Tag: aap

  • ಮೋದಿ ಅತ್ಯುತ್ತಮ ನಟ, ಅದಕ್ಕೆ ನಟನಿಂದ ಸಂದರ್ಶನ ಮಾಡಿಸಿಕೊಂಡ್ರು: ಪ್ರಕಾಶ್ ರೈ

    ಮೋದಿ ಅತ್ಯುತ್ತಮ ನಟ, ಅದಕ್ಕೆ ನಟನಿಂದ ಸಂದರ್ಶನ ಮಾಡಿಸಿಕೊಂಡ್ರು: ಪ್ರಕಾಶ್ ರೈ

    – ಎರಡು ರಾಷ್ಟ್ರೀಯ ಪಕ್ಷಗಳು ಜೋಕರ್
    – ಕಾಂಗ್ರೆಸ್, ಬಿಜೆಪಿ ವಿರುದ್ಧ ಪ್ರಕಾಶ್ ರೈ ಕಿಡಿ

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅತ್ಯುತ್ತಮ ನಟ, ಅದಕ್ಕೆ ನಟನಿಂದ ಸಂದರ್ಶನ ಮಾಡಿಸಿಕೊಂಡರು. ನಾಬೊಬ್ಬ ಪ್ರಜೆ, ನನ್ನ ವೃತ್ತಿಯನ್ನ ರಾಜಕೀಯಕ್ಕೆ ಬಳಸಿಕೊಂಡಿಲ್ಲ ಎಂದು ಪ್ರಕಾಶ್ ರೈ ಹೇಳಿದ್ದಾರೆ.

    ದೆಹಲಿಯಲ್ಲಿ ಆಮ್ ಆದ್ಮಿ ಪಾರ್ಟಿ (ಎಎಪಿ) ಅಭ್ಯರ್ಥಿಗಳ ಪರ ಪ್ರಚಾರ ನಡೆಸಿರುವ ಅವರು ಇಂದು ಸುದ್ದಿಗಾರರೊಂದಿಗೆ ಮಾತನಾಡಿ, ಸಿನಿಮಾದವರನ್ನು ಪ್ರಚಾರಕ್ಕೆ ಬಳಸಿಕೊಳ್ಳಬೇಡಿ ಎಂದು ಪತ್ನಿ ಪೋನಿ ವರ್ಮಾ, ಪ್ರಧಾನಿ ಮೋದಿಗೆ ಮನವಿ ಮಾಡಿಕೊಂಡಿದ್ದಾರೆ. ಇದು ಅವರ ವೈಯಕ್ತಿಕ ಹೇಳಿಕೆಯಾಗಿದೆ ಎಂದು ತಿಳಿಸಿದರು.

    ನಾನು ಎಎಪಿ ಪಕ್ಷದ ಕಾರ್ಯಕರ್ತನಲ್ಲ. ಆದರೆ ಪಕ್ಷದ ಸಿದ್ಧಾಂತ, ಕಾರ್ಯಗಳ ಬಗ್ಗೆ ಮೆಚ್ಚುಗೆ ಇದೆ. ರಾಷ್ಟ್ರ ರಾಜಕಾರಣದಲ್ಲಿ ಬದಲಾವಣೆ ತರಲು ಇಚ್ಛಿಸುವ ಅಭ್ಯರ್ಥಿ ಹಾಗೂ ಪಕ್ಷಕ್ಕೆ ನಾನು ಬೆಂಬಲ ನೀಡುತ್ತಿರುವೆ ಎಂದು ತಿಳಿಸಿದರು.

    ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್-ಜೆಡಿಎಸ್ ನನ್ನನ್ನು ಸೋಲಿಸಲು ಮುಂದಾದವು. ಈ ಬಗ್ಗೆ ನೀವು ಕೇಳಿಲ್ಲವೆ ಎಂದು ಮಾಧ್ಯಮದವರಿಗೆ ಪ್ರಶ್ನಿಸಿದ ಅವರು, ದೇಶದಲ್ಲಿ ಎರಡು ಪಕ್ಷಗಳು ಜೋಕರ್ ಗಳು ಅಂತ ಅನೇಕ ವರ್ಷಗಳಿಂದ ಹೇಳುತ್ತಾ ಬಂದಿದ್ದೇನೆ. ಆದರೆ ಅದನ್ನು ಯಾರೂ ಗಮನಕ್ಕೆ ತೆಗೆದುಕೊಳ್ಳುತ್ತಿಲ್ಲ ಎಂದು ಬಿಜೆಪಿ ಹಾಗೂ ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.

    ವೈಯಕ್ತಿಕ ದ್ವೇಷದಿಂದ ಪತ್ರಕರ್ತೆ ಗೌರಿ ಲಂಕೇಶ್ ಅವರನ್ನು ಹತ್ಯೆ ಮಾಡಿಲ್ಲ. ಬದಲಾಗಿ ವಿಚಾರ, ಸಿದ್ಧಾಂತಗಳ ಭಿನ್ನತೆಯಿಂದಾಗಿ ಒಂದು ಅವರನ್ನು ಕೊಲೆ ಮಾಡಲಾಯಿತು. ಪ್ರಜೆಗಳು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಳೆದುಕೊಳ್ಳುತ್ತಿದ್ದಾರೆ.

    ರಾಜಕೀಯದಲ್ಲಿ ಸಿಂಗಮ್ (ಹುಲಿ) ಯಾರು ಎಂಬ ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದ ಪ್ರಕಾಶ್ ರೈ ಅವರು, ಸಿಂಗಮ್ ಜೈಲಿನಲ್ಲಿ ಇರುತ್ತದೆ. ಅದು ಒಂದು ಪ್ರಾಣಿ. ನಮಗೆ ಬೇಕಾಗಿರುವುದು ಸಿಂಗಮ್ ಅಲ್ಲ, ಉತ್ತಮ ಆಡಳಿತಗಾರ ಎಂದು ಹೇಳಿದರು.

    ದೆಹಲಿಯಲ್ಲಿ ಒಟ್ಟು 7 ಲೋಕಸಭಾ ಕ್ಷೇತ್ರಗಳಿದ್ದು, ಎಲ್ಲ ಕ್ಷೇತ್ರಗಳ ಮತದಾನವು ಮೇ 12ರಂದು ನಡೆಯಲಿದೆ. ದೆಹಲಿಯಲ್ಲಿ ಕಾಂಗ್ರೆಸ್ ಹಾಗೂ ಎಎಪಿ ಮೈತ್ರಿ ರಚನೆ ಮಾಡಿಕೊಳ್ಳುತ್ತದೆ ಎನ್ನುವ ಚರ್ಚೆ ಕೇಳಿ ಬರುತ್ತಿತ್ತು. ಆದರೆ ಕೊನೆಯ ಹಂತದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಮೈತ್ರಿಯನ್ನು ನಿರಾಕರಿಸಿದ್ದರು.

  • ಆಪ್ ಶಾಸಕರನ್ನು ಖರೀದಿಸುವುದು ಸುಲಭವಲ್ಲ: ಮೋದಿ ವಿರುದ್ಧ ಕೇಜ್ರಿವಾಲ್ ಗುಡುಗು

    ಆಪ್ ಶಾಸಕರನ್ನು ಖರೀದಿಸುವುದು ಸುಲಭವಲ್ಲ: ಮೋದಿ ವಿರುದ್ಧ ಕೇಜ್ರಿವಾಲ್ ಗುಡುಗು

    ನವದೆಹಲಿ: ಆಮ್ ಆದ್ಮಿ ಪಕ್ಷದ ಶಾಸಕರನ್ನು ಖರೀದಿಸುವುದು ಸುಲಭವಲ್ಲ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಗುಡುಗಿದ್ದಾರೆ.

    ಟ್ವೀಟ್ ಮೂಲಕ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಮೋದಿ ಜಿ, ರಾಜ್ಯಗಳಲ್ಲಿ ವಿರೋಧ ಪಕ್ಷದ ಶಾಸಕರನ್ನು ಖರೀದಿಸುವ ಮೂಲಕ ನೀವು ಸರ್ಕಾರವನ್ನು ಉರುಳಿಸುತ್ತೀರಾ? ಇದು ನಿಮ್ಮ ಪ್ರಜಾಪ್ರಭುತ್ವದ ವ್ಯಾಖ್ಯಾನವೇ? ಶಾಸಕರು ಖರೀದಿಸಲು ಇಷ್ಟೊಂದು ಹಣವನ್ನು ಎಲ್ಲಿಂದ ತರುತ್ತಿರುವಿರಿ ಎಂದು ಪ್ರಶ್ನಿಸಿದ್ದಾರೆ.

    ನೀವು ಈ ಹಿಂದೆ ಅನೇಕ ಬಾರಿ ನಮ್ಮ ಪಕ್ಷದ ಶಾಸಕರನ್ನು ಖರೀದಿಸಲು ಯತ್ನಿಸಿದ್ದೀರಿ. ಆದರೆ ಇದು ಖರೀದಿಸುವುದು ಸುಲಭದ ಮಾತಲ್ಲ ಎಂದು ಟ್ವೀಟ್ ಮಾಡಿದ್ದಾರೆ.

    ಅರವಿಂದ್ ಕೇಜ್ರಿವಾಲ್ ಚುನಾವಣಾ ಪ್ರಚಾರದ ವೇಳೆ ಈ ಹಿಂದೆಯೂ ಬಿಜೆಪಿ ವಿರುದ್ಧ ಆರೋಪ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಬಿಜೆಪಿ ಮುಖಂಡ ವಿಜಯ್ ಗೋಯಲ್ ಅವರು, ಎಎಪಿಯ ಯಾವುದೇ ಶಾಸಕರನ್ನು ಸೆಳೆಯುವ ಪ್ರಯತ್ನವನ್ನು ನಾವು ಮಾಡಿಲ್ಲ. ಆದರೆ ಎಎಪಿ ತನ್ನ ಮೂಲ ಉದ್ದೇಶವನ್ನೇ ಮರೆತಿದೆ. ಹೀಗಾಗಿ 14 ಎಎಪಿ ಶಾಸಕರು ಪಕ್ಷ ತೊರೆಯಲು ಮುಂದಾಗಿದ್ದಾರೆ ಎಂದು ಹೇಳಿದ್ದರು.

    ಯೋಗೇಂದ್ರ ಯಾದವ್, ಪ್ರಶಾಂತ್ ಭೂಷಣ್, ಶಾಜಿಯಾ ಇಮ್ಲಿ ಸೇರಿದಂತೆ ಅನೇಕರು ಈಗಾಗಲೇ ಎಎಪಿ ಪಕ್ಷದಿಂದ ಹೊರ ಬಂದಿದ್ದಾರೆ. ಪಕ್ಷದಲ್ಲಿ ಉಸಿರುಗಟ್ಟುವ ವಾತಾವರಣವಿದೆ ಎಂದು ಹೇಳಿಕೊಂಡಿದ್ದಾರೆ. ಭ್ರಷ್ಟಾಚಾರದ ವಿರುದ್ಧ ಹೋರಾಡಲು ಅಧಿಕಾರಕ್ಕೆ ಬಂದ ಪಕ್ಷ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ವಿಜಯ್ ಗೋಯಲ್ ಆರೋಪಿಸಿದ್ದರು.

    ದೆಹಲಿಯಲ್ಲಿ ಒಟ್ಟು 7 ಲೋಕಸಭಾ ಕ್ಷೇತ್ರಗಳಿದ್ದು, ಕಾಂಗ್ರೆಸ್ ಹಾಗೂ ಎಎಪಿಗಳು ಏಕಾಂಗಿಯಾಗಿ ಸ್ಪರ್ಧಿಸುತ್ತಿವೆ. ಈ ಏಳು ಕ್ಷೇತ್ರಗಳ ಮತದಾನವು ಮೇ 12ರಂದು ನಡೆಯಲಿದ್ದು, ಮೇ 23ರಂದು ಫಲಿತಾಂಶ ಪ್ರಕಟವಾಗಲಿದೆ.

  • ಆಪ್ ಆರೋಪಕ್ಕೆ ಉತ್ತರ ನೀಡಿದ ಗೌತಮ್ ಗಂಭೀರ್

    ಆಪ್ ಆರೋಪಕ್ಕೆ ಉತ್ತರ ನೀಡಿದ ಗೌತಮ್ ಗಂಭೀರ್

    ನವದೆಹಲಿ: ಆಮ್ ಆದ್ಮಿ ಪಾರ್ಟಿಯ ಆರೋಪಕ್ಕೆ ಬಿಜೆಪಿ ಅಭ್ಯರ್ಥಿ, ಕ್ರಿಕೆಟಿಗ ಗೌತಮ್ ಗಂಭೀರ ಪ್ರತಿಕ್ರಿಯೆ ನೀಡಿದ್ದಾರೆ. ಗೌತಮ್ ಗಂಭೀರ್ ಎರಡು ಸ್ಥಳಗಳಲ್ಲಿ ವೋಟರ್ ಐಡಿ ಕಾರ್ಡ್ ಹೊಂದಿದ್ದಾರೆಂದು ಪೂರ್ವ ದೆಹಲಿ ಲೋಕಸಭಾ ಕ್ಷೇತ್ರದ ಆಪ್ ಅಭ್ಯರ್ಥಿಯಾಗಿರುವ ಅತಿಶಿ ಆರೋಪಿಸಿ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದರು.

    ಮಾಧ್ಯಮಗಳ ಜೊತೆ ಮಾತನಾಡಿದ ಗೌತಮ್ ಗಂಭೀರ್, ಕಳೆದ ನಾಲ್ಕೂವರೆ ವರ್ಷಗಳಲ್ಲಿ ಆಪ್ ಸರ್ಕಾರ ದೆಹಲಿಯಲ್ಲಿ ಯಾವುದೇ ಕೆಲಸವನ್ನು ಮಾಡಿಲ್ಲ. ಹಾಗಾಗಿ ಆಪ್ ಅಭ್ಯರ್ಥಿ ನನ್ನ ಮೇಲೆ ಆರೋಪಗಳನ್ನು ಮಾಡುತ್ತಿದ್ದಾರೆ. ಈ ಕುರಿತು ಚುನಾವಣಾ ಆಯೋಗ ಪರಿಶೀಲನೆ ನಡೆಸುತ್ತದೆ. ಮತ ಕೇಳಲು ಯಾವುದೇ ವಿಷಯಗಳು ಇಲ್ಲದಿದ್ದಾಗ ಈ ರೀತಿಯ ಆರೋಪಗಳನ್ನು ಮಾಡುತ್ತಾರೆ. ನಕಾರಾತ್ಮಕ ತಂತ್ರಗಳನ್ನು ಬಳಸುವ ಮೂಲಕ ಚುನಾವಣೆಯನ್ನು ಗೆಲ್ಲಲು ಎದುರಾಳಿಗಳು ಪ್ರಯತ್ನಿಸುತ್ತಿದ್ದಾರೆ ಎಂದು ಖಡಕ್ ಉತ್ತರ ನೀಡಿದ್ದಾರೆ.

    ಗೌತಮ್ ಗಂಭೀರ್ ಬಳಿ ರಾಜೇಂದ್ರ ನಗರ ಮತ್ತು ಕರೋಲ್ ಭಾಗ್ ನಲ್ಲಿ ವೋಟರ್ ಐಡಿ ಹೊಂದಿದ್ದಾರೆ ಎಂಬುವುದು ಅತಿಶಿಯವರ ಆರೋಪವಾಗಿದೆ. ಇತ್ತೀಚೆಗೆ ಪೂರ್ವಾನುಮತಿ ಪಡೆಯದೇ ರೋಡ್ ಶೋ ನಡೆಸಿದ್ದಕ್ಕೆ ಗೌತಮ್ ಗಂಭೀರ್ ವಿರುದ್ಧ ಎಫ್‍ಐಆರ್ ದಾಖಲಿಸುವಂತೆ ಚುನಾವಣಾ ಆಯೋಗಕ್ಕೆ ಸ್ಥಳೀಯ ಪೊಲೀಸರಿಗೆ ಸೂಚನೆ ನೀಡಿತ್ತು.

  • ಸಂಕಷ್ಟದಲ್ಲಿ ಬಿಜೆಪಿ ಅಭ್ಯರ್ಥಿ ಗೌತಮ್ ಗಂಭೀರ್

    ಸಂಕಷ್ಟದಲ್ಲಿ ಬಿಜೆಪಿ ಅಭ್ಯರ್ಥಿ ಗೌತಮ್ ಗಂಭೀರ್

    ನವದೆಹಲಿ: ಪೂರ್ವ ದೆಹಲಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಕ್ರಿಕೆಟಿಗ ಗೌತಮ್ ಗಂಭೀರ್ ಸಂಕಷ್ಟದಲ್ಲಿ ಸಿಲುಕಿದ್ದಾರೆ.

    ಅನುಮತಿ ಪಡೆಯದೆ ಎರಡು ಕಡೆ ರ್ಯಾಲಿ ನಡೆಸಿದ ಹಿನ್ನೆಲೆಯಲ್ಲಿ ಚುನಾವಣಾ ಅಧಿಕಾರಿಗಳು ಎಫ್‍ಐಆರ್ ದಾಖಲಿಸುವಂತೆ ಆದೇಶಿಸಿದ್ದಾರೆ. ಚುನಾವಣಾ ಅಧಿಕಾರಿಗಳ ಆದೇಶದ ಮೇರೆಗೆ ದೆಹಲಿ ಪೊಲೀಸರು, ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‍ಐಆರ್ ದಾಖಲಿಸಿಕೊಂಡಿದ್ದಾರೆ.

    ಇದಕ್ಕೂ ಮೊದಲು ಗೌತಮ್ ಗಂಭೀರ್ ವಿರುದ್ಧ ಪೂರ್ವ ದೆಹಲಿಯ ಆಪ್ ಅಭ್ಯರ್ಥಿ ಅತಿಶಿ ಮಾರಲೇನಾ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದರು. ಗಂಭೀರ್ ಎರಡು ಸ್ಥಳಗಳಲ್ಲಿ ವೋಟರ್ ಐಡಿ ಹೊಂದಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸೆಕ್ಷನ್ 155(2) ಅನ್ವಯ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸಬೇಕೆಂದು ಅತಿಶಿ, ಕೋರ್ಟ್ ಮೊರೆ ಹೋಗಿದ್ದರು.

  • ಗಂಭೀರ್ ವಿಕೆಟ್ ಪಡೆಯಲು ಹೋಗಿ ಬೌಲ್ಡ್ ಆದ ಆಪ್!

    ಗಂಭೀರ್ ವಿಕೆಟ್ ಪಡೆಯಲು ಹೋಗಿ ಬೌಲ್ಡ್ ಆದ ಆಪ್!

    ನವದೆಹಲಿ: ರಾಜಕಿಯದ ಪಿಚ್‍ನಲ್ಲಿ ಕ್ರಿಕೆಟಿಗ ಗಂಭೀರ್ ಅವರ ವಿಕೆಟ್ ಪಡೆಯಲು ಯತ್ನಿಸಿದ್ದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರ ಆಪ್ ಪಕ್ಷ ತಾನೇ ಬೌಲ್ಡ್ ಔಟ್ ಆಗಿದೆ.

    ಕ್ರಿಕೆಟಿಗ ಗೌತಮ್ ಗಂಭೀರ್ ಚುನಾವಣಾ ಆಖಾಡಕ್ಕೆ ಇಳಿಯುತ್ತಿದ್ದಂತೆ ದೆಹಲಿ ರಾಜಕೀಯದಲ್ಲಿ ಸಂಚಲನ ಸೃಷ್ಟಿಯಾಗಿದೆ. ದೆಹಲಿ ಪೂರ್ವ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಗಂಭೀರ್ ಮಂಗಳವಾರ ನಾಮಪತ್ರ ಸಲ್ಲಿಸಿದ್ದಾರೆ.

    ಬಿಜೆಪಿ ಅಭ್ಯರ್ಥಿಯಾಗಿರುವ ಗೌತಮ್ ಗಂಭೀರ್ ಸಲ್ಲಿಸಿರುವ ನಾಮಪತ್ರವನ್ನು ಅಸಿಂಧುಗೊಳಿಸಬೇಕೆಂದು ಆಪ್ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿತ್ತು. ಗಂಭೀರ್ ನಾಮಪತ್ರ ಸಲ್ಲಿಸಿದ ದಾಖಲಾತಿಗಳ ನೋಟರಿ ಸ್ಟಾಂಪ್ ಔಟ್ ಡೇಟ್ ಆಗಿದೆ ಎಂದು ಆಪ್ ಆರೋಪಿಸಿತ್ತು.

    ಆಪ್ ಆರೋಪಕ್ಕೆ ಪ್ರತಿಕ್ರಿಯಿಸಿರುವ ಗೌತಮ್ ಗಂಭೀರ್ ಪರ ವಕೀಲ, ನೋಟರಿ ಸ್ಟಾಂಪ್ ಸರಿಯಾಗಿದೆ. ಆಪ್ ರೋಟರಿ ರಿಜಿಸ್ಟರ್ ನಂಬರ್ ನೋಡಿ ಆರೋಪ ಮಾಡಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಕೊನೆಗೆ ಗಂಭೀರ್ ಉಮೇದುವಾರಿಕೆಯನ್ನು ಚುನಾವಣಾ ಅಧಿಕಾರಿಗಳು ಸ್ವೀಕಾರ ಮಾಡಿದ್ದಾರೆ.

    ಪೂರ್ವ ದೆಹಲಿಯಲ್ಲಿ ಗೌತಮ್ ಗಂಭೀರ್ ಎದುರಾಳಿಯಾಗಿ ಆಪ್ ನಿಂದ ಅತಿಶ್ ಮರ್ಲೆನಾ ಕಣಕ್ಕಿಳಿದಿದ್ದಾರೆ. ಗೌತಮ್ ಗಂಭೀರ್ ಉಮೇದುವಾರಿಕೆಯಲ್ಲಿ 12 ಕೋಟಿ ರೂ. ಆಸ್ತಿಯನ್ನು ಘೋಷಣೆ ಮಾಡಿಕೊಂಡಿದ್ದಾರೆ. ನಾಮಪತ್ರ ಸಲ್ಲಿಕೆ ಮುನ್ನ ಮಾತನಾಡಿದ್ದ ಗೌತಮ್ ಗಂಭೀರ್, ನಾನು ತುಂಬಾ ಉತ್ಸುಕನಾಗಿದ್ದು, ದೇಶಕ್ಕಾಗಿ ಏನು ಬೇಕಾದರೂ ಮಾಡಲು ಸಿದ್ಧನಿದ್ದೇನೆ. ದೇಶಕ್ಕಾಗಿ ಒಳ್ಳೆಯದನ್ನು ಮಾಡುವದಕ್ಕಾಗಿ ಬಿಜೆಪಿ ಸೇರಿದ್ದೇನೆ ಎಂದು ಹೇಳಿದ್ದರು.

  • ದೆಹಲಿ, ಹರ್ಯಾಣದಲ್ಲಿ ಆಪ್- ಕಾಂಗ್ರೆಸ್ ಮೈತ್ರಿ

    ದೆಹಲಿ, ಹರ್ಯಾಣದಲ್ಲಿ ಆಪ್- ಕಾಂಗ್ರೆಸ್ ಮೈತ್ರಿ

    – ದೆಹಲಿಯಲ್ಲಿ ಕಾಂಗ್ರೆಸ್‍ಗೆ 3, ಎಎಪಿಗೆ 4 ಸೀಟು ಹಂಚಿಕೆ

    ನವದೆಹಲಿ: ದೆಹಲಿ ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್- ಆಮ್ ಆದ್ಮಿ ಪಾರ್ಟಿ (ಎಎಪಿ) ಮೈತ್ರಿ ಕುರಿತು ರಾಷ್ಟ್ರ ರಾಜಕಾರಣದಲ್ಲಿ ಭಾರೀ ಚರ್ಚೆಯಾಗುತಿತ್ತು. ಸದ್ಯ ಇದಕ್ಕೆ ತೆರೆ ಬಿದ್ದಿದ್ದು, ದೆಹಲಿ ಅಷ್ಟೇ ಅಲ್ಲದೇ ಹರ್ಯಾಣದಲ್ಲೂ ಎರಡೂ ಪಕ್ಷಗಳು ಮೈತ್ರಿ ಮಾಡಿಕೊಂಡಿದೆ.

    ಮೈತ್ರಿ ಒಪ್ಪಂದದಂತೆ ದೆಹಲಿಯ ಒಟ್ಟು 7 ಲೋಕಸಭಾ ಕ್ಷೇತ್ರಗಳ ಪೈಕಿ ಕಾಂಗ್ರೆಸ್‍ಗೆ 3 ಹಾಗೂ ಎಎಪಿಗೆ 4 ಸೀಟುಗಳು ಹಂಚಿಕೆಯಾಗಿವೆ. ಇತ್ತ ಹರ್ಯಾಣದಲ್ಲೂ ಕಾಂಗ್ರೆಸ್ ಹಾಗೂ ಎಎಪಿ ಮೈತ್ರಿಯ ಜೊತೆಗೆ ಜನನಾಯಕ ಜನತಾ ಪಾರ್ಟಿ (ಜೆಜೆಪಿ) ಕೈಜೋಡಿಸಿದೆ.

    ಹರ್ಯಾಣದಲ್ಲಿ ಒಟ್ಟು 10 ಲೋಕಸಭಾ ಕ್ಷೇತ್ರಗಳಿದ್ದು, ಈ ಪೈಕಿ ಕಾಂಗ್ರೆಸ್ 7, ಎಎಪಿ 1 ಹಾಗೂ ಜೆಜೆಪಿ 2 ಕ್ಷೇತ್ರಗಳಿಂದ ಕಣಕ್ಕೆ ಇಳಿಯಲಿವೆ. 2014ರ ಲೋಕಸಭಾ ಚುನಾವಣೆಯಲ್ಲಿ ದೆಹಲಿಯ 7 ಕ್ಷೇತ್ರಗಳಲ್ಲಿ ಬಿಜೆಪಿ ಜಯಗಳಿಸಿ ಕ್ಲೀನ್ ಸ್ವೀಪ್ ಮಾಡಿತ್ತು. ಹರ್ಯಾಣದಲ್ಲಿ ಬಿಜೆಪಿ 7, ಕಾಂಗ್ರೆಸ್ 1 ಹಾಗೂ ಇಂಡಿಯನ್ ನ್ಯಾಷನಲ್ ಲೋಕದಳ (ಐಎನ್‍ಎಲ್‍ಡಿ) 2 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಆರಂಭದಲ್ಲಿ ಮೈತ್ರಿ ವಿಚಾರದ ಬಗ್ಗೆ ಪಕ್ಷದ ನಾಯಕರ ನಡುವೆ ಅಸಮಾಧಾನ ವ್ಯಕ್ತವಾಗಿದ್ದರೂ ಈಗ ಮಾತುಕತೆ ಯಶಸ್ವಿಯಾಗಿದೆ.

    ದೆಹಲಿಯ 7 ಸ್ಥಾನಗಳನ್ನು ಬಿಜೆಪಿ ತನ್ನಲ್ಲೇ ಉಳಿಸಿಕೊಂಡರೆ, ಹರ್ಯಾಣದಲ್ಲಿ 7 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಚುನಾವಣಾ ಪೂರ್ವ ಸಮೀಕ್ಷೆಗಳು ಹೇಳಿದ್ದವು. ಹಲವು ಸಮೀಕ್ಷೆಗಳಲ್ಲಿ ಈ ಎರಡು ರಾಜ್ಯಗಳಲ್ಲಿ ಬಿಜೆಪಿ ಜಯಗಳಿಸಲಿದೆ ಎನ್ನುವ ಫಲಿತಾಂಶ ಬಂದ ಬೆನ್ನಲ್ಲೇ ಕಾಂಗ್ರೆಸ್ ಮತ್ತು ಆಪ್ ಮಧ್ಯೆ ಮೈತ್ರಿ ವಿಚಾರ ಪ್ರಸ್ತಾಪವಾಗಿತ್ತು.

    ಜಮ್ಮು ಕಾಶ್ಮೀರದಲ್ಲಿ ಬಿಜೆಪಿ ಮತ್ತು ಪಿಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಕಟ್ಟಿಹಾಕಲು ಕಾಂಗ್ರೆಸ್ ಹಾಗೂ ನ್ಯಾಷನಲ್ ಕಾನ್ಫರೆನ್ಸ್ (ಎನ್‍ಸಿ) ಮೈತ್ರಿ ಮಾಡಿಕೊಂಡಿದೆ. ಈ ಕುರಿತು ಕಾಂಗ್ರೆಸ್ ನಾಯಕ ಗುಲಾಂ ನಬಿ ಅಜದ್ ಮತ್ತು ನ್ಯಾಷನಲ್ ಕಾನ್ಫರೆನ್ಸಿನ ಫಾರೂಕ್ ಅಬ್ದುಲ್ಲಾ ಜಂಟಿಯಾಗಿ ಮೈತ್ರಿ ನಿರ್ಧಾರವನ್ನು ಪ್ರಕಟಿಸಿದ್ದರು.

  • ಚುನಾವಣೆ ಗೆಲ್ಲಲು ಇಮ್ರಾನ್, ಮೋದಿ ಮಧ್ಯೆ ರಹಸ್ಯ ಒಪ್ಪಂದ: ಕೇಜ್ರಿವಾಲ್

    ಚುನಾವಣೆ ಗೆಲ್ಲಲು ಇಮ್ರಾನ್, ಮೋದಿ ಮಧ್ಯೆ ರಹಸ್ಯ ಒಪ್ಪಂದ: ಕೇಜ್ರಿವಾಲ್

    ನವದೆಹಲಿ: ನಮೋ ಚಾನೆಲ್‍ಗೆ ಪಾಕಿಸ್ತಾನ ಹಣ ಹೂಡಿದ್ಯಾ ಎಂದು ದೆಹಲಿ ಮುಖ್ಯಮಂತ್ರಿ, ಆಮ್ ಆದ್ಮಿ ಪಾರ್ಟಿ (ಎಎಪಿ) ನಾಯಕ ಅರವಿಂದ್ ಕೇಜ್ರಿವಾಲ್ ಪ್ರಶ್ನಿಸಿದ್ದಾರೆ.

    ದೆಹಲಿ ಶಾಸಕ ಕಪಿಲ್ ಮಿಶ್ರಾ ಅವರು, ನಮೋ ಚಾನೆಲ್‍ಗೆ ಯಾರು ಮಾಲೀಕರೇ ಇಲ್ಲ. ಭಾರತದ ಮೇಲೆ ದಾಳಿ ಮತ್ತಷ್ಟು ಮಾಡಿ ಹಾನಿಗೊಳಿಸಲು ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮತ್ತೆ ಅಧಿಕಾರಕ್ಕೆ ತರಲು ಪಾಕಿಸ್ತಾನವೇ ನಮೋ ಚಾನೆಲ್‍ಗೆ ಹಣಕಾಸು ಸಹಾಯ ನೀಡುತ್ತಿದೆ ಎಂದು ಟ್ವೀಟ್ ಮೂಲಕ ಆರೋಪಿಸಿದ್ದಾರೆ. ಇದನ್ನು ಅರವಿಂದ್ ಕೇಜ್ರಿವಾಲ್ ಅವರು ರೀ ಟ್ವೀಟ್ ಮಾಡಿದ್ದು, ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ ಮತ್ತೆ ಅಧಿಕಾರಕ್ಕೆ ಬರಬೇಕು ಎಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ. ಈ ವಿಚಾರವಾಗಿ ಟ್ವೀಟ್ ಮಾಡಿರುವ ಅರವಿಂದ್ ಕೇಜ್ರಿವಾಲ್ ಅವರು, ಪಾಕಿಸ್ತಾನ ಹಾಗೂ ಇಮ್ರಾನ್ ಖಾನ್ ಬಹಿರಂಗವಾಗಿ ನರೇಂದ್ರ ಮೋದಿ ಅವರಿಗೆ ಬೆಂಬಲ ನೀಡುತ್ತಿದ್ದಾರೆ. ಈ ಮೂಲಕ ಪಾಕ್ ಮತ್ತು ಮೋದಿ ಮಧ್ಯೆ ರಹಸ್ಯ ಒಪ್ಪಂದವಾಗಿದೆ ಎನ್ನುವುದು ಸ್ಪಷ್ಟವಾಗುತ್ತದೆ ಎಂದು ದೂರಿದ್ದಾರೆ.

    ಪ್ರಧಾನಿ ಮೋದಿ ಅವರಿಗೆ ಸಹಾಯ ಮಾಡಲು ಪಾಕಿಸ್ತಾನವು ಪುಲ್ವಾಮಾದಲ್ಲಿ 40 ಜನ ಭಾರತೀಯ ಯೋಧರನ್ನು ಹತ್ಯೆ ಮಾಡಿದ್ಯಾ ಅಂತ ಜನರು ಪ್ರಶ್ನೆ ಮಾಡುತ್ತಿದ್ದಾರೆ ಎಂದು ಕೇಜ್ರಿವಾಲ್ ಗಂಭೀರವಾಗಿ ಆರೋಪಿಸಿದ್ದಾರೆ.

    ಪಾಕಿಸ್ತಾನಕ್ಕೆ ಮೋದಿ ಅವರೇ ಯಾಕೆ ಗೆಲ್ಲಬೇಕು? ನಿಮ್ಮ ಹಾಗೂ ಪಾಕಿಸ್ತಾನದ ಮಧ್ಯೆ ಇರುವ ಸಂಬಂಧ ಎಷ್ಟು ಆಳವಾಗಿದೆ ಎಂಬುದನ್ನು ದೇಶ ಜನರ ಮುಂದಿಡಿ. ನರೇಂದ್ರ ಮೋದಿ ಜಯ ಸಾಧಿಸಿದರೆ ಪಾಕಿಸ್ತಾನದಲ್ಲಿ ಪಟಾಕಿಗಳು ಸಿಡಿಯುತ್ತವೆ ಎಂಬುದನ್ನು ಪ್ರತಿ ಭಾರತೀಯರು ತಿಳಿಯಬೇಕು ಎಂದು ಹೇಳಿದ್ದಾರೆ.

    ಪಿಡಿಪಿ ನಾಯಕಿ ಮೆಹಬೂಬ ಮುಫ್ತಿ ಕೂಡ ಟ್ವೀಟ್ ಮಾಡಿದ್ದು, ಪಾಕ್ ಪ್ರಧಾನಿ ಇಮ್ರಾನ್ ಖಾನ್ ಹೇಳಿಕೆಯಿಂದಾಗಿ ಮೋದಿ ಭಕ್ತರು ತಲೆ ಕೆರೆದುಕೊಳ್ಳುತ್ತಿದ್ದಾರೆ. ಈ ಹೇಳಿಕೆ ನೀಡಿದ ಅವರನ್ನು ಹೊಗಳಬೇಕೋ ಅಥವಾ ಬೇಡವೋ ಎನ್ನುವ ಕುರಿತು ಗೊಂದಲಕ್ಕೀಡಾಗಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.

    ಕಾಂಗ್ರೆಸ್ ವಕ್ತಾರ ರಣ್‍ದೀಪ್ ಸಿಂಗ್ ಸುರ್ಜೇವಾಲ ಅವರು ಕೂಡ ಟ್ವೀಟ್ ಮಾಡಿದ್ದು, ಪಾಕಿಸ್ತಾನವು ಅಧಿಕೃತವಾಗಿ ಮೋದಿ ಅವರರೊಂದಿಗೆ ಮೈತ್ರಿ ಮಾಡಿಕೊಂಡಿದೆ. ಪ್ರಧಾನಿ ಮೋದಿ ಅವರಿಗೆ ಮತ ನೀಡಿದರೆ ಅದು ಪಾಕಿಸ್ತಾನಕ್ಕೆ ಮತ ನೀಡಿದಂತೆ. ಅವರಿಗೆ ಈ ಮೊದಲು ಪಾಕ್ ಮಾಜಿ ಪ್ರಧಾನಿ ನವಾಜ್ ಷರೀಫ್ ಸ್ನೇಹಿತರಾಗಿದ್ದರು. ಈಗ ಇಮ್ರಾನ್ ಖಾನ್ ಸ್ನೇಹಿತರಾಗಿದ್ದಾರೆ. ಅವರ ಈಗ ರಹಸ್ಯ ಹೊರಬಿದ್ದಿದೆ ಎಂದು ಆರೋಪಿಸಿದ್ದಾರೆ.

    ಇಮ್ರಾನ್ ಖಾನ್ ಹೇಳಿದ್ದೇನು?:
    ಸಂದರ್ಶನವೊಂದರಲ್ಲಿ ಮಾತನಾಡಿದ್ದ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿ ಅಧಿಕಾರಕ್ಕೆ ಬಂದರೆ ಭಾರತದೊಂದಿಗೆ ಶಾಂತಿ ಮಾತುಕತೆಗೆ ಉತ್ತಮ ಅವಕಾಶ ಸಿಗುತ್ತದೆ. ಲೋಕಸಭಾ ಚುನಾವಣೆ ಬಳಿಕ ಭಾರತದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದರೆ ಪಾಕಿಸ್ತಾನದ ಜೊತೆಗಿರುವ ಕಾಶ್ಮೀರದ ಸಮಸ್ಯೆ ಬಗೆಹರಿಸಲು ಸ್ವಲ್ಪ ಭಯಪಡುವ ಸಾಧ್ಯತೆಯಿದೆ. ಒಂದು ವೇಳೆ ಬಲಪಂಥೀಯ ಪಕ್ಷವಾದ ಬಿಜೆಪಿಯು ಅಧಿಕಾರಕ್ಕೆ ಬಂದರೆ ಸಮಸ್ಯೆಗೆ ಕೆಲವು ಪರಿಹಾರಗಳನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು.

  • ಕಾಂಗ್ರೆಸ್ ಅಹಂಕಾರಿ ಪಕ್ಷ, ಕೈ ಅಭ್ಯರ್ಥಿಗಳು ಠೇವಣಿ ಕಳೆದುಕೊಳ್ಳುತ್ತಾರೆ: ಕೇಜ್ರಿವಾಲ್

    ಕಾಂಗ್ರೆಸ್ ಅಹಂಕಾರಿ ಪಕ್ಷ, ಕೈ ಅಭ್ಯರ್ಥಿಗಳು ಠೇವಣಿ ಕಳೆದುಕೊಳ್ಳುತ್ತಾರೆ: ಕೇಜ್ರಿವಾಲ್

    ನವದೆಹಲಿ: ದೆಹಲಿ ಲೋಕಸಭಾ ಕ್ಷೇತ್ರಗಳ ಮೈತ್ರಿ ನಿರಾಕರಿಸಿದ ಕಾಂಗ್ರೆಸ್ ವಿರುದ್ಧ ಆಮ್ ಆದ್ಮಿ ಪಕ್ಷದ ನಾಯಕ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಾಗ್ದಾಳಿ ನಡೆಸಿದ್ದಾರೆ.

    ಮುಸ್ತಫಾಬಾದ್ ಪ್ರದೇಶದಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವಂತೆ ಕಾಂಗ್ರೆಸ್‍ಗೆ ಮನವಿ ಮಾಡಿದ್ದೆವು. ಆದರೆ ಕಾಂಗ್ರೆಸ್ ನಮ್ಮೊಂದಿಗೆ ಅಹಂಕಾರದಿಂದ ವರ್ತಿಸಿತು. ಹೀಗಾಗಿ ದೆಹಲಿ ಲೋಕಸಭಾ ಕ್ಷೇತ್ರಗಳಿಂದ ಸ್ಪರ್ಧಿಸುವ ಕೈ ಅಭ್ಯರ್ಥಿಗಳು ಠೇವಣಿ ಕಳೆದುಕೊಳ್ಳುತ್ತಾರೆ ಎಂದು ಕಿಡಿಕಾರಿದ್ದಾರೆ.

    ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಆಮ್ ಆದ್ಮಿ ಪಕ್ಷದ ಮಧ್ಯ ಮತ ವಿಭಜನತೆಯಾಗದಂತೆ ಎಚ್ಚರವಹಿಸಬೇಕು. ದೆಹಲಿಯಲ್ಲಿ ಬಿಜೆಪಿಯನ್ನು ಮಣಿಸುವ ಸಾಮಥ್ರ್ಯ ಎಎಪಿಗೆ ಇದೆ. ಹೀಗಾಗಿ ನಮ್ಮ ಪಕ್ಷಕ್ಕೇ ಮತ ನೀಡಿ ಎಂದು ಕೇಜ್ರಿವಾಲ್ ಮತದಾರರಿಗೆ ಮನವಿ ಮಾಡಿಕೊಂಡರು.

    ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರನ್ನು ಸೋಲಿಸಲು ದೇಶದ ಜನರು ಮುಂದಾಗಿದ್ದಾರೆ. ಆದರೆ ಕಾಂಗ್ರೆಸ್ ಬಿಜೆಪಿ ವಿರೋಧಿ ಮತಗಳನ್ನು ವಿಭಜಿಸುವ ಮೂಲಕ ಕೇಸರಿ ಬಣಕ್ಕೆ ಸಹಾಯ ಮಾಡುತ್ತಿದೆ ಎಂದರು.

    ಎಎಪಿ ಮುಖಂಡ ಗೋಪಾಲ್ ರೈ ಮಾತನಾಡಿ, ಕಾಂಗ್ರೆಸ್ ಕೇವಲ ದೆಹಲಿಯಲ್ಲಿ ಬಿಜೆಪಿಗೆ ಸಹಾಯ ಮಾಡುತ್ತಿಲ್ಲ. ದೇಶದ ಎಲ್ಲ ರಾಜ್ಯಗಳಲ್ಲಿಯೂ ಬಿಜೆಪಿ ಅಭ್ಯರ್ಥಿ ಜಯಗಳಿಸಲು ಕಾಂಗ್ರೆಸ್ ಸಹಾಯ ಮಾಡುತ್ತಿದೆ ಎಂದು ಗಂಭೀರವಾಗಿ ಆರೋಪಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಕಾಂಗ್ರೆಸ್‍ಗೆ ಕೈಕೊಟ್ಟ ಆಪ್: ಲೋಕಸಭಾ ಚುನಾವಣೆಯಲ್ಲಿ ಎಎಪಿ ಏಕಾಂಗಿ ಸ್ಪರ್ಧೆ

    ಕಾಂಗ್ರೆಸ್‍ಗೆ ಕೈಕೊಟ್ಟ ಆಪ್: ಲೋಕಸಭಾ ಚುನಾವಣೆಯಲ್ಲಿ ಎಎಪಿ ಏಕಾಂಗಿ ಸ್ಪರ್ಧೆ

    ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಆಮ್ ಆದ್ಮಿ ಪಾರ್ಟಿ (ಎಎಪಿ) ದೆಹಲಿಯಲ್ಲಿ ಮೈತ್ರಿ ತಂತ್ರ ಅನುಸರಿಸುತ್ತಾರೆ ಎನ್ನುವುದು ಭಾರೀ ಚರ್ಚೆಯಾಗುತ್ತಿತ್ತು. ಆದರೆ ಈಗ ಏಕಾಂಗಿಯಾಗಿ ಸ್ಪರ್ಧಿಸುವ ನಿರ್ಧಾರವನ್ನು ಎಎಪಿ ಸ್ಪಷ್ಟಪಡಿಸಿದೆ.

    ದೆಹಲಿಯ ಒಟ್ಟು 7 ಲೋಕಸಭಾ ಕ್ಷೇತ್ರಗಳಿಂದಲೂ ಎಎಪಿ ಅಭ್ಯರ್ಥಿ ಸ್ಪರ್ಧಿಸಲಿದೆ. ಈ ನಿಟ್ಟಿನಲ್ಲಿ ಆರು ಜನರ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ಎಎಪಿ ದೆಹಲಿ ಸಂಚಾಲಕ ಗೋಪಾಲ್ ರೈ ತಿಳಿಸಿದ್ದಾರೆ.

    ಯಾರು ಯಾವ ಕ್ಷೇತ್ರ?:
    ಪೂರ್ವ ದೆಹಲಿಯಿಂದ ಸ್ಪರ್ಧಿಸಲು ಅತಿಶಿ ಮಾರ್ಲೆನಾ ಅವರನ್ನು ನಾಮನಿರ್ದೇಶನ ಮಾಡಲಾಗಿದ್ದು, ಗುಗ್ಗಾನ್ ಸಿಂಗ್ ವಾಯುವ್ಯ ದೆಹಲಿಯಿಂದ ಸ್ಪರ್ಧಿಸಲಿದ್ದಾರೆ. ಎಎಪಿ ರಾಜಕೀಯ ವ್ಯವಹಾರಗಳ ಸಮಿತಿಯ ಸದಸ್ಯ ರಾಘವ್ ಚಧಾ ಅವರು ದಕ್ಷಿಣ ದೆಹಲಿಯಿಂದ ಸ್ಪರ್ಧಿಸಲಿದ್ದು, ಪಂಕಜ್ ಗುಪ್ತಾ ಚಾಂದನಿ ಚೌಕ್ ಕ್ಷೇತ್ರದಿಂದ ಸ್ಪರ್ಧಿಸಲು ನಾಮನಿರ್ದೇಶನಗೊಂಡಿದ್ದಾರೆ. ದಿಲೀಪ್ ಪಾಂಡೆ ಮತ್ತು ಬ್ರಿಜೆಶ್ ಗೋಯಲ್ ಕ್ರಮವಾಗಿ ಈಶಾನ್ಯ ದೆಹಲಿ ಮತ್ತು ನವದೆಹಲಿಯಿಂದ ಸ್ಪರ್ಧಿಸಲಿದ್ದಾರೆ ಎಂದು ಗೋಪಾಲ್ ರೈ ಮಾಹಿತಿ ನೀಡಿದ್ದಾರೆ.

    ಈ ಮೂಲಕ 6 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಎಎಪಿ ಬಿಡುಗಡೆ ಮಾಡಿದ್ದು, ಪಶ್ಚಿಮ ದೆಹಲಿಯ ಸ್ಥಾನವನ್ನು ಕಾಯ್ದಿರಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕೇಜ್ರಿವಾಲ್ ವಿರುದ್ಧ ಬಿಜೆಪಿಯಿಂದ ಮಾನನಷ್ಟ ಮೊಕದ್ದಮೆ ದಾಖಲು

    ಕೇಜ್ರಿವಾಲ್ ವಿರುದ್ಧ ಬಿಜೆಪಿಯಿಂದ ಮಾನನಷ್ಟ ಮೊಕದ್ದಮೆ ದಾಖಲು

    ನವದೆಹಲಿ: ದೆಹಲಿಯಲ್ಲಿ 30 ಲಕ್ಷ ಮತದಾರರ ಹೆಸರನ್ನು ಕೈಬಿಡಲಾಗಿದೆ ಅಂತ ಆರೋಪಿಸಿದ್ದ ಸಿಎಂ ಅರವಿಂದ್ ಕೇಜ್ರಿವಾಲ್ ವಿರುದ್ಧ ಬಿಜೆಪಿ ಮಾನನಷ್ಟ ಮೊಕದ್ದಮೆ ದಾಖಲಿಸಿದೆ.

    ಅರವಿಂದ್ ಕೇಜ್ರಿವಾಲ್ ಅವರ ಜೊತೆಗೆ ಆಮ್ ಆದ್ಮಿ ಪಾರ್ಟಿ (ಎಎಪಿ) ರಾಜ್ಯ ಸಭಾ ಸದಸ್ಯ ಸುಶೀಲ್ ಕುಮಾರ್ ಗುಪ್ತಾ, ಶಾಸಕ ಮನೋಜ್ ಕುಮಾರ್, ವಕ್ತಾರ ಅತಿಶ್ ಮಲೆನಾ ಅವರ ವಿರುದ್ಧವೂ ದೆಹಲಿ ನ್ಯಾಯಾಲಯದಲ್ಲಿ ಬಿಜೆಪಿಯ ರಾಜೀವ್ ಬಾಬ್ಬರ್ ಅವರು ದೂರು ನೀಡಿದ್ದಾರೆ.

    ಮತದಾರರ ಪಟ್ಟಿಯಿಂದ ಹೆಸರನ್ನು ಕೈಬಿಡುವ ಕೆಲಸವನ್ನು ಯಾವುದೇ ಪಕ್ಷ ಮಾಡುವುದಿಲ್ಲ. ಇದು ಚುನಾವಣಾ ಆಯೋಗದಿಂದ ನಡೆಯುವ ಪ್ರಕ್ರಿಯೆ. ಈ ವಿಚಾರ ತಿಳಿದಿದ್ದರೂ ಬಿಜೆಪಿ ವಿರುದ್ಧ ದೂರುವುದು ಸರಿಯಲ್ಲ ಎಂದು ರಾಜೀವ್ ಬಾಬ್ಬರ್ ಆರೋಪಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಕೋರ್ಟ್ ಫೆಬ್ರವರಿ 5ರಂದು ವಿಚಾರಣೆ ನಡೆಸುವುದಾಗಿ ತಿಳಿಸಿದೆ.

    ಕೇಜ್ರವಾಲ್ ಟ್ವೀಟ್ ನಲ್ಲಿ ಏನಿತ್ತು?
    ಮತದಾರರ ಪಟ್ಟಿಯಿಂದ 40 ಸಾವಿರ ಜನರ ಹೆಸರನ್ನು ಕೈಬಿಟ್ಟಿಲ್ಲ. 4 ಲಕ್ಷ ಬನಿಯಾ ಜನಾಂಗ, 8 ಲಕ್ಷ ಮುಸ್ಲಿಂ, 15 ಲಕ್ಷ ಪೂರ್ವಾಂಚಲ್ ಸೇರಿದಂತೆ 30 ಲಕ್ಷ ಜನ ಹೆಸರನ್ನು ತೆಗೆದುಹಾಕಲಾಗಿದೆ ಎಂದು ದೆಹಲಿ ಸಿಎಂ ಅರಂವಿದ್ ಕೇಜ್ರಿವಾಲ್ ಡಿಸೆಂಬರ್ 6 ರಂದು ಟ್ವೀಟ್ ಮಾಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv