Tag: aap

  • 10ನೇ ತರಗತಿವರೆಗೂ ಆರ್‌ಟಿಇ ವಿಸ್ತರಣೆಗೆ ಆಮ್ ಆದ್ಮಿ ಪಾರ್ಟಿ ಆಗ್ರಹ

    10ನೇ ತರಗತಿವರೆಗೂ ಆರ್‌ಟಿಇ ವಿಸ್ತರಣೆಗೆ ಆಮ್ ಆದ್ಮಿ ಪಾರ್ಟಿ ಆಗ್ರಹ

    ಬೆಂಗಳೂರು: ಶಿಕ್ಷಣ ಹಕ್ಕು (ಆರ್‌ಟಿಇ) ಕಾಯ್ದೆಗೆ ತಿದ್ದುಪಡಿ ತಂದು, ಅದರ ವ್ಯಾಪ್ತಿಯನ್ನು 9 ಹಾಗೂ 10ನೇ ತರಗತಿಗಳಿಗೂ ವಿಸ್ತರಿಸಬೇಕೆಂದು ಆಮ್ ಆದ್ಮಿ ಪಾರ್ಟಿ ಆಗ್ರಹಿಸಿದೆ.

    ಪಕ್ಷದ ಮಾಧ್ಯಮ ಕಚೇರಿಯಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಎಪಿಯ ಮಹಿಳಾ ಮುಖಂಡರಾದ ಉಷಾ ಮೋಹನ್, ಪ್ರಸ್ತುತ ಎಂಟನೇ ತರಗತಿಯವರೆಗೆ ಮಾತ್ರ ಆರ್‍ಟಿಇ ಕಾಯ್ದೆ ಅನ್ವಯಿಸುತ್ತಿದೆ. ಆದ್ದರಿಂದ 9 ಹಾಗೂ 10ನೇ ತರಗತಿ ಸೇರುವ ಬಡ ಕುಟುಂಬದ ವಿದ್ಯಾರ್ಥಿಗಳಿಂದ ಖಾಸಗಿ ಶಾಲೆಗಳು ಭಾರೀ ಮೊತ್ತದ ಶುಲ್ಕ ಪಡೆಯುತ್ತಿವೆ. ಶುಲ್ಕ ಪಾವತಿಸಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ, ಮುಂದಿನ ಶಿಕ್ಷಣದಿಂದ ವಂಚಿತರಾಗಬೇಕಾದ ಅನಿವಾರ್ಯ ಸ್ಥಿತಿ ಎದುರಾಗುತ್ತಿದೆ. ಆದ್ದರಿಂದ ರಾಜ್ಯ ಸರ್ಕಾರವು ಶೀಘ್ರವೇ ಕಾಯ್ದೆಗೆ ತಿದ್ದುಪಡಿ ತಂದು ಬಡ ವಿದ್ಯಾರ್ಥಿಗಳ ಹಿತ ಕಾಪಾಡಬೇಕು ಎಂದು ಆಗ್ರಹಿಸಿದರು.

    ಕೋವಿಡ್ ಹಾಗೂ ಲಾಕ್‍ಡೌನ್‍ನಿಂದಾಗಿ ಬಡ ಪೋಷಕರು ಎರಡು ವರ್ಷಗಳ ಕಾಲ ಆದಾಯವಿಲ್ಲದೇ ಆರ್ಥಿಕವಾಗಿ ದುರ್ಬಲವಾಗಿದ್ದಾರೆ. ಆದ್ದರಿಂದ 2020-21ನೇ ಸಾಲಿನಿಂದಲೇ ಅನ್ವಯಿಸುವಂತೆ ಶಿಕ್ಷಣ ಹಕ್ಕು ಕಾಯ್ದೆಗೆ ತಿದ್ದುಪಡಿ ತರಬೇಕು. ಅಂದರೆ ಆರ್‍ಟಿಎ ವಿದ್ಯಾರ್ಥಿಗಳ 9 ಹಾಗೂ 10ನೇ ತರಗತಿಗಳ ಕೋವಿಡ್ ಅವಧಿಯ ಎರಡು ವರ್ಷದ ಶಾಲಾ ಶುಲ್ಕವನ್ನು ಸರ್ಕಾರವೇ ಭರಿಸಬೇಕು. ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಶಿಕ್ಷಣ ಸಚಿವ ಬಿ.ಸಿ.ನಾಗೇಶ್‍ರವರು ಈ ಬಗ್ಗೆ ನಿರ್ಲಕ್ಷ್ಯ ಮುಂದುವರಿಸಿದರೆ ಆಮ್ ಆದ್ಮಿ ಪಾರ್ಟಿ ದೊಡ್ಡ ಮಟ್ಟದಲ್ಲಿ ಹೋರಾಟ ಮಾಡಲಿದೆ ಎಂದು ಉಷಾ ಮೋಹನ್ ಎಚ್ಚರಿಕೆ ನೀಡಿದರು. ಇದನ್ನೂ ಓದಿ: ಅಪ್ಪು ಸಮಾಧಿ ಬಳಿ ನೃತ್ಯ ನಮನ ಸಲ್ಲಿಸಿದ ಪುಟಾಣಿಗಳು

    BC Nagesh

    ಚಿಕ್ಕಪೇಟೆ ವಾರ್ಡ್ ಎಎಪಿ ಅಧ್ಯಕ್ಷರಾದ ಗೋಪಿನಾಥ್‍ರವರು ಮಾತನಾಡಿ, ಖಾಸಗಿ ಶಾಲೆಯ ದುಬಾರಿ ಶುಲ್ಕ ಕಟ್ಟಲು ಸಾಧ್ಯವಾಗದ ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳು ಸರ್ಕಾರಿ ಶಾಲೆಗಳನ್ನು ಸೇರಲು ಬಯಸುತ್ತಿದ್ದಾರೆ. ಆದರೆ ಅವರಿಗೆ ವರ್ಗಾವಣೆ ಪತ್ರ (ಟಿಸಿ) ನೀಡಲು ಕೆಲವು ಖಾಸಗಿ ಶಾಲೆಗಳು ಸತಾಯಿಸುತ್ತಿವೆ. ಭಾರೀ ಹಣ ಪಡೆದು ವರ್ಗಾವಣೆ ಪತ್ರ ನೀಡುತ್ತಿರುವ ಘಟನೆಗಳು ಅಲ್ಲಲ್ಲಿ ಕಂಡುಬರುತ್ತಿವೆ. ಬಡವರ ಅಸಹಾಯಕತೆಯ ಲಾಭ ಪಡೆಯುವ ಅಂತಹ ಶಿಕ್ಷಣ ಸಂಸ್ಥೆಗಳ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು. ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಾರ್ಟಿ ಸರ್ಕಾರವು ವರ್ಗಾವಣೆ ಪತ್ರ ಇಲ್ಲದೆಯೇ ಸರ್ಕಾರಿ ಶಾಲೆ ಸೇರುವ ವ್ಯವಸ್ಥೆ ಕಲ್ಪಿಸಿದ್ದು, ರಾಜ್ಯದಲ್ಲೂ ಅದೇ ಮಾದರಿಯ ವ್ಯವಸ್ಥೆ ಅಳವಡಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ: ಅವನು ಇನ್ನೂ ನನ್ನ ಮಡಿಲಲ್ಲಿ, ಆಲೋಚನೆಗಳಲ್ಲಿ ಶಾಶ್ವತವಾಗಿದ್ದಾನೆ: ರಾಘವೇಂದ್ರ ರಾಜ್‍ಕುಮಾರ್

  • ಪುನೀತ್ ರಾಜ್‍ಕುಮಾರ್ ಸ್ಮರಣಾರ್ಥ ಎಎಪಿಯಿಂದ ಉಚಿತ ನೇತ್ರ ತಪಾಸಣಾ ಶಿಬಿರ

    ಪುನೀತ್ ರಾಜ್‍ಕುಮಾರ್ ಸ್ಮರಣಾರ್ಥ ಎಎಪಿಯಿಂದ ಉಚಿತ ನೇತ್ರ ತಪಾಸಣಾ ಶಿಬಿರ

    ಬೆಂಗಳೂರು: ಖ್ಯಾತ ನಟ ಪುನೀತ್ ರಾಜ್‍ಕುಮಾರ್ ಸ್ಮರಣಾರ್ಥ ಹಾಗೂ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಆಮ್ ಆದ್ಮಿ ಪಾರ್ಟಿಯು ಸಂಪಂಗಿರಾಮ ನಗರದಲ್ಲಿ ಆಯೋಜಿಸಿದ್ದ ಉಚಿತ ನೇತ್ರ ತಪಾಸಣೆ ಶಿಬಿರದಲ್ಲಿ ನೂರಕ್ಕೂ ಹೆಚ್ಚು ಜನರು ಕಣ್ಣಿನ ತಪಾಸಣೆ ಮಾಡಿಸಿಕೊಂಡರು.

    ಸಂಪಂಗಿರಾಮ ನಗರ ವಾರ್ಡ್‍ನ ಎಎಪಿ ಅಧ್ಯಕ್ಷರಾದ ಪ್ರಕಾಶ್ ನೆಡುಂಗಡಿ ಅವರು ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿ, ನಮ್ಮ ವಾರ್ಡ್‍ನ ಅನೇಕ ಬಡವರು ದೀರ್ಘಕಾಲದಿಂದಲೂ ಕಣ್ಣಿನ ತಪಾಸಣೆ ಮಾಡಿಸಿಕೊಂಡಿಲ್ಲ ಎಂಬುದು ನನ್ನ ಗಮನಕ್ಕೆ ಬಂದಿತು. ಡಾ.ರಾಜ್‍ಕುಮಾರ್ ಹಾಗೂ ಅವರ ಮಗ ಪುನೀತ್ ರಾಜ್‍ಕುಮಾರ್ ಅವರು ನೇತ್ರದಾನ ಮಾಡಿರುವುದು ನಾಡಿನೆಲ್ಲೆಡೆ ನೇತ್ರದಾನವನ್ನು ಪ್ರೋತ್ಸಾಹಿಸಿದೆ. ಆದ್ದರಿಂದ ಅವರ ಸ್ಮರಣಾರ್ಥ ಉಚಿತ ನೇತ್ರ ತಪಾಸಣೆ ಶಿಬಿರ ಆಯೋಜಿಸಲು ನಿರ್ಧರಿಸಿದೆವು. ದೆಹಲಿ ಮಾದರಿಯಲ್ಲಿ ಬೆಂಗಳೂರಿನಲ್ಲೂ ಸಾರ್ವಜನಿಕರ ಆರೋಗ್ಯ ವೃದ್ಧಿಸಲು ಎಎಪಿ ನಿರ್ಧರಿಸಿದ್ದು, ಇದು ಆ ಪ್ರಯತ್ನದ ಭಾಗವಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಗೌಪ್ಯವಾಗಿ ಬೂಸ್ಟರ್ ಶಾರ್ಟ್ ಪಡೆಯುತ್ತಿರುವ ಆರೋಗ್ಯ ಸಿಬ್ಬಂದಿ

    ‘ಆಮ್ ಆದ್ಮಿ ಪಾರ್ಟಿಯು ಶಿಬಿರವನ್ನು ಆಯೋಜಿಸಿರುವುದು ಇಲ್ಲಿನ ಜನರಿಗೆ ತುಂಬಾ ಉಪಯುಕ್ತವಾಗಿದೆ. ಕಣ್ಣಿಗೆ ಬಹಳ ಆಯಾಸ ಉಂಟುಮಾಡುವ ಬದಲು ಅದರ ಸುರಕ್ಷತೆಗೆ ಕಾಳಜಿ ತೆಗೆದುಕೊಳ್ಳಬೇಕು’ ಎಂದು ತಪಾಸಣೆ ಮಾಡಿಸಿಕೊಂಡ ರವಿಕುಮಾರ್ ಎಂಬವರು ಹೇಳಿದರು.

