Tag: aap

  • ದೆಹಲಿ ಎಲೆಕ್ಷನ್ ಮತ್ತು ಶಹೀನ್ ಬಾಗ್ – ಯಾಕೆ ಸುದ್ದಿಯಾಗುತ್ತಿದೆ? ಯಾರು ಏನು ಹೇಳಿದ್ದಾರೆ?

    ದೆಹಲಿ ಎಲೆಕ್ಷನ್ ಮತ್ತು ಶಹೀನ್ ಬಾಗ್ – ಯಾಕೆ ಸುದ್ದಿಯಾಗುತ್ತಿದೆ? ಯಾರು ಏನು ಹೇಳಿದ್ದಾರೆ?

    ದೇಶಾದ್ಯಂತ ಜೆಎನ್‍ಯು ಬಳಿಕ ಈಗ ಭಾರೀ ಚರ್ಚೆಯಲ್ಲಿರೋದು ಶಹೀನ್ ಬಾಗ್. ಪೌರತ್ವ ಕಾಯಿದೆ ವಿರೋಧಿಸಿ ದೆಹಲಿಯಲ್ಲಿ ನಡೆದ ಹೋರಾಟದಲ್ಲಿ ಜೆಎನ್‍ಯು ಅಂದ್ರೆ ಜವಹಾರಲಾಲ್ ನೆಹರು ವಿಶ್ವವಿದ್ಯಾಲಯ ಎಷ್ಟು ಸುದ್ದಿಯಾಗಿತ್ತೋ? ಅದರಷ್ಟೇ ಮಟ್ಟಿಗೆ ಈಗ ಸುದ್ದಿಯಾಗ್ತಿರೋದು ಶಹೀನ್ ಬಾಗ್. ಕಳೆದ ಎರಡು ತಿಂಗಳಿಂದ ಶಹೀನ್ ಬಾಗ್‍ನಲ್ಲಿ ಸಿಎಎ ಮತ್ತು ಎನ್‌ಆರ್‌ಸಿ ವಿರೋಧಿ ಪ್ರತಿಭಟನೆಗಳು ನಡೀತಿವೆ. ಈ ಮೂಲಕ ಸಿಎಎ, ಎನ್​ಆರ್​ಸಿ ವಿರೋಧಿ ಹೋರಾಟದ ವೇದಿಕೆಯಾಗಿ ಮಾರ್ಪಟ್ಟಿದೆ. ಮಹಿಳೆಯರು ಸೇರಿದಂತೆ ಸಾವಿರಾರು ಜನ ಹೋರಾಟ ಮಾಡ್ತಿದ್ದಾರೆ.

    ಶಹೀನ್‍ಬಾಗ್ ಹೋರಾಟಗಾರರು ರೇಪಿಸ್ಟ್‌ಗಳು
    ಫೆಬ್ರವರಿ 8ರ ದೆಹಲಿ ವಿಧಾನಸಭೆ ಎಲೆಕ್ಷನ್‍ಗೆ ದಿನಗಣನೆ ಇರುವಾಗಲೇ ಶಹೀನ್ ಬಾಗ್ ಈಗ ರಾಜಕೀಯ ವಸ್ತುವಾಗಿದೆ. ಹೀಗಾಗಿ, ಬಿಜೆಪಿ ನಾಯಕರು ಈ ಶಹೀನ್ ಬಾಗ್ ಅನ್ನು ದೇಶದ್ರೋಹಿ, ಪ್ರಚೋದನಕಾರಿ ಹೇಳಿಕೆಗೆ ಅಡ್ಡೆ ಅಂತ ಕರೆದಿದ್ದಾರೆ. ಅಷ್ಟೇ ಅಲ್ಲ, ಶಹೀನ್ ಬಾಗ್‍ನ ಪ್ರತಿಭಟನಾಕಾರರನ್ನು ಅತ್ಯಾಚಾರಿಗಳು, ಕೊಲೆಗಡುಕರು. ಈ ಪ್ರತಿಭಟನಾಕಾರರು ನಿಮ್ಮ ಮನೆಗಳಿಗೆ ನುಗ್ಗಿ ನಿಮ್ಮ ಸಹೋದರಿಯರು, ಹೆಣ್ಣು ಮಕ್ಕಳನ್ನು ಅತ್ಯಾಚಾರ ಮಾಡ್ತಾರೆ ಅಂತ ಪಶ್ಚಿಮ ದೆಹಲಿಯ ಬಿಜೆಪಿಯ ಸಂಸದ ಪರ್ವೇಶ್ ಸಾಹಿಬ್ ಸಿಂಗ್ ವರ್ಮಾ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಅಲ್ಲದೆ, ನಿಮಗೆ ಯೋಚನೆ ಮಾಡಲು ಸಕಾಲ. ಈಗಲೇ ಎಚ್ಚರಗೊಳ್ಳಬೇಕಿದೆ. ನೀವು ಎಚ್ಚರಗೊಂಡರೆ ಮಾತ್ರ ಪ್ರಧಾನಿ ಮತ್ತು ಗೃಹ ಸಚಿವರು ನಿಮ್ಮ ನೆರವಿಗೆ ಬರ್ತಾರೆ. ಬಿಜೆಪಿಗೆ ಮತ ಹಾಕದಿದ್ದರೆ ನಿಮ್ಮ ನೆರವಿಗೆ ಬರಲ್ಲ ಅಂತ ಬೆದರಿಕೆಯೊಡ್ಡಿದ್ದಾರೆ. ಅಷ್ಟೇ ಅಲ್ಲ, ಬಿಜೆಪಿ ಸರ್ಕಾರ ಬಂದ ಒಂದೇ ಗಂಟೆಯಲ್ಲಿ ಶಬೀನ್ ಬಾಗ್ ಧ್ವಂಸ ಮಾಡ್ತೇವೆ ಅಂದಿದ್ದಾರೆ.

    ಆಪ್-ಬಿಜೆಪಿ ಕೋಮು ಸಂಘರ್ಷ
    ದೆಹಲಿಯ ಎಲೆಕ್ಷನ್‍ನ ರಾಜಕೀಯ ವಿಷಯವಾಗಿರೋ ಶಹೀನ್ ಬಾಗ್‍ಗೆ ಹೋರಾಟಗಾರರಿಗೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಕುಮ್ಮಕ್ಕು ನೀಡ್ತಿದ್ದಾರೆ ಅಂತ ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಹಾಗೂ ಕಾನೂನು ಸಚಿವರಾದ ರವಿಶಂಕರ್ ಪ್ರಸಾದ್ ಆರೋಪಿಸಿದ್ದರು. ಇದಕ್ಕೆ ಸಿಎಂ ಕೇಜ್ರಿವಾಲ್ ಮತ್ತು ಡಿಸಿಎಂ ಮನೀಶ್ ಸಿಸೋಡಿಯಾ ತಿರುಗೇಟು ಕೊಟ್ಟಿದ್ದರು. ಚುನಾವಣೆಯಲ್ಲಿ ಸೋಲಿನ ಸುಳಿವು ಅರಿತು ಈ ರೀತ್ಯಾಗಿ ಆಧಾರ ರಹಿತ ಆರೋಪಗಳನ್ನು ಮಾಡ್ತಿದ್ದಾರೆ. ಕೇಂದ್ರದ ಬಿಜೆಪಿ ಸರ್ಕಾರಕ್ಕೆ ಚುನಾವಣೆಯ ಪ್ರಚಾರಕ್ಕೆ ಸರಕು ಇಲ್ಲ. ಆಮ್ ಆದ್ಮಿ ಪಾರ್ಟಿ ಮತ್ತೆ ಅಧಿಕಾರಕ್ಕೆ ಬರಲಿದೆ ಅನ್ನೋದನ್ನು ಅರಗಿಸಿಕೊಳ್ಳಲು ಆಗ್ತಿಲ್ಲ. ಹಾಗಾಗಿ, ಪ್ರತಿ ಚುನಾವಣೆಯ ಅಸ್ತ್ರ ಎಂಬಂತೆ ಪ್ರಚಾರದಲ್ಲಿ ಕೋಮುವಾದವನ್ನು ತುಂಬಲು ಆರಂಭಿಸಿದೆ. ಸಿಎಎ ವಿರೋಧಿಸುತ್ತಿರುವವರೆಲ್ಲಾ ಮುಸಲ್ಮಾನರು ಎಂಬ ಭಾವನೆ ಬರುವ ರೀತಿಯಲ್ಲಿ ಬಿಂಬಿಸಿ ಹಿಂದೂಗಳ ಮತಗಳನ್ನು ಕ್ರೋಢೀಕರಿಸಲು ಬಿಜೆಪಿ ಪ್ರಯತ್ನ ಮಾಡುತ್ತಿದೆ ಅಂತ ವಾಗ್ದಾಳಿ ನಡೆಸಿದೆ.

    ಗೋಲಿ ಮಾರೋ.. ಗೋಲಿ ಮಾರೋ
    ಸಂಸದ ಪರ್ವೇಶ್ ವರ್ಮಾ ರೀತಿಯಲ್ಲಿ ಕೇಂದ್ರ ಹಣಕಾಸು ರಾಜ್ಯ ಸಚಿವ ಅನುರಾಗ್ ಠಾಕೂರ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಗೃಹ ಮಂತ್ರಿ ಅಮಿತ್ ಶಾ ಪಾಲ್ಗೊಂಡಿದ್ದ ಚುನಾವಣಾ ಸಮಾವೇಶದಲ್ಲಿ `ದೇಶ್ ದ್ರೋಹಿಯೋಂಕೋ ಗೋಲಿ ಮಾರ್.. ಗೋಲಿಮಾರ್’ (ದೇಶದ್ರೋಹಿಗಳನ್ನು ಗುಂಡಿಕ್ಕಿ ಕೊಲ್ಲಬೇಕು) ಅಂತ ಘೋಷಣೆ ಕೂಗಿದ್ದಾರೆ. ಕೇಂದ್ರ ಸಚಿವರು ಅನ್ನೋ ತಮ್ಮ ಸ್ಥಾನದ ಮಹತ್ವ-ಜವಾಬ್ದಾರಿಯನ್ನು ಅರಿತು ಅನುರಾಗ್ ಘೋಷಣೆ ಕೂಗಿದ್ದು ಎಷ್ಟು ಸರಿ ಅಂತ ಚರ್ಚೆ ಆಗ್ತಿದೆ. ಈ ಬೆನ್ನಲ್ಲೇ, ಅನುರಾಗ್ ಠಾಕೂರ್ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿರುವ ಚುನಾವಣಾ ಆಯೋಗ ನೊಟೀಸ್ ಕೊಟ್ಟಿದ್ದು, ಜನವರಿ 30ರ ಒಳಗೆ ಉತ್ತರಿಸುವಂತೆ ಸೂಚಿಸಿದೆ.

    ಶಹೀನ್ ಬಾಗ್ ಅಂತಾರಾಷ್ಟ್ರೀಯ ಸುದ್ದಿ
    ಇದರ ಬೆನ್ನಲ್ಲೇ ವ್ಯಕ್ತಿಯೊಬ್ಬ ಪಿಸ್ತೂಲ್ ಸಮೇತ ನುಗ್ಗಿ, ಪ್ರತಿಭಟನಾಕಾರರು ಈ ಕ್ಷಣವೇ ಜಾಗ ಖಾಲಿ ಮಾಡ್ಬೇಕು ಅಂತಲೂ ಬೆದರಿಸಿದ್ದ. ಈ ಎಲ್ಲಾ ವಿದ್ಯಮಾನಗಳಿಂದಾಗಿ ಸಿಎಎ ವಿರೋಧಿ ಹೋರಾಟಗಾರರು ರೊಚ್ಚಿಗೆದ್ದಿದ್ದಾರೆ. ಶಹೀನ್ ಬಾಗ್ ಪ್ರದೇಶ ಕೇವಲ ಹೆಸರಾಗಿ ಉಳಿದಿಲ್ಲ. ನ್ಯೂಯಾರ್ಕ್‍ನ ವಾಲ್‍ಸ್ಟ್ರೀಟ್, ಈಜಿಪ್ಟ್ ತಹ್ರೀರ್ ಸ್ಕ್ವೇರ್, ಟರ್ಕಿಯ ತಕ್ಸಿಂ ಸ್ಕ್ವೇರ್ ನಷ್ಟೇ ಪ್ರಸಿದ್ಧವಾಗಿದೆ. ಅಲ್ಲದೆ, ಕೋಲ್ಕತ್ತಾದ ಪಾರ್ಕ್ ಸರ್ಕಸ್, ಲಖನೌದ ಘಂಟಾ ಘರ್, ಬೆಂಗಳೂರಿನ ಮಸೀದ್ ರೋಡ್‍ಗಳು ಕೂಡ ಶಹೀನ್ ಬಾಗ್‍ಗಳಾಗಿ ಮಾರ್ಪಟ್ಟಿವೆ ಅಂತ ಜೆಎನ್‍ಯು ವಿದ್ಯಾರ್ಥಿ ಹೋರಾಟಗಾರ ಖಾಲಿದ್ ಉಮರ್ ಹೇಳಿದ್ದಾರೆ.

    ಎಲ್ಲಿದೆ ಶಹೀನ್ ಬಾಗ್?
    ದಕ್ಷಿಣ ದೆಹಲಿಯ ಓಕ್ಲಾ ಪ್ರದೇಶದಲ್ಲಿದೆ ಶಹೀನ್ ಬಾಗ್. ಯಮುನಾ ನದಿಯ ದಡದಲ್ಲಿದೆ. ಪೌರತ್ವ ವಿರೋಧಿ ಹೋರಾಟದ ಸದ್ಯದ ಕೇಂದ್ರ ಸ್ಥಾನ.

    ಶಹೀನ್ ಬಾಗ್‍ಗೂ ಪಿಎಫ್‍ಐ ನಂಟು:
    ದೇಶಾದ್ಯಂತ ಪೌರತ್ವ ವಿರೋಧಿ ಹೋರಾಟದ ವೇಳೆ ಹಿಂಸಾಚಾರ ಸೃಷ್ಟಿಗೆ ಕೇರಳ ಮೂಲದ ಪಿಎಫ್‍ಐಗೆ 120 ಕೋಟಿ ಫಂಡ್ ಬಂದಿರೋ ಸಂಬಂಧ ಪಿಎಫ್‍ಐ ಮತ್ತದರ ಜೊತೆ ನಂಟು ಹೊಂದಿರೋ ಎನ್‍ಜಿಗಳಿಗೆ ಜಾರಿ ನಿರ್ದೇಶನಾಲಯ ಸಮನ್ಸ್ ಕೊಟ್ಟಿದೆ. ಈ ಹೊತ್ತಲ್ಲೇ, ಪಿಎಫ್‍ಐನ ಪ್ರಮುಖ ಅಧಿಕಾರಿಗಳು ಶಹೀನ್ ಬಾಗ್ ಹೋರಾಟದಲ್ಲಿ ಕಾಣಿಸಿಕೊಂಡಿದ್ದಾರೆ ಅಂತ ಹೇಳಿದೆ.

    ಪ್ರಚೋದನಕಾರಿ ಭಾಷಣದ ಮಾಸ್ಟರ್ ಮೈಂಡ್
    ಜೆಎನ್‍ಯು ವಿದ್ಯಾರ್ಥಿ ಶರ್ಜಿಲ್ ಇಮಾಮ್ ಶಹೀನ್ ಬಾಗ್ ಹೋರಾಟದ ಮಾಸ್ಟರ್ ಮೈಂಡ್ ಎಂಬ ಆರೋಪ ಕೇಳಿ ಬಂದಿದೆ. ಈತನ ಪ್ರಚೋದನಕಾರಿ ಹೇಳಿಕೆಯಿಂದಲೇ ಶಹೀನ್ ಬಾಗ್‍ನಲ್ಲಿ ಹೋರಾಟ ಭಾವೋದ್ವೇಗ ಪಡೆದುಕೊಂಡಿದೆ ಎನ್ನಲಾಗಿದೆ. ಸಿಎಎ ವಿರೋಧಿಸಿ ಕಿಚ್ಚೆಬ್ಬಿಸೋ ನೆಪದಲ್ಲಿ ಕೋಮು ಭಾವನೆ ಕೆರಳಿಸೋ ಭಾಷಣ ಮಾಡಿರೋ ಶರ್ಜಿಲ್ ಇಮಾಮ್ ವೀಡಿಯೋಗಳು ವ್ಯಾಪಕವಾಗಿ ವೈರಲ್ ಆಗಿದೆ. ಹೀಗಾಗಿ, ಶರ್ಜಿಲ್ ಇಮಾಮ್ ವಿರುದ್ಧ ಬಿಹಾರದಲ್ಲಿ ದೂರು ದಾಖಲಾಗಿತ್ತು. ಈಗ ಅರೆಸ್ಟ್ ಮಾಡಲಾಗಿದೆ. ಆದರೆ, ರಾಷ್ಟ್ರ ಬಿಜೆಪಿಯ ಜೋಡೆತ್ತುಗಳಂತಿರೋ ಮೋದಿ-ಅಮಿತ್ ಶಾ ಏನು ಬೇಕಾದರೂ ಹೇಳಬಹುದು. ಆ ಹೇಳಿಕೆಗಳಿಂದ ಸಮಾಜದಲ್ಲಿ ಎಂಥಹ ಅನಾಹುತಗಳು ನಡೆಯಬಹುದು. ಆದರೆ, ಇವರನ್ನು ಟೀಕಿಸಿದರೆ, ಇವರ ವಿರುದ್ಧ ದನಿ ಎತ್ತಿದರೆ ಸುಳ್ಳು ಕೇಸ್‍ಗಳನ್ನು ಹಾಕಿ ಆ ದನಿಯನ್ನು ಅಡಗಿಸೋ ವ್ಯವಸ್ಥಿತ ಹುನ್ನಾರ ನಡೆಯುತ್ತಿದೆ ಅಂತ ದೇಶಾದ್ಯಂತ ವ್ಯಾಪಕ ಟೀಕೆ ವ್ಯಕ್ತವಾಗಿದೆ.
    – ಆನಂದ ಪಿಎನ್

  • ಕೇಜ್ರಿವಾಲ್ ವಿರುದ್ಧ ಬಿಜೆಪಿಯ ಯುವ ಸಂಘಟನಾ ಚತುರ ಕಣಕ್ಕೆ

    ಕೇಜ್ರಿವಾಲ್ ವಿರುದ್ಧ ಬಿಜೆಪಿಯ ಯುವ ಸಂಘಟನಾ ಚತುರ ಕಣಕ್ಕೆ

    ನವದೆಹಲಿ: ಮುಂಬರುವ ವಿಧಾನಸಭೆ ಚುನಾವಣೆಗೆ ನವದೆಹಲಿ ಕ್ಷೇತ್ರದಿಂದ ರಾಜ್ಯ ಯುವ ಮೊರ್ಚಾ ಅಧ್ಯಕ್ಷ ಸುನಿಲ್ ಯಾದವ್ ಅವರನ್ನ ಬಿಜೆಪಿ ಕಣಕ್ಕಿಳಿಸಿದೆ. ಯುವ ಮುಖಂಡ ಮತ್ತು ಹೊಸ ಮುಖಕ್ಕೆ ಮಣೆ ಹಾಕುವ ಮೂಲಕ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಓಟಕ್ಕೆ ಬ್ರೇಕ್ ಹಾಕಲು ಬಿಜೆಪಿ ಮುಂದಾಗಿದೆ.

    ನವದೆಹಲಿ ಕ್ರೇತ್ರದಿಂದ ಸ್ಪರ್ಧಿಸಿರುವ ಟೋಪಿವಾಲ್‍ನ ಹ್ಯಾಟ್ರಿಕ್ ಗೆಲುವಿಗೆ ತಡೆ ಹಾಕಲು ಮುಂದಾಗಿರುವ ಬಿಜೆಪಿ, ಅಳೆದು ತೂಗಿ ಟಿಕೆಟ್ ಫೈನಲ್ ಮಾಡಿದೆ. 2013 ಹಾಗೂ 2015ರಲ್ಲೇ ಸುನಿಲ್ ಯಾದವ್‍ಗೆ ಟಿಕೆಟ್ ಸಿಗುತ್ತದೆ ಎಂಬ ಮಾತುಗಳು ಕೇಳಿ ಬಂದಿತ್ತು. ಆದರೆ ಕೊನೆ ಕ್ಷಣದಲ್ಲಿ ನೂಪುರ್ ಶರ್ಮಾ ಗೆ ಟಿಕೆಟ್ ನೀಡಿದ್ದರಿಂದ ಯಾದವ್ ಗೆ ಅವಕಾಶ ಸಿಕ್ಕಿರಲಿಲ್ಲ. ಈ ಬಾರಿ ಸುನಿಲ್ ಯಾದವ್ ಗೆ ಟಿಕೆಟ್ ನೀಡುವ ಮೂಲಕ ಹೊಸ ಪ್ರಯತ್ನಕ್ಕೆ ಮುಂದಾಗಿದೆ.

    ವಕೀಲ ವೃತ್ತಿಯಲ್ಲಿರುವ 44 ವರ್ಷದ ಸುನಿಲ್ ಯಾದವ್, ಬಿಜೆಪಿ ಯುವ ಮೋರ್ಚಾ ಘಟಕದ ಮಂಡಲ ಅಧ್ಯಕ್ಷರಾಗುವ ಮೂಲಕ ತಮ್ಮ ರಾಜಕೀಯ ಜೀವನ ಆರಂಭಿಸಿದ್ದರು. ಸಾಮಾಜಿಕ ಕಾರ್ಯಗಳಲ್ಲಿ ಮುಂಚೂಣಿಯಲ್ಲಿದ್ದವರು. ಪಕ್ಷ ಸಂಘಟನೆಯಲ್ಲಿ ಅವರ ಪರಿಶ್ರಮವನ್ನು ಗುರುತಿಸಿದ ನಾಯಕರು, ಯುವ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷರಾಗಿ ನೇಮಿಸಿದ್ದರು. ಬಳಿಕ ದೆಹಲಿ ವಲಯದ ಪ್ರಧಾನ ಕಾರ್ಯದರ್ಶಿ ಹಾಗೂ ದೆಹಲಿ ಘಟಕದ ಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸಿದ್ದರು.

    ಸಾಮಾಜಿಕ ಜಾಲತಾಣಗಳಲ್ಲೂ ಸುನಿಲ್ ಯಾದವ್ ಕ್ರಿಯಾಶೀಲರಾಗಿದ್ದಾರೆ. ಅವರ ಟ್ವಿಟ್ಟರ್ ಖಾತೆಯನ್ನು 16 ಸಾವಿರಕ್ಕೂ ಹೆಚ್ಚು ಮಂದಿ ಹಿಂಬಾಲಿಸುತ್ತಿದ್ದಾರೆ. ಅವರ ಫೇಸ್‍ಬುಕ್ ಖಾತೆಯಲ್ಲಿ ಸುಮಾರು ಒಂದು ಲಕ್ಷ ‘ಲೈಕ್’ಗಳಿರುವುದು ವಿಶೇಷವಾಗಿದೆ. ಸಾಮಾಜಿಕ ಜಾಲತಾಣಗಳನ್ನೂ ಇವರು ಚುನಾವಣಾ ಪ್ರಚಾರಕ್ಕೆ ಬಳಸಿಕೊಳ್ಳಲಿದ್ದಾರೆ. ಸುನಿಲ್ ಯಾದವ್ ಉತ್ತರ ಪ್ರದೇಶದ ಪ್ರತಾಪಗಡ ಮೂಲದವರು.

  • ಐದು ವರ್ಷದಲ್ಲಿ ಕೇಜ್ರಿವಾಲ್ ಆಸ್ತಿಯಲ್ಲಿ 1.3 ಕೋಟಿ ರೂ. ಹೆಚ್ಚಳ

    ಐದು ವರ್ಷದಲ್ಲಿ ಕೇಜ್ರಿವಾಲ್ ಆಸ್ತಿಯಲ್ಲಿ 1.3 ಕೋಟಿ ರೂ. ಹೆಚ್ಚಳ

    ನವದೆಹಲಿ: ಮುಂಬರುವ ದೆಹಲಿ ವಿಧಾನಸಭೆ ಚುನಾವಣೆಗೆ ಸಿಎಂ ಅರವಿಂದ ಕೇಜ್ರಿವಾಲ್ ನಾಮಪತ್ರ ಸಲ್ಲಿಸಿದ್ದಾರೆ. ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಅಫಿಡವಿಟ್ ನಲ್ಲಿ 1.3 ಕೋಟಿ ರೂ. ಆಸ್ತಿ ಮೌಲ್ಯ ಹೆಚ್ಚಾಗಿದೆ ಎಂದು ಘೋಷಿಸಿಕೊಂಡಿದ್ದಾರೆ.

    ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಆಸ್ತಿ ಘೋಷಿಸಿ ಪ್ರಮಾಣ ಪತ್ರ ಸಲ್ಲಿಸಿದ ಅವರು, ತಮ್ಮ ಒಟ್ಟು ಆಸ್ತಿ ಮೌಲ್ಯ 3.4 ಕೋಟಿ ರೂ. ಎಂದು ಹೇಳಿದ್ದಾರೆ. 2015ರ ಚುನಾವಣೆ ವೇಳೆ ಕೇಜ್ರಿವಾಲ್ ಬಳಿ ಆಸ್ತಿ 2.1 ಕೋಟಿ ರೂ. ಇತ್ತು. ಕಳೆದ ಐದು ವರ್ಷದಲ್ಲಿ 1.3 ಕೋಟಿ ರೂ. ಹೆಚ್ಚಾಗಿದೆ.

    ಪತ್ನಿ ಸುನೀತಾ ಕೇಜ್ರಿವಾಲ್ ಅವರ ಹಣ ಹಾಗೂ ಸ್ಥಿರ ಠೇವಣಿ ಐದು ವರ್ಷಗಳಲ್ಲಿ 15 ಲಕ್ಷದಿಂದ 57 ಲಕ್ಷ ರೂ.ಗೆ ಏರಿಕೆಯಾಗಿದೆ. ಕಂದಾಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಅವರು 2016 ರಲ್ಲಿ ಸ್ವಯಂ ನಿವೃತ್ತಿ ಪಡೆದಿದ್ದರು. ಆಗ 32 ಲಕ್ಷ ಮೌಲ್ಯದಷ್ಟು ಪಿಂಚಣಿ ಹಣ ದೊರೆತಿದೆ. ಬಾಕಿಯ ಹಣ ಉಳಿತಾಯದ್ದಾಗಿ ಎಂದು ತಿಳಿಸಲಾಗಿದೆ.

    ಕೇಜ್ರಿವಾಲ್ ಅವರ ಹಣ ಮತ್ತು ಸ್ಥಿರ ಠೇವಣಿ 2015ರಲ್ಲಿ 2.26 ಲಕ್ಷ ರೂ. ಇದ್ದು, ಈಗ 9.65 ಲಕ್ಷ ರೂ.ಗೆ ಏರಿಕೆಯಾಗಿದೆ. ಸ್ಥಿರ ಆಸ್ತಿ 92 ಲಕ್ಷದಿಂದ 1.77 ಕೋಟಿಗೆ ಹೆಚ್ಚಾಗಿದೆ. ಕೇಜ್ರಿವಾಲ್ ಚರಾಸ್ತಿ ಮೌಲ್ಯವು ಮಾರುಕಟ್ಟೆಯಲ್ಲಿ ಏರಿಕೆಯಾಗಿರುವುದರಿಂದ ಆಸ್ತಿ ಏರಿಕೆಯಾಗಿದೆ ಎಂದು ಪಕ್ಷ ತಿಳಿಸಿದೆ. ಪತ್ನಿ ಸುನೀತಾ ಅವರ ಸ್ಥಿರ ಆಸ್ತಿ ಮೌಲ್ಯದಲ್ಲಿ ಯಾವುದೇ ಬದಲಾವಣೆಯಾಗಿಲ್ಲ.

  • ಟಿಕೆಟ್‍ಗಾಗಿ 10 ಕೋಟಿ ಡಿಮ್ಯಾಂಡ್ – ಕೇಜ್ರಿವಾಲ್ ವಿರುದ್ಧ ಆಪ್ ಶಾಸಕ ಗಂಭೀರ ಆರೋಪ

    ಟಿಕೆಟ್‍ಗಾಗಿ 10 ಕೋಟಿ ಡಿಮ್ಯಾಂಡ್ – ಕೇಜ್ರಿವಾಲ್ ವಿರುದ್ಧ ಆಪ್ ಶಾಸಕ ಗಂಭೀರ ಆರೋಪ

    ನವದೆಹಲಿ: ವಿಧಾನಸಭೆ ಚುನಾವಣೆ ಮುನ್ನ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದೆ. ಚುನಾವಣಾ ಟಿಕೆಟ್ ಗಾಗಿ ಹತ್ತು ಕೋಟಿ ಡಿಮ್ಯಾಂಡ್ ಮಾಡಿದ್ದರು ಎಂದು ದ್ವಾರಕ ಕ್ಷೇತ್ರದ ಆಪ್ ಶಾಸಕ ಆದರ್ಶ ಶಾಸ್ತ್ರಿ ಆರೋಪ ಮಾಡಿದ್ದಾರೆ.

    ಪ್ರಸುತ್ತ ಚುನಾವಣೆಯಲ್ಲಿ ಆದರ್ಶ ಶಾಸ್ತ್ರಿಗೆ ಆಪ್ ಟಿಕೆಟ್ ನಿರಾಕರಿಸಿತ್ತು. ಇದರಿಂದ ಬಂಡಾಯಗೊಂಡು ಶನಿವಾರ ಕಾಂಗ್ರೆಸ್ ಸೇರ್ಪಡೆಗೊಂಡಿದ್ದ ಅವರು ಈ ಆರೋಪ ಮಾಡಿದ್ದಾರೆ. ಅರವಿಂದ್ ಕೇಜ್ರಿವಾಲ್ ಪ್ರತಿ ಕ್ಷೇತ್ರದಲ್ಲಿ ಟಿಕೆಟ್ ಗಾಗಿ 10-20 ಕೋಟಿ ಹಣ ಡಿಮ್ಯಾಂಡ್ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಕಳೆದ ಬಾರಿ ಆದರ್ಶ ಮಿಶ್ರಾ ಪ್ರತಿನಿಧಿಸಿದ್ದ ದ್ವಾರಕ ಕ್ಷೇತ್ರಕ್ಕೆ ಈ ಬಾರಿ ಆಮ್ ಆದ್ಮಿ ವಿನಯ್ ಮಿಶ್ರಾ ಎಂಬವರಿಗೆ ಟಿಕೆಟ್ ನೀಡಿದೆ. ಇದರಿಂದ ಆಕ್ರೋಶಗೊಂಡಿದ್ದ ಆದರ್ಶ ಶಾಸ್ತ್ರಿ ನಿನ್ನೆ ಡಿಸಿಸಿ ಅಧ್ಯಕ್ಷ ಸುಭಾಶ್ ಚೋಪ್ರಾ ಸಮ್ಮುಖದಲ್ಲಿ ಕಾಂಗ್ರೆಸ್ ಸೆರ್ಪಡೆಗೊಂಡರು. ಆದರ್ಶ ಶಾಸ್ತ್ರಿ, ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಮೊಮ್ಮನಾಗಿದ್ದು ಆಮ್ ಅದ್ಮಿ ರಾಷ್ಟ್ರೀಯ ವಕ್ತಾರರೂ ಆಗಿದ್ದರು.

    ಅರವಿಂದ ಕೇಜ್ರಿವಾಲ್ ವಿರುದ್ಧ ಇದೇ ಮೊದಲಲ್ಲ, 2019ರ ಲೋಕಸಭಾ ಚುನಾವಣೆ ವೇಳೆ ಟಿಕೆಟ್ ಗಾಗಿ ಆರು ಕೋಟಿ ಡಿಮ್ಯಾಂಡ್ ಮಾಡಿದ್ದರು ಎನ್ನುವ ಆರೋಪಗಳು ಕೇಳಿ ಬಂದಿತು.

  • ಪ್ರಣಾಳಿಕೆಯಲ್ಲ ‘ಗ್ಯಾರೆಂಟಿ ಕಾರ್ಡ್’ ಬಿಡುಗಡೆ ಮಾಡಿದ ಆಪ್

    ಪ್ರಣಾಳಿಕೆಯಲ್ಲ ‘ಗ್ಯಾರೆಂಟಿ ಕಾರ್ಡ್’ ಬಿಡುಗಡೆ ಮಾಡಿದ ಆಪ್

    ನವದೆಹಲಿ: ಮುಂಬರುವ ವಿಧಾನಸಭೆ ಚುನಾವಣೆ ಸಿದ್ಧವಾಗಿರುವ ಆಮ್ ಆದ್ಮಿ ಪ್ರಣಾಳಿಕೆ ಬದಲು ಗ್ಯಾರೆಂಟಿ ಕಾರ್ಡ್ ಬಿಡುಗಡೆ ಮಾಡಿದೆ. ಅಧಿಕಾರಕ್ಕೆ ಬಂದಲ್ಲಿ ಗ್ಯಾರೆಂಟಿ ಕಾರ್ಡ್ ನಲ್ಲಿರುವ ಹತ್ತು ಅಂಶಗಳನ್ನು ಕಡ್ಡಾಯವಾಗಿ ಜಾರಿ ಮಾಡುವ ಭರವಸೆ ನೀಡಿದೆ.

    ಇಂದು ದೆಹಲಿಯ ಪಕ್ಷದ ಕಚೇರಿಯಲ್ಲಿ ಗ್ಯಾರೆಂಟಿ ಕಾರ್ಡ್ ಬಿಡುಗಡೆ ಮಾಡಿರುವ ಸಿಎಂ ಅರವಿಂದ್ ಕೇಜ್ರಿವಾಲ್ ಸರ್ಕಾರ ರಚನೆಯಾಗಿ ಹತ್ತು ದಿನಗಳಲ್ಲಿ ಕೆಲಸ ಆರಂಭಿಸುವ ಭರವಸೆ ನೀಡಿದ್ದಾರೆ.

    ಹತ್ತು ಅಂಶಗಳ ಗ್ಯಾರೆಂಟಿ ಕಾರ್ಡ್ ನಲ್ಲಿ ಶಾಲಾ ಮಕ್ಕಳಿಗೆ ಭಾನುವಾರ ಉಚಿತ ಬಸ್ ಪ್ರಯಾಣ ಅವಕಾಶ ನೀಡುವ ಭರವಸೆ ನೀಡಿದೆ. ಮಹಿಳೆಯರ ಸುರಕ್ಷತೆಗಾಗಿ ದೆಹಲಿ ಬಸ್ ಗಳಲ್ಲಿ ‘ಮೊಹಲ್ಲಾ ಮಾರ್ಷಲ್’ಗಳನ್ನ ನೇಮಕ ಮಾಡಲಿದೆ. 200 ಯೂನಿಟ್ ವಿದ್ಯುತ್ ಮತ್ತು 2000 ಲೀಟರ್ ನೀರಿನ ಉಚಿತ ಬಳಕೆಯನ್ನ ಮುಂದುವರಿಸುವ ಆಶ್ವಾಸನೆ ಗ್ಯಾರೆಂಟಿ ಕಾರ್ಡ್ ನಲ್ಲಿ ನೀಡಿದೆ.

    ದೆಹಲಿಯ ಎಲ್ಲ ನಾಗರಿಕರಿಗೆ ಉಚಿತ ಆರೋಗ್ಯ ಸೌಲಭ್ಯ, ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ದೆಹಲಿ ಮತ್ತು ಎನ್‍ಸಿಆರ್ ಭಾಗದಲ್ಲಿ ಎರಡು ಕೋಟಿ ಸಸಿಗಳನ್ನು ನೆಡುವುದು, ಸಾರಿಗೆ ಉನ್ನತಿಕರಿಸುವ ನಿಟ್ಟಿನಲ್ಲಿ 11,000 ಹೆಚ್ಚುವರಿ ಬಸ್ ಗಳ ರಸ್ತೆಗಿಳಿಸುವುದು 500 ಕಿಮೀ ಮೆಟ್ರೊ ಲೈನ್ ಅಭಿವೃದ್ಧಿ ಪಡಿಸುವ ವಾಗ್ದಾನ ಆಮ್ ಆದ್ಮಿ ನೀಡಿದೆ.

    ಮಕ್ಕಳಿಗೆ ಸರ್ಕಾರಿ ಶಾಲೆಗಳಲ್ಲಿ ಅಂತರಾಷ್ಟ್ರೀಯ ಗುಣಮಟ್ಟದ ಶಿಕ್ಷಣ, ಅನಧಿಕೃತ ಕಾಲೋನಿಗಳಿಗೆ ರಸ್ತೆ ನೀರು, ಬೆಳಕಿನ ಸೌಲಭ್ಯ ಹಾಗೂ ಪ್ರಮುಖ ರಸ್ತೆಗಳಲ್ಲಿ ಸಿಸಿಟಿವಿ ಅವಳವಡಿಕೆ, ನಿವಾಸ ರಹಿತರಿಗೆ ಸೂರು ಕಲ್ಪಿಸುವುದು, ಪಾರ್ಕ್ ಮತ್ತು ರೋಡ್ ಗಳನ್ನು ಸುಂದರಗೊಳಿಸುವುದು, ಯಮುನಾ ನದಿಯನ್ನ ಸ್ವಚ್ಛಗೊಳಿಸುವ ಆಶ್ವಾಸನೆ ನೀಡಲಾಗಿದೆ.

  • ದೆಹಲಿ ಮತದಾರರನ್ನು ಸೆಳೆಯಲು ಬಿಜೆಪಿಯಿಂದ ಮಾಸ್ಟರ್ ಪ್ಲ್ಯಾನ್

    ದೆಹಲಿ ಮತದಾರರನ್ನು ಸೆಳೆಯಲು ಬಿಜೆಪಿಯಿಂದ ಮಾಸ್ಟರ್ ಪ್ಲ್ಯಾನ್

    – 5 ಸಾವಿರ ನಿರಾಶ್ರಿತರನ್ನು ರ‍್ಯಾಲಿಗೆ ಕರೆತರಲು ನಿರ್ಧಾರ
    – ಸಿಎಎ ಮೂಲಕವೇ ಮತ ಸೆಳೆಯಲು ಬಿಜೆಪಿ ನಿರ್ಧಾರ

    ನವದೆಹಲಿ: ರಾಷ್ಟ್ರ ರಾಜಧಾನಿಯನ್ನು ಶತಾಯಗತಾಯ ಗೆಲ್ಲಲೇಬೇಕೆಂದು ರಾಜಕೀಯ ಪಕ್ಷಗಳು ವಿವಿಧ ತಂತ್ರಗಳನ್ನು ಹೆಣೆಯುತ್ತಿದ್ದು, ಇದರ ಭಾಗವಾಗಿ ಬಿಜೆಪಿ ಮಾಸ್ಟರ್ ಪ್ಲ್ಯಾನ್ ರೂಪಿಸಿದೆ.

    ದೆಹಲಿಯಲ್ಲಿ ವಿಧಾನಸಭೆ ಚುನಾವಣೆ ರಂಗೇರುತ್ತಿದ್ದು, ಗೃಹ ಸಚಿವ ಅಮಿತ್ ಶಾ ಸೇರಿದಂತೆ ವಿವಿಧ ಬಿಜೆಪಿ ನಾಯಕರು ಹಾಗೂ ಎಎಪಿ, ಕಾಂಗ್ರೆಸ್ ಭರ್ಜರಿ ಪ್ರಚಾರ ಕಾರ್ಯ ನಡೆಸಿವೆ. ಅಲ್ಲದೆ ಸಾರ್ವಜನಿಕ ಸಭೆಗಳನ್ನು ನಡೆಸುತ್ತಿವೆ. ಫೆಬ್ರವರಿ 8ಕ್ಕೆ ಮತದಾನ ದಿನಾಂಕ ನಿಗದಿಯಾಗಿದ್ದು, ನಾಳೆಯಿಂದ ನಾಮಪತ್ರ ಸಲ್ಲಿಕೆ ಶುರುವಾಗಲಿದೆ. ಈಗಾಗಲೇ ಬಿಜೆಪಿ, ಆಮ್ ಅದ್ಮಿ ಮತ್ತು ಕಾಂಗ್ರೆಸ್ ಪ್ರಚಾರ ಕಾರ್ಯಗಳನ್ನು ಆರಂಭಿಸಿವೆ.

    ಆಮ್ ಅದ್ಮಿ ತನ್ನ ಐದು ವರ್ಷಗಳ ಸಾಧನೆಯನ್ನು ಜನರ ಮುಂದಿಟ್ಟರೆ, ಬಿಜೆಪಿ ಕೇಂದ್ರ ಸರ್ಕಾರದ ಅಭಿವೃದ್ಧಿ ಪರ ಕೆಲಸಗಳು ಹಾಗೂ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಚುನಾವಣಾ ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಿದೆ. ಬಾಂಗ್ಲಾದೇಶ ಮತ್ತು ಪಾಕಿಸ್ತಾನದಿಂದ ವಲಸೆ ಬಂದು ಅಕ್ರಮವಾಗಿ ದೆಹಲಿಯ ಹೊರ ಭಾಗದಲ್ಲಿ ಸಾಕಷ್ಟು ದೊಡ್ಡ ಪ್ರಮಾಣ ನಿರಾಶ್ರಿತರು ವಾಸವಾಗಿದ್ದು, ಈ ಮತಗಳನ್ನು ಪಡೆದುಕೊಳ್ಳಲು ಬಿಜೆಪಿ ತಂತ್ರ ರೂಪಿಸಿದೆ.

    ಪೌರತ್ವ ತಿದ್ದುಪಡಿ ಕಾಯ್ದೆಯ ಲಾಭ ಪಡೆಯಲು ಮುಂದಾಗಿರುವ ಬಿಜೆಪಿ ಜನವರಿ 18 ರಂದು ದೆಹಲಿಯಲ್ಲಿ ಬೃಹತ್ ರ‍್ಯಾಲಿ ನಡೆಸಲು ಉದ್ದೇಶಿಸಿದೆ. ಪಾಕಿಸ್ತಾನದಿಂದ ಬಂದು ದೆಹಲಿಯಲ್ಲಿ ವಾಸವಾಗಿರುವ ನಿರಾಶ್ರಿತರು ಈ ರ‍್ಯಾಲಿಯಲ್ಲಿ ಭಾಗವಹಿಸಲಿದ್ದಾರೆ. ಜಂತರ್ ಮಂತರ್ ನಿಂದ ಬಿಜೆಪಿ ಕೇಂದ್ರ ಕಚೇರಿಯವರೆಗೆ ಮೆರವಣಿಗೆ ಮಾಡಲಿದ್ದಾರೆ. ಬಳಿಕ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ರಾಷ್ಟ್ರೀಯ ಕಾರ್ಯಾಧ್ಯಕ್ಷ ಜೆ.ಪಿ.ನಡ್ಡಾ ಭೇಟಿ ನೀಡಿ ಅಭಿನಂದನೆ ಸಲ್ಲಿಸಲಿದ್ದಾರೆ.

    ಅಖಿಲ ಭಾರತ ಭೋವಿ ಸಮುದಾಯದ ಅಧ್ಯಕ್ಷ ಹಾಗೂ ಬಿಜೆಪಿ ನಾಯಕ ಡಾ.ವೆಂಕಟೇಶ ಮೌರ್ಯ ನೇತೃತ್ವದಲ್ಲಿ ಪಾಕಿಸ್ತಾನದಿಂದ ಬಂದು ದೆಹಲಿಯಲ್ಲಿ ನೆಲೆಸಿರುವ ಐದು ಸಾವಿರ ಮಂದಿ ಭೋವಿ ಸಮುದಾಯದ ನಿರಾಶ್ರಿತರು ಈ ರ್ಯಾಲಿಯಲ್ಲಿ ಭಾಗಿಯಾಗಲಿದ್ದಾರೆ. 1988ರಲ್ಲಿ ಪಾಕಿಸ್ತಾನ ಸಂಸತ್‍ಗೆ ನಾಮ ನಿರ್ದೇಶಿತಗೊಂಡಿದ್ದ ಸಂಸದ ಡಿವ್ಯರಾಮ್, ಸಿಂದ್ ಪ್ರಾಂತ್ಯದ ಮಾಜಿ ಕಾರ್ಪೊರೇಟರ್ ಅಮಿತ್ ಚಂದ್, ಸಿಎಎ ಬೆಂಬಲಿಸಿ ಅಮಿತ್ ಶಾಗೆ ಪತ್ರ ಬರೆದಿದ್ದ ಸಾಹಿಬಾ ಮತ್ತು ರಾಬೇಲಿಯವರು ರ್ಯಾಲಿಯಲ್ಲಿ ಭಾಗವಹಿಸಲಿದ್ದಾರೆ.

    ಸಿಎಎ ಜಾರಿ ತಂದಿದಕ್ಕೆ ಅಭಿನಂದನೆ ಜೊತೆಗೆ ಸಧ್ಯ ವಾಸವಾಗಿರುವ ಅಕ್ರಮ ಮನೆಗಳನ್ನು ಸರ್ಕಾರ ಸಕ್ರಮ ಮಾಡಿಕೊಡಬೇಕು. ಅಲ್ಲದೆ ಪ್ರತಿ ಕುಟುಂಬಕ್ಕೆ ಸರ್ಕಾರಿ ಉದ್ಯೋಗ, ಉಚಿತ ಮನೆ ಹಾಗೂ ಹಣಕಾಸಿನ ನೆರವು ನೀಡಬೇಕು ಎಂದು ಹೆಚ್ಚುವರಿ ಮನವಿ ಮಾಡಲಿದ್ದಾರೆ. ಬಿಜೆಪಿ ನಾಯಕರು ಈ ರ‍್ಯಾಲಿಯ ನೇತೃತ್ವದ ಹೊತ್ತಿದ್ದು, ದೆಹಲಿ ಚುನಾವಣೆಯಲ್ಲಿ ಸಿಎಎ ಮೂಲಕ ಮತಗಳನ್ನು ಸೆಳೆಯುವ ಪ್ರಯತ್ನ ಮಾಡಲಾಗುತ್ತಿದೆ. ಅಲ್ಲದೆ ದೇಶಾದ್ಯಂತ ಎದ್ದಿರುವ ವಿರೋಧಿ ಅಲೆಗೆ ಪರೋಕ್ಷವಾಗಿ ಪ್ರತ್ಯುತ್ತರ ನೀಡುವ ಪ್ರಯತ್ನ ಬಿಜೆಪಿ ಮಾಡುತ್ತಿದೆ.

  • ವಿಪಕ್ಷಗಳ ಸಭೆಗೆ ಆಪ್ ಗೈರು – ಇಲ್ಲಿದೆ ಕೇಜ್ರಿವಾಲ್ ಎಲೆಕ್ಷನ್ ಸ್ಟ್ರಾಟಜಿ

    ವಿಪಕ್ಷಗಳ ಸಭೆಗೆ ಆಪ್ ಗೈರು – ಇಲ್ಲಿದೆ ಕೇಜ್ರಿವಾಲ್ ಎಲೆಕ್ಷನ್ ಸ್ಟ್ರಾಟಜಿ

    ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆ ಘೋಷಣೆಯಾಗುತ್ತಿದ್ದಂತೆಯೇ ಆಮ್ ಆದ್ಮಿ ವಿಪಕ್ಷಗಳಿಂದ ಅಂತರ ಕಾಯ್ದುಕೊಂಡಿದ್ದು ಪ್ರತ್ಯೇಕ ಬಣ ಸೃಷ್ಟಿಸಿಕೊಂಡಿದೆ. ಇಂದು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ನೇತೃತ್ವದಲ್ಲಿ ನಡೆದ ವಿಪಕ್ಷಗಳ ಸಭೆಯಿಂದ ದೂರ ಉಳಿದುಕೊಳ್ಳುವ ಮೂಲಕ ಹೊಸ ಚುನಾವಣಾ ತಂತ್ರಗಳನ್ನು ಹೆಣೆಯಲು ಆಪ್ ಮುಂದಾಗಿದೆ.

    ಸಂಸತ್ ಅಧಿವೇಶನ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಇಂದು ಸಂಸತ್‍ನ ಅನೆಕ್ಸ್ ನಲ್ಲಿ ಸೋನಿಯಗಾಂಧಿ ನೇತೃತ್ವದಲ್ಲಿ ವಿಪಕ್ಷಗಳ ಸಭೆ ಕರೆಯಲಾಗಿತ್ತು. ದೇಶದಲ್ಲಿನ ಸದ್ಯದ ರಾಜಕೀಯ ಪರಿಸ್ಥಿತಿ ಮತ್ತು ಪೌರತ್ವ ಕಾಯ್ದೆ(ಸಿಎಎ) ವಿರುದ್ಧ ವಿಪಕ್ಷಗಳ ಹೋರಾಟ ಸೇರಿದಂತೆ ಸಂಸತ್ ಅಧಿವೇಶನದಲ್ಲಿ ಒಗ್ಗಟ್ಟು ಪ್ರದರ್ಶಿಸುವ ಸಂಬಂಧ ಚರ್ಚೆ ಮಾಡಲಾಯಿತು. ಸಭೆಗೆ ಬಹುತೇಕ ವಿಪಕ್ಷ ನಾಯಕರು ಭಾಗಿಯಾಗಿದ್ದರು ಆದರೆ ಆಮ್ ಆದ್ಮಿ, ಬಿಎಸ್ಪಿ, ಟಿಎಂಸಿ ಗೈರಾಗುವ ಮೂಲಕ ಪ್ರತ್ಯೇಕ ಬಣ ಸೃಷ್ಟಿಸಿಕೊಂಡಿದ್ದಾರೆ.

    ಆಪ್ ವಿಪಕ್ಷಗಳ ಸಭೆ ಗೈರಾಗುವ ಹಿಂದೆ ದೆಹಲಿ ಚುನಾವಣೆಯ ಲೆಕ್ಕಾಚಾರವಿದೆ ಎನ್ನಲಾಗಿದ್ದು, ಬಿಜೆಪಿಯಂತೆ ಆಪ್ ಕೂಡ ದೆಹಲಿ ಹೊರ ಭಾಗದಲ್ಲಿರುವ ನಿರಾಶ್ರಿತರ ಮತಗಳ ಮೇಲೆ ಕಣ್ಣಿಟ್ಟಿದೆ. ಈ ಮತಗಳನ್ನು ಸೆಳೆಯುವ ಕಾರಣದಿಂದಲೇ ಹಿಂದಿನಿಂದಲೂ ಸಿಎಎ ವಿರುದ್ಧದ ಹೋರಾಟಗಳಿಂದ ಆಪ್ ಅಂತರ ಕಾಯ್ದುಕೊಳ್ಳುತ್ತಾ ಬಂದಿದೆ. ಈಗ ಸಿಎಎ ವಿರುದ್ಧ ನಡೆದ ವಿಪಕ್ಷಗಳ ಸಭೆಯಲ್ಲಿ ಭಾಗಿಯಾಗದೇ ಮತ್ತೊಂದು ಎಚ್ಚರಿಕೆಯ ಹೆಜ್ಜೆಯಿಟ್ಟಿದೆ. ಇದನ್ನೂ ಓದಿ:ಸಿಎಎ, ಎನ್​​ಆರ್​​ಸಿ ಹೋರಾಟ – ಕಾಂಗ್ರೆಸ್, ಎಡಪಕ್ಷಗಳಿಂದ ಡರ್ಟಿ ಪಾಲಿಟಿಕ್ಸ್ : ಮಮತಾ

    ಸಿಎಎ ವಿರೋಧಿಸಿ ಹೇಳಿಕೆ ನೀಡುವುದಾಗಲಿ ಮತ್ತು ಸಭೆಗಳಲ್ಲಿ ಭಾಗಿಯಾಗುವುದು ಮಾಡಿದ್ದಲ್ಲಿ ದೆಹಲಿಯ ಹೊರ ಭಾಗದಲ್ಲಿ ವಾಸವಾಗಿರುವ ನಿರಾಶ್ರಿತರ ಮತಗಳ ಮೇಲೆ ಪರಿಣಾಮ ಬೀರಬಹುದು ಎಂದು ಆಪ್ ಅಂದಾಜಿಸಿದ್ದು ಹೀಗಾಗಿ ಅದರಿಂದ ದೂರ ಉಳಿದುಕೊಳ್ಳುವ ಪ್ರಯತ್ನ ಮಾಡುತ್ತಿದೆ. ಸಿಎಎಯನ್ನು ಕಠಿಣವಾಗಿ ವಿರೋಧಿಸದೇ ತಟಸ್ಥ ನೀತಿ ಅನುಸರಿಸುವ ಮೂಲಕ ದೆಹಲಿಯಲ್ಲಿ ವಾಸವಾಗಿರುವ ಬಾಂಗ್ಲಾ, ಪಾಕ್ ನಿರಾಶ್ರಿತರ ಮತಗಳನ್ನು ಪಡೆಯುವ ಪ್ರಯತ್ನ ಮಾಡುತ್ತಿದೆ.

    ಪೌರತ್ವ ಕಾಯ್ದೆಯನ್ನು ಬಿಜೆಪಿ ಜಾರಿ ತಂದರೂ ದೆಹಲಿಯ ಸ್ಲಂಗಳಲ್ಲಿ ಆಪ್ ಸರ್ಕಾರದ ಬಗ್ಗೆ ಉತ್ತಮ ಅಭಿಪ್ರಾಯವಿದೆ. ಹೀಗಾಗಿ ಈ ಮತಗಳು ಎಎಪಿ ಸೆಳೆದುಕೊಳ್ಳಬಹುದು ಎಂದು ನಿರೀಕ್ಷಿಸಿದೆ. ಒಂದು ವೇಳೆ ಸಿಎಎಯನ್ನು ಬಲಿಷ್ಠವಾಗಿ ವಿರೋಧಿಸಿದ್ದಲ್ಲಿ ಈ ಮತಗಳು ಕಳೆದುಕೊಳ್ಳಬಹುದು ಜೊತೆಗೆ ಬಿಜೆಪಿಗೆ ಲಾಭವಾಗಬಹುದು ಎನ್ನುವ ಭೀತಿಯಲ್ಲಿ ಎಎಪಿ ಇದೆ. ಹೀಗಾಗೀ ಇಂದು ನಡೆದ ವಿಪಕ್ಷಗಳ ಸಭೆಯಿಂದ ಆಪ್ ದೂರ ಉಳಿದುಕೊಳ್ಳುವ ಮೂಲಕ ನಿರಾಶ್ರಿತರ ಮತಗಳ ಕ್ರೂಢೀಕರಣಕ್ಕೆ ಮುಂದಾಗಿದೆ.

    ಇದಲ್ಲದೆ ದೆಹಲಿಯಲ್ಲಿ ಬಿಜೆಪಿ ಏಕಾಂಗಿ ಸ್ಪರ್ಧಿಸಲು ಚಿಂತಿಸಿದ್ದು, ಈ ಸಂದರ್ಭದಲ್ಲಿ ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳ ಜೊತೆ ಗುರುತಿಸಿಕೊಳ್ಳುವುದು ಸರಿಯಲ್ಲ ಕಾಂಗ್ರೆಸ್ ಸೇರಿ ಇತರೆ ಪಕ್ಷಗಳ ಜೊತೆ ಗುರುತಿಸಿಕೊಂಡು ಅವರ ವಿರುದ್ಧವೇ ಚುನಾವಣೆ ಸ್ಪರ್ಧಿಸಿದ್ದಲ್ಲಿ ಇದು ಬಿಜೆಪಿಗೆ ಅನುಕೂಲವಾಗುವ ಸಾಧ್ಯತೆಗಳಿದೆ. ಈ ಕಾರಣಗಳಿಂದ ಆಪ್ ಹೆಚ್ಚೆಚ್ಚು ವಿಪಕ್ಷಗಳು ಮತ್ತು ಸಿಎಎ ವಿರುದ್ಧ ಸಭೆಗಳಲ್ಲಿ ಭಾಗಿಯಾಗದಿರಲು ನಿರ್ಧರಿಸಿದೆ ಎಂದು ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ.

  • ದೆಹಲಿ ಗೆಲುವಿಗೆ ಎಎಪಿ ಪ್ರಚಾರ ತಂತ್ರ ಅನುಸರಿಸಲಿರುವ ಬಿಜೆಪಿ

    ದೆಹಲಿ ಗೆಲುವಿಗೆ ಎಎಪಿ ಪ್ರಚಾರ ತಂತ್ರ ಅನುಸರಿಸಲಿರುವ ಬಿಜೆಪಿ

    ನವದೆಹಲಿ: ದೆಹಲಿ ವಿಧಾನಸಭೆ ಚುನಾವಣೆಗೆ ದಿನಾಂಕ ನಿಗದಿಯಾಗಿದೆ. ದಿನದಿಂದ ದಿನಕ್ಕೆ ರಾಷ್ಟ್ರ ರಾಜಧಾನಿ ಚುನಾವಣೆ ರಣಕಣ ರಂಗು ಪಡೆದುಕೊಳ್ಳುತ್ತಿದೆ. ಈ ನಡುವೆ ಚುನಾವಣಾ ಪ್ರಚಾರಕ್ಕೆ ಬಿಜೆಪಿ, ಆಮ್ ಅದ್ಮಿ ತಂತ್ರಗಳನ್ನ ಅನುಸರಿಸಲಿದೆ ಎಂದು ತಿಳಿದು ಬಂದಿದೆ.

    2015 ರಲ್ಲಿ 70 ವಿಧಾನಸಭಾ ಕ್ಷೇತ್ರಗಳ ಪೈಕಿ 67 ಸ್ಥಾನಗಳನ್ನು ಗೆಲ್ಲುವ ಮೂಲಕ ದೆಹಲಿಯಲ್ಲಿ ಆಪ್ ದಾಖಲೆಯ ಗೆಲವು ಸಾಧಿಸಿತ್ತು. ಹೆಚ್ಚು ಆಡಂಬರದ ಬೃಹತ್ ಸಮಾವೇಶಗಳ ಮೊರೆ ಹೋಗದೆ ತನ್ನ ವಿಶಿಷ್ಟ ಪ್ರಚಾರ ಕಾರ್ಯಗಳಿಂದ ದೆಹಲಿಯ ಜನರನ್ನು ನೇರವಾಗಿ ತಲುಪಲು ಪ್ರಯತ್ನ ಮಾಡಿತ್ತು. ಇದೇ ತಂತ್ರವನ್ನು ಬಿಜೆಪಿ ಈ ಬಾರಿ ಚುನಾವಣೆಯಲ್ಲಿ ಅನುಸರಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

    ಆಪ್ ತನ್ನೆಲ್ಲ ಚುನಾವಣೆಗಳಲ್ಲೂ ಮೊಹಲ್ಲಾ ಮೀಟಿಂಗ್, ಮನೆ ಮನೆ ಪ್ರಚಾರ, ವಾರ್ಡ್ ಸಭೆಗಳು, ಕರಪತ್ರ ಹಂಚುವ ಮೂಲಕ ನೇರವಾಗಿ ಜನರನ್ನ ತಲುಪಿ ಪಕ್ಷದ ನಿಲುವುಗಳನ್ನು ಹೇಳುವ ಪ್ರಯತ್ನ ಮಾಡಲಾಗಿತ್ತು. ಇದೇ ಮಾದರಿಯನ್ನು ಬಿಜೆಪಿ ಈ ಬಾರಿ ಫಾಲೋ ಮಾಡಲಿದೆ ಎನ್ನಲಾಗುತ್ತಿದೆ. ಬೃಹತ್ ಸಮಾವೇಶಗಳು, ಪೋಸ್ಟರ್ ಗಳು, ಹೋಲ್ಡಿಂಗ್ಸ್ ಬ್ಯಾನರ್ ಗಳಿಗೆ ಹೆಚ್ಚು ಆದ್ಯತೆ ನೀಡದೆ ಮೊಹಲ್ಲಾ ಮೀಟಿಂಗ್ ಮಾಡಲು ಬಿಜೆಪಿ ನಿರ್ಧರಿಸಿದೆಯಂತೆ. ಇದನ್ನೂ ಓದಿ: ಆಪ್‍ಗಿಂತ ಐದು ಪಟ್ಟು ಹೆಚ್ಚು ಸಬ್ಸಿಡಿ- ಬಿಜೆಪಿಗೆ ಕೇಜ್ರಿವಾಲ್ ತಿರುಗೇಟು

    2013 ಮತ್ತು 2015ರ ಚುನಾವಣೆಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಹೆಚ್ಚು ಸಂಪನ್ಮೂಲ ಹೊಂದಿದ್ದ ಪಕ್ಷಗಳಾಗಿದ್ದವು ಹೀಗಾಗೀ ದೊಡ್ಡ ಪ್ರಮಾಣದ ಸಮಾವೇಶ, ಕಟ್ಟೌಟ್ ಗಳನ್ನು ಹಾಕುವ ಮೂಲಕ ಅದ್ಧೂರಿ ಪ್ರಚಾರ ಮಾಡಿದ್ದವು. ಆದರೆ ಸಂಪನ್ಮೂಲ ಕೊರತೆ ಹೊಂದಿದ್ದ ಆಪ್ ತನ್ನ ಸ್ವಯಂ ಸೇವಕ ಕಾರ್ಯಕರ್ತರ ಮೂಲಕ ನೇರವಾಗಿ ಮೊಹಲ್ಲಾ ಮೀಟಿಂಗ್, ವಾರ್ಡ್ ಸಭೆಗಳು, ಮನೆ ಮನೆ ಪ್ರಚಾರ, ಕರಪತ್ರಗಳನ್ನು ಹಂಚುವ ಮೂಲಕ ಹೊಸ ಪ್ರಚಾರ ಪ್ರಯತ್ನ ಮಾಡಿದ್ದರು. ಅಲ್ಲದೇ ಆಪ್ ನ ಈ ಪ್ರಯತ್ನ ಯಶಸ್ವಿ ಆಗುವದಲ್ಲದೇ ಹೊಸ ಪಕ್ಷವೊಂದು 2013ರಲ್ಲಿ 28 ಮತ್ತು 2015 ರಲ್ಲಿ 67 ಸ್ಥಾನಗಳನ್ನು ಪಡೆಯುವಲ್ಲಿ ಯಶಸ್ಸು ಕಂಡಿತ್ತು. ಅದ್ಧೂರಿ ಪ್ರಚಾರ ಮಾಡಿದ್ದ ಬಿಜೆಪಿ ಮೂರು ಸ್ಥಾನ ಪಡೆದರೆ ಕಾಂಗ್ರೆಸ್ ಧೂಳಿಪಟವಾಗಿತ್ತು. ಸರಳ ಪ್ರಚಾರದ ಮೂಲಕ ಆಪ್ ದಾಖಲೆಯ ವಿಜಯ ಸಾಧಿಸಿತು. ಇದನ್ನೂ ಓದಿ: ಜನವರಿ 20ರೊಳಗೆ ಪ್ರಣಾಳಿಕೆ ಬಿಡುಗಡೆ- 2015ಕ್ಕಿಂತ ಚಿಕ್ಕದಿರಲಿದೆ ಆಪ್ ಭರವಸೆ ಪಟ್ಟಿ

    ಇದೇ ತಂತ್ರವನ್ನು ಬಿಜೆಪಿ ಅನುಸರಿಸಲು ರಾಷ್ಟ್ರೀಯ ಅಧ್ಯಕ್ಷ ಸೂಚಿಸಿದ್ದಾರೆ ಎನ್ನಲಾಗಿದೆ. ಅಲ್ಲದೇ ಕಳೆದ ವಾರ ತಮ್ಮ ಭಾಷಣದಲ್ಲಿ ನಮ್ಮ ದೊಡ್ಡ ಕಾರ್ಯಕರ್ತರ ಪಡೆ ಪ್ರತಿ ಮನೆ ಮನೆಗೂ ತೆರಳಬೇಕು ಮೊಹಲ್ಲಾ ಸಭೆ ಮಾಡಬೇಕು ಅಂತಾ ಕರೆ ನೀಡಿದ್ದರು. ಅಲ್ಲದೇ ದೆಹಲಿಯಲ್ಲಿ ಸ್ವತಃ ಸಿಎಎ ಪರ ಮನೆ ಮನೆ ಅಭಿಯಾನ ಮಾಡುವ ಮೂಲಕ ಮಾದರಿಯಾಗುವ ಪ್ರಯತ್ನ ಮಾಡಿದ್ದರು. ಇದನ್ನೂ ಓದಿ: ಆಪ್ ಗೆ ಕಾಮ್, ಬಿಜೆಪಿಗೆ ಮೋದಿ ಜನಪ್ರಿಯತೆ, ಸಿಎಎ ಚುನಾವಣಾ ಅಸ್ತ್ರ

    ಮಾಹಿತಿಯ ಪ್ರಕಾರ, ಪ್ರತಿ ಕ್ಷೇತ್ರದ ಹಾಲಿ ಮತ್ತು ಮಾಜಿ ಶಾಸಕರು, ಮಂಡಲ ಅಧ್ಯಕ್ಷರು, ಜಿಲ್ಲಾಧ್ಯಕ್ಷರು, ವಾರ್ಡ್ ಕೌನ್ಸಿಲರ್ ಗಳ ನೇತೃತ್ವದಲ್ಲಿ ಕಾರ್ಯಕರ್ತರ ಗುಂಪುಗಳನ್ನು ಮಾಡಿಕೊಂಡು ಮೊಹಲ್ಲಾಗಳಿಗೆ ಭೇಟಿ ಮಾಡಿ 50 ರಿಂದ 150 ಜನರ ಒಳಗೊಳ್ಳುವ ಸಣ್ಣ ಸಣ್ಣ ಸಭೆಗಳನ್ನು ಮಾಡಿ ಅಭ್ಯರ್ಥಿಗಳು ಭಾವಚಿತ್ರ ಪಕ್ಷದ ಚಿಹ್ನೆ ಸೇರಿದಂತೆ ಕೇಂದ್ರ ಸರ್ಕಾರದ ಸಾಧನೆ ಹಾಗೂ ಪೌರತ್ವ ತಿದ್ದುಪಡಿ ಕಾಯ್ದೆಯ ಬಗ್ಗೆ ಜಾಗೃತಿ ಮೂಡಿಸಲು ಅಮಿತ್ ಶಾ ಸೂಚಿಸಿದ್ದಾರೆ ಎಂದು ಬಿಜೆಪಿ ಮೂಲಗಳ ಹೇಳಿದ್ದಾರೆ. ಇದಲ್ಲದೇ ಕೇಂದ್ರ ಸರ್ಕಾರದ ಪ್ರಮುಖ ನಾಯಕರು ಮಾತ್ರ ಬೃಹತ್ ಸಮಾವೇಶದಲ್ಲಿ ಪಾಲ್ಗೊಳ್ಳಲು ಅಮಿತ್ ಶಾ ಸೂಚಿಸಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ:

  • ಆಪ್‍ಗಿಂತ ಐದು ಪಟ್ಟು ಹೆಚ್ಚು ಸಬ್ಸಿಡಿ- ಬಿಜೆಪಿಗೆ ಕೇಜ್ರಿವಾಲ್ ತಿರುಗೇಟು

    ಆಪ್‍ಗಿಂತ ಐದು ಪಟ್ಟು ಹೆಚ್ಚು ಸಬ್ಸಿಡಿ- ಬಿಜೆಪಿಗೆ ಕೇಜ್ರಿವಾಲ್ ತಿರುಗೇಟು

    ನವದೆಹಲಿ: ಆಪ್ ಭದ್ರಕೋಟೆ ಎನಿಸಿಕೊಂಡಿರುವ ದೆಹಲಿಯನ್ನು ವಶಪಡಿಸಿಕೊಳ್ಳಲು ಬಿಜೆಪಿ ಭರ್ಜರಿ ತಯಾರಿ ಮಾಡಿಕೊಳ್ಳುತ್ತಿದೆ. ತನ್ನ ಪ್ರಣಾಳಿಕೆಯಲ್ಲಿ ಆಮ್ ಆದ್ಮಿ ಸರ್ಕಾರಕ್ಕಿಂತ ಐದು ಪಟ್ಟು ಹೆಚ್ಚು ಸಬ್ಸಿಡಿ ನೀಡುವ ಭರವಸೆ ಘೋಷಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

    ಶೀಘ್ರದಲ್ಲೇ ಬಿಜೆಪಿ ‘ಸಂಕಲ್ಪ ಪತ್ರ’ ಹೆಸರಿನಲ್ಲಿ ಪ್ರಾಣಾಳಿಕೆ ಬಿಡುಗಡೆ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದು ಐದು ಪಟ್ಟು ಸಬ್ಸಿಡಿ ಹೆಚ್ಚಿಸುವ ಬಗ್ಗೆ ಪ್ರಣಾಳಿಕೆ ತಯಾರಿಕೆ ಸಭೆಯಲ್ಲಿ ಪ್ರಸ್ತಾಪಿಸಲಾಗಿದೆ ಎನ್ನಲಾಗಿದೆ.

    ಪ್ರಣಾಳಿಕೆ ತಯಾರಿಕೆ ನೇತೃತ್ವದ ಹೊತ್ತಿರುವ ದೆಹಲಿ ಬಿಜೆಪಿ ಅಧ್ಯಕ್ಷ ಮನೋಜ್ ತಿವಾರಿ, ನಾವು ಆಮ್ ಅದ್ಮಿ ಸರ್ಕಾರ ನೀಡಿರುವ ಸಬ್ಸಿಡಿಗಳನ್ನು ರದ್ದು ಪಡಿಸುವ ಯೋಚನೆ ಇಲ್ಲ. ಬದಲಿಗೆ ಸಬ್ಸಿಡಿಯನ್ನು ಹೆಚ್ಚಿಸುವ ಬಗ್ಗೆ ಚರ್ಚಿಸಲಾಗಿದೆ ಎಂದಿದ್ದಾರೆ. 1731 ಅಕ್ರಮ ಕಾಲೋನಿಗಳನ್ನು ಕೇಂದ್ರ ಸರ್ಕಾರ ಸಕ್ರಮ ಮಾಡಿದ್ದು, ಸಿಎಎ ಮೂಲಕ ದೆಹಲಿಯ ಅಕ್ರಮ ನಿವಾಸಿಗರಿಗೆ ಪೌರತ್ವ ನೀಡಿದ್ದೇವೆ ಮತ್ತು ಅಕ್ರಮ ಕಾಲೋನಿಗಳನ್ನು ಸಕ್ರಮ ಮಾಡಿರುವುದು ಪ್ರಣಾಳಿಕೆಯಲ್ಲಿ ಸಮರ್ಥಿಸಿಕೊಳ್ಳಲಿದ್ದೇವೆ ಎಂದಿದ್ದಾರೆ.

    ದೆಹಲಿಯಲ್ಲಿ ಈಗಾಗಲೇ ಎಎಪಿ ಕುಡಿಯುವ ನೀರು, ವಿದ್ಯುತ್‍ಗೆ ಸಬ್ಸಿಡಿ ನೀಡಿದ್ದು, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಸೌಲಭ್ಯ ಕಲ್ಪಿಸಿದೆ. ಇದನ್ನು ಮುಂದುವರಿಸುವ ಜೊತೆಗೆ ಈ ಪ್ರಮಾಣವನ್ನು ಹೆಚ್ಚಿಸುವ ಬಗ್ಗೆ ಬಿಜೆಪಿ ಚಿಂತಿಸಿದೆ ಎನ್ನಲಾಗುತ್ತಿದೆ.

    ಇದಕ್ಕೆ ತಿರುಗೇಟು ನೀಡಿ ಟ್ವೀಟ್ ಮಾಡಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ‘ನಮ್ಮಕ್ಕಿಂತ ಐದು ಪಟ್ಟೇ’ ಎಂದು ವ್ಯಂಗ್ಯ ಮಾಡಿದ್ದಾರೆ. ಅಲ್ಲದೇ 200 ಯೂನಿಟ್‍ಗೆ ಹೆಚ್ಚು ಪಟ್ಟು ಎಂದರೆ 1000 ಯೂನಿಟ್? 20 ಸಾವಿರ ಲೀಟರ್ ಉಚಿತ ನೀರಿಗೆ ಐದು ಪಟ್ಟು ಎಂದರೆ ಒಂದು ಲಕ್ಷ ಲೀಟರ್ ನೀರು ಉಚಿತವಾಗಿ ನೀಡಲಾಗುವುದೇ ಎಂದಿದ್ದಾರೆ.

    ಬಿಜೆಪಿ ಈ ಹೇಳಿಕೆ ದೆಹಲಿಯ ಜನರನ್ನು ಗೇಲಿ ಮಾಡಿದಂತಿದೆ ಎಂದು ಟೀಕಿಸಿದ್ದಾರೆ. ಅಲ್ಲದೇ ದೆಹಲಿಗೂ ಮುನ್ನ ಬಿಜೆಪಿ ಆಡಳಿತ ರಾಜ್ಯದಲ್ಲಿ ಮೊದಲು ಸಬ್ಸಿಡಿ ಆರಂಭಿಸಿ ಎಂದು ಸವಾಲು ಹಾಕಿದ್ದಾರೆ.

     

  • ಆಪ್ ಗೆ ಕಾಮ್, ಬಿಜೆಪಿಗೆ ಮೋದಿ ಜನಪ್ರಿಯತೆ, ಸಿಎಎ ಚುನಾವಣಾ ಅಸ್ತ್ರ

    ಆಪ್ ಗೆ ಕಾಮ್, ಬಿಜೆಪಿಗೆ ಮೋದಿ ಜನಪ್ರಿಯತೆ, ಸಿಎಎ ಚುನಾವಣಾ ಅಸ್ತ್ರ

    ನವದೆಹಲಿ: ಜಾರ್ಖಂಡ್ ಚುನಾವಣೆ ಸೋಲಿನ ಬಳಿಕ ಹೊಸದೊಂದು ಪ್ರಯೋಗಕ್ಕೆ ಬಿಜೆಪಿ ಮುಂದಾಗಿದೆ. ದೆಹಲಿಯಲ್ಲಿ ಈ ಬಾರಿ ಸಿಎಂ ಅಭ್ಯರ್ಥಿ ಇಲ್ಲದೆ ವಿಧಾನಸಭೆ ಚುನಾವಣೆ ಎದುರಿಸಲು ಪ್ಲಾನ್ ಮಾಡಿಕೊಂಡಿರುವ ಬಿಜೆಪಿ ಸಿಎಎ ಮತ್ತು ಪ್ರಧಾನಿ ನರೇಂದ್ರ ಮೋದಿ ಜನಪ್ರಿಯತೆಯನ್ನೆ ಬಳಸಿಕೊಂಡು ಜನರ ಮುಂದೆ ಹೋಗಲು ನಿರ್ಧರಿಸಿದೆ ಎಂದು ತಿಳಿದು ಬಂದಿದೆ.

    ಸಿಎಎ ಜಾರಿಯಾದ ಬಳಿಕ ದೇಶದಾದ್ಯಂತ ಬೃಹತ್ ಪ್ರತಿಭಟನೆಗಳು ನಡೆಯುತ್ತಿದೆ. ಮತ್ತೊಂದು ಕಡೆ ಜಾರ್ಖಂಡ್ ನ ಮೊದಲ ಚುನಾವಣೆಯಲ್ಲಿ ಬಿಜೆಪಿ ಮುಗ್ಗರಿಸಿತ್ತು. ರಾಷ್ಟ್ರೀಯ ಮಟ್ಟದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಗೆ ಆದ ಹಿನ್ನಡೆ ಮತ್ತು ಪ್ರಧಾನಿ ನರೇಂದ್ರ ಮೋದಿಗೆ ಸೋಲು ಎಂದು ವಿಶ್ಲೇಷಣೆ ಮಾಡಲಾಗಿತ್ತು.

    ಈ ಹಿನ್ನೆಲೆ ಹೊಸ ಪ್ರಯತ್ನಕ್ಕೆ ಮುಂದಾಗಿರುವ ಬಿಜೆಪಿ ಈ ಬಾರಿ ಕೇವಲ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸರ್ಕಾರದ ಯೋಜನೆಗೆಗಳು ಹಾಗೂ ಪೌರತ್ವ ತಿದ್ದು ಪಡಿ ಕಾಯ್ದೆಯನ್ನು ದೆಹಲಿ ಜನರ ಮುಂದಿಡಲು ಬಿಜೆಪಿ ಸಿದ್ದವಾಗಿದೆ ಎನ್ನಲಾಗಿದೆ. ಈಗಾಗಲೇ ಎಎಪಿ (ಕಾಮ್ ಕಾ ಚುನಾವ್) ಕೆಲಸದ ಮೇಲೆ ಚುನಾವಣೆ ಎಂದು ಘೋಷಿಸಿದ್ದು, ತಮ್ಮ ಐದು ವರ್ಷದ ಸಾಧನೆಗಳನ್ನು ಜನರ ಮುಂದಿಡಲು ನಿರ್ಧರಿಸಿದ್ದು ಅರವಿಂದ್ ಕೇಜ್ರಿವಾಲ್ ಹೆಸರಿನಲ್ಲಿ ಚುನಾವಣೆ ಎದುರಿಸಲಿದೆ.

    ದೆಹಲಿಯಲ್ಲೇ ಕೇಂದ್ರ ಸರ್ಕಾರ ಹೆಚ್ಚು ಕೇಂದ್ರಿಕೃತವಾಗಿರುವ ಹಿನ್ನೆಲೆ ಮೋದಿ ಮುಖ ಚುನಾವಣೆಗೆ ಸೂಕ್ತ ಅಲ್ಲದೇ ಅಕ್ರಮ ವಲಸಿಗರ ಸಂಖ್ಯೆ ದೆಹಲಿಯ ಹೊರ ಭಾಗದಲ್ಲಿದ್ದು ಹೆಚ್ಚಿದ್ದು ಸಿಎಎ ಯನ್ನು ಹೆಚ್ಚು ಪ್ರಚಾರ ಮಾಡುವ ಮೂಲಕ ಹೆಚ್ಚು ಮತಗಳನ್ನು ಪಡೆಯಬಹುದು ಎನ್ನುವುದು ಲೆಕ್ಕಚಾರ. ಜೊತೆಗೆ ಬಿಜೆಪಿಯಲ್ಲಿ ಸಿಎಂ ಅಭ್ಯರ್ಥಿ ಆಗಲು ಸಾಕಷ್ಟು ಪೈಪೋಟಿ ಇದೆ. ಮನೋಜ್ ತಿವಾರಿ, ಸಂಸದ ಗೌತಮ್ ಗಂಭೀರ್, ಕೇಂದ್ರ ಸಚಿವ ಹರ್ಷವರ್ಧನ್ ಸೇರಿ ದೊಡ್ಡ ಪಟ್ಟಿಯೇ ಇದ್ದು ಸಿಎಂ ಅಭ್ಯರ್ಥಿ ಘೋಷಣೆ ಮಾಡಿದಲ್ಲಿ ಅಸಮಾಧಾನ ವ್ಯಕ್ತವಾಗುವ ಸಾಧ್ಯತೆ ಇದೆ. ಈ ಹಿನ್ನೆಲೆ ಸಿಎಂ ಅಭ್ಯರ್ಥಿಯನ್ನು ಘೋಷಣೆ ಮಾಡದಿರಲು ಬಿಜೆಪಿ ಚಿಂತಿಸಿದೆ ಎಂದು ಹೇಳಲಾಗಿದೆ.

    ಈ ನಿಟ್ಟಿನಲ್ಲಿ ಸಿಎಎ ಅನ್ನು ದೆಹಲಿಯಲ್ಲಿ ಚುನಾವಣೆವರೆಗೂ ಹೆಚ್ಚು ಜೀವಂತವಾಗಿಡುವ ಪ್ರಯತ್ನ ಮಾಡುತ್ತಿದ್ದು, ಚುನಾವಣೆ ಪ್ರಚಾರಕ್ಕೆ ಹೆಚ್ಚು ಈ ವಿಷಯವನ್ನೆ ಬಳಸಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.