Tag: aap

  • ಮದ್ಯದ ವಿರುದ್ಧ ಧ್ವನಿ ಎತ್ತಿದ್ದ ಕೇಜ್ರಿವಾಲ್ ಹಣಕ್ಕಾಗಿ ನೂತನ ಲಿಕ್ಕರ್ ಪಾಲಿಸಿ ಮಾಡಿದ್ದಾರೆ: ಅಣ್ಣಾ ಹಜಾರೆ ಕಿಡಿ

    ಮದ್ಯದ ವಿರುದ್ಧ ಧ್ವನಿ ಎತ್ತಿದ್ದ ಕೇಜ್ರಿವಾಲ್ ಹಣಕ್ಕಾಗಿ ನೂತನ ಲಿಕ್ಕರ್ ಪಾಲಿಸಿ ಮಾಡಿದ್ದಾರೆ: ಅಣ್ಣಾ ಹಜಾರೆ ಕಿಡಿ

    ನವದೆಹಲಿ: ಮದ್ಯದ ವಿರುದ್ಧ ಧ್ವನಿ ಎತ್ತಿದ್ದ ಕೇಜ್ರಿವಾಲ್ (Arvind Kejriwal) ಹಣಕ್ಕಾಗಿ ನೂತನ ಲಿಕ್ಕರ್ ಪಾಲಿಸಿ ಮಾಡಿದ್ದಾರೆ. ಆಮ್ ಆದ್ಮಿ ಪಕ್ಷವು (AAP) ಮದ್ಯ ನೀತಿಯನ್ನು ಮಾಡಬಾರದಿತ್ತು. ಮದ್ಯದ ವಿರುದ್ಧ ಧ್ವನಿ ಎತ್ತಿದ್ದ ವ್ಯಕ್ತಿ ಇಂದು ಮದ್ಯ ನೀತಿಯನ್ನು ಸಿದ್ಧಪಡಿಸಿದ್ದು ನನಗೆ ಬೇಸರ ತಂದಿದೆ. ಈಗ ಏನಾಗುತ್ತದೆಯೋ ಅದು ಕಾನೂನಿನ ಪ್ರಕಾರ ನಡೆಯಬೇಕು ಎಂದು ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ (Anna Hazare) ಹೇಳಿದ್ದಾರೆ.

    ಈ ಹಿಂದೆಯೂ ಅಣ್ಣಾ ಹಜಾರೆ, ಮದ್ಯ ನೀತಿಯ ವಿರುದ್ಧ ಮಾತನಾಡಿದ್ದರು. 2022 ರಲ್ಲಿ ಅರವಿಂದ್ ಕೇಜ್ರಿವಾಲ್ ಅವರಿಗೆ ಪತ್ರ ಬರೆದು ನೀತಿಯ ಬಗ್ಗೆ ತಮ್ಮ ಬೇಸರ ವ್ಯಕ್ತಪಡಿಸಿದ್ದರು. ಪತ್ರದಲ್ಲಿ ನೀವು ಮುಖ್ಯಮಂತ್ರಿಯಾದ ನಂತರ ನಾನು ಇದೇ ಮೊದಲ ಬಾರಿಗೆ ನಿಮಗೆ ಪತ್ರ ಬರೆಯುತ್ತಿದ್ದೇನೆ. ಏಕೆಂದರೆ ನಿಮ್ಮ ಸರ್ಕಾರದ ಮದ್ಯ ನೀತಿಯ ಇತ್ತೀಚಿನ ಸುದ್ದಿ ವರದಿಗಳಿಂದ ನನಗೆ ನೋವಾಗಿದೆ. ಮದ್ಯದಂತೆಯೇ ಅಧಿಕಾರವೂ ಅಮಲೇರಿಸುತ್ತದೆ. ನಿಮಗೆ ಅಧಿಕಾರದ ಅಮಲು ಇದೆ ಎಂದು ತೋರುತ್ತದೆ ಎಂದು ಟೀಕಿಸಿದ್ದರು. ಇದನ್ನೂ ಓದಿ: ದೆಹಲಿ ಮದ್ಯ ಹಗರಣದಲ್ಲಿ ಕೇಜ್ರಿವಾಲ್‌ ಕಿಂಗ್‌ಪಿನ್‌: ಇಡಿ

    ಬಂಧನದ ಹೊರತಾಗಿಯೂ ಅರವಿಂದ್ ಕೇಜ್ರಿವಾಲ್ ದೆಹಲಿ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ ಎಂದು ಎಎಪಿ ಹೇಳಿದೆ.

    ಅಣ್ಣಾ ಹಜಾರೆ ಅವರು 2011 ರಲ್ಲಿ ಭ್ರಷ್ಟಾಚಾರ ವಿರೋಧಿ ಆಂದೋಲನದಲ್ಲಿ ತೊಡಗಿದ್ದರು. ಆ ಸಮಯದಲ್ಲಿ ಕೇಜ್ರಿವಾಲ್ ಅವರು ಸಹ ಹಜಾರೆಯೊಂದಿಗೆ ಕೈಜೋಡಿಸಿದ್ದರು. ಬಳಿಕ ರಾಜಕೀಯಕ್ಕಿ ಕೇಜ್ರಿವಾಲ್ ಧುಮುಕಿದಾಗ ಅಣ್ಣಾ ಹಜಾರೆ ಅವರಿಂದ ಅಂತರ ಕಾಯ್ದುಕೊಂಡಿದ್ದರು. ಇದನ್ನೂ ಓದಿ: ಕೇಜ್ರಿವಾಲ್‌ ಅಕ್ರಮದ ಬಗ್ಗೆ ಸಾಕ್ಷ್ಯಗಳೊಂದಿಗೆ ಕಾಂಗ್ರೆಸ್‌ ದೂರು ನೀಡಿತ್ತು: ಬಿಜೆಪಿ ತಿರುಗೇಟು

  • ಏನಿದು ದೆಹಲಿ ಮದ್ಯ ಹಗರಣ? ಕೇಜ್ರಿವಾಲ್‌ ಮೇಲಿರುವ ಆರೋಪ ಏನು? ಬಂಧನವಾದ ಪ್ರಮುಖರು ಯಾರು?

    ಏನಿದು ದೆಹಲಿ ಮದ್ಯ ಹಗರಣ? ಕೇಜ್ರಿವಾಲ್‌ ಮೇಲಿರುವ ಆರೋಪ ಏನು? ಬಂಧನವಾದ ಪ್ರಮುಖರು ಯಾರು?

    ಬಕಾರಿ ನೀತಿ ಹರಣದಲ್ಲಿ (Delhi Excise Policy Case) ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ( Delhi CM Arvind Kejriwal) ಅವರನ್ನು ಜಾರಿ ನಿರ್ದೇಶನಾಲಯ (ED) ಬಂಧಿಸಿದೆ. ಇಡಿ ವಿಚಾರಣೆಗೆ ಹಾಜರಾಗುವಂತೆ ಜಾರಿಗೊಳಿಸಿದ್ದ 9 ಸಮನ್ಸ್‌ಗೆ ಕೇಜ್ರಿವಾಲ್‌ ಗೈರಾಗಿದ್ದರು. ಹೈಕೋರ್ಟ್‌ನಲ್ಲೂ (High Court) ಇಡಿ ವಿಚಾರಣೆಯನ್ನು ಮುಂದೂಡವಂತೆ ಕೇಜ್ರಿವಾಲ್‌ ಪರ ವಕೀಲರು ಮನವಿ ಮಾಡಿದ್ದರು. ಆದರೆ ಹೈಕೋರ್ಟ್‌ ವಾದವನ್ನು ಪುರಸ್ಕರಿಸದೇ ಕೇಜ್ರಿವಾಲ್‌ಗೆ ರಕ್ಷಣೆ ನೀಡಲು ನಿರಾಕರಿಸಿತು. ಈ ಬೆನ್ನಲ್ಲೇ ರಾತ್ರಿ ಇಡಿ ಕೇಜ್ರಿವಾಲ್‌ ನಿವಾಸಕ್ಕೆ ತೆರಳಿ ಬಂಧಿಸಿದೆ.

    ಏನಿದು ಹಗರಣ?
    ಕೋವಿಡ್‌ 2ನೇ ಅಲೆ ಉತ್ತುಂಗದಲ್ಲಿದ್ದಾಗ ಮನೀಶ್ ಸಿಸೋಡಿಯಾ 2021ರ ಏಪ್ರಿಲ್‌ನಲ್ಲಿ ಕ್ಯಾಬಿನೆಟ್‌ ಅನುಮೋದನೆ ಇಲ್ಲದೇ ಮದ್ಯದಂಗಡಿ ಟೆಂಡರ್‌ಗೆ ಅರ್ಜಿ ಸಲ್ಲಿಸಿದವರ 144.36 ಕೋಟಿ ಪರವಾನಗಿ ಶುಲ್ಕವನ್ನು ಮನ್ನಾ ಮಾಡಲು ಆದೇಶ ಹೊರಡಿಸುತ್ತಾರೆ. ಈ ಮಹತ್ವದ ನಿರ್ಧಾರದ ಬಳಿಕ ಮೇ ತಿಂಗಳಿನಲ್ಲಿ ಕೇಜ್ರಿವಾಲ್‌ ನೇತೃತ್ವದ ಕ್ಯಾಬಿನೆಟ್‌ ಸಭೆ ಕರೆದು ಅಬಕಾರಿ ನೀತಿಯಲ್ಲಿ ಬದಲಾವಣೆ ಮಾಡುತ್ತದೆ. ಮದ್ಯವನ್ನು ಮನೆಗ ಹೋಮ್‌ ಡೆಲಿವರಿ ಮಾಡಬಹುದು ಅಷ್ಟೇ ಅಲ್ಲದೇ ಮದ್ಯದ ಅಂಗಡಿಗಳನ್ನು ಬೆಳಗಿನ ಜಾವ 3 ಗಂಟೆಯವರೆಗೆ ತೆರೆಯಬಹುದು. ಪರವಾನಗಿದಾರರು ಅನಿಯಮಿತ ರಿಯಾಯಿತಿಗಳನ್ನು ನೀಡಲು ನೀತಿ ಅನುಮತಿ ಕಲ್ಪಿಸಿತ್ತು.

    ಲೆಫ್ಟಿನೆಂಟ್‌ ಗವರ್ನರ್‌ ಅವರು ಕ್ಯಾಬಿನೆಟ್‌ ನಿರ್ಧಾರಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಬಳಿಕ ದೆಹಲಿ ಸರ್ಕಾರ ತನ್ನ ನಿರ್ಧಾರವನ್ನು ಹಿಂದಕ್ಕೆ ಪಡೆಯುತ್ತದೆ. ಆದರೆ ಸಿಸೋಡಿಯಾ ಕೈಗೊಂಡ ನಿರ್ಧಾರ ಮುಂದುವರಿಯುತ್ತದೆ. ಸರ್ಕಾರದ ನಿರ್ಧಾರ ಬಗ್ಗೆ ದೆಹಲಿ ಮುಖ್ಯ ಕಾರ್ಯದರ್ಶಿ ಅವರು ಲೆಫ್ಟಿನೆಂಟ್‌ ಗವರ್ನರ್‌ ಬಳಿ ದೂರು ನೀಡುತ್ತಾರೆ. ಸಿಸೋಡಿಯಾ ನಿರ್ಧಾರದಿಂದ ಸರ್ಕಾರಕ್ಕೆ ಭಾರೀ ನಷ್ಟವಾಗಿದೆ. ವಿಸ್ಕಿ ಮತ್ತು ವೈನ್‌ ಮಾರಾಟ ಅನುಕ್ರಮವಾಗಿ 60% ಮತ್ತು 87%ರಷ್ಟು ಭಾರೀ ಏರಿಕೆಯಾಗಿದ್ದರೂ ಆದಾಯ 80% ರಷ್ಟು ಇಳಿಕೆಯಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸುತ್ತಾರೆ.

    ಕೇಜ್ರಿವಾಲ್‌- ಸಿಸೋಡಿಯಾ ಅವರು ಲೆಫ್ಟಿನೆಂಟ್‌ ಗವರ್ನರ್‌ ಗಮನಕ್ಕೆ ತಾರದೇ ತುರ್ತು ಕ್ಯಾಬಿನೆಟ್‌ ಸಭೆಯನ್ನು ಕರೆಯುತ್ತಾರೆ. ಸಿಸೋಡಿಯಾ ಅಕ್ರಮವಾಗಿ ಹೊರಡಿಸಿದ ಆದೇಶವನ್ನು ಸಕ್ರಮ ಮಾಡಲು ಕ್ಯಾಬಿನೆಟ್‌ನಲ್ಲಿ ಪ್ರಯತ್ನ ಮಾಡಲಾಗುತ್ತದೆ. ಈ ನಿರ್ಧಾರಕ್ಕೆ ಬಿಜೆಪಿ ಮತ್ತು ಕಾಂಗ್ರೆಸ್‌ ಭಾರೀ ವಿರೋಧ ವ್ಯಕ್ತಪಡಿಸಿ ಪ್ರತಿಭಟಿಸುತ್ತದೆ. ವಿರೋಧ ವ್ಯಕ್ತವಾಗುತ್ತಿದ್ದಂತೆ 2022ರ ಜುಲೈನಲ್ಲಿ ಮದ್ಯ ಹಗರಣದ ಬಗ್ಗೆ ಸಿಬಿಐ ತನಿಖೆ ನಡೆಸುವಂತೆ ಲೆಫ್ಟಿನೆಂಟ್‌ ಗವರ್ನರ್‌ ಅವರು ಆದೇಶ ಹೊರಡಿಸುತ್ತಾರೆ. 2022ರ ಜುಲೈನಲ್ಲಿ ಕೇಜ್ರಿವಾಲ್‌ ಸರ್ಕಾರ ಈ ಹಿಂದೆ ಹೊರಡಿಸಿದ್ದ ಅಬಕಾರಿ ನೀತಿಯನ್ನು ಹಿಂದಕ್ಕೆ ಪಡೆಯುತ್ತದೆ. ಇದನ್ನೂ ಓದಿ: ದೆಹಲಿ ಮದ್ಯ ಹಗರಣ – ತೆಲಂಗಾಣ ಮಾಜಿ ಸಿಎಂ ಕೆಸಿಆರ್‌ ಪುತ್ರಿ ಕವಿತಾ ಅರೆಸ್ಟ್‌ ಆಗಿದ್ದು ಯಾಕೆ?

    ಆರೋಪ ಏನು?
    ಕೊರೊನಾ ಸಮಯದಲ್ಲಿ ಕಿಕ್‌ ಬ್ಯಾಕ್‌ ಪಡೆಯಲೆಂದೇ ಮದ್ಯದಂಗಡಿ ಟೆಂಡರ್‌ಗೆ ಅರ್ಜಿ ಸಲ್ಲಿಸಿದವರ 144.36 ಕೋಟಿ ರೂ. ಪರವಾನಗಿ ಶುಲ್ಕವನ್ನು ಮನ್ನಾ ಮಾಡಲಾಗಿದೆ ಎಂಬ ಗಂಭೀರ ಭ್ರಷ್ಟಾಚಾರ ಆರೋಪ ಬಂದಿದೆ. ಕಾನೂನುಬಾಹಿರ ನಿರ್ಧಾರವನ್ನು ತೆಗೆದುಕೊಂಡ ಬಳಿಕ ಅದನ್ನು ಕಾನೂನುಬದ್ಧಗೊಳಿಸಲು ಸರ್ಕಾರ ಪ್ರಯತ್ನಿಸಿದ್ದು ಮತ್ತೊಂದು ವಿವಾದಕ್ಕೆ ಕಾರಣವಾಗಿದೆ.

    ವಿಮಾನ ನಿಲ್ದಾಣದಲ್ಲಿ ಮದ್ಯ ಮಾರಾಟಕ್ಕೆ ಅನುಮತಿ ಇದ್ದರೂ ವಿಮಾನ ನಿಲ್ದಾಣದ ಅಧಿಕಾರಿಗಳಿಂದ ನಿರಾಕ್ಷೇಪಣಾ ಪ್ರಮಾಣ ಪತ್ರವನ್ನು ಪಡೆದುಕೊಳ್ಳಬೇಕಾಗುತ್ತದೆ. ಎನ್‌ಒಸಿ ಇಲ್ಲದೇ ಮಾರಾಟ ಮಾಡಿದರೆ ದಂಡವನ್ನು ಹಾಕಲಾಗುತ್ತದೆ. ಎನ್‌ಒಸಿ ಇಲ್ಲದೇ ಮದ್ಯ ಮಾರಾಟ ಮಾಡಿದವರಿಗೆ 30 ಕೋಟಿ ರೂ. ದಂಡವನ್ನು ಹಾಕಬೇಕಿತ್ತು. ಆದರೆ ಸಿಸೋಡಿಯಾ ನಿರ್ದೇಶನದ ಹಿನ್ನೆಲೆಯಲ್ಲಿ 30 ಕೋಟಿ ರೂ ದಂಡವನ್ನು ಮನ್ನಾ ಮಾಡಲಾಗಿದೆ. ಪರವಾನಗಿ ಶುಲ್ಕ ಬಾಕಿ ಉಳಿಸಿಕೊಂಡ ಪರವಾನಗಿದಾರರ ವಿರುದ್ಧದ ಕಠಿಣ ಕ್ರಮಕ್ಕೆ ತಡೆ ನೀಡಲಾಗಿದೆ. ಅಬಕಾರಿ ನೀತಿ ಉಲ್ಲಂಘಿಸಿದ ಪರವಾನಗಿದಾರರ ವಿರುದ್ಧ ಯಾವುದೇ ದಂಡ ಕ್ರಮ ಕೈಗೊಂಡಿಲ್ಲ. ಆಮದು ಮಾಡಿದ ಪ್ರತಿ ಕೇಸ್‌ ಬಿಯರ್‌ ಮೇಲಿದ್ದ ದರವನ್ನು 50 ರೂ.ಇಳಿಕೆ ಮಾಡಲಾಗಿದೆ. ಹೊಸ ಮದ್ಯ ನೀತಿಯಿಂದಾಗಿ ಸರ್ಕಾರದ ಬೊಕ್ಕಸಕ್ಕೆ 2631 ಕೋಟಿ ರೂ. ನಷ್ಟವಾಗಿದೆ ಎಂಬ ಆರೋಪ ಬಂದಿದೆ. ಇದನ್ನೂ ಓದಿ: ಸಿಎಂ ಹುದ್ದೆಗೆ ಕೇಜ್ರಿವಾಲ್‌ ರಾಜೀನಾಮೆ ಇಲ್ಲ – ಜೈಲಿನಿಂದಲೇ ಆಡಳಿತ ನಡೆಸಲು ಸಾಧ್ಯವೇ?

    ಕೇಜ್ರಿವಾಲ್‌ ಮೇಲಿರುವ ಆರೋಪ ಏನು?
    ಕೆಲ ಆಯ್ದ ವ್ಯಕ್ತಿಗಳಿಗೆ ಲಾಭ ತರಲು ದೆಹಲಿಯಲ್ಲಿ ಮದ್ಯ ತೆರೆಯಲು ರಾಜ್ಯ ಸರ್ಕಾರ ಅನುಮತಿ ನೀಡಿದೆ. ಲೈಸನ್ಸ್‌ ಪಡೆಯಲು ನೂರಾರು ಕೋಟಿ ರೂ. ಲಂಚ ಪಡೆಯಲಾಗಿದೆ. ಕಂಪನಿಗಳ ಜೊತೆ ನಡೆದ ಸಭೆಯಲ್ಲಿ ಕೇಜ್ರಿವಾಲ್‌ ಸಹ ಭಾಗಿಯಾಗಿದ್ದರು. ಈ ಪ್ರಕರಣದಲ್ಲಿ ಬಂಧನಕ್ಕೆ ಒಳಗಾದ ಆಪ್‌ ನಾಯಕ, ಪಕ್ಷದ ಚುನಾವಣಾ ವೆಚ್ಚಗಳನ್ನು ನೋಡುತ್ತಿದ್ದ ವಿಜಯ್‌ ನಾಯರ್‌ಗೆ ಕಂಪನಿಗಳು ಲೈಸೆನ್ಸ್‌ ಪಡೆಯಲು ಕಿಕ್‌ಬ್ಯಾಕ್‌ ನೀಡಲಾಗಿದೆ. ಈ ನೀತಿಯಿಂದ ಲಾಭ ಪಡೆದ ಮದ್ಯ ವ್ಯಾಪಾರಿಗಳು ಕೇಜ್ರಿವಾಲ್‌ ಆಪ್ತ ಮಂತ್ರಿಗಳಿಗೆ, ಆಪ್ತರಿಗೆ, ಸಹಚರರಿಗೆ ಕೋಟ್ಯಂತರ ರೂ. ಪಾವತಿ ಮಾಡಿದ್ದಾರೆ. ಆಪ್‌ ನಾಯಕ ವಿಜಯ್ ನಾಯರ್ ಅವರು ಕೆಲವು ಉದ್ಯಮಿಗಳು ಮತ್ತು ರಾಜಕಾರಣಿಗಳ ನಿಯಂತ್ರಣದಲ್ಲಿರುವ ‘ದಕ್ಷಿಣ ಗುಂಪಿನಿಂದ’ 100 ಕೋಟಿ ರೂಪಾಯಿಗಳನ್ನು ಕಿಕ್‌ಬ್ಯಾಕ್ ಪಡೆದಿದ್ದಾರೆ ಎಂಬ ಆರೋಪವಿದೆ.

    ಇಡಿ ಎಂಟ್ರಿಯಾಗಿದ್ದು ಹೇಗೆ?
    ದೆಹಲಿ ಲೆಫ್ಟಿನೆಂಟ್‌ ಗವರ್ನರ್‌ ಈ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡಿದ್ದರು. ತನಿಖೆಗೆ ಇಳಿದು ವ್ಯಕ್ತಿಗಳನ್ನು ಬಂಧನ ಮಾಡುತ್ತಿದ್ದಂತೆ ಅಕ್ರಮ ಹಣ ವರ್ಗಾವಣೆ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ. ಈ ಬೆನ್ನಲ್ಲೇ ಜಾರಿ ನಿರ್ದೇಶನಾಲಯ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದೆ.

    ಬಂಧನಗೊಂಡವರು ಯಾರು?
    ಈ ಪ್ರಕಣಕ್ಕೆ ಸಂಬಂಧಿಸಿದಂತೆ ಸಿಬಿಐ ಮತ್ತು ಇಡಿ ಮನೀಶ್‌ ಸಿಸೋಡಿಯಾ‌ (ಆಪ್ ಡಿಸಿಎಂ), ಸತ್ಯೇಂದ್ರ ಜೈನ್‌(ಆಪ್‌ ಸಚಿವ), ಸಂಜಯ್‌ ಸಿಂಗ್‌(ಆಪ್‌ ಸಂಸದ), ಕೆ.ಕವಿತಾ(ಬಿಆರ್‌ಎಸ್‌ ಶಾಸಕಿ)

    9 ಸಮನ್ಸ್‌ಗೆ ಗೈರು:
    2023ರ ನವೆಂಬರ್‌ 23ಕ್ಕೆ ಮೊದಲ ಬಾರಿ ಕೇಜ್ರಿವಾಲ್‌ಗೆ ಸಮನ್ಸ್‌ ಜಾರಿ ಮಾಡಲಾಗಿತ್ತು. ಆದರೆ ವಿಚಾರಣೆಗೆ ಗೈರಾದ ಹಿನ್ನೆಲೆಯಲ್ಲಿ ಡಿ.23 ರಂದು ಮತ್ತೆ ಸಮನ್ಸ್‌ ಜಾರಿ ಮಾಡಲಾಗಿತ್ತು. ಈ ಸಮನ್ಸ್‌ಗೆ ಗೈರಾದ ನಂತರ 2024ರಲ್ಲಿ ಜ.3, ಜ.18, ಫೆ.2, ಫೆ.19, ಫೆ.26, ಮಾರ್ಚ್‌ 4 ರಂದು ಸಮನ್ಸ್‌ ಜಾರಿ ಮಾಡಲಾಗಿತ್ತು. ಈ ಎಲ್ಲಾ ಸಮನ್ಸ್‌ಗಳಿಗೆ ಗೈರಾದ ಹಿನ್ನೆಲೆಯಲ್ಲಿ ಮಾರ್ಚ್‌ 21 ರಂದು ಸಮನ್ಸ್‌ ಜಾರಿ ಮಾಡಿ ಕೇಜ್ರಿವಾಲ್‌ ಅವರನ್ನು ಇಡಿ ಬಂಧಿಸಿದೆ.

     

  • ಸಿಎಂ ಹುದ್ದೆಗೆ ಕೇಜ್ರಿವಾಲ್‌ ರಾಜೀನಾಮೆ ಇಲ್ಲ – ಜೈಲಿನಿಂದಲೇ ಆಡಳಿತ ನಡೆಸಲು ಸಾಧ್ಯವೇ?

    ಸಿಎಂ ಹುದ್ದೆಗೆ ಕೇಜ್ರಿವಾಲ್‌ ರಾಜೀನಾಮೆ ಇಲ್ಲ – ಜೈಲಿನಿಂದಲೇ ಆಡಳಿತ ನಡೆಸಲು ಸಾಧ್ಯವೇ?

    ನವದೆಹಲಿ: ಮದ್ಯ ಹಗರಣದಲ್ಲಿ (Delhi Excise Policy Case) ಜಾರಿ ನಿರ್ದೇಶನಾಲಯ(ED) ಬಂಧಿತರಾಗಿರುವ ಅರವಿಂದ ಕೇಜ್ರಿವಾಲ್‌ (Arvind Kejriwal) ಇನ್ನೂ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡದೇ ಇದ್ದರೂ ಜೈಲಿನಿಂದಲೇ (Jail) ಆಡಳಿತ ನಡೆಸಲಿದ್ದಾರೆ ಎಂದು ಆಪ್‌ (AAP) ಹೇಳಿದೆ.

    ಈ ಬಗ್ಗೆ ಆಪ್‌ ಪಕ್ಷದ ನಾಯಕಿ ಅತಿಶಿ (Atishi) ಪ್ರತಿಕ್ರಿಯಿಸಿ, ಕೇಜ್ರಿವಾಲ್‌ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡುವುದಿಲ್ಲ. ಅವರು ತಮ್ಮ ಖಾತೆಗಳನ್ನು ತ್ಯಜಿಸಲಿದ್ದಾರೆ. ಒಂದು ವೇಳೆ ಅಗತ್ಯಬಿದ್ದರೆ ಜೈಲಿನಿಂದಲೇ ಸರ್ಕಾರ ಚಲಾಯಿಸಲಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಸುರಪುರ ಉಪ ಚುನಾವಣೆ; ದಿವಂಗತ ರಾಜಾ ವೆಂಕಟಪ್ಪ ನಾಯಕ ಪುತ್ರನಿಗೆ ಕಾಂಗ್ರೆಸ್‌ ಟಿಕೆಟ್‌

    ಜೈಲಿನಿಂದ ಆಡಳಿತ್ಯ ಸಾಧ್ಯವೆ?
    ಜೈಲಿನಿಂದ ಸಿಎಂ ಹುದ್ದೆಯನ್ನು ನಿರ್ವಹಿಸುವುದನ್ನು ತಡೆಯಲು ಯಾವುದೇ ಕಾನೂನಿನಲ್ಲ. ಕಾನೂನಿನ ಪ್ರಕಾರ ಸಿಎಂ ಒಬ್ಬರು ಯಾವುದೇ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾದರೆ ಮಾತ್ರ ಅಧಿಕಾರ ಕಳೆದುಕೊಳ್ಳುತ್ತಾರೆ. ಇದನ್ನೂ ಓದಿ: Lok Sabha 2024: ಸಚಿವರ ಮಕ್ಕಳು, ಕುಟುಂಬದವರಿಗೆ ‘ಕೈ’ ಟಿಕೆಟ್‌ – ಯಾರು ಎಲ್ಲಿಂದ ಸ್ಪರ್ಧೆ?

    ರಾಜೀನಾಮೆ ನೀಡಿದ್ದ ಮುಖ್ಯಮಂತ್ರಿಗಳು:
    ಅಧಿಕಾರದಲ್ಲಿ ಇರುವಾಗಲೇ ಮುಖ್ಯಮಂತ್ರಿಗಳನ್ನು ಇಡಿ, ಸಿಬಿಐ ಬಂಧಿಸುವುದು ಹೊಸದೆನಲ್ಲ. ಈ ಹಿಂದೆ ಹಲವು ಪಕ್ಷದ ಮುಖ್ಯಮಂತ್ರಿಗಳನ್ನು ಬಂಧನ ಮಾಡಲಾಗಿತ್ತು. ಆದರೆ ಅವರು ಬಂಧನಕ್ಕೂ ಮೊದಲು ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದ್ದರು. ಆದರೆ ಸಿಎಂ ಹುದ್ದೆಯಲ್ಲಿದ್ದಾಗಲೇ ಬಂಧನಕ್ಕೆ ಒಳಗಾದ ಮೊದಲ ನಾಯಕ ಕೇಜ್ರಿವಾಲ್‌ ಆಗಿದ್ದಾರೆ.

    ಯಡಿಯೂರಪ್ಪ(ಕರ್ನಾಟಕ), ಮಧು ಕೋಡಾ(ಜಾರ್ಖಂಡ್‌), ಶಿಬು ಸೊರೇನ್‌(ಜಾರ್ಖಂಡ್‌), ಜಯಲಲಿತಾ(ತಮಿಳಿನಾಡು), ಲಾಲು ಪ್ರಸಾದ್‌ ಯಾದವ್‌(ಬಿಹಾರ), ಹೇಮಂತ್‌ ಸೊರೇನ್(ಜಾರ್ಖಂಡ್‌), ಓಂ ಪ್ರಕಾಶ್‌ ಚೌತಾಲಾ(ಹರ್ಯಾಣ), ಚಂದ್ರಬಾಬು ನಾಯ್ಡು(ಆಂಧ್ರಪ್ರದೇಶ), ಕರುಣಾನಿಧಿ(ತಮಿಳುನಾಡು), ಚರಣ್‌ ಸಿಂಗ್‌(ಉತ್ತರ ಪ್ರದೇಶ) ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದ ಬಳಿಕ ಬಂಧನಕ್ಕೆ ಒಳಗಾಗಿದ್ದರು.

  • ಸತ್ಯೇಂದ್ರ ಜೈನ್ ಜಾಮೀನು ಅರ್ಜಿ ವಜಾ – ಕೂಡಲೇ ಜೈಲಾಧಿಕಾರಿಗಳ ಮುಂದೆ ಹಾಜರಾಗುವಂತೆ ಸುಪ್ರೀಂ ಆದೇಶ

    ಸತ್ಯೇಂದ್ರ ಜೈನ್ ಜಾಮೀನು ಅರ್ಜಿ ವಜಾ – ಕೂಡಲೇ ಜೈಲಾಧಿಕಾರಿಗಳ ಮುಂದೆ ಹಾಜರಾಗುವಂತೆ ಸುಪ್ರೀಂ ಆದೇಶ

    ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ (ಪಿಎಂಎಲ್‌ಎ) ಬಂಧನಕ್ಕೊಳಪಟ್ಟಿರುವ ದೆಹಲಿಯ (Delhi) ಮಾಜಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್‌ಗೆ (Satyendra Jain) ಜಾಮೀನು (Bail) ನೀಡಲು ಸುಪ್ರೀಂಕೋರ್ಟ್ (Supreme Court) ನಿರಾಕರಿಸಿದೆ‌. ಈ ಕೂಡಲೇ ಅವರು ಜೈಲು ಅಧಿಕಾರಿಗಳ ಮುಂದೆ ಹಾಜರಾಗುವಂತೆ ನ್ಯಾ.ಬೇಲಾ ಎಂ ತ್ರಿವೇದಿ ನೇತೃತ್ವದ ಪೀಠ ಆದೇಶಿಸಿದೆ.

    ವೈದ್ಯಕೀಯ ಕಾರಣಗಳಿಗೆ ಜಾಮೀನಿನ ಮೇಲೆ ಹೊರಗಿರುವ ಸತ್ಯೇಂದ್ರ ಜೈನ್ ಸಾಮಾನ್ಯ ಜಾಮೀನು ಕೋರಿ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಪೀಠ ಎಲ್ಲ ಮೇಲ್ಮನವಿ ಅರ್ಜಿಗಳನ್ನು ವಜಾಗೊಳಿಸಿತು‌.

     

    ಸತ್ಯಂದ್ರ ಜೈನ್ ಅವರನ್ನು 2022 ಮೇ ನಲ್ಲಿ ಜಾರಿ ನಿರ್ದೇಶನಾಲಯ (Enforcement Directorate) ಬಂಧಿಸಿತು. ಒಂದು ವರ್ಷದ ಸುದೀರ್ಘ ಜೈಲಿನಲ್ಲಿದ್ದ‌ ಬಳಿಕ ವೈದ್ಯಕೀಯ ಕಾರಣಗಳ ಹಿನ್ನಲೆ ಸುಪ್ರೀಂಕೋರ್ಟ್ ಮೇ 2023 ರಲ್ಲಿ ಮಧ್ಯಂತರ ಜಾಮೀನು ನೀಡಿತ್ತು. ಸದ್ಯ ಅವರು ಜೈಲಿನಿಂದ ಹೊರಗಿದ್ದು ಚಿಕಿತ್ಸೆ ಪಡೆಯುತ್ತಿದ್ದರು.

    ಕೇಂದ್ರೀಯ ತನಿಖಾ ದಳ (CBI) ಆರಂಭದಲ್ಲಿ ಜೈನ್ ವಿರುದ್ಧ ಭ್ರಷ್ಟಾಚಾರ ತಡೆ ಕಾಯಿದೆ, 1988 ರ 13 (ಇ) (ಅಪಮಾನದ ಆಸ್ತಿ) ಸೆಕ್ಷನ್ 13(2) (ಸಾರ್ವಜನಿಕ ಸೇವಕರಿಂದ ಕ್ರಿಮಿನಲ್ ದುಷ್ಕೃತ್ಯ) ಅಡಿಯಲ್ಲಿ ಪ್ರಕರಣ ದಾಖಲಿಸಿತ್ತು. ಜೈನ್ ಅವರು 2015 ಮತ್ತು 2017 ರ ನಡುವೆ ವಿವಿಧ ವ್ಯಕ್ತಿಗಳ ಹೆಸರಿನಲ್ಲಿ ಚರ ಆಸ್ತಿಗಳನ್ನು ಸಂಪಾದಿಸಿದ್ದಾರೆ ಈ ಬಗ್ಗೆ ಅವರು ತೃಪ್ತಿಕರವಾಗಿ ಲೆಕ್ಕ ನೀಡಿಲ್ಲ ಎಂದು ಆರೋಪಿಸಲಾಗಿತ್ತು.  ಇದನ್ನೂ ಓದಿ: ಕಲ್ಲೆಸೆತಕ್ಕೆ ಸುದ್ದಿಯಾಗಿದ್ದ ಕಾಶ್ಮೀರದಲ್ಲಿ ಫಸ್ಟ್‌ ಟೈಂ ಫಾರ್ಮುಲಾ 4 ರೇಸ್‌ – ಮೋದಿ ಮೆಚ್ಚುಗೆ

    ಇದಾದ ಬಳಿಕ ಇಡಿ ಲಾಭದಾಯಕ ಒಡೆತನದ ಹಲವಾರು ಕಂಪನಿಗಳ ಮೂಲಕ ಹವಾಲಾ ಮಾರ್ಗವಾಗಿ ಅಕ್ರಮ ಹಣ ವರ್ಗಾವಣೆ ಮಾಡಿದ್ದಾರೆ. ಶೆಲ್ ಕಂಪನಿಗಳಿಂದ 4.81 ಕೋಟಿ ರೂ. ಮೊತ್ತದ ವಸತಿ ನಮೂದುಗಳನ್ನು ಪಡೆದಿವೆ ಎಂದು ಆರೋಪಿಸಿ ಅವರನ್ನು ಬಂಧಿಸಿತು. ವಿಚಾರಣಾ ನ್ಯಾಯಾಲಯವು ನವೆಂಬರ್ 17, 2022 ರಂದು ಅವರ ಇಡಿ ಪ್ರಕರಣದ ಜಾಮೀನು ಅರ್ಜಿಯನ್ನು ತಿರಸ್ಕರಿಸಿತು. ಇದನ್ನೂ ಓದಿ: ಚಾರ್ಮಾಡಿ ಘಾಟಿಯಲ್ಲಿ ಕೆಟ್ಟು ನಿಂತ 16 ಚಕ್ರದ ಲಾರಿ – ಕಿ.ಮೀಗಟ್ಟಲೆ ಟ್ರಾಫಿಕ್‌ ಜಾಮ್‌

    ಈ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಯಿತು. ವಿಚಾರಣೆ ನಡೆಸಿದ ಕೋರ್ಟ್ ಜೈನ್ ಒಬ್ಬ ಪ್ರಭಾವಿ ವ್ಯಕ್ತಿ ಮತ್ತುಅಕ್ರಮ ವರ್ಗಾವಣೆ ತಡೆ ಕಾಯ್ದೆಯ(ಪಿಎಂಎಲ್‌ಎ) ಅಡಿಯಲ್ಲಿ ಜಾಮೀನಿಗೆ ಅವಳಿ ಷರತ್ತುಗಳನ್ನು ಪೂರೈಸಿದ್ದಾರೆ ಎಂದು ಹೇಳಲಾಗುವುದಿಲ್ಲ ಎಂದು ಅರ್ಜಿ ವಜಾ ಮಾಡಿತು. ಈ ಹಿನ್ನಲೆ ಜೈನ್ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು.

     

  • ವೋಟ್‌ ಬ್ಯಾಂಕ್ ರಾಜಕಾರಣಕ್ಕಾಗಿ ಸಿಎಎ ಜಾರಿ: ಕೇಂದ್ರದ ವಿರುದ್ಧ ಕೇಜ್ರಿವಾಲ್ ವಾಗ್ದಾಳಿ

    ವೋಟ್‌ ಬ್ಯಾಂಕ್ ರಾಜಕಾರಣಕ್ಕಾಗಿ ಸಿಎಎ ಜಾರಿ: ಕೇಂದ್ರದ ವಿರುದ್ಧ ಕೇಜ್ರಿವಾಲ್ ವಾಗ್ದಾಳಿ

    ನವದೆಹಲಿ: ಪೌರತ್ವ ತಿದ್ದುಪಡಿ ಕಾನೂನು (CAA) ಜಾರಿ ರಾಜಕೀಯ ಸಂಘರ್ಷಕ್ಕೆ ವೇದಿಕೆಯಾಗಿದ್ದು, ವಿರೋಧ ಪಕ್ಷಗಳು ಪ್ರಧಾನಿ ನರೇಂದ್ರ ಮೋದಿ (Narendra Modi) ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿವೆ. ಈ ನಡುವೆ ಮಾತನಾಡಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ (Arvind Kejriwal) ವೋಟ್‌ ಬ್ಯಾಂಕ್ ರಾಜಕಾರಣಕ್ಕಾಗಿ ನೆರೆ ರಾಷ್ಟ್ರಗಳಲ್ಲಿರುವ ಜನರನ್ನು ಭಾರತಕ್ಕೆ ಕರೆತರಲಾಗುತ್ತಿದೆ ಎಂದು ಆರೋಪಿಸಿದರು.

    ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಿಎಎ ಈಶಾನ್ಯ ರಾಜ್ಯಗಳಿಗೆ ಹೆಚ್ಚಿನ ಹಾನಿಯನ್ನುಂಟು ಮಾಡುತ್ತದೆ. ಇತರ ದೇಶಗಳು ಹೊರಗಿನವರು ಬರುವುದನ್ನು ನಿಲ್ಲಿಸುತ್ತವೆ. ಆದರೆ ಬಿಜೆಪಿ ಚುನಾವಣಾ ಲಾಭಕ್ಕಾಗಿ ಸಿಎಎ ತಂದಿದೆ. ತಮ್ಮ ದೇಶದ ಹಕ್ಕುಗಳನ್ನು ಪಾಕಿಸ್ತಾನಿಗಳಿಗೆ ನೀಡುತ್ತಿದ್ದಾರೆ. ಸಿಎಎ ಹಿಂಪಡೆಯಬೇಕು ಎಂದು ದೇಶ ಒತ್ತಾಯಿಸುತ್ತಿದೆ ಎಂದರು. ಇದನ್ನೂ ಓದಿ: ಸಿಎಎ ವಿಷಯದಲ್ಲಿ ನಟ ವಿಜಯ್ ಗೆ ಟಾಂಗ್ ಕೊಟ್ಟ ಕಂಗನಾ

    ದೇಶದ ಯುವಕರಿಗೆ ಉದ್ಯೋಗ ಸಿಗುತ್ತಿಲ್ಲ. ಬಿಜೆಪಿ 10 ವರ್ಷಗಳಲ್ಲಿ ಸರಿಯಾಗಿ ಕೆಲಸ ಮಾಡಿದ್ದರೆ. ಚುನಾವಣೆಗೆ ಮುನ್ನ ಸಿಎಎ ತರುವ ಅಗತ್ಯವಿರಲಿಲ್ಲ. ಭಾರತದಲ್ಲಿ ಹಣದುಬ್ಬರವು ಏರಿದೆ. ನಿರುದ್ಯೋಗ ಉತ್ತುಂಗದಲ್ಲಿದೆ. ಯುವಕರು ಉದ್ಯೋಗಕ್ಕಾಗಿ ಪರದಾಡುವ ಸನ್ನಿವೇಶ ನಿರ್ಮಾಣವಾಗಿದೆ. ಈ‌ ನಡುವೆ ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ಅಲ್ಪಸಂಖ್ಯಾತರು ಭಾರತೀಯ ಪೌರತ್ವ ಪಡೆಯಲು ಬಯಸಿದರೆ, ಅವರಿಗೂ ಪೌರತ್ವ ನೀಡಲಾಗುವುದು ಎಂದು ಕೇಂದ್ರದ ಬಿಜೆಪಿ ಸರ್ಕಾರ ಹೇಳುತ್ತದೆ. ಇದರರ್ಥ ಅಲ್ಪಸಂಖ್ಯಾತರು ಹೆಚ್ಚಿನ ಸಂಖ್ಯೆಯಲ್ಲಿ ನಮ್ಮ ದೇಶಕ್ಕೆ ಕರೆತರುವ ಯೋಜನೆಯಾಗಿದೆ. ಮಾಹಿತಿ ಪ್ರಕಾರ ಸುಮಾರು 2.5 ಕೋಟಿಯಿಂದ 3 ಕೋಟಿ ಅಲ್ಪಸಂಖ್ಯಾತರಿಗೆ ಪೌರತ್ವ ನೀಡಲಾಗುತ್ತಿದೆ. ಅಂದರೆ ಅವರನ್ನು ಕರೆತಂದು ಉದ್ಯೋಗ ನೀಡಿ ಮನೆ ನಿರ್ಮಿಸಿಕೊಡಲಾಗುವುದು ಎಂದು ತಿಳಿಸಿದರು.

    ಬಿಜೆಪಿಯವರಿಗೆ ಇಲ್ಲಿರುವ ನಮ್ಮ ಮಕ್ಕಳಿಗೆ ಕೆಲಸ ಕೊಡಲು ಸಾಧ್ಯವಿಲ್ಲ. ಆದರೆ ಪಾಕಿಸ್ತಾನದಿಂದ ಬರುವ ಮಕ್ಕಳಿಗೆ ಕೆಲಸ ಕೊಡಲು ಬಯಸುತ್ತಾರೆ. ನಮ್ಮ ಅನೇಕ ಜನರು ನಿರಾಶ್ರಿತರಾಗಿದ್ದಾರೆ. ಆದರೆ ಬಿಜೆಪಿ ಪಾಕಿಸ್ತಾನದಿಂದ ಬರುವ ಜನರನ್ನು ಇಲ್ಲಿ ನೆಲೆ ನೀಡಲು ಬಯಸುತ್ತದೆ. ಅವರು ನಮ್ಮ ಕೆಲಸವನ್ನು ವಿದೇಶಿ ಮಕ್ಕಳಿಗೆ ನೀಡಲು ಬಯಸುತ್ತಾರೆ. ಪಾಕಿಸ್ತಾನಿಗಳನ್ನು ನಮ್ಮ ಹಕ್ಕಿನ ಮನೆಗಳಲ್ಲಿ ನೆಲೆಸಲು ಬಿಜೆಪಿ ನಾಯಕರು ಬಯಸುತ್ತಾರೆ. ಭಾರತ ಸರ್ಕಾರದ ಬಳಿ ಇರುವ ಹಣವನ್ನು ನಮ್ಮ ಕುಟುಂಬ ಮತ್ತು ದೇಶದ ಅಭಿವೃದ್ಧಿಗೆ ಬಳಸಬೇಕು. ಆದರೆ ಪಾಕಿಸ್ತಾನಿಗಳನ್ನು ನೆಲೆಗೊಳಿಸಲು ಇದನ್ನು ಬಳಸಲಾಗುತ್ತಿದೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಭಾರತದ ಪ್ರತಿಯೊಬ್ಬ ಮುಸ್ಲಿಮರೂ ಸಿಎಎಯನ್ನು ಸ್ವಾಗತಿಸಬೇಕು: ಮುಸ್ಲಿಂ ಜಮಾತ್‌ ಅಧ್ಯಕ್ಷ ಕರೆ

  • ಮೋದಿ ಜಪಿಸ್ತಿರೋ ಗಂಡಂದಿರಿಗೆ ಊಟ ಬಡಿಸ್ಬೇಡಿ- ಮಹಿಳೆಯರಿಗೆ ಕೇಜ್ರಿವಾಲ್ ಕರೆ

    ಮೋದಿ ಜಪಿಸ್ತಿರೋ ಗಂಡಂದಿರಿಗೆ ಊಟ ಬಡಿಸ್ಬೇಡಿ- ಮಹಿಳೆಯರಿಗೆ ಕೇಜ್ರಿವಾಲ್ ಕರೆ

    ನವದೆಹಲಿ: ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಹೆಸರನ್ನು ಜಪ ಮಾಡಿದರೆ ತಮ್ಮ ಗಂಡನಿಗೆ ರಾತ್ರಿ ಊಟವನ್ನು ನೀಡಬೇಡಿ ಎಂದು ಮಹಿಳೆಯರಿಗೆ ಕರೆ ನೀಡಿದ್ದಾರೆ.

    ‘ಮಹಿಳಾ ಸಮ್ಮಾನ್ ಸಮರೋಹ್’ ಎಂಬ ಹೆಸರಿನ ಟೌನ್‌ಹಾಲ್ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಅನೇಕ ಪುರುಷರು ಪ್ರಧಾನಿ ಮೋದಿಯವರ ಹೆಸರನ್ನು ಜಪಿಸುತ್ತಿದ್ದಾರೆ. ನಿಮ್ಮ ಪತಿ ಮೋದಿಯವರ (Narendra Modi) ಹೆಸರನ್ನು ಜಪಿಸಿದರೆ, ನೀವು ಅವರಿಗೆ ರಾತ್ರಿಯ ಊಟವನ್ನು ನೀಡುವುದಿಲ್ಲ ಎಂದು ಹೇಳುವಂತೆ ತಿಳಿಸಿದ್ದಾರೆ.

    ನಿಮ್ಮ ಸಹೋದರ ಕೇಜ್ರಿವಾಲ್ (Arvind Kejriwal) ಮಾತ್ರ ನಿಮ್ಮ ಬೆಂಬಲಕ್ಕೆ ನಿಲ್ಲುತ್ತಾರೆ ಎಂದು ಬಿಜೆಪಿಯನ್ನು ಬೆಂಬಲಿಸುವ ಇತರ ಮಹಿಳೆಯರಿಗೆ ಹೇಳುವಂತೆ ಇದೇ ವೇಳೆ ದೆಹಲಿ ಸಿಎಂ ತಿಳಿಸಿದರು. ನಾನು ಮಹಿಳೆಯರಿಗೆ ಕರೆಂಟ್ ಫ್ರೀ ಮಾಡಿದ್ದೇನೆ, ಬಸ್ ಟಿಕೆಟ್ ಉಚಿತ ಮಾಡಿದ್ದೇನೆ ಎಂದು ಹೇಳಿ.ಅಲ್ಲದೇ ಈಗ ನಾನು ಪ್ರತಿ ತಿಂಗಳು ಮಹಿಳೆಯರಿಗೆ ಈ 1,000 ರೂಗಳನ್ನು ನೀಡುತ್ತಿದ್ದೇನೆ. ಬಿಜೆಪಿ (BJP) ಅವರಿಗೆ ಏನು ಮಾಡಿದೆ? ಬಿಜೆಪಿಗೆ ಏಕೆ ಮತ ಹಾಕಬೇಕು? ಈ ಬಾರಿ ಕೇಜ್ರಿವಾಲ್‌ಗೆ ಮತ ಹಾಕಿ ಎಂದು ಕೇಜ್ರಿವಾಲ್‌ ತಿಳಿಸಿದರು. ಇದನ್ನೂ ಓದಿ: ಪಶ್ಚಿಮ ಬಂಗಾಳ ಉಳಿಸಿ- ಪ್ರಧಾನಿಗೆ ರಕ್ತದಲ್ಲಿ ಪತ್ರ ಬರೆದ ಕೌಸ್ತವ್ ಬಾಗ್ಚಿ

    ಬೇರೆ ಪಕ್ಷಗಳು ಮಹಿಳೆಗೆ ಒಂದಷ್ಟು ಹುದ್ದೆ ನೀಡಿ ಮಹಿಳೆ ಸಬಲೀಕರಣ ಮಾಡಿದ್ದೇವೆ ಎಂದು ಹೇಳುತ್ತಿವೆ. ಮಹಿಳೆಯರಿಗೆ ಹುದ್ದೆ ಬೇಡ, ದೊಡ್ಡ ಹುದ್ದೆ, ಟಿಕೆಟ್ ಎಲ್ಲ ಸಿಗಬೇಕು ಎಂದು ನಾನು ಹೇಳುತ್ತಿಲ್ಲ. ಆದರೆ ಇದರಿಂದ ಕೇವಲ ಎರಡ್ಮೂರು ಮಹಿಳೆಯರಿಗೆ ಮಾತ್ರ ಲಾಭವಾಗುತ್ತದೆ. ಉಳಿದ ಮಹಿಳೆಯರಿಗೆ ಏನು ಸಿಗುತ್ತದೆ ಎಂದು ಕೇಜ್ರಿವಾಲ್ ಪ್ರಶ್ನಿಸಿದ್ದಾರೆ.

    ತಮ್ಮ ಸರ್ಕಾರದ ಅಡಿಯಲ್ಲಿ ಹೊಸ ಯೋಜನೆ ‘ಮುಖ್ಯಮಂತ್ರಿ ಮಹಿಳಾ ಸಮ್ಮಾನ್ ಯೋಜನೆ’ಯು ನಿಜವಾದ ಸಬಲೀಕರಣವನ್ನು ತರುತ್ತದೆ. ಹಣವಿದ್ದಾಗ ಸಬಲೀಕರಣವಾಗುತ್ತದೆ, ಪ್ರತಿ ಮಹಿಳೆಗೆ ಪ್ರತಿ ತಿಂಗಳು 1000 ರೂ. ಸಿಕ್ಕಾಗ ನಿಜವಾದ ಸಬಲೀಕರಣವಾಗುತ್ತದೆ. ಇಡೀ ವಿಶ್ವದಲ್ಲಿ ಈ ಯೋಜನೆಯು “ಅತಿದೊಡ್ಡ ಮಹಿಳಾ ಸಬಲೀಕರಣ ಕಾರ್ಯಕ್ರಮ” ಎಂದು ದೆಹಲಿ ಮುಖ್ಯಮಂತ್ರಿ ಬಣ್ಣಿಸಿದರು.

  • ಇಡಿ ವಿಚಾರಣೆಗೆ ಗೈರು – ಅರವಿಂದ್ ಕೇಜ್ರಿವಾಲ್‌ಗೆ ದೆಹಲಿ ನ್ಯಾಯಾಲಯದಿಂದ ಸಮನ್ಸ್

    ಇಡಿ ವಿಚಾರಣೆಗೆ ಗೈರು – ಅರವಿಂದ್ ಕೇಜ್ರಿವಾಲ್‌ಗೆ ದೆಹಲಿ ನ್ಯಾಯಾಲಯದಿಂದ ಸಮನ್ಸ್

    ನವದೆಹಲಿ: ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರಿಗೆ ದೆಹಲಿ ನ್ಯಾಯಾಲಯ (Delhi Court) ಸಮನ್ಸ್ ಜಾರಿ ಮಾಡಿದ್ದು, ಮಾರ್ಚ್ 16 ರಂದು ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದೆ. ದೆಹಲಿ ಹೊಸ ಅಬಕಾರಿ ನೀತಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಈ ಸಮನ್ಸ್ ಜಾರಿ ಮಾಡಿದೆ.

    ಪ್ರಕರಣ ಸಂಬಂಧ ಜಾರಿ ನಿರ್ದೇಶನಾಲಯ ಪಿಎಂಎಲ್‌ಎಯ ಸೆಕ್ಷನ್ 50 ರ ಅಡಿಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಎಂಟು ಬಾರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಸಮನ್ಸ್ ನೀಡಿತ್ತು. ಆದರೆ ಈವರೆಗೂ ಒಮ್ಮೆಯೂ ವಿಚಾರಣೆಗೆ ಹಾಜರಾಗದ ಹಿನ್ನೆಲೆ ದೆಹಲಿ ನ್ಯಾಯಲಯದಲ್ಲಿ ಅರ್ಜಿ ಸಲ್ಲಿಸಿತ್ತು. ಇಡಿ (Enforcement Directorate) ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಈಗ ವಿಚಾರಣೆಗೆ ಸಮನ್ಸ್ ಜಾರಿ ಮಾಡಿದೆ. ಇದನ್ನೂ ಓದಿ: ದಕ್ಷಿಣ ಗೆಲ್ಲಲು AI ಮೊರೆ ಹೋದ ಮೋದಿ – ವಿಶ್ವದಲ್ಲೇ ಮೊದಲು ಎಂದು ಬಿಜೆಪಿ

    ಇದಕ್ಕೂ ಮೊದಲು ದೆಹಲಿಯ ಅಬಕಾರಿ ನೀತಿಗೆ ಸಂಬಂಧಿಸಿದ ಮನಿ ಲ್ಯಾಂಡರಿಂಗ್ ಪ್ರಕರಣದಲ್ಲಿ ಕೇಜ್ರಿವಾಲ್ ಅವರಿಗೆ ನೀಡಲಾದ ಮೊದಲ ಮೂರು ಸಮನ್ಸ್‌ಗಳಿಗೆ ಹಾಜರಾಗದ ಕಾರಣ ಪ್ರಾಸಿಕ್ಯೂಷನ್ ಕೋರಿ ತನಿಖಾ ಸಂಸ್ಥೆ ಸ್ಥಳೀಯ ನ್ಯಾಯಾಲಯಕ್ಕೆ ಮನವಿ ಮಾಡಿತ್ತು. ನ್ಯಾಯಾಲಯವು ಮಾರ್ಚ್ 16 ರಂದು ವಿಚಾರಣೆಗೆ ಈ ವಿಷಯವನ್ನು ಪಟ್ಟಿ ಮಾಡಿದೆ.

    ಅಬಕಾರಿ ನೀತಿ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಸಲ್ಲಿಸಿರುವ ಚಾರ್ಜ್‌ಶೀಟ್‌ಗಳಲ್ಲಿ ಕೇಜ್ರಿವಾಲ್ ಅವರ ಹೆಸರನ್ನು ಹಲವು ಬಾರಿ ಉಲ್ಲೇಖಿಸಲಾಗಿದೆ. 2021-22ರ ಅಬಕಾರಿ ನೀತಿಯನ್ನು ಸಿದ್ಧಪಡಿಸುವ ಕುರಿತು ಆರೋಪಿಗಳು ಕೇಜ್ರಿವಾಲ್ ಅವರೊಂದಿಗೆ ಸಂಪರ್ಕದಲ್ಲಿದ್ದರು ಎಂದು ಇಡಿ ಆರೋಪಿಸಿದೆ. ಈ ಪ್ರಕರಣದಲ್ಲಿ ಎಎಪಿ ನಾಯಕರಾದ ಮನೀಶ್ ಸಿಸೋಡಿಯಾ ಮತ್ತು ಸಂಜಯ್ ಸಿಂಗ್, ಪಕ್ಷದ ಸಂವಹನ ಉಸ್ತುವಾರಿ ವಿಜಯ್ ನಾಯರ್ ಮತ್ತು ಕೆಲವು ಮದ್ಯದ ಉದ್ಯಮಿಗಳನ್ನು ತನಿಖಾ ಸಂಸ್ಥೆ ಇಲ್ಲಿಯವರೆಗೆ ಬಂಧಿಸಿದೆ. ಇದನ್ನೂ ಓದಿ: 15 ವರ್ಷದ ಬಳಿಕ ಘರ್‌ ವಾಪ್ಸಿ – ಮರಳಿ ಬಿಜೆಪಿ ಜೊತೆ ಬಿಜೆಡಿ ಮೈತ್ರಿ?

  • ಲೆಫ್ಟಿನೆಂಟ್ ಗವರ್ನರ್ ಭಾಷಣಕ್ಕೆ ಅಡ್ಡಿ; 7 ಮಂದಿ ಬಿಜೆಪಿ ಶಾಸಕರ ಅಮಾನತು ರದ್ದುಗೊಳಿಸಿದ ಹೈಕೋರ್ಟ್

    ಲೆಫ್ಟಿನೆಂಟ್ ಗವರ್ನರ್ ಭಾಷಣಕ್ಕೆ ಅಡ್ಡಿ; 7 ಮಂದಿ ಬಿಜೆಪಿ ಶಾಸಕರ ಅಮಾನತು ರದ್ದುಗೊಳಿಸಿದ ಹೈಕೋರ್ಟ್

    ನವದೆಹಲಿ: ವಿಧಾನಸಭೆಯಲ್ಲಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ.ಸಕ್ಸೇನಾ ಅವರ ಭಾಷಣಕ್ಕೆ ಅಡ್ಡಿಪಡಿಸಿದ ಹಿನ್ನೆಲೆ ಕಳೆದ ಫೆಬ್ರವರಿಯಲ್ಲಿ ಏಳು ಮಂದಿ ಬಿಜೆಪಿ ಶಾಸಕರನ್ನು ಅಮಾನತು ಮಾಡಿದ ದೆಹಲಿ ವಿಧಾನಸಭಾ ಸ್ಪೀಕರ್ ಅವರ ಆದೇಶವನ್ನು ದೆಹಲಿ ಹೈಕೋರ್ಟ್ (Delhi High Court) ರದ್ದುಗೊಳಿಸಿದೆ. ಅಮಾನತುಗೊಂಡ ಶಾಸಕರು ಸಲ್ಲಿಸಿದ್ದ ಅರ್ಜಿ ವಿಚಾರಣೆ ಬಳಿಕ ಈ ಆದೇಶ ನೀಡಲಾಗಿದೆ.

    ಲೆಫ್ಟಿನೆಂಟ್ ಗವರ್ನರ್ ವಿ.ಕೆ.ಸಕ್ಸೇನಾ (V.K.Saxena) ಅವರ ಭಾಷಣದ ವೇಳೆ ಬಿಜೆಪಿ ಶಾಸಕರಾದ ಮೋಹನ್ ಸಿಂಗ್ ಬಿಶ್ತ್, ಅಜಯ್ ಮಹಾವರ್, ಒ.ಪಿ.ಶರ್ಮಾ, ಅಭಯ್ ವರ್ಮಾ, ಅನಿಲ್ ಬಾಜ್‌ಪೇಯ್, ಜಿತೇಂದರ್ ಮಹಾಜನ್ ಮತ್ತು ವಿಜೇಂದರ್ ಗುಪ್ತಾ ಅವರು 30 ನಿಮಿಷಗಳಲ್ಲಿ ಹತ್ತು ಬಾರಿ ಭಾಷಣವನ್ನು ವಿರಾಮಗೊಳಿಸುವಂತೆ ಒತ್ತಾಯಿಸಿದ್ದರು‌. ಇದನ್ನೂ ಓದಿ: ಸನಾತನ ಧರ್ಮದ ಬಗ್ಗೆ ವಿವಾದಾತ್ಮಕ ಹೇಳಿಕೆ – ಉದಯನಿಧಿ ಸ್ಟಾಲಿನ್‌ಗೆ ಹೈಕೋರ್ಟ್‌ ರಿಲೀಫ್‌

    ಅಶಿಸ್ತಿನ ವರ್ತನೆ ತೋರಿದ ಶಾಸಕರ ವಿರುದ್ಧ ಕ್ರಮಕ್ಕೆ ಎಎಪಿ ಶಾಸಕ ದಿಲೀಪ್ ಪಾಂಡೆ ಒತ್ತಾಯಿಸಿದರು. ಬಳಿಕ ಸ್ಪೀಕರ್ ರಾಮ್ ನಿವಾಸ್ ಗೋಯೆಲ್ ಈ ವಿಷಯವನ್ನು ವಿಶೇಷಾಧಿಕಾರ ಸಮಿತಿಗೆ ವರ್ಗಾಯಿಸಿದ್ದರು. ಸಮಿತಿಯು ತನ್ನ ವರದಿಯನ್ನು ಸಲ್ಲಿಸುವವರೆಗೆ ಏಳು ಬಿಜೆಪಿ ಶಾಸಕರನ್ನು ಸದನದ ಕಲಾಪದಲ್ಲಿ ಭಾಗವಹಿಸದಂತೆ ಅಮಾನತುಗೊಳಿಸುವ ಪ್ರಸ್ತಾಪವನ್ನು ಸದನವು ಅಂಗೀಕರಿಸಿತ್ತು.

    ಬಿಜೆಪಿಯ ಏಳು ಶಾಸಕರು ವಿಶೇಷಾಧಿಕಾರ ಸಮಿತಿಯ ಮುಂದೆ ಕಲಾಪ ಮುಗಿಯುವವರೆಗೆ ತಮ್ಮನ್ನು ಅಮಾನತುಗೊಳಿಸಿರುವುದನ್ನು ಪ್ರಶ್ನಿಸಿ ದೆಹಲಿ ಹೈಕೋರ್ಟ್ ಮೊರೆ ಹೋಗಿದ್ದರು. ಫೆಬ್ರವರಿ 27 ರಂದು ಹೈಕೋರ್ಟ್ ತನ್ನ ತೀರ್ಪನ್ನು ಕಾಯ್ದಿರಿಸಿತ್ತು. ಬುಧವಾರ ನ್ಯಾಯಾಲಯವು ಏಳು ಬಿಜೆಪಿ ಶಾಸಕರ ಅಮಾನತು ರದ್ದುಗೊಳಿಸಿತು. ಇದನ್ನೂ ಓದಿ: ಅಮೇಥಿಯಿಂದ ರಾಹುಲ್‌ ಗಾಂಧಿ, ರಾಯ್‌ಬರೇಲಿ ಕ್ಷೇತ್ರದಿಂದ ಪ್ರಿಯಾಂಕಾ ಗಾಂಧಿ ಸ್ಪರ್ಧೆ?

  • 18 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಪ್ರತಿ ತಿಂಗಳು 1,000 ರೂ. – ಆಪ್‌ ಸರ್ಕಾರದಿಂದ ಬಂಪರ್‌ ಕೊಡುಗೆ

    18 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಪ್ರತಿ ತಿಂಗಳು 1,000 ರೂ. – ಆಪ್‌ ಸರ್ಕಾರದಿಂದ ಬಂಪರ್‌ ಕೊಡುಗೆ

    ನವದೆಹಲಿ: ರಾಷ್ಟ್ರ ರಾಜಧಾನಿಯ ಮಹಿಳೆಯರಿಗಾಗಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್ (Arvind Kejriwal Government) ನೇತೃತ್ವದ ಸರ್ಕಾರ ಬಂಪರ್ ಯೋಜನೆ ಪ್ರಕಟಿಸಿದೆ.

    ಸೋಮವಾರ ದೆಹಲಿ ವಿಧಾನಸಭೆಯಲ್ಲಿ ರಾಜ್ಯ ಹಣಕಾಸು ಸಚಿವೆ ಅತಿಶಿ 2024-25ನೇ ಸಾಲಿನ‌ ವರ್ಷದ ಬಜೆಟ್‌ ಮಂಡಿಸಿದ್ದಾರೆ. 76,000 ಕೋಟಿ ರೂ. ಗಾತ್ರದ ಬಜೆಟ್‌ ಮಂಡಿಸಿದ್ದು, ತಮ್ಮ ಚೊಚ್ಚಲ ಬಜೆಟ್‌ನಲ್ಲಿ ʻಮುಖ್ಯಮಂತ್ರಿ ಮಹಿಳಾ ಸಮ್ಮಾನ್ʼಯೋಜನೆ (Mukyamnatri Mahila Samman Yojana) ಘೋಷಿಸಿದರು.

    ಈ ಯೋಜನೆ ಅಡಿಯಲ್ಲಿ 18 ವರ್ಷ ಮೇಲ್ಪಟ್ಟ ಮಹಿಳೆಯರು (Delhi Women) ಪ್ರಸಕ್ತ ಆರ್ಥಿಕ ವರ್ಷದಿಂದ ಪ್ರತಿ ತಿಂಗಳು 1,000 ರೂ. ಆದಾಯ ಪಡೆಯಲಿದ್ದಾರೆ. ಮಹಿಳೆಯರನ್ನು ಸಬಲೀಕರಣಗೊಳಿಸುವ ಉದ್ದೇಶವೂ ಇದಾಗಿದೆ ಎಂದು ತಮ್ಮ ಬಜೆಟ್‌ ಭಾಷಣದಲ್ಲಿ ತಿಳಿಸಿದರು. ಇದನ್ನೂ ಓದಿ: ಮಮತಾ ಸವಾಲು ಸ್ವೀಕಾರ – ಸಕ್ರೀಯ ರಾಜಕಾರಣಕ್ಕೆ ಇಳಿದ ಕೋಲ್ಕತ್ತಾ ಹೈಕೋರ್ಟ್‌ ಜಡ್ಜ್‌ ಗಂಗೋಪಾಧ್ಯಾಯ

    ಇಲ್ಲಿಯವರೆಗೆ ದೆಹಲಿಯಲ್ಲಿ ಶ್ರೀಮಂತರ ಕುಟುಂಬದ ಮಕ್ಕಳು ಶ್ರೀಮಂತರಾಗಿ, ಬಡ ಕುಟುಂಬದ ಮಕ್ಕಳು ಬಡವರಾಗಿಯೇ ಉಳಿಯುತ್ತಿದ್ದರು. ಇದು ರಾಮರಾಜ್ಯದ ಪರಿಕಲ್ಪನೆಗೆ ವಿರುದ್ಧವಾಗಿತ್ತು. ಆದ್ರೆ ನಮ್ಮ ಸರ್ಕಾರ ರಾಮರಾಜ್ಯದ ಕನಸನ್ನು ನನಸಾಗಿಸುವ ನಿಟ್ಟಿನಲ್ಲಿ ಬಜೆಟ್‌ ಮಂಡಿಸಿದೆ ಎಂದು ಒತ್ತಿ ಹೇಳಿದರು. ಇದನ್ನೂ ಓದಿ: ನೌಕಾಪಡೆಗೆ ಎಂಹೆಚ್ 60ಆರ್ ಸೀಹಾಕ್ ಹೆಲಿಕಾಪ್ಟರ್ ನಿಯೋಜನೆಗೆ ಸಿದ್ಧತೆ – ಭಾರತಕ್ಕೆ ಭೀಮ ಬಲ

    ಕೇಜ್ರಿವಾಲ್ ಸರ್ಕಾರವು 2015 ರಿಂದ 22,711 ಹೊಸ ಶಾಲಾ ಕೊಠಡಿಗಳನ್ನು ನಿರ್ಮಿಸಿದೆ. ಶಿಕ್ಷಣವು ನಮ್ಮ ಸರ್ಕಾರದ ಆದ್ಯತೆಯಾಗಿದೆ. ಈ ವರ್ಷ ಶಿಕ್ಷಣಕ್ಕಾಗಿ 16,396 ಕೋಟಿ ರೂ., ದೆಹಲಿಯ ಆರೋಗ್ಯ ಕ್ಷೇತ್ರಕ್ಕೆ 8,685 ರೂ.ಗಳನ್ನು ಮೀಸಲಿಡಲಾಗಿದೆ. ಈ ಅನುದಾನದ ಅಡಿಯಲ್ಲಿ ಸರ್ಕಾರಿ ಆಸ್ಪತ್ರೆಗಳಿಗೆ 6,215 ರೂ.ಗಳಷ್ಟು ಮೂಲ ಸೌಕರ್ಯಗಳ ಸೌಲಭ್ಯ ಸಿಗಲಿದೆ. ಅಲ್ಲದೇ ಹೊಸ ಆಸ್ಪತ್ರೆಗಳ ನಿರ್ಮಾಣಕ್ಕೆ 400 ಕೋಟಿ ರೂ. ಗಳನ್ನು ಮೀಸಲಿಡಲಾಗಿದೆ ಎಂದು ವಿವರಿಸಿದರು.

  • ಲೋಕಸಭಾ ಚುನಾವಣೆಗೂ ಮುನ್ನ I.N.D.I.A ಒಕ್ಕೂಟದಲ್ಲಿ ಒಡಕು – ಚೂರನ್ನು ಮತ್ತೆ ಜೋಡಿಸುತ್ತಾ ಕಾಂಗ್ರೆಸ್‌?

    ಲೋಕಸಭಾ ಚುನಾವಣೆಗೂ ಮುನ್ನ I.N.D.I.A ಒಕ್ಕೂಟದಲ್ಲಿ ಒಡಕು – ಚೂರನ್ನು ಮತ್ತೆ ಜೋಡಿಸುತ್ತಾ ಕಾಂಗ್ರೆಸ್‌?

    ಲೋಕಸಭಾ ಚುನಾವಣೆಗೆ (General Elections 2024) ವೇದಿಕೆ ಸಿದ್ಧವಾಗಿದೆ. ಅಖಾಡದಲ್ಲಿ ಸೆಣಸಾಡಲು ಪೈಲ್ವಾನರು ತೆರೆಮರೆಯಲ್ಲಿ ಕಸರತ್ತು ನಡೆಸುತ್ತಿದ್ದಾರೆ. ಒಂದೆಡೆ ಆಡಳಿತಾರೂಢ ಬಿಜೆಪಿ (BJP) ನೇತೃತ್ವದ ಎನ್‌ಡಿಎ ಒಕ್ಕೂಟ (NDA) ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದೆ. ಮತ್ತೊಂದೆಡೆ ಎನ್‌ಡಿಎ ಒಕ್ಕೂಟವನ್ನು ಮಟ್ಟಹಾಕಲು ಒಂದಾಗಿದ್ದ ಯುಪಿಎ ನೇತೃತ್ವದ ಇಂಡಿಯಾ ಮೈತ್ರಿಕೂಟ ಈಗ ನಾಲ್ಕು ದಿಕ್ಕಿಗೂ ಹರಿದು ಹಂಚಿಹೋಗಿದೆ. ಒಡೆದ ಮಡಿಕೆಯಂತಾಗಿರುವ ಮೈತ್ರಿಕೂಟವನ್ನು ಮತ್ತೆ ಜೋಡಿಸುತ್ತಾ ಕಾಂಗ್ರೆಸ್?

    ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ ಒಕ್ಕೂಟ ಮತ್ತೊಂದು ಗೆಲುವು ಸಾಧಿಸುವುದನ್ನು ತಡೆಯಲು ರಚಿಸಲಾಗಿದ್ದ ‘ಇಂಡಿಯಾ’ ಬಣವು (INDIA Alliance) ಶಿಥಿಲಗೊಳ್ಳುತ್ತಿರುವಂತೆ ತೋರುತ್ತಿದೆ. ಮೈತ್ರಿಕೂಟದ ಭಾಗವಾಗಿದ್ದ ತೃಣಮೂಲ ಕಾಂಗ್ರೆಸ್ ಸಮಿತಿ (ಟಿಎಂಸಿ), ಜೆಡಿಯು, ಆರ್‌ಎಲ್‌ಡಿ ಪಕ್ಷಗಳು ಸೀಟು ಹಂಚಿಕೆ ವಿಚಾರದಲ್ಲಿ ಕಾಂಗ್ರೆಸ್‌ಗೆ ನೀಡಿದ್ದ ತಮ್ಮ ಬೆಂಬಲವನ್ನು ಹಿಂತೆಗೆದುಕೊಂಡಿವೆ. ಲೋಕಸಭೆ ಚುನಾವಣೆಗೆ ಸೀಟು ಹಂಚಿಕೆ ವಿಚಾರವಾಗಿಯೇ ಕಾಂಗ್ರೆಸ್ ವಿರುದ್ಧ ಮುನಿಸಿಕೊಂಡಿದ್ದ ಎಸ್‌ಪಿ ಮತ್ತು ಎಎಪಿ ಸಂಧಾನ ಮಾತುಕತೆ ಬಳಿಕ ಮತ್ತೆ ಮೈತ್ರಿಕೂಟಕ್ಕೆ ವಾಪಸ್ ಆಗಿವೆ. ಮೈತ್ರಿಕೂಟದಲ್ಲಿ ತಲೆದೋರಿರುವ ಭಿನ್ನಾಭಿಪ್ರಾಯವನ್ನು ಕಾಂಗ್ರೆಸ್‌ ಹೇಗೆ ನಿಭಾಯಿಸಲಿದೆ ಎಂಬುದೇ ಯಕ್ಷ ಪ್ರಶ್ನೆಯಾಗಿದೆ. ಇದನ್ನೂ ಓದಿ: I.N.D.I.A ಮೈತ್ರಿಕೂಟದ ಜವಾಬ್ದಾರಿ ಮಲ್ಲಿಕಾರ್ಜುನ್‌ ಖರ್ಗೆ ಹೆಗಲಿಗೆ

    ಕಮಲ ಮುಡಿದ ಜೆಡಿಯು!
    ವಿಪಕ್ಷಗಳ ಮೈತ್ರಿಕೂಟಕ್ಕೆ ಐಎನ್‌ಡಿಐಎ ಹೆಸರು ಸೇರಿದಂತೆ ಹಲವು ವಿಚಾರಗಳಿಗಾಗಿ ಮುನಿಸಿಕೊಂಡು ಬಿಹಾರ ಸಿಎಂ ನಿತೀಶ್ ಕುಮಾರ್ ಮಹಾಘಟಬಂಧನದಿಂದ ಹೊರಬಂದರು. ನಂತರ ಮಹಾಘಟಬಂಧನ ಜೊತೆಗಿನ ಮೈತ್ರಿ ತೊರೆದು ಬಿಜೆಪಿ ಸೇರಿ ಬಿಹಾರದಲ್ಲಿ ಸರ್ಕಾರ ರಚಿಸಿದರು. ಇಂಡಿಯಾ ಮೈತ್ರಿಕೂಟದ ಕಥೆ ಈಗ ಮುಗಿದ ಅಧ್ಯಾಯ ಎಂಬ ಮಾತುಗಳನ್ನು ನಿತೀಶ್ ಕುಮಾರ್ ಆಡುತ್ತಿದ್ದಾರೆ. ಇಂಡಿಯಾ ಒಕ್ಕೂಟದ ಅವಿಭಾಜ್ಯ ಅಂಗವೇ ಆಗಿದ್ದ ಜೆಡಿಯು ಇನ್ಮುಂದೆ ಮೈತ್ರಿಯ ಭಾಗವಾಗಿಲ್ಲ. ಅಲ್ಲಿ ಎಲ್ಲವೂ ಸರಿಯಿಲ್ಲ ಎಂದು ನಿತೀಶ್ ಕುಮಾರ್ ಮೈತ್ರಿಕೂಟದಿಂದ ಹೊರಬರುತ್ತಿದ್ದಂತೆ ಅನೇಕ ರಾಜಕೀಯ ಬೆಳವಣಿಗೆಗಳು ನಡೆದವು. ಇದು ಇಂಡಿಯಾ ಬಣಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿತು.

    ಟಿಎಂಸಿ ಜೊತೆಗಿನ ಮೈತ್ರಿ ಏನಾಯ್ತು?
    ಮೈತ್ರಿಕೂಟದಿಂದ ಜೆಡಿಯು ಹೊರಬರುತ್ತಿದ್ದಂತೆ ಇತ್ತ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿಯಲ್ಲೂ ಅಸಮಾಧಾನ ಸ್ಫೋಟಿಸಿತು. ಲೋಕಸಭೆ ಚುನಾವಣೆಯಲ್ಲಿ ಬಂಗಾಳದಲ್ಲಿ ಪಕ್ಷ ಏಕಾಂಗಿಯಾಗಿ ಸ್ಪರ್ಧಿಸಲಿದೆ. ಕಾಂಗ್ರೆಸ್ ಜೊತೆಗೆ ಯಾವುದೇ ಮೈತ್ರಿ ಇಲ್ಲ ಎಂದು ಕಳೆದ ತಿಂಗಳು ಬ್ಯಾನರ್ಜಿ ಘೋಷಿಸಿದ್ದರು. ಮೈತ್ರಿಕೂಟದ ಜೊತೆಗಿನ ಟಿಎಂಸಿ ಮುನಿಸು ಇನ್ನೂ ಶಮನವಾದಂತೆ ಕಾಣುತ್ತಿಲ್ಲ. ಇದನ್ನೂ ಓದಿ: I.N.D.I.A ಮೈತ್ರಿಕೂಟದಿಂದ ಹೊರಬಂದ ಆಪ್‌

    2019 ರ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ಟಿಎಂಸಿ 22 ಸ್ಥಾನಗಳನ್ನು ಗೆದ್ದಿತ್ತು. ಬಿಜೆಪಿ 18 ಹಾಗೂ ಕಾಂಗ್ರೆಸ್ 2 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದವು. ಈ ಹಿನ್ನೆಲೆಯಲ್ಲಿ ಈ ಬಾರಿಯ ಲೋಕಸಭಾ ಚುನಾವಣೆಗೆ ಸೀಟು ಹಂಚಿಕೆ ವಿಚಾರವಾಗಿ ಟಿಎಂಸಿ ಮತ್ತು ಕಾಂಗ್ರೆಸ್ ನಡುವೆ ಒಮ್ಮತ ಮೂಡಲಿಲ್ಲ. ಕಾಂಗ್ರೆಸ್ ಹೆಚ್ಚಿನ ಸ್ಥಾನಗಳಿಗೆ ಪಟ್ಟು ಹಿಡಿದಿದೆ. ಟಿಎಂಸಿ ಕೂಡ ತನ್ನ ಹಠ ಬಿಡುತ್ತಿಲ್ಲ. ಹೀಗಾಗಿ ಎರಡೂ ಪಕ್ಷಗಳ ನಡುವೆ ಅಸಮಾಧಾನ ಹಾಗೆಯೇ ಮುಂದುವರಿದಿದೆ.

    ಎಎಪಿ ಜೊತೆ ಸಂಧಾನ?
    ಪಂಜಾಬ್‌ನಲ್ಲಿ 2019 ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 8, ಎಸ್‌ಎಡಿ ಮತ್ತು ಬಿಜೆಪಿ ತಲಾ 2 ಸ್ಥಾನಗಳನ್ನು ಗೆದ್ದಿದ್ದವು. ಈ ಬಾರಿ ಸೀಟು ಹಂಚಿಕೆ ಸಂಬಂಧ ಎಎಪಿ-ಕಾಂಗ್ರೆಸ್ ನಡುವೆ ಹಗ್ಗಜಗ್ಗಾಟ ನಡೆದಿತ್ತು. ಸಾರ್ವತ್ರಿಕ ಚುನಾವಣೆಗೆ ಪಂಜಾಬ್‌ನಲ್ಲಿ 13 ಮತ್ತು ಚಂಡೀಗಢದಲ್ಲಿ 1 ಸ್ಥಾನಕ್ಕಾಗಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳುವ ಯಾವುದೇ ಉದ್ದೇಶವಿಲ್ಲ ಎಂದು ಕೆಲದಿನಗಳ ಹಿಂದಷ್ಟೇ ಕೇಜ್ರಿವಾಲ್ ಸ್ಪಷ್ಟಪಡಿಸಿದ್ದರು. ಮೈತ್ರಿಕೂಟದ ಒಡಕಿನಿಂದ ಎಚ್ಚೆತ್ತ ಕಾಂಗ್ರೆಸ್ ಕೇಜ್ರಿವಾಲ್ ಜೊತೆಗೆ ಸಂಧಾನ ಮಾತುಕತೆಯಾಡಿತು. ಈಗ ಎರಡೂ ಪಕ್ಷಗಳ ನಡುವೆ ಸೀಟು ಹಂಚಿಕೆ ಮಾತುಕತೆ ಅಂತಿಮ ಹಂತದಲ್ಲಿದೆ. ಅಧಿಕೃತ ಘೋಷಣೆಯೊಂದೇ ಬಾಕಿ ಇದೆ.

    ಎಸ್‌ಪಿ-ಕಾಂಗ್ರೆಸ್ ಮುನಿಸು ಶಮನ?
    ಚುನಾವಣೆಯಲ್ಲಿ ಸೀಟು ಹಂಚಿಕೆ ಸಂಬಂಧವೇ ಮೈತ್ರಿಕೂಟದಿಂದ ದೂರವಾಗಿದ್ದ ಸಮಾಜವಾದಿ ಪಕ್ಷ ಈಗ ಮತ್ತೆ ಒಂದಾಗಿದೆ. ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಜೊತೆ ಸೀಟು ಹಂಚಿಕೆ ಪ್ರಕ್ರಿಯೆ ಮುಗಿಸಿದೆ. ಯುಪಿ ಯಲ್ಲಿ ಕಾಂಗ್ರೆಸ್‌ಗೆ 11 ಕ್ಷೇತ್ರಗಳನ್ನು ಬಿಟ್ಟುಕೊಡುವುದಾಗಿ ಎಸ್‌ಪಿ ಹೇಳಿತ್ತು. ಆದರೆ ಇದಕ್ಕೆ ಕಾಂಗ್ರೆಸ್ ತಕರಾರು ತೆಗೆದು ಹೆಚ್ಚಿನ ಸ್ಥಾನಕ್ಕೆ ಬೇಡಿಕೆ ಇಟ್ಟಿತ್ತು. ಇದಕ್ಕೆ ಎಸ್‌ಪಿ ಒಪ್ಪಿಗೆ ಸೂಚಿಸಿರಲಿಲ್ಲ. ಅಲ್ಲದೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ನ್ಯಾಯ ಯಾತ್ರೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದೂ ಸಹ ಅಖಿಲೇಶ್ ಯಾದವ್ ಘೋಷಿಸಿದ್ದರು. ಆದರೀಗ ಎರಡೂ ಪಕ್ಷಗಳು ಒಂದಾಗಿವೆ. ಇದನ್ನೂ ಓದಿ: INDIA ಮೈತ್ರಿಕೂಟ ನಮ್ಮ ನಂಬಿಕೆಗೆ ಧಕ್ಕೆ ತರುತ್ತಿದೆ: ಮೋದಿ

    ಯುಪಿಯಲ್ಲಿ ರಾಷ್ಟ್ರೀಯ ಲೋಕದಳ ಕೈ ಕೊಟ್ಟ ಕಾರಣ, ಕಾಂಗ್ರೆಸ್‌ಗೆ 17 ಕ್ಷೇತ್ರಗಳನ್ನು ಬಿಟ್ಟುಕೊಡಲು ಎಸ್‌ಪಿ ಒಪ್ಪಿಗೆ ಸೂಚಿಸಿದೆ. ಸಂಧಾನ ಮಾತುಕತೆ ಯಶಸ್ವಿಯಾದ ಬೆನ್ನಲ್ಲೇ ಉತ್ತರ ಪ್ರದೇಶ ತಲುಪಿದ್ದ ರಾಹುಲ್ ಗಾಂಧಿ ಯಾತ್ರೆಯನ್ನು ಅಖಿಲೇಶ್ ಯಾದವ್ ಸೇರಿಕೊಂಡರು. ಉಭಯ ಪಕ್ಷಗಳ ನಾಯಕರೂ ಶಕ್ತಿ ಪ್ರದರ್ಶನ ಮಾಡಿದರು. ಮೈತ್ರಿಕೂಟದೊಂದಿಗೆ ಚುನಾವಣೆ ಎದುರಿಸಲಾಗುವುದು ಎಂದು ಅಖಿಲೇಶ್ ಘೋಷಿಸಿದ್ದಾರೆ.

    ಕಾಂಗ್ರೆಸ್ ನಿಲುವೇನು?
    ಟಿಎಂಸಿ ಇಲ್ಲದ ಮೈತ್ರಿಕೂಟವನ್ನು ಪಕ್ಷವು ಊಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹಿರಿಯ ಕಾಂಗ್ರೆಸ್ ಸಂಸದ ಜೈರಾಮ್ ರಮೇಶ್ ಹೇಳಿದ್ದಾರೆ. ಮುಂಬರುವ ಚುನಾವಣೆಯಲ್ಲಿ 255 ಸ್ಥಾನಗಳಲ್ಲಿ ಸ್ಪರ್ಧಿಸುವುದಾಗಿ ಕಾಂಗ್ರೆಸ್ ಕಳೆದ ತಿಂಗಳು ಘೋಷಿಸಿತ್ತು. ಇದು 2019 ರ ಲೋಕಸಭೆ ಚುನಾವಣೆಗಿಂತ ಕಡಿಮೆ ಸಂಖ್ಯೆಯ ಸ್ಥಾನಗಳನ್ನು ಹೊಂದಿದೆ. ಇದನ್ನೂ ಓದಿ: ಇಂಡಿಯಾ ಮೈತ್ರಿಕೂಟದಲ್ಲಿ ಯಾವುದೇ ಪ್ರಗತಿ ಕಾಣುತ್ತಿಲ್ಲ: ನಿತೀಶ್‌ ಕುಮಾರ್‌ ಬೇಸರ

    ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 421 ಸ್ಥಾನಗಳಲ್ಲಿ ಸ್ಪರ್ಧಿಸಿ 52 ಸ್ಥಾನಗಳನ್ನು ಗೆದ್ದಿತ್ತು. ಇದು ಬಿಹಾರದ ಆರ್‌ಜೆಡಿ, ಮಹಾರಾಷ್ಟ್ರದ ಎನ್‌ಸಿಪಿ, ಕರ್ನಾಟಕದ ಜೆಡಿಎಸ್, ಜಾರ್ಖಂಡ್‌ನ ಜೆಎಂಎಂ ಮತ್ತು ತಮಿಳುನಾಡಿನ ಡಿಎಂಕೆ ಜೊತೆ ಮೈತ್ರಿಯ ಭಾಗವಾಗಿತ್ತು. ಸ್ಥಳೀಯ ಪಕ್ಷಗಳ ಪ್ರಭಾವವನ್ನು ದೃಷ್ಟಿಯಲ್ಲಿಟ್ಟುಕೊಂಡು ಪ್ರತಿ ರಾಜ್ಯಗಳಲ್ಲಿ ಇಂಡಿಯಾ ಒಕ್ಕೂಟದ ಪಕ್ಷಗಳ ಜೊತೆ ಮಾತುಕತೆ ನಡೆಸಲು ನಿರ್ಧರಿಸಲಾಗಿದೆ ಎಂದು ಕಾಂಗ್ರೆಸ್ ತಿಳಿಸಿದೆ. ಪಕ್ಷಗಳ ಭಿನ್ನಾಭಿಪ್ರಾಯಗಳನ್ನು ಶಮನ ಮಾಡಿ, ಪಕ್ಷದ ಆಂತರಿಕ ವಿಚಾರಗಳ ಬಗ್ಗೆ ಪರಸ್ಪರ ಟೀಕೆ ಮಾಡದಂತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

    ಮುಂದಿನ ನಡೆ ಏನು?
    7 ತಿಂಗಳ ಹಿಂದೆ ಪಾಟ್ನಾದಲ್ಲಿ ರಚನೆಯಾದಾಗಿನಿಂದ 28 ವಿಪಕ್ಷಗಳ ಇಂಡಿಯಾ ಬಣವು ಮತದಾರರನ್ನು ಸೆಳೆಯಲು ಯಾವುದೇ ದೊಡ್ಡ ಕಾರ್ಯಕ್ರಮವನ್ನು ಹಮ್ಮಿಕೊಂಡಿಲ್ಲ. ಆದರೆ ಒಕ್ಕೂಟದ ಪಕ್ಷಗಳಲ್ಲೇ ಆಂತರಿಕ ಭಿನ್ನಾಭಿಪ್ರಾಯದಿಂದಾದ ಗಾಯವೇ ದೊಡ್ಡದಾಗಿದೆ. ಗಾಯಕ್ಕೆ ಮುಲಾಮು ಹಚ್ಚಿ, ಚುನಾವಣೆಯಲ್ಲಿ ಒಕ್ಕೂಟದ ಪಕ್ಷಗಳನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಸವಾಲು ಕಾಂಗ್ರೆಸ್ ಮುಂದಿದೆ.

    ಸೀಟು ಹಂಚಿಕೆ ಒಪ್ಪಂದಗಳು ಮತ್ತು ಚುನಾವಣೋತ್ತರ ಮೈತ್ರಿಯನ್ನು ಅವಲಂಬಿಸಿ ರಾಜ್ಯಗಳ ಜೊತೆಗಿನ ಮೈತ್ರಿಯನ್ನು ಕಾಂಗ್ರೆಸ್ ನೋಡಬೇಕಿದೆ. ಪ್ರಮುಖ ರಾಜ್ಯಗಳಾದ ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸಗಢವನ್ನು ಕಾಂಗ್ರೆಸ್ ಕಳೆದುಕೊಂಡಿರುವುದು, ಅಶೋಕ್ ಗೆಹ್ಲೋಟ್ ಮತ್ತು ಸಚಿನ್ ಪೈಲಟ್ ನಡುವಿನ ಸಂಘರ್ಷ, ಆಡಳಿತ ವಿರೋಧಿ ಅಲೆ (ಹಿರಿಯ ನಾಯಕ ಕಮಲ್ ನಾಥ್), ಅತಿಯಾದ ಆತ್ಮವಿಶ್ವಾಸ (ಭೂಪೇಶ್ ಬಘೇಲ್) ಮತ್ತು ರಾಜ್ಯ ನಾಯಕತ್ವಕ್ಕೆ ಪ್ರಾಮುಖ್ಯತೆ ಇಲ್ಲದಿರುವುದು ಕಾಂಗ್ರೆಸ್ ಅವನತಿಗೆ ಕಾರಣವಾಗಬಹುದು. ಇದೆಲ್ಲವನ್ನೂ ಅರಿತು ಎಚ್ಚರಿಕೆಯಿಂದ ಹೆಜ್ಜೆ ಇಡಬೇಕಾದ ಮತ್ತೊಂದು ಸವಾಲು ಕೂಡ ಕಾಂಗ್ರೆಸ್ ಮುಂದೆ ಈಗ ಇದೆ. ಇದನ್ನೂ ಓದಿ: INDIA ಮೈತ್ರಿಕೂಟ ನಮ್ಮ ನಂಬಿಕೆಗೆ ಧಕ್ಕೆ ತರುತ್ತಿದೆ: ಮೋದಿ