Tag: 87th Akhila Bharatha Kannada Sahitya Sammelana

  • ಆಂಗ್ಲ ಮಾಧ್ಯಮ ಶಾಲೆಗಳು ತೆರೆಯುವುದನ್ನು ಸರ್ಕಾರ ಕೂಡಲೇ ನಿಲ್ಲಿಸಬೇಕು: ಗೊ.ರು.ಚನ್ನಬಸಪ್ಪ ಹಕ್ಕೊತ್ತಾಯ

    ಆಂಗ್ಲ ಮಾಧ್ಯಮ ಶಾಲೆಗಳು ತೆರೆಯುವುದನ್ನು ಸರ್ಕಾರ ಕೂಡಲೇ ನಿಲ್ಲಿಸಬೇಕು: ಗೊ.ರು.ಚನ್ನಬಸಪ್ಪ ಹಕ್ಕೊತ್ತಾಯ

    – ಒಬ್ಬ ವಿದ್ಯಾರ್ಥಿ ಇದ್ದರೂ ಶಾಲೆ ಮುಚ್ಚದಂತೆ ಕ್ರಮವಹಿಸಿ ಎಂದು ಸರ್ಕಾರಕ್ಕೆ ಸಲಹೆ

    ಮಂಡ್ಯ: ಖಾಸಗಿ ಶಾಲೆಗಳು, ಆಂಗ್ಲ ಮಾಧ್ಯಮ ಶಾಲೆಗಳನ್ನು ತೆರೆಯಲು ಅನುಮತಿ ನೀಡುವುದನ್ನು ಸರ್ಕಾರ ನಿಲ್ಲಿಸಬೇಕು. ಹತ್ತನೇ ತರಗತಿಯವರೆಗೆ ಕನ್ನಡ ಮಾಧ್ಯಮ ಕಡ್ಡಾಯವಾಗಬೇಕು ಎಂದು ಸಮ್ಮೇಳನಾಧ್ಯಕ್ಷ ನಾಡೋಜ ಗೊ.ರು ಚನ್ನಬಸಪ್ಪ ಹಕ್ಕೊತ್ತಾಯ ಮಂಡಿಸಿದರು.ಇದನ್ನೂ ಓದಿ: ಮಂದಿರ-ಮಸೀದಿ ವಿವಾದ ಹೆಚ್ಚಳಕ್ಕೆ RSS ಕಳವಳ; ಇದು ಒಪ್ಪಲಾಗದು ಎಂದ ಮೋಹನ್ ಭಾಗವತ್

    ಸಕ್ಕರೆ ನಾಡು ಮಂಡ್ಯದಲ್ಲಿ (Mandya) ಮೂರು ದಿನಗಳ ಕಾಲ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಾಹಿತ್ಯ ಪರಿಷತ್ ಶತಮಾನ ಪೂರೈಸಿದೆ. 87ನೇ ಸಮ್ಮೇಳನ ಮಂಡ್ಯದಲ್ಲಿ ನಡೆಯುತ್ತಿರುವುದು ಸಂತಸವಾಗಿದೆ. ಮಂಡ್ಯ ಜಿಲ್ಲೆ ರಾಜಕೀಯವಾಗಿ ಜಾಗೃತವಾಗಿರುವ ಹಾಗೂ ಸೌಹಾರ್ದತೆ ಉಳಿಸಿಕೊಂಡಿರುವ ಜಿಲ್ಲೆಯಾಗಿದೆ. ಆರ್ಥಿಕವಾಗಿ ಸಮೃದ್ದವಾಗಿದ್ದು, ಸಾಂಸ್ಕೃತಿಕವಾಗಿ ಶ್ರೀಮಂತವಾಗಿ, ಸಾಹಿತ್ಯಕವಾಗಿ ಹೆಸರು ಮಾಡಿರುವ ಜಿಲ್ಲೆಯಾಗಿದೆ. ರಾಜಕೀಯ, ಸಾಹಿತ್ಯ ಕ್ಷೇತ್ರಕ್ಕೆ ಗಮನಾರ್ಹ ಕೊಡುಗೆ ನೀಡಿದೆ. ಮಂಡ್ಯದಲ್ಲಿ ಅನ್ಯ ಭಾಷಿಗರ ಪ್ರಮಾಣ, ಪ್ರಭಾವ ಬಹಳ ಕಡಿಮೆಯಿದೆ. ಸಮ್ಮೇಳನ ಅಧ್ಯಕ್ಷತೆಗೆ ನಾನು ಅರ್ಹನೋ ಎಂಬುವುದು ಗೊತ್ತಿಲ್ಲ. ಅನಿರೀಕ್ಷವಾಗಿ ಬಂದ ಅವಕಾಶವನ್ನು ಹಿಂಜರಿಕೆಯಿಲ್ಲದೆ ನಿರ್ವಹಿಸಿದ್ದೇನೆ. ಸಮ್ಮೇಳನ ಅಧ್ಯಕ್ಷರಾಗಿ ಆಯ್ಕೆ ಆಗಿದ್ದೀರಿ ಎಂದಾಗ ನಾನೇ ಬೆರಗಾಗಿ ಹೋಗಿದ್ದೆ. ಇಷ್ಟು ವಯಸ್ಸಾದವರನ್ನು ಎಂದೂ ಸಮ್ಮೇಳನಾಧ್ಯಕ್ಷರಾಗಿ ಮಾಡಿಲ್ಲ. ಗಡುವು ತೀರಿದ ನನ್ನನ್ನು ಸಮ್ಮೇಳನಾಧ್ಯಕ್ಷರಾಗಿ ಮಾಡಿದ್ದಾರೆ. ಅವಕಾಶ ಕೊಟ್ಟ ಸರ್ಕಾರಕ್ಕೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದರು.

    ಇದೇ ವೇಳೆ ಸಿಎಂ ಸಿದ್ದರಾಮಯ್ಯ (CM Siddaramaiah) ಅವರ ಮುಂದೆ ಸರ್ಕಾರಕ್ಕೆ ಹಲವು ಬೇಡಿಕೆಗಳನ್ನಿಟ್ಟು ಮಾತನಾಡಿದ ಅವರು, ಕನ್ನಡ ಭಾಷೆ ಸಮೃದ್ಧ, ಶ್ರೀಮಂತವಾಗಿ ಬೆಳೆಯುತ್ತಿದೆ. ಕನ್ನಡ ವಿಸ್ತಾರವಾಗುತ್ತಿದೆ, ಆದರೆ ಬಳಕೆ ಆಗುತ್ತಿಲ್ಲ. ಬಳಸಿದಷ್ಟು ನಮ್ಮ ಕನ್ನಡ ಭಾಷೆ ಬೆಳೆಯುತ್ತದೆ. ಕನ್ನಡ ಮಾಧ್ಯಮದಲ್ಲಿಯೇ ಶಿಕ್ಷಣ ಇರಬೇಕು. ನಾಡಿನ ಪ್ರತಿ ಮಕ್ಕಳಿಗೆ ಶಿಕ್ಷಣ ದೊರಕಿಸಲು ಕ್ರಮವಹಿಸಬೇಕು. ಹತ್ತನೇ ತರಗತಿಯವರೆಗೆ ಕನ್ನಡ ಮಾಧ್ಯಮ ಕಡ್ಡಾಯವಾಗಬೇಕು. ಖಾಸಗಿ ಶಾಲೆಗಳಿಗೆ ಆಂಗ್ಲ ಮಾಧ್ಯಮ ತೆರೆಯಲು ಅನುಮತಿಗೆ ಸರ್ಕಾರ ತಡೆ ನೀಡಬೇಕು. ಗ್ರಾಮೀಣ ಭಾಗದ ಶಾಲೆಗಳಿಗೆ ಸೂರುಗಳು ಇಲ್ಲವಾಗಿದೆ. ಶಿಕ್ಷಕರ ಕೊರತೆಯಿಂದ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿದೆ. ಇದರಿಂದ ಕನ್ನಡ ಸರ್ಕಾರಿ ಶಾಲೆ ಮುಚ್ಚಲಾಗುತ್ತಿದೆ. ಒಬ್ಬ ವಿದ್ಯಾರ್ಥಿ ಇದ್ದರೂ ಶಾಲೆ ಮುಚ್ಚದಂತೆ ಸರ್ಕಾರ ಕ್ರಮವಹಿಸಬೇಕು. ಭಾರತಕ್ಕೆ ಮಾದರಿಯಾಗುವ ಶಿಕ್ಷಣ ಕ್ರಮವನ್ನು ಜಾರಿ ಮಾಡಬೇಕು. ಆಗ ಸಮಾನ ಶಿಕ್ಷಣ ದೊರೆಯುತ್ತದೆ ಎಂದು ಸಲಹೆ ನೀಡಿದರು.ಇದನ್ನೂ ಓದಿ: ಜಗತ್ತಿನ ಯಾರೇ ಬಂದರೂ ಅವರಿಗೆ ಕನ್ನಡ ಕಲಿಸುತ್ತೇವೆ ಎಂಬ ದಿಟ್ಟತನ ಮಂಡ್ಯ ಜನರದ್ದು – ಸಿಎಂ

  • ಜಗತ್ತಿನ ಯಾರೇ ಬಂದರೂ ಅವರಿಗೆ ಕನ್ನಡ ಕಲಿಸುತ್ತೇವೆ ಎಂಬ ದಿಟ್ಟತನ ಮಂಡ್ಯ ಜನರದ್ದು – ಸಿಎಂ

    ಜಗತ್ತಿನ ಯಾರೇ ಬಂದರೂ ಅವರಿಗೆ ಕನ್ನಡ ಕಲಿಸುತ್ತೇವೆ ಎಂಬ ದಿಟ್ಟತನ ಮಂಡ್ಯ ಜನರದ್ದು – ಸಿಎಂ

    – ಸಮಗ್ರ ಕನ್ನಡ ಭಾಷಾ ಬಳಕೆ ಕಾಯ್ದೆ ಜಾರಿಗೆ ಸರ್ಕಾರ ಬದ್ಧ
    – ಖಾಸಗಿ ಮತ್ತು ಸರ್ಕಾರಿ ವಲಯದ ಉತ್ಪನ್ನಗಳ ಮೇಲೆ ಕಡ್ಡಾಯ ಕನ್ನಡ ಮುದ್ರಣವಾಗಬೇಕು

    ಮಂಡ್ಯ: ಜಗತ್ತಿನ ಯಾರೇ ಬಂದರೂ ಅವರಿಗೆ ಕನ್ನಡ ಕಲಿಸುತ್ತೇವೆ ಎಂಬ ದಿಟ್ಟತನ ಮಂಡ್ಯ (Mandya) ಜನರದ್ದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಹೇಳಿದರು.

    ಸಕ್ಕರೆ ನಾಡು ಮಂಡ್ಯದಲ್ಲಿ ಮೂರು ದಿನಗಳ ಕಾಲ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ಸಕ್ಕರೆ ನಾಡು ಮಂಡ್ಯದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ. ಸಮ್ಮೇಳನದಲ್ಲಿ ಸಂತೋಷದಿಂದ ಪಾಲ್ಗೊಂಡಿದ್ದೇನೆ. ಈ ಸಮ್ಮೇಳನ ಕನ್ನಡದ ಹಬ್ಬ. ಮಂಡ್ಯ ಜಿಲ್ಲೆ ಕನ್ನಡ ಸಾಹಿತ್ಯ ಪರಂಪರೆಯನ್ನು ಮೆರೆಸಿದೆ. ಜಗತ್ತಿನ ಯಾರೇ ಬಂದರೂ ಅವರಿಗೆ ಕನ್ನಡ ಕಲಿಸುತ್ತೇವೆ ಎಂಬ ದಿಟ್ಟತನವನ್ನು ಈ ಜನರು ಹೊಂದಿದ್ದಾರೆ. ಸತ್ಯಾಗ್ರಹ ಸೌಧ ಈ ಭಾಗದ ಧೈರ್ಯ, ಶೌರ್ಯವನ್ನು ಪ್ರತಿಬಿಂಬಿಸುತ್ತದೆ. ಈ ಜಿಲ್ಲೆ ಅಪ್ಪಟ ಕನ್ನಡಿಗರನ್ನು ಹೊಂದಿದ್ದು, ಜಾತ್ಯತೀತ ಈ ನೆಲದ ಗುಣವಾಗಿದೆ. ಕನ್ನಡ ಭಾಷೆಗೆ ಅಪಾರ ಕೊಡುಗೆಯನ್ನು ನೀಡಿದ್ದಾರೆ ಎಂದರು.ಇದನ್ನೂ ಓದಿ: 4 ಜಿಲ್ಲೆ, 50ಕ್ಕೂ ಹೆಚ್ಚು ಗ್ರಾಮ, 14 ಗಂಟೆ ಅಲೆದಾಡಿಸಿದ್ರು.. ಪೊಲೀಸರು ದೌರ್ಜನ್ಯ ಎಸಗಿದ್ರು: ನೋವು ಹೇಳಿಕೊಂಡ ಸಿ.ಟಿ.ರವಿ

    ಮನೆಯ ಒಡವೆ ಮಾರಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಕೆಆರ್‌ಎಸ್ ಕಟ್ಟಿಸಿದ್ದರು. ಕೆಆರ್‌ಎಸ್ ಕಟ್ಟುವಾಗ ಟಿಪ್ಪು ಸುಲ್ತಾನ್ ಸ್ಮರಿಸಿದರು. ಆಧುನಿಕ ಮಂಡ್ಯದ ನಿರ್ಮಾಣದಲ್ಲಿ ಮೈಸೂರು ಅರಸರು, ಹೈದರಾಲಿ, ಟಿಪ್ಪು ಸುಲ್ತಾನ್ ಅವರನ್ನು ಮರೆಯುವಂತಿಲ್ಲ. ವಿಶ್ವವೇ ಜಾಗತಿಕ ಹಳ್ಳಿಯಾಗಿರುವಾಗ ನಮ್ಮತನವನ್ನು ಬಿಟ್ಟುಕೊಡಬಾರದು. ಭಾಷೆ ಉಳಿಯುವುದು, ಬೆಳೆಯುವುದು ಅದನ್ನು ಬಳಸಿದಾಗ ಮಾತ್ರ. ನುಡಿಬಿಟ್ಟರೇ ನಾಡು ಬಿಟ್ಟಂತೆ ಭಾಷೆಗೇಡಿ ದೇಶಗೇಡಿಯಂತೆ. ಬಳಸದೆ ಹೋದರೆ ಭಾಷೆಯ ಅಸ್ತಿತ್ವ ಮತ್ತು ಬೆಳವಣಿಗೆಗೆ ಅಪಾಯವಾಗುತ್ತದೆ. ಕನ್ನಡದ ಅಸ್ಮಿತೆಗೆ ಉಂಟಾಗುವ ಸಮಸ್ಯೆ ಗುರುತಿಸಿ, ಪರಿಹಾರ ಕಂಡುಕೊಳ್ಳಲು ಸಮ್ಮೇಳನ ಸಹಾಯಕಾರಿಯಾಗುತ್ತದೆ. ಕನ್ನಡ ನೆಲದಲ್ಲಿ ಕನ್ನಡ ಭಾಷೆಯೇ ಸಾರ್ವಭೌಮವಾಗಿರಬೇಕು. ಅವರದೇ ಭಾಷೆಯಲ್ಲಿ ಮಾತನಾಡುವುದನ್ನು ಬಿಟ್ಟು, ಇದು ನಿನ್ನ ಭಾಷೆ, ದೇಶ ಭಾಷೆ, ಸಾವಿರಾರು ವರ್ಷಗಳ ಸುಪುಷ್ಪ, ಸಾಹಿತ್ಯ ಭಾಷೆ ಎಂದು ಕುವೆಂಪುರವರ ಸಾಲು ನೆನೆದು ಮಾತನಾಡಿದರು.

    ವಿಧಾನಸೌಧದ ಆವರಣದಲ್ಲಿ ನಾಡದೇವಿ ಭುವನೇಶ್ವರಿಯ 25 ಅಡಿ ಪ್ರತಿಮೆಯಿದೆ. ಕರ್ನಾಟಕ ಸಾಹಿತ್ಯಿಕವಾಗಿ ಸಮೃದ್ಧ ಇತಿಹಾಸ ಹೊಂದಿದೆ. ಕರ್ನಾಟಕ 8 ಜ್ಞಾನಪೀಠ ಪ್ರಶಸ್ತಿ ಪಡೆದುಕೊಂಡಿದೆ. ಕನ್ನಡ ಡಿಜಿಟಲೀಕರಣ ಆರಂಭಿಸಲಾಗಿದೆ. ಸಮಗ್ರ ಕನ್ನಡ ಭಾಷಾ ಬಳಕೆ ಕಾಯ್ದೆ ಜಾರಿಗೆ ಹಾಗೂ ಕನ್ನಡಕ್ಕೆ ಮೊದಲ ಪ್ರಾಶಸ್ತ್ಯ ಒದಗಿಸಲು ಸರ್ಕಾರ ಬದ್ಧವಾಗಿದೆ. ಎಷ್ಟೇ ಭಾಷೆ ಕಲಿತರು ಹೃದಯದ ಭಾಷೆ ಕನ್ನಡವಾಗಿರಬೇಕು. ಮಾತೃಭಾಷೆ ಶಿಕ್ಷಣಕ್ಕೆ ಒತ್ತುನೀಡಬೇಕು. ಖಾಸಗಿ ಮತ್ತು ಸರ್ಕಾರಿ ವಲಯದ ಉತ್ಪನ್ನಗಳ ಮೇಲೆ ಕಡ್ಡಾಯ ಕನ್ನಡ ಮುದ್ರಣವಾಗಬೇಕು ಎಂದು ತಿಳಿಸಿದರು.

    ಸಾಹಿತ್ಯ ಜನಜೀವನದ ಪ್ರತಿಬಿಂಬವಾಗಿಬೇಕು. ಸಾಹಿತಿಗಳು ಜನಸಾಮಾನ್ಯರ ನೋವು ನಲಿವನ್ನು ಬರಹದ ಮೂಲಕ ಹಿಡಿದಿಡಬೇಕು. ಜಗತ್ತಿನ ಮಹತ್ವದ ಕೃತಿಗಳನ್ನು ತುರ್ತಾಗಿ ಕನ್ನಡಕ್ಕೆ ಅನುವಾದ ಮಾಡಬೇಕು. ವೈಜ್ಞಾನಿಕ, ವೈಚಾರಿಕ ದೃಷ್ಟಿಯಿಂದ ಪರಿಶೀಲಿಸಬೇಕು. ಮಂಡ್ಯದಲ್ಲಿ ನಡೆಯುತ್ತಿರುವ ಸಮ್ಮೇಳನ ಮಾಮೂಲಿ ಸಮ್ಮೇಳನವಾಗದೇ ನಾಡಿನ ಸಮಸ್ಯೆಗಳಿಗೆ ಪರಿಹಾರ ಹುಡುಕುವ ಸಮ್ಮೇಳನವಾಗಬೇಕು. ದ್ವೇಷವಾದಿ ಶಕ್ತಿಗಳು ಮಂಡ್ಯದಲ್ಲಿ ವಿಷ ಬಿತ್ತಲು ಪ್ರಯತ್ನಿಸಿದರು. ಆದರೆ ಸಿಹಿ ಬೆಳೆಯುವ ಮಂಡ್ಯದವರು ವಿಷಹಾಕಲು ಬಂದವರನ್ನು ಒಳಗೆ ಬಿಟ್ಟುಕೊಳ್ಳಲಿಲ್ಲ. ಇತಿಹಾಸದಲ್ಲಿ ಮತ್ತೊಮ್ಮೆ ಮಂಡ್ಯದವರು ಸಿಹಿ ನೀಡುವವರು ವಿಷ ನೀಡುವವರಲ್ಲ ಎಂದು ಸಾಬೀತು ಮಾಡಿದ್ದೀರಿ ಎಂದು ಮಂಡ್ಯದ ಜನರನ್ನು ಕೊಂಡಾಡಿದರು.ಇದನ್ನೂ ಓದಿ: ಒಂದೇ ರಾತ್ರಿ 8ಕ್ಕೂ ಹೆಚ್ಚು ಮನೆಗಳಲ್ಲಿ ಕಳ್ಳತನ – 3.87 ಲಕ್ಷ ಮೌಲ್ಯದ ವಸ್ತು ಲೂಟಿ