ಗಾಂಧೀನಗರ: ಗುಜರಾತ್‍ನ ಅಹಮದಾಬಾದ್‍ನಲ್ಲಿರುವ ಮಹಾತ್ಮ ಗಾಂಧಿ ಅವರ ಸಬರಮತಿ ಆಶ್ರಮಕ್ಕೆ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಭೇಟಿ ನೀಡಿದರು.
ಮುಂಬರುವ ಗುಜರಾತ್ ಚುನಾವಣೆ ಮೇಲೆ ಹೆಚ್ಚು ಗಮನ ಹರಿಸಿರುವ ಈ ಇಬ್ಬರು ನಾಯಕರು ಇಂದು ಗಾಂಧೀಜಿ ಅವರ ಆಶ್ರಮದಲ್ಲಿ ಚರಕ ಹಿಡಿದು ನೂಲು ತೆಗೆದರು. ಅಹಮದಾಬಾದ್ ಪ್ರವಾಸ ಕೈಗೊಂಡಿರುವ ಇಬ್ಬರು ನಾಯಕರು ಈ ವರ್ಷದ ಡಿಸೆಂಬರ್‍ನಲ್ಲಿ ನಡೆಯಲಿರುವ ಗುಜರಾತ್ ವಿಧಾನಸಭಾ ಚುನಾವಣೆ ಮೇಲೆ ಕಣ್ಣಿಟ್ಟಿದ್ದಾರೆ. ಕಳೆದ ವರ್ಷ, ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ತಮ್ಮ ಪಕ್ಷವು ರಾಜ್ಯ ಚುನಾವಣೆಯಲ್ಲಿ ಎಲ್ಲಾ 182 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ ಎಂದು ತಿಳಿಸಿದ್ದರು.
ಇತ್ತೀಚೆಗೆ ನಡೆದ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಎಎಪಿ ಪಕ್ಷವು ಭರ್ಜರಿ ಗೆಲುವನ್ನು ಸಾಧಿಸಿತ್ತು.
ನವದೆಹಲಿ: ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಮನೆಯ ಮೇಲೆ ನಡೆದ ದಾಳಿಗೆ ಸಂಬಂಧಿಸಿದಂತೆ 8 ಜನರನ್ನು ದೆಹಲಿ ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಬುಧವಾರ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ನಿವಾಸದ ಮೇಲೆ ದುಷ್ಕರ್ಮಿಗಳ ಗುಂಪೊಂದು ದಾಳಿ ನಡೆಸಿತ್ತು. ದೆಹಲಿ ಸಿಎಂ ಕೇಜ್ರಿವಾಲ್ ಅವರ ನಿವಾಸದ ಭದ್ರತಾ ಆಸ್ತಿಗಳನ್ನು ಬಿಜೆಪಿ ಕಾರ್ಯಕರ್ತರು ಧ್ವಂಸಗೊಳಿಸಿದ್ದಾರೆ. ಸಿಸಿಟಿವಿ ಕ್ಯಾಮೆರಾಗಳು ಹಾಗೂ ಭದ್ರತಾ ತಡೆಗೋಡೆಗಳು ಧ್ವಂಸವಾಗಿದೆ. ಈ ಮೂಲಕ ಕೇಜ್ರಿವಾಲ್ ಹತ್ಯೆಗೆ ಬಿಜೆಪಿ ಯತ್ನಿಸಿದೆ ಎಂದು ಆಪ್ ಮುಖಂಡರು ಆರೋಪಿಸಿದ್ದರು.
ಇತ್ತೀಚೆಗೆ ಬಿಡುಗಡೆಯಾಗಿದ್ದ ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಕುರಿತು ಕೇಜ್ರಿವಾಲ್ ವಿರೋಧವಾಗಿ ಹೇಳಿಕೆ ನೀಡಿದ್ದರು. ಇದಕ್ಕಾಗಿ ಅವರ ನಿವಾಸದ ಮುಂದೆ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಭದ್ರತಾ ತಡೆಗೋಡೆ ಹಾಗೂ ಸಿಸಿಟಿವಿ ಕ್ಯಾಮೆರಾಗಳು ಧ್ವಂಸಗೊಂಡಿದೆ ಎಂಬ ಆರೋಪ ಕೇಳಿ ಬಂದಿದೆ. ಇದನ್ನೂ ಓದಿ:ಕೇಜ್ರಿವಾಲ್ ತಪ್ಪಿಸಿಕೊಳ್ಳಲು ಇರುವ ಒಂದೇ ಮಾರ್ಗ ಬಲಿಪಶು: ಗಂಭೀರ್
ಘಟನೆ ಸಂಬಂಧಿಸಿ ಇನ್ನೂ ಕೆಲವರ ಪತ್ತೆಗಾಗಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದಕ್ಕಾಗಿದೆಯೇ 6 ಪೊಲೀಸರ ತಂಡವೊಂದು ಘಟನೆಗೆ ಸಂಬಂಧಿಸಿ ತನಿಖೆ ಕೈಗೊಂಡಿದೆ. ಇದನ್ನೂ ಓದಿ: ಕೇಜ್ರಿವಾಲ್ ಹತ್ಯೆಗೆ ಬಿಜೆಪಿ ಯತ್ನ – ಎಎಪಿ ಆರೋಪ
