Tag: aap

  • ಜನವರಿ 20ರೊಳಗೆ ಪ್ರಣಾಳಿಕೆ ಬಿಡುಗಡೆ- 2015ಕ್ಕಿಂತ ಚಿಕ್ಕದಿರಲಿದೆ ಆಪ್ ಭರವಸೆ ಪಟ್ಟಿ

    ಜನವರಿ 20ರೊಳಗೆ ಪ್ರಣಾಳಿಕೆ ಬಿಡುಗಡೆ- 2015ಕ್ಕಿಂತ ಚಿಕ್ಕದಿರಲಿದೆ ಆಪ್ ಭರವಸೆ ಪಟ್ಟಿ

    ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ವಿಧಾನಸಭೆಗೆ ಫೆಬ್ರವರಿ 8ರಂದು ಚುನಾವಣೆ ನಡೆಯಲಿದೆ. ಈಗಾಗಲೇ ಪ್ರಚಾರ ಕಾರ್ಯಗಳನ್ನು ಆರಂಭಿಸಿರುವ ಕಾಂಗ್ರೆಸ್, ಬಿಜೆಪಿ ಮತ್ತು ಆಮ್ ಆದ್ಮಿ ಪಾರ್ಟಿ ಜನರನ್ನು ತಮ್ಮತ್ತ ಸೆಳೆಯುವ ಪ್ರಯತ್ನ ಮಾಡುತ್ತಿವೆ.

    ಈ ನಡುವೆ ಎಎಪಿ ಪ್ರಣಾಳಿಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಜನವರಿ 15ರಿಂದ 20ರೊಳಗೆ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಎಎಪಿ ನಾಯಕಿ ಅತೀಶಿ ನೇತೃತ್ವದಲ್ಲಿ ಮೂವರು ಸದಸ್ಯರ ಸಮ್ಮುಖದಲ್ಲಿ ಪ್ರಣಾಳಿಕೆ ಸಿದ್ಧಪಡಿಸಲು ಸಿದ್ಧತೆ ಮಾಡಿಕೊಂಡಿದೆ. ಅಷ್ಟೇ ಅಲ್ಲದೆ ಎಎಪಿ ಜೊತೆಗೂಡಿರುವ ಜೆಡಿಯು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಕಿಶೋರ್ ಕೂಡ ಪ್ರಣಾಳಿಕೆ ತಯಾರಿಕೆಗೆ ಸಹಾಯ ಮಾಡಲಿದ್ದಾರೆ ಎನ್ನಲಾಗಿದೆ.

    ಕಳೆದ ಅವಧಿಯಂತೆ ಈ ಬಾರಿಯೂ ಅತ್ಯಂತ ಚಿಕ್ಕ ಪ್ರಣಾಳಿಕೆ ಬಿಡುಗಡೆ ಮಾಡಲು ಎಎಪಿ ಪ್ಲಾನ್ ಮಾಡಿಕೊಂಡಿದೆ. ಅತ್ಯಂತ ಹೆಚ್ಚು ದತ್ತಾಂಶದಿಂದ ಈ ಪ್ರಣಾಳಿಕೆ ಕೂಡಿರಲಿದೆ ಎಂದು ಮೂಲಗಳು ಹೇಳಿದ್ದು, ಕಳೆದ ಐದು ವರ್ಷಗಳಲ್ಲಿ ಆರೋಗ್ಯ, ಶಿಕ್ಷಣ, ಸಾರಿಗೆ, ಸಂಪರ್ಕ, ಸ್ವಚ್ಛತೆ ಸೇರಿ ವಿವಿಧ ಆಯಾಮಗಳಲ್ಲಿ ದೆಹಲಿಯನ್ನು ಹೇಗೆ ಅಭಿವೃದ್ಧಿ ಪಡಿಸಲಾಗಿದೆ ಎನ್ನುವುದನ್ನು ವಿವರಿಸಲಾಗುತ್ತದೆ ಎಂಬ ಮಾಹಿತಿ ಮೂಲಗಳಿಂದ ಲಭ್ಯವಾಗಿದೆ.

    ಮನೆ ಮನೆ ಪ್ರಚಾರ ಹಾಗೂ ಟೌನ್ ಹಾಲ್‍ಗಳಲ್ಲಿ ನಡೆಸುತ್ತಿರುವ ಸಭೆಗಳಲ್ಲಿ ಈ ಬಗ್ಗೆ ಸಿಎಂ ಅರವಿಂದ್ ಕೇಜ್ರಿವಾಲ್ ಸುಳಿವು ನೀಡಿದ್ದಾರೆ. ಕಡಿಮೆ ಪುಟಗಳಲ್ಲಿ ಪ್ರಣಾಳಿಕೆ ಬಿಡುಗಡೆ ಮಾಡುವುದರಿಂದ ಹೆಚ್ಚು ಜನರನ್ನು ಪರಿಣಾಮಕಾರಿಯಾಗಿ ತಲುಪಬಹುದು ಎನ್ನುವುದು ಎಎಪಿ ಪಕ್ಷದ ಲೆಕ್ಕಾಚಾರವಾಗಿದೆ.

  • ದೆಹಲಿ ಚುನಾವಣೆಯಲ್ಲಿ ಆಪ್ ಪರ ಕೆಲಸ ಮಾಡಲಿದ್ದಾರೆ ಪ್ರಶಾಂತ್ ಕಿಶೋರ್

    ದೆಹಲಿ ಚುನಾವಣೆಯಲ್ಲಿ ಆಪ್ ಪರ ಕೆಲಸ ಮಾಡಲಿದ್ದಾರೆ ಪ್ರಶಾಂತ್ ಕಿಶೋರ್

    ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ನವ ಪೀಳಿಗೆಯ ಚುನಾವಣಾ ತಂತ್ರಗಾರ ಎಂದೇ ಖ್ಯಾತಿ ಪಡೆದಿರುವ ಪ್ರಶಾಂತ್ ಕಿಶೋರ್ ಆಮ್ ಆದ್ಮಿ ಪಕ್ಷದ ಪರವಾಗಿ ಕೆಲಸ ಮಾಡಲಿದ್ದಾರೆ.

    ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಟ್ವೀಟ್ ಮಾಡಿ ಪ್ರಶಾಂತ್ ಕಿಶೋರ್ ನೇತೃತ್ವದ ಐಪ್ಯಾಕ್ ಸಂಸ್ಥೆ ನಮ್ಮ ಜೊತೆ ಕೆಲಸ ಮಾಡಲಿದೆ ಎಂದು ಪ್ರಕಟಿಸಿದ್ದಾರೆ.

    ಇಂಡಿಯನ್ ಪೊಲಿಟಿಕಲ್ ಆಕ್ಷನ್ ಕಮಿಟಿ(ಐ-ಪ್ಯಾಕ್) ಈಗ ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಪರವಾಗಿ 2021ರ ಚುನಾವಣೆ ಕೆಲಸ ಮಾಡುತ್ತಿದೆ. ಇದನ್ನೂ ಓದಿ: ಆಂಧ್ರದಲ್ಲಿ ನಾಯ್ಡುಗೆ ಹೀನಾಯ ಸೋಲು -ಜಗನ್ ಗೆಲುವಿನ ಹಿಂದಿದೆ ಪ್ರಶಾಂತ್ ಕಿಶೋರ್ ತಂತ್ರಗಾರಿಕೆ!

