Tag: 87th Kannada Sahitya Sammelana

  • ಸಾಹಿತ್ಯ ಉತ್ಸವ ವೈಭವೀಕರಣದಿಂದ ಏನೂ ಫಲವಿಲ್ಲ: ಮುಖ್ಯಮಂತ್ರಿ ಚಂದ್ರು

    ಸಾಹಿತ್ಯ ಉತ್ಸವ ವೈಭವೀಕರಣದಿಂದ ಏನೂ ಫಲವಿಲ್ಲ: ಮುಖ್ಯಮಂತ್ರಿ ಚಂದ್ರು

    ಮಡಿಕೇರಿ: ಇತ್ತೀಚಿನ ವರ್ಷಗಳಲ್ಲಿ ಸಾಹಿತ್ಯ ಉತ್ಸವ ಆಡಂಬರದಿಂದ ವೈಭವೀಕರಣವಾಗುತ್ತಿದೆ, ಅದರಿಂದ ಏನೂ ಫಲವಿಲ್ಲ ಎಂದು ಮುಖ್ಯಮಂತ್ರಿ ಚಂದ್ರು (Mukhyamantri Chandru) ಬೇಸರ ವ್ಯಕ್ತಪಡಿಸಿದ್ದಾರೆ.

    ಮಡಿಕೇರಿಯಲ್ಲಿ ʻಪಬ್ಲಿಕ್ ಟಿವಿʼಯೊಂದಿಗೆ ಮಾತಾನಾಡಿದ ಅವರು, ಸಾಹಿತ್ಯ ಸಮ್ಮೇಳನಕ್ಕೆ (Sahitya Sammelana) ಸಾಹಿತ್ಯ ವರ್ಚಸ್ಸು ಇರುವ ವ್ಯಕ್ತಿಗಳನ್ನೇ ಅಯ್ಕೆ ಮಾಡಿಕೊಳ್ಳುವ ಅಗತ್ಯ ಇದೆ. ಚುನಾವಣಾ ರೀತಿಯ ತೆಗೆದುಕೊಂಡು ಬಂದು ಯಾರು ಬೇಕಾದರೂ ಆಗಬಹುದು ಅನ್ನೋ ರೀತಿಯಲ್ಲಿ ಅಗಬರದು ಎಂದು ಸಲಹೆ ನೀಡಿದ್ದಾರೆ. ಇದನ್ನೂ ಓದಿ: ಆಂಗ್ಲ ಮಾಧ್ಯಮ ಶಾಲೆಗಳು ತೆರೆಯುವುದನ್ನು ಸರ್ಕಾರ ಕೂಡಲೇ ನಿಲ್ಲಿಸಬೇಕು: ಗೊ.ರು.ಚನ್ನಬಸಪ್ಪ ಹಕ್ಕೊತ್ತಾಯ

    ಸಾಹಿತ್ಯ ಸಮ್ಮೇಳನ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತಿದೆ, ಇನ್ಮುಂದೆ ಇದು ಆಗಬಾರದು. ಸಾಹಿತ್ಯ ಸಮ್ಮೇಳನದಲ್ಲಿ ತೆಗೆದುಕೊಂಡ ನಿರ್ಣಯ ಮುಂದಿನ ಸಮ್ಮೇಳನದೊಳಗೆ ಪಾಲನೆ ಆಗದಿದ್ದರೆ, ಅದನ್ನು ಖಂಡಿಸುವಂತಾಗಬೇಕು. ಸರ್ಕಾರಕ್ಕೆ ಎಚ್ಚರಿಕೆ ಕೊಡುವ ರೀತಿಯಲ್ಲಿ ಇಂತಹ ನಿರ್ಧಾರ ಕೈಗೊಳ್ಳಬೇಕು. ಆದರೀಗ ಸರ್ಕಾರದ ಹಣದಲ್ಲಿ ಕಾರ್ಯಕ್ರಮ ಆಗುತ್ತಿರುವುದರಿಂದ ಅವರೂ ಸರ್ಕಾರ ಟೀಕೆ ಮಾಡೋದಕ್ಕೆ ಆಗದ ಸ್ಥಿತಿಯಲ್ಲಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ದೀಪ ಬೆಳಗುವ ಮೂಲಕ ಅಕ್ಷರ ಜಾತ್ರೆಗೆ ಸಿಎಂ ಚಾಲನೆ

    ಇನ್ನೂ ಕನ್ನಡ ಶಾಲೆ ಉಳಿವಿಗಾಗಿ ಸಮ್ಮೇಳನಾಧ್ಯಕ್ಷರು ಸರ್ಕಾರಕ್ಕೆ ಮನವಿ ಮಾಡಿದ ವಿಚಾರಕ್ಕೆ ಪ್ರತಿಕ್ರಿಯಿಸಿ, ಉತ್ತಮ ಸೌಲಭ್ಯ ಇರುವಂತಹ ಶಾಲೆಗಳನ್ನು ಮಾಡಿದ್ರೆ ಕನ್ನಡ ಶಾಲೆಗಳು ಉಳಿಯುತ್ತವೆ, ಕನ್ನಡವೂ ಉಳಿಯುತ್ತದೆ‌. ಇಲ್ಲಿ ಆಂಗ್ಲ ಭಾಷೆಯನ್ನೂ ಕಲಿಸಬಹುದು. ಆದ್ರೆ ರಾಜ್ಯದ 56 ಶಾಲೆಗಳಿಗೆ ಶಿಕ್ಷಕರೇ ಇಲ್ಲ ಹುಡುಗರು ಪಾಸ್ ಆಗಬೇಕು ಅಂದ್ರೆ ಹೇಗೆ ಸಾಧ್ಯ? ಎಂದು ಪ್ರಶ್ನಿಸಿದ್ದಾರೆ.

    ಅಲ್ಲದೇ ಆಂಗ್ಲ ಭಾಷೆಯಲ್ಲಿ ಇಂದು ವಿದ್ಯಾರ್ಥಿಗಳು ಪೋಷಕರಿಂದಾಗಲಿ ಅಥವಾ ಕನ್ನಡ ಶಾಲೆಗಳಿಂದಾಗಲಿ ಫೇಲಾಗುತ್ತಿಲ್ಲ. ಸರ್ಕಾರದ ವ್ಯವಸ್ಥೆಯಿಂದ ಫೇಲಾಗುತ್ತಿದ್ದಾರೆ ಎಂದರಲ್ಲದೇ ನಾವೆಲ್ಲ ಓದಿದ್ದು ಕನ್ನಡ ಶಾಲೆಯಲ್ಲೇ, ಸಿದ್ದರಾಮಯ್ಯ ಓದಿರುವುದು ಸಹ ಕನ್ನಡ ಶಾಲೆಯಲ್ಲೇ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಜಗತ್ತಿನ ಯಾರೇ ಬಂದರೂ ಅವರಿಗೆ ಕನ್ನಡ ಕಲಿಸುತ್ತೇವೆ ಎಂಬ ದಿಟ್ಟತನ ಮಂಡ್ಯ ಜನರದ್ದು – ಸಿಎಂ

  • 87ನೇ ಕನ್ನಡ ಸಾಹಿತ್ಯ ಸಮ್ಮೇಳನ – ಮಂಡ್ಯಕ್ಕೆ ಸಮ್ಮೇಳನಾಧ್ಯಕ್ಷರ ಆಗಮನ, ಗಣ್ಯರಿಂದ ಸ್ವಾಗತ

    87ನೇ ಕನ್ನಡ ಸಾಹಿತ್ಯ ಸಮ್ಮೇಳನ – ಮಂಡ್ಯಕ್ಕೆ ಸಮ್ಮೇಳನಾಧ್ಯಕ್ಷರ ಆಗಮನ, ಗಣ್ಯರಿಂದ ಸ್ವಾಗತ

    – ಮಂಡ್ಯದಲ್ಲಿ ಕನ್ನಡ ಭಾಷೆ ಅನ್ಯ ಭಾಷೆ ಪ್ರಭಾವಕ್ಕೆ ಒಳಗಾಗಿಲ್ಲ: ಗೊ.ರು.ಚನ್ನಬಸಪ್ಪ

    ಮಂಡ್ಯ: ಸಕ್ಕರೆ ನಾಡಿನಲ್ಲಿ ಮೂರು ದಿನಗಳ ಕಾಲ ಜರುಗುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ (87th Kannada Sahitya Sammelana) ಶುಕ್ರವಾರ (ಡಿ.20) ಚಾಲನೆ ಸಿಗಲಿದೆ. ಈ ಹಿನ್ನೆಲೆ ಇಂದು (ಗುರುವಾರ) ಸಮ್ಮೇಳನಾಧ್ಯಕ್ಷರಾದ ಗೊ.ರು.ಚನ್ನಬಸಪ್ಪ (Go. Ru. Channabasappa) ಅವರು ಮಂಡ್ಯಕ್ಕೆ ಆಗಮಿಸಿದ್ದಾರೆ.

    ಮಂಡ್ಯಕ್ಕೆ ಆಗಮಿಸುತ್ತಿದ್ದಂತೆ ಸಚಿವ ಎನ್. ಚಲುವರಾಯಸ್ವಾಮಿ (Chaluvaraya Swamy), ಶಾಸಕರಾದ ಗಣಿಗ ಪಿ.ರವಿಕುಮಾರ್, ರಮೇಶ್ ಬಂಡಿಸಿದ್ದೇಗೌಡ, ಕಸಾಪ ರಾಜ್ಯಾಧ್ಯಕ್ಷ ಮಹೇಶ್ ಜೋಶಿ, ಡಿಸಿ ಡಾ. ಕುಮಾರ್‌ ಅವರು ಸಮ್ಮೇಳನಾಧ್ಯಕ್ಷರನ್ನು ಸ್ವಾಗತಿಸಿದರು. ಇದೇ ವೇಳೆ ಜಿಲ್ಲಾಡಳಿತದಿಂದ ಸನ್ಮಾನಿಸಲಾಯಿತು. ಬಳಿಕ ಚನ್ನಬಸಪ್ಪನವರು ಡಿಸಿ ಡಾ.ಕುಮಾರ್ ನಿವಾಸಕ್ಕೆ ತೆರಳಿದರು.

    ಈ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಮ್ಮೇಳನಾಧ್ಯಕ್ಷ ಗೊ.ರು ಚನ್ನಬಸಪ್ಪ, ಕನ್ನಡ ತವರು ನೆಲದಲ್ಲಿ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದು ಖುಷಿ ತಂದಿದೆ. ಮಂಡ್ಯದಲ್ಲಿ ಕನ್ನಡ ಭಾಷೆ ಅನ್ಯ ಭಾಷೆಯ ಪ್ರಭಾವಕ್ಕೆ ಒಳಗಾಗಿಲ್ಲ. ಆದ್ರೆ ಕನ್ನಡ ಹಲವು ಸಮಸ್ಯೆಗಳನ್ನ ಎದುರಿಸುತ್ತಿದೆ. ಇದರ ಬಗ್ಗೆ ಚಿಂತನೆ ಆಗಬೇಕು. ಆಧುನಿಕತೆಯ ಪ್ರಭಾವ ಕನ್ನಡದ ಮೇಲಿನ ಅಭಿಮಾನ ಕಡಿಮೆಯಾಗಲು ಕಾರಣ ಎಂದರು.

    ಮಂಡ್ಯ ಜನರ ಪ್ರೀತಿ ವಿಶ್ವಾಸ ಕಂಡು ಕಣ್ತುಂಬಿಕೊಂಡಿದ್ದೇನೆ. ಎಲ್ಲ ಕಾರ್ಯಕಲಾಪದಲ್ಲಿ ಕನ್ನಡ ಬಂಧುಗಳು ಭಾಗವಹಿಸಬೇಕು. ನನ್ನನ್ನ ಪ್ರೀತಿಯಿಂದ ಆಯ್ಕೆ ಮಾಡಿದ್ದಾರೆ. ಇಂತಹ ಉತ್ಸವದಲ್ಲಿ ಅಧ್ಯಕ್ಷ ಸ್ಥಾನ ಅಲಂಕರಿಸುವುದು ಹೆಮ್ಮೆಯ ವಿಚಾರ, ನಿಜಕ್ಕೂ ತುಂಬಾ ಸಂತೋಷವಾಗಿದೆ. ಈ ಬಾರಿ ಸಮಕಾಲಿನ ಸಮಸ್ಯೆ ಬಗ್ಗೆ ಗೋಷ್ಠಿಗಳು ನಡೆಯಲಿವೆ. ನಾನು ಅಧ್ಯಕ್ಷನಾಗಿ ಮಾಡುವುದು ಏನು ಇಲ್ಲ. ಕಸಾಪ ಅಧ್ಯಕ್ಷರು ಕೇಳಿದರೆ ಸಲಹೆ ಕೊಡಬಹುದು ಎಂದು ನುಡಿದರು.

    ಶುಕ್ರವಾರದಿಂದ ಮಂಡ್ಯದಲ್ಲಿ 87ನೇ ನುಡಿ ಜಾತ್ರೆ:
    87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಕ್ಕರೆ ನಾಡು ಮಂಡ್ಯ ಸಜ್ಜಾಗಿದೆ. ಮೂರು ದಶಕಗಳ ಬಳಿಕ ಮಂಡ್ಯದಲ್ಲಿ ನಡೆಯುತ್ತಿರುವ ಸಾಹಿತ್ಯ ಸಮ್ಮೇಳನ ಸಕಲ ಸಿದ್ಧತೆಯಲ್ಲಿ ಮಂಡ್ಯ ಜಿಲ್ಲಾಡಳಿತ ಸಚಿವ ಚಲುವರಾಯಸ್ವಾಮಿ ನೇತೃತ್ವದಲ್ಲಿ ತೊಡಗಿದೆ.

    ಮಂಡ್ಯದ ಹೊರ ವಲಯದಲ್ಲಿರುವ ಸ್ಯೋಂಜೋ ಆಸ್ಪತ್ರೆಯ ಹಿಂಭಾದ 130 ಎಕರೆ ಪ್ರದೇಶದಲ್ಲಿ ಸಾಹಿತ್ಯ ಸಮ್ಮೇಳನ ನಡೆಯಲಿದ್ದು, ಇಲ್ಲಿ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಹೀಗಾಗಲೇ 80 ಎಕರೆ ಪ್ರದೇಶದಲ್ಲಿ 3 ವಿವಿಧ ವೇದಿಕೆಗಳ ನಿರ್ಮಾಣ ಮಾಡಲಾಗಿದೆ. ಕೆಆರ್‌ಎಸ್ ಡ್ಯಾಂ ಮಾದರಿಯಲ್ಲಿ ಪ್ರಧಾನ ವೇದಿಕೆಯ ಮುಖ್ಯ ದ್ವಾರ ಸಿದ್ಧಪಡಿಸಿದ್ದು ನೋಡುಗರ ಗಮನ ಸೆಳೆಯುತ್ತಿದೆ. ಪ್ರಧಾನ ವೇದಿಕೆಗೆ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಹೆಸರು ಇಡಲಾಗಿದೆ. ಇಲ್ಲಿ 50,000ಕ್ಕೂ ಅಧಿಕ ಮಂದಿ ಕೂರಲು ಆಸಗಳ ವ್ಯವಸ್ಥೆ ಮಾಡಲಾಗಿದೆ. ಮಳೆ ಹಾಗೂ ಬಿಸಿಲಿನಿಂದ ರಕ್ಷಣೆಗಾಗಿ ಜರ್ಮನ್ ಟೆಂಟ್ ಹಾಕಲಾಗಿದೆ. ವೇದಿಕೆ ಸೇರಿ ಪ್ರೇಕ್ಷಕರ ಗ್ಯಾಲರಿಯಲ್ಲಿ ಕನ್ನಡ ಬಾವುಟಗಳು ರಾರಾಜಿಸುತ್ತಿವೆ.

    ಇನ್ನೂ ಸಾಹಿತ್ಯಾಸಕ್ತರಿಗಾಗಿ 450 ಪುಸ್ತಕ ಮಳಿಗೆಗಳು ನಿರ್ಮಾಣವಾಗಿದ್ದು, 350ಕ್ಕೂ ಹೆಚ್ಚು ವಾಣಿಜ್ಯ ಸ್ಟಾಲ್‌ಗಳು ರೆಡಿಯಾಗಿವೆ. ಸಾಹಿತ್ಯ ಸಮ್ಮೇಳನಕ್ಕೆ ರಂಗು ತರಲು ಮಂಡ್ಯ ನಗರದಲ್ಲಿ ದಸರಾ ಮಾದರಿಯ ದೀಪಾಲಂಕಾರವನ್ನು ಸಹ ಮಾಡಲಾಗಿದೆ. ಶುಕ್ರವಾರ ಬೆಳಗ್ಗೆ ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆಯಿಂದ ಸಮ್ಮೇಳನದ ಅಧ್ಯಕ್ಷ ಗೋ.ರು.ಚನ್ನಬಸಪ್ಪ ಅವರನ್ನು ಸುಮಾರು 6 ಕಿಮೀ ಜಾನಪದ ಕಲಾತಂಡಗಳ ಮೆರವಣಿಗೆ ಮೂಲಕ ಸಮ್ಮೇಳದ ವೇದಿಕೆಗೆ ಕರೆಯಲಾಗುತ್ತದೆ. ನಂತರ ಸಿಎಂ ಸಿದ್ದರಾಮಯ್ಯ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ ನೀಡಲಿದ್ದಾರೆ.

    4,000 ಪೊಲೀಸ್ ಭದ್ರತೆ
    ಮೂರು ದಿನಗಳ ಕನ್ನಡ ನುಡಿ ಜಾತ್ರೆ ಉತ್ಸವಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ದಕ್ಷಿಣ ವಲಯ ಡಿಐಜಿ ಡಾ.ಬೋರಲಿಂಗಯ್ಯ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ. 14 ಜಿಲ್ಲೆಗಳಿಂದ ಸುಮಾರು 4,000 ಅಧಿಕಾರಿಗಳು ಹಾಗೂ ಸಿಬ್ಬಂದಿ ಭದ್ರತೆಗೆ ನೇಮಕ ಮಾಡಲಾಗಿದೆ. ಎಸ್ಪಿ 4, ಎಎಸ್ಪಿ 6, ಡಿವೈಎಸ್‌ಪಿ 21, ಪಿಐ 63, ಪಿಎಸ್‌ಐ 190, ಎಎಸ್‌ಐ 215, ಪಿಸಿ 1700, ಮಹಿಳಾ ಪೇದೆ 165, ಗೃಹರಕ್ಷಕ ದಳ 1,000, ಕೆಎಸ್ಆರ್‌ಪಿ 12, ಡಿಎಆರ್ 13 ನಿಯೋಜಿಸಲಾಗಿದೆ.

  • ಮಂಡ್ಯದಲ್ಲಿ ನುಡಿ ಜಾತ್ರೆ – ಸಾಹಿತ್ಯ ಸಮ್ಮೇಳನಕ್ಕೆ ಬರುವವರಿಗೆ ಭರ್ಜರಿ ಭೋಜನ ವ್ಯವಸ್ಥೆ

    ಮಂಡ್ಯದಲ್ಲಿ ನುಡಿ ಜಾತ್ರೆ – ಸಾಹಿತ್ಯ ಸಮ್ಮೇಳನಕ್ಕೆ ಬರುವವರಿಗೆ ಭರ್ಜರಿ ಭೋಜನ ವ್ಯವಸ್ಥೆ

    ಮಂಡ್ಯ: ಮೂರು ದಿನಗಳ ಕಾಲ ಸಕ್ಕರೆ ನಗರಿ ಮಂಡ್ಯದಲ್ಲಿ (Mandya) ನಡೆಯಲಿರುವ ಕನ್ನಡ ನುಡಿ ಜಾತ್ರೆಗೆ ಶುಕ್ರವಾರ (ಡಿ.20) ಚಾಲನೆ ಸಿಗಲಿದೆ. ಈ ಹಿನ್ನೆಲೆ ಸಮ್ಮೇಳನಕ್ಕೆ ಬರುವವರಿಗೆ ಭರ್ಜರಿ ಭೋಜನದ (Dinner) ವ್ಯವಸ್ಥೆ ಮಾಡಿಕೊಳ್ಳಲಾಗಿದೆ.

    ಉಪಾಹಾರ ಹಾಗೂ ಊಟ ನೀಡಲು 140 ಕೌಂಟರ್‌ಗಳನ್ನು ತೆರೆಯಲಾಗಿದೆ. ಸಮ್ಮೇಳನದಲ್ಲಿ ಭಾಗವಹಿಸುವ ಎಲ್ಲರಿಗೂ ಒಂದೇ ಮೆನುವನ್ನು ಈಗಾಗಲೇ ಸಿದ್ಧ ಮಾಡಲಾಗಿದೆ. ನೂರಾರು ಬಾಣಸಿಗರು (Chefs) ಹಾಗೂ ಸಾವಿರಾರು ಸಹಾಯಕರಿಂದ ಖಾದ್ಯಗಳು ತಯಾರಿಯಾಗುತ್ತಿವೆ. ಇದನ್ನೂ ಓದಿ:  87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಕ್ಕರೆ ನಾಡು ಸಿದ್ಧ – ʻನುಡಿ ಜಾತ್ರೆಯ ಸ್ವರ ಯಾತ್ರೆʼ

    ಈಗಾಗಲೇ ಸಿಹಿ ತಿನಿಸು ತಯಾರಿಕೆ ಕಾರ್ಯ ಆರಂಭವಾಗಿದ್ದು ಹೋಳಿಗೆ, ಮೈಸೂರು ಪಾಕ್  (Mysuru Pak), ಬರ್ಫಿ, ಲಾಡುಗಳನ್ನು ಬಾಣಸಿಗರು ತಯಾರು ಮಾಡಿದ್ದಾರೆ. ಇದನ್ನೂ ಓದಿ: ಸಕ್ಕರೆನಾಡು ಮಂಡ್ಯ ಕೇಸರಿಮಯ – ಹನುಮ ಮಾಲಾಧಾರಿಗಳಿಂದ ಸಂಕೀರ್ತನಾ ಯಾತ್ರೆ

    ಶುಕ್ರವಾರದಿಂದ ಮೆನು ಪ್ರಕಾರ ಊಟ ರೆಡಿಯಾಗಲಿದ್ದು, ಮಂಡ್ಯ ಶೈಲಿಯಲ್ಲಿ ಈ ಬಾರಿ ಊಟ ಇರಲಿದೆ. ಜೊತೆಗೆ ರಾಜ್ಯದ ಪ್ರಮುಖ ಊಟದ ಮೆನು ಸಹ ಇರಲಿದೆ. ಮೂರು ದಿನವೂ ಬೆಳಿಗ್ಗೆ ತಿಂಡಿ, ಮಧ್ಯಾಹ್ನ ಹಾಗೂ ರಾತ್ರಿ ಊಟದ ವ್ಯವಸ್ಥೆ ಮಾಡಲಾಗಿದೆ.

  • ಕನ್ನಡ ಸಾಹಿತ್ಯ ಸಮ್ಮೇಳನ: ಡಿ.20, 21 ಕ್ಕೆ ಮಂಡ್ಯ ಜಿಲ್ಲೆ ಶಾಲೆ, ಪಿಯು ಕಾಲೇಜುಗಳಿಗೆ ರಜೆ ಘೋಷಣೆ

    ಕನ್ನಡ ಸಾಹಿತ್ಯ ಸಮ್ಮೇಳನ: ಡಿ.20, 21 ಕ್ಕೆ ಮಂಡ್ಯ ಜಿಲ್ಲೆ ಶಾಲೆ, ಪಿಯು ಕಾಲೇಜುಗಳಿಗೆ ರಜೆ ಘೋಷಣೆ

    ಮಂಡ್ಯ: ಜಿಲ್ಲೆಯಲ್ಲಿ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಹಿನ್ನೆಲೆ ಎರಡು ದಿನಗಳ ಕಾಲ ಜಿಲ್ಲೆಯ ಶಾಲೆ ಹಾಗೂ ಪಿಯು ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.

    ಮಂಡ್ಯ (Mandya) ಜಿಲ್ಲೆಯಲ್ಲಿ ಡಿ.20 ರಿಂದ ಡಿ.22ರವರೆಗೆ ಮೂರು ದಿನಗಳ ಕಾಲ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಈ ಹಿನ್ನೆಲೆ ಮಂಡ್ಯ ಜಿಲ್ಲಾಧಿಕಾರಿ ಡಾ.ಕುಮಾರ್ ಡಿ.20 ಹಾಗೂ 21 ರಂದು ಶಾಲೆ ಹಾಗೂ ಪಿಯು ಕಾಲೇಜುಗಳಿಗೆ ರಜೆ ಘೋಷಿಸಿ, ಆದೇಶಿಸಿದ್ದಾರೆ.ಇದನ್ನೂ ಓದಿ: ಬಾಣಂತಿಯರ ಸಾವು ಪ್ರಕರಣ – ಪ್ರಾಥಮಿಕ ಆರೋಗ್ಯ ಕೇಂದ್ರದ ಪರಿಶೀಲನೆಗೆ ಮುಂದಾದ ಇಲಾಖೆ

    ಜಿಲ್ಲಾಧಿಕಾರಿ ಮಾತನಾಡಿ, ಕನ್ನಡ ಸಾಹಿತ್ಯ ಸಮ್ಮೇಳನ ಹಿನ್ನೆಲೆ ಗಣ್ಯರು, ನೋಂದಾಯಿತ ಪ್ರತಿನಿಧಿಗಳು ಮಂಡ್ಯಕ್ಕೆ ಬರಲಿದ್ದಾರೆ. ಅವರಿಗೆ ಜಿಲ್ಲೆಯ ಎಲ್ಲಾ ಶಾಲಾ-ಕಾಲೇಜುಗಳಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗುತ್ತದೆ. ಕನ್ನಡದ ಐಕ್ಯತೆಯ ಸಂಕೇತವಾಗಿರುವ ನಮ್ಮ ಸಾಹಿತ್ಯ-ಸಂಸ್ಕೃತಿ-ಪರಂಪರೆಯನ್ನು ಬಿಂಬಿಸುವ ಹಾಗೂ ನಾಡು-ನುಡಿಯ ಬಗೆಗಿನ ಅಭಿಮಾನವನ್ನು ಮೂಡಿಸುವ ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು, ಉಪಾನ್ಯಾಸಕರು ಭಾಗವಹಿಸುವ ಮೂಲಕ ಸಾಹಿತ್ಯಾಭಿರುಚಿ ಹೆಚ್ಚಿಸಿಕೊಳ್ಳಬೇಕು ಎಂದು ತಿಳಿಸಿದರು.

    ಕನ್ನಡ ನಾಡು ನುಡಿ ಬಗ್ಗೆ ವಿವಿಧ ಗೋಷ್ಠಿಗಳು ಇರುವುದರಿಂದ ಜ್ಞಾನಾರ್ಜನ ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ಡಿ.20 ಮತ್ತು 21 ರಂದು ಜಿಲ್ಲೆಯ ಎಲ್ಲಾ ಸರ್ಕಾರಿ, ಅನುದಾನ, ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ ಎರಡು ದಿನಗಳ ರಜೆ ಘೋಷಿಸಲಾಗಿದೆ. ಹಾಗಾಗಿ ಜಿಲ್ಲೆಯ ಸಮಸ್ತ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಸಮ್ಮೇಳನದಲ್ಲಿ ಭಾಗವಹಿಸುವ ಮೂಲಕ ಯಶಸ್ವಿಗೊಳಿಸಬೇಕು. ಸದರಿ ರಜೆ ಅವಧಿಯನ್ನು ಸರ್ಕಾರಿ ರಜಾ ದಿನದಂದು ಸರಿದೂಗಿಸಿ ಪಾಠ-ಪ್ರವಚನ ನಡೆಸಬೇಕೆಂದು ಆದೇಶ ಹೊರಡಿಸಿದ್ದಾರೆ.ಇದನ್ನೂ ಓದಿ: ಶೀಘ್ರವೇ ಮಲ್ಲಾಬಾದ್ ಏತ ನೀರಾವರಿ ಯೋಜನೆ ಟೆಂಡರ್ ಕೈಗೆತ್ತಿಕೊಳ್ಳುತ್ತೇವೆ: ಡಿಸಿಎಂ ಡಿ.ಕೆ.ಶಿವಕುಮಾರ್

  • 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಕ್ಕರೆ ನಾಡು ಸಿದ್ಧ – ʻನುಡಿ ಜಾತ್ರೆಯ ಸ್ವರ ಯಾತ್ರೆʼ

    87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಕ್ಕರೆ ನಾಡು ಸಿದ್ಧ – ʻನುಡಿ ಜಾತ್ರೆಯ ಸ್ವರ ಯಾತ್ರೆʼ

    ಮಂಡ್ಯ: 3ನೇ ಬಾರಿಗೆ ಮಂಡ್ಯದಲ್ಲಿ ನಡೆಯುತ್ತಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ (87th Kannada Sahitya Sammelana) ಇತಿಹಾಸ ಸೃಷ್ಟಿಸಲಿದೆ. ಹಲವು ಹೊಸತನಗಳಿಗೆ ಸಾಕ್ಷಿಯಾಗುತ್ತಿರುವ ಸಾಹಿತ್ಯ ಸಮ್ಮೇಳನಕ್ಕೆ ಮಂಡ್ಯ ಸಕಲ ರೀತಿಯಲ್ಲಿ ಸಜ್ಜಾಗಿದೆ ಎಂದು ಕೃಷಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ (Chaluvaraya Swamy) ಅವರು ಹೇಳಿದ್ದಾರೆ

    ಮಂಡ್ಯ (Mandya) ನಗರದ ಹೊರವಲಯದಲ್ಲಿರುವ ಸ್ಯಾಂಜೋ ಆಸ್ಪತ್ರೆ ಹಿಂಭಾಗದಲ್ಲಿ ನಿರ್ಮಿಸುತ್ತಿರುವ ವೇದಿಕೆಗಳ ಸಿದ್ಧತಾ ಕಾರ್ಯಗಳ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಸಚಿವರು ಮಾತನಾಡಿದರು. ಇದನ್ನೂ ಓದಿ: ವಕ್ಫ್ ವಿಚಾರದಲ್ಲಿ ರಕ್ಷಿಸಲು ಕಾಂಗ್ರೆಸ್ ನಾಯಕರು ವಿಜಯೇಂದ್ರ ಸಂಬಂಧಿಗಳೇ?: ಎಂಪಿ ರೇಣುಕಾಚಾರ್ಯ

    70-80 ಎಕರೆ ಪ್ರದೇಶದಲ್ಲಿ ಪ್ರಧಾನ ವೇದಿಕೆ, ಎರಡು ಸಮಾನಾಂತರ ವೇದಿಕೆ, 60 ಎಕರೆ ಪ್ರದೇಶದಲ್ಲಿ ಪಾರ್ಕಿಂಗ್‌ಗೆ ವ್ಯವಸ್ಥೆ ಮಾಡಲಾಗಿದೆ. 55 ವಸ್ತುಪ್ರದರ್ಶನ ಮಳಿಗೆಗಳು, 350 ವಾಣಿಜ್ಯ ಮಳಿಗೆಗಳು, 450 ಪುಸ್ತಕ ಮಳಿಗೆಗಳು ಕೂಡ ತಲೆ ಎತ್ತಿವೆ. ಊಟಕ್ಕೆ 100 ಕೌಂಟರ್, ನೋಂದಾಯಿತ ಪ್ರತಿನಿಧಿಗಳಿಗೆ 40 ಕೌಂಟರ್‌ಗಳನ್ನ ತೆರೆಯಲಾಗಿದ್ದು ಎಲ್ಲರಿಗೂ ಒಂದೇ ಊಟದ ಮೆನು ಇರಲಿದೆ ಎಂದು ಮಾಹಿತಿ ನೀಡಿದರು.

    ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಆಹಾರದ ಗುಣಮಟ್ಟ ಪರೀಕ್ಷೆ ಮಾಡಿ ವರದಿ ಪಡೆಯಲಾಗುತ್ತದೆ. ನೀರನ್ನು ಸಹ ಪರೀಕ್ಷಿಸಲಾಗುತ್ತದೆ. ಸ್ವಚ್ಛತೆಗೆ 250 ಸಿಬ್ಬಂದಿಯನ್ನ ನೇಮಿಸಲಾಗಿದೆ. 150ಕ್ಕೂ ಹೆಚ್ಚು ವಿವಿಧ ಸ್ಥಳಗಳಲ್ಲಿ ಶೌಚಾಲಯ ನಿರ್ಮಿಸಲಾಗಿದೆ. 6,000 ನೋಂದಾಯಿತ ಪ್ರತಿನಿಧಿಗಳಿಗೆ ಅರ್ಧ ಕೆಜಿ ಬೆಲ್ಲ, ಅರ್ಧ ಕೆಜಿ ಸಕ್ಕರೆ, ಬ್ರೆಶ್, ಪೇಸ್ಟ್, ಸೋಪು, ಬೆಡ್ ಶಿಟ್ ಒಳಗೊಂಡ ಲೇದರ್ ಬ್ಯಾಗ್‌ನಲ್ಲಿ ವಸತಿ ಮತ್ತು ಸಮ್ಮೇಳನದ ಕಿಟ್ ನೀಡಲಾಗುವುದು ಎಂದು ಸಚಿವರು ತಿಳಿಸಿದರು.

    7 ತಾಲೂಕು ಕೇಂದ್ರಗಳಿಂದ ಉಚಿತ ಬಸ್‌ ವ್ಯವಸ್ಥೆ:
    ಸಮ್ಮೇಳನಕ್ಕೆ ಆಗಮಿಸುವ 7 ತಾಲೂಕು ಕೇಂದ್ರಗಳಿಂದ 15 ಉಚಿತ ಬಸ್ (Free Bus) ವ್ಯವಸ್ಥೆ ಮಾಡಲಾಗಿದೆ. ಇದರ ಜೊತೆಗೆ ಮಂಡ್ಯ ನಗರದಿಂದ ಕೂಡ ಬಸ್‌ಗಳು ಸಮ್ಮೇಳನದ ಸ್ಥಳಕ್ಕೆ ಉಚಿತವಾಗಿ ಕರೆತರಲಿವೆ. ಮೂರು ಕಡೆ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಪಾರ್ಕಿಂಗ್ ಸ್ಥಳದಿಂದ ಕೂಡ ಉಚಿತ ಸಾರಿಗೆ ವಾಹನದ ವ್ಯವಸ್ಥೆ ಮಾಡಲಾಗಿದೆ. ಮೈಸೂರು ಬೆಂಗಳೂರಿನಿಂದ 30 ನಿಮಿಷಕ್ಕೆ ಒಂದು ವಿಶೇಷ ಬಸ್ ಸಂಚರಿಸಲಿದೆ ಎಂದು ತಿಳಿಸಿದರು. ಇದನ್ನೂ ಓದಿ: ಚಿಕಿತ್ಸೆಗಾಗಿ ಅಮೆರಿಕಗೆ ಹೊರಡುವ ಮುನ್ನ ಶಿವಣ್ಣರನ್ನು ನೋಡಲು ಬಂದ ಪೂರ್ಣಿಮಾ ಕುಟುಂಬ

    ಸಮ್ಮೇಳನಾಧ್ಯಕ್ಷರಾದ ಗೊ.ರು ಚನ್ನಬಸಪ್ಪ ಅವರು ಗುರುವಾರ ಸಂಜೆ ಮಂಡ್ಯಕ್ಕೆ ಆಗಮಿಸಲಿದ್ದು ಅವರನ್ನು ಬರಮಾಡಿಕೊಳ್ಳಲಾಗುವುದು. ಡಿ.20ರ ಶುಕ್ರವಾರ ಬೆಳಗ್ಗೆ 6ಕ್ಕೆ ಧ್ವಜಾರೋಹಣ ನೆರವೇರಲಿದೆ. 7 ಗಂಟೆಗೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಆರಂಭವಾಗಲಿದೆ. ಮೆರವಣಿಗೆಯಲ್ಲಿ ಹಗಲುವೇಷ, ಮಹಿಳಾ ವೀರಗಾಸೆ, ಗೊರವರ ಕುಣಿತ, ಕಂಸಾಳೆ, ಕರಗ, ಸುಗ್ಗಿ ಕುಣಿತ, ಕೋಲಾಟ ಒಳಗೊಂಡಂತೆ ಪೂರ್ಣಕುಂಭ ಹೊತ್ತ 300 ಮಹಿಳೆಯರು ಹಾಗೂ 50ಕ್ಕೂ ಹೆಚ್ಚು ಕಲಾತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿವೆ. ಮೆರವಣಿಗೆಗೆ ಮೈಸೂರು ರಾಜವಂಶಸ್ಥರಾದ ಪ್ರಮೋದಾದೇವಿ ಒಡೆಯರ್‌ ಚಾಲನೆ ನೀಡಲಿದ್ದಾರೆ ಎಂದರು.

    ಕಾರ್ಯಕ್ರಮಗಳಿಗೆ ಮೂರು ವೇದಿಕೆಗಳನ್ನು ನಿರ್ಮಿಸಲಾಗುತ್ತಿದೆ. ಪ್ರಧಾನ ವೇದಿಕೆಯಲ್ಲಿ ಸಮ್ಮೇಳನಾಧ್ಯಕ್ಷರ ಜೊತೆಗಿನ ಸಂವಾದವೂ ಸೇರಿದಂತೆ ‌11 ಗೋಷ್ಠಿಗಳು, 2 ಸಮಾನಾಂತರ ವೇದಿಕೆಗಳಲ್ಲಿ 20 ಗೋಷ್ಠಿಗಳು ಆಯೋಜನೆಗೊಂಡಿವೆ. ಸಮ್ಮೇಳನದ ಅಂಗವಾಗಿ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಹೇಳಿದರು. ಇದನ್ನೂ ಓದಿ: ಸಿಎಂ ವಿರುದ್ಧ ಮುಡಾ ಹಗರಣಕ್ಕೆ ಟ್ವಿಸ್ಟ್‌ – ದೂರು ಹಿಂಪಡೆಯಲು ಸ್ನೇಹಮಯಿ ಕೃಷ್ಣಗೆ ಆಮಿಷ ಆರೋಪ

    ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರ, ಅಂಬೇಡ್ಕರ್ ಭವನ, ಸಮಾನಾಂತರ ವೇದಿಕೆ ಮತ್ತು ಪ್ರಧಾನ ವೇದಿಕೆಗಳಲ್ಲಿ ಸ್ಥಳೀಯ ಕಲಾವಿದರ ಕಾರ್ಯಕ್ರಮಗಳು ನಡೆಯಲಿವೆ. ʻನುಡಿ ಜಾತ್ರೆಯ ಸ್ವರ ಯಾತ್ರೆʼ ಹೆಸರಿನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಡಿ.20ರ ಮೊದಲ ದಿನ ಸಾಧುಕೋಕಿಲ (Sadhu kokila) ಮತ್ತು ರಾಜೇಶ್ ಕೃಷ್ಣನ್ (Rajesh Krishnan) ತಂಡದಿಂದ ಸಂಗೀತ ಸಂಜೆ ಕಾರ್ಯಕ್ರಮ ನಡೆಯಲಿದೆ. ಡಿ.21ರಂದು ಅರ್ಜುನ್ ಜನ್ಯ (Arjun Janya) ಮತ್ತು ತಂಡದಿಂದ ಸಂಗೀತ ಸಂಜೆ ಕಾರ್ಯಕ್ರಮ ನಡೆಯಲಿದೆ. ಡಿ.22ರಂದು ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆಗೆ ಪೊಲೀಸ್ ಬ್ಯಾಂಡ್ ಇರಲಿದೆ ಎಂದು ವಿವರಿಸಿದರು.

    ಚೆಸ್ಕಾಂ ವತಿಯಿಂದ ನಗರದಲ್ಲಿ ವಿದ್ಯುತ್ ಅಲಂಕಾರ ಮಾಡಲಾಗುತ್ತಿದೆ. ನಾಡುನುಡಿಗೆ ಸೇವೆ ಸಲ್ಲಿಸಿದ 170 ಮಂದಿ ಸಾಧಕರನ್ನು ಸನ್ಮಾನಿಸಲಾಗುತ್ತಿದೆ. 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸ್ಮರಣಾರ್ಥ 87 ಪುಸ್ತಕಗಳನ್ನು ಬಿಡುಗಡೆ ಮಾಡಲಾಗುತ್ತದೆ. ಜೊತೆಗೆ ʻಬೆಲ್ಲದಾರತಿʼ ಹೆಸರಿನ ಸ್ಮರಣ ಸಂಚಿಕೆ ಕೂಡ ಬಿಡುಗಡೆ ಮಾಡಲಾಗುತ್ತದೆ ಎಂದು ಸಚಿವರು ಮಾಹಿತಿ ನೀಡಿದರು. ಇದನ್ನೂ ಓದಿ: ಸರ್ಕಾರಿ ಆಸ್ಪತ್ರೆಗೆ ಹೋಗಬಾರದವ್ವ ಅಂತ ಮಹಿಳೆಯರು ಮಾತಾಡ್ಕೊಳ್ತಿದ್ದಾರೆ – ಆರ್‌. ಅಶೋಕ್‌