    ಖ್ಯಾತ ನೇತ್ರತಜ್ಞ ಡಾ.ರಾಜೇಶ್ ಪರೇಖ್ ಮತ್ತು ಅವರ ತಂಡದವರು ಉತ್ತಮ ಗುಣಮಟ್ಟದ ತಪಾಸಣೆ ನಡೆಸಿ, ಹೆಚ್ಚಿನ ಚಿಕಿತ್ಸೆಯ ಅಗತ್ಯವಿರುವವರಿಗೆ ಆಸ್ಪತ್ರೆಗೆ ಹೋಗುವಂತೆ ಸೂಚಿಸಿದರು.

    ಆಮ್ ಆದ್ಮಿ ಪಾರ್ಟಿಯ ರಾಜ್ಯ ಸಂಚಾಲಕರಾದ ಪೃಥ್ವಿ ರೆಡ್ಡಿಯವರು ಬೆಂಗಳೂರಿನ ಸರ್ವಜ್ಞ ನಗರದಲ್ಲಿ ರಾಜ್ಯೋತ್ಸವ ಆಚರಿಸಿ, ನಾಡು-ನುಡಿಯ ಉಳಿವಿಗಾಗಿ ನಾವೆಲ್ಲರೂ ಸದಾ ಬದ್ಧರಾಗಿರಬೇಕು ಎಂದು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ಇದನ್ನೂ ಓದಿ: 5-6 ದಿನ ಪುನೀತ್ ಸಮಾಧಿ ಬಳಿ ಯಾರನ್ನೂ ಬಿಡಲ್ಲ: ಅರಗ ಜ್ಞಾನೇಂದ್ರ

  • ವಿದ್ಯಾರ್ಥಿಗಳಿಗೆ ಸಮವಸ್ತ್ರ ನೀಡಲೂ ಸಾಧ್ಯವಾಗದಷ್ಟು ಸರ್ಕಾರ ದಿವಾಳಿಯಾಗಿದೆಯೇ? – ಎಎಪಿ ಪ್ರಶ್ನೆ

    ವಿದ್ಯಾರ್ಥಿಗಳಿಗೆ ಸಮವಸ್ತ್ರ ನೀಡಲೂ ಸಾಧ್ಯವಾಗದಷ್ಟು ಸರ್ಕಾರ ದಿವಾಳಿಯಾಗಿದೆಯೇ? – ಎಎಪಿ ಪ್ರಶ್ನೆ

    ಬೆಂಗಳೂರು: ಸರ್ಕಾರಿ ಶಾಲೆಗಳ ತರಗತಿಗಳು ಆರಂಭವಾಗಿದ್ದರೂ ವಿದ್ಯಾರ್ಥಿಗಳಿಗೆ ಸಮವಸ್ತ್ರ ನೀಡದಿರುವ ಸಾರ್ವಜನಿಕ ಶಿಕ್ಷಣ ಇಲಾಖೆಯನ್ನು ಆಮ್ ಆದ್ಮಿ ಪಾರ್ಟಿಯು ತರಾಟೆಗೆ ತೆಗೆದುಕೊಂಡಿದ್ದು, ರಾಜ್ಯ ಸರ್ಕಾರ ಈ ಮಟ್ಟಿಗೆ ದಿವಾಳಿಯಾಗಿದೆಯೇ ಎಂದು ಪ್ರಶ್ನಿಸಿದೆ.

    ಆಮ್ ಆದ್ಮಿ ಪಾರ್ಟಿಯ ಮಾಧ್ಯಮ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಪಕ್ಷದ ರಾಜ್ಯ ಮುಖ್ಯ ವಕ್ತಾರ ಶರತ್ ಖಾದ್ರಿ, ಶಾಲೆಗಳು ಆರಂಭವಾಗಿ ತಿಂಗಳು ಕಳೆದಿದೆ. ನವೆಂಬರ್ 2ರಿಂದ ಎಲ್ಲಾ ತರಗತಿಗಳು ಪೂರ್ಣಾವಧಿ ನಡೆಯಲಿವೆ. ಆದರೆ ಸರ್ಕಾರವು ಒಂದು ಜೊತೆ ಸಮವಸ್ತ್ರವನ್ನೂ ಸಿದ್ಧಪಡಿಸಿಕೊಂಡಿಲ್ಲ. ಇನ್ನೂ ಎರಡು ತಿಂಗಳು ಸಮವಸ್ತ್ರ ವಿತರಣೆ ಸಾಧ್ಯವಿಲ್ಲವೆಂದು ಶಿಕ್ಷಣ ಇಲಾಖೆಯ ಮೂಲಗಳು ತಿಳಿಸಿವೆ. ಶೂ, ಸಾಕ್ಸ್ ನೀಡಲು ಬಜೆಟ್‍ನಲ್ಲಿ ಅನುದಾನ ಮೀಸಲಿಟ್ಟಿಲ್ಲ. ವಿದ್ಯಾರ್ಥಿಗಳಿಗೆ ಅಗತ್ಯ ಸೌಕರ್ಯಗಳನ್ನು ನೀಡಲೂ ಸಾಧ್ಯವಾಗದಷ್ಟು ರಾಜ್ಯದ ಬೊಕ್ಕಸವನ್ನು ಬಿಜೆಪಿಯು ದಿವಾಳಿ ಮಾಡಿದೆಯೇ? ಎಂದು ಪ್ರಶ್ನೆ ಎತ್ತಿದೆ. ಇದನ್ನೂ ಓದಿ: ಗಾಂಧಿನಗರ ಶಾಸಕ ದಿನೇಶ್ ಗುಂಡೂರಾವ್ ಕಾಣೆಯಾಗಿದ್ದಾರೆ: ಎಎಪಿ

    basavaraj bommai

    ಸರ್ಕಾರವು ಶಾಸಕರಿಗೆ, ಸಚಿವರಿಗೆ ಐಷಾರಾಮಿ ಕಾರು, ಬೆಂಗಾವಲು ಪಡೆ, ವೇತನ ಹಾಗೂ ಅನೇಕ ಭತ್ಯೆಗಳನ್ನು ನೀಡುತ್ತದೆ. ಅದನ್ನು ಕಡಿತಗೊಳಿಸಿಯಾದರೂ ವಿದ್ಯಾರ್ಥಿಗಳಿಗೆ ಶೂ, ಸಾಕ್ಸ್ ವಿತರಿಸಲಿ. ಕೇವಲ ಒಂದು ಜೊತೆ ಸಮವಸ್ತ್ರ ವಿತರಿಸಿದರೆ ಸಾಲದು. ಒಂದು ಸಮವಸ್ತ್ರವನ್ನು ವಾರವಿಡೀ ಉಪಯೋಗಿಸಲು ಸಾಧ್ಯವಾಗುವುದಿಲ್ಲ. ಕನಿಷ್ಠ ಎರಡು ಜೊತೆಯಾದರೂ ವಿತರಿಸಬೇಕು. ಉತ್ತಮ ಗುಣಮಟ್ಟದ ಸಮವಸ್ತ್ರವನ್ನು ನೀಡಬೇಕು. ನಾಡಿನ ಭವಿಷ್ಯವೇ ಆಗಿರುವ ವಿದ್ಯಾರ್ಥಿಗಳ ಬಗ್ಗೆ ನಿರ್ಲಕ್ಷ್ಯ ಸಲ್ಲದು ಎಂದು ಶರತ್ ಖಾದ್ರಿ ಹೇಳಿದರು. ಇದನ್ನೂ ಓದಿ: ಶಾರೂಖ್ ಖಾನ್ ಪುತ್ರ ಆರ್ಯನ್ ಖಾನ್‍ಗೆ ಜಾಮೀನು ಮಂಜೂರು

    ಆಮ್ ಆದ್ಮಿ ಪಾರ್ಟಿಯ ಬೊಮ್ಮನಹಳ್ಳಿ ವಾರ್ಡ್ ಅಧ್ಯಕ್ಷರಾದ ಯೋಗಿತಾ ರೆಡ್ಡಿಯವರು ಮಾತನಾಡಿ, ಪ್ರೌಢಶಾಲೆಗಳು ಆರಂಭವಾಗಿ ಎರಡೂವರೆ ತಿಂಗಳು ಕಳೆದಿದೆ. ಆದರೂ ಶಿಕ್ಷಣ ಇಲಾಖೆಯು ವಿದ್ಯಾರ್ಥಿನಿಯರಿಗೆ ಸ್ಯಾನಿಟರಿ ನ್ಯಾಪ್‍ಕಿನ್‍ಗಳನ್ನು ನೀಡಿಲ್ಲ. ಪ್ರಮುಖವಾಗಿ ಗ್ರಾಮೀಣ ಭಾಗದ ಹಾಗೂ ಬಡ-ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಇದರಿಂದ ತೀವ್ರ ತೊಂದರೆಯಾಗುತ್ತಿದೆ. ಸ್ಯಾನಿಟರಿ ಪ್ಯಾಡ್‍ಗಳನ್ನು ಸರ್ಕಾರ ತಕ್ಷಣವೇ ಪೂರೈಸದಿದ್ದರೆ ವಿದ್ಯಾರ್ಥಿನಿಯರು ನಿರ್ದಿಷ್ಟ ದಿನಗಳಲ್ಲಿ ಶಾಲೆಗೆ ರಜೆ ಹಾಕುವ ಸಾಧ್ಯತೆಯಿದೆ. ಇದು ಅವರ ಶೈಕ್ಷಣಿಕ ಸಾಧನೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದರು.

  • ಗಾಂಧಿನಗರ ಶಾಸಕ ದಿನೇಶ್ ಗುಂಡೂರಾವ್ ಕಾಣೆಯಾಗಿದ್ದಾರೆ: ಎಎಪಿ

    ಗಾಂಧಿನಗರ ಶಾಸಕ ದಿನೇಶ್ ಗುಂಡೂರಾವ್ ಕಾಣೆಯಾಗಿದ್ದಾರೆ: ಎಎಪಿ

    ಬೆಂಗಳೂರು: ಗಾಂಧಿನಗರ ಕ್ಷೇತ್ರದ ರಸ್ತೆಗಳ ತುಂಬಾ ಗುಂಡಿಗಳು ಬಿದ್ದು ಜನರು ಪರದಾಡುತ್ತಿದ್ದರೆ, ಕಾಂಗ್ರೆಸ್ ಶಾಸಕ ದಿನೇಶ್ ಗುಂಡೂರಾವ್‍ರವರು ಸಮಸ್ಯೆ ಆಲಿಸಿ ಪರಿಹರಿಸುವ ಬದಲು ಕಾಣೆಯಾಗಿದ್ದಾರೆ ಎಂದು ಆಮ್ ಆದ್ಮಿ ಪಾರ್ಟಿಯ ಬೆಂಗಳೂರು ನಗರ ಅಧ್ಯಕ್ಷ ಮೋಹನ್ ದಾಸರಿ ಟೀಕಿಸಿದ್ದಾರೆ.

    ಪ್ರೆಸ್ ಕ್ಲಬ್‍ನಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಗಾಂಧಿನಗರ ವಿಧಾನಸಭಾ ಕ್ಷೇತ್ರದ ಜನರು ಮಾಜಿ ಮುಖ್ಯಮಂತ್ರಿ ಆರ್.ಗುಂಡೂರಾವ್‍ರವರನ್ನು ನೆನಪಿಸಿಕೊಂಡು ದಿನೇಶ್ ಗುಂಡೂರಾವ್‍ರವರನ್ನು ಶಾಸಕ ಸ್ಥಾನಕ್ಕೆ ಆಯ್ಕೆ ಮಾಡಿದ್ದಾರೆ. ಆದರೆ ಕ್ಷೇತ್ರದ ಮೇಲೆ ಅವರಿಗಿರುವ ಅಸಡ್ಡೆಯಿಂದಾಗಿ ಅವರ ತಂದೆಯ ಹೆಸರಿಗೆ ಧಕ್ಕೆಯಾಗುತ್ತಿದೆ. ಕ್ಷೇತ್ರದ ಅಭಿವೃದ್ಧಿ ಹಾಗೂ ಜನರ ಸಮಸ್ಯೆಗಳನ್ನು ಸಂಪೂರ್ಣ ಕಡೆಗಣಿಸಿ ಹೊರರಾಜ್ಯಗಳಲ್ಲೇ ಠಿಕಾಣಿ ಹೂಡುತ್ತಿದ್ದಾರೆ. ಗಾಂಧಿನಗರದ ಶಾಸಕ ಸ್ಥಾನಕ್ಕಿಂತ ಗೋವಾ ಮತ್ತು ತಮಿಳುನಾಡಿನ ಕಾಂಗ್ರೆಸ್ ಉಸ್ತುವಾರಿಯೇ ಅವರಿಗೆ ಮುಖ್ಯವಾಗಿದೆ. ಪರಿಣಾಮವಾಗಿ ಮತ ನೀಡಿದ ಜನರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಸಾಮಾನ್ಯ ವ್ಯಕ್ತಿ ಜೊತೆಗೆ ಜಪಾನ್ ಯುವರಾಣಿ ಮದುವೆ-ಪದವಿ, ಗೌರವ ಹಿಂಪಡೆದ ಅರಮನೆ

    ಶಾಸಕರಾಗಿ ಕ್ಷೇತ್ರದ ಅಭಿವೃದ್ಧಿಯ ಜವಾಬ್ದಾರಿ ಹೊತ್ತಿರುವ ದಿನೇಶ್ ಗುಂಡೂರಾವ್‍ರವರನ್ನು ಸಾಮಾಜಿಕ ತಾಣಗಳಲ್ಲಿ ಪ್ರಶ್ನಿಸಿದರೆ, ಅಸಹಾಯಕತೆ ವ್ಯಕ್ತಪಡಿಸುತ್ತಾರೆ. ಚುನಾವಣೆ ವೇಳೆ ಆಶ್ವಾಸನೆಗಳನ್ನು ನೀಡಿ ಗೆದ್ದು, ಅಧಿಕಾರ ಸಿಕ್ಕ ನಂತರ ಅಸಹಾಯಕತೆ ವ್ಯಕ್ತಪಡಿಸುವ ಅವರಿಗೆ ನಾಚಿಕೆಯಾಗಬೇಕು. ಇದು ಜವಾಬ್ದಾರಿಯಿಂದ ನುಣುಚಿಕೊಳ್ಳುವ ಪ್ರಯತ್ನವೇ ಹೊರತು ಬೇರೇನೂ ಅಲ್ಲ. ನೆರೆ ರಾಜ್ಯಗಳಿಗೆ ಪಲಾಯನ ಮಾಡಿರುವ ಅವರು ಇನ್ನಾದರೂ ವಾಪಸ್ ಬಂದು ಜನರ ಸಮಸ್ಯೆಗಳಿಗೆ ಸ್ಪಂದಿಸಲಿ. ಸಾಧ್ಯವಾಗದಿದ್ದರೆ, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ನಂತರ ಏನಾದರೂ ಮಾಡಿಕೊಳ್ಳಲಿ ಎಂದು ಮೋಹನ್ ದಾಸರಿಯವರು ದಿನೇಶ್ ಗುಂಡೂರಾವ್‍ರವರನ್ನು ತರಾಟೆಗೆ ತೆಗೆದುಕೊಂಡರು.

    ಗಾಂಧಿನಗರ ವಿಧಾನಸಭಾ ಕ್ಷೇತ್ರದ ಎಎಪಿ ಅಧ್ಯಕ್ಷ ರಾಜಶೇಖರ್ ದೊಡ್ಡಣ್ಣ ಮಾತನಾಡಿ, ಕ್ಷೇತ್ರದಲ್ಲಿ ಕಾಂಗ್ರೆಸ್‍ನ ಕಾರ್ಪೋರೇಟರ್‌ಗಳು ಹಾಗೂ ಕಾರ್ಯಕರ್ತರ ನಡವಳಿಕೆ ಮೀತಿಮೀರಿದ್ದು, ಕ್ಷೇತ್ರದ ಸಮಸ್ಯೆಗಳನ್ನು ಪ್ರಶ್ನಿಸುವ ಆಮ್ ಆದ್ಮಿ ಪಾರ್ಟಿ ಮುಖಂಡರಿಗೆ ಬೆದರಿಕೆ ಹಾಕುತ್ತಿದ್ದಾರೆ. ಅವರ ಗೂಂಡಾಗಿರಿ ಇದೇ ರೀತಿ ಮುಂದುವರಿದರೆ ‘ದಿನೇಶ್ ಗುಂಡೂರಾವ್ ಹಠಾವೋ’ ಆಂದೋಲನದ ಮೂಲಕ ಜನರ ಬಳಿ ಹೋಗುತ್ತೇವೆ ಎಂದು ಎಚ್ಚರಿಕೆ ನೀಡಿದರು. ಇದನ್ನೂ ಓದಿ: ಟೊಪ್ಪಿ ಹಾಕಲು ಯಾರಿಗೆ ಹುಟ್ಟಿರಬೇಕು- ಸಿದ್ದುಗೆ ಸಿ.ಟಿ.ರವಿ ಪ್ರಶ್ನೆ

    ದಿನೇಶ್ ಗುಂಡೂರಾವ್‍ರವರು 1999ರಿಂದಲೂ ಕ್ಷೇತ್ರ ಶಾಸಕರಾಗಿದ್ದು, ರಾಜಕೀಯ ಹೊಂದಾಣಿಕೆಯಿಂದ ಕಳೆದ ಐದು ಚುನಾವಣೆ ಗೆದ್ದಿದ್ದಾರೆ. ಸ್ವಲ್ಪವಾದರೂ ಸುಸ್ಥಿತಿಯಲ್ಲಿದ್ದ ಕ್ಷೇತ್ರವನ್ನು ಸಂಪೂರ್ಣ ಹಾಳುಗೆಡವಿರುವುದೇ ಅವರ 22 ವರ್ಷಗಳ ಸಾಧನೆ. ಶಾಲೆ, ಆಸ್ಪತ್ರೆ ಮುಂತಾದ ಮೂಲಸೌಕರ್ಯಗಳು ಸೂಕ್ತ ರೀತಿಯಲ್ಲಿ ಇಲ್ಲದ ಗಾಂಧಿನಗರ ಕ್ಷೇತ್ರವು ದೇಶದಲ್ಲೇ ಅತ್ಯಂತ ಹಿಂದುಳಿದ ಕ್ಷೇತ್ರವಾಗಿರಬಹುದು. ಕ್ಷೇತ್ರದ ಬಗ್ಗೆ ಹಾಗೂ ಮತದಾರರ ಬಗ್ಗೆ ಇಷ್ಟೊಂದು ನಿರ್ಲಕ್ಷ್ಯ ತೋರುವ ಶಾಸಕರು ಬಹುಶಃ ಮತ್ತೊಬ್ಬರು ಇರಲಿಕ್ಕಿಲ್ಲ. ಸಮಸ್ತ ಗಾಂಧಿನಗರ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗಾಗಿ ಇಲ್ಲಿ ಆಮ್ ಆದ್ಮಿ ಪಾರ್ಟಿಯನ್ನು ಬಲಗೊಳಿಸಲಾಗುತ್ತಿದೆ ಎಂದರು.

    ಮಹಿಳಾ ಮುಖಂಡರಾದ ಉಷಾ ಮೋಹನ್‍ರವರು ಮಾತನಾಡಿ, ದಿನೇಶ್ ಗುಂಡೂರಾವ್‍ರವರ ಅಧಿಕಾರದಲ್ಲಿ ಅವರ ಪತ್ನಿ ಟಬು ರಾವ್‍ರವರ ಹಸ್ತಕ್ಷೇಪ ಅತಿಯಾಗಿದೆ. ಶಾಸಕರು ಕ್ಷೇತ್ರದಲ್ಲಿ ದೀರ್ಘಕಾಲ ಇಲ್ಲದಿರುವುದರ ಲಾಭವನ್ನು ಟಬು ರಾವ್ ಪಡೆಯುತ್ತಿದ್ದಾರೆ. ಜನಪ್ರತಿನಿಧಿಯಂತೆ ಅಧಿಕಾರದಿಂದ ಮೆರೆಯುತ್ತಿದ್ದಾರೆ. ಇದು ಅಸಂವಿಧಾನಿಕವಾಗಿದ್ದು, ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾಡುವ ದ್ರೋಹವಾಗಿದೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಸಿಎಂ ಆಗ್ಲೇಬೇಕುಂತ ರಗ್ಗು ಹೊದ್ದು ಮಲಗಿದ್ದ ಸಿದ್ದರಾಮಯ್ಯರನ್ನು ಕರ್ಕೊಂಡು ಬಂದಿದ್ದು ನಾನು: ಹೆಚ್‍ಡಿಕೆ

    ಕಾನೂನು ಸಮರಕ್ಕೆ 57 ವಕೀಲರು
    ಆಮ್ ಆದ್ಮಿ ಪಾರ್ಟಿಯ ಬೆಂಗಳೂರು ನಗರ ವಕೀಲರ ಘಟಕದ ಅಧ್ಯಕ್ಷ ಮಂಜುನಾಥ ಸ್ವಾಮಿಯವರು ಮಾತನಾಡಿ, ರಸ್ತೆಗುಂಡಿಗಳಿಗೆ ಕಾರಣರಾದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವಿರುದ್ಧ ಪ್ರಕರಣ ದಾಖಲಿಸಲು 57 ಅನುಭವಿ ವಕೀಲರ ತಂಡವನ್ನು ರಚಿಸಲಾಗಿದೆ. ಸದ್ಯದಲ್ಲೇ 150ಕ್ಕೂ ಹೆಚ್ಚು ವಕೀಲರು ನಮ್ಮೊಂದಿಗೆ ಕೈಜೋಡಿಸುವ ಸಾಧ್ಯತೆಯಿದೆ. ಕರ್ತವ್ಯದಲ್ಲಿ ಲೋಪ ಎಸಗಿದ ಹಾಗೂ ಅಕ್ರಮದಲ್ಲಿ ಭಾಗಿಯಾದವರು ತಕ್ಕ ಬೆಲೆ ತೆರುವಂತೆ ಮಾಡುತ್ತೇವೆ ಎಂದು ಹೇಳಿದರು.

    ಕ್ಷೇತ್ರದ ಮುಖಂಡರುಗಳಾದ ಪುಷ್ಪ ಕೇಶವ್, ಗೋಪಿನಾಥ್ ಹಾಗೂ ಪಕ್ಷದ ಹಲವು ಕಾರ್ಯಕರ್ತರು ಭಾಗವಹಿಸಿದ್ದರು.

  • ಬೆಂಗಳೂರಿನ ಜನರ ಹಿತಕ್ಕಾಗಿ ಯಾವುದೇ ತೊಂದರೆ ತೆಗೆದುಕೊಳ್ಳಲು ಸಿದ್ಧ: ಜಗದೀಶ್

    ಬೆಂಗಳೂರಿನ ಜನರ ಹಿತಕ್ಕಾಗಿ ಯಾವುದೇ ತೊಂದರೆ ತೆಗೆದುಕೊಳ್ಳಲು ಸಿದ್ಧ: ಜಗದೀಶ್

    ಬೆಂಗಳೂರು: ನಗರದ ರಸ್ತೆ ಗುಂಡಿಗಳು ಹಾಗೂ ಕಳಪೆ ರಸ್ತೆ ಕಾಮಗಾರಿ ವಿರುದ್ಧ ಹೋರಾಡಲು ಆಮ್ ಆದ್ಮಿ ಪಾರ್ಟಿಯು ಕಾರ್ಯಪಡೆ ಹಾಗೂ ವಾಟ್ಸಪ್ ಸಹಾಯವಾಣಿಯನ್ನು ಆರಂಭಿಸಿದ್ದು, ಇಲ್ಲಿನ ಜನರ ಹಿತಕ್ಕಾಗಿ ಯಾವುದೇ ತೊಂದರೆ ತೆಗೆದುಕೊಳ್ಳಲು ಸಿದ್ಧವಿದ್ದೇವೆ ಎಂದು ಪಕ್ಷದ ಮುಖಂಡ ಹಾಗೂ ಖ್ಯಾತ ವಕೀಲರಾದ ಜಗದೀಶ್ ಮಹಾದೇವ್ ತಿಳಿಸಿದರು.

    ಬೆಂಗಳೂರಿನ ಪ್ರೆಸ್‍ಕ್ಲಬ್‍ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿಯ ಭ್ರಷ್ಟಾಚಾರದಿಂದಾಗಿ ಬೆಂಗಳೂರಿನ ಬಹುತೇಕ ರಸ್ತೆಗಳಲ್ಲಿ ಯಮಸ್ವರೂಪಿ ಗುಂಡಿಗಳು ಬಿದ್ದಿವೆ. ಇವುಗಳಿಂದಾಗಿ ಕೆಲವು ವಾಹನಸವಾರರು ಕೈಕಾಲು ಮುರಿದುಕೊಂಡರೆ, ಇನ್ನು ಕೆಲವರು ಜೀವವನ್ನೇ ಕಳೆದುಕೊಂಡಿದ್ದಾರೆ. ರಸ್ತೆ ಗುಂಡಿಗಳ ವಿರುದ್ಧ ಆಮ್ ಆದ್ಮಿ ಪಾರ್ಟಿಯು ಸಮರ ಆರಂಭಿಸಿದ್ದು, ಇದಕ್ಕಾಗಿ ವಿಶೇಷ ಕಾರ್ಯಪಡೆ ಹಾಗೂ ವಾಟ್ಸಪ್ ಸಹಾಯವಾಣಿಯನ್ನು ಆರಂಭಿಸುತ್ತಿದ್ದೇವೆ. ಸೂಕ್ತ ಕಾನೂನು ಹೋರಾಟದ ಮೂಲಕ ಸಾರ್ವಜನಿಕರಿಗೆ ನ್ಯಾಯ ದೊರಕಿಸಿಕೊಡುವ ಪಣತೊಟ್ಟಿದ್ದೇವೆ” ಎಂದು ಹೇಳಿದರು. ಇದನ್ನೂ ಓದಿ: ಆಮ್ ಆದ್ಮಿ ಪಾರ್ಟಿಗೆ ಸೇರ್ಪಡೆಗೊಂಡ ಖ್ಯಾತ ವಕೀಲ ಜಗದೀಶ್

    ನಗರದಲ್ಲಿ ರಸ್ತೆ ಕಳಪೆ ಕಾಮಗಾರಿ ನಡೆಯುತ್ತಿರುವುದು ಹಾಗೂ ಅಪಾಯಕಾರಿ ಗುಂಡಿಗಳು ಕಂಡುಬಂದರೆ ತಕ್ಷಣವೇ ನಮ್ಮ ವಾಟ್ಸಪ್ ಸಹಾಯವಾಣಿ 9513319676 ಸಂಖ್ಯೆಗೆ ಮೆಸೇಜ್ ಕಳುಹಿಸಬಹುದು. ನಮ್ಮ ಕಾರ್ಯಪಡೆಯು ಪ್ರಕರಣದ ಬಗ್ಗೆ ಪರಾಮರ್ಶೆ ನಡೆಸಿ ಕೂಡಲೇ ಕಾರ್ಯಪ್ರವೃತ್ತವಾಗಲಿದೆ. ಬಿಬಿಎಂಪಿ, ಸ್ಥಳೀಯ ಶಾಸಕ, ಮಾಜಿ ಕಾರ್ಪೊರೇಟರ್‌, ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಅಪರಾಧ ಪ್ರಕರಣ ದಾಖಲಿಸಿ, ಕಾನೂನು ಹೋರಾಟ ಆರಂಭಿಸುತ್ತೇವೆ. ರಾಜಧಾನಿ ಬೆಂಗಳೂರು ಹಾಗೂ ಇಲ್ಲಿನ ಜನರ ಹಿತಕ್ಕಾಗಿ ಯಾವುದೇ ತೊಂದರೆ ತೆಗೆದುಕೊಳ್ಳಲು ನಾವು ಸಂಪೂರ್ಣ ಸಿದ್ಧವಿದ್ದೇವೆ ಎಂದು ಅಭಯ ವ್ಯಕ್ತಪಡಿಸಿದರು.

    ಆಮ್ ಆದ್ಮಿ ಪಾರ್ಟಿಯ ಬೆಂಗಳೂರು ನಗರಾಧ್ಯಕ್ಷ ಮೋಹನ್ ದಾಸರಿಯವರು ಮಾತನಾಡಿ, ಬೆಂಗಳೂರಿನ ರಸ್ತೆಗುಂಡಿಗಳಿಗೆ ಸಂಬಂಧಿಸಿದಂತೆ ಆಮ್ ಆದ್ಮಿ ಪಕ್ಷವು ನಿರಂತರವಾಗಿ ಹೋರಾಡುತ್ತಿದೆ. ಹಲವು ಪ್ರತಿಭಟನೆ ಹಾಗೂ ರಸ್ತೆಗುಂಡಿ ಹಬ್ಬ ಎಂಬ ವಿನೂತನ ಚಳುವಳಿ ನಡೆಸಿ ಜನಜಾಗೃತಿ ಮೂಡಿಸಿದ್ದೇವೆ. ಈಗ ವಾಟ್ಸಪ್ ಸಹಾಯವಾಣಿ ಹಾಗೂ ಕಾರ್ಯಪಡೆಯ ಮೂಲಕ ಮತ್ತೊಂದು ಹಂತದ ಹೋರಾಟ ಆರಂಭಿಸುತ್ತಿದ್ದೇವೆ. ರಾಜ್ಯವನ್ನಾಳಿದ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಸರ್ಕಾರಗಳು ಬೆಂಗಳೂರಿನ ರಸ್ತೆಗಳಿಗಾಗಿ ಕಳೆದ ಐದು ವರ್ಷಗಳಲ್ಲಿ ಬರೋಬ್ಬರಿ 20,000 ಕೋಟಿ ಮೊತ್ತವನ್ನು, ಅಂದರೆ ದಿನಕ್ಕೆ ಸರಾಸರಿ 11 ಕೋಟಿ ರೂಪಾಯಿಯನ್ನು ಖರ್ಚು ಮಾಡಿವೆ. ಇದು ಜನರ ತೆರಿಗೆ ಹಣವಾಗಿದ್ದು, ಇದರಲ್ಲಾದ ಭ್ರಷ್ಟಾಚಾರವನ್ನು ಪ್ರಶ್ನಿಸುವ ಸಂಪೂರ್ಣ ಹಕ್ಕು ಜನರಿಗಿದೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಕೊರಗಜ್ಜನಿಗೆ ನೈವೇದ್ಯ ರೂಪದಲ್ಲಿಟ್ಟ ಮದ್ಯ ಎಗರಿಸಿದ ಭೂಪ

    ಸುದ್ದಿಗೋಷ್ಠಿಯಲ್ಲಿ ಪಕ್ಷದ ಮಾಧ್ಯಮ ಸಂಚಾಲಕ ಜಗದೀಶ್ ಹಾಗೂ ಜ್ಯೋತಿಷ್ ಕುಮಾರ್ ಉಪಸ್ಥಿತರಿದ್ದರು.

  • ಬಿಜೆಪಿ ಸೋಲಿನ ಭೀತಿಯಿಂದ ಚುನಾವಣೆ ಮುಂದೂಡುತ್ತಿದೆ: ಪೃಥ್ವಿ ರೆಡ್ಡಿ

    ಬಿಜೆಪಿ ಸೋಲಿನ ಭೀತಿಯಿಂದ ಚುನಾವಣೆ ಮುಂದೂಡುತ್ತಿದೆ: ಪೃಥ್ವಿ ರೆಡ್ಡಿ

    ಬೆಂಗಳೂರು: ಕೋವಿಡ್ ನಿಯಂತ್ರಣ, ರೈತರ ಸಮಸ್ಯೆ, ಆರ್ಥಿಕತೆ, ಉದ್ಯೋಗ ಸೃಷ್ಟಿ, ರಸ್ತೆ ದುರಸ್ತಿ ಮುಂತಾದ ಎಲ್ಲ ಕ್ಷೇತ್ರದಲ್ಲೂ ವಿಫಲವಾಗಿರುವ ಬಿಜೆಪಿಗೆ ಸೋಲಿನ ಭೀತಿಯಿದೆ. ಆದ್ದರಿಂದಲೇ ಬಿಬಿಎಂಪಿ, ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಚುನಾವಣೆಗಳನ್ನು ಪದೇ ಪದೇ ಮುಂದೂಡುತ್ತಿದೆ ಎಂದು ಆಮ್ ಆದ್ಮಿ ಪಾರ್ಟಿಯ ರಾಜ್ಯ ಸಂಚಾಲಕ ಪೃಥ್ವಿ ರೆಡ್ಡಿ ಟ್ಟಿಟ್ಟರ್ ಮೂಲಕ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.

    ಟ್ವೀಟ್‍ನಲ್ಲಿ ಏನಿದೆ?

    ಬಿಬಿಎಂಪಿಯ ವಾರ್ಡ್‍ಗಳ ಮರುವಿಂಗಡಣೆ ಕಾರ್ಯವು ಆಮೆಗತಿಯಲ್ಲಿ ಸಾಗುತ್ತಿದೆ. ಕಳೆದ 13 ತಿಂಗಳಿನಿಂದ ಜನಪ್ರತಿನಿಧಿಗಳ ಬದಲು ಅಧಿಕಾರಿಗಳು ಮಹಾನಗರ ಪಾಲಿಕೆಯನ್ನು ಮನಸೋ ಇಚ್ಛೆ ಮುನ್ನಡೆಸುತ್ತಿದ್ದಾರೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಯ ಕಗ್ಗೊಲೆಯಾಗಿದೆ. ಚುನಾವಣೆ ಮುಂದೂಡಲು ಪದೇ ಪದೇ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುವ ಮೂಲಕ ನ್ಯಾಯಾಲಯದ ಅಮೂಲ್ಯ ಸಮಯವನ್ನೂ ಬಿಜೆಪಿ ಹಾಳು ಮಾಡುತ್ತಿದೆ. ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಚುನಾವಣೆಯನ್ನು ಇನ್ನಷ್ಟು ತಿಂಗಳು ಮುಂದೂಡುವ ಉದ್ದೇಶದಿಂದಲೇ ಕ್ಷೇತ್ರ ಮರುವಿಂಗಡಣೆಗೆ ಸರ್ಕಾರ ಪ್ರತ್ಯೇಕ ಆಯೋಗ ರಚಿಸಿದೆ. ಇದನ್ನೂ ಓದಿ: ಹೃದಯಾಘಾತದಿಂದ ಇನ್ಸ್‌ಪೆಕ್ಟರ್‌ ನಿಧನ

    ಕೋವಿಡ್ ಸಂದರ್ಭದಲ್ಲಿ ಬೆಡ್, ಆಕ್ಸಿಜನ್ ಸೌಲಭ್ಯ ಕಲ್ಪಿಸಲು ಬಿಜೆಪಿ ಸರ್ಕಾರ ನಿರ್ಲಕ್ಷ್ಯ ತೋರಿತು. ಪೆಟ್ರೋಲ್, ಡಿಸೇಲ್, ಎಲ್‍ಪಿಜಿ, ಅಡುಗೆ ಎಣ್ಣೆ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಉದ್ಯೋಗ ಸೃಷ್ಟಿಯಲ್ಲೂ ಸರ್ಕಾರ ವಿಫಲವಾಗಿದ್ದು, ದೇಶದೆಲ್ಲೆಡೆ ನಿರುದ್ಯೋಗ ತಾಂಡವವಾಡುತ್ತಿದೆ. ದೇಶದ ಅರ್ಥ ವ್ಯವಸ್ಥೆ ಕುಸಿದು ಹೋಗಿದೆ. ದೇಶದ ಸಾಲದ ಪ್ರಮಾಣ ಗಣನೀಯವಾಗಿ ಹೆಚ್ಚಾಗಿದೆ. ರಸ್ತೆಗಳಿಗೆ ಹೊಸದಾಗಿ ಡಾಂಬರು ಹಾಕುವುದು ಹಾಗಿರಲಿ, ಗುಂಡಿಗಳಿಗೆ ವೈಜ್ಞಾನಿಕ ವಿಧಾನದಲ್ಲಿ ತೇಪೆ ಹಾಕಲೂ ಬಿಜೆಪಿ ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಸಣ್ಣ ಮಳೆಗೂ ತೇಪೆ ಕಿತ್ತುಹೋಗುತ್ತಿದೆ. ಹೀಗೆ ಎಲ್ಲದರಲ್ಲೂ ವಿಫಲವಾಗಿರುವ ಬಿಜೆಪಿಗೆ ಸೋಲಿನ ಭೀತಿಯಿದೆ. ಆದ್ದರಿಂದ ಏನಾದರೊಂದು ಕಾರಣ ಹುಡುಕಿಕೊಂಡು ಚುನಾವಣೆಗಳನ್ನು ಮುಂದೂಡುತ್ತಿದೆ ಎಂದು ಪೃಥ್ವಿ ರೆಡ್ಡಿ ಹೇಳಿದ್ದಾರೆ. ಇದನ್ನೂ ಓದಿ: ಮಂಡ್ಯದಲ್ಲಿ ಎಸ್‍ಪಿ ವರ್ಗಾವಣೆ ವಾರ್ – ರಾಜಕೀಯ ಪ್ರಭಾವಿಗಳ ಒತ್ತಡ ಆರೋಪ

  • ಆಮ್ ಆದ್ಮಿ ಪಾರ್ಟಿಗೆ ಸೇರ್ಪಡೆಗೊಂಡ ಖ್ಯಾತ ವಕೀಲ ಜಗದೀಶ್

    ಆಮ್ ಆದ್ಮಿ ಪಾರ್ಟಿಗೆ ಸೇರ್ಪಡೆಗೊಂಡ ಖ್ಯಾತ ವಕೀಲ ಜಗದೀಶ್

    ಬೆಂಗಳೂರು: ಅಭಿವೃದ್ಧಿಪರ ಆಡಳಿತ ನೀಡಲು ವಿಫಲವಾಗಿರುವ ಹಾಗೂ ಸದಾ ಭ್ರಷ್ಟಾಚಾರದಲ್ಲಿ ಮುಳುಗಿರುವ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳಿಂದ ರಾಜ್ಯವನ್ನು ಕಾಪಾಡಲು ಆಮ್ ಆದ್ಮಿ ಪಾರ್ಟಿಯ ಅವಶ್ಯಕತೆ ರಾಜ್ಯಕ್ಕಿದೆ ಹಾಗಾಗಿ ಎಎಪಿಗೆ ಸೇರ್ಪಡೆಗೊಂಡಿದ್ದೇನೆ ಎಂದು ಖ್ಯಾತ ವಕೀಲ ಹಾಗೂ ಸಾಮಾಜಿಕ ಹೋರಾಟಗಾರ ಕೆ.ಎನ್.ಜಗದೀಶ್ ಮಹಾದೇವ್‍ರವರು ಹೇಳಿದ್ದಾರೆ.

    ಬೆಂಗಳೂರಿನ ಪ್ರೆಸ್ ಕ್ಲಬ್‍ನಲ್ಲಿ ನಡೆದ ಸಮಾರಂಭದಲ್ಲಿ ಆಮ್ ಆದ್ಮಿ ಪಾರ್ಟಿಗೆ ಸೇರ್ಪಡೆಗೊಂಡ ಬಳಿಕ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಸುಮಾರು ಹತ್ತು ವರ್ಷಗಳಿಂದ ಭ್ರಷ್ಟಾಚಾರದ ವಿರುದ್ಧ ಕಾನೂನಾತ್ಮಕ ಹೋರಾಟ ಮಾಡುತ್ತಿದ್ದೇನೆ. ಇದಕ್ಕಾಗಿ ದೊಡ್ಡದೊಡ್ಡ ರಾಜಕಾರಣಿಗಳನ್ನು ಎದುರು ಹಾಕಿಕೊಂಡು ಮುನ್ನಡೆಯುತ್ತಿದ್ದೇನೆ. ಅನೇಕ ಸಂದರ್ಭಗಳಲ್ಲಿ ಕಾರ್ಮಿಕರು, ರೈತರು ಹಾಗೂ ಯುವಜನತೆಯ ನ್ಯಾಯಯುತ ಹೋರಾಟಕ್ಕೆ ಬೆಂಬಲವಾಗಿ ನಿಂತ ತೃಪ್ತಿಯಿದೆ. ನನ್ನಂತೆಯೇ ಎಎಪಿ ಕೂಡ ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಿದ್ದು, ಪಕ್ಷ ಸೇರ್ಪಡೆಯಿಂದ ನನ್ನ ಹೋರಾಟದ ಶಕ್ತಿ ಹೆಚ್ಚಾಗಲಿದೆ. ಪಕ್ಷಕ್ಕೂ ನನ್ನಿಂದ ಅನುಕೂಲವಾಗುವ ದೃಢ ವಿಶ್ವಾಸವಿದೆ ಎಂದು ಹೇಳಿದರು. ಇದನ್ನೂ ಓದಿ: ಜಾರಕಿಹೊಳಿಗೆ ಕೊರೊನಾ ಬಂದಿರುವುದು ಡೌಟ್, ಆಸ್ಪತ್ರೆಯಲ್ಲಿ ಇಲ್ಲ: ವಕೀಲ ಜಗದೀಶ್

    ದೆಹಲಿಯ ಕೇಜ್ರಿವಾಲ್ ಸರ್ಕಾರವು ಜನಪರ ಆಡಳಿತ ನೀಡುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರವು ಜನವಿರೋಧಿ ಆಡಳಿತ ನೀಡುತ್ತಿದೆ. ಕೇಜ್ರಿವಾಲ್ ಆಡಳಿತದಲ್ಲಿ ಕುಡಿಯುವ ನೀರು, ವಿದ್ಯುತ್, ವೈದ್ಯಕೀಯ ಸೌಲಭ್ಯ ಮುಂತಾದವುಗಳು ಒಂದು ಮಿತಿಯವರೆಗೆ ಉಚಿತವಾಗಿ ಸಿಗುತ್ತಿದೆ. ಆದರೆ ಮೋದಿ ಸರ್ಕಾರವು ಪೆಟ್ರೋಲ್, ಡಿಸೇಲ್, ಗ್ಯಾಸ್ ಬೆಲೆಯನ್ನು ಮನಬಂದಂತೆ ಹೆಚ್ಚಿಸುವ ಮೂಲಕ ಸಾಮಾನ್ಯ ಜನರನ್ನು ಹೈರಾಣಾಗಿಸುತ್ತಿದೆ. ಇದರ ವಿರುದ್ಧ ಹೋರಾಡಲು ಯುವಜನತೆ ಮುಂದಾಗಬೇಕು. ಭ್ರಷ್ಟ ಹಾಗೂ ಕೋಮುವಾದಿ ನಾಯಕರುಗಳೇ ತುಂಬಿರುವ ಬಿಜೆಪಿಯನ್ನು ಅಧಿಕಾರದಿಂದ ಕಿತ್ತೊಗೆಯುವ ಪ್ರತಿಜ್ಞೆ ಮಾಡಬೇಕು ಎಂದು ಕೆ.ಎನ್.ಜಗದೀಶ್ ಹೇಳಿದರು. ಇದನ್ನೂ ಓದಿ: ಆಧುನಿಕ ಮಹಿಳೆಯರು ಮದುವೆ ಆದ್ರೆ ಮಕ್ಕಳನ್ನು ಹೆರಲು ಬಯಸಲ್ಲ: ಸುಧಾಕರ್

    ಆಮ್ ಆದ್ಮಿ ಪಾರ್ಟಿಯ ರಾಜ್ಯ ಸಂಚಾಲಕರಾದ ಪೃಥ್ವಿ ರೆಡ್ಡಿಯವರು ಮಾತನಾಡಿ, ಒಳ್ಳೆಯ ಜನರು ಒಗ್ಗೂಡಿದರೆ ಸಾಮಾನ್ಯರ ಜೀವನದಲ್ಲಿ ಕ್ರಾಂತಿಕಾರಿ ಬದಲಾವಣೆಯನ್ನು ತರಬಹುದು ಎಂಬುದನ್ನು ದೆಹಲಿ ರಾಜಕೀಯವು ನಮಗೆ ತೋರಿಸಿದೆ. ದಶಕಗಳಿಂದ ನಮ್ಮ ರಾಜ್ಯದಲ್ಲಿ ಅನೇಕ ವ್ಯಕ್ತಿಗಳು ಮತ್ತು ಸಂಘಟನೆಗಳು ವಿವಿಧ ಸಮಸ್ಯೆಗಳು ಮತ್ತು ಅನ್ಯಾಯದ ವಿರುದ್ಧ ಪ್ರತ್ಯೇಕವಾಗಿ ಹೋರಾಡುತ್ತಿವೆ. ದೊಡ್ಡ ಪ್ರಮಾಣದ ಬದಲಾವಣೆ ತರಲು ಅಂಥವರೆಲ್ಲರೂ ಒಟ್ಟಾಗಿ ಸೇರುವ ಸಮಯ ಈಗ ಬಂದಿದೆ. ವಕೀಲ್ ಸಾಬ್ ಎಂದು ಪ್ರೀತಿಯಿಂದ ಕರೆಯಲ್ಪಡುವ ಕೆ.ಎನ್.ಜಗದೀಶ್‍ರವರು ಸಾಮಾನ್ಯ ಜನರಿಗಾಗಿ ಧೈರ್ಯದಿಂದ ಹೋರಾಡಿ ರಾಜ್ಯಾದ್ಯಂತ ಜನರ ಹೃದಯ ಗೆದ್ದಿದ್ದಾರೆ. ಇವರ ಸೇರ್ಪಡೆಯಿಂದ ಪಕ್ಷಕ್ಕೆ ಆನೆಬಲ ಬಂದಂತಾಗಿದೆ. ಕೆ.ಎನ್.ಜಗದೀಶ್‍ರವರಿಗೆ ಅನೇಕ ಹಿತೈಷಿಗಳು ಮತ್ತು ಅಪಾರ ಅನುಯಾಯಿಗಳಿರುವುದು ನಮ್ಮ ಧ್ವನಿಯನ್ನು ಇನ್ನಷ್ಟು ಗಟ್ಟಿಗೊಳಿಸಲು ಹಾಗೂ ಪಕ್ಷದ ಸಂದೇಶವನ್ನು ನಮ್ಮ ರಾಜ್ಯದ ಮೂಲೆಮೂಲೆಗೂ ತಲುಪಿಸಲು ಸಹಾಯ ಮಾಡುತ್ತದೆ ಎಂದು ಹೇಳಿದರು.

    ಆಮ್ ಆದ್ಮಿ ಪಾರ್ಟಿಯ ಬೆಂಗಳೂರು ನಗರದ ಅಧ್ಯಕ್ಷ ಮೋಹನ್ ದಾಸರಿ, ಹಿರಿಯ ಮುಖಂಡರಾದ ಲಕ್ಷ್ಮೀಕಾಂತ್ ರಾವ್, ನಂಜಪ್ಪ ಕಾಳೇಗೌಡ, ಕುಶಲಸ್ವಾಮಿ, ಉಷಾ ಮೋಹನ್, ಬಿ.ಟಿ.ನಾಗಣ್ಣ, ಸುರೇಶ್ ರಾಥೋಡ್, ಜಗದೀಶ್ ವಿ. ಸದಂ ಹಾಗೂ ಇತರೆ ಮುಖಂಡರು ಮತ್ತು ಕೆ.ಎನ್.ಜಗದೀಶ್‍ರವರ ಅಪಾರ ಸಂಖ್ಯೆಯ ಅಭಿಮಾನಿಗಳು ಭಾಗವಹಿಸಿದ್ದರು.

  • ಪಂಜಾಬ್ ವಿಧಾನಸಭೆ ಚುನಾವಣೆ- ಎಎಪಿಯಲ್ಲಿ ಸಿಎಂ ಅಭ್ಯರ್ಥಿಯ ಬಗ್ಗೆ ಚರ್ಚೆ ಜೋರು

    ಪಂಜಾಬ್ ವಿಧಾನಸಭೆ ಚುನಾವಣೆ- ಎಎಪಿಯಲ್ಲಿ ಸಿಎಂ ಅಭ್ಯರ್ಥಿಯ ಬಗ್ಗೆ ಚರ್ಚೆ ಜೋರು

    ನವದೆಹಲಿ: ಪಂಜಾಬ್ ಕಾಂಗ್ರೆಸ್ ನಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುತ್ತಿರುವ ಹೊತ್ತಲ್ಲಿ ಆಮ್ ಅದ್ಮಿಯಲ್ಲಿ ಮುಂದಿನ ಮುಖ್ಯಮಂತ್ರಿ ಯಾರು ಎನ್ನುವ ಚರ್ಚೆ ಜೋರಾಗುತ್ತಿದೆ. ವಿಧಾನಸಭೆ ಚುನಾವಣೆ ಸನ್ನಿಹಿತವಾಗುತ್ತಿರುವ ಹೊತ್ತಲ್ಲಿ ರಾಜಕೀಯ ಪಕ್ಷಗಳಲ್ಲಾಗುತ್ತಿರುವ ಬೆಳವಣಿಗೆ ತೀವ್ರ ಕುತೂಹಲ ಮೂಡಿಸಿದೆ.

    ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ರಾಜೀನಾಮೆ ನೀಡಿದ ಬಳಿಕ ಆಮ್ ಅದ್ಮಿ ಸೇರ್ಪಡೆಯಾಗಬಹುದು ಎಂದು ಪಂಜಾಬ್ ನಲ್ಲಿ ಚರ್ಚೆಯಾಗುತ್ತಿದೆ. ಅಲ್ಲದೆ ಅವರೇ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿಯಾಗಬಹುದು ಎನ್ನುವ ಊಹೆಗಳು ಕೇಳಿ ಬಂದಿವೆ. ಇದನ್ನೂ ಓದಿ: ಆರ್‌ಎಸ್‌ಎಸ್‌ ಸದಸ್ಯನಾಗಿದ್ದ ಡಿಕೆಶಿಯವರೇ ಸಿದ್ದರಾಮಯ್ಯನವರ ಮಾತನ್ನು ಒಪ್ಪುತ್ತೀರಾ – ಬಿಜೆಪಿ ಪ್ರಶ್ನೆ

    ಈ ಚರ್ಚೆಗಳ ಬೆನ್ನಲ್ಲೇ ಪಂಜಾಬ್ ಗೆ ಭೇಟಿ ನೀಡಿದ ದೆಹಲಿಯ ಸಿಎಂ ಮತ್ತು ಆಮ್ ಅದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್, ನವಜೋತ್ ಸಿಂಗ್ ಸಿಧು ನಮ್ಮ ಸಂಪರ್ಕದಲ್ಲಿ ಇಲ್ಲ. ಇದೊಂದು ಊಹಾತ್ಮಕ ಪಕ್ಷ ಎಂದು ಪ್ರತಿಕ್ರಿಯಿಸಿದ್ದಾರೆ.

    ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅರವಿಂದ್ ಕೇಜ್ರಿವಾಲ್, ಲೋಕಸಭಾ ಸದಸ್ಯ ಭಗವಂತ್ ಮನ್ ನನ್ನ ಕಿರಿಯ ಸಹೋದರ. ಅವರು ಪಂಜಾಬ್ ಗಾಗಿ ಸಾಕಷ್ಟು ತ್ಯಾಗ ಮಾಡಿದ್ದಾರೆ ಎಂದು ಅವರು ಶ್ಲಾಘಿಸಿದ್ದಾರೆ. ಈ ಹೇಳಿಕೆ ಇದೀಗ ಸಾಕಷ್ಟು ಕುತೂಹಲ ಮೂಡಿಸಿದ್ದು, ಭಗವಂತ್ ಮನ್ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಆಗಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.

  • ಸರ್ಕಾರಿ ಶಾಲೆಗಳನ್ನು ನಿರ್ಲಕ್ಷಿಸಿ, ಉದ್ದೇಶಪೂರ್ವಕವಾಗಿ ಖಾಸಗಿ ಶಾಲೆಗಳನ್ನು ಬೆಳೆಸಲಾಗುತ್ತಿದೆ: ರಮೇಶ್ ಕುಮಾರ್

    ಸರ್ಕಾರಿ ಶಾಲೆಗಳನ್ನು ನಿರ್ಲಕ್ಷಿಸಿ, ಉದ್ದೇಶಪೂರ್ವಕವಾಗಿ ಖಾಸಗಿ ಶಾಲೆಗಳನ್ನು ಬೆಳೆಸಲಾಗುತ್ತಿದೆ: ರಮೇಶ್ ಕುಮಾರ್

    ಬೆಂಗಳೂರು: ರಾಜ್ಯದಲ್ಲಿ ಸರ್ಕಾರಿ ಶಾಲೆಗಳನ್ನು ನಿರ್ಲಕ್ಷಿಸಲಾಗಿದೆ. ಉದ್ದೇಶ ಪೂರ್ವಕವಾಗಿ ಖಾಸಗಿ ಶಾಲೆಗಳನ್ನು ಬೆಳೆಸಲಾಗಿದೆ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಕಡಿಕಾರಿದರು.

    ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೋಷಕರ ಮನಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕು. ಅವರಿಗೆ ತಮ್ಮಂತೆ ತಮ್ಮ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಆಶಾವಾದ ಇರುತ್ತದೆ. ಈ ಕನಸಿನೊಂದಿಗೆ ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸುತ್ತಾರೆ. ಹೀಗೆ ಫೀಸ್ ಹೆಚ್ಚಾದಾಗ ಈ ರೀತಿ ಕೆಲವರು ಸಂಘಟಿತರಾಗುತ್ತಾರೆ ಎಂದರು.

    ದೆಹಲಿಯ ಶಾಲೆಗಳು ಈ ಮಟ್ಟಕ್ಕೆ ಬೆಳೆಯಲು ಮನುಷ್ಯನ ಇಚ್ಛಾಶಕ್ತಿ ಕಾರಣ. ಅಲ್ಲಿನ ಸರ್ಕಾರ ಖಾಸಗಿ ಸಂಸ್ಥೆಗಳನ್ನು ಹೊಂದಿರುವವರನ್ನು ತಮ್ಮೊಂದಿಗೆ ಸೇರಿಸಿಕೊಂಡಿಲ್ಲ. ಆ ಶಕ್ತಿ ಕರ್ನಾಟಕದ ರಾಜಕಾರಣಕ್ಕೆ ಇಲ್ಲ. ನಮಗೆ ಸರ್ಕಾರಿ, ಖಾಸಗಿ ಎಲ್ಲಾ ಸಂಸ್ಥೆಗಳು ಬೇಕು ಎನ್ನುತ್ತಿದ್ದೇವೆ. ದೆಹಲಿಯಲ್ಲಿ ಖಾಸಗಿ ಶಾಲೆಗಳಿಂದ ತಮ್ಮ ಮಕ್ಕಳನ್ನು ತೆಗೆದು ಸರ್ಕಾರಿ ಶಾಲೆಗಳಿಗೆ ಸೇರಿಸುತ್ತಿದ್ದಾರೆ. ಇದನ್ನು ನಮ್ಮ ರಾಜ್ಯದಲ್ಲಿ ಜಾರಿಗೊಳಿಸಲು ನಮ್ಮ ರಾಜ್ಯದಲ್ಲಿ ಹಣವಿಲ್ಲವೆಂದಲ್ಲ, ಇಚ್ಛಾಶಕ್ತಿ ಬೇಕು ಎಂದರು. ಇದನ್ನೂ ಓದಿ:  ಡಿಕೆಶಿ, ಸಿದ್ದರಾಮಯ್ಯ ಇನ್ನು 20 ವರ್ಷ ನಿರುದ್ಯೋಗಿಗಳು: ಕಟೀಲ್

    ದೇಶ, ಜನರನ್ನು ಪ್ರೀತಿಸುವ ನಾವು ಒಳ್ಳೆಯ ಬೆಳವಣಿಗೆಗಳನ್ನು ಬೆಂಬಲಿಸಬೇಕು. ಆಗ ಒಳ್ಳೆಯ ಜನ ಪ್ರತಿನಿಧಿಗಳಾಗಲು ಸಾಧ್ಯ. ನಾನು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದನ್ನು ಹುಚ್ಚು ಎಂದು ಮೂದಲಿಸುವವರು ಇದ್ದಾರೆ. ಇಳ್ಳೆಯ ಉದ್ದೇಶ ಇರುವ ಈ ಹುಚ್ಚಿನಲ್ಲಿಯೇ ಇರಲು ನಾನು ಇಷ್ಟಪಡುತ್ತೇನೆ. ಈ ಸಂದರ್ಭದಲ್ಲಿ ನಾನು ನಿಮ್ಮೊಂದಿಗೆ ಇದ್ದೇನೆ ಎನ್ನುವ ಭರವಸೆ ನೀಡಲು ಬಂದಿದ್ದೇನೆ. ಈ ಹೋರಾಟವನ್ನು ಬೆಳೆಸಿ ಒಂದು ಹೊಸ ರೂಪ ನೀಡೋಣ. ನಮ್ಮ ನಾಯಕರ ಅಲಕ್ಷ್ಯ ಮನೋಭಾವದಿಂದ ನಮ್ಮ ನೋವುಗಳನ್ನು ಕೇಳಲು ಅವರು ತಯಾರಿಲ್ಲ. ನಾವು ಅವರನ್ನು ಮನುಷ್ಯರನ್ನಾಗಿ ಮಾಡಬೇಕಿದೆ ಎಂದರು.

    ನಿಷ್ಕ್ರಿಯಗೊಂಡಿದ್ದ ಖಾಸಗಿ ವೈದ್ಯಕೀಯ ಶಿಕ್ಷಣ ಸಂಸ್ಥೆಗಳಿಗೆ ಸಂಬಂಧಪಟ್ಟ ಶಾಸನಕ್ಕೆ ಮರುಜೀವ ನೀಡಲು ನಾನು ಹೊರಟಾಗ ಎಲ್ಲ ಪಕ್ಷಗಳೂ ವಿರೋಧಮಾಡಿದವು. ನನ್ನ ಸ್ಥಿತಿ ಚಕ್ರವ್ಯೂಹದಲ್ಲಿ ಸಿಕ್ಕಿಹಾಕಿಕೊಂಡ ಅಭಿಮನ್ಯುವಿನಂತಾಗಿತ್ತು. ಹೈಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಸಲ್ಲಿಸಲಾಯಿತು. ನಮ್ಮ ಅಹವಾಲು ಇದ್ದದ್ದು ಆ ಶಾಸನದಲ್ಲಿ ಇದ್ದಂತೆ ಸಾವನ್ನಪ್ಪಿದ ರೋಗಿಯ ಮನೆಯವರಿಗೆ ಹಣದ ಅಗತ್ಯ ಇದ್ದಲ್ಲಿ ಹಣ ನೀಡಬೇಕು ಎಂಬುದು. ಮುಖ್ಯ ನ್ಯಾಯಾಧೀಶರು ತಕ್ಷಣ ಆದೇಶ ನೀಡಿದರು. ನಮಗೆ ಇನ್ನೊಬ್ಬರ ಸಾವಿನ ಬಗ್ಗೆ ಕರುಣೆಯೇ ಇಲ್ಲದಂತಾಗಿದೆ ಎಂದರು. ಇದನ್ನೂ ಓದಿ: ಒಳ್ಳೆಯ ಕೆಲಸ ಮಾಡಿದ್ದರೆ ಯಡಿಯೂರಪ್ಪರನ್ನ ಸಿಎಂ ಸ್ಥಾನದಿಂದ ಇಳಿಸುತ್ತಿರಲಿಲ್ಲ: ಡಿಕೆಶಿ

    ಇದೇ ರೀತಿ ಎಲ್ಲ ಪಕ್ಷಗಳಲ್ಲಿ ಶಿಕ್ಷಣ ಸಂಸ್ಥೆಗಳನ್ನು ಹೊಂದಿರುವ ನಾಯಕರು ಇದ್ದಾರೆ. ಹೀಗಾಗಿ ಇವರು ಪೋಷಕರ ಸಮಸ್ಯೆಗಳನ್ನು ಆಲಿಸುತ್ತಿಲ್ಲ. ಇದಕ್ಕೆ ವ್ಯಾಪಕ ಚಳುವಳಿಯ ಅಗತ್ಯವಿದೆ. ನಾವು ಕೇಳಬೇಕಾಗಿರುವುದು ಇಷ್ಟೇ, ದೆಹಲಿಯ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯಲ್ಲಿ ಆಗಿದ್ದು ನಮ್ಮಲ್ಲಿ ಯಾಕೆ ಸಾಧ್ಯವಿಲ್ಲ? ನಮ್ಮ ನಾಯಕರಲ್ಲಿ ಇಷ್ಟನ್ನೇ ಕೇಳಬೇಕಿದೆ. ನನಗೆ ದೇಶ, ಜನ ಮುಖ್ಯ, ಹಾಗಾಗಿ ಒಳ್ಳೆಯದನ್ನು ಬೆಂಬಲಿಸುತ್ತಿದ್ದೇನೆ ಎಂದು ತಿಳಿಸಿದರು.

    ನಮ್ಮ ರಾಜ್ಯದಲ್ಲಿ ಕಟ್ಟುನಿಟ್ಟಾದ ಕ್ರಮಗಳನ್ನು ಜಾರಿಗೊಳಿಸಬೇಕು. ಫೀಸ್ ಹೆಚ್ಚಳವನ್ನು ಪ್ರಶ್ನಿಸಬೇಕು. ಇದಕ್ಕಾಗಿ ನಿರಾಶರಾಗದೆ ಹೋರಾಡಬೇಕು. ಆಮ್ ಆದ್ಮಿ ಪಾರ್ಟಿಯ ಸಂಗಾತಿಗಳ ಬಗ್ಗೆ ನನಗೆ ಹೆಮ್ಮೆ ಇದೆ. ಕಮಿಷನ್ ಗಾಗಿ ಟೊಪಿ ಹಾಕಿಕೊಂಡು ಪಾರ್ಟಿಯನ್ನು ಸೇರಿಲ್ಲ. ನೀವು ಭಾರತೀಯ ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆಯಲು ಹೊರಟಿದ್ದೀರಿ. ನಾನು ಇಲ್ಲಿಗೆ ಬಂದಿರುವುದು ಆಮ್ ಆದ್ಮಿಯ ಜೊತೆಗೆ ಇರುಲು. ಪಾರ್ಟಿ ಯಾವುದೇ ಆದರೂ ಆಮ್ ಆದ್ಮಿಯ ಸೇವೆ ಮಾಡಬೇಕು ಎಂದರು.

  • ಶಾಲಾ ಶುಲ್ಕ ಪಾವತಿ- ಸರ್ಕಾರದ ನೆರವಿಗೆ ಪೋಷಕರ ಆಗ್ರಹ

    ಶಾಲಾ ಶುಲ್ಕ ಪಾವತಿ- ಸರ್ಕಾರದ ನೆರವಿಗೆ ಪೋಷಕರ ಆಗ್ರಹ

    ಬೆಂಗಳೂರು: ಮಕ್ಕಳ ಶಾಲಾ ಶುಲ್ಕ ಪಾವತಿಸಲು ಸರ್ಕಾರ ಸಹಾಯ ಮಾಡಬೇಕೆಂದು ಆಮ್ ಆದ್ಮಿ ಪಾರ್ಟಿ ಆಯೋಜಿಸಿದ್ದ ಚಿಂತನ-ಮಂಥನ ಕಾರ್ಯಕ್ರಮದಲ್ಲಿ ನೂರಾರು ಪೋಷಕರು ಆಗ್ರಹಿಸಿದ್ದಾರೆ.

    ಕಳೆದ ಒಂದೂವರೆ ವರ್ಷಗಳಲ್ಲಿ ಲಾಕ್‍ಡೌನ್‍ನಿಂದಾಗಿ ಆದಾಯ ಹಾಗೂ ಉಳಿತಾಯವನ್ನು ಕಳೆದುಕೊಂಡು ಪೋಷಕರು ಸಂಕಷ್ಟದಲ್ಲಿದ್ದಾರೆ. ಈಗ ಸರ್ಕಾರವು ಅವರಿಗೆ ಸಹಾಯ ಮಾಡದಿದ್ದರೆ ಅನೇಕರಿಗೆ ತಮ್ಮ ಮಕ್ಕಳನ್ನು ಮರಳಿ ಶಾಲೆಗೆ ಕಳುಹಿಸಲು ಸಾಧ್ಯವಾಗುವುದಿಲ್ಲ ಎಂದು ಪೋಷಕರು ಅಳಲು ತೋಡಿಕೊಂಡರು. ಪತಿ ಹಾಗೂ ತಂದೆಯನ್ನು ಕಳೆದುಕೊಂಡಿರುವ ನಾನು ಇಬ್ಬರು ಮಕ್ಕಳನ್ನು ಓದಿಸಲು ಹಲವು ಮನೆಗಳಲ್ಲಿ ಕೆಲಸ ಮಾಡುತ್ತಿದ್ದೇನೆ. ಲಾಕ್‍ಡೌನ್‍ನಿಂದಾಗಿ ನನಗೆ ಒಂದೂವರೆ ವರ್ಷ ಉದ್ಯೋಗವಿರಲಿಲ್ಲ. ನಾನು ಮಕ್ಕಳ ಶಾಲಾ ಶುಲ್ಕ ಪಾವತಿಸಲು ಹೇಗೆ ಸಾಧ್ಯ? ಎಂದು ಪೋಷಕರಾದ ಪವಿತ್ರ ಚಿಂತನ-ಮಂಥನ ಕಾರ್ಯಕ್ರಮದಲ್ಲಿ ಪ್ರಶ್ನಿಸಿದರು.

    ಕಾರ್ಯಕ್ರಮದಲ್ಲಿ ಮಾತನಾಡಿದ ವಿಧಾನಸಭೆಯ ಮಾಜಿ ಸಭಾಧ್ಯಕ್ಷರಾದ ಕೆ.ಆರ್.ರಮೇಶ್ ಕುಮಾರ್, ಪೋಷಕರಿಗೆ ನೆರವಾಗಲು ಸರ್ಕಾರ ಏನನ್ನಾದರೂ ಮಾಡಲೇ ಬೇಕು. ದೀರ್ಘಾವಧಿಯಲ್ಲಿ, ಸರ್ಕಾರಿ ಶಾಲೆಗಳನ್ನು ಸರ್ಕಾರ ಅಭಿವೃದ್ಧಿ ಪಡಿಸಬೇಕು ಎಂದು ಅಭಿಪ್ರಾಯವ್ಯಕ್ತಪಡಿಸಿದರು. ಇದನ್ನೂ ಓದಿ: ಬಸ್‍ನಲ್ಲಿ ನಿದ್ದೆ ಮಾಡುವ ಅಭ್ಯಾಸ ಇದೆಯೇ?- ಈ ಸುದ್ದಿ ಓದಿ

    ಆಮ್ ಆದ್ಮಿ ಪಾರ್ಟಿಯ ರಾಜ್ಯ ಸಂಚಾಲಕ ಪೃಥ್ವಿ ರೆಡ್ಡಿ ಮಾತನಾಡಿ, ಕಾನೂನಿನ ಪ್ರಕಾರ ಗುಣಮಟ್ಟದ ಹಾಗೂ ಉಚಿತ ಶಿಕ್ಷಣ ಪಡೆಯುವ ಹಕ್ಕನ್ನು ಮಕ್ಕಳು ಹೊಂದಿದ್ದಾರೆ. ಆದರೆ ಬಿಜೆಪಿ ಸರ್ಕಾರವು ಈ ಸಂಕಷ್ಟದ ಸಮಯದಲ್ಲಿ ಪೋಷಕರಿಗೆ ನೆರವಾಗಲು ನಿರ್ಲಕ್ಷ್ಯ ತೋರುತ್ತಿದೆ. ಅವರ ಬೇಡಿಕೆಗಳನ್ನು ಕೇಳಿ ನೆರವಾಗಲು ಸರ್ಕಾರ ಮುಂದಾಗಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ:  ಮಳೆಗಾಗಿ ಭಕ್ತನಿಂದ ಆಂಜನೇಯನಿಗೆ ಪ್ರಾರ್ಥನೆ – ಹೂ ಪ್ರಸಾದ ನೀಡಿದ ಹನುಮಂತ

    ಬೆಂಗಳೂರು ನಗರದ ಎಎಪಿ ಅಧ್ಯಕ್ಷರಾದ ಮೋಹನ್ ದಾಸರಿ ಮಾತನಾಡಿ, ಇಲ್ಲಿ ಕೇಳಿಬಂದ ಪೋಷಕರ ಬೇಡಿಕೆಗಳನ್ನು ನಾವು ಶಿಕ್ಷಣ ಸಚಿವ ಬಿ.ಸಿ.ನಾಗೇಶ್‍ರವರಿಗೆ ತಲುಪಿಸುತ್ತೇವೆ. ಹಾಗೂ ಶಾಲಾ ಶುಲ್ಕಕ್ಕೆ ಸಂಬಂಧಿಸಿ ಪೋಷಕರಿಗೆ ನೆರವಾಗುವಂತಹ ವಿಸ್ತೃತ ಯೋಜನೆಯನ್ನು ಶೀಘ್ರದಲ್ಲೇ ರೂಪಿಸಬೇಕು ಹಾಗೂ ಪರಿಣಾಮಕಾರಿಯಾದ ಶಾಲಾ ನಿರ್ವಹಣಾ ಸಮಿತಿಗಳನ್ನು ರಚಿಸಬೇಕೆಂದು ಆಗ್ರಹಿಸುತ್ತೇವೆ. ದೆಹಲಿಯ ಎಎಪಿ ಸರ್ಕಾರವು ಅಲ್ಲಿನ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸಿದ ಮಾದರಿಯಲ್ಲೇ ಇಲ್ಲೂ ಕೂಡ ಶಾಲೆಗಳನ್ನು ಅಭಿವೃದ್ಧಿ ಪಡಿಸಬೇಕೆಂದು ಒತ್ತಾಯಿಸುತ್ತೇವೆ ಎಂದು ತಿಳಿಸಿದರು.

    ಪೋಷಕರ ಸಂಘಟನೆಗಳು, ಸಮನ್ವಯ ಸಮಿತಿ ಹಾಗೂ ವಾಯ್ಸ್ ಆಫ್ ಪೇರೆಂಟ್ಸ್ ಸಂಘಟನೆಗಳು ಸರ್ಕಾರವು ನೆರವು ನೀಡದಿರುವುದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದವು. ತಮಗೆ ಬೆಂಬಲವಾಗಿರುವ ಎಎಪಿಯನ್ನು ಪೋಷಕರು ಶ್ಲಾಘಿಸಿದರು.