ಒಂದು ದೊಡ್ಡ ಗ್ಯಾಪಿನ ನಂತರ ನವರಸ ನಾಯಕ ಜಗ್ಗೇಶ್ ನಾಯಕನಾಗಿ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಅದೂ ಕೂಡಾ ಭಾರೀ ಬದಲಾವಣೆಯೊಂದಿಗೆ. ಜಗ್ಗೇಶ್ ಅಂದರೆ ಅವರ ವಿಶಿಷ್ಟವಾದ ಮ್ಯಾನರಿಸಂ ನೆನಪಾಗುತ್ತದೆ. ಡೈಲಾಗುಗಳ ಗೊಡವೆಯೇ ಇಲ್ಲದೇ ಬರೀ ಮ್ಯಾನರಿಸಂ ಮೂಲಕವೇ ನಗೆಯುಕ್ಕಿಸಬಲ್ಲ ಜಗ್ಗೇಶ್ ನಗುವಿಗೇ ಹೆಸರಾದವರು. ಹೀಗೆ ಕಾಮಿಡಿ ಪಾತ್ರಗಳಾಚೆಗೆ ಗಂಭೀರವಾದ ತುಡಿತ ಹೊಂದಿದ್ದ ಜಗ್ಗೇಶ್ 8ಎಂಎಂ ಚಿತ್ರದ ನಾಯಕರಾಗಿ ಚಿತ್ರೀಕರಣ ಪೂರೈಸಿಕೊಂಡಿದ್ದಾರೆ. ಈ ಚಿತ್ರದ ಬಿಡುಗಡೆಯ ದಿನಾಂಕವೂ ಬಯಲಾಗಿದೆ.
ದಸರಾ ಮುಗಿದಾಕ್ಷಣವೇ ಈ ಚಿತ್ರ ತೆರೆ ಕಾಣಲಿದೆ. ಅಂದರೆ ಅಕ್ಟೋಬರ್ 26ರಂದು 8 ಎಂಎಂ ಚಿತ್ರ ರಾಜ್ಯಾದ್ಯಂತ ತೆರೆ ಕಾಣಲಿದೆ. ಈ ಮೂಲಕ ಜಗ್ಗೇಶ್ ಅವರನ್ನು ಹೊಸ ರೂಪದಲ್ಲಿ ನೋಡೋ ದಿನಾಂಕವೂ ನಿಗದಿಯಾದಂತಾಗಿದೆ.
8 ಎಂಎಂ ಚಿತ್ರದ ಮೂಲಕ ಹರಿಕೃಷ್ಣ ನಿರ್ದೇಶಕರಾಗಿ ಎಂಟ್ರಿ ಕೊಡುತ್ತಿದ್ದಾರೆ. ಇದು ಅಕಿರಾ ಕುರಸೋವಾ ಅವರ ಪ್ರಸಿದ್ಧ ಚಿತ್ರವೊಂದರಿಂದ ಸ್ಫೂರ್ತಿ ಪಡೆದ ಕಥೆಯನ್ನು ಹೊಂದಿದ್ದರೂ ಸ್ವತಂತ್ರ ಧಾಟಿಯ ಕಥಾ ಹಂದರ ಹೊಂದಿದೆಯಂತೆ. ಪೊಲೀಸ್ ಹಾಗೂ ಕ್ರಿಮಿನಲ್ ಕೆಲಸ ಮಾಡಿದ ವ್ಯಕ್ತಿಯೋರ್ವನ ನಡುವೆ ನಡೆಯೋ ರೋಚಕ ಕಥಾ ಎಳೆಯನ್ನು ‘8 ಎಂಎಂ’ ಚಿತ್ರ ಒಳಗೊಂಡಿದೆಯಂತೆ.
ನೀರ್ ದೋಸೆ ಚಿತ್ರದ ನಂತರ ಜಗ್ಗೇಶ್ ಅವರು ಯಾವುದೇ ಚಿತ್ರ ಒಪ್ಪಿಕೊಳ್ಳದಿರಲು ಕಾರಣ ಅವಕಾಶದ ಅಭಾವವೇನಲ್ಲ. ಅವರೇ ಹೇಳಿರೋ ಪ್ರಕಾರ ಒಂದಷ್ಟು ಕಥೆಗಳನ್ನು ಕೇಳಿಸಿಕೊಂಡು ನಿರಾಕರಿಸಿದ್ದಾರಂತೆ. ಈ ನಿರಾಕರಣೆಗೂ ಕಾರಣ ಇಲ್ಲದಿಲ್ಲ. ಸಾಮಾನ್ಯವಾಗಿ ಬಂದ ಕಥೆಗಳೆಲ್ಲವೂ ಈವರೆಗೆ ಜಗ್ಗೇಶ್ ಅವರಿಗಿದ್ದ ಕಾಮಿಡಿ ಇಮೇಜ್‍ಗೆ ಪೂರಕವಾಗಿಯೇ ಹೆಣೆದ ಕಥೆಗಳು ಮತ್ತು ನೀರ್ ದೋಸೆ ಮಾದರಿಯದ್ದೇ ಕಥೆಗಳಾಗಿದ್ದವಂತೆ.

ಈಗ ಐವತ್ತೈದರ ಹೊಸ್ತಿಲಲ್ಲಿರೋ ಜಗ್ಗೇಶ್ ಬೇರೆಯದ್ದೇ ಬಗೆಯ ಪಾತ್ರವೊಂದಕ್ಕಾಗಿ ತಹತಹಿಸುತ್ತಿದ್ದರಂತೆ. ಇದೇ ಹೊತ್ತಿಗೆ ಈ ಹಿಂದೆ ಟೀಸರ್ ಒಂದರ ಮೂಲಕ ಸದ್ದು ಮಾಡಿದ್ದ ಹರಿಕೃಷ್ಣ ಕೂಡಾ ಒಂದೊಳ್ಳೆ ಕಥೆ ಮಾಡಿಕೊಂಡು ನಿರ್ಮಾಪಕರನ್ನು ಭೇಟಿಯಾಗಿದ್ದರು. ಆದರೆ ಕಥೆ ಕೇಳಿದ ನಿರ್ಮಾಪಕರು ಜಗ್ಗೇಶ್ ನಟಿಸೋದಾದರೆ ಮಾತ್ರ ಹಣ ಹೂಡೋದಾಗಿ ಹೇಳಿ ಜಗ್ಗಣ್ಣನನ್ನು ಒಪ್ಪಿಸೋ ಜವಾಬ್ದಾರಿಯನ್ನೂ ಕೂಡಾ ಹರಿಕೃಷ್ಣ ಹೆಗಲಿಗೆ ಹಾಕಿದ್ದರಂತೆ. ತುಸು ಹೆದರಿಕೆಯಿಂದಲೇ ಅದನ್ನು ಒಪ್ಪಿಕೊಂಡ ಹರಿಕೃಷ್ಣ ಕಡೆಗೂ ಅದರಲ್ಲಿ ಯಶಸ್ವಿಯಾಗಿದ್ದರು.

ಅಳುಕಿನೊಂದಿಗೇ ಜಗ್ಗೇಶ್ ಅವರನ್ನು ಭೇಟಿಯಾಗಿ ರಿವರ್ಸ್ ವರ್ಷನ್ನಲ್ಲಿ ಕಥೆ ಹೇಳಿದೇಟಿಗೆ ಜಗ್ಗೇಶ್ ಸಂಪೂರ್ಣ ಒಪ್ಪಿಗೆ ಸೂಚಿಸಿದ್ದರಂತೆ. ಈ ಕಥೆಯಲ್ಲಿ ಜಗ್ಗೇಶ್ ಅವರನ್ನು ಅವರ ವಯಸ್ಸಿಗೆ ತಕ್ಕುದಾಗಿಯೇ ತೋರಿಸಿದ್ದು ಮತ್ತು ಮನ ಮಿಡಿಯುವ ಕ್ಲೈಮ್ಯಾಕ್ಸ್ ಕಥೆ ಒಪ್ಪಿಕೊಳ್ಳಲು ಕಾರಣ ಎಂಬುದು ಜಗ್ಗಣ್ಣನ ಅಭಿಪ್ರಾಯ. ಅಂತೂ ಈಗ ಸಿಕ್ಕಿರೋ ಸುಳಿವುಗಳ ಪ್ರಕಾರ ಹೇಳೋದಾದರೆ 8 ಎಂಎಂ ಚಿತ್ರ ಹಲವಾರು ವಿಶೇಷತೆಗಳನ್ನು ಹೊಂದಿದೆ. ಈ ಕಾರಣದಿಂದಲೇ ಕುತೂಹಲ ಹುಟ್ಟಿಸಿರೋ ಈ ಚಿತ್ರ ದಸರಾ ವೈಭವದ ಜೊತೆ ಜೊತೆಗೆ ಯಶಸ್ಸಿನ ವೈಭವವನ್ನೂ ತನ್ನದಾಗಿಸಿಕೊಳ್ಳೋ ಲಕ್ಷಣಗಳಿವೆ!
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv