Tag: A. Harsh

  • ಶಿವಣ್ಣ ಭಜರಂಗಿಯಾಗಿ ಮತ್ತೆ ಅಬ್ಬರಿಸೋದು ಪಕ್ಕಾ!

    ಶಿವಣ್ಣ ಭಜರಂಗಿಯಾಗಿ ಮತ್ತೆ ಅಬ್ಬರಿಸೋದು ಪಕ್ಕಾ!

    ಬೆಂಗಳೂರು: ಯುವ ನಿರ್ದೇಶಕ ಎ ಹರ್ಷ ಮತ್ತೆ ಶಿವರಾಜ್ ಕುಮಾರ್ ಅವರ ಜೊತೆಗೊಂದು ಚಿತ್ರ ಮಾಡುತ್ತಾರೆಂಬ ಸುದ್ದಿ ಬಹಳಷ್ಟು ಹಿಂದೆಯೇ ಹಬ್ಬಿಕೊಂಡಿತ್ತು. ಬಳಿಕ ಅದು ನಿಜವಾದಂತಾಗಿ ಆ ಚಿತ್ರಕ್ಕೆ ಮೈ ನೇಮ್ ಈಸ್ ಆಂಜಿ ಅಂತ ನಾಮಕರಣವಾಗಿರೋದರ ಬಗ್ಗೆಯೂ ಸುದ್ದಿ ಹರಡಿತ್ತು. ಆ ಬಳಿಕ ಈ ಪ್ರಾಜೆಕ್ಟಿಗೆ ಭಜರಂಗಿ 2 ಎಂಬ ಟೈಟಲ್ಲು ಫಿಕ್ಸಾಗಿ ಇದೀಗ ಖುದ್ದು ಶಿವಣ್ಣನೇ ಈ ಚಿತ್ರದ ಚಿತ್ರೀಕರಣಕ್ಕೆ ಹೊರಡೋ ಉತ್ಸಾಹದಲ್ಲಿದ್ದಾರೆ.

    ಎ.ಹರ್ಷ ಸೀತಾರಾಮ ಕಲ್ಯಾಣ ಚಿತ್ರ ನಿರ್ದೇಶನ ಮಾಡುತ್ತಿದ್ದ ಸಂದರ್ಭದಲ್ಲಿಯೇ ಶಿವಣ್ಣನೊಂದಿಗಿನ ಚಿತ್ರದ ಬಗ್ಗೆ ಗುಲ್ಲೆದ್ದಿತ್ತು. ಹರ್ಷ ಸೀತಾರಾಮ ಕಲ್ಯಾಣ ಮುಗಿಸಿಕೊಂಡವರೇ ಸೀದಾ ಶಿವಣ್ಣನ ಬಳಿ ಹೋಗಿ ಈ ಕಥೆಯನ್ನು ಹೇಳಿದ್ದರಂತೆ. ಶಿವಣ್ಣ ಕೂಡಾ ಖುಷಿಯಿಂದ ಒಪ್ಪಿಗೆ ಸೂಚಿಸುತ್ತಲೇ ಸ್ಕ್ರಿಪ್ಟ್ ಕೆಲಸಕ್ಕೆ ಪಟ್ಟಾಗಿ ಕೂತಿದ್ದರು. ಇದೀಗ ಎಲ್ಲವನ್ನೂ ಮುಗಿಸಿಕೊಂಡು ಚಿತ್ರೀಕರಣಕ್ಕೆ ತಯಾರಾಗಿದ್ದಾರೆ.

    ಎಲ್ಲವೂ ಅಂದುಕೊಂಡಂತೆಯೇ ಆದರೆ ಇದೇ ತಿಂಗಳ ಇಪ್ಪತ್ತನೇ ತಾರೀಕಿನಿಂದ ಭಜರಂಗಿ 2 ಚಿತ್ರದ ಚಿತ್ರೀಕರಣ ನಡೆಯಲಿದೆ. ಶಿವಣ್ಣನೇ ತಯಾರಾಗಿರೋದರಿಂದ ಆ ಮುಹೂರ್ತದಿಂದಲೇ ಚಿತ್ರೀಕರಣ ಚಾಲೂ ಆಗಲಿದೆ. ವರ್ಷಾಂತರಗಳ ಹಿಂದೆ ಶಿವಣ್ಣ ಮತ್ತು ಹರ್ಷ ಕಾಂಬಿನೇಷನ್ನಿನಲ್ಲಿ ಭಜರಂಗಿ ಎಂಬ ಚಿತ್ರ ತೆರೆ ಕಂಡಿತ್ತು. ಅದು ಹಿಟ್ ಕೂಡಾ ಆಗಿತ್ತು. ಅದಾದ ನಂತರದಲ್ಲಿ ಹರ್ಷ ಮತ್ತೆ ಶಿವಣ್ಣನ ಜೊತೆ ಕೆಲಸ ಮಾಡಬೇಕೆಂಬ ಹಂಬಲ ಹೊಂದಿದ್ದರಂತೆ. ಆದರೆ ಅದಕ್ಕೆ ಇದೀಗ ಕಾಲ ಕೂಡಿ ಬಂದಿದೆ.

    ಈ ಹಿಂದೆ ಸದರಿ ಚಿತ್ರಕ್ಕೆ ಮೈ ನೇಮ್ ಈಸ್ ಆಂಜಿ ಅನ್ನೋ ಹೆಸರು ಫಿಕ್ಸಾಗಿತ್ತಲ್ಲಾ? ಅದು ಶಿವಣ್ಣನ ಅಭಿಮಾನಿ ಬಳಗಕ್ಕೂ ಹಿಡಿಸಿತ್ತು. ಆದರೆ ಆಂಜನೇಯನ ಪರಮ ಭಕ್ತರಾದ ಎ ಹರ್ಷ ಅವರಿಗೆ ಆ ಟೈಟಲ್ ಸಮಾಧಾನ ತಂದಿರಲಿಲ್ಲ. ನಂತರ ಅಳೆದೂ ತೂಗಿ ಕಡೆಗೂ ಭಜರಂಗಿ 2 ಎಂಬ ಟೈಟಲ್ಲೇ ನಿಕ್ಕಿಯಾಗಿದೆ. ಈ ಚಿತ್ರವೂ ಭಜರಂಗಿಯಂತೆಯೇ ಸೂಪರ್ ಹಿಟ್ ಆಗುವಂತೆ ಮೂಡಿ ಬರಲಿದೆ ಎಂಬ ನಿರೀಕ್ಷೆ ಶಿವಣ್ಣನ ಅಭಿಮಾನಿಗಳಲ್ಲಿದೆ.

  • ಸೀತಾರಾಮನದ್ದು ಅರ್ಥಪೂರ್ಣ ಕಲ್ಯಾಣ!

    ಸೀತಾರಾಮನದ್ದು ಅರ್ಥಪೂರ್ಣ ಕಲ್ಯಾಣ!

    ಬೆಂಗಳೂರು: ನಿಖಿಲ್ ನಾಯಕನಾಗಿ ನಟಿಸಿರೋ ಸೀತಾರಾಮ ಕಲ್ಯಾಣ ಚಿತ್ರ ಬಿಡುಗಡೆಯಾಗಿದೆ. ಆರಂಭದಿಂದಲೂ ಭರ್ಜರಿ ಫ್ಯಾಮಿಲಿ ಎಂಟರ್ ಟೇನರ್ ಎಂಬ ಸುಳಿವಿನೊಂದಿಗೆ ಎಲ್ಲರನ್ನು ಈ ಸಿನಿಮಾ ಸೆಳೆದುಕೊಂಡಿತ್ತು. ಅಂಥಾ ಅಗಾಧ ನಿರೀಕ್ಷೆಯಿಟ್ಟುಕೊಂಡು ಥೇಟರು ಹೊಕ್ಕ ಪ್ರತೀ ಪ್ರೇಕ್ಷಕರನ್ನೂ ಸೀತಾರಾಮ ಖುಷಿಗೊಳಿಸಿದ್ದಾನೆ.

    ಇಡೀ ಚಿತ್ರದಲ್ಲಿ ಪ್ರಧಾನವಾಗಿ ಗಮನ ಸೆಳೆಯುವಂತಿರೋದು ನಿರ್ದೇಶಕ ಎ ಹರ್ಷ ಅವರ ಜಾಣ್ಮೆ ಬೆರೆತ ಕಸುಬುದಾರಿಕೆ. ಎಲ್ಲ ವರ್ಗದ ಪ್ರೇಕ್ಷಕರಿಗೂ ಮುದ ನೀಡುವಂತೆ, ಸಿಎಂ ಮಗನೇ ನಾಯಕನಾದ್ದರಿಂದ ಆ ದೃಷ್ಟಿಯಲ್ಲಿಯೂ ಕುಂದುಂಟಾಗದಂತೆ ಮತ್ತು ಯಾವುದನ್ನೂ ಉದ್ದೇಶಪೂರ್ವಕವಾಗಿ ತುರುಕಲಾಗಿದೆ ಎಂಬಂಥಾ ಭಾವವೇ ಕಾಡದಂತೆ ಹರ್ಷ ಇಡೀ ಚಿತ್ರವನ್ನ ರೂಪಿಸಿದ್ದಾರೆ.

    ಸೀತಾರಾಮ ಕಲ್ಯಾಣ ದೊಡ್ಡ ಕ್ಯಾನ್ವಾಸಿನ ಸಿನಿಮಾ. ನಿಖಿಲ್ ಇಲ್ಲಿ ಆರ್ಯ ಎಂಬ ಲವಲವಿಕೆಯ ಪಾತ್ರವನ್ನು ನಿರ್ವಹಿಸಿದ್ದಾರೆ. ಈ ಆರ್ಯ ಗೆಳೆಯನ ಮದುವೆಯ ನಿಮಿತ್ತವಾಗಿ ಆತನ ದೊಡ್ಡ ಕುಟುಂಬವೊಂದರ ಪರಿಸರಕ್ಕೆ ಎಂಟ್ರಿ ಕೊಡುತ್ತಾನೆ. ಮದುವೆ ಮುಗಿಯೋ ಹೊತ್ತಿಗೆಲ್ಲ ಆರ್ಯನಿಗೆ ಆ ದೊಡ್ಡ ಮನೆ ಯಜಮಾನನ ಮಗಳ ಮೇಲೆಯೇ ಪ್ರೀತಿ ಮೂಡಿ ಬಿಟ್ಟಿರುತ್ತೆ. ನಂತರವೂ ಪವಾಡವೆಂಬಂತೆ ಆ ಹುಡುಗಿಯೊಂದಿಗೇ ಆರ್ಯನ ಪ್ರೇಮ ಮುಂದುವರೆಯುತ್ತೆ. ಆದರೆ ಈ ಪ್ರೀತಿಯ ಹಿನ್ನೆಲೆಯಲ್ಲಿಯೇ ಆ ಎರಡು ಕುಟುಂಬಗಳ ನಂಟು, ದ್ವೇಷದ ಪ್ಲ್ಯಾಶ್ ಬ್ಯಾಕೂ ತೆರೆದುಕೊಳ್ಳುತ್ತೆ. ಅದೆಂಥಾದ್ದೆಂಬುದನ್ನ ಸೀತಾರಾಮ ಕಲ್ಯಾಣವನ್ನ ನೋಡಿಯೇ ತಿಳಿದುಕೊಳ್ಳೋದು ಉತ್ತಮ.

    ಇನ್ನುಳಿದಂತೆ ಫ್ಯಾಮಿಲಿಯಾಚೆಗೆ ಜನನಾಯಕನಾಗಿಯೂ ನಿಖಿಲ್ ಮಿಂಚಿದ್ದಾರೆ. ರೈತಪರವಾದ ಸೀನುಗಳೂ ಸ್ಫೂರ್ತಿದಾಯಕವಾಗಿವೆ. ರಘು ನಿಡುವಳ್ಳಿಯವರ ಸಂಭಾಷಣೆಯೂ ಕಥೆಯ ಓಘಕ್ಕೆ ಪೂರಕವಾಗಿದೆ. ಸಾಹಸ, ಸೆಂಟಿಮೆಂಟು ಸೇರಿದಂತೆ ಎಲ್ಲವೂ ಬೆರಗಾಗುವಂತಿವೆ. ಶರತ್ ಕುಮಾರ್, ರವಿಶಂಕರ್, ಮಧುಬಾಲಾ ಮುಂತಾದವರೂ ಕೂಡಾ ಬೇರೆಯದ್ದೇ ಥರದ ಪಾತ್ರಗಳಲ್ಲಿ ಆವರಿಸಿಕೊಳ್ಳುತ್ತಾರೆ. ರಚಿತಾ ಕೂಡಾ ಮುದ್ದಾಗಿ ನಟಿಸಿದ್ದಾರೆ. ನಿಖಿಲ್ ಎಲ್ಲ ರೀತಿಯಲ್ಲಿಯೂ ಫುಲ್ ಮಾಕ್ರ್ಸ್ ಪಡೆದುಕೊಳ್ಳುತ್ತಾರೆ. ಸಂಗೀತ, ಸಾಹಸ, ಛಾಯಾಗ್ರಹಣ… ಹೀಗೆ ಎಲ್ಲ ವಿಭಾಗಗಳಲ್ಲಿಯೂ ಹೊಸತನವಿದೆ. ಅದುವೇ ಸೀತಾರಾಮ ಕಲ್ಯಾಣವನ್ನು ಮತ್ತಷ್ಟು ಆಕರ್ಷಕವಾಗಿದೆ.

    https://www.youtube.com/watch?v=GaXuYAfqGQg

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸೀತಾರಾಮ ಕಲ್ಯಾಣ: ಕಿಕ್ಕೇರಿಸಲಿದೆ ಕಾಮಿಡಿ ಝಲಕ್!

    ಸೀತಾರಾಮ ಕಲ್ಯಾಣ: ಕಿಕ್ಕೇರಿಸಲಿದೆ ಕಾಮಿಡಿ ಝಲಕ್!

    ನಿಖಿಲ್ ಕುಮಾರಸ್ವಾಮಿ ಅವರ ಎರಡನೇ ಚಿತ್ರ ಸೀತಾರಾಮ ಕಲ್ಯಾಣ. ಎ.ಹರ್ಷ ನಿರ್ದೇಶನದ ಈ ಸಿನಿಮಾ ಈಗಾಗಲೇ ನಾನಾ ದಿಕ್ಕಿನಿಂದ ಪ್ರೇಕ್ಷಕರನ್ನ ಆವರಿಸಿಕೊಂಡಿದೆ. ಇನ್ನೇನು ಬಿಡುಗಡೆಯ ಹೊಸ್ತಿಲಲ್ಲಿರೋ ಸೀತಾರಾಮ ಕಲ್ಯಾಣದ ಅಂತರಾಳ ಈಗ ಸಿಕ್ಕಿರೋ ಸಣ್ಣಪುಟ್ಟ ಸೂಚನೆಗಳಿಗಿಂತಲೂ ಮಜವಾಗಿದೆ.

    ಒಟ್ಟಾರೆ ಕಥೆಯಲ್ಲಿ ಮಾಸ್, ಆಕ್ಷನ್, ಫ್ಯಾಮಿಲಿ ಎಮೋಷನಲ್… ಹೀಗೆ ಅದೆಷ್ಟೇ ಅಂಶಗಳಿದ್ದರೂ ಈ ಸಿನಿಮಾದ ಪ್ರಧಾನ ಅಂಶ ಮನೋರಂಜನೆ. ಹಾಗಿದ್ದ ಮೇಲೆ ಭರಪೂರವಾದ ಹಾಸ್ಯ ಸನ್ನಿವೇಶಗಳೂ ಇರೋದು ಪಕ್ಕಾ!

    ಅದು ನಿಜ ಅಂತಾರೆ ನಿರ್ದೇಶಕ ಹರ್ಷ. ಸಾಮಾನ್ಯವಾಗಿ ಕಥೆ ಗಂಭೀರವಾಗಿ ಚಲಿಸಿದಾಗ ಒಂದು ಕಾಮಿಡಿ ಟ್ರ್ಯಾಕು ಕ್ರಿಯೇಟ್ ಮಾಡೋದಿದೆ. ಅದು ಹೆಚ್ಚಿನ ಸಂದರ್ಭದಲ್ಲಿ ಪ್ರೇಕ್ಷಕರಿಗೆ ಕಿರಿಕಿರಿ ಉಂಟು ಮಾಡೋದೇ ಹೆಚ್ಚು. ಆದರೆ ಕಥೆಯೊಳಗೇ ಸಹಜ ಕಾಮಿಡಿಯ ಕಿಕ್ಕೇರುವಂತೆ ಮಾಡೋದು ಕೊಂಚ ರಿಸ್ಕಿ ಕೆಲಸ. ನಿರ್ದೇಶಕ ಹರ್ಷ ಅದನ್ನು ಈ ಸಿನಿಮಾದಲ್ಲಿ ಮಾಡಿದ್ದಾರೆ.

    ಸೀತಾರಾಮ ಕಲ್ಯಾಣದಲ್ಲಿ ಕಾಮಿಡಿ ಸನ್ನಿವೇಶಗಳ ಒಡ್ಡೋಲಗವೇ ಇದೆ. ಅದು ಕಥೆಯ ವೇಗದೊಂದಿಗೇ ಬೆರೆತು ಹೋಗಿದೆ. ಚಿಕ್ಕಣ್ಣ, ಕಾಮಿಡಿ ಕಿಲಾಡಿ ಖ್ಯಾತಿಯ ನಯನಾ, ಶಿವರಾಜ್ ಕೆ ಆರ್ ಪೇಟೆ, ಸಂಜು ಬಸಯ್ಯ ಮುಂತಾದವರು ಭಿನ್ನ ಪಾತ್ರಗಳ ಮೂಲಕವೇ ನಗೆ ಉಕ್ಕಿಸಲಿದ್ದಾರೆ.

    ಆದರೆ ಈ ಕಾಮಿಡಿ ವಿಚಾರದಲ್ಲಿಯೇ ಮತ್ತೊಂದು ವಿಶೇಷವಿದೆ. ಇದುವರೆಗೆ ಗಂಭೀರವಾದ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ಕಲಾವಿದರೂ ಕೂಡಾ ನಗೆ ಚಿಮ್ಮಿಸುವಂಥಾ ಶೇಡಿನ ಪಾತ್ರಗಳನ್ನು ನಿರ್ವಹಿಸಿದ್ದಾರಂತೆ. ವಿಲನ್ ಆಗಿ ಅಬ್ಬರಿಸುತ್ತಾ ಬಂದಿರೋ ರವಿಶಂಕರ್ ಕೂಡಾ ಇಲ್ಲಿ ನಗಿಸಲಿದ್ದಾರೆ. ಹಿರಿಯ ನಟಿ ಗಿರಿಜಾ ಲೋಕೇಶ್ ಕೂಡಾ ಮಜವಾದ, ತಮಾಷೆ ಮಾಡೋ ಪಾತ್ರದಲ್ಲಿ ನಟಿಸಿದ್ದಾರಂತೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಯುವರಾಜ ನಿಖಿಲ್ ಸಿನಿಮಾ ಹೇಗಿರಬಹುದು?

    ಯುವರಾಜ ನಿಖಿಲ್ ಸಿನಿಮಾ ಹೇಗಿರಬಹುದು?

    ಬೆಂಗಳೂರು: ಜಾಗ್ವಾರ್ ಚಿತ್ರದ ಮೂಲಕ ಭರವಸೆ ಹುಟ್ಟಿಸಿದ್ದ ನಿಖಿಲ್ ಕುಮಾರ್ ಎರಡನೇ ಚಿತ್ರ ಸೀತಾರಾಮ ಕಲ್ಯಾಣ. ಹರ್ಷ ನಿರ್ದೇಶನದ ಈ ಚಿತ್ರಕ್ಕೆ ಕಡೆಗೂ ಬಿಡುಗಡೆಯ ದಿನಾಂಕ ನಿಗದಿಯಾಗಿದೆ. ಇದೇ ಜನವರಿ 25ರಂದು ಸೀತಾರಾಮ ಕಲ್ಯಾಣ ಬಿಡುಗಡೆಯಾಗಲಿದೆ. ಸೀತಾರಾಮ ಕಲ್ಯಾಣ ಈಗಾಗಲೇ ಹಾಡು, ಟೀಸರ್ ಸೇರಿದಂತೆ ಹಲವಾರು ರೀತಿಯಲ್ಲಿ ಸುದ್ದಿ ಮಾಡಿದೆ. ಎ ಹರ್ಷ ಮತ್ತು ನಿಖಿಲ್ ಕಾಂಬಿನೇಷನ್ನಿನ ಈ ಚಿತ್ರ ಎಲ್ಲರನ್ನೂ ಚಕಿತಗೊಳಿಸೋದರಲ್ಲಿ ಸಂದೇಹವೇ ಇಲ್ಲ ಎನ್ನುತ್ತಿದೆ ಗಾಂಧಿನಗರ.

    ಮೊದಲ ಚಿತ್ರ ಜಾಗ್ವಾರ್ ಮೂಲಕವೇ ನಿಖಿಲ್ ಕುಮಾರ್ ನಟನೆಯ ಬಗ್ಗೆ ತಮ್ಮ ಬದ್ಧತೆ ಎಂಥಾದ್ದೆಂಬುದನ್ನು ಸಾಬೀತು ಪಡಿಸಿದ್ದರು. ಡ್ಯಾನ್ಸ್, ಸಾಹಸ, ಅಭಿನಯ ಎಲ್ಲದರಲ್ಲಿಯೂ ತರಬೇತಿ ಪಡೆದೇ ಅವರು ಕ್ಯಾಮೆರಾ ಮುಂದೆ ಬಂದು ನಿಂತಿದ್ದರು. ಜಾಗ್ವಾರ್ ಬಿಡುಗಡೆಯಾದ ದಿನವೇ ಮಾಧ್ಯಮದ ಮಂದಿ `ಸ್ಟಾರ್ ಈಸ್ ಬಾರ್ನ್’ ಅಂತಾ ಷರಾ ಬರೆದಿದ್ದವು. ಅದು ಸುಮ್ಮನೇ ದಕ್ಕುವಂಥದ್ದಲ್ಲ. ಒಬ್ಬ ನಟ ತೆರೆ ಮೇಲೆ ಎಲ್ಲ ರೀತಿಯಲ್ಲೂ ಆಕರ್ಷಿಸಿದರೆ ಮಾತ್ರ `ಸ್ಟಾರ್’ ಎನ್ನಿಸಿಕೊಳ್ಳಲು ಸಾಧ್ಯ. ಈ ನಿಟ್ಟಿನಲ್ಲಿ ನಟಿಸಿದ ಮೊಟ್ಟಮೊದಲ ಸಿನಿಮಾದಲ್ಲೇ ಸ್ಕೋರು ಮಾಡಿದ್ದ ನಿಖಿಲ್ ಎರಡನೇ ಸಿನಿಮಾದ ಕುರಿತು ಸಹಜವಾಗಿಯೇ ನಿರೀಕ್ಷೆಗಳು ಗರಿಗೆದರಿವೆ.

    ನೃತ್ಯ ನಿರ್ದೇಶಕರಾಗಿ ಎಂಟ್ರಿ ಕೊಟ್ಟು ನಂತರ ಕನ್ನಡದ ಬಹುತೇಕ ಸ್ಟಾರ್ ನಟರ ಸಿನಿಮಾಗಳನ್ನು ನಿರ್ದೇಶಿಸಿರುವ ಎ. ಹರ್ಷ ಈ ವರೆಗೆ ಕೈಗೆತ್ತಿಕೊಂಡ ಸಿನಿಮಾಗಳನ್ನೆಲ್ಲಾ ಗೆಲ್ಲಿಸಿ ಇವತ್ತು ಸ್ಟಾರ್ ನಿರ್ದೇಶಕ ಎನಿಸಿಕೊಂಡಿದ್ದಾರೆ. ಸೀತಾರಾಮ ಕಲ್ಯಾಣದಲ್ಲಿ ಹರ್ಷ ನಿಖಿಲ್ ಕುಮಾರ್ ರನ್ನು ಮತ್ತಷ್ಟು ಹೊಸ ರೀತಿಯಲ್ಲಿ ಕಂಗೊಳಿಸುವಂತೆ ಮಾಡಿದ್ದಾರಂತೆ. ಯುವರಾಜ ನಿಖಿಲ್ ಸಿನಿಮಾಗಾಗಿ ಜನ ಕಾತರದಿಂದ ಕಾದಿದ್ದಾರೆ. ಅದರ ಅಸಲಿ ಮಜಾ ಏನೆಂಬುದು ಜನವರಿ 25ರಂದು ತಿಳಿಯಲಿದೆ.

    https://www.youtube.com/watch?v=3pYwtl-VD-Y

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv