಳಿಯೋಕೆ ಕೇಜ್ರಿವಾಲ್ ಅಷ್ಟು ಸುಲಭವಾಗಿ ಒಪ್ಪಿಬಿಡ್ತರಾ..? ಒಂದ್ವೇಳೆ ಕೇಜ್ರಿವಾಲ್ ಅವರನ್ನು ಬಲವಂತವಾಗಿ ಕೆಳಗೆ ಇಳಿಸಿದ್ರೆ ಮುಂದಿನ ಸಿಎಂ ಯಾರಾಗ್ತಾರೆ ಅನ್ನೋ ಪ್ರಶ್ನೆ ಕಾಡ್ತಿದೆ.

    ಸಂಜೆ ದಿಢೀರ್ ಸುದ್ದಿಗೋಷ್ಠಿ ನಡೆಸಿದ ಆಪ್ ಮುಖಂಡ ಕುಮಾರ್ ವಿಶ್ವಾಸ್, ಆಮ್ ಆದ್ಮಿ ಭ್ರಷ್ಟಚಾರದ ಹಾದಿ ಹಿಡಿದಿದೆ ಅಂತಾ ಗಂಭೀರ ಆರೋಪ ಮಾಡಿದ್ರು. ನನಗೆ ಆಮ್ ಆದ್ಮಿ ಮೇಲೆ ವಿಶ್ವಾಸವಿಲ್ಲ ಅಂತಾ ನೇರವಾಗಿ ಕೇಜ್ರಿವಾಲ್ ಮೇಲೆ ಆರೋಪ ಮಾಡಿದ್ರು. ಬೇರೆ ಪಕ್ಷದಿಂದ ಬಂದವರಿಗೆ ಮಣೆ ಹಾಕ್ತಾರೆ. ಮೂಲ ಆಮ್ ಆದ್ಮಿಗಳನ್ನ ಕಡೆಗಣಿಸ್ತಿದ್ದಾರೆ ಅಂತಾ ಆರೋಪ ಮಾಡಿದ್ರು.

    ಇದೇ ವೇಳೆ ನಾನು ಆಪ್ ನಲ್ಲಿ ಮುಂದುವರಿಯಬೇಕೇ? ಬೇಡವೇ ಎನ್ನುವುದನ್ನು ಬುಧವಾರ ತಿಳಿಸುತ್ತೇನೆ. ಪಕ್ಷಕ್ಕೆ ರಾಜೀನಾಮೆ ನೀಡಿದರೂ ಬೇರೆ ಯಾವುದೇ ಪಕ್ಷಕ್ಕೆ ಸೇರ್ಪಡೆಯಾಗಲ್ಲ ಎಂದು ಅವರು ತಿಳಿಸಿದರು.

    ಮೂಲಗಳ ಪ್ರಕಾರ ಕೇಜ್ರಿವಾಲ್ ಅವರನ್ನು ಸಿಎಂ ಕುರ್ಚಿಯಿಂದ ಕೆಳಗೆ ಇಳಿಸ್ತಾರೆ ಎನ್ನಲಾಗಿದೆ. ಈ ನಡುವೆ ದಿಲ್ಲಿ ಪಾಲಿಕೆ ಚುನಾವಣೆ ಗೆಲುವೇ ನಮಗೆ ಮುಂದಿನ ಚುನಾವಣೆಗೆ ಮೆಟ್ಟಿಲು ಅಂತಾ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಹೇಳಿದ್ದಾರೆ.

  • ಇವಿಎಂ ಆಲ್ಲ, ಆಡಳಿತ ಪಕ್ಷದ ಸಾಫ್ಟ್ ವೇರ್ ಬದಲಾಗಬೇಕು: ಯೋಗೇಂದ್ರ ಯಾದವ್

    ಇವಿಎಂ ಆಲ್ಲ, ಆಡಳಿತ ಪಕ್ಷದ ಸಾಫ್ಟ್ ವೇರ್ ಬದಲಾಗಬೇಕು: ಯೋಗೇಂದ್ರ ಯಾದವ್

    ನವದೆಹಲಿ: ದೆಹಲಿಯ ಮತದಾರ ಕೇಜ್ರಿವಾಲ್ ರನ್ನು ತಿರಸ್ಕರಿಸಿ, ಪ್ರಧಾನಿ ಮೋದಿ ಅವರನ್ನು ಗೆಲ್ಲಿಸಿದ್ದಾನೆ ಎಂದು ಸ್ವರಾಜ್ ಇಂಡಿಯಾ ಪಕ್ಷದ ಯೋಗೇಂದ್ರ ಯಾದವ್ ಹೇಳಿದ್ದಾರೆ.

    ಆಮ್ ಆದ್ಮಿ ಪಕ್ಷದ ಸಂಸ್ಥಾಪಕ ನಾಯಕರಾಗಿ ಬಳಿಕ ಪಕ್ಷದಿಂದ ಉಚ್ಚಾಟನೆಯಾಗಿದ್ದ ಯೋಗೇಂದ್ರ ಯಾದವ್ ದೆಹಲಿ ಮಹಾನಗರ ಪಾಲಿಕೆ ಚುನಾವಣೆಯ ಬಗ್ಗೆ ಪ್ರತಿಕ್ರಿಯಿಸಿ, ಮೋಸ ಮಾಡಿರುವ ಆಪ್‍ಗೆ ಜನರು ತಕ್ಕ ಪಾಠ ಕಲಿಸಿದ್ದಾರೆ ಎಂದು ಅವರು ತಿಳಿಸಿದರು.

    ಇವಿಎಂ ದುರ್ಬಳಕೆ ಮಾಡಿದ್ದಾರೆ ಎನ್ನುವ ಆಪ್ ನಾಯಕರ ಆರೋಪಕ್ಕೆ, ಇವಿಎಂ ಸಾಫ್ಟ್ ವೇರ್ ಏನು ಆಗಿಲ್ಲ. ಆಡಳಿತ ನಡೆಸುವ ಪಕ್ಷದ ಸಾಫ್ಟ್ ವೇರ್ ಬದಲಾವಣೆಯಾಗುವ ಅಗತ್ಯವಿದೆ. ಆಪ್ ನಾಯಕರು ಮಹಾನಗರ ಪಾಲಿಕೆಯ ಚುನಾವಣೆಯನ್ನಲ್ಲ, ಅವರನ್ನು ಅವರೇ ಸಂಪೂರ್ಣವಾಗಿ ಕಳೆದುಕೊಂಡಿದ್ದಾರೆ ಎಂದರು.

    ನಾವು ಈ ಚುನಾವಣೆಯಲ್ಲಿ ಜಯಗಳಿಸಬೇಕು ಎನ್ನುವ ಯಾವುದೇ ನಿರೀಕ್ಷೆಯನ್ನು ಇಟ್ಟುಕೊಂಡಿರಲಿಲ್ಲ. ನಾವು ದೆಹಲಿ ಜನರ ನಿಜವಾದ ಸಮಸ್ಯೆಯನ್ನು ಇಟ್ಟುಕೊಂಡು ಚುನಾವಣೆ ಎದುರಿಸಿದ್ದೇವೆ, ನಾವು ತಳಮಟ್ಟದ ಸಮಸ್ಯೆಯ ಬಗ್ಗೆ ಮಾತನಾಡುತ್ತೇವೆ ವಿನಾಃ ಕಾಶ್ಮೀರ ಇತ್ಯಾದಿ ವಿಚಾರಗಳ ಬಗ್ಗೆ ಮಾತನಾಡುವುದಿಲ್ಲ ಎಂದು ಹೇಳಿದರು.

    ಇದೇ ವೇಳೆ ದೇಶದಲ್ಲಿ  ನಮ್ಮ ಪಕ್ಷ ಮಾತ್ರ ದೇಣಿಗೆ ನೀಡಿದ ವ್ಯಕ್ತಿಗಳ ವಿವರವನ್ನು ವೆಬ್‍ಸೈಟ್ ನಲ್ಲಿ ಪ್ರಕಟಿಸುತ್ತಿದೆ ಎಂದು ಹೇಳಿದರು.