ನವದೆಹಲಿ: `ದಿ ಕಾಶ್ಮೀರ್ ಫೈಲ್ಸ್’ ಸಿನಿಮಾಗೆ ತೆರಿಗೆ ವಿನಾಯಿತಿ ನೀಡಬೇಕೆಂದು ಕೇಳುತ್ತಿದ್ದಾರೆ. ನಿರ್ದೇಶಕರು ಸಿನಿಮಾವನ್ನು ಯೂಟ್ಯೂಬ್‌ಗೆ ನೀಡಲಿ. ಉಚಿತವಾಗಿ ಸಿನಿಮಾ ನೋಡಬಹುದು ಎಂದು ಚಾಟಿ ಬೀಸಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಹೇಳಿಕೆಗೆ ದಿ ಕಾಶ್ಮೀರ್ ಫೈಲ್ಸ್ ಸಿನಿಮಾದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಮಾಡಿರುವ ಟ್ವೀಟ್ ಒಂದನ್ನು ತಮ್ಮ ಖಾತೆಯಲ್ಲಿ ರಿಟ್ವೀಟ್ ಮಾಡುವ ಮೂಲಕ ಆಮ್ ಆದ್ಮಿ ಪಕ್ಷದ ತತ್ವ ಸಿದ್ಧಾಂತಗಳನ್ನೂ ಪ್ರಶ್ನಿಸಿದ್ದಾರೆ. ಅರವಿಂದ ಕೇಜ್ರಿವಾಲ್ ಅವರು ಕಠಿಣ ದೇಶಭಕ್ತಿ, ಪ್ರಾಮಾಣಿಕತೆ, ಮಾನವೀಯತೆ ಆಮ್ ಆದ್ಮಿ ಪಕ್ಷದ ಸಿದ್ಧಾಂತದ ಆಧಾರ ಸ್ತಂಭಗಳು ಎಂದು ಕೆಲದಿನಗಳ ಹಿಂದೆಯಷ್ಟೇ ಟ್ವೀಟ್ ಮಾಡಿದ್ದರು. ಇದಕ್ಕೆ ಟಾಂಗ್ ನೀಡಿರುವ ಅಗ್ನಿಹೋತ್ರಿ ಅವರು ಮಾನವೀಯತೆ ಇರುವುದು ನಿಜವೇ? ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಬೇಕಿದ್ರೆ ʻದಿ ಕಾಶ್ಮೀರ್ ಫೈಲ್ಸ್ʼನ್ನು ಯೂಟ್ಯೂಬ್‌ಗೆ ಹಾಕಲಿ: ತೆರಿಗೆ ವಿನಾಯಿತಿ ಕೇಳಿದ ಬಿಜೆಪಿಗೆ ಕೇಜ್ರಿವಾಲ್ ಟಾಂಗ್
ನಟ ಅನುಪಮ್ ಖೇರ್ ಕೂಡ ಕೇಜ್ರಿವಾಲ್ ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿದ್ದು, ಕೇಜ್ರಿವಾಲ್ ಹೇಳಿಕೆಯ ನಂತರ, ಪ್ರತಿಯೊಬ್ಬ ನಿಜವಾದ ಭಾರತೀಯರು ಈ ಚಿತ್ರವನ್ನು ಥಿಯೇಟರ್‌ಗೇ ಹೋಗಿ ನೋಡಬೇಕು ಎಂದು ನಾನು ಭಾವಿಸುತ್ತೇನೆ. ಈಗಾಗಲೇ ಸಿನಿಮಾ ಕಾಶ್ಮೀರದಿಂದ ಹೆಚ್ಚಿನ ಜನರೊಂದಿಗೆ ಸಂಪರ್ಕ ಸಾಧಿಸುತ್ತಿದೆ ಎಂದಿದ್ದಾರೆ. ಇದನ್ನೂ ಓದಿ: ʼದಿ ಕಾಶ್ಮೀರ್ ಫೈಲ್ಸ್ʼ ನೋಡಿ, ಆದ್ರೆ ಮುಸ್ಲಿಮರನ್ನು ದ್ವೇಷಿಸಬೇಡಿ: ಮೆಹಬೂಬಾ ಮುಫ್ತಿ
ಈಚೆಗಷ್ಟೇ ವಿಧಾನ ಸಭೆಯಲ್ಲಿ ಮಾತನಾಡಿದ ಕೇಜ್ರಿವಾಲ್ ಅವರು, ನಿರ್ದೇಶಕರು ಸಿನಿಮಾವನ್ನು ಯೂಟ್ಯೂಬ್‌ಗೆ ನೀಡಲಿ. ಉಚಿತವಾಗಿ ಸಿನಿಮಾ ನೋಡಬಹುದು. ನಮ್ಮನ್ನು ತೆರಿಗೆ ಮುಕ್ತ ಮಾಡಿ ಎಂದು ಏಕೆ ಕೇಳುತ್ತಿದ್ದೀರಿ? ಅಷ್ಟು ಉತ್ಸುಕರಾಗಿದ್ದರೆ ವಿವೇಕ್ ಅಗ್ನಿಹೋತ್ರಿಯವರಿಗೆ ಯೂಟ್ಯೂಬ್‌ನಲ್ಲಿ ಹಾಕಲು ಹೇಳಿ, ಎಲ್ಲಾ ಉಚಿತವಾಗಿರುತ್ತದೆ. ಎಲ್ಲರೂ ಅದನ್ನು ಒಂದು ದಿನದಲ್ಲಿ ನೋಡಬಹುದು. ಆಗ ತೆರಿಗೆ ಮುಕ್ತ ಮಾಡುವ ಅಗತ್ಯವಾದರೂ ಏಕೆ ಬರುತ್ತದೆ? ಎಂದು ಪ್ರಶ್ನಿಸಿದ್ದರು.
— Vivek Ranjan Agnihotri (@vivekagnihotri) March 29, 2022
ಕೇಜ್ರಿವಾಲ್ ಅವರು ದಿ ಕಾಶ್ಮೀರ್ ಫೈಲ್ಸ್ ಚಿತ್ರದ ಬಗ್ಗೆ ಮಾತನಾಡುವಾಗ ನಗುತ್ತಿದ್ದರು ಮತ್ತು ಆ ಮೂಲಕ ಕಾಶ್ಮೀರಿ ಪಂಡಿತರ ನೋವನ್ನು ಅವಮಾನಿಸಿದ್ದಾರೆ ಎಂಬ ಕಾರಣಕ್ಕೆ ಸಭೆಯಲ್ಲಿದ್ದ ರಾಜ್ಯದ ಮಂತ್ರಿಗಳೇ ತೀವ್ರವಾಗಿ ಟೀಕಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಕೇಜ್ರಿವಾಲ್, ನಮಗೆ ಕಾಶ್ಮೀರಿ ಪಂಡಿತರು ಮುಖ್ಯವೇ ಹೊರತು ಚಲನಚಿತ್ರವಲ್ಲ. ಬಿಜೆಪಿಯವರಿಗೆ ಕಾಶ್ಮೀರಿ ಫೈಲ್ಸ್ ಮುಖ್ಯವಾಗಬಹುದು, ಆದರೆ ನಮಗೆ ಕಶ್ಮೀರಿ ಪಂಡಿತರು ಮುಖ್ಯ. ನಾನು ಕೇಂದ್ರದಲ್ಲಿ ಇದ್ದಿದ್ದರೆ ಅವರ ಕುರಿತು ಸಿನಿಮಾ ಮಾಡುತ್ತಿರಲಿಲ್ಲ. ಅವರ ಕೈ ಹಿಡಿದು ಕಾಶ್ಮೀರಕ್ಕೆ ಕರೆದೊಯ್ದುತ್ತಿದ್ದೆ ಎಂದು ಕೇಜ್ರಿವಾಲ್ ಹೇಳಿದ್ದರು.
ಬೆಂಗಳೂರು: ಸಿಲಿಕಾನ್ ಸಿಟಿ ಭೂಮಾಫಿಯಾಗೆ ಕಂದಾಯ ಸಚಿವ ಆರ್.ಅಶೋಕ್ ಬೆನ್ನೆಲುಬಾಗಿದ್ದು, ಅಕ್ರಮದಲ್ಲಿ ಭಾಗಿಯಾದ ಅಧಿಕಾರಿಗಳನ್ನು ಅವರು ರಕ್ಷಿಸುತ್ತಿದ್ದಾರೆ ಎಂದು ಆಮ್ ಆದ್ಮಿ ಪಾರ್ಟಿ ಆರೋಪಿಸಿದೆ.
ಕಾನೂನುಬಾಹಿರವಾಗಿ ಮನೆ ಹಾಗೂ ಮಳಿಗೆಗಳನ್ನು ಕಡೆವಿಸಿದ್ದಾರೆ. ಬೆಂಗಳೂರು ದಕ್ಷಿಣ ತಾಲೂಕಿನ ದೊಡ್ಡತೋಗುರು ಗ್ರಾಮದ ಸರ್ವೇ ನಂಬರ್ 152/1ರಲ್ಲಿ ಈ ಘಟನೆ ನಡೆದಿದೆ. ಪ್ರಕರಣದ ಸಂತ್ರಸ್ತರು ಹೈಕೋರ್ಟ್ ಮೆಟ್ಟಿಲೇರಿದಾಗ, ಇಬ್ಬರು ಅಧಿಕಾರಿಗಳು ಅಕ್ರಮ ಎಸಗಿರುವುದು ಸಾಬೀತಾಗಿದೆ. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಹೈಕೋರ್ಟ್ ಆದೇಶ ನೀಡಿದೆ. ಆದರೆ ಕಂದಾಯ ಸಚಿವ ಆರ್.ಅಶೋಕ್‍ರವರ ಪ್ರಭಾವದಿಂದಾಗಿ ತಪ್ಪಿತಸ್ಥ ಅಧಿಕಾರಿಗಳಿಗೆ ಯಾವುದೇ ಶಿಕ್ಷೆಯಾಗಿಲ್ಲ ಎಂದು ಹೇಳಿದ್ದಾರೆ.
ಆಮ್ ಆದ್ಮಿ ಪಾರ್ಟಿಯ ಕಾನೂನು ಘಟಕದ ಅಧ್ಯಕ್ಷ ನಂಜಪ್ಪ ಕಾಳೇಗೌಡ ಮಾತನಾಡಿ, ಆರ್.ಅಶೋಕ್‍ರವರು ಸಚಿವರಾದಾಗಿನಿಂದ ಬೆಂಗಳೂರಿನಲ್ಲಿ ಭೂಮಾಫಿಯಾ ಹಾವಳಿ ಜಾಸ್ತಿಯಾಗುತ್ತಿದೆ. ಅಕ್ರಮವಾಗಿ ಜಮೀನನ್ನು ವಶಪಡಿಸಿಕೊಳ್ಳುವುದು, ಬೆದರಿಕೆ ಒಡ್ಡಿ ಒಕ್ಕಲೆಬ್ಬಿಸುವುದು ಮುಂತಾದ ಅಕ್ರಮಗಳು ಎಗ್ಗಿಲ್ಲದೇ ಸಾಗುತ್ತಿವೆ. ಕಂದಾಯ ಇಲಾಖೆಯ ಅಧಿಕಾರಿಗಳೇ ಭೂಮಾಫಿಯಾಗೆ ಸಹಕಾರ ನೀಡುತ್ತಿದ್ದಾರೆ. ಇದರಿಂದಾಗಿ ಬಡ ಹಾಗೂ ಮಧ್ಯಮ ವರ್ಗದ ಸಾಮಾನ್ಯ ಜನರು ಆತಂಕದಲ್ಲಿ ಬದುಕುವಂತಾಗಿದೆ ಎಂದು ಹೇಳಿದರು. ಇದನ್ನೂ ಓದಿ: ಪರವಾನಿಗೆ ಇಲ್ಲದೆ ಬಂದೂಕುಗಳನ್ನು ಹೊಂದಲು ಕೊಡವರಿಗೆ ಅವಕಾಶ- ರಾಜ್ಯಕ್ಕೆ ಸುಪ್ರೀಂ ನೋಟಿಸ್
ನವದೆಹಲಿ: ಆಮ್‌ಆದ್ಮಿ ಪಕ್ಷದ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ನೇತೃತ್ವದ ಸರ್ಕಾರದಿಂದ 2022-23ನೇ ಸಾಲಿನ ಬಜೆಟ್ ಮಂಡನೆಯಾಗಿದ್ದು, ಈ ಬಾರಿ ಉದ್ಯೋಗಕ್ಕೆ ಹೆಚ್ಚು ಒತ್ತು ನೀಡಲಾಗಿದೆ. ಉಪಮುಖ್ಯಮಂತ್ರಿ ಮನಿಶ್ ಸಿಸೋಡಿಯಾ 75,800 ಕೋಟಿ ರೂ. ಗಾತ್ರ ಬಜೆಟ್ ಮಂಡನೆ ಮಾಡಿದ್ದಾರೆ.
ಆಪ್ ಸರ್ಕಾರವು 2014ರಲ್ಲಿ 30,940 ಕೋಟಿ ರೂ. ಹಾಗೂ 2021-22ರಲ್ಲಿ 69 ಸಾವಿರ ಕೋಟಿ ರೂ. ಗಾತ್ರದ ಬಜೆಟ್ ಮಂಡಿಸಿತ್ತು. ಆದರೆ, ಈ ಬಾರಿ 2014ಕ್ಕಿಂತಲೂ ಶೇ.50 ರಷ್ಟು ಹಾಗೂ ಕಳೆದ ಸಾಲಿಗಿಂತಲೂ ಶೇ.9.86 ರಷ್ಟು ಹೆಚ್ಚು ಗಾತ್ರದ ಬಜೆಟ್ ಮಂಡಿಸಿದೆ. ಇದನ್ನೂ ಓದಿ: ನಾನು ವಿಶ್ವದ ಸ್ವೀಟೆಸ್ಟ್ ಭಯೋತ್ಪಾದಕ: ಅರವಿಂದ್ ಕೇಜ್ರಿವಾಲ್
ಇದು ಬಜೆಟ್ ಮಂಡಿಸಿದ ಮನಿಷ್ ಸಿಸೋಡಿಯಾ ಮಾತನಾಡಿ, ಆಪ್ ಸರ್ಕಾರವು ಕಳೆದ 7 ವರ್ಷಗಳಲ್ಲಿ 1.78 ಲಕ್ಷ ಯುವಸಮೂಹಕ್ಕೆ ಖಾಯಂ ಉದ್ಯೋಗ ಕಲ್ಪಿಸಿದೆ. ಈ ಬಾರಿಯೂ `ರೋಜ್‌ಗಾರ್’ ಬಜೆಟ್ ಮಂಡಿಸಿದ್ದು ಮುಂದಿನ 5 ವರ್ಷದಲ್ಲಿ 20 ಲಕ್ಷ ಉದ್ಯೋಗ ಕಲ್ಪಿಸುವ ಗುರಿ ಹೊಂದಲಾಗಿದೆ. ಚಿಲ್ಲರೆ ವ್ಯಾಪಾರ ವಲಯ, ಆಹಾರ ಮತ್ತು ಪಾನಿಯ, ಪೂರೈಕೆ ಸರಪಳಿ, ಪ್ರವಾಸೋದ್ಯಮ, ಮನರಂಜನೆ, ಕನ್‌ಸ್ಟಕ್ಷನ್ಸ್, ರಿಯಲ್‌ಎಸ್ಟೇಟ್, ಹಸಿರು ವಲಯಗಳಲ್ಲಿ ಉದ್ಯೋಗ ಸೃಷ್ಟಿಸುವ ಮೂಲಕ ಒಟ್ಟು ದುಡಿಯುವ ವರ್ಗದ ಸಂಖ್ಯೆಯನ್ನು ಶೇ.33-45ಕ್ಕೆ ಹೆಚ್ಚಿಸಲು ಉದ್ದೇಶಿಸಲಾಗಿದೆ ಎಂದು ಹೇಳಿದರು. ಇದನ್ನೂ ಓದಿ: ಅರವಿಂದ್ ಕೇಜ್ರಿವಾಲ್‍ರಿಂದ ದೆಹಲಿ ಜನತೆಗೆ ಉಚಿತ ವಿದ್ಯುತ್
ದೆಹಲಿಯನ್ನು ಪ್ರವಾಸೋದ್ಯಮ ಆಕರ್ಷಿತ ಕೇಂದ್ರವಾಗಿ ಮಾಡಬೇಕಿದೆ. ಅದಕ್ಕಾಗಿ 100 ಕೋಟಿ ರೂ. ಮೀಸಲಿಡಲಾಗಿದೆ. ಜೊತೆಗೆ ಮುಂದಿನ 5 ವರ್ಷಗಳಲ್ಲಿ ಕನಿಷ್ಠ 1.5 ಲಕ್ಷ ಉದ್ಯೋಗಗಳನ್ನು ಸೃಷ್ಟಿಸಸಲು ಯೋಜನೆ ರೂಪಿಸಲಾಗುವುದು. ಇದರಿಂದ ಪ್ರವಾಸಿಗರ ಸಂಖ್ಯೆ ಹೆಚ್ಚಾದರೆ, ಹೋಟೆಲ್ ಉದ್ಯಮ, ಪ್ರವಾಸೋದ್ಯಮ ಹಾಗೂ ಇತರ ವಾಣಿಜ್ಯ ಚಟುವಟಿಕೆಗಳಿಗೂ ಉತ್ತೇಜನ ನೀಡಿದಂತಾಗುತ್ತದೆ ಎಂದು ತಿಳಿಸಿದರು.
ದೆಹಲಿ: ಇಲ್ಲಿನ ಆಡಳಿತಾರೂಢ ಆಮ್ ಆದ್ಮಿ ಪಕ್ಷದ ಕೌನ್ಸಿಲರ್ ಹಸೀಬ್-ಉಲ್-ಹಸನ್ ಅವರು ಶಾಸ್ತ್ರಿ ಉದ್ಯಾನದಲ್ಲಿ ಕೊಳಚೆ ತುಂಬಿದ್ದ ಚರಂಡಿಗಿಳಿದು ನೀರನ್ನು ಸ್ವಚ್ಛಗೊಳಿಸಿದ ಪ್ರಸಂಗ ನಡೆದಿದೆ. ಇದಕ್ಕೆ ಪ್ರತಿಯಾಗಿ ಗೌರವ ಸಲ್ಲಿಸಿದ ಸಾರ್ವಜನಿಕರು, ಕೌನ್ಸಿಲರ್ ಅವರನ್ನು ಹಾಲಿನಲ್ಲೇ ಸ್ನಾನ ಮಾಡಿಸಿದ್ದಾರೆ.
ಪೂರ್ವ ದೆಹಲಿಯ ಕೌನ್ಸಿಲರ್ ಆಗಿರುವ ಹಸನ್ ಬಿಳಿ ಕುರ್ತಾ ಧರಿಸಿ ಎದೆ ಮಟ್ಟದವರೆಗೆ ತುಂಬಿಕೊಂಡಿದ್ದ ಚರಂಡಿಗೆ ಇಳಿದು ಅಲ್ಲಿನ ಕೊಳಚೆಯನ್ನು ಶುಚಿಗೊಳಿಸಿದರು. ಚರಂಡಿಯಲ್ಲಿ ತೇಲುತ್ತಿದ್ದ ತ್ಯಾಜ್ಯ ವಸ್ತುಗಳನ್ನು ಹಸನ್ ತೆಗೆದು ಹಾಕಿದ್ದಾರೆ. ಇದನ್ನು ಸ್ಥಳದಲ್ಲಿದ್ದವರು ತಮ್ಮ ಮೊಬೈಲ್ನಲ್ಲಿ ವೀಡಿಯೋ ಸೆರೆ ಹಿಡಿದಿದ್ದು, ಇದೀಗ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದನ್ನೂ ಓದಿ: ಮುಂಜಾನೆ 3.30ಕ್ಕೆ ಲಾಲೂ ಪ್ರಸಾದ್ ಯಾದವ್ ಆಸ್ಪತ್ರೆಯಿಂದ ಡಿಸ್ಚಾರ್ಜ್
एमसीडी चुनावी ड्रामा !
पूर्वी दिल्ली से आप पार्षद हसीब उल हसन नाले की सफाई के लिए नाले में उतरे ,फिर उन्हें दूध से नहलाया गया pic.twitter.com/NAIjgdHpnH
— Mukesh singh sengar मुकेश सिंह सेंगर (@mukeshmukeshs) March 22, 2022
ಅವರ ಸಹಾಯಕರು ಪಕ್ಕದಲ್ಲಿ ನಿಂತು ವಿವಿಧ ಉಪಕರಣಗಳನ್ನು ಕೊಡುತ್ತಿರುವುದನ್ನು ನಾವು ವಿಡಿಯೋದಲ್ಲಿ ಕಾಣಬಹುದಾಗಿದೆ. ಚರಂಡಿ ಸ್ವಚ್ಛ ಮಾಡಿದ ನಂತರ ಹಸನ್ ಅವರ ಬೆಂಬಲಿಗರು ಅವರಿಗೆ ಹಾಲಿನಲ್ಲಿ ಸ್ನಾನ ಮಾಡಿಸಿದ್ದಾರೆ. ಈ ವಿಷಯ ವಿಧಾನಸಭೆಯಲ್ಲೂ ಚರ್ಚೆಯಾಗಿದೆ. ಇದನ್ನೂ ಓದಿ: 2ನೇ ಅವಧಿಗೆ ಪುಷ್ಕರ್ ಸಿಂಗ್ ಧಾಮಿ ಪ್ರಮಾಣವಚನ ಸ್ವೀಕಾರ
ಬಳಿಕ ಮಾತನಾಡಿರುವ ಹಸನ್, ಇಲ್ಲಿನ ಚರಂಡಿ ತುಂಬಿ ಹರಿಯುತ್ತಿದೆ. ಅಧಿಕಾರಿಗಳಿಗೆ ಈ ಬಗ್ಗೆ ಸಾಕಷ್ಟು ಬಾರಿ ದೂರು ನೀಡಿದರೂ, ಬಿಜೆಪಿ ಕೌನ್ಸಿಲರ್ ಮತ್ತು ಸ್ಥಳೀಯ ಶಾಸಕರು ಸಹಾಯ ಮಾಡಲಿಲ್ಲ. ಹೀಗಾಗಿ ನಾನೇ ಚರಂಡಿಗಿಳಿದು ಈ ಕೆಲಸ ಮಾಡಲು ಮುಂದಾದೆ ಎಂದು ಹೇಳಿದ್ದಾರೆ. ಬಾಲಿವುಡ್ ನಟ ಅನಿಲ್‌ಕಪೂರ್ ಅಭಿನಯದ ನಾಯಕ್ ಚಿತ್ರದಲ್ಲೂ ಇದೇ ತರಹದ ದೃಶ್ಯವೊಂದನ್ನು ಹೆಣೆಯಲಾಗಿದೆ.
ನವದೆಹಲಿ: ಸಕಾಲಕ್ಕೆ ದೆಹಲಿ ಮಹಾನಗರ ಪಾಲಿಕೆ (ಎಂಸಿಡಿ) ಚುನಾವಣೆಯನ್ನು ನಡೆಸದ ವಿಚಾರವಾಗಿ ಬಿಜೆಪಿ ವಿರುದ್ಧ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಾಗ್ದಾಳಿ ನಡೆಸಿದ್ದಾರೆ. ಚುನಾವಣೆಯನ್ನು ಸಕಾಲಕ್ಕೆ ನಡೆಸಿ ಬಿಜೆಪಿ ಗೆಲುವು ಸಾಧಿಸಿದರೆ ಆಮ್ ಆದ್ಮಿ ಪಕ್ಷ ರಾಜಕೀಯವನ್ನು ತ್ಯಜಿಸುತ್ತದೆ ಎಂದು ಸವಾಲು ಹಾಕಿದ್ದಾರೆ.
ವಿಶ್ವದ ಅತಿದೊಡ್ಡ ರಾಜಕೀಯ ಪಕ್ಷ ಎಂದು ಹೇಳಿಕೊಳ್ಳುವ ಬಿಜೆಪಿಗೆ ಸಣ್ಣ ಚುನಾವಣೆಯಲ್ಲಿ ಅತಿ ಚಿಕ್ಕದಾದ ಪಕ್ಷದ ಬಗ್ಗೆ ಭಯವಾಗುತ್ತಿದೆ. ಪಾಲಿಕೆ ಚುನಾವಣೆಯನ್ನು ಸಕಾಲಕ್ಕೆ ನಡೆಸುವ ಧೈರ್ಯ ಬಿಜೆಪಿಗೆ ಇದೆಯೇ ಎಂದು ಕೇಜ್ರಿವಾಲ್ ಪ್ರಶ್ನಿಸಿದ್ದಾರೆ.
ದೆಹಲಿ ಮಹಾನಗರ ಪಾಲಿಕೆ ಚುನಾವಣೆಯನ್ನು ಬಿಜೆಪಿ ಮುಂದೂಡಿರುವುದು, ಬ್ರಿಟಿಷರನ್ನು ದೇಶದಿಂದ ಓಡಿಸಿ ದೇಶದಲ್ಲಿ ಪ್ರಜಾಪ್ರಭುತ್ವ ಸ್ಥಾಪಿಸಲು ತ್ಯಾಗ-ಬಲಿದಾನ ಮಾಡಿದ ಹುತಾತ್ಮರಿಗೆ ಮಾಡಿದ ಅವಮಾನ. ಇಂದು ಸೋಲಿನ ಭಯದಿಂದ ದೆಹಲಿ ಮಹಾನಗರ ಪಾಲಿಕೆ ಚುನಾವಣೆಯನ್ನು ಮುಂದೂಡುತ್ತಿದ್ದಾರೆ. ಅವರು ರಾಜ್ಯಗಳು ಮತ್ತು ದೇಶದ ಚುನಾವಣೆಗಳನ್ನು ಮುಂದೂಡುತ್ತಾರೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಯುಎಇಯಿಂದ ಜಮ್ಮು- ಕಾಶ್ಮೀರದಲ್ಲಿ 70 ಸಾವಿರ ಕೋಟಿ ಹೂಡಿಕೆ; 7 ಲಕ್ಷ ಉದ್ಯೋಗ ಸೃಷ್ಟಿಯ ಗುರಿ
ಬೆಂಗಳೂರು: ಆಮ್ ಆದ್ಮಿ ಪಾರ್ಟಿಯ ರಾಜ್ಯಾದ್ಯಂತ ಸದಸ್ಯತ್ವ ಅಭಿಯಾನಕ್ಕೆ ಪಕ್ಷದ ರಾಜ್ಯಾಧ್ಯಕ್ಷರಾದ ಪೃಥ್ವಿ ರೆಡ್ಡಿ ಬುಧವಾರ ಚಾಲನೆ ನೀಡಿದರು. ಬೆಂಗಳೂರಿನ ಪ್ರೆಸ್‍ಕ್ಲಬ್‍ನಲ್ಲಿ ನಡೆದ ಸಮಾರಂಭದಲ್ಲಿ ವೈದ್ಯ, ವಕೀಲ, ಪತ್ರಕರ್ತ ಹಾಗೂ ಆಟೋ ಚಾಲಕರೊಬ್ಬರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಮೂಲಕ ಅಭಿಯಾನವನ್ನು ಆರಂಭಿಸಲಾಯಿತು.
ನೋಂದಣೆಯ ನಂತರ ಮಾತನಾಡಿದ ಪೃಥ್ವಿ ರೆಡ್ಡಿ ಅವರು, ದೇಶದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪಕ್ಷ ಎಂಬ ಕೀರ್ತಿಗೆ ಆಮ್ ಆದ್ಮಿ ಪಾರ್ಟಿ ಪಾತ್ರವಾಗಿದೆ. ಪಕ್ಷ ಆರಂಭವಾಗಿ ಹತ್ತು ವರ್ಷ ತುಂಬುವ ಮುನ್ನವೇ ಎರಡು ರಾಜ್ಯಗಳಲ್ಲಿ ಅಧಿಕಾರಕ್ಕೆ ಬಂದಿದ್ದೇವೆ. ಕರ್ನಾಟಕದಲ್ಲಿ ಪಕ್ಷಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ರಾಜ್ಯದಲ್ಲಿ ಈಗಾಗಲೇ ಬೇರೂರಿರುವ ಎಎಪಿಯನ್ನು ಹೆಮ್ಮರವಾಗಿ ಬೆಳೆಸುವ ಉದ್ದೇಶದಿಂದ ಸದಸ್ಯತ್ವ ಅಭಿಯಾನ ಆರಂಭಿಸಲಾಗಿದೆ ಎಂದು ಹೇಳಿದರು.
ಒಂದೇ ತಿಂಗಳಲ್ಲಿ 50 ಲಕ್ಷ ಸದಸ್ಯರನ್ನು ನೋಂದಣಿ ಮಾಡುವ ಗುರಿ ಇಟ್ಟುಕೊಂಡಿದ್ದೇವೆ. ಜನಪರ ಹೋರಾಟಗಳು, ಮನೆಮನೆ ಭೇಟಿ ಕಾರ್ಯಕ್ರಮಗಳ ಜೊತೆಗೆ ತಂತ್ರಜ್ಞಾನದ ನೆರವಿನಿಂದಲೂ ಜನರ ಜೊತೆ ಸಂಪರ್ಕ ಇಟ್ಟುಕೊಳ್ಳುತ್ತೇವೆ. ದೆಹಲಿ ಸಿಎಂ ಕೇಜ್ರಿವಾಲ್ ಅವರ ಸರ್ಕಾರ ಸಾಧನೆಗಳು ಹಾಗೂ ಆಮ್ ಆದ್ಮಿ ಪಾರ್ಟಿಯ ತತ್ತ್ವ ಸಿದ್ಧಾಂತಗಳಿಗೆ ಜನರು ಆಕರ್ಷಿತರಾಗುತ್ತಿದ್ದಾರೆ. ಸದಸ್ಯತ್ವ ಅಭಿಯಾನದಿಂದ ರಾಜ್ಯದಲ್ಲಿನ ಪಕ್ಷ ಸಂಘಟನೆಗೆ ಆನೆಬಲ ಬರಲಿದೆ ಎಂದು ಭರವಸೆ ಕೊಟ್ಟರು.
ಕೇಜ್ರಿವಾಲ್ ಅವರು ಪಾರದರ್ಶಕ ಆಡಳಿತ ನೀಡಿ, ಜನಪರ ಯೋಜನೆಗಳನ್ನು ಜಾರಿಗೆ ತಂದಾಗಲೇ ಕನ್ನಡಿಗರ ಮನಸ್ಸಿನಲ್ಲಿ ಆಮ್ ಆದ್ಮಿ ಪಾರ್ಟಿಯ ಪರವಾಗಿ ಒಲವು ಉಂಟಾಗಿತ್ತು. ಈಗ ಪಂಜಾಬ್‍ನಲ್ಲೂ ಪಕ್ಷವು ಭರ್ಜರಿ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿರುವುದು ಕನ್ನಡಿಗರಿಗೆ ಎಎಪಿ ಮೇಲಿದ್ದ ಅಭಿಮಾನವನ್ನು ದುಪ್ಪಟ್ಟು ಹೆಚ್ಚಿಸಿದೆ. ಇವೆಲ್ಲವನ್ನು ಗಮನಿಸಿದರೆ, ಸದಸ್ಯತ್ವ ಅಭಿಯಾನವು ನಿರೀಕ್ಷೆಗೂ ಮೀರಿದ ಯಶಸ್ಸು ಕಾಣುವುದು ಸ್ಪಷ್ಟವಾಗುತ್ತದೆ ಎಂದು ಅಭಿಪ್ರಾಯಪಟ್ಟರು. ಇದನ್ನೂ ಓದಿ: ಬಪ್ಪನಾಡು ದೇವಸ್ಥಾನ ಹಾಗೂ ಮಾರಿಕಾಂಬಾ ದೇವಸ್ಥಾನ ಕಟ್ಟಿದವರು ಮುಸ್ಲಿಮರು: ರಿಜ್ವಾನ್
ನವದೆಹಲಿ: ಪಂಜಾಬ್ ನೂತನ ಮುಖ್ಯಮಂತ್ರಿಯಾಗಿರುವ ಭಗವಂತ್ ಮಾನ್ ಅವರ ಸಂಪುಟದಲ್ಲಿ ಮುಖ್ಯಮಂತ್ರಿ ಸೇರಿ 11 ಸಚಿವರಿದ್ದಾರೆ. ಅವರಲ್ಲಿ 7 ಮಂದಿ ಕ್ರಿಮಿನಲ್ ಪ್ರಕರಣ ಉಳ್ಳವರಾಗಿದ್ದು, 7ರಲ್ಲಿ 4 ಮಂದಿ ಗಂಭೀರ ಆರೋಪ ಎದುರಿಸುತ್ತಿದ್ದಾರೆ ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಹೇಳಿದೆ.
ಪಂಜಾಬ್ ಎಲೆಕ್ಷನ್ ವಾಚ್ ಮತ್ತು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಸಿಎಂ ಸೇರಿದಂತೆ ಎಲ್ಲ ಸಚಿವರ ಅಫಿಡಿವೇಟ್‌ಗಳನ್ನು ವಿಶ್ಲೇಷಿಸಿದೆ. 7 ಮಂದಿ ಸಚಿವರು (ಶೇ.64) ತಮ್ಮ ವಿರುದ್ಧ ಕ್ರಮಿನಲ್ ಮೊಕದ್ದಮೆಗಳನ್ನು ಘೋಷಿಸಿಕೊಂಡಿದ್ದಾರೆ. ಅವರಲ್ಲಿ ನಾಲ್ಕು ಮಂದಿ ಗಂಭೀರ ಎದುರಿಸುವುದಾಗಿ ಹೇಳಿದ್ದಾರೆ. ಅಲ್ಲದೆ, 11 ಸಚಿವರಲ್ಲಿ 9 ಮಂದಿ ಕೋಟ್ಯಧಿಪತಿಗಳಾಗಿದ್ದಾರೆ. ಬ್ರಾಮ್ ಶಂಕರ್ (ಜಿಂಪಾ) ಅವರು 8.56 ಕೋಟಿ, ಭೋವಾ (ಎಸ್‌ಸಿ) ಕ್ಷೇತ್ರದ ಲಾಲ್‌ಚಂದ್ ಅವರು 6.19 ಲಕ್ಷ, ಬ್ರಾಮ್ ಶಂಕರ್ 1.08 ಕೋಟಿ ಕನಿಷ್ಠ ಘೋಷಿತ ಆಸ್ತಿಯನ್ನು ಹೊಂದ್ದಾರೆ. ಇದನ್ನೂ ಓದಿ: ಯೋಗಿ ಪ್ರಮಾಣವಚನಕ್ಕೂ ಮುನ್ನವೇ ಹೊರಬಿತ್ತು ಸಚಿವ ಆಕಾಂಕ್ಷಿಗಳ ಪಟ್ಟಿ- ರೇಸ್‍ನಲ್ಲಿ ಯಾರಿದ್ದಾರೆ ನೋಡಿ
ಶೈಕ್ಷಣಿಕ ಅರ್ಹತೆ
ಭಗವಂತ್‌ನ ಸಂಪುಟದಲ್ಲಿರುವ ಐವರು ಸಚಿವರು ತಮ್ಮ ಶೈಕ್ಷಣಿಕ ಅರ್ಹತೆಯನ್ನು 10 ಮತ್ತು 12ನೇ ತರಗತಿಯ ನಡುವೆ ಎಂದು ಘೋಷಿಸಿದ್ದಾರೆ. ಉಳಿದವರು ಪದವೀಧರರು ಅಥವಾ ಅದಕ್ಕಿಂತ ಹೆಚ್ಚಿನವರು. 6 ಸಚಿವರು ತಮ್ಮ ವಯಸ್ಸು 31 ರಿಂದ 50 ವರ್ಷ ಎಂದು ಘೋಷಿಸಿದ್ದಾರೆ, ಐವರು 51 ಮತ್ತು 60 ವರ್ಷ ವಯಸ್ಸಿನವರೆಂದು ಘೋಷಿಸಿಕೊಂಡಿದ್ದಾರೆ.
ಪಂಜಾಬ್ ಮುಖ್ಯಮಂತ್ರಿಯಾಗಿ ಭಗವಂತ್ ಮಾನ್ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಹರ್ಪಾಲ್ ಸಿಂಗ್ ಚೀಮಾ, ಗುರ್ಮೀತ್ ಸಿಂಗ್ ಮೀತ್ ಹಯರ್, ಡಾ.ಬಲ್ಜಿತ್ ಕೌರ್, ಶಾಸಕ ಹರ್ಭಜನ್ ಸಿಂಗ್ ಇಟಿಒ, ಡಾ.ವಿಜಯ್ ಸಿಂಗ್ಲಾ, ಲಾಲ್ ಚಂದ್ ಕಟಾರು ಚಾಕ್, ಶಾಸಕ ಕುಲದೀಪ್ ಸಿಂಗ್ ಧಲಿವಾಲ್, ಲಾಲ್ಜಿತ್ ಸಿಂಗ್ ಭುಲ್ಲಾರ್, ಬ್ರಾಮ್ ಶಂಕರ್ (ಜಿಂಪಾ), ಹೊಶಿಯಾರ್‌ಪುರ್ ಮತ್ತು ಹರ್ಜೋತ್ ಸಿಂಗ್ ಬೈನ್ಸ್ ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಮಹಿಳೆ ಸೇರಿದಂತೆ ನಾಲ್ವರು ಜಾಟ್, ನಾಲ್ವರು ಎಸ್ಸಿಗಳು ಮತ್ತು ಇಬ್ಬರು ಹಿಂದೂಗಳು ಕ್ಯಾಬಿನೆಟ್ ನಲ್ಲಿ ಒಳಗೊಂಡಿದ್ದಾರೆ. ಎಲ್ಲ ಶಾಸಕರಿಗೆ ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಪ್ರಮಾಣ ವಚನ ಬೋಧಿಸಿದ್ದರು. ಇದನ್ನೂ ಓದಿ:13 ಗಂಟೆಯಲ್ಲಿ ಶ್ರೀಲಂಕಾದಿಂದ ತಮಿಳುನಾಡಿಗೆ ಸ್ವಿಮ್ಮಿಂಗ್ ಮಾಡಿದ 13ರ ಬಾಲಕಿ
ಬೆಂಗಳೂರು: ರಾಜ್ಯ ಆರೋಗ್ಯ ಇಲಾಖೆಯಲ್ಲಿ ನಿರಂತರವಾಗಿ ನಡೆಯುತ್ತಿರುವ ವಿವಿಧ ಅಕ್ರಮಗಳಿಗೆ ಸಂಬಂಧಿಸಿ ರಾಜ್ಯಪಾಲರು ಮಧ್ಯಪ್ರವೇಶ ಮಾಡಿ, ಆರೋಗ್ಯ ಸಚಿವ ಡಾ. ಸುಧಾಕರ್‌ರವರಿಂದ ರಾಜೀನಾಮೆ ಪಡೆದು ನಿಷ್ಪಕ್ಷಪಾತ ತನಿಖೆಗೆ ಆದೇಶಿಸಬೇಕು ಎಂದು ಆಮ್ ಆದ್ಮಿ ಪಾರ್ಟಿ ಆಗ್ರಹಿಸಿದೆ.
ಪ್ರೆಸ್‍ಕ್ಲಬ್‍ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಮ್ ಆದ್ಮಿ ಪಾರ್ಟಿಯ ಕಾನೂನು ಘಟಕದ ಅಧ್ಯಕ್ಷ ನಂಜಪ್ಪ ಕಾಳೇಗೌಡ, ಆರೋಗ್ಯ ಇಲಾಖೆಯ ವೈದ್ಯರು, ಅರೆವೈದ್ಯಕೀಯ ಸಿಬ್ಬಂದಿಗಳ ನೇಮಕಾತಿ, ಬಡ್ತಿ ಹಾಗೂ ವರ್ಗಾವಣೆಯಲ್ಲಿ ಭ್ರಷ್ಟಾಚಾರವು ಎಗ್ಗಿಲ್ಲದೇ ನಡೆಯುತ್ತಿದೆ. ವೈದ್ಯಕೀಯ ಉಪಕರಣಗಳು ಹಾಗೂ ಔಷಧಿಗಳ ಖರೀದಿ, ನಿರ್ಮಾಣ ಕಾಮಗಾರಿ, ಹಾಗೂ ಮೂಲಸೌಕರ್ಯ ಕಲ್ಪಿಸುವುದರಲ್ಲಿ ಭಾರೀ ಪ್ರಮಾಣದ ಅಕ್ರಮವಾಗುತ್ತಿದೆ. ವೈದ್ಯಕೀಯ ಮಹಾವಿದ್ಯಾಲಯ, ಜಿಲ್ಲಾ ಆಸ್ಪತ್ರೆ, ತಾಲೂಕು ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸೇವೆ ಪಡೆಯಲು ರೋಗಿಗಳು ಲಂಚ ನೀಡಬೇಕಾಗಿದೆ ಎಂದು ಹೇಳಿದರು. ಇದನ್ನೂ ಓದಿ: ಯುದ್ಧಭೂಮಿಯಿಂದ ಕನ್ನಡಿಗರನ್ನು ಕರೆತಂದದ್ದು ಮೋದಿ ಭಗೀರಥ ಪ್ರಯತ್ನ: ಸಿಎಂ
ನಿವೃತ್ತ ಜಿಲ್ಲಾ ವೈದ್ಯಾಧಿಕಾರಿ ಹಾಗೂ ಬಿಜೆಪಿಯ ಮಾಜಿ ಶಾಸಕ ಡಾ. ಸಾರ್ವಭೌಮ ಬಗಲಿಯವರು ಕೋವಿಡ್ ಮೊದಲ ಮತ್ತು ಎರಡನೇ ಅಲೆಯ ಸಂದರ್ಭದಲ್ಲಿ ವೈದ್ಯಕೀಯ ಉಪಕರಣ ಹಾಗೂ ಔಷಧಿ ಖರೀದಿಯಲ್ಲಿ ಭಾರೀ ಅಕ್ರಮ ನಡೆದಿದೆ ಎಂದು ಆರೋಪಿಸಿ ಲೋಕಾಯುಕ್ತಕ್ಕೆ 40 ದೂರು ನೀಡಿದ್ದಾರೆ. ಈ ಸಂಬಂಧ ತನಿಖೆಯೇ ನಡೆಯದಿರುವುದು ದುರದೃಷ್ಟಕರ. ಆರೋಗ್ಯ ಸಚಿವರು ರಾಜೀನಾಮೆ ನೀಡಿ, ನಿಷ್ಪಕ್ಷಪಾತ ತನಿಖೆ ನಡೆದರೆ ಆರೋಗ್ಯ ಇಲಾಖೆಯಲ್ಲಿನ ಕೋಟಿಗಟ್ಟಲೆ ಅವ್ಯವಹಾರ ಬಯಲಾಗುತ್ತದೆ. ರಾಜ್ಯಪಾಲರು ಶೀಘ್ರವೇ ಈ ವಿಚಾರದಲ್ಲಿ ಮಧ್ಯಪ್ರವೇಶಿಸಿ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ನಿವೃತ್ತ ಕೆಎಎಸ್ ಅಧಿಕಾರಿ ಹಾಗೂ ಎಎಪಿಯ ರಾಜ್ಯ ಕಾರ್ಮಿಕ ಘಟಕದ ಅಧ್ಯಕ್ಷರಾದ ರವಿಶಂಕರ್ ಮಾತನಾಡಿ, ಆರೋಗ್ಯ ಸಚಿವರು ಹಾಗೂ ಅಧಿಕಾರಿಗಳ ಹಣದ ದಾಹಕ್ಕೆ ಸಾಮಾನ್ಯ ರೋಗಿಗಳು ಜೀವ ಕಳೆದುಕೊಳ್ಳುತ್ತಿದ್ದಾರೆ. ಸರ್ಕಾರಿ ಆಸ್ಪತ್ರೆಯಿಂದ ರೋಗಿಯ ಶವವನ್ನು ಹೊರತರಬೇಕಾದರೂ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಲಂಚ ನೀಡಬೇಕಾಗಿದೆ. ಆರೋಗ್ಯ ಇಲಾಖೆಯ ಟೆಂಡರ್ ಪ್ರಕ್ರಿಯೆಗಳಲ್ಲಿ ನಿಯಮಗಳನ್ನು ಗಾಳಿಗೆ ತೂರುವುದು ಸಾಮಾನ್ಯವಾಗಿದ್ದರೂ, ಯಾರ ವಿರುದ್ಧವೂ ತನಿಖೆ ನಡೆಯುತ್ತಿಲ್ಲ. ಭಷ್ಟ ಸಚಿವರಿಂದಾಗಿ ಇಲಾಖೆಯ ಇಡೀ ವ್ಯವಸ್ಥೆಯೇ ಭ್ರಷ್ಟವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ. ಇದನ್ನೂ ಓದಿ: ಗುಜರಿ ಅಂಗಡಿಯಲ್ಲಿ ಸಿಲಿಂಡರ್ ಸ್ಫೋಟ – ಇಬ್ಬರು ಸಜೀವ ದಹನ ಓರ್ವ ಗಂಭೀರ
ಆಮ್ ಆದ್ಮಿ ಪಾರ್ಟಿ ರಾಜ್ಯ ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷರಾದ ರಾಜಶೇಖರ್ ದೊಡ್ಡಣ್ಣ ಹಾಗೂ ಪಕ್ಷದ ಮಹಿಳಾ ಮುಖಂಡರಾದ ಅರ್ಚನಾ ಭಾಗವಹಿಸಿದ್ದರು.