    ಪ್ರಶಾಂತ್ ಕಿಶೋರ್ ಇತ್ತೀಚಿಗೆ ನಡೆದ ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಯಲ್ಲಿ ಆಂಧ್ರಪ್ರದೇಶದಲ್ಲಿ ವೈ ಜಗನ್ ಮೋಹನ್ ರೆಡ್ಡಿಯ ವೈಎಸ್‍ಆರ್ ಕಾಂಗ್ರೆಸ್ ಪರವಾಗಿ ಕೆಲಸ ಮಾಡಿ ಅಲ್ಲಿ ಪಕ್ಷ ಅಧಿಕಾರಕ್ಕೆ ಬರುವಂತೆ ನೋಡಿಕೊಂಡಿದ್ದರು. ಜೆಡಿಯು ಉಪಾಧ್ಯಕ್ಷರಾಗಿರುವ ಪ್ರಶಾಂತ್ ಕಿಶೋರ್ ಪೌರತ್ವ ತಿದ್ದುಪಡಿ ಮಸೂದೆಯನ್ನು ವಿರೋಧಿಸಿದ್ದರು. ಆದರೆ ಸಂಸತ್ತಿನಲ್ಲಿ ಜೆಡಿಯು ಮೋದಿ ಸರ್ಕಾರವನ್ನು ಬೆಂಬಲಿಸಿತ್ತು. ಈ ವಿಚಾರಕ್ಕೆ ಸಂಬಂಧಿಸಿದಂತೆ  ಬಿಹಾರ ಸಿಎಂ ನಿತೀಶ್ ಕುಮಾರ್ ಜೊತೆ ಭಿನ್ನಾಭಿಪ್ರಾಯ ಎದ್ದಿದೆ ಎನ್ನುವ ಸುದ್ದಿ ಪ್ರಕಟವಾಗಿದೆ.

    ಯಾರಿಗಾದರೂ ಪಕ್ಷದ ತೀರ್ಮಾನದ ಬಗ್ಗೆ ಭಿನ್ನಾಭಿಪ್ರಾಯವಿದ್ದರೆ ಅವರು ಪಕ್ಷ ಬಿಟ್ಟು ಹೋಗಬಹುದು ಎಂಬ ಸಂದೇಶವನ್ನು ಬಿಹಾರ ಸಿಎಂ ನಿತೀಶ್ ಕುಮಾರ್ ರವಾನಿಸಿದ್ದಾರೆ. ಈ ಸಂಬಂಧ ಪ್ರತಿಕ್ರಿಯಿಸಿರುವ ಜೆಡಿಯು ಸಂಸದರಾದ ರಾಮ್‍ಚಂದ್ರ ಸಿಂಗ್ ನಾನು ಯಾರ ಹೆಸರನ್ನೂ ಹೇಳುವುದಿಲ್ಲ. ಆದರೆ ಯಾರಿಗಾದರೂ ಸಮಸ್ಯೆ ಇದ್ದಲ್ಲಿ ಅವರು ಪಕ್ಷ ಬಿಟ್ಟು ಹೋಗಲು ಮುಕ್ತರು ಎಂದಿದ್ದಾರೆ.

    ಪ್ರಶಾಂತ್ ಕಿಶೋರ್ ಯಾರು?:
    2014ರ ಲೋಕಸಭಾ ಚುನಾವಣೆಯಲ್ಲಿ ಮೋದಿ ಕ್ಯಾಂಪ್‍ನಲ್ಲಿ ಗುರುತಿಸಿಕೊಂಡಿದ್ದ ಪ್ರಶಾಂತ್ ಕಿಶೋರ್ ನಂತರ ಬಿಹಾರ ಚುನಾವಣೆಯಲ್ಲಿ ನಿತೀಶ್ ಕುಮಾರ್ ಕ್ಯಾಂಪ್‍ನಲ್ಲಿ ಗುರುತಿಸಿಕೊಂಡು ಗೆಲುವಿನ ರೂವಾರಿಯಾಗಿದ್ದರು. ಈ ಕಾರಣಕ್ಕಾಗಿ ಪ್ರಶಾಂತ್ ಕಿಶೋರ್ ಅವರಿಗೆ ರಾಹುಲ್ ಗಾಂಧಿ ಉತ್ತರ ಪ್ರದೇಶ ಚುನಾವಣೆ ಉಸ್ತುವಾರಿ ವಹಿಸಿದ್ದರು. ಆದರೆ ಉತ್ತರ ಪ್ರದೇಶದಲ್ಲಿ ಪ್ರಶಾಂತ್ ಕಿಶೋರ್ ತಂತ್ರಗಾರಿಕೆಗೆ ಸೋಲಾಗಿತ್ತು. ಮೇಲ್ವರ್ಗದ ಮತಗಳನ್ನು ಸೆಳೆಯುವ ಉದ್ದೇಶ ಮತ್ತು ಕಾಂಗ್ರೆಸ್ ಯಾವಾಗಲೂ ಅಲ್ಪಸಂಖ್ಯಾತ ಮತ್ತು ಹಿಂದುಳಿದ ವರ್ಗಗಳ ಪಕ್ಷ ಎನ್ನುವ ಕಲ್ಪನೆಯಿಂದ ಹೊರಬರಲು ಪ್ರಶಾಂತ್ ಕಿಶೋರ್ ಅವರು ಈ ಬ್ರಾಹ್ಮಣ ಸಮುದಾಯ ವ್ಯಕ್ತಿಯನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಕಣಕ್ಕೆ ಇಳಿಸಲು ಶೀಲಾ ದೀಕ್ಷಿತ್ ಅವರನ್ನು ಸಿಎಂ ಅಭ್ಯರ್ಥಿಯನ್ನಾಗಿ ಘೋಷಿಸುವಂತೆ ಸಲಹೆ ನೀಡಿದ್ದರು. ಈ ಸಲಹೆಗೆ ಕಾಂಗ್ರೆಸ್ ವಲಯದಲ್ಲಿ ವಿರೋಧ ವ್ಯಕ್ತವಾಗಿತ್ತು.  ಇದನ್ನೂ ಓದಿ: ಅಮಿತ್ ಶಾ ಸಲಹೆ ನಂತ್ರ ಜೆಡಿಯುಗೆ ಪ್ರಶಾಂತ್ ಕಿಶೋರ್ ಸೇರ್ಪಡೆ

    2014ರ ಚುನಾವಣೆಯ ವೇಳೆ ಪ್ರಶಾಂತ್ ಕಿಶೋರ್ ಸಲಹೆಯಂತೆ ಚಾಯ್‍ಪೇ ಚರ್ಚಾ ಬಿಜೆಪಿಗೆ ಭಾರೀ ಯಶಸ್ಸನ್ನು ತಂದುಕೊಟ್ಟಿತ್ತು. ಇದಾದ ಬಳಿಕ ಅಮಿತ್ ಶಾ ಜೊತೆಗಿನ ಭಿನ್ನಾಭಿಪ್ರಾಯದಿಂದಾಗಿ ಪ್ರಶಾಂತ್ ಕಿಶೋರ್ ಬಿಜೆಪಿ ಪಾಳೆಯವನ್ನು ತೊರೆದಿದ್ದರು. ಬಿಹಾರದಲ್ಲಿ ಮಹಾಘಟ್‍ಬಂಧನ್ ಮೈತ್ರಿಕೂಟ ನಡೆಸಿ ನಿತೀಶ್ ಕುಮಾರ್ ಅವರನ್ನು ಪ್ರಶಾಂತ್ ಕಿಶೋರ್ ಗೆಲ್ಲಿಸಿದ್ದರು. 2017ರ ಪಂಜಾಬ್ ವಿಧಾನಸಭಾ ಚುನಾವಣೆ ವೇಳೆ ಪ್ರಶಾಂತ್ ಕಿಶೋರ್ ತಂಡ ಕಾಂಗ್ರೆಸ್‍ನೊಂದಿಗೆ ಕೈಜೋಡಿಸಿತ್ತು. ಆಗಲೂ ಕ್ಯಾಪ್ಟನ್ ಅಮರೀಂದರ್ ಸಿಂಗ್ ಎದುರಾಳಿಯನ್ನ ಮಣಿಸಿ ಅಧಿಕಾರ ಹಿಡಿದರು. ಹಲವು ವರ್ಷಗಳಿಂದ ಚುನಾವಣೆಯಲ್ಲಿ ಸತತ ಸೋಲು ಕಂಡಿದ್ದ ಕಾಂಗ್ರೆಸ್‍ಗೆ ಈ ಗೆಲುವು ಸಮಾಧಾನ ತಂದುಕೊಟ್ಟಿತ್ತು.

    ಜಗನ್ ಕ್ಲಿಕ್:
    ವಿಧಾನಸಭಾ ಚುನಾವಣಾ ಪ್ರಚಾರದ ಹಿನ್ನಲೆಯಲ್ಲಿ ಸಿದ್ಧಪಡಿಸಿದ ರಾವಾಲಿ ಜಗನ್ (ಜಗನ್ ಬರಬೇಕು), ಕಾವಾಲಿ ಜಗನ್ (ಜಗನ್ ಬೇಕು) ಹಾಡು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಯೂಟ್ಯೂಬ್‍ನಲ್ಲಿ ಈ ಹಾಡು ಬರೊಬ್ಬರಿ 2.2 ಕೋಟಿಗೂ ಅಧಿಕ ವೀಕ್ಷಣೆಯಾಗಿತ್ತು. ಅಷ್ಟೇ ಅಲ್ಲದೆ ಸಾಮಾಜಿಕ ಜಾಲತಾಣವನ್ನು ಜಗನ್‍ಮೋಹನ್ ಅವರು ಸಮರ್ಪಕವಾಗಿ ಬಳಸಿಕೊಂಡರು. ಈ ಮೂಲಕ ಯುವಕರ ಗಮನವನ್ನು ಸೆಳೆದು ಭರ್ಜರಿ ಗೆಲುವು ಸಾಧಿಸಿದರು. ಜಗನ್‍ಮೋಹನ್ ಅವರ ಈ ಎಲ್ಲ ಯಶಸ್ವಿ ಪ್ರಚಾರದ ಹಿಂದೆ ಪ್ರಶಾಂತ್ ಕಿಶೋರ್ ಅವರ ತಂತ್ರಗಾರಿಕೆ ಅಡಗಿತ್ತು.

  • ಪಂಜಾಬ್ ಕಾಂಗ್ರೆಸ್ ಸರ್ಕಾರಕ್ಕೆ ಶುರುವಾಯ್ತು-ಆಪ್ ಜೊತೆ ಕೈ ಜೋಡಿಸ್ತಾರಾ ಸಿಧು?

    ಪಂಜಾಬ್ ಕಾಂಗ್ರೆಸ್ ಸರ್ಕಾರಕ್ಕೆ ಶುರುವಾಯ್ತು-ಆಪ್ ಜೊತೆ ಕೈ ಜೋಡಿಸ್ತಾರಾ ಸಿಧು?

    ಚಂಡೀಗಢ: ಪಂಜಾಬ್‍ನಲ್ಲಿರುವ ಕಾಂಗ್ರೆಸ್ ಸರ್ಕಾರಕ್ಕೆ ಬಂಡಾಯದ ಬಿಸಿ ತಾಗಿದ್ದು, ಆಮ್ ಆದ್ಮಿ ಪಾರ್ಟಿ (ಆಪ್) ಜೊತೆ ಮಾಜಿ ಸಚಿವ ನವಜೋತ್ ಸಿಂಗ್ ಸಿಧು ಕೈ ಜೋಡಿಸ್ತಾರಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿವೆ. ಸಿಎಂ ಕ್ಯಾಪ್ಟನ್ ಅಮರಿಂದರ್ ಸಿಂಗ್ ಮೇಲೆ ಅಸಮಾಧಾನ ಹೊಂದಿರುವ ನವಜೋತ್ ಸಿಂಗ್ ಸಿಧು ಅವರನ್ನು ಸೆಳೆಯುವ ಪ್ರಯತ್ನವನ್ನು ಆಪ್ ನಾಯಕರು ಮಾಡುತ್ತಿದ್ದಾರೆ. ಬಹಿರಂಗವಾಗಿಯೇ ಸಿಧು ಅವರನ್ನು ಪಕ್ಷಕ್ಕೆ ಬರುವಂತೆ ಆಪ್ ನಾಯಕರು ಆಹ್ವಾನಿಸಿದ್ದಾರೆ.

    ಈ ಕುರಿತು ಮಾತನಾಡಿರುವ ಆಪ್ ಶಾಸಕ ಅಮನ್ ಅರೋಡಾ, ಸಿಎಂ ಅಮರಿಂದರ್ ಸಿಂಗ್ ಸರ್ಕಾರದ ನಾಲ್ವರು ಕಾಂಗ್ರೆಸ್ ಶಾಸಕರ ಮೇಲೆ ಭ್ರಷ್ಟಾಚಾರದ ಆರೋಪಗಳಿವೆ. ಸದ್ಯ ನಮಗೆ ಕಾಂಗ್ರೆಸ್ ನ 40 ಶಾಸಕರ ಬೆಂಬಲವಿದೆ. ಕಾಂಗ್ರೆಸ್ ಮತ್ತು ಆಪ್ (19) ಶಾಸಕರು ಸೇರಿದರೆ ಬಹುಮತ (59) ನಮ್ಮದಾಗತ್ತದೆ. ಹಾಗಾಗಿ ನವಜೋತ್ ಸಿಂಗ್ ಸಿಧು ಅವರಿಗೆ ಹೊಸ ಸರ್ಕಾರ ರಚಿಸಲು ಆಹ್ವಾನಿಸುತ್ತೇನೆ. ಈ ಸಂಬಂಧ ನಾವು ಕಾಂಗ್ರೆಸ್ ಶಾಸಕರೊಂದಿಗೆ ಮಾತನಾಡಿದ್ದೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಲೋಕಸಭಾ ಟಿಕೆಟ್ ನಿರಾಕರಿಸಿದ್ದಕ್ಕೆ ಸಿಧು ಪತ್ನಿ ಕಾಂಗ್ರೆಸ್‍ಗೆ ಗುಡ್ ಬೈ

    2017ರ ಫಲಿತಾಂಶ: 2017ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ 117 ಕ್ಷೇತ್ರಗಳ ಪೈಕಿ ಕಾಂಗ್ರೆಸ್ 77, ಶಿರೋಮಣಿ ಅಕಾಲಿ ದಳ 15 ಮತ್ತು ಆಪ್ 20, ಬಿಜೆಪಿ 3 ಮತ್ತು ಎಲ್‍ಐಪಿ 2ರಲ್ಲಿ ಗೆಲುವು ದಾಖಲಿಸಿತ್ತು. ಮ್ಯಾಜಿಕ್ ನಂಬರ್ ಸಹಿತ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಕಾಂಗ್ರೆಸ್, ಸರ್ಕಾರ ರಚನೆ ಮಾಡಿತ್ತು. ರಾಜ್ಯದಲ್ಲಿ ಉಪಚುನಾವಣೆ ನಡೆದ ಹಿನ್ನೆಲೆಯಲ್ಲಿ ಆಪ್ ಶಾಸಕರ ಸಂಖ್ಯೆ 20ರಿಂದ 19ಕ್ಕೆ ಇಳಿಕೆಯಾಗಿದೆ. ಸದ್ಯ ಕಾಂಗ್ರೆಸ್ ಸರ್ಕಾರ 80 ಶಾಸಕರ ಬಲವನ್ನು ಹೊಂದಿದೆ. ಇದನ್ನೂ ಓದಿ: ಪಂಜಾಬಿನಲ್ಲಿ ಕೈ ಬಂಡಾಯ – ಸಚಿವ ಸ್ಥಾನಕ್ಕೆ ಸಿಧು ರಾಜೀನಾಮೆ

    ಪಂಜಾಬ್ ನಲ್ಲಿ ಕಾಂಗ್ರೆಸ್ ಸರ್ಕಾರ ರಚನೆ ಆದಾಗನಿಂದಲೂ ಸಿಎಂ ಅಮರಿಂದರ್ ಸಿಂಗ್ ಮತ್ತು ನವಜೋತ್ ಸಿಂಗ್ ಸಿಧು ನಡುವೆ ಶೀತನ ಸಮರ ನಡೆದುಕೊಂಡು ಬಂದಿದೆ. ಸಿಎಂ ಮುನಿಸಿಕೊಂಡ ಸಿಧು ಹಲವು ಬಾರಿ ಬಹಿರಂಗವಾಗಿಯೇ ಅಸಮಾಧಾನ ಹೊರ ಹಾಕಿ, ಸಚಿವ ಸ್ಥಾನಕ್ಕೂ ರಾಜೀನಾಮೆ ನೀಡಿದ್ದಾರೆ. ಸದ್ಯ ಆಪ್ ನಾಯಕರ ಹೇಳಿಕೆ ಪಂಜಾಬ್ ರಾಜಕೀಯ ಅಂಗಳದಲ್ಲಿ ಸಂಚಲನ ಮೂಡಿಸಿದೆ. ಇದನ್ನೂ ಓದಿ: ಕ್ಯಾಪ್ಟನ್ ವಿರುದ್ಧ ಕಮೆಂಟ್, ಸಿಧುಗೆ ಅಸಮಾಧಾನ ಇದ್ರೆ ಸಚಿವ ಸ್ಥಾನ ಬಿಡಲಿ – ಪಂಜಾಬ್ ಸಚಿವ

  • ಪ್ರಚಾರದ ವೇಳೆ ಕೇಜ್ರಿವಾಲ್ ಹೇಳಿದ ಭವಿಷ್ಯ ನಿಜವಾಯ್ತು

    ಪ್ರಚಾರದ ವೇಳೆ ಕೇಜ್ರಿವಾಲ್ ಹೇಳಿದ ಭವಿಷ್ಯ ನಿಜವಾಯ್ತು

    ಬೆಂಗಳೂರು: ಲೋಕಸಭಾ ಚುನಾವಣಾ ಪ್ರಚಾರದ ವೇಳೆ ದೆಹಲಿಯ ಮುಖ್ಯಮಂತ್ರಿ, ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್ ನುಡಿದಿದ್ದ ಭವಿಷ್ಯ ನಿಜವಾಗಿದೆ.

    ಎನ್‍ಡಿಎ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದರೆ ಪ್ರಧಾನಿ ನರೇಂದ್ರ ಮೋದಿ ಅವರ ಕೈ ಕೆಳಗೆ ಗೃಹ ಸಚಿವರಾಗಿ ಅಮಿತ್ ಶಾ ನೇಮಕವಾಗುತ್ತಾರೆ ಎಂದು ಅರವಿಂದ್ ಕೇಜ್ರಿವಾಲ್ ಹೇಳಿದ್ದರು. ಇಂದು ನೂತನ ಸಚಿವರಿಗೆ ಖಾತೆ ಹಂಚಿಕೆಯಾಗಿದ್ದು ಅಮಿತ್ ಶಾ ಅವರಿಗೆ ಗೃಹ ಖಾತೆಯನ್ನು ನೀಡಲಾಗಿದೆ. ಇದನ್ನೂ ಓದಿ: ಅಮಿತ್ ಶಾಗೆ ಗೃಹ, ಸೀತಾರಾಮನ್‍ಗೆ ಹಣಕಾಸು – ಮೋದಿ ಸಂಪುಟದಲ್ಲಿ ಯಾರಿಗೆ ಯಾವ ಖಾತೆ? 

    ದಕ್ಷಿಣ ಗೋವಾದ ಮರ್ಮಗೋವಾದಲ್ಲಿ ಏಪ್ರಿಲ್ 14ರಂದು ನಡೆದ ಆಪ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ್ದ ಅವರು, ದೇಶದಲ್ಲಿ ಭಯಾನಕ ಆಟ ನಡೆಯುತ್ತಿದೆ. ನೀವು ಮತದಾನ ಮಾಡುವಾಗ ಈ ವಿಚಾರ ನಿಮಗೆ ತಿಳಿದಿರಲಿ. ಪ್ರಧಾನಿ ಮೋದಿ ಅಧಿಕಾರಕ್ಕೆ ಬಂದರೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಗೃಹ ಸಚಿವರಾಗುತ್ತಾರೆ ಅಂತ ಎಲ್ಲರೂ ಹೇಳುತ್ತಿದ್ದಾರೆ. ಒಂದು ವೇಳೆ ಅಮಿತ್ ಶಾ ಅವರು ಗೃಹ ಸಚಿವರಾದರೆ ದೇಶದಲ್ಲಿ ಏನೆಲ್ಲ ಆಗಬಹುದು ಎಂದು ನೀವೇ ಯೋಚನೆ ಮಾಡಿ ಎಂದು ಕಾರ್ಯಕರ್ತರಿಗೆ ಹೇಳಿದ್ದರು.

    ಪಶ್ಚಿಮ ಬಂಗಾಳದ ರಾಯ್‍ಗಂಜ್‍ನಲ್ಲಿ ನಡೆದಿದ್ದ ಬಿಜೆಪಿ ಪ್ರಚಾರದ ವೇಳೆ ಮಾತನಾಡಿದ್ದ ಅಮಿತ್ ಶಾ ಅವರು, ಕೇಂದ್ರದಲ್ಲಿ ಮತ್ತೆ ಅಧಿಕಾರಕ್ಕೆ ಬಂದರೆ ದೇಶಾದ್ಯಂತ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‍ಆರ್ ಸಿ) ನಡೆಸಲಾಗುವುದು. ದೇಶದ ಒಳಗಡೆ ನುಸುಳಿರುವ ಪ್ರತಿಯೊಬ್ಬರನ್ನೂ ಹೊರಕ್ಕೆ ದಬ್ಬುತ್ತೇವೆ. ಆದರೆ ಪಶ್ಚಿಮ ಬಂಗಾಳದಲ್ಲಿರುವ ವಲಸಿಗರು ಚಿಂತಿಸಬೇಕಿಲ್ಲ. ಬೌದ್ಧರು, ಹಿಂದೂಗಳು ಮತ್ತು ಸಿಖ್ಖರನ್ನು ಬಿಟ್ಟು ಉಳಿದೆಲ್ಲ ವಲಸಿಗರನ್ನು ದೇಶದಿಂದ ಹೊರಗೆ ಹಾಕಲಾಗುವುದು ಎಂದು ಹೇಳಿದ್ದಾರೆ. ದೇಶದಲ್ಲಿ ವಾಸಿಸುವ ಕ್ರಿಶ್ಚಿಯನ್, ಮುಸ್ಲಿಂ, ಪಾರ್ಸಿ, ಜೈನ್ ಧರ್ಮದವರು ಭಾರತದ ಒಳಗೆ ನುಸುಳಿ ಬಂದವರು ಎಂದು ಅಮಿತ್ ಶಾ ಭಾವಿಸಿದ್ದಾರೆ. ಇದು ಭಾರೀ ಅಪಾಯಕಾರಿ ಹೇಳಿಕೆಯಾಗಿದೆ ಎಂದು ವಾಗ್ದಾಳಿ ನಡೆಸಿದ್ದರು.

    ಗೋವಾದಲ್ಲಿ 15 ಲಕ್ಷ ಜನರು ಮತ್ತು ಸುಮಾರು ಶೇ.40 ರಷ್ಟು ಮಂದಿ ಅಲ್ಪಸಂಖ್ಯಾತರಿದ್ದಾರೆ. ಅಮಿತ್ ಶಾ ಅವರು ಗೋವಾದಲ್ಲಿ ಹೇಗೆ ರಾಷ್ಟ್ರೀಯ ಪೌರತ್ವ ನೋಂದಣಿ ಅಳವಡಿಸಿಕೊಳ್ಳುತ್ತಾರೆ? ಆರು ಲಕ್ಷ ಜನರು ಏನು ಮಾಡಬೇಕು? ನೋಂದಣಿ ಪ್ರಕ್ರಿಯೆಯಿಂದ ಅಮಿತ್ ಶಾ ಅವರು ಗಲಭೆ ಸೃಷ್ಟಿಸುತ್ತಾರಾ ಎಂದು ಅರವಿಂದ್ ಕೇಜ್ರಿವಾಲ್ ಪ್ರಶ್ನಿಸಿದ್ದರು.

    ದೆಹಲಿಯಲ್ಲಿ ಗುಜರಾತ್ ಮಾಡೆಲ್ ರಿಪೀಟ್ ಆಗಿದ್ದು, ನಂಬರ್ 1 ಸ್ಥಾನದಲ್ಲಿ ಮೋದಿಯವರು ಇದ್ದರೆ, ನಂಬರ್ 2 ಸ್ಥಾನದಲ್ಲಿ ಅಮಿತ್ ಶಾ ಇದ್ದಾರೆ. ಈ ಮೂಲಕ 2002ರ ಗುಜರಾತ್ ಸೀನ್ 2019ಕ್ಕೆ ದೆಹಲಿಯಲ್ಲಿ ರಿಪೀಟ್ ಆಗಿದ್ದು ರಾಜನಾಥ್ ಸಿಂಗ್ ಅವರು 3ನೇ ಸ್ಥಾನ ಪಡೆದಿದ್ದಾರೆ.

    ಅಮಿತ್ ಶಾ ಅವರಿಗೆ ಗೃಹ ಖಾತೆಯನ್ನು ಮೋದಿ ನೀಡಿದ್ದಾರೆ. ಈ ಹಿಂದೆ ಮೋದಿಯವರು ಗುಜರಾತ್ ನಲ್ಲಿ ಸಿಎಂ ಆಗಿದ್ದಾಗ ಅಮಿತ್ ಶಾ ಗೃಹಸಚಿವರಾಗಿದ್ದರು. ಕರ್ನಾಟಕದಿಂದ ಮಂತ್ರಿಯಾದ ನಿರ್ಮಲಾ ಸೀತಾರಾಮನ್ ಅವರಿಗೆ ಬಂಪರ್ ಆಫರ್ ಸಿಕ್ಕಿದ್ದು, ಅರುಣ್ ಜೇಟ್ಲಿ ನಿರ್ವಹಿಸುತ್ತಿದ್ದ ಹಣಕಾಸು ಖಾತೆ ದೊರಕಿದೆ. ಸೀತಾರಾಮನ್ ಅವರು ನಿರ್ವಹಿಸುತ್ತಿದ್ದ ರಕ್ಷಣಾ ಖಾತೆ ಈ ಬಾರಿ ರಾಜನಾಥ್ ಸಿಂಗ್ ಪಾಲಾಗಿದೆ.

  • ಚುನಾವಣೆ ನಡೆದಿದ್ದು ಮೋದಿ-ರಾಹುಲ್ ನಡುವೆ-ದೆಹಲಿಯಲ್ಲಿ ನಮ್ಮದೇ ಸರ್ಕಾರ

    ಚುನಾವಣೆ ನಡೆದಿದ್ದು ಮೋದಿ-ರಾಹುಲ್ ನಡುವೆ-ದೆಹಲಿಯಲ್ಲಿ ನಮ್ಮದೇ ಸರ್ಕಾರ

    ನವದೆಹಲಿ: ಲೋಕಸಭಾ ಚುನಾವಣೆ ಪ್ರಧಾನಿ ಮೋದಿ ಮತ್ತು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ನಡುವೆ ನಡೆದಿತ್ತು. ಆ ಚುನಾವಣೆಯಲ್ಲಿ ಅರವಿಂದ್ ಕೇಜ್ರಿವಾಲ್ ಇರಲಿಲ್ಲ. ಕೇಂದ್ರದಲ್ಲಿ ಯಾವುದೇ ಸರ್ಕಾರವಿರಲಿ. ದೆಹಲಿಯಲ್ಲಿ ನಮ್ಮದೇ ಸರ್ಕಾರ ಇರಲಿದೆ ಎಂದು ಆಪ್ ಮುಖ್ಯಸ್ಥ, ಸಿಎಂ ಅರವಿಂದ್ ಕೇಜ್ರಿವಾಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಆಪ್ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಸಿಎಂ ಅರವಿಂದ್ ಕೇಜ್ರಿವಾಲ್, ಲೋಕಸಭಾ ಚುನಾವಣೆಯ ಫಲಿತಾಂಶ ನೋಡಿ ಯಾರು ನಿರಾಶರಾಗಬೇಕಿಲ್ಲ. ದೆಹಲಿಯ ಜನತೆ ನಮ್ಮ ಸರ್ಕಾರದ ಬಗ್ಗೆ ಒಳ್ಳೆಯ ಮಾತುಗಳನ್ನಾಡುತ್ತಿದ್ದಾರೆ. ಹಾಗಾಗಿ ಎಲ್ಲರೂ ನಿಮ್ಮ ಕಾಲರ್ ಮೇಲೆ ಮಾಡಿಕೊಳ್ಳಿ ಎಂದು ಕಾರ್ಯಕರ್ತರಿಗೆ ಧೈರ್ಯ ತುಂಬಿದರು.

    ಚುನಾವಣೆ ಸಮಯದಲ್ಲಿ ಜನರು ಇದು ರಾಹುಲ್ ಗಾಂಧಿ ಮತ್ತು ಮೋದಿ ನಡುವಿನ ದೊಡ್ಡ ಚುನಾವಣೆ. ಹಾಗಾಗಿ ಮೋದಿ ಹೆಸರು ನೋಡಿ ಮತ ಹಾಕುತ್ತಿದ್ದೇವೆ. ವಿಧಾನಸಭಾ ಚುನಾವಣೆಯಲ್ಲಿ ಆಪ್ ಗೆ ನಮ್ಮ ಮತ ಎಂದು ಹೇಳುತ್ತಿದ್ದರು. ದೆಹಲಿಯ ಜನತೆ ನಿಮ್ಮನ್ನು ಹೊಗಳುತ್ತಿರುವ ಸಂದರ್ಭದಲ್ಲಿ ಆಪ್ ಕಾರ್ಯಕರ್ತರು ನಿರಾಶೆಗೆ ಒಳಗಾಗಬಾರದು. ದೊಡ್ಡ ಚುನಾವಣೆ ಮುಗಿದಿದ್ದು, ಸಣ್ಣ ಚುನಾವಣೆ ಬಂದಿದೆ. ಹೆಸರು ನೋಡಿ ಅಲ್ಲ, ಕೆಲಸ ನೋಡಿ ಮತ ಹಾಕಬೇಕೆಂದು ಜನತೆಯಲ್ಲಿ ಎಲ್ಲ ಕಾರ್ಯಕರ್ತರು ಮನವಿ ಮಾಡಿಕೊಳ್ಳಿ ಎಂದು ಸೂಚಿಸಿದರು.

    ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ದೆಹಲಿಯ ಏಳು ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ದಾಖಲಿಸಿದ್ದಾರೆ. ದೆಹಲಿಯ ಎಲ್ಲ ಬಿಜೆಪಿ ಅಭ್ಯರ್ಥಿಗಳು ಶೇ.50ಕ್ಕಿಂತ ಹೆಚ್ಚು ಮತಗಳನ್ನು ಪಡೆದುಕೊಂಡಿರುವುದು ಮತ್ತೊಂದು ವಿಶೇಷ. ದೆಹಲಿಯಲ್ಲಿ ಕಾಂಗ್ರೆಸ್ ಮತ್ತು ಆಪ್ ಶೂನ್ಯ ಫಲಿತಾಂಶ ದಾಖಲಿಸಿವೆ. ಕಾಂಗ್ರೆಸ್‍ನಿಂದ ಈಶಾನ್ಯ ದೆಹಲಿಯ ಕ್ಷೇತ್ರದಿಂದ ಕಣಕ್ಕಿಳಿದ್ದ ಮಾಜಿ ಸಿಎಂ ಶೀಲಾ ದೀಕ್ಷಿತ್ ಸಹ ಸೋಲು ಕಂಡಿದ್ದಾರೆ.

    https://www.youtube.com/watch?v=HHAaag6olJg

  • ಇಂದಿರಾ ಗಾಂಧಿಯಂತೆ ಬಿಜೆಪಿ ನನ್ನನ್ನೂ ಕೊಲ್ಲಬಹುದು: ಕೇಜ್ರಿವಾಲ್

    ಇಂದಿರಾ ಗಾಂಧಿಯಂತೆ ಬಿಜೆಪಿ ನನ್ನನ್ನೂ ಕೊಲ್ಲಬಹುದು: ಕೇಜ್ರಿವಾಲ್

    ನವದೆಹಲಿ: ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರಂತೆ ಬಿಜೆಪಿ ನನ್ನನ್ನೂ ಕೊಲ್ಲಬಹುದು ಎಂದು ದೆಹಲಿ ಮುಖ್ಯಮಂತ್ರಿ, ಆಮ್ ಆದ್ಮಿ ಪಾರ್ಟಿ (ಎಎಪಿ) ನಾಯಕ ಅರವಿಂದ್ ಕೇಜ್ರಿವಾಲ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

    ಮಾಧ್ಯಮವೊಂದರ ಜೊತೆಗೆ ಮಾತನಾಡಿದ ಅವರು, ನಾನು ಹತ್ಯೆಯಾಗುತ್ತೇನೆ ಎಂಬ ಭಯ ಕಾಡುತ್ತಿದೆ. ನನ್ನ ರಕ್ಷಣೆಗೆ ಇರುವ ಭದ್ರತಾ ಸಿಬ್ಬಂದಿ (ಪಿಎಸ್‍ಒ) ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮತ ಹಾಕಿದ್ದಾರೆ ಎಂದು ಹೇಳಿದ್ದಾರೆ.

    ನನ್ನ ವಾಹನದ ಹಿಂದೆ, ಮುಂದೆ ಸಾಗುತ್ತಿರುವ ಪೊಲೀಸ್ ಸಿಬ್ಬಂದಿ ನಮ್ಮ ಕಾರ್ಯ ಚಟುವಟಿಕೆಯ ಕುರಿತಾದ ವರದಿಯನ್ನು ಪ್ರಧಾನಿ ಮೋದಿ ಅವರಿಗೆ ನೀಡುತ್ತಾರೆ. ಅಷ್ಟೇ ಅಲ್ಲದೆ ಅಂಗರಕ್ಷಕರೂ ಕೂಡ ಮೋದಿಗೆ ನನ್ನ ಎಲ್ಲ ಮಾಹಿತಿಯನ್ನು ನೀಡುತ್ತಾರೆ. ಈ ಮೂಲಕ ನನ್ನ ಜೀವನವು ಕೇವಲ ಎರಡೇ ನಿಮಿಷದಲ್ಲಿ ಮುಗಿದು ಹೋಗುತ್ತದೆ ಎಂದು ತಿಳಿಸಿದರು.

    ಲೋಕಸಭಾ ಚುನಾವಣೆ ಕೊನೆಯ ಹಂತದ ಮತದಾನ ನಾಳೆ ನಡೆಯಲಿದೆ. ಈ ನಡುವೆ ಅರವಿಂದ್ ಕೇಜ್ರಿವಾಲ್ ಅವರು ನೀಡಿದ ಹೇಳಿಕೆ ಭಾರೀ ಚರ್ಚೆಗೆ ಕಾರಣವಾಗಿದೆ. ದೆಹಲಿ ಸಿಎಂ ಹೇಳಿಕೆಗೆ ಬಿಜೆಪಿ ಹಾಗೂ ಮೋದಿ ಅಭಿಮಾನಿಗಳು ಖಂಡನೆ ವ್ಯಕ್ತಪಡಿಸಿದ್ದಾರೆ.

  • ಎಂಪಿ ಟಿಕೆಟ್ ನೀಡಲು 6 ಕೋಟಿ ಪಡೆದ್ರು ಕೇಜ್ರಿವಾಲ್: ಆಪ್ ಅಭ್ಯರ್ಥಿ ಪುತ್ರನಿಂದ ಆರೋಪ

    ಎಂಪಿ ಟಿಕೆಟ್ ನೀಡಲು 6 ಕೋಟಿ ಪಡೆದ್ರು ಕೇಜ್ರಿವಾಲ್: ಆಪ್ ಅಭ್ಯರ್ಥಿ ಪುತ್ರನಿಂದ ಆರೋಪ

    ನವದೆಹಲಿ: ಪಶ್ಚಿಮ ದೆಹಲಿ ಲೋಕಸಭಾ ಟಿಕೆಟ್‍ಗಾಗಿ ನನ್ನ ತಂದೆ ದೆಹಲಿ ಮುಖ್ಯಮಂತ್ರಿ, ಆಮ್ ಆದ್ಮಿ ಪಾರ್ಟಿ (ಎಎಪಿ)ನಾಯಕ ಅರವಿಂದ್ ಕೇಜ್ರಿವಾಲ್ ಅವರಿಗೆ 6 ಕೋಟಿ ರೂ. ನೀಡಿದ್ದಾರೆ ಎಂದು ಎಎಪಿ ಅಭ್ಯರ್ಥಿ ಪುತ್ರ ದೂರಿದ್ದಾರೆ.

    ಈ ಆರೋಪವನ್ನು ಪಶ್ಚಿಮ ದೆಹಲಿ ಕ್ಷೇತ್ರದ ಎಎಪಿ ಅಭ್ಯರ್ಥಿ ಬಲ್‍ಬೀರ್ ಸಿಂಗ್ ಜಾಖರ್ ಅವರ ಪುತ್ರ ಉದಯ್ ಮಾಡಿದ್ದಾರೆ. ದೆಹಲಿ ಲೋಕಸಭಾ ಕ್ಷೇತ್ರಗಳ ಮತದಾನವು ಭಾನುವಾರ ನಡೆಯಲಿದೆ. ಚುನಾವಣಾ ಅಭ್ಯರ್ಥಿಯ ಪುತ್ರನೇ ಈ ಆರೋಪ ಮಾಡಿದ್ದು, ರಾಷ್ಟ್ರ ರಾಜಕಾರಣದಲ್ಲಿ ಭಾರೀ ಚರ್ಚೆಯಾಗುತ್ತಿದೆ.

    ನನ್ನ ತಂದೆ ಇತ್ತೀಚೆಗೆ ರಾಜಕೀಯ ಪ್ರವೇಶ ಮಾಡಿದ್ದಾರೆ. ಆಗ ಅರವಿಂದ್ ಕೇಜ್ರಿವಾಲ್ ಅವರಿಗೆ ನನ್ನ ತಂದೆ 6 ಕೋಟಿ ರೂ. ಪಾವತಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ಸೂಕ್ತ ದಾಖಲೆಗಳು ನನ್ನ ಬಳಿ ಇವೆ ಎಂದು ಉದಯ್ ತಿಳಿಸಿದ್ದಾರೆ.

    ಹಣವನ್ನು ನೇರವಾಗಿ ಅರವಿಂದ್ ಕೇಜ್ರಿವಾಲ್ ಹಾಗೂ ಗೋಪಾಲ್ ರಾಯ್ ಅವರಿಗೆ ನೀಡಲಾಗಿದೆ. ಈ ವಿಚಾರ ಪ್ರಸಾರವಾದ ಬಳಿಕ ನನ್ನನ್ನು ಮನೆಯೊಳಗೆ ಇರುಲು ಬಿಡುತ್ತಾರೋ ಇಲ್ಲವೋ ಗೊತ್ತಿಲ್ಲ. ಈ ಮಾಹಿತಿಯನ್ನು ದೇಶದ ಜನರ ಮುಂದೆ ಹೇಳಿಕೊಳ್ಳಬೇಕಾಗಿರುವುದು ನನ್ನ ಕರ್ತವ್ಯ ಎಂದು ಹೇಳಿದ್ದಾರೆ.

    ಲೋಕಸಭಾ ಚುನಾವಣಾ ಟಿಕೆಟ್ ಅಷ್ಟೇ ಅಲ್ಲ, ವಿವಿಧ ಚುನಾವಣೆ ವೇಳೆಯೂ ಅಭ್ಯರ್ಥಿಗಳಿಂದ ಹಣ ಪಡೆಯಲಾಗುತ್ತಿದೆ. ಭ್ರಷ್ಟಚಾರ ವಿರುದ್ಧ ಬಂದ ಪಕ್ಷವೇ ಭ್ರಷ್ಟಾಚಾರ ನಡೆಸಿದೆ ಎಂದು ಆರೋಪಿಸಿದರು.

    ಬಲ್‍ಬೀರ್ ಸಿಂಗ್ ಜಾಖರ್ ಅವರು ಪುತ್ರ ಉದಲ್ ಆರೋಪವನ್ನು ತಳ್ಳಿ ಹಾಕಿದ್ದಾರೆ. ಉದಯ್ ನನ್ನ ಜೊತೆಗೆ ವಾಸಿಸುತ್ತಿಲ್ಲ. ನಾನು ಅಭ್ಯರ್ಥಿಯಾಗುವ ಕುರಿತು ಯಾವತ್ತೂ ಆತನ ಜೊತೆಗೆ ಚರ್ಚೆ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

  • ಪ್ರಿಯಾಂಕ ಗಾಂಧಿಯಿಂದ ಸಮಯ ವ್ಯರ್ಥ: ಕೇಜ್ರಿವಾಲ್ ಟೀಕೆ

    ಪ್ರಿಯಾಂಕ ಗಾಂಧಿಯಿಂದ ಸಮಯ ವ್ಯರ್ಥ: ಕೇಜ್ರಿವಾಲ್ ಟೀಕೆ

    ದೆಹಲಿ: ಉತ್ತರ ಪ್ರದೇಶ ಪೂರ್ವದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಅವರು ಚುನಾವಣಾ ಪ್ರಚಾರ ನಡೆಸುವ ಮೂಲಕ ಸಮಯ ವ್ಯರ್ಥ ಮಾಡುತ್ತಿದ್ದಾರೆ ಎಂದು ದೆಹಲಿ ಮುಖ್ಯಮಂತ್ರಿ, ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ಅರವಿಂದ್ ಕೇಜ್ರಿವಾಲ್ ಕಿಡಿಕಾರಿದ್ದಾರೆ.

    ದೆಹಲಿ ಎಎಪಿ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರಿಯಾಂಕ ಗಾಂಧಿ ಅವರು ಯಾಕೆ ಮಧ್ಯಪ್ರದೇಶ ಹಾಗೂ ರಾಜಸ್ಥಾನದಲ್ಲಿ ಪ್ರಚಾರ ಮಾಡುತ್ತಿಲ್ಲ. ಉತ್ತರ ಪ್ರದೇಶದಲ್ಲಿ ಬಹುಜನ ಸಮಾಜ ಪಕ್ಷ (ಬಿಎಸ್‍ಪಿ), ಸಮಾಜವಾದಿ ಪಕ್ಷ (ಎಸ್‍ಪಿ) ವಿರುದ್ಧ ಪ್ರಚಾರ ಮಾಡುತ್ತಿದ್ದಾರೆ. ದೆಹಲಿಯಲ್ಲಿ ನಮ್ಮ ವಿರುದ್ಧವೇ ಪ್ರಚಾರ ಮಾಡುತ್ತಿದ್ದಾರೆ. ಈ ಮೂಲಕ ಸುಮ್ಮನೆ ತಮ್ಮ ಸಮಯವನ್ನು ವ್ಯರ್ಥ ಮಾಡುತ್ತಿದ್ದಾರೆ ಎಂದು ಗುಡುಗಿದರು.

    ಪ್ರಿಯಾಂಕ ಗಾಂಧಿ ಹಾಗೂ ಸಹೋದರ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ನೇರವಾಗಿ ಬಿಜೆಪಿ ವಿರುದ್ಧ ಸ್ಪರ್ಧೆ ಮಾಡುತ್ತಿರುವ ಲೋಕಸಭಾ ಕ್ಷೇತ್ರಗಳಲ್ಲಿ ಪ್ರಚಾರ ಮಾಡುತ್ತಿಲ್ಲ ಎಂದು ದೂರಿದರು.

    ಮಧ್ಯಪ್ರದೇಶ ಹಾಗೂ ರಾಜಸ್ಥಾನದಲ್ಲಿ ಕಾಂಗ್ರೆಸ್ ಸರ್ಕಾರವಿದೆ. ಮಧ್ಯಪ್ರದೇಶದ ಭೋಪಾಲ್, ಸಾಗರ್ ಸೇರಿದಂತೆ 8 ಲೋಕಸಭಾ ಕ್ಷೇತ್ರಗಳ ಮತದಾನ ಮೇ 19ರಂದು ನಡೆಯಲಿದೆ. ಉಜೈನಿ, ಧಾರ್, ಇಂದೋರ್ ಸೇರಿದಿಂತೆ 8 ಕ್ಷೇತ್ರಗಳ ಮತದಾನ ಮೇ 19ರಂದು ನಡೆಯಲಿದೆ.

    ದೆಹಲಿಯಲ್ಲಿ ಒಟ್ಟು 7 ಲೋಕಸಭಾ ಕ್ಷೇತ್ರಗಳಿದ್ದು, ಎಲ್ಲ ಕ್ಷೇತ್ರಗಳ ಮತದಾನ ಮೇ 19ರಂದು ನಡೆಯಲಿದ್ದು, ಫಲಿತಾಂಶ ಮೇ 23ರಂದು ಹೊರ ಬೀಳಲಿದೆ.

  • ಎಎಪಿಯ ಮತ್ತೊಬ್ಬ ಶಾಸಕ ಬಿಜೆಪಿ ಸೇರ್ಪಡೆ

    ಎಎಪಿಯ ಮತ್ತೊಬ್ಬ ಶಾಸಕ ಬಿಜೆಪಿ ಸೇರ್ಪಡೆ

    – ಕಮಲ ಹಿಡಿದ ಶಾಸಕ ದೇವಿಂದ್ರ ಕುಮಾರ್

    ನವದೆಹಲಿ: ಆಮ್ ಆದ್ಮಿ ಪಕ್ಷದ (ಎಎಪಿ) ಶಾಸಕ ಅನಿಲ್ ವಾಜಪೇಯಿ ಅವರ ಬೆನ್ನಲ್ಲೇ ಮತ್ತೋರ್ವ ಶಾಸಕ ಬಿಜೆಪಿ ಸೇರ್ಪಡೆಯಾಗಿದ್ದಾರೆ.

    ಎಎಪಿ ಪಕ್ಷದ ರೆಬಲ್ ಶಾಸಕ ದೇವಿಂದ್ರ ಕುಮಾರ್ ಸೆಹ್ರಾವತ್ ಅವರು ಇಂದು ಕೇಂದ್ರ ಸಚಿವ ವಿಜಯ್ ಗೋಯಲ್ ಅವರ ನೇತೃತ್ವದಲ್ಲಿ ಬಿಜೆಪಿ ಸೇರಿದ್ದಾರೆ.

    ದೇವಿಂದ್ರ ಕುಮಾರ್ ಸೆಹ್ರಾವತ್ ಅವರು ನಿವೃತ್ತ ಕರ್ನಲ್ ಅಧಿಕಾರಿಯಾಗಿದ್ದು, 2015 ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜ್ವಾಸನ್ ಕ್ಷೇತ್ರದಿಂದ ಸ್ಪರ್ಧಿಸಿ ಜಯಗಳಿಸಿದ್ದರು. ಆದರೆ ಪಕ್ಷ ವಿರೋಧಿ ಚಟುವಟಿಕೆಯಿಂದಾಗಿ ಅವರನ್ನು 2016ರಲ್ಲಿ ಪಕ್ಷದಿಂದ ಅಮಾನತುಗೊಳಿಸಲಾಗಿತ್ತು.

    ದೆಹಲಿ ಗಾಂಧಿನಗರದ ಎಎಪಿ ಶಾಸಕ ಅನಿಲ್ ವಾಜಪೇಯಿ ಅವರು ನಾಲ್ಕು ದಿನಗಳ ಹಿಂದೆಯಷ್ಟೇ ಬಿಜೆಪಿ ಸೇರಿದ್ದರು. ಈ ಮೊದಲು ಹರಿಂದರ್ ಸಿಂಗ್ ಖಾಲ್ಸಾ ಅವರು ಬಿಜೆಪಿ ಸೇರ್ಪಡೆಯಾಗಿದ್ದರು. ಈ ಮೂಲಕ ಕಳೆದ ಎರಡು ತಿಂಗಳಲ್ಲಿ ಎಎಪಿ ಒಟ್ಟು ಮೂರು ಜನ ಶಾಸಕರು ಪಕ್ಷ ತೊರೆದು ಬಿಜೆಪಿ ಮನೆ ಸೇರಿದ್ದಾರೆ.

    ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಇತ್ತೀಚೆಗೆ ಟ್ವೀಟ್ ಮಾಡಿ, ಮೋದಿ ಜೀ, ರಾಜ್ಯಗಳಲ್ಲಿ ವಿರೋಧ ಪಕ್ಷದ ಶಾಸಕರನ್ನು ಖರೀದಿಸುವ ಮೂಲಕ ನೀವು ಸರ್ಕಾರವನ್ನು ಉರುಳಿಸುತ್ತೀರಾ? ಇದು ನಿಮ್ಮ ಪ್ರಜಾಪ್ರಭುತ್ವದ ವ್ಯಾಖ್ಯಾನವೇ? ಶಾಸಕರು ಖರೀದಿಸಲು ಇಷ್ಟೊಂದು ಹಣವನ್ನು ಎಲ್ಲಿಂದ ತರುತ್ತಿರುವಿರಿ ಎಂದು ಪ್ರಧಾನಿ ಮೋದಿ ಅವರನ್ನು ಪ್ರಶ್ನಿಸಿದ್ದರು.

    ನೀವು ಈ ಹಿಂದೆ ಅನೇಕ ಬಾರಿ ನಮ್ಮ ಪಕ್ಷದ ಶಾಸಕರನ್ನು ಖರೀದಿಸಲು ಯತ್ನಿಸಿದ್ದೀರಿ. ಆದರೆ ನಮ್ಮ ಶಾಸಕರನ್ನು ಖರೀದಿಸುವುದು ಸುಲಭದ ಮಾತಲ್ಲ ಎಂದು ಹೇಳಿದ್ದರು.

  • ಅಸಮಾಧಾನಗೊಂಡ ಆಪ್ ಕಾರ್ಯಕರ್ತನಿಂದಲೇ ಕೇಜ್ರಿವಾಲ್‍ಗೆ ಕಪಾಳಮೋಕ್ಷ: ಡೆಲ್ಲಿ ಪೊಲೀಸ್

    ಅಸಮಾಧಾನಗೊಂಡ ಆಪ್ ಕಾರ್ಯಕರ್ತನಿಂದಲೇ ಕೇಜ್ರಿವಾಲ್‍ಗೆ ಕಪಾಳಮೋಕ್ಷ: ಡೆಲ್ಲಿ ಪೊಲೀಸ್

    ನವದೆಹಲಿ: ಆಮ್ ಆದ್ಮಿ ಪಕ್ಷದ ಕಾರ್ಯಕರ್ತನಿಂದಲೇ ಸಿಎಂ ಅರವಿಂದ್ ಕೇಜ್ರಿವಾಲ್ ಅವರ ಮೇಲೆ ಹಲ್ಲೆಯಾಗಿದೆ ಎಂದು ದೆಹಲಿ ಪೊಲೀಸರು ಮಾಹಿತಿ ನೀಡಿದ್ದಾಗಿ ಮಾಧ್ಯಮವೊಂದು ವರದಿ ಮಾಡಿದೆ.

    ದೆಹಲಿಯ ಮೋತಿ ನಗರ್ ಬಳಿ ಕೇಜ್ರಿವಾಲ್ ಅವರಿಗೆ ಕಪಾಳಮೋಕ್ಷ ಮಾಡಿದ ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಪ್ರಕರಣದ ಗಂಭೀರವಾಗಿ ತೆಗೆದುಕೊಂಡ ದೆಹಲಿ ಪೊಲೀಸರು ಡಿಸಿಪಿ ಅಧಿಕಾರಿಯ ನೇತೃತ್ವದಲ್ಲಿ ತನಿಖೆ ನಡೆಸಿದ್ದರು. ಈ ವೇಳೆ ಬಂಧಿತ ಸುರೇಶ್ ಮೋತಿ ನಗರ್ ನಿವಾಸಿ ಎಂದು ತಿಳಿದು ಬಂದಿದೆ.

    ತನ್ನ ವ್ಯಾಪ್ತಿಯ ಪ್ರದೇಶದಲ್ಲಿ ಎಎಪಿ ಪಕ್ಷದ ಜವಾಬ್ದಾರಿ ವಹಿಸಿಕೊಂಡಿದ್ದ ಸುರೇಶ್, ಪಕ್ಷದ ಸಭೆಗಳನ್ನು ನಡೆಸುವ ಹಾಗೂ ನಿರ್ವಹಣೆ ಮಾಡುವ ಕೆಲಸ ಮಾಡುತ್ತಿದ್ದ. ಆದರೆ ಪಕ್ಷದ ನಾಯಕರ ನಡೆ ಹಾಗೂ ವರ್ತನೆಯಿಂದ ಬೇಸತ್ತಿದ್ದ ಸುರೇಶ್ ಅಸಮಾಧಾನಗೊಂಡು ಕೃತ್ಯ ಎಸಗಿದ್ದಾನೆ ಎಂಬ ಮಾಹಿತಿ ಲಭಿಸಿದ್ದಾಗಿ ದೆಹಲಿ ಪೊಲೀಸ್ ಹೆಚ್ಚುವರಿ ಪಿಆರ್ ಒ ಅನಿಲ್ ಮಿಟ್ಟಲ್ ಮಾಹಿತಿ ನೀಡಿದ್ದಾರೆ.

    ಪಕ್ಷದ ಮುಖಂಡರು ಸೇನೆಯ ಬಗ್ಗೆ ಅವಹೇಳಕಾರಿಯಾಗಿ ಹೇಳಿಕೆ ನೀಡಿದ್ದು ಕೂಡ ಆತ ಕೋಪಗೊಳ್ಳುವಂತೆ ಮಾಡಿತ್ತು ಎಂದು ತಿಳಿಸಿದ್ದಾರೆ. ಅಲ್ಲದೇ ಈ ವೇಳೆ ಭದ್ರತೆಯ ಕುರಿತು ಕೂಡ ತನಿಖೆ ನಡೆಸಲಾಗುತ್ತಿದೆ ಸ್ಪಷ್ಟಪಡಿಸಿದ್ದಾರೆ. ಸದ್ಯ ಯುವಕನ ವಿರುದ್ಧ ಸೆಕ್ಷನ್ 323ರ ಅನ್ವಯ ಪ್ರಕರಣ ದಾಖಲಿಸಲಾಗಿದೆ.

    ಘಟನೆ ಬಗ್ಗೆ ಬಿಜೆಪಿ ವಿರುದ್ಧ ಆರೋಪ ಮಾಡಿದ್ದ ಎಎಪಿ ಪಕ್ಷದ ನಾಯಕರು ರಾಜಕೀಯ ಪ್ರಾಯೋಜಿತ ಘಟನೆ ಎಂದು ಕಿಡಿಕಾರಿದ್ದರು. ಅಲ್ಲದೇ ಪೊಲೀಸರ ಹೇಳಿಕೆ ವಿರುದ್ಧ ಕಿಡಿಕಾರಿರುವ ಎಎಪಿ ಮುಖಂಡ ಸೌರಭ್ ಭಾರಧ್ವಜ್, ಆರೋಪಿಯ ಪತ್ನಿ ತನ್ನ ಪತಿ ಸುರೇಶ್ ಮೋದಿ ಬೆಂಬಲಿಗ ಹೇಳಿಕೆ ನೀಡಿದ್ದಾರೆ. ಆದರೆ ಪೊಲೀಸರ ಪ್ರಕರಣವನ್ನು ತಿರುಚಲು ಯತ್ನಿಸುತ್ತಿದ್ದಾರೆ ಎಂದು ಕಿಡಿಕಾರಿ ಟ್ವೀಟ್ ಮಾಡಿದ್ದಾರೆ.