Tag: aap

  • ಖಾಸಗಿ ಶಾಲೆಗಳ ದುಬಾರಿ ಶುಲ್ಕ- ರಮೇಶ್ ಕುಮಾರ್ ಉಪಸ್ಥಿತಿಯಲ್ಲಿ ಚಿಂತನ ಮಂಥನ

    ಖಾಸಗಿ ಶಾಲೆಗಳ ದುಬಾರಿ ಶುಲ್ಕ- ರಮೇಶ್ ಕುಮಾರ್ ಉಪಸ್ಥಿತಿಯಲ್ಲಿ ಚಿಂತನ ಮಂಥನ

    ಬೆಂಗಳೂರು: ಖಾಸಗಿ ಶಾಲೆಗಳ ದುಬಾರಿ ಶುಲ್ಕ ಹಾಗೂ ಸಂಕಷ್ಟದಲ್ಲಿರುವ ಪೋಷಕರಿಗೆ ನೆರವಾಗುವುದರಲ್ಲಿ ಸರ್ಕಾರದ ಪಾತ್ರದ ಕುರಿತು ಆಮ್ ಆದ್ಮಿ ಪಾರ್ಟಿಯು ವಿಧಾನಸಭೆಯ ಮಾಜಿ ಸ್ಪೀಕರ್ ಕೆ.ಆರ್ ರಮೇಶ್ ಕುಮಾರ್ ಅವರ ಉಪಸ್ಥಿತಿಯಲ್ಲಿ ಚಿಂತನ-ಮಂಥನ ಕಾರ್ಯಕ್ರಮವನ್ನು ಆಯೋಜಿಸಿದೆ.

    ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಬೆಂಗಳೂರು ನಗರದ ಎಎಪಿ ಉಪಾಧ್ಯಕ್ಷ ಸುರೇಶ್ ರಾಥೋಡ್, ಸೆ. 26ರ ಭಾನುವಾರದಂದು ಬೆಂಗಳೂರಿನ ಫ್ರೀಡಂ ಪಾರ್ಕ್‍ನಲ್ಲಿ ಬೆಳಗ್ಗೆ 10:30ರಿಂದ ಮಧ್ಯಾಹ್ನ 2 ಗಂಟೆಯ ತನಕ ಚಿಂತನ-ಮಂಥನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಆಮ್ ಆದ್ಮಿ ಪಾರ್ಟಿಯ ರಾಜ್ಯ ಸಂಚಾಲಕ ಪೃಥ್ವಿ ರೆಡ್ಡಿ ಹಾಗೂ ಮಾಜಿ ಸಭಾಧ್ಯಕ್ಷ ರಮೇಶ್ ಕುಮಾರ್ ಮಾತನಾಡಲಿದ್ದಾರೆ. ಪೋಷಕರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.

    ಕೊರೊನಾ ಹಾಗೂ ಲಾಕ್‍ಡೌನ್‍ನಿಂದಾಗಿ ತತ್ತರಿಸಿರುವ ರಾಜ್ಯದ ವಿದ್ಯಾರ್ಥಿಗಳ ಪೋಷಕರು ತಮ್ಮ ಮಕ್ಕಳ ಶಾಲಾ ಶುಲ್ಕವನ್ನು ಪಾವತಿಸಲು ಹೆಣಗಾಡುತ್ತಿದ್ದಾರೆ. ಸರ್ಕಾರವು ಈ ಬಗ್ಗೆ ಜಾಣಕುರುಡು ಪ್ರದರ್ಶಿಸಿ ಜವಾಬ್ದಾರಿಯಿಂದ ನುಣುಚಿಕೊಂಡಿದೆ. ಮಾಜಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರ ಅವೈಜ್ಞಾನಿಕ ನಿರ್ಧಾರಗಳಿಂದ ಸಮಸ್ಯೆಗಳು ಮತ್ತಷ್ಟು ಬಿಗಡಾಯಿಸಿದೆ. ಅವರು ಎಲ್ಲಾ ಖಾಸಗಿ ಶಾಲೆಗಳಿಗೆ 30% ಶುಲ್ಕ ಇಳಿಸಬೇಕೆಂದು ಆದೇಶಿಸಿದ್ದರು. ಆದರೆ ಹೇಗೆ ಇಳಿಸಬೇಕು, ಖಾಸಗಿ ಶಾಲೆಗಳನ್ನು ಆ ನಷ್ಟವನ್ನು ಹೇಗೆ ಭರಿಸಿಕೊಳ್ಳಬೇಕೆಂದು ಸ್ಪಷ್ಟತೆ ನೀಡಿರಲಿಲ್ಲ. ಇದರಿಂದಾಗಿ ಸಚಿವರ ಆದೇಶಕ್ಕೆ ನ್ಯಾಯಾಲಯದಲ್ಲಿ ಹಿನ್ನಡೆಯಾಯಿತು. ಪರಿಣಾಮವಾಗಿ ಬಡ ಹಾಗೂ ಮಧ್ಯಮ ವರ್ಗದ ಪೋಷಕರು ದಿಕ್ಕು ತೋಚದಂತಾಗಿದ್ದಾರೆ ಎಂದು ಸುರೇಶ್ ರಾಥೋಡ್ ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ಸುಪ್ರೀಂಕೋರ್ಟ್ ಇಮೇಲ್‍ಗಳಲ್ಲಿ ಪ್ರಧಾನಿ ಮೋದಿ ಭಾವಚಿತ್ರ ಬಳಕೆಗೆ ಬ್ರೇಕ್

    ಆಮ್ ಆದ್ಮಿ ಪಾರ್ಟಿಯ ಮಹಿಳಾ ಮುಖಂಡೆ ಉಷಾ ಮೋಹನ್ ಮಾತನಾಡಿ, ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಉತ್ತಮ ಶೌಚಾಲಯ, ಶುದ್ಧ ಕುಡಿಯುವ ನೀರು, ಕಂಪ್ಯೂಟರ್, ಸುಸಜ್ಜಿತ ಕೊಠಡಿ ಮುಂತಾದ ಮೂಲಸೌಕರ್ಯಗಳಿಲ್ಲ. ಆದ್ದರಿಂದ ಪೋಷಕರು ತಮ್ಮ ಮಕ್ಕಳನ್ನು ಅನಿವಾರ್ಯವಾಗಿ ಖಾಸಗಿ ಶಾಲೆಗಳಿಗೆ ಸೇರಿಸಬೇಕಾಗಿದೆ. ಕೋವಿಡ್‍ನಿಂದ ತತ್ತರಿಸಿರುವ ವೇಳೆ ಅಲ್ಲಿನ ದುಬಾರಿ ಶುಲ್ಕವನ್ನು ಬಡ ಪೋಷಕರು ಹೇಗೆ ತಾನೇ ಕಟ್ಟಬಹುದು? ದೆಹಲಿಯ ಕೇಜ್ರಿವಾಲ್ ಸರ್ಕಾರವು ಸರ್ಕಾರಿ ಶಾಲೆಗಳನ್ನು ಎಲ್ಲ ರೀತಿಯಲ್ಲೂ ಅಭಿವೃದ್ಧಿಪಡಿಸಿದೆ. ಇಲ್ಲಿನ ಸರ್ಕಾರಿ ಶಾಲೆಗಳೂ ಅಭಿವೃದ್ಧಿಯಾಗಿದ್ದರೆ ಖಾಸಗಿ ಶಾಲೆಗಳ ಶುಲ್ಕದಲ್ಲಿ ವಿನಾಯಿತಿ ನೀಡಬೇಕೆಂದು ನಾವು ಇಷ್ಟೊಂದು ಆಗ್ರಹಿಸುವ ಸಂದರ್ಭವೇ ಬರುತ್ತಿರಲಿಲ್ಲ. ಆದರೆ ನಮ್ಮ ಬಿಜೆಪಿ ಸರ್ಕಾರಕ್ಕೆ ಶಿಕ್ಷಣ ಹಾಗೂ ಶಾಲಾ ಅಭಿವೃದ್ಧಿಯು ಆದ್ಯತೆಯ ವಿಷಯವಾಗಿಲ್ಲ. ಇದನ್ನೂ ಓದಿ: ಅ.7ಕ್ಕೆ ಚಾಮರಾಜನಗರಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಆಗಮನ

  • ಮಹಿಳೆಯರು, ಮಕ್ಕಳ ಮೇಲಿನ ದೌರ್ಜನ್ಯ ಖಂಡಿಸಿ ಎಎಪಿ ಪ್ರತಿಭಟನೆ

    ಮಹಿಳೆಯರು, ಮಕ್ಕಳ ಮೇಲಿನ ದೌರ್ಜನ್ಯ ಖಂಡಿಸಿ ಎಎಪಿ ಪ್ರತಿಭಟನೆ

    ಬೆಂಗಳೂರು: ರಾಜ್ಯಾದ್ಯಂತ ಮಹಿಳೆಯರು ಹಾಗೂ ಮಕ್ಕಳ ಮೇಲೆ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿರುವುದನ್ನು ಖಂಡಿಸಿ ಆಮ್ ಆದ್ಮಿ ಪಾರ್ಟಿ ಸದಸ್ಯರು ಶುಕ್ರವಾರ ಮೊಂಬತ್ತಿ ಹಚ್ಚಿ ಪ್ರತಿಭಟನೆ ನಡೆಸಿದರು.

    ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಎಎಪಿಯ ನಗರ ಮಹಿಳಾ ಘಟಕದ ಅಧ್ಯಕ್ಷರಾದ ಕುಶಲಾ ಸ್ವಾಮಿ, ಗೃಹ ಸಚಿವರಾಗಿದ್ದವರು ಮುಖ್ಯಮಂತ್ರಿಯಾಗಿದ್ದರೂ ರಾಜ್ಯದಲ್ಲಿ ಮಹಿಳೆಯರು ಹಾಗೂ ಮಕ್ಕಳ ಮೇಲಿನ ದೌರ್ಜನ್ಯಗಳು ಹೆಚ್ಚುತ್ತಿರುವುದು ಆಘಾತಕಾರಿ ವಿಷಯ. ತಿಂಗಳಿಗೆ ಸರಾಸರಿ 42 ಮಹಿಳೆಯರ ಮೇಲೆ, ಅಂದರೆ ಪ್ರತಿದಿನ ಒಂದಕ್ಕಿಂತ ಹೆಚ್ಚು ಮಹಿಳೆಯರ ಮೇಲೆ ಅತ್ಯಾಚಾರ ಆಗುತ್ತಿದೆ. 2018ರಿಂದ ಈವರೆಗೆ 1759 ಅತ್ಯಾಚಾರ ಪ್ರಕರಣಗಳು ದಾಖಲಾಗಿದ್ದು, ಕೇವಲ ಆರು ಮಂದಿಗೆ ಶಿಕ್ಷೆಯಾಗಿದೆ ಎಂದು ಪೊಲೀಸ್ ಇಲಾಖೆಯೇ ಮಾಹಿತಿ ಬಹಿರಂಗಪಡಿಸಿದೆ. ಸಾಕ್ಷ್ಯಾಧಾರ ಸಂಗ್ರಹಿಸಲು ಪೊಲೀಸರು ನಿರ್ಲಕ್ಷ್ಯ ತೋರುತ್ತಿರುವುದರಿಂದ ಅತ್ಯಾಚಾರಿಗಳು ಖುಲಾಸೆಗೊಳ್ಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: 33 ಜನರಿಂದ 9 ತಿಂಗಳ ಕಾಲ 15ರ ಬಾಲಕಿ ಮೇಲೆ ನಿರಂತರ ಅತ್ಯಾಚಾರ

    ಪೊಲೀಸರಿಗೆ ದೂರು ನೀಡಲು ಬರುವ ಲೈಂಗಿಕ ಕಿರುಕುಳಕ್ಕೊಳಗಾದ ಮಹಿಳೆಯರಿಗೆ ಸೂಕ್ತ ಸ್ಪಂದನೆ ಸಿಗುತ್ತಿಲ್ಲ. ಪೊಲೀಸರು ಎಫ್‍ಐಆರ್ ಹಾಕಲು ಮೀನ ಮೇಷ ಎಣಿಸುತ್ತಾರೆ. ಅತ್ಯಾಚಾರದಂತಹ ಗಂಭೀರ ಪ್ರಕರಣಗಳಲ್ಲೂ ರಾಜಿ ಮಾಡಿಸಲು ಪೊಲೀಸರು ಮುಂದಾಗುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದರು. ಇದನ್ನೂ ಓದಿ: ಹುಲಿ ಹುಡುಕೋ ಕಾರ್ಯಾಚರಣೆ ವೇಳೆ ಸಿಕ್ತು ಕಾಡುಕೋಣ..!

    ಗೃಹ ಸಚಿವ ಆರಗ ಜ್ಞಾನೇಂದ್ರರವರು ಮಾಧ್ಯಮಗಳ ಮುಂದೆ ಹೇಳಿಕೆಗಷ್ಟೇ ಸೀಮಿತವಾಗಿದ್ದು, ಪೊಲೀಸ್ ಇಲಾಖೆ ಮೇಲೆ ಹಿಡಿತ ಸಾಧಿಸುವುದರಲ್ಲಿ ಅವರು ಸಂಪೂರ್ಣ ವಿಫಲರಾಗಿದ್ದಾರೆ. ರಾಜ್ಯದ ಆಡಳಿತ ಪಕ್ಷದಲ್ಲಿ ಕಾಮುಕರೇ ತುಂಬಿಕೊಂಡಿದ್ದು, ಅವರಿಗೆ ಮಹಿಳೆಯರ ಮಾನ ರಕ್ಷಣೆಗಿಂತ ತಮ್ಮ ಮಾನ ಉಳಿದರೆ ಸಾಕಾಗಿದೆ. ಅತ್ಯಾಚಾರಿಗಳ ವಿರುದ್ಧ ಮಾತಾಡುವ ನೈತಿಕತೆಯನ್ನೇ ಬಿಜೆಪಿ ನಾಯಕರು ಕಳೆದುಕೊಂಡಿದ್ದಾರೆ ಎಂದು ಕುಶಲಾ ಸ್ವಾಮಿಯವರು ಬಿಜೆಪಿ ನಾಯಕರನ್ನು ತರಾಟೆಗೆ ತೆಗೆದುಕೊಂಡರು.

    ಮಹಿಳೆಯರ ಮೇಲಿನ ದೌರ್ಜನ್ಯಗಳನ್ನು ನಿಯಂತ್ರಿಸಲು ಬಳಕೆಯಾಗುತ್ತಿದ್ದ, 71 ಸಾಂತ್ವನ ಕೇಂದ್ರಗಳನ್ನು ಏಪ್ರಿಲ್‍ನಲ್ಲಿ ಸ್ಥಗಿತಗೊಳಿಸಲಾಗಿದೆ. ಜನಸಂಖ್ಯೆ ಜಾಸ್ತಿಯಿರುವ ಹಾಗೂ ಲೈಂಗಿಕ ಕಿರುಕುಳ ಪ್ರಕರಣಗಳು ಹೆಚ್ಚು ದಾಖಲಾಗುವ ಬೆಂಗಳೂರಿನಲ್ಲೇ ಎಲ್ಲಾ ಸಾಂತ್ವನ ಕೇಂದ್ರಗಳು ಸ್ಥಗಿತಗೊಂಡಿವೆ. ಕೇಂದ್ರ ಸರ್ಕಾರದ ಯೋಜನೆಯ ಕೌಟುಂಬಿಕ ಸಲಹಾ ಕೇಂದ್ರಗಳು ನಿರುಪಯೋಗಿಯಾಗಿದ್ದು, ನೊಂದ ಮಹಿಳೆಯರಿಗೆ ಅಗತ್ಯವಿರುವ ಯಾವ ಸೇವೆಯೂ ಅಲ್ಲಿ ಸಿಗುತ್ತಿಲ್ಲ. ಮಹಿಳೆಯರ ಬಗ್ಗೆ ಕಾಳಜಿಯಿಲ್ಲದ ಹಾಗೂ ಬಿಜೆಪಿಯ ಏಜೆಂಟ್ ರೀತಿ ವರ್ತಿಸುವ ಆರ್.ಪ್ರಮೀಳಾ ನಾಯ್ಡುರವರ ನೇತೃತ್ವದಲ್ಲಿ ರಾಜ್ಯ ಮಹಿಳಾ ಆಯೋಗ ನಿಷ್ಕ್ರಿಯವಾಗಿದೆ ಎಂದು ಕುಶಲಾ ಸ್ವಾಮಿಯವರು ಬೇಸರ ವ್ಯಕ್ತಪಡಿಸಿದರು.

    ಎಎಪಿ ಮುಖಂಡರಾದ ಸುಹಾಸಿನಿ ಫಣಿರಾಜ್, ಯೋಗಿತಾ ರೆಡ್ಡಿ, ವಿಜಯ್ ಶಾಸ್ತ್ರಿಮಠ್ ಹಾಗೂ ಅನೇಕ ಮುಖಂಡರು, ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

  • ಸರ್ಕಾರದ ನಿರ್ಲಕ್ಷ್ಯದಿಂದಾಗಿ ನ್ಯಾಯಾಲಯದಲ್ಲಿ ಪೋಷಕರಿಗೆ ಹಿನ್ನಡೆ: ಎಎಪಿ

    ಸರ್ಕಾರದ ನಿರ್ಲಕ್ಷ್ಯದಿಂದಾಗಿ ನ್ಯಾಯಾಲಯದಲ್ಲಿ ಪೋಷಕರಿಗೆ ಹಿನ್ನಡೆ: ಎಎಪಿ

    ಬೆಂಗಳೂರು: ಶಾಲಾ ವಿದ್ಯಾರ್ಥಿಗಳು ಹಾಗೂ ಪೋಷಕರ ಸಂಕಷ್ಟವನ್ನು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡಲು ನಿರ್ಲಕ್ಷ್ಯ ತೋರಿದ ರಾಜ್ಯ ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆ ಹಾಗೂ ಚಿಂತನ-ಮಂಥನ ನಡೆಸುವುದಾಗಿ ಆಮ್ ಆದ್ಮಿ ಪಾರ್ಟಿ ತಿಳಿಸಿದೆ.

    ಬೆಂಗಳೂರಿನ ಕ್ಯಾಸ್ಟಲ್ ಸ್ಟ್ರೀಟ್‍ನಲ್ಲಿರುವ ಪಕ್ಷದದ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ನಗರ ಎಎಪಿ ಅಧ್ಯಕ್ಷ ಮೋಹನ್ ದಾಸರಿಯವರು, ಕೋವಿಡ್ ಹಾಗೂ ಲಾಕ್‍ಡೌನ್‍ನಿಂದಾಗಿ ಅನೇಕ ತಿಂಗಳು ದುಡಿಮೆಯಿಲ್ಲದೇ ಬದುಕು ಸಾಗಿಸಿ, ದುಬಾರಿ ಶಾಲಾ ಶುಲ್ಕ ಕಟ್ಟಬೇಕಾಗಿರುವ ಪೋಷಕರ ಕಷ್ಟ ಹೇಳತೀರದು. ಈ ಸಂಬಂಧ ಆಮ್ ಆದ್ಮಿ ಪಾರ್ಟಿಯು ರಾಜ್ಯಾದ್ಯಂತ 45 ದಿನಗಳ ಕಾಲ ಸಹಿಸಂಗ್ರಹ ಅಭಿಯಾನ ನಡೆಸಿ, 1 ಲಕ್ಷಕ್ಕೂ ಹೆಚ್ಚು ಸಹಿ ಸಂಗ್ರಹಿಸಿದೆ. ಖಾಸಗಿ ಶಾಲೆಗಳ ಶುಲ್ಕವನ್ನು ಶೇ. 30ರಷ್ಟು ಇಳಿಸಬೇಕು ಹಾಗೂ ಅಲ್ಲಿನ ಶಿಕ್ಷಕರಿಗೆ ಲಾಕ್‍ಡೌನ್ ಅವಧಿಯ ಸಂಬಳವನ್ನು ಸರ್ಕಾರ ನೀಡಬೇಕು ಎಂಬುದು ನಮ್ಮ ಆಗ್ರಹವಾಗಿದೆ. ಆದರೆ ಈಗ ರಾಜ್ಯ ಸರ್ಕಾರವು ನ್ಯಾಯಾಲಯದಲ್ಲಿ ತೋರಿದ ಉದಾಸೀನದಿಂದಾಗಿ, ಶೇ. 15ರಷ್ಟು ಮಾತ್ರ ವಿನಾಯಿತಿ ಸಿಕ್ಕಿರುವುದು ಬೇಸರ ಉಂಟುಮಾಡಿದೆ” ಎಂದು ಹೇಳಿದರು. ಇದನ್ನೂ ಓದಿ: ವಿಜಯೇಂದ್ರ ಯಾವುದೇ ಉಪ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ: ಬಿಎಸ್‍ವೈ

    ರಾಜ್ಯ ಸರ್ಕಾರಕ್ಕೆ ಬಡ-ಮಧ್ಯಮ ವರ್ಗದ ಪೋಷಕರ ಬಗ್ಗೆ ಯಾವುದೇ ಕಾಳಜಿಯಿಲ್ಲ. ಪೋಷಕರು ಹಾಗೂ ಖಾಸಗಿ ಶಾಲೆಗಳ ಶಿಕ್ಷಕರ ಹಿತ ಕಾಪಾಡುವ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸರ್ಕಾರ ಯತ್ನಿಸುತ್ತಿದೆ. ಇದನ್ನು ಖಂಡಿಸಿ ಸೆ. 22 ಬುಧವಾರದಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ಹಾಗೂ ಸೆ.25 ಶನಿವಾರದಂದು ಚಿಂತನ-ಮಂಥನ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ನೊಂದ ಪೋಷಕರು ಹಾಗೂ ಶಿಕ್ಷಣ ತಜ್ಞರ ಜೊತೆ ಚಿಂತನ-ಮಂಥನ ಕಾರ್ಯಕ್ರಮದಲ್ಲಿ ಚರ್ಚಿಸಿ, ಮುಂದಿನ ನಡೆ ಬಗ್ಗೆ ನಿರ್ಧರಿಸಲಾಗುವುದು ಎಂದು ಮೋಹನ್ ದಾಸರಿ ತಿಳಿಸಿದರು. ಇದನ್ನೂ ಓದಿ: ಬಾಳೆಎಲೆಯಲ್ಲಿ ಮೂಡಿದ ಮೋದಿ ಚಿತ್ರ

    ಆಮ್ ಆದ್ಮಿ ಪಕ್ಷದ ಮುಖಂಡರಾದ ಪ್ರಕಾಶ್ ನೆಡಂಗುಡಿಯವರು ಮಾತನಾಡಿ, ರಾಜ್ಯ ಸರ್ಕಾರದ ಬೇಜವಾಬ್ದಾರಿತನದಿಂದಾಗಿ, ಕಳೆದ ವರ್ಷ ಶೇ. 30ರಷ್ಟು ವಿನಾಯಿತಿ ಪಡೆದಿದ್ದ ವಿದ್ಯಾರ್ಥಿಗಳಿಗೆ ಅದರಲ್ಲಿ ಅರ್ಧ ಭಾಗವನ್ನು ಈಗ ಕಟ್ಟಬೇಕಾದ ಆತಂಕ ಎದುರಾಗಿದೆ. ಮುಖ್ಯಮಂತ್ರಿ ಹಾಗೂ ಶಿಕ್ಷಣ ಸಚಿವರು ತಕ್ಷಣವೇ ಶಿಕ್ಷಣ ಹಾಗೂ ಕಾನೂನು ತಜ್ಞರ ಜೊತೆ ಸಭೆ ನಡೆಸಿ, ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸುವ ಕುರಿತು ಚರ್ಚಿಸಬೇಕು. ಖಾಸಗಿ ಶಾಲೆಗಳಿಗೆ ಅನ್ಯಾಯವಾಗದಂತೆ ಹಾಗೂ ಪೋಷಕರಿಗೆ ಹೊರೆಯಾಗದಂತೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ನಿರ್ಧಾರ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಎಎಪಿ ಮುಖಂಡಾದ ಉಷಾ ಮೋಹನ್‍ರವರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

  • ರಾಜಾಜಿನಗರದ ಇಎಸ್‍ಐ ಹೃದ್ರೋಗ ವಿಭಾಗದ ವೈಫಲ್ಯಕ್ಕೆ ಭ್ರಷ್ಟಾಚಾರ ಕಾರಣ: ಎಎಪಿ

    ರಾಜಾಜಿನಗರದ ಇಎಸ್‍ಐ ಹೃದ್ರೋಗ ವಿಭಾಗದ ವೈಫಲ್ಯಕ್ಕೆ ಭ್ರಷ್ಟಾಚಾರ ಕಾರಣ: ಎಎಪಿ

    ಬೆಂಗಳೂರು: ರಾಜಾಜಿನಗರದ ಇಎಸ್‍ಐ ಆಸ್ಪತ್ರೆಯಲ್ಲಿರುವ ಜಯದೇವ ಹೃದ್ರೋಗ ಸಂಸ್ಥೆಯ ಕಾರ್ಡಿಯಾಲಜಿ ವಿಭಾಗದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದ್ದು, ಆಡಳಿತ ಮಂಡಳಿಯ ಹಣದ ದಾಹಕ್ಕೆ ನೂರಾರು ರೋಗಿಗಳು ಬಲಿಯಾಗಿದ್ದಾರೆ ಎಂದು ನಗರ ಎಎಪಿ ಅಧ್ಯಕ್ಷ ಮೋಹನ್ ದಾಸರಿ ಆಕ್ರೋಶ ವ್ಯಕ್ತಪಡಿಸಿದರು.

    ಕಾರ್ಡಿಯಾಲಜಿ ವಿಭಾಗವನ್ನು ಬನ್ನೇರುಘಟ್ಟಕ್ಕೆ ಸ್ಥಳಾಂತರ ಮಾಡುವುದನ್ನು ಖಂಡಿಸಿ ಆಮ್ ಆದ್ಮಿ ಪಾರ್ಟಿಯು ರಾಜಾಜಿನಗರದ ಇಎಸ್‍ಐ ಆಸ್ಪತ್ರೆ ಎದುರು ಬುಧವಾರ ಪ್ರತಿಭಟನೆ ನಡೆಸಿತು. ಇದನ್ನೂ ಓದಿ: ಆಸ್ಪತ್ರೆಯಿಂದ ಜಯದೇವ ಹೃದ್ರೋಗ ಘಟಕ ಸ್ಥಳಾಂತರ- ಸುರೇಶ್ ಕುಮಾರ್ ಸ್ಪಷ್ಟನೆ

    ಪ್ರತಿಭಟನೆಯಲ್ಲಿ ಮಾತನಾಡಿದ ಬೆಂಗಳೂರು ನಗರ ಎಎಪಿ ಅಧ್ಯಕ್ಷ ಮೋಹನ್ ದಾಸರಿ, “ಇಎಸ್‍ಐಯಲ್ಲಿರುವ ಹೃದ್ರೋಗ ವಿಭಾಗದಲ್ಲಿ 50ಕ್ಕೂ ಹೆಚ್ಚು ವೆಂಟಿಲೇಟರ್ ಬೆಡ್‍ಗಳಿವೆ, ಅತ್ಯಾಧುನಿಕ ಸೌಲಭ್ಯಗಳಿವೆ. 15 ಸರ್ಜನ್‍ಗಳು, ನೂರಾರು ಸಿಬ್ಬಂದಿ ಅಲ್ಲಿಗೆ ನೇಮಕಗೊಂಡಿದ್ದಾರೆ. ಬೇರೆಲ್ಲ ಆಸ್ಪತ್ರೆಗಳಲ್ಲಿ ಬೆಡ್‍ಗಳು ಭರ್ತಿಯಾಗಿದ್ದರೂ ಕೂಡ ಇಲ್ಲಿ ಬೆಡ್‍ಗಳು ಖಾಲಿಯಿರಲು ಕಾರಣವೇನು ಎಂದು ನಾವು ಯೋಚಿಸಬೇಕು. ಕಾರ್ಡಿಯಾಲಜಿ ವಿಭಾಗದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದ್ದು, ಖಾಸಗಿ ಆಸ್ಪತ್ರೆಗಳೊಂದಿಗೆ ಅಕ್ರಮ ಒಳ ಒಪ್ಪಂದ ಮಾಡಿಕೊಂಡಿರುವ ಇಲ್ಲಿನ ಅಧಿಕಾರಿಗಳು ಉದ್ದೇಶಪೂರ್ವಕವಾಗಿ ಆಸ್ಪತ್ರೆಯನ್ನು ಹಾಳುಗೆಡವುತ್ತಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.  ಇದನ್ನೂ ಓದಿ: ಅಂಗಾಂಗಗಳನ್ನು ದಾನ ಮಾಡಿ – ಡೆತ್‍ನೋಟ್ ಬರೆದು ಉಡುಪಿಯ ಬಿಜೆಪಿ ನಾಯಕಿ ಆತ್ಮಹತ್ಯೆ

    2011-12ರಲ್ಲಿ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯು ರಾಜಾಜಿನಗರದ ಇಎಸ್‍ಐ ಆಸ್ಪತ್ರೆಯೊಂದಿಗೆ ಎಂಒಯು ಮಾಡಿಕೊಂಡಿದೆ. ಆ ಪ್ರಕಾರ ಇಎಸ್‍ಐ ಆಸ್ಪತ್ರೆಯಲ್ಲಿ ವಾರ್ಷಿಕ 15 ಕೋಟಿ ರೂ. ಮೊತ್ತದ ವಹಿವಾಟು ನಡೆಯಬೇಕು ಎಂದು ಗುರಿ ನಿಗದಿ ಪಡಿಸಲಾಗಿದೆ. ಈ ರೀತಿಯ ಒಪ್ಪಂದವು ಆರೋಗ್ಯ ಇಲಾಖೆಯ ವ್ಯಾಪಾರಿ ಪ್ರವೃತ್ತಿಯನ್ನು ತೋರಿಸುತ್ತದೆ. ಚಿಕಿತ್ಸೆಯನ್ನು ಸೇವೆಯನ್ನು ಪರಿಗಣಿಸುವ ಬದಲು ವ್ಯಾಪಾರವೆಂದು ಸರ್ಕಾರವೇ ಪರಿಗಣಿಸಿರುವುದು ನಾಚಿಕೆಗೇಡು. ಜಯದೇವ ಆಸ್ಪತ್ರೆಯೊಂದಿಗಿನ ಒಪ್ಪಂದ ನವೆಂಬರ್‍ನಲ್ಲಿ ಅಂತ್ಯವಾದ ನಂತರ ಖಾಸಗಿ ಆಸ್ಪತ್ರೆ ಜೊತೆ ಒಪ್ಪಂದಕ್ಕೆ ಸಿದ್ಧತೆ ನಡೆಸಲಾಗುತ್ತಿರುವುದು ಖಂಡನೀಯ. ಇಎಸ್‍ಐ ಆಸ್ಪತ್ರೆಯಲ್ಲಿ ನಡೆಯುತ್ತಿರುವ ಎಲ್ಲ ಅಕ್ರಮಗಳಿಗೆ ಇಲ್ಲಿನ ಆಡಳಿತ ಮಂಡಳಿ ನೇರ ಕಾರಣ. ಮಂಡಳಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಆಗ್ರಹಿಸಿ ಪ್ರಧಾನಿ, ರಾಷ್ಟ್ರಪತಿ, ಸಿಬಿಐ ಹಾಗೂ ಕೇಂದ್ರ ಕಾರ್ಮಿಕ ಇಲಾಖೆಗೆ ದೂರು ನೀಡುತ್ತೇವೆ” ಎಂದು ಮೋಹನ್ ದಾಸರಿ ಹೇಳಿದರು.

    ಆಮ್ ಆದ್ಮಿ ಪಾರ್ಟಿಯ ಬೆಂಗಳೂರು ನಗರದ ಉಪಾಧ್ಯಕ್ಷರಾದ ಬಿ.ಟಿ.ನಾಗಣ್ಣ ಮಾತನಾಡಿ, “ಇಲ್ಲಿನ ಅಕ್ರಮಗಳಿಗೆ ಕಡಿವಾಣ ಹಾಕುವುದರ ಜೊತೆಗೆ, ಕಾರ್ಮಿಕರಿಗೆ ಮಾತ್ರ ಸೀಮಿತವಾಗಿರುವ ಹೃದ್ರೋಗ ವಿಭಾಗವನ್ನು ಎಲ್ಲ ಸಾರ್ವಜನಿಕರಿಗೆ ವಿಸ್ತರಿಸಬೇಕು. ರಾಜಾಜಿನಗರ, ಮಲ್ಲೇಶ್ವರ ಹಾಗೂ ಸುತ್ತಮುತ್ತಲಿನ ಜನರಿಗೆ ಇದರಿಂದ ಉಪಯೋಗವಾಗುತ್ತದೆ. ಆಸ್ಪತ್ರೆಯಲ್ಲಿರುವ ಸೌಲಭ್ಯಗಳ ಬಗ್ಗೆ ಜನರಿಗೆ ಮಾಹಿತಿ ನೀಡಬೇಕು. ಕೋವಿಡ್ ಆತಂಕವಿರುವ ಈ ಸಂದರ್ಭದಲ್ಲಿ ಆಸ್ಪತ್ರೆಗಳನ್ನು ಇನ್ನಷ್ಟು ಆಧುನೀಕರಣಗೊಳಿಸಲು ಮುಂದಾಗುವ ಬದಲು ಇರುವ ಸೌಲಭ್ಯಗಳನ್ನೂ ಕಿತ್ತುಕೊಳ್ಳುತ್ತಿರುವುದು ಖಂಡನೀಯ ಎಂದು ಹೇಳಿದರು.

    ಪ್ರತಿಭಟನೆಯಲ್ಲಿ ಎಎಪಿಯ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ. ಸದಂ, ಪಕ್ಷದ ಮುಖಂಡರಾದ ರಾಜಶೇಖರ್ ದೊಡ್ಡಣ್ಣ, ದಿನೇಶ್ ಕುಮಾರ್, ಪ್ರಕಾಶ್ ನೆಡಂಗಡಿ, ಡಾ. ಸತೀಶ್ ಕುಮಾರ್, ಚನ್ನಬಸಪ್ಪ ಹಾಗೂ ಇತರೆ ಮುಖಂಡರು, ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.

  • ಇಎಸ್‍ಐಯಿಂದ ಹೃದ್ರೋಗ ವಿಭಾಗದ ಸ್ಥಳಾಂತರ ನಿರ್ಧಾರವನ್ನು ತಕ್ಷಣವೇ ಕೈಬಿಡಬೇಕು: ಬಿ.ಟಿ.ನಾಗಣ್ಣ

    ಇಎಸ್‍ಐಯಿಂದ ಹೃದ್ರೋಗ ವಿಭಾಗದ ಸ್ಥಳಾಂತರ ನಿರ್ಧಾರವನ್ನು ತಕ್ಷಣವೇ ಕೈಬಿಡಬೇಕು: ಬಿ.ಟಿ.ನಾಗಣ್ಣ

    ಬೆಂಗಳೂರು: ರಾಜಾಜಿನಗರದ ಇಎಸ್‍ಐ ಆಸ್ಪತ್ರೆಯಲ್ಲಿರುವ ಜಯದೇವ ಹೃದ್ರೋಗ ಸಂಸ್ಥೆಯ ಕಾರ್ಡಿಯಾಲಜಿ ವಿಭಾಗವನ್ನು ಬನ್ನೇರುಘಟ್ಟಕ್ಕೆ ಸ್ಥಳಾಂತರ ಮಾಡುವ ನಿರ್ಧಾರವನ್ನು ತಕ್ಷಣವೇ ಕೈಬಿಡಬೇಕು ಎಂದು ಆಮ್ ಆದ್ಮಿ ಪಾರ್ಟಿಯ ಬೆಂಗಳೂರು ನಗರದ ಉಪಾಧ್ಯಕ್ಷರಾದ ಬಿ.ಟಿ.ನಾಗಣ್ಣ ಆಗ್ರಹಿಸಿದರು.

