Tag: aap

  • ದೆಹಲಿಯ ಜನತೆಯಿಂದ ಹೊಸ ರಾಜಕೀಯಕ್ಕೆ ಜನ್ಮ: ಅರವಿಂದ್ ಕೇಜ್ರಿವಾಲ್

    ದೆಹಲಿಯ ಜನತೆಯಿಂದ ಹೊಸ ರಾಜಕೀಯಕ್ಕೆ ಜನ್ಮ: ಅರವಿಂದ್ ಕೇಜ್ರಿವಾಲ್

    -ಡಬಲ್ ಸಂಭ್ರಮದಲ್ಲಿ ಕೇಜ್ರಿವಾಲ್
    -ನನ್ನೊಂದಿಗೆ ನೀವೆಲ್ಲರೂ ಇರಬೇಕು

    ನವದೆಹಲಿ: ಆಮ್ ಆದ್ಮಿ ಪಕ್ಷ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದೆ. ಗೆಲುವಿನ ಬಳಿಕ ಎಎಪಿ ಪಕ್ಷದ ಮುಖ್ಯಸ್ಥ, ಸಿಎಂ ಅರವಿಂದ್ ಕೇಜ್ರಿವಾಲ್ ಕಾರ್ಯಕರ್ತರು ಮತ್ತು ದೆಹಲಿಯ ಜನತೆಯನ್ನು ಉದ್ದೇಶಿಸಿ ಮಾತನಾಡಿದರು.

    ದೆಹಲಿ ಜನತೆ ತಮ್ಮ ಮಗನಿಗೆ ಮೂರನೇ ಬಾರಿ ಆಶೀರ್ವಾದ ಮಾಡಿದ್ದಾರೆ. ದೆಹಲಿಯಲ್ಲಿ 24 ಗಂಟೆ ವಿದ್ಯುತ್, ಪ್ರತಿ ಮಗುವಿನ ಶಿಕ್ಷಣ, ಆಸ್ಪತ್ರೆಗಳಲ್ಲಿ ಸೂಕ್ತ ಚಿಕಿತ್ಸೆ ಕುಟುಂಬಗಳ ಗೆಲವು ಇದಾಗಿದೆ. ಇಂದು ದೆಹಲಿಯ ಜನತೆ ಹೊಸ ರಾಜಕೀಯ ಜನ್ಮ ನೀಡಿದ್ದು, ಕೆಲಸ ಮಾಡಿದವರಿಗೆ ತಮ್ಮ ಮತ ಎಂಬುದನ್ನು ಸಾಬೀತು ಮಾಡಿದ್ದಾರೆ ಎಂದು ಹೇಳಿ ಧನ್ಯವಾದ ಹೇಳಿದರು. ಇದನ್ನೂ ಓದಿ: ದೆಹಲಿಯಲ್ಲಿ ಆಪ್ ಕಮಾಲ್ ಮಾಡಿದ್ದು ಹೇಗೆ? ಬಿಜೆಪಿ ಸೋಲಿಗೆ ಕಾರಣ ಏನು?

    ಇದು ನಮ್ಮ ಗೆಲುವಲ್ಲ, ದೆಹಲಿಯ ಪ್ರತಿಯೊಂದು ಕುಟುಂಬ, ಭಾರತ ಮಾತೆಯ ಗೆಲುವು. ಇಂದು ಮಂಗಳವಾರ, ಆಂಜನೇಯನವಾರ. ಇಂದು ಆಂಜನೇಯ ನಮ್ಮೆಲ್ಲರಿಗೂ ಆಶೀರ್ವಾದ ಮಾಡಿದ್ದಾನೆ. ಮುಂದಿನ ಐದು ವರ್ಷಗಳಲ್ಲಿಯೂ ನಮ್ಮ ಸರ್ಕಾರ ಜನತೆಯ ಆಶಯದಂತೆ ಕೆಲಸ ಮಾಡುತ್ತದೆ. ಮುಂದಿನ ದಿನಗಳಲ್ಲಿ ದೆಹಲಿಯನ್ನು ಮತ್ತಷ್ಟು ಸುಂದರವಾಗಿಸೋಣ. ಇದೇ ವೇಳೆ ತಮ್ಮ ಪತ್ನಿಯ ಹುಟ್ಟುಹಬ್ಬವಿದೆ ಎಂಬ ವಿಚಾರವನ್ನು ತಿಳಿಸಿ ಡಬಲ್ ಖುಷಿಯಲ್ಲಿದ್ದೇನೆ ಎಂದರು.

    ದೆಹಲಿಯ ಜನತೆ ಬಹಳ ಆಸೆಗಳಿಂದ ನಮಗೆ ಮತ ನೀಡಿದ್ದು, ಆ ನಿಟ್ಟಿನಲ್ಲಿ ನಮ್ಮ ಕೆಲಸ ಇರಲಿದೆ. ಕೇವಲ ನನ್ನಿಂದ ಮಾತ್ರ ಇದು ಸಾಧ್ಯವಲ್ಲ. ಪ್ರತಿಯೊಬ್ಬರು ನನ್ನ ಕೆಲಸದೊಂದಿಗೆ ಕೈ ಜೋಡಿಸಿದ್ರೆ ದೆಹಲಿಯನ್ನು ಇನ್ನು ಅಭಿವೃದ್ಧಿಯತ್ತ ತೆಗೆದುಕೊಂಡು ಹೋಗಲು ಸಾಧ್ಯ ಎಂದು ತಿಳಿಸಿದರು.

     

  • ದೆಹಲಿಯಲ್ಲಿ ಆಪ್ ಕಮಾಲ್ ಮಾಡಿದ್ದು ಹೇಗೆ? ಬಿಜೆಪಿ ಸೋಲಿಗೆ ಕಾರಣ ಏನು?

    ದೆಹಲಿಯಲ್ಲಿ ಆಪ್ ಕಮಾಲ್ ಮಾಡಿದ್ದು ಹೇಗೆ? ಬಿಜೆಪಿ ಸೋಲಿಗೆ ಕಾರಣ ಏನು?

    ನವದೆಹಲಿ: ಅಭಿವೃದ್ಧಿ ವಿಚಾರವನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸಿದರೆ ಗೆಲುವು ಖಂಡಿತ ಎನ್ನುವುದು ಮತ್ತೊಮ್ಮೆ ಸಾಬೀತಾಗಿದ್ದು ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ರಾಜಧಾನಿಯಲ್ಲಿ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ಸನ್ನು ಸೋಲಿಸಿ ಅಧಿಕಾರಕ್ಕೆ ಏರಿದೆ. ಈ ಮೂಲಕ ಶೀಲಾ ದೀಕ್ಷಿತ್ ಬಳಿಕ ದೆಹಲಿಯಲ್ಲಿ ಅರವಿಂದ್ ಕೇಜ್ರಿವಾಲ್ ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ.

    ಲೋಕಸಭೆ ಚುನಾವಣೆಯಲ್ಲಿ ದೆಹಲಿಯ ಎಲ್ಲ 7 ಸ್ಥಾನಗಳನ್ನು ಗೆದ್ದುಕೊಂಡಿದ್ದರಿಂದ ವಿಧಾನಸಭಾ ಚುನಾವಣೆಯಲ್ಲೂ ಕಮಲ ಅರಳಿ ಅಧಿಕಾರಕ್ಕೆ ಏರಲಿದ್ದೇವೆ ಎಂದು ಬಿಜೆಪಿ ನಾಯಕರು ಪ್ರಚಾರದಲ್ಲಿ ಹೇಳುತ್ತಿದ್ದರು. ಮಾಜಿ ರಾಷ್ಟ್ರೀಯ ಅಧ್ಯಕ್ಷ, ಗೃಹ ಸಚಿವ ಅಮಿತ್ ಶಾ ಈ ಬಾರಿ 45ಕ್ಕೂ ಹೆಚ್ಚು ಸ್ಥಾನಗಳನ್ನು ಬಿಜೆಪಿ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು. ಆದರೆ ಚಾಣಕ್ಯನ ತಂತ್ರಗಾರಿಕೆ ಸೋಲಾಗಿದೆ.

    ಎಲ್ಲ ಚುನಾವಣಾ ಪೂರ್ವ ಮತ್ತು ಚುನಾವಣೋತ್ತರ ಸಮೀಕ್ಷೆಯಲ್ಲಿ ಈ ಬಾರಿಯೂ ಕೇಜ್ರಿವಾಲ್‍ರದ್ದೇ ಹವಾ ಎಂದು ಭವಿಷ್ಯ ನುಡಿದಿತ್ತು. ಈ ಭವಿಷ್ಯ ಮತ್ತೊಮ್ಮೆ ನಿಜವಾಗಿದೆ. 2015ರ ಚುನಾವಣೆಯಲ್ಲಿ ಒಟ್ಟು 70 ಸ್ಥಾನಗಳ ಪೈಕಿ ಆಪ್ 67, ಬಿಜೆಪಿ 3, ಕಾಂಗ್ರೆಸ್ ಶೂನ್ಯ ಸಂಪಾದಿಸಿತ್ತು. ಆದರೆ ಈ ಬಾರಿ ಆಪ್ 63, ಬಿಜೆಪಿ 7 ಸ್ಥಾನ ಪಡೆದರೆ ಕಾಂಗ್ರೆಸ್ ಈ ಬಾರಿಯೂ ಖಾತೆ ತೆರೆಯುವಲ್ಲಿ ವಿಫಲವಾಗಿದೆ.

    ಹಾಗೆ ನೋಡಿದರೆ ಬಿಜೆಪಿ ಈ ಬಾರಿ ಹೆಚ್ಚಿನ ಸ್ಥಾನಗಳಿಸಿದೆ. ಅಷ್ಟೇ ಅಲ್ಲದೇ ಶೇಖಡವಾರು ಮತ ಪ್ರಮಾಣವನ್ನು ಹೆಚ್ಚಿಸಿಕೊಂಡಿದೆ. 2015ರಲ್ಲಿ ಆಪ್ ಶೇ.54, ಬಿಜೆಪಿ ಶೇ.32, ಕಾಂಗ್ರೆಸ್ ಶೇ.9 ರಷ್ಟು ಮತ ಪಡೆದಿದ್ದರೆ ಈ ಬಾರಿ ಆಪ್ ಶೇ.53, ಬಿಜೆಪಿ ಶೇ.38, ಕಾಂಗ್ರೆಸ್ ಶೇ.4 ರಷ್ಟು ಮತ ಪಡೆದಿದೆ.

    ಆಪ್ ಗೆದ್ದಿದ್ದು ಹೇಗೆ?
    ಎರಡು ವರ್ಷಕ್ಕೂ ಮುನ್ನ ದೆಹಲಿ ಚುನಾವಣೆ ಮೇಲೆ ಆಮ್ ಅದ್ಮಿ ಪಕ್ಷ ಕಣ್ಣಿಟ್ಟಿತ್ತು. ಆರಂಭದಿಂದಲೇ ಬಿಜೆಪಿ ಟೀಕೆಗೆ ಕೇಜ್ರಿವಾಲ್ ತಟಸ್ಥ ನಿಲುವು ಕಾಯ್ದುಕೊಂಡಿದ್ದರು. ಜಗಳಗಂಟ ಎನ್ನುವ ಆರೋಪದಿಂದ ದೂರ ಉಳಿಯುವ ಈ ಪ್ರಯೋಗ ಯಶಸ್ವಿ ಆಯ್ತು.

    ಲೋಕಸಭಾ ಚುನಾವಣೆಗೂ ಮುನ್ನ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿ ಟ್ವಿಟ್ಟರ್ ನಲ್ಲಿ ಟೀಕೆ ಮಾಡುತ್ತಿದ್ದರು. ಆದರೆ ಲೋಕಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಹಿನ್ನಡೆಯಾದ ನಂತರ ಮೋದಿ ವಿರುದ್ಧ ಟೀಕೆಗೆ ಜಾಸ್ತಿ ಹೋಗದೇ ಅಭಿವೃದ್ಧಿ ಮಂತ್ರವನ್ನೇ ಹೆಚ್ಚು ಹೆಚ್ಚು ಜಪಿಸತೊಡಗಿದರು.

    ಬಡವರು, ಸ್ಲಂ ನಿವಾಸಿಗಳಿಗೆ ಉಚಿತವಾಗಿ ವಿದ್ಯುತ್, ಕುಡಿಯುವ ನೀರು, ಶಿಕ್ಷಣ, ಆರೋಗ್ಯಕ್ಕೆ ಒತ್ತು ನೀಡಿತ್ತು. ಆಸ್ಪತ್ರೆಗಳನ್ನು ಮೇಲ್ದರ್ಜೆಗೆ ಏರಿಸಿ ಕಡಿಮೆ ಬೆಲೆಯಲ್ಲಿ ಚಿಕಿತ್ಸೆ, ಔಷಧಿ ನೀಡಿತ್ತು. ಸ್ಲಂ ನಿವಾಸಿಗಳಿಗಾಗಿ ಮೊಹಲ್ಲಾ ಕ್ಲಿನಿಕ್ ವ್ಯವಸ್ಥೆ, ಇತ್ತಿಚೆಗೆ ಮಹಿಳೆಯರಿಗೆ ಉಚಿತ ಬಸ್ ಸಾರಿಗೆ ವ್ಯವಸ್ಥೆ ಮತ್ತು 200 ಯೂನಿಟ್ ವಿದ್ಯುತ್ ಉಚಿತ ನೀಡುವ ಮೂಲಕ ಜನಪ್ರಿಯತೆ ಹೆಚ್ಚಿಸಿಕೊಂಡರು.

    ಇತ್ತೀಚೆಗೆ ಮಹಿಳೆಯರಿಗೆ ಉಚಿತ ಸಾರಿಗೆಯನ್ನು ಕೇಜ್ರಿವಾಲ್ ಪ್ರಕಟಿಸಿದ್ದರು. ಸಿಎಎ, ಎನ್‍ಆರ್.ಸಿ ಎನ್‍ಪಿಆರ್ ವಿಚಾರಗಳಲ್ಲಿ ಕೇಜ್ರಿವಾಲ್ ತಟಸ್ಥ ಧೋರಣೆ ಅನುಸರಿಸುವ ಮೂಲಕ ವಿವಾದ ಆಗದಂತೆ ನೋಡಿಕೊಂಡರು. ಬಿಜೆಪಿಯ ಭಯೋತ್ಪಾದಕ ಟೀಕೆಗೆ ಕೇಜ್ರಿವಾಲ್ ಮೌನಕ್ಕೆ ಶರಣಾಗಿದ್ದರು.

    ವಿಶೇಷವಾಗಿ ಜಮ್ಮು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದು ವಿಚಾರದಲ್ಲಿ ಕೇಜ್ರಿವಾಲ್ ಕೇಂದ್ರದ ಪರ ನಿಂತಿದ್ದರು. ಇತ್ತೀಚಿಗೆ ಪಾಕಿಸ್ತಾನದ ವಿಜ್ಞಾನ ಮತ್ತು ತಂತ್ರಜ್ಞಾನದ ಫೆಡರಲ್ ಮಂತ್ರಿ ಫವಾದ್ ಚೌಧರಿ, ಭಾರತೀಯರು ಮೋದಿಯನ್ನು ಸೋಲಿಸಬೇಕು ಎಂದು ಟ್ವೀಟ್ ಮಾಡಿದ್ದರು. ಇದಕ್ಕೆ ತಿರುಗೇಟು ನೀಡಿದ್ದ ಕೇಜ್ರಿವಾಲ್ ಮೋದಿ ಪರ ಬ್ಯಾಟ್ ಮಾಡಿ, ಭಯೋತ್ಪಾದನೆಗೆ ನೆರವು ನೀಡುವ ದೇಶ ಭಾರತದ ವಿಷಯದಲ್ಲಿ ಹಸ್ತಕ್ಷೇಪ ಮಾಡುವುದನ್ನು ನಾವು ಸಹಿಸುವುದಿಲ್ಲ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದರು.

    ನರೇಂದ್ರ ಮೋದಿ ಅವರು ಭಾರತದ ಪ್ರಧಾನ ಮಂತ್ರಿ ಮತ್ತು ನನಗೂ ಅವರು ಪ್ರಧಾನ ಮಂತ್ರಿ. ದೆಹಲಿಯ ಚುನಾವಣೆ ಭಾರತದ ಆಂತರಿಕ ವಿಚಾರ. ಹಾಗಾಗಿ ಪಾಕಿಸ್ತಾನ ಎಷ್ಟೇ ಪ್ರಯತ್ನ ಮಾಡಿದರೂ ಭಾರತ ದೇಶದ ಏಕತೆಯನ್ನು ಹಾಳು ಮಾಡಲು ಎಂದಿಗೂ ಸಾಧ್ಯವಿಲ್ಲ ಎಂದು ಕೇಜ್ರಿವಾಲ್ ತಿರುಗೇಟು ನೀಡಿದ್ದರು.

    ಬಹಳ ಮುಖ್ಯವಾಗಿ ಆಪ್ ಈ ಹಿಂದಿನ ಎರಡು ಚುನಾವಣೆ ಹೋಲಿಸಿದರೆ ಆಪ್ ಬಹಳ ಗಂಭೀರವಾಗಿ ಈ ಚುನಾವಣೆಯನ್ನು ತೆಗೆದುಕೊಂಡಿತ್ತು. ಸಾಮಾಜಿಕ ಜಾಲತಾಣ ವಿಚಾರ ಬಂದಾಗ ದೆಹಲಿಯಲ್ಲಿ ಕಾಂಗ್ರೆಸ್ಸಿಗಿಂತ ಆಪ್ ಬಲಿಷ್ಟವಾಗಿದ್ದರೂ ಬಿಜೆಪಿಯನ್ನು ಸೋಲಿಸಲು ಚುನಾವಣಾ ತಂತ್ರಗಾರಿಕಾ ನಿಪುಣ ಪ್ರಶಾಂತ್ ಕಿಶೋರ್ ಅವರನ್ನು ಕೇಜ್ರಿವಾಲ್ ಸಂಪರ್ಕಿಸಿದ್ದರು. ಪ್ರಶಾಂತ್ ಕಿಶೋರ್ ಅವರ ಇಂಡಿಯನ್ ಪೊಲಿಟಿಕಲ್ ಆಕ್ಷನ್ ಕಮಿಟಿ(ಐ-ಪ್ಯಾಕ್) ಸಾಮಾಜಿಕ ಜಾಲತಾಣದಲ್ಲಿ ಅತ್ಯುತ್ತಮವಾಗಿ ಪ್ರಚಾರ ನಡೆಸುವ ಮೂಲಕ ಆಪ್ ಮತ್ತೊಮ್ಮೆ ಅಧಿಕಾರದ ಗದ್ದುಗೆ ಏರಿದೆ.

    ಬಿಜೆಪಿಗಿಂತ ಆಪ್ ಹೆಚ್ಚು ಸಮರ್ಥವಾಗಿ ಸಮಾಜಿಕ ಜಾಣತಾಣಗಳನ್ನು ಸಮರ್ಥವಾಗಿ ನಿಭಾಯಿಸಿತ್ತು. ಸಿಸಿಟಿವಿ ಅಳವಡಿಕೆ ಪ್ರಶ್ನಿಸಿದ್ದ ಅಮಿತ್ ಶಾಗೆ ಅವರ ಭಾಷಣ ಮೂರು ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದ್ದ ತುಣುಕು ಟ್ವಿಟ್ಟರ್ ನಲ್ಲಿ ಟ್ಯಾಗ್ ಮಾಡಲಾಗಿತ್ತು. ಶಾಲೆ ಅವ್ಯವಸ್ಥೆ ವಿಡಿಯೋ ಮಾಡಿ ಮಾತನಾಡಿದ್ದ ಸಂಸದ ಗೌತಮ್ ಗಂಭೀರ್‍ಗೆ ಅದೇ ವಿಡಿಯೋದಲ್ಲಿನ ನೋಟಿಸ್ ರಿಟ್ವೀಟ್ ಮಾಡಿ ವ್ಯಂಗ್ಯ ಮಾಡಲಾಗಿತ್ತು. ತನ್ನೇಲ್ಲ ನಿಲುವುಗಳನ್ನು ಸೋಷಿಯಲ್ ಮಿಡಿಯಾ ಮೂಲಕ ಜನರಿಗೆ ಯಶಸ್ವಿಯಾಗಿ ತಲುಪಿಸಿದ್ದು ಚುನಾವಣಾ ಗೆಲುವಿಗೆ ಸಹಕಾರಿಯಾಗಿದೆ.

    ಬಿಜೆಪಿ ಸೋತಿದ್ದು ಹೇಗೆ?
    ದೆಹಲಿಯಲ್ಲಿ ಕಾಂಗ್ರೆಸ್ಸಿಗೆ ವೋಟ್ ಹಾಕಿದ್ದರೂ ಅಧಿಕಾರಕ್ಕೆ ಬರುವುದು ಕಷ್ಟ ಎನ್ನುವ ಮಾತು ಕೇಳಿ ಬಂದ ಹಿನ್ನೆಲೆಯಲ್ಲಿ ಬಿಜೆಪಿಯನ್ನು ಸೋಲಿಸಲೇಬೆಂದು ಕಾಂಗ್ರೆಸ್ ಮತದಾರರು ಆಪ್ ಪಕ್ಷವನ್ನು ಬೆಂಬಲಿಸಿದ್ದರು. ಇದರಿಂದಾಗಿ ಕಾಂಗ್ರೆಸ್ ಮತ ಆಪ್‍ಗೆ ವರ್ಗಾವಣೆಯಾಗಿತ್ತು.

    ಸಿಎಎ, ಎನ್‍ಆರ್‍ಸಿ ವಿರೋಧಿ ಹೋರಾಟ ತೀವ್ರಗೊಂಡ ಹಿನ್ನೆಲೆಯಲ್ಲಿ ಮುಸ್ಲಿಂ ಮತಗಳು ಆಪ್‍ಗೆ ಬಿದ್ದಿತ್ತು. ಚುನಾವಣೆಗೆ ನಾಯಕತ್ವದ ಕೊರತೆ ಎದುರಾದ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ, ಅಮಿತ್ ಶಾ ಮುಖವನ್ನು ಇಟ್ಟುಕೊಂಡು ಬಿಜೆಪಿ ಮತ ಕೇಳಿತ್ತು. ಇದರಿಂದಾಗಿ ಚುನಾವಣೆ ಕೇಂದ್ರ ಸರ್ಕಾರ ವರ್ಸಸ್ ಕೇಜ್ರಿವಾಲ್ ಎಂದೇ ಬಿಂಬಿತವಾಗಿತ್ತು.

    ಕೇಜ್ರಿವಾಲ್ ಎದುರು ಸಿಎಂ ಅಭ್ಯರ್ಥಿಯನ್ನು ಬಿಜೆಪಿ ಘೋಷಣೆ ಮಾಡಿರಲಿಲ್ಲ. ಡಾ. ಹರ್ಷವರ್ಧನ್, ಮನೋಜ್ ತಿವಾರಿ ಬೆಂಬಲಿಗರ ಕಿತ್ತಾಟದಿಂದಾಗಿ ಬಿಜೆಪಿಯಲ್ಲಿ ಎಲ್ಲವೂ ಸರಿ ಇಲ್ಲ ಎನ್ನುವುದು ಬಹಿರಂಗವಾಗಿತ್ತು. ಬಿಜೆಪಿ ಅಭಿವೃದ್ಧಿ ವಿಚಾರ ಬಿಟ್ಟು ಶಾಹೀನ್ ಭಾಗ್, ಪಾಕ್ ವಿಚಾರಕ್ಕೆ ಹೆಚ್ಚು ಒತ್ತು ನೀಡಿತ್ತು. ಇದರ ಜೊತೆ “ಕೇಂದ್ರಕ್ಕೆ ಮೋದಿ, ದೆಹಲಿಗೆ ಕೇಜ್ರಿವಾಲ್” ಎಂಬ ನಿಲುವಿಗೆ ಮತದಾರರು ಬಂದ ಪರಿಣಾಮ ರಾಷ್ಟ್ರ ರಾಜಧಾನಿಯಲ್ಲಿ ಕಮಲ ಮತ್ತು ಕೈಯನ್ನು ಪೊರಕೆ ಗುಡಿಸಿ ಹಾಕಿದೆ.

    ಪ್ರಚಾರದ ಕೊನೆಯಲ್ಲಿ ಚುನಾವಣೆ ಭಾವನ್ಮಾಕ ರೂಪ ಪಡೆದುಕೊಂಡಿತ್ತು. ಕೇಂದ್ರ ಸಚಿವ ಪ್ರಕಾಶ್ ಜಾವೇಡ್ಕರ್ ಭಾಷಣದ ಅಬ್ಬರದಲ್ಲಿ ಕೇಜ್ರಿವಾಲ್ ಅವರನ್ನ ಭಯೋತ್ಪಾದಕ ಎಂದಿದ್ದರು. ಇದರಿಂದ ನೊಂದಿದ್ದ ಕೇಜ್ರಿವಾಲ್ ಕಣ್ಣಿರಿಟ್ಟಿದ್ದರು. ಇದನ್ನೇ ಬಳಸಿಕೊಂಡ ಕೇಜ್ರಿವಾಲ್, ನಾನು ನಿಮ್ಮ ಮಗ ನಿಮಗಾಗಿ ಕೆಲಸ ಮಾಡುತ್ತೇನೆ ನನ್ನನ್ನು ಭಯೋತ್ಪಾದಕ ಎನ್ನುತ್ತಾರೆ ಎನ್ನುವ ಮೂಲಕ ಅನುಕಂಪದ ಅಲೆ ಸೃಷ್ಟಿಸುವ ಪ್ರಯತ್ನ ಮಾಡಿ ಮತ ಸೆಳೆಯುವಲ್ಲಿ ಯಶಸ್ವಿಯಾದರು.

  • ಜನಪ್ರಿಯ ಯೋಜನೆಗಳೇ ಆಪ್ ಗೆಲುವಿಗೆ ಕಾರಣ: ಗೋವಿಂದ ಕಾರಜೋಳ

    ಜನಪ್ರಿಯ ಯೋಜನೆಗಳೇ ಆಪ್ ಗೆಲುವಿಗೆ ಕಾರಣ: ಗೋವಿಂದ ಕಾರಜೋಳ

    ಬಾಗಲಕೋಟೆ: ಜನಪ್ರಿಯ ಯೋಜನೆಗಳ ಘೋಷಣೆ ಆಮ್ ಆದ್ಮಿ ಪಕ್ಷ ಗೆಲುವಿಗೆ ಕಾರಣ ಎಂದು ಉಪಮುಖ್ಯಂತ್ರಿ ಗೋವಿಂದ ಕಾರಜೋಳ ಹೇಳಿದರು.

    ದೆಹಲಿ ವಿಧಾನಸಭೆ ಚುನಾವಣೆ ಕುರಿತು ಮಾಧ್ಯಮಗಳೊಂದಿಗೆ ವಿಶ್ಲೇಷಿಸುತ್ತಾ ಎಪಿಪಿ ನೀಡಿರುವ ಜನಪ್ರಿಯ ಯೋಜನೆಗಳು ಆ ಪಕ್ಷದ ಗೆಲುವಿಗೆ ಕಾರಣವಾಗಿದೆ. ಜನಪ್ರೀಯ ಯೋಜನೆಗಳು ಜನರ ಮನಸ್ಸು ಸೆಳೆದಿವೆ ಎಂದರು.

    ದೇಶದ ವಿಷಯ ಬಂದಾಗ ದೇಶದ ಅಖಂಡತೆ, ರಾಷ್ಟ್ರೀಯತೆ ವಿಷಯ ಬಂದಾಗ ದೆಹಲಿಯ ಜನ ಬಿಜೆಪಿ ಬೆಂಬಲಿಸಿದ್ದಾರೆ. ಪ್ರಾದೇಶಿಕ ಪಕ್ಷಗಳು ಜನಪ್ರಿಯ ಯೋಜನೆಗಳು ಘೋಷಣೆ ಮಾಡಿರುವ ಪರಿಣಾಮ ಅವುಗಳ ಅಧಿಕಾರಕ್ಕೆ ಬರಲು ಸಹಾಯವಾಗುತ್ತಿದೆ ಎಂದು ಹೇಳಿದರು.

    ರಾಜ್ಯದಲ್ಲಿ ಆರ್ಥಿಕ ಪರಿಸ್ಥಿತಿ ಕುರಿತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿ, ರಾಜ್ಯದಲ್ಲಿ ಆರ್ಥಿಕ ತೊಂದರೆ ಇರುವುದು ನಿಜವಾಗಿದ್ದರೂ ಸಿದ್ದರಾಮಯ್ಯ ಹೇಳಿರುವ ಹೇಳಿಕೆಯಿಂದ ತೊಂದರೆ ಇಲ್ಲ. ದರಿದ್ರತನ ಆರಂಭಗೊಂಡಿದ್ದೇ ಸಿದ್ದರಾಮಯ್ಯನವರ ಆಡಳಿತಾವಧಿಯಲ್ಲಿ ಎಂದು ಆರೋಪಿಸಿದ ಅವರು, ಹೊಸ ಸಾಲ ತೆಗೆಯಲು ಬಾರದಷ್ಟು (ಬಾರೋಯಿಂಗ್ ಕೆಪ್ಯಾಸಿಟಿ ಮೀರಿ)ಸಾಲ ತೆಗೆದಿದ್ದಾರೆ. ಪ್ರಕೃತಿ ವಿಕೋಪ ಉಂಟಾಗಿ ಜನ ಮನೆಗಳು ಕಳೆದುಕೊಂಡಿದ್ದಾರೆ. ಬೆಳೆ ಹಾನಿ ಉಂಟಾಗಿದೆ. ಹಾಗಾಗಿ ಆರ್ಥಿಕ ತೊಂದರೆ ಆಗಿದೆ. ಸುಮಾರು 38 ಸಾವಿರ ಕೋಟಿ ರೂ. ನೆರೆ ಪರಿಹಾರಕ್ಕೆ ಖರ್ಚು ಮಾಡಲಾಗುತ್ತಿದೆ. ಪರಿಹಾರ ಹಂಚಿಕೆ, ರಸ್ತೆ, ಮನೆಗಳ ನಿರ್ಮಾಣಕ್ಕೆ ವೆಚ್ಚ ಮಾಡಲಾಗಿದೆ. ಹಾಗಾಗಿ ತೊಂದರೆ ಕಾಣಿಸಿಕೊಂಡಿದೆ ಎಂದರು.

    ಅಕ್ರಮ ಮರಳು ಗಣಿಗಾರಿಕೆ ಯಾರು ಮಾಡುತ್ತಿದ್ದಾರೆ ಎನ್ನುವುದರ ಮೇಲೆ ನಿಗಾ ಇಡಲಾಗಿದೆ. ಜನತೆಗೆ ಮರಳು ಸುಲಭವಾಗಿ ಸಿಗುವಂತೆ ವ್ಯವಸ್ಥೆ ಮಾಡಲಾಗುತ್ತಿದೆ. ಜತೆಗೆ ಅಕ್ರಮ ಮರಳು ದಂಧೆಯಲ್ಲಿ ತೊಡಗಿರುವವರ ವಿರುದ್ಧ ಕಟ್ಟು ನಿಟ್ಟಿನ ಕ್ರಮ ಜರುಗಿಸಲಾಗುವುದು ಎಂದರು.

  • ವಿಜಯದಿಂದ ನಮಗೆ ಅಹಂಕಾರ ಬರುವುದಿಲ್ಲ, ಸೋಲು ನಮ್ಮನ್ನು ನಿರಾಶೆಗೊಳಿಸಲ್ಲ – ಬಿಜೆಪಿ ಪೋಸ್ಟರ್

    ವಿಜಯದಿಂದ ನಮಗೆ ಅಹಂಕಾರ ಬರುವುದಿಲ್ಲ, ಸೋಲು ನಮ್ಮನ್ನು ನಿರಾಶೆಗೊಳಿಸಲ್ಲ – ಬಿಜೆಪಿ ಪೋಸ್ಟರ್

    ನವದೆಹಲಿ: ಆಮ್ ಆದ್ಮಿ ಪಕ್ಷ ಮೂರನೇ ಬಾರಿ ದೆಹಲಿಯಲ್ಲಿ ಸರ್ಕಾರ ರಚಿಸುವುದು ಬಹುತೇಕ ಖಚಿತವಾಗಿದೆ. ಕೆಲವೊಮ್ಮೆ ಹಿನ್ನಡೆ ಅನುಭವಿಸಿದರೂ ಈಗ ಆಪ್ ಭಾರೀ ಮುನ್ನಡೆ ಪಡೆದುಕೊಂಡಿದೆ.

    ಬೆಳಗ್ಗೆ 11:30ರ ಟ್ರೆಂಡ್ ಪ್ರಕಾರ ಆಪ್ 54 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದರೆ ಬಿಜೆಪಿ 16 ರಲ್ಲಿ ಮುನ್ನಡೆ ಸಾಧಿಸಿದೆ. ಇಂದು ಮತ ಎಣಿಕೆಯ ಆರಂಭಕ್ಕೆ ಮುನ್ನ ದೆಹಲಿ ಬಿಜೆಪಿ ಕಚೇರಿ ಮುಂದೆ ಹಾಕಲಾದ ದೊಡ್ಡ ಪೋಸ್ಟರ್ ಈಗ ಎಲ್ಲರ ಗಮನ ಸೆಳೆದಿದೆ.

    “ವಿಜಯದಿಂದ ನಮಗೆ ಅಹಂಕಾರ ಬರುವುದಿಲ್ಲ. ಸೋಲು ನಮ್ಮನ್ನು ನಿರಾಶೆಗೊಳಿಸುವುದಿಲ್ಲ” ಎಂದು ಪೋಸ್ಟರ್ ಹಾಕಲಾಗಿದೆ. ಹಿಂದಿಯಲ್ಲಿ ಪೋಸ್ಟರ್ ಇದ್ದು ಇದರಲ್ಲಿ ಅಮಿತ್ ಶಾ ಭಾವಚಿತ್ರವಿದೆ.

    ಒಟ್ಟು 27 ಕ್ಷೇತ್ರಗಳಲ್ಲಿ ಆಪ್ ಮತ್ತು ಬಿಜೆಪಿ ಮಧ್ಯೆ ನೇರ ಹಣಾಹಣಿ ಏರ್ಪಟ್ಟಿದೆ. ಅಂತರ ಮುನ್ನಡೆ ಅಂತರ 1 ಸಾವಿರ ಇದೆ. ಇನ್ನು ಹಲವು ಸುತ್ತುಗಳ ಮತ ಎಣಿಕೆ ಬಾಕಿ ಇದೆ. ಕಾಂಗ್ರೆಸ್ ಮತಗಳಿಕೆ ಪ್ರಮಾಣ ಭಾರೀ ಕುಸಿದಿದೆ.

    ದೆಹಲಿ ಬಿಜೆಪಿ ಅಧ್ಯಕ್ಷ ಮನೋಜ್ ತಿವಾರಿ ಪ್ರತಿಕ್ರಿಯಿಸಿ, ಮತ ಎಣಿಕೆ ಪೂರ್ಣಗೊಂಡಿಲ್ಲ, ಫಲಿತಾಂಶಕ್ಕೆ ಕಾಯಿರಿ. ಯಾವುದೇ ಫಲಿತಾಂಶ ಬಂದರೂ ಅದಕ್ಕೆ ನಾನೇ ಸಂಪೂರ್ಣ ಹೊಣೆ ಎಂದು ಪ್ರತಿಕ್ರಿಯಿಸಿದ್ದಾರೆ.

  • ದೆಹಲಿ ಮತ ಎಣಿಕೆ – 27 ಕ್ಷೇತ್ರಗಳಲ್ಲಿ ನೇರ ಹಣಾಹಣಿ

    ದೆಹಲಿ ಮತ ಎಣಿಕೆ – 27 ಕ್ಷೇತ್ರಗಳಲ್ಲಿ ನೇರ ಹಣಾಹಣಿ

    ನವದೆಹಲಿ: ಮತ ಎಣಿಕೆಯ ಆರಂಭದಲ್ಲಿ ಆಪ್ ಭಾರೀ ಮುನ್ನಡೆ ಸಾಧಿಸಿದ್ದರೂ 27 ಕ್ಷೇತ್ರಗಳಲ್ಲಿ ಈಗ ನೇರ ಹಣಾಹಣಿ ಏರ್ಪಟ್ಟಿದೆ.

    ಹೌದು, ಬೆಳಗ್ಗೆ 8 ಗಂಟೆಯಿಂದ 10:30ರವರೆಗಿನ ಟ್ರೆಂಡ್ ನಲ್ಲಿ ಆಪ್ ಮುನ್ನಡೆಯಲ್ಲಿದೆ. ಸದ್ಯ ಈಗ 53 ಕ್ಷೇತ್ರಗಳಲ್ಲಿ ಆಪ್ ಮುನ್ನಡೆಯಲ್ಲಿದ್ದರೆ ಬಿಜೆಪಿ 17 ಕ್ಷೇತ್ರಗಳಲ್ಲಿ ಮುನ್ನಡೆ ಪಡೆದಿದೆ. ಬಿಜೆಪಿಯ ಮುನ್ನಡೆ ಇಳಿಕೆಯಾಗಿದ್ದು, ಆಪ್ ಮುನ್ನಡೆ ಏರಿಕೆಯಾಗಿದೆ.

    ಈ ಪೈಕಿ 27 ಕ್ಷೇತ್ರಗಳಲ್ಲಿ ಆಪ್ ಮತ್ತು ಬಿಜೆಪಿ ಮಧ್ಯೆ ನೇರ ಹಣಾಹಣಿ ಏರ್ಪಟ್ಟಿದ್ದು ಆಪ್ ಮುನ್ನಡೆ ಅಂತರ 1 ಸಾವಿರವಿದೆ. ಇನ್ನು ಹಲವು ಸುತ್ತುಗಳ ಮತ ಎಣಿಕೆ ಬಾಕಿ ಇರುವ ಹಿನ್ನೆಲೆಯಲ್ಲಿ ಫಲಿತಾಂಶ ಕ್ಷಣ ಕ್ಷಣ ಬದಲಾಗುತ್ತಿದೆ.

    ದೆಹಲಿ ಬಿಜೆಪಿ ಅಧ್ಯಕ್ಷ ಮನೋಜ್ ತಿವಾರಿ ಪ್ರತಿಕ್ರಿಯಿಸಿ, ಮತ ಎಣಿಕೆ ಪೂರ್ಣಗೊಂಡಿಲ್ಲ, ಫಲಿತಾಂಶಕ್ಕೆ ಕಾಯಿರಿ. ಯಾವುದೇ ಫಲಿತಾಂಶ ಬಂದರೂ ಅದಕ್ಕೆ ನಾನೇ ಸಂಪೂರ್ಣ ಹೊಣೆ ಎಂದು ಪ್ರತಿಕ್ರಿಯಿಸಿದ್ದಾರೆ.

    ಒಟ್ಟು 70 ಸ್ಥಾನಗಳಿರುವ ದೆಹಲಿ ವಿಧಾನಸಭೆಯಲ್ಲಿ ಸರಳ ಬಹುಮತಕ್ಕೆ 36 ಸ್ಥಾನಗಳ ಅಗತ್ಯವಿದೆ. ಚುನಾವಣಾ ಪೂರ್ವ ಮತ್ತು ಚುನಾವಣೋತ್ತರ ಸಮೀಕ್ಷೆಗಳಿ ಆಪ್ ಗೆಲ್ಲಲ್ಲಿದೆ ಎನ್ನುವ ಭವಿಷ್ಯ ನಿಜವಾಗುವ ಸಾಧ್ಯತೆಯಿದೆ. ಆದರೆ ಈ ಬಾರಿ ಆಪ್ ಮತ್ತು ಬಿಜೆಪಿ ಎಷ್ಟು ಸ್ಥಾನಗಳನ್ನು ಗೆಲ್ಲಲ್ಲಿದೆ ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ.

    2015ರ ಚುನಾವಣೆಯಲ್ಲಿ ಆಪ್ 67 ಕ್ಷೇತ್ರಗಳಲ್ಲಿ ಜಯಗಳಿಸಿತ್ತು. ಬಿಜೆಪಿ 3, ಕಾಂಗ್ರೆಸ್ ಶೂನ್ಯ ಸಂಪಾದಿಸಿತ್ತು.

  • ಕ್ಷಣ ಕ್ಷಣಕ್ಕೆ ಬದಲಾಗುತ್ತಿದೆ ಫಲಿತಾಂಶ – ಬಿಜೆಪಿ ಮುನ್ನಡೆ ಏರಿಕೆ, ಮತ್ತೆ ಆಪ್ ಸರ್ಕಾರ

    ಕ್ಷಣ ಕ್ಷಣಕ್ಕೆ ಬದಲಾಗುತ್ತಿದೆ ಫಲಿತಾಂಶ – ಬಿಜೆಪಿ ಮುನ್ನಡೆ ಏರಿಕೆ, ಮತ್ತೆ ಆಪ್ ಸರ್ಕಾರ

    ನವದೆಹಲಿ: ದೆಹಲಿಯ ಚುನಾವಣಾ ಮತ ಎಣಿಕೆ ನಡೆಯುತ್ತಿದ್ದು ಕ್ಷಣ ಕ್ಷಣಕ್ಕೂ ಪಕ್ಷಗಳ ಮುನ್ನಡೆ ಬದಲಾಗುತ್ತಿದ್ದು, ಹಾವು ಏಣಿ ಆಟ ಆರಂಭಗೊಂಡಿದೆ.

    ಮತ ಎಣಿಕೆಯ ಆರಂಭದ ಅರ್ಧಗಂಟೆಯಲ್ಲಿ 56 ಕ್ಷೇತ್ರಗಳಲ್ಲಿ ಆಪ್ ಮುನ್ನಡೆ ಸಾಧಿಸಿದ್ದರೆ, ಬಿಜೆಪಿ 13, ಕಾಂಗ್ರೆಸ್ 1 ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿತ್ತು.

    ನಂತರದ ಒಂದು ಗಂಟೆಯಲ್ಲಿ ಆಪ್ ಮುನ್ನಡೆ ಇಳಿಕೆಯಾಗಿತ್ತು. ಬಿಜೆಪಿ 20 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿತ್ತು. ಕಾಂಗ್ರೆಸ್ ಯಾವುದೇ ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿರಲಿಲ್ಲ.

     

    ಬೆಳಗ್ಗೆ 10 ಗಂಟೆಯ ಟ್ರೆಂಡ್ ನಲ್ಲಿ ಆಪ್ 49 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದರೆ ಬಿಜೆಪಿ 21 ಕ್ಷೇತ್ರಗಳಲ್ಲಿ ಮುನ್ನಡೆ ಪಡೆದಿದೆ.

    ಒಟ್ಟು 70 ಸ್ಥಾನಗಳಿರುವ ದೆಹಲಿ ವಿಧಾನಸಭೆಯಲ್ಲಿ ಸರಳ ಬಹುಮತಕ್ಕೆ 36 ಸ್ಥಾನಗಳ ಅಗತ್ಯವಿದೆ. ಚುನಾವಣಾ ಪೂರ್ವ ಮತ್ತು ಚುನಾವಣೋತ್ತರ ಸಮೀಕ್ಷೆಗಳು ಆಪ್ ಗೆಲ್ಲಲ್ಲಿದೆ ಎಂದು ಭವಿಷ್ಯ ನುಡಿದಿದ್ದು, ಈ ಭವಿಷ್ಯ ನಿಜವಾಗುವ ಸಾಧ್ಯತೆಯಿದೆ. ಆದರೆ ಈ ಬಾರಿ ಆಪ್ ಮತ್ತು ಬಿಜೆಪಿ ಎಷ್ಟು ಸ್ಥಾನಗಳನ್ನು ಗೆಲ್ಲಲ್ಲಿದೆ ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ.

    2015ರ ಚುನಾವಣೆಯಲ್ಲಿ ಆಪ್ 67 ಕ್ಷೇತ್ರಗಳಲ್ಲಿ ಜಯಗಳಿಸಿತ್ತು. ಬಿಜೆಪಿ 3, ಕಾಂಗ್ರೆಸ್ ಶೂನ್ಯ ಸಂಪಾದಿಸಿತ್ತು.

  • ದೆಹಲಿ ಫಲಿತಾಂಶ : ಆಪ್ 53, ಬಿಜೆಪಿ 16 ಕ್ಷೇತ್ರಗಳಲ್ಲಿ ಮುನ್ನಡೆ

    ದೆಹಲಿ ಫಲಿತಾಂಶ : ಆಪ್ 53, ಬಿಜೆಪಿ 16 ಕ್ಷೇತ್ರಗಳಲ್ಲಿ ಮುನ್ನಡೆ

    ನವದೆಹಲಿ: ದೆಹಲಿ ವಿಧಾನಭೆಯ  70 ಕ್ಷೇತ್ರಗಳಿಗೆ ನಡೆದ ಚುನಾವಣೆಯ ಮತ ಎಣಿಕೆ ಆರಂಭವಾಗಿದ್ದು ಆಪ್ ಆರಂಭದಲ್ಲೇ ಮುನ್ನಡೆ ಸಾಧಿಸಿದೆ.

    ಮತ ಎಣಿಕೆ ಆರಂಭಗೊಂಡ ಅರ್ಧಗಂಟೆಯಲ್ಲಿ 53 ಕ್ಷೇತ್ರಗಳಲ್ಲಿ ಆಪ್ ಮುನ್ನಡೆ ಸಾಧಿಸಿದ್ದರೆ, ಬಿಜೆಪಿ 16 ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದೆ. ಕಳೆದ ಬಾರಿ ಶೂನ್ಯ ಸಾಧಿಸಿದ್ದ ಕಾಂಗ್ರೆಸ್ 1 ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದೆ.

    ಚುನಾವಣಾ ಪೂರ್ವ ಮತ್ತು ಚುನಾವಣೋತ್ತರ ಸಮೀಕ್ಷೆಗಳಲ್ಲಿ ಈ ಬಾರಿಯೂ ಆಪ್ ಅಧಿಕಾರಕ್ಕೆ ಏರಲಿದೆ ಎಂದೇ ಭವಿಷ್ಯ ನುಡಿದಿತ್ತು. ಆರಂಭಿಕ ಮುನ್ನಡೆ ಗಮನಿಸುವಾಗ ಈ ಭವಿಷ್ಯವೇ ನಿಜವಾಗುವ ಸಾಧ್ಯತೆಯಿದೆ.

    2015ರ ಚುನಾವಣೆಯಲ್ಲಿ ಆಪ್ 67 ಕ್ಷೇತ್ರಗಳಲ್ಲಿ ಜಯಗಳಿಸಿತ್ತು. ಬಿಜೆಪಿ 3, ಕಾಂಗ್ರೆಸ್ ಶೂನ್ಯ ಸಂಪಾದಿಸಿತ್ತು.

  • ಚುನಾವಣಾ ಫಲಿತಾಂಶದ ಬಳಿಕ ಮೈತ್ರಿ ಬಗ್ಗೆ ಚಿಂತನೆ: ಕಾಂಗ್ರೆಸ್

    ಚುನಾವಣಾ ಫಲಿತಾಂಶದ ಬಳಿಕ ಮೈತ್ರಿ ಬಗ್ಗೆ ಚಿಂತನೆ: ಕಾಂಗ್ರೆಸ್

    ನವದೆಹಲಿ: ವಿಧಾನಸಭೆಗೆ ಮತದಾನ ಅಂತ್ಯವಾಗಿದ್ದು, ಆಮ್ ಅದ್ಮಿಗೆ ಬಹುಮತ ಸಿಗಲಿದೆ ಮತ್ತು ಸ್ವತಂತ್ರ ಸರ್ಕಾರ ರಚಿಸಲಿದೆ ಎಂದು ಮತದಾನೋತ್ತರ ಸಮೀಕ್ಷೆಗಳು ಹೇಳಿವೆ. ಈ ನಡುವೆ ದೆಹಲಿಯಲ್ಲಿ ಮೈತ್ರಿ ಸರ್ಕಾರ ರಚನೆಯ ಮಾತುಗಳು ಕೇಳಿ ಬರುತ್ತಿದೆ.

    ಸಮೀಕ್ಷೆಗಳ ಅಂದಾಜಿಗಿಂತ ಕಾಂಗ್ರೆಸ್ ಉತ್ತಮ ಸಾಧನೆ ಮಾಡಿಲಿದ್ದು, ಹೆಚ್ಚಿನ ಫಲಿತಾಂಶದ ನಿರೀಕ್ಷೆಯಲ್ಲಿದ್ದೇವೆ ಎಂದು ದೆಹಲಿ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಪಿಸಿ ಚಾಕೋ ಹೇಳಿದ್ದಾರೆ. ದೆಹಲಿಯಲ್ಲಿ ಆಪ್ ಜೊತೆಗೆ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಫಲಿತಾಂಶ ನಿರ್ಧರಿಸಲಿದೆ. ಅಧಿಕೃತ ಫಲಿತಾಂಶ ಬಂದ ಬಳಿಕ ಮೈತ್ರಿ ಬಗ್ಗೆ ಕಾಂಗ್ರೆಸ್ ಚಿಂತಿಸಲಿದೆ ಎಂದು ಚಾಕೋ ಹೇಳಿದ್ದಾರೆ.

    ಈ ಹಿಂದೆ ಲೋಕಸಭೆ ಚುನಾವಣೆ ವೇಳೆಯೂ ದೆಹಲಿಯಲ್ಲಿ ಆಮ್ ಅದ್ಮಿ ಕಾಂಗ್ರೆಸ್ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಚರ್ಚೆ ನಡೆದಿತ್ತು. ಆದರೆ ಸೀಟು ಹಂಚಿಕೆಯಲ್ಲಿ ಮಾತುಕತೆ ವಿಫಲವಾದ ಹಿನ್ನೆಲೆ ಮೈತ್ರಿ ಮಾತುಕತೆಯನ್ನು ಕೈ ಬಿಡಲಾಗಿತ್ತು. ಸದ್ಯ ಆಪ್ ಸ್ವತಂತ್ರ ಸರ್ಕಾರ ರಚನೆ ಮಾಡಲಿದೆ ಎಂದು ಸಮೀಕ್ಷೆಗಳು ಹೇಳಿದರೂ ವಿಧಾನಸಭೆ ಅತಂತ್ರ ಫಲಿತಾಂಶ ಬಂದ್ದಲ್ಲಿ ಆಪ್ ಬೆಂಬಲಿಸಲು ಕಾಂಗ್ರೆಸ್ ಒಲವು ತೋರಿದೆ.

  • ಬಿಜೆಪಿಗೆ ಮತ್ತೆ ಮುಖಭಂಗ – ದೆಹಲಿಯಲ್ಲಿ ಎಎಪಿಗೆ ಹ್ಯಾಟ್ರಿಕ್ ಗೆಲುವು ಪಕ್ಕಾ

    ಬಿಜೆಪಿಗೆ ಮತ್ತೆ ಮುಖಭಂಗ – ದೆಹಲಿಯಲ್ಲಿ ಎಎಪಿಗೆ ಹ್ಯಾಟ್ರಿಕ್ ಗೆಲುವು ಪಕ್ಕಾ

    ನವದೆಹಲಿ: ದೆಹಲಿ ಚುನಾವಣೆಯಲ್ಲಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಪ್ ಜಯಗಳಿಸಲಿದೆ ಎಂದು ಎಲ್ಲ ಚುನಾವಣಾ ಸಮೀಕ್ಷೆಗಳು ಅಭಿಪ್ರಾಯಪಟ್ಟಿವೆ. ಈ ಮೂಲಕ ಕೇಜ್ರಿವಾಲ್ ಹ್ಯಾಟ್ರಿಕ್ ಸಾಧನೆ ಮಾಡಲಿದ್ದಾರೆ ಎಂದು ಭವಿಷ್ಯ ನುಡಿದಿವೆ.

    ಹೇಗಾದರೂ ಮಾಡಿ 22 ವರ್ಷದ ವನವಾಸ ಮುಗಿಸಿ ರಾಜಧಾನಿಯಲ್ಲಿ ಕಮಲ ಅರಳಿಸಬೇಕೆಂದು ಬಿಜೆಪಿ ನಾಯಕರು ಶತ ಪ್ರಯತ್ನ ನಡೆಸಿದ್ದಾರೆ. ಕಾಂಗ್ರೆಸ್ ಅಂತೂ ಯುದ್ಧಕ್ಕೆ ಮೊದಲೇ ಶಸ್ತ್ರ ತ್ಯಾಗ ಮಾಡಿದೆ. ದೆಹಲಿ ಮತದಾರರ ಮನಸ್ಸಲ್ಲಿ ಖಚಿತವಾಗಿ ಏನಿದ್ಯೋ ಗೊತ್ತಿಲ್ಲ. ಆದ್ರೆ ಇವತ್ತು ಮೂರು ಪಕ್ಷಗಳ ಭವಿಷ್ಯವಂತೂ ಬರೆದಾಗಿದೆ. ದೆಹಲಿ ಚುನಾವಣಾ ಪೂರ್ವ ನಡೆದಿದ್ದ ಎಲ್ಲಾ ಸಮೀಕ್ಷೆಗಳಲ್ಲಿ ಆಮ್ ಆದ್ಮಿ ಪಕ್ಷವೇ ಗೆಲ್ಲುತ್ತೆ ಎಂದು ಹೇಳಲಾಗಿತ್ತು. ಮತದಾನ ಅಂತ್ಯದ ಬಳಿಕ ಸಂಜೆ ಹೊರಬಿದ್ದ ಚುನಾವಣಾ ಪೂರ್ವ ಸಮೀಕ್ಷೆಗಳಲ್ಲಿಯೂ ಹೆಚ್ಚು ಕಡಿಮೆ ಅದೇ ಫಲಿತಾಂಶ ಹೊರಬಿದ್ದಿದೆ.

    ಆಮ್ ಆದ್ಮಿ ಪಕ್ಷವೇ ಮತ್ತೆ ದೆಹಲಿ ಗದ್ದುಗೆ ಏರಲಿದೆ ಎಂದು ಎಕ್ಸಿಟ್ ಪೋಲ್ ಹೇಳುತ್ತಿದೆ. ಇತ್ತೀಚಿಗೆ ಜಾರ್ಖಂಡ್, ಮಹಾರಾಷ್ಟ್ರವನ್ನು ಕಳೆದುಕೊಂಡಿದ್ದ ಬಿಜೆಪಿಗೆ ಈ ಬಾರಿಯೂ ದೆಹಲಿ ಕೈಗೆಟುಕಲ್ಲ ಎನ್ನಲಾಗ್ತಿದೆ. ಒಟ್ಟು 70 ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ದೆಹಲಿ ಬಹುಮತದೊಂದಿಗೆ ಜಯಗಳಿಸಲಿದೆ ಎಂದು ಎಲ್ಲ ಸಮೀಕ್ಷೆಗಳು ಅಭಿಪ್ರಾಯಪಟ್ಟಿದೆ.

    ಸಮೀಕ್ಷೆಗಳು ಹೇಳೋದು ಏನು?
    ಟೈಮ್ಸ್ ನೌ: ಆಪ್- 44 , ಬಿಜೆಪಿ- 26, ಕಾಂಗ್ರೆಸ್- 00, ಇತರೆ – 00

    ಜನ್ ಕೀ ಬಾತ್: ಆಪ್- 48-61, ಬಿಜೆಪಿ – 09-21, ಕಾಂಗ್ರೆಸ್- 0-1, ಇತರೆ – 00-00

    ನ್ಯೂಸ್ ಎಕ್ಸ್: ಆಪ್- 53-57, ಬಿಜೆಪಿ- 11-17, ಕಾಂಗ್ರೆಸ್ – 00-02, ಇತರೆ – 00-00

    ಸಿಸಿರೋ: ಆಪ್ – 54, ಬಿಜೆಪಿ – 15, ಕಾಂಗ್ರೆಸ್ – 01, ಇತರೆ – 00

    ನ್ಯೂಸ್ ನೇಷನ್: ಆಪ್- 55, ಬಿಜೆಪಿ- 14, ಕಾಂಗ್ರೆಸ್- 01, ಇತರೆ – 00

    ಕಡಿಮೆ ಮತದಾನ:
    ಇನ್ನು 2015ರಲ್ಲಿ ಮತದಾನಕ್ಕೆ ಕಂಡುಬಂದಿದ್ದ ಉತ್ಸಾಹ ಈ ಬಾರಿ ಕಂಡುಬರಲಿಲ್ಲ. ಕಳೆದ ಚುನಾವಣೆಗೆ ಹೋಲಿಸಿದ್ರೆ ಈ ಬಾರಿ ಕಡಿಮೆ ಮತದಾನ ಆಗಿದೆ. 2015ರಲ್ಲಿ ಶೇ.65 ರಷ್ಟು ಮತದಾನ ಆಗಿದ್ದರೆ ಈ ಬಾರಿ ಸಂಜೆ ಶೇ.55ರಷ್ಟು ಮತದಾನ ನಡೆದಿದೆ. ಫೆಬ್ರವರಿ 11ಕ್ಕೆ ಫಲಿತಾಂಶ ಹೊರಬೀಳಲಿದೆ.

    ರಾಷ್ಟ್ರಪತಿ ರಾಮನಾಥ್ ಕೋವಿಂದ್, ಸೋನಿಯಾ ಗಾಂಧಿ, ಮನಮೋಹನ್ ಸಿಂಗ್, ರಾಹುಲ್ ಗಾಂಧಿ, ಅರವಿಂದ್ ಕೇಜ್ರಿವಾಲ್, ಬಿಎಲ್ ಸಂತೋಷ್ ಸೇರಿದಂತೆ ಹಲವು ಗಣ್ಯರು ಮತಚಲಾಯಿಸಿದರು. ಚಿನ್ಹೆ ಧರಿಸಿ ಮತದಾನಕ್ಕೆ ಬಂದಿದ್ದನ್ನು ಪ್ರಶ್ನೆ ಮಾಡಿದ ಆಪ್ ಕಾರ್ಯಕರ್ತನಿಗೆ ಕಾಂಗ್ರೆಸ್ ಅಭ್ಯರ್ಥಿ ಅಲ್ಕಾ ಲಂಬಾ ಕಪಾಳಕ್ಕೆ ಬಾರಿಸಿದ್ದಾರೆ. ಮಧುಮಗನೊಬ್ಬ ಕುಟುಂಬದೊಂದಿಗೆ ಬಂದು ಮತ ಚಲಾಯಿಸಿ ಕುಣಿದುಕುಪ್ಪಳಿಸಿದ್ದಾನೆ. 100ಕ್ಕೂ ಹೆಚ್ಚು ಶತಾಯಷಿಗಳು ಮತ ಚಲಾಯಿಸಿದ್ದಾರೆ.

    2015ರ ವಿಧಾನಸಭಾ ಚುನಾವಣೆಯಲ್ಲಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಾರ್ಟಿ 67 ಕ್ಷೇತ್ರಗಳಲ್ಲಿ ಗೆದ್ದು ಸರ್ಕಾರ ರಚಿಸಿತ್ತು. ಬಿಜೆಪಿ ಕೇವಲ 3 ಕ್ಷೇತ್ರದಲ್ಲಿ ಗೆಲುವು ಸಾಧಿಸಿತ್ತು. ಆದರೆ ಉಳಿದ ಪಕ್ಷಗಳಾದ ಕಾಂಗ್ರೆಸ್, ಸಮಾಜವಾದಿ ಪಕ್ಷ, ಶಿರೋಮಣಿ ಅಕಾಲಿಕ ದಳ, ಇಂಡಿಯ್ ನ್ಯಾಷನಲ್ ಲೋಕದಳ ಖಾತೆ ತೆರೆಯುವಲ್ಲಿ ವಿಫಲವಾಗಿದ್ದವು.

  • ದೆಹಲಿ ಚುನಾವಣೆ ದಿಕ್ಕನ್ನೇ ಬದಲಿಸುತ್ತಾ ಶಾಹಿನ್ ಬಾಗ್ ಪ್ರತಿಭಟನೆ?

    ದೆಹಲಿ ಚುನಾವಣೆ ದಿಕ್ಕನ್ನೇ ಬದಲಿಸುತ್ತಾ ಶಾಹಿನ್ ಬಾಗ್ ಪ್ರತಿಭಟನೆ?

    ನವದೆಹಲಿ: ದೆಹಲಿ ವಿಧಾನಸಭೆ ಚುನಾವಣೆಗೆ ಹತ್ತು ದಿನಗಳು ಬಾಕಿ ಉಳಿದಿದೆ. ಪ್ರಚಾರ ಕಾವು ಜೋರಾಗುತ್ತಿದ್ದಂತೆ ಆರೋಪ ಪ್ರತ್ಯಾರೋಪಗಳು ತೀವ್ರಗೊಂಡಿದೆ. ದೆಹಲಿಯಲ್ಲಿ ಮೋದಿ ವಸರ್ಸ್ ಕೇಜ್ರಿವಾಲ್ ಹೋರಾಟ ತೀವ್ರವಾಗಿದೆ. ಸಿಎಂ ಅರವಿಂದ ಕೇಜ್ರಿವಾಲ್ ನೇತೃತ್ವದಲ್ಲಿ ಆಪ್ ಅಭಿವೃದ್ಧಿ ಅಜೆಂಡಾ ಮೇಲೆ ಚುನಾವಣೆ ಎದುರಿಸುತ್ತಿದ್ದಾರೆ. ಬಿಜೆಪಿ ಮೋದಿ ಜನಪ್ರಿಯತೆ, ಸಿಎಎ ಚುನಾವಣಾ ಅಸ್ತ್ರವನ್ನಾಗಿ ಮಾಡಿಕೊಂಡಿದೆ.

    ಗುಣಮಟ್ಟದ ಶಿಕ್ಷಣ, ಉಚಿತ ನೀರು, ವಿದ್ಯುತ್, ವೈದ್ಯಕೀಯ ಸೇವೆ, ಮಹಿಳೆಯರಿಗೆ ಉಚಿತ ಪ್ರಯಾಣ ವಿಚಾರವನ್ನು ಇಟ್ಟುಕೊಂಡು ಅಬ್ಬರದ ಪ್ರಚಾರ ನಡೆಸುತ್ತಿದೆ. ಆಪ್ ಅಬ್ಬರದ ಪ್ರಚಾರಕ್ಕೆ ಪರ್ಯಾಯ ಹುಡುಕುತ್ತಿರುವ ಬಿಜೆಪಿ ಇಂಡಿಯಾ ವರ್ಸಸ್ ಪಾಕಿಸ್ತಾನ ಅಜೆಂಡಾ ಮತ್ತು ಸಿಎಎ ವಿರೋಧಿ ಪ್ರತಿಭಟನೆಗಳನ್ನು ಟಾರ್ಗೆಟ್ ಮಾಡಲು ಆರಂಭಿಸಿ ತಿರುಗೇಟು ನೀಡಲು ಆರಂಭಿಸಿದೆ.

    ಕಳೆದ ಎರಡು ದಿನಗಳಿಂದ ದೆಹಲಿ ಚುನಾವಣೆಯಲ್ಲಿ ಶಾಹಿನ್ ಬಾಗ್ ಪ್ರತಿಭಟನೆ ಚುನಾವಣಾ ವಿಷಯ ವಸ್ತುವಾಗಿದೆ. ಕಳೆದ 44 ದಿನಗಳಿಂದ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಮಹಿಳೆಯರು ನಿರಂತರ ಪ್ರತಿಭಟನೆ ನಡೆಸುತ್ತಿದ್ದಾರೆ. ದೆಹಲಿಯ ಮೂಲೆಯೊಂದರಲ್ಲಿ ನಡೆಯುತ್ತಿರುವ ಈ ಪ್ರತಿಭಟನೆ ದೆಹಲಿಯಲ್ಲಿ ಹೊಸ ಸಂಚಲವೊಂದನ್ನ ಸೃಷ್ಟಿಸಿದೆ.

    ಇದೇ ವಿಚಾರವನ್ನು ಚುನಾವಣೆ ಅಸ್ತ್ರ ಮಾಡಿಕೊಂಡಿರುವ ಬಿಜೆಪಿ ತೀಕ್ಷ್ಣ ರಾಜಕೀಯ ಪ್ರಚಾರಕ್ಕೆ ಮುಂದಾಗಿದೆ. ಶಾಹಿನ್ ಬಾಗ್ ಉದ್ದೇಶಿಸಿ ಮಾತನಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಬಿಜೆಪಿ ಹಾಕುವ ಮತ ದೆಹಲಿ ಮತ್ತು ದೇಶವನ್ನು ಸುರಕ್ಷಿತವಾಗಿಡಲಿದೆ. ಶಾಹಿನ್ ಬಾಗ್ ನಂತಹ ಸಾವಿರಾರು ಪ್ರತಿಭಟನೆಗಳು ತಡೆಯುವ ಶಕ್ತಿ ನಿಮ್ಮ ಮತಕ್ಕಿದೆ ಎನ್ನುವ ಮೂಲಕ ಪ್ರಚಾರಕ್ಕೆ ಶಾಹಿನ್ ಬಾಗ್ ಪ್ರತಿಭಟನೆಯನ್ನು ಎಳೆದು ತಂದಿದ್ದರು.

    ಇದರ ಬೆನ್ನಲ್ಲೇ ಮಾತನಾಡಿದ ಕಾನೂನು ಸಚಿವ ರವಿಶಂಕರ್ ಪ್ರಸಾದ್, ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧದ ಪ್ರತಿಭಟನೆಯ ಹೆಸರಿನಲ್ಲಿ ತುಕ್ಡೆ ತುಕ್ಡೆ ಗ್ಯಾಂಗ್ ಗಳಿಗೆ ವೇದಿಕೆ ನೀಡಲಿದೆ. ಇದು ಸಿಎಎ ವಿರುದ್ಧದ ಪ್ರತಿಭಟನೆಯಲ್ಲ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಪ್ರತಿಭಟನೆ, ಸಿಎಂ ಅರವಿಂದ ಕೇಜ್ರಿವಾಲ್, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ದೇಶ ಒಡೆಯುವ ಕಂಪನಿಗಳಿಗೆ ಬೆಂಬಲ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದರು. ಇದಕ್ಕೆ ಪೂರಕವಾಗಿ ಟ್ವೀಟ್ ಮಾಡಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಭಾರತವನ್ನು ತುಂಡು ತುಂಡು ಮಾಡುವವರ ಪರವಾಗಿದ್ದಾರೆ ಕೇಜ್ರಿವಾಲ್ ಎಂದು ಆರೋಪಿಸಿದ್ದರು.

    ಹಿರಿಯ ನಾಯಕರ ಬೆನ್ನಲ್ಲೇ ಕಿರಿಯರೂ ನಾವು ಕಮ್ಮಿಯಿಲ್ಲ ಎನ್ನುವಂತೆ ಮತ್ತಷ್ಟು ಉಗ್ರವಾಗಿ ಪ್ರಚೋದನಾತ್ಮಕ ಹೇಳಿಕೆ ನೀಡಲು ಆರಂಭಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಮನೀಶ್ ಚೌಧರಿ ಪರ ಪ್ರಚಾರದಲ್ಲಿ ಪಾಲ್ಗೊಂಡಿದ್ದ ಕೇಂದ್ರ ಸಚಿವ ಅನುರಾಗ್ ಠಾಕೂರ್ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಅಲ್ಲದೇ ಪ್ರತಿಭಟನಾಕಾರರನ್ನು ಗುಂಡಿಕ್ಕಿ ಕೊಲ್ಲಿ ಎನ್ನುವ ಪ್ರಚೋದನಾಕಾರಿ ಹೇಳಿಕೆ ನೀಡಿದ್ದಾರೆ. ಚುನಾವಣೆ ಸಮಾವೇಶದಲ್ಲಿ ತಮ್ಮ ಕೈಗಳನ್ನು ಮೇಲೆತ್ತಿ ದೇಶದ್ರೋಹಿಗಳನ್ನು ಎಂದು ಕೂಗಿದ್ದಾರೆ. ಅದಕ್ಕೆ ಪ್ರತಿಯಾಗಿ ನೆರೆದಿದ್ದ ಜನರು ಗೋಲಿಮಾರೋ (ಗುಂಡಿಕ್ಕಿ ಕೊಲ್ಲಿ) ಎಂದು ಆಕ್ರೋಶಭರಿತರಾಗಿ ಕೂಗಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗುತ್ತಿದೆ.

    ಕಾಶ್ಮೀರದಲ್ಲಿ ಕಾಶ್ಮೀರಿ ಪಂಡಿತರಿಗೆ ಏನಾಯಿತೋ ಅದೇ ದೆಹಲಿಯಲ್ಲೂ ಆಗುವ ಸಂಭವ ಇದೆ. ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿದ ಶಾಹೀನ್ ಬಾಗ್ ನಲ್ಲಿ ಪ್ರತಿಭಟನೆ ನಡೆಸುತ್ತಿರುವವರು ಮನೆಮನೆಗೆ ನುಗಿ ಹೆಣ್ಣುಮಕ್ಕಳನ್ನು, ಮಹಿಳೆಯರನ್ನು ಅತ್ಯಾಚಾರ ಮಾಡುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ ಎಂದು ಪಶ್ಚಿಮ ದೆಹಲಿಯ ಬಿಜೆಪಿ ಸಂಸದ ಪರ್ವೇಶ್ ವರ್ಮಾ ವಿವಾದಾತ್ಮಕವಾಗಿ ಭಾಷಣ ಮಾಡಿದ್ದು ಚುನಾವಣೆಯ ಹೊಸ್ತಿಲಿನಲ್ಲಿ ಇರುವಾಗಲೇ ಮತ್ತೆ ಚರ್ಚೆ ಜಾಸ್ತಿಯಾಗಿದೆ.

    ದೆಹಲಿಯಲ್ಲಿ ಬಿಜೆಪಿಗೆ ಶೇ.30-34 ಓಟ್ ಬ್ಯಾಂಕ್ ಹೊಂದಿದೆ. ಪ್ರತಿ ಚುನಾವಣೆಯಲ್ಲಿ ಎರಡನೇ ಸ್ಥಾನ ಪಡೆದುಕೊಳ್ಳುತ್ತಿದೆ. ಆದರೆ ಅದು ಶೇಕಡವಾರು ಮತಗಳು ಗೆಲುವಾಗಿ ಬದಲಾಗುತ್ತಿಲ್ಲ. ಈ ಬಾರಿ ಪ್ರಚೋದಕಾರಿ ಭಾಷಣಗಳ ಮೂಲಕ ಉಗ್ರ ಹಿಂದುತ್ವ ಮತ್ತು ಸಿಎಎ ಪರ ಮತಗಳನ್ನ ಸೆಳೆಯುವ ಪ್ರಯತ್ನ ಮಾಡಲಾಗುತ್ತಿದೆ. ಈ ಮೂಲಕ ಆಪ್ ಅಭಿವೃದ್ಧಿ ಜನಪ್ರಿಯತೆಯನ್ನು ಸೈಡ್ ಲೈನ್ ಮಾಡುವ ತಂತ್ರವನ್ನು ಬಿಜೆಪಿ ಮಾಡುತ್ತಿದೆ. ಆದರೆ ಇದಕ್ಕೆ ತದ್ವಿರುದ್ಧವಾಗಿ ಆಪ್ ಅಭಿವೃದ್ಧಿ ಮೇಲೆ ಮತ ಕೇಳುವುದನ್ನು ಮುಂದುವರಿಸಿದ್ದು ಶಾಹಿನ್ ಬಾಗ್ ಪ್ರತಿಭಟನೆ ಹಾಗೂ ಸಿಎಎ ವಿಚಾರದಲ್ಲಿ ಸ್ಥಿರತೆ ಕಾಯ್ದುಕೊಂಡಿದೆ.

    ಈ ಬೆಳವಣಿಗೆ ನೋಡಿದಾಗ ಶಾಹಿನ್ ಬಾಗ್ ಪ್ರತಿಭಟನೆ ದೆಹಲಿ ಚುನಾವಣಾ ಕಣದಲ್ಲಿ ಚರ್ಚೆಯ ಕೇಂದ್ರ ಬಿಂದುವಾಗಲಿದ್ದು ಫಲಿತಾಂಶದ ಮೇಲೆ ಪರಿಣಾಮ ಬೀರುವ ಸಾಧ್ಯತೆಯನ್ನು ಅಲ್ಲಗೆಳೆಯುವಂತಿಲ್ಲ.