    ರಾಜಾಜಿನಗರದ ಎಎಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 2011-12ರಲ್ಲಿ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯು ರಾಜಾಜಿನಗರದ ಇಎಸ್‍ಐ ಆಸ್ಪತ್ರೆಯೊಂದಿಗೆ ಎಂಒಯು ಮಾಡಿಕೊಂಡಿದೆ. ಆ ಪ್ರಕಾರ ಇಎಸ್‍ಐ ಆಸ್ಪತ್ರೆಯಲ್ಲಿ ವಾರ್ಷಿಕ 15 ಕೋಟಿ ರೂ. ಮೊತ್ತದ ವಹಿವಾಟು ನಡೆಯಬೇಕಿತ್ತು. ಆದರೆ ಪ್ರಚಾರದ ಕೊರತೆಯಿಂದಾಗಿ ಇತ್ತೀಚಿನ ಕೆಲವು ವರ್ಷಗಳಲ್ಲಿ ಆ ಗುರಿ ತಲುಪಲು ಇಎಸ್‍ಐಗೆ ಸಾಧ್ಯವಾಗುತ್ತಿಲ್ಲ. ಇದನ್ನು ನೆಪ ಮಾಡಿಕೊಂಡು, ಅಲ್ಲಿರುವ ಜಯದೇವ ಆಸ್ಪತ್ರೆಯ ಹೃದ್ರೋಗ ವಿಭಾಗವನ್ನು ಸ್ಥಳಾಂತರಿಸಲು ಹೊರಟಿರುವುದು ಖಂಡನೀಯ ಎಂದು ಹೇಳಿದರು. ಇದನ್ನೂ ಓದಿ:  ಅದ್ಧೂರಿಯಾಗಿ ಬೀದಿ ನಾಯಿಯ ಹುಟ್ಟುಹಬ್ಬ ಆಚರಿಸಿ ಸಂಭ್ರಮಿಸಿದ ಸ್ನೇಹಿತರು

    ಇಎಸ್‍ಐ ಆಸ್ಪತ್ರೆಯ ಸೌಲಭ್ಯಗಳು ಪ್ರಸ್ತುತ ಕಾರ್ಮಿಕರಿಗೆ ಸೀಮಿತವಾಗಿದೆ. ಅಲ್ಲಿನ ಸೌಲಭ್ಯಗಳನ್ನು ಸಾರ್ವಜನಿಕರಿಗೂ ವಿಸ್ತರಿಸಬೇಕು. ರಾಜಾಜಿನಗರ, ಮಲ್ಲೇಶ್ವರಂ ಹಾಗೂ ಸುತ್ತಮುತ್ತಲಿನ ಜನರಿಗೆ ಇದರಿಂದ ಉಪಯೋಗವಾಗುತ್ತದೆ. ಆಸ್ಪತ್ರೆಯಲ್ಲಿರುವ ಸೌಲಭ್ಯಗಳ ಕುರಿತು ಪ್ರಚಾರ ಮಾಡದಿದ್ದರೆ ಹೇಗೆ ತಾನೇ ರೋಗಿಗಳಿಗೆ ತಿಳಿಯುತ್ತೆ ಎಂದು ಪ್ರಶ್ನಿಸಿದರು. ಇನ್ನಾದರೂ ಜನರಿಗೆ ಮಾಹಿತಿ ನೀಡುವ ಕೆಲಸವನ್ನು ಆಸ್ಪತ್ರೆ ಮಾಡಬೇಕು. ಕೋವಿಡ್ ಆತಂಕವಿರುವ ಈ ಸಂದರ್ಭದಲ್ಲಿ ಆಸ್ಪತ್ರೆಗಳನ್ನು ಇನ್ನಷ್ಟು ಆಧುನೀಕರಣಗೊಳಿಸಲು ಮುಂದಾಗಬೇಕು. ಬದಲಾಗಿ, ಇರುವ ಸೌಲಭ್ಯಗಳನ್ನೂ ಕಿತ್ತುಕೊಳ್ಳುವುದು ತಪ್ಪಾಗುತ್ತೆ ಎಂದರು. ಇದನ್ನೂ ಓದಿ:  ಪೆಟ್ರೋಲ್ ಸುರಿದು ಪತಿಯನ್ನು ಹತ್ಯೆಗೈದು ಚರಂಡಿಗೆ ಶವ ಎಸೆದ್ಳು

    ಬುಧವಾರ ಪ್ರತಿಭಟನೆ!
    ರಾಜಾಜಿನಗರದ ಇಎಸ್‍ಐ ಆಸ್ಪತ್ರೆಯಲ್ಲಿರುವ ಹೃದ್ರೋಗ ವಿಭಾಗವನ್ನು ಬನ್ನೇರುಘಟ್ಟಕ್ಕೆ ಸ್ಥಳಾಂತರ ಮಾಡುವುದನ್ನು ಖಂಡಿಸಿ ಆಸ್ಪತ್ರೆಯ ಎದುರು ಆಮ್ ಆದ್ಮಿ ಪಾರ್ಟಿ ಪ್ರತಿಭಟನೆ ನಡೆಸಲು ನಿರ್ಧರಿಸಿದೆ. ಸೆ.15 ರಂದು ನೂರಾರು ಕಾರ್ಯಕರ್ತರೊಂದಿಗೆ ಎಎಪಿಯ ಬೆಂಗಳೂರು ಘಟಕವು ಪ್ರತಿಭಟನೆ ನಡೆಸಿ, ನಿರ್ಧಾರವನ್ನು ಹಿಂಪಡೆಯಬೇಕೆಂದು ನಮ್ಮ ಪಕ್ಷ ಆಗ್ರಹಿಸಲಿದೆ ಎಂದು ತಿಳಿಸಿದರು. ಇದನ್ನೂ ಓದಿ:  ಮೋದಿ ಸರ್ಕಾರದಿಂದ ಲವ್ ಲೆಟರ್ ಬಂದಿದೆ – ಆಪ್ ನಾಯಕ

    ಸುದ್ದಿಗೋಷ್ಠಿಯಲ್ಲಿ ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಎಎಪಿ ಪ್ರಧಾನ ಕಾರ್ಯದರ್ಶಿ ದಿನೇಶ್ ಉಪಸ್ಥಿತರಿದ್ದರು.

  • ಜನಾಶೀರ್ವಾದ ಬದಲು ಹೆಣಾಶೀರ್ವಾದ ಯಾತ್ರೆ ಮಾಡಲಿ: ಎಎಪಿ

    ಜನಾಶೀರ್ವಾದ ಬದಲು ಹೆಣಾಶೀರ್ವಾದ ಯಾತ್ರೆ ಮಾಡಲಿ: ಎಎಪಿ

    ಬೆಂಗಳೂರು: ರಾಜ್ಯದ ಸಾವಿರಾರು ಜನರು ಕೋವಿಡ್‍ಗೆ ಬಲಿಯಾಗುತ್ತಿದ್ದಾಗ ನೆರವಿಗೆ ಬಾರದೇ ಅವಿತು ಕುಳಿತು ಈಗ ದಿಢೀರ್ ಪ್ರತ್ಯಕ್ಷರಾಗಿರುವ ಬಿಜೆಪಿ ನಾಯಕರು ಜನಾಶೀರ್ವಾದ ಯಾತ್ರೆಯ ಬದಲು ಹೆಣಾಶೀರ್ವಾದ ಯಾತ್ರೆ ಮಾಡುವುದು ಸೂಕ್ತ ಎಂದು ಎಎಪಿಯ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ. ಸದಂ ಆಕ್ರೋಶ ವ್ಯಕ್ತಪಡಿಸಿದರು.

    ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಜಗದೀಶ್ ವಿ.ಸದಂ ಅವರು, ಕೋವಿಡ್ ಮೊದಲ ಹಾಗೂ ಎರಡನೇ ಅಲೆಯಲ್ಲಿ ಸೋಂಕಿತರಿಗೆ ಬೆಡ್, ಆಕ್ಸಿಜನ್ ಕಲ್ಪಿಸುವುದನ್ನು ಸರ್ಕಾರ ನಿರ್ಲಕ್ಷಿಸಿತು. ಪರಿಣಾಮವಾಗಿ, ಮೂರು ಲಕ್ಷಕ್ಕೂ ಅಧಿಕ ಜನರು ರಾಜ್ಯದಲ್ಲಿ ಮೃತಪಟ್ಟಿದ್ದಾರೆ ಎಂದು ಅಧಿಕೃತ ವಿರೋಧಪಕ್ಷ ಹೇಳುತ್ತಿದೆ. ರಾಜ್ಯ ಆರೋಗ್ಯ ಇಲಾಖೆಯ ಕೋವಿಡ್ ಬುಲೆಟಿನ್ ಪ್ರಕಾರ ಆಗಸ್ಟ್ 2ರ ತನಕ 36 ಸಾವಿರ ಜನರು ಮೃತಪಟ್ಟಿದ್ದರೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ ಸಲ್ಲಿಸಿರುವ ಡೆತ್ ಆಡಿಟ್‍ನಲ್ಲಿ ಆಗಸ್ಟ್ 2ರ ತನಕ ಕೇವಲ 14,371 ಜನರು ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ. ಈ ರೀತಿ ಒಂದೊಂದು ಕಡೆ ಒಂದೊಂದು ಅಂಕಿಅಂಶ ಹೇಳುತ್ತಿರುವುದನ್ನು ಗಮನಿಸಿದರೆ ರಾಜ್ಯ ಸರ್ಕಾರ ಸುಳ್ಳು ಹೇಳುತ್ತಿರುವುದು ಸ್ಪಷ್ಟವಾಗುತ್ತದೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಉಡುಪಿಯಲ್ಲಿ ಶೋಭಾ ಕರಂದ್ಲಾಜೆ ಜನಾಶೀರ್ವಾದ ಯಾತ್ರೆ- ಕೃಷ್ಣ ಮಠಕ್ಕೆ ಭೇಟಿ

    ಸುತ್ತಮುತ್ತಲಿನ ಮನೆಗಳನ್ನು ಸಮೀಕ್ಷೆ ನಡೆಸಿದಾಗ ಹಾಗೂ ಮಾಧ್ಯಮಗಳ ವರದಿಗಳನ್ನು ಗಮನಿಸಿದಾಗ ಮೂರು ಲಕ್ಷಕ್ಕೂ ಅಧಿಕ ಜನರು ಮೃತಪಟ್ಟಿರುವ ಸುಳಿವು ಸಿಗುತ್ತಿದೆ. ಬಿಜೆಪಿ ನಾಯಕರು ಜನಾಶೀರ್ವಾದ ಹೆಸರಿನಲ್ಲಿ ಸುಳ್ಳುಗಳನ್ನು ಪ್ರಚಾರ ಮಾಡುವ ಬದಲು ಹೆಣಾಶೀರ್ವಾದ ಹೆಸರಿನಲ್ಲಿ ಸ್ಮಶಾನಕ್ಕೆ ಹೋಗಿ, ನಿಜಕ್ಕೂ ಕೋವಿಡ್‍ನಿಂದ ಮೃತಪಟ್ಟ ಎಷ್ಟು ಶವಗಳು ಅಲ್ಲಿಗೆ ಬಂದಿವೆ ಎಂದು ವಿಚಾರಿಸಲಿ ಎಂದು ವಾಗ್ದಾಳಿ ನಡೆಸಿದರು.

    ಕೇಂದ್ರ ಸರ್ಕಾರದ ನೂತನ ಸಚಿವ ಸಂಪುಟದಲ್ಲಿ 20 ಎಸ್‍ಸಿ/ಎಸ್‍ಟಿ, 27 ಒಬಿಸಿ ಸಚಿವರಿದ್ದಾರೆ ಎಂದು ಬಿಜೆಪಿ ನಾಯಕರು ಬೀಗುತ್ತಿದ್ದಾರೆ. ಆದರೆ ಸತ್ಯವೇನೆಂದರೆ, ಅವರೆನ್ನಲ್ಲ ಕೇವಲ ನಾಮಕಾವಸ್ಥೆಗೆ ಸಚಿವರನ್ನಾಗಿ ಮಾಡಲಾಗಿದೆ. ಆ ಸಚಿವರ ಅಧಿಕಾರವನ್ನೆಲ್ಲಾ ಪ್ರಧಾನಿ ಮೋದಿ ತಮ್ಮ ಬಳಿಯೇ ಇಟ್ಟುಕೊಂಡಿದ್ದಾರೆ. ಆ 47 ಸಚಿವರು ಸಣ್ಣ ಕಡತಕ್ಕೆ ಸಹಿ ಹಾಕಬೇಕಾದರೂ ಮೋದಿಯವರ ಅಪ್ಪಣೆ ಪಡೆಯಬೇಕಾಗಿದೆ. ಇನ್ನು ಅವರು ತಮ್ಮ ಸಮುದಾಯದ ಜನರ ಹಿತ ಕಾಪಾಡುವುದು ದೂರದ ಮಾತು. ಕಳೆದ ಏಳು ವರ್ಷಗಳಲ್ಲಿ ದಲಿತರು ಹಾಗೂ ಹಿಂದುಳಿದ ವರ್ಗದವರಿಗೆ ಮೋದಿ ಏನು ಮಾಡಿದ್ದಾರೆ? ತೆಲಂಗಾಣ ಸರ್ಕಾರವು ಎಲ್ಲಾ ದಲಿತ ಕುಟುಂಬಗಳಿಗೆ 10 ಲಕ್ಷ ರೂಪಾಯಿ ನೀಡುವ ಯೋಜನೆ ಘೋಷಿಸಿದೆ. ಅಲ್ಲಿ ಸಾಧ್ಯವಾಗುವ ಇಂತಹ ಯೋಜನೆ ನಮ್ಮಲ್ಲಿ ಏಕೆ ಸಾಧ್ಯವಾಗುವುದಿಲ್ಲ? ಕರ್ನಾಟಕ ಸರ್ಕಾರಕ್ಕೂ ದಲಿತರ ಮೇಲೆ ಕಾಳಜಿ ಇದ್ದರೆ ಅಂತಹದೇ ಯೋಜನೆ ಘೋಷಿಸಲಿ ಎಂದು ಆಗ್ರಹಿಸಿದರು.

    ಪ್ರತಿಯೊಬ್ಬರ ಖಾತೆಗೂ 15 ಲಕ್ಷ ರೂ. ಹಾಕುವಷ್ಟು ಹಣ ಸ್ವಿಸ್ ಬ್ಯಾಂಕ್‍ನಲ್ಲಿದ್ದು, ಅದನ್ನು ಭಾರತಕ್ಕೆ ತರುವುದಾಗಿ 2014ರಲ್ಲಿ ಬಿಜೆಪಿ ಹೇಳಿತ್ತು. ಇದನ್ನು ನಂಬಿ ಜನರು ಬಿಜೆಪಿಗೆ ಮತ ಚಲಾಯಿಸಿದ್ದರು. ಆದರೆ ಈಗ ಮಿನಿಮಮ್ ಬ್ಯಾಲೆನ್ಸ್ ಮೇಂಟೇನ್ ಮಾಡಲೂ ಕಷ್ಟಪಡುವಂತಹ ದುಃಸ್ಥಿತಿಗೆ ಜನರನ್ನು ಮೋದಿ ಸರ್ಕಾರ ತಂದಿದೆ. ಅಗತ್ಯ ವಸ್ತುಗಳ ಬೆಲೆ ದಿನದಿನಕ್ಕೆ ಏರುತ್ತಲೇ ಇದೆ. 80 ರೂಪಾಯಿಗೆ ಸಿಗುತ್ತಿದ್ದ ಅಡುಗೆ ಎಣ್ಣೆಯ ಬೆಲೆ 150 ರೂಪಾಯಿಗೂ ಅಧಿಕವಾಗಿದೆ. ಕಳೆದ ಕೆಲವು ವರ್ಷಗಳಿಂದ ಕಚ್ಚಾ ತೈಲದ ಬೆಲೆ ಕಡಿಮೆಯಾಗುತ್ತಿದ್ದರೂ ತೆರಿಗೆಯನ್ನು ಏರಿಸಿದ್ದರಿಂದ ಭಾರತೀಯರು ಪೆಟ್ರೋಲ್, ಡೀಸೆಲ್‍ಗೆ ದುಬಾರಿ ಬೆಲೆ ತೆರಬೇಕಾಗಿದೆ. ಪ್ರತಿ ಲೀಟರ್ ಪೆಟ್ರೋಲ್‍ಗೆ 9 ರೂ. ಇದ್ದ ಕೇಂದ್ರ ಸರ್ಕಾರದ ತೆರಿಗೆಯನ್ನು ಮೋದಿ ಸರ್ಕಾರ ಹಂತಹಂತವಾಗಿ 32 ರೂ.ಗೆ ಏರಿಕೆ ಮಾಡಿದೆ. ಕೇಂದ್ರ ಸರ್ಕಾರವು ಅಡುಗೆ ಅನಿಲ (ಎಲ್‍ಪಿಜಿ) ಸಿಲೆಂಡರ್ ಸಬ್ಸಿಡಿಯನ್ನು ರದ್ದುಪಡಿಸಿದ್ದರಿಂದ 450 ರೂಪಾಯಿಗೆ ಜನರಿಗೆ ಸಿಗುತ್ತಿದ್ದ ಸಿಲೆಂಡರ್‍ಗೆ ಈಗ 900 ರೂಪಾಯಿ ಕೊಡಬೇಕಾಗಿದೆ ಎಂದು ಬಿಜೆಪಿ ಸರ್ಕಾರವನ್ನು ಸದಂ ಅವರು ತರಾಟೆಗೆ ತೆಗೆದುಕೊಂಡರು. ಇದನ್ನೂ ಓದಿ: ಸೆಪ್ಟೆಂಬರ್ 13 ರಿಂದ 10 ದಿನ ವಿಧಾನಮಂಡಲದ ಅಧಿವೇಶನ

    ನೋಟು ಬದಲಾವಣೆಯಿಂದ ದೇಶಕ್ಕೆ ಭಾರೀ ಲಾಭವಾಗುತ್ತದೆ, ಕಪ್ಪುಹಣವೇ ಇಲ್ಲವಾಗುತ್ತದೆ ಎಂದು ನಂಬಿದ ಜನರು ಅಂದು ಕಷ್ಟಗಳನ್ನು ಸಹಿಸಿಕೊಂಡರು. ಆದರೆ ನೋಟು ಬದಲಾವಣೆಯಿಂದ ಎಷ್ಟು ಕಪ್ಪುಹಣ ನಾಶವಾಗಿದೆ ಎಂಬ ಮಾಹಿತಿಯನ್ನು ಆರ್‍ಬಿಐ ಈವರೆಗೂ ನೀಡಿಲ್ಲ. ಚುನಾವಣೆ ಬಂತೆಂದರೆ ಬಿಜೆಪಿ, ಕಾಂಗ್ರೆಸ್ ಪಕ್ಷಗಳು ಸಾವಿರಾರು ರೂಪಾಯಿಯನ್ನು ಮನೆಮನೆಗೆ ಹಂಚುತ್ತವೆ. ಆಪರೇಷನ್ ಕಮಲದ ಹೆಸರಿನಲ್ಲಿ ಶಾಸಕರನ್ನು ಖರೀದಿಸಲು ನೂರಾರು ಕೋಟಿ ರೂಪಾಯಿಯನ್ನು ಬಿಜೆಪಿ ಖರ್ಚು ಮಾಡುತ್ತದೆ. ನೋಟು ಬದಲಾವಣೆ ಸಂಪೂರ್ಣ ವಿಫಲವಾಗಿದೆ ಎನ್ನುವುದನ್ನು ಇವೆಲ್ಲ ಸಾರಿ ಸಾರಿ ಹೇಳುತ್ತಿವೆ ಎಂದು ಹೇಳಿದರು.

    ಬಿಜೆಪಿಯ ದೇಶಪ್ರೇಮ, ಹಿಂದುತ್ವ ಕೇವಲ ಭಾಷಣಕ್ಕೆ ಹಾಗೂ ಗಲಭೆ ಸೃಷ್ಟಿಸುವುದಕ್ಕೆ ಸೀಮಿತ. ಹಿಂದೂ ರಾಷ್ಟ್ರ ಮಾಡುತ್ತೇವೆ ಎಂದು ಹೇಳಿದವರು ಹಿಂದುಳಿದ ರಾಷ್ಟ್ರ ಮಾಡುತ್ತಿದ್ದಾರೆ. ಕರ್ನಾಟಕದಲ್ಲಿ ಅಕ್ರಮ ವಲಸಿಗರ ಹಾವಳಿ ಹೆಚ್ಚುತ್ತಿದ್ದರೂ ಸರ್ಕಾರ ಕಣ್ಣು ಮುಚ್ಚಿಕೊಂಡು ಕುಳಿತಿದೆ. ಗಡಿಯಲ್ಲಿ ಈಗಲೂ ನಮ್ಮ ಯೋಧರು ಹುತಾತ್ಮರಾಗುತ್ತಿದ್ದರೂ ಸರ್ಜಿಕಲ್ ಸ್ಟ್ರೈಕ್ ಎಂಬ ಹಳೇ ಕಥೆಯನ್ನೇ ಬಿಜೆಪಿ ನಾಯಕರು ಹೇಳುತ್ತಿದ್ದಾರೆ. ಗೋಶಾಲೆಗಳು ಅಕ್ರಮದ ಕೇಂದ್ರಬಿಂದುವಾಗಿದ್ದರೂ ಕೇಳುವವರು ಇಲ್ಲವಾಗಿದೆ. ಪಾಕಿಸ್ತಾನ ಸೇನೆಯಿಂದ ಬಂಧಿತರಾಗಿರುವ ಭಾರತದ ಪುತ್ರ ಕುಲಭೂಷಣ್ ಜಾಧವ್‍ರನ್ನು ಮರಳಿ ಕರೆತರುವುದರಲ್ಲೂ ಮೋದಿ ಸರ್ಕಾರ ವಿಫಲವಾಗಿದೆ. ಕೃಷಿ ಕಾಯಿದೆ, ಸಿಎಎ, ಎನ್‍ಆರ್‍ಸಿ ಮುಂತಾದವುಗಳಿಗೆ ತಿದ್ದುಪಡಿ ತಂದು ದೇಶದಲ್ಲಿ ಅಶಾಂತಿ ಸೃಷ್ಟಿಸಿದ್ದೇ ಕೇಂದ್ರ ಸರ್ಕಾರದ ಸಾಧನೆ. ಎಪಿಎಂಸಿ ಕಾಯಿದೆಗೆ ತಿದ್ದುಪಡಿ ತಂದಿದ್ದರಿಂದ ಎಪಿಎಂಸಿಗಳಲ್ಲಿ ವಹಿವಾಟು ಕಡಿಮೆಯಾಗಿ ಮುಚ್ಚಿಹೋಗಲಿದೆ. ನಂತರ ಖಾಸಗಿಯವರು ಎಪಿಎಂಸಿಯ ಸ್ಥಾನದಲ್ಲಿ ಬಂದು ರೈತರಿಗೆ ಕಿರುಕುಳ ನೀಡಲಿವೆ ಎಂದು ಸದಂ ಬೇಸರ ವ್ಯಕ್ತಪಡಿಸಿದರು.

    ಭಾರತದ ಬ್ಯಾಂಕ್‍ಗಳಿಗೆ ಸಾವಿರಾರು ಕೋಟಿ ವಂಚಿಸಿ ಪರಾರಿಯಾಗಿರುವ ನೀರವ್ ಮೋದಿ ಮತ್ತು ವಿಜಯ್ ಮಲ್ಯರನ್ನು ವಾಪಸ್ ಕರೆತರಲು ಕೇಂದ್ರ ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಪ್ರತಿ ಚುನಾವಣೆ ಬಂದಾಗಲೂ ನೀರವ್ ಹಾಗೂ ಮಲ್ಯ ಕೆಲವೇ ದಿನಗಳಲ್ಲಿ ಬರುತ್ತಾರೆಂದು ಸುಳ್ಳು ಸುದ್ದಿಯನ್ನು ಬಿಜೆಪಿ ಹಬ್ಬಿಸುತ್ತದೆ. ಆದರೆ ಅವರು ಮಾತ್ರ ಭಾರತೀಯರ ದುಡ್ಡಿನಿಂದ ವಿದೇಶದಲ್ಲಿ ಮಜಾ ಮಾಡುತ್ತಿದ್ದಾರೆ ಎಂದು ಜಗದೀಶ್ ವಿ.ಸದಂ ಆಕ್ರೊಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಖೂಬಾ ಕಾರ್ಯಕ್ರಮದಲ್ಲಿ ನಾಡಬಂದೂಕು ಸಿಡಿಸಿದ ಪ್ರಕರಣ- ಮೂವರು ಕಾನ್‍ಸ್ಟೇಬಲ್‍ಗಳ ಅಮಾನತು

    ಆಮ್ ಆದ್ಮಿ ಪಾರ್ಟಿಯ ಕಚೇರಿ ಕಾರ್ಯದರ್ಶಿ ವೀಣಾ ಸೆರ್ರಾವ್‍ರವರು ಮಾತನಾಡಿ, ಜನಾಶೀರ್ವಾದ ಯಾತ್ರೆಯಲ್ಲಿ ಕೋವಿಡ್ ನಿಯಮಗಳನ್ನು ಸಂಪೂರ್ಣ ಗಾಳಿಗೆ ತೂರಲಾಗುತ್ತಿದೆ. ಜನರಿಗೆ ಮಾತ್ರ ಬಿಗಿ ನಿಯಮಗಳನ್ನು ಜಾರಿಗೆ ತಂದು, ಸಚಿವರು ಮಾತ್ರ ಸ್ವೇಚ್ಛಾಚಾರದಿಂದ ಸಾವಿರಾರು ಬೆಂಬಲಿಗರನ್ನು ಸೇರಿಸುವುದು ಎಷ್ಟು ಸರಿ? ರಾಜ್ಯದಲ್ಲಿ ಬಿಜೆಪಿ ಸಚಿವರಿಗೇ ಒಂದು ಕಾನೂನು, ಸಾಮಾನ್ಯ ಜನರಿಗೆ ಮತ್ತೊಂದು ಕಾನೂನು ಎಂಬಂತಾಗಿದೆ. ಈ ಬಗ್ಗೆ ಮಾಧ್ಯಮಗಳು ನಿರಂತರವಾಗಿ ವರದಿ ಮಾಡುತ್ತಿದ್ದರೂ ಸಚಿವರುಗಳು ತಮ್ಮ ನಡೆಯನ್ನು ಬದಲಿಸಿಕೊಳ್ಳದಿರುವುದು ದುರಂತ. ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರು ಸಂಭ್ರಮಿಸಿದಂತೆ ಯಾದಗಿರಿಯಲ್ಲಿ ಕೇಂದ್ರ ಸಚಿವ ಖೂಬಾ ಅಭಿಮಾನಿಗಳು ಬಂದೂಕಿನಿಂದ ಗುಂಡುಗಳನ್ನು ಸಿಡಿಸಿ ಸಂಭ್ರಮಿಸಿದ್ದಾರೆ. ಸರ್ಕಾರಕ್ಕೆ ನೈತಿಕತೆ ಇದ್ದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಿ ಎಂದು ಆಗ್ರಹಿಸಿದರು.

  • ಎಎಪಿ ಕಚೇರಿ ಕಟ್ಟಡದ ಮಾಲೀಕರಿಗೆ ಅರವಿಂದ ಲಿಂಬಾವಳಿ ಬೆದರಿಕೆ ಆರೋಪ!

    ಎಎಪಿ ಕಚೇರಿ ಕಟ್ಟಡದ ಮಾಲೀಕರಿಗೆ ಅರವಿಂದ ಲಿಂಬಾವಳಿ ಬೆದರಿಕೆ ಆರೋಪ!

    ಬೆಂಗಳೂರು: ಆಮ್ ಆದ್ಮಿ ಪಾರ್ಟಿಯು ಭ್ರಷ್ಟ ರಾಜಕಾರಣಿಗಳ ಎದೆಯಲ್ಲಿ ನಡುಕ ಹುಟ್ಟಿಸುತ್ತಿದ್ದು, ನಮಗೆ ಕಚೇರಿ ತೆರೆಯಲು ಅವಕಾಶ ನೀಡಿದ ಕಟ್ಟಡದ ಮಾಲೀಕರಿಗೆ ಬಿಜೆಪಿ ಶಾಸಕ ಅರವಿಂದ್ ಲಿಂಬಾವಳಿ ಬೆದರಿಕೆ ಹಾಕಿರುವುದೇ ಇದಕ್ಕೆ ಸಾಕ್ಷಿ ಎಂದು ಬೆಂಗಳೂರು ಅಧ್ಯಕ್ಷ ಮೋಹನ್ ದಾಸರಿ ಹೇಳಿದರು.

    ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮೋಹನ್ ದಾಸರಿ, ಮಹದೇವಪುರ ವಿಧಾನಸಭಾ ಕ್ಷೇತ್ರದ ಎಎಪಿ ಅಧ್ಯಕ್ಷರಾದ ಅಶೋಕ್ ಮೃತ್ಯುಂಜಯರವರು ಕಸವನಹಳ್ಳಿ ವೃತ್ತದಲ್ಲಿ ಕಟ್ಟಡವೊಂದನ್ನು ಲೀಸ್‍ಗೆ ಪಡೆದು, ಅಲ್ಲಿ ಬೆಳ್ಳಂದೂರು ವಾರ್ಡ್ ಕಚೇರಿಯನ್ನು ಭಾನುವಾರ ಆರಂಭಿಸಿದ್ದರು. ವಿಷಯ ತಿಳಿದ ಬಿಜೆಪಿ ಶಾಸಕ ಅರವಿಂದ್ ಲಿಂಬಾವಳಿಯವರು ಕಚೇರಿಗೆ ಕಟ್ಟಡವನ್ನು ಬಾಡಿಗೆ ನೀಡಿದ ಮಾಲೀಕರಿಗೆ ಬೆದರಿಕೆ ಹಾಕಿದ್ದಾರೆ. ಕಚೇರಿಯನ್ನು ಖಾಲಿ ಮಾಡಿಸದಿದ್ದರೆ ತೊಂದರೆ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಷ್ಟ್ರೀಯ ಪಕ್ಷವೊಂದು ಕಚೇರಿ ತೆರೆಯುವುದನ್ನೂ ಸಹಿಸಲಾರದಷ್ಟು ಅರವಿಂದ್ ಲಿಂಬಾವಳಿ ಹತಾಶರಾಗಿದ್ದಾರೆ. ಈ ಸಂಬಂಧ ಪೊಲೀಸರಿಗೆ ದೂರು ನೀಡಲಾಗಿದೆ ಎಂದು ತಿಳಿಸಿದರು.

    ಜನರ ಕಲ್ಯಾಣವೊಂದೇ ಆಮ್ ಆದ್ಮಿ ಪಾರ್ಟಿಯ ಆಶಯವಾಗಿದೆ. ದ್ವೇಷ ರಾಜಕಾರಣದಲ್ಲಿ ನಾವು ಆಸಕ್ತಿ ಹೊಂದಿಲ್ಲ. ನಮ್ಮ ಸಹನೆಯನ್ನು ದೌರ್ಬಲ್ಯವೆಂದು ಬಿಜೆಪಿಯವರು ಭಾವಿಸಬಾರದು. ಗೂಂಡಾಗಿರಿಯು ಬಿಜೆಪಿಯ ಸಂಸ್ಕೃತಿಯಾಗಿದ್ದು, ಶಾಸಕರು ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ನಮಗೆ ಕಿರುಕುಳ ನೀಡುತ್ತಿದ್ದಾರೆ. ಲಿಂಬಾವಳಿಯವರ ಪ್ರಜಾಪ್ರಭುತ್ವ ವಿರೋಧಿ ನಡೆಗೆ ಪ್ರಜಾಪ್ರಭುತ್ವದ ಮಾರ್ಗದಲ್ಲಿಯೇ ತಕ್ಕ ಪಾಠ ಕಲಿಸುವುದು ನಮಗೆ ತಿಳಿದಿದೆ ಎಂದು ಮೋಹನ್ ದಾಸರಿ ಹೇಳಿದರು.

    ಆಮ್ ಆದ್ಮಿ ಪಾರ್ಟಿಯ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ. ಸದಂರವರು ಮಾತನಾಡಿ, ಕ್ಷೇತ್ರದಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಕೆರೆ ಒತ್ತುವರಿ ವಿರುದ್ಧ ಎಎಪಿ ದನಿ ಎತ್ತಿತ್ತು. ಇದರಿಂದ ಕಂಗೆಟ್ಟಿರುವ ಶಾಸಕ ಲಿಂಬಾವಳಿಯವರು ತಮ್ಮ ಇನ್ನಷ್ಟು ಅಕ್ರಮ ಬಯಲಾಗಬಹುದು ಎಂಬ ಭಯದಿಂದ ಬೆದರಿಕೆ ಹಾಕಿದ್ದಾರೆ. ಅವರ ಗೂಂಡಾಗಿರಿ ಮುಂದುವರಿದರೆ ರಾಜ್ಯಾದ್ಯಂತ ಹೋರಾಟ ಮಾಡಲಾಗುವುದು. ಕಚೇರಿ ಆರಂಭಿಸುವುದು ಪ್ರಜಾಪ್ರಭುತ್ವ ನಮಗೆ ನೀಡಿರುವ ಹಕ್ಕಾಗಿದ್ದು, ಈ ಹಕ್ಕನ್ನು ಕಿತ್ತುಕೊಳ್ಳುವ ದುಸ್ಸಾಹಸದಿಂದ ಲಿಂಬಾವಳಿಯವರು ಹಿಂದೆ ಸರಿಯಬೇಕು ಎಂದು ಕಿಡಿಕಾರಿದರು.

    ಶಾಸಕ ಅರವಿಂದ ಲಿಂಬಾವಳಿಯವರು ತಮ್ಮ ಕ್ಷೇತ್ರವನ್ನು ರಿಪಬ್ಲಿಕ್ ಆಫ್ ಮಹದೇವಪುರ ಮಾಡಲು ಹೊರಟಿದ್ದಾರೆ. ಅಧಿಕಾರದ ಮದದಿಂದ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ. ಬೇರೆ ಪಕ್ಷಗಳ ಏಳಿಗೆಯನ್ನು ಹತ್ತಿಕ್ಕಲು ಯಾವ ಮಟ್ಟಕ್ಕಾದರೂ ಇಳಿಯುವ ಹಂತ ತಲುಪಿದ್ದಾರೆ. ಎಎಪಿಯ ಕಚೇರಿಯ ಆರಂಭಕ್ಕೆ ಅಡ್ಡಗಾಲು ಹಾಕುವ ಬದಲು, ತಾಕತ್ತಿದ್ದರೆ ಮುಂಬರುವ ಚುನಾವಣೆಗಳಲ್ಲಿ ನಮ್ಮನ್ನು ಎದುರಿಸಲಿ ಎಂದು ಜಗದೀಶ್ ವಿ. ಸದಂ ಸವಾಲು ಹಾಕಿದರು.

  • ಬಿಜೆಪಿ ಸರ್ಕಾರದಲ್ಲಿ ಬಿಜೆಪಿ ಶಾಸಕರಿಗೇ ರಕ್ಷಣೆ ಇಲ್ಲ, ಇನ್ನು ಜನಸಾಮಾನ್ಯನಿಗೆ ಎಲ್ಲಿಯ ರಕ್ಷಣೆ: ಎಎಪಿ

    ಬಿಜೆಪಿ ಸರ್ಕಾರದಲ್ಲಿ ಬಿಜೆಪಿ ಶಾಸಕರಿಗೇ ರಕ್ಷಣೆ ಇಲ್ಲ, ಇನ್ನು ಜನಸಾಮಾನ್ಯನಿಗೆ ಎಲ್ಲಿಯ ರಕ್ಷಣೆ: ಎಎಪಿ

    ಬೆಂಗಳೂರು: ರಾಜ್ಯದಲ್ಲಿ ಅಪರಾಧ ಪ್ರಕರಣಗಳ ಸಂಖ್ಯೆ ವಿಪರೀತ ಹೆಚ್ಚಾಗಿದ್ದು, ಬಿಜೆಪಿ ಸರ್ಕಾರದಲ್ಲಿ ಬಿಜೆಪಿ ಶಾಸಕರಿಗೇ ರಕ್ಷಣೆ ಇಲ್ಲ, ಇನ್ನು ಜನಸಾಮಾನ್ಯನಿಗೆ ಎಲ್ಲಿಯ ರಕ್ಷಣೆ? ಗೃಹ ಖಾತೆಯನ್ನು ನಿಭಾಯಿಸುವುದರಲ್ಲೇ ವಿಫಲರಾಗಿರುವ ಬಸವರಾಜ ಬೊಮ್ಮಾಯಿಯವರಿಗೆ ಮುಖ್ಯಮಂತ್ರಿ ಹುದ್ದೆಗೆ ನ್ಯಾಯ ಒದಗಿಸಲು ಸಾಧ್ಯವೇ ಎಂದು ಆಮ್ ಆದ್ಮಿ ಪಾರ್ಟಿಯ ಕಾನೂನು ಘಟಕದ ಅಧ್ಯಕ್ಷ ನಂಜಪ್ಪ ಕಾಳೇಗೌಡ ಪ್ರಶ್ನಿಸಿದರು.

    ಆಮ್ ಆದ್ಮಿ ಪಾರ್ಟಿಯ ಮಾಧ್ಯಮ ಕಚೇರಿಯಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ನಂಜಪ್ಪ ಕಾಳೇಗೌಡ ಅವರು, “ರಾಜ್ಯದಲ್ಲಿ ಕೊಲೆ, ಸುಲಿಗೆ, ದರೋಡೆ ಪ್ರಕರಣಗಳು ವ್ಯಾಪಕವಾಗಿ ಏರಿಕೆಯಾಗುತ್ತಿವೆ. ಮಕ್ಕಳು ಮಹಿಳೆಯರು ಮಾತ್ರವಲ್ಲದೇ ಸಣ್ಣಪುಟ್ಟ ಜನಪ್ರತಿನಿಧಿಗಳು ಕೂಡ ಹೆದರಿಕೆಯಿಂದ ತಿರುಗಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ತಮ್ಮ ಶಾಸಕರಿಗೆ ರಕ್ಷಣೆ ಕೊಡಲಾಗದ ಬಿಜೆಪಿ ಸರ್ಕಾರ ಯಾವ ಮಟ್ಟದಲ್ಲಿ ಜನಸಾಮಾನ್ಯನಿಗೆ ರಕ್ಷಣೆ ಕೊಡಲು ಸಾಧ್ಯ? ಇಷ್ಟೆಲ್ಲಾ ಅಪರಾಧಗಳು ನಡೆಯುವಾಗ ಪೊಲೀಸ್ ಇಲಾಖೆ ಯಾವ ಮಟ್ಟಿನ ಭಯವನ್ನು ಕ್ರಿಮಿನಲ್ ಗಳಲ್ಲಿ ಪೊಲೀಸ್ ಇಲಾಖೆ ಇಟ್ಟಿದೆ? ಇಂದು ಮುಖ್ಯಮಂತ್ರಿ ಆಗಿರುವ ಬೊಮ್ಮಾಯಿ ಅವರು ಗೃಹ ಸಚಿವ ಆಗಿದ್ದಾಗ ಅಪರಾಧ ಪ್ರಕರಣಗಳು ಶೇ.20ರಷ್ಟು ಹೆಚ್ಚಾಗಿದೆ ಎಂದು ಬೊಮ್ಮಾಯಿಯವರೇ ಒಪ್ಪಿಕೊಂಡಿದ್ದರು. ಆದರೂ ಅಪರಾಧಗಳಿಗೆ ಕಡಿವಾಣ ಹಾಕಲು ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ತನಿಖೆ ನಡೆಸಬೇಕಾಗುತ್ತದೆ ಎಂಬ ಕಾರಣಕ್ಕೆ ಅನೇಕ ಠಾಣೆಗಳಲ್ಲಿ  ಪೊಲೀಸರು ಎಫ್‍ಐಆರ್ ದಾಖಲಿಸಲು ನಿರಾಕರಿಸುತ್ತಿದ್ದಾರೆ” ಎಂದು ಹೇಳಿದರು. ಇದನ್ನೂ ಓದಿ: ಬೆಂಗಳೂರಲ್ಲಿ ವೀಕೆಂಡ್ ಕರ್ಫ್ಯೂ ಇಲ್ಲ – ಸೋಂಕು ಕಡಿಮೆ ಇರುವ ಜಿಲ್ಲೆಗಳಲ್ಲಿ ಶಾಲೆ, ಕಾಲೇಜು ಆರಂಭ

    ಬಿಜೆಪಿ ಅಧಿಕಾರಕ್ಕೆ ಬಂದಮೇಲೆ ಕಾನೂನಿನ ಮೇಲೆ ಭಯ ಇಲ್ಲದ ಹಾಗೆ ಆಗಿದೆ. ಶಾಸಕ ಅಖಂಡ ಶ್ರೀನಿವಾಸ್ ಮನೆ ಧ್ವಂಸ, ಪೊಲೀಸ್ ಮೇಲೆ ಹಲ್ಲೆ ನಡೆಯಿತು. ಬಿಜೆಪಿ ಕರ್ಪೊರೇಟರ್ ರೇಖಾ ಖದಿರೇಶ್ ಹತ್ಯೆ ನಡೆಯಿತು. ಶಾಸಕ ಸತೀಶ್ ರೆಡ್ಡಿ ಕಾರಿಗೆ ಬೆಂಕಿ ಹಚ್ಚಿದ್ದಾರೆ. ಪ್ರಾಣ ಹಾನಿಯಾನಿಯಾಗದೆ ಅನಾಹುತ ತಪ್ಪಿದೆ. ತಮ್ಮ ಶಾಸಕರಿಗೆ ರಕ್ಷಣೆ ಕೊಡಲಾಗದ ಬಿಜೆಪಿ ಸರ್ಕಾರ ಯಾವ ಮಟ್ಟದಲ್ಲಿ ಜನಸಾಮಾನ್ಯನಿಗೆ ರಕ್ಷಣೆ ಕೊಡಲು ಸಾಧ್ಯ? ಇಷ್ಟೆಲ್ಲಾ ಅಪರಾಧಗಳು ನಡೆಯುವಾಗ ಪೊಲೀಸ್ ಇಲಾಖೆ ಯಾವ ಮಟ್ಟಿನ ಭಯವನ್ನು ಕ್ರಿಮಿನಲ್ ಗಳಲ್ಲಿ ಪೊಲೀಸ್ ಇಲಾಖೆ ಇಟ್ಟಿದೆ? ಎಂದು ಪ್ರಶ್ನೆ ಮಾಡಿದರು.

    ಬೆಂಗಳೂರಿನಲ್ಲಿ ಅಲ್ಲಲ್ಲಿ ಲೆಕ್ಕವಿಲ್ಲದಷ್ಟು ಚೈನ್ ಹಾಗೂ ಮೊಬೈಲ್ ಕಳ್ಳತನ ನಡೆಯುತ್ತಿದೆ. ಪೊಲೀಸರು ಈ ಪ್ರಕರಣಗಳನ್ನು ಎಫ್‍ಐಆರ್ ಮಾಡುತ್ತಿಲ್ಲ. ಪೊಲೀಸ್ ಇಲಾಖೆ ಇಂದು ರಸ್ತೆಗಳಲ್ಲಿ ನಿಂತುಕೊಂಡು ವಾಹನ ಸವಾರರನ್ನು ನಿಲ್ಲಿಸಿ ದಂಡ ಹಾಕಿ ಹಣ ವಸೂಲಿ ಮಾಡುವ ಕೆಲಸದಲ್ಲಿ ನಿರತರಾಗಿದ್ದು ಕಳ್ಳತನ, ಕೊಲೆ ಮೊದಲಾದ ಅಪರಾಧಗಳನ್ನು ತಡೆಯುವ ಕೆಲಸವನ್ನು ಮಾಡುತ್ತಿಲ್ಲ. ಇಲಾಖೆ ಇದ್ದು ಏನು ಪ್ರಯೋಜನ ಎಂದರು.

    ಪತ್ರಿಕಾಗೋಷ್ಠಿಯ ಉಪಸ್ಥಿತರಿದ್ದ ಫಿರೋಜ್ ಅವರು ಮಾತನಾಡಿ, ರಾಜ್ಯದಲ್ಲಿ ಸೈಬರ್ ಅಪರಾಧಗಳು ಕೂಡ ಹೆಚ್ಚಾಗುತ್ತಿದೆ. ಫೇಸ್ ಬುಕ್‍ನಲ್ಲಿ ನಕಲಿ ಖಾತೆ ತೆರೆದು, ಅವರ ಸ್ನೇಹಿತರಿಗೆಲ್ಲ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿ ಹಣ ಕೇಳುವ ದೊಡ್ಡ ಜಾಲವಿದೆ. ಸುರೇಶ್ ಕುಮಾರ್ ಸೇರಿದಂತೆ ರಾಜ್ಯದ ಲಕ್ಷಕ್ಕೂ ಅಧಿಕ ಸಾಮಾಜಿಕ ತಾಣ ಬಳಕೆದಾರರು ಇದರಿಂದ ತೊಂದರೆ ಅನುಭವಿಸಿದ್ದಾರೆ. ಆದರೆ ಪೊಲೀಸರು ಮಾತ್ರ ಇಂತಹ ಯಾವುದೇ ಪ್ರಕರಣವನ್ನು ಬೇಧಿಸಿಲ್ಲ. ದಕ್ಷತೆಗೆ ಹೆಸರಾಗಿರುವ ಕರ್ನಾಟಕ ಪೊಲೀಸ್ ಇಲಾಖೆ ಇಂದು ಕೈಕಟ್ಟಿ ಕುಳಿತಿದೆ. ಹೀಗೆ ಮುಂದುವರಿದಲ್ಲಿ ಕರ್ನಾಟಕ ಕೂಡ ಇನ್ನೊಂದು ಉತ್ತರ ಪ್ರದೇಶ ಆಗುವುದರಲ್ಲಿ ಅಚ್ಚರಿ ಇಲ್ಲ ಎಂದು ತಿಳಿಸಿದರು.

  • ಗುಜರಾತ ರಾಜಕಾರಣದಲ್ಲಿ ಸೆಕ್ಸ್ ಸಿಡಿ ಸದ್ದು – ಬಿಜೆಪಿ ಸಂಸದನ ಪುತ್ರರಿಂದ ದೂರು ದಾಖಲು

    ಗುಜರಾತ ರಾಜಕಾರಣದಲ್ಲಿ ಸೆಕ್ಸ್ ಸಿಡಿ ಸದ್ದು – ಬಿಜೆಪಿ ಸಂಸದನ ಪುತ್ರರಿಂದ ದೂರು ದಾಖಲು

    – ಆಗಸ್ಟ್ 15ಕ್ಕೆ ವೀಡಿಯೋ ರಿಲೀಸ್ ಮಾಡಲು ಆಪ್ ಸಿದ್ಧತೆ
    – ಆಪ್ ನಾಯಕರ ವಿರುದ್ಧ ಎಫ್‍ಐಆರ್

    ಗಾಂಧಿನಗರ: ಗುಜರಾತ ರಾಜಕಾರಣದಲ್ಲಿ ಬಿಜೆಪಿ ಸಂಸದರೊಬ್ಬರದ್ದು ಎನ್ನಲಾದ ಸೆಕ್ಸ್ ವೀಡಿಯೋದ ಫೋಟೋ ಸದ್ದು ಮಾಡುತ್ತಿದೆ. ಸದ್ಯ ವೀಡಿಯೋದ ಒಂದು ಫೋಟೋ ರಿವೀಲ್ ಮಾಡಿರುವ ಆಮ್ ಆದ್ಮಿ ಪಕ್ಷ ಆಗಸ್ಟ್ 15ರಂದು ಸಂಪೂರ್ಣ ಕ್ಲಿಪ್ ಬಿಡುಗಡೆಗೊಳಿಸೋದಾಗಿ ಹೇಳಿಕೊಂಡಿದೆ. ಈ ಸಂಬಂಧ ಆಪ್ ನಾಯಕರ ವಿರುದ್ಧ ಎಫ್‍ಐಆರ್ ದಾಖಲಾಗಿದೆ. ಫೋಟೋದಲ್ಲಿ ಕಾಣುತ್ತಿರುವ ವ್ಯಕ್ತಿಯನ್ನು ಬಿಜೆಪಿ ಸಂಸದ ಪರ್ಬತ್ ಪಟೇಲ್ ಎಂದು ಹೇಳಲಾಗುತ್ತಿದೆ. ಆದ್ರೆ ಸಂಸದರಾದ ಪಟೇಲ್, ಈ ಎಲ್ಲ ಆರೋಪಗಳು ಸುಳ್ಳು ಎಂದು ಅಲ್ಲಗಳೆದ್ರೆ, ಅವರ ಪುತ್ರ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ಈ ವೀಡಿಯೋಗೆ ಸಂಬಂಧಿಸಿದಂತೆ ಆಪ್ ಮುಖಂಡ ಮಧಾಭಾಯಿ ಪಟೇಲ್ ಫೇಸ್‍ಬುಕ್ ನಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ. ಪೋಸ್ಟ್ ಬನಲ್ಲಿ ಫೋಟೋ ಹಂಚಿಕೊಂಡು ಕೆಲ ಸಾಲುಗಳ್ನು ಬರೆದುಕೊಂಡಿದ್ದಾರೆ. ಆದ್ರೆ ಅದರಲ್ಲಿ ಆ ವ್ಯಕ್ತಿ ಮುಖ ಕಾಣಿಸುತ್ತಿಲ್ಲ. ಈ ಬಿಜೆಪಿ ನಾಯಕನ ಪೂರ್ಣ ವೀಡಿಯೋ ಆಗಸ್ಟ್ 15ರಂದು ಫೇಸ್‍ಬುಕ್ ನಲ್ಲಿ ಅಪ್ಲೋಡ್ ಮಾಡಲಿದ್ದೇನೆ ಎಂದು ತಿಳಿಸಿದ್ದಾರೆ.

    ಆಪ್ ನಾಯಕನ ಪೋಸ್ಟ್ ವೈರಲ್ ಆಗುತ್ತಲೇ ಮಾಧ್ಯಮಗಳ ಮುಂದೆ ಸಂಸದ ಪರ್ಬತ್ ಪಟೇಲ್ ಸ್ಪಷ್ಟನೆ ನೀಡಿದ್ದಾರೆ. ನಾನು ಜೀವನದಲ್ಲಿಯೇ ಯಾವ ಕೆಟ್ಟ ಕೆಲಸವನ್ನೂ ಮಾಡಿಲ್ಲ. ಉದ್ದೇಶಪೂರ್ವಕವಾಗಿ ಫೋಟೋ ಎಡಿಟ್ ಮಾಡಿ ಪೋಸ್ಟ್ ಮಾಡಿರುವ ಹಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಜಾರಕಿಹೊಳಿ ಸಿಡಿ ಕೇಸ್‍ಗೆ ಟ್ವಿಸ್ಟ್ – ಹೈಕೋರ್ಟ್ ಅಸಮಾಧಾನ

    ಇತ್ತ ಮಾಧ್ಯಮಗಳಲ್ಲಿ ಸುದ್ದಿ ಬಿತ್ತರವಾಗ್ತಿದ್ದಂತೆ ಮಧಾಬಾಯಿ ಪಟೇಲ್ ಮತ್ತು ಮುಕೇಶ್ ರಜಪೂತ್ ವಿರುದ್ಧ ಪರ್ಬತ್ ಪಟೇಲ್ ಮಕ್ಕಳು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ನನ್ನ ತಂದೆ ನಿರ್ದೋಷಿಗಳಾಗಿದ್ದು, ಅವರ ಹೆಸರಿಗೆ ಕಳಂಕ ತರುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯುತ್ತಿವೆ. ಈ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಪರ್ಬತ್ ಪಟೇಲ್ ಪುತ್ರ ಶೈಲೇಶ್ ಆಪ್ ನಾಯಕರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.ಇದನ್ನೂ ಓದಿ: ಅತ್ಯಾಚಾರ ಪ್ರಕರಣದಿಂದ ಸಾಹುಕಾರ್ ಬಚಾವ್ ಆಗ್ತಾರಾ? ಒಪ್ಪಿತ ಸೆಕ್ಸ್ ಅಂತ ಬಿ ರಿಪೋರ್ಟ್ ಹಾಕ್ತಾರಾ?

  • ಆಸ್ತಿ ತೆರಿಗೆ ಬೇಡಿಕೆ, ಬಿಬಿಎಂಪಿ ವಿಧಿಸಿರುವ ದಂಡ ವಿರೋಧಿಸಿ ಆಯುಕ್ತರಿಗೆ ಎಎಪಿ ಪತ್ರ

    ಆಸ್ತಿ ತೆರಿಗೆ ಬೇಡಿಕೆ, ಬಿಬಿಎಂಪಿ ವಿಧಿಸಿರುವ ದಂಡ ವಿರೋಧಿಸಿ ಆಯುಕ್ತರಿಗೆ ಎಎಪಿ ಪತ್ರ

    ಬೆಂಗಳೂರು: ಆಸ್ತಿ ತೆರಿಗೆ ಬೇಡಿಕೆ, ಬಿಬಿಎಂಪಿ ವಿಧಿಸಿರುವ ದಂಡ ವಿರೋಧಿಸಿ ಆಮ್ ಆದ್ಮಿ ಪಕ್ಷ ಆಯುಕ್ತರಿಗೆ ಪತ್ರ ಬರೆದಿದೆ.

    2020 ಮತ್ತು 2021ರ ಕೋವಿಡ್ ಬಿಕ್ಕಟ್ಟು ಮತ್ತು ಲಾಕ್‍ಡೌನ್‍ಗಳಿಂದಾಗಿ ನಾಗರಿಕರು ಅನೇಕ ಸಂಕಷ್ಟಗಳಿಗೆ ಒಳಾಗಿದ್ದಾರೆ. ಸತತ 15 ತಿಂಗಳು, ಉದ್ಯೋಗವನ್ನು ಕಳೆದುಕೊಂಡು ಆದಾಯವಿಲ್ಲದೆ ಮಧ್ಯಮ ವರ್ಗದ ಮತ್ತು ಬಡ ಕುಟುಂಬಗಳು ಹೆಚ್ಚು ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಇತರ ದೇಶಗಳಲ್ಲಿನ ಸರ್ಕಾರಗಳು ಆಸ್ತಿ ತೆರಿಗೆಗಳಲ್ಲಿ ವಿನಾಯಿತಿ ನೀಡಿ, ಹಣಕಾಸಿನ ನೆರವು ನೀಡುವ ಮೂಲಕ ಬದುಕಿನ ಭದ್ರತೆ ನೀಡಿವೆ. ನಮ್ಮ ದೇಶದಲ್ಲಿ ಸರ್ಕಾರ ನಾಗರಿಕರ ಬಗ್ಗೆ ಸರ್ಕಾರ ಕಾಳಜಿ ತೋರಿಸುತ್ತಿಲ್ಲ. ಸೋಂಕಿತರು ಆಸ್ಪತ್ರೆ ವೆಚ್ಚವನ್ನು ಭರಿಸಲು ತಮ್ಮ ಉಳಿತಾಯವನ್ನು ಸಂಪೂರ್ಣವಾಗಿ ಕಳೆದುಕೊಂಡಿದ್ದಾರೆ.

    ಇಂತಹ ಸಂದಿಗ್ಧತೆಯ ಸಮಯದಲ್ಲಿ ಬಿಬಿಎಂಪಿ ಆಸ್ತಿ ತೆರಿಗೆ ಬೇಡಿಕೆ ನೋಟಿಸ್ ಕಳುಹಿಸುವ ಮೂಲಕ ಮತ್ತು ಹೆಚ್ಚುವರಿಯಾಗಿ ದಂಡ ವಿಧಿಸುವ ಮೂಲಕ ಜನತೆಗೆ ಆಘಾತಕಾರಿ ಶಾಕ್ ನೀಡಿದೆ.

    ಬೆಂಗಳೂರಿನ ಹಲವು ನಿವಾಸಿಗಳು ಆಮ್ ಆದ್ಮಿ ಪಕ್ಷದ (ಎಎಪಿ) ಇತರ ಸದಸ್ಯರ ಜೊತೆಗೆ ತಮ್ಮ ಸಮಸ್ಯೆಗಳನ್ನು ಹಂಚಿಕೊಂಡಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ಎಸ್‍ಎಎಸ್ ಯೋಜನೆಯಡಿ ಶ್ರದ್ಧೆಯಿಂದ ತೆರಿಗೆ ಪಾವತಿಸುವ ನಿವಾಸಿಗಳಿಗೆ ಕೂಡ ಈ ದಂಡ ಸಹಿತ ತೆರಿಗೆ ಬಡ್ಡಿ ಪಾವತಿಸಲು ನೋಟಿಸ್‍ಗಳನ್ನು ನೀಡಲಾಗಿದೆ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಏಕೆಂದರೆ ವಲಯ ಮರು ವರ್ಗೀಕರಣದ ಆಧಾರದ ಮೇಲೆ ಅನ್ವಯವಾಗುವ ದರಗಳ ಪ್ರಕಾರ ಅವರು ಆಸ್ತಿ ತೆರಿಗೆಯನ್ನು ಪಾವತಿಸಲಿಲ್ಲ ಎಂಬ ಕಾರಣಕ್ಕೆ.

    ಈ ಕಾರಣಗಳಿಗಾಗಿ ನೋಟಿಸ್ ಹಿಂಪಡೆಯುವಂತೆ ಆಪ್ ಆಗ್ರಹ
    1. ಕೋವಿಡ್ ಸಂದರ್ಭದಲ್ಲಿ ಈ ರೀತಿ ದಂಡ ವಿಧಿಸುವುದು ನಾಗರಿಕರು ಎದುರಿಸುತ್ತಿರುವ ತೊಂದರೆಗಳ ಬಗ್ಗೆ ಸರ್ಕಾರ ತಳೆದಿರುವ ಬೇಜವಾಬ್ದಾರಿಯುತ ಅಸಡ್ಡೆ ತೋರಿಸುತ್ತದೆ.
    2. ನೀವು ನಾಗರಿಕರ ಸ್ಥಿತಿಯನ್ನು ನಿರ್ಲಕ್ಷಿಸುತ್ತಿದ್ದೀರಿ ಮತ್ತು ಈ ದಂಡವನ್ನು ಪಾವತಿಸಲು ಒತ್ತಾಯಿಸುತ್ತಿದ್ದೀರಿ. ವಿಪರ್ಯಾಸ ಎಂದರೆ ಪ್ರಾಮಾಣಿಕ ತೆರಿಗೆ ಪಾವತಿಸುವ ನಾಗರಿಕರ ಮೇಲೆ ಕೂಡ ದಂಡ ವಿಧಿಸಲಾಗಿದೆ.
    3. ತಂತ್ರಜ್ಞಾನ ಮತ್ತು ಜಿಪಿಎಸ್ ಮ್ಯಾಪಿಂಗ್ ಯುಗದಲ್ಲಿ, ಜಿಪಿಎಸ್ ಬಳಸಿ ವಲಯ ವರ್ಗೀಕರಣ ಮತ್ತು ಮರು ವರ್ಗೀಕರಣವನ್ನು ಖಾತ್ರಿಪಡಿಸುವ ಹಲವು ವೇಗದ ಮತ್ತು ತಾಂತ್ರಿಕವಾಗಿ ಮುಂದುವರಿದ ಮಾರ್ಗಗಳಿವೆ. ಹೀಗಿರುವಾಗ ಕಟ್ಟಡದ ಗಾತ್ರಗಳನ್ನು ಪರಿಶೀಲಿಸಲು ತಂತ್ರಜ್ಞಾನವನ್ನು ಬಳಸಬೇಕು.
    4. ಬೆಸ್ಕಾಂ ಮತ್ತು ಇತರ ಯುಟಿಲಿಟಿ ಬಿಲ್ ಗಳನ್ನು ಲಿಂಕ್ ಮಾಡುವುದರಿಂದ ವಾಣಿಜ್ಯ/ವಸತಿ ಬಳಕೆಗಳ ಬಗ್ಗೆ ಸ್ಪಷ್ಟತೆ ನೀಡಬೇಕು.
    5. ವಲಯಗಳ ವರ್ಗೀಕರಣದಲ್ಲಿ ಪಾರದರ್ಶಕತೆಯ ಕೊರತೆಯಿದೆ, ಸರಳ ಮಧ್ಯಮ ವರ್ಗದ ನಿವಾಸಿಗಳು ತಮ್ಮ ವಸತಿ ವಲಯಗಳನ್ನು ನಿಖರವಾಗಿ ನಿರ್ಣಯಿಸಲು ಅಸಾಧ್ಯ.

    ಆದ್ದರಿಂದ, ಬಿಬಿಎಂಪಿಯಿಂದ ನೀಡಲಾದ ತೆರಿಗೆ ಸೂಚನೆಯನ್ನು ಹಿಂತೆಗೆದುಕೊಳ್ಳುವಂತೆ ನಾನು ಒತ್ತಾಯಿಸುತ್ತಿದ್ದೇವೆ. ಮತ್ತು ವಸತಿ ಆಸ್ತಿ ಮಾಲೀಕರಿಗೆ 6 ತಿಂಗಳು ಹೆಚ್ಚುವರಿ ಸಮಯವನ್ನು ಮತ್ತು ವಾಣಿಜ್ಯ ಆಸ್ತಿ ಮಾಲೀಕರಿಗೆ ಆಸ್ತಿ ತೆರಿಗೆ ವ್ಯತ್ಯಾಸವನ್ನು ಪಾವತಿಸಲು 3 ತಿಂಗಳು ಹೆಚ್ಚುವರಿ ಸಮಯವನ್ನು ಒದಗಿಸಬೇಕು ಹಾಗೂ ದಂಡವನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕು ಎಂದು ಎಎಪಿ ಆಗ್ರಹಿಸಿದೆ. ಇದನ್ನೂ ಓದಿ:ಮಾಸ್ಕ್ ಧರಿಸದೇ ಜನರ ಓಡಾಟ- ದಾಂಡೇಲಿಯಲ್ಲಿ 1,02,800 ರೂ. ದಂಡ ವಸೂಲಿ

    ಈ ಸೂಚನೆಯನ್ನು ಹಿಂಪಡೆಯದಿದ್ದರೆ ಎಎಪಿ ನಾಯಕರು ಮತ್ತು ಕಾರ್ಯಕರ್ತರು ಸರ್ಕಾರದ ಈ ಕಠಿಣ ನೀತಿಯ ವಿರುದ್ಧ ಅನಿರ್ದಿಷ್ಟ ಮುಷ್ಕರ ನಡೆಸುತ್ತೆವೆ ಎಂದು ಎಚ್ಚರಿಸಿದ್ದಾರೆ. ಇದನ್ನೂ ಓದಿ: ಹೆದ್ದಾರಿಯಲ್ಲಿಯೇ ಭಾರೀ ಭೂಕುಸಿತ – ಮಣ್ಣಿನಡಿ ಸಿಲುಕಿರುವ ಬಸ್, ಕಾರ್, ಟ್ರಕ್